ಬರ್ಲಿನ್ ನಮ್ಮ ಜಗತ್ತಿನ ಒಂದು ದರ್ಪಣ?
ಎಚ್ಚರ! ದ ಜರ್ಮನಿಯ ಸುದ್ದಿಗಾರರಿಂದ
ನವಂಬರ 9, 1989, ಒಂದು ಸಂತೋಷಭರಿತ ಜನರ ಗುಂಪು ಬರ್ಲಿನ್ ಗೋಡೆಯನ್ನು ಹತ್ತುವುದನ್ನು ಮತ್ತು ಪೂರ್ವ ಜರ್ಮನಿಯ ಅಸಂಖ್ಯಾತರು ಗಡಿ ದಾಟುವುದನ್ನು ನೋಡಿತು. ಅಧಿಕಾಂಶ ಜರ್ಮನರಿಗೆ ಮತ್ತು ಲೋಕ ವ್ಯಾಪಕವಾದ ಟೀವೀ ಪ್ರೇಕ್ಷಕರಿಗೆ ಇದು ನಂಬಲಸಾಧ್ಯವಾದ ಸಂಗತಿಯಾಗಿತ್ತು.
ಬರ್ಲಿನ್ ನಗರ, 1945 ರಿಂದ, “ಉತ್ತರ ರಾಜ” ಮತ್ತು “ದಕ್ಷಿಣ ರಾಜ” ರಿಂದ ಪ್ರತಿನಿಧೀಕರಿಸಲ್ಪಟ್ಟ ಎರಡು ಮಹಾ ಲೋಕಶಕ್ತಿಗಳ ಮಧ್ಯೆ ಇದ್ದ ಪ್ರತಿಸ್ಪರ್ಧೆಯನ್ನು ಕೆಲವು ರೀತಿಯಲ್ಲಿ ಪ್ರತಿಬಿಂಬಿಸುತ್ತಿತ್ತು. (ದಾನಿಯೇಲ 11:36-45) ಆದರೆ ಈ ಸ್ಪರ್ಧೆ ಬರ್ಲಿನಿನಲ್ಲಿ ಹೇಗೆ ಬೆಳೆಯಿತು, ಮತ್ತು ಗಡಿಯನ್ನು ಈಗ ಏಕೆ ತೆರೆಯಲಾಯಿತು? ನಮ್ಮ ವಿಭಾಗಿತ ಜಗತ್ತು ಸಹ ಬದಲಾವಣೆ ಹೊಂದೀತೆ?
II ನೆಯ ಲೋಕಯುದ್ಧ ಕಾಲದಲ್ಲಿ, ರಷ್ಯಾ, ಅಮೆರಿಕ ಮತ್ತು ಬ್ರಿಟನ್, ನಾಝೀ ಜರ್ಮನಿಯನ್ನು ಎದುರಿಸುವುದರಲ್ಲಿ ಐಕ್ಯಗೊಂಡವು. ಈ ಸಹಕಾರ ಯುದ್ಧಾನಂತರವೂ ಮುಂದುವರಿಯುವುದೆಂದು ಮಿತ್ರರಾಷ್ಟ್ರಗಳು ಭಾವಿಸಿದ್ದವು. ಹೀಗೆ, ಸೋತುಹೋಗಿದ್ದ ಜರ್ಮನಿಯನ್ನು ಆಕ್ರಮಣ ವಲಯಗಳಾಗಿ ವಿಭಾಗ ಮಾಡಿ ರಾಜಧಾನಿಯಾದ ಬರ್ಲಿನಿಗೆ ವಿಶೇಷ ಸ್ಥಾನ ಕೊಟ್ಟು ಅದರಲ್ಲಿ ಪಾಲಿಗರಾಗುವಂತೆ ಅವರು ಒಪ್ಪಿದರು. ಹೀಗೆ, 1945 ರಲ್ಲಿ ಜರ್ಮನಿ ಮತ್ತು ಬರ್ಲಿನನ್ನು ವಿಭಾಗಿಸಿ ಅದನ್ನು ರಷ್ಯಾ, ಅಮೆರಿಕ, ಬ್ರಿಟನ್ ಮತ್ತು ಫ್ರೆಂಚ್ ಮಿಲಿಟರಿ ಸರಕಾರಗಳು ನಿಯಂತ್ರಿಸಿಕೊಂಡವು.
ಆದರೆ ಬೇಗನೆ, ಈ ಶಕ್ತಿಗಳು ವಿಷಯಗಳನ್ನು ವಿಭಿನ್ನ ರೀತಿಯಲ್ಲಿ ನೋಡಿ, ಮಾಡಿದವೆಂದು ಸ್ಪಷ್ಟವಾಗಿಯಿತು. ಪೂರ್ತಿ ಬರ್ಲಿನ್ ಕಮ್ಯುನಿಸ್ಟ್ ಆಡಳಿತದೊಳಗೆ ಬರಬೇಕೆಂದು ರಷ್ಯಾದ ಅಪೇಕ್ಷೆಯಾಗಿತ್ತು, ಆದರೆ ಪಾಶ್ಚಿಮಾತ್ಯ ಶಕ್ತಿಗಳು ತಮ್ಮ ವಿಭಾಗಗಳಲ್ಲಿ ಅನೇಕತವ್ವಿರುವ ಆಡಳಿತವನ್ನು ಬೆಳೆಸಿದವು. ಅಕ್ಟೋಬರ್ 1946 ರ ಚುನಾವಣೆಯಲ್ಲಿ ಪ್ರತಿ ಐದು ಬರ್ಲಿನ್ವಾಸಿಗಳಲ್ಲಿ ನಾಲ್ಕು ಜನ ಕಮ್ಯೂನಿಸ್ಟರ ವಿರುದ್ಧ ಮತ ಹಾಕಿದರು.
ಪಾಶ್ಚಿಮಾತ್ಯ ಶಕ್ತಿಗಳು 1948 ರಲ್ಲಿ ಆರ್ಥಿಕ ಪುನರ್ರಚನೆ ಮತ್ತು ಪಶ್ಚಿಮ ಜರ್ಮನಿಯ ತಮ್ಮ ಆಕ್ರಮಣ ವಲಯಗಳಲ್ಲಿ ಒಂದೇ ಪ್ರಜಾಪ್ರಭುತ್ವ ರಾಜ್ಯವನ್ನು ಮಾಡಲು ನಿರ್ಧರಿಸಿದಾಗ, ರಷ್ಯಾ ಎಲೈಡ್ ಕಂಟ್ರೋಲ್ ಕೌನ್ಸಿಲನ್ನು ಬಿಟ್ಟು ಹೋಯಿತು. ಹೀಗೆ, ಜೋಡಿಸಿದ ನಾಲ್ಕು ಶಕ್ತಿಗಳ ಆಡಳಿತ ಅಂತ್ಯಗೊಂಡಿತು. ಬರ್ಲಿನಿನಿಂದ ಒಟ್ಟು ಸೇರಿ ಜರ್ಮನಿಯನ್ನು ಆಳುವ ನಿರೀಕ್ಷೆ ಅಲ್ಪಕಾಲಿಕವಾಯಿತು.
ಶೀತಲ ಯುದ್ಧ ಪ್ರಾರಂಭಿಸುತ್ತದೆ
ಸೋವಿಯೆಟ್ ವಲಯದೊಳಗಿದ್ದ ಬರ್ಲಿನ್, ಅದರ ನಾಲ್ಕು ಶಕ್ತಿಗಳ ಸ್ಥಾನವನ್ನು ಇಟ್ಟುಕೊಂಡಿತು. ಸೋವಿಯೆಟ್ ರಷ್ಯಾಕ್ಕೆ, ಪಾಶ್ಚಿಮಾತ್ಯ ಪರರಾಜ್ಯ ಸುತ್ತುಗಟ್ಟಿರುವ ನಗರದ ಪೂರ್ವ ವಿಭಾಗವನ್ನು ನಿಯಂತ್ರಿಸುವುದು ಒಂದು ಅಪಾಯಕಾರೀ “ಅನ್ಯ ಮೂಲಾಂಶ” ವಾಗಿತ್ತು. ಆದುದರಿಂದ ಅವರು ಜೂನ್ 1948 ರಲ್ಲಿ, ಪಶ್ಚಿಮ ಬರ್ಲಿನಿನ ಸರಬರಾಯಿಯನ್ನು ಕಡಿದು ಹೀಗೆ, ಪಶ್ಚಿಮ ಶಕ್ತಿಗಳು ಬರ್ಲಿನಿನಲ್ಲಿ ತಮಗಿರುವ ಹಕ್ಕನ್ನು ತ್ಯಜಿಸುವಂತೆ ಪಶ್ಚಿಮ ವಿಭಾಗಗಳಿಗೆ ಸಂಪೂರ್ಣ ಜಮೀನಿನ ತಡೆಗಟ್ಟನ್ನು ಹಾಕಿದರು. ಈಗ ಪಾಶ್ಚಿಮಾತ್ಯರ ಪ್ರತಿಕ್ರಿಯೆ ಏನಾಗಬಹುದು?
ಜೂನ್ 26, 1948ರಲ್ಲಿ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಆಹಾರ ಸರಬರಾಜು ವಿಮಾನಗಳ ಮೂಲಕ ಆರಂಭವಾಯಿತು. ಸುಮಾರು ಒಂದು ವರ್ಷದಲ್ಲಿ, ಅಮೆರಿಕ ಮತ್ತು ಬ್ರಿಟನ್ 2,79,114 ವಿಮಾನ ಹಾರಾಟಗಳನ್ನು ಸಂಘಟಿಸಿ 23 ಲಕ್ಷ ಟನ್ನು ಆಹಾರ, ಇಂಧನ ಮತ್ತು ಇತರ ವಸ್ತುಗಳನ್ನು ಈ ನಗರಕ್ಕೆ ತಂದು ಹಾಕಿದವು. ನಾರ್ಮನ್ ಗೆಲ್ಬ್ ತನ್ನ ದ ಬರ್ಲಿನ್ ವಾಲ್ ಎಂಬ ಪುಸ್ತಕದಲ್ಲಿ ಹೇಳುವುದು: “ಬರ್ಲಿನ್ ತಡೆಗಟ್ಟು ಶೀತಲ ಯುದ್ಧದ ಆರಂಭ ಮೇಳ. ಅದೇ ಸಮಯದಲ್ಲಿ ಈ ತಡೆಗಟ್ಟಿಗೆ ಬಂದ ಪ್ರತಿಕ್ರಿಯೆಯು ಪಾಶ್ಚಿಮಾತ್ಯ ದೇಶಗಳಲ್ಲಿ ಅಮೆರಿಕದ ನಾಯಕತ್ವವನ್ನು ನಾಟಕೀಯವಾಗಿ ದೃಢೀಕರಿಸಿತು.”
ಅವರು ಮುಂದುವರಿಸಿದ್ದು: “ಮಾಸ್ಕೊವಿನ ದೃಷ್ಟಿಯಲ್ಲಿ, ಕಮ್ಯೂನಿಸ್ಟ್ ಪ್ರದೇಶದ ಮಧ್ಯದಲ್ಲಿದ್ದ, ಅವರ ಪ್ರತ್ಯೇಕವಾಗಿರುವ ಪರರಾಜ್ಯದ ಸುತ್ತುಗಟ್ಟಿನಿಂದ ಅವರನ್ನು ಓಡಿಸಲು ಮಾಡಿದ ಸೋವಿಯೆಟ್ ಪ್ರಯತ್ನಗಳನ್ನು ತಡೆಯಲು ಮಿತ್ರರಾಜ್ಯ ಪಕ್ಷದವರಿಗಿರುವ ಸಾಮರ್ಥ್ಯವು, ಪಾಶ್ಚಿಮಾತ್ಯ ರಾಷ್ಟ್ರಗಳು ಸೋವಿಯೆಟ್ ವ್ಯವಸ್ಥೆಯನ್ನು ನಾಶಗೊಳಿಸಲು ನಿರ್ಧರಿಸಿವೆ ಎಂಬ ಅದರ ಕುಲುಕದ ನಂಬಿಕೆಯನ್ನು ದೃಢೀಕರಿಸಿತು. ಬದುಕಿ ಉಳಿಯಬೇಕಾದರೆ ಸೋವಿಯೆಟ್ ಯೂನಿಯನ್ ಒಂದು ಮಿಲಿಟರಿ ಮಹಾಶಕ್ತಿಯಾಗಲೇ ಬೇಕು ಎಂಬ ವಿಷಯದಲ್ಲಿ ಕ್ರೆಮ್ಲಿನಿಗೆ ಇನ್ನು ಮುಂದೆ ಯಾವ ಸಂಶಯವೂ ಇರಲಿಲ್ಲ. ಈ ಬರ್ಲಿನಿಗಾಗಿ ನಡೆದ ಹೋರಾಟವು, ಇಪ್ಪತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ ಅಂತರಾಷ್ಟ್ರೀಯ ವಿಚಾರಗಳಲ್ಲಿ ಯಾವುದು ಮುಖ್ಯಾಂಶವಾಯಿತೋ ಆ ರಷ್ಯಾ, ಅಮೆರಿಕಗಳ ಮಧ್ಯೆ ಎದ್ದುಬಂದ ಮಹಾಶಕ್ತಿಗಳ ಪ್ರತಿಸ್ಪರ್ಧೆಗೆ ರಂಗಸಜ್ಜನ್ನೊದಗಿಸಿತು.”
ತಡೆಗಟ್ಟು ನಿಂತಾಗ, ಪಾಶ್ಚಿಮಾತ್ಯ ಶಕ್ತಿಗಳು ಬರ್ಲಿನಿನಲ್ಲಿಯೇ ನಿಂತು ಅದರ ಸ್ಥಾನವನ್ನು ಕಾಪಾಡಲು ನಿರ್ಧರಿಸಿದವು. 1949 ರಲ್ಲಿ ಎರಡು ಜರ್ಮನ್ ಸರಕಾರಗಳು—ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ (ಪಶ್ಚಿಮ) ಮತ್ತು ಜರ್ಮನ್ ಡೆಮೊಕ್ರ್ಯಾಟಿಕ್ ರಿಪಬ್ಲಿಕ್ (ಪೂರ್ವ)—ಸ್ಥಾಪನೆಗೊಂಡಾಗ, ಪೂರ್ವ ಮತ್ತು ಪಶ್ಚಿಮಗಳ ಮಧ್ಯೆ ಇದ್ದ ಅಂತರ ಮುಚ್ಚಲಸಾಧ್ಯವೋ ಎಂಬಂತೆ ಕಂಡಿತು. ಈಗ ಬರ್ಲಿನಿನಲ್ಲಿ ಎರಡು ಅಯೋಧ ಸರಕಾರಗಳು ಮತ್ತು ಎರಡು ಚಲಾವಣೆಯ ನಾಣ್ಯಗಳಿದ್ದವು. 1952 ಮತ್ತು 1953 ರಲ್ಲಿ ಪೂರ್ವ ಜರ್ಮನ್ ಸರಕಾರ, ಪೂರ್ವ ಮತ್ತು ಪಶ್ಚಿಮ ಬರ್ಲಿನಿನ ಮಧ್ಯೆ ಇದ್ದ ಟೆಲಿಫೋನ್, ರಸ್ತೆಯ ಮತ್ತು ಬಸ್ ಮಾರ್ಗಗಳ ಸಂಬಂಧವನ್ನು ಕಡಿದು ಬಿಟ್ಟಿತು.
ಪಶ್ಚಿಮದ ಪೌರರು ವರ್ಟ್ಶಾಫ್ಟ್ಸ್ವಂಡರ್ ಅಂದರೆ ಬಳಕೆದಾರರಿಗೆ ಅನೇಕ ವಸ್ತುಗಳ ಆಯ್ಕೆಯನ್ನು ಒದಗಿಸುವ ಆರ್ಥಿಕ ಸಮೃದ್ಧಿಯನ್ನು ಅನುಭವಿಸುತ್ತಿದ್ದಾಗ, ಪೂರ್ವದ ಅನೇಕರು ಅಸಂತೃಪ್ತಿ ಪಡೆಯುವಂತಾಯಿತು. 1953 ರಲ್ಲಿ ಪೂರ್ವ ಬರ್ಲಿನಿನವರು ಮುಷ್ಕರ ಹೂಡಿದಾಗ ಮತ್ತು ಪ್ರತಿಭಟನೆಗಳು ಪೂರ್ವ ಜರ್ಮನಿಯ ಸಕಲ ಭಾಗಗಳಿಗೆ ಹರಡಿದಾಗ ಇದು ವ್ಯಕ್ತವಾಯಿತು. ಇದರ ವೃದ್ಧಿ ಕಮ್ಯೂನಿಸ್ಟ್ ವ್ಯವಸ್ಥೆಯ ವಿರುದ್ಧ ಹಿಂಸಾತ್ಮಕ ಬಂಡಾಯಕ್ಕೆ ನಡೆಸಿತು. ಆಗ ಪೂರ್ವ ಜರ್ಮನಿಯ ಸರಕಾರ ಸೋವಿಯೆಟ್ ಸೈನ್ಯದ ಸಹಾಯ ಕೇಳಿತು. ಟ್ಯಾಂಕುಗಳು ಬಂದು ದಂಗೆಯನ್ನು ಅಡಗಿಸಿಬಿಟ್ಟವು.
ಪಾಶ್ಚಿಮಾತ್ಯ ಶಕ್ತಿಗಳು ಕೇವಲ ನೋಡಿದಲ್ದದ್ಲೆ ಇನ್ನೇನೂ ಮಾಡಲಿಲ್ಲ. ತಮ್ಮ ಬರ್ಲಿನ್ ವಿಭಾಗಗಳಿಗೆ ಮಾತ್ರ ಅವರು ಖಾತರಿಗಳನ್ನು ಕೊಟ್ಟರು. ಜರ್ಮನಿಯ ವಿಭಾಗ ತಾತ್ಕಾಲಿಕ ಎಂಬ ನಿರೀಕ್ಷೆ ಕುಸಿದು ಬಿತ್ತು. ಹಿಂದಿನ ಸೋವಿಯೆಟ್ ಮತ್ತು ಪಾಶ್ಚಿಮಾತ್ಯ ವಿಭಾಗಗಳ ಮಧ್ಯೆ ಇದ್ದ ಗಡಿ ಪೂರ್ವ ಮತ್ತು ಪಶ್ಚಿಮಗಳ ಮಧ್ಯೆ ವಿಭಾಗಿಸುವ ರೇಖೆಯಾಯಿತು.
“ಶಾಂತಿ” ಮತ್ತು “ಲಜ್ಜೆ” ಯ ಗೋಡೆ
“ದಕ್ಷಿಣ ರಾಜನು” ಪಶ್ಚಿಮ ಬರ್ಲಿನನ್ನು ಆಕರ್ಷಕವಾದ “ಪಾಶ್ಚಾತ್ಯ ಅಂಗಡಿ ಪ್ರದರ್ಶನ” ವಾಗಿ ಮಾಡಲಾಗಿ, ಪಶ್ಚಿಮ ಬರ್ಲಿನಿನಲ್ಲಿ ತಮ್ಮ ಮಿತ್ರರನ್ನು ಮತ್ತು ಸಂಬಂಧಿಗಳನ್ನು ಸುಲಭವಾಗಿ ನೋಡಸಾಧ್ಯವಿದ್ದಿದ್ದ ಪೂರ್ವದ ಜನರು ಅಲ್ಲಿಯ ಜೀವನ ಎಷ್ಟು ಭಿನ್ನವಾಗಿದೆಯೆಂದು ನೋಡಿದರು. 1960 ರಲ್ಲಿ ಸುಮಾರು 2,00,000 ಲಕ್ಷ ಜರ್ಮನರು, ಪೂರ್ವದಿಂದ, ಅಧಿಕಾಂಶ ಪಶ್ಚಿಮ ಬರ್ಲಿನಿನ ಮಾರ್ಗವಾಗಿ ಪಶ್ಚಿಮ ಜರ್ಮನಿಗೆ ಪಲಾಯನ ಮಾಡಿದರು. ಈ “ರಕ್ತಸ್ರಾವ” ವನ್ನು “ಉತ್ತರ ರಾಜನು” ಹೇಗೆ ತಡೆದಾನು? ಆಗಸ್ಟ್ 13, 1961 ರ ಬೆಳಗ್ಗೆ ಪೂರ್ವ ಜರ್ಮನಿಯ ಸಶಸ್ತ್ರ ರಕ್ಷಕರು ಮತ್ತು ಕೆಲಸಗಾರರು, “ಭಾವನಾಶಾಸ್ತ್ರಾನುಸಾರವಾಗಿ ನಿಮ್ಮ ಸ್ಥಾನ ಯಾವುದು ಎಂಬುದರ ಮೇಲೆ ಹೊಂದಿಕೊಂಡು, ‘ಲಜ್ಜೆಯ ಗೋಡೆ’ ಯಾ ‘ಶಾಂತಿ ಗೋಡೆ’ ಎಂದು ಕರೆಯಲ್ಪಟ್ಟ ಗೋಡೆ” ಕಟ್ಟುವುದು ಕಂಡುಬಂತು, ಎಂದು ನಾರ್ಮನ್ ಗೆಲ್ಬ್ ಬರೆಯುತ್ತಾರೆ. ಪೂರ್ವ ಜರ್ಮನಿಯ ಒಬ್ಬ ಕಮ್ಯೂನಿಸ್ಟ್ ವ್ಯಕ್ತಿ ವಿವರಿಸಿದ್ದು: “ನಮಗೆ ಇನ್ನಾವ ಆಯ್ಕೆಯೂ ಇರಲಿಲ್ಲ. ನಮ್ಮ ಅತ್ಯುತ್ತಮ ವ್ಯಕ್ತಿಗಳಲ್ಲಿ ಎಷ್ಟೋ ಮಂದಿಯನ್ನು ನಾವು ಕಳೆದುಕೊಳ್ಳುತ್ತಿದ್ದೆವು.”
ಈ ಬರ್ಲಿನ್ ಗೋಡೆ ನಿರಾಶ್ರಿತರ ಪ್ರವಾಹವನ್ನು ನಿಲ್ಲಿಸಿದ್ದು ಮಾತ್ರವಲ್ಲ, ಸಂಬಂಧಿ ಮತ್ತು ಮಿತ್ರರನ್ನು ವಿಚ್ಛೇದಿಸಿತು. ಅದನ್ನು ಕಟ್ಟಿ ಇಪ್ಪತ್ತೆಂಟು ಮಾಸಗಳ ಬಳಿಕ, ಪಶ್ಚಿಮ ಬರ್ಲಿನಿನವರಿಗೆ ಪೂರ್ವ ಬರ್ಲಿನಿನ ಸಂಬಂಧಿಗಳನ್ನು ನೋಡಲು ಒಂದು ದಿವಸದ ಲೆಕ್ಕದಲ್ಲಿ ಪ್ರವೇಶ ಕೊಡಲ್ಪಟ್ಟಿತು. ನಾಲ್ಕು ಸರಕಾರಗಳ ಒಪ್ಪಂದದ ಪರಿಣಾಮವಾಗಿ, 1970 ಗಳಲ್ಲಿ ವಿಷಯಗಳು ಇನ್ನೂ ಹೆಚ್ಚು ಸಡಿಲವಾಗಿ ಪೂರ್ವ ಮತ್ತು ಪಶ್ಚಿಮಗಳ ಮಧ್ಯೆ ಟೆಲಿಫೋನ್ ಸಂಬಂಧ ಮತ್ತು ಭೇಟಿಗಳನ್ನು ಅನುಮತಿಸಲಾಯಿತು. ಆದರೂ ಬರ್ಲಿನ್ ಗೋಡೆಯನ್ನು ದಾಟುವ ಪ್ರಯತ್ನದ ಕಾರಣ ಸುಮಾರು 80 ಜನರು ಪ್ರಾಣನಷ್ಟಪಟ್ಟರು.
ಗೋಡೆ ಮುರಿಯುವ ಮೊದಲು, ಚಾನ್ಸೆಲರ್ ಕೋಲ್ ಹೇಳಿದ್ದು: “ಜನರಲ್ ಸೆಕ್ರೆಟರಿ ಗಾರ್ಬಚೆವರ ಪುನರ್ರಚನೆಯ ಕಾರ್ಯನೀತಿ ಅದರೊಂದಿಗೆ, II ನೆಯ ಲೋಕಯುದ್ಧದ ಅಂತ್ಯದಿಂದೀಚೆಗೆ ಪ್ರಥಮ ಬಾರಿ, ಪೂರ್ವ-ಪಶ್ಚಿಮ ತಿಕ್ಕಾಟವನ್ನು ಹೋಗಲಾಡಿಸಲು ನ್ಯಾಯ ಸಮರ್ಥನಾತ್ಮಕ ನಿರೀಕ್ಷೆಯನ್ನು ಕೊಡುತ್ತದೆ.” ಇದು ಬರ್ಲಿನಿನಲ್ಲಿ ಹೇಗೆ ತೋರಿಬಂದದೆ?
“ಉತ್ತರ ರಾಜನ” ದೇಶದಲ್ಲಾದ ಸುಧಾರಣೆಗಳು, ಸಾವಿರಾರು ಪೂರ್ವ ಜರ್ಮನಿಯ ಜನರು 1989 ರ ಮಧ್ಯಭಾಗದಲ್ಲಿ ಅನೇಕ ಪೂರ್ವ ಯೂರೋಪಿಯನ್ ದೇಶಗಳ ಪಶ್ಚಿಮ ಜರ್ಮನಿಯ ರಾಯಭಾರಿ ಕಚೇರಿಗಳಿಗೆ ಮರೆಗಾಗಿ ಓಡುವಂತೆ ಅನುಮತಿಸಿದವು. ಈ ರಾಯಭಾರಿ ಕಚೇರಿಗಳು ಜಾಸ್ತಿ ಜನನಿಬಿಡವಾಗಿ, ಪರಿಸ್ಥಿತಿ ಅಸಹನೀಯವಾಯಿತು. 1989 ರ ಸಪ್ಟಂಬರವು, ಪೂರ್ವದಿಂದ ಬಿಡುಗಡೆ ಮಾಡಲ್ಪಟ್ಟ ತೀರಾ ದಣಿದ ನಿರಾಶ್ರಿತರ ಪ್ರವಾಹವೇ ಹೊರಟು ಬಂದು ಪಶ್ಚಿಮದಲ್ಲಿ ಅವರಿಗೆ ಕಂಠಹಾರ ಹಾಕಲ್ಪಡುವ ದೃಶ್ಯವನ್ನು ನೋಡಿತು. ಉತ್ಸಾಹಕ್ಕೆ ಮೇರೆಯಿರಲಿಲ್ಲ, ಭಾವುಕತೆಗೆ ಮಿತಿ ಇರಲಿಲ್ಲ.
ಈ ನಿರ್ಗಮನ ಪೂರ್ವ ಜರ್ಮನಿಯಲ್ಲಿ ವಾಗ್ವಾದವನ್ನು ಎಬ್ಬಿಸಿತು. ಜನರು ಹೀಗೆ ಹೊರಗೆ ಹರಿಯಲು ಕಾರಣವೇನು? ಅಮೂಲಾಗ್ರ ಸುಧಾರಣೆ ನಿರಾಕರಿಸಲ್ಪಟ್ಟಿತು, ಮತ್ತು 1989ರ ಅಕ್ಟೋಬರ್ ಮತ್ತು ನವಂಬರ್ಗಳಲ್ಲಿ ಹತ್ತು ಲಕ್ಷಕ್ಕೂ ಜಾಸ್ತಿ ಪೂರ್ವ ಜರ್ಮನರು ಪೂರ್ವ ಬರ್ಲಿನಿನ ಲೈಪ್ಸಿಗ್ನಲ್ಲಿ ಮತ್ತು ಇತರ ನಗರಗಳಲ್ಲಿ , “ನಾವು ಜನರು” ಎಂದು ಕೂಗುತ್ತಾ ಶಾಂತಿಯ ಪ್ರತಿಭಟನೆ ಮಾಡಿದರು. ಪೂರ್ವ ಜರ್ಮನಿ ಸರಕಾರ ಸೋಲೊಪ್ಪಿಕೊಂಡು, 28 ವರ್ಷಗಳ ಬಳಿಕ, ಬರ್ಲಿನ್ ಗೋಡೆಯನ್ನು ತೆರೆದು ರಾಜಕೀಯ ಹಾಗೂ ಆರ್ಥಿಕ ಬದಲಾವಣೆಗಳನ್ನು ಮಾಡಿತು. ಜರ್ಮನ್ ವೃತ್ತಪತ್ರಕೆ ಡಿ ಝೈಟ್ ಹೇಳಿದ್ದು: “1989ರಲ್ಲಿ ಲೋಕ ಇತಿಹಾಸ ಅಸ್ತಿವಾರ ಸಮೇತ, ಅಧಿಕಾರ ಶಕಿಗ್ತಳಿಗಿಂತ ಹೆಚ್ಚಾಗಿ ಜನರಿಂದಾಗಿ ಅಲುಗಾಡಿಸಲ್ಪಟ್ಟಿತು.”
ಗಡಿ ತೆರೆಯಲ್ಪಟ್ಟಂದಿನಿಂದ, ಜರ್ಮನ್ ವೃತ್ತಪತ್ರಕೆ, ಸಡ್ಯೂಸ್ ಝೈಟಂಗ್ ಹೇಳುವುದು: ಬರ್ಲಿನಿನ ಜನರು “ಒಂದು ದ್ವೀಪದಲ್ಲಿ ಜೀವಿಸುತ್ತಿಲ್ಲ.” ಗೋಡೆಯ ನೆಲಸಮ ಮಾಡುವಿಕೆ 1990 ರಲ್ಲಿ ಆರಂಭಗೊಂಡಿತು.
ನಿಜ ಶಾಂತಿ ಮತ್ತು ಭದ್ರತೆ ನಿಕಟ
ದೀರ್ಘಕಾಲದ ತನಕ, ಪಶ್ಚಿಮ ಮತ್ತು ಪೂರ್ವ ಬರ್ಲಿನ್, ನಮ್ಮ ವಿಭಾಗಿತ ಜಗತ್ತನ್ನು ಮಾತ್ರವಲ್ಲ, ಅದರ ಸಮಸ್ಯೆಗಳನ್ನೂ ಪ್ರತಿಬಿಂಬಿಸಿದೆ. ಉದಾಹರಣೆಗೆ, ಅನೇಕ ಪೂರ್ವ ಜರ್ಮನಿಯ ಜನರು ಸಾಮಾಜಿಕ ಪ್ರಯೋಜನಗಳನ್ನು ಪಡೆದರೂ, ಅವರು ಆರ್ಥಿಕ ಅಭಾವಗಳನ್ನೂ ವ್ಯಾಪಕವಾದ ಮಾಲಿನ್ಯವನ್ನೂ ಅನುಭವಿಸಿದರು. ಪಶ್ಚಿಮ ಬರ್ಲಿನ್ ತನ್ನದೇ ಆದ, ವಿದ್ಯಾರ್ಥಿಗಳ ದಂಗೆ, ಭಯವಾದ, ಮತ್ತು ರಾಜಕೀಯ ಅಪನಿಂದೆ ಮುಂತಾದ ಸಮಸ್ಯೆಗಳನ್ನು ಎದುರಿಸಿತು. ಹೀಗೆ, ಪಶ್ಚಿಮದಲ್ಲಾಗಲಿ ಪೂರ್ವದಲ್ಲಾಗಲಿ ಮಾನವ ಸಂತತಿಯ ಭೂವ್ಯಾಪಕ ಸಮಸ್ಯೆಗಳನ್ನು ಪರಿಹರಿಸುವ ಯಾವ ಭಾವನಾಶಾಸ್ತ್ರವೂ ಇಲ್ಲ.—ಜ್ಞಾನೋಕ್ತಿ 14:12.
ರಾಷ್ಟ್ರಗಳು ಏನು ಸಾಧಿಸಿದರೂ, ನಮ್ಮ ವಿಭಾಗಿತ ಜಗತ್ತನ್ನು ಐಕ್ಯಗೊಳಿಸುವ ಮಾನವ ಪ್ರಯತ್ನಗಳು ಸ್ವಾರ್ಥವನ್ನು ತೆಗೆದು ಹಾಕಲಾರವು, ಭೂಮಿಯನ್ನು ಪ್ರಮೋದವನವಾಗಿಯೂ ಮಾಡಲಾರವು. ಮನುಷ್ಯಾತೀತವಾದ ಒಂದು ಶಕ್ತಿ ಮಾತ್ರ ನಿಜ ಏಕತೆಯನ್ನು ತರುವುದು ಮಾತ್ರವಲ್ಲ ರೋಗ ಮತ್ತು ಮರಣವನ್ನೂ ತೆಗೆಯಬಲ್ಲದು. ದೇವರ ರಾಜ್ಯವು ಈ ದೊಡ್ಡ ಕೆಲಸವನ್ನು ನೆರವೇರಿಸುವುದು.—ಮತ್ತಾಯ 6:10; ಪ್ರಕಟನೆ 21:1-5. (g90 9/22)