ಜಗತ್ತಿನ ಜನಸಂಖ್ಯಾ ವೃದ್ಧಿ—ಒಂದು ಅತಿ ಮುಖ್ಯ ವಿವಾದಾಂಶ
“ಐನೂರು ಕೋಟಿಗಳಲ್ಲಿ ಕೊನೆಯ ಮಗು.” ಜೂಲೈ 11, 1987ರ ಮಧ್ಯರಾತ್ರಿಯಲ್ಲಿ ಬೇಜಿಂಗ್ ಆಸ್ಪತ್ರೆಯಲ್ಲಿ ಹುಟ್ಟಿದ ವಾಂಗ್ ಹೆ ಎಂಬ ಹೆಣ್ಣು ಕೂಸನ್ನು ಚೀನಾ ಸರಕಾರ ಹಾಗೆಂದು ಕರೆಯಿತು. ಆ ಮಗು ಜಗತ್ತಿನ ಮೊತ್ತದ ಜನಸಂಖ್ಯೆಯನ್ನು 500,00,00,000 ಮುಟ್ಟಿಸಿತೋ ಇಲ್ಲವೋ ಎಂದು ನಿಜವಾಗಿಯೂ ಯಾರೂ ಹೇಳಸಾಧ್ಯವಿಲ್ಲದಿದ್ದರೂ ಲೋಕದ ಜನಸಂಖ್ಯೆ ಆ ಸಂಖ್ಯೆಯನ್ನು ಯಾವಾಗ ತಲುಪುತ್ತದೆಂದು ವಿಶ್ವ ಸಂಸ್ಥೆ ನೇಮಿಸಿತೋ ಆ ಕ್ಷಣದಲ್ಲಿ ಆ ಮಗು ಹುಟ್ಟಿತ್ತು. ಚೈನಾ ಸರಕಾರ, ಆ ದೇಶವೂ ಜಗತ್ತೂ ಎದುರಿಸುತ್ತಿರುವ ಬಿರುಸಾದ ವಿವಾದಾಂಶವನ್ನು ಕೇವಲ ನಾಟಕೀಯವಾಗಿ ತೋರಿಸಲು ಈ ಸಂದರ್ಭದ ಲಾಭ ಪಡೆಯಿತು.
ಕೆಲವು ನಿಪುಣರಿಗೆ ಗಾಬರಿಯನ್ನು ಉಂಟುಮಾಡುವ ರೀತಿಯಲ್ಲಿ ಭೂಮಿಯ ಜನರ ಸಂಖ್ಯೆ ಹೆಚ್ಚುತ್ತಿದೆ ಎಂದು ಸಂಖ್ಯಾಸಂಗ್ರಹಣ ಸೂಚಿಸುತ್ತದೆ. ಈಗಿನ ಬೆಳವಣಿಗೆಯ ರೀತಿಯಲ್ಲಿ ಮುಂದುವರಿದರೆ, ಸುಮಾರು ಕೇವಲ 40 ವರ್ಷಗಳಲ್ಲಿ ಭೂಮಿಯ ಜನಸಂಖ್ಯೆ ಇಮ್ಮಡಿಯಾಗುವುದು. ನಿಪುಣರು ಹೇಳುವುದೇನಂದರೆ, ಈ ವೇಗದಲ್ಲಿ ಹೋಗುವುದಾದರೆ, ಲೋಕದ ಜನಸಂಖ್ಯೆಗೆ ತಿನ್ನಿಸಲು ಬೇಕಾಗುವ ಆಹಾರ, ಉತ್ಪಾದನೆಯನ್ನು ಮೀರಿಹೋಗುವುದರಿಂದ ಲೋಕ ಉಪವಾಸ ಬೀಳುವುದು. ಇದಲ್ಲದೆ, ಲೋಕದ ನೈಸರ್ಗಿಕ ಸಂಪನ್ಮೂಲಗಳು ಪರಿಮಿತವಾಗಿರುವುದರಿಂದ, ಹೆಚ್ಚುತ್ತಿರುವ ಜನಸಂಖ್ಯೆಯ ಕಾರಣ ಅವು ಬೇಗನೆ ಬತ್ತಿಹೋಗುವುವು, ಮತ್ತು ಇದರ ಅರ್ಥವು ಭೂವ್ಯಾಪಕ ವಿಪತ್ತೆಂದೇ. ಆಹಾರದ ಮತ್ತು ಸಂಪನ್ಮೂಲಗಳ ಕೊರತೆ ನಮಗೆ ನಾಶ ತರದಿರುವಲ್ಲಿ, ಪರಿಸರಕ್ಕೆ ನಾವು ಮಾಡುವ ಹಾನಿ ಇದನ್ನು ನಿಶ್ಚಯವಾಗಿ ತರುವುದು ಎಂದು ನಿಪುಣರ ಹೇಳಿಕೆ. ನಾವು ಗಾಳಿ, ನೀರು ಮತ್ತು ಜಮೀನಿಗೆ ಏನು ಮಾಡುತ್ತಿದ್ದೇವೊ ಅದರಿಂದ ನಾವು ನಮ್ಮ ಉಸಿರನ್ನೇ ಕಟ್ಟಿಸಿಕೊಳ್ಳುತ್ತಿದ್ದೇವೆ, ಮತ್ತು ಜನರ ಹೆಚ್ಚಾಗುವಿಕೆಯು ಇದನ್ನು ಹೆಚ್ಚು ವೇಗದಲ್ಲಿ ಮಾಡುವುದು. ಇವೆಲ್ಲ ಏನೋ ಒಂದು ಆಸನ್ನ ವಿಪತ್ತು ರಚಿಸಲ್ಪಡುತ್ತಿದೆ ಎಂಬಂತೆ ಕೇಳುತ್ತದೆ.
ಆದರೆ ಅದರ ವಿಷಯ ಏನು ಮಾಡಸಾಧ್ಯವಿದೆ? ಈ ವಿಷಯದಲ್ಲಿ ಅನೇಕ ಅಭಿಪ್ರಾಯಗಳಿವೆ. ಜನಸಂಖ್ಯೆಯನ್ನು ಕಡಮೆ ಮಾಡಲು ಉಗ್ರ ಕ್ರಮ ಕೈಕೊಳ್ಳದಿರುವಲ್ಲಿ ಸಕಲ ಮಾನವರ ಹಿತ ಅಪಾಯಕ್ಕೊಳಗಾಗುವುದೆಂಬುದು ಕೆಲವರ ಅಭಿಪ್ರಾಯ. ಹಿಂದೆ ಸತ್ಯವಾಗಿದ್ದಂತೆ, ಆಹಾರ, ಸಂಪನ್ಮೂಲ, ಮಾಲಿನ್ಯ, ಮತ್ತು ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲು ಹೊಸ ವಿಧಾನಗಳನ್ನು ಕಂಡುಹಿಡಿಯಲಾಗುವುದೆಂಬುದು ಇನ್ನಿತರರ ನಂಬುಗೆ. ಇನ್ನು ಕೆಲವರು, ಕ್ರಮೇಣ ಮೊತ್ತ ಜನಸಂಖ್ಯೆಯು ಸ್ಥಿರವಾಗಿ ನೆಲೆನಿಲ್ಲುವುದೆಂದೂ ಆದುದರಿಂದ ತೀರಾ ಉದ್ರೇಕಗೊಳ್ಳುವ ಅವಶ್ಯವಿಲ್ಲವೆಂದೂ ಅಭಿಪ್ರಯಿಸುತ್ತಾರೆ. ವಾಸ್ತವವೇನಂದರೆ, ಈ ಸಂಗತಿಯ ಪ್ರತಿಯೊಂದು ರೂಪರೇಖೆಗಳ ವಿಷಯದಲ್ಲಿ ಬಲವಾದ ಅಭಿಪ್ರಾಯಗಳೂ ವೀಕ್ಷಣಗಳೂ ಇವೆ. ಲೋಕ ಜನಸಂಖ್ಯೆಯ ಬೆಳವಣಿಗೆಯು ವಾದಾಸ್ಪದವೂ ಅತಿ ಮುಖ್ಯವೂ ಆದ ವಿವಾದಾಂಶವೆಂಬುದು ಸ್ಪಷ್ಟ.
ಆದರೂ, ಗಮನಾರ್ಹವಾದ ವಿಷಯವೇನಂದರೆ, ಬರಲಿರುವ ವಿಪತ್ತಿನ ಕುರಿತು ಅತ್ಯಂತ ಬಲವಾಗಿ ಮಾತಾಡುವವರು ಹೆಚ್ಚು ಸ್ಥಳ ಮತ್ತು ಹೆಚ್ಚು ಐಶ್ವರ್ಯವಿರುವ ದೇಶಗಳವರು. ಅವರು ಅಪಾಯದ ಎಚ್ಚರಿಕೆಯನ್ನು ಕೊಡುತ್ತಿರುವುದು ಏಕೆಂದರೆ ತಮ್ಮ ಜೀವನ ಮಟ್ಟ ಮತ್ತು ಭಾವೀ ಯೋಗಕ್ಷೇಮ ಅಪಾಯಕ್ಕೊಳಗಾಗಿದೆ ಎಂದು ಅವರು ನೆನಸುವುದರಿಂದಲೆ. ಆದರೆ, ಹೆಚ್ಚು ಬಡತನವಿರುವ, ಕಡಮೆ ವಿಕಾಸವೂ ಹೆಚ್ಚು ಜನನಿಬಿಡವೂ ಆದ ದೇಶಗಳಲ್ಲಿ ಜೀವಿಸುವವರ ವಿಷಯವೇನು? ಜನಸಂಖ್ಯೆಯ ಈ ವಿವಾದದ ಕುರಿತು ಅವರ ಅಭಿಪ್ರಾಯವೇನು? ಲೋಕದ ಜನ ಕಿಕ್ಕಿರಿದ ಮೂಲೆಗಳಲ್ಲಿ ಜೀವನ ಯಾವ ರೀತಿಯದ್ದಾಗಿದೆ?
ಜನಸಂಖ್ಯಾ ಸ್ಫೋಟನದ ಒತ್ತಡದ ಕೆಳಗೆ ಜೀವಿಸುವುದು ಹೇಗೆಂಬುದರ ನೇರವಾದ ನೋಟವನ್ನು ನಿಮಗೆ ಕೊಡಲು ಮತ್ತು ಇದರಲ್ಲಿ ಸೇರಿರುವ ಕೆಲವು ವಿವಾದಾಂಶಗಳನ್ನು ನೀವು ತಿಳಿಯುವಂತೆ ಸಹಾಯ ಮಾಡಲು ಎಚ್ಚರ! ನಿಮ್ಮನ್ನು ಜಗತ್ತಿನ ಕೆಲವು ಅತಿ ಕಿಕ್ಕಿರಿದ ಸ್ಥಳಗಳಿಗೆ ಕೊಂಡೊಯ್ಯುತ್ತದೆ. (g91 11/8)