ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr20 ಅಕ್ಟೋಬರ್‌ ಪು. 1-8
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2020
  • ಉಪಶೀರ್ಷಿಕೆಗಳು
  • ಅಕ್ಟೋಬರ್‌ 5-11
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 31-32
  • ಅಕ್ಟೋಬರ್‌ 12-18
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 33-34
  • ಅಕ್ಟೋಬರ್‌ 19-25
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 35-36
  • ಅಕ್ಟೋಬರ್‌ 26–ನವೆಂಬರ್‌ 1
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 37-38
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2020
mwbr20 ಅಕ್ಟೋಬರ್‌ ಪು. 1-8

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಅಕ್ಟೋಬರ್‌ 5-11

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 31-32

“ವಿಗ್ರಹಾರಾಧನೆಯಿಂದ ದೂರ ಓಡಿಹೋಗಿ”

(ವಿಮೋಚನಕಾಂಡ 32:1) ಮೋಶೆ ಬೆಟ್ಟದಿಂದ ಇಳಿಯದೆ ತಡಮಾಡಿದ್ದನ್ನು ಇಸ್ರಾಯೇಲ್ಯರು ನೋಡಿ ಆರೋನನ ಬಳಿಗೆ ಕೂಡಿಬಂದು—“ಏಳು; ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ನಮಗೆ ದೇವರುಗಳನ್ನು ಮಾಡಿಕೊಡು; ಐಗುಪ್ತದೇಶದಿಂದ ನಮ್ಮನ್ನು ಕರಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ” ಎಂದು ಹೇಳಿದರು.

ಕಾವಲಿನಬುರುಜು09 5/15 ಪುಟ 11 ಪ್ಯಾರ 11

ಪ್ರೌಢತೆಯ ಕಡೆಗೆ ಮುಂದೊತ್ತಿ—‘ಯೆಹೋವನ ಮಹಾದಿನ ಹತ್ತಿರವಿದೆ’

11 ಬೈಬಲ್‌ನಿಂದ ಕಲಿತದ್ದನ್ನು ಅನ್ವಯಿಸುವುದು ವಿಶೇಷವಾಗಿ ಕಷ್ಟಕರ ಸನ್ನಿವೇಶಗಳಲ್ಲಿ ಸವಾಲಾಗಿರುತ್ತದೆ. ಉದಾಹರಣೆಗೆ, ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದ ಬಂದಿವಾಸದಿಂದ ಬಿಡಿಸಿದ ಸ್ವಲ್ಪದರಲ್ಲೇ ಅವರು ‘ಮೋಶೆಯ ಸಂಗಡ ವಾದಿಸಿದರು’ ಮತ್ತು ಈ ಮೂಲಕ ‘ಯೆಹೋವನನ್ನು ಪರೀಕ್ಷಿಸಿದರು.’ ಅವರಿದನ್ನು ಮಾಡಿದ್ದೇಕೆ? ಕುಡಿಯುವ ನೀರಿನ ಕೊರತೆಯಿಂದಲೇ. (ವಿಮೋ. 17:1-4) ಅವರು ದೇವರ ಒಡಂಬಡಿಕೆಯೊಳಗೆ ಸೇರುವಾಗ, “ಯೆಹೋವನ ಮಾತುಗಳನ್ನೆಲ್ಲಾ ಅನುಸರಿಸಿ ನಡೆಯುವೆವು” ಎಂದು ಒಮ್ಮತದಿಂದ ಒಪ್ಪಿಕೊಂಡು ಎರಡು ತಿಂಗಳು ಕೂಡ ಕಳೆದಿರಲಿಲ್ಲ. ಅಷ್ಟರಲ್ಲೇ ಅವರು ವಿಗ್ರಹಾರಾಧನೆಯ ಕುರಿತ ಆತನ ಆಜ್ಞೆಯನ್ನು ಮುರಿದರು. (ವಿಮೋ. 24:3, 12-18; 32:1, 2, 7-9) ಮೋಶೆ ಹೋರೇಬ್‌ ಬೆಟ್ಟದ ಮೇಲೆ ಸೂಚನೆಗಳನ್ನು ಪಡೆಯುತ್ತಿದ್ದು, ತುಂಬ ಸಮಯ ಅವರೊಂದಿಗೆ ಇಲ್ಲದ್ದರಿಂದ ಅವರು ಭಯದಿಂದ ಹೀಗೆ ಮಾಡಿದ್ದಿರಬಹುದೋ? ಮೋಶೆಯ ಅನುಪಸ್ಥಿತಿಯಲ್ಲಿ ಅಮಾಲೇಕ್ಯರು ಪುನಃ ಒಮ್ಮೆ ದಾಳಿಮಾಡುವರು ಮತ್ತು ತಾವು ಅಸಹಾಯಕರಾಗಿರುವೆವು ಎಂಬುದಾಗಿ ಇಸ್ರಾಯೇಲ್ಯರು ಯೋಚಿಸಿದ್ದಿರಬಹುದೋ? ಏಕೆಂದರೆ ಈ ಮುಂಚೆ ಮೋಶೆಯ ಎತ್ತಿಹಿಡಿಯಲ್ಪಟ್ಟ ಕೈಗಳು ಅಮಾಲೇಕ್ಯರ ವಿರುದ್ಧ ಜಯ ತಂದುಕೊಟ್ಟಿದ್ದವು. (ವಿಮೋ. 17:8-16) ವಿಷಯವು ಹಾಗೆ ಇದ್ದಿರಬಹುದು. ಆದರೆ ಏನೇ ಇರಲಿ ಇಸ್ರಾಯೇಲ್ಯರು ‘ವಿಧೇಯರಾಗಲು ನಿರಾಕರಿಸಿದರು.’ (ಅ. ಕಾ. 7:39-41) ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಲು ಹೆದರಿದಾಗ ತೋರಿಸಿದ ‘ಅದೇ ನಮೂನೆಯ ಅವಿಧೇಯತೆಗೆ ಬೀಳದಂತೆ ಪರಮ ಪ್ರಯತ್ನವನ್ನು ಮಾಡಲು’ ಪೌಲನು ಕ್ರೈಸ್ತರಿಗೆ ಹೇಳಿದನು.—ಇಬ್ರಿ. 4:3, 11.

(ವಿಮೋಚನಕಾಂಡ 32:4-6) ಅವನು ಆ ಚಿನ್ನವನ್ನು ತನ್ನ ವಶಕ್ಕೆ ತೆಗೆದುಕೊಂಡು ಬಸವನ ಆಕಾರವನ್ನು ಉಳಿಯಿಂದ ರೂಪಿಸಿ ಎರಕ ಹೊಯಿಸಲಾಗಿ ಅವರು—ಇಸ್ರಾಯೇಲ್ಯರೇ, ನೋಡಿರಿ; ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರಕೊಂಡುಬಂದ ದೇವರು ಎಂದು ಹೇಳಿದರು. 5 ಆರೋನನು ಅದನ್ನು ನೋಡಿ ಬಸವನಿಗೆ ಎದುರಾಗಿ ಯಜ್ಞವೇದಿಯನ್ನು ಕಟ್ಟಿಸಿ—ನಾಳೆ ಯೆಹೋವನಿಗೆ ಉತ್ಸವವಾಗಬೇಕು ಎಂದು ಪ್ರಕಟಿಸಿದನು. 6 ಆದದರಿಂದ ಮರುದಿನದಲ್ಲಿ ಜನರು ಬೆಳಿಗ್ಗೆ ಎದ್ದು ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸರ್ಮಪಿಸಿದರು. ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು. ಆ ಮೇಲೆ ಎದ್ದು ಕುಣಿದಾಡಿದರು.

ಕಾವಲಿನಬುರುಜು12 10/15 ಪುಟ 25 ಪ್ಯಾರ 12

ದೇವರಿಗೆ ವಿಧೇಯರಾಗಿ ಆತನ ವಾಗ್ದಾನಗಳಿಂದ ಪ್ರಯೋಜನಹೊಂದಿ

12 ಇಸ್ರಾಯೇಲ್ಯರೊಂದಿಗೆ ಮಾಡಿಕೊಂಡ ಧರ್ಮಶಾಸ್ತ್ರದ ಒಡಂಬಡಿಕೆಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸಲು ಯೆಹೋವನು ಕೂಡಲೆ ಹೆಜ್ಜೆ ತಕ್ಕೊಂಡನು. ಆರಾಧನೆಗಾಗಿ ಗುಡಾರವನ್ನು ಏರ್ಪಡಿಸಿ ಅದರಲ್ಲಿ ಸೇವೆ ಮಾಡಲು ಯಾಜಕ ವರ್ಗವನ್ನು ಆರಿಸಿಕೊಂಡನು. ಈ ಏರ್ಪಾಡು ಪಾಪಿಗಳಾದ ಮಾನವರು ದೇವರೊಂದಿಗೆ ಸುಸಂಬಂಧವನ್ನು ಇಟ್ಟುಕೊಳ್ಳುವಂತೆ ಸಾಧ್ಯಮಾಡಿತು. ಆದರೆ ಇಸ್ರಾಯೇಲ್ಯರು ತಾವು ಮಾಡಿದ ಸಮರ್ಪಣೆಯನ್ನು ಬೇಗನೆ ಮರೆತುಬಿಟ್ಟರು. “ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರಕರೆಗೊಳಿಸಿದರು.” (ಕೀರ್ತ. 78:41) ಉದಾಹರಣೆಗೆ, ದೇವರಿಂದ ಹೆಚ್ಚು ನಿರ್ದೇಶನಗಳನ್ನು ಪಡೆಯಲು ಮೋಶೆ ಸೀನಾಯಿಬೆಟ್ಟದ ಮೇಲೆ ಹೋಗಿದ್ದಾಗ ಇಸ್ರಾಯೇಲ್ಯರು ಹೇಗೆ ಪ್ರತಿಕ್ರಿಯಿಸಿದರೆಂದು ಗಮನಿಸಿ. ಮೋಶೆ ಏನಾದನೋ ಗೊತ್ತಿಲ್ಲ, ನಡುದಾರಿಯಲ್ಲಿ ಕೈಬಿಟ್ಟಿದ್ದಾನೆ ಎಂದುಕೊಂಡು ತಾಳ್ಮೆಗೆಟ್ಟು ದೇವರಲ್ಲಿ ನಂಬಿಕೆ ಕಳಕೊಂಡರು. ಚಿನ್ನದ ಬಸವನ ವಿಗ್ರಹ ಮಾಡಿ “ಇಸ್ರಾಯೇಲ್ಯರೇ, ನೋಡಿರಿ; ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರಕೊಂಡುಬಂದ ದೇವರು” ಎಂದು ಹೇಳಿದರು. (ವಿಮೋ. 32:1, 4) “ಯೆಹೋವನಿಗೆ ಉತ್ಸವವಾಗಬೇಕು” ಎಂದು ಹೇಳಿ ಕೈಯಿಂದ ಮಾಡಿದ ಆ ವಿಗ್ರಹದ ಮುಂದೆ ಅಡ್ಡಬಿದ್ದು ಯಜ್ಞಗಳನ್ನು ಅರ್ಪಿಸಿದರು. ಅದನ್ನು ನೋಡಿ ಯೆಹೋವನು ಮೋಶೆಗೆ ‘ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಅವರು ಬೇಗನೆ ಬಿಟ್ಟುಹೋಗಿದ್ದಾರೆ’ ಎಂದು ಹೇಳಿದನು. (ವಿಮೋ. 32:5, 6, 8) ದೇವರಿಗೆ ಪ್ರತಿಜ್ಞೆಯನ್ನು ಮಾಡುತ್ತಾ ಅದನ್ನು ಮುರಿಯುವುದು ಇಸ್ರಾಯೇಲ್ಯರ ಚಾಳಿಯಾಯಿತು.—ಅರ. 30:2.

(ವಿಮೋಚನಕಾಂಡ 32:9, 10) ಅದಲ್ಲದೆ ಯೆಹೋವನು ಮೋಶೆಗೆ—“ಈ ಜನರ ಸ್ವಭಾವವನ್ನು ನಾನು ನೋಡಿದ್ದೇನೆ; ಇವರು ನನ್ನ ಆಜ್ಞೆಗೆ ಬೊಗ್ಗದವರಾಗಿದ್ದಾರೆ; 10 ಆದಕಾರಣ ನೀನು ನನ್ನನ್ನು ತಡೆಯಬೇಡ; ನನ್ನ ಕೋಪಾಗ್ನಿ ಉರಿಯಲಿ, ಅವರನ್ನು ಭಸ್ಮಮಾಡುವೆನು. ತರುವಾಯ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗವುಂಟಾಗುವಂತೆ ಮಾಡುವೆನು” ಎಂದು ಹೇಳಿದನು.

ಕಾವಲಿನಬುರುಜು18.07 ಪುಟ 20 ಪ್ಯಾರ 14

ಯೆಹೋವನ ಪಕ್ಷದಲ್ಲಿ ನೀವಿದ್ದೀರಾ?

14 ವಿಗ್ರಹಗಳನ್ನು ಆರಾಧಿಸುವುದು ತಪ್ಪೆಂದು ಇಸ್ರಾಯೇಲ್ಯರಿಗೆ ಗೊತ್ತಿತ್ತು. (ವಿಮೋ. 20:3-5) ಆದರೂ ಅಷ್ಟು ಬೇಗ ಚಿನ್ನದ ಬಸವನನ್ನು ಆರಾಧಿಸಲು ಆರಂಭಿಸಿದರು! ಅವರು ಯೆಹೋವನ ಆಜ್ಞೆಯನ್ನು ಮೀರಿದರೂ ತಾವಿನ್ನೂ ಯೆಹೋವನ ಪಕ್ಷದಲ್ಲೇ ಇದ್ದೇವೆಂದು ಯೋಚಿಸಿ ತಮ್ಮನ್ನು ತಾವೇ ವಂಚಿಸಿಕೊಂಡರು. ಅಷ್ಟೇ ಅಲ್ಲ, ಆರೋನನು ಬಸವನ ಆರಾಧನೆಯನ್ನು “ಯೆಹೋವನಿಗೆ ಉತ್ಸವ” ಎಂದು ಕರೆದನು! ಯೆಹೋವನು ಏನು ಮಾಡಿದನು? ಆತನು ಮೋಶೆಗೆ “ಜನರು ಕೆಟ್ಟುಹೋದರು” ಮತ್ತು ತಾನು ‘ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟುಹೋದರು’ ಎಂದು ಹೇಳಿದನು. ಯೆಹೋವನಿಗೆ ಎಷ್ಟು ಕೋಪ ಬಂತೆಂದರೆ ಆ ಇಡೀ ಜನಾಂಗವನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದು ಯೋಚಿಸಿದನು.—ವಿಮೋ. 32:5-10.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ವಿಮೋಚನಕಾಂಡ 31:17) ನನಗೂ ಇಸ್ರಾಯೇಲ್ಯರಿಗೂ ನಡುವೆ ಇದು ಸದಾ ಕಾಲವೂ ಗುರುತು. ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನು ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸವನ್ನು ಮಾಡದೆ ವಿಶ್ರಮಿಸಿಕೊಂಡನಲ್ಲವೇ.

ಕಾವಲಿನಬುರುಜು19.12 ಪುಟ 3 ಪ್ಯಾರ 4

ಕೆಲಸಕ್ಕೂ ವಿಶ್ರಾಂತಿಗೂ “ತಕ್ಕ ಸಮಯವುಂಟು”

4 ಯೆಹೋವ ಮತ್ತು ಯೇಸು ತುಂಬ ಕೆಲಸ ಮಾಡಿದರಲ್ಲಾ? ಇದರರ್ಥ ನಾವ್ಯಾರೂ ವಿಶ್ರಾಂತಿ ತಗೊಳ್ಳಲೇಬಾರದು ಅಂತನಾ? ಹಾಗೇನಿಲ್ಲ. ಯೆಹೋವನಿಗೆ ಯಾವತ್ತೂ ಕೆಲಸ ಮಾಡಿ ಸುಸ್ತಾಗಲ್ಲ, ಹಾಗಾಗಿ ಆತನು ವಿಶ್ರಾಂತಿ ತಗೋಬೇಕಂತೇನಿಲ್ಲ. ಆದರೂ ಆತನು ಇಡೀ ವಿಶ್ವವನ್ನು ಸೃಷ್ಟಿ ಮಾಡಿದ ನಂತರ ‘ಕೆಲಸವನ್ನು ಮಾಡದೆ ವಿಶ್ರಮಿಸಿಕೊಂಡನು’ ಅಂತ ಬೈಬಲ್‌ ಹೇಳುತ್ತೆ. (ವಿಮೋ. 31:17) ಅಂದರೆ ಯೆಹೋವನು ಆಗ ಸೃಷ್ಟಿ ಕೆಲಸವನ್ನು ನಿಲ್ಲಿಸಿ ತಾನು ಮಾಡಿದ್ದನ್ನು ನೋಡಿ ಖುಷಿ ಪಟ್ಟನು ಅಂತ ಅರ್ಥ. ಯೇಸು ಭೂಮಿಯಲ್ಲಿರುವಾಗ ತುಂಬ ಕೆಲಸ ಮಾಡಿದ್ದರೂ ದಿನದ ಇಪ್ಪತ್ತನಾಲ್ಕು ಗಂಟೆನೂ ಅದನ್ನೇ ಮಾಡುತ್ತಿರಲಿಲ್ಲ. ಆತನು ಸಹ ವಿಶ್ರಾಂತಿ ತಗೊಂಡನು. ಸ್ನೇಹಿತರ ಜೊತೆ ಊಟ ಮಾಡೋಕೆ ಸಮಯ ಮಾಡಿಕೊಂಡನು.—ಮತ್ತಾ. 14:13; ಲೂಕ 7:34.

(ವಿಮೋಚನಕಾಂಡ 32:32, 33) ಇಲ್ಲವಾದರೆ ನೀನು ಬರೆದಿರುವ ಜೀವಿತರ ಪಟ್ಟಿಯಿಂದ ನನ್ನ ಹೆಸರನ್ನೂ ಅಳಿಸಿಬಿಡಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು. 33 ಅದಕ್ಕೆ ಯೆಹೋವನು—“ಯಾರಾರು ನನ್ನ ಮಾತನ್ನು ಮೀರಿ ಪಾಪಮಾಡಿದ್ದಾರೋ ಅವರ ಹೆಸರುಗಳನ್ನೇ ನನ್ನ ಬಳಿಯಲ್ಲಿರುವ ಪಟ್ಟಿಯಿಂದ ನಾನು ಅಳಿಸಿಬಿಡುವೆನು.

ಕಾವಲಿನಬುರುಜು87-E 9/1 ಪುಟ 29

ವಾಚಕರಿಂದ ಪ್ರಶ್ನೆಗಳು

ಒಬ್ಬ ವ್ಯಕ್ತಿಯನ್ನ ದೇವ್ರು ಗುರುತಿಸಿ ಅವನನ್ನ ಮೆಚ್ಚಿದ್ರೆ (ಅವನ ಹೆಸ್ರನ್ನ ‘ಜೀವದ ಪುಸ್ತಕದಲ್ಲಿ’ ಬರೆದ್ರೆ) ಅದ್ರರ್ಥ ಅವನಿಗೆ ಶಾಶ್ವತ ಜೀವನ ಸಿಗೋದು ಗ್ಯಾರಂಟಿ ಅಂತಲ್ಲ. ಆ ತರ ಸಿಗೋ ಹಾಗಿದ್ರೆ ಅದನ್ನ ಮೊದಲೇ ದೇವ್ರು ನಿರ್ಧರಿಸಿದ ಹಾಗಾಗುತ್ತೆ ಅಥವಾ ಅದನ್ನ ಬದಲಾಯಿಸೋಕೇ ಆಗಲ್ಲ ಅನ್ನೋ ತರ ಇರುತ್ತೆ. ಮೋಶೆ ಇಸ್ರಾಯೇಲ್ಯರ ಬಗ್ಗೆ ಯೆಹೋವ ದೇವ್ರ ಹತ್ರ ಏನು ಹೇಳಿದ ಅಂತ ಗಮನಿಸಿ: “[ನೀನು] ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲವಾದರೆ ನೀನು ಬರೆದಿರುವ [ಜೀವಿತರ] ಪಟ್ಟಿಯಿಂದ ನನ್ನ ಹೆಸರನ್ನೂ ಅಳಿಸಿಬಿಡಬೇಕೆಂದು ಕೇಳಿಕೊಳ್ಳುತ್ತೇನೆ.” ಅದಕ್ಕೆ ಯೆಹೋವ ದೇವ್ರು, “ಯಾರಾರು ನನ್ನ ಮಾತನ್ನು ಮೀರಿ ಪಾಪ ಮಾಡಿದ್ದಾರೋ ಅವರ ಹೆಸರುಗಳನ್ನೇ ನನ್ನ ಬಳಿಯಲ್ಲಿರುವ ಪಟ್ಟಿಯಿಂದ ನಾನು ಅಳಿಸಿಬಿಡುವೆನು” ಅಂತ ಹೇಳಿದನು. (ವಿಮೋಚನಕಾಂಡ 32:32, 33) ದೇವರು ಒಬ್ಬ ವ್ಯಕ್ತಿಯ ಹೆಸರನ್ನ ತನ್ನ ಪುಸ್ತಕದಲ್ಲಿ ಬರೆದ ನಂತ್ರವೂ ಆ ವ್ಯಕ್ತಿ ದೇವರ ಮಾತನ್ನ ಮೀರಬಹುದು ಅಥವಾ ನಂಬಿಕೆ ಕಳಕೊಳ್ಳಬಹುದು. ಆ ತರ ಆಗೋದಾದ್ರೆ ‘ಜೀವದ ಪುಸ್ತಕದಿಂದ ದೇವರು ಅವನ ಹೆಸ್ರನ್ನ ಅಳಿಸಿ ಹಾಕ್ತಾನೆ.’—ಪ್ರಕಟನೆ 3:5.

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಕಾವಲಿನಬುರುಜು10 5/15 ಪುಟ 21

ವಾಚಕರಿಂದ ಪ್ರಶ್ನೆಗಳು

ಯೆಹೋವನು ವಿಗ್ರಹಾರಾಧನೆಯನ್ನು ನಿಷೇಧಿಸುತ್ತಾನಾದರೂ, ಚಿನ್ನದ ಬಸವನನ್ನು ಮಾಡಿದ್ದಕ್ಕಾಗಿ ಆರೋನನನ್ನೇಕೆ ಶಿಕ್ಷಿಸಲಿಲ್ಲ?

ವಿಮೋಚನಕಾಂಡ 32 ನೇ ಅಧ್ಯಾಯದಲ್ಲಿ ದಾಖಲಾಗಿರುವಂತೆ, ಆರೋನನು ಚಿನ್ನದ ಬಸವನನ್ನು ಮಾಡಿದಾಗ ವಿಗ್ರಹಾರಾಧನೆಯ ಕುರಿತಾದ ದೇವರ ನಿಯಮವನ್ನು ಮುರಿದನು. (ವಿಮೋ. 20:3-5) ಇದರಿಂದಾಗಿ ‘ಯೆಹೋವನು ಆರೋನನ ಮೇಲೆ ಬಹಳ ಸಿಟ್ಟುಗೊಂಡು ಅವನನ್ನು ನಾಶಮಾಡಬೇಕೆಂದಿದ್ದದರಿಂದ ಮೋಶೆಯು ಅವನಿಗೋಸ್ಕರವಾಗಿಯೂ ಆ ಕಾಲದಲ್ಲಿ ಪ್ರಾರ್ಥಿಸಿದನು.’ (ಧರ್ಮೋ. 9:19, 20) ಆರೋನನಿಗಾಗಿ ನೀತಿವಂತನಾದ ಮೋಶೆ ಮಾಡಿದ ಯಾಚನೆಗೆ ‘ಹೆಚ್ಚು ಬಲವಿತ್ತೊ?’ (ಯಾಕೋ. 5:16) ಹೌದು. ಆ ವಿಜ್ಞಾಪನೆಯ ಕಾರಣದಿಂದಾಗಿ ಹಾಗೂ ಕಡಿಮೆಪಕ್ಷ ಬೇರೆ ಎರಡು ಕಾರಣಗಳಿಂದಾಗಿ ಯೆಹೋವನು ಮೋಶೆಯ ಪ್ರಾರ್ಥನೆಯನ್ನು ಆಲಿಸಿದನು ಮತ್ತು ಆರೋನನನ್ನು ಶಿಕ್ಷಿಸಲಿಲ್ಲ ಎಂದು ತೋರುತ್ತದೆ.

ಒಂದು ಕಾರಣ ಆರೋನನ ನಂಬಿಗಸ್ತಿಕೆಯ ದಾಖಲೆಯೇ ಆಗಿದ್ದಿರಬೇಕು. ಮೋಶೆಗೆ ಫರೋಹನ ಮುಂದೆ ಹೋಗುವಂತೆ ಹಾಗೂ ಇಸ್ರಾಯೇಲ್ಯರನ್ನು ಈಜಿಪ್ಟಿನಿಂದ ಹೊರತರುವಂತೆ ಯೆಹೋವನು ಆಜ್ಞಾಪಿಸಿದಾಗ ಆರೋನನನ್ನು ಮೋಶೆಯ ಜೊತೆಯಲ್ಲಿ ಹೋಗಿ ಅವನ ಪ್ರತಿನಿಧಿಯಾಗಿ ಮಾತನಾಡುವಂತೆ ಆತನು ನೇಮಿಸಿದನು. (ವಿಮೋ. 4:10-16) ಈ ಇಬ್ಬರು ಪುರುಷರು ವಿಧೇಯತೆಯಿಂದ ಅನೇಕ ಬಾರಿ ಈಜಿಪ್ಟಿನ ರಾಜನ ಸಮ್ಮುಖಕ್ಕೆ ಹೋದರು ಹಾಗೂ ಕಠಿಣ ಹೃದಯಿಯಾಗಿದ್ದ ಅವನ ದರ್ಪವನ್ನು ಸಹಿಸಿಕೊಂಡರು. ಹೀಗೆ ಇನ್ನೂ ಈಜಿಪ್ಟಿನಲ್ಲಿದ್ದಾಗಲೇ ಆರೋನನು ಯೆಹೋವನ ಸೇವೆಯಲ್ಲಿ ನಿಷ್ಠೆ ಹಾಗೂ ದೃಢಚಿತ್ತದ ದಾಖಲೆಯನ್ನು ಮಾಡಿದ್ದನು.—ವಿಮೋ. 4:21.

ಆರೋನನು ಚಿನ್ನದ ಬಸವನನ್ನು ಮಾಡುವ ಕೆಲಸಕ್ಕೆ ಕೈಹಾಕಲು ಯಾವುದು ನಡೆಸಿತೆಂಬುದನ್ನೂ ಪರಿಗಣಿಸಿರಿ. ಮೋಶೆಯು 40 ದಿನಗಳ ವರೆಗೆ ಸೀನಾಯಿಬೆಟ್ಟದ ಮೇಲಿದ್ದನು. “ಮೋಶೆ ಬೆಟ್ಟದಿಂದ ಇಳಿಯದೆ ತಡಮಾಡಿದ್ದನ್ನು ಇಸ್ರಾಯೇಲ್ಯರು ನೋಡಿ” ತಮಗಾಗಿ ಒಂದು ವಿಗ್ರಹ ಮಾಡಿಕೊಡುವಂತೆ ಆರೋನನನ್ನು ಒತ್ತಾಯಿಸಿದರು. ಆರೋನನು ಅದಕ್ಕೆ ಸಹಕರಿಸಿ ಚಿನ್ನದಿಂದ ಬಸವನ ವಿಗ್ರಹ ಮಾಡಿಕೊಟ್ಟನು. (ವಿಮೋ. 32:1-6) ಆದರೆ ಆರೋನನ ನಂತರದ ಕ್ರಿಯೆಗಳು ಅವನು ನಿಜವಾಗಿಯೂ ಆ ವಿಗ್ರಹಾರಾಧನೆಗೆ ಸಮ್ಮತಿಸಿರಲಿಲ್ಲ ಎಂಬುದನ್ನು ಸೂಚಿಸುತ್ತವೆ. ಅವನು ಒತ್ತಡಕ್ಕೆ ಮಣಿದು ಹಾಗೆ ಮಾಡಿದನೆಂಬುದು ಸ್ಪಷ್ಟ. ಉದಾಹರಣೆಗೆ, ಈ ವಿಗ್ರಹಾರಾಧನೆಯ ವಿವಾದವನ್ನು ಮೋಶೆಯು ನಾಟಕೀಯ ಘಟನೆಯಿಂದ ಕೊನೆಗೊಳಿಸಿದಾಗ ಆರೋನನು ಸೇರಿದಂತೆ ಲೇವಿಯರೆಲ್ಲರೂ ಯೆಹೋವನ ಪಕ್ಷದಲ್ಲಿ ಸ್ಥಿರವಾಗಿ ನಿಂತರು. ಆ ವಿಗ್ರಹಾರಾಧಕ ಕ್ರಿಯೆಗೆ ಮುಖ್ಯವಾಗಿ ಜವಾಬ್ದಾರರಾಗಿದ್ದ ಮೂರು ಸಾವಿರ ವಿಗ್ರಹಾರಾಧಕರು ಸಂಹರಿಸಲ್ಪಟ್ಟರು.—ವಿಮೋ. 32:25-29.

ತದನಂತರ ಮೋಶೆಯು, “ನೀವು ಮಹಾಪಾಪವನ್ನು ಮಾಡಿದಿರಿ” ಎಂದು ಜನರಿಗೆ ಹೇಳಿದನು. (ವಿಮೋ. 32:30) ಹೀಗೆ ಆ ಕೆಟ್ಟ ಕೃತ್ಯಕ್ಕಾಗಿ ಸ್ವಲ್ಪಮಟ್ಟಿಗೆ ದೋಷಿಯಾಗಿದ್ದವನು ಆರೋನನು ಒಬ್ಬನೇ ಅಲ್ಲ. ಅವನೂ ಇತರ ಜನರೂ ಯೆಹೋವನ ಮಹಾ ಕರುಣೆಯಿಂದ ಪ್ರಯೋಜನ ಹೊಂದಿದರು.

ಚಿನ್ನದ ಬಸವನ ಆರಾಧನೆಯ ಘಟನೆಯು ನಡೆದ ತರುವಾಯ ಯೆಹೋವನು ಆರೋನನನ್ನು ಮುಖ್ಯ ಯಾಜಕನಾಗಿ ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿದನು. “ಆರೋನನು ನನಗೆ ಯಾಜಕನಾಗುವಂತೆ ಅವನಿಗೆ ಆ ದೀಕ್ಷಾವಸ್ತ್ರಗಳನ್ನು ತೊಡಿಸಿ ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಬೇಕು” ಎಂದು ದೇವರು ಮೋಶೆಗೆ ಹೇಳಿದನು. (ವಿಮೋ. 40:12, 13) ಯೆಹೋವನು ಆರೋನನ ಬಲಹೀನತೆಯನ್ನು ಕ್ಷಮಿಸಿದನು ಎಂಬುದು ಇದರಿಂದ ರುಜುವಾಗುತ್ತದೆ. ಆರೋನನು ಹೃದಯದಲ್ಲಿ ಶುದ್ಧಾರಾಧನೆಯನ್ನು ಎತ್ತಿಹಿಡಿಯುವವನಾಗಿದ್ದನೇ ಹೊರತು ದಂಗೆಕೋರ ವಿಗ್ರಹಾರಾಧಕನಾಗಿರಲಿಲ್ಲ.

ಅಕ್ಟೋಬರ್‌ 12-18

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 33-34

“ಯೆಹೋವನ ಅದ್ಭುತ ಗುಣಗಳು”

(ವಿಮೋಚನಕಾಂಡ 34:5) ಆಗ ಯೆಹೋವನು ಮೇಘದಿಂದ ಆವರಿಸಲ್ಪಟ್ಟವನಾಗಿ ಇಳಿದು ಬಂದು ಅಲ್ಲಿ ಅವನ ಹತ್ತಿರ ನಿಂತು ಯೆಹೋವನೆಂಬ ನಾಮವನ್ನು ಪ್ರಕಟಿಸಿದನು.

it-2-E ಪುಟ 466-467

ಹೆಸರು

ಕಣ್ಣಿಗೆ ಕಾಣೋ ಸೃಷ್ಟಿಯು ದೇವರು ನಿಜವಾಗಿಯೂ ಇದ್ದಾನೆ ಅನ್ನೋದನ್ನ ತೋರಿಸಿಕೊಡುತ್ತೆ. ಆದ್ರೆ ಅದು ದೇವರ ಹೆಸ್ರನ್ನ ತಿಳಿಸಲ್ಲ. (ಕೀರ್ತ 19:1; ರೋಮ 1:20) ಒಬ್ಬ ವ್ಯಕ್ತಿ ದೇವರ ಹೆಸ್ರು ಯೆಹೋವ ಅಂತ ತಿಳ್ಕೊಂಡರಷ್ಟೇ ಸಾಕಾಗಲ್ಲ. (2ಪೂರ್ವ 6:33) ಆ ವ್ಯಕ್ತಿ ಯೆಹೋವನ ಉದ್ದೇಶಗಳೇನು, ಆತನು ಏನೆಲ್ಲಾ ಮಾಡಿದ್ದಾನೆ, ಮುಂದೆ ಏನೆಲ್ಲಾ ಮಾಡ್ತಾನೆ, ಆತನಿಗೆ ಯಾವೆಲ್ಲಾ ಗುಣಗಳಿವೆ ಅನ್ನೋದನ್ನ ಬೈಬಲಿಂದ ತಿಳ್ಕೊಬೇಕು. (1ಅರ 8:41-43; 9:3, 7; ನೆಹೆ 9:10 ಹೋಲಿಸಿ.) ಉದಾಹರಣೆಗೆ, ಯೆಹೋವನು ಮೋಶೆಯ ‘ಹೆಸರನ್ನ ಗೊತ್ತುಮಾಡಿದ್ದನು’ ಅಥವಾ ತಿಳುಕೊಂಡಿದ್ದನು. ಅದ್ರರ್ಥ ಮೋಶೆ ಬಗ್ಗೆ ಯೆಹೋವನಿಗೆ ಚೆನ್ನಾಗಿ ಗೊತ್ತಿತ್ತು. (ವಿಮೋ 33:12) ಮೋಶೆಗೆ ಯೆಹೋವನ ಅದ್ಭುತ ಮಹಿಮೆಯನ್ನ ನೋಡೋ ಅವಕಾಶ ಸಿಕ್ತು ಮತ್ತು ‘ಯೆಹೋವನೆಂಬ ನಾಮವನ್ನು ಪ್ರಕಟಿಸಿದ್ದನ್ನ’ ಕೇಳಿಸಿಕೊಂಡನು. (ವಿಮೋ 34:5) ಆ ಪ್ರಕಟನೆಯಲ್ಲಿ ಯೆಹೋವನ ಹೆಸ್ರನ್ನ ಪುನಃಪುನಃ ಹೇಳಿದ್ದಷ್ಟೇ ಅಲ್ಲ, ಆತನ ಗುಣಗಳನ್ನು ಮತ್ತು ಆತನು ಏನು ಮಾಡ್ತಾನೆ ಅನ್ನೋದನ್ನೂ ತಿಳಿಸಲಾಯ್ತು. “ಯೆಹೋವ ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು; ಆದರೂ [ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು; ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳ ವರೆಗೆ ಬರಕೊಡುವವನು” ಅನ್ನೋ ಪ್ರಕಟನೆಯನ್ನ ಮೋಶೆ ಕೇಳಿಸಿಕೊಂಡನು. (ವಿಮೋ 34:6, 7) ಅದೇ ರೀತಿ ಮೋಶೆ ತಾನು ರಚಿಸಿದ ಪದ್ಯದಲ್ಲಿ “ಯೆಹೋವನ ನಾಮಮಹತ್ವವನ್ನು ಪ್ರಕಟಿಸುವೆನು” ಅಂತ ಹೇಳಿ ದೇವರು ಇಸ್ರಾಯೇಲ್ಯರ ಜೊತೆ ಹೇಗೆ ನಡ್ಕೊಂಡನು ಅನ್ನೋದ್ರ ಬಗ್ಗೆ ಮತ್ತು ಆತನ ಗುಣಗಳ ಬಗ್ಗೆ ವಿವರಿಸಿದನು.—ಧರ್ಮೋ 32:3-44.

(ವಿಮೋಚನಕಾಂಡ 34:6) ಯೆಹೋವನು ಮೋಶೆಯ ಎದುರಾಗಿ ಹೋಗುತ್ತಾ ಪ್ರಕಟವಾಗಿ ಹೇಳಿದ್ದೇನಂದರೆ:—“ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು;

ಕಾವಲಿನಬುರುಜು09 10/1 ಪುಟ 28 ಪ್ಯಾರ 3-5

ದೇವರ ಗುಣವರ್ಣನೆ

“ಕನಿಕರವೂ ದಯೆಯೂ ಉಳ್ಳ ದೇವರು” (ವಚನ 6) ಎಂಬದೇ ಯೆಹೋವನು ತನ್ನ ಕುರಿತು ತಿಳಿಯಪಡಿಸಿದ ಮೊದಲನೆಯ ವಿಷಯ. ಒಬ್ಬ ವಿದ್ವಾಂಸರಿಗನುಸಾರ, “ಕನಿಕರ” ಎಂದು ಅನುವಾದಿಸಲಾದ ಹೀಬ್ರು ಪದವು “ತಂದೆಗೆ ತನ್ನ ಮಕ್ಕಳ ಮೇಲಿರುವ ಕನಿಕರದಂಥ ದೇವರ ಕೋಮಲ ಕರುಣೆಯನ್ನು ಸೂಚಿಸುತ್ತದೆ.” “ದಯೆ” ಎಂದು ಭಾಷಾಂತರಿಸಲಾದ ಹೀಬ್ರು ಪದವು “ಕೊರತೆಯಲ್ಲಿರುವವರಿಗೆ ಸಹಾಯಮಾಡಲು ಒಬ್ಬನ ಹೃತ್ಪೂರ್ವಕ ಅಪೇಕ್ಷೆಯನ್ನು ಸೂಚಿಸುವ” ಒಂದು ಕ್ರಿಯಾಪದಕ್ಕೆ ಸಂಬಂಧಿಸಿದೆ. ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ಸಾಕಿಸಲಹುತ್ತಾರೊ ಹಾಗೆಯೇ ಯೆಹೋವನು ತನ್ನ ಭಕ್ತರನ್ನು ಕೋಮಲ ಪ್ರೀತಿ ಮತ್ತು ಆಳವಾದ ಚಿಂತನೆಯಿಂದ ಪರಾಮರಿಸುತ್ತಾನೆ ಎಂದು ನಾವು ತಿಳಿಯುವುದೇ ಆತನ ಅಪೇಕ್ಷೆ ಎಂಬುದು ಸ್ಪಷ್ಟ.—ಕೀರ್ತನೆ 103:8, 13.

ಬಳಿಕ ಯೆಹೋವನು ತಾನು “ದೀರ್ಘಶಾಂತನೂ” ಎಂದು (ವಚನ 6) ಹೇಳುತ್ತಾನೆ. ಆತನು ತನ್ನ ಭೂಸೇವಕರ ಮೇಲೆ ಆಗಾಗ್ಗೆ ಸಿಟ್ಟುಗೊಳ್ಳುವವನಲ್ಲ, ಬದಲಾಗಿ ಆತನು ಅವರೊಂದಿಗೆ ತಾಳ್ಮೆಯಿಂದಿದ್ದಾನೆ, ಅವರ ಕುಂದುಕೊರತೆಗಳನ್ನು ಸಹಿಸಿಕೊಂಡು ತಮ್ಮ ಪಾಪಪೂರ್ಣ ಮಾರ್ಗಗಳನ್ನು ಬದಲಾಯಿಸಿಕೊಳ್ಳುವಂತೆ ಸಮಯವನ್ನು ಕೊಟ್ಟಿದ್ದಾನೆ.—2 ಪೇತ್ರ 3:9.

ದೇವರು ಮುಂದುವರಿಸುತ್ತಾ ತಾನು “ಪ್ರೀತಿಪೂರ್ವಕ ದಯೆ ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನು” ಎಂದು ಹೇಳುತ್ತಾನೆ. (ವಚನ 6, NW) ಪ್ರೀತಿಪೂರ್ವಕ ದಯೆ ಅಥವಾ ನಿಷ್ಠಾವಂತ ಪ್ರೀತಿಯು ಯೆಹೋವನು ತನ್ನ ಮತ್ತು ತನ್ನ ಜನರ ನಡುವೆ ಹೊಸೆಯುವ ಅಮೂಲ್ಯ ಬಂಧ. ಈ ಅಮೂಲ್ಯ ಬಂಧವು ಸುದೃಢವೂ ಎಂದೂ ಬಿದ್ದುಹೋಗದ್ದೂ ಆಗಿದೆ. (ಧರ್ಮೋಪದೇಶಕಾಂಡ 7:9) ಯೆಹೋವನು ಸತ್ಯದ ಮೂಲನೂ ಆಗಿದ್ದಾನೆ. ಆತನು ಮೋಸಮಾಡುವವನೂ ಅಲ್ಲ ಮೋಸಹೋಗುವವನೂ ಅಲ್ಲ. ಆತನು “ಸತ್ಯದ ದೇವರು” ಆಗಿರಲಾಗಿ ಆತನು ಹೇಳುವ ಎಲ್ಲಾ ವಿಷಯಗಳಲ್ಲಿ ನಮಗೆ ಪೂರ್ಣ ನಂಬಿಕೆಯಿರಸಾಧ್ಯವಿದೆ. ಭವಿಷ್ಯತ್ತಿಗಾಗಿ ಆತನು ಕೊಟ್ಟಿರುವ ವಾಗ್ದಾನಗಳಲ್ಲಿ ಸಹ.—ಕೀರ್ತನೆ 31:5 NW.

(ವಿಮೋಚನಕಾಂಡ 34:7) ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು; ಆದರೂ ಅಪರಾಧಗಳನ್ನು ಶಿಕ್ಷಿಸದೆ ಬಿಡದವನು; ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳ ವರೆಗೆ ಬರಕೊಡುವವನು ಎಂಬದೇ.

ಕಾವಲಿನಬುರುಜು09 10/1 ಪುಟ 28 ಪ್ಯಾರ 6

ದೇವರ ಗುಣವರ್ಣನೆ

ನಾವು ತಿಳಿದಿರಬೇಕೆಂದು ಯೆಹೋವನು ಬಯಸುವ ಇನ್ನೊಂದು ದೊಡ್ಡ ಸತ್ಯವು ಯಾವುದೆಂದರೆ ಆತನು “ದೋಷಾಪರಾಧಪಾಪಗಳನ್ನು ಕ್ಷಮಿಸುವವನು” ಎಂಬುದೇ. (ವಚನ 7) ಪಶ್ಚಾತ್ತಾಪಪಡುವ ಪಾಪಿಗಳನ್ನು ‘ಕ್ಷಮಿಸಲು’ ಆತನು ಸದಾ ಸಿದ್ಧನು. (ಕೀರ್ತನೆ 86:5) ಅದೇ ಸಮಯದಲ್ಲಿ ಯೆಹೋವನು ಕೆಟ್ಟತನವನ್ನು ಗಮನಿಸದೇ ಇರುವ ದೇವರಲ್ಲ. ಏಕೆಂದರೆ ತಾನು “[ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು” ಎಂದು ಆತನು ವಿವರಿಸುತ್ತಾನೆ. (ವಚನ 7) ಪರಿಶುದ್ಧನೂ ನ್ಯಾಯವಂತನೂ ಆದ ದೇವರು ಬೇಕುಬೇಕೆಂದು ಪಾಪಮಾಡುವ ಪಾಪಿಗಳನ್ನಾದರೋ ದಂಡಿಸದೆ ಬಿಡಲಾರನು. ಇಂದೋ ಮುಂದೋ ಅವರು ತಮ್ಮ ಪಾಪಪೂರ್ಣ ಕೃತ್ಯಗಳ ದುಷ್ಪರಿಣಾಮಗಳನ್ನು ಅನುಭವಿಸಿಯೇ ತೀರಬೇಕು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ವಿಮೋಚನಕಾಂಡ 33:11) ಮನುಷ್ಯರೊಳಗೆ ಒಬ್ಬನು ತನ್ನ ಸ್ನೇಹಿತನೊಡನೆ ಹೇಗೆ ಮಾತಾಡುವನೋ ಹಾಗೆಯೇ ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದನು; ತರುವಾಯ ಮೋಶೆ ಪಾಳೆಯಕ್ಕೆ ತಿರಿಗಿ ಬರುವನು. ಆದರೆ ನೂನನ ಮಗನಾದ ಯೆಹೋಶುವನೆಂಬ ಹೆಸರುಳ್ಳ ಯೌವನಸ್ಥನಾದ ಅವನ ಶಿಷ್ಯನು ಆ ಡೇರೆಯಲ್ಲೇ ಇದ್ದನು; ಅದರ ಬಳಿಯಿಂದ ಹೋಗಲೇ ಇಲ್ಲ.

(ವಿಮೋಚನಕಾಂಡ 33:20) ಆದರೆ ಆತನು ಅವನಿಗೆ—ನೀನು ನನ್ನ ಮುಖವನ್ನು ನೋಡುವದಕ್ಕಾಗದು; ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು ಎಂದು ಹೇಳಿದನು.

ಕಾವಲಿನಬುರುಜು04 3/15 ಪುಟ 27 ಪ್ಯಾರ 5

ವಿಮೋಚನಕಾಂಡ ಪುಸ್ತಕದ ಮುಖ್ಯಾಂಶಗಳು

ವಿಮೋಚನಕಾಂಡ 33:11, 20—ದೇವರು ಹೇಗೆ ಮೋಶೆಯೊಂದಿಗೆ “ಮುಖಾಮುಖಿಯಾಗಿ” ಮಾತಾಡಿದನು? ಈ ಅಭಿವ್ಯಕ್ತಿಯು ಎರಡೂ ಕಡೆಯಿಂದ ನಡೆದ ಆಪ್ತವಾದ ಸಂಭಾಷಣೆಯನ್ನು ಸೂಚಿಸುತ್ತದೆ. ಮೋಶೆಯು ದೇವರ ಪ್ರತಿನಿಧಿಯೊಂದಿಗೆ ಮಾತಾಡಿದನು ಮತ್ತು ಅವನ ಮೂಲಕವೇ ಯೆಹೋವನಿಂದ ಮೌಖಿಕ ಉಪದೇಶವನ್ನು ಪಡೆದುಕೊಂಡನು. ಆದರೆ ಮೋಶೆಯು ಯೆಹೋವನನ್ನು ನೋಡಲಿಲ್ಲ, ಏಕೆಂದರೆ ‘ಮನುಷ್ಯರಲ್ಲಿ ಯಾವನೂ ದೇವರನ್ನು ನೋಡಿ ಜೀವಿಸಲಾರನು.’ ವಾಸ್ತವದಲ್ಲಿ, ಯೆಹೋವನು ಮೋಶೆಯೊಂದಿಗೆ ವ್ಯಕ್ತಿಗತವಾಗಿ ಮಾತಾಡಲಿಲ್ಲ. ಧರ್ಮಶಾಸ್ತ್ರವು “ದೇವದೂತರ ಮುಖಾಂತರ ಒಬ್ಬ ಮಧ್ಯಸ್ಥನ ಕೈಯಲ್ಲಿ” ರವಾನಿಸಲ್ಪಟ್ಟಿತು ಎಂದು ಗಲಾತ್ಯ 3:19 ಹೇಳುತ್ತದೆ.

(ವಿಮೋಚನಕಾಂಡ 34:23, 24) ವರುಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರೂ ಇಸ್ರಾಯೇಲ್ಯರ ದೇವರಾಗಿರುವ ಕರ್ತನಾದ ಯೆಹೋವನ ಸನ್ನಿಧಿಯಲ್ಲಿ ನೆರೆಯಬೇಕು. 24 ನಾನು ನಿಮ್ಮ ಎದುರಿನಿಂದ ಅನ್ಯಜನಗಳನ್ನು ಹೊರಡಿಸಿ ನಿಮ್ಮ ದೇಶವನ್ನು ವಿಸ್ತರಿಸುವೆನು. ಅಷ್ಟೇ ಅಲ್ಲದೆ ನೀವು ವರುಷಕ್ಕೆ ಮೂರಾವರ್ತಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಗೆ ಹೋಗುವಾಗ ಯಾರೂ ನಿಮ್ಮ ಭೂಮಿಯನ್ನು ಅಪಹರಿಸುವದಕ್ಕೆ ಅಪೇಕ್ಷಿಸುವದಿಲ್ಲ.

ಕಾವಲಿನಬುರುಜು98 9/1 ಪುಟ 20 ಪ್ಯಾರ 5

ಪ್ರಮುಖ ವಿಷಯಗಳಿಗೆ ಪ್ರಥಮ ಸ್ಥಾನಕೊಡಲು ನಿಶ್ಚಯಿಸಿಕೊಳ್ಳಿರಿ!

ಆ ದೇಶದಲ್ಲಿದ್ದ ಪ್ರತಿಯೊಬ್ಬ ಇಸ್ರಾಯೇಲ್ಯನು ಮತ್ತು ಮತಾಂತರಗೊಂಡ ಪುರುಷರು, ವರ್ಷದಲ್ಲಿ ಮೂರು ಬಾರಿ ಯೆಹೋವನ ಸನ್ನಿಧಿಗೆ ಬರುವಂತೆ ಆಜ್ಞಾಪಿಸಲ್ಪಟ್ಟಿದ್ದರು. ಅಂಥ ಸಂದರ್ಭಗಳಿಂದ ಇಡೀ ಕುಟುಂಬವು ಆತ್ಮಿಕವಾಗಿ ಪ್ರಯೋಜನವನ್ನು ಪಡೆದುಕೊಳ್ಳುವರೆಂಬುದನ್ನು ಮನಸ್ಸಿನಲ್ಲಿಡುತ್ತಾ, ಅನೇಕ ಕುಟುಂಬದ ತಲೆಗಳು, ತಮ್ಮೊಂದಿಗೆ, ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗಲು ಏರ್ಪಾಡು ಮಾಡುತ್ತಿದ್ದವು. ಆದರೆ ಕುಟುಂಬವು ಮನೆಯಿಂದ ದೂರವಿರುವಾಗ, ಶತ್ರುಗಳ ಆಕ್ರಮಣದಿಂದ ಅವರ ಮನೆಗಳನ್ನು ಮತ್ತು ಹೊಲಗದ್ದೆಗಳನ್ನು ಯಾರು ಕಾಪಾಡುತ್ತಿದ್ದರು? ಯೆಹೋವನು ಮಾತುಕೊಟ್ಟದ್ದು: “ನೀವು ವರುಷಕ್ಕೆ ಮೂರಾವರ್ತಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಗೆ ಹೋಗುವಾಗ ಯಾರೂ ನಿಮ್ಮ ಭೂಮಿಯನ್ನು ಅಪಹರಿಸುವದಕ್ಕೆ ಅಪೇಕ್ಷಿಸುವದಿಲ್ಲ.” (ವಿಮೋಚನಕಾಂಡ 34:24) ತಾವು ಆತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನಕೊಡುವಲ್ಲಿ, ಭೌತಿಕವಾಗಿ ನಷ್ಟಗೊಳ್ಳುವುದಿಲ್ಲವೆಂಬುದನ್ನು ನಂಬಲು ಇಸ್ರಾಯೇಲ್ಯರಿಗೆ ನಂಬಿಕೆಯ ಅಗತ್ಯವಿತ್ತು. ಯೆಹೋವನು ಕೊಟ್ಟಮಾತಿಗೆ ಸತ್ಯವಾಗಿ ನಡೆದುಕೊಂಡನೋ? ನಿಶ್ಚಯವಾಗಿಯೂ ಆತನು ನಡೆದುಕೊಂಡನು!

ಅಕ್ಟೋಬರ್‌ 19-25

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 35-36

“ಯೆಹೋವನು ನಮ್ಮನ್ನು ತನ್ನ ಸೇವೆಮಾಡಲು ಅರ್ಹರಾಗುವಂತೆ ಮಾಡುತ್ತಾನೆ”

(ವಿಮೋಚನಕಾಂಡ 35:25, 26) ಜಾಣೆಯರಾದ ಸ್ತ್ರೀಯರು ತಮ್ಮ ಕೈಗಳಿಂದ ನೀಲಿ ಧೂಮ್ರ ರಕ್ತವರ್ಣಗಳುಳ್ಳ ನೂಲನ್ನೂ ನಾರಿನ ನೂಲನ್ನೂ ನೂತು ಆ ನೂಲನ್ನು ತಂದುಕೊಟ್ಟರು. 26 ಬೇರೆ ಜಾಣೆಯರಾದ ಸ್ತ್ರೀಯರು ಆಡಿನ ಕೂದಲುಗಳನ್ನು ನೂತು ತಂದುಕೊಟ್ಟರು.

ಕಾವಲಿನಬುರುಜು14 12/15 ಪುಟ 4 ಪ್ಯಾರ 4

ಸಿದ್ಧಮನಸ್ಸನ್ನು ಯೆಹೋವನು ಸಮೃದ್ಧವಾಗಿ ಆಶೀರ್ವದಿಸುತ್ತಾನೆ

ಯೆಹೋವನಿಗೆ ಅತ್ಯಂತ ಹೆಚ್ಚಿನ ಸಂತೋಷವನ್ನು ತಂದ ಸಂಗತಿ ಆ ಭೌತಿಕ ಕಾಣಿಕೆಗಳಲ್ಲ. ಬದಲಾಗಿ ಕಾಣಿಕೆಗಳ ಮೂಲಕ ಶುದ್ಧಾರಾಧನೆಯನ್ನು ಬೆಂಬಲಿಸಿದವರ ಸಿದ್ಧಮನಸ್ಸೇ. ಈ ಜನರು ತಮ್ಮ ಸಮಯ ಹಾಗೂ ಶ್ರಮವನ್ನೂ ಯೆಹೋವನಿಗೆ ಸಂತೋಷದಿಂದ ಸಮರ್ಪಿಸಿದರು. “ಜಾಣೆಯರಾದ ಸ್ತ್ರೀಯರು ತಮ್ಮ ಕೈಗಳಿಂದ . . . ನೂಲನ್ನೂ ನೂತು ಆ ನೂಲನ್ನು ತಂದುಕೊಟ್ಟರು.” “ಬೇರೆ ಜಾಣೆಯರಾದ ಸ್ತ್ರೀಯರು” ಅಥವಾ ನೂತನ ಲೋಕ ಭಾಷಾಂತರ ತಿಳಿಸುವಂತೆ ಹೃದಯದಾಳದಿಂದ ಪ್ರೇರಿಸಲ್ಪಟ್ಟ ಸ್ತ್ರೀಯರು “ಆಡಿನ ಕೂದಲುಗಳನ್ನು ನೂತು ತಂದುಕೊಟ್ಟರು.” ಅಷ್ಟುಮಾತ್ರವಲ್ಲ ಯೆಹೋವನು ಬೆಚಲೇಲನಿಗೆ “ಬೇಕಾದ ಜ್ಞಾನವಿದ್ಯಾವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ” ಅನುಗ್ರಹಿಸಿದನು. ನೇಮಿಸಲಾದ ಎಲ್ಲ ಕೆಲಸವನ್ನು ಮಾಡಲು ಅಗತ್ಯವಿರುವ ಕೌಶಲವನ್ನು ದೇವರು ಬೆಚಲೇಲ ಹಾಗೂ ಒಹೊಲೀಯಾಬರಿಗೆ ದಯಪಾಲಿಸಿದನು.—ವಿಮೋ. 35:25, 26, 30-35.

(ವಿಮೋಚನಕಾಂಡ 35:30-35) ಮತ್ತು ಮೋಶೆಯು ಇಸ್ರಾಯೇಲ್ಯರಿಗೆ ಹೀಗಂದನು—ವಿಚಿತ್ರವಾಗಿ ನಯವಾದ ಕೆಲಸಗಳನ್ನು ಕಲ್ಪಿಸುವದಕ್ಕೂ 31 ಚಿನ್ನ ಬೆಳ್ಳಿ ತಾಮ್ರಗಳಿಂದ ಕೆಲಸನಡಿಸುವದಕ್ಕೂ ರತ್ನಗಳನ್ನು ಕೆತ್ತುವದಕ್ಕೂ ಮರದಲ್ಲಿ ವಿಚಿತ್ರವಾಗಿ ಕೆತ್ತನೇ ಕೆಲಸವನ್ನು ಮಾಡುವದಕ್ಕೂ 32 ಬೇರೆ ಸಕಲವಿಧವಾದ ಶೃಂಗಾರವಾದ ಕೆಲಸವನ್ನು ಮಾಡುವದಕ್ಕೂ ಯೆಹೋವನು ಯೆಹೂದಕುಲದವನಾದ ಹೂರನ ಮೊಮ್ಮಗನೂ ಊರಿಯ ಮಗನೂ ಆಗಿರುವ ಬೆಚಲೇಲನೆಂಬವನನ್ನು ಗೊತ್ತಾಗಿ ನೇಮಿಸಿ 33 ಅವನಿಗೆ ದಿವ್ಯಾತ್ಮನನ್ನು ಕೊಟ್ಟು ಬೇಕಾದ ಜ್ಞಾನವಿದ್ಯಾವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ ಅನುಗ್ರಹಿಸಿದ್ದಾನೆ. 34 ಅದಲ್ಲದೆ ಮತ್ತೊಬ್ಬರಿಗೆ ಕಲಿಸಿಕೊಡುವದಕ್ಕೆ ಸಹ ಅವನಿಗೂ ದಾನ್‌ ಕುಲದ ಅಹೀಸಾಮಾಕನ ಮಗನಾದ ಒಹೊಲೀಯಾಬನಿಗೂ ವರಕೊಟ್ಟಿದ್ದಾನೆ. 35 ಶಿಲ್ಪಿಗಳು ಚಮತ್ಕಾರವಾದ ಕೆಲಸ ಕಲ್ಪಿಸುವವರು, ನೀಲಿ ಧೂಮ್ರ ರಕ್ತವರ್ಣದ ದಾರದಿಂದಲೂ ನಾರುಬಟ್ಟೆಯಿಂದಲೂ ಬುಟೇದಾರೀ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲಾ ಕಸಬುದಾರರು, ನಡಿಸುವ ಕೆಲಸಗಳನ್ನು ಕಲ್ಪಿಸುವದಕ್ಕೂ ಮಾಡುವದಕ್ಕೂ ಯೆಹೋವನು ಅವರಿಗೆ ಜ್ಞಾನವನ್ನು ಪರಿಪೂರ್ಣವಾಗಿ ಅನುಗ್ರಹಿಸಿದ್ದಾನೆ.

ಕಾವಲಿನಬುರುಜು11 12/15 ಪುಟ 19 ಪ್ಯಾರ 6

ಪ್ರಾಚೀನ ಕಾಲದ ದೇವಜನರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು

6 ಮೋಶೆಯ ಸಮಯದಲ್ಲಿ ಪವಿತ್ರಾತ್ಮದ ಸಹಾಯ ಪಡೆದುಕೊಂಡ ಇನ್ನೊಬ್ಬ ವ್ಯಕ್ತಿ ಬೆಚಲೇಲ. ಪವಿತ್ರಾತ್ಮ ಯಾವ ರೀತಿಯಲ್ಲೆಲ್ಲ ಸಹಾಯ ಮಾಡುತ್ತದೆ ಎನ್ನುವುದನ್ನು ಅವನ ಅನುಭವದಿಂದ ತಿಳಿಯಬಹುದು. (ವಿಮೋಚನಕಾಂಡ 35:30-35 ಓದಿ.) ದೇವದರ್ಶನದ ಗುಡಾರದ ನಿರ್ಮಾಣಕ್ಕಾಗಿ ಬೇಕಾದ ವಸ್ತುಗಳನ್ನು ಮಾಡಲು ಯೆಹೋವನು ಬೆಚಲೇಲನನ್ನು ನೇಮಿಸಿದನು. ಆದರೆ ಕರಕುಶಲ ಕೆಲಸ ಅವನಿಗೆ ಗೊತ್ತಿತ್ತಾ? ಒಂದು ವೇಳೆ ಗೊತ್ತಿದ್ದರೂ ಅವನು ಈ ಮುಂಚೆ ಈಜಿಪ್ಟ್‌ನಲ್ಲಿ ಮಾಡುತ್ತಿದ್ದದ್ದು ಇಟ್ಟಿಗೆ ತಯಾರಿ ಮಾಡುವ ಕೆಲಸವಷ್ಟೆ. (ವಿಮೋ. 1:13, 14) ಹಾಗಾದರೆ ಇಷ್ಟೊಂದು ನಾಜೂಕಾದ ಕೆಲಸವನ್ನು ಬೆಚಲೇಲನು ಮಾಡಿದ್ದಾದರೂ ಹೇಗೆ? ಯೆಹೋವನು ಅವನಿಗೆ “ಕೆತ್ತನೇ ಕೆಲಸವನ್ನು ಮಾಡುವದಕ್ಕೂ ಬೇರೆ ಸಕಲವಿಧವಾದ ಶೃಂಗಾರವಾದ ಕೆಲಸವನ್ನು ಮಾಡುವದಕ್ಕೂ . . . ದಿವ್ಯಾತ್ಮನನ್ನು ಕೊಟ್ಟು ಬೇಕಾದ ಜ್ಞಾನವಿದ್ಯಾವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ” ಅನುಗ್ರಹಿಸಿದನು. ಹೀಗೆ ಬೆಚಲೇಲನಲ್ಲಿ ಇದ್ದಿರಬಹುದಾದ ಪ್ರತಿಭೆಯನ್ನು ಪವಿತ್ರಾತ್ಮವು ಇನ್ನಷ್ಟು ಉತ್ತಮಗೊಳಿಸಿತು. ಅಂತೆಯೇ ಒಹೊಲೀಯಾಬನಿಗೂ ಪವಿತ್ರಾತ್ಮ ಸಹಾಯ ಮಾಡಿತು. ಇವರಿಬ್ಬರೂ ಕೆಲಸವನ್ನು ಎಷ್ಟು ಚೆನ್ನಾಗಿ ಕಲಿತರೆಂದರೆ ತಮಗೆ ವಹಿಸಿದ ಕೆಲಸವನ್ನು ಮಾಡುವುದರ ಜೊತೆಗೆ ಇತರರಿಗೂ ಕಲಿಸಲು ಸಮರ್ಥರಾದರು. ಈ ಸಾಮರ್ಥ್ಯವನ್ನು ಅವರಿಗೆ ಕೊಟ್ಟವನು ದೇವರೇ.

(ವಿಮೋಚನಕಾಂಡ 36:1, 2) ಬೆಚಲೇಲನೂ ಒಹೊಲೀಯಾಬನೂ ಎಲ್ಲವನ್ನು ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಮಾಡುವರು; ಮತ್ತು ಬೇರೆ ಜಾಣರೆಲ್ಲರು, ಅಂದರೆ ಯೆಹೋವನಿಂದ ಜ್ಞಾನವಿವೇಕಗಳನ್ನು ಹೊಂದಿ ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೋಸ್ಕರ ಬೇಕಾದ ಸಕಲವಿಧವಾದ ವಸ್ತುಗಳನ್ನು ಮಾಡುವ ಕ್ರಮತಿಳಿದಿರುವವರು, ಅವರೊಂದಿಗೆ ಕೆಲಸಮಾಡುವರು ಅಂದನು. 2 ಬೆಚಲೇಲನನ್ನೂ ಒಹೋಲಿಯಾಬನನ್ನೂ ಮತ್ತು ಯಾರಾರ ಹೃದಯದಲ್ಲಿ ಯೆಹೋವನು ಜ್ಞಾನವನ್ನು ಇಟ್ಟಿದ್ದನೋ ಯಾರಾರನ್ನು ಈ ಕೆಲಸಮಾಡುವದಕ್ಕೆ ಹೃದಯಪ್ರೇರಿಸಿತೋ ಆ ಜಾಣರೆಲ್ಲರನ್ನೂ ಮೋಶೆ ತನ್ನ ಹತ್ತಿರಕ್ಕೆ ಕರಿಸಿದ್ದನು.

ಕಾವಲಿನಬುರುಜು11 12/15 ಪುಟ 19 ಪ್ಯಾರ 7

ಪ್ರಾಚೀನ ಕಾಲದ ದೇವಜನರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು

7 ಬೆಚಲೇಲ ಮತ್ತು ಒಹೊಲೀಯಾಬರಿಗೆ ಪವಿತ್ರಾತ್ಮದ ಸಹಾಯವಿತ್ತು ಎನ್ನುವುದಕ್ಕೆ ಇನ್ನೊಂದು ರುಜುವಾತು ಅವರ ಕೆಲಸದ ಗುಣಮಟ್ಟ. ಅವರು ತಯಾರಿಸಿದ ವಸ್ತುಗಳನ್ನು 500 ವರ್ಷಗಳ ನಂತರವೂ ಉಪಯೋಗಿಸಲಾಗುತ್ತಿತ್ತು. (2 ಪೂರ್ವ. 1:2-6) ಇಂದು ಅನೇಕ ಕೆಲಸಗಾರರು ತಾವೇನೇ ನಿರ್ಮಿಸಿದರೂ ಅದರ ಮೇಲೆ ತಮ್ಮ ಹಸ್ತಾಕ್ಷರ ಅಥವಾ ಗುರುತನ್ನು ಹಾಕುತ್ತಾರೆ. ಬೆಚಲೇಲ, ಒಹೊಲೀಯಾಬರು ಹಾಗೆ ಮಾಡಲಿಲ್ಲ. ಅವರ ಆ ಉತ್ಕೃಷ್ಟ ಕೆಲಸದ ಕೀರ್ತಿ ಯೆಹೋವನಿಗೆ ಸಂದಿತು.—ವಿಮೋ. 36:1, 2.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ವಿಮೋಚನಕಾಂಡ 35:1-3) ಮೋಶೆ ಇಸ್ರಾಯೇಲ್ಯರ ಸಮೂಹವನ್ನೆಲ್ಲಾ ಕೂಡ ಕರಿಸಿ ಅವರಿಗೆ–ನೀವು ಅನುಸರಿಸಬೇಕೆಂದು ಯೆಹೋವನು ನಿಮಗೆ ಹೀಗೆ ಅಪ್ಪಣೆ ಮಾಡಿದ್ದಾನೆ– 2 ಆರು ದಿನಗಳು ಕೆಲಸನಡೆಯಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್‌ ದಿನವಾದ್ದರಿಂದ ಅದರಲ್ಲಿ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು; ಆ ದಿನದಲ್ಲಿ ಕೆಲಸಮಾಡುವವನಿಗೆ ಮರಣದಂಡನೆಯಾಗಬೇಕು; 3 ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್‌ ದಿನದಲ್ಲಿ ಬೆಂಕಿಯನ್ನೂ ಹೊತ್ತಿಸಬಾರದು ಎಂದು ಹೇಳಿದನು.

ಕಾವಲಿನಬುರುಜು05 5/15 ಪುಟ 23 ಪ್ಯಾರ 14

ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು

14 ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ನೀಡಿರಿ. ಇಸ್ರಾಯೇಲ್‌ ಜನಾಂಗವು, ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಸ್ವಲ್ಪವೂ ಸಮಯ ಮತ್ತು ಶಕ್ತಿಯು ಉಳಿಯದಿರುವಷ್ಟರ ಮಟ್ಟಿಗೆ ಭೌತಿಕ ಆವಶ್ಯಕತೆಗಳನ್ನು ನೋಡಿಕೊಳ್ಳುವುದರಲ್ಲಿ ತಲ್ಲೀನವಾಗಿರಬಾರದಿತ್ತು. ಇಸ್ರಾಯೇಲ್ಯರು ಕ್ಷುಲ್ಲಕವಾದ ಬೆನ್ನಟ್ಟುವಿಕೆಗಳಿಗೆ ತಮ್ಮ ಜೀವಿತಗಳನ್ನು ಮುಡಿಪಾಗಿರಿಸಬಾರದಿತ್ತು. ಯೆಹೋವನು ಪವಿತ್ರವಾಗಿ ಪರಿಗಣಿಸಿದ ನಿಗದಿತ ಸಮಯವನ್ನು ಪ್ರತಿ ವಾರ ಬದಿಗಿರಿಸಿದನು; ಈ ಸಮಯವನ್ನು ಅವರು ಸಂಪೂರ್ಣವಾಗಿ ಸತ್ಯ ದೇವರ ಆರಾಧನೆಗೆ ಸಂಬಂಧಿಸಿದ ಚಟುವಟಿಕೆಗಾಗಿ ಉಪಯೋಗಿಸಬೇಕಾಗಿತ್ತು. (ವಿಮೋಚನಕಾಂಡ 35:1-3; ಅರಣ್ಯಕಾಂಡ 15:32-36) ಪ್ರತಿ ವರ್ಷ, ನಿರ್ದಿಷ್ಟ ಹಬ್ಬಗಳಿಗಾಗಿ ಹೆಚ್ಚಿನ ಸಮಯವನ್ನು ಬದಿಗಿರಿಸಬೇಕಾಗಿತ್ತು. (ಯಾಜಕಕಾಂಡ 23:4-44) ಇವು ಯೆಹೋವನ ಪರಾಕ್ರಮಕೃತ್ಯಗಳ ಕುರಿತು ಚರ್ಚಿಸಲು, ಆತನ ಮಾರ್ಗಗಳ ಕುರಿತು ಜ್ಞಾಪಿಸಲ್ಪಡಲು ಮತ್ತು ಆತನ ಎಲ್ಲ ಒಳ್ಳೇತನಕ್ಕಾಗಿ ಆತನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅವಕಾಶಗಳನ್ನು ಒದಗಿಸಲಿದ್ದವು. ಜನರು ಯೆಹೋವನಿಗೆ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾ ಹೋದಂತೆ, ದೇವರ ಕಡೆಗಿನ ಅವರ ಭಯ ಮತ್ತು ಪ್ರೀತಿಯು ಹೆಚ್ಚುತ್ತಾ ಹೋಗುತ್ತಿತ್ತು ಮತ್ತು ಆತನ ಮಾರ್ಗಗಳಲ್ಲಿ ನಡೆಯುವಂತೆ ಇದು ಅವರಿಗೆ ಸಹಾಯವನ್ನು ನೀಡುತ್ತಿತ್ತು. (ಧರ್ಮೋಪದೇಶಕಾಂಡ 10:12, 13) ಆ ಉಪದೇಶಗಳಲ್ಲಿ ಒಳಗೂಡಿಸಲ್ಪಟ್ಟಿರುವ ಉಪಯುಕ್ತಕರ ಮೂಲತತ್ತ್ವಗಳು ಇಂದು ಯೆಹೋವನ ಸೇವಕರಿಗೂ ಪ್ರಯೋಜನಾರ್ಹವಾಗಿವೆ.—ಇಬ್ರಿಯ 10:24, 25.

(ವಿಮೋಚನಕಾಂಡ 35:21) ಯಾರಾರನ್ನು ಹೃದಯವು ಪ್ರೇರಿಸಿತೋ ಯಾರಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕೋಸ್ಕರವೂ ಅದರ ಸಮಸ್ತಸೇವೆಗೋಸ್ಕರವೂ ದೀಕ್ಷಾವಸ್ತ್ರಗಳಿಗೋಸ್ಕರವೂ ಯೆಹೋವನಿಗೆ ಕಾಣಿಕೆಗಳನ್ನು ತಂದರು.

ಕಾವಲಿನಬುರುಜು00 11/1 ಪುಟ 29 ಪ್ಯಾರ 2

ಉದಾರತೆ ಸಂತೋಷವನ್ನು ತರುತ್ತದೆ

ಇಸ್ರಾಯೇಲ್ಯರಿಗೆ ಹೇಗನಿಸಿದ್ದಿರಬಹುದು ಎಂಬುದನ್ನು ಊಹಿಸಿಕೊಳ್ಳಿ. ಅನೇಕ ತಲೆಮಾರುಗಳಿಂದ ಅವರು ಕಠಿನವಾದ ದಾಸತ್ವದಿಂದ ಕಷ್ಟಹಿಂಸೆಯನ್ನು ಅನುಭವಿಸಿದ್ದರು. ಅವರು ಅನೇಕ ವಿಷಯಗಳಿಂದ ವಂಚಿತರಾಗಿದ್ದರು. ಆದರೆ ಈಗ ಅವರು ಸ್ವತಂತ್ರರರಾಗಿದ್ದರು ಮಾತ್ರವಲ್ಲ, ಅವರ ಬಳಿ ಬಹಳಷ್ಟು ಸಿರಿಸಂಪತ್ತಿತ್ತು. ಈಗ ತಮ್ಮಲ್ಲಿದ್ದ ಸಿರಿಸಂಪತ್ತುಗಳಲ್ಲಿ ಸ್ವಲ್ಪವನ್ನು ಹಂಚುವುದರ ಕುರಿತು ಅವರಿಗೆ ಹೇಗನಿಸಿದ್ದಿರಬಹುದು? ನಾವು ಅವುಗಳನ್ನು ಸಂಪಾದಿಸಿದ್ದೇವಾದುದರಿಂದ, ಅದನ್ನು ನಾವಿಟ್ಟುಕೊಳ್ಳುವುದೇ ನ್ಯಾಯವಾದದ್ದು ಎಂದು ಅವರಿಗೆ ಅನಿಸಿದ್ದಿರಬಹುದು. ಆದರೆ, ಶುದ್ಧಾರಾಧನೆಯನ್ನು ಬೆಂಬಲಿಸಲಿಕ್ಕಾಗಿ ಹಣಕಾಸಿನ ಸಹಾಯವನ್ನು ನೀಡುವಂತೆ ಅವರನ್ನು ಕೇಳಿಕೊಂಡಾಗ, ಅವರು ಖಂಡಿತವಾಗಿಯೂ ಸಹಾಯಮಾಡಿದರು. ಆದರೆ ಇದನ್ನು ಕೊಡಬೇಕೋ ಬೇಡವೋ ಎಂದು ಯೋಚಿಸುತ್ತಾ ಇಲ್ಲವೇ ಜಿಪುಣತನದಿಂದ ಕೊಡಲಿಲ್ಲ! ಯೆಹೋವನಿಂದಲೇ ಆ ಸಿರಿಸಂಪತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತೆಂಬುದನ್ನು ಅವರು ಅರಿತಿದ್ದರು. ಆದುದರಿಂದಲೇ, ತಮ್ಮಲ್ಲಿದ್ದ ಚಿನ್ನ, ಬೆಳ್ಳಿ, ದನಕುರಿಗಳನ್ನೆಲ್ಲ ಧಾರಾಳವಾಗಿ ಕೊಟ್ಟುಬಿಟ್ಟರು. ಅವರು “ಮನಃಪೂರ್ವಕವಾಗಿ” ಕೊಟ್ಟರು. ಯಾರಾರನ್ನು “ಹೃದಯವು ಪ್ರೇರಿಸಿತೋ” ಯಾರಾರ “ಮನಸ್ಸು ಸಿದ್ಧವಾಗಿತ್ತೋ” ಅವರೆಲ್ಲರೂ ಕೊಟ್ಟರು. ಅದು ಸ್ವಇಷ್ಟದಿಂದ “ಯೆಹೋವನಿಗೆ ಕೊಟ್ಟ ಕಾಣಿಕೆ” (NW) ಆಗಿತ್ತು.—ವಿಮೋಚನಕಾಂಡ 25:1-9; 35:4-9, 20-29; 36:3-7.

ಅಕ್ಟೋಬರ್‌ 26–ನವೆಂಬರ್‌ 1

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 37-38

“ದೇವದರ್ಶನ ಗುಡಾರದ ವೇದಿಗಳು ಮತ್ತು ಆರಾಧನೆಯಲ್ಲಿ ಅವುಗಳ ಪ್ರಾಮುಖ್ಯತೆ”

(ವಿಮೋಚನಕಾಂಡ 37:25) ಅವನು ಜಾಲೀಮರದಿಂದ ಧೂಪವೇದಿಯನ್ನು ಮಾಡಿದನು. ಅದು ಒಂದು ಮೊಳ ಉದ್ದವಾಗಿಯೂ ಒಂದು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರವು ಎರಡು ಮೊಳವಾಗಿತ್ತು. ಅದರ ಕೊಂಬುಗಳು ಅದರೊಂದಿಗೆ ಏಕವಾಗಿದ್ದವು.

it-1-E ಪುಟ 82 ಪ್ಯಾರ 3

ವೇದಿ

ಧೂಪವೇದಿ. ಧೂಪವೇದಿಯನ್ನು (“ಚಿನ್ನದ ಧೂಪವೇದಿ” ಅಂತ ಸಹ ಕರೆಯಲಾಗಿದೆ. [ವಿಮೋ 39:38]) ಅಕೇಶಿಯ ಅಥವಾ ಜಾಲೀಮರದಿಂದ ಮಾಡಲಾಗಿತ್ತು. ಅದರ ಮೇಲ್ಭಾಗ ಮತ್ತು ನಾಲ್ಕೂ ಪಕ್ಕಗಳಲ್ಲಿ ಚಿನ್ನದ ತಗಡನ್ನು ಹೊದಿಸಲಾಗಿತ್ತು. ವೇದಿಯ ಮೇಲ್ಭಾಗದ ನಾಲ್ಕೂ ಬದಿಗಳಲ್ಲಿ ಚಿನ್ನದ ಗೋಟು ಅಥವಾ ಚಿನ್ನದ ಕಲಾಕೃತಿ ಮಾಡಲಾಗಿತ್ತು. ಈ ವೇದಿಯ ಅಗಲ ಮತ್ತು ಉದ್ದ 44.5 ಸೆಂ.ಮೀ. (17.5 ಇಂಚು) ಇತ್ತು. ಅದರ ಎತ್ತರ 89 ಸೆಂ.ಮೀ. (2.9 ಅಡಿ) ಇತ್ತು. ವೇದಿಯ ಮೇಲ್ಭಾಗದ ನಾಲ್ಕೂ ಮೂಲೆಗಳಲ್ಲಿ ಒಂದೊಂದು ಕೊಂಬುಗಳಿದ್ದವು. ಚಿನ್ನದ ಕಲಾಕೃತಿಯ ಸ್ವಲ್ಪ ಕೆಳಗೆ ಎರಡೂ ಕಡೆಗಳಲ್ಲಿ ಎರಡೆರಡು ಚಿನ್ನದ ಬಳೆಗಳಿದ್ದವು. ಅಕೇಶಿಯ ಮರದಿಂದ ಎರಡು ಕೋಲುಗಳನ್ನು ಮಾಡಲಾಗಿತ್ತು. ಅವುಗಳಿಗೂ ಚಿನ್ನವನ್ನ ಹೊದಿಸಲಾಗಿತ್ತು. ಈ ಕೋಲುಗಳನ್ನು ಬಳೆಗಳಲ್ಲಿ ಹಾಕಿ ವೇದಿಯನ್ನ ಹೊರಲಾಗುತ್ತಿತ್ತು. (ವಿಮೋ 30:1-5; 37:25-28) ದಿನಕ್ಕೆರಡು ಸಲ, ಬೆಳಿಗ್ಗೆ ಮತ್ತು ಸಾಯಂಕಾಲ ಈ ವೇದಿಯ ಮೇಲೆ ವಿಶೇಷ ಧೂಪವನ್ನು ಸುಡಲಾಗ್ತಿತ್ತು. (ವಿಮೋ 30:7-9, 34-38) ಬೈಬಲಿನಲ್ಲಿ ಎಲ್ಲೆಲ್ಲಾ ಧೂಪದ ಪಾತ್ರೆ ಅಥವಾ ಧೂಪಾರತಿಯಲ್ಲಿ ಪರಿಮಳಧೂಪದ್ರವ್ಯವನ್ನ ಸುಡುವುದರ ಬಗ್ಗೆ ತಿಳಿಸಲಾಗಿದೆಯೋ ಅಲ್ಲೆಲ್ಲಾ ಧೂಪವೇದಿಯ ಬಗ್ಗೆನೂ ತಿಳಿಸಲಾಗಿದೆ. (ಯಾಜ 16:12, 13; ಇಬ್ರಿ 9:4; ಪ್ರಕ 8:5; 2ಪೂರ್ವ 26:16, 19 ಹೋಲಿಸಿ.) ಧೂಪವೇದಿಯನ್ನು ಗುಡಾರದೊಳಗೆ ಅತಿ ಪವಿತ್ರ ಸ್ಥಳದ ತೆರೆಯ ಮುಂದೆ ಇಡಲಾಗಿತ್ತು. ಹಾಗಾಗಿ, ಬೈಬಲಿನಲ್ಲಿ ಈ ವೇದಿ ‘ಆಜ್ಞಾಶಾಸನಗಳ ಮಂಜೂಷದ ಮುಂದಣ ತೆರೆಗೆ ಎದುರಾಗಿ ಇದೆ’ ಅಂತ ತಿಳಿಸಲಾಗಿದೆ.—ವಿಮೋ 30:1, 6; 40:5, 26, 27.

(ವಿಮೋಚನಕಾಂಡ 37:29) ಅದಲ್ಲದೆ ಅವನು ದೇವರ ಸೇವೆಗೆ ನೇಮಕವಾದ ಪಟ್ಟಾಭಿಷೇಕತೈಲವನ್ನೂ ಪರಿಮಳದ್ರವ್ಯಗಳಿಂದುಂಟಾದ ಸ್ವಚ್ಛವಾದ ಧೂಪದ್ರವ್ಯವನ್ನೂ ಸುಗಂಧದ್ರವ್ಯಕಾರರ ವಿದ್ಯೆಯ ಮೇರೆಗೆ ಮಾಡಿದನು.

it-1-E ಪುಟ 1195

ಧೂಪ

ಇಸ್ರಾಯೇಲ್ಯರು ಮರಳುಗಾಡಿನಲ್ಲಿ ಇದ್ದಾಗ ಗುಡಾರದಲ್ಲಿ ಪವಿತ್ರ ಧೂಪವನ್ನು ಉಪಯೋಗಿಸ್ತಿದ್ದರು. ಈ ಧೂಪವನ್ನ ಇಸ್ರಾಯೇಲ್ಯರು ಉದಾರವಾಗಿ ಕೊಟ್ಟ ದುಬಾರಿ ವಸ್ತುಗಳಿಂದ ತಯಾರಿಸಲಾಗಿತ್ತು. (ವಿಮೋ 25:1, 2, 6; 35:4, 5, 8, 27-29) ಈ ಧೂಪವನ್ನ ಹೇಗೆ ತಯಾರಿಸಬೇಕಂತ ಯೆಹೋವನೇ ಮೋಶೆಗೆ ಹೇಳಿಕೊಟ್ಟಿದ್ದನು. ಆತನು, “ನೀನು ಹಾಲುಮಡ್ಡಿ, ಗುಗ್ಗುಲ, ಗಂಧದಚೆಕ್ಕೆ ಎಂಬ ಪರಿಮಳದ್ರವ್ಯಗಳನ್ನೂ ಸ್ವಚ್ಛವಾದ ಧೂಪವನ್ನೂ ಸಮಭಾಗವಾಗಿ ತೆಗೆದುಕೊಂಡು ಸುವಾಸನೆಯುಳ್ಳ ಬುಕ್ಕಿಟ್ಟಾಗಿರುವಂತೆ ಸುಗಂಧದ್ರವ್ಯಕಾರರ ವಿದ್ಯೆಯ ಮೇರೆಗೆ ಕಲಿಸಿ ಉಪ್ಪು ಹಾಕಿ ದೇವರ ಸೇವೆಗೆ ಸ್ವಚ್ಛವಾದ ಧೂಪದ್ರವ್ಯವನ್ನು ಮಾಡಿಸಬೇಕು. ಅದರಲ್ಲಿ ಸ್ವಲ್ಪವನ್ನು ಪುಡಿಮಾಡಿಸಿ ದೇವದರ್ಶನದ ಗುಡಾರದೊಳಗೆ ಆಜ್ಞಾಶಾಸನಗಳ ಮಂಜೂಷದ ಎದುರಾಗಿ, ನಾನು ನಿನಗೆ ದರ್ಶನ ಕೊಡುವ ಸ್ಥಳದಲ್ಲಿ ಇರಿಸಬೇಕು. ಅದು ಅತಿಪರಿಶುದ್ಧವಾದದ್ದೆಂದು ನೀವು ತಿಳುಕೊಳ್ಳಬೇಕು” ಅಂದನು. ಯೆಹೋವನು ಈ ಧೂಪವನ್ನ ತನ್ನ ಆರಾಧನೆಗಾಗಿ ಮಾತ್ರ ಉಪಯೋಗಿಸಬೇಕು ಅಂತ ಆಜ್ಞಾಪಿಸಿದನು. ಇದು ತುಂಬ ಪರಿಶುದ್ಧವಾಗಿತ್ತು. ಇದನ್ನ ಜನ್ರಿಗೆ ಅರ್ಥಮಾಡಿಸಲಿಕ್ಕಾಗಿ ಆತನು “ಸುವಾಸನೆಗೋಸ್ಕರ ಅಂಥದ್ದನ್ನು ಮಾಡಿಕೊಳ್ಳುವವನು ತನ್ನ ಕುಲದಿಂದ ತೆಗೆದುಹಾಕಲ್ಪಡಬೇಕು” ಅಂತ ಹೇಳಿದನು.—ವಿಮೋ 30:34-38; 37:29.

(ವಿಮೋಚನಕಾಂಡ 38:1) ಅವನು ಯಜ್ಞವೇದಿಯನ್ನು ಜಾಲೀಮರದಿಂದ ಮಾಡಿದನು. ಅದು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರ ಮೂರು ಮೊಳವಾಗಿತ್ತು.

it-1-E ಪುಟ 82 ಪ್ಯಾರ 1

ವೇದಿ

ಗುಡಾರದ ವೇದಿಗಳು. ಗುಡಾರವನ್ನು ಮಾಡೋದು ಹೇಗಂತ ಯೆಹೋವನು ಹೇಳಿದಾಗ ಅದ್ರಲ್ಲಿ ಎರಡು ವೇದಿಗಳನ್ನ ಮಾಡೋದಕ್ಕೂ ನಿರ್ದೇಶನ ಕೊಟ್ಟನು. ಆ ವೇದಿಗಳಲ್ಲಿ ಒಂದು ಯಜ್ಞವೇದಿಯಾಗಿತ್ತು. (ಅದನ್ನ “ತಾಮ್ರದ ಯಜ್ಞವೇದಿ” ಅಂತನೂ ಕರೆಯಲಾಗಿದೆ. [ವಿಮೋ 39:39]) ಈ ವೇದಿಯನ್ನು ಅಕೇಶಿಯ ಅಥವಾ ಜಾಲೀಮರದಿಂದ ತಯಾರಿಸಲಾಗಿತ್ತು. ಅದರ ಆಕಾರ ಚೌಕವಾಗಿತ್ತು. ಅದರ ಮೇಲ್ಭಾಗ ತೆರೆದಿತ್ತು, ತಳನೂ ಇರ್ಲಿಲ್ಲ. ಅದರ ಉದ್ದ ಮತ್ತು ಅಗಲ 2.2 ಮೀ (7.3 ಅಡಿ) ಇತ್ತು. ಅದರ ಎತ್ತರ 1.3ಮೀ. (4.4 ಅಡಿ) ಇತ್ತು. ಅದರ ಮೇಲೆ ನಾಲ್ಕು ಮೂಲೆಗಳಲ್ಲಿಯೂ ಕೊಂಬುಗಳಿದ್ದವು. ಇಡೀ ವೇದಿಯ ಮೇಲ್ಮೈಯನ್ನು ತಾಮ್ರದಿಂದ ಹೊದಿಸಲಾಗಿತ್ತು. ವೇದಿಯ ಒಳಗೆ ತಾಮ್ರದಿಂದ ಮಾಡಲಾದ ಜಾಳಿಗೆ ಅಥವಾ ಜಾಲರಿಯನ್ನು ಹಾಕಲಾಗಿತ್ತು. ಅದು ವೇದಿಯ ಕಟ್ಟೆಯ ಕೆಳಗೆ ಅಥವಾ ವೇದಿಯ ಮಧ್ಯದಲ್ಲಿ ಇತ್ತು. ವೇದಿಯ ನಾಲ್ಕು ಮೂಲೆಗಳಲ್ಲೂ ಅಂದ್ರೆ ಜಾಳಿಗೆ ಅಥವಾ ಜಾಲರಿಯ ಹತ್ತಿರದಲ್ಲಿ ನಾಲ್ಕು ಬಳೆಗಳಿದ್ದವು. ಈ ಬಳೆಗಳಲ್ಲಿ ಎರಡು ಕೋಲುಗಳನ್ನ ಹಾಕಿ ವೇದಿಯನ್ನ ಹೊತ್ತುಕೊಂಡು ಹೋಗಲಾಗ್ತಿತ್ತು. ಆ ಕೋಲುಗಳನ್ನ ಸಹ ಅಕೇಶಿಯ ಮರದಿಂದ ತಯಾರಿಸಿ ಅದಕ್ಕೆ ತಾಮ್ರದ ಹೊದಿಕೆಯನ್ನ ಹಾಕಲಾಗಿತ್ತು. ಸಮತಟ್ಟಾಗಿದ್ದ ತಾಮ್ರದ ಜಾಲರಿಯನ್ನ ಯಜ್ಞವೇದಿಯ ಒಳಗೆ ಇಡಲಿಕ್ಕಾಗಿ ಆ ವೇದಿಯ ಎರಡೂ ಕಡೆಗಳಲ್ಲಿ ಸಣ್ಣದಾಗಿ ಕೊರೆದಿರಬೇಕು. ಕೆಲವು ವಿದ್ವಾಂಸರ ಪ್ರಕಾರ ಯಜ್ಞವೇದಿಯ ಹೊರಗಡೆ ಮಾತ್ರ ನಾಲ್ಕು ಬಳೆಗಳಿದ್ದವು. ಆದ್ರೆ ಇನ್ನು ಕೆಲವರ ಪ್ರಕಾರ ಯಜ್ಞವೇದಿಗೆ ನಾಲ್ಕು ಬಳೆಗಳಿದ್ದವು, ಜಾಲರಿಗೂ ನಾಲ್ಕು ಬಳೆಗಳಿದ್ದವು. ಯಜ್ಞವೇದಿಗೆ ಸಂಬಂಧಪಟ್ಟ ಬೇರೆ ವಸ್ತುಗಳನ್ನ ಸಹ ತಾಮ್ರದಿಂದ ಮಾಡಲಾಗಿತ್ತು. ಉದಾಹರಣೆಗೆ, ಬೂದಿ ತೆಗೆಯಲಿಕ್ಕಾಗಿ ಬಳಸ್ತಿದ್ದ ಸಲಿಕೆ, ಪ್ರಾಣಿಗಳ ರಕ್ತವನ್ನ ಸಂಗ್ರಹಿಸಲಿಕ್ಕಾಗಿ ಉಪಯೋಗಿಸ್ತಿದ್ದ ಬೋಗುಣಿ ಅಥ್ವಾ ಬಟ್ಟಲುಗಳು, ಮಾಂಸವನ್ನ ಎತ್ತಲಿಕ್ಕಾಗಿ ಉಪಯೋಗಿಸ್ತಿದ್ದ ಮುಳ್ಳುಗಳು ಮತ್ತು ಅಗ್ಗಿಷ್ಟಿಕೆ ಅಥವಾ ಬೆಂಕಿಯನ್ನ ಉರಿಸ್ತಿದ್ದ ಒಲೆಗಳನ್ನ ಸಹ ತಾಮ್ರದಿಂದ ಮಾಡಲಾಗಿತ್ತು.—ವಿಮೋ 27:1-8; 38:1-7, 30; ಅರ 4:14.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ವಿಮೋಚನಕಾಂಡ 37:1) ಬೆಚಲೇಲನು ಜಾಲೀಮರದಿಂದ ಮಂಜೂಷವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.

(ವಿಮೋಚನಕಾಂಡ 37:10) ಅವನು ಜಾಲೀಮರದಿಂದ ಮೇಜನ್ನು ಮಾಡಿದನು. ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.

(ವಿಮೋಚನಕಾಂಡ 37:25) ಅವನು ಜಾಲೀಮರದಿಂದ ಧೂಪವೇದಿಯನ್ನು ಮಾಡಿದನು. ಅದು ಒಂದು ಮೊಳ ಉದ್ದವಾಗಿಯೂ ಒಂದು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರವು ಎರಡು ಮೊಳವಾಗಿತ್ತು. ಅದರ ಕೊಂಬುಗಳು ಅದರೊಂದಿಗೆ ಏಕವಾಗಿದ್ದವು.

it-1-E ಪುಟ 36

ಅಕೇಶಿಯ

ಅಕೇಶಿಯ ಅಥವಾ ಜಾಲೀಮರಗಳ ರೆಂಬೆಗಳು ವಿಶಾಲವಾಗಿ ಹರಡಿರುತ್ತವೆ. ಅದ್ರಲ್ಲಿ ಉದ್ದುದ್ದ ಮುಳ್ಳುಗಳಿರುತ್ತವೆ. ಅದರ ರೆಂಬೆಗಳು ಪಕ್ಕದಲ್ಲಿರೋ ಅಕೇಶಿಯ ಮರದ ರೆಂಬೆಗಳ ಜೊತೆ ಹೆಣೆದುಕೊಂಡು ಪೊದೆಗಳ ತರ ಕಾಣಿಸುತ್ತೆ. ಅದಕ್ಕೇ ಬೈಬಲಿನಲ್ಲಿ ಯಾವಾಗಲೂ ಆ ಮರದ ಹೀಬ್ರು ಹೆಸರನ್ನ (ಶಿಟ್ಟಿಮ್‌) ಬಹುವಚನದಲ್ಲೇ ಕರೆಯಲಾಗಿದೆ. ಅಕೇಶಿಯ ಮರ ಸುಮಾರು 6-8 ಮೀ. (20-26 ಅಡಿ) ಎತ್ತರ ಬೆಳೆಯುತ್ತೆ. ಆದ್ರೆ ಅದು ನೋಡೋಕೆ ಪೊದೆ ತರಾನೇ ಇರುತ್ತೆ. ಅದರ ಎಲೆಗಳು ಮೃದುವಾಗಿ, ಗರಿಗಳ ತರ ಇರುತ್ತೆ. ಆ ಮರ ಹಳದಿ ಬಣ್ಣದ ಸುವಾಸನೆ ಬೀರುವ ಹೂಗಳನ್ನ ಮತ್ತು ಚಪ್ಪಟೆಯಾಗಿರೋ ಕಾಯಿಗಳನ್ನ ಬಿಡುತ್ತೆ. ಆ ಮರ ಗಟ್ಟಿಯಾಗಿದ್ದು ಭಾರವಾಗಿರುತ್ತೆ ಮತ್ತು ಅದರ ತೊಗಟೆ ಒರಟಾಗಿರುತ್ತೆ. ಅದಕ್ಕೇ ಆ ಮರಕ್ಕೆ ಹುಳ ಹಿಡಿಯಲ್ಲ. ಅಕೇಶಿಯ ಮರಕ್ಕೆ ಈ ಗುಣಲಕ್ಷಣಗಳಿರೋದ್ರಿಂದ ಮತ್ತು ಅದು ಮರುಳುಗಾಡಿನಲ್ಲಿ ಬೇಕಾದಷ್ಟು ಇರೋದ್ರಿಂದ ಗುಡಾರವನ್ನ ಮತ್ತು ಅದ್ರಲ್ಲಿರೋ ವಸ್ತುಗಳನ್ನ ಈ ಮರದಿಂದಲೇ ಮಾಡಲಾಯ್ತು. ಒಡಂಬಡಿಕೆಯ ಮಂಜೂಷ, (ವಿಮೋ 25:10; 37:1) ನೈವೇದ್ಯದ ರೊಟ್ಟಿಯನ್ನ ಇಡುತ್ತಿದ್ದ ಮೇಜು, (ವಿಮೋ 25:23; 37:10) ವೇದಿಗಳು, (ವಿಮೋ 27:1; 37:25; 38:1) ವೇದಿಗಳನ್ನ ಹೊರಲಿಕ್ಕೆ ಉಪಯೋಗಿಸ್ತಿದ್ದ ಕೋಲುಗಳು, (ವಿಮೋ 25:13, 28; 27:6; 30:5; 37:4, 15, 28; 38:6) ತೆರೆ ಮತ್ತು ಪರದೆಗಳನ್ನ ನೇತುಹಾಕುತ್ತಿದ್ದ ಕಂಬಗಳು, (ವಿಮೋ 26:32, 37; 36:36) ಗುಡಾರದ ಚೌಕಟ್ಟು (ವಿಮೋ 26:15; 36:20) ಹಾಗೂ ಆ ಚೌಕಟ್ಟುಗಳನ್ನ ಜೋಡಿಸುವ ಅಗುಳಿಗಳನ್ನ ಈ ಮರದಿಂದಲೇ ತಯಾರಿಸಲಾಯ್ತು. (ವಿಮೋ 26:26; 36:31).

(ವಿಮೋಚನಕಾಂಡ 38:8) ದೇವದರ್ಶನದ ಗುಡಾರದ ಬಾಗಲಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರು ಕೊಟ್ಟ ತಾಮ್ರದ ದರ್ಪಣಗಳಿಂದ ಗಂಗಾಳವನ್ನೂ ಅದರ ಪೀಠವನ್ನೂ ಮಾಡಿದನು.

ಕಾವಲಿನಬುರುಜು15-E 4/1 ಪುಟ 15 ಪ್ಯಾರ 4

ನಿಮಗೆ ಗೊತ್ತಿತ್ತಾ?

ಬೈಬಲ್‌ ಕಾಲದಲ್ಲಿ ಈಗ ಇರೋ ತರ ಗಾಜಿನ ಕನ್ನಡಿಗಳು ಇರಲಿಲ್ಲ. ಆಗ, ಪಾಲಿಶ್‌ ಮಾಡಲಾದ ಲೋಹದ ಕನ್ನಡಿಗಳನ್ನ ಉಪಯೋಗಿಸಲಾಗ್ತಿತ್ತು. ಹೆಚ್ಚಾಗಿ ಕಂಚಿನ, ಇಲ್ಲವೆ ತಾಮ್ರ, ಬೆಳ್ಳಿ, ಚಿನ್ನ ಹಾಗೂ ಮಿಶ್ರ ಲೋಹದ ಕನ್ನಡಿಗಳನ್ನ ಬಳಸಲಾಗ್ತಿತ್ತು. ಇಸ್ರಾಯೇಲ್ಯರ ಆರಾಧನಾ ಸ್ಥಳವಾಗಿದ್ದ ಗುಡಾರದ ನಿರ್ಮಾಣದ ಸಮಯದಲ್ಲೇ ಬೈಬಲಿನಲ್ಲಿ ಮೊದಲನೇ ಸಾರಿ ಕನ್ನಡಿಯ ಬಗ್ಗೆ ತಿಳಿಸಲಾಗಿದೆ. ಆಗ ತಾಮ್ರದ ಗಂಗಾಳ ಮತ್ತು ಪೀಠವನ್ನ ಮಾಡ್ಲಿಕ್ಕಾಗಿ ಸ್ತ್ರೀಯರು ತಮ್ಮ ಹತ್ರ ಇದ್ದ ತಾಮ್ರದ ಕನ್ನಡಿಗಳನ್ನ ಕೊಟ್ಟರು. (ವಿಮೋಚನಕಾಂಡ 38:8) ಬಹುಶಃ ಇದನ್ನ ಮಾಡ್ಲಿಕ್ಕಾಗಿ ಆ ಕನ್ನಡಿಗಳನ್ನ ಕರಗಿಸಿರಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ