ತೈಲ ನಮಗೆ ಅನ್ಯಮಾರ್ಗವಿದೆಯೇ?
ತೈಲ. ಚೆಲ್ಲಿದಾಗ ಅದು ಸಮುದ್ರವನ್ನು ನಯವಾಗಿ ಕರಿ ಪದರಾಗಿ ಹಬ್ಬಿ ಮುಟ್ಟಿದ್ದನ್ನು ಉಸಿರು ಕಟ್ಟಿಸು ಕೊಲ್ಲುತ್ತದೆ. ಅದನ್ನು ಸುಡುವಲ್ಲಿ, ಅದು ಶ್ವಾಸಕೋಶವನ್ನು ಕಾಯಿಲೆ ಬೀಳಿಸುವ, ಮರಗಳನ್ನು ಮುದುರಿಸುವ ಮತ್ತು ನಮ್ಮ ಗ್ರಹಕ್ಕೆ ಸಸ್ಯಾಗಾರ ಪರಿಣಾಮ ಎಂಬ “ಜ್ವರ”ವನ್ನು ಬರಿಸುವ ಹಬೆಯನ್ನು ಬಿಡುಗಡೆಮಾಡುತ್ತದೆ. ಆದರೂ, ಇಂದಿನ ಜಗತ್ತು ಇದರ ಮೇಲೆ ತೀರಾ ಹೊಂದಿಕೊಂಡಿದೆ. ನಾವು ಎಷ್ಟು ತೈಲವನ್ನು ಉಪಯೋಗಿಸುತ್ತೇವೆಂದರೆ, ನಾವು ನಮಗೆ ವಿಷಹಾಕಿ ಮುಗಿಸುವ ಮೊದಲು ಅದೇ ಖರ್ಚಾಗಿ ಹೋಗುವುದೆಂದು ಕೆಲವರ ಭಾವನೆ.
ಎಣ್ಣೆ ಎಬ್ಬಿಸುವ ಈ ಸಮಸ್ಯೆಗಳಿಂದಾಗಿ ಇಂದು ಹೆಚ್ಚು ಜನರು ಇಂಧನದ ಸಂಬಂಧದಲ್ಲಿ ನಮಗೆ ಎಣ್ಣೆಬಿಟ್ಟರೆ ಅನ್ಯಮಾರ್ಗವಿದೆಯೇ ಎಂದು ಕೇಳುವುದರಲ್ಲಿ ಆಶ್ಚರ್ಯವಿಲ್ಲ. ಮೋಟಾರು ವಾಹನ ಈ ಪ್ರಶ್ನೆಗೆ ಒಂದು ಯೋಗ್ಯ ನಾಭಿ. ಲೋಕದ ಪರಿಮಿತ ತೈಲಸಂಗ್ರಹವನ್ನು ಗಟಗಟನೆ ಕುಡಿಯುವುದರಲ್ಲಿ ಅತ್ಯಂತ ವೇಗಿಯಾದ ಈ ವಾಹನ ಮಾಲಿನ್ಯಗ್ರೇಸರನೂ ಆಗಿದೆ. ನಮ್ಮ ಆಗಲೇ ಮುತ್ತಿಗೆ ಹಾಕಲ್ಪಟ್ಟಿರುವ ವಾತಾವರಣಕ್ಕೆ ಪ್ರತಿ ವರ್ಷ ಸುಮಾರು 40 ಕೋಟಿ ಟನ್ನು ಕಾರ್ಬನ್ ಸಂಯುಕ್ತ ಅನಿಲವನ್ನು ಇದು ಎಸೆಯುತ್ತದೆ. ಆದರೆ, ಕಾರ್ ವಾಹನ ನಡಿಸಲು ಇರುವ ಮಾರ್ಗವು ಯಾವುದರ ಮೂಲ ಧಾತು ತೈಲವಾಗಿದೆಯೋ ಆ ಪೆಟ್ರೋಲ್ ಮಾತ್ರವೋ?
ಅಲ್ಲ. ಇತರ ಇಂಧನಗಳೂ ಇವೆ. ಸೂರ್ಯಶಕ್ತಿ ಮತ್ತು ವಿದ್ಯುತ್ತಿನಿಂದ ನಡೆಯುವ ವಾಹನಗಳ ಸಂಬಂಧದಲ್ಲಿ ವಿಜ್ಞಾನಿಗಳು ಇನ್ನೂ ಪ್ರಯೋಗ ನಡಿಸುತ್ತಿದ್ದಾರೆ. ಆದರೆ ಈಗ ಮುನ್ನರಿಯಸಾಧ್ಯವಿಲ್ಲದ ಯಾವುದೋ ಮುನ್ನಡೆಯಾಗದಿದ್ದಲ್ಲಿ ಸಮೀಪಭವಿಷ್ಯದಲ್ಲಿ ಪೆಟ್ರೋಲ್ ಕಾರುಗಳ ಸ್ಥಾನದಲ್ಲಿ ಇಂಥ ವಾಹನಗಳು ಬರುವುದನ್ನು ನಾವು ನೋಡೆವು.
ಜಲಜನಕವು ಈ ಆಶಾಜನಕ ಮೋಟಾರು ಇಂಧನವಾಗಬಹುದು. ಜಲಜನಕವು ಪೆಟ್ರೋಲಿಗಿಂತ ಕಡಿಮೆ ಮಲಿನಕಾರಕ ಮಾತ್ರವಲ್ಲ, ಅದು ಬೇಗನೆ ಖರ್ಚಾಗಿ ಸಹ ಹೋಗದು. ವಿಶ್ವದ ಅತ್ಯಂತ ಹೇರಳ ಮೂಲಧಾತು ಇದಾಗಿದೆ. ಆದರೆ ಇಂದು, ಈ ಜಲಜನಕದಿಂದ ನಡೆಯುವ ವಾಹನ, ದೂರಭವಿಷ್ಯದಲ್ಲಿ, ಯಂತ್ರವಿಜ್ಞಾನ ಈ ವಿಚಾರವನ್ನು ಬೆನ್ನಟ್ಟಿ ಹಿಡಿದ ಬಳಿಕ ಮಾತ್ರ ಇರುವ ಸಾಧ್ಯತೆಯಾಗಿದೆ.
ಮದ್ಯಸಾರ ಇಂಧನಗಳು
ನಮಗೆ ಹೆಚ್ಚು ಸಮೀಪವಿರುವ ಭವಿಷ್ಯತ್ತಿನ ವಿಷಯವೇನು? ಕಾರು ಮತ್ತು ಲಾರಿಗಳಲ್ಲಿ ತೈಲಮೂಲವಲ್ಲದ ಎರಡು ವಿಧದ ಇಂಧನಗಳನ್ನು ಆಗಲೇ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ: ಮದ್ಯಪಾನ ಮತ್ತು ಪ್ರಾಕೃತಿಕ ಅನಿಲ. ಇಥನಾಲ್ ಎಂಬ ಶುದ್ಧ ಮದ್ಯಸಾರವನ್ನು ಕಬ್ಬಿನಿಂದ ಬಟ್ಟಿಯಿಳಿಸಲಾಗುತ್ತದೆ. 1987ರಲ್ಲಿ ಬ್ರೇಸಿಲ್ ದೇಶದಲ್ಲಿ ಮಾರಲ್ಪಟ್ಟ ಹೊಸ ಕಾರುಗಳಲ್ಲಿ 90 ಸೇಕಡಾಕ್ಕಿಂತಲೂ ಹೆಚ್ಚು ಕಾರುಗಳನ್ನು ಇಥನಾಲ್‌ನಿಂದ ನಡೆಸಲಾಗುತ್ತಿತ್ತು. ಆದರೆ ತೈಲದ ದರ ಕೆಳಗಿಳಿದಿರುವದರಿಂದ, ಇತ್ತೀಚೆಗಿನ ತಿಂಗಳುಗಳಲ್ಲಿ ಇದು 69 ಸೇಕಡಾಕ್ಕಿಳಿದಿದೆ. ಇಥನಾಲ್ ಪೆಟ್ರೋಲಿಗಿಂತ ನಿರ್ಮಲ ಮಾತ್ರವಲ್ಲ, ಅದು ಮತ್ತೆ ಭರ್ತಿಮಾಡಬಲ್ಲ ಮೂಲದಿಂದಲೂ ಬರುತ್ತದೆ. ನಾವು ಹೆಚ್ಚು ಇಥನಾಲ್ ಉತ್ಪಾದಿಸಲು ಹೆಚ್ಚು ಕಬ್ಬು, ಬೀಟ್‌ಗೆಣಸು, ಕಸಾವಗೆಣಸು ಮತ್ತು ಜೋಳವನ್ನು ಯಾವಾಗಲೂ ಬೆಳೆಸಬಲ್ಲೆವು.
ಆದರೆ ಒಂದು ಸಮಸ್ಯೆ ಈ ಇಥನಾಲ್ ಬೆಳೆಸಲು ಬೇಕಾಗುವ ಜಮೀನು. ಅಮೆರಿಕವು ತನ್ನ ವಾರ್ಷಿಕ ಜೋಳದ ಬೆಳೆಯ 40 ಸೇಕಡಾದಷ್ಟು ಸ್ಥಳವನ್ನು ತನಗೆ ಅವಶ್ಯವಿರುವ ಮೋಟಾರು ಇಂಧನಕ್ಕೆ ಬೇಕಾಗುವ ಕೇವಲ 10 ಸೇಕಡಾ ಇಥನಾಲ್‌ನ್ನು ಉತ್ಪಾದಿಸಲು ಬದಿಗಿಡಬೇಕಾದೀತು.
ತಗಲುವ ವೆಚ್ಚ ಇನ್ನೊಂದು ಸಮಸ್ಯೆ. ಒಂದು ಗಣನೆಗನುಸಾರವಾಗಿ, ಇಥನಾಲ್ ಉತ್ಪಾದಿಸುವ ಬೆಳೆಗಳು, ಅವುಗಳನ್ನು ಇಂಧನವಾಗಿ ಮಾರ್ಪಡಿಸುವಾಗ ಅವುಗಳ ಶಕ್ತಿಸಾಮರ್ಥ್ಯದಲ್ಲಿ 30ರಿಂದ 40 ಸೇಕಡಾದಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆಂದು ಕೆಲವು ಪರಿಣತರ ತೀರ್ಮಾನ.
ಮೆಥನಾಲ್ ಎಂಬ ಪ್ರಾಕೃತಿಕ ಅನಿಲ ಅಥವಾ ಇದ್ದಲಿನಿಂದ ಬರುವ ಮದ್ಯಸಾರಕ್ಕೆ ಇದಕ್ಕಿಂತ ಕಡಿಮೆ ವೆಚ್ಚ ತಗಲುತ್ತದೆ. ಕೆಲವು ಇಂಧನಗಳು ಜಡಪ್ರಕೃತಿಯ ಶಕ್ತಿಯನ್ನು ಕೊಡುತ್ತವೆ. ಆದರೆ ಮೆಥನಾಲ್ ಕಾರಿಗೆ ಹೆಚ್ಚು ಹುಮ್ಮಸ್ಸನ್ನು ಒದಗಿಸುತ್ತದೆ. ವಾಸ್ತವವೇನಂದರೆ, ರೇಸಿಂಗ್ಸ್ ಕಾರುಗಳು, ಮೆಥನಾಲ್ ಪೆಟ್ರೋಲಿಗಿಂತ ಕಡಿಮೆ ಸ್ಫೋಟಕವಾಗಿರುವುದರಿಂದ ಅನೇಕ ವೇಳೆ ಮೆಥನಾಲ್‌ನ್ನೇ ಉಪಯೋಗಿಸುತ್ತವೆ. ಜೂನ್, 1989ರಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್, ಅನ್ಯ ಇಂಧನಗಳ ಪ್ರಸ್ತಾಪವನ್ನೆತ್ತುತ್ತಾ, 1995ರೊಳಗೆ ಅಮೆರಿಕದ ಐದು ಲಕ್ಷ ಕಾರುಗಳನ್ನು ಮೆಥನಾಲ್‌ನಿಂದ ನಡೆಸಬೇಕೆಂದು ಕರೆಕೊಟ್ಟರು. ಈ ಯೋಜನೆಯಿಂದ ವಾಹನಗಳು ವಿಸರ್ಜನಾಪದಾರ್ಥ ತುಂಬಾ ಕಡಿಮೆಯಾಗುವುದೆಂದು ಸರಕಾರದ ವಾದ.
ಆದರೆ ಮೆಥನಾಲ್‌ಗೆ ಅದರ ಸ್ವಂತದ ಸಮಸ್ಯೆಗಳಿವೆ. ದಹನ ಸಮಯದಲ್ಲಿ ಅದು ಪೆಟ್ರೋಲಿಗಿಂತ ಕಡಿಮೆ ಕಾರ್ಬನನನ್ನು ವಿಸರ್ಜಿಸುತ್ತದಾದರೂ ಅದು ಇನ್ನೊಂದು ಮಲಿನಸಾಧನವನ್ನು ಕಾರುತ್ತದೆ. ಅದೇ ಕ್ಯಾನ್ಸರ್ ಬರಿಸುತ್ತದೆಂದು ಹೇಳಲಾಗುವ ಫಾರ್ಮಲ್ ಡಿ ಹೈಡ್ ಎಂಬ ವಸ್ತು.
ಪ್ರಾಕೃತಿಕ ಅನಿಲ
ಸಾಮಾನ್ಯವಾಗಿ ಮನೆಕಾಯಿಸಲು ಮತ್ತು ಅಡಿಗೆಗೆ ಉಪಯೋಗಿಸುವ ಈ ಪ್ರಾಕೃತಿಕ ಅನಿಲಕ್ಕೆ ವಾಹನದ ಇಂಧನವಾಗಲು ಗಮನಾರ್ಹ ಗುಣಗಳಿವೆ. ಇದೊಂದು ಸಾಮಾನ್ಯ ಮಿಶ್ರಣ. ಅಧಿಕಾಂಶ ಮೆಥೇನ್ ಆಗಿರುವ ಇದು ನಿರ್ಮಲವಾಗಿ ಉರಿಯುತ್ತದೆ. ಪೆಟ್ರೋಲಿಗಿಂತ ಎಷ್ಟೋ ಕಡಿಮೆ ಕಾರ್ಬನನನ್ನು ಇದು ವಿಸರ್ಜಿಸುತ್ತದೆ. ಡೀಸೆಲ್ ಇಂಧನದಿಂದ ಹೊರಡುವ ಕಣಗಳಿರುವ ಹೊಗೆ ಮಸಿ ಇದರಲ್ಲಿಲ್ಲ. ಇಷ್ಟು ನಿರ್ಮಲವಾದ ಇಂಧನವನ್ನು ಉಪಯೋಗಿಸುವ ಇಂಜಿನುಗಳನ್ನು ಆರೈಕೆಮಾಡುವುದು ಸುಲಭ. ಈ ಪ್ರಾಕೃತಿಕ ಗ್ಯಾಸ್ ತುಲನಾತ್ಮಕವಾಗಿ ಅಗ್ಗ ಮಾತ್ರವಲ್ಲದೇ ಹೇರಳವೂ ಆಗಿದೆ.
ಈ ಗ್ಯಾಸಿನಿಂದ ನಡೆಯುವ ಕಾರುಗಳು ಆಗಲೇ ಇಟೆಲಿ, ರಷ್ಯಾ, ನ್ಯೂಝೀಲೆಂಡ್ ಮತ್ತು ಕೆನಡಾದಲ್ಲಿ ಉಪಯೋಗದಲ್ಲಿವೆ. ಆದರೆ ಈ ಅನಿಲ ಸಮಸ್ಯೆರಹಿತವಲ್ಲ. ಒಂದು ಕಾರನ್ನು ಪೆಟ್ರೋಲಿನಿಂದ ಗ್ಯಾಸಿಗೆ ರೂಪಾಂತರಿಸುವುದು ಖರ್ಚಿನ ಕೆಲಸ. ಇದಲ್ಲದೇ (ಸಂಕುಚಿತ) ಅನಿಲಕ್ಕೂ ಹೆಚ್ಚು ಸ್ಥಳ ಬೇಕು. ಕಾರಿನ ಹಿಂಭಾಗದಲ್ಲಿ ಅನೇಕ ದೊಡ್ಡ ಶೇಖರಣೆತೊಟ್ಟಿಗಳನ್ನು ಇಡಬೇಕಾಗುತ್ತದೆ. ಇಷ್ಟಾದರೂ ಕಾರು ತುಲನಾತ್ಮಕವಾಗಿ ಸ್ವಲ್ಪ ದೂರ ಹೋಗುತ್ತದಲ್ಲದೆ ಅದನ್ನು ಪದೇ ಪದೇ ಪುನಃ ತುಂಬಿಸಬೇಕಾಗುತ್ತದೆ.
ಈ ಪುನಃ ತುಂಬಿಸುವಿಕೆಯು ಅನ್ಯಇಂಧನಗಳಿಗೆ ಸಾಮಾನ್ಯವಾಗಿರುವ ಒಂದು ದೊಡ್ಡ ತಡೆಗೆ ನಮ್ಮನ್ನು ಬರಿಸುತ್ತದೆ. ಈ ಇಂಧನವನ್ನು ಮಾರುವ ಸ್ಟೇಶನ್‌ಗಳು ವಿರಳವಾಗಿರುವಾಗ ಈ ಅನ್ಯ ಇಂಧನದ ಕಾರನ್ನು ಕೊಳ್ಳಲು ಯಾರು ಮನಸ್ಸು ಮಾಡಾನು? ಅದೇ ರೀತಿ, ಜನರು ಕೊಳ್ಳುವರೆಂಬ ಯಾವ ಆಶ್ವಾಸನೆಯೂ ಇಲ್ಲದಿರುವಾಗ ಈ ಅನ್ಯಇಂಧನವನ್ನು ಸರ್ವಿಸ್ ಸ್ಟೇಶನ್‌ಗಳು ಏಕೆ ಒದಗಿಸುವವು? ಹೀಗೆ, ಯಾವುದು ಮೊದಲು, ಇಂಧನಕೊಳ್ಳುವವರೋ ಮಾರುವವರೋ?
ಈ ಉಭಯಸಂಕಟಕ್ಕೆ ಒಂದು ಪರಿಹಾರ, ಕಾರುಗಳು ಎರಡು ಇಂಧನಗಳಿಂದ ನಡೆಯುವವುಗಳಾಗಿರಬೇಕು ಎಂಬುದೇ ಎಂದು ಹೇಳಲಾಗುತ್ತದೆ. ಈಗಾಗಲೇ ಪ್ರಾಕೃತಿಕ ಅನಿಲ ಮತ್ತು ಪೆಟ್ರೋಲ್, ಪ್ರಾಕೃತಿಕ ಅನಿಲ ಮತ್ತು ಡೀಸೆಲ್, ಮದ್ಯಸಾರ ಮತ್ತು ಪೆಟ್ರೋಲ್ ಅಥವಾ ಒಂದೇ ಟ್ಯಾಂಕಿನಲ್ಲಿ ಎರಡು ಇಂಧನಗಳ ವಿವಿಧ ಮಿಶ್ರಣಗಳಿಂದ ನಡೆಯುವ ಕಾರುಗಳಿವೆ. ಇಂಥ ಎರಡು ಇಂಧನಗಳ ಕಾರನ್ನು ಪುನಃ ತುಂಬಿಸುವುದು ಸುಲಭವಾಗಬಹುದಾದರೂ ಅವು, ಒಂದೇ ನಿರ್ಮಲ ಇಂಧನದಲ್ಲಿ ನಡಿಸಲು ರಚಿಸಲ್ಪಟ್ಟಿರುವ ಕಾರುಗಳಷ್ಟು ಶುದ್ಧವೂ ಕಾರ್ಯಸಾಧಕವೂ ಆಗಿರಲಿಕ್ಕಿಲ್ಲ.
ಗುಪ್ತ ತೈಲಾಶಯ
ನಮಗೆ ತೈಲದೊಂದಿಗಿರುವ ತೊಂದರೆಯನ್ನು ಕಡಿಮೆಮಾಡುವ ಅತ್ಯಂತ ತತ್‌ಕ್ಷಣದ ವಿಧವು ಅದನ್ನು ಹೆಚ್ಚು ಕಾರ್ಯಸಾಧಕವಾಗಿ ಉಪಯೋಗಿಸುವುದೇ—ಇದರಿಂದ ಎಣ್ಣೆಯಿಂದಾಗಿ ಏಳುವ ಮಾಲಿನ್ಯ ಕಡಿಮೆಯಾಗುವುದಿಲ್ಲವಾದರೂ ಅನ್ಯ ಇಂಧನಗಳನ್ನು ಕಂಡುಹಿಡಿಯುವ ಮೊದಲು ಬರಬಹುದಾದ ತೀರಾ ಅಭಾವವನ್ನು ಇದು ನಿವಾರಿಸಬಹುದು. ಅಮೆರಿಕದ ಒಬ್ಬ ಶಾಸಕನ ಹೇಳಿಕೆಯೇನಂದರೆ ಅಮೆರಿಕನರನ್ನು ಗ್ಯಾಲನ್ನಿಗೆ ಸರಾಸರಿ 35ಮೈಲು ಕಾರು ಓಡಿಸುವಂತೆ ಮಾಡುವುದರಿಂದ, “2000 ಇಸವಿಯೊಳಗೆ ಪ್ರತಿದಿನ 660 ಸಾವಿರ ಬ್ಯಾರಲ್ ಎಣ್ಣೆ ಉಳಿಯುವುದು. ಮತ್ತು ತೈಲಪ್ರದೇಶಕ್ಕಿರುವ ಜೀವಮಾನವಾದ 30 ವರ್ಷಗಳಲ್ಲಿ ಅದರ ಮೊತ್ತ 780 ಕೋಟಿ ಬ್ಯಾರಲ್‌ಗಳಾಗುವುದು. ಇದು ತೈಲ ಉದ್ಯಮವು ಅಲಾಸ್ಕದಲ್ಲಿ ಕಂಡುಹಿಡಿಯಬಹುದಾದ ಎಣ್ಣೆಗಿಂತ ಎಷ್ಟೋ ಹೆಚ್ಚು.”—ನ್ಯೂಯೋರ್ಕ್ ಟೈಮ್ಸ್ ಎಪ್ರಿಲ್ 15, 1989.
ಆದರೂ, ಕಾರ್ಯಸಾಧಕತೆ ದೊಡ್ಡ ವ್ಯತ್ಯಾಸವನ್ನು ಮಾಡಬಹುದಾದ ಅಮೆರಿಕದಲ್ಲಿ ಇದನ್ನು ಹೆಚ್ಚು ಕಡೆಗೆಣಿಸಲಾಗುತ್ತದೆ. ಸರ್ವಲೋಕದ ಎಲ್ಲಾ ಕಾರುಗಳು ಸೇರಿ ಎಷ್ಟು ದೂರ ಪ್ರಯಾಣಿಸುತ್ತವೋ ಸುಮಾರು ಅಷ್ಟೇ ದೂರ ಅಮೆರಿಕದ ಕಾರುಗಳು ಪ್ರಯಾಣಿಸುತ್ತವೆ. ಹೀಗೆ, ವಿಶೇಷವಾಗಿ, ಅಮೆರಿಕನರಿಗೆ ತಮ್ಮ ಕಣ್ಣೆದುರಿನಲ್ಲಿಯೇ ಅಥವಾ ಎಲ್ಲಿ ಪರಿಣಾಮಕಾರಿಯಲ್ಲದ ಪೆಟ್ರೋಲ್ ನುಂಗುವ ಇಂಜಿನುಗಳು ಅಡಗಿವೆಯೋ ಅಲ್ಲಿ ಅಂದರೆ, ಕಾರು ಮತ್ತು ಟ್ರಕ್ಕುಗಳ ಮುಚ್ಚಳದ ಕೆಳಗೆ ಒಂದು ದೊಡ್ಡ, ಇನ್ನೂ ಹೊರತೆಗೆಯದ ತೈಲಾಶಯವಿದೆ.
ಕಾರುಗಳು ಹೋಗುವ ದೂರವನ್ನು ಹೆಚ್ಚಿಸಿ ಖರ್ಚು ಕಡಿಮೆ ಮಾಡಸಾಧ್ಯವಿದೆಯೇ? ಹೌದು, ಗ್ಯಾಲನ್ನಿಗೆ 35 ಮೈಲು ಪ್ರಯಾಣ ಆಗಲೇ ಸುಮಾರು ಸಾಮಾನ್ಯವಾಗಿದೆ. 1970ಗಳಲ್ಲಿ ತೈಲದ ಬೆಲೆ ತೀರಾ ಹೆಚ್ಚಾದಾಗ ಕಾರ್ಯಸಾಧಕ ಕಾರುಗಳನ್ನು ಮಾಡುವ ಅಗತ್ಯ ಬಿತ್ತು. ಅಂದಿನಿಂದ ಕಾರು ತಯಾರಕರು ಹೊಸ ಇಂಜಿನ್ ಮಾದರಿ, ಹಗುರ ಹಾಗೂ ಹೆಚ್ಚು ಬಲಾಢ್ಯವಾದ ವಸ್ತುಗಳಿಂದ ಮಾಡಿದ ಬಾಡಿ ಮತ್ತು ಹೆಚ್ಚು ವಾಯುಚಲನ ವಿಜ್ಞಾನಕ್ಕನುಸಾರವಾದ ಆಕಾರದ ಕಾರುಗಳನ್ನು ರಚಿಸಿ ಅವುಗಳಿಗೆ ಹೆಚ್ಚು ಮೈಲು ಸಿಕ್ಕುವಂತೆ ಮಾಡಿದ್ದಾರೆ. ವೊಲ್ವೊ ಕಂಪೆನಿ ಗ್ಯಾಲನ್ನಿಗೆ 71 ಮೈಲು ಕೊಡುವ ಕಾರನ್ನು ತಯಾರಿಸಿದೆ. ವೋಲ್ಕ್ಸ್‌ವ್ಯಾಗನ್ ಗ್ಯಾಲನ್ನಿಗೆ 124 ಮೈಲು ಕೊಡುತ್ತದೆ.
ಅದರೆ ಒಂದು ಸಮಸ್ಯೆ. ಈ ಕಾರುಗಳಲ್ಲಿ ಯಾವುದನ್ನೂ ನೀವು ಖರೀದಿಸಲಾರಿರಿ. ಅವುಗಳನ್ನು ಮಾರಾಟಕ್ಕಾಗಿ ತಯಾರಿಸಲಾಗುವುದಿಲ್ಲ. 1986ರಲ್ಲಿ ತೈಲದ ಬೆಲೆ ಕೆಳಗಿಳಿದುದರಿಂದ, ಕಾರ್ ಕೊಳ್ಳುವವರು ಇಂಧನದ ಕಾರ್ಯಸಾಧಕತೆಯನ್ನು ಚಿಂತಿಸುವುದಿಲ್ಲವೆಂದು ಕಾರ್ ತಯಾರಕರ ಅಭಿಪ್ರಾಯ. ಪ್ಯೂಜಿಯೊ ಕಂಪೆನಿ ತನ್ನ ಗ್ಯಾಲನ್ನಿಗೆ 73 ಮೈಲುಗಳಷ್ಟು ಕೊಡುವ ಕಾರನ್ನು, ಸಂಧಿಗ್ಧ ಸಮಯದ ಕಾರೆಂದು ಕರೆದು ಅದನ್ನು ಪೆಟ್ರೋಲ್ ಬೆಲೆ ಏರುವ ಸಮಯಕ್ಕಾಗಿ ಕಾದಿರಿಸಿದೆ. ಆದರೆ ಅಮೆರಿಕದ ಹೆಚ್ಚಿನ ಕಾರ್ ತಯಾರಕರಲ್ಲಿ ಹೀಗೆ ಕಾಯುತ್ತಿರುವ “ಸಂಧಿಗ್ಧ ಸಮಯದ ಕಾರ್‌ಗಳೂ ಇಲ್ಲವೆಂದು ವರ್ಲ್ಡ್ ವಾಚ್ ಪತ್ರಿಕೆ ತಿಳಿಸುತ್ತದೆ. ಅವರು ಈ ಹೊಸ ಇಂಧನ ಉಳಿಸುವ ಯಂತ್ರವಿಜ್ಞಾನದಲ್ಲಿ ಹಣ ಖರ್ಚುಮಾಡುವುದಿಲ್ಲ. ಇದೇಕೆ? ವರ್ಲ್ಡ್ ವಾಚ್ ಉತ್ತರಿಸುವುದು: “ಒಟ್ಟಾಭಿಪ್ರಾಯವೇನಂದರೆ, ಹೊಸ ಉತ್ಪಾದನೆಗಳ ವಿಕಾಸದ ಬದಲಿಗೆ ತ್ರೈಮಾಸಿಕ ಲಾಭ ಮತ್ತು ಬಂಡವಾಳದ ಬೆಲೆಯ ಮೇಲಿರುವ ಪೂರ್ವಮಗ್ನತೆಯೇ ಸಮಸ್ಯೆಯ ಭಾಗವಾಗಿದೆಯೆಂದು ಕಂಡುಬರುತ್ತದೆ.” ಇನ್ನೊಂದು ಮಾತಿನಲ್ಲಿ, ಈಗ ಹಣಮಾಡುವುದು ತರುವಾಯ ಸಂಕಟವನ್ನು ತಪ್ಪಿಸುವುದಕ್ಕಿಂತ ಹೆಚ್ಚು ಪ್ರಧಾನ.
ಆದರೆ ಈ ಸ್ವಾಭಿರುಚಿ ಕೇವಲ ದೊಡ್ಡ ಕಂಪೆನಿಗಳ ವೈಶಿಷ್ಟ್ಯವಲ್ಲ. ತಮ್ಮ ಗಿರಾಕಿಗಳಿಗೆ ಏನು ಬೇಕೆಂದು ತಿಳಿಯುವುದನ್ನು ಕಾರ್ ತಯಾರಕರು ಮುಖ್ಯವಾಗಿಟ್ಟುಕೊಳ್ಳುತ್ತಾರೆ. ಎಣ್ಣೆಯ ವಿಷಯದಲ್ಲಿ ಮಾನವಕುಲವು ತೀರಾವಲಂಬಿಯಾಗಿರುವದಕ್ಕೆ ಸದ್ಯಕ್ಕೆ ಯಾವ ಸುಲಭ ಉತ್ತರವೂ ಇಲ್ಲವೆಂದು ಅವರಿಗೆ ಚೆನ್ನಾಗಿ ಗೊತ್ತು. ಅನ್ಯ ಮಾರ್ಗಗಳಲ್ಲಿ ವಿನಿಮಯ ಸೇರಿದೆ. ಗಾಳಿಯನ್ನು ಮಲಿನಮಾಡದ ಮತ್ತು ಪೆಟ್ರೋಲ್ ಶೇಖರಣೆಯನ್ನು ಕಡಿಮೆ ಮಾಡದ ಕಾರ್‌ನಲ್ಲಿ ಹಳೆಯ ಗ್ಯಾಸ್—ಕುಡುಕ ಕಾರ್‌ನಷ್ಟು ಶಕ್ತಿ, ಹುಮ್ಮಸ್ಸು ಮತ್ತು ಸೌಕರ್ಯಗಳಿಲ್ಲ ಮತ್ತು ಇಂಧನವನ್ನು ಅಷ್ಟೊಂದು ಸೌಕರ್ಯದಿಂದ ಕೊಳ್ಳಲಾಗಲಿಕ್ಕಿಲ್ಲ.
ಹಾಗಾದರೆ ನೀವೇನು ಯೋಚಿಸುತ್ತೀರಿ? ತಮ್ಮ ಮಕ್ಕಳು ಅಥವಾ ಮಕ್ಕಳ ಮಕ್ಕಳು ಕಾರು ನಡಿಸುವ ಸಮಯ ವರೆಗೆ ಭಯಂಕರ ರೀತಿಯಲ್ಲಿ ಪ್ರಾರಂಭವಾಗದೇ ಇರಬಹುದಾದ ಸಂದಿಗ್ಧ ಪರಿಸ್ಥಿತಿಯನ್ನು ಹೋಗಲಾಡಿಸಲು ಜನರು ಈ ರೀತಿಯ ತ್ಯಾಗಮಾಡಲು ಮನಸ್ಸು ಮಾಡುತ್ತಿದ್ದಾರೋ? ಮನುಷ್ಯನು ತನ್ನ ಸಂತತಿಯ ಮುಂದಿನ ಆಸ್ತಿಯಾದ ಈ ಭೂಮಿಯೊಂದಿಗೆ ವರ್ತಿಸುವ ವಿಧವು “ಅದರ ಚಿಂತೆ ಯಾರಿಗಿದೆ?” ಎಂದು ಸಂಶಯಿಸದೇ ಮಹಾಶಬ್ಧದಿಂದ ಉತ್ತರಕೊಡುವಂತೆ ಕಾಣುತ್ತದೆ.
ಅಂತಿಮ ವಿಶ್ಲೇಷಣೆಯಲ್ಲಿ, ಈ ಗ್ರಹವನ್ನು ಹಾಳುಗೆಡವದೆ ನಮ್ಮ ಇಂಧನಾವಶ್ಯಕತೆಯನ್ನು ಎದುರಿಸುವುದರಲ್ಲಿ ತೈಲಕ್ಕೆ ಅನ್ಯ ಮಾರ್ಗವನ್ನು ಹುಡುಕುವುದಕ್ಕಿಂತ ಹೆಚ್ಚಿನದು ಸೇರಿದೆ. ನಮಗೆ ಅನ್ಯ ಮನೋಭಾವಗಳು ಅಗತ್ಯ. ದುರಾಶೆ ಮತ್ತು ಸಮೀಪದೃಷ್ಟಿ ದೋಷದ ಬದಲು ಬೇರೆ ಗುಣಗಳು ಅವಶ್ಯ. ಇಂಧನಗಳು ಸೇರಿರುವ ಈ ಗ್ರಹದ ಮೂಲಸಂಪತ್ತುಗಳನ್ನು ಮನುಷ್ಯನು ಅನುಚಿತವಾಗಿ ನಿರ್ವಹಿಸಿರುವ ವಿಷಯವು, ಬೈಬಲು ಬಹು ಪೂರ್ವದಲ್ಲಿ ಹೇಳಿರುವುದನ್ನು ರುಜುಪಡಿಸುತ್ತಾ ಆಗಲೇ ಇರುವ ಸಾಬೀತುಗಳ ರಾಶಿಗೆ ಇನ್ನೊಂದನ್ನು ಸೇರಿಸುತ್ತದೆ. ಅದೇನಂದರೆ, ಮನುಷ್ಯನಿಗೆ ತನ್ನನ್ನು ನಿರ್ವಹಿಸಿಕೊಳ್ಳುವ ಹಕ್ಕಾಗಲಿ ಸಾಮರ್ಥ್ಯವಾಗಲಿ ಇಲ್ಲವೇ ಇಲ್ಲ.—ಯೆರೆಮೀಯ 10:23.
ಆದರೆ ಬೈಬಲಿನ ಶಿಕ್ಷಾರ್ಥಿಗಳಿಗೆ, ಕಥೆ ಇಲ್ಲಿ ಮುಕ್ತಾಯವಾಗುವುದಿಲ್ಲ. ಸಮೀಪ ಭವಿಷ್ಯತ್ತಿನಲ್ಲಿ ನಮ್ಮ ಸೃಷ್ಟಿಕರ್ತನು ಮಾನವ ಸಮಾಜದ ವ್ಯವಸ್ಥಾಪನೆಯಲ್ಲಿ ಹೆಚ್ಚು ಆಸಕ್ತಿ ವಹಿಸುವನೆಂದು ಬೈಬಲು ಆಶ್ವಾಸನೆ ನೀಡುತ್ತದೆ. ಈ ಗ್ರಹದ ಹೇರಳವಾದ ಮೂಲಸಂಪತ್ತುಗಳನ್ನು ನಮ್ಮ ಬೀಡನ್ನು ಮಲಿನಗೊಳಿಸದ ರೀತಿಯಲ್ಲಿ ಹೇಗೆ ಉಪಯೋಗಿಸಬೇಕೆಂದು ಆತನು ಕಲಿಸುವನೆಂಬುದು ನಿಸ್ಸಂಶಯ. ನಿರೀಕ್ಷಾಭವಿಷ್ಯಕ್ಕೆ, ಅತ್ಯುತ್ತಮ ಅನ್ಯ ಮಾರ್ಗಕ್ಕಿಂತಲೂ ಇದು ಎಷ್ಟೋ ಪ್ರಾಮುಖ್ಯ. ಇರುವ ಅನ್ಯ ಮಾರ್ಗ ಇದೊಂದೇ.—ಯೆಶಾಯ 11:6-9. (g89 11/22)
[ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]
ದುರಾಶೆ ಮತ್ತು ಸಮೀಪದೃಷ್ಟಿಕೋನಕ್ಕೆ ಬದಲೀ ಗುಣಗಳು ನಮಗೆ ಬೇಕು