ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 10/8 ಪು. 15-17
  • ಚಿರತೆ—ಬೆಕ್ಕುಗಳಲ್ಲಿ ಅತಿ ವೇಗಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಚಿರತೆ—ಬೆಕ್ಕುಗಳಲ್ಲಿ ಅತಿ ವೇಗಿ
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವೇಗದ ಬೆಕ್ಕು
  • ಮಚ್ಚೆಗಳುಳ್ಳ ಸುಂದರರೂಪ
  • ತಾಯಿ ಬೆಕ್ಕಿನಿಂದ ಆರೈಕೆ
  • ಬೇಟೆಗಾರ ಬೇಟೆಯಾಗುವುದು
  • ವೇಗದಲ್ಲಿ ಕುಲೀನ
    ಎಚ್ಚರ!—1996
  • ಪ್ರಾಣಿಪ್ರಪಂಚದಲ್ಲಿ ಪಾಲನೆಪೋಷಣೆ
    ಎಚ್ಚರ!—2005
  • ಸಿಂಹ—ಆಫ್ರಿಕದ ರಾಜಗಾಂಭೀರ್ಯವುಳ್ಳ ಕೇಸರಯುತ ಮಾರ್ಜಾಲ
    ಎಚ್ಚರ!—1999
  • ಮನುಷ್ಯನೂ ಮೃಗವೂ ಶಾಂತಿಯಿಂದ ಜೀವಿಸಬಲ್ಲರೆ?
    ಎಚ್ಚರ!—1992
ಇನ್ನಷ್ಟು
ಎಚ್ಚರ!—1997
g97 10/8 ಪು. 15-17

ಚಿರತೆ—ಬೆಕ್ಕುಗಳಲ್ಲಿ ಅತಿ ವೇಗಿ

ಕೆನ್ಯದ ಎಚ್ಚರ! ಸುದ್ದಿಗಾರರಿಂದ

ಬಿಸಿಲಿನಿಂದ ಬೆಂದಿದ್ದ ಹುಲ್ಲುಗಾಡಿನಲ್ಲಿ ಕಾವು ಚಲಿಸದೆ ತೂಗುತ್ತಿತ್ತು. ನಮ್ಮ ದುರ್ಬೀನುಗಳು ಥಾಮ್ಸನ್ಸ್‌ ಜಿಂಕೆ (ಗಸೆಲ್‌)ಗಳ ಒಂದು ಹಿಂಡಿನ ಮೇಲೆ ಕೇಂದ್ರೀಕರಿಸಲ್ಪಟ್ಟಿದ್ದವು. ಸೂರ್ಯಾಸ್ತದ ಬೆಳಕಿನ ಕೊನೆಯ ಕಿರಣಗಳಿಂದಾಗಿ ಸುವರ್ಣ ಪಟ್ಟೆಗಳಿದ್ದ ಅವುಗಳ ಪಾರ್ಶ್ವಗಳು ಬೆಳಗುತ್ತಿದ್ದವು. ತುಸು ದೂರದಲ್ಲಿ, ಒಂದು ಗೆದ್ದಲು ಹುತ್ತದ ಮೇಲೆ ಕುಳಿತಿರುತ್ತ, ಇನ್ನೊಂದು ಪ್ರೇಕ್ಷಕ ಮೃಗವೂ ಆ ಜಿಂಕೆಗಳನ್ನು ಎವೆಯಿಕ್ಕದೆ ನೋಡುತ್ತಿತ್ತು. ಅದು ಮರಿಗಳೊಂದಿಗೆ ಇದ್ದ ಒಂದು ಚುಕ್ಕೆ ಮಚ್ಚೆಗಳ ಬೆಕ್ಕಾಗಿತ್ತು. ಅದರ ಹಳದಿ-ಕಿತ್ತಳೆ ಬಣ್ಣದ ಕಣ್ಣುಗಳು ಆ ದೃಶ್ಯವನ್ನು ಆಸಕ್ತಿಯಿಂದ ಪರೀಕ್ಷಿಸಿದವು. ಥಟ್ಟನೆ, ಬಿಗಿದ ಸ್ನಾಯುಗಳುಳ್ಳದ್ದಾಗಿ, ಅದು ಮೆಲ್ಲನೆ ಎದ್ದು, ಆ ಹಿಂಡಿನ ಕಡೆ ಚಲಿಸಿತು. ಅದು ಹಿಂದಿರುಗಿ ಬರುವ ತನಕ ತಾವು ಕಾಯಬೇಕೆಂದು ಮರಿಗಳಿಗೆ ಗೊತ್ತಿದ್ದ ಹಾಗಿತ್ತು.

ಸಾವಧಾನವಾಗಿ, ತನ್ನನ್ನು ಚಿಕ್ಕ ಪೊದೆಗಳ ಮತ್ತು ಎತ್ತರದ ಹುಲ್ಲಿನ ಕುಚ್ಚುಗಳ ಹಿಂದೆ ಅಡಗಿಸಿಕೊಳ್ಳುತ್ತ, ಅದು ಮುಂದೆ ಸರಿಯಿತು. ಅದರ ಚಲನೆ ನಿರಾತಂಕ ಮತ್ತು ನಿಶ್ಚಿತವಾಗಿತ್ತು. ತನ್ನ ಬೇಟೆಯ 200 ಮೀಟರುಗಳಷ್ಟು ಅಂತರಕ್ಕೆ ಬಂದಾಗ, ಅದು ಥಟ್ಟನೆ ಸ್ತಬ್ಧವಾಗಿ ನಿಂತಿತು. ಜಿಂಕೆಗಳಲ್ಲೊಂದು ತನ್ನ ತಲೆ ಮೇಲೆತ್ತಿ ಅದರ ಕಡೆ ನೋಡುತ್ತಿತ್ತು; ಬಳಿಕ ಅದು ಪುನಃ ಮೇಯಲಾರಂಭಿಸಿತು. ಇನ್ನೊಮ್ಮೆ, ಅದು ತನ್ನ ಸಮೀಪಿಸುವಿಕೆಯನ್ನು ಮುಂದುವರಿಸಿತು. ಅದು ಸಂದೇಹಿಸದಿದ್ದ ಆ ಪ್ರಾಣಿಗಳ 50 ಮೀಟರುಗಳಷ್ಟು ಹತ್ತಿರ ಬಂದು, ಆ ಬಳಿಕ ಓಡಲು ನಿರ್ಣಯಿಸಿತು. ಸುರುಳಿ ಸುತ್ತಿದ್ದ ಸ್ಪ್ರಿಂಗನ್ನು ಕಳಚಿ ಬಿಟ್ಟಂತೆ, ಅದು ಮಸುಕಾಗುತ್ತಿದ್ದ ಬೆಳಕಿನೊಳಗೆ ಸಿಡಿಯಿತು. ಜಿಂಕೆಗಳ ಹಿಂಡು ಎಲ್ಲ ದಿಕ್ಕುಗಳಿಗೆ ಚಲ್ಲಾಪಿಲ್ಲಿಯಾಗಿ ಮುನ್ನುಗ್ಗಿತು. ಆದರೆ ಆ ಬೆಕ್ಕು ತಾನು ಆರಿಸಿದ್ದ ಬೇಟೆಯಿಂದ ತನ್ನ ದೃಷ್ಟಿಯನ್ನು ತೆಗೆಯಲಿಲ್ಲ. ಅದು ಜೋರಾಗಿ ಓಡಿ, ಆ ಚುರುಕು ಕಾಲಿನ ಜಿಂಕೆಯ ಹತ್ತಿರಕ್ಕೆ ಬಂತು.

ಬೆದರಿಹೋಗಿದ್ದ ಆ ಪ್ರಾಣಿ ತನ್ನನ್ನು ಬೆನ್ನಟ್ಟುವ ಮೃಗದಿಂದ ತಪ್ಪಿಸಿಕೊಳ್ಳಲು ಅಡ್ಡಾದಿಡ್ಡಿಯಾಗಿ ಓಡತೊಡಗಿತು. ಆದರೆ ಅದರ ತಪ್ಪಿಸಿಕೊಳ್ಳುವ ತಂತ್ರಗಳು ಆ ಬೆಕ್ಕಿನ ಮಿಂಚಿನಂತಹ ಚಳಕಕ್ಕೆ ಸರಿಸಮನಾಗಿರಲಿಲ್ಲ. ಆಮೇಲೆ, ಅದರ ಇನಾಮಿಗೆ ಸುಮಾರು ಒಂದು ಮೀಟರ್‌ ದೂರದಲ್ಲಿದ್ದಾಗ ಅದು ತನ್ನ ಪಂಜಾದಿಂದ ತನ್ನ ಉದ್ದಿಷ್ಟ ಬಲಿಪಶುವನ್ನು ಮುಗ್ಗರಿಸಲು ಪ್ರಯತ್ನಿಸಿತು. ಆದರೆ ಆ ಕ್ಷಣದಲ್ಲಿ, ಅದೇ ತುಸು ಎಡವಿತು. ತತ್‌ಕ್ಷಣ, ಆ ಜಿಂಕೆ ಅದರಿಂದ ಪಾರಾಗಿ ಅದೃಶ್ಯವಾಯಿತು.

ಏದುಸಿರು ಬಿಡುತ್ತ, ಆ ಚಿರತೆ (ಚೀಟ) ಓಡುವುದನ್ನು ನಿಲ್ಲಿಸಿ, ಕುಳಿತುಕೊಂಡು, ತನ್ನ ಹಸಿದಿದ್ದ ಮರಿಗಳ ದಿಕ್ಕಿಗೆ ನೋಡಿತು. ನಾನು ಅಚ್ಚರಿಯಿಂದ ನನ್ನ ಪತ್ನಿಯ ಕಡೆಗೆ ನೋಡಿದೆ. ನಾವು ಬೆರಗುಗೊಳಿಸುವ ಚಿರತೆಯ ಬಲಾಢ್ಯವಾದ ವೇಗಕ್ಕೆ ಆಗ ತಾನೆ ಸಾಕ್ಷಿಗಳಾಗಿದ್ದೆವು.

ವೇಗದ ಬೆಕ್ಕು

ಚಿರತೆಯು ನಿಜವಾಗಿಯೂ ಗಾಳಿಯಂತೆ ಓಡಬಲ್ಲದು. ನಂಬಲಶಕ್ಯವಾಗಿ, ಅದು ಪೂರ್ತಿ ನಿಂತಿರುವಲ್ಲಿಂದ ಕೇವಲ ಎರಡು ಸೆಕೆಂಡುಗಳಲ್ಲಿ 65 ಕಿಲೊಮೀಟರ್‌ಗಳಷ್ಟು ವೇಗವೃದ್ಧಿಯನ್ನು ಮಾಡಬಲ್ಲದು! ಇದು ಒಂದು ತಾಸಿಗೆ 110 ಕಿಲೊಮೀಟರುಗಳಷ್ಟು ವೇಗವನ್ನು ಸಾಧಿಸಬಲ್ಲದು! ಇದು ಭೂಮಿಯ ಮೇಲಿರುವ ಅತಿ ವೇಗಿಯಾದ ಪ್ರಾಣಿ. ಹೋಲಿಕೆಯಾಗಿ, ಒಂದು ರೇಸ್‌ ಕುದುರೆ ಒಂದು ತಾಸಿಗೆ 72 ಕಿಲೊಮೀಟರುಗಳಿಗಿಂತ ತುಸು ಜಾಸ್ತಿ ವೇಗವನ್ನು ತಲಪಬಲ್ಲದು ಮತ್ತು ಗ್ರೇಹೌಂಡ್‌ ಬೇಟೆನಾಯಿ ಒಂದು ತಾಸಿಗೆ ಸುಮಾರು 65 ಕಿಲೊಮೀಟರ್‌ಗಳಷ್ಟು ಓಡಬಲ್ಲದು. ಆದರೆ ಒಮ್ಮೆ ಚಿರತೆಯು, ಈ ಆಶ್ಚರ್ಯಕರವಾದ ವೇಗವನ್ನು, ಕೇವಲ ಸ್ವಲ್ಪ ದೂರದ ತನಕ ಮಾತ್ರ ಇಟ್ಟುಕೊಳ್ಳಬಲ್ಲದು.

ಚಿರತೆಯ ಮೈಕಟ್ಟು ಸಣಕಲಾಗಿದೆ. ಅದಕ್ಕೆ ಉದ್ದವಾದ, ತೆಳ್ಳನೆಯ ಕಾಲುಗಳೂ, ನಮ್ಯವಾದ, ಬಗ್ಗಿರುವ ಬೆನ್ನೂ ಇದೆ. ಚಿರತೆಯು ಉಚ್ಚ ವೇಗದಲ್ಲಿ ವಾಲಿ, ತಿರುಗುವಾಗ ಅದರ ಚುಕ್ಕೆಗಳುಳ್ಳ ಉದ್ದ ಬಾಲವು ಸಮತೂಕವನ್ನು ಒದಗಿಸುತ್ತದೆ. ಅತ್ಯುಚ್ಚ ವೇಗದಲ್ಲಿ ಓಡುವಾಗ ಅದು ಹೆಜ್ಜೆಗೆ ಆರು ಮೀಟರುಗಳಿಗೂ ಮೀರಿ ಹಾರಬಲ್ಲದು. ಇಂತಹ ವೇಗಕ್ಕಿರುವ ಒಂದು ಸಹಾಯವು, ಅದರ ಅದ್ವಿತೀಯ ಪಾದಗಳೇ. ಅವು ಬೆಕ್ಕಿನದ್ದಕ್ಕಿಂತ ಹೆಚ್ಚಾಗಿ ನಾಯಿಯ ಪಾದಗಳಂತಿವೆ. ಹೆಚ್ಚಿನ ಕರ್ಷಣಕ್ಕಾಗಿ ಜಮೀನನ್ನು ಬಿಗಿಯಾಗಿ ಹಿಡಿದುಕೊಳ್ಳಲಿಕ್ಕಾಗಿ ಇದು ತನ್ನ ಮೊನೆಯುಗುರುಗಳನ್ನು ಉಪಯೋಗಿಸುತ್ತದೆ.

ಮಚ್ಚೆಗಳುಳ್ಳ ಸುಂದರರೂಪ

ಚಿರತೆಯ ಮುಖ ಸ್ಪಷ್ಟವಾಗಿ ಅದ್ವಿತೀಯವೂ ಸುಂದರವೂ ಆಗಿದೆ. ಎರಡು ನಸು ಕರಿರೇಖೆಗಳು ಕಣ್ಣುಗಳಿಂದ ಬಾಯಿಯ ಅಂಚುಗಳಿಗೆ ಇಳಿದು ಬರುತ್ತವೆ. ಇದು ಆ ಬೆಕ್ಕಿಗೆ ದುಃಖಿತ ಹಾಗೂ ಬಹುಮಟ್ಟಿಗೆ ಹತಾಶೆಯ ತೋರಿಕೆಯನ್ನು ಕೊಡುತ್ತದೆ. ಚಿಕ್ಕ, ದಟ್ಟವಾದ ಮಚ್ಚೆಗಳಿಂದ ಗುರುತಿಸಲ್ಪಟ್ಟಿರುವ ಅದರ ತುಪ್ಪುಳು ಗಿಡ್ಡವಾಗಿದ್ದು, ಅನೇಕ ವೇಳೆ ಶರೀರದ ಮೇಲೆ ಕೆಂಪು-ಕಂದು ಬಣ್ಣದ್ದಾಗಿದ್ದರೂ, ಹೊಟ್ಟೆ ಭಾಗದಲ್ಲಿ ಬಿಳಿ ಬಣ್ಣದ್ದಾಗಿದೆ. ಮರಿಗಳು ಹುಟ್ಟುವಾಗ ಹೆಚ್ಚು ಕಡುಛಾಯೆಯವುಗಳಾಗಿದ್ದು, ಕುತ್ತಿಗೆಯಿಂದ ಅವುಗಳ ಬಾಲಗಳ ವರೆಗೆ ಇಳಿದು ಹೋಗುವ ಉದ್ದವಾದ ನೀಲ-ಬೂದು ಕೂದಲಿನ ದಪ್ಪ ಕೇಸರವುಳ್ಳದ್ದಾಗಿವೆ.

ಚಿರತೆಯು ಚಿರುಗುಟ್ಟುವ ಧ್ವನಿಯಿಂದ ಅಥವಾ ಹಕ್ಕಿಯಂತೆ ಕೀಚುಧ್ವನಿಯಿಂದ ಕೂಗುತ್ತದೆ. ಈ ಧ್ವನಿ ಎರಡು ಕಿಲೊಮೀಟರುಗಳಷ್ಟು ದೂರ ಕೇಳಿಸುತ್ತದೆ ಮತ್ತು ಅದು ಈ ಧ್ವನಿಯನ್ನು ಮರಿಗಳು ಅಥವಾ ಬೇರೆ ಚಿರತೆಗಳನ್ನು ಸಂಪರ್ಕಿಸಲಿಕ್ಕಾಗಿ ಉಪಯೋಗಿಸುತ್ತದೆ.

ಜೊತೆಬೆಕ್ಕುಗಳಾದ ಸಿಂಹ ಮತ್ತು ಲೆಪರ್ಡ್‌ ಚಿರತೆಗೆ ಹೋಲಿಸುವಾಗ, ಈ ಚಿರತೆಯು ಸೌಮ್ಯ ಮತ್ತು ಶಾಂತಿಶೀಲ ಪ್ರಕೃತಿಯುಳ್ಳದ್ದಾಗಿದೆ. ತೃಪ್ತಿಗೊಂಡಾಗ, ಅದು ಬೃಹದಾಕಾರದ ಸಾಕುಬೆಕ್ಕಿನಂತೆ ಪರ್‌ಗುಟ್ಟುತ್ತದೆ. ಅದು ಮನುಷ್ಯನ ಸಮಕ್ಷಮಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ ಮತ್ತು, ಅದು ಪಳಗಿಸಲ್ಪಟ್ಟದ್ದೂ ಉಂಟು. ಚಿರತೆಯು ಸಾಕುಬೆಕ್ಕಲ್ಲವೆಂಬುದು ನಿಶ್ಚಯ. ಪೂರ್ತಿ ಬೆಳೆದಿರುವ ಚಿರತೆ 45 ಕಿಲೊಗ್ರಾಮ್‌ ಅಥವಾ ಹೆಚ್ಚು ಭಾರವುಳ್ಳದ್ದಾಗಿರುತ್ತದೆ. ಮತ್ತು ಅದರ ಹರಿತವಾದ ಹಲ್ಲುಗಳು ಮತ್ತು ಮೊನೆಯುಗುರುಗಳು ಅದನ್ನು ಅಪಾಯಕಾರಿಯಾದ, ಜಾಗರೂಕತೆಯಿಂದ ನೋಡಿಕೊಳ್ಳಬೇಕಾದ ಮೃಗವನ್ನಾಗಿ ಮಾಡುತ್ತದೆ.

ಚಿರತೆಯು ಬೇಟೆಯಾಡುವ ಸಾಮರ್ಥ್ಯವುಳ್ಳದ್ದಾಗಿ ಹುಟ್ಟುವುದಿಲ್ಲ; ಹಾಗೆ ಮಾಡಲು ತಾಯಿ ಅದನ್ನು ವ್ಯಾಪಕವಾಗಿ ತರಬೇತುಗೊಳಿಸಬೇಕು. ಮರಿಯು ಬಂದಿಯಾಗಿ ಬೆಳೆಸಲ್ಪಡುವುದಾದರೆ, ತನ್ನ ಬೇಟೆಯನ್ನು ಸುಳಿವು ಕೊಡದೆ ಬೆನ್ನಟ್ಟಿ ಹಿಡಿಯುವ ಸಾಮರ್ಥ್ಯವು ಅದಕ್ಕೆ ಇಲ್ಲದೆಹೋಗುವುದು. ತಾಯಿ ತನ್ನ ಮರಿಗಳೊಂದಿಗೆ ಸೇರಿ ತಿನ್ನುವಾಗ, ಅವು ಶಾಂತಿಶೀಲ ಪ್ರವೃತ್ತಿಯಿಂದ, ಕೂಡಿ ತಿನ್ನುತ್ತಿರುವ ಸಿಂಹಗಳ ಮಧ್ಯೆ ಸಾಮಾನ್ಯವಾಗಿರುವ, ಕಚ್ಚಾಟ, ಜಗಳಾಟಗಳಿಲ್ಲದೆ ತಿನ್ನುತ್ತವೆ. ಒಣ ಕ್ಷೇತ್ರಗಳಲ್ಲಿ, ಚಿರತೆಗಳು ರಸವತ್ತಾದ ಕಲ್ಲಂಗಡಿ ಹಣ್ಣುಗಳನ್ನು ತಿನ್ನುವುದಾಗಿ ಸಹ ತಿಳಿದುಬಂದಿದೆ.

ಆಫ್ರಿಕದ ವನ್ಯಮೃಗಾಶ್ರಯ ಸ್ಥಾನಗಳ ಪ್ರವಾಸಿಗರು, ಈ ಶಾಂತಿಶೀಲ ಬೆಕ್ಕುಗಳು ಎಷ್ಟು ನಿರ್ಭೀತ ಪ್ರಾಣಿಗಳಾಗಿರುತ್ತವೆ ಎಂಬುದನ್ನು ನೋಡಿ ಬೆರಗುಗೊಂಡಿದ್ದಾರೆ. ಬೆಳೆದಿರುವ ಒಂದು ಚಿರತೆಯು ಪ್ರವಾಸಿ ವಾಹನದ ನೆರಳನ್ನು ಬಯಸುವುದು ಅಥವಾ ಕಾರಿನ ಬಾನೆಟ್‌ನ ಮೇಲೆ ಹಾರಿ, ಗಾಜಿನ ತಡೆಯ ಮೂಲಕ ಅಚ್ಚರಿಗೊಂಡ ಮತ್ತು ಅನೇಕ ವೇಳೆ, ತೀರ ಬೆದರಿದ ಪ್ರಯಾಣಿಕರನ್ನು ನೋಡುವುದು ಅಸಾಮಾನ್ಯವಾಗಿರುವುದಿಲ್ಲ.

ತಾಯಿ ಬೆಕ್ಕಿನಿಂದ ಆರೈಕೆ

ಹೆಣ್ಣು ಚಿರತೆ ಒಂದು ಸೂಳಿಗೆ ಆರರಷ್ಟು ಚಿಕ್ಕ ಮರಿಗಳನ್ನು ಹೆರಬಹುದು. ಅದು ಧೈರ್ಯದಿಂದ ಅವನ್ನು ಸಂರಕ್ಷಿಸುತ್ತದೆ. ಅವನ್ನು ಉತ್ತಮ ರೀತಿಯಲ್ಲಿ ಅಡಗಿಸಿಟ್ಟು, ಅವುಗಳ ಜೀವನದ ಮೊದಲ ಕೆಲವು ತಿಂಗಳುಗಳಲ್ಲಿ ಅವುಗಳ ಸ್ಥಳವನ್ನು ಅನೇಕ ಸಲ ಬದಲಾಯಿಸುತ್ತದೆ. ಆದರೆ ತಮ್ಮ ಮರಿಗಳನ್ನು ಕಾಪಾಡಲು ತಾಯಿ ಚಿರತೆಗಳು ಮಾಡುವ ಪ್ರಯತ್ನದ ಎದುರಿನಲ್ಲಿಯೂ, ಮರಿಗಳಲ್ಲಿ ಮೂರನೆಯ ಒಂದಂಶ ಮಾತ್ರ ಪ್ರಾಪ್ತವಯಸ್ಕತೆಗೆ ಬದುಕಿ ಉಳಿಯುತ್ತವೆಂದು ಕಾಣುತ್ತದೆ.

ಚಿರತೆ ಮರಿಗಳ ಒಂದು ಕುಟುಂಬವನ್ನು ಪರಾಮರಿಸುವುದು ಅಮ್ಮ ಚಿರತೆಗೆ ಸುಲಭದ ಕೆಲಸವಲ್ಲ. ಅವು ತುಂಬ ಶಕ್ತಿಯುಳ್ಳವುಗಳಾಗಿದ್ದು, ವಿಪರೀತ ಕ್ರೀಡಾಸಕ್ತವಾಗಿರುತ್ತವೆ. ಮರಿಗಳು ಅನೇಕ ವೇಳೆ, ವಿಶ್ರಮಿಸುತ್ತಿರುವ ತಾಯಿಯ ಬಾಲವನ್ನು ಹೊಂಚುಹಾಕಿ, ತಾಯಿ ಅದನ್ನು, ಪ್ರಾತಿನಿಧಿಕ ಬೆಕ್ಕಿನ ಶೈಲಿಯಲ್ಲಿ ಮಿಡಿಸುವಾಗ, ಅದರ ಮೇಲೆ ಹಾರುತ್ತವೆ. ಹೋರಾಡುವುದು, ಕಚ್ಚುವುದು, ಒಂದನ್ನೊಂದು ಓಡಿಸಿಕೊಂಡುಹೋಗುವುದು—ಇವನ್ನು ಮಾಡುತ್ತಿರುವ ಮರಿಗಳು ಸದಾ ಇರುವ, ಕೊಂದು ತಿನ್ನುವ ಪ್ರಾಣಿಗಳಿಂದ ಬರುವ ಅಪಾಯದ ಕುರಿತು ಅನೇಕ ವೇಳೆ ಮರೆತಿರುತ್ತವೆ.

ಬೇಟೆಗಾರ ಬೇಟೆಯಾಗುವುದು

ಚಿರತೆಗೆ ಕಾಡಿನಲ್ಲಿ, ಸಿಂಹಗಳು, ಲೆಪರ್ಡ್‌ ಚಿರತೆಗಳು ಮತ್ತು ಕತ್ತೆಕಿರುಬಗಳು ಸೇರಿ ಅನೇಕ ವೈರಿಗಳಿವೆ. ಆದರೂ ಚಿರತೆಯ ಅತಿ ದುಷ್ಟ ವೈರಿ ಮನುಷ್ಯನೇ. ಅದರ ಸುಂದರವಾದ ಮಚ್ಚೆಯಿರುವ ತುಪ್ಪುಳು, ಉಡುಪು, ಹಾಸುಗಂಬಳಿ ಮತ್ತು ಸ್ಮಾರಕಾಲಂಕಾರಗಳು ಹೆಚ್ಚು ಬೆಲೆಯುಳ್ಳವುಗಳಾಗಿ ಪರಿಗಣಿಸಲ್ಪಡುತ್ತದೆ. ಈ ಚುರುಕು ಪಾದಗಳ ಪ್ರಾಣಿಯನ್ನು ಬೋನಿನಲ್ಲಿ ಹಿಡಿದು, ಕ್ರೀಡಾಬೇಟೆಗಾಗಿ ತರಬೇತುಗೊಳಿಸಲಾಗುತ್ತಿದೆ. ಅದು ಸೆರೆಯಲ್ಲಿ ಸಂತಾನವೃದ್ಧಿಮಾಡಲು ನಿರಾಕರಿಸುವುದರಿಂದ, ಜನರ ಈ ಬೇಡಿಕೆಯನ್ನು ಒದಗಿಸಲು ಚಿರತೆಯನ್ನು ಅದಿರುವ ಪ್ರದೇಶದ ಕಟ್ಟಕಡೆಯ ವರೆಗೆ ಬೆನ್ನಟ್ಟಲಾಗುತ್ತದೆ. ಅದರ ಇರುನೆಲೆಯ ನಷ್ಟವೂ ಚಿರತೆಯ ಮೇಲೆ ಎಷ್ಟು ಒತ್ತಡವನ್ನು ತಂದಿದೆಯೆಂದರೆ, ಪೂರ್ವ ಆಫ್ರಿಕದಲ್ಲಿ ಅದೀಗ ಮುಖ್ಯವಾಗಿ ಮೃಗಾಶ್ರಯ ವನಗಳಲ್ಲಿ ಮಾತ್ರ ಕಂಡುಬರುತ್ತದೆ.

1900ರಲ್ಲಿ 44 ದೇಶಗಳಲ್ಲಿ 1,00,000 ಚಿರತೆಗಳಿದ್ದವೆಂದು ಅಂದಾಜಿಸಲಾಗಿತ್ತು. ಆದರೆ ಇಂದು 26 ದೇಶಗಳಲ್ಲಿ—ಅಧಿಕಾಂಶ ಆಫ್ರಿಕದಲ್ಲಿ—ಪ್ರಾಯಶಃ ಕೇವಲ 12,000 ಚಿರತೆಗಳು ಇವೆ. ಈ ಸೊಗಸಾದ ಮಚ್ಚೆಯಿರುವ ಬೆಕ್ಕನ್ನು ಸಂರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆಯಾದರೂ ಅದರ ಸಂಖ್ಯೆ ಕಡಮೆಯಾಗುತ್ತ ಮುಂದುವರಿಯುತ್ತದೆ.

ನಿರ್ನಾಮವಾಗುವುದರಿಂದ ಚಿರತೆಯನ್ನು ರಕ್ಷಿಸಲಾಗಲಿಕ್ಕಿಲ್ಲವೆಂದು ಕೆಲವರು ಭಾವಿಸುತ್ತಾರೆ. ಆದರೂ, ಮನುಷ್ಯನು, “ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ”ನ್ನು ಪರಾಮರಿಸಿ, ಸಂರಕ್ಷಿಸಿ, “ದೊರೆತನ” ಮಾಡುವ ತನ್ನ ದೇವದತ್ತ ಜವಾಬ್ದಾರಿಯನ್ನು ಪೂರ್ತಿಯಾಗಿ ಅಂಗೀಕರಿಸುವ ಸಮಯವು ಬರುತ್ತದೆಂದು ತಿಳಿಯುವುದು ಪುನರಾಶ್ವಾಸನೀಯವಾಗಿದೆ. (ಆದಿಕಾಂಡ 1:28) ಆಗ ಮಾತ್ರ, ಚಿರತೆಯಂತಹ ಸುಂದರ ಬೆಕ್ಕುಗಳು ಭೂನಿವಾಸಿಗಳನ್ನು ಸದಾ ಆನಂದಗೊಳಿಸುವವೆಂಬ ನಿಜವಾದ ಖಾತರಿಯಿರುವುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ