ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು
ನಮಗೆ ಸರಕಾರ ನಿಜವಾಗಿ ಆವಶ್ಯಕವೇ?
ಅರಾಜಕತೆ, [ಆ್ಯನರ್ಕಿ]: ರಾಜಕೀಯ ಅಧಿಕಾರದ ಯಾವ ರೂಪವೂ ಇಲ್ಲದ ಕಾರಣ ಜನರ ಸಮಾಜ ತಮಗೆ ಪೂರ್ತಿ ಸ್ವಾತಂತ್ರ್ಯವಿದೆಯೆಂದು ಹೇಳಿ ಸರಕಾರರಹಿತವಾಗಿರುವುದು.
ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಸಕಲ ವಿಧಗಳ ಮಾನವ ಸರಕಾರಗಳನ್ನು ಅಂತರ್ಗತವಾಗಿ ಅಸ್ಥಿರ ಮತ್ತು ಪರಿವರ್ತನಾತ್ಮಕವೆಂದು ಕರೆದನು. ಒಬ್ಬ ಲೇಖಕನಿಗನುಸಾರ, ಅವನು, “ಸಕಲ ಆಡಳಿತಗಳ ಸ್ಥಿರತೆಯನ್ನು ಕಾಲಕ್ಕಿರುವ ಕೊರೆಯುವ ಶಕ್ತಿ ಕೆಡಿಸುತ್ತದೆ” ಎಂದು ವಾದಿಸಿದನು.
ಇಂಥ ಸ್ಥಿತಿಗತಿಯ ವೀಕ್ಷಣದಲ್ಲಿ, ಕೆಲವರು ಸರಕಾರವೇ ಬೇಡ, ಅಥವಾ, ಎಷ್ಟು ಕಡಮೆ ಸಾಧ್ಯವೋ ಅಷ್ಟೆ ಸಾಕು ಎಂಬುದನ್ನು ಸಮರ್ಥಿಸಿದ್ದಾರೆ. ಆದರೆ ‘ಸರಕಾರದ ಇಲ್ಲಮೆ’ ಯನ್ನು ಸಮರ್ಥಿಸುವುದೆಂದರೆ ನಿಜವಾಗಿಯೂ “ರಾಜನಿಲ್ಲ” ಎಂಬರ್ಥದ ಗ್ರೀಕ್ ಪದದಿಂದ ತೆಗೆಯಲ್ಪಟ್ಟ ಅರಾಜಕತೆಗೆ ಕರೆಕೊಡುವುದೆಂದರ್ಥ.
“ಆನರ್ಕಿ” ಎಂಬ ಪದವನ್ನು ಸುಮಾರು 150 ವರ್ಷಗಳ ಹಿಂದೆ, ಫ್ರೆಂಚ್ ರಾಜಕೀಯ ಲೇಖಕ, ಪಿಯೆರ್-ಜೋಸೆಫ್ ಪ್ರೂಡೋನ್ ಉಪಯೋಗಿಸಿದ್ದನು. ಆದರೆ ಈ ಅರಾಜಕತೆಯ ತತ್ವವು ಸುಮಾರು 200 ವರ್ಷಗಳ ಹಿಂದೆ ಇಂಗ್ಲೆಂಡಿನ ಗೆರರ್ಡ್ ವಿನ್ಸ್ಟ್ಯಾನ್ಲಿ ಎಂಬವನಿಂದ ಸ್ಪಷ್ಟವಾಗಿಗಿ ನಿರೂಪಿಸಲ್ಪಟ್ಟಿತ್ತು. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ದಲ್ಲಿ ವಿವರಿಸಿರುವಂತೆ, “ಅರಾಜಕತಾವಾದಿಗಳಲ್ಲಿ ಆ ಬಳಿಕ ಮೂಲಸೂತ್ರಗಳಾಗಿ ಪರಿಣಮಿಸಿದವುಗಳನ್ನು ವಿನ್ಸ್ಟ್ಯಾನ್ಲಿ ಬರೆದಿಟ್ಟನು: ಅಧಿಕಾರವು ಕೆಡಿಸುತ್ತದೆ; ಸೊತ್ತು ಸ್ವಾತಂತ್ರ್ಯಕ್ಕೆ ಅಸಂಗತವಾಗಿದೆ; ಅಧಿಕಾರ ಮತ್ತು ಸೊತ್ತು ಇವೆರಡು ಪಾತಕಗಳನ್ನು ಹುಟ್ಟಿಸುತ್ತವೆ; ಆಳುವವರಿಲ್ಲದ, ಕೆಲಸ ಮತ್ತು ಉತ್ಪನ್ನಗಳಲ್ಲಿ ಭಾಗಿಗಳಾಗುವ ಸಮಾಜದಲ್ಲಿ ಮಾತ್ರ, ಆದರೆ ಮೇಲಿನಿಂದ ಹೇರಲಾಗಿರುವ ನಿಯಮಗಳಂತೆ ವರ್ತಿಸಿಯಲ್ಲ, ತಮ್ಮ ಮನಸ್ಸಾಕ್ಷಿಗನುಸಾರವಾಗಿ ನಡೆದುಕೊಂಡು, ಜನರು ಸ್ವತಂತ್ರರೂ ಸಂತೋಷಿಗಳೂ ಆಗಿರಬಲ್ಲರು.”
ಆದರೆ ಪ್ರತಿಯೊಂದು ಗುಂಪಿಗೆ ವರ್ತಿಸತಕ್ಕ ಚೌಕಟ್ಟೊಂದು ಅಗತ್ಯವೆಂದು ಅನುಭವ ನಮಗೆ ಕಲಿಸುವುದಿಲ್ಲವೇ? ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಗಮನಿಸುವುದು: “ಅತಿ ಆದಿ ಕಾಲಗಳಿಂದಲೂ ಒಂದಲ್ಲ ಒಂದು ವಿಧದ ಸರಕಾರವು ಪ್ರತಿಯೊಂದು ಸಮಾಜದ ಪ್ರಧಾನ ಭಾಗವಾಗಿತ್ತು.” ಅದು ವಿವರಿಸುವುದು: “ಪ್ರತಿಯೊಂದು ಜನರ ಗುಂಪಿನಲ್ಲಿ—ಕುಟುಂಬದಿಂದ ರಾಷ್ಟ್ರದ ತನಕ— ಅದರ ಸದಸ್ಯರ ಜೀವನಗಳ ಆಡಳಿತಕ್ಕಾಗಿ ವರ್ತನಾನಿಯಮಗಳಿದ್ದವು.” ಇಲ್ಲದಿರುವಲ್ಲಿ, ಅದರ ಎಲ್ಲಾ ಸದಸ್ಯರ ಪ್ರಯೋಜನಾರ್ಥವಾಗಿ ಅದು ತನ್ನ ಉದ್ದೇಶಗಳನ್ನು ಹೇಗೆ ನೆರವೇರಿಸೀತು?
ಆದುದರಿಂದ, ಜನರಲ್ಲಿ ಅಧಿಕಾಂಶ ಮಂದಿ, ಕೆಲವು ಸಂಘಗಳಿಗೆ ಅಧಿಕಾರ ವಹಿಸುವ ಮತ್ತು ಜನರ ಸಾಮಾನ್ಯ ಹಿತಕ್ಕಾಗಿ ನಿರ್ಣಯಗಳನ್ನು ಮಾಡುವ ನ್ಯಾಯವಾದ ಹಕ್ಕಿದೆ ಎಂಬುದನ್ನು ಸಿದ್ಧಮನಸ್ಸಿನಿಂದ ಒಪ್ಪುವರು. ಸಮಾಜದ ಪರವಾಗಿ ನಿರ್ಣಯ ಮಾಡಲು ಸರಕಾರವಿಲ್ಲದಿರುವಲ್ಲಿ, ಪ್ರತಿಯೊಬ್ಬನು, ವಿನ್ಸ್ಟ್ಯಾನ್ಲಿ ಸೂಚಿಸಿದಂತೆ, ತನ್ನ ಮನಸ್ಸಾಕ್ಷಿಯನ್ನು ಅನುಸರಿಸುವಂತಾಗುವುದು. ಇದರಿಂದ ಏಕತೆ ಬೆಳೆದೀತೆ? ಯಾ, ಹೀಗಿರುವಲ್ಲಿ, ಪ್ರತಿಯೊಬ್ಬನು ತನ್ನ ಸ್ವಂತ ಅಭಿರುಚಿಯನ್ನು ಅನುಸರಿಸುವುದು ಮತ್ತು ಇದರಿಂದಾಗಿ ಇತರರ ಅಷ್ಟೆ ನ್ಯಾಯವಾದ ಹಕ್ಕುಗಳಿಗೆ ಹಾನಿ ತರುವುದು ಹೆಚ್ಚು ಸಂಭವನೀಯವಲ್ಲವೇ?
ಅರಾಜಕತೆಯ ಪರೀಕ್ಷಾ ಪ್ರಯೋಗವು ಮಾನವ ಸಂತತಿಯ ಸ್ಥಿತಿಯನ್ನು ಸುಧಾರಿಸುವುದರಲ್ಲಿ ತಪ್ಪಿಬಿದಿದ್ದೆ. ಸಮಾಜವನ್ನು ಅಸ್ಥಿರಗೊಳಿಸುವ, ತಮ್ಮನ್ನು ನಾಶಗೊಳಿಸುತ್ತದೆಂದು ತಾವು ಗ್ರಹಿಸುವುದನ್ನು ನಾಶಗೊಳಿಸುವ, 20 ನೆಯ ಶತಮಾನದ ಭಯವಾದಿಗಳ ಪ್ರಯತ್ನವೂ ಅದಕ್ಕಿಂತ ಹೆಚ್ಚು ಸಫಲಗೊಂಡಿರುವುದಿಲ್ಲ.
ಸರಳವಾಗಿ ಹೇಳುವುದಾದರೆ, ‘ಸರಕಾರದ ಇಲ್ಲಮೆ’ ಅವ್ಯವಸ್ಥೆಯನ್ನು ಆಮಂತ್ರಿಸುತ್ತದೆ. ಆದುದರಿಂದ, ಏಳುವ ಪ್ರಶ್ನೆಯು ‘ಸರಕಾರದ ಇರುವಿಕೆ ಯಾ ಇಲ್ಲಮೆ’ ಯಲ್ಲ, ಬದಲಿಗೆ, ‘ಅತ್ಯುತ್ತಮ ಫಲಿತಾಂಶಕ್ಕಾಗಿ, ಯಾವ ರೀತಿಯ ಸರಕಾರ?’ ಎಂಬುದೇ.
ಮಾನವ ಆಳಿಕೆಯ ಉಗಮ
ಆರು ಸಾವಿರ ವರ್ಷಗಳಿಗೂ ಹೆಚ್ಚು ಪೂರ್ವದಲ್ಲಿ ಏದೆನ್ ಉದ್ಯಾನವನದಲ್ಲಿದ್ದ ಮನುಷ್ಯನನ್ನು ಆಳಲು ಇಟ್ಟಿದ್ದ ಮೂಲ ಮಾದರಿಯು ದೇವಾಳಿಕೆಯಾಗಿತ್ತು. ಸೃಷ್ಟಿಕರ್ತನು, ಆ ಬಳಿಕ ಬೈಬಲಿನಲ್ಲಿ ಹೇಳಲಾದ, “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂಬ ಮೂಲಸೂತ್ರಾನುಸಾರ, ತನ್ನ ಮೇಲೆ ಮತ್ತು ತನ್ನ ನಿರ್ದೇಶನದ ಮೇಲೆ ಮಾನವ ಸಂತತಿಯ ಅವಲಂಬನೆಯನ್ನು ಒತ್ತಿಹೇಳಿದನು. (ಯೆರೆಮೀಯ 10:23) ಅಥವಾ ಒಂದು ಚೀನೀಯರ ನಾಣ್ಣುಡಿ ಹೇಳುವಂತೆ: “ಸ್ವರ್ಗದ ನೆರವಿಲ್ಲದಿರುವಲ್ಲಿ ಮನುಷ್ಯನು ಒಂದು ಇಂಚೂ ನಡೆಯಲಾರನು.”
ಆದರೆ ಪ್ರಥಮ ಮಾನವ ಜೊತೆ ಇದಕ್ಕೆ ವ್ಯತಿರಿಕ್ತವಾಗಿ ತೀರ್ಮಾನಿಸಿತು. ಅವರು “ಸ್ವರ್ಗದ ನೆರವಿಲ್ಲದೆ ನಡೆಯಲು” ಆಯ್ಕೆ ಮಾಡಿದ್ದರಿಂದ, ದೇವರು ಕೊಟ್ಟಿದ್ದ ಪ್ರಮೋದವನದಿಂದ ಅವರು ಆ ಬಳಿಕ ಹೊರಗೆ ನಡೆಯುವಂತೆ ಬಲಾತ್ಕರಿಸಲ್ಪಟ್ಟರು. ಆ ಬಳಿಕ, ಮಾನವ ಕುಟುಂಬವು ಬೆಳೆದಂತೆ, ಈ ವ್ಯವಸ್ಥೆಯೊಳಗೆ ಶಾಂತಿ ಮತ್ತು ಆಡಳಿತವನ್ನು ತರಲಿಕ್ಕಾಗಿ ಸರಕಾರದ ನಿಯಮಗಳ ಆವಶ್ಯಕತೆಯೂ ಬೆಳೆಯಿತು. ದೇವಾಳಿಕೆ ತಿರಸ್ಕರಿಸಲ್ಪಟ್ಟಾಗ, ಈ ನಿರ್ವಾತ ಪ್ರದೇಶವನ್ನು ತುಂಬಲು ಮಾನವಾಳಿಕೆಯು ಬೇಕಾಯಿತು.—ಆದಿಕಾಂಡ 3:1-5.
ಸಕಲವೂ ಸದೃಶ—ಆದರೂ ವಿಭಿನ್ನ
ಈ ಅಶುಭಸೂಚಕ ಪ್ರಾರಂಭದಿಂದ ಹಿಡಿದು, ಮಾನವ ಸರಕಾರಗಳು ಅನೇಕ ರೂಪಗಳನ್ನು ತಾಳಿವೆ. ಅವು ಸರಳ ರೂಪದ್ದಾಗಿರಲಿ, ವಿಪರೀತ ಜಟಿಲವಾಗಿರಲಿ, ಅವುಗಳಲ್ಲಿ ಕೆಲವು ಹೋಲಿಕೆಗಳಿವೆ. ಕೆಲವು ಹೋಲಿಕೆಗಳು ಇಲ್ಲಿವೆ:
ಸರಕಾರಗಳು ತಮ್ಮ ಪ್ರಜೆಗಳ ಆವಶ್ಯಕತೆಗಳನ್ನು ನೋಡಿಕೊಳ್ಳುತ್ತದೆ. ಇದನ್ನು ಮಾಡಲು ತಪ್ಪುವ ಸರಕಾರ ತನ್ನ ನ್ಯಾಯಬದ್ಧತೆಯನ್ನು ಕಳೆದುಕೊಳ್ಳುತ್ತದೆ.
ಸರಕಾರಗಳು ಒಂದು ವರ್ತನಾರೀತಿಯನ್ನು ಕೊಡುತ್ತವೆ. ಇದನ್ನು ಪ್ರಜೆಗಳು ಪಾಲಿಸದಿರುವಲ್ಲಿ ಶಿಕ್ಷೆ ಬರುತ್ತದೆ. ಈ ಕಾನೂನು ಸಂಗ್ರಹದಲ್ಲಿ ವಿಧಿ, ನಿಯಮ ಹಾಗೂ ಶತಮಾನಗಳಿಂದ ಬೆಳೆದುಬಂದಿರುವ ಸಂಪ್ರದಾಯಗಳಿವೆ. ಪೌರರು ಅಧಿಕಾಂಶ, ಅವುಗಳಿಗೆ ವಿಧೇಯರಾಗುವುದರಿಂದ ಬರುವ ಪ್ರಯೋಜನಗಳನ್ನು ಗ್ರಹಿಸಿ, ಅದು ‘ಮಾಡತಕ್ಕದಾದ ಸಂಗತಿ’ ಎಂದು ನೆನಸಿ, ಸಮಾನಸ್ಥರಿಂದ ಬರುವ ಒತ್ತಡದ ಕಾರಣ ಅಥವಾ ಪಾಲಿಸದಿದ್ದರೆ ಬರುವ ಶಿಕ್ಷೆಯ ಕಾರಣ ಈ ವರ್ತನಾ ರೀತಿಗೆ ವಿಧೇಯರಾಗುತ್ತಾರೆ.
ಸರಕಾರಗಳು ಸಾಂವಿಧಾನಿಕ, ಕಾರ್ಯನಿರ್ವಾಹಕ ಮತ್ತು ನ್ಯಾಯನಿರ್ಣಯಾಧಿಕಾರದ ಸೇವೆಗಳನ್ನು ಒಂದು ಸಂಘಟನಾ ವ್ಯವಸ್ಥೆಯ ಮೂಲಕ ನಡೆಸುತ್ತವೆ. ಕಾನೂನುಗಳನ್ನು ಮಾಡಿ, ನ್ಯಾಯವನ್ನು ತೀರಿಸಿ, ಕಾರ್ಯನೀತಿಗಳು ಜಾರಿಗೆ ತರಲ್ಪಡುತ್ತವೆ.
ಸರಕಾರಗಳು ಬಲವಾದ ಆರ್ಥಿಕ ಸಂಬಂಧವನ್ನು ವಾಣಿಜ್ಯ ಜಗತ್ತಿನೊಂದಿಗೆ ಇಟ್ಟುಕೊಳ್ಳುತ್ತವೆ.
ಸರಕಾರಗಳು ಅನೇಕ ವೇಳೆ ಧರ್ಮದ ಒಂದಲ್ಲ ಒಂದು ರೂಪದೊಂದಿಗೆ ಬೀಗತನವನ್ನೂ ಬೆಳೆಸುತ್ತವೆ. ಕೆಲವು ಸರಕಾರಗಳು ಇತರ ಸರಕಾರಗಳಿಗಿಂತ ಹೆಚ್ಚು ಆಪ್ತಸಂಬಂಧದಲ್ಲಿರುತ್ತವೆ. ತಮ್ಮ ಆಳಿಕೆಗೆ ನಿರ್ದಿಷ್ಟ ನ್ಯಾಯಬದ್ಧತೆಯನ್ನು—ಸ್ವರ್ಗದ ಆಶೀರ್ವಾದವನ್ನು—ಕೊಡಲು ಅವು ಇದನ್ನು ಮಾಡುತ್ತವೆ. ಇಲ್ಲವೆ ಇದು ಆ ಸರಕಾರಗಳಿಗೆ ದೊರೆಯದು.
ಹೌದು, ಸರಕಾರಗಳಲ್ಲಿ ಭಿನ್ನತೆಗಳಿವೆ. ರಾಜಕೀಯಶಾಸ್ತ್ರದ ವಿಜ್ಞಾನಿಗಳು ಅವುಗಳನ್ನು ಅನೇಕ ವಿಧಗಳಲ್ಲಿ ವರ್ಗೀಕರಿಸಿ ವಿಭಾಗಿಸುತ್ತಾರೆ. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಬರೆಯುವುದು: “ಉದಾಹರಣೆಗೆ, ಆಳುವವರ ಸಂಖ್ಯೆಯಲ್ಲಿ ಸರಕಾರಗಳೊಳಗಿರುವ ಸಾಮಾನ್ಯ ಭಿನ್ನತೆ—ಒಬ್ಬನ ಸರಕಾರ (ರಾಜ ಪ್ರಭುತ್ವ ಯಾ ಪೀಡಕ ಪ್ರಭುತ್ವ), ಕೊಂಚ ಜನರ ಪ್ರಭುತ್ವ (ಶ್ರೀಮಂತ ಪ್ರಭುತ್ವ ಯಾ ಸ್ವಲ್ಪಜನಾಧಿಪತ್ಯ), ಮತ್ತು ಅನೇಕರ ಸರಕಾರ (ಪ್ರಜಾಪ್ರಭುತ್ವ).”
ಕೆಲವು ಸಲ ಸರಕಾರಗಳು ತಮ್ಮ ಮುಖ್ಯ ಸಂಘಗಳಿಗನುಸಾರ (ಪಾರ್ಲಿಮೆಂಟರಿಸ್ಮ್, ಮಂತ್ರಿಮಂಡಲ ಸರಕಾರ), ರಾಜಕೀಯ ಅಧಿಕಾರದ ತಮ್ಮ ಮೂಲಸೂತ್ರಗಳಿಗನುಸಾರ (ಸಾಂಪ್ರದಾಯಿಕ, ಜನಪ್ರಿಯತೆಯ), ತಮ್ಮ ಆರ್ಥಿಕ ರಚನೆಗನುಸಾರ, ಯಾ ತಮ್ಮ ಅಧಿಕಾರದ ಉಪಯೋಗ ಯಾ ದುರುಪಯೋಗಾನುಸಾರ ವರ್ಗೀಕರಿಸಲ್ಪಡುತ್ತವೆ. ಈ ನಿದರ್ಶನ ಗ್ರಂಥ ಗಮನಿಸುವುದು: “ಇವುಗಳಲ್ಲಿ ಯಾವುದೂ ವ್ಯಾಪಕವಲ್ಲದ್ದಿದರೂ, ಈ ವಿಶೇಷ್ಲಣೆಯ ಸೂತ್ರಗಳಲ್ಲಿ ಪ್ರತಿಯೊಂದಕ್ಕೆ ಸ್ವಲ್ಪ ಸಮಂಜಸತೆಯಾದರೂ ಇದೆ.”
ಆದರೆ ನಾವು ಅವುಗಳನ್ನು ಹೇಗೆ ವರ್ಗೀಕರಿಸಿದರೂ, ಜ್ಞಾಪಿಸಬೇಕಾದ ಪ್ರಧಾನ ವಿಷಯವೇನಂದರೆ ಮಾನವಾಳಿಕೆಯ ವಿವಿಧ ರೂಪಗಳು—ಯಾವ ವಿನಾಯಿತಿಯೂ ಇಲ್ಲದೆ—ತಕ್ಕಡಿಗಳಲ್ಲಿ ತೂಗಿ ನೋಡಲ್ಪಡುತ್ತಾ ಇವೆ. ಇದು ನಮಗೆಲ್ಲರಿಗೂ ಬಹಳ ವ್ಯಾಪನೆಯುಳ್ಳ ಪರಿಣಾಮಗಳನ್ನು ಉಂಟುಮಾಡಬಲ್ಲದು. (g90 8/8)
[ಪುಟ 7 ರಲ್ಲಿರುವ ಚೌಕ]
ಇಂದಿನ ದಿನಗಳ ವರೆಗೆ ಆಳುತ್ತಿರುವ ಸರಕಾರಿ ಅಧಿಕಾರಿಗಳ ಕುರಿತು ಅಪೊಸ್ತಲ ಪೌಲನು ಬರೆದುದು: “ಪ್ರತಿಯೊಬ್ಬ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ.” (ರೋಮಾಪುರ 13:1, 7) ಹೀಗೆ, ಬೈಬಲಿನ ಮಾರ್ಗದರ್ಶನವನ್ನು ಪಾಲಿಸುವ ಕ್ರೈಸ್ತರು, ಯಾವುದು ಪರಮ ಶ್ರೇಷ್ಠವೋ ಆ ದೇವರ ನಿಯಮಗಳನ್ನು ಮುರಿಯಲು ಕೇಳಿಕೊಳ್ಳಲ್ಪಡದಿರುವಲ್ಲಿ, ತಾವು ಜೀವಿಸುವ ದೇಶದ ಸಕಲ ನಿಯಮಗಳಿಗೆ ಶುದ್ಧಾಂತಃಕರಣದಿಂದ ವಿಧೇಯರಾಗುವರು.
[ಪುಟ 8 ರಲ್ಲಿರುವ ಚಿತ್ರ]
ಅವ್ಯವಸ್ಥೆಯನ್ನು—ವಾಹನ ನಿಯಂತ್ರಣದಂತೆ—ತಡೆಯಲು ಸರಕಾರ ಅಗತ್ಯ