‘ಮತ್ತು ಗೋಡೆಯು ಉರುಳುತ್ತಾ ಕೆಳಗೆ ಬಂತು’
“ಯಾರು ತಾನೇ ಇದನ್ನು ನಂಬುತ್ತಿದ್ದರು?” “ನನ್ನ ಜೀವಮಾನಕಾಲದಲ್ಲಿ ನಾನು ಅದನ್ನು ನೋಡಲಿದ್ದೇನೆಂದು ನಾನೆಂದೂ ಎಣಿಸಿರಲೇ ಇಲ್ಲ!” ಈ ಹೇಳಿಕೆಗಳನ್ನು ಮಾಡುವಂತೆ ಉದ್ರೇಕಿಸಿದ್ದು ಯಾವದು? ನವಂಬರ 1989ರಿಂದ ಆರಂಭಗೊಂಡ ಕುಖ್ಯಾತಿಯ ಬರ್ಲಿನ್ ಗೋಡೆಯ ಧ್ವಂಸ ಮತ್ತು ಅದು ಪ್ರತಿನಿಧಿಸಿದ್ದ ಎಲ್ಲಾ ಸಂಗತಿಗಳು.a ಪೂರ್ವ ಬರ್ಲಿನರು ಪಶ್ಚಿಮ ಬರ್ಲಿನ್ನೊಳಗೆ, ಕೆಲವರು ಬಂಡವಾಳಶಾಹಿಯ ದುಬಾರಿಯ ಆನಂದವನ್ನು ಸವಿಯಲು, ಇನ್ನಿತರರು ಕುಟುಂಬಗಳೋಪಾದಿ ಪುನಃ ಐಕ್ಯತೆಗೊಳ್ಳಲು ಹರಿದು ಬರಲಾರಂಭಿಸಿದರು.
ಆ ತಡೆಗೋಡೆಯ ಒಡಕು ಹೊನಲಿನ ದ್ವಾರಗಳನ್ನು ತೆರೆಯಿತು. ಪೂರ್ವ ಯೂರೋಪ್ ಪುನಃ ಎಂದೂ ಹಿಂದಿನಂತೆ ಇರದು ಎಂದು ಅನೇಕರು ಭಾವಿಸಿದರು.
ಶೀತಲ ಯುದ್ಧದ ಅಂತ್ಯ?
ಪೂರ್ವವನ್ನು ಪಶ್ಚಿಮದಿಂದ ಬೇರ್ಪಡಿಸುತ್ತಿದ್ದ ಭಾವನಾಸಮುಚ್ಛಯ ಗೋಡೆಯ ಕುಸಿತವು, ಬರ್ಲಿನ್ ಗೋಡೆಯ ಬೀಳುವಿಕೆಗಿಂತ ಇನ್ನಷ್ಟು ಅಧಿಕ ಗಮನಾರ್ಹವಾಗಿದೆ. ಫಕ್ಕನೇ ಅಲ್ಲಿ ಕಾರ್ಯಥಃ ಯಾವುದೇ ಶೀತಲ ಯುದ್ಧವಿಲ್ಲ. ಅಮೆರಿಕದ ಸೇನೆಯ ನಿವೃತ್ತ ದಳಪತಿ ಡೇವಿಡ್ ಹೆಕರ್ತ್ವ್ ನ್ಯೂಸ್ವೀಕ್ನಲ್ಲಿ ಬರೆದದ್ದು: “ಶೀತಲ ಯುದ್ಧವು ಅಂತ್ಯಗೊಂಡಿದೆ. ಕಠಿಣಕರ ತಾಯಿಗಾಗಿ-ಒಬ್ಬ-ಕಮ್ಯೂನಿಸ್ಟನನ್ನು-ಕೊಲ್ಲುವ ದ್ವೇಷಿಗಳು ಸಹಿತ, ಈಗ ಅದು ಅಂತ್ಯಗೊಂಡಿದೆ ಎಂದು ಒಪ್ಪುತ್ತಾರೆ.”
ಜರ್ಮನ್ ಪತ್ರಿಕೆ ಸ್ಟಟ್ಗಾರ್ಟರ್ ಝಿಟಂಗ್ಗನುಸಾರ, ಜುಲೈ 1990ರಲ್ಲಿ ಲಂಡನಿನಲ್ಲಿ ಜರುಗಿದ ಒಂದು ಸಭೆಯಲ್ಲಿ ನ್ಯಾಟೊ (ನಾರ್ತ್ ಆಟ್ಲಾಂಟಿಕ್ ಟ್ರಿಟಿ ಆರ್ಗನೈಸನ್) ಕೂಡಾ, ಶೀತಲ ಯುದ್ಧದ ಕೊನೆಯನ್ನು ಒಪ್ಪಿಕೊಂಡಿದೆ. “ಆಟ್ಲಾಂಟಿಕ್ ಮೈತ್ರಿಕೂಟವು ಶೀತಲ ಯುದ್ಧದ ಶಕೆಗೆ ಕೊನೆಯ ಶುಭವಿದಾಯವನ್ನು ಕೋರುತ್ತದೆ” ಎಂಬ ಶೀರ್ಷಿಕೆಯ ಕೆಳಗೆ ದಿ ಜರ್ಮನ್ ಟ್ರಿಬೂನ್ ಸ್ಟಟ್ಗಾರ್ಟ್ ಪತ್ರಿಕೆಯನ್ನು ಉಲ್ಲೇಖಿಸಿ ಹೇಳುವದು: “[ಸೋವಿಯೆಟ್ ಬ್ಲಾಕ್ ರಾಷ್ಟ್ರಗಳೊಂದಿಗಿನ] 41 ವರ್ಷಗಳ ಸಂಘರ್ಷಣೆಯ ನಂತರ, 16 ನ್ಯಾಟೊ ಮುಂದಾಳುಗಳು ಒಂದು ಹೊಸ ಯುದ್ಧತಂತ್ರಕ್ಕಾಗಿ ದಾರಿಯನ್ನು ತೆರೆದರು ಮತ್ತು ಶೀತಲ ಯುದ್ಧದ ಶಕೆಗೆ ಒಂದು ಕೊನೆಯ ಶುಭವಿದಾಯ ಮಾಡಿದರು. . . . ವೈರತ್ವದ ಬದಲಿಗೆ ಸಹಭಾಗಿತ್ವವು ಬರಲಿಕ್ಕಿತ್ತು. . . . ಭದ್ರತೆ ಮತ್ತು ಸ್ಥಿರತೆ . . . ಇನ್ನು ಮುಂದೆ ಸೇನೆಯ ಮೂಲಕ ಸುರಕ್ಷಿತವಾಗಿಡಲ್ಪಡುವದಿಲ್ಲ, ಬದಲಾಗಿ ಸಮತೂಕತೆ, ಸಂವಾದ ಮತ್ತು ಎಲ್ಲಾ-ಯೂರೋಪಿಯನ್ ಸಹಕಾರದ ಧೋರಣೆಯ ಮೂಲಕವೇ.” ಶಾಂತಿಗೆ ಬೆದರಿಕೆಯನ್ನೊಡ್ಡುವ ಸಂಘರ್ಷಣೆಯ ಕಾರ್ಯರಂಗವು ಈಗ ಯೂರೋಪಿನಿಂದ ಮಧ್ಯಪೂರ್ವಕ್ಕೆ ಚಲಿಸಲ್ಪಟ್ಟಿದೆ.
ಪ್ರಜಾಪ್ರಭುತ್ವಕ್ಕೆ ಅದರ ಬೆಲೆ ಇದೆ
ಜನರಿಗಾಗಿ ಸ್ವತಂತ್ರ ಆಯ್ಕೆ ಇರುವ ಪ್ರಜಾಪ್ರಭುತ್ವವು, ಪ್ರಚಲಿತ ರಾಜಕೀಯ ಶೈಲಿಯಾಗಿದೆ. ಮತ್ತು ಬಹುಮಟ್ಟಿಗೆ ಎಲ್ಲರೂ ಈ ಚಕ್ರದ ಬಂಡಿಯಲ್ಲಿ ಹಾರುತ್ತಿದ್ದಾರೆ. ಆದರೆ ಅದಕ್ಕೊಂದು ಬೆಲೆ ತೆರಲಿಕ್ಕಿದೆ. ಪೂರ್ವ ಮತ್ತು ಪಶ್ಚಿಮದ ಹಾಗೂ ಅದರ ಬಂಡವಾಳಶಾಹಿ ಪ್ರಜಾಪ್ರಭುತ್ವದ ನಡುವಿನ ಬೆಚ್ಚಗೆನ ಬಾಂಧವ್ಯಗಳು ಅಷ್ಟೊಂದು ಅಗ್ಗವಾಗಿ ಬರಲಾರವು. ಏಸ್ಯಾವೀಕ್ನ ಸಂಪಾದಕೀಯದಲ್ಲಿ ಹೇಳಿದ್ದು: “ಇನ್ನು ಮುಂದೆ ಸೋವಿಯೆಟ್ ಬ್ಲಾಕ್ನ (ಒಕ್ಕೂಟದ) ದೇಶಗಳೆಂದು ಕರೆಯಲ್ಪಡದಿರುವಂಥವುಗಳಲ್ಲಿ ಒಂದು ಆರ್ಥಿಕ ತೊಡಕಿನಲ್ಲಿವೆ. . . . ಪ್ರಜಾಪ್ರಭುತ್ವವು ಒಂದು ಬೆಲೆಯಲ್ಲಿ ಬರುತ್ತದೆ. . . . ಪ್ರಜಾಪ್ರಭುತ್ವಕ್ಕೆ ಅನೇಕ ಸದ್ಗುಣಗಳಿವೆ, ಆದರೆ ಪರಿಪೂರ್ಣ ಸ್ಥಿರತೆಯು ಅವುಗಳಲ್ಲಿ ಒಂದಾಗಿರುವದಿಲ್ಲ.” ಹೆಚ್ಚು ಸ್ವಾತಂತ್ರ್ಯದ, ಪ್ರಜಾಪ್ರಭುತ್ವದ ಸಮಾಜವೆಂದು ಕರೆಯಲ್ಪಡುವ ಇದಕ್ಕೆ ಇಂಥ ಬದಲಾವಣೆಗಳನ್ನು ತರಲು ಬೆಲೆ ತೆರುವವರು ಯಾರು?
ಒಂದು ಕೇಂದ್ರಿತವಾಗಿ ನಿಯಂತ್ರಿಸಲ್ಪಡುತ್ತಿದ್ದ ಆರ್ಥಿಕತೆಯಿಂದ ಸ್ವತಂತ್ರ ಮಾರುಕಟ್ಟೆಯ ವ್ಯವಸ್ಥೆಗೆ ಬದಲಾಯಿಸಲ್ಪಡುವಿಕೆಯು ಅದರೊಟ್ಟಿಗೆ ನಿರುದ್ಯೋಗ ಮತ್ತು ವಿಪತ್ತುಗಳನ್ನು ತರುತ್ತದೆ ಎಂದು ಪೊಲೇಂಡಿನ, ಪೂರ್ವ ಜರ್ಮನಿಯ ಮತ್ತು ಇನ್ನಿತರ ಕಡೆಯ ಲಕ್ಷಗಟ್ಟಲೆ ಜನರು ಕಂಡುಕೊಳ್ಳುತ್ತಾ ಇದ್ದಾರೆ. ಕೈಗಾರಿಕೆಗಳು ಹೊಂದಾಣಿಕೆ ಮಾಡಿಕೊಳ್ಳಲು ಮತ್ತು ಹೆಚ್ಚು ಸ್ಪರ್ಧಾತ್ಮಕವಾಗಿರಲು ಪ್ರಯತ್ನಿಸುವಾಗ, ಸಮೃದ್ಧತೆಯು ಒಳಸೇರುತ್ತದೆ. ಸಮಾಜದ ಇನ್ನಿತರ ವಿಭಾಗಗಳು ಕೂಡಾ—ಮಿಲಿಟರಿ ಮತ್ತು ಶಸ್ತ್ರಾಸ್ತ್ರಗಳ ಕೈಗಾರಿಕೆಗಳು, ಗಂಭೀರವಾಗಿ ಬಾಧಿಸಲ್ಪಡುತ್ತವೆ. ಅದು ಹೇಗೆ?
ಪೂರ್ವ ಮತ್ತು ಪಶ್ಚಿಮದ ನಡುವಿನ ಪರಸ್ಪರ ಭಯ ಮತ್ತು ವೈರತ್ವವು ಮಾಯವಾಗುತ್ತಿರುವಾಗ, ದೊಡ್ಡ ಪ್ರಮಾಣದ ಸೇನೆಗಳ ಆವಶ್ಯಕತೆಯು ಇಳಿಮುಖವಾಗುತ್ತದೆ. ನೂರಾರು ಸಾವಿರಾರು ಸೈನಿಕರು ಮತ್ತು ಅವರ ಕುಟುಂಬಗಳು, ಈಗ ಸಾಮಾನ್ಯ ನಾಗರಿಕ ಜೀವನ ಮತ್ತು ಅದರ ಎಲ್ಲಾ ಒತ್ತಡಗಳಿಗೆ ಹೊಂದಿಸಿಕೊಳ್ಳಬೇಕಾಗುತ್ತದೆ. ರಕ್ಷಣಾ ಆಯವ್ಯಯ ಅಂದಾಜುಪಟ್ಟಿಯಲ್ಲಿ ಕಡಿತ ಉಂಟಾಗಬಹುದು. ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ಬರುವ ಬೇಡಿಕೆಗಳು ನಿಧಾನಿಸಲ್ಪಡುವ ಸಾಧ್ಯತೆ ಇದೆ, ಮತ್ತು ಉತ್ಪಾದಕರು ಬೇರೆಡೆಗೆ ದಿಕ್ಕು ಬದಲಾಯಿಸಬೇಕಾದೀತು. ಕೆಲಸಗಾರರು ಬೇರೆ ಪ್ರದೇಶಗಳಿಗೆ ಹೋಗಬೇಕಾದೀತು ಮತ್ತು ಹೊಸ ವೃತ್ತಿಕೌಶಲ್ಯಗಳನ್ನು ಕಲಿಯಬೇಕಾದೀತು.
ಈ ನಂಬಲಸಾಧ್ಯವಾದ ಮತ್ತು ಗೊಂದಲಮಯ ತಿರುಗುವಿಕೆಯು ಪೂರ್ವ ಯೂರೋಪಿನಲ್ಲಿ ಮೂಲಭೂತವಾಗಿ ಒಂದು ಹೊಸ ಅಂತರ್-ರಾಷ್ಟ್ರೀಯ ಸನ್ನಿವೇಶವನ್ನು ನಿರ್ಮಿಸಿದೆ. ಇವೆಲ್ಲವುಗಳು ಬಂದದಾದ್ದರೂ ಹೇಗೆ?
ನಿರ್ಣಾಯಕ ಮಾತುಗಳು, ನಿರ್ಣಾಯಕ ಬದಲಾವಣೆಗಳು
ಈ ಬದಲಾವಣೆಗಳಿಗೆ ಒಂದು ನಿರ್ಣಾಯಕವಾದದ್ದು, ಸೋವಿಯೆಟ್ ಯೂನಿಯನ್ ಮಧ್ಯಪ್ರವೇಶ ಮಾಡದಿರುವ ಅದರ ಪರಿಷ್ಕೃತ ಮನೋಭಾವವಾಗಿದೆ. ಗತಕಾಲಗಳಲ್ಲಿ, ಹಂಗೆರಿಯ ಮೇಲೆ (1956) ಮತ್ತು ಜೆಕಸ್ಲೊವಕಿಯದ ಮೇಲೆ (1968) ಸೋವಿಯೆಟ್ ಧಾಳಿಗಳ ಘೋರ ದೃಶ್ಯವು ಪೂರ್ವ ಯೂರೋಪಿನ ಸುಧಾರಣಾ ಶಕ್ತಿಗಳನ್ನು ಹಿಡಿತದಲ್ಲಿ ಇಟ್ಟಿತು. ಆದರೆ 1980ರ ದಶಕದ ಸೊಲಿಡಾರಿಟಿ (ಐಕ್ಯಮತ್ಯದ) ಚಳುವಳಿಯ ಪಂಥಾಹ್ವಾನದೊಂದಿಗಿನ ಅನುಭವವು ಮತ್ತು ಆ ರಾಷ್ಟ್ರವು ಮೆಲ್ಲಮೆಲ್ಲನೆ ಪ್ರಜಾಪ್ರಭುತ್ವದೆಡೆಗೆ ಚಲಿಸುವದು, ಸೇನಾ ಮಧ್ಯಪ್ರವೇಶಮಾಡುವ ಸೋವಿಯೆಟ್ ಯೂನಿಯನ್ನ ಗತಕಾಲದ ಧೋರಣೆಯಲ್ಲಿ ಬದಲಾವಣೆಯಾಗಿದೆ ಎಂದು ತೋರಿಸಿತು. ಪೊಲೇಂಡಿನ ಅನುಭವವು, ಕಮ್ಯೂನಿಸ್ಟ್ ಅಖಂಡಶಿಲೆಯಲ್ಲಿ ಸೀಳುಸಂದುಗಳಿವೆ ಮತ್ತು ಶಾಂತಿಭರಿತವಾಗಿ, ಮೆಲ್ಲಮೆಲ್ಲನೆ ಬದಲಾವಣೆಯನ್ನು ಒಂದು ಬೆಲೆ ತೆರುವದರಿಂದ ಗಳಿಸಸಾಧ್ಯವಿದೆ ಎಂದು ತೋರಿಸಿತು. ಆದರೆ ಇದೆಲ್ಲಾ ಸಾಧ್ಯ ಮಾಡಿದ್ದು ಯಾವದು?
ಕೆಲವು ರಾಜಕೀಯ ವಿಮರ್ಶಕರಿಗನುಸಾರವಾಗಿ, ಸೋವಿಯೆಟ್ ದೇಶದ ರಾಷ್ಟ್ರಪತಿ ಮಿಖಾಯೇಲ್ ಗೊರ್ಬಚೇವ್ರ ಮಾರ್ಗದರ್ಶನೆಯ ಕೆಳಗೆ ಸೋವಿಯೆಟ್ ಒಕ್ಕೂಟದ ಮುಂದಾಳುತನದ ವ್ಯಾವಹಾರಿಕ ಧೋರಣೆಯು ಪೂರ್ವ ಯೂರೋಪಿನಲ್ಲಿನ ಎಲ್ಲಾ ಬದಲಾವಣೆಗಳಿಗೆ ಆಧಾರಭೂತವಾಗಿರುತ್ತದೆ. ಫೆಬ್ರವರಿ, 1990ರಲ್ಲಿ ಅವರಂದದ್ದು: “ಸೋವಿಯೆಟ್ ಕಮ್ಯೂನಿಸ್ಟ್ ಪಾರ್ಟಿಯು ಪೆರೆಸ್ಟ್ರೊಯಿಕಾ [ಸಮಾಜದ ಮರು-ಸಂಘಟನೆ]ವನ್ನು ಆರಂಭಿಸಿದೆ ಮತ್ತು ಅದರ ಕಲ್ಪನೆ ಮತ್ತು ಧೋರಣೆಯನ್ನು ರೂಪಿಸಿದೆ. ಈ ಆಧಾರದ ಮೇಲೆ ಜೀವಿತದ ಎಲ್ಲಾ ಸ್ತರಗಳನ್ನು ಮತ್ತು ಜನಸಮೂಹದ ಎಲ್ಲಾ ವಿಭಾಗಗಳನ್ನು ಆವರಿಸುವ ಆಗಾಧ ಕ್ರಾಂತಿಕಾರಕ ಪರಿವರ್ತನೆಗಳನ್ನು ದೇಶದಲ್ಲೆಲ್ಲಾ ಆರಂಭಿಸಲಾಗಿದೆ. . . . ಶೀಘ್ರ ಪರಿವರ್ತನೆಗಳು, ವಿಸ್ತಾರ್ಯತೆಯಲ್ಲಿ ಮತ್ತು ಮೂಲಭೂತವಾಗಿ ಪೆರೆಸ್ಟ್ರೊಯಿಕಾದ ಚೌಕಟ್ಟಿನಲ್ಲಿ ನಡಿಸಲ್ಪಡುತ್ತಾ ಇವೆ.”
ಏಸ್ಯಾವೀಕ್ ಹೇಳಿಕೆ ಮಾಡಿದ್ದು: “ಇಂದು, ಕೆಲವೊಂದು ಹಿನ್ನಡೆಯುವಿಕೆಗಳಿದ್ದರೂ, ಗ್ಲಾಸ್ನೊಸ್ಟ್ [ತೆರೆಯಲ್ಪಡುವಿಕೆ] ಮತ್ತು ಪೆರೆಸ್ಟ್ರೊಯಿಕಾ [ಮರು-ಸಂಘಟನೆ]ಗಾಗಿ (ಗೊರ್ಬಚೇವ್ರ) ಚಳುವಳಿಗಳು, ಹಂಗೆರಿಯ, ಪೊಲೇಂಡಿನ ಮತ್ತು ಸೋವಿಯೆಟ್ ಬ್ಲಾಕ್ (ರಾಷ್ಟ್ರಗಳ ಒಕ್ಕೂಟ)ನಲ್ಲೆಲ್ಲಾ ಇರುವ ಸುಧಾರಕರಿಗೆ ಪ್ರೋತ್ಸಾಹವನ್ನಿತ್ತಿದೆ.” ಸೋವಿಯೆಟ್ ದೇಶದ ಅಧಿಕಾರವನ್ನು 1985ರಲ್ಲಿ ಗೊರ್ಬಚೇವ್ ತೆಗೆದುಕೊಂಡಂದಿನಿಂದ ಈ ಎರಡು ರಶ್ಯನ್ ನಿರ್ಣಾಯಕ ಶಬ್ದಗಳು, ಗ್ಲಾಸ್ನೊಸ್ಟ್ ಮತ್ತು ಪೆರೆಸ್ಟ್ರೊಯಿಕಾ ಪ್ರಪಂಚದ ಶಬ್ದಕೋಶದಲ್ಲಿ ಸೇರಿಸಲ್ಪಟ್ಟಿವೆ. ಆವುಗಳು, ಕಮ್ಯೂನಿಸ್ಟ್ ಪ್ರಪಂಚದಲ್ಲಿ ಸರಕಾರದ ಕಡೆಗಿನ ಹೊಸ ಮನೋಭಾವವನ್ನು ವ್ಯಕ್ತಪಡಿಸುತ್ತವೆ.
ರಾಜಕೀಯ ವಿಮರ್ಶಕನಾದ ಫಿಲಿಪ್ ಮಾರ್ಕೊವಿಸಿಯು, ಸಾಂಪ್ರದಾಯಿಕ ಫ್ರೆಂಚ್ ಪತ್ರಿಕೆಯಾದ ಲೆ ಕ್ಯುಟಿಡಿಯನ್ ಡಿ ಪ್ಯಾರಿಶ್ನಲ್ಲಿ ಜೆಕಸ್ಲೊವಾಕಿಯಾದಲ್ಲಿನ ಬದಲಾವಣೆಗಳ ಕುರಿತು ಬರೆಯುತ್ತಾ ಅಂದದ್ದು, ಅಂಥಾದ್ದು ಬಂದದ್ದಕ್ಕೆ “ಮಾಸ್ಕೋವಿಗೆ ಉಪಕಾರಗಳು, ಯಾಕಂದರೆ ಒಂದು ಸಂಗತಿಯು ಸ್ಪಷ್ಟ: ಸೋವಿಯೆಟ್ ಜನರು ಇದನ್ನು ಕೇವಲ ಜರುಗುವಂತೆ ಬಿಡಲಿಲ್ಲ; ಇತರ ಜನರ ಪ್ರಜಾಪ್ರಭುತ್ವಗಳಂತೆ ಜೆಕಸ್ಲೊವಾಕಿಯಾವು ಕೂಡಾ, ಬಂಧಿಸಲ್ಪಟ್ಟ ಕವಚದುಡುಪಿನಿಂದ ಬಿಡಿಸಿ ಹೊರಬರುವಂತೆ ಮಾಡಲು ಅವರು ದೃಢನಿರ್ಧಾರ ಮಾಡಿದ್ದರು. . . . ಪ್ರಾಗ್ ಮತ್ತು ಪೂರ್ವ ಬರ್ಲಿನ್ ಎರಡೂ ಕಡೆಗಳಲ್ಲಿ ಜನಸಮೂಹಗಳ ಬಹಿರಂಗ ಪ್ರದರ್ಶನೆಗಳು ಪರಿವರ್ತನೆಯನ್ನು ಪ್ರಚೋದಿಸಿದವು. ಜನರು ವಿಷಯಗಳನ್ನು ರಸ್ತೆಗಳಲ್ಲಿ ತೀರ್ಮಾನಿಸುವದು, ಒಪ್ಪಂದ ಮಾಡುವಂತೆ ಮತ್ತು ಬಿಟ್ಟುಕೊಡುವಂತೆ ಅಧಿಕಾರಿಗಳನ್ನು ಬಲಾತ್ಕರಿಸಿತು.”
ಇದರಿಂದಾದ ಪರಿಣಾಮವೇನಂದರೆ, ಒಂದು ರಾಜಕೀಯ ಮೌಂಟ್ ಸೈಂಟ್ ಹೆಲನ್ (ಸಂತ ಹೆಲನ್ ಪರ್ವತ) ಆಸ್ಫೋಟಿಸುವಂತೆ, ಕೆಲವೇ ತಿಂಗಳುಗಳ ಸಮಯದೊಳಗೆ ಪೂರ್ವ ಯೂರೋಪಿನಲ್ಲೆಲ್ಲಾ—ಪೊಲೇಂಡ್, ಪೂರ್ವ ಜರ್ಮನಿ, ಹಂಗೆರಿ, ಜೆಕಸ್ಲೊವಾಕಿಯಾ, ಬಲ್ಗೇರಿಯಾ ಮತ್ತು ರುಮೇನಿಯಾ—ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವು ಸ್ಫೋಟನಗೊಂಡಿತು.
ಜರ್ಮನ್ನ ಪುನಃ ಏಕೀಕರಣ—ಆಶೀರ್ವಾದವೋ ಯಾ ಶಾಪವೋ?
ಅದೇ ಪ್ರಶ್ನೆಯನ್ನು ಯೂರೋಪಿನ ಅನೇಕರು ಈಗ ತೂಗಿನೋಡುತ್ತಾರೆ. ಜುಲೈ 1990ರಲ್ಲಿ ಹಣಕಾಸಿನ ಐಕ್ಯತೆಯನ್ನು ಎರಡು ಜರ್ಮನಿಗಳು ಸ್ಥಾಪಿಸಿದವು ಮತ್ತು ಒಕ್ಟೋಬರಿನಲ್ಲಿ ರಾಜಕೀಯ ಐಕ್ಯತೆಯನ್ನು ಸಾಧಿಸಿದವು. ಇದು ಲಕ್ಷಗಟ್ಟಲೆ ಜನರಿಗೆ ಆನಂದವನ್ನುಂಟುಮಾಡುವಾಗ, ಯೂರೋಪಿನಲ್ಲಿರುವ ಅನೇಕರಿಗೆ ತತ್ತರವನ್ನುಂಟುಮಾಡುತ್ತದೆ. ಇದರಲ್ಲಿ, ಪೂರ್ವ ಜರ್ಮನಿಯ ಕೆಲವರು ತಮ್ಮ ಮನೆಗಳನ್ನು ಪಶ್ಚಿಮ ಜರ್ಮನಿಯಲ್ಲಿರುವ ಅದರ ಹಿಂದಿನ ಒಡೆಯರಿಗೆ ಹಿಂದಿರಿಗಿಸುವದು ಸೇರಿರುತ್ತದೆ. ಕೆಲವು ಬ್ರಿಟಿಶ್ ನಾಯಕರುಗಳು ಇದರ ಕುರಿತು ಹೇಳದೆ ಮನಸ್ಸಿನಲ್ಲಿಟ್ಟುಕೊಂಡಿದ್ದರೂ, ಒಂದು ಬ್ರಿಟಿಶ್ ವಾರ್ತಾಪತ್ರದ ಶಿರೊಲೇಖನವು ಹೇಳಿದ್ದು: “ಹೊಸತಾಗಿ ಜನಿಸಿದ ಜರ್ಮನಿಯನ್ನು ನಾವು ಕೇವಲ ನಂಬಬೇಕಷ್ಟೇ.”
ನೆಪೋಲಿಯನನ (1812) ಮತ್ತು ಹಿಟ್ಲರನ (1941) ಕೈಗಳಲ್ಲಿ ಭಯಂಕರ ಹಾಗೂ ದುಬಾರಿ ರೀತಿಯಲ್ಲಿ ಆಕ್ರಮಣಗಳಿಂದ ಬಾಧಿಸಲ್ಪಟ್ಟ ನಂತರ, ಎರಡನೇ ಲೋಕಯುದ್ಧದ ಕೊನೆಯಲ್ಲಿ ಪೂರ್ವ ಯೂರೋಪಿನಲ್ಲಿ ಸುರಕ್ಷತೆಯ ಖಾತರಿಯೋಪಾದಿ ಕಾದಾಟಕ್ಕೆ ತಡೆಪ್ರದೇಶವೊಂದನ್ನು ಸೋವಿಯೆಟ್ ದೇಶವು ಬಯಸಿತು. ಈ ರೀತಿಯಲ್ಲಿ ಎಂಟು ಪೂರ್ವ ಯೂರೋಪಿನ ಕಮ್ಯೂನಿಸ್ಟ್ ದೇಶಗಳು ಕೂಡಿರುವ ಸೋವಿಯೆಟ್ ಬ್ಲಾಕ್ (ಒಕ್ಕೂಟ)ವು 1945ರ ಕೆಲವೇ ವರ್ಷಗಳೊಳಗೆ ರೂಪಿಸಲ್ಪಟ್ಟಿತು.b ಈಗ ಜರ್ಮನಿ ಯಾ ಅಮೆರಿಕದಿಂದ ಬೆದರಿಕೆಯೊಡ್ಡಲ್ಪಡುವದು ಕಡಿಮೆ ಮತ್ತು ಮೊದಲಿನ ಆಶ್ರಿತ ಪ್ರದೇಶಗಳ ಮೇಲೆ ಅದರ ಬಿಗಿಮುಷ್ಟಿಯು ಸಡಿಲುಗೊಳಿಸಲ್ಪಟ್ಟಿದೆ ಎಂದು ಸೋವಿಯೆಟ್ ರಶ್ಯಾವು ಭಾವಿಸಿತು. 1946ರಲ್ಲಿ ಚರ್ಚಿಲ್ರಿಂದ ಘೋಷಿಸಲ್ಪಟ್ಟಂತೆ, ಕಬ್ಬಿಣದ ಪರದೆಯು ಕರಗಿ ಹೋಗಿ, ಹೊಸ ಬೆಳಕು ಪ್ರವೇಶಿಸಲು ಅನುಮತಿ ನೀಡಲ್ಪಟ್ಟಂತೆ ಅದು ತೋರುತ್ತಿತ್ತು.
ಈ ಬದಲಾವಣೆಗಳು ನಿಮ್ಮನ್ನು ಬಾಧಿಸಬಹುದಾದ ವಿಧ
ಈಗಾಗಲೇ ನಾವು ಗಮನಿಸಿರುವಂತೆ ಈ ಬದಲಾವಣೆಗಳು ಅನೇಕ ದೇಶಗಳಿಗಾಗಿ ಕೆಲವು ಆರ್ಥಿಕ ಕವಲೊಡೆಯುವಿಕೆಗಳನ್ನು—ಹೊಸ ಕೆಲಸಗಳು, ಹೊಸ ಸನ್ನಿವೇಶಗಳು, ಮತ್ತು ಕೆಲವರಿಗೆ ಹೊಸ ವೃತ್ತಿ ಕೌಶಲ್ಯಗಳು—ಮಾಡಿರುವದನ್ನು ಕಾಣಬಹುದು. ಇತರ ಅನೇಕರಿಗೆ ಇದು ನಿರುದ್ಯೋಗ ಮತ್ತು ಒಂದು ಹೋರಾಟವಾಗಿಇದೆ. ಸ್ವತಂತ್ರ ಮಾರುಕಟ್ಟೆ ಲೋಕದ ತತ್ವಶಾಸ್ತ್ರದ ಒಂದು ಉಪ-ಉತ್ಪಾದನೆ—ಸತ್ವವುಳ್ಳದ್ದು ಪಾರಾಗಿ ಉಳಿಯುವದು—ಅದಾಗಿರುತ್ತದೆ!
ಇನ್ನೊಂದು ಪಕ್ಕದಲ್ಲಿ, ಪ್ರಜಾಪ್ರಭುತ್ವವನ್ನಾಗಿ ಮಾಡುವದರ ಕಡೆಗಿನ ಬದಲಾವಣೆಯು, ಜನರ ಸ್ವತಂತ್ರ ಚಲನೆಯನ್ನು ಅನುಮತಿಸುತ್ತದೆ. ಮತ್ತು ಅದರ ಅರ್ಥ ಅಂತರ್-ರಾಷ್ಟ್ರೀಯ ಪ್ರವಾಸಗಳು. ಬೇರೆ ದೇಶಗಳು (ಉದಾಹರಣೆಗಾಗಿ, ಸ್ಪೆಯ್ನ್ ಮತ್ತು ಇಟೆಲಿ) ಕಳೆದ 30 ವರ್ಷಗಳಲ್ಲಿ ಕಂಡುಕೊಂಡಂತೆ, ಯಾವುದೇ ಸರಕಾರವು ತೆರಬೇಕಾದ ಬಾಕಿಯ (ಬ್ಯಾಲನ್ಸ್-ಆಫ್-ಪೆಯ್ಮೆಂಟ್) ಸಮಸ್ಯೆಗಾಗಿ ವಿದೇಶಿ ಪ್ರವಾಸೋದ್ಯಮವು ಬಹಳಷ್ಟು ವ್ಯತ್ಯಾಸವನ್ನುಂಟುಮಾಡಬಲ್ಲದು. ಪೂರ್ವ ಯೂರೋಪಿನ ಐತಿಹಾಸಿಕ ನಗರಗಳಿಗೆ ಭೇಟಿ ನೀಡಲು ಲಕ್ಷಾಂತರ ಪಾಶ್ಚಿಮಾತ್ಯರು ಕಾತರರಾಗಿದ್ದಾರೆ, ಗತಕಾಲದ ಮಹಿಮೆಯನ್ನು ಈ ನಗರಗಳ ಹೆಸರುಗಳು ಮರುಕಳಿಸುತ್ತವೆ—ಬುಡಾಪೆಸ್ಟ್, ಪ್ರಾಗ್, ಬುಕಾರೆಸ್ಟ್, ವಾರ್ಸೊ, ಮತ್ತು ಲೈಪ್ಝಿಗ್, ಹೆಸರಿಸಬಹುದಾದ ಕೆಲವು ನಗರಗಳು. ಲೆನಿನ್ಗ್ರಾಡ್, ಮಾಸ್ಕೋ ಮತ್ತು ಒಡೆಸ್ಸಾಗಳನ್ನು ಕೂಡಾ ಸ್ವತಂತ್ರವಾಗಿ ಸಂದರ್ಶಿಸಲು ಜನರು ಬಯಸುತ್ತಾರೆ. ಅದರಂತೆಯೇ, ಪೂರ್ವ ಯೂರೋಪಿನ ಜನರು ಪಶ್ಚಿಮಕ್ಕೂ ಭೇಟಿ ನೀಡಲು ಆಶಿಸುತ್ತಾರೆ. ಖಂಡಿತವಾಗಿಯೂ, ಅಂತರ್-ರಾಷ್ಟ್ರೀಯ ಪ್ರವಾಸಗಳು ಪೂರ್ವಕಲ್ಪಿತ ಅವಿಚಾರಗಳ ಮತ್ತು ಅಜ್ಞಾನದ ಪ್ರತಿಬಂಧಕಗಳನ್ನು ತೊಡೆದು ಹಾಕಲು ನೆರವಾಗುತ್ತವೆ. ಅನೇಕ ಪ್ರವಾಸಿಗಳು ಕಂಡುಕೊಂಡಂತೆ, ಸಮುದ್ರ ತೀರದಲ್ಲಿ ಹಿಂದೆ ವೈರಿಗಳೆಂದು ಎಣಿಸಲ್ಪಡುವವರೊಂದಿಗೆ ಸಮಾನವಾಗಿ ಪಾಲು ತೆಗೆದುಕೊಳ್ಳುವದರಿಂದ, ವೈರತ್ವಗಳು ಬಲುಬೇಗನೆ ಕರಗಲ್ಪಡಬಹುದು.
ಬಿದ್ದ ಗೋಡೆಯು ಲಕ್ಷಾಂತರ ಜನರನ್ನು ಆಕರ್ಷಿಸುವಂಥ ಇನ್ನೊಂದು ಸಂಗತಿ ಇದೆ—ಇತರ ರಾಷ್ಟ್ರಗಳಲ್ಲಿರುವ ಅವರ ಧಾರ್ಮಿಕ ಸಹ ವಿಶ್ವಾಸಿಗಳೊಂದಿಗೆ ಸ್ವತಂತ್ರವಾಗಿ ಸಹವಾಸ ಮಾಡುವ ಸಾಧ್ಯತೆಯೇ. ಇದು ಎಷ್ಟರ ಮಟ್ಟಿಗೆ ಸಾಧ್ಯವಾಗಬಹುದು? ಪ್ರಾಚ್ಯ ಯೂರೋಪಿನಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಯಾವ ಬದಲಾವಣೆಗಳು ಆಗುತ್ತಾ ಇವೆ? ಈ ಮತ್ತು ಇತರ ಪ್ರಶ್ನೆಗಳನ್ನು ಮುಂದಿನ ಲೇಖನವು ಪರಿಗಣಿಸಲಿದೆ. (g91 1/8)
[ಅಧ್ಯಯನ ಪ್ರಶ್ನೆಗಳು]
a ಬರ್ಲಿನ್ ಗೋಡೆಯು 47 ಕಿಲೋಮೀಟರ್ ಉದ್ದವಿದ್ದು, ಪೂರ್ವ ಮತ್ತು ಪಶ್ಚಿಮ ಬರ್ಲಿನ್ನನ್ನು ಪ್ರತ್ಯೇಕಿಸುತ್ತದೆ, ಪಶ್ಚಿಮಕ್ಕೆ ನಿರಾಶ್ರಿತರು ವಲಸೆಹೋಗುವದನ್ನು ತಡೆಯಲು 1961ರಲ್ಲಿ ಪೂರ್ವ ಜರ್ಮನಿಯಿಂದ ಕಟ್ಟಲ್ಪಟ್ಟಿತ್ತು.
b ಆ ಎಂಟು ದೇಶಗಳು ಜೆಕಸ್ಲೊವಾಕಿಯಾ, ಹಂಗೆರಿ, ರೊಮಾನಿಯಾ, ಬುಲ್ಗೇರಿಯಾ, ಪೊಲೇಂಡ್, ಪೂರ್ವ ಜರ್ಮನಿ, ಆಲ್ಬಾನಿಯಾ ಮತ್ತು ಯೂಗೋಸ್ಲಾವಿಯಾ ಆಗಿದ್ದವು.
[ಪುಟ 5ರಲ್ಲಿರುವಚಿತ್ರ]
(For fully formatted text, see publication)
ಬರ್ಲಿನ್
ಜರ್ಮನಿ
ಪೊಲೇಂಡ್
ಯು.ಎಸ್.ಎಸ್.ಆರ್.
ಜೆಕಸ್ಲೊವಾಕಿಯಾ
ಹಂಗೆರಿ
ರೊಮಾನಿಯಾ
ಯೂಗೋಸ್ಲಾವಿಯಾ
ಬುಲ್ಗೇರಿಯಾ
ಆಲ್ಬೇನಿಯಾ