ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 12/1 ಪು. 10-13
  • ಈಗ ಯೆಹೋವನ ರಕ್ಷಣಾ ಕಾರ್ಯಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಈಗ ಯೆಹೋವನ ರಕ್ಷಣಾ ಕಾರ್ಯಗಳು
  • ಕಾವಲಿನಬುರುಜು—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪ್ರೀತಿಯು ಕ್ರಿಯೆಯಲ್ಲಿ
  • ಒಂದು ಜಗದ್ವ್ಯಾಪಕ ಬಂಧುತ್ವ
  • ನಿಜ ಸಂರಕ್ಷಣೆಯ ಮೂಲ
  • ಚಂಡಮಾರುತ ಆ್ಯಂಡ್ರುವಿಗೆ ನಾಶಮಾಡಲು ಆಗದ್ದಿದ ವಿಷಯಗಳು
    ಎಚ್ಚರ!—1993
  • ಮ್ಯಾನ್‌ಮಾರ್‌ನ ಚಂಡಮಾರುತ ಪೀಡಿತರಿಗೆ ಪರಿಹಾರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಮೆಕ್ಸಿಕೊದಲ್ಲಿ ವಿಪತ್ತುಗಳ ನಡುವೆ ಕ್ರೈಸ್ತ ಪ್ರೀತಿ
    ಎಚ್ಚರ!—1996
  • ಫಕ್ಕನೆ ನಾಶನ! ಅವರು ಅದನ್ನು ಹೇಗೆ ನಿಭಾಯಿಸಿದರು?
    ಎಚ್ಚರ!—1991
ಇನ್ನಷ್ಟು
ಕಾವಲಿನಬುರುಜು—1993
w93 12/1 ಪು. 10-13

ಈಗ ಯೆಹೋವನ ರಕ್ಷಣಾ ಕಾರ್ಯಗಳು

ಯೆಹೋವನ ಕುರಿತು ಬೈಬಲು ನಮಗೆ ಇದನ್ನು ಹೇಳುತ್ತದೆ: “ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.” ಮತ್ತು “ಕರ್ತನು [ಯೆಹೋವನು, NW] ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ . . . ಬಲ್ಲವನಾಗಿದ್ದಾನೆ.”—ಕೀರ್ತನೆ 34:19; 2 ಪೇತ್ರ 2:9.

ತನ್ನ ಜನರು ಕಷ್ಟದಲ್ಲಿರುವಾಗ ಯೆಹೋವನು ಅವರ ಸಹಾಯಕ್ಕೆ ಹೇಗೆ ಬರುತ್ತಾನೆ? ನೈಸರ್ಗಿಕ ಶಕ್ತಿಗಳನ್ನು ಅದ್ಭುತಕರವಾಗಿ ವಿಪರ್ಯಸ್ತ ಮಾಡುವ ಮೂಲಕವಾಗಿ ಅಲ್ಲ ಅಥವಾ ಅನೇಕರು ಆತನು ಮಾಡಬೇಕೆಂದು ನೆನಸುವ ಪ್ರಕಾರ ಬೇರೆ ಕೆಲವು ಅಲೌಕಿಕ ಕೃತ್ಯದ ಮೂಲಕವಾಗಿ ಅಲ್ಲ, ಬದಲಿಗೆ ಅನೇಕ ಜನರು ನಿಜವಾಗಿ ಗ್ರಹಿಸದಿರುವ ಇನ್ನೊಂದು ಶಕ್ತಿ—ಪ್ರೀತಿಯ ಮೂಲಕವೇ. ಹೌದು, ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ, ಮತ್ತು ಆತನು ಅವರ ನಡುವೆ ಒಬ್ಬರಿಗೊಬ್ಬರೆಡೆಗೆ ಎಷ್ಟು ಬಲವಾದ ಪ್ರೀತಿಯನ್ನು ಪೋಷಿಸಿದ್ದಾನೆಂದರೆ, ಯಾವುದು ಬಹು ಮಟ್ಟಿಗೆ ಅದ್ಭುತಕರವೆಂತಲೇ ಕಾಣುತ್ತದೋ ಅದನ್ನು ಅವರಿಗಾಗಿ ನಿರ್ವಹಿಸಲು ಆತನು ಶಕ್ತನಾಗಿದ್ದಾನೆ.—1 ಯೋಹಾನ 4:10-12, 21.

ತುರ್ತಿನ ಸಮಯದಲ್ಲಿ ಬೇಕಾಗಿರುವುದು—ಆಹಾರ, ಔಷಧ, ಮತ್ತು ಸಾಧನ ಸಲಕರಣೆಗಳು—ಪ್ರೀತಿಯಲ್ಲ, ಎಂದು ಕೆಲವರು ವಾದಿಸಬಹುದು. ನಿಶ್ಚಯವಾಗಿ ಆಹಾರ, ಔಷಧ, ಮತ್ತು ಸಾಧನ ಸಲಕರಣೆಗಳು ಪ್ರಾಮುಖ್ಯವಾಗಿವೆ. ಆದರೂ, ಅಪೊಸ್ತಲ ಪೌಲನು ಈ ರೀತಿಯಲ್ಲಿ ವಿವೇಚಿಸುತ್ತಾನೆ: “ನನಗೆ . . . ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ. ನನಗಿರುವದೆಲ್ಲವನ್ನು ಅನ್ನದಾನ ಮಾಡಿದರೂ, ನನ್ನ ದೇಹವನ್ನು ಸುಡುವದಕ್ಕೆ ಒಪ್ಪಿಸಿದರೂ ಪ್ರೀತಿಯು ನನಗಿಲ್ಲದಿದ್ದರೆ ನನಗೇನೂ ಪ್ರಯೋಜನವಾಗುವದಿಲ್ಲ.”—1 ಕೊರಿಂಥ 13:2, 3.

ಕೊರತೆಯಲ್ಲಿರುವ ಜನರು ವ್ಯಾಧಿಯಿಂದ ಮತ್ತು ಹೊಟ್ಟೆಗಿಲ್ಲದೆ ಸಾಯುವಾಗ, ಪರಿಹಾರ ಸಂಗ್ರಹಗಳು ಹಡಗುಕಟ್ಟೆಯಲ್ಲಿ ಬಿದ್ದು ಕೊಳೆಯುತ್ತಿರುವುದರ ಕುರಿತು ಅಥವಾ ಹೆಗ್ಗಣಗಳಿಂದ ತಿಂದುಹಾಕಲ್ಪಡುತ್ತಿರುವ ಕುರಿತು ನಾವು ಆಗಿಂದಾಗ್ಗೆ ಓದುತ್ತೇವೆ. ಅಥವಾ ಇನ್ನೂ ಕೆಟ್ಟದಾಗಿ, ಅದರಿಂದ ಸ್ವಂತ ಲಾಭವನ್ನು ಗಳಿಸುವ ಲೋಭಿಗಳೂ ನೀತಿಗೆಟ್ಟವರೂ ಆದ ಜನರ ಕೈಗೆ ಅಂಥ ವಸ್ತುಗಳು ಬೀಳಲೂಬಹುದು. ಹೀಗೆ, ಸಂಗ್ರಹಗಳು ಲಭ್ಯವಾಗುವುದು ಒಂದು ವಿಷಯ, ಆದರೆ ಕಷ್ಟದಲ್ಲಿರುವವರು ಅದರಿಂದ ಪ್ರಯೋಜನ ಪಡೆಯುವಂತೆ ನೋಡುವುದು ತೀರ ಇನ್ನೊಂದು ವಿಷಯ. ನಿಜ ಪ್ರೀತಿ ಮತ್ತು ಚಿಂತನೆಯು ವ್ಯತ್ಯಾಸವನ್ನು ಮಾಡಬಲ್ಲದು.

ಪ್ರೀತಿಯು ಕ್ರಿಯೆಯಲ್ಲಿ

ಸಪ್ಟಂಬರ 11, 1992 ರಲ್ಲಿ ಚಂಡಮಾರುತ ಈನೀಕಿ, 55,000 ಜನಸಂಖ್ಯೆಯ ಹವಾಯಿಯ ಕಾವೈ ದ್ವೀಪವನ್ನು ಹೊಡೆಯಿತು. ತಾಸಿಗೆ 210 ಕಿಲೊಮೀಟರ್‌ ಗಾಳಿಗಳಿಂದ, ತಾಸಿಗೆ 260 ಕಿಲೊಮೀಟರ್‌ ರಭಸದ ಬೀಸಿನಿಂದ, ಅದು 2 ಜನರನ್ನು ಕೊಂದಿತು ಮತ್ತು 98 ಮಂದಿಯನ್ನು ಗಾಯಗೊಳಿಸಿತು, ಮತ್ತು 75 ಪ್ರತಿಶತ ಮನೆಗಳನ್ನು ಹಾಳುಗೆಡವಿತು, 8,000 ಜನರನ್ನು ದಿಕ್ಕಿಲ್ಲದವರನ್ನಾಗಿ ಮಾಡಿತು, ಮತ್ತು ಸುಮಾರು 100 ಕೋಟಿ ಡಾಲರ್‌ ಬೆಲೆಬಾಳುವ ನಷ್ಟವನ್ನು ಬರಮಾಡಿತು. ಈ ಚಿಕ್ಕ ದ್ವೀಪದಲ್ಲಿ ನೆಲೆಸಿದ್ದವರಲ್ಲಿ, ಸುಮಾರು 800 ಯೆಹೋವನ ಸಾಕ್ಷಿಗಳು ಆರು ಸಭೆಗಳಲಿದ್ದರು. ಅವರು ಹೇಗೆ ಬಾಳಿದರು?

ಈನೀಕಿ ಕಾರ್ಯತಃ ಹೊಡೆಯುವ ಮುಂಚೆ, ಸಂಚಾರ ಮೇಲ್ವಿಚಾರಕನ ಮಾರ್ಗದರ್ಶನದಲ್ಲಿ ಸಭಾ ಹಿರಿಯರು, ಸಭೆಯ ಎಲ್ಲಾ ಸದಸ್ಯರನ್ನು ಅವರು ಸುರಕ್ಷಿತರೂ ಸುಭದ್ರರೂ ಆಗಿದ್ದಾರೆಂದು ಖಚಿತ ಮಾಡಿಕೊಳ್ಳಲು, ಮತ್ತು ಆಕ್ರಮಣಕ್ಕೆ ಸಿದ್ಧರಾಗಿರಲು ಆ ಮೊದಲೇ ಸಂಪರ್ಕಿಸಿದ್ದರು. ಅಂಥ ಪ್ರೀತಿಯುಳ್ಳ ಪರಿಗಣನೆಯು ಸಾಕ್ಷಿಗಳ ನಡುವೆ ಗಂಭೀರವಾದ ಹಾನಿ ಅಥವಾ ಮರಣವನ್ನು ತಡೆಯುವುದರಲ್ಲಿ ಕಾರ್ಯಸಾಧಕವಾಯಿತು.—ಯೆಶಾಯ 32:1, 2.

ಸಂಪರ್ಕ ಮತ್ತು ಸಾಗಣೆ ವ್ಯವಸ್ಥೆಯ ತೀರ ಕೆಟ್ಟದ್ದರೂ, ಕಾವೈಗೆ ಹಾರಲು ಸಿವಿಲ್‌ ಡಿಫೆನ್ಸ್‌ನಿಂದ ವಿಶೇಷ ಪರವಾನಗಿ ಅನುಗ್ರಹಿಸಲ್ಪಟ್ಟ, ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಹೊನಲೂಲು ಶಾಖೆಯ ಮೂವರು ಪ್ರತಿನಿಧಿಗಳು, ಚಂಡಮಾರುತವನ್ನು ಹಿಂಬಾಲಿಸಿ ಆ ಘಟನಾಕ್ಷೇತ್ರಕ್ಕೆ ಆಗಮಿಸಿದವರಲ್ಲಿ ಮೊದಲಿಗರಾಗಿದ್ದರು. ಆ ಕೂಡಲೆ ಅವರು ಸ್ಥಳಿಕ ಸಾಕ್ಷಿಗಳನ್ನು ಸಂಪರ್ಕಿಸಿದರು, ಮತ್ತು ಮರುದಿನ ಬೆಳಿಗ್ಗೆ, ಪರಿಹಾರಕ್ಕಾಗಿ ಉಪಾಯ ಯೋಜನೆ ನಡಿಸಲು ಒಂದು ಕೂಟವನ್ನು ಏರ್ಪಡಿಸಿದರು. ಆವಶ್ಯಕತೆಗಳನ್ನು ಅಂದಾಜು ಮಾಡಿ, ಬೇಕಾದ ಸಾಮಗ್ರಿಗಳನ್ನು ಹೊನಲೂಲು ಬ್ರಾಂಚ್‌ ಆಫೀಸಿನಿಂದ ಪಡೆದುಕೊಳ್ಳಲು ಒಂದು ಪರಿಹಾರ ಕಮಿಟಿಯು ನಿರ್ಮಿಸಲ್ಪಟ್ಟಿತು. ಎಡೆಬಿಡದೆ ಕೆಲಸಮಾಡುತ್ತಾ, ಕೊರತೆಯಲ್ಲಿರುವವರಿಗಾಗಿ ಸಂಗ್ರಹಗಳನ್ನು ಪಡೆಯುವುದನ್ನು ಮತ್ತು ಹಾಳುಬಿದ್ದ ಮನೆಗಳನ್ನು ಶುಚಿಗೊಳಿಸಿ, ದುರಸ್ತಿ ಮಾಡುವುದನ್ನು ಅವರು ಮಾರ್ಗದರ್ಶಿಸಿದರು.

ಬೇರೆ ದ್ವೀಪಗಳ ಸಾಕ್ಷಿಗಳು ಕೊರತೆಯಲ್ಲಿರುವ ತಮ್ಮ ಸಹೋದರರಿಗಾಗಿ ತಡವಿಲ್ಲದೆ ಪ್ರತಿಕ್ರಿಯೆ ತೋರಿಸಿದರು. ಕಾವೈ ವಿಮಾನ ನಿಲ್ದಾಣವು ತೆರೆದ ಕೂಡಲೆ 70 ಸಾಕ್ಷಿಗಳು ಸಹಾಯಕ್ಕಾಗಿ ವಿಮಾನದ ಮೂಲಕ ಹಾರಿ ಬಂದರು. ಜೆನೆರೇಟ್‌ರ್‌ಗಳು, ಕ್ಯಾಂಪ್‌ ಸ್ಟೋವ್‌ಗಳು, ಲಾಂದ್ರಗಳು, ಮತ್ತು ಆಹಾರವೂ ಸೇರಿ ಸುಮಾರು 1,00,000 ಡಾಲರ್‌ ಬೆಲೆಬಾಳುವ ಪರಿಹಾರ ಸಂಗ್ರಹಗಳು ಹಡಗಿನ ಮೂಲಕ ಕಳುಹಿಸಲ್ಪಟ್ಟವು. ದ್ವೀಪದ ಒಂದು ರಾಜ್ಯ ಸಭಾಗೃಹವನ್ನು ಉಗ್ರಾಣವಾಗಿ ಉಪಯೋಗಿಸಲಾಯಿತು; ಆದರೆ ಅದು ಲೂಟಿಯಾಗಬಹುದೆಂಬ ತುಸು ಹೆದರಿಕೆ ಇತ್ತು. ಆಗ ಕೆಲವು ಸೇನಾ ಟ್ರಕ್ಕುಗಳು ರಾಜ್ಯ ಸಭಾಗೃಹದ ಪಾರ್ಕಿಂಗ್‌ ಜಾಗಕ್ಕೆ ಬಂದವು, ಮತ್ತು ತಮ್ಮ ಟ್ರಕ್ಕುಗಳನ್ನು ಅಲ್ಲಿ ಪಾರ್ಕ್‌ ಮಾಡಬಹುದೋ ಎಂದು ಡ್ರೈವರರು ಕೇಳಿದರು. ಟ್ರಕ್ಕುಗಳನ್ನು ಕಾಯಲು ನಿಲ್ಲಿಸಲ್ಪಟ್ಟ ಸೈನಿಕರು ಪರಿಹಾರ ಸಂಗ್ರಹಗಳು ಲೂಟಿಯಾಗುವ ಸಮಸ್ಯೆಯನ್ನು ಸಹ ನಿವಾರಣೆ ಮಾಡಿದರು.

ಸಹೋದರರು ಜೆನೆರೇಟರ್‌ಗಳನ್ನು ಮನೆಯಿಂದ ಮನೆಗೆ ಒಯ್ದು, ಜನರು ತಮ್ಮ ಶೀತಾವರಣಗಳನ್ನು ಬಳಸಲಾಗುವಂತೆ ಸಹಾಯಕ್ಕಾಗಿ ಎರಡು ಯಾ ಮೂರು ತಾಸು ನಡಿಸುತ್ತಿದ್ದರು. ಶುಚಿಗೊಳಿಸಲು ಮತ್ತು ಹಾಳುಪಾಳನ್ನು ದುರಸ್ತಿಮಾಡಲು ಸಹೋದರರ ಗುಂಪುಗಳನ್ನು ಬೇರೆ ಬೇರೆ ಮನೆಗಳಿಗೆ ಕಳುಹಿಸಲಾಯಿತು. ಯಾರ ಗಂಡನು ಹಿಂದೆ ಆಕೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದನೋ ಆ ಸಹೋದರಿಯ ಮನೆಯನ್ನು ಅವರು ದುರಸ್ತು ಮಾಡುತ್ತಿದ್ದಾಗ, ಗಂಡನು ಎಷ್ಟು ಪ್ರಚೋದಿಸಲ್ಪಟ್ಟನೆಂದರೆ ಅವನು ನೋಡುತ್ತಾ ನಿಂತು ಅಳುವುದಲ್ಲದೆ ಬೇರೇನನ್ನೂ ಮಾಡಶಕ್ತನಾಗಲಿಲ್ಲ. ಸಾಕ್ಷಿಗಳ ಇನ್ನೊಂದು ಗುಂಪು ಕೆಲಸಮಾಡುತ್ತಿರುವುದನ್ನು ಕಂಡ ಇನ್ನೊಂದು ಭೂಭಾಗದ ಸಂದರ್ಶಕನು ಅವರ ನಡವಳಿಕೆ ಮತ್ತು ಸುಸಂಸ್ಥಾಪನೆಯಿಂದ ಎಷ್ಟು ಪ್ರಭಾವಿತನಾದನೆಂದರೆ ಅವನು ಅವರನ್ನು ಸಮೀಪಿಸಿ, ಅವರನ್ನು ಅಷ್ಟು ಭಿನ್ನರಾಗಿ ಮಾಡಿದ್ದು ಯಾವುದೆಂದು ವಿಚಾರಿಸಿದನು. ದೇವರಿಗಾಗಿ ಮತ್ತು ಜೊತೆ ಕ್ರೈಸ್ತರಿಗಾಗಿ ಪ್ರೀತಿಯೇ ಅದನ್ನು ಮಾಡಿತೆಂದು ಒಬ್ಬ ಸಹೋದರನು ವಿವರಿಸಿದಾಗ, ಆ ಮನುಷ್ಯನು ಪ್ರತಿಕ್ರಿಯಿಸಿದ್ದು: “ದೇವರನ್ನು ನಾನು ಹೇಗೆ ತಿಳಿದುಕೊಳ್ಳಬಹುದು?” (ಮತ್ತಾಯ 22:37-40) ಅನಂತರ ಅವನು ಕೂಡಿಸಿದ್ದು: “ನೀವು ಎಷ್ಟೊಂದು ಸಂಸ್ಥಾಪಿತ ಜನರಾಗಿದ್ದೀರೆಂದರೆ ನಾನು ಫ್ಲಾರಿಡಕ್ಕೆ ಹಿಂದಿರುಗುವಾಗ ನನಗಾಗಿ ಅಲ್ಲಿ ಯಾರಾದರೂ ಕಾದಿರುವಂತೆಯೂ ಪ್ರಾಯಶಃ ನೀವು ಮಾಡೀರಿ!”

ಕಾವೈಯಲ್ಲಿ ಒಟ್ಟಿಗೆ 295 ಮನೆಗಳನ್ನು ಶುಚಿಮಾಡುವುದರಲ್ಲಿ ಮತ್ತು ದುರಸ್ತುಗೊಳಿಸುವುದರಲ್ಲಿ ಯೆಹೋವನ ಸಾಕ್ಷಿಗಳು ಸಹಾಯ ಮಾಡಿದರು. ಅವುಗಳಲ್ಲಿ 207ಕ್ಕೆ ಅಲ್ಪ ದುರಸ್ತಿನ ಆಗತ್ಯವಿತ್ತು, ಆದರೆ 54 ತೀರ ಹೆಚ್ಚು ಹಾಳಾಗಿದ್ದವು, ಮತ್ತು 19 ಪೂರ ಧ್ವಂಸವಾಗಿದ್ದವು. ಪ್ರತಿಯೊಬ್ಬನಿಗೆ ಪರಾಮರಿಕೆ ದೊರೆತಿದೆಯೇ ಎಂದು ಖಚಿತಮಾಡಲು ದ್ವೀಪದ ಪ್ರತಿಯೊಬ್ಬ ಜ್ಞಾತ ಸಾಕ್ಷಿಯನ್ನು ಸಂದರ್ಶಿಸುವುದೂ ಅವರ ಕೆಲಸದಲ್ಲಿ ಸೇರಿತ್ತು. ಒಬ್ಬ ಸಹೋದರಿಗೆ ಸಂಗ್ರಹಗಳು ತಲಪಿಸಲ್ಪಟ್ಟಾಗ, ಒಬ್ಬ ಬೌದ್ಧ ನೆರೆಯವನು ತನ್ನ ಗುಂಪಿನಿಂದ ಒಂದು ಚಹಾ ಪಾಕೆಟು ಕೂಡ ತನಗೆ ದೊರಕದೆ ಇದ್ದದ್ದನ್ನು ಅವಲೋಕಿಸಿದನು. ಯಾರ ಮನೆಯು ಸಾಕ್ಷಿಗಳ ಒಂದು ತಂಡದಿಂದ ಶುಚಿಗೊಳಿಸಲ್ಪಟ್ಟಿತೋ ಆ ಇನ್ನೊಬ್ಬ ಸ್ತ್ರೀ ಅಂದದ್ದು: “ನೀವು ನನ್ನ ಮನೆಗೆ ಬಹಳ ಸಮಯದಿಂದ ಬರುತ್ತಿದ್ದೀರಿ, ಮತ್ತು ನಾನು ನಿಮ್ಮನ್ನು ಒಳ್ಳೆಯ ನೆರೆಯವರೆಂತ ಎಣಿಸಿದ್ದೆನು, ಆದರೆ ನೆರೆಯವರ ಪ್ರೀತಿಯ ಈ ಅಭಿವ್ಯಕ್ತಿಯು ನಿಮ್ಮ ಸಂಸ್ಥೆಯು ಎಂತಹದೆಂದು ನನಗೆ ತೋರಿಸಿಕೊಟ್ಟಿದೆ. ನಿಮ್ಮ ಪರಿಶ್ರಮದ ಕೆಲಸಕ್ಕೆಲ್ಲಾ ಉಪಕಾರ.”

ಪರಿಹಾರ ಕೆಲಸದ ಮೇಲ್ವಿಚಾರಣೆ ಮಾಡಿದವರು ತಮ್ಮ ಜೊತೆ ಕ್ರೈಸ್ತರೆಲ್ಲರ ಭೌತಿಕ ಅಗತ್ಯಗಳನ್ನು ನೋಡಿಕೊಂಡದ್ದಲ್ಲದೆ, ಅವರ ಆತ್ಮಿಕ ಸುಕ್ಷೇಮದ ಕುರಿತೂ ಅಷ್ಟೇ ಚಿಂತನೆಯನ್ನು ಮಾಡಿದರು. ಚಂಡಮಾರುತದ ಹೊಡೆತದ ಎರಡಕ್ಕಿಂತಲೂ ಕಡಿಮೆ ದಿನಗಳೊಳಗೆ, ಹಲವಾರು ಸಭೆಗಳು ಆವಾಗಲೇ ತಮ್ಮ ಕೂಟಗಳನ್ನು ನಡಿಸುತ್ತಿದ್ದವು. ತಡವಿಲ್ಲದೆ, ಚಿಕ್ಕ ಪುಸ್ತಕ ಅಭ್ಯಾಸ ಗುಂಪುಗಳು ಪುನಃ ನಡೆಯ ತೊಡಗಿದವು. ದ್ವೀಪದ ಪ್ರತಿಯೊಬ್ಬ ಸಾಕ್ಷಿಗೆ ಪಾಲನೆ ಸಂದರ್ಶನೆ ನೀಡಲು ಸಾಧ್ಯವಾಗುವಂತೆ ಸ್ಥಳಿಕ ಹಿರಿಯರಿಗೆ ನೆರವಾಗಲು ಬೇರೆ ದ್ವೀಪಗಳಿಂದ ಹತ್ತು ಮಂದಿ ಹಿರಿಯರು ಬಂದರು. ಮುಂದಿನ ಭಾನುವಾರ, ಎಲ್ಲಾ ಆರು ಸಭೆಗಳಲ್ಲಿ ಕಾವಲಿನಬುರುಜು ಅಭ್ಯಾಸವು ನಡೆಯಿತು, ಅನಂತರ ಪರಿಹಾರ ಕಮಿಟಿಯ ಒಬ್ಬ ಸದಸ್ಯರಿಂದ ಪರಿಹಾರ ಕಾರ್ಯವಿಧಾನಗಳ ಮೇಲೆ 30 ನಿಮಿಷದ ಒಂದು ಭಾಷಣವು ನೀಡಲ್ಪಟ್ಟಿತು, ಮತ್ತು ಸಮಾಪ್ತಿಯ 30 ನಿಮಿಷದ ಭಾಷಣವನ್ನು ಈ ಉದ್ದೇಶಕ್ಕಾಗಿ ಹೊನಲೂಲುನಿಂದ ಬಂದ ಬ್ರಾಂಚ್‌ ಕಮಿಟಿಯ ಒಬ್ಬ ಸದಸ್ಯರು ಕೊಟ್ಟರು. ಪ್ರತ್ಯಕ್ಷಸಾಕ್ಷಿ ವರದಿಯೊಂದು ಹೇಳುವದು: “ಕೊಡಲ್ಪಟ್ಟ ಉತ್ತಮ ಮಾರ್ಗದರ್ಶನದಿಂದ ಎಲ್ಲರೂ ಸಂತೈಸಲ್ಪಟ್ಟರು ಮತ್ತು ತಮ್ಮ ಉಳಿದಿರುವ ಸಮಸ್ಯೆಗಳಿಗೆ ಕೈಹಚ್ಚಲು ಆತ್ಮಿಕವಾಗಿ ತಯಾರಾದರು. ಕಾರ್ಯಕ್ರಮವು ಕೊನೆಗೊಂಡಾಗ ಸಭಿಕರಲ್ಲಿ ಕಣ್ಣೀರು ಬಾರದಿದವ್ದರು ಕೊಂಚವೇ ಇದ್ದರು, ಮತ್ತು ಕರತಾಡನವು ಸ್ವಯಂ ಪ್ರೇರಿತವಾಗಿತ್ತು.”

ಒಂದು ಜಗದ್ವ್ಯಾಪಕ ಬಂಧುತ್ವ

ಅಂಥ ಪ್ರೀತಿ ಮತ್ತು ಪರಿಗಣನೆಯು ಜಗದ್ವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಒಂದು ಗುರುತಾಗಿದೆ. ಸುಮಾರು ಒಂದು ವರ್ಷಕ್ಕೆ ಮುಂಚೆ, ಸುಳಿಗಾಳಿ ವ್ಯಾಲ್‌ ಪಶ್ಚಿಮ ಸಮೋವಕ್ಕೆ ಬಡೆದಾಗ, ಅದು ಬಹಳ ಹಾನಿಯನ್ನು ಉಂಟುಮಾಡಿತು, ಆದರೆ ಲೋಕದ ಇತರ ಭಾಗದ ಯೆಹೋವನ ಸಾಕ್ಷಿಗಳು ತಡವಿಲ್ಲದೆ ಅಲ್ಲಿ ನೆರೆಗೆ ಬಲಿಯಾದವರ ಸಹಾಯಕ್ಕಾಗಿ ಬಂದರು. ಅನಂತರ, ಅವರ ನಿವಾಸಸ್ಥಳಗಳ ದುರಸ್ತಿಗಾಗಿ ಎಲ್ಲಾ ಧರ್ಮಗಳವರಿಗೆ—ಯೆಹೋವನ ಸಾಕ್ಷಿಗಳಿಗೆ ಸಹ—ಸರಕಾರವು ಸಹಾಯನಿಧಿಯನ್ನು ಒದಗಿಸಿದಾಗ, ಸಾಕ್ಷಿಗಳು ಆ ಹಣವನ್ನು ಒಂದು ಪತ್ರದೊಂದಿಗೆ ಹಿಂದಿರುಗಿಸಿ, ತಮ್ಮೆಲ್ಲಾ ದುರಸ್ತುಗಳು ಆವಾಗಲೇ ನಡಿಸಲ್ಪಟ್ಟಿವೆಯೆಂದೂ ಆ ಹಣವನ್ನು ಸರಕಾರದ ಕಟ್ಟಡಗಳ ದುರಸ್ತಿಗಾಗಿ ಉಪಯೋಗಿಸಬಹುದೆಂದೂ ವಿನಂತಿಸಿದರು. ಅವರ ಸತ್ಕ್ರಿಯೆಯು ವಾರ್ತಾಪತ್ರಿಕೆಯಲ್ಲಿ ವರದಿಯಾಯಿತು. ಇದನ್ನು ಗಮನಿಸುತ್ತಾ, ಒಬ್ಬ ಸರಕಾರಿ ಅಧಿಕಾರಿಯು—ತನ್ನ ಸ್ವಂತ ಚರ್ಚಿನ ಕುರಿತು ತಾನು ಬಹಳ ಲಜ್ಜಿತನೆಂದು ಒಬ್ಬ ಸಾಕ್ಷಿಗೆ ಹೇಳಿದನು ಯಾಕಂದರೆ ಸುಳಿಗಾಳಿಯ ಸಮಯ ಹಾಳಾದ ಅವರ ಎಲ್ಲಾ ಕಟ್ಟಡಗಳು ವಿಮೆಯಿಂದ ಆವರಿಸಲ್ಪಟಿದ್ಟರ್ದೂ, ಸರಕಾರದಿಂದ ಅವರು ಹಣವನ್ನು ಸ್ವೀಕರಿಸಿದ್ದರು.

ತದ್ರೀತಿಯಲ್ಲಿ, ಸೆಪ್ಟಂಬರ 1992 ರಲ್ಲಿ, ಫ್ರಾನ್ಸಿನ ಆಗ್ನೇಯದ ಯೂವಜ್‌ ನದಿಯಲ್ಲಿ ನೆರೆ ಬಂದು, ವಾಜೊನ್‌-ಲ-ರೊಮೆನ್‌ ಮತ್ತು ಸುತ್ತುಮುತ್ತಲಿನ 15 ಸಮಾಜಗಳನ್ನು ಹಾಳುಗೆಡವಿದಾಗ, ಸಾಕ್ಷಿಗಳು ತಡವಿಲ್ಲದೆ ಪ್ರತಿಕ್ರಿಯಿಸಿದರು. ಒಂದೇ ರಾತ್ರಿಯೊಳಗೆ ನೆರೆಯು 40 ಜೀವಗಳನ್ನು ಬಲಿತಕ್ಕೊಂಡಿತ್ತು, 400 ಮನೆಗಳನ್ನು ನಾಶಗೊಳಿಸಿತ್ತು, ಇತರ ನೂರಾರನ್ನು ಹಾಳುಗೆಡವಿ, ಸಾವಿರಾರು ಕುಟುಂಬಗಳನ್ನು ನೀರು ಮತ್ತು ವಿದ್ಯುತ್‌ರಹಿತವಾಗಿ ಬಿಟ್ಟುಹೋಗಿತ್ತು. ಮರುದಿನ ಬೆಳಿಗ್ಗೆ ಬೇಗ, ತಮ್ಮ ಸಹೋದರರ ಸಹಾಯಕ್ಕಾಗಿ ಮೊದಲು ಬಂದವರು ಸ್ಥಳಿಕ ಸಭೆಗಳ ಸಾಕ್ಷಿಗಳೇ. ಯಾರಿಗೆ ಆಶ್ರಯದ ಅಗತ್ಯವಿತ್ತೋ ಅವರನ್ನು ಆ ಕ್ಷೇತ್ರದ ಸಾಕ್ಷಿ ಕುಟುಂಬಗಳು ಪ್ರೀತಿಯಿಂದ ಒಳ ಸೇರಿಸಿದವು. ನೆರವನ್ನು ನೀಡಲು ಸಾವಿರಾರು ಸಾಕ್ಷಿಗಳು ದೂರ ಮತ್ತು ಸಮೀಪದಿಂದ ಬಂದರು. ಸ್ವಯಂ ಸೇವಕರ ನಾಲ್ಕು ತಂಡಗಳ ಪ್ರಯತ್ನಗಳನ್ನು ಸುಸಂಘಟಿತಗೊಳಿಸಲು ಸಮೀಪದ ಆರೆಂಜ್‌ ಶಹರದಲ್ಲಿ ಒಂದು ಪರಿಹಾರ ಕಮಿಟಿಯು ಏರ್ಪಡಿಸಲ್ಪಟ್ಟಿತು, ಅವರು ಮಣ್ಣನ್ನು ತೆಗೆದು ಮನೆಗಳನ್ನು ಶುದ್ಧಮಾಡಿದರು, ಮಣ್ಣಿನಿಂದ ತೊಯ್ದ ಬಟ್ಟೆಗೆಳ ರಾಶಿಯನ್ನು ಒಗೆದುಹಾಕಿದರು, ಬಾಧಿತ ಕ್ಷೇತ್ರಗಳಲ್ಲೆಲ್ಲಾ ಆಹಾರ ಮತ್ತು ಕುಡಿಯುವ ನೀರನ್ನು ತಯಾರಿಸಿ, ರವಾನಿಸಿದರು. ಸ್ಥಳಿಕ ಶಾಲೆಯನ್ನು ಮತ್ತು ಹಲವಾರು ಮ್ಯುನಿಸಿಪಲ್‌ ಕಟ್ಟಡಗಳನ್ನು ಸಹ ಶುಚಿಗೊಳಿಸಲು ತಮ್ಮ ಸ್ವಯಂ ಸೇವೆಯನ್ನು ನೀಡಿದರು. ಅವರ ಅವಿಶ್ರಾಂತ ಪ್ರಯತ್ನಗಳು ಸಹೋದರರಿಂದ ಮತ್ತು ಸಮಾಜದ ಜನರಿಂದ ಏಕರೀತಿಯಲ್ಲಿ ಗಣ್ಯಮಾಡಲ್ಪಟ್ಟವು.

ಬೇರೆ ಅನೇಕ ಸ್ಥಳಗಳಲ್ಲಿ ಯೆಹೋವನ ಸಾಕ್ಷಿಗಳು ಬೇರೆ ಎಲ್ಲರಂತೆಯೇ ನೆರೆ, ಬಿರುಗಾಳಿ ಮತ್ತು ಭೂಕಂಪಗಳಿಂದ ಕಷ್ಟಾನುಭವಪಟ್ಟಿದ್ದಾರೆ. ಇವು ಮುಂಗಾಣದ ಅಥವಾ ತಡೆಗಟ್ಟಲಾಗದ ಪರಿಸ್ಥಿತಿಗಳ ಫಲಿತಾಂಶಗಳೆಂದು ತಿಳಿದವರಾಗಿ, ಅವರು ದೇವರನ್ನಾಗಲಿ ಬೇರೆ ಯಾರನ್ನಾಗಲಿ ದೂರುವುದಿಲ್ಲ. (ಪ್ರಸಂಗಿ 9:11) ಬದಲಿಗೆ, ಎಂಥ ದಾರುಣ ಪರಿಸ್ಥಿತಿಗಳೇ ಅವರ ಮೇಲೆ ಬರಲಿ, ಅವರ ಜೊತೆ ವಿಶ್ವಾಸಿಗಳ ಸ್ವತ್ಯಾಗದ ಪ್ರೀತಿಯು ಅವರ ಸಂರಕ್ಷಣೆಗಾಗಿ ಬರುವುದೆಂಬ ಭರವಸೆಯು ಅವರಿಗಿದೆ. ಅಂಥ ಪ್ರೀತಿಯುಳ್ಳ ಕ್ರಿಯೆಗಳು ಅವರು ಒಟ್ಟಿಗೆ ಸಹಭಾಗಿಗಳಾಗುವ ನಂಬಿಕೆಯ ಒಂದು ಫಲವಾಗಿದೆ. ಶಿಷ್ಯ ಯಾಕೋಬನು ವಿವರಿಸುವುದು: “ಒಬ್ಬ ಸಹೋದರನಿಗೆ ಇಲ್ಲವೇ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದೆ ಇರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದದ್ದನ್ನು ಕೊಡದೆ—ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆತುಂಬಿಸಿಕೊಳ್ಳಿ ಎಂದು ಬರೀ ಮಾತು ಹೇಳಿದರೆ ಪ್ರಯೋಜನವೇನು? ಹಾಗೆಯೇ ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.”—ಯಾಕೋಬ 2:15-17.

ನಿಜ ಸಂರಕ್ಷಣೆಯ ಮೂಲ

ಯಾವುದೇ ತೆರದ ದೈವಿಕ ಹಸ್ತಕ್ಷೇಪದ ರೂಪದಲ್ಲಿ ಅದ್ಭುತಗಳನ್ನು ನಿರೀಕ್ಷಿಸುವ ಬದಲಿಗೆ, ಭದ್ರತೆಯು ಅವರ ಜಗದ್ವ್ಯಾಪಕ ಕ್ರಿಸ್ತೀಯ ಬಾಂಧವ್ಯದಲ್ಲಿ ಕಂಡುಕೊಳ್ಳಲ್ಪಡುತ್ತದೆಂದು ಯೆಹೋವನ ಸಾಕ್ಷಿಗಳು ಒಪ್ಪಿಕೊಳ್ಳುತ್ತಾರೆ. ನಿಜ ಸಂಗತಿಯೇನಂದರೆ, ಸಂಕಷ್ಟದ ಸಮಯದಲ್ಲಿ ಆ ಬಾಂಧವ್ಯವು ಏನನ್ನು ಪೂರೈಸಲು ಶಕವ್ತಾಗಿದೆಯೋ ಅದು ಅದ್ಭುತಕರಕ್ಕಿಂತ ಕೊಂಚವೂ ಕಡಿಮೆಯಲ್ಲದ್ದಾಗಿ ಇದೆ. ಮತ್ತಾಯ 17:20 ರಲ್ಲಿ ಕಂಡುಬರುವ ಯೇಸುವಿನ ಮಾತುಗಳನ್ನು ಅವರು ನೆನಪಿಸುತ್ತಾರೆ: “ಸಾಸಿವೇಕಾಳಷ್ಟು ನಂಬಿಕೆ ನಿಮಗೆ ಇರುವದಾದರೆ ನೀವು ಈ ಬೆಟ್ಟಕ್ಕೆ—ಇಲ್ಲಿಂದ ಅಲ್ಲಿಗೆ ಹೋಗು ಎಂದು ಹೇಳಿದರೂ ಅದು ಹೋಗುವದು; ಮತ್ತು ನಿಮ್ಮ ಕೈಯಿಂದಾಗದಂಥದು ಒಂದೂ ಇರುವದಿಲ್ಲ.” ಹೌದು, ಪ್ರೀತಿಯಿಂದೊಡಗೂಡಿದ ನಿಜ ಕ್ರಿಸ್ತೀಯ ನಂಬಿಕೆಯು ಕ್ರಿಯೆಯಲ್ಲಿರುವಾಗ, ಬೆಟ್ಟದಷ್ಟು ದೊಡ್ಡದಾದ ತಡೆಗಟ್ಟುಗಳು ಸಹ ಮಾಯವಾಗಿ ಹೋಗುತ್ತವೆ.

ಅಸ್ಥಿರವೂ ಕಷ್ಟಮಯವೂ ಆದ ಈ ಸಮಯದಲ್ಲಿ ಯೆಹೋವನ ಜನರು ಜಗದ್ವ್ಯಾಪಕವಾಗಿ ಅವರ ದೇವರ ಸಂರಕ್ಷಣಾ ಹಸ್ತವನ್ನು ಅನುಭವಿಸುತ್ತಾರೆ. ಅವರ ಅನುಭವವು ಕೀರ್ತನೆಗಾರನ ಹಾಗಿದೆ: “ನಾನು ನಿರ್ಭಯವಾಗಿರುವದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು; ಯಾಕಂದರೆ ಯೆಹೋವನೇ, ನಾನು ಯಾವ ಅಪಾಯವೂ ಇಲ್ಲದೆ ಸುರಕ್ಷಿತನಾಗಿರುವಂತೆ ನೀನು ಕಾಪಾಡುತ್ತೀ.” (ಕೀರ್ತನೆ 4:8) ಪ್ರಸ್ತುತ ಸಮಯದ ಕೆಲಸಕ್ಕೆ ಅವರು ತಮ್ಮ ಗಮನವನ್ನು ಭರವಸೆಯಿಂದ ಕೇಂದ್ರೀಕರಿಸುತ್ತಾರೆ: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಮತ್ತು ಯಾವುದರಲ್ಲಿ ಅವರು ಯಾವ ರೀತಿಯ ವಿಪತ್ತುಗಳನ್ನೂ—ಮಾನವ ನಿರ್ಮಿತ ಯಾ ನೈಸರ್ಗಿಕ—ಇನ್ನು ಮುಂದೆ ಅನುಭವಿಸರೋ ಆ ಶಾಂತಿಯುಕ್ತ ನೀತಿಭರಿತ ಹೊಸ ಲೋಕದ ಯೆಹೋವನ ವಾಗ್ದಾನದ ಪೂರ್ಣತೆಯನ್ನು ಅವರು ದೃಢ ನಿಶ್ಚಯದಿಂದ ಮುನ್ನೋಡುತ್ತಾರೆ.—ಮೀಕ 4:4.

[ಪುಟ 12 ರಲ್ಲಿರುವ ಚಿತ್ರಗಳು]

ನೆರೆಯ ಆಹುತಿಗಳಿಗೆ ಸಹಾಯಮಾಡಲಿಕ್ಕಾಗಿ ವಿಸ್ತಾರ ಕ್ಷೇತ್ರಗಳಿಂದ ಸಾಕ್ಷಿಗಳು ಬಂದರು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ