ಫಕ್ಕನೆ ನಾಶನ! ಅವರು ಅದನ್ನು ಹೇಗೆ ನಿಭಾಯಿಸಿದರು?
ಸಪ್ಟಂಬರ 16, 1989ರ ಶನಿವಾರ ಚಂಡಮಾರುತ ಹ್ಯುಗೊ ಗೌಡೆಲೊಪ್ ಮೇಲೆ ಹೊಡೆದಾಗ, ರಾತ್ರಿಯು ಮುಗಿಯುವುದಿಲ್ಲವೋ ಎಂಬಂತೆ ತೋರುತ್ತಿತ್ತು. ಅದು “ಘೋರ ಸ್ವಪ್ನದ ಒಂದು ರಾತ್ರಿ” ಎಂದು ಕರೆಯಲ್ಪಟ್ಟಿತು. ಅನಂತರ ಮೊಂಟ್ಸರ್ರಾಟ್ನ್ನು ತಾಸಿಗೆ 140 ಮೈಲು ವೇಗದ ಬಿರುಗಾಳಿ ಭಯಗೊಳಿಸಿತು. ಈ ಕ್ಯಾರಬಿಯನ್ ದ್ವೀಪಗಳಲ್ಲಿ 20ಕ್ಕಿಂತಲೂ ಹೆಚ್ಚು ಮಂದಿ ಸತ್ತರು.
ಅದರ ಧಾಳಿಯನ್ನು ಮುಂದುವರಿಸುತ್ತಾ ಹ್ಯುಗೊ ಸೈಂಟ್ ಕಿಟ್ಸ್ನ ಮತ್ತು ನೆವಿಸ್ನ ಲಿವಾರ್ಡ್ ದ್ವೀಪಗಳನ್ನು ಧ್ವಂಸಮಾಡಿತು. ಮರುದಿನ ರಾತ್ರಿ ಅದು ಅಮೆರಿಕದ ಸೈಂಟ್ ಕ್ರೊಕ್ಸ್ ಮತ್ತು ಸೈಂಟ್ ತೋಮಸ್ನ ವರ್ಜಿನ್ ದ್ವೀಪಗಳನ್ನು ಹಾನಿಗೊಳಿಸಿತು. ಸೈಂಟ್ ಕ್ರೊಕ್ಸ್ನ ಮೇಲೆ ಅದು ಗೈದ ನಾಶನವು ನಂಬಲು ನಿಲುಕದ್ದು. ಮುಂದುವರಿಸುತ್ತಾ ಸೋಮವಾರ ಮಧ್ಯಾಹ್ನದೊತ್ತಿಗೆ ಪ್ಯುರ್ಟೊರಿಕೋದ ಈಶಾನ್ಯ ಭಾಗವನ್ನು ನೆಲಸಮಗೊಳಿಸಿತ್ತು, ವಿಶೇಷವಾಗಿ ವಿಕ್ಯುಸ್ ಮತ್ತು ಕುಲೆಬ್ರ ದ್ವೀಪಗಳ ಚಿಕ್ಕ ಸಮುದ್ರತೀರಗಳನ್ನು ಧ್ವಂಸಗೊಳಿಸಿತ್ತು.
ಅದರ ಶಕ್ತಿಯನ್ನು ನೀರಿನ ಮೇಲೆ ಇನ್ನಷ್ಟು ಬಲಗೊಳಿಸಿ, ಹ್ಯುಗೊ ತನ್ನನ್ನು ಇನ್ನೊಂದು ರಾತ್ರಿಸಮಯದ ಧಾಳಿಗೆ ಸಿದ್ಧಗೊಳಿಸಿತು. ಗುರುವಾರ ಮಧ್ಯರಾತ್ರಿ ಸಮೀಪದಲ್ಲಿ ತಾಸಿಗೆ 135 ಮೈಲು ವೇಗದ ಬಿರುಗಾಳಿಯಿಂದೊಡಗೂಡಿ, ಘನಗಾತ್ರದ ತುಫಾನುಗಳು ಅಮೆರಿಕದ ದಕ್ಷಿಣ ಕರೊಲಿನಾದ ಕರಾವಳಿ ತೀರವನ್ನು ಅಪ್ಪಳಿಸಲಾರಂಭಿಸಿತು. ಅದು ಚಾರ್ಲ್ಸ್ಟನ್ನ ದಕ್ಷಿಣದಿಂದ ಹಿಡಿದು ಮರ್ಟಲ್ ಸಮುದ್ರ ತೀರವನ್ನು ದಾಟಿ ನೂರು ಮೈಲುಗಳಿಗಿಂತಲೂ ಅಗಲದಲ್ಲಿ ನಾಶನದ ದಾರಿಯನ್ನೇ ತೆರೆಯಿತು. ಅದರ ಧ್ವಂಸತೆಯ ಹೊಡೆತವು ಸುಮಾರು 200 ಮೈಲುಗಳಿಗಿಂತಲೂ ಹೆಚ್ಚು ಹರವಿನ ವ್ಯಾಪಕವಾಗಿದ್ದು, ಉತ್ತರ ಕರೊಲಿನಾದ ಚಾರ್ಲ್ಸ್ಟ್ನಷ್ಟು ದೂರ ವಿದ್ಯುಚ್ಛಕ್ತಿ ಕಂಬಗಳನ್ನು ಮತ್ತು ಮಹಾಗಾತ್ರದ ಓಕ್ ಮರಗಳನ್ನು ಬೀಳಿಸಿತ್ತು.
ಬೀಸುಗಾಳಿ ಮತ್ತು 17-ಅಡಿ ಎತ್ತರದ ತೆರೆಗಳು ಅನೇಕ ಮನೆಗಳನ್ನು ಕೊಚ್ಚಿಕೊಂಡು ಹೋಗಿ, ಇತರ ನೂರಾರುಗಳನ್ನು ನಾಶ ಮಾಡಿದಾಗ, ಕರಾವಳಿ ತೀರಗಳನ್ನು ಬಿಟ್ಟು ಓಡಿಹೋದ ನೂರಾರು ಸಾವಿರಾರು ಮಂದಿ ಪಾರಾಗಿ ಉಳಿದರು. ಸಾವಿರಾರು ಮನೆಗಳು ಮತ್ತು ಇತರ ಕಟ್ಟಡಗಳು ಹಾನಿಗೊಳಗಾದವು.
ನಾಶನವನ್ನು ನಂಬಬೇಕಾದರೆ ಅದನ್ನು ನೋಡಬೇಕು—ಆಟಿಕೆಗಳೋಪಾದಿ ಜೋಡಿಸಿಟ್ಟ ನಾವೆಗಳು ಆರು ಅಡಿ ಎತ್ತರಕ್ಕೆ ಎಸೆಯಲ್ಪಟ್ಟವು, ಹೊಯಿಗೆಯು ರಸ್ತೆಗಳ ಮೇಲೆ ಮೂರು ಅಡಿ ದಪ್ಪದಲ್ಲಿ ಹಾಕಲ್ಪಟ್ಟಿತು, ಬಹುಗಾತ್ರದ ಮರಗಳು ಮನೆಗಳ ಮೇಲ್ಗಡೆ ಇಡಲ್ಪಟ್ಟವು, ಒಂದು ದೊಡ್ಡಗಾತ್ರದ ಹಸ್ತದಿಂದ ಸಿಗಿಯಲ್ಪಟ್ಟವೋ ಎಂಬಂತೆ ಮನೆಗಳ ಸೂರುಗಳಲ್ಲಿ ದೊಡ್ಡ ಬಿರುಕು ಮಾಡಲ್ಪಟ್ಟಿದ್ದವು. ‘ನನ್ನ ಮಗನು ಮಾರಲು ಹುಂಜಗಳನ್ನು ಸಾಕುತ್ತಿದ್ದನು’ ಎಂದು ವರದಿ ಮಾಡಿದಳು ಒಬ್ಬ ಹೆಂಗಸು. ‘ಅವನು ಅವು ಹಾರಿಹೋಗದಂತೆ ಅವುಗಳನ್ನು ಗೂಟಕ್ಕೆ ಬಿಗಿದು ಕಟ್ಟುತ್ತಿದ್ದನು ಮತ್ತು ಹೆಚ್ಚಿನವು ಹೋಗಿರಲಿಲ್ಲ. ಆದರೆ ಅವುಗಳ ಮೇಲೆ ಪುಕ್ಕಗಳೇ ಇರಲಿಲ್ಲ.’
ಆದರೂ, ಎಚ್ಚರಿಕೆಗಳನ್ನು ಆಲಿಸಿದ್ದರಿಂದ ಅಮೆರಿಕದಲ್ಲಿ ಕೇವಲ 26ರಷ್ಟು ಜನರು ಮತ್ತು ಕ್ಯಾರಿಬಿಯನ್ನಲ್ಲಿ ಅದಕ್ಕಿಂತಲೂ ಕಡಿಮೆ ಜನರು ಸತ್ತರು. ಇನ್ನೊಂದು ಪಕ್ಕದಲ್ಲಿ, ಆರ್ಥಿಕ ನಷ್ಟವು ಅಧಿಕ ಪರಿಣಾಮದ್ದಾಗಿದ್ದು, ಸಾವಿರಾರು ಮಿಲಿಯ ಡಾಲರುಗಳಷ್ಟು ಆಗಿರುತ್ತದೆ. ಅಮೆರಿಕ ಸರಕಾರದ ಶಾಸನವು ಹ್ಯುಗೊ ಆಘಾತಕ್ಕೆ ಬಲಿಯಾದವರಿಗೆ ತುರ್ತಿನ ನೆರವಾಗಿ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳನ್ನು ಬಿರುಗಾಳಿಯ ನಂತರ ಒದಗಿಸಿತು, ಇದು ಅಂದಿನ ತನಕ ಮಂಜೂರು ಮಾಡಿದ ಅತಿದೊಡ್ಡ ಪರಿಹಾರದ ಬಿಲ್ ಆಗಿರುತ್ತದೆ. ಆ ದಾಖಲೆಯು ಬಲು ಬೇಗನೆ ಮರೆಯಾಯಿತು.
ಒಂದು ಅಧಿಕ ಫಕ್ಕನೆಯ ನಾಶನ
ಅಕ್ಟೋಬರ 17ರಲ್ಲಿ, ಹ್ಯುಗೊ ನೆಲಪ್ರದೇಶವನ್ನು ಸ್ಪರ್ಶಿಸಿದ ಒಂದು ತಿಂಗಳ ನಂತರ ಉತ್ತರ ಕ್ಯಾಲಿಫೊರ್ನಿಯವು ರಿಕ್ಟರ್ ಮಾಪನದಲ್ಲಿ 7.1 ಪರಿಮಾಣದ ಭೂಕಂಪದಿಂದ ಕಂಪಿಸಲ್ಪಟ್ಟಿತು. ಸೇತುವೆಗಳು ಮುರಿದು ಬಿದ್ದವು, ಕಟ್ಟಡಗಳು ಅಡಿಮೇಲಾದವು ಮತ್ತು ನೆಲವು ಸುಮಾರು 15 ಸೆಕಂಡು ಅಥವಾ ಹೆಚ್ಚು ಸಮಯ ಅಲುಗಾಡುತ್ತಾ ಕಂಪಿಸುವಾಗ, ಸಾವಿರಾರು ಜನರು ಭಯಬೀತರಾಗಿ ಅರಚುತ್ತಾ ತಮ್ಮ ಮನೆಗಳಿಂದ ಹೊರಗೆ ಓಡಿದರು ಯಾ ಶಕ್ತಿಹೀನರಾದರು. ಒಂದು ಸಾವಿರಕ್ಕಿಂತಲೂ ಹೆಚ್ಚು ಮನೆಗಳು ಹಾನಿಗೊಳಗಾದವು ಯಾ ನೂರಾರು ಅಥವಾ ಒಂದು ಸಾವಿರಕ್ಕಿಂತಲೂ ಹೆಚ್ಚು ಧ್ವಂಸಗೊಂಡವು. ಭೂಕಂಪನದ ಒಂದು ವಾರದ ನಂತರ, ಸಾಂತಾ ಕ್ರುಜ್ ಪ್ರದೇಶದ ಸುಮಾರು ಹತ್ತು ಸಾವಿರ ನಿವಾಸಿಗಳು ತಮ್ಮ ಮನೆಗಳಿಗೆ ಹಿಂತೆರಳಲು ಅಶಕ್ತರಾಗಿದ್ದರು ಯಾಕಂದರೆ ರಸ್ತೆಗಳು ಭೂಕುಸಿತದಿಂದ ತಡೆಯಲ್ಪಟ್ಟಿದ್ದವು.
ಕಟ್ಟಡಗಳಿಗಿದ್ದ ಭೂಕಂಪ-ನಿರೋಧಕದ ಕಾಯಿದೆಗಳನ್ನು ಅನುಸರಿಸದೆ ಇರುತ್ತಿದ್ದಲ್ಲಿ, ಮೃತ್ಯು ಮತ್ತು ನಾಶನವು ಇನ್ನಷ್ಟು ಹೆಚ್ಚು ಮಟ್ಟದ್ದಾಗಿತ್ತು. ಉದಾಹರಣೆಗೆ 1988ರ ಅರ್ಮೆನಿಯದ ಭೂಕಂಪದಲ್ಲಿ ಇದಕ್ಕಿಂತಲೂ ಕಡಿಮೆ ಶಕ್ತಿಯದ್ದು 25,000 ಮಂದಿಯನ್ನು ಹತಿಸಿತ್ತು. ಆದರೂ, ಕ್ಯಾಲಿಫೊರ್ನಿಯದಲ್ಲಿ 70ಕ್ಕಿಂತಲೂ ಕಡಿಮೆ ಜನರು ಸತ್ತರು, ಇವರಲ್ಲಿ ಹೆಚ್ಚಿನವರು ಇಂಟರ್ಸ್ಟೇಟ್ 880 ಹೆದ್ದಾರಿಯ ಒಂದು ಮೈಲು ಉದ್ದದ್ದ ವಿಭಾಗವು ಕೆಳಮಟ್ಟದ ರಸ್ತೆಯಲ್ಲಿ ಕುಸಿದು ಬಿದ್ದುದರಿಂದ ಸತ್ತರು.
ಅಮೆರಿಕದ ಇತಿಹಾಸದಲ್ಲಿ ನೈಸರ್ಗಿಕ ಅಪಘಾತವು ಇಷ್ಟೊಂದು ದುಬಾರಿಯದ್ದು ಎಂದೂ ಆಗಿರಲಿಲ್ಲ. ಮುಂದಿನ ವಾರದಲ್ಲಿ, ಸರಕಾರದ ಶಾಸನವು ನೆರವಾಗಿ ಸುಮಾರು ಆರು ಸಾವಿರ ಕೋಟಿ ರೂಪಾಯಿಗಳನ್ನು ನಂತರ ಒದಗಿಸಿತು. ಪುನಃ ಕಟ್ಟಲು ಅದಕ್ಕಿಂತಲೂ ಹೆಚ್ಚು ಆವಶ್ಯಕವಾಗಿತ್ತು. ಭೂಕಂಪದ ಜುಮ್ಲಾ ನಷ್ಟದ ಮೊತ್ತದ ಅಂದಾಜು ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳು “ಒಂದು ಸಮಂಜಸತೆಯದ್ದು” ಎಂದು ಕ್ಯಾಲಿಫೊರ್ನಿಯದ ವೈಯಕ್ತಿಕ ವಿಮಾ ಫೆಡರೇಶನ್ನ ಅಧ್ಯಕ್ಷರು ಹೇಳಿದರು.
ಮೂಲ ಆವಶ್ಯಕತೆಗಳ ಮರು ಎಚ್ಚರಿಕೆ
ಹ್ಯುಗೊ ಹೊಡೆತದ ಒಂದೆರಡು ದಿನಗಳ ನಂತರ ಚಾರ್ಲ್ಸ್ಟನ್ನ ಒಂದು ವಸತಿ ಪ್ರದೇಶದಲ್ಲಿ ಒಬ್ಬ ಮನುಷ್ಯನು ತನ್ನ ತೋಟದಲ್ಲಿ ಇದ್ದನು. ಪರಿಹಾರ ನೀಡುವ ಒಬ್ಬ ಕಾರ್ಮಿಕನು ಸವಾರಿಮಾಡಿ ಹೋಗುತ್ತಿರುವಾಗ, ಆ ಮನುಷ್ಯನು ವಿಚಾರಿಸಿದ್ದು: “ನಿನ್ನ ಹತ್ತಿರ ಒಂದು ಗ್ಲಾಸ್ ನೀರು ಇದೆಯೋ?” ಕುಡಿಯಲು ನೀರು ಸಹಿತ ಜನರ ಹತ್ತಿರ ಇರಲಿಲ್ಲವೆಂದು ಕಾರ್ಮಿಕನ ಮನಸ್ಸಿಗೆ ಕೆಲವು ಕ್ಷಣಗಳ ತನಕ ಹೊಳೆಯಲೇ ಇಲ್ಲ!
ಅಂತಹ ಸಂಕಟಕರ ಪರಿಸ್ಥಿತಿಗಳಲ್ಲಿರುವವರ ಮೂಲ ಆವಶ್ಯಕತೆಯೊಂದನ್ನು 1,900 ವರ್ಷಗಳಷ್ಟು ಹಿಂದೆ ಅಪೊಸ್ತಲ ಪೇತ್ರನು ಸೂಚಿಸಿದನು. “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ,” ಅಂದನು ಅವನು. “ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ.” (1 ಪೇತ್ರ 4:7, 8) ಈ ಮಾತುಗಳನ್ನು ಪೇತ್ರನು ಬರೆಯುವಾಗ ಸಮಗ್ರ ಯೆಹೂದಿ ವಿಷಯಗಳ ವ್ಯವಸ್ಥೆಯ ಅಂತ್ಯವು ಸಮೀಪಿಸಿತ್ತು. ಅಂತ್ಯವು ಕೆಲವು ವರ್ಷಗಳ ನಂತರ ಅಂದರೆ ಸಾ. ಶ. 70ರಲ್ಲಿ ಯೆರೂಸಲೇಮ್ನ್ನು ರೋಮೀಯ ಸೇನೆಗಳು ಧ್ವಂಸಗೊಳಿಸಿದಾಗ ಬಂತು. ಆದಾಗ್ಯೂ, ಕ್ರೈಸ್ತರಿಗೆ ಮೊದಲೇ ಒಂದು ಸೂಚನೆ ಕೊಡಲ್ಪಟ್ಟಿತ್ತು, ಮತ್ತು ಅವರು ಅದನ್ನು ಆಲಿಸಿ, ಯೊರ್ದನ್ ನದಿಯ ಆಚೇಕಡೆ ಇರುವ ಪೆಲ್ಲಾದ ಹತ್ತಿರ ಬೆಟ್ಟಗಳಿಗೆ ಪಲಾಯನಗೈದರು.—ಲೂಕ 21:20-22.
ಆ ಪರ್ವತ ಪ್ರದೇಶಕ್ಕೆ ಪ್ರಾಯಶಃ ಸಾವಿರಾರು ಕ್ರೈಸ್ತರು ಆಗಮಿಸಿದಾಗ ಇದ್ದ ಸನ್ನಿವೇಶವನ್ನು ಊಹಿಸಲು ಪ್ರಯತ್ನಿಸಿರಿ. ಅವರಿಗೆ ಅಲ್ಲಿ ಮನೆಗಳಾಗಲಿ ಯಾ ಇತರ ಮೂಲಭೂತ ಆವಶ್ಯಕತೆಗಳ ಪೂರೈಕೆ ಆಗಲಿ ಇರಲಿಕ್ಕಿಲ್ಲ, ಬದಲು ತಾತ್ಕಾಲಿಕ ಆಶ್ರಯಗಳನ್ನು ಮಾಡಬೇಕಿತ್ತು. ಅಲ್ಲಿ ಕೊರತೆಗಳು ಮತ್ತು ಕಷ್ಟಗಳು ಇದ್ದವು. (ಮತ್ತಾಯ 24:16-20) ಅಂತಹ ಸಂಕಟಕರ ಸಮಯದಲ್ಲಿ ಅವರಿಗೆ ವಿಶೇಷವಾಗಿ ಬೇಕಾಗಿರುವುದು ಏನಾಗಿತ್ತು? “ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ,” ಪೇತ್ರನಂದನು. ಹೌದು, ನಿಭಾಯಿಸಿಕೊಳ್ಳಲು ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವುದು.
ಹ್ಯುಗೊ ಮತ್ತು ಭೂಕಂಪದಿಂದ ಇತ್ತೀಚೆಗೆ ನಡೆದ ಧ್ವಂಸತೆಯನ್ನು ಹಿಂಬಾಲಿಸಿ ಅಂತಹ ಸಹಾಯಕರ ಮತ್ತು ಪ್ರೀತಿಯ ಆತ್ಮವು ಪ್ರದರ್ಶಿಸಲ್ಪಟ್ಟಿದೆಯೋ?
ಹ್ಯುಗೊವಿನ ನಾಶನವನ್ನು ನಿಭಾಯಿಸುವುದು
ಸೈಂಟ್ ಕ್ರೊಕ್ಸ್ನಲ್ಲಿ ಹ್ಯುಗೊವಿನ ಪಾರಾದವರು, ಒಬ್ಬರು ಇನ್ನೊಬ್ಬರನ್ನು ಸಂತೋಷ ಮತ್ತು ಉಪಶಮನತೆಯಿಂದ ಆಲಿಂಗಿಸಿದರು, ಕೇವಲ ಜೀವಂತವಾಗಿ ಉಳಿದದ್ದಕ್ಕಾಗಿ. ಬಲುಬೇಗನೆ ಮಹಾ ಪ್ರಮಾಣದ ಪರಿಹಾರ ಕ್ರಮಗಳು ಕೈಗೊಳ್ಳಲ್ಪಟ್ಟು, ಬಲಿಯಾದವರಿಗೆ ಆಶ್ರಯ ಮತ್ತು ಆಹಾರ ಒದಗಿಸಲ್ಪಟ್ಟಿತು. ಆದಾಗ್ಯೂ ಬಲಿಯಾದವರ ದೌರ್ಭಾಗ್ಯದಿಂದ ಕೆಲವರು ಪ್ರಯೋಜನ ಪಡೆಯಲು ಪ್ರಯತ್ನಿಸಿದರು. ಲಾಭಪಡೆಯುವವರು ಮಿತಿಮೀರಿ ಬೆಲೆ ಹಾಕಿ ಹಣಗಳಿಸಲು ಪ್ರಯತ್ನಿಸಿದರು. ಉದಾಹರಣೆಗೆ ಮಂಜುಗಡ್ಡೆಯ ಚೀಲದ ಬೆಲೆ ಸಾಮಾನ್ಯವಾಗಿ ರೂ.14ಯ ಬದಲು ರೂ.180ಕ್ಕೆ ಮಾರಲ್ಪಟ್ಟಿತು. ಅಲ್ಲಿ ದೋಚುವಿಕೆಯೂ ಇತ್ತು. ಆದರೆ ಅಂತಹ ನಿರ್ದಯತ್ವದ ಕ್ರಿಯೆಗಳ ನಡುವೆ ಮಾನವ ದಯೆಯ ಮತ್ತು ಕನಿಕರದ ಅನೇಕ ಕೃತ್ಯಗಳು ಅಲ್ಲಿದ್ದವು. ವಿಶೇಷವಾಗಿ ಯೆಹೋವನ ಸಾಕ್ಷಿಗಳ ಪರಿಹಾರದ ಪ್ರಯತ್ನಗಳ ಕುರಿತಾದ ವರದಿಗಳು ವಿಶೇಷವಾಗಿ ಗಮನಾರ್ಹವಾಗಿವೆ.
ಹ್ಯುಗೊ ಬಡೆಯುವ ಮೊದಲೇ, ಕ್ರೈಸ್ತ ಹಿರಿಯರು ಕಡಿಮೆ ಭದ್ರತೆಯ ಮನೆಗಳಿಗೆ ಭೇಟಿಯನ್ನು ನೀಡಿ, ಗಟ್ಟಿಯಾಗಿ ಕಟ್ಟಿರುವ ರಾಜ್ಯಸಭಾಗೃಹಗಳಿಗೆ ಇಲ್ಲವೇ ಅವರ ಕ್ರೈಸ್ತ ಸಹೋದರರ ಸುರಕ್ಷತೆಯ ಮನೆಗಳಿಗೆ ಹೋಗುವಂತೆ ಅವರನ್ನು ಒತ್ತಾಯಿಸಲಾಗಿದೆ. ದಕ್ಷಿಣ ಕರೊಲಿನಾದ ಸಮ್ಮರ್ವಿಲ್ನ ರಾಜ್ಯ ಸಭಾಗೃಹದಲ್ಲಿ 50 ಜನರಿಗಿಂತಲೂ ಹೆಚ್ಚು ಜನರು ಬಿರುಗಾಳಿಯ ರಾತ್ರಿ ನಿಲ್ಲುತ್ತಿದ್ದರು!
ಗೌಡೆಲೋಪ್ನಲ್ಲಿ ಅಂತಹ ಸಿದ್ಧತೆಗಳು ಜೀವರಕ್ಷಕಗಳಾಗಿ ರುಜುವಾದವು. ಆ ಒಂದು ದ್ವೀಪದಲ್ಲಿ ಮಾತ್ರವೇ ಸಾಕ್ಷಿಗಳ 117 ಮನೆಗಳು ನಾಶಗೊಂಡವು, ಮತ್ತು ಬೇರೆ ಸಾಕ್ಷಿಗಳ ಸುಮಾರು 300 ಮನೆಗಳು ತೀವ್ರವಾಗಿ ಹಾನಿಗೊಂಡವು. ಇದಕ್ಕೆ ಕೂಡಿಸಿ, 8 ರಾಜ್ಯ ಸಭಾಗೃಹಗಳು ತೀವ್ರವಾಗಿ ಹಾನಿಗೊಂಡರೆ, ಇತರ 14 ಸ್ವಲ್ಪ ಕಡಿಮೆ ಹಾನಿಗೊಳಗಾದವು.
ಅನೇಕ ಸಾಕ್ಷಿಗಳು ಗಾಯಗೊಂಡರೂ, ಗೌಡೆಲೋಪ್ನಲ್ಲಾಗಲಿ ಯಾ ಕ್ಯಾರಿಬಿಯನ್ನ ಬೇರೆ ಎಲ್ಲಿಯೂ ಯಾರೂ ಕೊಲ್ಪಡಲಿಲ್ಲ. ಆದಾಗ್ಯೂ, ಬಿರುಗಾಳಿಯು ಫಕ್ಕನೇ ಮನೆಯ ಮಾಡನ್ನು ಹೊಡೆದುರುಳಿಸಿದಾಗ, ಒಬ್ಬ ಸಾಕ್ಷಿಯ ಪ್ರಾಯಕ್ಕೆ ಬಂದ ಮಗನು ಅಕ್ಷರಶಃ ಮೇಲಕ್ಕೆ ಸೆಳೆಯಲ್ಪಟ್ಟು ಕೊಲ್ಲಲ್ಪಟ್ಟನು.
ಬಿರುಗಾಳಿಯ ಮೂರು ದಿನಗಳ ತನಕ ಗೌಡೆಲೋಪ್ನಲ್ಲಿರುವ ತಮ್ಮ ಸಹೋದರರೊಂದಿಗೆ ಸಹ ಸಾಕ್ಷಿಗಳು ಟೆಲಿಪೋನ್ ಮೂಲಕ ಸಂಪರ್ಕ ಬೆಳೆಸ ಶಕ್ತರಾಗಲಿಲ್ಲ. ತನ್ಮಧ್ಯೆ, ಆದಾಗ್ಯೂ ದ್ವೀಪದಲ್ಲಿದ್ದ ಸಂಚರಣೆ ಮೇಲ್ವಿಚಾರಕರು ಮತ್ತು ಬ್ರಾಂಚ್ ಆಫೀಸಿನ ಸಿಬ್ಬಂಧಿಗಳು ಅವರ ಸಹೋದರರ ಅಂದರೆ ಅವರ ಜೊತೆ ಸಾಕ್ಷಿಗಳ ಅಗತ್ಯತೆಗಳ ಸಮೀಕ್ಷೆ ಮಾಡಲು ಸಂಸ್ಥಾಪಿಸುವಂತೆ ಒಟ್ಟಾಗಿ ಸೇರಿದರು.
ಶೀಘ್ರದಲ್ಲಿ ನೀರು, ಆಹಾರ, ಬಟ್ಟೆ ಮತ್ತು ಇನ್ನಿತರ ಆವಶ್ಯಕತೆಗಳನ್ನು ಕಡಿಮೆ ಗಂಭೀರ ಬಾಧಿತರಾದವರಿಂದ ಉದಾರವಾಗಿ ದಾನಮಾಡಲಾಯಿತು. ನೀರು ಬ್ರಾಂಚ್ ಆಫೀಸಿನಲ್ಲಿ ದೊರಕುತ್ತಿತ್ತು ಮತ್ತು ದೊರಕುವ ಎಲ್ಲಾ ಪಾತ್ರೆಗಳನ್ನು ತಂದು ಸಹೋದರರು ಅದನ್ನು ತುಂಬಿಸಿ ಅಗತ್ಯವಿರುವವರಿಗೆ ಅದನ್ನು ಹಂಚುವುದನ್ನು ಕಾಣುವುದು ಹೃದಯವನ್ನು ಬೆಚ್ಚಗೆಗೊಳಿಸುವಂತಹದ್ದಾಗಿತ್ತು. ಗೌಡೆಲೋಪಿನಲ್ಲಿರುವ ತಮ್ಮ ಸಹೋದರರ ಅಗತ್ಯತೆಗಳನ್ನು ಪೂರೈಸಲು ಪ್ರತಿಕ್ರಿಯೆ ತೋರಿಸಿದವರಲ್ಲಿ ಮಾರ್ಟಿನಿಕ್ಯುವಿನ ಸಹೋದರರು ಇತರ ದೇಶಗಳಲ್ಲಿ ಮೊದಲಿಗರು.
ಗೌಡೆಲೋಪ್ ಫ್ರೆಂಚ್ ಹತೋಟಿಯಲ್ಲಿರುವುದರಿಂದ, ಫ್ರಾನ್ಸಿನಲ್ಲಿರುವ ಯೆಹೋವನ ಸಾಕ್ಷಿಗಳು ಭಾರವಾದ ಪ್ಲಾಸ್ಟಿಕ್ ಹಾಳೆಗಳನ್ನು, ನೈಲಾನ್ ಹಗ್ಗಗಳನ್ನು ಮತ್ತು ನೀರಿಗಾಗಿ ಪ್ಲಾಸ್ಟಿಕ್ ಡಬ್ಬಗಳನ್ನು ವಿಮಾನದ ಮೂಲಕ ಬಲುಬೇಗನೆ ಕಳುಹಿಸಿದರು. ತದನಂತರ, ಬೇಗನೆ ಗೌಡೆಲೋಪ್ಗೆ ಹಡಗಿನ ಮೂಲಕ 100 ಮೆಟ್ರಿಕ್ ಟನ್ ಕಟ್ಟಡ ಸಾಮಗ್ರಿಗಳನ್ನು ಕಳುಹಿಸಿ, ಕೂಡಲೆ ವಿತರಣೆ ಮಾಡಲಾಯಿತು.
ಪ್ಯುರ್ಟೊರಿಕೋದ ಸಾಕ್ಷಿಗಳು ಕೂಡಾ ತಕ್ಷಣವೇ ಪರಿಹಾರ ಕಾರ್ಯಕ್ರಮವನ್ನು ಸಂಸ್ಥಾಪಿಸಲಾರಂಭಿಸಿದರು. ಬಿರುಗಾಳಿಯ ವಾರಾಂತ್ಯದಲ್ಲಿ ದ್ವೀಪದ ಅಬಾಧಿತ ಪ್ರದೇಶಗಳಿಂದ ನೂರಾರು ಮಂದಿ ಹಾನಿಗೊಳಗಾದ ನಗರಗಳಿಗೆ ಬಂದು ಮನೆಗಳನ್ನು ದುರುಸ್ತಿಗೊಳಿಸಲು ನೆರವಾದರು. ಆಹಾರ, ಸಾಮಗ್ರಿಗಳು, ಮತ್ತು 40 ಸಾಕ್ಷಿಗಳು ಚಿಕ್ಕ ಕುಲೆಬ್ರಾ ದ್ವೀಪಕ್ಕೆ ಪಯಣ ಬೆಳೆಸಿದರು. ಅಲ್ಲಿಯ ರೇಡಿಯೊ ಸ್ಟೇಶನ್ ದುರುಸ್ತಿ ಮಾಡಿದ ಕೆಲಸಕ್ಕಾಗಿ ಬೇಗನೆ ಹೊಗಳಲಾರಂಭಿಸಿತು. ಮರುವಾರಾಂತ್ಯದಲ್ಲಿ 112 ಸಾಕ್ಷಿಗಳು, 6 ಟನ್ ಕಟ್ಟಡ ಸಾಮಗ್ರಿಗಳೊಂದಿಗೆ ತದ್ರೀತಿಯ ಸರಿಪಡಿಸುವ ಕೆಲಸಗಳಿಗಾಗಿ ಚಿಕ್ಕ ವಿಯಕ್ಯುಸ್ ದ್ವೀಪಕ್ಕೆ ಪಯಣಿಸಿದರು.
ಶುಕ್ರವಾರದ ತನಕ, ಅಂದರೆ ಬಿರುಗಾಳಿಯ 5 ದಿನಗಳ ನಂತರ ಪ್ಯುರ್ಟೊರಿಕೋದ ಸಹೋದರರು ಒಂದು ಸಾಮಗ್ರಿ ಸಾಗಣೆಯ ವಿಮಾನವನ್ನು ಬಾಡಿಗೆಗೆ ಪಡೆದು, ಸೈಂಟ್ ಕ್ರೊಕ್ಸ್ಗೆ ಆಹಾರ ಮತ್ತು ಮದ್ದುಗಳನ್ನು ಕೊಂಡೊಯ್ಯಶಕ್ತರಾಗಲಿಲ್ಲ. ಸಹೋದರರಲ್ಲೊಬ್ಬನು ವರದಿಸಿದ್ದು: “ವಿಮಾನದಿಂದ ಇಡೀ ದ್ವೀಪವು ಒಂದು ಕಸದ ಕೊಂಪೆಯಾಗಿ ತೋರುತ್ತಿತ್ತು. ಇಡೀ ಗ್ರಾಮಗಳೇ ಅಪ್ಪಳಿಸಲ್ಪಟ್ಟು, ತಿರುಚಲ್ಪಟ್ಟಿದ್ದವು. ಗುಡ್ಡಗಳ ಮೇಲೆಲ್ಲಾ ಮರದ, ಲೋಹದ ತುಂಡುಗಳು ಮತ್ತು ಕಸವು ತುಂಬಿತ್ತು; ಎಲ್ಲಿಯೂ ಹಸುರು ಕಾಣುತ್ತಿರಲಿಲ್ಲ, ಕೇವಲ ಕಂದುಬಣ್ಣದ ಮರದ ಕಾಂಡಗಳು ಮತ್ತು ತಾಸಿಗೆ 200 ಮೈಲು ವೇಗದಿಂದ ಬೀಸಿದ ಬಿರುಗಾಳಿಯಿಂದ ಒಣಗಿ ಹೋದ ಸುಡಲ್ಪಟ್ಟ ಹುಲ್ಲು ಮಾತ್ರ ಕಾಣುತ್ತಿತ್ತು,”
ಆದ ನಷ್ಟದ ವ್ಯಾಪಕತೆಯನ್ನು ಅಂದಾಜಿಸಿದ ನಂತರ, ಸಾಕ್ಷಿಗಳು 75 ಟನ್ನು ಕಟ್ಟಡದ ಸಾಮಗ್ರಿಗಳನ್ನು ರವಾನಿಸಿದರು. ಅಕ್ಟೋಬರದಲ್ಲಿ ಪ್ಯುರ್ಟೊರಿಕೋದ ಒಂದು ನೂರು ಸಾಕ್ಷಿಗಳು ಸೈಂಟ್ ಕ್ರೊಕ್ಸ್ನಲ್ಲಿದ್ದ ಸಹೋದರರಿಗೆ ಪುನಃ ಕಟ್ಟಲು ಸಹಾಯ ಮಾಡಿದರು. ರಾಜ್ಯ ಸಭಾಗೃಹವೊಂದು ಮಲಗುವ ಕೋಣೆಗಳಾಗಿ ಬಳಸಲಾಯಿತು. ಯೆಹೋವನ ಸಾಕ್ಷಿಗಳ ಎಲ್ಲಾ ಶಾಖಾ ಆಫೀಸುಗಳಲ್ಲಿ ಮಾಡಲಾಗುವಂತೆ, ಪ್ರತಿದಿನ ಒಂದು ಬೈಬಲ್ ವಚನದೊಂದಿಗೆ ಆರಂಭಿಸಲಾಗುತ್ತಿತ್ತು. ಸ್ಥಳೀಯ ಸಹೋದರಿಯರು ಸಹೋದರರಿಗಾಗಿ ತೊಳೆಯುವ, ಶುಚಿಗೊಳಿಸುವ ಮತ್ತು ಊಟ ತಯಾರುಗೊಳಿಸುವ ಕೆಲಸ ಮಾಡಿದರು.
ಶೈಲಾ ವಿಲ್ಯಮ್ಸ್ ಹಲವಾರು ವರ್ಷಗಳಿಂದ ಹೊಸ ಮನೆಕಟ್ಟಲು ಉಳಿತಾಯ ಮಾಡಿ ಕಟ್ಟಿದ್ದಳು ಮತ್ತು ಅವಳು ಇತ್ತೀಚೆಗೆ ಅದರ ಪ್ರವೇಶ ಮಾಡಿದ್ದಳು, ಅದು ಹ್ಯುಗೊದಿಂದ ಧ್ವಂಸ ಮಾಡಲ್ಪಟ್ಟಿತು. ನಷ್ಟಕ್ಕೆ ತುತ್ತಾದವರಿಗೆ ಸಹಾಯ ಮಾಡಲು ಪ್ಯುರ್ಟೊರಿಕೋದಿಂದ ಕ್ರೈಸ್ತ ಸಹೋದರರು ಬರುತ್ತಾರೆಂದು ಅವಳು ಕೇಳಿದಾಗ, ಅವಳದನ್ನು ತನ್ನ ಸಹ ಕಾರ್ಮಿಕರಿಗೆ ಹೇಳಿದಳು. ಆದರೆ ಅವರಂದದ್ದು: “ಅವರು ನಿನಗಾಗಿ ಏನೂ ಮಾಡುವುದಿಲ್ಲ, ಯಾಕಂದರೆ ನೀನು ಕಪ್ಪುವರ್ಣದವಳು, ಅವರಂತೆ ಸ್ಪಾನಿಷ್ ಅಲ್ಲ.” ಶೈಲಾ ಶೀಘ್ರದಲ್ಲಿಯೇ ಒಂದು ಪೂರ್ಣವಾದ ಹೊಸಮನೆಯನ್ನು ಹೊಂದಿದಾಗ ಎಂಥಹ ಆಶ್ಚರ್ಯ ಅವರಿಗೆ ಕಾದಿತ್ತು!
ಅಮೆರಿಕದ ಮಿಚಿಗನ್ನ ಐದು ವರ್ಷ ಪ್ರಾಯದವಳು ಸೈಂಟ್ ಕ್ರೊಕ್ಸ್ನಲ್ಲಿನ ಧ್ವಂಸತೆಯ ವಾರ್ತಾ ವರದಿಯನ್ನು ನೋಡಿದಾಗ, ತಮ್ಮ ಸ್ವತ್ತುಗಳನ್ನು ಕಳಕೊಂಡವರಿಗಾಗಿ ನೆರವಾಗಲು ಬಯಸಿದಳು. ‘ರಾಜ್ಯ ಸಭಾಗೃಹಕ್ಕೆ ಹೋಗುವಾಗ ಅವಳು ಚೆಂದವಾಗಿ ತೋರಲಿಕ್ಕಾಗಿ’ ಚಿಕ್ಕ ಹುಡುಗಿಯೊಂದಕ್ಕೆ ತನ್ನ ಉಡುಪೊಂದನ್ನು ಕೊಡಲು ತಾಯಿಯ ಅನುಮತಿಯನ್ನು ಕೇಳಿದಳು.
ತಾಯಿಯು ಗಮನಿಸಿದ್ದು, “ನನಗೆ ಆಶ್ಚರ್ಯವೆಂದರೆ ಅವಳು ತನ್ನಲ್ಲಿನ ಅತ್ಯುತ್ತಮವಾದುದರಲ್ಲಿ ಒಂದನ್ನು ಆರಿಸಿದ್ದಳು.” ಆ ಉಡುಪನ್ನು ಕಳುಹಿಸಲಾಯಿತು, ಪುಟ 16ರಲ್ಲಿ ಸೈಂಟ್ ಕ್ರೊಕ್ಸ್ನ ಮಗುವೊಂದು ಅದನ್ನು ಧರಿಸುವುದರಲ್ಲಿ ಸಂತೋಷಿಸುತ್ತಾಳೆ.
ಹ್ಯುಗೊ ಸಪ್ಟಂಬರ 22, ಶುಕ್ರವಾರ ಬೆಳಿಗ್ಯೆ ದಕ್ಷಿಣ ಕರೊಲಿನಾವನ್ನು ಕೊಚ್ಚಿಕೊಂಡು ಹೋದ ನಂತರ, ಒಂದು ಪರಿಹಾರ ಕಮಿಟಿಯನ್ನು ಬೇಗನೇ ರಚಿಸಲಾಯಿತು. ಬಾಧಿತವಾದ ಪ್ರದೇಶಗಳಲ್ಲಿರುವ ಹಲವಾರು ಸಭೆಗಳಲ್ಲಿದ್ದ ಕ್ರೈಸ್ತ ಹಿರಿಯರನ್ನು ಸಂಪರ್ಕಿಸಲಾಯಿತು ಮತ್ತು ಇವರು, ಬದಲಿಯಾಗಿ ಅವರ ಸಭೆಯ ಪ್ರತಿಯೊಬ್ಬ ಸದಸ್ಯನ ವರದಿಯೊಪ್ಪಿಸಿದರು. ಕೆಲವು ಸಾಕ್ಷಿಗಳ ಮನೆಗಳು ನಾಶಗೊಂಡಿದ್ದರೂ, ಮತ್ತು ಇನ್ನಿತರರ ಮನೆಗಳು ಬಹಳಷ್ಟು ಹಾನಿಗೊಳಗಾಗಿದ್ದರೂ ಯಾರೇ ಒಬ್ಬರು ಕೊಲ್ಲಲ್ಪಟ್ಟಿಲಿಲ್ಲ ಅಥವಾ ಘಾಸಿಯಾಗಿರಲಿಲ್ಲ. ಒಂದು ರಾಜ್ಯ ಸಭಾಗೃಹವು ತೀವ್ರವಾಗಿ ಹಾನಿಗೊಂಡಿತ್ತು ಮತ್ತು ಇತರ ರಾಜ್ಯ ಸಭಾಗೃಹಗಳು ಸ್ವಲ್ಪ ಹಾನಿಗೊಂಡಿದ್ದವು.
ಚಾರ್ಲ್ಸ್ಟನ್ನಲ್ಲಿ ವಿಶೇಷವಾಗಿ ವಿಷಯಗಳು, ಸಾವಿರಾರು ಮರಗಳು ಅಡ್ಡಬಿದ್ದು, ನೂರಾರು ಸೂರುಗಳು ಸೋರಲಾರಂಭಿಸಿದ್ದು, ಮನೆಗಳು ಧ್ವಂಸಗೊಂಡಿದ್ದು ಯಾ ಹಾನಿಗೊಂಡಿದ್ದು, ಕುಡಿಯುವ ನೀರು ಇಲ್ಲದೆ ಯಾ ಗ್ಯಾಸೊಲಿನ್ ದೊರಕದೆ ಬೋಳಾದ ರೀತಿಯಲ್ಲಿ ತೋರುತ್ತಿತ್ತು. ಆದರೂ, ಚಿತ್ರಣವು ಬಲುಬೇಗನೆ ಬದಲಿಸಿತು.
ಬಿರುಗಾಳಿಯ ಮರುದಿನ ಅಂದರೆ ಶನಿವಾರ ಬೆಳಿಗ್ಯೆ ಅನೇಕ ಚಾರ್ಲ್ಸ್ಟನ್ನ ಸಹೋದರರು ಸಹಾಯಕ್ಕಾಗಿ ಕಾದುನಿಂತಿದ್ದರು. ಹೊರ ಪ್ರದೇಶದಲ್ಲಿರುವ ಸಹೋದರರು ದಾರಿಯಲ್ಲಿ ಬರುತ್ತಾ ಇದ್ದಾರೆಂಬ ಸುದ್ದಿಯು ಕಟ್ಟಕಡೆಗೆ ಸಾಕ್ಷಿಗಳಿಗೆ ಬಂದು ತಲುಪಿದಾಗ ಸಂಭವಿಸಿದ್ದನ್ನು ಸಿಟಿ ಮೇಲ್ವಿಚಾರಕರಾದ ರೊನ್ ಎಡ್ಲಿಂಗ್ ಹೇಳುತ್ತಾರೆ. “ನಾವು ಹೊರಗೆ ಬಂದಾಗ, ಒಂದು ಎಂದೆಂದಿಗೂ ಅತಿ ಸುಂದರವಾಗಿರುವ ದೃಶ್ಯವನ್ನು ನಾವು ಕಂಡೆವು. ಸಾಮಾನುಗಳ ಗಾಡಿಗಳ ಸಾಲಿನಲ್ಲಿ, ಮೊದಲ ಟ್ರಕ್ಕಿನ ಮುಂದಿನ ಕಿಟಕಿಯಲ್ಲಿ ಮತ್ತು ಅದನ್ನು ಹಿಂಬಾಲಿಸಿ ಬರುತ್ತಿರುವ ಟ್ರಕ್ಕುಗಳಲ್ಲಿ ಒಂದು ಫಲಕವು ಹೀಗೆ ಓದಲ್ಪಡುತ್ತಿತ್ತು, ‘ಜೆಡಬ್ಲು (ಯೆಹೋವನ ಸಾಕ್ಷಿಗಳ) ಚಂಡಮಾರುತ ಪರಿಹಾರ ತಂಡ.’
“ಅಲ್ಲಿ ಸಾಮಾನು ಹೇರಿಕೊಂಡು ಬಂದ ಟ್ರಕ್ಗಳು, ಕಾರುಗಳು, ಟ್ರಕ್ಗಳೊಂದಿಗೆ ಜೋಡಿಸಲ್ಪಟ್ಟ ಬಂಡಿಗಳು ಮತ್ತು ಅವುಗಳೊಂದಿಗೆ ಸಾವಿರಾರು ಗ್ಯಾಲನ್ ನೀರು ಬಂದಿತ್ತು. ಅವರು ಚೈನ್ ಗರಗಸಗಳನ್ನು ಮತ್ತು ಅವುಗಳನ್ನು ನಡಿಸಲು 300 ಗ್ಯಾಲನ್ ಗ್ಯಾಸೊಲೀನ್ ತಂದಿದ್ದರು. ಆ ದೃಶ್ಯವನ್ನು ನಾನೆಂದೂ ಮರೆಯಲಾರೆ. ಆ ಕ್ಷಣ ನಾನು ಎಣಿಸಿದೆ, ‘ದೇವರ ಸಂಸ್ಥಾಪನೆಯಲ್ಲಿ ನಾನು ಅನುಭವಿಸಿದ ಅತ್ಯುತ್ತಮ ಕ್ಷಣಗಳಲ್ಲಿ ಇದೊಂದಾಗಿದೆ.’ ಆ ಸಹೋದರರು ವಿಷಮಸ್ಥಿತಿಯಲ್ಲಿ ಅಗತ್ಯವಿದ್ದ ಪೂರೈಸುವಿಕೆಗಳನ್ನು ತಂದದ್ದು ಮಾತ್ರವಲ್ಲ, ನಿರೀಕ್ಷೆಯನ್ನೂ ತಂದರು. ಆಗ ಪ್ರತಿಯೊಬ್ಬರು ನಮಗಿರುವ ಸಹೋದರತ್ವವೇನೆಂದು ಪ್ರತಿಯೊಬ್ಬನು ತಿಳಿದಿದ್ದಾರೆಂದು ನನಗೆ ನಿಶ್ಚಯವುಂಟು. ಕೆಲವೊಂದು ಸಮಯ ತಗಲುವುದಾದರೂ, ನಾವು ನಮ್ಮನ್ನೇ ಹೊರಗೆಳೆದು ಕೊಳ್ಳಲಿದ್ದೇವೆ.”
ಮುಂದಿನ ವಾರಾಂತ್ಯದಲ್ಲಿ ಸುಮಾರು 400ರಷ್ಟು ಪರಿಹಾರ ಕೆಲಸಗಾರರು ಇದ್ದರು. ಎಲ್ಲವೂ ಕೂಡಿ 800 ಕುಟುಂಬಗಳ ಮಾಡುಗಳಲ್ಲಿ ಇಲ್ಲವೇ ತೋಟಗಳಲ್ಲಿ ಕೆಲಸಮಾಡಲಾಯಿತು. ಇದರಲ್ಲಿ ಅನೇಕ ಸಾಕ್ಷಿಗಳಲ್ಲದವರದ್ದೂ ಕೂಡಿತ್ತು. ಒಂದು ಪರಿಹಾರ ಕೇಂದ್ರದಲ್ಲಿ, ಸಹೋದರರು ಪ್ರತಿದಿನ ಸುಮಾರು 3,000 ವ್ಯಕ್ತಿಗಳಿಗೆ ಊಟ ನೀಡುತ್ತಿದ್ದರು. ಎಲ್ಲವೂ ಕೂಡಿ, ಸಾಕ್ಷಿಗಳು 5,00,000 ಪೌಂಡುಗಳಷ್ಟು ಆಹಾರ ಮತ್ತು 1,71,000 ಪೌಂಡುಗಳಷ್ಟು ವಸ್ತ್ರಗಳನ್ನು ಪಡೆದರು ಮತ್ತು ವಿತರಣೆ ಮಾಡಿದರು, ಇಷ್ಟಲ್ಲದೇ ಕಟ್ಟಡಗಳ ಸಾಮಗ್ರಿಗಳನ್ನೂ, ಇನ್ನಿತರ ಅನೇಕ ವಸ್ತುಗಳನ್ನೂ ನೀಡಿದ್ದಾರೆಂದು ಹೇಳಬೇಕಿಲ್ಲ. ಅಕ್ಟೋಬರ 8, ಆದಿತ್ಯವಾರದೊಳಗೆ, ಹ್ಯುಗೋವಿನ ಕೇವಲ 16 ದಿನಗಳೊಳಗೆ ಎಲ್ಲಾ ರಾಜ್ಯ ಸಭಾಗೃಹಗಳು ದುರುಸ್ತಿ ಮಾಡಲ್ಪಟ್ಟು, ಅವರ ಕ್ರಮದ ನಿಯೋಜಿತ ಕೂಟಗಳನ್ನು ಪುನಃ ಆರಂಭಿಸಲು ಎಲ್ಲಾ ಸಭೆಗಳು ಶಕ್ತವಾದವು.
ಕ್ಯಾಲಿಫೊರ್ನಿಯದ ಭೂಕಂಪವನ್ನು ನಿಭಾಯಿಸುವುದು
ಅಕ್ಟೋಬರ್ 17ರ ಭೂಕಂಪ ಕೇಂದ್ರ ಸಾನ್ ಫ್ರಾನ್ಸಿಸ್ಕೋವಿನ ದಕ್ಷಿಣಕ್ಕೆ ಸುಮಾರು 70 ಮೈಲು, ಸಾಂತಾ ಕ್ರುಜ್ನ ಈಶಾನ್ಯಕ್ಕೆ 10 ಮೈಲು ದೂರದಲ್ಲಿತ್ತು. ಅಲ್ಲಿ ಜನನಿಬಿಡತೆಯು ದಟ್ಟವಾಗಿದ್ದು, ಕ್ಷಣಕಾಲದ ಕಂಪನಗಳು ಅಸಾಮಾನ್ಯವಾದದ್ದಲ್ಲ, ಆದರೆ ಅಲ್ಲಿನ 15 ಸೆಕಂಡುಗಳ ಯಾ ಅದಕ್ಕಿಂತ ಹೆಚ್ಚು ಸಮಯದ ಕಂಪನವು ಮುಗಿಯುವುದೇ ಇಲ್ಲವೋ ಎಂದು ಭಾಸವಾಗಿ ಲಕ್ಷಗಟ್ಟಲೆ ಜನರು ಭಯಗ್ರಸ್ತರಾದರು.
ಸಾನ್ ಜೊಸ್ನ ಒಬ್ಬ ಕ್ರೈಸ್ತ ಹಿರಿಯನಾದ, ರೇ ವಡೆನ್ ಹೇಳಿದ್ದು, “ಕಟ್ಟಡವು ಅಕ್ಷರಶಃ ಹಿಂದೆಮುಂದೆ ಅಲುಗಾಡಿತು. ಇದು ಹೀಗೆ ನೆಟ್ಟನೆ ನಿಲ್ಲುವುದೋ ಎಂಬ ಕುರಿತು ನಾನು ಅಚ್ಚರಿ ಪಡುತ್ತಿದ್ದೆ. ನನ್ನ ಕಿಟಕಿಯಿಂದ ಹೊರಗೆ ನೋಡಲಾಗಿ, ರಸ್ತೆಗಳು ಅವಸರದ ಸಂಚಾರದಿಂದ ಕಿಕ್ಕಿರಿತ್ತು. ಆಗ ಸಮಯ ಸಾಯಂಕಾಲ 5.04 ಆಗಿತ್ತು.
“ಕಟ್ಟಕಡೆಗೆ ನಮ್ಮ ಸಭೆಯ ಸಹೋದರರೊಂದಿಗೆ ನಾವು ಸಂಪರ್ಕವೇರ್ಪಡಿಸಲು ಶಕ್ತರಾದೆವು. ಯಾರೊಂದಿಗೆ ಫೋನಿನ ಮೂಲಕ ಸಂಪರ್ಕಿಸಲು ಅಶಕ್ತರಾಗಿದ್ದೇವೋ ಅವರ ಮನೆಗಳಿಗೆ ಭೇಟಿ ನೀಡಲು ನಾವು ಏರ್ಪಡಿಸಿದೆವು. ಸಂಚಾರದ ಅಡಚಣೆಯಿಂದ ಇದಕ್ಕೆ ಕೆಲವು ತಾಸುಗಳು ಹಿಡಿದವು. ರಾತ್ರಿ 8.30ರೊಳಗೆ, ಅನೇಕ ಮನೆಗಳ ಒಳಗೆ ವಸ್ತುಗಳ ಮುರಿಯುವಿಕೆ ಸಂಭವಿಸಿದರೂ, ಯಾರೂ ಗಾಯಗೊಂಡಿಲ್ಲ ಎಂದು ತಿಳಿದು ಬಂತು. ಮರುದಿನ ನಮಗೆ ತಿಳಿದು ಬಂತೇನಂದರೆ ಆ ಪ್ರದೇಶದ ನಮ್ಮ ಸಹೋದರರಲ್ಲಿ ಕೆಲವು ಮನೆಗಳು ಎಷ್ಟೊಂದು ತೀವ್ರವಾಗಿ ಹಾನಿಗೊಂಡಿದ್ದವೆಂದರೆ ಅವರು ಅದನ್ನು ಬಿಟ್ಟು ತೆರಳ ಬೇಕಾಯಿತು. ಅವರನ್ನು ಜೊತೆಸಾಕ್ಷಿಗಳ ಮನೆಗಳಲ್ಲಿ ಕೊಂಡೊಯ್ಯಲಾಯಿತು.”
ಲಾಸ್ ಗಾಟೊಸ್ನ ಹತ್ತಿರ, ತನ್ನ ಎರಡು ಮಾಳಿಗೆಗಳ ಮನೆಯ ಎರಡನೆಯ ಮಾಳಿಗೆಯಲ್ಲಿ ಕ್ರೈಸ್ತ ಸಹೋದರಿಯೊಬ್ಬಳು ಸ್ನಾನ ಮಾಡುತ್ತಿರುವಾಗ, ಇಡೀ ಮೊದಲ ಮಾಳಿಗೆಯು ಕುಸಿದುಬಿತ್ತು. ಹೀಗೆ ಅವಳು ತನ್ನ ಸ್ನಾನತೊಟ್ಟಿಯಿಂದ ಮೊದಲ ಮಾಳಿಗೆಯ ಮಟ್ಟದಲ್ಲಿ ಹೊರಗೆ ಬರುವಾಗ, ಆಶ್ಚರ್ಯಕರವಾಗಿಯೇ, ಯಾವುದೇ ಗಾಯಗಳಾಗದೆ ಉಳಿದಳು. ಒಂದು ವೇಳೆ ಅವಳು ಮೊದಲ ಮಾಳಿಗೆಯಲ್ಲಿರುತ್ತಿದ್ದರೆ, ಖಂಡಿತವಾಗಿಯೂ ಕೊಲ್ಲಲ್ಪಡುತ್ತಿದ್ದಳು.
ತಡಮಾಡದೆ, ಇದಕ್ಕೆ ತುತ್ತಾದವರಿಗೆ ಏನು ಮಾಡಸಾಧ್ಯವಿದೆ ಎಂದು ಮಿತ್ರರು ತಿಳಿಯ ಬಯಸಿದರು. ಭೂಕಂಪನದ ಎರಡು ದಿನಗಳ ನಂತರ ಗುರುವಾರ, ಇದನ್ನು ನೋಡಿ ಕೊಳ್ಳಲು ಒಂದು ಕಮಿಟಿಯನ್ನು ರಚಿಸಲಾಯಿತು. ಶನಿವಾರ ದೊಡ್ಡ ವ್ಯಾನುಗಳು ಮತ್ತು ಬೇರೆ ವಾಹನಗಳು ಡೇರೆಗಳನ್ನು, ಮಲಗುವ ಚೀಲಗಳನ್ನು ಲಾಟೀನುಗಳನ್ನು, ಸ್ಟವ್ಗಳನ್ನು, ಹೊಳಪುಬೆಳಕುಗಳನ್ನು, ಡಬ್ಬದ ಆಹಾರ, ಕುಡಿಯುವ ನೀರು, ಇತ್ಯಾದಿಗಳನ್ನು ಅಗತ್ಯತೆಯಿರುವವರಿಗೆ ಪೂರೈಸಲಾಯಿತು. ಆ ದಿನ ಬೆಳಿಗ್ಯೆಯೇ ಪರಿಹಾರ ನಿಧಿಗೆ ಸುಮಾರು 7,40,000ದಷ್ಟು ರೂಪಾಯಿಗಳನ್ನು ದಾನಕೊಡಲಾಯಿತು!
ಲೋಕದ ಕೆಲವು ಜನರು ಪ್ರದರ್ಶಿಸಿದ ಮನೋಭಾವಕ್ಕಿಂತ ಇದು ಎಷ್ಟೊಂದು ಭಿನ್ನ! ಇಂಟರ್ಸ್ಟೇಟ್ 880 ಮಾರ್ಗದ ಕುಸಿದ ವಿಭಾಗದಲ್ಲಿ ಕಾರಿನಲ್ಲಿ ಸಿಲುಕಿಬಿದ್ದ ಒಬ್ಬ ಸ್ತ್ರೀಯ ಬಳಿಗೆ ಒಬ್ಬ ಮನುಷ್ಯನು ನುಸುಳಿ ಬಂದನು. ಅವಳಿಗೇನೂ ಅಪಾಯ ಮಾಡುವುದಿಲ್ಲವೆಂದವನು ವಾಗ್ದಾನಿಸಿದನಾದರೂ, ಅವಳ ಉಂಗುರಗಳನ್ನು, ಆಭರಣಗಳನ್ನು ಮತ್ತು ಹಣದ ಚೀಲವನ್ನು ಅಪಹರಿಸಿ ಕೊಂಡು ಅವಳಿಗೆ ಸಹಾಯಮಾಡದೆ, ಪಲಾಯನ ಮಾಡಿದನು. ಒಟ್ಟಿಗೆ 40ಕ್ಕಿಂತಲೂ ಹೆಚ್ಚು ಮಂದಿ ಈ ರಸ್ತೆಯ ಕುಸಿತದಿಂದ ಕೊಲ್ಲಲ್ಪಟ್ಟರು, ಅವರಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದ ಮೇರಿ ವಾಷಿಂಗ್ಟನ್ ಇದ್ದಳು.
ಯೆಹೋವನ ಸಾಕ್ಷಿಗಳ ಪ್ರಾದೇಶಿಕ ಕಟ್ಟಡ ಕಮಿಟಿಯು ಬೇಗನೆ ಆದಂತಹ ನಷ್ಟವನ್ನು ಅಂದಾಜಿಸಲು ಆರಂಭಿಸಿತು. ಎರಡು ರಾಜ್ಯ ಸಭಾಗೃಹಗಳು ಲಘತರ ಹಾನಿಹೊಂದಿದ್ದವು. ಆದಾಗ್ಯೂ, ಅನೇಕ ಸಾಕ್ಷಿಗಳ ಮನೆಗಳು ತೀವ್ರವಾಗಿ ಹಾನಿಗೊಂಡಿದ್ದವು, ಎಷ್ಟೆಂದರೆ ಅವುಗಳನ್ನು ಒಡೆದು ಹಾಕಬೇಕಾಗಿ ಬಂತು. ಕೆಲಸಗಾರರು ಅವರ ತಳಪಾಯಗಳ ಮೇಲೆ ಅನೇಕ ಎಳೆಬಂಡಿಗಳನ್ನು ಹಾಕಿ ಅನೇಕ ಸಹೋದರರ ಮನೆಗಳನ್ನು ದುರುಸ್ತಿ ಮಾಡಲು ಯಾ ಪುನಃ ಕಟ್ಟಲು ಶಕ್ತರಾದರು. ಈ ಕೆಲಸಗಳನ್ನು ಮಾಡಲು ನೂರಾರು ಸಾವಿರಾರು ಡಾಲರುಗಳನ್ನು ವ್ಯಯಿಸಲಾಯಿತು.
ಯೇಸುವಿನ ಪ್ರವಾದನೆಯ ನೆರವೇರಿಕೆಯಲ್ಲಿ ಈ ವ್ಯವಸ್ಥೆಯ ಅಂತ್ಯವು ಸಮೀಪಿಸುತ್ತಿರುವಾಗ, ನಾವು ಇನ್ನಷ್ಟು ಭೂಕಂಪಗಳನ್ನು ಮತ್ತು ಇತರ ವಿಪತ್ತುಗಳನ್ನು ನಾವು ನಿರೀಕ್ಷಿಸಬಹುದು. (ಮತ್ತಾಯ 24:3-8) ಯೆರೂಸಲೇಮ್ ನಾಶನಗೊಂಡಾಗ ಆರಂಭದ ಕ್ರೈಸ್ತರು ಅನುಭವಿಸಿದ್ದಕ್ಕಿಂತಲೂ ಅಧಿಕ ತೀವ್ರತೆಯಲ್ಲಿ ಸಂಕಟಗಳು ಬರಲಿರುವವೆಂಬುದರಲ್ಲಿ ಸಂದೇಹವಿಲ್ಲ. ನಮ್ಮ ದಿನಗಳಲ್ಲಿ ಬೈಬಲ್ ಪ್ರವಾದನೆಗೆ ಇನ್ನಷ್ಟು ಹೆಚ್ಚು ಬಲವಾಗಿರುತ್ತದೆ: ““ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ,” ಆದಕಾರಣ, ಯಾವುದರ ಆವಶ್ಯಕತೆಯಿದೆ? “ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ.” (1 ಪೇತ್ರ 4:7, 8) ಯೆಹೋವನ ಸಾಕ್ಷಿಗಳ ಸಹೋದರತ್ವದಲ್ಲಿ ಅಂತಹ ಪ್ರೀತಿಯನ್ನು ಪ್ರದರ್ಶಿಸುವುದನ್ನು ಕಾಣುವುದು ಖಂಡಿತವಾಗಿ ನಮ್ಮ ಹೃದಯಗಳನ್ನು ಬೆಚ್ಚಗೆಗೊಳಿಸುತ್ತದೆ! (g90 2/22)
[ಪುಟ 15ರಲ್ಲಿರುವಚಿತ್ರ]
(For fully formatted text, see publication)
ಓಕ್ಲೆಂಡ್
ಸಾನ್ ಫ್ರಾನ್ಸಿಸ್ಕೊ
ಲಾಸ್ ಗಟೊಸ್
ಸಾಂತಾ ಕ್ರುಜ್
ಕ್ಯಾಲಿಫೊರ್ನಿಯ
[ಭೂಪಟ](For fully formatted text, see publication)
ಯು.ಎಸ್.ಎ.
ಚಾರ್ಲ್ಸ್ಟನ್
ಅಟ್ಲಾಂಟಿಕ್ ಸಾಗರ
ಫ್ಯುರ್ಟೊರಿಕೋ
ಗೌಡೆಲೊಪ್
[ಪುಟ 17 ರಲ್ಲಿರುವಚಿತ್ರ]
ಬಲ: ಹ್ಯುಗೊವಿನಿಂದ ದಕ್ಷಿಣ ಕರೊಲಿನಾದ ತೀರದಲ್ಲಿ ಧ್ವಂಸ
[ಕೃಪೆ]
Maxie Roberts/Courtesy of THE STATE
ಕೆಳಗೆ: ಒಂದು ಹೈಸ್ಕೂಲಿನ ಎದುರುಗಡೆ ಕಾರುಗಳ ರಾಶಿ
[ಕೃಪೆ]
Maxie Roberts/Courtesy of THE STATE
ತಳಭಾಗ: ಸ್ಲಚ್ಛತೆ ಮತ್ತು ಪುನಃ ರಚನೆಯಲ್ಲಿ ಯೆಹೋವನ ಸಾಕ್ಷಿಗಳ ಪರಿಹಾರದ ಕೆಲಸಗಾರರು
[ಪುಟ 18 ರಲ್ಲಿರುವಚಿತ್ರ]
ಎಡಗಡೆ: ಸೈಂಟ್ ಕ್ರೊಕ್ಸ್ನಲ್ಲಿ ಹುಡುಗಿಯೊಬ್ಬಳು ಮಿಚಿಗನ್ನ 5 ವರ್ಷ ಪ್ರಾಯದವಳೊಬ್ಬಳು ಸಹಾಯ ನೀಡಲು ಬಯಸಿ ಕಳುಹಿಸಿಕೊಟ್ಟ ಉಡುಪನ್ನು ಧರಿಸಿದ್ದಾಳೆ
ಕೆಳಗಡೆ: ದಾನಪಡೆದ ಆಹಾರವನ್ನು ಗೌಡೆಲೊಪ್ನಲ್ಲಿ ಯೆಹೋವನ ಸಾಕ್ಷಿಗಳು ವಿತರಿಸಲು ವಿಂಗಡಿಸುತ್ತಾರೆ
ಕೆಳಗೆ ಎಡಗಡೆ: ಶೈಲಾ ವಿಲ್ಯಮ್ಸ್, ಧ್ವಂಸಗೊಂಡ ಅವಳ ಮನೆಯನ್ನು ಪುನಃ ಕಟ್ಟಲು ಸಹಾಯಮಾಡಿದ ಪರಿಹಾರದ ಕೆಲಸಗಾರನೊಂದಿಗೆ
[ಪುಟ 21 ರಲ್ಲಿರುವಚಿತ್ರ]
ಮೇಲೆ: ಇಂಟರ್ಸ್ಟೇಟ್ 880ಯ ಮೇಲ್ಭಾಗದ ರಸ್ತೆಯು ಕೆಳಭಾಗದ ಮೇಲೆ ಕುಸಿದುಬಿತ್ತು
ಎಡಗಡೆ: ರೈಮ್ ಮಾನೊರ್ ಅವಳ ಎರಡನೆಯ ಮಾಳಿಗೆಯ ಮೇಲೆ, ಅದೀಗ ಒಂದನೆಯ ಮಾಳಿಗೆಯ ಮಟ್ಟಕ್ಕೆ ಬಂದಿದೆ