ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು
ಭಾಗ 5 ಅಮಿತವಾದ ಅಧಿಕಾರ ಆಶೀರ್ವಾದವೊ, ಶಾಪವೊ?
ಸ್ವಯಂಪ್ರಭುತ್ವ: ಅಮಿತವಾದ ಅಧಿಕಾರವಿರುವ ಒಬ್ಬ ವ್ಯಕ್ತಿಯ ಸರಕಾರ; ನಿರಂಕುಶ ಪ್ರಭುತ್ವ ವಾದ: ಆಳಲ್ಪಡುವವರ ಒಪ್ಪಿಗೆಯಿಲ್ಲದೆ ಆಳುವ ಅಧಿಕಾರವನ್ನು ಉಪಯೋಗಿಸುವುದು, ಸರ್ವಾಧಿಕಾರಕ್ಕಿಂತ ಕಡಮೆ ವಿಪರೀತ; ನಿರಂಕುಶಾಧಿಕಾರ: ಶಾಸನದಿಂದಾಗಲಿ ಯಾವ ಅಧಿಕಾರಿ ಮಂಡಲಿಯಿಂದಾಗಲಿ ಮಿತಿಗೊಳಗಾಗದ ಸರ್ವಾಧಿಕಾರವಿರುವ ಆಳುವವನ ಸರಕಾರ; ಕೇಂದ್ರೀಕೃತ ಸರ್ವಾಧಿಕಾರ: ಸರಕಾರೀ ಅಧಿಕಾರಕ್ಕೆ ಪೌರರನ್ನು ಸುಮಾರು ಪೂರ್ತಿಯಾಗಿ ಅಧೀನ ಮಾಡುವ ಸ್ವಾಯತ್ತಾಧಿಕಾರಿ ಮಂಡಲಿಯಿಂದ ಕೇಂದ್ರೀಕೃತ ನಿಯಂತ್ರಣ.
ಜಾಸ್ತಿ ನಿಯಂತ್ರಣ, ಆದರೆ ಕಡಮೆ ಸ್ವಾತಂತ್ರ್ಯ ಕೊಡುವ ನಿರಂಕುಶ ಸರಕಾರಗಳು “ದಬ್ಬಾಳಿಕೆಯ” “ಪ್ರಜಾಪೀಡಕ” ಮತ್ತು “ಕ್ರೂರ” ಎಂಬ ನಾಮ ವಿಶೇಷಣಗಳನ್ನು ಒಡನೆ ಮನಸ್ಸಿಗೆ ತರುತ್ತವೆ. ತೀರಾ ರಾಷ್ಟ್ರೀಯ ಭಾವನೆಯ ಈ ಸರಕಾರಗಳು ಸರಕಾರದ ಪ್ರತಿಯೊಂದು ಇಲಾಖೆಯನ್ನು ನಿಯಂತ್ರಿಸಿ, ತಮ್ಮ ಸಕಲ ನಾಗರಿಕರ ಮೇಲೆ ಕಟ್ಟುನಿಟ್ಟಾಗಿ ಕಣ್ಣಿಟ್ಟು, ರಾಷ್ಟ್ರೀಯ ಹಿತವನ್ನು ಬೆಳೆಸದ ಚಟುವಟಿಕೆಗಳನ್ನು ಅವು ಎಷ್ಟು ಹಾನಿರಹಿತವಾಗಿದ್ದರೂ ನಿಷೇಧಿಸುತ್ತವೆ. ದುಃಖಕರವಾಗಿ, ಮಾನವ ಇತಿಹಾಸದಲ್ಲಿ ವರದಿ ಮಾಡಲು ನಿರಂಕುಶಾಧಿಕಾರದ ಸರಕಾರಗಳಿಗೆ ಕೊರತೆಯೇನೂ ಇಲ್ಲ.
ಮಟ್ಟದ ಪ್ರಶ್ನೆ
ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಸಾರ್ ಚಕ್ರವರ್ತಿಗಳ ರಷ್ಯನ್ ಸರಕಾರ ಪೂರ್ತಿ ಸ್ವಯಂ ಪ್ರಭುತ್ವವಾಗುವಷ್ಟು ಹತ್ತಿರ ಬಂತು.” ಆದರೆ ಸಕಲ ನಿರಂಕುಶ ಪ್ರಭುತ್ವಗಳೂ ಸರ್ವಾಧಿಕಾರಗಳಲ್ಲ; ಅದು ಅಧಿಕಾಂಶ ಮಟ್ಟದ ಪ್ರಶ್ನೆಯಾಗಿದೆ. ಮತ್ತು ಸಕಲ ನಿರಂಕುಶ ಪ್ರಭುತ್ವಗಳೂ ಸ್ವಯಂ ಪ್ರಭುತ್ವ, ಅಂದರೆ ಒಬ್ಬ ಪ್ರಭು, ಒಬ್ಬ ನಿರಂಕುಶಾಧಿಕಾರಿ, ಒಬ್ಬ ಸಾರ (czar) ನಿಂದ ಆಳಲ್ಪಡುವುದಿಲ್ಲ. ಕೆಲವು ಸರಕಾರಗಳು ಒಂದು ಗುಂಪಿನಿಂದ, ಪ್ರಾಯಶಃ ಒಂದು ಮಿಲಿಟರಿ ಆಡಳಿತ ವರ್ಗದಿಂದ, ಅಥವಾ ಸ್ವಲ್ಪಜನಾಧಿಪತ್ಯದಿಂದ ಅಥವಾ ಧನಿಕಪ್ರಭುತ್ವದ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡಬಹುದು.
ಪ್ರಜಾಪ್ರಭುತ್ವಗಳು ಸಹ ನಿರಂಕುಶವಾಗಿರುವುದು ಸಾಧ್ಯ. ಅವುಗಳಲ್ಲಿ ರಾಜಕೀಯ ಪಕ್ಷಗಳಿವೆ, ಅವು ಚುನಾವಣೆಗಳನ್ನು ನಡಿಸುತ್ತವೆ, ನ್ಯಾಯ ನೀಡಲು ಕೋರ್ಟುಗಳು ಅವುಗಳಲ್ಲಿವೆ, ಪಾರ್ಲಿಮೆಂಟು ಯಾ ಶಾಸನ ಸಭೆಗಳು ಅಲ್ಲಿವೆ ಎಂಬುದು ಸತ್ಯ. ಆದರೂ, ಈ ವಿವಿಧ ಸಂಸ್ಥೆಗಳನ್ನು ಅದು ತನ್ನ ನಿಯಂತ್ರಣದಲ್ಲಿಟ್ಟುಕೊಂಡು, ತಾನು ಹೇಳುವಂತೆ ನಡೆಯಲು ಅವುಗಳನ್ನು ಬಲಾತ್ಕರಿಸುತ್ತದೊ ಅಷ್ಟರ ಮಟ್ಟಿಗೆ, ರಚನೆ ಯಾವುದೇ ಇರಲಿ, ಅವು ನಿರಂಕುಶವಾಗಿವೆ. ಬೇಕೆಂದು ಅದನ್ನು ಹಾಗೆ ರೂಪಿಸಲಾಗಿದೆ ಎಂದು ಇದರ ಅರ್ಥವಲ್ಲ. ಯುದ್ಧ ಸಮಯದಲ್ಲಿ ಅಥವಾ ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ, ಸರಕಾರಕ್ಕೆ ತುರ್ತು ಅಧಿಕಾರದ ಆವಶ್ಯಕತೆ ಬಂದಿದಿರ್ದಬಹುದು. ಬಳಿಕ ತುರ್ತು ಪರಿಸ್ಥಿತಿ ಹೋಗಿ ಬಿಟ್ಟಿದ್ದರೂ ತುರ್ತು ಅಧಿಕಾರ ಹೋಗದೆ ಇದ್ದಿರಬಹುದು.
ರಾಜ ಪ್ರಭುತ್ವಗಳು ವಿವಿಧ ಮಟ್ಟಗಳಲ್ಲಿ ನಿರಂಕುಶವಾಗಿವೆ. ಆದರೆ ನಿರಂಕುಶ ರಾಜ ಪ್ರಭುತ್ವಗಳನ್ನು ಈಗ ಅಧಿಕಾಂಶ ಪರಿಮಿತ ರಾಜ ಪ್ರಭುತ್ವಗಳು ಸ್ಥಾನಭರ್ತಿ ಮಾಡಿವೆ. ಶಾಸನ ಸಭೆಗಳು ಮತ್ತು ಲಿಖಿತ ಸಂವಿಧಾನಗಳು ಇಂಥ ರಾಜ ಪ್ರಭುತ್ವಗಳ ಅಧಿಕಾರವನ್ನು ಮಿತಕ್ಕೊಳಪಡಿಸಬಹುದು. ಹೀಗೆ ನಿರಂಕುಶಾಧಿಕಾರದ ಸಂಭವವನ್ನು ಕಡಮೆ ಮಾಡಬಹುದು. ಹೀಗೆ, ಇಂದಿನ ಪರಿಮಿತ ರಾಜ ಪ್ರಭುತ್ವಗಳಲ್ಲಿ ಕಂಡು ಬರುವ ವೈಯಕ್ತಿಕ ಸ್ವಾತಂತ್ರ್ಯಗಳು ಗತಕಾಲದ ನಿರಂಕುಶ ರಾಜ ಪ್ರಭುತ್ವಗಳಲ್ಲಿ ಇದ್ದುದಕ್ಕಿಂತ ಎಷ್ಟೋ ಹೆಚ್ಚಿನ ಮಟ್ಟದಲ್ಲಿವೆ.
ನಿರಂಕುಶ ರಾಜ ಪ್ರಭುತ್ವಗಳು ಸಾಮಾನ್ಯವಾಗಿದ್ದಾಗಲೂ ಅವುಗಳ ಅಧಿಕಾರಕ್ಕೆ ಮಿತಿಯಿತ್ತು. ಇತಿಹಾಸದ ಪ್ರೊಫೆಸರ್ ಒರೆಸ್ಟ್ ರೇನಮ್ ವಿವರಿಸುವುದೇನಂದರೆ “ಹೆಚ್ಚಿನ ಅರಸರಿಗೆ ಹಿಟ್ಲರ್, ಮುಸೊಲಿನಿ ಯಾ ಸ್ಟ್ಯಾಲಿನರಂತೆ ತಮ್ಮ ಪ್ರಜೆಗಳನ್ನು ಪೂರ್ತಿ ಅಂಕೆಯಲ್ಲಿಟ್ಟುಕೊಳ್ಳುವ ಅಥವಾ ಕುಲಸಂಬಂಧವಾದ ಮತ್ತು ಸಾಂಸ್ಕೃತಿಕ ಅಲ್ಪ ಸಂಖ್ಯಾತರನ್ನು ನಿರ್ನಾಮ ಮಾಡುವ ಚಿತ್ತವೃತ್ತಯಾಗಲಿ ಶಕ್ತಿಯಾಗಲಿ ಇರಲಿಲ್ಲ.” ಒಬ್ಬ ರಾಜನ ಉನ್ನತ ಮಟ್ಟದ ನೈತಿಕತೆ ಮತ್ತು ಉತ್ತಮ ಗುಣಗಳು—ಇಲ್ಲವೆ ಅವುಗಳ ಕೊರತೆ—ನಿರ್ಧಾರಕವಾಗಿತ್ತೆಂಬುದು ವ್ಯಕ್ತ. ಹೇಗೂ ರೇನಮ್ ಹೇಳುವುದು: “ಯಾವ ನಿರಂಕುಶ ರಾಜ ಪ್ರಭುತ್ವವೂ ಸಾಂಸ್ಕೃತಿಕ ಹಾಗೂ ಆರ್ಥಿಕ ಕೇಂದ್ರೀಕರಣದಲ್ಲಿ ಆಧುನಿಕ ಸರ್ವಾಧಿಕಾರ ಸರಕಾರಗಳನ್ನು ಸಮೀಪಿಸಿದ್ದಿಲ್ಲ.”
ಸರ್ವಾಧಿಕಾರಕ್ಕೆ ಗುರಿಯಿಡುವುದು
ಇಟೆಲಿ, ರಷ್ಯ ಮತ್ತು ಜರ್ಮನಿಯಲ್ಲಿ, 1920ಗಳಲ್ಲಿ ಮತ್ತು 1930ಗಳಲ್ಲಿ ಒಂದು ಹೊಸ ರೀತಿಯ, ಅದನ್ನು ಯೋಗ್ಯವಾಗಿ ವರ್ಣಿಸಲು ಒಂದು ಹೊಸ ಪದವೇ ಬೇಕಾದ ನಿರಂಕುಶ ಪ್ರಭುತ್ವ ಸರಕಾರವು ಲೋಕರಂಗವನ್ನು ಪ್ರವೇಶಿಸಿತು. ಈ ದೇಶಗಳಲ್ಲಿ ಮಾಧ್ಯಮಗಳು ಸರಕಾರದ ನಿಯಂತ್ರಣದಲ್ಲಿದ್ದವು. ಪೊಲೀಸರು ಜನರ ಸೇವಕರಾಗಿರದೆ ಆಳುವ ರಾಜಕೀಯ ಪಕ್ಷದ ಸೇವಕರಾಗಿದ್ದರು. ಪ್ರಚಾರ, ದೋಷ ವಿಮರ್ಶನಾಧಿಕಾರ, ಒಂದು ನಿರ್ದಿಷ್ಟ ಪದ್ಧತಿಗೆ ಹೊಂದಿಕೊಳ್ಳುವಿಕೆ, ಗುಪ್ತ ಪೊಲೀಸರ ಕಣ್ಗಾವಲು ಮತ್ತು ಬಲಾತ್ಕಾರ ಸಹ ವಿರೋಧವನ್ನು ಅಡಗಿಸಲು ಉಪಯೋಗಿಸಲಾಗುತ್ತಿತ್ತು. ಸರಕಾರದ ಅಧಿಕೃತ ರಾಜಕೀಯ ಮತ್ತು ಸಾಮಾಜಿಕ ಭಾವನಾಶಾಸ್ತ್ರವನ್ನು ತಮ್ಮದಾಗಿ ಮಾಡಿಕೊಳ್ಳಲು ಪೌರರನ್ನು ಬಲಾತ್ಕರಿಸಲಾಯಿತು. ಇದನ್ನು ನಿರಾಕರಿಸಿದವರನ್ನು ದ್ರೋಹಿಗಳೆಂದು ಹೇಳಿ ಕ್ರಮ ಕೈಕೊಳ್ಳಲಾಯಿತು. “ಸರ್ವಾಧಿಕಾರ” ವೆಂಬ ಪದ ಸಮಂಜಸವಾಗಿ ಕಂಡು ಬಂತು. ತನ್ನ ಸ್ವಂತ ಗುರಿಗಳನ್ನು ಬೆನ್ನಟ್ಟುತ್ತಿದ್ದ, ತನ್ನ ಸಕಲ ಪೌರರನ್ನು ಪೂರ್ತಿ ಹಿಡಿತದಲ್ಲಿಟ್ಟುಕೊಂಡ ಸರಕಾರ ಅದಾಗಿತ್ತು.
ಇನ್ಫರ್ಮೇಷನೆನ್ ಸುರ್ ಪೊಲಿಟಿಷೆನ್ ಬಿಲ್ಡಂಗ್ (ರಾಜಕೀಯ ಶಿಕ್ಷಣದ ಮಾಹಿತಿ) ವಿವರಿಸುವುದು: “ನಿರಂಕುಶ ಪ್ರಭುತ್ವಕ್ಕೆ ವ್ಯತಿರಿಕ್ತವಾಗಿ ಸರ್ವಾಧಿಕಾರಕ್ಕೆ ಗುರಿಯಿಡುವ ಸರಕಾರವು ಅಧಿಕಾರ ಸ್ಥಾನಗಳನ್ನು ವಶಪಡಿಸಿಕೊಳ್ಳುವುದರಿಂದ ತೃಪ್ತಿಹೊಂದುವುದಿಲ್ಲ. ಪೌರರಿಗೆ ಸಂಬಂಧಸೂಚಕ ಸ್ವಾತಂತ್ರ್ಯವನ್ನು ಮಿತಿಯಾಗಿ ಕೊಡಲು ಅದಕ್ಕೆ ಇಚ್ಫೆಯಿಲ್ಲ. ಬದಲಿಗೆ ಅದು ಅವರಿಂದ ಸದಾ ಅಧೀನತೆ ಮತ್ತು ಕ್ರಿಯಾಶೀಲ ತಾತ್ವಿಕ ಬೆಂಬಲವನ್ನು ಹಕ್ಕಿನಿಂದ ಕೇಳುತ್ತದೆ. ಈ ಅಪರಿಮಿತ ಹಕ್ಕೊತ್ತಾಯಗಳು, ಸಾಮಾನ್ಯವಾಗಿ ಸರಕಾರವು ಕೈ ಹಾಕದ ಕ್ಷೇತ್ರಗಳಾದ ಕುಟುಂಬ, ಧರ್ಮ, ಮತ್ತು ಬಿಡು ಸಮಯದಂಥ ವಿಷಯಗಳನ್ನು ಪ್ರಭಾವಿಸಲು ಸರ್ವಾಧಿಕಾರದ ಸರಕಾರವನ್ನು ಕೇಳಿಕೊಳ್ಳುತ್ತವೆ. ಮತ್ತು ಈ ಹಕ್ಕೊತ್ತಾಯಗಳನ್ನು ತೃಪ್ತಿಪಡಿಸಲು ಸರ್ವಾಧಿಕಾರದ ಸರಕಾರವು ಯಾವಾಗಲೂ ಪ್ರತಿ ವ್ಯಕ್ತಿಯ ಮೇಲೆ ಕಣ್ಣಿಡಲು ಸಾಧ್ಯವಿರುವ ಒಂದು ಸಂಘಟನಾ ಬಲೆಯನ್ನು ಹಾಕಬೇಕು.”
ಹೌದು, ಸರಕಾರ ಮತ್ತು ಅದರ ಅಭಿರುಚಿಗಳ ದೃಷ್ಟಿಯಲ್ಲಿ, ಸರ್ವಾಧಿಕಾರದ ಸರಕಾರವು ಬಹು ಕಾರ್ಯಸಾಧಕವೆಂಬುದು ನಿಶ್ಚಯ. ಆದರೆ ಇದನ್ನು ಸಂರಕ್ಷಿಸುತ್ತಾ ಹೋಗುವುದು ಅಸಾಧ್ಯ, ಎನ್ನುತ್ತಾರೆ ಪತ್ರಿಕೋದ್ಯೋಗಿ ಚಾರ್ಲ್ಸ್ ಕ್ರಾತ್ಯಾಮರ್. ನಿಯಂತ್ರಿಸಲು ಸಾಧ್ಯವಾಗುವುದಕ್ಕಿಂತಲೂ ಹೆಚ್ಚು ವಿಷಯಗಳಿವೆ. “ತುಸು ಸಮಯಕ್ಕೆ ಒಬ್ಬನು ಜನರನ್ನು ಜೆಯ್ಲಿಗೆ ಹಾಕಬಹುದು, ಗುಂಡಿಕ್ಕಿ ಕೊಲ್ಲಬಹುದು. ಆದರೆ ಸ್ವಲ್ಪ ಸಮಯಾನಂತರ ನಿಮ್ಮಲ್ಲಿ ಗುಂಡು, ಜೆಯ್ಲು, ಶಕ್ತಿ ಮತ್ತು ಬಲಿಜನರು ಕೂಡ ಇಲ್ಲದೆ ಹೋಗುತ್ತಾರೆ. . . . ಸರ್ವಾಧಿಕಾರದ ಆದರ್ಶವನ್ನು ಚಿರಸ್ಥಾಯಿಯಾದ ವಿಪ್ಲವ ಮಾತ್ರ ಸಲ್ಲಿಸಬಲ್ಲದು, ಮತ್ತು ಚಿರಸ್ಥಾಯಿಯಾದ ವಿಪ್ಲವ ಅಸಾಧ್ಯ. ಪೀಡಕ ಪ್ರಭುತ್ವಕ್ಕೂ ನಿದ್ದೆ ಅವಶ್ಯ.
‘ಮಂದಿ ಸಮಾಜ’ ಕಾರಣಾತ್ಮಕವಾದದ್ದು
ಇಪ್ಪತ್ತನೆಯ ಶತಮಾನದಲ್ಲಿ ನಿರಂಕುಶ ಪ್ರಭುತ್ವವು, ವಿಶೇಷವಾಗಿ ಅದರ ಅತಿ ವಿಪರೀತವಾದ ಮತ್ತು ಸಫಲಗೊಂಡಿರುವ ಸರ್ವಾಧಿಕಾರದ ರೂಪದಲ್ಲಿ ಏಕೆ ಕಂಡು ಬಂದಿದೆಯೆಂಬುದಕ್ಕೆ ವಿವಿಧ ರೀತಿಯ ವಾದಗಳನ್ನು ನೀಡಲಾಗಿದೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಗ್ರಂಥಕ್ಕನುಸಾರ, “1900ಗಳ ಮೂರು ಭಾಗಗಳಲ್ಲಿ ಮೊದಲನೆಯ ಎರಡು ಭಾಗಗಳು ಮಹಾ ಬದಲಾವಣೆಯ, ಪ್ರಾಯಶಃ ಇತಿಹಾಸದಲ್ಲೆಲ್ಲ ಅತಿ ತ್ವರಿತವಾದ ಮತ್ತು ವ್ಯಾಪಕವಾದ ಬದಲಾವಣೆಯ ಕಾಲವಾಗಿತ್ತು.” ಇದು ನಿರಂಕುಶ ಪ್ರಭುತ್ವ ಪ್ರವೃತ್ತಿಗೆ ಹೆಚ್ಚು ಕಾರಣವಾಗಿತ್ತೆಂಬುದು ನಿಸ್ಸಂಶಯ.
ಜನಸಂಖ್ಯೆಯ ಸ್ಫೋಟ, ನಗರೀಕರಣ, ಮತ್ತು ಯಂತ್ರ ಕಲಾ ಪ್ರಗತಿಗಳು ಮಂದಿ ಸಮಾಜವೆಂದು ಕರೆಯಲಾಗಿರುವ ಆಧುನಿಕ ಅದ್ಭುತವನ್ನು ಸೃಷ್ಟಿಸಲು ಸಹಾಯ ಮಾಡಿವೆ. ಈ ಹೆಸರು ದೊಡ್ಡ, ಕೇಂದ್ರೀಕರಿಸಲ್ಪಟ್ಟ, ಕಚೇರಿ ಅಧಿಕಾರದ, ಮತ್ತು ವ್ಯಕ್ತಿ ಸ್ವರೂಪವಿಲ್ಲದ ಸಂಘಗಳಿರುವ ಉದ್ಯಮ ಸಮಾಜವನ್ನು ಸೂಚಿಸುತ್ತದೆ. ಈ ಸಮಾಜದಲ್ಲಿ ಮಾನವ ಸಂಬಂಧ ಆಳವಿಲ್ಲದ್ದು ಮತ್ತು ಕಣ್ಷಿಕ. ಈ ಸಮಾಜದಲ್ಲಿ ಜನಸಾಮಾನ್ಯರಲ್ಲಿ ಒಂಟಿಗ ವ್ಯಕ್ತಿಗಳು ಸತತ ತಮ್ಮ ಮೂಲವನ್ನು ಮತ್ತು ಸಮಾಜ ಭಾವವನ್ನು ಹುಡುಕುತ್ತಿರುತ್ತಾರೆ.
ಮಂದಿ ಸಮಾಜವು ಸರ್ವಾಧಿಕಾರದ ಬೆಳವಣಿಗೆಗೆ ಎಷ್ಟರ ಮಟ್ಟಿಗೆ ಸಹಾಯ ಮಾಡಿದೆಯೆಂಬುದು ವಿವಾದಾತ್ಮಕ. ಜರ್ಮನಿಯಲ್ಲಿ ಹುಟ್ಟಿದ್ದ ಮಾಜಿ ರಾಜ್ಯ ವಿಜ್ಞಾನಿ ಹನ್ನ ಆ್ಯರೆಂಟ್ ಅವರಿಗನುಸಾರ, ಅದರ ಪ್ರಭಾವ ಅಲ್ಪವಾಗಿರಲಿಲ್ಲ. ದಿ ಆರಿಜಿನ್ಸ್ ಆಫ್ ಟೊಟ್ಯಾಲಿಟೇರಿಯನಿಸ್ಮ್ ಎಂಬ ಅವರ ಪುಸ್ತಕಾನುಸಾರ, ಸರ್ವಾಧಿಕಾರವು ಜನರ ವರ್ಗಗಳ ಮೇಲಲ್ಲ, ಅದರ ಜನಸಂಖ್ಯೆಯ ಮೇಲೆ, ಯಾರು “ತಮ್ಮ ದೊಡ್ಡ ಸಂಖ್ಯೆ, ಯಾ ಔದಾಸೀನ್ಯ, ಯಾ ಇವೆರಡೂ ಸಂಗತಿಗಳ ಕಾರಣ ಸಾಮಾನ್ಯ ಹಿತ, ರಾಜಕೀಯ ಪಕ್ಷ ಯಾ ಸ್ಥಳೀಯ ಸರಕಾರ ಯಾ ಕಸಬುದಾರ ಸಂಸ್ಥೆ ಯಾ ಟ್ರೇಡ್ ಯೂನಿಯನುಗಳಾಗಿ ಸಂಯೋಜಿಸಲ್ಪಡುವುದು ಅಸಾಧ್ಯವೂ ಅಂಥ ಸಾಮಾನ್ಯ ಜನಸಮೂಹದ ಮೇಲೆ ಕಟ್ಟಲ್ಪಟ್ಟಿದೆ.”
ಸರ್ವಾಧಿಕಾರದ ಏಳಿಗೆಗೆ ಸಹಾಯ ಮಾಡಿರುವ ಇತರ ಸಂಗತಿಗಳನ್ನೂ ಆ್ಯರೆಂಟ್ ಅವರು ತಿಳಿಸುತ್ತಾರೆ: ಸಾಮಾಜ್ಯ ಶಾಹಿ, ಸೆಮಿಟಿಕ್ ವಂಶ ವಿರೋಧ, ಮತ್ತು ಸಾಂಪ್ರದಾಯಿಕ ರಾಷ್ಟ್ರ-ಸರಕಾರದ ಶಿಥಿಲವಾಗುವಿಕೆ.
ಸಾಮ್ರಾಜ್ಯ ಶಾಹಿ?
ಈ ಶತಮಾನ ಆರಂಭವಾಗುವುದಕ್ಕೆ ತುಸು ಮೊದಲು ವಸಾಹತು ಶಾಹಿ ಪದ್ಧತಿ ಮೇಲೇರಿ ಬಂತು. ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಾನ್ ಆಟ್ಕಿನ್ಸನ್ ಹಾಬ್ಸನ್ 1884ರಿಂದ 1914ರ ವರೆಗಿನ ಸಮಯವನ್ನು ಹೊಸ ಸಾಮ್ರಾಜ್ಯ ಶಾಹಿ ಪದ್ಧತಿಯ ಸಮಯವೆಂದು ಕರೆಯುತ್ತಾರೆ. ಇದು ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸುವರೆ ರಾಜ ಪ್ರಭುತ್ವಗಳ ಯಾ ಪ್ರಜಾಪ್ರಭುತ್ವಗಳ ತಮ್ಮ ನಿರಂಕುಶ ಅಧಿಕಾರದ ಉಪಯೋಗವಲ್ಲದೆ ಇನ್ನೇನೂ ಅಲ್ಲ. ಇತರ ದೇಶಗಳ ಗೆಲ್ಲುವಿಕೆಯು ಅವನ್ನು ನೇರವಾಗಿ ಗಳಿಸುವ ಮೂಲಕ ಇಲ್ಲವೆ ಅವರ ರಾಜಕೀಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರೋಕ್ಷವಾಗಿ ಆಧಿಪತ್ಯ ನಡೆಸುವ ಮೂಲಕ ಮಾಡಲ್ಪಟ್ಟಿತು. ಹಾಬ್ಸನ್ ಅವರು ಸಾಮ್ರಾಜ್ಯಶಾಹಿ ಪದ್ಧತಿಯನ್ನು ಅದು ಮುಖ್ಯವಾಗಿ ಆರ್ಥಿಕ ಪ್ರಶ್ನೆ ಎಂಬುದಾಗಿ ತರ್ಜುಮೆ ಮಾಡುತ್ತಾರೆ. ಈ ವಸಾಹತು ಶಾಹಿ ಪದ್ಧತಿಗೆ ಅನೇಕ ವೇಳೆ ಆರ್ಥಿಕ ವಿಕಾಸ ಮತ್ತು ರಾಷ್ಟ್ರದ ವಸ್ತುಗಳಿಗೆ ಹೊಸ ಮಾರುಕಟ್ಟೆಗಳನ್ನು ಹುಡುಕುವುದೇ ಗುರಿಯಾಗಿತ್ತಲ್ಲದೆ ರಾಜಕೀಯ ಅಧಿಕಾರದ ಪ್ರಶ್ನೆ ಕಡಮೆಯಾಗಿತ್ತು.
ಆಫ್ರಿಕಕ್ಕೆ ಹಿಗ್ಗಾಮುಗ್ಗಾ ಹೋರಾಟ ಎಂದು ಪ್ರಸಿದ್ಧವಾದ ಘಟನೆಯಲ್ಲಿ ಇದು ವ್ಯಕ್ತವಾದಂತೆ ಇನ್ನೆಲ್ಲಿಯೂ ಆಗಲಿಲ್ಲ. 1880ಗಳ ಆದಿ ಭಾಗದಲ್ಲಿಯೆ, ಬ್ರಿಟನ್, ಫ್ರಾನ್ಸ್ ಮತ್ತು ಪೋರ್ಚುಗಲ್ ದೇಶಗಳಿಗೆ ಆಫ್ರಿಕದಲ್ಲಿ ಅನೇಕ ವಸಾಹತುಗಳಿದ್ದವು. ಆದರೆ ಬೆಲ್ಚಿಯಮ್ ಮತ್ತು ಜರ್ಮನಿ ದೇಶಗಳು ಸಹ ಅತ್ತ ಆಸೆ ತೋರಿಸಿದಾಗ ನುಗ್ಗಾಟ ಆರಂಭವಾಯಿತು. ಇಥಿಯೋಪ್ಯ ಮತ್ತು ಲೈಬೀರಿಯವನ್ನು ಬಿಟ್ಟರೆ ಇಡೀ ಆಫ್ರಿಕ ಬೇಗನೆ ಯೂರೋಪಿಯನ್ ಆಳಿಕೆಯ ಕೆಳಗೆ ಬಂತು. ಬಿಳಿಯ “ಕ್ರೈಸ್ತ” ನೆಲಸುನಾಡಿಗರು ಕಪ್ಪು ಆಫ್ರಿಕನರ ಜಮೀನನ್ನು ಕಿತ್ತುಕೊಂಡಾಗ ಅವರು ಸುಮ್ಮನೆ ನಿಂತು ನೋಡುವ ಬಲಾತ್ಕಾರಕ್ಕೊಳಗಾದರು.
ಅಮೆರಿಕ ಸಹ ಒಂದು ಸಾಮ್ರಾಜ್ಯ ಶಾಹಿ ರಾಷ್ಟ್ರವಾಯಿತು. 19ನೆಯ ಶತಮಾನದ ಅಂತ್ಯಭಾಗದಲ್ಲಿ ಅದು ಅಲಾಸ್ಕ, ಹವಾಯಿ, ಫಿಲಿಪ್ಪೀನ್ ದ್ವೀಪಗಳು, ಗುವಾಮ್, ಸಮೋಅ ಮತ್ತು ಇತರ ಪೆಸಿಫಿಕ್ ದ್ವೀಪಗಳು ಹಾಗೂ ಪೋರ್ಟೊ ರಿಕೊ ಮತ್ತು ಇತರ ಕೆರಿಬಿಯನ್ ದ್ವೀಪಗಳನ್ನು ಗಳಿಸಿತು. ಕೊಲಂಬಿಯ ಯೂನಿವರ್ಸಿಟಿಯ ಇತಿಹಾಸದ ಪ್ರೊಫೆಸರರಾದ ಹೆನ್ರಿ ಎಫ್. ಗ್ರಾಫ್ ಅವರ ಒಂದು ಹೇಳಿಕೆಯು ಕ್ಷಣಿಕಕ್ಕಿಂತ ಹೆಚ್ಚು ಸ್ವಾರಸ್ಯಕರವಾಗಿದೆ. ಅವರು ಬರೆದುದು: “ಆಧುನಿಕ ಸಾಮ್ರಾಜ್ಯಶಾಹಿ ಪದ್ಧತಿಯಲ್ಲಿ ಕ್ರೈಸ್ತ ಮಿಶನೆರಿಗಳ ಚಟುವಟಿಕೆಗಳು ಅಂತಾರಾಷ್ಟ್ರೀಯ ನೀತಿ ವಿಮರ್ಶಕ ಚಟುವಟಿಕೆಗಳಷ್ಟೇ ಪ್ರಭಾವ ಬೀರಿವೆ.” ಆದರೆ ಈ ಕ್ರೈಸ್ತ ಪ್ರಪಂಚದ ಮಿಶನೆರಿಗಳು ತಾಜಾ ಕ್ರೈಸ್ತರಾಗಿರುತ್ತಿದ್ದರೆ, ಅವರು ಯೇಸುವಿನ ಮಾತುಗಳಿಗನುಸಾರ, ಆಫ್ರಿಕದ ಹಾಗೂ ಇತರ ವಸಾಹತು ಸಾಮ್ರಾಜ್ಯಗಳ ಈ ನುಗ್ಗಾಟದಲ್ಲಿ ರಾಜಕೀಯವಾಗಿ ತಟಸ್ಥರಾಗಿರುತ್ತಿದ್ದರು. ಯೇಸು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ.”—ಯೋಹಾನ 17:16; ಯಾಕೋಬ 4:4.
ಸಾಮ್ರಾಜ್ಯ ಶಾಹಿ ಶಕವು 1914ರಲ್ಲಿ ಅಂತ್ಯವಾಯಿತಂತೆ. ಆದರೂ ಅದರ ನಿರಂಕುಶ ಮನೋಭಾವದ ಕುರಿತು ಇದು ಸತ್ಯವಲ್ಲ. ಈ ಮನೋಭಾವವು 1890ಗಳಲ್ಲಿ, ಈಗ ದಕ್ಷಿಣ ಆಫ್ರಿಕದ ಭಾಗವಾಗಿರುವ ಒಂದು ದೇಶದ ಪ್ರಧಾನ ಮಂತ್ರಿ ಸೆಸಿಲ್ ರೋಡ್ಸ್ ಅವರಿಂದ “ವಿಸ್ತರಣವೇ ಸರ್ವಸ್ವ” ಎಂದು ಹೇಳಿದಾಗ ಸೂಚಿಸಲ್ಪಟ್ಟಿತು. ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣದಲ್ಲಿ ಪ್ರೇರಕ ಶಕ್ತಿಯಾಗಿದ್ದ ಅವರು ಹೆಮ್ಮೆಯಿಂದ ಹೇಳಿದ್ದು: “ಸಾಧ್ಯವಿದ್ದದ್ದಲ್ಲಿ ನಾನು ಗ್ರಹಗಳನ್ನೂ ಸ್ವಾಧೀನಪಡಿಸಿಕೊಳ್ಳುತ್ತಿದ್ದೆ.” ಈ ಸ್ವಹಿತ ಮನೋಭಾವ ಈಗಲೂ ರಾಷ್ಟ್ರಗಳು ಸಾಧ್ಯವಾಗುವಷ್ಟರ ಮಟ್ಟಿಗೆ ತಮ್ಮ ಸ್ವಂತ ಲಾಭಕ್ಕಾಗಿ ಇತರ ದೇಶಗಳ ರಾಜಕೀಯ ಮತ್ತು ಆರ್ಥಿಕ ಕಾರ್ಯನೀತಿಗಳನ್ನು ನಿಯಂತ್ರಿಸುವಂತೆ ಪ್ರೇರಿಸುತ್ತದೆ. ಉದಾಹರಣೆಗೆ, ಮಿಲಿಟರಿ ರೂಪದಲ್ಲಿ ಜಗತ್ತನ್ನು ಗೆಲ್ಲುವುದರಲ್ಲಿ ವಿಫಲಗೊಂಡ ಜಪಾನ್ ದೇಶದ ಮೇಲೆ ಅದೀಗ ಆರ್ಥಿಕವಾಗಿ ಲೋಕವನ್ನು ಗೆಲ್ಲಲು ಪ್ರಯತ್ನಿಸುತ್ತಿದೆ ಎಂಬ ಆರೋಪವಿದೆ.
ನಿರಂಕುಶ ಆಳಿಕೆಯನ್ನು ಉರುಳಿಸುವುದು ಪರಿಹಾರ ಮಾರ್ಗವೆ?
ಸೂತ್ರರಹಿತರಾದ ದುರಾಶೆಯ ಮಾನವರು ಉಪಯೋಗಿಸುವ ಅಮಿತವಾದ ಅಧಿಕಾರವು ಆಶೀರ್ವಾದವಲ್ಲ, ಶಾಪವಾಗಿದೆ. ಪುರಾತನ ಕಾಲದ ಸೊಲೊಮೋನ ರಾಜನ ಮಾತುಗಳು ಸಮಂಜಸವಾಗಿವೆ: “ಆಹಾ, ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ; ಸಂತಯಿಸುವವರೋ ಒಬ್ಬರೂ ಇರಲಿಲ್ಲ.”—ಪ್ರಸಂಗಿ 4:1.
ನಿರಂಕುಶ ಆಳಿಕೆಯಲ್ಲಿ “ಹಿಂಸೆಗೊಂಡವರ ಕಣ್ಣೀರು” ಹೇರಳವೆಂಬುದು ನಿಜ. ಆದರೂ 1987ರ ಪೆರೆಸ್ಟ್ರೈಕ ಪುಸ್ತಕದಲ್ಲಿ ಮಿಕಾಯೆಲ್ ಗಾರ್ಬಚೆವ್ ಎಚ್ಚರಿಸಿದ್ದು: “ನಿರೋಧಿಸಲು, ಬಲಾತ್ಕರಿಸಲು, ಲಂಚ ಕೊಡಲು, ಒಡೆಯಲು ಅಥವಾ ಭಗ್ನಗೊಳಿಸಲು ಸಾಧ್ಯ, ಆದರೆ ಒಂದು ನಿರ್ದಿಷ್ಟ ಸಮಯದ ವರೆಗೆ ಮಾತ್ರ ಇದು ಸಾಧ್ಯ.” ಇದರಂತೆ, “ಹಿಂಸಕರಿಗೆ ಬಹು ಬಲ”ವಿದ್ದರೂ ನಿರಂಕುಶ ಸರಕಾರಗಳ ಬೇಡಿಗಳನ್ನು ಕಿತ್ತೊಗೆಯಲು ಜನರು ಪದೇ ಪದೇ ದಂಗೆಯೆದ್ದಿದ್ದಾರೆ. 1989ರ ಡಿಸೆಂಬರಿನಲ್ಲಿ ರೊಮೇನಿಯದ ನಿಕೊಲೈ ಸ್ಯೂಚೆಸ್ಕ್ಯು ಮತ್ತು ಅವರ ಸೆಕ್ಯೂರಿಟೇಟ್ ಎಂಬ ರಕ್ಷಣಾ ಪಡೆಯ ರಕ್ತಮಯ ಪತನವು ಇದರ ಒಂದು ಉದಾಹರಣೆ.
ನಿರಂಕುಶ ಆಳಿಕೆಯನ್ನು ಉರುಳಿಸುವುದು ಉಪಶಮನವನ್ನು ತರುತ್ತದೆಂಬುದೇನೊ ನಿಜ. ಆದರೆ, ಒಂದು ಬರ್ಮೀಸ್ ನಾಣ್ಣುಡಿ ಗಮನಿಸುವಂತೆ, “ಹೊಸ ಪ್ರಭು ಬಂದಾಗ ಮಾತ್ರ ಹಳೆಯ ಪ್ರಭುವಿನ ಮೌಲ್ಯವನ್ನು ನೀವು ಗ್ರಹಿಸುತ್ತೀರಿ” ಎಂಬುದೂ ಸತ್ಯ. ಕೆಟ್ಟದ್ದರ ಸ್ಥಾನದಲ್ಲಿ ಅದಕ್ಕಿಂತಲೂ ಕೆಟ್ಟದಾದ ಇನ್ನೊಂದು ಬರಲಿಕ್ಕಿಲ್ಲವೆಂದು ಯಾರು ಖಾತರಿ ಕೊಟ್ಟಾರು?
ಒಂದೇ ಒಂದು ಉದಾಹರಣೆಯಾಗಿ, 1970ಗಳಲ್ಲಿ ನಿಕರಾಗುವದಲ್ಲಿ 43 ವರ್ಷಕಾಲ ಆಳಿದ ಲ್ಯಾಟಿನ್-ಅಮೆರಿಕನ್ ಆಳುವ ಮನೆತನವನ್ನು ಉರುಳಿಸಲಾಯಿತು. ಪರಿಸ್ಥಿತಿಯು ಉತ್ತಮವಾಗುವುದೆಂದು ಜನರಿಗೆ ತುಂಬ ನಿರೀಕ್ಷೆ ಇತ್ತು. ಆದರೆ ಹಾಗಾಯಿತೊ? ಹತ್ತು ವರ್ಷಗಳ ತರುವಾಯದ ಪರಿಸ್ಥಿತಿಯ ಕುರಿತು ವರ್ಣಿಸುತ್ತಾ ಒಂದು ಪತ್ರಿಕೆಯು, ಸರ್ವಾಧಿಕಾರದ ಕೆಳಗಿದ್ದ ದುರವಸ್ಥೆ ಈಗ “ಇನ್ನೂ ಕೆಟ್ಟದಾಗಿದೆ” ಎಂದು ಹೇಳಿತು. ಏರುತ್ತಿರುವ ಹಣದುಬ್ಬರದ ಕುರಿತು ಮಾತಾಡುತ್ತಾ ಆ ಪತ್ರಿಕೆಯು, ರಾಷ್ಟ್ರದ ಹಣ “ಕಾರ್ಯತಃ ನಿಷ್ಪಯ್ರೋಜಕ” ವೆಂದೂ “ಸಾರ್ವಜನಿಕ ಸಾರಿಗೆ ಹೆಸರಿಗೆ ಮಾತ್ರ ಇದೆ” ಯೆಂದೂ ಹೇಳಿ ದೇಶದ “ಅವಮಾನಕಾರಕವಾಗಿ ಸಾಲದ ಆರೋಗ್ಯ ಪರಾಮರಿಕೆ” ಯ ವಿಷಯ ಪ್ರಲಾಪಿಸಿ “ನ್ಯೂನ ಪೋಷಣೆ ಬೆಳೆಯುತ್ತಿರುವ ಕೊಲೆಗಾರ” ನೆಂದು ಹೇಳಿತು. ಸಮಯಾನಂತರ, ಚುನಾವಣೆ ಅನುಮತಿಸಲ್ಪಟ್ಟಾಗ, ಆಳುತ್ತಿದ್ದ ಅಧಿಕಾರಿಗಳು ಸೋಲಿಸಲ್ಪಟ್ಟರು.
ಮಾನವ ಆಳಿಕೆಯು ಅದರ ಪ್ರತಿಯೊಂದು ರೂಪದಲ್ಲಿಯೂ ಕೊರತೆಯುಳ್ಳದ್ದಾಗಿ ಕಂಡುಬಂದಿದೆಯೆಂಬುದು ಅತಿ ಸ್ಪಷ್ಟವಾಗಿಗಿರುವುದಿಲ್ಲವೆ? ಆದರೂ ಜನರು ಇನ್ನೂ ಆದರ್ಶ ಸರಕಾರವನ್ನು ಹುಡುಕುತ್ತಿದ್ದಾರೆ. ಇದು ನಿರಾಶೆಗೆ, ರಾಷ್ಟ್ರಗಳನ್ನು “ದುಃಖಶಾಮಕನು ಇಲ್ಲದ” ತೀರಾ ಹತಾಶೆಯ ಸ್ಥಿತಿಗೆ ನಡೆಸಬಲ್ಲದೆಂಬುದಕ್ಕೆ ಎರಡು ಎದ್ದು ಕಾಣುವ ಉದಾಹರಣೆಗಳನ್ನು ಮುಂದಿನ ಲೇಖನ ಚರ್ಚಿಸುವುದು. (g90 10/8)
[ಪುಟ 14 ರಲ್ಲಿರುವಚಿತ್ರ]
ಅಧಿಕಾಂಶ ಸರ್ವ ನಿರಂಕುಶಾಧಿಕಾರದ ಒಂದು ಉದಾಹರಣೆ ಸಾರ್ (czar) ರಾಜರುಗಳ ರಷ್ಯ
[ಕೃಪೆ]
Alexander II by Krüger, c. 1855