ಜೀವನ ಕಥೆ
ನಾಚಿಕೆ ಸ್ವಭಾವ ಇದ್ರೂ ಮಿಷನರಿ ಆದೆ
ನಾನು ಚಿಕ್ಕವಳಿದ್ದಾಗ ನನಗೆ ತುಂಬ ನಾಚಿಕೆ ಇತ್ತು. ಜನ್ರ ಹತ್ರ ಮಾತಾಡೋಕೆ ಹೆದರ್ತಿದ್ದೆ. ಆದ್ರೆ ಹೋಗ್ತಾ-ಹೋಗ್ತಾ ನಾನು ಜನ್ರನ್ನ ಪ್ರೀತಿಸೋಕೆ, ಮಿಷನರಿ ಸೇವೆ ಮಾಡೋಕೆ ಯೆಹೋವನೇ ನನಗೆ ಸಹಾಯ ಮಾಡಿದ್ರು. ಮೊದ್ಲು ನನ್ನ ಅಪ್ಪ ಮೂಲಕ, ಆಮೇಲೆ 16 ವರ್ಷದ ಒಬ್ಬ ಸಹೋದರಿ ಇಟ್ಟ ಮಾದರಿ ಮೂಲಕ ಮತ್ತು ಕೊನೆಗೆ ದಯೆಯಿಂದ, ತಾಳ್ಮೆಯಿಂದ ನನ್ನ ಜೊತೆ ನಡ್ಕೊಳ್ತಿದ್ದ ನನ್ನ ಗಂಡನ ಮೂಲಕ. ಬನ್ನಿ ನನ್ನ ಜೀವನ ಕಥೆ ಹೇಳ್ತೀನಿ.
ನಾನು 1951ರಲ್ಲಿ, ಆಸ್ಟ್ರಿಯದಲ್ಲಿರೋ ವಿಯೆನ್ನ ನಗರದಲ್ಲಿ ಹುಟ್ಟಿದೆ. ನಮ್ಮದು ಕ್ಯಾಥೋಲಿಕ್ ಕುಟುಂಬ. ಮೊದಲಿಂದಾನೂ ನಂಗೆ ತುಂಬ ನಾಚಿಕೆ ಇತ್ತು. ಆದ್ರೂ ನನಗೆ ದೇವರ ಮೇಲೆ ನಂಬಿಕೆ ಇತ್ತು. ಆಗಾಗ ಪ್ರಾರ್ಥನೆನೂ ಮಾಡ್ತಿದ್ದೆ. ಆದ್ರೆ ನನಗೆ ಒಂಬತ್ತು ವರ್ಷ ಇದ್ದಾಗ, ನಮ್ಮ ಅಪ್ಪ ಯೆಹೋವನ ಸಾಕ್ಷಿಗಳ ಜೊತೆಲಿ ಬೈಬಲ್ ಕಲಿಯೋಕೆ ಶುರು ಮಾಡಿದ್ರು. ಸ್ವಲ್ಪ ಸಮಯ ಆದ್ಮೇಲೆ, ಅಮ್ಮನೂ ಬೈಬಲ್ ಕಲಿಯೋಕೆ ಶುರು ಮಾಡಿದ್ರು.
ನನ್ನ ತಂಗಿ ಎಲಿಸಬೆತ್ ಜೊತೆ (ಎಡಕ್ಕೆ)
ನಾವು ಬೇಗ-ಬೇಗ ಪ್ರಗತಿ ಮಾಡಿ ವಿಯೆನ್ನದಲ್ಲಿರೋ ಡಬ್ಲಿಂಗ್ ಸಭೆಗೆ ಹೋದ್ವಿ. ಕುಟುಂಬವಾಗಿ ಎಷ್ಟೊಂದು ಚಟುವಟಿಕೆಗಳನ್ನ ಮಾಡ್ತಿದ್ವಿ. ಜೊತೆಯಾಗಿ ಬೈಬಲ್ ಓದ್ತಿದ್ವಿ, ಚರ್ಚೆ ಮಾಡ್ತಿದ್ವಿ, ಕೂಟಗಳಿಗೆ ಹೋಗ್ತಿದ್ವಿ ಮತ್ತು ಸಮ್ಮೇಳನಗಳಲ್ಲಿ ಸ್ವಯಂ ಸೇವಕರಾಗಿ ಕೂಡ ಸೇವೆ ಮಾಡ್ತಿದ್ವಿ. ಚಿಕ್ಕ ವಯಸ್ಸಲ್ಲೇ ನಮ್ಮ ಅಪ್ಪ ನನಗೆ ಯೆಹೋವನ ಮೇಲೆ ಅಪಾರ ಪ್ರೀತಿ ಬೆಳೆಸ್ಕೊಳ್ಳೋಕೆ ಸಹಾಯ ಮಾಡಿದ್ರು. ನಾನು ಮತ್ತು ನನ್ನ ತಂಗಿ ಪಯನೀಯರ್ ಆಗಬೇಕು ಅನ್ನೋದು ನಮ್ಮ ಅಪ್ಪನ ಆಸೆ. ಅದಕ್ಕೋಸ್ಕರ ಯಾವಾಗ್ಲೂ ಪ್ರಾರ್ಥನೆ ಮಾಡ್ತಿದ್ರು. ಆದ್ರೆ ನಂಗೆ ಆಗ ಪಯನೀಯರ್ ಆಗೋ ಗುರಿ ಇರ್ಲಿಲ್ಲ.
ಪೂರ್ಣ ಸಮಯದ ಸೇವೆಯ ಆರಂಭ
ನಂಗೆ 14 ವಯಸ್ಸಾದ್ದಾಗ 1965ರಲ್ಲಿ ದೀಕ್ಷಾಸ್ನಾನ ತಗೊಂಡೆ. ಆದ್ರೆ ಸೇವೆಲಿ ಜನರತ್ರ ಮಾತಾಡೋಕೆ ಕಷ್ಟ ಪಡ್ತಿದ್ದೆ. ಆದ್ರೆ ‘ನನ್ನ ವಯಸ್ಸಲ್ಲಿರೋ ಬೇರೆಯವರು ಎಷ್ಟು ಚೆನ್ನಾಗಿ ಮಾತಾಡ್ತಾರೆ. ನಾನೂ ಅವರ ತರಾನೇ ಮಾತಾಡಬೇಕು’ ಅಂತ ಅಂದ್ಕೊಳ್ತಿದ್ದೆ. ಅದಕ್ಕೆ ದೀಕ್ಷಾಸ್ನಾನ ಆದ ಸ್ವಲ್ಪದ್ರಲ್ಲೇ ಸತ್ಯದಲ್ಲಿ ಇಲ್ಲದವ್ರ ಜೊತೆ ಸ್ನೇಹ ಮಾಡಿದೆ. ಅವ್ರ ಜೊತೆ ಸಮಯ ಕಳೆಯೋದು ನಂಗೆ ಇಷ್ಟ ಆಗ್ತಿತ್ತು. ಹೋಗ್ತಾಹೋಗ್ತಾ ಜಾಸ್ತಿ ಸಮಯ ಕಳೀತಿದ್ದೆ. ಅದಕ್ಕೆ ನನ್ನ ಮನಸ್ಸಾಕ್ಷಿ ಚುಚ್ತಾ ಇತ್ತು. ಅವ್ರ ಫ್ರೆಂಡ್‌ಶಿಪ್‌ನ ನಿಲ್ಲಿಸೋಕೆ ಬೇಕಾಗಿರೋ ಧೈರ್ಯ ನಂಗಿರಲಿಲ್ಲ. ಆದ್ರೆ ಏನು ಸಹಾಯ ಮಾಡ್ತು ಗೊತ್ತಾ?
ನಾನು ಡಾರತಿಯಿಂದ ತುಂಬ ಕಲಿತೆ (ಎಡಕ್ಕೆ)
ಆ ಟೈಮಲ್ಲಿ 16 ವರ್ಷದ ಡಾರತಿ ಅನ್ನೋ ಹುಡುಗಿ ನಮ್ಮ ಸಭೆಗೆ ಬಂದಳು. ಅವಳಿಗೆ ಮನೆಮನೆ ಸೇವೆ ಅಂದ್ರೆ ತುಂಬ ಇಷ್ಟ, ಅದನ್ನ ನೋಡಿ ಆಶ್ಚರ್ಯ ಆಯ್ತು. ಅವಳಿಗಿಂತ ನಾನೇ ಸ್ವಲ್ಪ ದೊಡ್ಡವಳು. ಆದ್ರೆ ನಾನು ಮಾಡ್ತಿದ್ದ ಸೇವೆ ಅಷ್ಟಕ್ಕಷ್ಟೇ. ಆಗ ನಾನು, ‘ನಮ್ಮ ಅಪ್ಪ ಅಮ್ಮ ಸತ್ಯದಲ್ಲಿದ್ದಾರೆ. ಆದ್ರೆ ಡಾರತಿ ಕುಟುಂಬದಲ್ಲಿ ಯಾರೂ ಸತ್ಯದಲ್ಲಿಲ್ಲ. ಅವಳ ಅಮ್ಮನಿಗೆ ಕಾಯಿಲೆ ಇದ್ರೂ ಸೇವೆಗೆ ಬರೋದನ್ನ ಯಾವತ್ತೂ ಮಿಸ್ ಮಾಡಿಲ್ಲ’ ಅಂತ ಯೋಚಿಸ್ದೆ. ಅವಳ ಈ ಮಾದರಿ ನಾನೂ ಯೆಹೋವನ ಸೇವೆನ ಜಾಸ್ತಿ ಮಾಡೋಕೆ ಪ್ರೋತ್ಸಾಹಿಸ್ತು. ಅದಕ್ಕೆ ನಾವಿಬ್ರೂ ಬೇಗ ಪಯನೀಯರ್ ಸೇವೆ ಶುರು ಮಾಡಿದ್ವಿ. ಮೊದ್ಲು ಸಹಾಯಕ ಪಯನೀಯರ್ ಸೇವೆ ಮಾಡಿದ್ವಿ. ಆಗ ಇದನ್ನ ವೆಕೇಶನ್ ಪಯನೀಯರ್ ಅಂತ ಕರೀತಿದ್ರು. ಅದಾದ್ಮೇಲೆ ರೆಗುಲರ್ ಪಯನೀಯರ್ ಆದ್ವಿ. ನನ್ನ ಮೊದಲ ಬೈಬಲ್ ಸ್ಟಡಿ ಮಾಡೋಕೆ ಡಾರತಿನೇ ನಂಗೆ ಸಹಾಯ ಮಾಡಿದ್ದು. ಅದಾದ್ಮೇಲೆ ನಿಧಾನವಾಗಿ ನಾನು ಮನೆಮನೆ ಸೇವೆ, ಬೀದಿ ಸಾಕ್ಷಿಕಾರ್ಯ ಮತ್ತು ಬೇರೆ ರೀತಿಯ ಸೇವೆಲಿ ಜನ್ರ ಹತ್ರ ಧೈರ್ಯವಾಗಿ ಸಿಹಿಸುದ್ದಿ ಸಾರೋಕೆ ಶುರು ಮಾಡಿದೆ.
ನಾನು ರೆಗುಲರ್ ಪಯನೀಯರಾದ ಮೊದಲನೇ ವರ್ಷದಲ್ಲೇ ನಮ್ಮ ಸಭೆಗೆ, ಆಸ್ಟ್ರಿಯದ ಸಹೋದರ ಹೇನ್ಸ್ ವಿಶೇಷ ಪಯನೀಯರಾಗಿ ಬಂದ್ರು. ಸಾಕ್ಷಿಯಾಗಿದ್ದ ಇವ್ರ ಅಣ್ಣನ್ನ ನೋಡೋಕೆ ಕೆನಡಾಗೆ ಹೋದಾಗ ಇವ್ರಿಗೆ ಸತ್ಯ ಸಿಕ್ತು. ಅವರು ನಂಗೆ ಇಷ್ಟ ಆದ್ರು. ಆದ್ರೆ ಅವ್ರಿಗೆ ಮಿಷನರಿ ಆಗಬೇಕು ಅಂತ ಆಸೆ ಇತ್ತು. ನಂಗೆ ಮಿಷನರಿ ಸೇವೆ ಮಾಡೋ ಯೋಚನೆನೇ ಇರ್ಲಿಲ್ಲ. ಅದಕ್ಕೆ ನನ್ನಲ್ಲಿದ್ದ ಆಸೆಯನ್ನ ಅವರ ಹತ್ರ ಹೇಳ್ಕೊಳ್ಳೋಕೆ ಹೋಗ್ಲಿಲ್ಲ. ಆದ್ರೆ ನಿಧಾನವಾಗಿ ನಾನು ಮತ್ತು ಸಹೋದರ ಹೇನ್ಸ್ ಒಬ್ರನ್ನೊಬ್ರು ಇಷ್ಟಪಟ್ವಿ. ಆಮೇಲೆ ಮದುವೆ ಮಾಡ್ಕೊಂಡ್ವಿ. ಕೊನೆಗೆ ನಾವಿಬ್ರು ಆಸ್ಟ್ರೇಲಿಯದಲ್ಲೇ ಪಯನೀಯರ್ ಸೇವೆ ಮಾಡಿದ್ವಿ.
ಮಿಷನರಿ ಸೇವೆ ಮಾಡೋ ಗುರಿ
‘ಮಿಷನರಿ ಸೇವೆ ಮಾಡೋದು ನನ್ನ ಆಸೆ’ ಅಂತ ಹೇನ್ಸ್ ನನ್ನತ್ರ ಆಗಾಗ ಹೇಳ್ತಿದ್ರು. ಆದ್ರೆ ನನ್ನ ಮೇಲೆ ಯಾವತ್ತೂ ಈ ವಿಷ್ಯದಲ್ಲಿ ಒತ್ತಡ ಹಾಕಿಲ್ಲ. ಅವರು ನನ್ನನ್ನ ಪ್ರೋತ್ಸಾಹಿಸೋಕೆ, “ನಮಗೆ ಹೇಗಿದ್ರೂ ಮಕ್ಕಳು ಇಲ್ವಲ್ಲಾ, ನಾವು ಯೆಹೋವನಿಗೆ ಇನ್ನೂ ಜಾಸ್ತಿ ಸೇವೆ ಮಾಡಬಹುದಲ್ವಾ?” ಅಂತ ಕೇಳ್ತಿದ್ರು. ಆದ್ರೆ ನಂಗೆ ನಾಚಿಕೆ ಸ್ವಭಾವ ಇದ್ದಿದ್ರಿಂದ ಮಿಷನರಿ ಸೇವೆ ಮಾಡೋಕೆ ಹೆದರ್ತಿದ್ದೆ. ಅದನ್ನ ಮಾಡೋ ಶಕ್ತಿ ನನಗಿಲ್ಲ ಅಂತ ಅನಿಸ್ತಿತ್ತು. ಆದ್ರೆ ಹೇನ್ಸ್ ಮಿಷನರಿ ಸೇವೆ ಮಾಡೋ ಅವ್ರ ಗುರಿನ ಕೈ ಬಿಡ್ಲಿಲ್ಲ. ಅವರು ನನ್ನನ್ನ ಪ್ರೋತ್ಸಾಹಿಸ್ತಾ ‘ಜನ್ರಿಗೆ ಸಹಾಯ ಮಾಡೋದ್ರ ಕಡೆಗೆ ನೀನು ಗಮನ ಕೊಡು. ನಿನ್ನ ಬಗ್ಗೆ ಚಿಂತೆ ಮಾಡೋದನ್ನ ನಿಲ್ಲಿಸು’ ಅಂತ ಸಲಹೆ ಕೊಟ್ರು. ಈ ಸಲಹೆ ನಂಗೆ ತುಂಬ ಸಹಾಯ ಮಾಡ್ತು.
1974ರಲ್ಲಿ ಆಸ್ಟ್ರೀಯದ ಸಾಲ್ಜ್‌ಬರ್ಗ್‌ನಲ್ಲಿ ಯುಗೊಸ್ಲಾವಿಯನ್ ಭಾಷೆ ಮಾತಾಡೋ ಒಂದು ಚಿಕ್ಕ ಸಭೆಯಲ್ಲಿ ಹೇನ್ಸ್ ಕಾವಲಿನಬುರುಜು ಅಧ್ಯಯನ ನಡಿಸ್ತಿದ್ದಾರೆ
ನಿಧಾನವಾಗಿ ಮಿಷನರಿ ಸೇವೆ ಮಾಡೋ ಆಸೆನ ನಾನೂ ಬೆಳೆಸ್ಕೊಂಡೆ. ಅದಕ್ಕೆ ಗಿಲ್ಯಡ್ ಶಾಲೆಗೆ ಅರ್ಜಿ ಹಾಕಿದ್ವಿ. ಆದ್ರೆ ಬ್ರಾಂಚ್ ಸೇವಕ ನಂಗೆ ‘ನೀವು ಸ್ವಲ್ಪ ಇಂಗ್ಲಿಷ್‌ನ ಕಲಿಯೋಕೆ ಪ್ರಯತ್ನ ಹಾಕಿ’ ಅಂದ್ರು. ಆದ್ರಿಂದ ನಾನು ಮೂರು ವರ್ಷ ಇಂಗ್ಲಿಷ್ ಕಲಿಯೋಕೆ ಪ್ರಯತ್ನ ಹಾಕಿದೆ. ಆಗ ನಮಗೆ ಆಸ್ಟ್ರಿಯದ ಸಾಲ್ಸ್‌ಬರ್ಗ್‌ನಲ್ಲಿರೋ ಯುಗೊಸ್ಲಾವಿಯನ್ ಸಭೆಲಿ ಸೇವೆ ಮಾಡೋ ನೇಮಕ ಸಿಕ್ತು, ನಮಗೆ ತುಂಬ ಖುಷಿಯಾಯ್ತು. ಅಲ್ಲೇ ಏಳು ವರ್ಷ ಸೇವೆ ಮಾಡಿದ್ವಿ. ಅದ್ರಲ್ಲಿ ಒಂದು ವರ್ಷ ಸರ್ಕಿಟ್ ಸೇವೆನೂ ಮಾಡಿದ್ವಿ. ಆಮೇಲೆ ಸರ್ಬೊ ಕ್ರೊಯೇಷಿನ್ ಭಾಷೆನ ಕಲಿತ್ವಿ, ಅದು ತುಂಬ ಕಷ್ಟ ಇತ್ತು. ಆದ್ರೆ ನಮಗೆ ಅಲ್ಲಿ ತುಂಬ ಬೈಬಲ್ ಸ್ಟಡಿಗಳು ಸಿಕ್ತು.
1979ರಲ್ಲಿ “ರಜೆಗೆ” ಅಂತ ನಮ್ಮನ್ನ ಬಲ್ಗೇರಿಯಗೆ ಹೋಗೋಕೆ ಹೇಳಿದ್ರು. ಅಲ್ಲಿ ಸಾರೋ ಕೆಲ್ಸಾನ ನಿಷೇಧ ಮಾಡಲಾಗಿತ್ತು. ಅದಕ್ಕೆ ರಜೆಗೆ ಹೋಗೋ ತರ ನಾವಲ್ಲಿಗೆ ಹೋಗಬೇಕಿತ್ತು. ಆಗ ನಾವು ಪುಟ್ಟದಾಗಿ ಪ್ರಿಂಟ್ ಮಾಡಿದ ನಮ್ಮ ಸಾಹಿತ್ಯಗಳನ್ನ ಬಚ್ಚಿಟ್ಕೊಂಡು ಆ ದೇಶಕ್ಕೆ ಹೋದ್ವಿ. ಆ ದೇಶದ ರಾಜಧಾನಿ ಸೋಫಿಯಾ ಅನ್ನೋ ನಗರದಲ್ಲಿ ನಮ್ಮ ಐದು ಸಹೋದರಿಯರಿದ್ರು. ಅವ್ರಿಗೆ ನಾವು ಇದನ್ನ ಕೊಡಬೇಕಿತ್ತು. ಈ ಕೆಲಸ ಮಾಡೋಕೆ ನಿಜವಾಗ್ಲೂ ನಂಗೆ ತುಂಬ ಭಯ ಆಗ್ತಿತ್ತು. ಆದ್ರೆ ಯೆಹೋವನು ಈ ಕಷ್ಟದ ನೇಮಕ ಮಾಡೋಕೆ ನಂಗೆ ಸಹಾಯ ಮಾಡಿದ್ರು. ಅಲ್ಲಿ ಹೋದ್ಮೇಲೆ ಆ ಸಹೋದರಿಯರು ತೋರಿಸಿದ ಧೈರ್ಯ ನೋಡಿ ನಂಗೆ ತುಂಬ ಖುಷಿ ಆಯ್ತು. ಅವ್ರನ್ನ ಜೈಲಲ್ಲಿ ಹಾಕೋ ಅಪಾಯ ಇದ್ರೂ ಅವ್ರ ಮುಖದಲ್ಲಿ ಖುಷಿ ಇತ್ತು. ಅವ್ರನ್ನ ನೋಡಿದ ಮೇಲೆ ಯೆಹೋವನ ಸಂಘಟನೆ ನಂಗೆ ಯಾವುದೇ ನೇಮಕ ಕೊಟ್ರು ಅದನ್ನ ಮಾಡಬೇಕು ಅಂದ್ಕೊಂಡೆ.
ಅದೇ ಸಮಯದಲ್ಲಿ ನಾವು ಗಿಲ್ಯಡ್ ಶಾಲೆಗೆ ಹಾಜರಾಗೋಕೆ ಇನ್ನೊಂದು ಸಲ ಅರ್ಜಿ ಹಾಕಿದ್ವಿ. ಈ ಸಲ ನಮಗೆ ಆಮಂತ್ರಣ ಸಿಕ್ತು. ನಾವು ಅಮೆರಿಕದಲ್ಲಿ ನಡೆಯೋ ಇಂಗ್ಲಿಷ್ ಭಾಷೆಯ ಗಿಲ್ಯಡ್ ಶಾಲೆಗೆ ಹೋಗ್ತೀವಿ ಅಂದ್ಕೊಂಡ್ವಿ. ಆದ್ರೆ ನವೆಂಬರ್ 1981ರಲ್ಲಿ, ಜರ್ಮನಿಯ ವೀಸ್‌ಬಾಡನ್ ಬ್ರಾಂಚ್‌ನಲ್ಲಿ ನಡೆದ ಗಿಲ್ಯಡ್ ಎಕ್ಸ್‌ಟೆನ್ಶನ್ ಶಾಲೆ ಹಾಜರಾಗೋಕೆ ನಮಗೆ ಆಮಂತ್ರಣ ಸಿಕ್ತು. ಈ ಶಾಲೆ ಜರ್ಮನಿ ಭಾಷೆಲಿ ನಡೀತು. ಹಾಗಾಗಿ ನಮಗೆ ಅರ್ಥ ಮಾಡ್ಕೊಳ್ಳೋಕೆ ಸುಲಭ ಆಯ್ತು.
ಯುದ್ಧ ಪೀಡಿತ ನಾಡಲ್ಲಿ ಸೇವೆ
ನಮ್ಮನ್ನ ಕೀನ್ಯಾ ದೇಶದಲ್ಲಿ ಸೇವೆ ಮಾಡೋಕೆ ನೇಮಿಸಿದ್ರು. ಆದ್ರೆ ಕೀನ್ಯಾ ಬ್ರಾಂಚ್ ನಾವು ಪಕ್ಕದಲ್ಲಿರೋ ‘ಉಗಾಂಡ ದೇಶಕ್ಕೆ ಹೋಗಿ ಸೇವೆ ಮಾಡ್ತೀರಾ’ ಅಂತ ಕೇಳಿದ್ರು. ಯುಗಾಂಡ ದೇಶದಲ್ಲಿ 10 ವರ್ಷಗಳ ಹಿಂದೆ ಆ ಸರ್ಕಾರನ ಕೆಳಗಿಳಿಸಿ ಅಲ್ಲಿನ ಮಿಲಿಟರಿ ಅಧಿಕಾರಿ ಈಡೀ ಆಮೀನ್ ಅಧಿಕಾರಕ್ಕೆ ಬಂದಿದ್ದ. ಅವನು ಸಾವಿರಾರು ಜನ್ರನ್ನ ಕೊಂದ. ಲಕ್ಷಾಂತರ ಜನ್ರ ಜೀವನ ಆಗ ಕಣ್ಣೀರಲ್ಲೇ ಕೈ ತೊಳೆಯೋ ತರ ಆಗಿತ್ತು. 1979ರಲ್ಲಿ ಮತ್ತೆ ಉಗಾಂಡ ಸರ್ಕಾರ ಅಧಿಕಾರಕ್ಕೆ ಬಂದು ಇವನನ್ನ ದೇಶ ಬಿಟ್ಟು ಓಡಿಸ್ತು. ಆದ್ರಿಂದ ಇಲ್ಲಿ ಸೇವೆ ಮಾಡೋಕೆ ನಂಗೆ ಭಯ ಆಯ್ತು. ಆದ್ರೆ ಗಿಲ್ಯಡ್ ಶಾಲೆ ನಾವು ಯೆಹೋವನ ಮೇಲೆ ಪೂರ್ತಿ ಭರವಸೆ ಇಡೋದು ಹೇಗೆ ಅಂತ ಕಲಿಸಿತ್ತು. ಅದಕ್ಕೆ ನಾವು ಕೀನ್ಯಾ ಬ್ರಾಂಚ್‌ಗೆ ‘ನಾವು ಹೋಗ್ತೀವಿ’ ಅಂತ ಹೇಳಿದ್ವಿ.
ಉಗಾಂಡಾದಲ್ಲಿ ಜೀವನ ಮಾಡೋದು ತುಂಬ ಕಷ್ಟ ಆಗಿತ್ತು. 2010ರ ವರ್ಷ ಪುಸ್ತಕದಲ್ಲಿ ಹೇನ್ಸ್ ಇದ್ರ ಬಗ್ಗೆ ಹೀಗೆ ಹೇಳಿದ್ದಾರೆ, “ಸರ್ಕಾರ ಆ ಸಮಯದಲ್ಲಿ ನೀರು, ವಿದ್ಯುತ್ ಶಕ್ತಿ ಮತ್ತು ಜೀವನ ಮಾಡೋಕೆ ಬೇಕಿರೋ ವಿಷ್ಯಗಳನ್ನ ಕೊಡ್ತಿರಲಿಲ್ಲ. ಫೋನ್ ಕೂಡ ಕೆಲ್ಸ ಮಾಡ್ತಿರಲಿಲ್ಲ. ಯಾವಾಗ ನೋಡಿದ್ರೂ ಜನ ಗುಂಡಿನ ದಾಳಿ ಮಾಡ್ತಿದ್ರು. ರಾತ್ರಿ ಹೊತ್ತಲ್ಲಿ ಕದೀತಿದ್ರು, ಅದಕ್ಕೆ ಕತ್ತಲೆ ಆಗ್ತಿದ್ದಂತೆ ಎಲ್ರೂ ಮನೆ ಒಳಗಡೆ ಹೋಗಿ ನಮಗೆ ಯಾರೂ ತೊಂದ್ರೆ ಕೊಡಬಾರದು, ನಮ್ಮನ್ನ ಕೊಲ್ಲಬಾರದು ಅಂತ ಪ್ರಾರ್ಥನೆ ಮಾಡ್ತಿದ್ರು.” ಜೀವನ ಮಾಡೋಕೆ ಕಷ್ಟ ಇದ್ರೂ ಸಹೋದರರು ಯೆಹೋವನ ಸೇವೆನ ಖುಷಿಯಾಗಿ ಮಾಡ್ತಿದ್ರು.
ವೈಸ್ವಾ ಕುಟುಂಬದಲ್ಲಿ ಅಡುಗೆ ಮಾಡ್ತಿರೋದು
1982ರಲ್ಲಿ ನಾನು ಮತ್ತು ಹೇನ್ಸ್ ಉಗಾಂಡಾದ ರಾಜಧಾನಿ ಕಂಪಾಲಾಗೆ ಬಂದ್ವಿ. ಅಲ್ಲಿ ಐದು ತಿಂಗಳು ನಾವು ಸ್ಯಾಮ್ ಮತ್ತು ಕ್ರಿಸ್ಟಿನಾ ವೈಸ್ವಾ ಅವ್ರ ಮನೆಲಿ ಉಳ್ಕೊಂಡ್ವಿ. ಆ ಮನೆಲಿ ಅವ್ರ ಐದು ಮಕ್ಕಳು ಮತ್ತು ನಾಲ್ಕು ಸಂಬಂಧಿಕರು ಇದ್ರು. ವೈಸ್ವಾ ದಂಪತಿ ತುಂಬ ಬಡವರು. ಅವರು ದಿನಕ್ಕೆ ಒಂದೇ ಸಲ ಊಟ ಮಾಡ್ತಿದ್ರು. ಹಾಗಿದ್ರೂ ಅವ್ರ ಹತ್ರ ಇದ್ದ ಸ್ವಲ್ಪದ್ರಲ್ಲೇ ನಮಗೆ ಅತಿಥಿಸತ್ಕಾರ ತೋರಿಸ್ತಿದ್ರು. ಅದು ನೋಡಿ ನಮಗೆ ಆಶ್ಚರ್ಯ ಆಯ್ತು. ಇವ್ರ ಜೊತೆ ಇದ್ದಾಗ ನಾವು ಮಿಷನರಿ ಜೀವನಕ್ಕೆ ಸಹಾಯ ಮಾಡೋ ಎಷ್ಟೋ ವಿಷ್ಯಗಳನ್ನ ಕಲಿತ್ವಿ. ಉದಾಹರಣೆಗೆ, ಸ್ವಲ್ಪ ನೀರಲ್ಲೇ ಸ್ನಾನ ಮಾಡೋದು, ಆ ನೀರನ್ನ ವೇಸ್ಟ್ ಮಾಡದೇ ಟಾಯ್ಲೆಟ್ ಫ್ಲಶ್ ಮಾಡೋಕೆ ಬಳಸೋದು ಹೇಗೆ ಅಂತ ಕಲಿತ್ವಿ. 1983ರಲ್ಲಿ ನಾವಿಬ್ರೂ ಇರೋಕೆ ಕಂಪಾಲದಲ್ಲಿ ಸ್ವಲ್ಪ ಸುರಕ್ಷಿತವಾದ ಬೇರೆ ಜಾಗ ಸಿಕ್ತು.
ಇಲ್ಲಿನ ಸೇವೆನಂತೂ ನಾವು ತುಂಬ ಎಂಜಾಯ್ ಮಾಡ್ತಿದ್ವಿ. ಒಂದು ತಿಂಗಳಂತೂ ನಾವು ಸುಮಾರು 4,000 ಪತ್ರಿಕೆಗಳನ್ನ ಕೊಟ್ವಿ. ಇಲ್ಲಿನ ಜನ್ರಿಗೆ ದೇವ್ರ ಮೇಲೆ ಮತ್ತು ಬೈಬಲ್ ಮೇಲೆ ಗೌರವ ಇತ್ತು. ನಂಗೂ ಹೇನ್ಸ್‌ಗೂ 10ರಿಂದ 15 ಬೈಬಲ್ ಸ್ಟಡಿಗಳಿತ್ತು. ನಮ್ಮ ಸ್ಟಡಿಗಳಿಂದಾನೂ ಒಳ್ಳೆ ಪಾಠಗಳನ್ನ ಕಲಿತ್ವಿ. ಉದಾಹರಣೆಗೆ, ನಮ್ಮ ಅವರು ಪ್ರತಿ ಮೀಟಿಂಗ್‌ಗೆ ನಡ್ಕೊಂಡೇ ಬರ್ತಿದ್ರು, ನಡ್ಕೊಂಡೇ ಹೋಗ್ತಿದ್ರು. ಅವರು ಇದ್ರ ಬಗ್ಗೆ ಯಾವತ್ತೂ ಗೊಣಗ್ತಿರಲಿಲ್ಲ. ಅವರ ಮುಖದಲ್ಲಿ ಯಾವಾಗ್ಲೂ ನಗು ಇರ್ತಿತ್ತು.
1985ರಲ್ಲಿ ಮತ್ತು 1986ರಲ್ಲಿ ಉಗಾಂಡಾದಲ್ಲಿ ಎರಡು ಯುದ್ಧಗಳು ನಡೀತು. ಆಗ ಚಿಕ್ಕ-ಚಿಕ್ಕ ಮಕ್ಕಳ ಕೈಯಲ್ಲಿ ದೊಡ್ಡ ದೊಡ್ಡ ಗನ್ ಕೊಟ್ಟು ಅವ್ರನ್ನ ಸೈನಿಕರಾಗಿ ಬಳಸ್ತಿದ್ರು. ಅವರು ರಸ್ತೆಯಲ್ಲಿ ಹೋಗೋರನ್ನ ಬರೋವ್ರನ್ನೆಲ್ಲ ಚೆಕ್ ಮಾಡ್ತಿದ್ರು. ಆಗ ನಾವು ‘ಜಾಣ್ಮೆ ಬಳಸಿ ಶಾಂತಿಯಿಂದ ಆಸಕ್ತ ಜನ್ರನ್ನ ಹುಡುಕೋಕೆ ಸಹಾಯ ಮಾಡಪ್ಪ’ ಅಂತ ಯೆಹೋವನಿಗೆ ಪ್ರಾರ್ಥನೆ ಮಾಡ್ತಿದ್ವಿ. ಯೆಹೋವ ನಮ್ಮ ಪ್ರಾರ್ಥನೆಗೆ ಉತ್ರ ಕೊಡ್ತಿದ್ದ ಆಸಕ್ತ ಜನ್ರಿಗೆ ನಾವು ಸಿಹಿಸುದ್ದಿಯನ್ನ ಸಾರ್ತಾ-ಸಾರ್ತಾ ನಮಗಿದ್ದ ಭಯನೇ ನಾವು ಮರೆತು ಬಿಡ್ತಿದ್ವಿ.
ಹೇನ್ಸ್, ನಾನು ಮತ್ತು ಟಟ್ಜಾನಾ (ಮಧ್ಯದಲ್ಲಿ)
ಬೇರೆ ದೇಶದಿಂದ ಉಗಾಂಡಾಗೆ ಬಂದ ಜನ್ರಿಗೆ ಸಿಹಿಸುದ್ದಿ ಸಾರೋದ್ರಲ್ಲೂ ನಮಗೆ ಖುಷಿ ಸಿಕ್ತು. ಉದಾಹರಣೆಗೆ ರಷ್ಯಾದ ಟಾಟರ್ಸ್ತಾನ್ ಜಾಗದಿಂದ ಮೂರತ್ ಮತ್ತು ದಿಲ್ಬಾರ್ ಇಬಾತುಲಿನ್ ದಂಪತಿ ಬಂದಿದ್ರು. ಅವ್ರಿಗೆ ನಾವು ಸ್ಟಡಿ ಕೊಟ್ವಿ. ಮೂರತ್ ಒಬ್ಬ ಡಾಕ್ಟರ್. ಈ ದಂಪತಿ ದೀಕ್ಷಾಸ್ನಾನ ತಗೊಂಡು ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡ್ತಿದ್ದಾರೆ. ಆಮೇಲೆ ನಾನು ಟಟ್ಜಾನಾ ವಿಲೆಸ್ಕಾ ಅನ್ನೋ ಸ್ತ್ರೀನ ಭೇಟಿ ಮಾಡಿದೆ. ಆಕೆ ಉಕ್ರೇನ್‌ನವಳು. ಅವಳು ಆತ್ಮಹತ್ಯೆ ಮಾಡ್ಕೊಬೇಕು ಅಂತ ಇದ್ದಳು. ಆದ್ರೆ ಅವಳು ಬೈಬಲ್ ಅಧ್ಯಯನ ತಗೊಂಡ್ಳು, ದೀಕ್ಷಾಸ್ನಾನ ಆದ್ಮೇಲೆ ವಾಪಾಸ್ ಉಕ್ರೇನ್‌ಗೆ ಹೋದ್ಳು. ಅದಾದ್ಮೇಲೆ ಆಕೆ ನಮ್ಮ ಪ್ರಕಾಶನಗಳನ್ನ ಭಾಷಾಂತರ ಮಾಡೋ ಕೆಲಸನೂ ಮಾಡಿದ್ಳು.a
ಹೊಸ-ಹೊಸ ಸವಾಲುಗಳು
1991ರಲ್ಲಿ ಹೇನ್ಸ್ ಮತ್ತು ನಾನು ಆಸ್ಟ್ರಿಯಗೆ ರಜೆಗೆ ಅಂತ ಹೋಗಿದ್ವಿ. ಆಗ ಅಲ್ಲಿನ ಬ್ರಾಂಚ್ ‘ನಿಮಗೆ ಹೊಸ ನೇಮಕ ಸಿಕ್ಕಿದೆ’ ಅಂತ ಹೇಳಿದ್ರು. ಈ ಸಲ ನಾವು ಬಲ್ಗೇರಿಯಗೆ ಹೋಗಬೇಕಿತ್ತು. ಈ ಹಿಂದೆ ನಮ್ಮ ಸಾರೋ ಕೆಲಸನ ಇಲ್ಲಿ ನಿಷೇಧ ಮಾಡಿದ್ರು. ಆದ್ರೆ ಈಗ ಸಾರೋಕೆ ಅನುಮತಿ ಇತ್ತು. ನಿಮಗೆ ನೆನಪಿದ್ಯಾ? ಈ ಹಿಂದೆ ನಾವು ಇದೇ ದೇಶಕ್ಕೆ ನಮ್ಮ ಪತ್ರಿಕೆಗಳನ್ನ ಕದ್ದುಮುಚ್ಚಿ ತಗೊಂಡು ಬಂದಿದ್ವಿ. ಆದ್ರೆ ಈಗ ನಾವಲ್ಲಿ ಧೈರ್ಯವಾಗಿ ಹೋಗಿ ಸಿಹಿಸುದ್ದಿಯನ್ನ ಸಾರಬಹುದಿತ್ತು.
‘ನೀವು ವಾಪಸ್ ಉಗಾಂಡಾಗೆ ಹೋಗಬೇಡಿ, ಇಲ್ಲಿಂದ ನೇರವಾಗಿ ಬಲ್ಗೇರಿಯಗೆ ಹೋಗಿ ಸೇವೆ ಮಾಡಿ’ ಅಂತ ಬ್ರಾಂಚ್ ಹೇಳ್ತು. ನಾವು ನಮ್ಮ ಮನೆಗೆ ಹೋಗಿ ವಸ್ತುಗಳನ್ನ ಪ್ಯಾಕ್ ಮಾಡೋಕೆ ಅಲ್ಲಿದ್ದ ಸ್ನೇಹಿತರನ್ನ ಕೊನೇದಾಗಿ ಮಾತಾಡಿಸೋಕೆ ಅವಕಾಶನೇ ಸಿಗ್ಲಿಲ್ಲ. ನಾವು ಜರ್ಮನಿ ಬೆತೆಲ್‌ಗೆ ಬಂದು, ಅಲ್ಲಿಂದ ಒಂದು ಕಾರಲ್ಲಿ ಬಲ್ಗೇರಿಯಾಗೆ ಹೊರಟೇ ಬಿಟ್ವಿ. ನಮ್ಮನ್ನ ಸೋಫಿಯಾ ನಗರದಲ್ಲಿರೋ 20 ಪ್ರಚಾರಕರಿದ್ದ ಒಂದು ಚಿಕ್ಕ ಗುಂಪಿಗೆ ನೇಮಿಸಿದ್ರು.
ಬಲ್ಗೇರಿಯಾಗೆ ಹೋದಮೇಲೆ ನಮಗೆ ಹೊಸ-ಹೊಸ ಸವಾಲುಗಳು ಬಂತು. ಮೊದಲನೇದು ನಮಗೆ ಅಲ್ಲಿನ ಭಾಷೆ ಗೊತ್ತಿರಲಿಲ್ಲ. ಜೊತೆಗೆ ಅಲ್ಲಿನ ಬಲ್ಗೇರಿಯಾ ಭಾಷೆಯಲ್ಲಿ ಎರಡೇ ಪ್ರಕಾಶನಗಳಿತ್ತು. ಒಂದು, ನಿತ್ಯಜೀವಕ್ಕೆ ನಡೆಸುವ ಸತ್ಯವು (ಇಂಗ್ಲಿಷ್), ಎರಡನೇದು, ಬೈಬಲ್ ಕಥೆಗಳ ನನ್ನ ಪುಸ್ತಕ. ಬೈಬಲ್ ಸ್ಟಡಿಗಳನ್ನ ಶುರು ಮಾಡೋಕೂ ನಮಗಿಲ್ಲಿ ಕಷ್ಟ ಆಯ್ತು. ಈ ಎಲ್ಲ ಸಮಸ್ಯೆಗಳ ಮಧ್ಯದಲ್ಲಿ ನಮ್ಮ ಚಿಕ್ಕ ಗುಂಪಿನಲ್ಲಿದ್ದ ಪ್ರಚಾರಕರು ಹುರುಪಿನಿಂದ ಸೇವೆ ಮಾಡ್ತಿದ್ರು. ಆದ್ರೆ ಇದನ್ನ ನೋಡಿದ ಅಲ್ಲಿನ ಆರ್ಥೋಡಾಕ್ಸ್ ಚರ್ಚ್‌ಗೆ ಜೀರ್ಣ ಮಾಡ್ಕೊಳ್ಳೋಕೆ ಆಗ್ಲಿಲ್ಲ. ಅವರು ನಮಗೆ ಹಿಂಸೆ ಮಾಡೋಕೆ ಶುರು ಮಾಡಿದ್ರು.
1994ರಲ್ಲಿ, ಬಲ್ಗೇರಿಯ ಸರ್ಕಾರ ‘ಯೆಹೋವನ ಸಾಕ್ಷಿಗಳು ಅನುಮತಿ ಪಡೆದ ಧರ್ಮ ಅಲ್ಲ’ ಅಂತ ನಿರ್ಧಾರ ಮಾಡ್ತು. ನಾವೊಂದು ಅಪಾಯಕಾರಿ ಧರ್ಮ ಅಂತ ಪ್ರಕಟಣೆ ಮಾಡ್ತು. ನಮ್ಮ ಕೆಲವು ಸಹೋದರರನ್ನ ಜೈಲಿಗೆ ಹಾಕಿ, ಟಿವಿ ನ್ಯೂಸ್‌ಗಳಲ್ಲಿ ನಮ್ಮ ಬಗ್ಗೆ ಸುಳ್ಳುಗಳನ್ನ ಹೇಳ್ತು. ಯೆಹೋವನ ಸಾಕ್ಷಿಗಳು ರಕ್ತ ಕೊಡದೆ ತಮ್ಮ ಮಕ್ಕಳನ್ನ ಸಾಯಿಸ್ತಿದ್ದಾರೆ. ಜೊತೆ ಸಾಕ್ಷಿಗಳು ಆತ್ಮಹತ್ಯೆ ಮಾಡ್ಕೊಬೇಕು ಅಂತ ಪ್ರೋತ್ಸಾಹಿಸ್ತಿದ್ದಾರೆ ಅಂತ ಹೇಳಿದ್ರು. ಹೇನ್ಸ್ ಮತ್ತು ನಂಗೆ ಸಿಹಿಸುದ್ದಿ ಸಾರೋಕೆ ತುಂಬ ಕಷ್ಟ ಆಯ್ತು. ಸೇವೆಗೆ ಹೋದಾಗ ಜನ ನಮ್ಮನ್ನ ಬೈತಿದ್ರು, ಕಿರುಚಿ ಪೊಲೀಸ್ರನ್ನ ಕರಿತಿದ್ರು, ನಮ್ಮನ್ನ ಹೆದರಿಸಿ, ಓಡಿಸೋಕೆ ನಮ್ಮ ಮೇಲೆ ವಸ್ತುಗಳನ್ನೆಲ್ಲಾ ಎಸೀತಿದ್ರು. ಈ ದೇಶಕ್ಕೆ ಈಗ ನಾವು ಪ್ರಕಾಶನಗಳನ್ನೆಲ್ಲಾ ತರೋ ತರ ಇರ್ಲಿಲ್ಲ. ಮೀಟಿಂಗ್‌ಗಳನ್ನ ನಡೆಸೋಕೆ ಬಾಡಿಗೆ ಹಾಲುಗಳೂ ಸಿಗ್ತಿರ್ಲಿಲ್ಲ. ಒಂದ್ಸಲ ಅಧಿವೇಶನ ನಡೀಬೇಕಾದ್ರೆ ಪೊಲೀಸರು ಬಂದು ಅಧಿವೇಶನನ ನಿಲ್ಲಿಸಿಬಿಟ್ಟರು. ಇಷ್ಟು ಹಿಂಸೆ, ವಿರೋಧ ಮತ್ತು ದ್ವೇಷನಾ ನಾನು ಮತ್ತು ಹೇನ್ಸ್ ಈ ಹಿಂದೆ ನೋಡಿರಲಿಲ್ಲ. ಉಗಾಂಡಾದಲ್ಲಿ ಎಷ್ಟು ಚೆನ್ನಾಗಿ ಸೇವೆ ನಡೀತಿತ್ತು. ಜನ ಎಲ್ಲಾ ನಮ್ಮ ಮಾತನ್ನ ಕೇಳ್ತಿದ್ರು, ಖುಷಿಯಾಗ್ತಿತ್ತು. ಇದ್ದಕ್ಕಿದ್ದಂತೆ ಬಂದ ಈ ಹೊಸ-ಹೊಸ ಸವಾಲುಗಳನ್ನ ನಿಭಾಯಿಸೋಕೆ ನಮಗೆ ಯಾವುದು ಸಹಾಯ ಮಾಡ್ತು ಗೊತ್ತಾ?
ಸ್ಥಳೀಯ ಸಹೋದರ ಸಹೋದರಿಯರ ಜೊತೆಯಲ್ಲಿ ಮಾಡಿದ ಸ್ನೇಹ ನಮಗೆ ತುಂಬ ಸಂತೋಷ ಕೊಡ್ತು. ಅವ್ರಿಗೆ ಸತ್ಯ ಸಿಕ್ಕಿದ್ರಿಂದ ಮತ್ತು ಸತ್ಯನ ಕಲಿಯೋಕೆ ನಾವು ಅವ್ರಿಗೆ ಸಹಾಯ ಮಾಡಿದ್ರಿಂದ ಅವರು ತುಂಬ ಖುಷಿಯಾಗಿದ್ರು ಮತ್ತು ನಮಗೆ ತುಂಬ ಕೃತಜ್ಞತೆ ತೋರಿಸಿದ್ರು. ಈ ಎಲ್ಲಾ ಕಷ್ಟಗಳ ಮಧ್ಯದಲ್ಲೂ ಎಲ್ರೂ ಒಬ್ರಿಗೊಬ್ರು ಆಪ್ತರಾಗಿದ್ರು. ಕಷ್ಟದಲ್ಲಿದ್ದಾಗ ಬೇಕಾಗಿರೋ ಸಹಾಯ ಕೊಟ್ರು. ಈ ಎಲ್ಲಾ ಅನುಭವಗಳಿಂದ ‘ನಾವು ಜನ್ರನ್ನ ಪ್ರೀತಿಸೋಕೆ ಕಲಿತು ಬಿಟ್ರೆ ನಮಗೆ ಯಾವುದೇ ನೇಮಕ ಸಿಕ್ಕಿದ್ರೂ ಖಂಡಿತ ಖುಷಿಯಾಗಿರಬಹುದು’ ಅನ್ನೋದನ್ನ ಕಲ್ತಿದ್ದೀವಿ.
ಬಲ್ಗೇರಿಯ ಬ್ರಾಂಚ್‌ನಲ್ಲಿ, 2007
ಕೆಲವು ವರ್ಷಗಳಾದ್ಮೇಲೆ ಸಾರೋಕೆ ನಮಗೆ ಅವಕಾಶ ಸಿಕ್ತು. 1998ರಲ್ಲಿ ಯೆಹೋವನ ಸಾಕ್ಷಿಗಳನ್ನ ಅಲ್ಲಿನ ಸರ್ಕಾರ ಮತ್ತೆ ಒಂದು ಧರ್ಮ ಅಂತ ಒಪ್ಕೊಳ್ತು. ನಮ್ಮ ಪ್ರಕಾಶನಗಳನ್ನ ಭಾಷಾಂತರ ಮಾಡೋಕೂ ಅನುಮತಿ ಕೊಟ್ತು. 2004ರಲ್ಲಿ ನಮ್ಮ ಬ್ರಾಂಚ್ ಬಿಲ್ಡಿಂಗ್‌ನ ಇಲ್ಲಿ ಸಮರ್ಪಣೆನೂ ಮಾಡಲಾಯ್ತು. ಬಲ್ಗೇರಿಯಾದಲ್ಲಿ ಇವತ್ತು ಒಟ್ಟು 57 ಸಭೆಗಳಿವೆ, 2,953 ಪ್ರಚಾರಕರಿದ್ದಾರೆ. ಹೋದ ವರ್ಷ 6,475 ಜನ ಸ್ಮರಣೆಗೆ ಹಾಜರಾದ್ರು. ಈ ಹಿಂದೆ ಸೋಫಿಯಾ ನಗರದಲ್ಲಿ ಬರೀ 5 ಸಹೋದರಿಯರು ಇದ್ರು ಅಂತ ಹೇಳಿದ್ದು ನೆನಪಿದ್ಯಾ? ಆದ್ರೆ ಈಗ ಅಲ್ಲಿ 9 ಸಭೆಗಳಿವೆ. “ಅಲ್ಪನು ಸಾವಿರ ಮಂದಿ ಆಗ್ತಾನೆ” ಅಂತ ಯೆಹೋವ ಹೇಳಿದ ಭವಿಷ್ಯವಾಣಿ ಇಲ್ಲಿ ನೆರವೇರೋದನ್ನ ನಾವು ಕಣ್ಣಾರೆ ನೋಡಿದ್ವಿ.—ಯೆಶಾ. 60:22.
ಕಾಯಿಲೆ ಜೊತೆ ಹೋರಾಟ
ನನಗೆ ತುಂಬ ಕಾಯಿಲೆಗಳು ಇತ್ತು. ಹಲವಾರು ವರ್ಷಗಳು ನನ್ನಲ್ಲಿ ಗಡ್ಡೆಗಳು ಬೆಳಿತಾ ಇರೋದನ್ನ ಡಾಕ್ಟರ್ಸ್ ನೋಡಿದ್ರು. ಒಂದು ಗಡ್ಡೆ ನನ್ನ ಮೆದುಳಲ್ಲೂ ಬೆಳಿತಿತ್ತು. ಅದಕ್ಕೆ ಭಾರತಕ್ಕೆ ಹೋಗಿ ನಾನು ರೇಡಿಯೇಷನ್ ಥೆರಪಿ ತಗೊಂಡೆ. ಸುಮಾರು 12 ಗಂಟೆಗಳ ಕಾಲ ನನಗೆ ಒಂದು ಶಸ್ತ್ರ ಚಿಕಿತ್ಸೆ ಮಾಡಿದ್ರು. ನನ್ನ ಗಡ್ಡೆಯ ಹೆಚ್ಚಿನ ಭಾಗವನ್ನ ತೆಗೆದ್ರು. ಅದಾದ್ಮೇಲೆ ನಾನು ಭಾರತದ ಬ್ರಾಂಚ್ ಅಲ್ಲೇ ಇದ್ದು ಚೇತರಿಸ್ಕೊಂಡೆ. ಆಮೇಲೆ ನಾನು ಬಲ್ಗೇರಿಯದಲ್ಲಿ ವಾಪಾಸ್ ನನ್ನ ನೇಮಕಕ್ಕೆ ಹೋದೆ.
ಅದೇ ಸಮಯದಲ್ಲೇ ಹೇನ್ಸ್‌ಗೆ ತುಂಬ ಅಪರೂಪದ ಹಂಟಿಂಗ್ ಟನ್ಸ್ ಅನ್ನೋ ಕಾಯಿಲೆ ಶುರುವಾಯ್ತು. ಇದ್ರಿಂದ ಮಾತಾಡೋಕೆ, ನಡಿಯೋಕೆ ಮತ್ತು ಅವರ ಕೈ ಕಾಲುಗಳನ್ನ ಹಿಡಿತದಲ್ಲಿ ಇಟ್ಕೊಳ್ಳೋಕೆ ಅವ್ರಿಗೆ ಕಷ್ಟ ಆಗ್ತಿತ್ತು. ಈ ಕಾಯಿಲೆ ಹೆಚ್ಚಾಗ್ತಾ-ಹೆಚ್ಚಾಗ್ತಾ ನಾನು ಅವ್ರಿಗೆ ತುಂಬ ಸಹಾಯ ಮಾಡಬೇಕಾಗ್ತಿತ್ತು. ಎಷ್ಟು ಕಷ್ಟ ಆಗ್ತಿತ್ತು ಅಂದ್ರೆ ಒಂದೊಂದು ಸಲ ಅವ್ರಿಗೆ ಸಹಾಯ ಮಾಡೋಕೆ ಶಕ್ತಿನೇ ನನಗಿಲ್ವೇನೋ ಅಂತ ಅನಿಸ್ತಾ ಇತ್ತು. ಆದ್ರೆ ಆಗ ಬಾಬಿ ಅನ್ನೋ ಒಬ್ಬ ಯುವ ಸಹೋದರ ನಮಗೆ ಸಹಾಯ ಮಾಡ್ತಿದ್ದ. ಅವನು ತಪ್ಪದೆ ಹೇನ್ಸ್ ಅವರನ್ನ ಸಾರೋಕೆ ಕರ್ಕೊಂಡು ಹೋಗ್ತಿದ್ದ. ಹೇನ್ಸ್ ತೊದಲು ಮಾತಾಡೋದಾಗ್ಲಿ, ಅವರ ಕೈ ಕಾಲು ಅವರ ಹಿಡಿತದಲ್ಲಿ ಇಲ್ದೆ ಇರೋದನ್ನೆಲ್ಲ ನೋಡಿ ಅವನು ‘ಜನ ನನ್ನ ಬಗ್ಗೆ ಏನ್ ಅಂದ್ಕೊತಾರೋ’ ಅಂತ ನಾಚಿಕೆ ಪಡ್ತಿರ್ಲಿಲ್ಲ. ನನಗೇನಾದ್ರೂ ಬೇಕಿದ್ರೆ ನಾನು ಬಾಬಿನ ಕರಿತಿದ್ದೆ. ನಾನು ಮತ್ತು ಹೇನ್ಸ್ ಈ ಲೋಕದಲ್ಲಿ ನಮಗೆ ಮಕ್ಕಳು ಬೇಡ ಅಂತ ನಿರ್ಧಾರ ಮಾಡಿದ್ರೂ ಯೆಹೋವ ಬಾಬಿನ ನಮಗೆ ಒಬ್ಬ ಮಗನ ತರ ಕೊಟ್ಟು ಸಹಾಯ ಮಾಡ್ತಿದ್ದಾರೆ ಅಂತ ನಮಗೆ ಅನಿಸ್ತು.—ಮಾರ್ಕ 10:29, 30.
ಹೇನ್ಸ್‌ಗೆ ಕ್ಯಾನ್ಸರ್ ಕೂಡ ಬಂತು, ಕೊನೆಗೆ 2015ರಲ್ಲಿ ಅವರು ತೀರಿಕೊಂಡ್ರು. ಅವರು ತೀರಿಕೊಂಡಿದ್ದನ್ನ ನನ್ನ ಕೈಯಲ್ಲಿ ನಂಬೋಕೆ ಆಗಿಲ್ಲ. ಅವರು ಇಲ್ಲದೆ ಜೀವನ ಮಾಡೋದು ನನಗೆ ತುಂಬ ಕಷ್ಟ ಆಯ್ತು. ಅವ್ರನ್ನ ನಾನು ನೆನಸ್ಕೊಳ್ಳದೆ ಇರೋ ದಿನಾನೇ ಇಲ್ಲ. (ಲೂಕ 20:38) ಅವರು ನಂಗೆ ಕೊಟ್ಟ ಸಲಹೆಗಳು, ಹೇಳಿದ ಬುದ್ಧಿ ಮಾತುಗಳು ನೆನಪಿಗೆ ಬರ್ತಾನೇ ಇರುತ್ತೆ. ನಾವಿಬ್ರೂ ಜೊತೆಯಾಗಿ ಎಷ್ಟೋ ವರ್ಷಗಳು ಯೆಹೋವನಿಗೆ ಸೇವೆ ಮಾಡಿದ್ವಿ. ಅದಕ್ಕೆ ನಾನು ಯೆಹೋವನಿಗೆ ಯಾವಾಗ್ಲೂ ಋಣಿಯಾಗಿರ್ತೀನಿ.
ಯೆಹೋವನಿಗೆ ಋಣಿ
ಯೆಹೋವ ಎಷ್ಟೋ ಕಷ್ಟಗಳಲ್ಲಿ ನನ್ನ ಕೈ ಹಿಡಿದು ಮೇಲಕ್ಕೆ ಎತ್ತಿದ್ದಾನೆ. ನಾಚಿಕೆ ಸ್ವಭಾವವನ್ನ ಬಿಟ್ಟು ಜನ್ರನ್ನ ಪ್ರೀತಿಸೋ ಮಿಷನರಿ ಆಗೋಕೆ ನನಗೆ ಸಹಾಯ ಮಾಡಿದ್ದಾನೆ. (2 ತಿಮೊ. 1:7) ಇವತ್ತು ನಾನು ಮತ್ತು ನನ್ನ ತಂಗಿ ಪೂರ್ಣ ಸಮಯದ ಸೇವೆ ಮಾಡ್ತಿದ್ದೀವಿ, ಇದಕ್ಕೆ ಯೆಹೋವನೇ ಕಾರಣ. ನನ್ನ ತಂಗಿ ಮತ್ತು ಅವಳ ಗಂಡ ಯುರೋಪ್‌ನ ಸರ್ಬಿಯನ್ ಸರ್ಕಿಟ್‌ನಲ್ಲಿ ಸೇವೆ ಮಾಡ್ತಿದ್ದಾರೆ. ಎಷ್ಟೋ ವರ್ಷಗಳ ಹಿಂದೆ, ‘ನನ್ನ ಇಬ್ರು ಹೆಣ್ಣು ಮಕ್ಕಳು ಪಯನೀಯರ್ ಆಗಬೇಕು’ ಅಂತ ನನ್ನ ಅಪ್ಪ ಮಾಡಿದ ಪ್ರಾರ್ಥನೆಗೆ ಉತ್ರ ಸಿಕ್ಕಿದೆ.
ಪ್ರತಿ ಸಲ ನಾನು ಬೈಬಲ್ ಓದಿದಾಗ ನನಗೆ ಶಾಂತಿ ಸಮಾಧಾನ ಸಿಗುತ್ತೆ. ತುಂಬ ಕಷ್ಟದ ಸಮಯದಲ್ಲಿ ನಾನು ಯೇಸು ಮಾಡಿದ ತರಾನೇ “ಹೆಚ್ಚು ಪ್ರಾರ್ಥನೆ” ಮಾಡ್ತೀನಿ. (ಲೂಕ 22:44) ನಾನು ಮಾಡಿರೋ ಪ್ರಾರ್ಥನೆಗಳಿಗೆ ಯೆಹೋವ ಎಷ್ಟೊಂದು ರೀತಿಯಲ್ಲಿ ನನಗೆ ಉತ್ತರ ಕೊಟ್ಟಿದ್ದಾನೆ. ಅದ್ರಲ್ಲೊಂದು ಸೋಫಿಯಾ ನಗರದಲ್ಲಿರೋ ನಾಡೇಜ್ದಾ ಸಭೆಯಲ್ಲಿ ನನಗೆ ಸಿಕ್ಕಿರೋ ಪ್ರೀತಿ ಮತ್ತು ದಯೆ ತೋರಿಸೋ ಸ್ನೇಹಿತರು! ಅವ್ರ ಜೊತೆ ಸಮಯ ಕಳಿಯೋಕೆ ನನ್ನ ಕರಿತಾರೆ, ನನ್ನನ್ನ ಎಷ್ಟು ಪ್ರೀತಿಸ್ತೀನಿ ಅಂತ ಹೇಳ್ತಾರೆ. ಇದೆಲ್ಲ ನಂಗೆ ತುಂಬ ಖುಷಿ ಕೊಟ್ಟಿದೆ.
ಸತ್ತೋಗಿರೋರು ಮತ್ತೆ ಜೀವ ಪಡ್ಕೊಳ್ಳೋ ಸಮಯದ ಬಗ್ಗೆ ನಾನು ಆಗಾಗ ಯೋಚಿಸ್ತೀನಿ. ನಮ್ಮ ಮನೆ ಮುಂದೆನೇ ಅಪ್ಪಅಮ್ಮ ನಿಂತ್ಕೊಂಡಿರೋ ತರ ಚಿತ್ರಿಸ್ಕೊತ್ತೀನಿ. ಅವರು ಮದ್ವೆ ಆದಾಗ ಎಷ್ಟು ಸುಂದರವಾಗಿದ್ರೋ ಈಗ್ಲೂ ಅದೇ ತರ ಇದ್ದಾರೆ ಅನ್ನೋ ತರ ನನಗೆ ಅನ್ಸುತ್ತೆ. ನನ್ನ ತಂಗಿ ಅಡುಗೆ ಮಾಡ್ತಿರೋ ತರ ನಂಗೆ ಕಾಣುತ್ತೆ. ನನ್ನ ಗಂಡ ಕುದುರೆ ಪಕ್ಕದಲ್ಲಿ ನಿಂತ್ಕೊಂಡಿರೋ ತರ ನಾನು ಊಹಿಸ್ಕೊಳ್ತೀನಿ. ಈ ರೀತಿ ನಾನು ಯೋಚನೆ ಮಾಡೋದ್ರಿಂದ ನನಗೆ ತುಂಬ ಖುಷಿ ಆಗುತ್ತೆ. ಇನ್ನಷ್ಟು ತಾಳ್ಕೊಳ್ಳೋಕೆ ನಂಗೆ ಸಹಾಯ ಸಿಗುತ್ತೆ. ಇದೆಲ್ಲ ಕೂಡ ಯೆಹೋವನಿಗೆ ನಾನು ಇನ್ನಷ್ಟು ಋಣಿಯಾಗಿರೋಕೆ ನನ್ನನ್ನ ಪ್ರೇರೇಪಿಸುತ್ತೆ.
ನನ್ನ ಜೀವನದ ಪ್ರಯಾಣದ ಬಗ್ಗೆ ಯೋಚನೆ ಮಾಡಿದ್ರೆ, ಭವಿಷ್ಯದಲ್ಲಿ ಏನಾಗುತ್ತೆ ಅನ್ನೋದ್ರ ಬಗ್ಗೆ ಧ್ಯಾನ ಮಾಡಿದ್ರೆ ಕೀರ್ತನೆ 27:13, 14ರಲ್ಲಿ ದಾವೀದ ಹೇಳಿದ ಮಾತುಗಳನ್ನೇ ನಂಗೂ ಹೇಳಬೇಕು ಅನಿಸುತ್ತೆ. ಅಲ್ಲಿ ದಾವೀದ, “ನಾನು ಬದುಕಿದ್ದಾಗಲೇ ಯೆಹೋವನ ಒಳ್ಳೇತನ ನೋಡ್ತೀನಿ ಅಂತ ನನಗೆ ನಂಬಿಕೆ ಇಲ್ಲದಿದ್ರೆ ನಾನು ಈಗ ಎಲ್ಲಿ ಇರ್ತಿದ್ದೆ? ಯೆಹೋವನ ಮೇಲೆ ನಿರೀಕ್ಷೆ ಇಡು. ಧೈರ್ಯವಾಗಿ, ದೃಢವಾಗಿ ಇರು. ಹೌದು, ಯೆಹೋವನ ಮೇಲೆ ನಿರೀಕ್ಷೆ ಇಡು” ಅಂತ ಹೇಳಿದ. ದಾವೀದನ ಈ ಮಾತುಗಳನ್ನ ನಾನು ಪೂರ್ತಿಯಾಗಿ ಒಪ್ತೀನಿ!
a ಟಟ್ಜಾನಾ ವಿಲೆಸ್ಕಾ ಅವರ ಜೀವನ ಕಥೆಯನ್ನ ಡಿಸೆಂಬರ್ 22, 2000ರ ಎಚ್ಚರ! ಪತ್ರಿಕೆ ಪುಟ 20-24ರಲ್ಲಿ (ಇಂಗ್ಲಿಷ್) ನೋಡಿ.