ನಿಮ್ಮ ಮನೆಯು ಸುರಕ್ಷಿತವಾಗಿದೆಯೇ?—ಪರಿಶೀಲನೆಗಾಗಿ 20 ವಿಷಯಗಳು
“ಉಷ್, ಕೊನೆಗೂ ಮನೆಗೆ ಬಂದು ಸೇರಿದೆ!” ದಿನವಿಡೀ ಕಷ್ಟಪಟ್ಟು ದುಡಿದು, ಬಳಲಿ ಬೆಂಡಾಗಿರುವ ನೀವು, ಯಾವ ತೊಂದರೆಯೂ ಇಲ್ಲದೆ ಸುರಕ್ಷಿತವಾಗಿ ಮನೆಗೆ ಹಿಂದಿರುಗಿದ್ದಕ್ಕಾಗಿ ಪ್ರಾಯಶಃ ನಿರಾಳವಾಗಿ ನಿಟ್ಟುಸಿರುಬಿಡುತ್ತೀರಿ. ಆದರೆ, ನೀವು ನಿಜವಾಗಿಯೂ ಸುರಕ್ಷಿತರಾಗಿದ್ದೀರೋ? ಆಶ್ಚರ್ಯಕರ ಸಂಗತಿಯೇನೆಂದರೆ, ಮನೆಯಲ್ಲೇ ತಮಗರಿವಿಲ್ಲದಿರುವ ಗಂಭೀರವಾದ ಹಾನಿಗಳಿಗೆ ಅನೇಕರು ತುತ್ತಾಗುತ್ತಾರೆ. ವಿಶೇಷವಾಗಿ ಚಿಕ್ಕ ಮಕ್ಕಳಿರುವ ಹೆತ್ತವರು, ಮನೆಯಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ಕಡಿಮೆಮಾಡಲಿಕ್ಕಾಗಿ, ಯೋಚಿಸಿ ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮುಂದೆ ಕೊಡಲ್ಪಟ್ಟಿರುವ ತಾಳೆಪಟ್ಟಿಯನ್ನು ಉಪಯೋಗಿಸಿ, ನಿಮ್ಮ ಮನೆಗೆ ಯಾವ ಬದಲಾವಣೆಯ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳಲು ನೀವು ನಿಮ್ಮ ಮನೆಯನ್ನು ಏಕೆ ಪರೀಕ್ಷಿಸಬಾರದು?
✔ ಗಿಡಗಳು. ನಿಮಗೆ ಚಿಕ್ಕ ಮಕ್ಕಳಿರುವುದಾದರೆ ನಿಮ್ಮ ಮನೆಯಲ್ಲಿರುವ ಯಾವ ಗಿಡವೂ ವಿಷಕರವಾದ ಗಿಡವಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ. ನೆನಪಿರಲಿ, ಕುತೂಹಲವಿರುವ ಪುಟಾಣಿಗಳು ತಮ್ಮ ಕೈಗೆ ಏನು ಸಿಕ್ಕಿದರೂ ಅದನ್ನು ಬಾಯಿಗೆ ಹಾಕಿಕೊಂಡುಬಿಡುತ್ತಾರೆ.
✔ ಪರದೆಗಳು. ಪರದೆಯ ದಾರಗಳು ಮಕ್ಕಳ ಕೈಗೆ ಸಿಗದಂತೆ ಇಡಿ. ಅವುಗಳಲ್ಲಿ ಚಿಕ್ಕ ಮಕ್ಕಳು ಸಿಕ್ಕಿಹಾಕಿಕೊಳ್ಳುವಂತೆ ಮತ್ತು ಕತ್ತು ಹಿಸುಕಿ ಸಾಯುವಂತೆಯೂ ಅವು ಮಾಡಬಲ್ಲವು.
✔ ಸೆಳೆಖಾನೆಗಳು (ಡ್ರಾಅರ್ಸ್) ಮತ್ತು ಕಪಾಟುಗಳು. ಅವುಗಳಿಗೆ ಸುರಕ್ಷಾ ಚಿಲಕಗಳಿರುವಂತೆ ನೋಡಿಕೊಳ್ಳಿರಿ. ಇದು ಚೂಪಾದ ಪಾತ್ರೆಗಳನ್ನು ಮತ್ತು ಶುಚಿಗೊಳಿಸಲು ಉಪಯೋಗಿಸುವ ಹಾನಿಕಾರಕ ದ್ರವ್ಯಗಳನ್ನು ಮುಟ್ಟುವುದರಿಂದ ಮಕ್ಕಳನ್ನು ದೂರವಿಡುವುದು.
✔ ಮೆಟ್ಟಲಸಾಲು. ಒಳ್ಳೇ ಬೆಳಕಿನ ವ್ಯವಸ್ಥೆಯಿದ್ದು ಬೇಡದಿರುವ ವಸ್ತುಗಳಿಂದ ಮುಕ್ತವಾಗಿದೆಯೋ? ಪುಟಾಣಿಗಳು ಬೀಳದಿರುವಂತೆ ಸಹಾಯಮಾಡಲು ಸುರಕ್ಷಾ ಅಡ್ಡಗಟ್ಟುಗಳನ್ನು ಹಾಕಿದ್ದೀರೋ?
✔ ಸ್ಟೋವ್. ವಿಶೇಷವಾಗಿ ಅಡಿಗೆಮಾಡುತ್ತಿರುವಾಗ ಪಾತ್ರೆಗಳ ಮತ್ತು ಪ್ಯಾನುಗಳ ಹಿಡಿಗಳನ್ನು ಸ್ಟೋವಿನ ಹಿಂಬದಿಗೆ ತಿರುಗಿಸಿಡಿರಿ.
✔ ಸುಡುಗೂಡು (ಬ್ರಾಯ್ಲರ್). ಇದನ್ನು ಆಗಾಗ್ಗೆ ತೊಳೆದು ಶುದ್ಧವಾಗಿಡಿ. ಜಿಡ್ಡು ತುಂಬಿದ ಬ್ರಾಯ್ಲರ್ ಪ್ಯಾನ್ನಿಂದಾಗಿ ಅಡುಗೆಮನೆಗೆ ಬೆಂಕಿಹತ್ತಿಕೊಳ್ಳುವ ಸಾಧ್ಯತೆಯಿದೆ.
✔ ಅಗ್ನಿಶಾಮಕ. ಒಂದನ್ನಾದರೂ ಮನೆಯಲ್ಲಿಟ್ಟಿರಿ. ಜವಾಬ್ದಾರಿಯುತ ವಯಸ್ಸಿನ ಪ್ರತಿಯೊಬ್ಬರಿಗೂ ಅದನ್ನು ಹೇಗೆ ಉಪಯೋಗಿಸುವುದೆಂದು ಗೊತ್ತಿರುವಂತೆ ಖಚಿತಪಡಿಸಿಕೊಳ್ಳಿರಿ.
✔ ತೊಟ್ಟಿಲುಗಳು. ಅದರ ಸುತ್ತಲಿರುವ ಪಟ್ಟಿಗಳು ಒಂದಕ್ಕೊಂದು ಹತ್ತಿರವಾಗಿರಬೇಕು. ಹಾಸಿಗೆಯ ಸುತ್ತಲಿರುವ ಸ್ಥಳವು ಮಗುವಿನ ತಲೆಯು ಸಿಕ್ಕಿಕೊಳ್ಳುವಷ್ಟು ದೊಡ್ಡದಾಗಿರಬಾರದು.
✔ ಕಿಟಕಿಗಳು. ಸುರಕ್ಷಾ ಅಡ್ಡಗಟ್ಟುಗಳು ಮಕ್ಕಳನ್ನು ಬೀಳುವುದರಿಂದ ತಡೆಯುವವು ಮತ್ತು ಒಂದು ವೇಳೆ ಬೆಂಕಿಹತ್ತಿಕೊಳ್ಳುವುದಾದರೆ, ಒಬ್ಬ ವಯಸ್ಕನು ಆ ಅಡ್ಡಗಟ್ಟುಗಳನ್ನು ಸುಲಭವಾಗಿ ತೆಗೆಯಬಲ್ಲನು.
✔ ವಿಟಮಿನ್ಗಳು ಮತ್ತು ಔಷಧಗಳು. ಇವುಗಳನ್ನು ಬೀಗವಿರುವ ಕಪಾಟಿನಲ್ಲಿ ಇಲ್ಲವೆ ಮಕ್ಕಳಿಗೆ ಎಟುಕದ ಸ್ಥಳದಲ್ಲಿ ಇಡಿರಿ.
✔ ಸ್ನಾನದ ತೊಟ್ಟಿ (ಬಾತ್ಟಬ್). ಪುಟ್ಟಮಗುವನ್ನು ಯಾರೂ ನೋಡಿಕೊಳ್ಳುವವರಿಲ್ಲದೆ ಸ್ನಾನದ ತೊಟ್ಟಿಯಲ್ಲಿ ಎಂದೂ ಬಿಡಬೇಡಿ. ಮಗು ಮುಳುಗಿ ಸಾಯಲು ಸ್ವಲ್ಪ ನೀರು ಮತ್ತು ಕೆಲವೇ ನಿಮಿಷಗಳು ಸಾಕು.
✔ ಮೈಕ್ರೋವೇವ್ ಅವನ್. ಆಹಾರ ಪದಾರ್ಥಗಳು ಮೈಕ್ರೊವೇವ್ನಲ್ಲಿ ಬೇಗನೆ ಬಿಸಿಯಾಗುತ್ತವೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ಉದಾಹರಣೆಗೆ, ಮಗುವಿನ ಹಾಲಿನ ಬಾಟಲಿ ಸ್ವಲ್ಪವೇ ಬೆಚ್ಚಗಿದೆಯೆಂದು ತೋರಿದರೂ ಒಳಗಿರುವ ಹಾಲು ಸುಡುವಂತಿರಬಹುದು.
✔ ಕುಲುಮೆ (ಫರ್ನೆಸ್). ಆಗಿಂದಾಗ್ಗೆ ನಿಮ್ಮ ಮನೆಯಲ್ಲಿರುವ ಕುಲುಮೆಗಳಲ್ಲಿ ಕಾರ್ಬನ್ ಮಾನಾಕ್ಸೈಡಿನ ಸೋರುವಿಕೆಯನ್ನು ಪರೀಕ್ಷಿಸಿರಿ.
✔ ಸರಳು ಕಾವಲಿ (ಬಾರ್ಬಿಕ್ಯೂ ಗ್ರಿಲ್ಸ್). ಕಾವಲಿಯು ಬಿಸಿಯಾಗಿರುವಾಗ ಮಕ್ಕಳು ಅದರಿಂದ ಆದಷ್ಟು ದೂರವಿರುವಂತೆ ನೋಡಿಕೊಳ್ಳಿರಿ.
✔ ಗ್ಯಾರೆಜ್ ಬಾಗಿಲು. ವಿಶೇಷವಾಗಿ ವಿದ್ಯುತ್ತಿನ ಸಹಾಯದಿಂದ ನಿಯಂತ್ರಿಸುವ ಏರ್ಪಾಡಿರುವುದಾದರೆ, ಬಾಗಿಲು ತೆರೆಯುವ ಅಥವಾ ಮುಚ್ಚುವ ಸಮಯದಲ್ಲಿ ಮಕ್ಕಳು ಎಂದೂ ಒಳನುಗ್ಗದಂತೆ ಕಲಿಸಿರಿ.
✔ ಸ್ಮೋಕ್ ಡಿಟೆಕ್ಟರ್ಸ್ (ಬೆಂಕಿ ಪತ್ತೆಹಚ್ಚುವ ಯಂತ್ರಗಳು). ಅವುಗಳನ್ನು ಶುಚಿಯಾಗಿಡಿ ಮತ್ತು ಆಗಿಂದಾಗ್ಗೆ ಅವುಗಳನ್ನು ಪರೀಕ್ಷಿಸಿ. ವರ್ಷಕೊಮ್ಮೆ ಅವುಗಳ ಬ್ಯಾಟರಿಗಳನ್ನು ಬದಲಾಯಿಸಿರಿ.
✔ ವಿದ್ಯುತ್ ವಯರುಗಳು ಮತ್ತು ಸಾಕೆಟ್ಟುಗಳು. ಸವೆದಿರುವ ವಿದ್ಯುತ್ ವಯರುಗಳನ್ನು ಉಪಯೋಗಿಸದಿರಿ. ಉಪಯೋಗಿಸದಿರುವ ಸಾಕೆಟ್ಟುಗಳಿಗೆ ಯಾವುದಾದರೊಂದು ರೀತಿಯ ಸುರಕ್ಷಾ ಕವಚಗಳು ಇರುವುದು ಉತ್ತಮ.
✔ ವಿದ್ಯುತ್ ಉಪಕರಣಗಳು. ಇವುಗಳನ್ನು ನೀರಿನ ತೊಟ್ಟಿಯಿಂದ ಅಥವಾ ಸಿಂಕುಗಳಿಂದ ದೂರವಿಡಿ. ಗ್ರೌಂಡ್ ಫಾಲ್ಟ್ ಸರ್ಕಿಟ್ ಭೇದಕಗಳು ಶಾಕ್ ಹೊಡೆಯುವುದನ್ನು ತಡೆಯಬಲ್ಲವು.
✔ ಆಟಿಕೆ ಪೆಟ್ಟಿಗೆ. ಗಾಳಿಯಾಡಲು ಒಂದು ಇಲ್ಲವೇ ಎರಡು ತೂತುಗಳು ಮತ್ತು ತಿರುಗಣೆಗಳಿಂದ ಆಟಿಕೆ ಪೆಟ್ಟಿಗೆಯನ್ನು ಸಜ್ಜುಗೊಳಿಸಿ. ತಿರುಗಣೆಯಿರುವ ಪೆಟ್ಟಿಗೆಯ ಮುಚ್ಚಳವು ತಟ್ಟನೆ ಕೆಳಗೆ ಬೀಳದಂತೆ ಮಾಡುವುದು.
✔ ಇಸ್ತ್ರೀ ಪೆಟ್ಟಿಗೆ. ನಿಮ್ಮ ಇಸ್ತ್ರೀ ಪೆಟ್ಟಿಗೆ ಮತ್ತು ಅದರ ನೇತಾಡುವ ವಯರನ್ನು, ಮಕ್ಕಳ ಕೈಗೆ ಎಟುಕದಂತಹ ಸ್ಥಳದಲ್ಲಿ ಇಡಿರಿ.