ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 11/8 ಪು. 8-10
  • ನ್ಯೂಕ್ಲಿಯರ್‌ ಕಸ ಮಾರಕ ಕಚಡ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನ್ಯೂಕ್ಲಿಯರ್‌ ಕಸ ಮಾರಕ ಕಚಡ
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಹಾ ವಿಪತ್ತು!
  • ಬಡ ರಾಷ್ಟ್ರಗಳು ಧನಿಕ ರಾಷ್ಟ್ರಗಳಿಗೆ ಕೊಂಪೆಗಳಾಗುತ್ತವೆ
    ಎಚ್ಚರ!—1995
  • ಆ ಸಂಗ್ರಾಮವು ವಿಜಯಿಯಾಗುತ್ತಿದೆಯೊ?
    ಎಚ್ಚರ!—1996
  • ನ್ಯೂಕ್ಲಿಯರ್‌ ಬೆದರಿಕೆ—ಅಂತಿಮವಾಗಿ ಕೊನೆಗೊಂಡಿದೆಯೆ?
    ಕಾವಲಿನಬುರುಜು—1994
  • ವಿಕಿರಣ ಧೂಳಿಪಾತದ ಪರಿಣಾಮಗಳು ಚಿಂತೆಯ ವಿಷಯ
    ಎಚ್ಚರ!—2001
ಇನ್ನಷ್ಟು
ಎಚ್ಚರ!—1991
g91 11/8 ಪು. 8-10

ನ್ಯೂಕ್ಲಿಯರ್‌ ಕಸ ಮಾರಕ ಕಚಡ

ಮನೆಯ ಕಸವೆಂಬ ಉರುಳು ನೀರ್ಗಲ್ಲು ಮಾತ್ರ ಜಗತ್ತಿನ ಜೀವವನ್ನು ಉಸಿರು ಕಟ್ಟಿಸುವುದಲ್ಲ. ಎಷ್ಟೊ ದೊಡ್ಡದೂ ಮಾರಕವೂ ಆದ ಇನ್ನೊಂದು ಕಚಡ ಸಮಸ್ಯೆಯ ಎದುರಲ್ಲಿ ಇದು ತೀರಾ ಕ್ಷುಲ್ಲಕವಾಗಿದೆ. ನ್ಯೂಕ್ಲಿಯರ್‌ ಆಯುಧಗಳನ್ನು ಮತ್ತು ವಿದ್ಯುಚ್ಫಕ್ತಿಯನ್ನು ತಯಾರಿಸಲು ಮನುಷ್ಯನು ಪ್ರಥಮವಾಗಿ ಪರಮಾಣುವನ್ನು ನಿಯಂತ್ರಿಸ ತೊಡಗಿದಂದಿನಿಂದ ವಿಜ್ಞಾನಿಗಳು ಆ ಸಲಕರಣೆಗಳಿಂದ ಹುಟ್ಟುವ ತೀರಾ ಅಣುಶಕ್ತಿ ವಿಕಿರಣವುಳ್ಳ ನ್ಯೂಕ್ಲಿಯರ್‌ ಕಸವನ್ನು ತೊಲಗಿಸುವ ಅತ್ಯಂತ ಸುರಕ್ಷಿತ ವಿಧಾನಗಳ ಬಗ್ಗೆ ತೊಡಕಿನಲ್ಲಿ ಸಿಕ್ಕಿಕೊಂಡಿದ್ದಾರೆ.

ಈ ಮಾರಕ ಕಚಡದಿಂದಾಗಿ ಮುಂಬರಲಿರುವ ಸಂತತಿಗಳ ಜನತೆ ಮತ್ತು ಪರಿಸರ ಮಲಿನವಾಗುವುದನ್ನು ತಡೆಯುವ ಮಾರ್ಗಗಳನ್ನು ಕಂಡುಹಿಡಿಯಲಿಕ್ಕಾಗಿ ಕೋಟ್ಯಂತರ ಡಾಲರುಗಳನ್ನು ಉಪಯೋಗಿಸಲಾಗಿದೆ. ಇದೊಂದು ಕಷ್ಟಸಾಧ್ಯವಾದ ವಿಷಯವೇ ಸರಿ, ಏಕೆಂದರೆ ಈ ಅಣುಶಕ್ತಿ ವಿಕಿರಣಗೊಳ್ಳುವ ನ್ಯೂಕ್ಲಿಯರ್‌ ಕಚಡ ಸಕಲ ಜೀವವಸ್ತುಗಳಿಗೆ ಸಹಸ್ರಾರು ವರುಷಗಳ ತನಕ ಮಾರಕವಾಗಿರಬಲ್ಲದು!

ಅನೇಕ ದಶಕಗಳಲ್ಲಿ ಈ ಕಚಡವನ್ನು ಅದೇ ನಿವೇಶನಗಳ ಹೂತಿಡುವ ಕುಳಿ ಮತ್ತು ಜಿನುಗು ಕುಂಟೆಗಳಲ್ಲಿ ಎಸೆಯಲಾಗುತಿತ್ತು. ಈ ಅಪಾಯಕಾರಿಯಾದ ವಸ್ತು ಕ್ರಮೇಣ ಸಾರಗುಂದಿ ನಿರಪಾಯಕಾರಿಯಾಗುವುದು ಎಂಬುದು ಆಗಿನ ನಂಬಿಕೆಯಾಗಿತ್ತು. ಈ ಊಹೆ, ನಾವು ನೋಡಲಿರುವಂತೆ, ವಿಪತ್ಕಾರಕವಾಗಿ ಪರಿಣಮಿಸಿಯದೆ. ಲಕ್ಷಗಟ್ಟಲೆ ಗ್ಯಾಲನ್‌ ಉನ್ನತ ಮಟ್ಟದ ಅಣುಶಕ್ತಿ ವಿಕಿರಣ ಕಚಡವನ್ನು ದೈತ್ಯಾಕಾರದ ನೆಲದಡಿಯ ಕೊಳಗಳಲ್ಲಿ ಸಂಗ್ರಹಿಸಲಾಯಿತು; ಇತರ ಕಚಡವನ್ನು ಪೀಪಾಯಿಗಳಲ್ಲಿ ಮುಚ್ಚಿ ನೆಲದ ಮೇಲೆ ದಾಸ್ತಾನು ಮಾಡಲಾಯಿತು. ಇದು ಅಪಾಯಕರವಾಗಿ ಕಸ ತೊಲಗಿಸುವ ಇನ್ನೊಂದು ವಿಧಾನವಾಗಿ ಪರಿಣಮಿಸಿತು.

ಈ ನ್ಯೂಕ್ಲಿಯರ್‌ ಕಚಡ ಎಷ್ಟೊಂದು ಹಾನಿಕರ ಮತ್ತು ಮಾರಕವೆಂದರೆ, ವಿಜ್ಞಾನಿಗಳು ಈ ಕಚಡವನ್ನು ಹೊರಾಂತರಿಕ್ಷಕ್ಕೆ ಎಸೆಯುವುದರಿಂದ ಹಿಡಿದು ಧ್ರುವ ಪ್ರದೇಶದ ಹಿಮಗಡ್ಡೆಯ ಅಡಿಯಲ್ಲಿ ಹೂಳಿಡಲು ಆಲೋಚಿಸಿದ್ದೂ ಉಂಟು. ಈಗ, ಈ ಕಚಡದ ಪಾತ್ರೆಗಳನ್ನು ಉತ್ತರ ಶಾಂತ ಸಾಗರದಲ್ಲಿ ಎಸೆದು ಅವುಗಳನ್ನು ಸಾಗರ ತಳದ ಕೆಸರಿನೊಳಗೆ 30 ಮೀಟರ್‌ ಒಳಹೊಗಿಸುವ ವಿಷಯ ತನಿಖೆ ನಡೆಯುತ್ತಿದೆ. ವುಡ್ಸ್‌ ಹೋಲ್‌ ಓಷನೋಗ್ರಾಫಿಕ್‌ ಇನ್‌ಸಿಟ್ಟ್ಯೂಟಿನ ಉಪಾಧ್ಯಕ್ಷರು ಹೇಳಿದ್ದು: “ಈ ಗ್ರಹದಲ್ಲಿ, ನೆಲದ ಮೇಲೆ, ಜಲದಲ್ಲಿ ಯಾ ಜಲದಡಿಯಲ್ಲಿ, ನಾವು ಮುಕಾಬಿಲೆ ಮಾಡಲೇ ಬೇಕಾದ ವಸ್ತುಗಳಿವೆ. ನಮಗಿರುವುದು ಅಷ್ಟೆ.”

ಸದ್ಯಕ್ಕೆ, ಹೆಚ್ಚು ಸುರಕ್ಷಿತ ಮತ್ತು ಕಾಯಂ ಆಗಿರುವ ತೊಲಗಿಸುವ ವಿಧಾನವನ್ನು ಕಂಡು ಹಿಡಿಯುವ ತನಕ, ತಾತ್ಕಾಲಿಕ ಪರಿಹಾರವಾಗಿ, ಈ ಅಣುಶಕ್ತಿ ವಿಕಿರಣ ಪದಾರ್ಥದಲ್ಲಿ ಅಧಿಕಾಂಶವನ್ನು ಭದ್ರವಾಗಿ ಮುಚ್ಚಿದ ಕಟ್ಟಡಗಳಲ್ಲಿ ನೀರು ತುಂಬಿದ ಕೊಳಗಳಲ್ಲಿ ಸಂಗ್ರಹಿಸಲಾಗಿದೆ. ಒಂಟೇರಿಯೊ, ಕೆನಡಾದಲ್ಲಿ, ದೃಷ್ಟಾಂತಕ್ಕೆ, ಆಗಲೆ 7,000 ಟನ್ನು ವಿಕಿರಣ ಕಸವನ್ನು ಇಂಥ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟಿರುವ 16 ನ್ಯೂಕ್ಲಿಯರ್‌ ಉತ್ಪಾದಕ ಸಲಕರಣೆಗಳಿವೆ. ಬ್ರಿಟನ್‌ ಸಹ ತನ್ನ ಕಚಡವನ್ನು ಏನು ಮಾಡುವುದೆಂಬ ತಬ್ಬಿಬ್ಬಾಗಿಸುವ ಸಮಸ್ಯೆಯನ್ನು ಎದುರಿಸುತ್ತಿದೆ. ಸದ್ಯಕ್ಕೆ, ಉನ್ನತ ಮಟ್ಟದ ಕಚಡವನ್ನು ನೆಲದ ಮೇಲಿನ ನಿವೇಶನಗಳಲ್ಲಿ ಇಡಲಾಗಿದೆ ಮತ್ತು ಈ ಕಾರ್ಯನೀತಿಯನ್ನು ಸೋರದ ನೆಲದಡಿಯ ನಿವೇಶನಗಳನ್ನು ಕಂಡುಹಿಡಿದು ಅವು ಪರೀಕ್ಷಿಸಲ್ಪಡುವ ತನಕ ಮುಂದುವರಿಸಲಾಗುತ್ತದೆಂದು ನಿರೀಕ್ಷಿಸಲಾಗಿದೆ. ಫ್ರಾನ್ಸ್‌, ಜರ್ಮನಿ ಮತ್ತು ಜಪಾನ್‌ ದೇಶಗಳು ಸಹ ತಮ್ಮ ನ್ಯೂಕ್ಲಿಯರ್‌ ಕಚಡ ಸಮಸ್ಯೆಗಳನ್ನು ಎದುರಿಸಲು ಪ್ರಯತ್ನಿಸುತ್ತಿವೆ.

ನ್ಯೂ ಯಾರ್ಕ್‌ ಟೈಮ್ಸ್‌ ವರದಿ ಮಾಡಿದ್ದು: “ಯುನೊಯಿಟೆಡ್‌ ಸ್ಟೇಟ್ಸಿನ ಸರಕಾರಿ ಪಾಲಿಸಿ, ಅದನ್ನು ಒಣಗಲಾದ, ಸ್ಥಿರವಾದ ಹಾಗೂ ನಿರ್ಜನವಾದ ಪ್ರದೇಶದ ‘ಹೊರಪದರದ ಆಳವಾದ ಮಳಿಗೆ’ ಯಲ್ಲಿ ಇಡುವುದೇ ಅತ್ಯಂತ ಸುರಕ್ಷಿತ ವಿಧಾನವೆಂದಾಗಿದೆ. ಆದರೆ ಅಂಥ ಸ್ಥಳವನ್ನು ಕಂಡು ಹಿಡಿಯುವುದು ಕಷ್ಟವಾಗುತ್ತಿದೆ.” ಅತಿ ಕಷ್ಟವೆಂಬುದು ನಿಶ್ಚಯ! ವಿಜ್ಞಾನಿಗಳಿಗನುಸಾರ, ಅದು 10,000 ವರ್ಷಕಾಲ ಆ ಪದಾರ್ಥವನ್ನು ಸುರಕ್ಷಿತವಾಗಿಡುವಷ್ಟು ಒಣಗಿಹೋದ ಮತ್ತು ಸ್ಥಿರವಾದ ಸ್ಥಳವಾಗಿರತಕ್ಕದ್ದು. ಈ ಪರಮಾಣು ಕಚಡ 2,50,000 ವರುಷ ಮಾರಕವಾಗಿರುತ್ತದೆಂದು ಅಂದಾಜು ಮಾಡಲಾಗುತ್ತದಾದರೂ, 10,000 ವರ್ಷಗಳಲ್ಲಿ ಭೂಮಿಯ ಹೊರಪದರದಲ್ಲಿ ಎಷ್ಟೊಂದು ಬದಲಾವಣೆಯಾಗುತ್ತದೆಂದರೆ “ಅದಕ್ಕಿಂತ ಹೆಚ್ಚು ಕಾಲಕ್ಕೆ ಯೋಜಿಸುವುದು ಅರ್ಥರಹಿತ” ವೆಂದು ಪರಿಣತರ ನಂಬಿಕೆ. ಒಬ್ಬ ವಿಕಿರಣ ನಿಪುಣರು ಗಮನಿಸಿದ್ದು: “ಕೇವಲ 1,000 ವರ್ಷಗಳ ಮುಂದೆ ಏನಾಗುವುದೆಂದು ಅಂದಾಜು ಮಾಡತಕ್ಕ ಭೂಮುಖದ ಯಾವ ಪ್ರತಿಕೃತಿಯೂ ನನಗೆ ತಿಳಿಯದು.” ಅವರು ಕೂಡಿಸಿ ಹೇಳಿದ್ದು: “ಭವಿಷ್ಯತ್ತಿನಲ್ಲಿ 10,000 ವರ್ಷಗಳಲ್ಲಿ ಬರಲಿರುವ ಆರೋಗ್ಯ ಅಪಾಯದ ಕುರಿತು ಮಾತನಾಡುವುದು ಕಷ್ಟ.”

ಮಹಾ ವಿಪತ್ತು!

ವಿಜ್ಞಾನಿಗಳು ಪರಮಾಣುವಿನ ರಹಸ್ಯಗಳನ್ನು ರಟ್ಟು ಮಾಡಿದಾಗ ಅವರು ವಿಚಿತ್ರವಾದ ಹೊಸ ಸಂಗತಿಯೊಂದನ್ನು ಬಿಡುಗಡೆ ಮಾಡಿದರು. ಅನುಸರಿಸಿ ಬರಲಿದ್ದ ಮಾರಕವಾದ ಮಾಲಿನ್ಯವೆಂಬ ಭೀಕರ ಸ್ವಪ್ನವೇ ಅದು. ಇದರ ಅಪಾಯ ಸಾಮರ್ಥ್ಯವನ್ನು ಕುರಿತು ಎಚ್ಚರಿಕೆ ಕೊಡಲ್ಪಟ್ಟಿದ್ದರೂ ಸರಕಾರಿ ಅಧಿಕಾರಿಗಳು ಬೇಕೆಂದು ಅದನ್ನು ಅಲಕ್ಷ್ಯ ಮಾಡಿದರು. ಪರಮಾಣು ಅಸ್ತ್ರಗಳನ್ನು ಮಾಡುವ ಸಾಮರ್ಥ್ಯ ಮತ್ತು ಪದಾರ್ಥಗಳಿಗೆ ರಾಷ್ಟ್ರಗಳು ಆದ್ಯತೆ ಕೊಟ್ಟಾಗ, ಜನರ ಆರೋಗ್ಯ ಮತ್ತು ಜೀವಗಳಿಗೆ ಮತ್ತು ಪರಿಸರದ ಗುಣಮಟ್ಟಕ್ಕೆ ಕೊಡಬೇಕಾದ ಚಿಂತೆ ತ್ಯಜಿಸಲ್ಪಟ್ಟಿತು. ಮಾರಕ ಕಚಡವನ್ನು ನಿಯಂತ್ರಿಸಲು ಅಚ್ಚುಕಟಾಗ್ಟಿರದ ವಿಧಾನಗಳು ಉಪಯೋಗಿಸಲ್ಪಟ್ಟವು. ಉದಾಹರಣೆಗೆ: ಮಾರ್ಚ್‌ 1989ರ ಯು. ಎಸ್‌. ನ್ಯೂಸ್‌ ಎಂಡ್‌ ವರ್ಲ್ಡ್‌ ರಿಪೋರ್ಟ್‌ ಬರೆದುದು: ಒಂದು ಪರಮಾಣು ಶಸ್ತ್ರ ಕಾರ್ಖಾನೆಯಲ್ಲಿ, “ಮ್ಯಾನ್‌ಹ್ಯಾಟನ್‌ ಪ್ರದೇಶವನ್ನು 12 ಮೀಟರ್‌ ಆಳಕ್ಕೆ ಮುಳುಗಿಸುವಷ್ಟು ಅಂದರೆ 75,000 ಕೋಟಿ ಲೀಟರ್‌ ಹಾನಿಕರವಾದ ಕೊಚ್ಚೆಯನ್ನು ಪದರ ಹಾಕದ ಕುಳಿಗಳಿಗೆ ಮತ್ತು ಜಲಭಾಗಗಳಿಗೆ ಹೊಯ್ಯಲಾಗಿದೆ.” ಆ ಪತ್ರಿಕೆ ಮುಂದುವರಿಸಿದ್ದು: “ನಂಜಿನ ಜಿನುಗುವಿಕೆ ಕಡಮೆ ಪಕ್ಷ 260 ಚದರ ಕಿಲೋಮೀಟರ್‌ ನೆಲಜಲವನ್ನು ಮಲಿನ ಮಾಡಿಯದೆ. ಸುಮಾರು 17 ಕೋಟಿ ಲೀಟರ್‌ ಉನ್ನತ ಮಟ್ಟದ ವಿಕಿರಣ ಹೊರಹರಿತವನ್ನು ದೈತ್ಯಾಕಾರದ ನೆಲದಡಿಯ ಕೊಳಗಳಲ್ಲಿ ಸಂಗ್ರಹಿಸಿಡಲಾಗಿದೆ ಮತ್ತು ಈ ತೊಟ್ಟಿಗಳಿಂದ ಹೊರತೊಟ್ಟಿಕ್ಕಿರುವ ಪ್ಲುಟೋನಿಯಂನಿಂದ 50ಕ್ಕೂ ಹೆಚ್ಚು ನಾಗಸಾಕಿ ಗಾತ್ರದ ಬಾಂಬುಗಳನ್ನು ರಚಿಸಬಹುದು.” ಈ ನಿವೇಶನವನ್ನು ಶುಚಿಗೊಳಿಸಲಿಕ್ಕೆ 6,500 ಕೋಟಿ ಡಾಲರುಗಳಷ್ಟೂ ಖರ್ಚು ತಗಲಬಹುದೆಂದು ಅಂದಾಜು ಮಾಡಲಾಗಿದೆ.

ನ್ಯೂಕ್ಲಿಯರ್‌ ಕಚಡವನ್ನು ಹಿಡಿಸಲಿಕ್ಕಾಗಿ ರಚಿಸಿರುವ ಕೆಲವು ಕೆರೆಗಳು ಈ ವಿಕಿರಣ ಶಾಖದಿಂದ ಎಷ್ಟು ಬಿಸಿಯಾದವೆಂದರೆ ಅವು ಬಿರುಕು ಬಿಟ್ಟವು. 20 ಲಕ್ಷ ಲೀಟರ್‌ ವಿಕಿರಣ ಕೊಚ್ಚೆ ನೆಲದೊಳಕ್ಕೆ ಸೋರಿ ಹೋಗಿದೆ ಎಂದು ಅಂದಾಜು ಮಾಡಲಾಗಿದೆ. ಕುಡಿಯುವ ನೀರಿಗೆ ಎನ್‌ವಾಯರ್ನ್‌ಮೆಂಟಲ್‌ ಪ್ರೊಡೆಕ್ಷನ್‌ ಏಜನ್ಸಿ ಎಂಬ ಪರಿಸರ ಸಂಘವು ಅನುಮತಿಸಿರುವ ಮಟ್ಟಕ್ಕಿಂತ ರೇಡಿಯೊಆ್ಯಕ್ಟಿವ್‌ ಸ್ಟ್ರಾನ್‌ಷಿಯಮ್‌-90 ಎಂಬ ಲೋಹದ ಮಟ್ಟವು ಒಂದು ಸಾವಿರ ಪಾಲು ಹೆಚ್ಚಾಗಿತ್ತು. ಇನ್ನೊಂದು ಅಣುಶಕ್ತಿ ಸ್ಥಾವರದಲ್ಲಿ, “4 ಕೋಟಿ 20 ಲಕ್ಷ ಲೀಟರ್‌ ಯುರೇನಿಯಂ ಹಿಡಿಸಿರುವ ಕಚಡದ ಹೊಂಡದಿಂದ ವಿಕಿರಣ ಪದಾರ್ಥಗಳು. . .ಒಂದು ಜಲವಾಹಕಕ್ಕೆ ಸೋರಿ ಆ ಸೌಕರ್ಯದ 0.8 ಕಿಲೊಮೀಟರ್‌ ದಕ್ಷಿಣದಲ್ಲಿರುವ ಬಾವಿಗಳನ್ನು ಮಲಿನ ಮಾಡಿವೆ” ಎಂದು ನ್ಯೂ ಯಾರ್ಕ್‌ ಟೈಮ್ಸ್‌ ವರದಿ ಮಾಡಿತು. ವಾಷಿಂಗ್ಟನ್‌ ರಾಜ್ಯದಲ್ಲಿ, ಕೊಟ್ಯಂತರ ಗ್ಯಾಲನ್‌ ಮಲಿನ ಜಲವನ್ನು ನೆಲದ ಮೇಲೆ ಹೊಯ್ಯಲಾಗಿದೆ ಮತ್ತು ರೇಡಿಯೊಆಕಿವ್ಟ್‌ ಟ್ರಿಟೀಯಂ ಲೋಹದ ಏಕಪ್ರಕಾರವಾಗಿ ಹರಿಯುವ ತೋಡೇ ಕೊಲಂಬಿಯ ನದಿಗೆ ಹರಿಯುತ್ತದೆ” ಎಂದೂ ಆ ಪತ್ರಿಕೆ ವರದಿ ಮಾಡಿತು.

ಐಡಾಹೊ ರಾಜ್ಯದಲ್ಲಿ ರೇಡಿಯೊಆ್ಯಕ್ಟಿವ್‌ ವೇಸ್ಟ್‌ ಮ್ಯಾನೆಜ್‌ಮೆಂಟ್‌ ಕಾಂಪೆಕ್ಲ್ಸಿನ ಆಳವಿಲ್ಲದ ಕೊಚ್ಚೆ ಹೊಂಡಗಳಿಂದ ಪ್ಲುಟೋನಿಯಂ ಸೋರಿ ಹೋಗಿದೆಯೆಂದು ದ ನ್ಯೂ ಯಾರ್ಕ್‌ ಟೈಮ್ಸ್‌ ವರದಿ ಮಾಡಿತು. “ಅದು ಬಂಡೆಯ ಪದರುಗಳನ್ನು ಹಾದು ಹೋಗಿ ಸಾವಿರಾರು ಮಂದಿ ದಕ್ಷಿಣ ಐಡಾಹೊ ನಿವಾಸಿಗಳಿಗೆ ಸರಬರಾಯಿ ಆಗುತ್ತಿರುವ ನೆಲದಡಿಯ ದೊಡ್ಡ ಜಲಾಶಯದ ಕಡೆಗೆ ಹೋಗುತ್ತಿದೆ.” ಈ ಮಾರಕ ಪದಾರ್ಥ 70 ಮೀಟರ್‌ ಆಳಕ್ಕೆ, ಜಲಾಶಯಕ್ಕಿರುವ ದೂರದ ಸುಮಾರು ಅರ್ಧದಷ್ಟು ಆಳಕ್ಕೆ ತೂರಿ ಹೋಗಿದೆ, ಎಂದಿತು ಆ ಪೇಪರ್‌.

ನದಿ, ತೋಡುಗಳಿಗೆ ಹರಿದಿರುವ ಮತ್ತು ಗಾಳಿಗೆ ಚಿಮ್ಮಲ್ಪಟ್ಟಿರುವ ಈ ಪ್ಲುಟೋನಿಯಂ ಕಚಡ ಎಷ್ಟು ಮಾರಕ? ದ ನ್ಯೂ ಯಾರ್ಕ್‌ ಟೈಮ್ಸ್‌ ತಿಳಿಸಿದ್ದು: “ಪ್ಲುಟೋನಿಯಂ ವಿದ್ಯುತ್‌ ವಿಕಿರಣ ಶಕ್ತಿಯಾಗಿ 250,000 ವರ್ಷ ಉಳಿಯುತ್ತದೆ. ಮತ್ತು ಸೇದುವಲ್ಲಿ ಯಾ ನುಂಗುವಲ್ಲಿ ಸೂಕ್ಷ್ಮದರ್ಶಕೀಯ ಕಣಗಳೂ ಮಾರಕವಾಗಿ ಪರಿಣಮಿಸಬಲ್ಲವು.” ನ್ಯೂಸ್‌ವೀಕ್‌ ಪತ್ರಿಕೆ ಹೇಳಿದ್ದು: “ಪ್ಲುಟೋನಿಯಮಿನ ಒಂದು ಕಣವನ್ನು ಸೇದುವುದೂ ಕ್ಯಾನ್ಸರಿಗೆ ಕಾರಣವಾಗಬಲ್ಲದು.”

ನ್ಯೂಕ್ಲಿಯರ್‌ ಕಚಡದ ಒಡನೆ ಸಂಭವಿಸುವ ಮತ್ತು ದೂರನೋಟದ ಪರಿಣಾಮ ಇದುವರೆಗೆ ತಿಳಿದು ಬಂದಿಲ್ಲ. ಒಂದು ವೇಳೆ ಅದು ಎಂದಿಗೂ ತಿಳಿದು ಬರಲಿಕ್ಕಿಲ್ಲ. ಆದರೆ, ಇಂಥ ಒಂದು ಸ್ಥಾವರದ ಸುತ್ತ ಕೆಲವು ಮೈಲು ದೂರ ಜೀವಿಸುತ್ತಿದ್ದವರಲ್ಲಿ 162 ಕ್ಯಾನ್ಸರ್‌ ಕೇಸುಗಳು ವರದಿಯಾಗಿವೆ ಎಂದು ಹೇಳುವುದಷ್ಟೆ ಸಾಕು. ಜನರು ನೀರು ಕುಡಿಯಲು ಹೆದರುತ್ತಾರೆ ಮತ್ತು ಭಯ ಧಾರಾಳವಿದೆ. ಯೂನಿವರ್ಸಿಟಿ ಮತ್ತು ಸ್ಥಾವರದ ಕಾರ್ಮಿಕರ ವೈದ್ಯರೊಬ್ಬರು ಹೇಳಿದ್ದು: “ಅವರಲ್ಲಿ ಸುಮಾರು 6ರಿಂದ 200 ಹೆಚ್ಚು ಕ್ಯಾನ್ಸರ್‌ ಕೇಸುಗಳು ಬರಲಿವೆ. ಅವರೆಲ್ಲ ಭಯ ಪಟ್ಟಿದ್ದಾರೆ. ಅವರಿಗೆ ತಮ್ಮ ಪರಿಸರ ಮತ್ತು ಜೀವದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದೇವೆಂಬ ಅನಿಸಿಕೆ ಇದೆ.”

ಮತ್ತು ಅದು ನಿಜ. ಅನೇಕ ಶತಕಗಳಿಗೆ ಮುನ್ನ ಯೆಹೋವನ ಒಬ್ಬ ನಂಬಿಗಸ್ತ ಪ್ರವಾದಿ ಹೇಳಿದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲಿಲ್ಲವ್ಲೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಇತಿಹಾಸ ಈ ಮಾತುಗಳನ್ನು ಸತ್ಯವೆಂದು—ಈ ಅಂತ್ಯ ದಿನಗಳಲ್ಲಿ ನಾಟಕೀಯವಾಗಿ ರುಜು ಪಡಿಸಿದೆ. ಹೆಚ್ಚುತ್ತಿರುವ ಕಸದ ಬಿಕ್ಕಟ್ಟು, ಮನುಷ್ಯನು ವಿವೇಕದಿಂದ ಹೆಜ್ಜೆ ಇಡುವುದರಲ್ಲಿ ಮಾಡಿರುವ ಅನೇಕ ಅಪಜಯಗಳಲ್ಲಿ ಒಂದೇ ಒಂದು ಉದಾಹರಣೆಯಾಗಿದೆ.

ಆದರೂ, ಹತಾಶರಾಗುವ ಅವಶ್ಯವಿಲ್ಲ. ಬೇಗನೆ ಈಗಿನ ವಿಷಯ ವ್ಯವಸ್ಥೆ ತೊಲಗಿಸಲ್ಪಟ್ಟು ಸೃಷ್ಟಿಕರ್ತನಿಂದ ನೂತನ ವ್ಯವಸ್ಥೆಯೊಂದು ತರಲ್ಪಡುವುದೆಂದು ಬೈಬಲಿನ ಭವಿಷ್ಯವಾಣಿ ಸ್ಪಷ್ಟವಾಗಿ ತಿಳಿಸುತ್ತದೆ. ಆತನು ಇನ್ನು ಹೆಚ್ಚುಕಾಲ ಮನುಷ್ಯನು ಭೂಮಿಗೂ ತನಗೂ ಮಾಡುತ್ತಿರುವ ವಿಷಯಗಳ ಕಡೆಗೆ ತಾಳ್ಮೆ ತೋರಿಸದೆ “ಲೋಕನಾಶಕರನ್ನು ನಾಶ” ಮಾಡುವನು. (ಪ್ರಕಟನೆ 11:18) ತದನಂತರ, ಸೃಷ್ಟಿಕರ್ತನ ನಿರ್ದೇಶನಾನುಸಾರ ಮಾನವರು ಭೂಮಿಯನ್ನು ಯೋಗ್ಯವಾಗಿ ಹೇಗೆ ಪರಾಮರಿಸಬೇಕು ಮತ್ತು ಅದರ ಸಂಪನ್ಮೂಲಗಳನ್ನು ಹೇಗೆ ವಿವೇಕದಿಂದ ಉಪಯೋಗಿಸಬೇಕೆಂದು ಕಲಿಯುವರು.— ಕೀರ್ತನೆ 37:34; 2 ಪೇತ್ರ 3:10-13. (g90 9/22)

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

ನ್ಯೂಕ್ಲಿಯರ್‌ ಕಚಡ 250,000 ವರ್ಷಕಾಲ ಮಾರಕವಾಗಿ ಉಳಿಯಬಲ್ಲದು

[ಪುಟ 10ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಪ್ಲುಟೋನಿಯಮಿನ ಒಂದು ಕಣವನ್ನು ಸೇದುವುದೂ ಕ್ಯಾನ್ಸರಿಗೆ ಕಾರಣವಾಗಬಲ್ಲದು”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ