ಚೋಬೆ ನದೀಪ್ರಯಾಣದಲ್ಲಿ ನಮ್ಮೊಂದಿಗೆ ಬನ್ನಿ
ದಕ್ಷಿಣ ಆಫ್ರಿಕದ ಎಚ್ಚರ! ಸುದ್ದಿಗಾರರಿಂದ
ನಾವು ತೆಂಕಣ ಆಫ್ರಿಕದ ಮಧ್ಯಭಾಗದಲ್ಲಿರುವ ಚೋಬೆ ನದಿಯಲ್ಲಿ ಒಂದು ದೋಣಿಯ ಮೇಲಿದ್ದೇವೆ. ನಮ್ಮ ರಜಾದಿನಗಳ ಅತ್ಯುಜಲ್ವ ಭಾಗ ಈಗ ಪ್ರಸ್ತುತವಾಗಿದೆ. ಇತರ ಪ್ರಯಾಣಿಕರು ದೋಣಿ ಹತ್ತುವಾಗ ನೀರು ಮೃದುವಾಗಿ ದೋಣಿಗೆ ಅಪ್ಪಳಿಸುವುದು ನಮಗೆ ಕೇಳಿಸುತ್ತದೆ. ನದೀಕರೆಯಲ್ಲಿ ಜಲಸಸ್ಯಗಳು ಇಷ್ಟಕರವಾದ ಮಂದಮಾರುತದ ಮುಂದೆ ಓಲಾಡುತ್ತವೆ. ಆಫ್ರಿಕದ ಬಿಸಿ ಸೂರ್ಯನಿಂದ ನಮ್ಮನ್ನು ಮರೆಮಾಡಿರುವ ಮೇಘಗಳಿಗೆ ನಾವು ಆಭಾರಿಗಳು.
“ತಮ್ಮ ವಾಡಿಕೆಯ ಮಧ್ಯಾಹ್ನದ ಮೇಲಿನ ಜಲಪಾನಕ್ಕೆ ಆನೆಗಳು ಬರುತ್ತವೆಂದು ನನ್ನ ನಂಬಿಕೆ” ಅನ್ನುತ್ತಾರೆ ಈ ಪ್ರಯಾಣಕ್ಕೆ ಏರ್ಪಡಿಸಿದ ಹೊಟೇಲಿನ ಪಬ್ಲಿಕ್ ರಿಲೇಷನ್ಸ್ ಕಾರ್ಯ ನಿರ್ವಾಹಿಕೆ ಜಿಲ್. ನಮ್ಮ ಮನಸ್ಸೂ ಅದೇ. ಚೋಬೆ ನದಿ ಆನೆಗಳಿಗೆ ಹೆಸರುವಾಸಿ. ಚೋಬೆ ನದಿಯ ಮೇರೆಯಲ್ಲಿರುವ ಉತ್ತರ ಬೋಟ್ಸ್ವಾನದಲ್ಲಿ 45,000 ಆನೆಗಳು—ತೆಂಕಣ ಆಫ್ರಿಕದಲ್ಲಿ ಅತಿ ದೊಡ್ಡ ಸಂಖ್ಯೆ—ಇವೆಯೆಂದು ಅಂದಾಜು ಮಾಡಲ್ಪಡುತ್ತದೆ. “ಆದರೆ, ಇತ್ತೀಚೆಗಿನ ಮಳೆಯಿಂದಾಗಿ ನಾವು ಕಳೆದ ಮೂರು ದಿನ ಆನೆಗಳನ್ನೆ ನೋಡಿರುವುದಿಲ್ಲ” ಎಂದು ಜಿಲ್ ಎಚ್ಚರಿಕೆ ನೀಡುತ್ತಾರೆ.
ಆದರೂ, ಚೋಬೆ ನದಿಯಲ್ಲಿ ಇನ್ನೆಷ್ಟೊ ಆಕರ್ಷಕ ವಿಷಯಗಳಿವೆ. ದೋಣಿಯ ಒಂದು ಪಾತ್ರೆಯಲ್ಲಿ ನಾವು ಸತ್ತಿರುವ ನಾಲ್ಕು ಮೀನುಗಳನ್ನು ಕಾಣುತ್ತೇವೆ. “ನೀರಿಗೆ ಎಸೆಯುವ ಮೀನುಗಳಿಗಾಗಿ ಕಾಯುವ ಮೀನು ಹದ್ದುಗಳನ್ನು ನಾವು ಯಾವಾಗಲೂ ನೋಡುತ್ತೇವೆ” ಎನ್ನುತ್ತಾರೆ, ನಮ್ಮ ಬೋಟ್ಸ್ವಾನ ದೋಣಿಯ ಕ್ಯಾಪ್ಟನ್ ರೆಯ್ನ್ಫೋರ್ಡ್. ಈ ಪಕ್ಷಿಗಳಲ್ಲಿ ಒಂದು ತನ್ನ ಭೋಜನವನ್ನು ಹೆಕ್ಕಲು ಮೇಲಿಂದ ಎರಗುವಾಗ ಅದರಲ್ಲಿ ಒಂದರ ಫೋಟೊ ಹಿಡಿಯಲು ನಮಗೆ ಸಾಧ್ಯವಾದೀತೆ? ದ ಫಿಶ್ ಈಗ್ಲ್ ಎಂಬ ಇನ್ನೊಂದು ದೋಣಿ ನಮ್ಮನ್ನು ದಾಟಿಹೋಗುವಾಗ ನಮ್ಮ ಉತ್ತೇಜನ ಹೆಚ್ಚುತ್ತದೆ. ನಮ್ಮ ದೋಣಿಯ ಹೆಸರು ವಿಕ್ಟೋರಿಯ ಜಲಪಾತಕ್ಕೆ ಆಫ್ರಿಕದ ಹೆಸರಾದ ಮೋಸಿ-ಓವಾ-ಟುನ್ಯ. ಈ ಚೋಬೆ ನದಿ ಮಹಾ ಝಂಬೀಝಿ ನದಿಯನ್ನು ಸೇರಿ ಇಲ್ಲಿಂದ ಸುಮಾರು ಒಂದು ತಾಸಿನ ಹಾದಿಯಾಗಿರುವ ಆ ಪ್ರಸಿದ್ಧ ಜಲಪಾತಕ್ಕೆ ಧುಮುಕುತ್ತದೆ.
ನಂಬಿರಿ, ನಂಬದಿರಿ, ಮೋಸಿ ಹೊರಟ ಕೂಡಲೆ ನಾವು ದುರ್ಬೀನಿನಲ್ಲಿ ಆನೆಗಳನ್ನು ನೋಡುತ್ತೇವೆ. ಆದರೆ ಹಾ! ನಾವು ಇನ್ನೂ ದೂರದಲ್ಲಿರುವಾಗಲೆ ಆನೆಗಳು ಕಾಡಿಗೆ ಹಿಂದಿರುಗುತ್ತವೆ. “ಮೂರು ವಾರಗಳ ಹಿಂದೆ ನಾವು ನೂರರ ಹಿಂಡುಗಳನ್ನು ಕಾಣುತ್ತಿದ್ದೆವು” ಎಂದರು ಸ್ಯಾಂಡಿ, ನಮ್ಮ ಪ್ರಯಾಣದ ಗೈಡ್. ಆ ಮೇಲೆ, ನಮ್ಮನ್ನು ತೀರದಿಂದ ನೋಡುತ್ತಿದ್ದ ಆರು ಕುಡು ಜಿಂಕೆಗಳು ನಮ್ಮ ಗಮನವನ್ನು ಸೆಳೆದವು. ಮೋಟಾರು ವಾಹನ ಇವುಗಳನ್ನು ಸಮೀಪಿಸುವಾಗ ಇವು ಸಾಮಾನ್ಯವಾಗಿ ಓಡಿಹೋಗುತ್ತವೆ. “ನದಿಯಲ್ಲಿರುವ ದೋಣಿಯ ಹೆದರಿಕೆ ಅವುಗಳಿಗೆ ಕಡಮೆ” ಎನ್ನುತ್ತಾರೆ ಸ್ಯಾಂಡಿ.
ಆಗ ಪಾರಿವಾಳಗಳ ಲ್ಲಲೈಸುವಿಕೆಯ ಮಧ್ಯೆ ಭೇದಿಸುವ ಧ್ವನಿ ಕೇಳಿಬಂತು. ಅದಾವ ಪಕ್ಷಿ? “ಆಫ್ರಿಕದ ಮೀನು ಹದ್ದಿನ ವಿಶಿಷ್ಟ ನಾದಕರ ಕೂಗು ಚೋಬೆ ನದಿಯ ಎಡೆಬಿಡದ ವೈಶಿಷ್ಟ್ಯ” ಎನ್ನುತ್ತಾರೆ ಡಾ. ಆ್ಯಂಟನಿ ಹಾಲ್-ಮಾರ್ಟಿನ್ ತನ್ನ ಎಲಿಫೆಂಟ್ಸ್ ಆಫ್ ಆಫ್ರಿಕ ಪುಸ್ತಕದಲ್ಲಿ. ನದಿಯ ಪಕ್ಕದ ಮರಗಳಲ್ಲಿ ಕುಳಿತು ಈ ಸೊಗಸಾದ ಪಕ್ಷಿಗಳಲ್ಲಿ ನಾಲ್ಕು ನಮ್ಮನ್ನು ನೋಡುತ್ತಾ ಇವೆ. ಸ್ಯಾಂಡಿ ಮೀನನ್ನು ಎಸೆಯುವಾಗ ನಾವು ಬೇಗನೆ ಕ್ಯಾಮರಗಳನ್ನು ಪ್ರಯೋಗಿಸಲು ತಯಾರಿಸುತ್ತೇವೆ. ಸೂಚನೆ ಸಿಕ್ಕಿದ ಮೊದಲನೆಯ ಪಕ್ಷಿ ತನ್ನ ಸ್ಥಳ ಬಿಟ್ಟು ನಮ್ಮ ಕಡೆಗೆ ಬರುತ್ತದೆ. ಆ ಮೇಲೆ ಫಳೀರ್ ಎಂಬ ಶಬ್ದ ಕೇಳಿಸಿದಾಗ ಪಕ್ಷಿ ತನ್ನ ಮೊನೆಯುಗುರುಗಳಿಂದ ಮೀನನ್ನು ಬಿಗಿಯಾಗಿ ಹಿಡಿದುಕೊಂಡು, ಪುನಃ ತನ್ನ ಘನವಾದ ರೆಕ್ಕೆಗಳನ್ನು ಬಡಿಯತ್ತಾ ನೀರಿನಿಂದ ಮೇಲೆದ್ದು ವಿಜಯ ಕರೆ—ವೌ-ಕಯೌ-ಕ್ವಾವ್—ಯನ್ನು ಕೊಡುತ್ತದೆ. ಆ ಹದ್ದಿನ ಚಿಕ್ಕ ಮಿದುಳಿಂದ ಆಜ್ಞಾಪಿಸಲ್ಪಡುವ ಅದರ ಕಣ್ಣು, ಮೊನೆಯುಗುರು, ಧ್ವನಿ ಮತ್ತು ರೆಕ್ಕೆಗಳ ಸುಸಂಘಟಿತತೆಯನ್ನು ನೋಡಿ ನಾವು ಆಶ್ಚರ್ಯಚಕಿತರಾಗುತ್ತೇವೆ. ದೋಣಿಯಲ್ಲಿ, ಈ ಪ್ರದರ್ಶನ ಇನ್ನು ಮೂರು ಸಲ ಪುನರಾವೃತ್ತಿಸಲ್ಪಟ್ಟಾಗ ಕ್ಯಾಮರಗಳು ಫೋಟೊ ಹಿಡಿಯುವ ಸದ್ದಲ್ಲದೆ ಮತ್ತೆಲ್ಲವೂ ನಿಶ್ಶಬ್ದ.
ದೋಣಿ ಮುಂದುವರಿಯುವಾಗ, ಮರಿಗಳ ಸಹಿತ ಇರುವ 26 ಆನೆಗಳ ಒಂದು ಹಿಂಡನ್ನು ನೋಡುತ್ತೇವೆ. ಇವುಗಳನ್ನು ನೋಡುವಾಗ ಬ್ರೂಸ್ ಐಕೆನ್ ತನ್ನ ದ ಲಯನ್ಸ್ ಆ್ಯಂಡ್ ಎಲಿಫೆಂಟ್ಸ್ ಆಫ್ ದ ಚೋಬೆ ಎಂಬ ಪುಸ್ತಕದಲ್ಲಿ ಬರೆದ ಮಾತುಗಳು ಜ್ಞಾಪಕಕ್ಕೆ ಬರುತ್ತವೆ: “ಆಗಿದ್ದ ನೀರಡಿಕೆ ತಣಿದೊಡನೆ, ವಯಸ್ಕ ಆನೆಗಳು ತಮ್ಮ ಸೊಂಡಿಲಿಂದ ನಿಧಾನವಾಗಿ ತಣ್ಣೀರನ್ನು ತಮ್ಮ ಮೇಲೆ ಎರಚಿಕೊಳ್ಳುತ್ತವೆ. ಕೆಲವು ಆನೆಗಳು, ವಿಶೇಷವಾಗಿ ಬೆಳೆಯುತ್ತಿರುವ ಆನೆಗಳು ಮತ್ತು ಗಂಡಾನೆಗಳು ನದಿಯೊಳಗೆ ಹೋಗಿ ವಿನೋದದಿಂದ ಈಜುವ ಮತ್ತು ಜಿಗಿದಾಡುವ ಸಂಭವವಿದೆ. ಅನೇಕ ವೇಳೆ, ಅವುಗಳ ಸೊಂಡಿಲಿನ ತುದಿ ಮಾತ್ರ ನೀರಿನ ಮೇಲೆ ಉಸಿರಾಟದ ನಳಿಗೆಯಂತೆ ತೋರಿಬರುತ್ತದೆ. ಆದರೆ ಆನೆಯ ಮರಿಗಳಷ್ಟು ಬೇರೆ ಯಾವ ಆನೆಗಳೂ ಸಂತೋಷಪಡುವಂತೆ ಕಾಣುವುದಿಲ್ಲ. ಇದು ಆಟದಾರಂಭ ಮತ್ತು ಬಿಡದೆ ಕುಪ್ಪಳಿಸಿ ನಡೆಯುತ್ತಾ ಒಂದನ್ನೊಂದು ಹಿಡಿಯಲು ಬೆನ್ನಟ್ಟುತ್ತವೆ. . . ನೀರಡಿಕೆ ತಣಿಸಿದ ಬಳಿಕ ಈಗ ಮುಂದಿನ ಮತ್ತು ನಿಸ್ಸಂದೇಹವಾಗಿ ಅತಿ ಇಷ್ಟದ ಚಟುವಟಿಕೆಯಾದ ಕೆಸರಸ್ನಾನಕ್ಕೆ ಅವು ತೊಡಗುತ್ತವೆ. . . . ಆದರೆ ಬೇಗನೆ, ಯಾರ ಮಾತು ನಿಯಮವಾಗುತ್ತದೊ ಆ ವಿನೋದಗೇಡಿ ಹೆಣ್ಣಾನೆಗಳು ಇಲ್ಲಿಂದ ತೊಲಗಿ ಹೋಗಲು ಸಮಯವಾಯಿತೆಂದು ತೀರ್ಮಾನಿಸುತ್ತವೆ.”
ಆದರೆ ವಿಷಾದಕರವಾಗಿ, ನಮ್ಮ ಮಾಳಿಗೆ ದೋಣಿಯ ಆಗಮನ ಈ “ವಿನೋದಗೇಡಿ” ಹೆಣ್ಣಾನೆಗಳನ್ನು ಕಳವಳಗೊಳಿಸಿದುದರಿಂದ ಅವು ಹಿಂಡನ್ನು ನಡೆಸಿಕೊಂಡು ಹೋಗಿಬಿಟ್ಟವು, ಆದರೆ ಕೆಲವು ಫೋಟೊ ಹಿಡಿಯುವ ಮೊದಲಾಗಿ ಅಲ್ಲ.
ಹೊತ್ತು ಇನ್ನೂ ಮುಳುಗಿರಲಿಲ್ಲ, ಮತ್ತು ಚೋಬೆ ನದಿಯಲ್ಲಿ ಇನ್ನೂ ಅನಿರೀಕ್ಷಿತ ವಿಷಯಗಳಿದ್ದವು. ಸುತ್ತಲಿದ್ದ ಕಲಹಾರಿ ಮರುಭೂಮಿಯ ದೂಳಿನ ಕಾರಣ ನದಿಯ ಆಚೆ ಬದಿಯಲ್ಲಿ ಆಗುವ ಸೂರ್ಯಾಸ್ತಮಾನ ಶೋಭಾಯಮಾನವುಳ್ಳದ್ದು. ಸಂಜೆಯ ಸಮಯ ನಿಧಾನಿಗಳಾದ ನೀರಾನೆಗಳು ನೀರಿನಿಂದ ತಮ್ಮ ರಾತ್ರಿಯ ಊಟಕ್ಕಾಗಿ ಮೇಲೆದ್ದು ಬರುವ ಸಮಯವೂ ಆಗಿದೆ. ಈ ಸಮಯದಲ್ಲಿ ನಮ್ಮ ದೊಡ್ಡ ದೋಣಿಯ ಸುರಕ್ಷಿತತೆ ನಿಜವಾಗಿಯೂ ಲಾಭದಾಯಕ. “ಹೆದರದೆ ನೀವು ನೀರಾನೆಯ ಸಮೀಪಕ್ಕೆ ಬರಬಹುದು” ಎನ್ನುತ್ತಾರೆ ರೆಯ್ನ್ಫೋರ್ಡ್.
ಒಂದು ನಾದಕಾರಕವಾದ ಆಳ ಕಾಡುಕೂಗು ನಾವು ನದಿಯ ಒಂದು ದ್ವೀಪದ ಪಕ್ಕದಲ್ಲಿದ್ದ ನೀರಾನೆ ಮಡುವಿಗೆ ಬಂದೆವೆಂದು ಸೂಚಿಸಿತು. ನೀರಿನ ಅಡಿಯಲ್ಲಿದ್ದ ನೀರಾನೆಗಳ ದೊಡ್ಡ ತಲೆಗಳು ಒಂದರ ಹಿಂದೊಂದು ನಮ್ಮ ದೋಣಿಯ ಎರಡೂ ಪಕ್ಕಗಳಲ್ಲಿ ಎದ್ದು ಬಂದವು. ಥಟ್ಟನೆ, ಎರಡು ನೀರಾನೆಗಳು ತಮ್ಮ ವಿಶಾಲವಾದ ಬಾಯಿ—ಮನುಷ್ಯನು ಒಳಗೆ ಕುಳಿತುಕೊಳ್ಳುವಷ್ಟು ವಿಶಾಲವಾದ ಬಾಯಿ—ತೆರೆದುಕೊಂಡು ಒಂದರ ಮೇಲೊಂದು ಬಿದ್ದವು. ಆ ಬಳಿಕ, ದ್ವೀಪದ ಹತ್ತಿರದ ಆಳವಿಲ್ಲದ ನೀರಿನಿಂದ ಇನ್ನೊಂದು ನೀರಾನೆ ನೇರವಾಗಿ ನಮ್ಮ ಕಡೆ ನಡೆದು ಬಂತು. ಅದು ಎಷ್ಟು ಹತ್ತಿರ ಬಂತೆಂದರೆ ಅದರ ಬೃಹದಾಕಾರದ ದೇಹ ನಮ್ಮ ಕ್ಯಾಮರದ ಲೆನ್ಸನ್ನು ತುಂಬಿಕೊಂಡಿತು. ನೀರು ಆಳವಾದಂತೆ ಅದರ ತಲೆ ನೀರಿನೊಳಗೆ ಮುಳುಗಿ ಅದರ ದೊಡ್ಡ ಹಿಂಭಾಗ ಮಾತ್ರ ನೀರಿನ ಮೇಲ್ಭಾಗದಲ್ಲಿ ತೋರಿಬರುತ್ತದೆ. ಬಳಿಕ, ಶ್ವಾಸಕೋಶದಿಂದ ಗಾಳಿಯನ್ನು ಹೊರಪಡಿಸಲಾಗಿ ಆ ದೈತ್ಯಾಕಾರದ ಶರೀರವೆಲ್ಲ ನೀರಿನೊಳಗೆ ಸೇರುತ್ತದೆ!
ಅದು ನಾಲ್ಕು ಟನ್ನುಗಳಷ್ಟು ಭಾರವಾಗಿದ್ದರೂ ನೀರಾನೆಗೆ ನೀರಿನಲ್ಲಿ ಬಹಳ ಚಳಕವಿದೆ ಎಂದು ತಿಳಿಯುವಾಗ ನಮಗೆ ಆಶ್ಚರ್ಯವಾಯಿತು. “ಅದಕ್ಕೆ ಒಡ್ಡೊಡ್ಡಾದ ದೇಹವಿದ್ದರೂ ಅದು ಅನೇಕ ಮೀನುಗಳಿಗಿಂತ ವೇಗವಾಗಿ ಈಜಬಲ್ಲದು, ಮತ್ತು ಅದು ಶುಭ್ರವಾದ ನೀರಿನ ಮೇಲ್ಮೈಯ ಕೆಳಭಾಗದಲ್ಲಿ ವೇಗವಾಗಿ ಈಜುವುದ್ನು ಅನೇಕ ವೇಳೆ ನೋಡಬಹುದು” ಎನ್ನುತ್ತಾರೆ ಬ್ರ್ಯಾಡ್ಲಿ ಸ್ಮಿತ್, ಲೈಫ್ ಆಫ್ ದ ಹಿಪೊಪಾಟಮಸ್ ಎಂಬ ತನ್ನ ಪುಸ್ತಕದಲ್ಲಿ. ಅಥವಾ, ಇಷ್ಟಪಡುವಲ್ಲಿ, ಅವು ತಮ್ಮ ಬಲವಾದ ಕಾಲುಗಳನ್ನು ಆಳವಾದ ನದೀತಳದಲ್ಲಿ ಓಡಲು ಉಪಯೋಗಿಸಬಲ್ಲವು. ಮಾನವನ ಸೃಷ್ಟಿಕರ್ತನು ಹೇಳಿದಂತೆಯೆ ಇದು ಇದೆ:
“ನಿನ್ನಂತೆ ನನ್ನ ಸೃಷ್ಟಿಯಾಗಿರುವ ನೀರಾನೆಯನ್ನು ನೋಡು; ಎತ್ತಿನ ಹಾಗೆ ಹುಲ್ಲನ್ನು ಮೇಯುವದು. ಇಗೋ, ಅದರ ಬಲವು ಸೊಂಟದಲ್ಲಿಯೂ ಅದರ [“ಬಲವತ್ತಾದ”, NW] ಶಕ್ತಿಯು ಹೊಟ್ಟೆಯ ನರಗಳಲ್ಲಿಯೂ ಸೇರಿಕೊಂಡಿವೆ. ಓಹೋ, ಹೊಳೆಯು ಹೊಡೆದರೂ ಅದು ಹೆದರುವದಿಲ್ಲ. ಪ್ರವಾಹವು ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವದು.” (ಯೋಬ 40:15, 16, 23, ರೆಫರನ್ಸ್ ಬೈಬಲ್ ಪಾದಟಿಪ್ಪಣಿ) ಈ “ಬಲವತ್ತಾದ ಶಕ್ತಿಯ” ಭಯೋತ್ಪಾದಕ ಮಾದರಿಗಳಿಂದ ಸುತ್ತಲ್ಪಟ್ಟವರಾದ ನಾವು, ಅವುಗಳನ್ನು ಮಾಡಿದ ವ್ಯಕ್ತಿಗೆ ಗೌರವವನ್ನು ತೋರಿಸುವ ಹೆಚ್ಚಿನ ಆವಶ್ಯಕತೆಯನ್ನು ಗ್ರಹಿಸುತ್ತೇವೆ. “ಯಾವನಾದರೂ ಕಣ್ಣೆದುರಿಗೆ ಬಂದು ಅದನ್ನು ಹಿಡಿದಾನೇ? ಗಾಳದಿಂದ ಅದರ ಮೂಗನ್ನು ಚುಚ್ಚಬಲ್ಲನೇ?” ಎಂದು ಯೆಹೋವ ದೇವರು ಕೇಳುತ್ತಾ ಮಾನವ ಪರಿಮಿತಿಯನ್ನು ನಮಗೆ ಜ್ಞಾಪಕ ಹುಟ್ಟಿಸುತ್ತಾನೆ.—ಯೋಬ 40:24.
ಶೋಭಾಯಮಾನವಾದ ಸೂರ್ಯಾಸ್ತಮಾನವನ್ನು ನೋಡುವುದೊ ನೀರಾನೆಯನ್ನೊ ಎಂಬ ವಿಷಯ ಅರೆಮನಸ್ಕರಾಗಿದ್ದ ನಮಗೆ, ದೋಣಿ ಹಿಂದಿರುಗಲು ಸಮಯವಾದಾಗ ಸ್ಥಳವನ್ನು ಬಿಟ್ಟುಹೋಗಲು ಮನಸ್ಸಾಗಲಿಲ್ಲ. ಆದರೆ ಕೊನೆಗೆ, ನಮ್ಮ ನದೀತೀರದ ಹುಲ್ಲಿನ ಗುಡಿಸಲಿನಿಂದ, ಆಕಾಶ ಎಳೆಗೆಂಪು ಮತ್ತು ಕಿತ್ತಳೆ ಬಣ್ಣವಾಗಿ ಅದರ ಸುಂದರ ಪ್ರತಿಬಿಂಬ ನೀರಿನಲ್ಲಿ ತೋರಿಬಂದಾಗ ನಾವು ಅಚ್ಚರಿಯಿಂದ ಅದನ್ನು ಪ್ರೇಕ್ಷಿಸತೊಡಗಿದೆವು. ಅಂದು ನೋಡಿ ಕೇಳಿದ ಉತ್ತೇಜಕ ವಿಷಯಗಳ ಕುರಿತು ಧ್ಯಾನಮಗ್ನರಾದೆವು. “ನೀವು ವನ್ಯಮೃಗಗಳಿಗೆ ನಿಜವಾಗಿಯೂ ಹತ್ತಿರ ಹೋಗಬೇಕಾದರೆ ಚಿಕ್ಕ ಮೋಟರ್ಬೋಟನ್ನು ಉಪಯೋಗಿಸಬೇಕು” ಎಂದು ಸಲಹೆ ನೀಡಿದರು ಸ್ಯಾಂಡಿ. ಅವರ ಸಲಹೆಯಂತೆ ಮರುದಿನ ಮಧ್ಯಾಹ್ನ ಒಂದನ್ನು ಬಾಡಿಗೆಗೆ ತಕ್ಕೊಳ್ಳಲು ನಿಶ್ಚಯಿಸಿದೆವು.
ಈ ಬಾರಿ, ಅಪಾಯಕಾರಿಯಾದ ನೀರಾನೆಯನ್ನು ಬಿಟ್ಟರೆ, ಇನ್ನೆಲ್ಲ ವನ್ಯಮೃಗಗಳ ಹತ್ತಿರ ಹೋದೆವು. ನಮಗೆ ಜಲಹುಲ್ಲು ಮತ್ತು ಜಲಪುಷ್ಪಗಳನ್ನು ಮುಟ್ಟಲಿಕ್ಕೂ ಸಾಧ್ಯವಾಯಿತು. ಚಿಕ್ಕ ಮೀನನ್ನು ಹುಡುಕುತ್ತಾ ನೀರಿನ ಮೇಲ್ಭಾಗದಲ್ಲಿ ಚಲಿಸದೆ ಹಾರಾಡುವ ಬಣ್ಣಬಣ್ಣದ ಮೀನ್ಜುಳ್ಳಿಗಳನ್ನು ನೋಡಿದೆವು. ಕಂದು ಹೆಡೆಯ ಮೀನ್ಜುಳ್ಳಿ, ಬಿಳಿ ಎದೆಯ ಬೀ ಈಟರ್ ಹಕ್ಕಿ, ಪಟ್ಟೆಗಳಿರುವ ಸ್ವಾಲೊ ಹಕ್ಕಿಗಳು ನಮ್ಮ ಸುತ್ತ ಹಾರಾಡುತ್ತಿದ್ದವು. ಇನ್ನು ನದೀದ್ವೀಪಗಳ ಸುರಕ್ಷಿತತೆಯನ್ನು ಅನುಭವಿಸುವ ದೊಡ್ಡ ಪಕ್ಷಿಗಳೂ ಇವೆ. ಇವುಗಳಲ್ಲಿ ಕೆಲವು ಇಜಿಪ್ಶಿಯನ್ ಹೆಬ್ಬಾತು, ಜಕಾನ, ಕಾರ್ಮೋರೆಂಟ್ ಸಮುದ್ರ ಪಕ್ಷಿ ಮತ್ತು ಹೆರನ್ ಕ್ರೌಂಚ ಪಕ್ಷಿ. ಈ ಪಕ್ಷಿಗಳಿಂದ ಅಲಂಕೃತವಾದ ಅರ್ಧ ಮುಳುಗಿರುವ ಒಂದು ಮರವನ್ನು ನಾವು ದಾಟಿಹೋದೆವು.
ಕೊನೆಗೆ, ಹಿಂದಿನ ದಿನ ಆನೆಯ ಹಿಂಡನ್ನು ನೋಡಿದ ಸ್ಥಳಕ್ಕೆ ನಾವು ಬಂದೆವು. ಈ ಬಾರಿ, ನಮ್ಮನ್ನು ಅಲಕ್ಷ್ಯಮಾಡುತ್ತಾ ಕುಡಿಯುತ್ತಾ ತಿನ್ನುತ್ತಾ ಇದ್ದ ಒಂದೇ ಗಂಡಾನೆ ಅಲ್ಲಿತ್ತು. ಆದರೆ ನಾವು ಅಲ್ಲಿಂದ ಹೊರಡುವಾಗ ಒಂದು ತಾಯಿ ಆನೆ ತನ್ನ ಮರಿಗಳೊಂದಿಗೆ ಕಾಡಿನಿಂದ ಥಟ್ಟನೆ ಹೊರಗೆ ಬಂತು. ನಮ್ಮನ್ನು ನೋಡಿ ಹಿಂಜರಿಯತೊಡಗಿತು. ನಾವು ಹಾರೈಕೆಯಿಂದ ಉಸಿರು ಬಿಗಿ ಹಿಡಿದೆವು. ಆ ತಾಯಿ ಹೊರಗೆ ಬಂದೀತೊ ಇಲ್ಲವೊ? ಹೇಗೂ ಅದು ತನ್ನ ಮರಿಗಳನ್ನು ನಮ್ಮ ಸಮಕ್ಷಮಕ್ಕೆ ತರಲು ನಿಶ್ಚಯಿಸಿತು. ಆ ತಾಯಿ, ದೊಡ್ಡ ಮರಿ ಮತ್ತು ಚಿಕ್ಕ ಮರಿ ನಮ್ಮ ಬಳಿಗೆ ಓಡಿಬರುವುದನ್ನು ನೋಡುವುದು ಎಷ್ಟು ಪ್ರೇಕ್ಷಣೀಯ!
ಸಿಂಹ ಮತ್ತು ಆನೆಗಳ ಸಂಬಂಧದ ತನ್ನ ಪುಸ್ತಕದಲ್ಲಿ ಐಕೆನ್ ಈ ಹೇಳಿಕೆಯನ್ನು ನೀಡುತ್ತಾರೆ: “ಪ್ರತಿದಿನ ಈ ದೊಡ್ಡ ಗಾತ್ರದ ಪ್ರಾಣಿಗಳಿಗೆ, ಅವು ನದಿಯ ಕಡೆಗೆ ತಾವು ಮಾಡುವ ದೀರ್ಘ ಪ್ರಯಾಣವನ್ನು ಮುಗಿಸುವಾಗ . . . ಎಷ್ಟು ನೀರಡಿಕೆಯಾಗಬಹುದೆಂದು ಭಾವಿಸುವುದು ಸುಲಭ. ಆತುರದಿಂದ ಮತ್ತು ಆಗುವಷ್ಟು ಬೇಗನೆ, ಹಿಂಡು ಕಾಡಿನಿಂದ ಹೊರಗೆ ಬಂದು ನೇರವಾಗಿ ಕುಡಿಯುವ ಸ್ಥಳಕ್ಕೆ ಹೋಗುತ್ತವೆ. ಜೀವದಾಯಕ ನೀರಿನ ವಾಸನೆಯ ಕಾರಣ ಅವು ಕೊನೆಯ ಐವತ್ತು ಯಾ ನೂರು ಮೀಟರುಗಳನ್ನು ನಿಶ್ಚಿಂತೆಯಿಂದ ಓಡಿ ಮುಗಿಸುತ್ತವೆ.” ಆ ಮೂರು ಆನೆಗಳು ಸಾಲಾಗಿ—ಚಿಕ್ಕ ಮರಿ ಮಧ್ಯದಲ್ಲಿ ಸುರಕ್ಷಿತವಾಗಿ—ನಿಂತು ನೀರು ಕುಡಿಯುವುದನ್ನು ನಾವು ಆಶ್ಚರ್ಯದಿಂದ ನೋಡಿದೆವು. ಆದರೆ, ಸಮಯವಾಗುತ್ತಿದೆ, ಮತ್ತು ಹೊತ್ತು ಮುಳುಗುವ ಮುಂಚೆ ನಾವು ಹಿಂದಿರುಗಬೇಕು.
ಆನೆಗಳಲ್ಲದೆ, ಕಾಡುಕೋಣ, ಮೊಸಳೆ, ಪೂಕುಸ್, ಕುಡು ಜಿಂಕೆ, ನೀರುಜಿಂಕೆ, ಇಂಪಾಲ ಜಿಂಕೆ, ಬಬೂನ್ ಕೋತಿ, ವಾರ್ಟ್ಹಾಗ್ ಕಾಡುಹಂದಿಗಳನ್ನೂ ನಾವು ನೋಡಿದೆವು. ಈ ಅಚ್ಚರಿಗೊಳಿಸುವ ವನ್ಯಜೀವಿಗಳ ವೈವಿಧ್ಯವನ್ನು ಉಂಟುಮಾಡಿ ಅವುಗಳು ಇಂಥ ಸುಂದರ ಸುತ್ತುಗಟ್ಟಿನಲ್ಲಿ ಜೀವಿಸುವಂತೆ ಮಾಡಿದಾತನನ್ನು ಮೆಚ್ಚದಿರಲು ನಮ್ಮಿಂದ ಸಾಧ್ಯವಾಗಲಿಲ್ಲ. ಒಣ ಹವೆಯ ಸಮಯದಲ್ಲಿ, ಪಕ್ಷಿಗಳೂ ಪ್ರಾಣಿಗಳೂ ದೊಡ್ಡ ಸಂಖ್ಯೆಯಲ್ಲಿ ನದೀತೀರಕ್ಕೆ ಬಂದು ಸೇರುತ್ತವೆ. ಇಲ್ಲಿ ಸಿಂಹ, ಚಿರತೆ ಮತ್ತು ಖಡ್ಗ ಮೃಗಗಳನ್ನೂ ನೋಡಬಹುದು.
ನೀವು ಆಫ್ರಿಕದ ಈ ಮೂಲೆಯ ಪ್ರದೇಶದಿಂದ ಬಹು ದೂರದಲ್ಲಿ ಜೀವಿಸುತ್ತಿರಬಹುದು, ಆದರೆ ನಮ್ಮೊಂದಿಗೆ ದೋಣಿ ಪ್ರಯಾಣ ಬೆಳೆಸಿದುದರ ಮೂಲಕ ಚೋಬೆ ನದೀ ಪ್ರಯಾಣದಲ್ಲಿ ತೊಡಗುವವರಿಗಾಗಿ ಕಾದಿರುವ ಉಜ್ವಲ ದೃಶ್ಯಗಳ ಹೆಚ್ಚು ಉತ್ತಮ ಪರಿಚಯ ನಿಮಗಾಯಿತೆಂದು ನಮ್ಮ ನಿರೀಕ್ಷೆ. (g90 7/22)
[ಪುಟ 18 ರಲ್ಲಿರುವ ಚಿತ್ರ ಕೃಪೆ]
All wood engravings: Animals: 1419 Copyright-Free Illustrations of Mammals, Birds, Fish, Insects, etc. by Jim Harter