ನಿಮ್ಮನ್ನು ಭೇದಿಸಿ ನೋಡಶಕ್ತನಾದ ಒಂದು ಕಂಪ್ಯೂಟರ್
ನ್ಯೂ ಝಿಲೇಂಡಿನ ಎಚ್ಚರ!ದ ಬಾತ್ಮೀದಾರನಿಂದ
ಆಯತಾಕಾರದ ಕಿಟಕಿಯಿಂದ ನೋಡಲಾಗಿ, ನಾನೊಂದು ವಿಚಿತ್ರವಾದ ದೃಶ್ಯವನ್ನು ಕಂಡೆನು. ಮೇಜಿನ ಮೇಲೆ ಮಲಗಿರುವ ಒಬ್ಬ ಮನುಷ್ಯನ ಸುತ್ತಲೂ ಬಿಳಿಬಟ್ಟೆ ಧರಿಸಿದ ಪರಿಚಾರಕರು ನಿಂತಿದ್ದರು. ಒಂದು ದೊಡ್ಡ ಪೆನ್ಸಿಲನ್ನು ಚೂಪುಗೊಳಿಸುವ ಯಂತ್ರದ ಹಾಗೆ ತೋರುವ ಒಂದರೊಳಗೆ ಮಲಗಿರುವ ಮನುಷ್ಯನ ತಲೆಯನ್ನು ಮೊದಲು ತೂರಿಸಲಾಯಿತು! ಇದೊಂದು ಘೋರ ಸ್ವಪ್ನವೇ? ವೈಜ್ಞಾನಿಕ ಕಲ್ಪನೆಯ ಒಂದು ದೃಶ್ಯವೇ? ಸಂಭವಿಸುತ್ತಿರುವದಾದರೂ ಏನು?
ನ್ಯೂ ಝಿಲೇಂಡಿನ ದಕ್ಷಿಣ ದ್ವೀಪದಲ್ಲಿ, ಡುನ್ಡಿನ್ನಲ್ಲಿ ಒಂದು ಸ್ಥಳೀಕ ಆಸ್ಪತ್ರೆಯಲ್ಲಿ ಸಂಭವಿಸುತ್ತಿರುವ ಒಂದು ದೃಶ್ಯ ಇದಾಗಿದೆ. ದೊಡ್ಡ ಪೆನ್ಸಿಲ್ ಚೂಪುಗೊಳಿಸುವಿಕೆಯು ವಾಸ್ತವದಲ್ಲಿ CAT ಸ್ಕಾನರ್ (ಕ್ರಮಲೋಕನ ಯಂತ್ರ) ಎಂದು ಕರೆಯಲ್ಪಡುವ ಅತಿ ಜಟಿಲವಾದ ಎಕ್ಷ್-ರೇ ಯಂತ್ರದ ಒಂದು ನಮೂನೆಯಾಗಿದೆ. ಇಲ್ಲ ಅದು ಬೆಕ್ಕುಗಳ (cats) ಕ್ರಮಲೋಕನ ಮಾಡುವದಿಲ್ಲ,—ಏನಿದ್ದರೂ ಸದ್ಯಕ್ಕೆ ಇಲ್ಲ. ಈ ಮೂರು ಇಂಗ್ಲಿಷ್ ಶಬ್ದಗಳು ಕಂಪ್ಯೂಟರೈಸ್ಡ್ ಎಕ್ಷಿಲ್ ಟೊಮೊಗ್ರಫಿ ಎಂಬದರ ಸಂಕುಚಿತ ಪದವಾಗಿದೆ. “ಟೊಮೊಗ್ರಫಿ”ಯು ಗ್ರೀಕ್ ಶಬ್ದಗಳಿಂದ ಬಂದದ್ದಾಗಿದ್ದು, ಅದರ ಅರ್ಥ “ತೆಳು ಹೋಳುಗಳನ್ನು ಬರೆಯುವದು” ಎಂದಾಗಿದೆ, ಮತ್ತು ಇದು ತಾನೇ ಕ್ಯಾಟ್ ಸ್ಕಾನರ್ ಮಾಡುತ್ತದೆ. ನಿಮ್ಮ “ತೆಳು ಹೋಳಿನ” ಸಲಾಮಿ ಮಾಂಸದ ಹೋಳಿನಂತೆ, ಎಕ್ಷ್-ರೇಯನ್ನು ತೆಗೆಯುತ್ತದೆ, ಮತ್ತು ಅದೇನು ನೋಡುತ್ತದೋ, ಅದನ್ನು “ಬರೆದಿಡುತ್ತದೆ” ಯಾ ದಾಖಲೆ ಮಾಡುತ್ತದೆ.
ಪ್ರಾಯಶಃ ನೀವು ಎಣಿಸಬಹುದು, ಈ ಆಕರ್ಷಕ ಎಕ್ಷ್-ರೇ ಯಂತ್ರಗಳು ವೈದ್ಯರಿಗೆ ಮತ್ತು ವಿಜ್ಞಾನಿಗಳಿಗೆ ಮಾತ್ರ ಆಸಕ್ತಿಯವುಗಳು, ಆದರೆ ಇಲ್ಲಿನ ಜನರು ಸಾರ್ವಜನಿಕ ಚಂದಾವನ್ನೆತ್ತಿ ತಂದ ಅಂಥಹ ಒಂದು ಕ್ಯಾಟ್ ಸ್ಕಾನರ್ ಕುರಿತು ಬಹಳಷ್ಟು ಆಸಕ್ತರಾಗಿರುತ್ತಾರೆ. ಒಟಾಗೊ ಮತ್ತು ಸೌತ್ಲೇಂಡ್ ನೆರೆಕರೆಯ ಪ್ರಾಂತ್ಯಗಳೆರಡೂ 20 ಲಕ್ಷ ನ್ಯೂ ಝಿಲೇಂಡ್ ಪೌಂಡುಗಳನ್ನು (ಸಾಧಾರಣ ರೂ. 3 ಕೋಟಿ) ಅದಕ್ಕಾಗಿ ಜಮಾಯಿಸಿದವು, ಅದರ ಅರ್ಥ ಆ ವಠಾರದ ಪ್ರತಿಯೊಬ್ಬ ಪುರುಷ, ಸ್ತ್ರೀ ಮತ್ತು ಮಗುವು ಆರು ನ್ಯೂ ಝಿಲೇಂಡ್ ಡಾಲರುಗಳನ್ನು (ಸುಮಾರು ರೂ.90) ಕಾಣಿಕೆ ಕೊಟ್ಟಂತೆ ಆಗುತ್ತದೆ. ನಮ್ಮ ಸ್ಥಳೀಯ ವಿಶ್ವವಿದ್ಯಾನಿಲಯ ಮತ್ತು ಅದರ ವೈದ್ಯಕೀಯ ಶಾಲೆಯು ಆ ಯಂತ್ರದಲ್ಲಿ ಅಷ್ಟು ಸಾರ್ವಜನಿಕ ಕುತೂಹಲವನ್ನು ಕೆರಳಿಸಲು ಬಹಳ ಕೆಲಸ ಮಾಡಿದೆ, ಆದರೆ ಈ ಕ್ಯಾಟ್ಸ್ಗಳು ಲೋಕದಲ್ಲಿಲ್ಲಾ ಹೆಚ್ಚುತ್ತಾ ಇವೆ. ನಿಮ್ಮ ಹತ್ತಿರದಲ್ಲಿಯೂ ಒಂದು ಇರಬಹುದು.
ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ನಿಮ್ಮ ಎಕ್ಷ್-ರೇ ಎಂದಾದರೂ ತೆಗೆದಿದ್ದೀರೋ? ಹಾಗಿರುವದಾದರೆ, ಒಂದು ಅಗಲವಾದ ಚಪ್ಪಟೆ ಹಲಗೆಯ ಎದುರು ನಿಂತಿರಬೇಕಾದ ಯಾ ಮಲಗಿರಬೇಕಾದ ನೆನಪು ನಿಮಗೆ ಬರಬಹುದು. ನೀವದನ್ನು ಮಾಡುವಾಗ, ಅದೃಶ್ಯ ಎಕ್ಷ್-ರೇ ಕಿರಣಗಳು ನಿಮ್ಮ ದೇಹದ ಮೂಲಕ ತೂರಿಕೊಂಡು ಹೋಗಿರುತ್ತವೆ ಮತ್ತು ನಿಮ್ಮ ಹಿಂಬದಿಯಲ್ಲಿ ಒಂದು ಫೋಟೊಗ್ರಾಫಿಕ್ ಪೇಟ್ಲನ್ನು ಮಾಡಿರುತ್ತದೆ. ಎಲ್ಲಿ ನಿಮ್ಮ ಎಲುಬುಗಳು ಇದ್ದವೋ, ಅಲ್ಲೆಲ್ಲಾ ಹೆಚ್ಚಿನ ಕಡೆ ಅಧಿಕಾಂಶ ಎಕ್ಷ್-ರೇ ಕಿರಣಗಳು ಸ್ತಬ್ಧಗೊಂಡಿವೆ. ಇತರ ಅಂಗಾಂಶಗಳು ಮತ್ತು ಅಂಗಗಳು ಅವುಗಳ ಸಾಂದ್ರತೆಯ ಮೇಲೆ ಹೊಂದಿಕೊಂಡು, ವಿವಿಧ ಮಟ್ಟಗಳಲ್ಲಿ ಎಕ್ಷ್-ರೇಗಳನ್ನು ಕುಂಠಿತಗೊಳಿಸಿವೆ. ಅದರ ಫಲಿತಾಂಶವಾಗಿ ನಿಮ್ಮ ಒಳಭಾಗದ ಒಂದು ಛಾಯಾಚಿತ್ರವು ಬಂದಿದ್ದು, ಎಲುಬುಗಳನ್ನು ಬಿಳಿಯಾಗಿಯೂ, ಮತ್ತು ಇತರ ಅಂಗಾಂಶಗಳು ಮತ್ತು ಅಂಗಗಳು ಬೂದು ಬಣ್ಣದ ಎಂಟು ಛಾಯಾಂತರಗಳಲ್ಲಿ ಬಂದಿರುತ್ತವೆ.
ಒಂದು ಅಂಗಡಿಯ ಪ್ರದರ್ಶನ ಕಿಟಕಿಯಲ್ಲಿ ಹರಡಲ್ಪಟ್ಟಿರುವಂತೆ ನಿಮ್ಮೆಲ್ಲಾ ಎಲುಬುಗಳು ಮತ್ತು ಅಂಗಗಳು ಇದ್ದಿರುತ್ತಿದ್ದರೆ, ಸಾಂಪ್ರದಾಯಿಕ ಎಕ್ಷ್-ರೇಗಳು ಉತ್ತಮವಾಗಿ ಬರುತ್ತಿದ್ದವು, ಆದರೆ ಅವು ಹಾಗೆ ಇರುವದಿಲ್ಲ. ಕೆಲವು ಬಹು ತೆಳುವಾಗಿ ಒಂದರ ಹಿಂದೆ ಇನ್ನೊಂದು ಅಂಟಿಕೊಂಡಿರುತ್ತವೆ. ಅವುಗಳ ಚಿತ್ರವನ್ನು ಹೇಗೆ ತೆಗೆಯಸಾಧ್ಯವಿದೆ? ಒಂದು ಶಾಲೆಯ ಚಿತ್ರಕ್ಕಾಗಿ ಶಾಲೆಯ ಹುಡುಗರನ್ನು ಒಳ್ಳೆಯ ಭಾವಭಂಗಿಗಾಗಿ ಆಚೀಚೆ ಸರಿಸಿದಂತೆ ಸ್ಥಳಾಂತರಿಸಲು ಸಾಧ್ಯವಿಲ್ಲ. ಆದುದರಿಂದ ಫೋಟೊ ತೆಗೆಯುವವನು ಚಲಿಸಬೇಕು—ಎಕ್ಷ್-ರೇಗಳನ್ನು ಬೇರೆ ಬೇರೆ ಕೋನಗಳಿಂದ ತೆಗೆಯಬೇಕು.
ಕ್ಯಾಟ್ ಸ್ಕಾನರ್ನಲ್ಲಿ, ಪೆನ್ಸಿಲ್ ಚೂಪುಗೊಳಿಸುವಂತಿರುವ ಆಕಾರವು, ದೇಹದ ಸುತ್ತಲಿನಿಂದ ಎಕ್ಷ್-ರೇಗಳನ್ನು ತೆಗೆಯಲು ಅನುಮತಿಸುತ್ತದೆ. ಬೂದು ವರ್ಣದ 250 ಛಾಯಾಂತರಗಳಲ್ಲಿ 700 ರಷ್ಟು ಭಿನ್ನ ಭಿನ್ನ ಚಿತ್ರಗಳನ್ನು ನಿಮ್ಮ ಒಂದು “ತೆಳು ಹೋಳಿನಿಂದ” ತೆಗೆಯಲಾಗುತ್ತದೆ. ಈ ಹಿಂದೆ ಸಾಧ್ಯವಾಗಿರದಷ್ಟು ಉತ್ತಮವಾಗಿ ನಿಮ್ಮ ಒಳಗಿನ ವಿವರಾತ್ಮಕ ಚಿತ್ರಗಳನ್ನು ಇದು ಒದಗಿಸುತ್ತದೆ.
ಕಂಪ್ಯೂಟರ್ ಯಾಕೆ?
ಎಷ್ಟೋ ಅಧಿಕವಾದ ಎಕ್ಷ್-ರೇಗಳನ್ನು ತೆಗೆಯುವದು ಅಚ್ಚರಿಯದ್ದಾಗಿರುವದಾದರೂ, ಈ ಎಲ್ಲಾ ಚಿತ್ರಗಳ ತಲೇ ಬುಡ ಕಂಡುಹಿಡಿಯುವದು ಇನ್ನೊಂದು ಸಂಗತಿಯಾಗಿದೆ. ಒಬ್ಬ ಕಾರ್ಯಮಗ್ನ ಸರ್ಜನನು ತನ್ನ ಆಯಾಸಕರ ದಿನವನ್ನು ವ್ಯಯಿಸಿದ ನಂತರ, ನಿಮ್ಮ ಹೊಟ್ಟೆಯ 700 ಎಕ್ಷ್-ರೇಗಳನ್ನು ತೆಗೆದುಕೊಂಡು ಮನೆಗೆ ಹೋಗಿ, ರಾತ್ರಿಯೆಲ್ಲಾ ಅದನ್ನು ಅಭ್ಯಾಸ ಮಾಡಿ, ಮರುದಿನ ಬೆಳಗ್ಗೆ ನಿಮ್ಮ ಆಪರೇಶನ್ ಮಾಡಲು ಸಿದ್ಧನಾಗುವದನ್ನು ನೀವು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳ ಬಲ್ಲಿರೋ? ‘ಅಂಥಹ ಅವಕಾಶವೇ ಇಲ್ಲ’ ಎಂದು ನೀವನ್ನಬಹುದು. ‘ಅವನು ಅವುಗಳೊಂದಿಗೆ ಹೇಗೆ ವ್ಯವಹರಿಸುವನು?’
ಈ ಸಂಕ್ಲಿಷ್ಟತೆಯ ಕಾರ್ಯವಿಧಾನವನ್ನು, ಒಂದು ತಂಪಾದ ಪಾನೀಯದಲ್ಲಿ ಅನೇಕ ಮಂಜುಗಡ್ಡೆ ತುಂಡುಗಳನ್ನು ಹಾಕಿರುವ ಗ್ಲಾಸಿನ ಮೂಲಕ ಹೊಳಪುಬೆಳಕನ್ನು (ಫ್ಲಾಶ್ಲೈಟ್) ಹಾಕಿದಾಗ ಆಗುವ ಮಿರುಗುವಿಕೆಗೆ ಹೋಲಿಸಬಹುದು. ಗ್ಲಾಸಿನ ಮತ್ತು ಮಂಜುಗಡ್ಡೆಯ ಮೂಲಕ ಪ್ರಕಾಶವು ತೂರಿಕೊಂಡುಹೋಗಿ, ಗ್ಲಾಸಿನ ಹಿಂಬದಿಯಲ್ಲಿರುವ ಪರದೆಯ ಮೇಲೆ ಒಂದು ನಮೂನೆಯನ್ನು ಉಂಟುಮಾಡುತ್ತದೆ. ಈಗ, ಈ ಹೊಳಪು ಬೆಳಕನ್ನು ಮತ್ತು ಗ್ಲಾಸಿನ ಸುತ್ತಲೂ ಪರದೆಯನ್ನು ತಿರುಗಿಸುವದಾದರೆ, ಅದೇ ಸಮಯದಲ್ಲಿ ಬೆಳಕು ಮತ್ತು ಛಾಯೆಯ ನಮೂನೆಯಲ್ಲಿ ಬದಲಾವಣೆಯನ್ನು ಗಮನಿಸುವಿರಿ. ಪ್ರತಿಯೊಂದು ಮಂಜುಗಡ್ಡೆ ತುಂಡಿನ ನಿಖರವಾದ ಆಕಾರವನ್ನು ನೀವು ಗುರುತಿಸಬಲ್ಲಿರೆಂದು ನೀವೇಣಿಸುವಿರೋ?
ಇದೊಂದು ನಿಮಗೆ ಅಸಾಧ್ಯವಾದ ಕೆಲಸವೆಂದು ನಿಮಗೆ ಭಾಸವಾಗಬಹುದು, ಆದರೆ ಕಂಪ್ಯೂಟರ್ಗೆ ಹಾಗಿರುವದಿಲ್ಲ. ಎಕ್ಷ್-ರೇಗಳಿಂದ ಒದಗಿಸಲ್ಪಟ್ಟ ವಿಚಾರಗಳು ಫೋಟೊಗ್ರಾಫಿಕ್ ಪ್ಲೇಟ್ಗಳ ಬದಲಾಗಿ ಎಲೋಕ್ಟ್ರಾನಿಕ್ ಸಂವೇದನ ವಾಹಕಗಳು ಹೀರಿಕೊಳ್ಳುತ್ತವೆ. ನಿಮ್ಮೊಳಗೆ ತೂರಿಹೋದ ಎಕ್ಷ್-ರೇಗಳನ್ನು, ನಿಮ್ಮಿಂದ ಹೊರಬರುವ ಎಕ್ಷ್-ರೇಗಳೊಂದಿಗೆ ಜಾಗ್ರತೆಯಿಂದ ತುಲನೆಮಾಡುವದರಿಂದ, ಎಕ್ಷ್-ರೇಯು ನಿಮ್ಮನ್ನು ತೂರಿಹೋಗುವಾಗ ನಿಮ್ಮೊಳಗೆ ಏನಿದೆ ಎಂಬುದನ್ನು ಕಂಪ್ಯೂಟರ್ ಕಂಡುಹಿಡಿಯಶಕ್ತವಾಗಿದೆ. ಆಕಾರಗಳನ್ನು ಸರಳವಾಗಿ ಗುರುತಿಸುವದರ ಬದಲಾಗಿ, ಕಂಪ್ಯೂಟರ್ ಎಷ್ಟೊಂದು ಬಲಶಾಲೀಯಾಗಿದೆಯೆಂದರೆ ಸಾಮಾನ್ಯ ಮತ್ತು ಹೆಪ್ಪುಗಟ್ಟಿದ ರಕ್ತದ ಭಿನ್ನತೆಯನ್ನು ಯಾ ಮಿದುಳಿನ ಅಂಗಾಂಶಗಳ ಮತ್ತು ದ್ರವದ ನಡುವಿನ ಭಿನ್ನತೆಯನ್ನು ಕೂಡ ತೋರಿಸಬಲ್ಲದು. ವಾಸ್ತವದಲ್ಲಿ, ಸಾಮಾನ್ಯ ಎಕ್ಷ್-ರೇಗಳು ಸರಳವಾಗಿ ಗಮನಿಸದಿರುವ ಅಂಗಾಂಶಗಳ ಸಾಂದ್ರತೆಯಲ್ಲಿನ ವ್ಯತ್ಯಾಸವನ್ನು ಕೂಡ ಗಮನಿಸಬಲ್ಲದು.
ಇದು ನಿಮಗೆ ಹೇಗೆ ಪ್ರಯೋಜನದಾಯಕವಾಗಿರುತ್ತದೆ?
ಕ್ಯಾಟ್ ಸ್ಕಾನ್ ಒದಗಿಸುವ ಈ ಹೆಚ್ಚಿನ ವಿವರಣೆಯು ವೈದ್ಯರಲ್ಲಿ ಅದನ್ನು ಜನಪ್ರಿಯವನ್ನಾಗಿ ಮಾಡಿದೆ. ಒಂದು ಕ್ಯಾಟ್ ಸ್ಕಾನ್ ಒಂದು ಚಿಕ್ಕದಾದ ಅಂಗಾಂಶದ ದುರ್ಮಾಂಸವನ್ನು ಕಂಡುಹಿಡಿಯಬಲ್ಲದು, ಇದು ಸಾಮಾನ್ಯವಾದ ಎಕ್ಷ್-ರೇಗಳಲ್ಲಿ ತೋರಿಬರಲಿಕ್ಕಿಲ್ಲ—ಮತ್ತು ಇದು ಈ ಕಾರ್ಯ ವಿಧಾನದಲ್ಲಿ ಜೀವವೊಂದನ್ನು ಉಳಿಸಬಲ್ಲದು. ಕ್ಯಾಟ್ ಸ್ಕಾನ್ಸ್ ರೋಗಿಗಳೊಂದಿಗೂ ಜನಪ್ರಿಯಗೊಂಡಿವೆ, ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಯುವದರ ಬದಲು, ಎಲೋಕ್ಟ್ರಾನಿಕ್ ಮೂಲಕ “ತೆಳು ಹೋಳನ್ನು” ತೆಗೆಯಲು ಬಯಸಬಹುದು. ಏನೆಂದು ಕಂಡು ಹಿಡಿಯಲು ಮಾಡುವ ಗಂಡಾಂತರದ ಶಸ್ತ್ರಚಿಕಿತ್ಸೆಯ, ಅದರೊಂದಿಗೆ ಸೇರಿರುವ ಅಹಿತಕರ ಮತ್ತು ಸಂಕ್ಲಿಷ್ಟತೆಗಳೊಂದಿಗೆ, ಬಹಳಷ್ಟು ಸಂಗತಿಗಳನ್ನು ಅವರು ಇಲ್ಲದಂತೆ ಮಾಡಬಹುದು. ಆದಕಾರಣ, ಅಂಥಹ ಶಸ್ತ್ರ ಚಿಕಿತ್ಸೆಯನ್ನು ಹೋಗಲಾಡಿಸಲು ಹುಡುಕುವವರು, ಅದರ ಬದಲಿಗೆ ಕ್ಯಾಟ್ ಸ್ಕಾನ್ ಆ ಕೆಲಸವನ್ನು ಮಾಡಬಹುದೋ ಎಂದು ಅವರ ವೈದ್ಯರನ್ನು ಕೇಳಬಹುದಾಗಿದೆ.
ಒಂದು ವೇಳೆ ಶಸ್ತ್ರ ಚಿಕಿತ್ಸೆಯನ್ನು ಹೋಗಲಾಡಿಸಲು ಆಗದಿದ್ದರೆ, ಕ್ಯಾಟ್ ಸ್ಕಾನ್ ಸಹಾಯ ನೀಡಬಹುದು. ಒಂದು ವಿಶ್ವವಿದ್ಯಾನಿಲಯದ ವೈದ್ಯಕೀಯ ಶಾಲೆಯ ರೆಡಿಯಾಲಜಿ ಖಾತೆಯ ಅಧ್ಯಕ್ಷನು ಮತ್ತು ಪ್ರಾಚಾರ್ಯನು ಸೂಚಿಸಿದ್ದೇನಂದರೆ, ಕ್ಯಾಟ್ ಸ್ಕಾನರ್ಗಳು ಆಪ್ರೇಶನ್ಗಳನ್ನು ನೇರವಾಗಿ ಮಾಡಲು ಸಾಧ್ಯವಾಗುವಂತೆ, ಶಸ್ತ್ರ ಚಿಕಿತ್ಸಕರಿಗೆ ನಿಮ್ಮೊಳಗೆ ಏನಿದೆ ಎನ್ನುವದರ ವಿವರವಾದ ಸಮಾಚಾರಗಳನ್ನು ಒದಗಿಸಬಲ್ಲವು. “ಸ್ಕಾನರ್ ಒಂದು ತಟ್ಟೆಯಲ್ಲಿಟ್ಟು ಕೊಡುತ್ತದೆ,” ಅಂದನು ಅವನು, ಇದು ವೈದ್ಯರಿಗೂ, ರೋಗಿಗಳಿಗೂ ಬಹಳ ಪ್ರಯೋಜನಕರವಾಗಿರುವದು.
ಆದಾಗ್ಯೂ, ಕ್ಯಾಟ್ ಸ್ಕಾನರ್ಗಳಿಗೆ ಅವುಗಳದ್ದೇ ಕೆಲವು ಮಿತಿಗಳಿವೆ. ಕ್ಯಾಟ್ ಕ್ರಮಲೋಕನವು (ಸ್ಕಾನ್) ಅನೇಕ ಸಮಸ್ಯೆಗಳನ್ನು ಕಂಡುಕೊಳ್ಳಬಹುದಾದರೂ, ಕೆಲವು ಆರಂಭದ ಗುಣಪಡಿಸಬಹುದಾದ ಹಂತದಲ್ಲಿ, ಅವು ಯಾವುದನ್ನೂ ಗುಣಪಡಿಸಶಕ್ತವಾಗಿರುವದಿಲ್ಲ. ಅವುಗಳು ಅನೇಕ ಅಹಿತಕರ ಮತ್ತು ಕೆಲವೊಮ್ಮೆ ಅಪಾಯಕರ, ಅನ್ವೇಷಕ ಕಾರ್ಯವಿಧಾನಗಳನ್ನು ಬದಲೀಯಾಗಿ ಕೊಡಬಲ್ಲವಾದರೂ, ಶಸ್ತ್ರ ಚಿಕಿತ್ಸೆಗೆ ಇನ್ನೊಂದು ಚಿಕಿತ್ಸೆಯಾಗಿ ಅವುಗಳು ಇರಸಾಧ್ಯವಿಲ್ಲ. ನಿಮಗೆ ಪ್ರತಿ ಸಾರಿ ತಲೆಬೇನೆ ಇರುವಾಗ, ನಿಮ್ಮ ವೈದ್ಯರ ಹತ್ತಿರ ಹೋಗಿ, ನಿಮಗೊಂದು ಕ್ಯಾಟ್ ಸ್ಕಾನ್ ಬೇಕೆಂದು ತಗಾದೆ ಮಾಡಲು ಹೋಗಕೂಡದು. ನೆನಪಿನಲ್ಲಿಡಿರಿ, ಎಲ್ಲಾ ಎಕ್ಷ್-ರೇಗಳು ಅತಿ ಕೊಂಚ ಮಟ್ಟದ, ಆದರೆ ಎಣಿಸಲಾಗುವಂತಹ ಆರೋಗ್ಯದ ಗಂಡಾಂತರವುಳ್ಳವುಗಳಾಗಿವೆ ಮತ್ತು ಒಂದು ಸಕಾರಣವಿಲ್ಲದೇ, ಅವುಗಳನ್ನು ತೆಗೆಯಕೂಡದು. ಇನ್ನೊಂದು ಪಕ್ಕದಲ್ಲಿ, ನಿಮ್ಮ ವೈದ್ಯರು ಕ್ಯಾಟ್ ಸ್ಕಾನ್ನ್ನು ಶಿಫಾರಸು ಮಾಡುವದಾದರೆ, ನಿಮ್ಮ ಸೇವೆ ಮಾಡಲು ಈ ಬೆರಗುಗೊಳಿಸುವ ತಾಂತ್ರಿಕತೆಯು ದೊರಕುವದಕ್ಕಾಗಿ ಆನಂದಿಸಿರಿ. (g90 7/22)
[ಪುಟ 26 ರಲ್ಲಿರುವಚಿತ್ರ]
ಕ್ಯಾಟ್ ಸ್ಕಾನರ್ನ್ನು ಪ್ರವೇಶಿಸುವದು
[ಕೃಪೆ]
Camerique/H. Armstrong Roberts