ಮನೆಯಲ್ಲಿ ಬೆಂಕಿಗಳನ್ನು ತಡೆಗಟ್ಟುವುದು
ಒಂದು ಕಥೆಯ ಪ್ರಕಾರ, ಶ್ರೀಮತಿ ಪ್ಯಾಟ್ರಿಕ್ ಓಲಿರಿಯ ದನ, ಹಟ್ಟಿಯಲ್ಲಿದ್ದ ಸೀವೆಯೆಣ್ಣೆಯ ದೀಪವನ್ನು ಒದೆದಾಗ 1871ರ ಮಹಾ ಶಿಕಾಗೊ ಬೆಂಕಿಯ ಅನಾಹುತವನ್ನು ಪ್ರಾರಂಭಿಸಿತು. ಸೊತ್ತು ಮತ್ತು ಜೀವನಾಶದ ನಷ್ಟದ ಬೆಲೆ ಬೆರಗುಗೊಳಿಸುವಂಥದ್ದಾಗಿತ್ತು. ಒಂದು ಆಕರಕ್ಕನುಸಾರ, ಆ ಬೆಂಕಿಯಿಂದ 1,00,000 ಜನರು ಮನೆಯಿಲ್ಲದವರಾದರು. ಅದು 17,400 ಕಟ್ಟಡಗಳನ್ನು ನಾಶಮಾಡಿ 250 ಮಂದಿಯನ್ನು ಕೊಂದಿತು.
ಇಂದು, 120 ವರ್ಷಗಳಾನಂತರ, ಆಧುನಿಕ ಅಗ್ನಿನಿಯಂತ್ರಕ ವಿಜ್ಞಾನ, ಅನೇಕ ದೊಡ್ಡ ಗಾತ್ರದ ಬೆಂಕಿಗಳನ್ನು ತಡೆಗಟ್ಟಲು ಸಹಾಯ ಮಾಡಿದೆ. ಆದರೂ ಮನೆಯ ಬೆಂಕಿ ಅಪಾಯಕರವಾದ ಬೆದರಿಕೆಯನ್ನು ಕೊಡುತ್ತಾ ಮುಂದುವರಿಯುತ್ತದೆ. ಅಮೆರಿಕದ ರಾಷ್ಟ್ರೀಯ ಅಗ್ನಿ ರಕ್ಷಣಾ ಸಂಘವು, ಅಮೆರಿಕದಲ್ಲಿ ಸುಮಾರು ಐದು ಸಾವಿರ ಜನರು ಮನೆಯ ಬೆಂಕಿಗಳಿಂದ ಕೊಲ್ಲಲ್ಪಟ್ಟರೆಂದು ವಾದಿಸುತ್ತದೆ. ವ್ಯಾಂಕೂವರ್ ಸನ್ನಲ್ಲಿ ವರದಿಯಾಗಿರುವಂತೆ, ಈ ಸಂಘ, ಮನೆಯ ಬೆಂಕಿಗಳನ್ನು ತಡೆಗಟ್ಟುವಂತೆ ಕೆಲವು ಸುಲಭ ಸೂಚನೆಗಳನ್ನು ಕೊಟ್ಟಿತು. ಅವುಗಳ ಸಾರಾಂಶ ಹೀಗಿದೆ:
▫ ಮನೆಯಲ್ಲಿ ತಂಬಾಕು ಸೇದುವುದನ್ನು ಅನುಮತಿಸಬೇಡಿ. ಅಜಾಗರೂಕ ಧೂಮಪಾಯಿಗಳನ್ನೊಳಗೊಂಡ ಅಪಘಾತಗಳು ಮನೆಯ ಬೆಂಕಿಗಳಿಂದ ಸಾಯುವುದರ ಮುಖ್ಯ ಕಾರಣವಾಗುತ್ತಾ ಮುಂದುವರಿಯುತ್ತಿವೆ.
▫ ಒಯ್ಯು ತಾಪಕ (portable heater) ಗಳನ್ನು ಯಾರೂ ಇಲ್ಲದಿರುವಲ್ಲಿ ಯಾ ನೀವು ಮಲಗಿರುವಾಗ ಹಚ್ಚಿಡಬೇಡಿ.
▫ ವಿದ್ಯುಜ್ಜಾಲದ ಮೇಲೆ ಮಿತಿಮೀರಿ ಒತ್ತಡ ಹಾಕಬೇಡಿ ಯಾ ಹೊರ ಹೊದಿಕೆ ಸವೆದ ವಿದ್ಯುತ್ತಂತಿಯನ್ನು ಉಪಯೋಗಿಸಬೇಡಿ. ತಕ್ಕದ್ದಾದ ಫ್ಯೂಸುಗಳನ್ನು ಮಾತ್ರ ಉಪಯೋಗಿಸಿ.
▫ ಕುಲುಮೆಗಳನ್ನು ಮತ್ತು ಹೊಗೆ ಕೊಳವೆಗಳನ್ನು ಶುಚಿಯಾಗಿಡಿ. ವಾರ್ಷಿಕವಾಗಿ ಅವುಗಳನ್ನು ಪರೀಕ್ಷಿಸಿರಿ.
▫ ಧೂಮಶೋಧಕಗಳನ್ನು ಕ್ರಮವಾಗಿ ಪರೀಕ್ಷಿಸಿ, ಪ್ರತಿ ವರ್ಷ ಬ್ಯಾಟರಿಗಳನ್ನು ಬದಲಾಯಿಸಿರಿ. ಕುಟುಂಬದಲ್ಲಿ ಎಲ್ಲರೂ ಧೂಮಶೋಧಕದ ಧ್ವನಿಯನ್ನು ಗುರುತಿಸುತ್ತಾರೆಂದು ಖಾತ್ರಿ ಮಾಡಿಕೊಳ್ಳಿ.
▫ ಕುಟುಂಬದಲ್ಲಿ ಎಲ್ಲರಿಗೂ ಅಗ್ನಿ ಪಲಾಯನ ಮಾರ್ಗ ಗೊತ್ತಿದೆಯೋ ಇಲ್ಲವೋ ಎಂದು ಪರೀಕ್ಷಿಸಿರಿ, ಮತ್ತು ಅದರ ಬಾಗಿಲಲ್ಲಿ ತಡೆಯಿರದಂತೆ ನೋಡಿ. (g91 8/8)