ಯುವ ಜನರು ಪ್ರಶ್ನಿಸುವುದು. . .
ಮಾಡೆಲಿಂಗ್ ಜೀವನೋಪಾಯ ಮತ್ತು ಸೌಂದರ್ಯ ಸ್ಪರ್ಧೆಗಳ ವಿಷಯವೇನು?
“ಕಳೆದ ವರ್ಷ ನ್ಯೂ ಯಾರ್ಕಿಗೆ ಪ್ರಯಾಣ ಮಾಡುತ್ತಿದ್ದಾಗ ಒಂದು ಹೊಟೇಲಿನ ಧಣಿ ನನ್ನ ಅಮ್ಮನಿಗೆ, ‘ನಿಮ್ಮ ಮಗಳನ್ನು ಮಾಡೆಲಿಂಗ್ ಸ್ಕೂಲಿಗೆ ಕಳುಹಿಸಿ. . . .ಅವಳು ಅಂದವಾಗಿದಾಳ್ದೆ’” ಎಂದು ಹೇಳಿದಳು ಎಂದು ನೆನಪಿಸಿಕೊಂಡಳು, 12 ವಯಸ್ಸಿನ ಏಮಿ.
ಅನೇಕ ಆಕರ್ಷಕ ಯುವ ಜನರಿಗೆ ಇದೇ ರೀತಿಯ ಅನುಭವವಾಗಿದೆ. 15 ವಯಸ್ಸಿನ ರೆಸೀನ್ಗೆ ಒಬ್ಬನು ಫೋನ್ ಮಾಡಿ ಅವಳೂ ಅವಳ ತಂಗಿಯೂ ಮಾಡೆಲಿಂಗ್ ಜೀವನೋಪಾಯದಲ್ಲಿ ಆಸಕ್ತಿ ತಕ್ಕೊಳ್ಳುವಂತೆ ಪ್ರಯತ್ನಿಸಿದನು. ದಕ್ಷಿಣ ಆಫ್ರಿಕದ ಒಬ್ಬ ಯುವತಿಯನ್ನು ಅವಳು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕೇಳಲಾಯಿತು. ಇಂಥ ತುಂಬ ಆದಾಯದ ನೀಡಿಕೆ ಕೇವಲ ಹುಡುಗಿಯರಿಗೆ ಸೀಮಿತವಾಗಿಲ್ಲ. ಯುವ ಜೋನತನನಿಗೆ ಪುರುಷ ಮಾಡೆಲ್ ಆಗುವ ಕೆಲಸದ ನೀಡಿಕೆ ದೊರೆಯಿತು.
ಹೌದು, ಜಗದ್ವ್ಯಾಪಕವಾಗಿ ಎಲ್ಲ ವಯಸ್ಸಿನ ಯುವಕ, ಯುವತಿಯರನ್ನು ಮಾಡೆಲಿಂಗ್ ಜೀವನೋಪಾಯ, ಸೌಂದರ್ಯ ನೇತ್ರೋತ್ಸವ, ಇತ್ಯಾದಿಗಳಿಗೆ ಸೇರಿಸಲಾಗುತ್ತದೆ. ಯುನೊಯಿಟೆಡ್ ಸ್ಟೇಟ್ಸಿನಲ್ಲಿಯೆ ಪ್ರತಿ ವರ್ಷ ಸಾವಿರಾರು ಸೌಂದರ್ಯ ಸ್ಪರ್ಧೆಗಳು ನಡೆಯುತ್ತವೆಂದು ವರದಿಯಾಗಿದೆ. ವಿಜೇತರು ನಗದು, ಬಹುಮಾನ ಮತ್ತು ಸ್ಕಾಲರ್ಶಿಪ್ಗಳಲ್ಲಿ ಸಾವಿರಾರು ಡಾಲರುಗಳನ್ನು ಪಡೆಯುತ್ತಾರೆ. ಆಯ್ಕೆಗೊಂಡಿರುವ ಕೆಲವೇ ಮಂದಿಗೆ, ಸೌಂದರ್ಯ ಸ್ಪರ್ಧೆಗಳ ಫಲವಾಗಿ ತುಂಬ ಆದಾಯದ ಮನೋರಂಜನೆ ಮತ್ತು ಮಾಡೆಲಿಂಗ್ ಜೀವನೋಪಾಯಗಳು ಲಭ್ಯವಾಗಿವೆ.
ಒಬ್ಬ ಯುವತಿ ಹೇಳುವುದು: “ನನ್ನ ಜೀವಮಾನವೆಲ್ಲ ನಾನು ಫ್ಯಾಶನ್ ಮಾಡೆಲ್—ಸ್ಥಳೀಕ ಪತ್ರಿಕೆಗಳಿಗೆ ಮತ್ತು ಫ್ಯಾಶನ್ ಷೋಗಳಿಗೆ ಬಟ್ಟೆಗೆಳನ್ನು ಪ್ರದರ್ಶಿಸುವ ಮಾಡೆಲ್— ಆಗಬೇಕೆಂದಿದ್ದೆ. ಇದರಲ್ಲಿ ಒಂದು ತಾಸಿಗೆ 25ರಿಂದ 100 ಡಾಲರ್ ಸಂಪಾದನೆಯಿದೆ.” ಆದರೆ, ಕೆಲವು ಶ್ರೇಷ್ಠ ಮಟ್ಟದ ಮಾಡೆಲ್ಗಳು ದಿವಸಕ್ಕೆ 2,500 ಡಾಲರ್ಗಳನ್ನೂ ಸಂಪಾದಿಸುತ್ತಾರೆಂದು ವರದಿಯಿದೆ! ಆದುದರಿಂದ, ಹಲವು ಕ್ರೈಸ್ತ ಯುವ ಜನರು ತಮ್ಮ ಸೌಂದರ್ಯದ ಕಾರಣ ಇದನ್ನು ಸಂಪಾದಿಸುವಂತೆ ಪ್ರೇರಿಸಲ್ಪಡುವುದು ಆಶ್ಚರ್ಯವಲ್ಲ. ಇಂಥ ಪ್ರಶಂಸಾರ್ಹ ಕೆಲಸದ ಸಂದರ್ಭ ನಿಮಗೆ ಲಭ್ಯವಾಗುವಲ್ಲಿ ನೀವು ಹೇಗೆ ಪ್ರತಿವರ್ತನೆ ತೋರಿಸಬಹುದು?
ಸೌಂದರ್ಯ ಲಾಭದಾಯಕವಾಗಿರಬಲ್ಲದು
ಯೆಹೂದಿ ಕನ್ಯೆ ಎಸ್ತೇರಳ ಕುರಿತು, ಆಕೆ “ರೂಪವತಿಯೂ ಲಾವಣ್ಯವತಿಯೂ ಆಗಿದ್ದಳು” ಎಂದು ಹೇಳಲ್ಪಟ್ಟಿದೆ. (ಎಸ್ತೇರ 2:7) ವಾಸ್ತವವಾಗಿ, ಆಕೆ ಅನೈಚ್ಫಿಕವಾಗಿ ಒಂದು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದಳೆಂದೂ ಹೇಳಬಹುದು. ಸಂದರ್ಭವೇನಾಗಿತ್ತು? ಪರ್ಸಿಯನ್ ರಾಣಿಯಾಗಿದ್ದ ವಷ್ಟಿಯನ್ನು ಅವಿಧೇಯತೆಯ ಕಾರಣ ಪದಚ್ಯುತಿಗೊಳಿಸಲಾಗಿತ್ತು. ಯೋಗ್ಯ ಸ್ಥಾನಭರ್ತಿಗಾಗಿ, ಅಹೆಷ್ವೇರೋಷ ರಾಜನು ತನ್ನ ರಾಜ್ಯದ ಎಲ್ಲ ಕಡೆಗಳಿಂದ ಅತ್ಯಂತ ಸುಂದರಿಯರಾದ ಕನ್ಯೆಯರನ್ನು ಒಟ್ಟುಗೂಡಿಸಿದನು. ಈ ಯುವತಿಯರಿಗೆ 12 ತಿಂಗಳು ವಿಶೇಷ ಭೋಜನ ಕೊಟ್ಟು ಬಾಲ್ಸಮ್ ತೈಲ ಮತ್ತು ಗೋಲ ರಸದಿಂದ ಅವರ ಅಂಗ ಮರ್ದನವನ್ನು ಮಾಡುವಂತೆ ಅವನು ಏರ್ಪಡಿಸಿದನು. ಪ್ರತಿ ಹುಡುಗಿಯನ್ನು ಆ ಬಳಿಕ ಸರದಿಯಾಗಿ ಮೌಲ್ಯಮಾಪನ ಮಾಡಲಾಯಿತು. ಮತ್ತು ಎಸ್ತೇರಳ ಸರದಿ ಬರಲಾಗಿ ಅವಳನ್ನು ಹೊಸ ರಾಣಿಯಾಗಿ ಆರಿಸಲಾಯಿತು!—ಎಸ್ತೇರ 1:12–2:17.
ಆದರೆ, ಎಸ್ತೇರಳು ಇದರಲ್ಲಿ ಭಾಗವಹಿಸಿದ್ದೇಕೆ? ಅವಳು ನಿರರ್ಥಕವಾದ ಪ್ರತಿಭೆಯನ್ನು ಹುಡುಕಿದಳೊ? ಇಲ್ಲ, ಎಸ್ತೇರಳು, ತನ್ನ ದೊಡ್ಡಪ್ಪನ ದೇವಭಕ್ತಿಯ ಮಗನೂ ಪಾಲಕನೂ ಆಗಿದ್ದ ಮೊರ್ದೆಕೈಯಿಂದ ಪದೇ ಪದೇ ಕೇಳಿ ಪಡೆದಿದ್ದ ಯೆಹೋವನ ಮಾರ್ಗದರ್ಶನವನ್ನು ಅನುಸರಿಸಿದಳು. (ಎಸ್ತೇರ 4:5-17) ಹಾಮಾನನೆಂಬ ದುಷ್ಟನೊಬ್ಬನು ದೇವಜನರಾದ ಇಸ್ರಾಯೇಲ್ ಜನಾಂಗವನ್ನು ನಾಶಗೊಳಿಸಲು ಒಳಸಂಚು ಮಾಡುತ್ತಿದ್ದನು. ಈ ‘ಸೌಂದರ್ಯ ಸ್ಪರ್ಧೆ’, ಯೆಹೋವನು ಎಸ್ತೇರಳನ್ನು ಪ್ರಮುಖ ಸ್ಥಾನದಲ್ಲಿ ಹಾಕುವಂತೆಯೂ ಮತ್ತು ಹೀಗೆ, ಈ ಒಳಸಂಚನ್ನು ನಿರರ್ಥಕ ಮಾಡುವಂತೆಯೂ ಅನುಮತಿಸಿತು. ಎಸ್ತೇರಳ ಲಾವಣ್ಯ ಹೀಗೆ ಎಲ್ಲ ದೇವಜನರಿಗೆ ಆಶೀರ್ವಾದವಾಗಿ ಪರಿಣಮಿಸಿತು!
ಆದರೆ ಇಂದೊ? ಒಬ್ಬನ ತೋರಿಕೆ ಜೀವನದ ಅತ್ಯಂತ ಪ್ರಾಮುಖ್ಯ ವಿಷಯವಾಗಿರುವುದಿಲ್ಲ.a ಆದರೂ, ಅಭಿಮಾನ ಮಿತಿ ಮತ್ತು ದೈನ್ಯತೆಯ ಜೊತೆಗೆ ಹೋಗುವಲ್ಲಿ ಈ ಆಕರ್ಷಕ ತೋರಿಕೆ ಒಬ್ಬನಿಗೆ ಸೊತ್ತಾಗಿರಬಲ್ಲದು. ಹಾಗಾದರೆ, ಮಾಡೆಲಿಂಗ್ ಮಾಡಿ ಯಾ ಸೌಂದರ್ಯ ನೇತ್ರೋತ್ಸವಗಳಲ್ಲಿ ಭಾಗವಹಿಸುವುದು ಈ ಸೊತ್ತಿನ ವಿವೇಕಪ್ರದವಾದ ಉಪಯೋಗವೆ? ಇಲ್ಲವೆ, ಆಲೋಚಿಸಲು ಕೀರ್ತಿ, ಪ್ರತಿಷ್ಠೆ, ಯಾ ಐಶ್ವರ್ಯದ ಆಕರ್ಷಣೆಗೂ ಅತೀತವಾಗಿರುವ ವಿಷಯಗಳಿವೆಯೆ?
ಮಿರುಗಿನ ಹಿಂದೆ
ಫ್ಯಾಶನ್ ಮಾಡೆಲಿಂಗ್ನಲ್ಲಿ ಮಿರುಗಿದೆ ಎಂಬುದು ನಿಜ. ಉತ್ತಮ ಬಟ್ಟೆಬರೆ, ಬೆಲೆಬಾಳುವ ರತ್ನಾಭರಣ, ಒಳ್ಳೆಯ ವೇತನ ಮತ್ತು ಪ್ರಯಾಣ ಪ್ರತೀಕ್ಷೆ— ಇವೆಲ್ಲ ಬಲು ಆಕರ್ಷಕ. ಇದಲ್ಲದೆ, ಮಾಡೆಲಿಂಗ್ ತರಬೇತು, ಅನೇಕ ಯುವಕ, ಯುವತಿಯರಿಗೆ ಅವರು ಲಾಲಿತ್ಯದಿಂದ ನಡೆಯುವಂತೆಯೂ ಭರವಸೆ ಮತ್ತು ಸಮಚಿತ್ತದಿಂದ ಮಾತನಾಡುವಂತೆಯೂ ಸಹಾಯ ಮಾಡಿಯದೆ. ಆದರೆ, ಈ ಸೊಬಗು, ಮಿರುಗು ಮತ್ತು ಬೆಡಗಿನ ಹಿಂದೆ ಕ್ರೈಸ್ತನಿಗೆ ನಿಜ ಅಪಾಯವು ಹೊಂಚುಹಾಕುತ್ತಾ ನಿಂತಿದೆ.
ಮಾಡೆಲಿಂಗ್ ತಾನೆ ಕೆಟ್ಟದೆಂದು ಇದರ ಅರ್ಥವಲ್ಲ. ಹಲವು ರೀತಿಯ ಮಾಡೆಲಿಂಗ್ ಪ್ರಾಮಾಣಿಕವಾದುದನ್ನು ಸಮರ್ಥಿಸುತ್ತದೆ: ಒಂದು ವಸ್ತುವನ್ನು ಅದು ಆಕರ್ಷಣೀಯವಾಗಿ ಮಾಡುತ್ತದೆ. ಪತ್ರಿಕೆ ಮತ್ತು ಟೀವೀ ಜಾಹೀರಾತುಗಳಲ್ಲಿ ಉಗುರು ಮೆರುಗನ್ನು ಪ್ರದರ್ಶಿಸಲು ಸುಂದರ ಹಸ್ತಗಳನ್ನು ಉಪಯೋಗಿಸುವ ಒಂದು ಕಾರಣ ಇದೇ. ತದ್ರೀತಿ, ಸುರೂಪಿಗಳಾದ ಸ್ತ್ರೀ, ಪುರುಷರನ್ನು ಬಟ್ಟೆಬರೆಗಳ ಪ್ರದರ್ಶನಕ್ಕೆ ಉಪಯೋಗಿಸಲಾಗುತ್ತದೆ. ಇಂಥ ಉಡುಪುಗಳು ಮಾನ ಮರ್ಯಾದೆಯವುಗಳಾಗಿರುವಲ್ಲಿ, ಕ್ರೈಸ್ತನು ಇವುಗಳನ್ನು ಪ್ರದರ್ಶಿಸಿ ಹಣ ಪಡೆಯುವುದರಲ್ಲಿ ಆಕ್ಷೇಪವಿರಲಿಕ್ಕಿಲ್ಲ.
ಆದರೂ, ಸದಾ ಸುಲಭವಾಗಿ ತಪ್ಪಿಸಲು ಸಾಧ್ಯವಿಲ್ಲದ ಅನೇಕ ಅಂತರ್ಗತ ಸಮಸ್ಯೆಗಳು ಮಾಡೆಲಿಂಗ್ನಲ್ಲಿವೆ. ಉದಾಹರಣೆಗೆ, ಕ್ರೈಸ್ತರಿಗೆ ತೊಡಲು ಮರ್ಯಾದೆರಹಿತವಾದ ಯಾ ಅಸಮಂಜಸವಾದ ಯಾವುದನ್ನಾದರೂ ತೊಡುವಂತೆ ನಿಮಗೆ ಹೇಳಲ್ಪಟ್ಟರೆ ನಿಮ್ಮ ಪ್ರತಿವರ್ತನೆ ಹೇಗಿದ್ದೀತು? ಅಥವಾ, ಒಬ್ಬ ಫೊಟಾಗ್ರಫರನು, ನೀವು ಸೂಚಕವೂ ಮೋಹಕವೂ ಆದ ರೀತಿಯಲ್ಲಿ ದೇಹವಿನ್ಯಾಸ ಧರಿಸುವಂತೆ ಯುಕ್ತಿಯ ಒತ್ತಡವನ್ನು ಹಾಕುವಲ್ಲಿ ಏನು? ಇದಲ್ಲದೆ, ನಿಮ್ಮ ಚಿತ್ರವು ಹೇಗೆ ಉಪಯೋಗಿಸಲ್ಪಡಬಹುದೆಂದು ನಿಶ್ಚಯ ಮಾಡುವುದು ಸದಾ ಸಾಧ್ಯವಿಲ್ಲ. ದೃಷ್ಟಾಂತಕ್ಕೆ, ಸುಳ್ಳು ಧರ್ಮದ ರಜಾದಿನಗಳನ್ನು ಬೆಂಬಲಿಸುವ ಯಾ ದುರಾಚಾರದ ಸೂಚನೆಗಳಿರುವ ಹಿನ್ನೆಲೆಯಲ್ಲಿ ಅವು ಉಪಯೋಗಿಸಲ್ಪಡಬಹುದು.
ಇದಲ್ಲದೆ, ಇಂಥ ಜೀವನೋಪಾಯ ಒಬ್ಬನ ವ್ಯಕ್ತಿತ್ವದ ಮೇಲೆ ಮಾಡಬಹುದಾದ ಪರಿಣಾಮವೂ ಇದೆ. ಅದು ನಕಾರಾತ್ಮಕ ಪ್ರವೃತ್ತಿಗಳನ್ನು ಬೆಳೆಸಬಲ್ಲದು. “ಒಳಗಣ ಭೂಷಣ”ದ ಬದಲಿಗೆ ಹೊರಗಣ ತೋರಿಕೆಯ ಕುರಿತ ಮುಂದುವರಿಯವ ಪ್ರಾಧಾನ್ಯತೆಯು ಕೆಲವು ಫ್ಯಾಶನ್ ಮಾಡೆಲ್ಗಳು ತಮ್ಮ ವಿಷಯದಲ್ಲಿ ವಿಪರೀತ ಒಣಹೆಮ್ಮೆಯಿಂದಿರುವಂತೆ ಮಾಡುತ್ತದೆ. (1 ಪೇತ್ರ 3:4) ಇಷ್ಟೇ ಅಲ್ಲ, ಬೆಲೆ ಬಾಳುವ ಬಟ್ಟೆ, ಆಭರಣ, ಇತ್ಯಾದಿಗಳು, ಪ್ರಾಪಂಚಿಕ ಯೋಚನೆಗಳು ಬೇರೂರುವಂತೆ ಮಾಡಬಲ್ಲವು.—1 ತಿಮೊಥಿ 6:10.
ಈ ಫ್ಯಾಶನ್ ಮಾಡೆಲಿಂಗ್ ಉದ್ಯೋಗ ಒಬ್ಬನನ್ನು, ಅವನ ಜೀವನೋಪಾಯದ ಏಳೆಗ್ಗಾಗಿ ಲೈಂಗಿಕ ರೀತಿಯಲ್ಲಿ ವಶವಾಗಬೇಕು ಎಂದು ಪಟ್ಟು ಹಿಡಿಯುವ ಪುರುಷ ಮತ್ತು ಸ್ತ್ರೀಯರಿಗೆ ಬಲಿ ಕೊಡುವುದಕ್ಕೂ ಕುಪ್ರಸಿದ್ಧವಾಗಿದೆ. ಒಬ್ಬ ಮಾಜಿ ಫ್ಯಾಶನ್ ಮಾಡೆಲ್ ಗಮನಿಸಿದ್ದು: “ಏಳ್ಗೆ ಹೊಂದಬೇಕಾದರೆ, ಯಥಾರ್ಥವಾಗಿ ನೀವು [ಲೈಂಗಿಕವಾಗಿ] ಒಪ್ಪಿಸಿಕೊಡಲೇ ಬೇಕು.” ಕೆಲವರು, ಪುರುಷ ಮಾಡೆಲ್ಗಳ ಮಧ್ಯೆ ಸಲಿಂಗೀಕಾಮ ಅತಿಯಾಗಿದೆ ಎಂದೂ ವಾದಿಸುತ್ತಾರೆ. ಇದು ಸದಾ ಸತ್ಯವಾಗಿರಲಿಕ್ಕಿಲ್ಲವಾದರೂ, ಇತರ ಉದ್ಯೋಗಗಳಿಗಿಂತ ಹೆಚ್ಚಾಗಿ ಮಾಡೆಲಿಂಗ್ನಲ್ಲಿ ಇದು ಹೆಚ್ಚಿನ ಸಮಸ್ಯೆಯಾಗಿರಬಹುದು.
ಸೌಂದರ್ಯ ನೇತ್ರೋತ್ಸವಗಳು
ಈ ಮೇಲೆ ಹೇಳಿರುವುದರಲ್ಲಿ ಅಧಿಕಾಂಶ ಸೌಂದರ್ಯ ನೇತ್ರೋತ್ಸವಗಳಿಗೂ ಅನ್ವಯಿಸುತ್ತದೆ. ಇದಕ್ಕೆ ಕೂಡಿಸಲ್ಪಟ್ಟು, ಬಲವತ್ತಾದ ಸ್ಪರ್ಧಾಭಾವದ ಒತ್ತಡವೂ ಇದೆ. ಇದು ಸ್ಪರ್ಧಿಗಳನ್ನು, ಅವರು ತಮ್ಮ ಸಹಸ್ಪರ್ಧಿಗಳಿಗೆ ಬೇಕೆಂದು ಹಾನಿ ಮಾಡುವ ವರೆಗೂ ನಡೆಸುತ್ತದೆ. ಒಂದು ವರದಿಗನುಸಾರ, “ಕೆಲವು ಸ್ಪರ್ಧಿಗಳು ವಿಜೇತರಾಗಲು ಎಷ್ಟು ವಿಪರೀತಕ್ಕೆ ಹೋಗುತ್ತಾರೆಂದರೆ ಅವರು ತಮ್ಮ ಪ್ರತಿಸ್ಪರ್ಧಿಗಳ ಈಜು ಉಡುಪಿಗೆ ಲಿಪ್ಸಿಕ್ಟ್ನಿಂದ ಬಣ್ಣ ಬಳಿಯಲಿಕ್ಕೆ ಯಾ ‘ಅಕಸ್ಮಾತ್ತಾಗಿ’ ಅವರ ಸಂಧ್ಯಾ ಉಡುಪಿಗೆ ಕೋಕಕೋಲ ಚೆಲ್ಲಿ ಕೊಳೆ ಮಾಡಲಿಕ್ಕೂ ಹೇಸುವುದಿಲ್ಲ.”
ಇದಲ್ಲದೆ, ಸೌಂದರ್ಯ ನೇತ್ರೋತ್ಸವಗಳ ಹೊಣೆಗಾರರು, ತಮ್ಮ ಈ ಹುಡುಗಿಯರು ಮಾರಾಟ ಹಾಗೂ ಸಾರ್ವಜನಿಕ ಸಂಬಂಧದ ಪ್ರತಿನಿಧಿಗಳಾಗಿ ಪೂರ್ತಿ ಬದ್ಧತೆಯನ್ನು ತೋರಿಸಬೇಕೆಂದು ಅಪೇಕ್ಷಿಸುತ್ತಾರೆ. ಅನೇಕ ವೇಳೆ, ಬೆಳಗಾಗುವ ತನಕ ಸಮಾಜ ಗೋಷ್ಠಿಗಳಲ್ಲಿ ಭಾಗವಹಿಸಬೇಕೆಂದು ಅವರನ್ನು ಕೇಳಿಕೊಳ್ಳಲಾಗುತ್ತದೆ. ಒಬ್ಬ ಯುವತಿಗೆ ಹೀಗೆ ಹೇಳಲಾಯಿತು: “ಡಾರ್ಲಿಂಗ್, ನೀನು ದಣಿಯುವುದೇ ಇಲ್ಲ. ಅದು ನೆನಪಿರಲಿ. ಪಾರ್ಟಿಗೆ ಬರುವವರಲ್ಲಿ ನೀನು ಪ್ರಥಮಳು ಮತ್ತು ಬಿಟ್ಟು ಹೋಗುವವರಲ್ಲಿ ಕೊನೆಯವಳು.” ಇದು ಕನಿಷ್ಟ ಪಕ್ಷ ಒಬ್ಬ ಕ್ರೈಸ್ತನನ್ನು ಅಹಿತಕರವಾದ ಸಹವಾಸಕ್ಕೆ ಬಲಿಯೊಡ್ಡಿಸಿ ಅವನು ಅವಿಶ್ವಾಸಿಯೊಂದಿಗೆ ಪ್ರಣಯಾತ್ಮಕವಾಗಿ ಜೊತೆಯಾಗುವಂತೆಯೂ ನಡೆಸಬಲ್ಲದು.—2 ಕೊರಿಂಥ 6:14.
ಅಂತಿಮವಾಗಿ, ಸೌಂದರ್ಯ ಸ್ಪರ್ಧೆಗಳು ರೋಮಾಪುರ 1:25ರ ‘ಸೃಷ್ಟಿಕರ್ತನ ಬದಲು ಸೃಷ್ಟಿವಸ್ತುವನ್ನು ಪೂಜಿಸ’ ಬಾರದೆಂಬ ಬೈಬಲ್ ಮೂಲಸೂತ್ರವನ್ನು ಅಲಕ್ಷಿಸುತ್ತದೆ. (ಅಪೊಸ್ತಲರ ಕೃತ್ಯ 12:21-23 ಹೋಲಿಸಿ.) ಇದೊಂದೇ ಆಧಾರದ ಮೇರೆಗೆ, ಕ್ರೈಸ್ತ ಯುವಜನರು, ಸೌಂದರ್ಯ ಸ್ಪರ್ಧೆಗಳಲ್ಲಿ, ಅದು ಶಾಲೆಯ ಚಿಕ್ಕ ರೀತಿಯ ಸ್ಪರ್ಧೆಯಾಗಿದ್ದರೂ, ಅವುಗಳಲ್ಲಿ ಭಾಗವಹಿಸಲು ನಿರಾಕರಿಸುವುದು ಹಿತಕರ.
ನಿಜ ಸೌಂದರ್ಯ
ಈ ಮೊದಲು ಹೇಳಲಾಗಿರುವ ಯುವ ಜನರು ತಮ್ಮ ನಿರ್ಣಯ ಮಾಡಲು ವಿಷಯಗಳನ್ನು ತೂಗಿ ನೋಡಬೇಕಾಗಿತ್ತು. ಮಾಡೆಲ್ ಆಗಿ ಕೆಲಸ ಮಾಡುವುದು ತಾನೇ ತಪಾಗಿಲ್ಲದೆ ಇರಬಹುದಾದರೂ, ಏಮಿ ಮತ್ತು ರೆಸೀನ್ ಅದಕ್ಕೆ ವಿರುದ್ಧವಾಗಿ ನಿರ್ಣಯಿಸಿದರು. ಇದೇ ರೀತಿ, ಜೋನತನ್ ಸಹ ಪುರುಷ ಮಾಡೆಲ್ ಆಗುವ ಕೆಲಸವನ್ನು ನಿರಾಕರಿಸಿ, ಪ್ರಸ್ತುತ, ಯೆಹೋವನ ಸಾಕ್ಷಿಗಳ ಜಗತ್ತಿನ ಪ್ರಧಾನ ಕಾರ್ಯಾಲಯಗಳಲ್ಲಿ ಪೂರ್ಣ ಸಮಯದ ಶುಶ್ರೂಷಾ ಜೀವನೋಪಾಯವನ್ನು ಮುಂದುವರಿಸುತ್ತಿದ್ದಾನೆ. ಆದರೆ ಇನೊಬ್ಬ ಆಕರ್ಷಕ ಹುಡುಗಿ ಇದಕ್ಕೆ ಸೇರಿ ಎರಡು ಸೌಂದರ್ಯ ಸ್ಪರ್ಧೆಗಳನ್ನು ಗೆದ್ದಳು. ಇಂದು ಆಕೆ ಕ್ರಿಸ್ತೀಯ ಕೂಟಗಳಲ್ಲಿ ಉಪಸ್ಥಿತಳಾಗುವುದಿಲ್ಲ. ಈ ಕೆಳಗಿನ ನಾಣ್ಣುಡಿ ಎಷ್ಟು ಸತ್ಯ: “ಆಕರ್ಷಕವೂ ಸುಂದರವೂ ಆದ ವಸ್ತು ಸದಾ ಒಳ್ಳೆಯದಲ್ಲ; ಆದರೆ ಒಳ್ಳೆಯದು ಸದಾ ಸುಂದರ.”
ಎಸ್ತೇರಳು ಪುನ: ನೆನಪಿಗೆ ಬರುತ್ತಾಳೆ. ಆಕೆಯ ಶರೀರ ಸೌಂದರ್ಯದ ಕಾರಣ ರಾಜನ ಪತ್ನಿಯಾಗುವವರ ಪಂಕ್ತಿಯಲ್ಲಿ ಅವಳನ್ನು ಸೇರಿಸಲಾಯಿತು. ಆದರೂ, ಆಕೆಯನ್ನು ಸೌಂದರ್ಯವತಿಯಾಗಿ ಮಾಡಿದ್ದು ಆಕೆಯ ಅಭಿಮಾನ ಮಿತಿ, ಅಧೀನತೆ, ವಿಧೇಯತೆ ಮತ್ತು ಲೋಭರಾಹಿತ್ಯಗಳೆ. (ಎಸ್ತೇರ 2:13, 15-17) ಆಕೆ ಪೇತ್ರನ ಮಾತುಗಳನ್ನು ಪ್ರತಿನಿಧೀಕರಿಸಿದಳು: “ಜಡೆ ಹೆಣೆದುಕೊಳ್ಳುವದು ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದು ವಸ್ತ್ರಗಳನ್ನು ಧರಿಸಿಕೊಳ್ಳುವದು ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಸಾತ್ವಿಕವಾದ ಶಾಂತ ಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ.” (1 ಪೇತ್ರ 3:3, 4) ಕಟ್ಟ ಕಡೆಯಲ್ಲಿ, ಈ ಕ್ರೈಸ್ತ ಗುಣಗಳ ಬೆಳವಣಿಗೆಯೆ ಶಾರೀರಿಕ ಸೌಂದರ್ಯದ ತುಸು ಸಮಯದ ಪ್ರತಿಫಲಕ್ಕಿಂತ ಎಷ್ಟೊ ಹೆಚ್ಚು ಆದಾಯಕರವಾಗಿದೆ. (g90 1/8)
[ಅಧ್ಯಯನ ಪ್ರಶ್ನೆಗಳು]
a ಜನವರಿ 8, 1986ರ ಅವೇಕ್! ನಲ್ಲಿ ಬಂದಿರುವ “ಹೌ ಇಂಪಾರ್ಟೆಂಟ್ ಆರ್ ಲುಕ್ಸ್” ಎಂಬ ಲೇಖನ ನೋಡಿ.
[ಪುಟ 23 ರಲ್ಲಿರುವಚಿತ್ರ]
ಶಾರೀರಿಕ ಸೌಂದರ್ಯದ ತುಸು ಸಮಯದ ಪ್ರತಿಫಲಕ್ಕಿಂತ ಕ್ರೈಸ್ತ ಗುಣಗಳು ಹೆಚ್ಚು ಆದಾಯಕರ