ಪುಟ್ಟ ದೈತ್ಯ
ಸೂರ್ಯ ನಮ್ಮ ಸೌರವ್ಯೂಹದ ದೈತ್ಯ. 13 ಲಕ್ಷ ಭೂಮಿಗಳನ್ನು ಅದರೊಳಗೆ ತುಂಬಿಸುವಷ್ಟೂ ದೊಡ್ಡದು. ಆದರೆ ನಮ್ಮ ಆಕಾಶಗಂಗೆಯ ಕೆಲವು ದೈತ್ಯಾತೀತ್ಯ ನಕ್ಷತ್ರಗಳಿಗೆ ಹೋಲಿಸುವಲ್ಲಿ ಅದು ಒಮ್ಮೆಲೆ ತೀರಾ ಪುಟ್ಟದಾಗಿ ಕಾಣಿಸುತ್ತದೆ.
ದೃಷ್ಟಾಂತಕ್ಕೆ, ವಿವಿಧ ದೈತ್ಯಾತೀತ ನಕ್ಷತ್ರಗಳನ್ನು ನಮ್ಮ ಸೂರ್ಯನಿರುವಲ್ಲಿ ಹಾಕುತ್ತೇವೆಂದು ಭಾವಿಸಿರಿ. ಅವುಗಳಲ್ಲಿ ಕೆಲವು ಎಷ್ಟು ದೊಡ್ಡ ಗಾತ್ರದವುಗಳೆಂದರೆ ಅವು ನಮ್ಮ ಭೂಮಿಯ ಇಡೀ ಕಕ್ಷೆಯನ್ನು ತುಂಬುವುವು. ನಾವು ಆ ನಕ್ಷತ್ರದೊಳಗೆ ಇದ್ದುಬಿಟ್ಟೇವು! ಬೀಟ್ಲ್ಜೂಸ್ ಎಂಬ ನಕ್ಷತ್ರ ಗುರು (ಜೂಪಿಟರ್) ಗ್ರಹದ ವರೆಗೆ ವ್ಯಾಪಿಸೀತು. ಮತ್ತು ಮ್ಯೂ ಸೆಫೀಐ ಎಂಬ ನಕ್ಷತ್ರ ಸೂರ್ಯನಿರುವಲ್ಲಿ ಕುಳಿತುಕೊಳ್ಳುವಲ್ಲಿ, ಅದು ಶನಿ (ಸ್ಯಾಟರ್ನ್) ಗ್ರಹವನ್ನು, ನುಂಗಿ ಬಿಡುವುದು. ಆದರೂ ಸ್ಯಾಟರ್ನ್ ಗ್ರಹ ಎಷ್ಟು ದೂರದಲ್ಲಿದೆಯೆಂದರೆ ವಾಯೆಜರ್ 2 ಅಂತರಿಕ್ಷ ನೌಕೆಗೆ ಭೂಮಿಯಿಂದ ಅಲ್ಲಿಗೆ ಹೋಗಲು, ಗುಂಡು ಓಡುವುದಕ್ಕೆ 20 ಪಾಲು ಹೆಚ್ಚು ವೇಗದಲ್ಲಿ ಪ್ರಯಾಣಿಸಿದರೂ ನಾಲ್ಕು ವರ್ಷ ತಗಲಿತು.
ನಮ್ಮ ಆಕಾಶಗಂಗೆಯಾದ ಕ್ಷೀರಪಥವನ್ನು ದೈತ್ಯಾಕಾರದ ಸುರುಳಿ ಆಕಾಶಗಂಗೆಯೆಂದು ಕರೆಯಲಾಗಿದೆ. ಇದು ಸರಿಸುಮಾರು ನಿಜ. ಈ ಮಹಾ ಉಜ್ವಲಿಸುವ 10,000 ಕೋಟಿ ನಕ್ಷತ್ರಗಳಿರುವ, ಶೋಭಾಯಮಾನವಾಗಿ ಅಂತರಿಕ್ಷದ ಅಂಧಕಾರದಲ್ಲಿ ತಿರುಗುವ ಈ ಚಕ್ರಬಾಣದ ಅಪರಿಮಿತತೆ ಮಾನವ ಮನವನ್ನು ಬೆರಗುಬಡಿಸುತ್ತದೆ. ನಾವು ನಮ್ಮ ಆಕಾಶಗಂಗೆಯ ಒಂದು ಅಂಚಿನಲ್ಲಿ ನಿಂತು ಒಂದು ಬೆಳಕಿನ ಕಿರಣವನ್ನು ವಿರುದ್ಧ ಅಂಚಿಗೆ ಕಳುಹಿಸುವಲ್ಲಿ, ಆ ಬೆಳಕು ಆಕಾಶಗಂಗೆಯನ್ನು ದಾಟಲು 1,00,000 ವರ್ಷಗಳು ಬೇಕಾದೀತು. ಆ ಬೆಳಕು ದಿಗಿಲುಗೊಳಿಸುವ ವೇಗದಲ್ಲಿ, ಅಂದರೆ ಪ್ರತಿ ಸೆಕೆಂಡಿಗೆ 3 ಲಕ್ಷ ಕಿಲೊಮೀಟರ್ ವೇಗದಲ್ಲಿ ತನ್ನ ಗುರಿಗೆ ಧಾವಿಸಿ ಹೋಗುವುದಾದರೂ ಅಷ್ಟು ಕಾಲ ಹಿಡಿದೀತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಕ್ಷೀರಪಥಕ್ಕೆ 1,00,000 ಬೆಳಕಿನ ವರ್ಷಗಳ ವ್ಯಾಸವಿದೆ.
ಆದರೂ, ನಮ್ಮ ನೆರೆಯ ಸುರುಳಿ ಆಕಾಶಗಂಗೆಯಾದ ಆ್ಯಂಡ್ರೊಮೆಡ, ನಮ್ಮ ಆಕಾಶಗಂಗೆಯ ಎರಡಕ್ಕೂ ಹೆಚ್ಚು ಪಾಲು ದೊಡ್ಡದಾಗಿದ್ದು 60,000 ಕೋಟಿ ನಕ್ಷತ್ರಗಳು ಸೇರಿದ್ದಾಗಿರಬಹುದು. ಅದಕ್ಕೂ ಮುಖ್ಯವಾಗಿ, ಖಗೋಲಜ್ಞರು ಮಾರ್ಕರೀಯನ್ 348 ಎಂದು ಹೆಸರಿಟ್ಟಿರುವ ಒಂದು ಬೃಹದಾಕಾರದ ಆಕಾಶಗಂಗೆಯನ್ನು ಕಂಡುಹಿಡಿದಿದ್ದಾರೆ. ಅದು ವ್ಯಾಸದಲ್ಲಿ ನಮ್ಮ ಕ್ಷೀರಪಥಕ್ಕಿಂತ ಸುಮಾರು 13 ಪಾಲು ದೊಡ್ಡದಾಗಿದ್ದು, ಒಂದರಿಂದ ಇನ್ನೊಂದು ಬದಿಗೆ 13 ಲಕ್ಷ ಬೆಳಕಿನ ವರ್ಷಗಳ ವಿಸ್ತೀರ್ಣವುಳ್ಳದ್ದಾಗಿದೆ!
ಆದರೆ ಇತ್ತೀಚೆಗೆ, ಏಬೆಲ್ 2029 ಎಂದು ಕರೆಯಲಾಗಿರುವ ಆಕಾಶಗಂಗಾ ಗೊಂಚಲಿನ ಮಧ್ಯೆ ಕಂಡುಹಿಡಿಯಲ್ಪಟ್ಟಿರುವ ಒಂದು ಆಕಾಶಗಂಗೆಯ ಎದುರಿನಲ್ಲಿ ಈ ಬೃಹದೇಹ್ದಿ ಮಾರ್ಕರೀಯನ್ 348 ಸಹ ಎಷ್ಟೋ ಚಿಕ್ಕದಾಗಿ ಕಂಡುಬಂದೀತು. ಇದುವರೆಗೆ ನೋಡಿರುವ ಆಕಾಶಗಂಗೆಗಳಲ್ಲಿ ಇದು ಅತಿ ದೊಡ್ಡದೆಂದು ವಿಜ್ಞಾನಿಗಳ ಅಭಿಪ್ರಾಯ. ಇದು ನಮ್ಮ ಆಕಾಶಗಂಗೆಗಿಂತ 60ಕ್ಕೂ ಹೆಚ್ಚು ಪಾಲು ದೊಡ್ಡದು. ಇದರ ವಿಸ್ತೀರ್ಣ 60 ಲಕ್ಷ ಬೆಳಕಿನ ವರ್ಷಗಳಾಗಿದ್ದು ಇದು ಮನಸ್ತಂಭಿಸುವ ಸುಮಾರು ಒಂದು ನೂರು ಲಕ್ಷ ಕೋಟಿ ನಕ್ಷತ್ರಗಳ ವಾಸಸ್ಥಾನವಾಗಿದೆ. ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯ ಒಂದು ವರದಿಗನುಸಾರ, ಅವಲೋಕಿಸಲ್ಪಟ್ಟಿರುವ ಅತಿ ಹೆಚ್ಚು ಬೆಳಕು ಸೂಸುವ ಆಕಾಶಗಂಗೆಗಳಲ್ಲಿ ಇದು ಒಂದಾಗಿದೆ. ಮತ್ತು ಇದು ಸಿಕ್ಕಾಬಟ್ಟೆ ಶಕ್ತಿಗಳ ಅಸ್ತವ್ಯಸ್ತ ಉತ್ಪಾದನೆಯಲ್ಲ. ಅದನ್ನು ಕಂಡುಹಿಡಿದವರಲ್ಲಿ ಒಬ್ಬರಂದದ್ದು: “ಇದು ಬೆಳಕು ಮತ್ತು ಶಕ್ತಿಯ ವ್ಯವಸ್ಥಾಪಿತ ರಾಶಿ. ಇದು ಅತಿ ದೊಡ್ಡ, ವ್ಯವಸ್ಥಾಪಿತ ಆಕಾಶಗಂಗೆ.”
ಈ ತಾರಾ ಸಂಗ್ರಹಣಗಳ ಅಪಾರತೆಯನ್ನು ಯಾ ಅವುಗಳ ಅಪಾರ ದೂರವನ್ನು ನಮ್ಮ ಮಿದುಳುಗಳಿಗೆ ಗ್ರಹಿಸಲಾರಂಭಿಸಲು ಸಹ ಸಾಧ್ಯವಾಗುವುದಿಲ್ಲ. ಹಾಗಾದರೆ, ಇದೆಲ್ಲದರ ಹಿಂದಿರುವ ಕಲ್ಪಕ, ವ್ಯವಸ್ಥಾಪಕ ಶಕ್ತಿಯ ವಿಷಯವೇನು? “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ.” (ಯೆಶಾಯ 40:26) ಸೃಷ್ಟಿಯೇ ಗೌರವಾರ್ಹವಾಗಿರುವಾಗ, ಅದರ ಸೃಷ್ಟಿಕರ್ತನು ಅದೆಷ್ಟು ಹೆಚ್ಚು ಗೌರವಾರ್ಹನು! (g91 8/8)
[ಪುಟ 24 ರಲ್ಲಿರುವ ಚಿತ್ರ ಕೃಪೆ]
U. S. Naval Observatory photo