ಆಡಳಿತ ಮಂಡಲಿಯಿಂದ ಒಂದು ಪತ್ರ
ನಾವು 21ನೆಯ ಶತಮಾನದ ಆರಂಭದ ವರ್ಷಗಳನ್ನು ಪ್ರವೇಶಿಸುತ್ತಿರುವಾಗ, ಲೋಕದ ಸುತ್ತಲೂ ಇರುವ ನಿಮಗೆ, ಅಂದರೆ “ಸಹೋದರರ ಇಡೀ ಸಂಘ”ಕ್ಕೆ ಬರೆದು, ನೀವು ಮಾಡುತ್ತಿರುವ ಕಠಿನ ಕೆಲಸಕ್ಕಾಗಿ ನಿಮ್ಮನ್ನು ಶ್ಲಾಘಿಸಲು ನಮಗೆ ಆನಂದವಾಗುತ್ತದೆ. (1 ಪೇತ್ರ 2:17, NW) ಸುಮಾರು 2,000 ವರ್ಷಗಳ ಹಿಂದೆ ಯೇಸು ಹೀಗೆ ಕೇಳಿದನು: “ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?” (ಲೂಕ 18:8) ಗತ ಸೇವಾ ವರ್ಷದಲ್ಲಿ ನಿಮ್ಮ ಹುರುಪಿನ ಚಟುವಟಿಕೆಯು, ಯೇಸುವಿನ ಈ ಪ್ರಶ್ನೆಗೆ ಘಂಟಾಘೋಷವಾಗಿ ಹೌದು ಎಂಬ ಉತ್ತರವನ್ನು ಕೊಡುತ್ತದೆ! ನಿಮ್ಮಲ್ಲಿ ಕೆಲವರು ನಿಮ್ಮ ನಂಬಿಕೆಗೋಸ್ಕರ ತಿರಸ್ಕಾರ ಮತ್ತು ಅಪಹಾಸ್ಯಕ್ಕೆ ಗುರಿಯಾಗಿದ್ದೀರಿ. ಅನೇಕ ಸ್ಥಳಗಳಲ್ಲಿ ನೀವು ಯುದ್ಧಗಳು, ವಿಪತ್ತುಗಳು, ರೋಗ ಇಲ್ಲವೇ ಹಸಿವಿನ ಎದುರಿನಲ್ಲೂ ತಾಳಿಕೊಂಡಿದ್ದೀರಿ. (ಲೂಕ 21:10, 11) ಸತ್ಕಾರ್ಯಗಳಿಗಾಗಿರುವ ನಿಮ್ಮ ಹುರುಪಿನಿಂದಾಗಿ, ಯೇಸು ಈಗಲೂ “ಭೂಮಿಯ ಮೇಲೆ ನಂಬಿಕೆಯನ್ನು ಕಾಣ”ಬಲ್ಲನು. ಈ ಕಾರಣದಿಂದಾಗಿ ಖಂಡಿತವಾಗಿಯೂ ಸ್ವರ್ಗದಲ್ಲಿ ಹರ್ಷೋದ್ಗಾರವಿದೆ.
ತಾಳಿಕೊಳ್ಳುವುದು ಸುಲಭವಲ್ಲ ಎಂಬುದು ನಮಗೆಲ್ಲರಿಗೆ ತಿಳಿದಿದೆ. ಪಶ್ಚಿಮ ಏಷಿಯಾದಲ್ಲಿರುವ ನಮ್ಮ ಸಹೋದರರ ಕಷ್ಟಗಳನ್ನು ಪರಿಗಣಿಸಿರಿ. ಆ ದೇಶದಲ್ಲಿ ಯೆಹೋವನ ಸಾಕ್ಷಿಗಳ ವಿರುದ್ಧ ಹಿಂಸಾಕೃತ್ಯಗಳನ್ನು ನಡೆಸುವುದು ಒಂದು ರೂಢಿಯಾಗಿಬಿಟ್ಟಿದೆ. ಇತ್ತೀಚೆಗೆ, ಸುಮಾರು 700 ಮಂದಿ ಶಾಂತಿಯಿಂದ ಕೂಡಿಬಂದಿದ್ದ ಒಂದು ಸಮ್ಮೇಳನವನ್ನು ಪೊಲೀಸರು ಭಂಗಗೊಳಿಸಿದರು. ಸಮ್ಮೇಳನಕ್ಕೆ ಹಾಜರಾಗಲು ಬರುತ್ತಿದ್ದ ಇನ್ನೂ 1,300 ಮಂದಿಯನ್ನು ತಡೆಗಟ್ಟಲಿಕ್ಕಾಗಿ ರಸ್ತೆಯಲ್ಲಿ ತಡೆಗಳನ್ನಿರಿಸಲಾಯಿತು. ಮುಖವಾಡ ಹಾಕಿಕೊಂಡಿದ್ದ ವ್ಯಕ್ತಿಗಳ ಒಂದು ಗುಂಪಿನಲ್ಲಿ ಕೆಲವು ಪೊಲೀಸರೂ ಒಳಗೂಡಿದ್ದು, ಅವರು ಸಮ್ಮೇಳನದ ಸ್ಥಳಕ್ಕೆ ಲಗ್ಗೆಹಾಕಿ, ಹಾಜರಿದ್ದವರಲ್ಲಿ ಅನೇಕರನ್ನು ಹೊಡೆದರು ಮತ್ತು ಸಮ್ಮೇಳನಕ್ಕಾಗಿ ಉಪಯೋಗಿಸಬೇಕಾಗಿದ್ದ ಕಟ್ಟೋಣಕ್ಕೆ ಬೆಂಕಿಯಿಟ್ಟರು. ಬೇರೆ ಸಂದರ್ಭಗಳಲ್ಲಿ ಧಾರ್ಮಿಕ ಉಗ್ರಗಾಮಿಗಳು, ನಮ್ಮ ಸಹೋದರರನ್ನು ಮೊಳೆಗಳುಳ್ಳ ದೊಣ್ಣೆಗಳಿಂದ ಕ್ರೂರವಾಗಿ ಹೊಡೆದಿದ್ದಾರೆ.
ಅಂಥ ಆಕ್ರಮಣಗಳು ತಲ್ಲಣಗೊಳಿಸುವಂಥವುಗಳಾಗಿವೆ, ಆದರೂ ಅವು ಅಚ್ಚರಿಯನ್ನು ಉಂಟುಮಾಡುವುದಿಲ್ಲ. ಅಪೊಸ್ತಲ ಪೌಲನು ಹೀಗೆ ಬರೆಯುವಂತೆ ಪ್ರೇರಿಸಲ್ಪಟ್ಟನು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊ. 3:12) ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರು ಮೌಖಿಕ ಹಾಗೂ ಶಾರೀರಿಕ ಹಿಂಸೆಯನ್ನು ತಾಳಿಕೊಂಡರು. ಕೆಲವರನ್ನು ಕೊಂದುಹಾಕಲಾಯಿತು ಸಹ. (ಅ. ಕೃ. 5:40; 12:2; 16:22-24; 19:9) 20ನೆಯ ಶತಮಾನದಲ್ಲೂ ಇದು ಸತ್ಯವಾಗಿತ್ತು, ಮತ್ತು 21ನೆಯ ಶತಮಾನದಲ್ಲೂ ಸತ್ಯವಾಗಿರುವುದು. ಆದರೂ ಯೆಹೋವನು ನಮಗನ್ನುವುದು: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು.” (ಯೆಶಾ. 54:17) ಇದೆಂಥ ಅದ್ಭುತಕರವಾದ ಆಶ್ವಾಸನೆಯಾಗಿದೆ! ಹೌದು, ನಾವು ಯೆಹೋವನಿಗೆ ಎಷ್ಟು ಅಮೂಲ್ಯರಾಗಿದ್ದೇವೆಂದರೆ, ತನ್ನ ಪ್ರವಾದಿಯಾದ ಜೆಕರ್ಯನ ಮೂಲಕ ಆತನಂದದ್ದು: ‘ನಿಮ್ಮನ್ನು ತಾಕುವವನು ನನ್ನ ಕಣ್ಣು ಗುಡ್ಡನ್ನು ತಾಕುವವನಾಗಿದ್ದಾನೆ.’ (ಜೆಕ. 2:8) ಯೆಹೋವನ ಆರಾಧಕರ ಶತ್ರುಗಳು ಕಟ್ಟಕಡೆಗೆ ವಿಜಯಿಗಳಾಗುವ ಯಾವುದೇ ಸಾಧ್ಯತೆಯಿಲ್ಲ. ಖಂಡಿತವಾಗಿಯೂ ಶುದ್ಧಾರಾಧನೆಯೇ ಜಯಹೊಂದುವುದು!
ಉದಾಹರಣೆಗೆ, ಈ ಹಿಂದೆ ತಿಳಿಸಲ್ಪಟ್ಟಿರುವ ದೇಶವನ್ನು ತೆಗೆದುಕೊಳ್ಳಿ. 2001ನೆಯ ಸೇವಾ ವರ್ಷದಲ್ಲಿ, ಅಲ್ಲಿನ ಯೆಹೋವನ ಸಾಕ್ಷಿಗಳು ಪ್ರಚಾರಕರ ಸಂಖ್ಯೆಯಲ್ಲಿ ಎರಡು ಹೊಸ ಉಚ್ಛಾಂಕಗಳನ್ನು ಪಡೆದರು. ಹೌದು, ಬೇರೆ ಕಡೆಗಳಲ್ಲಿರುವ ಸಹೋದರರಂತೆಯೇ, ಅಲ್ಲಿರುವ ನಮ್ಮ ಸಹೋದರರು ಕೂಡ ಕಷ್ಟಗಳ ಎದುರಿನಲ್ಲೂ ಪಟ್ಟುಹಿಡಿಯುತ್ತಾರೆ. ಲೋಕವ್ಯಾಪಕವಾಗಿ ಗತ ಸೇವಾ ವರ್ಷದಲ್ಲಿ, ಪ್ರತಿ ವಾರ 5,066 ಮಂದಿ ಯೆಹೋವನಿಗೆ ಮಾಡಿಕೊಂಡಿರುವ ತಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಹೊಂದಿದರು. ಈಗ ಈ ಹೊಸಬರು ನಮ್ಮೆಲ್ಲರೊಂದಿಗೆ, ‘ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ದೃಢನಿಶ್ಚಿತರಾಗಿದ್ದು, ಪೂರ್ಣರಾಗಿ ನಿಲ್ಲಲು’ ದೃಢಸಂಕಲ್ಪವನ್ನು ಮಾಡಿದ್ದಾರೆ.—ಕೊಲೊ. 4:12, NW.
ಗ್ರೀಸ್ನಲ್ಲಿ ನಡೆದಿರುವ ಇತ್ತೀಚಿನ ಘಟನೆಗಳನ್ನೂ ಪರಿಗಣಿಸಿರಿ. ಅನೇಕ ವರ್ಷಗಳಿಂದ ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ತೀವ್ರವಾದ ವಿರೋಧದ ಎದುರಿನಲ್ಲೂ, ಈಗ ಸರಕಾರವು ಯೆಹೋವನ ಸಾಕ್ಷಿಗಳನ್ನು ಒಂದು “ಜ್ಞಾತ ಧರ್ಮ” ಎಂದು ಪರಿಗಣಿಸುತ್ತದೆ. ಈ ಮನ್ನಣೆಯನ್ನು ನೀಡುವ ಡಾಕ್ಯುಮೆಂಟ್, ಗ್ರೀಸ್ ಬೆತೆಲ್ ಸಂಕೀರ್ಣವು “ದೇವರ ಆರಾಧನೆಗೆಂದು ಸಮರ್ಪಿಸಲ್ಪಟ್ಟಿರುವ ಒಂದು ಪವಿತ್ರ ಹಾಗೂ ಮೀಸಲಾಗಿಡಲ್ಪಟ್ಟ ಸ್ಥಳವಾಗಿದೆ” ಎಂದು ಹೇಳುತ್ತದೆ. ಗತ ಸೇವಾ ವರ್ಷದಲ್ಲಿ, ಅಮೆರಿಕ, ಕೆನಡ, ಜಪಾನ್, ಜರ್ಮನಿ, ಬಲ್ಗೇರಿಯ, ರಷ್ಯಾ ಮತ್ತು ರೂಮೇನಿಯದಲ್ಲಿ ಕೋರ್ಟುಗಳು ನಮ್ಮ ಆರಾಧನೆಯ ಮೇಲೆ ಪರಿಣಾಮ ಬೀರುವ ಶಾಸನಬದ್ಧ ನಿರ್ಣಯಗಳನ್ನು ಕೊಟ್ಟವು. ಆ ದೇಶಗಳಲ್ಲಿ ಚಟುವಟಿಕೆಯ ದ್ವಾರವನ್ನು ತೆರೆದಿಟ್ಟದ್ದಕ್ಕಾಗಿ ನಾವು ಯೆಹೋವನಿಗೆ ಎಷ್ಟು ಉಪಕಾರ ಹೇಳುತ್ತೇವೆ!
ಈ ಕಡೇ ದಿವಸಗಳಲ್ಲಿ ಯೆಹೋವನು ತನ್ನ ಜನರನ್ನು ಬೆಂಬಲಿಸುವ ವಿಧಗಳನ್ನು ನಾವು ಪರಿಗಣಿಸುವಾಗ, ನಮಗಿರಬಹುದಾದ ಅತ್ಯುತ್ತಮ ಸ್ನೇಹಿತನು ಆತನೊಬ್ಬನೇ ಎಂಬುದನ್ನು ನಾವು ಗ್ರಹಿಸಬಲ್ಲೆವು. ಆತನು ನಮ್ಮನ್ನು ಪ್ರೀತಿಸುತ್ತಾನೆ, ನಮಗೆ ಕಲಿಸುತ್ತಾನೆ ಮತ್ತು ನಮ್ಮನ್ನು ತಿದ್ದುತ್ತಾನೆಂಬುದನ್ನು ಅರಿತವರಾಗಿದ್ದು, ಆತನೊಂದಿಗೆ ನಮಗಿರುವ ಸಂಬಂಧದಲ್ಲಿ ನಾವು ಹರ್ಷಿಸುತ್ತೇವೆ. ಹೌದು, ನಂಬಿಕೆಯ ಪರೀಕ್ಷೆಗಳು ನಮ್ಮ ಹಾದಿಯಲ್ಲಿ ಬರುತ್ತಾ ಇರುವವು. ಆದರೆ ಯೆಹೋವನಲ್ಲಿ ಅಚಲ ನಂಬಿಕೆಯು ನಮ್ಮನ್ನು ಪೋಷಿಸುವುದು. ಯಾಕೋಬನು ಬರೆದುದು: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.” (ಯಾಕೋ. 1:2, 3) ಅಷ್ಟುಮಾತ್ರವಲ್ಲದೆ, ನಮ್ಮ ತಾಳ್ಮೆಯು ಯೆಹೋವನಿಗಾಗಿ ನಮಗಿರುವ ಪ್ರೀತಿಯನ್ನು ತೋರಿಸುತ್ತದೆ ಹಾಗೂ ಇದು ನಮಗೆ ತುಂಬ ಆನಂದವನ್ನು ತರುತ್ತದೆ! ಪ್ರಿಯ ಸಹೋದರರೇ, ಯೆಹೋವನು ನಮ್ಮಲ್ಲಿ ಒಬ್ಬೊಬ್ಬರನ್ನೂ ಬೆಂಬಲಿಸುವನೆಂಬ ಆಶ್ವಾಸನೆ ನಿಮಗಿರಲಿ. ನಾವು ನಂಬಿಗಸ್ತರಾಗಿ ಉಳಿಯುವಲ್ಲಿ, ನಾವು ಹೊಸ ಲೋಕವನ್ನು ಪ್ರವೇಶಿಸಲು ಆತನು ತಪ್ಪದೆ ನಮಗೆ ಸಹಾಯಮಾಡುವನು. ನಾವು ಸಫಲರಾಗಬೇಕೆಂದು ಆತನು ಬಯಸುತ್ತಾನೆ.
ಆದುದರಿಂದ, ಎಳೆಯರೂ ವೃದ್ಧರೂ ಆಗಿರುವ ಸಹೋದರ ಸಹೋದರಿಯರೇ, ಮುಂದೆ ಇಡಲ್ಪಟ್ಟಿರುವ ಅದ್ಭುತಕರ ಆಶೀರ್ವಾದಗಳನ್ನು ಯಾವಾಗಲೂ ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುವಂತೆ ನಿಮ್ಮನ್ನು ಉತ್ತೇಜಿಸುತ್ತೇವೆ. “ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ” ಎಂದು ಬರೆದಂಥ ಅಪೊಸ್ತಲ ಪೌಲನಿಗಿದ್ದಂಥ ಮನೋಭಾವವೇ ನಮಗೂ ಇರಲಿ. (ರೋಮಾ. 8:18) ಯಾವುದೇ ರೀತಿಯ ಕಷ್ಟವನ್ನು ಎದುರಿಸುವಾಗ ಯೆಹೋವನ ಮೇಲೆ ಆತುಕೊಳ್ಳಿರಿ. ತಾಳಿಕೊಳ್ಳಿರಿ, ಮತ್ತು ಎಂದೂ ಪ್ರಯತ್ನವನ್ನು ನಿಲ್ಲಿಸದಿರಿ. ಹಾಗೆ ಮಾಡಿದ್ದಕ್ಕಾಗಿ ನೀವು ಎಂದಿಗೂ ವಿಷಾದಿಸದಿರುವಿರಿ. ದೇವರ ವಾಕ್ಯವು ನಮಗೆ ಈ ಆಶ್ವಾಸನೆಯನ್ನು ಕೊಡುತ್ತದೆ: “ನೀತಿವಂತನೋ ತನ್ನ ನಂಬಿಕೆಯಿಂದಲೇ ಬದುಕುವನು.”—ಹಬ. 2:4.
ನಿಮ್ಮ ಸಹೋದರರು,
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ