ಜಗತ್ತಿನ ಜನಸಂಖ್ಯೆ—ಭವಿಷ್ಯತ್ತಿನ ಕುರಿತೇನು?
ದುರಸ್ತಾಗಿಟ್ಟಿಲ್ಲದ ವಸತಿ, ಅನಾರೋಗ್ಯಕರ ಪರಿಸ್ಥಿತಿಗಳು, ಆಹಾರ ಮತ್ತು ಶುಚಿಯಾದ ನೀರಿನ ಅಭಾವ, ರೋಗಗಳು, ನ್ಯೂನಪೋಷಣೆ—ಇವು ಮತ್ತು ಇತರ ಕಷ್ಟಗಳು ಜಗತ್ತಿನ ಜನಸಂಖ್ಯೆಯ ಅಧಿಕಾಂಶ ಜನರ ಜೀವಿತದಲ್ಲಿ ದಿನನಿತ್ಯದ ವಾಸ್ತವಿಕತೆಯಾಗಿದೆ. ಆದರೂ, ನಾವು ನೋಡಿರುವಂತೆ,ಈ ಪರಿಸ್ಥಿತಿಗಳ ಕೆಳಗೆ ಜೀವಿಸುವ ಅಧಿಕಾಂಶ ಜನರು ಇವುಗಳನ್ನು ಹೇಗೋ ನಿಭಾಯಿಸಿ ತಮ್ಮ ದೈನಂದಿನ ಜೀವನವನ್ನು ಸಾಗಿಸುತ್ತಾರೆ.
ಆದರೆ ಭವಿಷ್ಯತ್ತಿನ ಕುರಿತೇನು? ಜನರು ಅನಿಶ್ಚಿತ ಸಮಯಗಳ ತನಕ ಇಂಥ ಕ್ರೂರ ವಾಸ್ತವಿಕತೆಗಳನ್ನು ತಾಳುತ್ತಾ ಹೋಗಬೇಕೊ? ವಿಷಯಗಳನ್ನು ಜಟಿಲಗೊಳಿಸಲಿಕ್ಕಾಗಿ, ಜನಸಂಖ್ಯೆಯ ಮುಂದುವರಿಯುತ್ತಿರುವ ಬೆಳವಣಿಗೆಯ ಕಾರಣ, ಪರಿಸರ ವಿಜ್ಞಾನಿಗಳೂ ಇತರರೂ ಮುಂತಿಳಿಸುವ ದುರ್ಗತಿ ಮತ್ತು ವಿಷಣ್ಣತೆಗಳ ಕುರಿತೇನು? ನಾವು ಯಾವುದರ ಮೇಲೆ ಹೊಂದಿಕೊಂಡಿದ್ದೇವೆಯೆ ಆ ಗಾಳಿ, ನೀರು, ಮತ್ತು ಮಣ್ಣನ್ನು ಮಲಿನ ಮಾಡಿ ನಮ್ಮ ನಿವಾಸವನ್ನೇ ಕೊಳೆ ಮಾಡುತ್ತಿದ್ದೇವೆಂದು ಅವರು ಹೇಳುತ್ತಾರೆ. ವಾತಾವರಣ ಬೆಚ್ಚಗಾಗಿ, ಭೂಮಿಯ ಹವಾಮಾನದ ನಮೂನೆಯಲ್ಲಿ ಬದಲಾವಣೆಯಾಗಿ ದುಷ್ಪರಿಣಾಮವುಂಟಾಗುವ ಸಸ್ಯಾಗಾರ ಪರಿಣಾಮ—ಕಾರ್ಬನ್ ಡೈಆಕ್ಸೈಡ್, ಮೆತೇನ್, ಕ್ಲೋರೊಫ್ಲೂರೋಕಾರ್ಬನ್ (ಶೀತಕಾರಕ ಮತ್ತು ನೊರೆ ಉತ್ಪಾದಕ ವಸ್ತುಗಳು), ಎಂಬಂಥ ಅನಿಲಗಳ ಹೊರಸೂಸುವಿಕೆ—ಕ್ಕೂ ಅವರು ಕೈ ತೋರಿಸುತ್ತಾರೆ. ಇದು ಅಂತಿಮವಾಗಿ ನಮಗೆ ತಿಳಿದಿರುವಂಥ ನಾಗರಿಕತೆಗೆ ನಿಧನವನ್ನು ತಂದೀತೆ? ಕೆಲವು ಮುಖ್ಯ ಸಂಗತಿಗಳನ್ನು ನಾವು ಹೆಚ್ಚು ಒತ್ತಾಗಿ ಪರೀಕ್ಷಿಸೋಣ.
ತೀರಾ ಹೆಚ್ಚು ಜನರಿದ್ದಾರೆಯೆ?
ಪ್ರಥಮವಾಗಿ, ಲೋಕದ ಜನಸಂಖ್ಯೆ ಅನಿಶ್ಚಿತ ಕಾಲದ ತನಕ ಹೆಚ್ಚುತ್ತಾ ಹೋಗುವುದೊ? ಅದು ಎಷ್ಟರ ಮಟ್ಟಿಗೆ ಮುಂದುವರಿದೀತೆಂಬ ವಿಷಯ ಯಾವ ಸೂಚನೆಯಾದರೂ ಇದೆಯೆ? ಕುಟುಂಬ ಯೋಜನೆಯ ಪ್ರಯತ್ನಗಳ ಎದುರಿನಲ್ಲಿಯೂ ಲೋಕ ಜನಸಂಖ್ಯೆ ವೃದ್ಧಿಯಾಗುತ್ತಿರುವುದು ನಿಜವೆಂಬುದು ನಿಶ್ಚಯ. ಈಗಿನ ವಾರ್ಷಿಕ ವೃದ್ಧಿ ಸುಮಾರು 9 ಕೋಟಿ (ಪ್ರತಿ ವರ್ಷ ಇನ್ನೊಂದು ಮೆಕ್ಸಿಕೋಗೆ ಸಮಾನ). ಇದನ್ನು ಬೇಗನೆ ನಿಲ್ಲಿಸುವ ಪ್ರತೀಕ್ಷೆ ಇಲ್ಲದಿರುವಂತೆ ಕಾಣುತ್ತದೆ. ಆದರೆ ಭವಿಷ್ಯತ್ತಿನಲ್ಲಿ, ಜನಸಂಖ್ಯೆ ಕ್ರಮೇಣ ಸ್ಥಿರಗೊಳ್ಳುತ್ತದೆಂದು ಹೆಚ್ಚಿನ ಜನಾಂಗ ಸ್ಥಿತಿ ವಿವರಣೆಗಾರರು ಒಪ್ಪುತ್ತಾರೆ. ಅವರ ಮನಸ್ಸಿನಲ್ಲಿರುವ ಪ್ರಶ್ನೆಯು ಅದು ಯಾವ ಮಟ್ಟದಲ್ಲಿ ಮತ್ತು ಯಾವಾಗ ಎಂಬುದೆ.
ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿಯ ಪ್ರಕ್ಷೇಪಣಕ್ಕನುಸಾರವಾಗಿ, ಜಾಗತಿಕ ಜನಸಂಖ್ಯೆ ಸ್ಥಿರಗೊಳ್ಳುವ ಮೊದಲು 1,400 ಕೋಟಿಗಳನ್ನು ಮುಟ್ಟಬಹುದು. ಆದರೆ ಇತರರು, ಅದು 1,000 ಕೋಟಿ ಮತ್ತು 1,100 ಕೋಟಿಗಳ ಮಧ್ಯೆ ತನ್ನ ಪರಮಾಂಕವನ್ನು ಮುಟ್ಟುವುದೆಂದು ಅಂದಾಜು ಮಾಡುತ್ತಾರೆ. ಅದೇನೇ ಆಗಿರಲಿ, ನಿರ್ಣಾಯಕ ಪ್ರಶ್ನೆಗಳು ಇವು: ತೀರಾ ಹೆಚ್ಚು ಜನರಿರುವರೊ? ಈಗಿನ ಜನಸಂಖ್ಯೆಗಿಂತ ಎರಡರಿಂದ ಮೂರು ಪಾಲು ಹೆಚ್ಚು ಜನರಿಗೆ ಈ ಭೂಮಿ ಸ್ಥಳಮಾಡಿ ಕೊಟ್ಟೀತೆ?
ಸಂಖ್ಯಾಸಂಗ್ರಹಣ ದೃಷ್ಟಿಯಲ್ಲಿ ನೋಡುವುದಾದರೆ, ಲೋಕವ್ಯಾಪಕವಾಗಿ 1,400 ಕೋಟಿ ಜನರು ಇರುವುದಾದರೆ, ಅದು ಪ್ರತಿ ಚದರ ಕಿಲೊಮೀಟರಿಗೆ ಸರಾಸರಿ 104 ಜನರಿದ್ದಂತೆ. ನಾವು ನೋಡಿರುವಂತೆ, ಹಾಂಗ್ ಕಾಂಗ್ನ ಜನ ನಿಬಿಡತೆ ಚದರ ಕಿಲೊ ಮೀಟರ್ಗೆ 5,592 ಮಂದಿ. ಈಗ, ನೆದರ್ಲೆಂಡ್ಸಿನ ಜನನಿಬಿಡತೆ 430, ಜಪಾನಿನದ್ದು 327, ಮತ್ತು ಇವು ಸರಾಸರಿಗಿಂತ ಹೆಚ್ಚಿನ ಜೀವನ ಮಟ್ಟವನ್ನು ಅನುಭವಿಸುವ ದೇಶಗಳು. ಆದುದರಿಂದ, ಮುಂತಿಳಿಸಿರುವ ಮಟ್ಟಕ್ಕೆ ಲೋಕ ಜನಸಂಖ್ಯೆ ಬೆಳೆಯುವುದಾದರೂ, ಜನರ ಸಂಖ್ಯೆ ಸಮಸ್ಯೆಯಾಗಿರುವುದಿಲ್ಲವೆಂಬುದು ಸ್ಪಷ್ಟ.
ಸಾಕಷ್ಟು ಆಹಾರವಿರುವುದೆ?
ಹಾಗಾದರೆ, ಆಹಾರ ಸರಬರಾಯಿಯ ವಿಷಯವೇನು? 1,000 ಕೋಟಿ ಯಾ 1,400 ಕೋಟಿ ಜನರಿಗೆ ಸಾಕಾಗುವಷ್ಟು ಆಹಾರವನ್ನು ಭೂಮಿ ಉತ್ಪಾದಿಸೀತೆ? ಲೋಕದ ಈಗಿನ ಆಹಾರ ಉತ್ಪನ್ನ, ಇಂಥ ದೊಡ್ಡ ಜನಸಂಖ್ಯೆಯನ್ನು ಪರಾಮರಿಸಲು ಸಾಲದೆಂಬುದು ವ್ಯಕ್ತ. ವಾಸ್ತವವೇನಂದರೆ, ನಾವು ಅನೇಕ ವೇಳೆ ಬರಗಾಲ, ನ್ಯೂನಪೋಷಣೆ, ಮತ್ತು ಉಪವಾಸಗಳ ಕುರಿತು ಕೇಳುತ್ತೇವೆ. ಇದರ ಅರ್ಥವು, ಎರಡು ಯಾ ಮೂರು ಪಾಲು ಹೆಚ್ಚಂತೂ ಬಿಡಿರಿ, ಈಗಿನ ಜನಸಂಖ್ಯೆಯನ್ನೇ ಪರಾಮರಿಸಲು ಬೇಕಾಗುವಷ್ಟು ಆಹಾರವನ್ನು ನಾವು ಉತ್ವಾದಿಸುವುದಿಲ್ಲವೆಂದೊ?
ಇದು ಉತ್ತರ ನೀಡಲು ಕಷ್ಟಕರವಾದ ಪ್ರಶ್ನೆ, ಏಕೆಂದರೆ ಅದು “ಸಾಕಷ್ಟು” ಎಂಬುದರ ಅರ್ಥದ ಮೇಲೆ ಹೊಂದಿಕೊಂಡಿದೆ. ಲೋಕದ ಅತಿ ಬಡ ರಾಷ್ಟ್ರಗಳಲ್ಲಿ ಕೋಟಿಗಟ್ಟಲೆ ಜನರಿಗೆ ಕನಿಷ್ಟ ಮಟ್ಟದ ಆರೋಗ್ಯಕರವಾದ ಆಹಾರ ಸಾಕಷ್ಟು ಸಿಗದಿರುವಾಗ, ಸಂಪತ್ತಿನ, ಉದ್ಯಮೀಕರಣ ಹೊಂದಿರುವ ರಾಷ್ಟ್ರಗಳ ಜನರು ತೀರಾ ಪುಷ್ಟಿಕರ ಆಹಾರದ ಪರಿಣಾಮ—ಪಾರ್ಶ್ವವಾಯು ಹೊಡೆತ, ಕೆಲವು ವಿಧದ ಕ್ಯಾನ್ಸರ್, ಹೃದ್ರೋಗ, ಇತ್ಯಾದಿಗಳಿಂದ ಬಳಲುತ್ತಿದ್ದಾರೆ. ಇದು ಆಹಾರದ ದೃಶ್ಯವನ್ನು ಹೇಗೆ ಬಾಧಿಸುತ್ತದೆ? ಒಂದು ಲೆಕ್ಕ ತೋರಿಸುವಂತೆ, ಒಂದು ಕಿಲೊಗ್ರಾಮ್ ಗೋಮಾಂಸವನ್ನು ಉತ್ಪಾದಿಸಲು ಐದು ಕಿಲೊಗ್ರಾಮ್ ಧಾನ್ಯ ಬೇಕು. ಇದಕ್ಕನುಸಾರವಾಗಿ, ಲೋಕನಿವಾಸಿಗಳಲ್ಲಿ ಮಾಂಸ ತಿನ್ನುವ ಭಾಗವು ಜಗತ್ತಿನ ಧಾನ್ಯ ಉತ್ಪಾದನೆಯಲ್ಲಿ ಸರಿಸುಮಾರು ಅರ್ಧವನ್ನು ತಿನ್ನುತ್ತದೆ.
ಆಹಾರ ಉತ್ಪಾದನೆಯ ಮೊತ್ತದ ಸಂಬಂಧದಲ್ಲಿ, ಬ್ರೆಡ್ ರ್ ದ ವರ್ಲ್ಡ್ ಪುಸ್ತಕ ಹೇಳುವುದನ್ನು ಗಮನಿಸಿರಿ: “ಈಗಿನ ಆಹಾರ ಉತ್ಪಾದನೆಯನ್ನು ಲೋಕದ ಸಕಲ ಜನರ ಮಧ್ಯೆ ಸಮಾನವಾಗಿ ಹಂಚುವುದಾದರೆ, ಕನಿಷ್ಟ ರೀತಿಯ ಕಳಪೆಯಿದ್ದರೂ, ಸರ್ವರಿಗೂ ಸಾಕಷ್ಟಿರುವುದು. ಪ್ರಾಯಶಃ ಎಷ್ಟು ಬೇಕೋ ಅಷ್ಟೇ ಇರಬಹುದು, ಆದರೆ ಸಾಕಷ್ಟಿರುವುದು.” ಈ ಹೇಳಿಕೆ 1975ರಲ್ಲಿ, 15ಕ್ಕೂ ಹೆಚ್ಚು ವರ್ಷಗಳಿಗೆ ಮೊದಲು ಮಾಡಲ್ಪಟ್ಟಿತು. ಇಂದು ಪರಿಸ್ಥಿತಿ ಹೇಗಿದೆ? ಜಾಗತಿಕ ಸಂಪನ್ಮೂಲ ಸಂಘಕ್ಕನುಸಾರವಾಗಿ, “ಕಳೆದ ಎರಡು ದಶಕಗಳಲ್ಲಿ, ಲೋಕದ ಒಟ್ಟು ಆಹಾರ ಉತ್ಪಾದನೆ ಅದಕ್ಕಿರುವ ಬೇಡಿಕೆಗಿಂತಲೂ ವೇಗವಾಗಿ ವಿಕಸಿಸಿತು. ಇದರ ಪರಿಣಾಮವಾಗಿ, ಇತ್ತೀಚಿನ ವರ್ಷಗಳಲ್ಲಿ, ಪ್ರಧಾನ ಆಹಾರಗಳ ಬೆಲೆ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಾಸ್ತವಿಕ ಪರಿಭಾಷೆಯಲ್ಲಿ ಕೆಳಗಿಳಿದಿದೆ.” ಇತರ ಅಧ್ಯಯನಗಳು ತೋರಿಸುವುದೇನಂದರೆ, ಅಕ್ಕಿ, ಜೋಳ, ಸೋಯಾಬೀನ್ನಂಥ ಮುಖ್ಯ ಆಹಾರಗಳ, ಮತ್ತು ಇತರ ಧಾನ್ಯಗಳ ಬೆಲೆ ಅದೇ ಸಮಯದಲ್ಲಿ, ಅರ್ಧ ಯಾ ಅದಕ್ಕೂ ಹೆಚ್ಚು ಕೆಳಗಿಳಿದಿದೆ ಎಂದು ತೋರಿಸುತ್ತದೆ.
ಇದೆಲ್ಲದರ ಮೂಲಾರ್ಥವೇನಂದರೆ, ಆಹಾರ ಸಮಸ್ಯೆಯು ಉತ್ಪಾದನೆಯ ಮೊತ್ತದ ಮೇಲೆ ಹೊಂದಿಕೊಂಡಿರುವುದಕ್ಕಿಂತಲೂ ಹೆಚ್ಚಾಗಿ ಅದನ್ನು ಬಳಸಿಕೊಳ್ಳುವ ಮಟ್ಟ ಮತ್ತು ರೂಢಿಗಳ ಮೇಲೆ ಹೊಂದಿಕೊಂಡಿದೆ. ಹೊಸ ತಳಿಶಾಸ್ತ್ರೀಯ ವಿಜ್ಞಾನವು ಅಕ್ಕಿ, ಗೋಧಿ, ಮತ್ತು ಇತರ ಧಾನ್ಯಗಳನ್ನು ಈಗಿನ ಉತ್ಪಾದನೆಗಿಂತ ಇಮ್ಮಡಿಯಾಗಿ ಉತ್ಪಾದಿಸುವ ವಿಧಗಳನ್ನು ಕಂಡುಹಿಡಿದದೆ. ಆದರೂ, ಈ ಕ್ಷೇತ್ರದಲ್ಲಿ ಹೆಚ್ಚಿನ ನೈಪುಣ್ಯವನ್ನು ತಂಬಾಕು ಮತ್ತು ಟೊಮಾಟೊಗಳಂಥ ನಗದು ಬೆಳೆಯ ಮೇಲೆ, ಬಡವರ ಹೊಟ್ಟೆಯನ್ನು ತುಂಬಿಸುವ ಬದಲಿಗೆ ಧನಿಕರ ಅಪೇಕ್ಷೆಯನ್ನು ತೃಪ್ತಿಪಡಿಸುವುದರ ಮೇಲೆ ಕೇಂದ್ರೀಕರಿಸಲಾಗುತ್ತದೆ.
ಪರಿಸರದ ವಿಷಯವೇನು?
ಈ ವಿಷಯದ ಮೇಲೆ ಜಾಗ್ರತೆಯಿಂದ ಗಮನ ಕೊಡುವವರು ಹೆಚ್ಚೆಚ್ಚಾಗಿ, ಮಾನವಕುಲದ ಭಾವೀ ಹಿತಕ್ಕೆ ಅಪಾಯ ತರುವ ವಿಚಾರಗಳಲ್ಲಿ ಜನಸಂಖ್ಯಾ ವೃದ್ಧಿ ಕೇವಲ ಒಂದಾಗಿದೆ ಎಂಬ ಅಭಿಪ್ರಾಯಕ್ಕೆ ಬರತೊಡಗುತ್ತಿದ್ದಾರೆ. ಉದಾಹರಣೆಗೆ, ದ ಪಾಪ್ಯುಲೇಶನ್ ಎಕ್ಸ್ಪ್ಲೋಶನ್ ಎಂಬ ಪುಸ್ತಕದಲ್ಲಿ ಪಾಲ್ ಮತ್ತು ಆ್ಯನ್ ಎರ್ಲಿಕ್, ನಮ್ಮ ಪರಿಸರದ ಮೇಲೆ ಮಾನವ ಚಟುವಟಿಕೆಯ ಪರಿಣಾಮವನ್ನು ಈ ಸರಳ ಸಮೀಕರಣದಿಂದ ವ್ಯಕ್ತಪಡಿಸಬಹುದೆಂದು ಪ್ರಸ್ತಾಪಿಸುತ್ತಾರೆ: ಪರಿಣಾಮ = ಜನಸಂಖ್ಯೆ × ಸಮೃದ್ಧಿಯ ಮಟ್ಟ × ಪರಿಸರದ ಮೇಲೆ ಈಗಿನ ಯಂತ್ರವಿಜ್ಞಾನದ ಪರಿಣಾಮ.
ಈ ಮಾನದಂಡದಿಂದ, ಅಮೆರಿಕದಂಥ ದೇಶಗಳು, ತುಂಬ ಜನರಿರುವ ಕಾರಣದಿಂದಲ್ಲ, ಬದಲಿಗೆ ಅವರ ಸಮೃದ್ಧಿಯ ಮಟ್ಟ ಸಂಪನ್ಮೂಲಗಳನ್ನು ಹೆಚ್ಚು ಬಳಸುವ ಕಾರಣ ಮತ್ತು ಪರಿಸರವನ್ನು ಹೆಚ್ಚು ನಷ್ಟಕ್ಕೊಳಪಡಿಸುವ ಯಂತ್ರವಿಜ್ಞಾನಗಳ ಕಾರಣ ಹೆಚ್ಚು ಜನಸಂಖ್ಯೆಯುಳ್ಳವುಗಳಾಗಿವೆಯೆಂದು ಲೇಖಕರು ವಾದಿಸುತ್ತಾರೆ.
ಇತರ ಅಧ್ಯಯನಗಳು ಇದನ್ನು ದೃಢೀಕರಿಸುವಂತೆ ಕಾಣುತ್ತದೆ. ಅರ್ಥಶಾಸ್ತ್ರಜ್ಞ ಡ್ಯಾನಿಯೆಲ್ ಹ್ಯಾಮರ್ಮೆಶ್ ಹೀಗೆ ಹೇಳಿದ್ದನ್ನು ದ ನ್ಯೂ ಯಾರ್ಕ್ ಟೈಮ್ಸ್ ಉದ್ಧರಿಸಿತು. ‘ಸಸ್ಯಾಗಾರ ಹೊರಸೂಸುವಿಕೆಗಳು, ಹೊರಸೂಸುವವರ ಸಂಖ್ಯೆಗಿಂತ ಹೆಚ್ಚಾಗಿ ಆರ್ಥಿಕ ಚಟುವಟಿಕೆಗೆ ಹೆಚ್ಚು ಒತ್ತಾಗಿ ಸಂಬಂಧಿಸಿವೆ. ಸಾಮಾನ್ಯ ಅಮೆರಿಕನನೊಬ್ಬನು ಸಾಮಾನ್ಯ ಭಾರತೀಯನಿಗಿಂತ 19 ಪಾಲು ಹೆಚ್ಚು ಕಾರ್ಬನ್ ಡೈಆಕ್ಸೈಡನ್ನು ಉತ್ಪಾದಿಸುತ್ತಾನೆ. ಮತ್ತು ಉದಾಹರಣೆಗೆ, ನಿಧಾನ ಜನಸಂಖ್ಯಾ ವೃದ್ಧಿಯಿರುವ, ಆದರೆ ಆರ್ಥಿಕ ರೀತಿಯಲ್ಲಿ ಸ್ಪಂದಕವಾದ ಬ್ರೆಸೀಲ್ ದೇಶ, ತನ್ನ ಉಷ್ಣವಲಯದ ಕಾಡುಗಳನ್ನು ಶೀಘ್ರ ಜನಸಂಖ್ಯಾ ವೃದ್ಧಿಯಿರುವ, ಆದರೆ ಬಡತನದ ಬ್ರೆಸೀಲ್ ದೇಶಕ್ಕಿಂತ ವೇಗವಾಗಿ ಸುಟ್ಟು ಬಿಡುವುದು.’
ಇದೇ ವಿಷಯವನ್ನು ಒತ್ತಿಹೇಳುತ್ತಾ, ವರ್ಲ್ಡ್ವಾಚ್ ಇನ್ಸಿಟ್ಟ್ಯೂಟಿನ ಆ್ಯಲನ್ ಡರ್ನಿಂಗ್ ಅವಲೋಕಿಸುವುದು: “ಜಗತ್ತಿನ ಅತಿ ಧನಿಕರಾದ ನೂರು ಕೋಟಿ ಜನರು ಎಷ್ಟು ಸಂಗ್ರಹಣಶೀಲ ಮತ್ತು ನೀತಿಗೆಟ್ಟ ನಾಗರಿಕತೆಯ ನಮೂನೆಯನ್ನು ಸೃಷ್ಟಿಸಿದ್ದಾರೆಂದರೆ, ಈ ಗ್ರಹವೇ ಅಪಾಯಕ್ಕೊಳಗಾಗಿದೆ. ಈ ಮೇಲ್ಮಟ್ಟದವರ—ಕಾರ್ ಡ್ರೈವರರು, ಗೋಮಾಂಸ ಭಕ್ಷಕರು, ಸೋಡ ಪಾನೀಯ ಕುಡಿಯುವವರು ಮತ್ತು ತಿಂದು ಬಿಸಾಡುವ ಬಳಕೆದಾರರು—ಜೀವನಶೈಲಿಯು, ಪ್ರಾಯಶಃ ಜನಸಂಖ್ಯಾ ವೃದ್ಧಿಯನ್ನು ಬಿಟ್ಟರೆ ಕಾಠಿಣ್ಯದಲ್ಲಿ ಇನ್ನಾವುದನ್ನೂ ಹೋಲದ ಪರಿಸರೀಯ ಅಪಾಯವನ್ನುಂಟುಮಾಡುತ್ತದೆ.” ಅವರು ತೋರಿಸುವುದೇನಂದರೆ, ಮಾನವ ಸಂತತಿಯಲ್ಲಿ “ಅತ್ಯೈಶ್ವರ್ಯದ ಐದನೆಯ ಒಂದು ಭಾಗ” ಪರಿಸರವನ್ನು ಅಪಾಯಕ್ಕೊಳಪಡಿಸುವ ಕ್ಲೋರೋಫ್ಲೋರೋಕಾರ್ಬನ್ಗಳಲ್ಲಿ ಸುಮಾರು ಹತ್ತರಲ್ಲಿ ಒಂಬತ್ತನ್ನೂ ಅರ್ಧಕ್ಕಿಂತಲೂ ಹೆಚ್ಚಿಗೆ ಸಸ್ಯಾಗಾರ ಅನಿಲಗಳನ್ನೂ ಉತ್ಪಾದಿಸುತ್ತದೆ.
ನಿಜ ವಿವಾದಾಂಶ
ಮೇಲಿನ ಚರ್ಚೆಯಿಂದ, ಮಾನವಕುಲವನ್ನು ಇಂದು ಎದುರಿಸಿರುವ ದುರ್ಗತಿಗೆ ಜನಸಂಖ್ಯಾ ವೃದ್ಧಿಯ ಮೇಲೆ ಮಾತ್ರ ದೂರು ಹೊರಿಸುವುದು ನಿಜ ಗುರಿಯನ್ನು ತಪ್ಪಿದಂತೆಯೇ ಎಂಬುದು ವ್ಯಕ್ತ. ನಮ್ಮನ್ನು ಎದುರಿಸುವ ವಿವಾದಾಂಶವು ನಮಗೆ ಜೀವಿಸಲು ಸ್ಥಳ ಕಡಮೆಯಾಗುತ್ತದೆಯೆಂದಾಗಲಿ, ಪ್ರತಿಯೊಬ್ಬನಿಗೆ ಆರೋಗ್ಯಕರವಾದ ಆಹಾರ ಸಿಗುವಂತೆ ಸಾಕಷ್ಟು ಆಹಾರವನ್ನು ಉತ್ಪಾದಿಸಲು ಭೂಮಿಗೆ ಸಾಮರ್ಥ್ಯವಿಲ್ಲವೆಂದಾಗಲಿ, ಯಾ ಸಕಲ ಸಂಪನ್ಮೂಲವೂ ಬೇಗನೆ ಮುಗಿದು ಹೋಗಲಿರುವುದು ಎಂದಾಗಲಿ ಅಲ್ಲ. ಇವು ಕೇವಲ ಸೂಚನೆಗಳು. ನಿಜ ವಿವಾದಾಂಶವೇನಂದರೆ, ಹೆಚ್ಚೆಚ್ಚು ಜನರು, ತಮ್ಮ ವರ್ತನೆಯ ಪರಿಣಾಮವನ್ನು ಲಕ್ಷಿಸದೆ ಹೆಚ್ಚೆಚ್ಚು ಉನ್ನತ ಮಟ್ಟದ ಪದಾರ್ಥ ಅನುಭೋಗವನ್ನು ಹಾರೈಸುತ್ತಾರೆ. ಈ ಹೆಚ್ಚು ಬೇಕೆಂಬ ತಣಿಸಲಾಗದ ಬಯಕೆಯು ನಮ್ಮ ಪರಿಸರಕ್ಕೆ ಎಷ್ಟು ದೊಡ್ಡ ನಷ್ಟವನ್ನುಂಟುಮಾಡುತ್ತದೆಂದರೆ, ಭೂಮಿಯ ಪೋಷಣ ಸಾಮರ್ಥ್ಯವನ್ನು ಅದು ಬೇಗನೆ ಮಿಗಿಸುತ್ತಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಮೂಲ ಸಮಸ್ಯೆಯಿರುವುದು ಸಂಖ್ಯೆಗಿಂತಲೂ ಹೆಚ್ಚಾಗಿ ಮಾನವಕುಲದ ಪ್ರಕೃತಿಯಲ್ಲಿ.
ಲೇಖಕ ಆ್ಯಲನ್ ಡರ್ನಿಂಗ್ ಇದನ್ನು ಹೀಗೆ ವಿವರಿಸುತ್ತಾರೆ: “ಒಂದು ಭಿದುರ ಜೀವಗ್ರಹದಲ್ಲಿ, ಮಾನವಕುಲದ ಅಂತಿಮ ಅದೃಷವ್ಟು, ಅನುಭೋಗವನ್ನು ನಿಯಂತ್ರಿಸುವ ಮತ್ತು ಅಲೌಕಿಕ ಐಶ್ವರ್ಯವನ್ನು ಹುಡುಕುವ ವ್ಯಾಪಕವಾದ ನೀತಿಯ ಮೇಲೆ ನಿಂತಿರುವ ಆತ್ಮನಿಗ್ರಹದ ಹೆಚ್ಚು ಆಳವಾದ ಅರಿವನ್ನು ನಾವು ಬೆಳೆಯಿಸುವೆವೂ ಇಲ್ಲವೋ ಎಂಬುದರ ಮೇಲೆ ಹೊಂದಿಕೊಳ್ಳಬಹುದು.” ವಿಷಯವೇನೋ ನ್ಯಾಯ, ಆದರೆ ಈ ಪ್ರಶ್ನೆ ಕೇಳಲ್ಪಡಬೇಕು: ಜನರು ಎಲ್ಲೆಲ್ಲಿಯೂ ಸ್ವಂತ ಇಷ್ಟದಿಂದ ಆತ್ಮನಿಗ್ರಹವನ್ನು ಬೆಳೆಸಿ, ಅನುಭೋಗವನ್ನು ನಿಯಂತ್ರಿಸಿ, ಅಲೌಕಿಕ ಐಶ್ವರ್ಯವನ್ನು ಬೆನ್ನಟ್ಟುವುದು ಸಂಭಾವ್ಯವೆ? ವಿರಳ. ಇಂದು ಚಾಲ್ತಿಯಲ್ಲಿರುವ ಆತ್ಮ ಭೋಗಾಸಕ್ತಿ ಮತ್ತು ಸೌಖ್ಯ ತಾತ್ವಿಕ ಜೀವನ ಶೈಲಿಯ ದೃಷ್ಟಿಕೋನದಿಂದ ತೀರ್ಮಾನಿಸುವುದಾದರೆ ಇದಕ್ಕೆ ವಿರೋಧವಾಗಿ ವಿಷಯವು ನಡೆಯುವುದು ಹೆಚ್ಚು ಸಂಭವನೀಯ. ಇಂದು ಹೆಚ್ಚು ಜನರು ಈ ಧ್ಯೇಯ ಮಂತ್ರದಿಂದ ಬದುಕುವಂತೆ ಕಾಣುತ್ತದೆ: “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.”—1 ಕೊರಿಂಥ 15:32.
ಸಾಕಷ್ಟು ಜನರು ನಿಜತ್ವಗಳಿಗೆ ಎಚ್ಚತ್ತು ತಮ್ಮ ಜೀವನರೀತಿಯನ್ನು ಬದಲಾಯಿಸಿದರೂ, ನಾವು ಬೇಗನೆ ಈ ಪ್ರವೃತ್ತಿಯನ್ನು ತಿರುಗಿಸಲು ಶಕ್ತರಾಗೆವು. ಇತ್ತೀಚಿನ ವರ್ಷಗಳಲ್ಲಿ ಗೋಚರವಾಗಿರುವ ಅನೇಕ ಪರಿಸರವಾದಿಗಳ ಗುಂಪುಗಳನ್ನೂ ಅನ್ಯ ಜೀವನರೀತಿಗಳನ್ನೂ ಸಾಕ್ಷಿಯಾಗಿ ತಕ್ಕೊಳ್ಳಿರಿ. ಇವರಲ್ಲಿ ಕೆಲವರು ವಾರ್ತಾ ಶೀರ್ಷಿಕೆಗಳಾಗುವುದರಲ್ಲಿ ಸಾಫಲ್ಯ ಪಡೆದಿರಬಹುದು, ಆದರೆ ನಡುಪ್ರವಾಹ ಸಮಾಜದ ಮೇಲೆ ಇವರು ನಿಜವಾದ ಯಾವ ಪರಿಣಾಮವನ್ನಾದರೂ ಉಂಟುಮಾಡಿದ್ದಾರೆಯೆ? ವಿರಳವಾಗಿ. ಸಮಸ್ಯೆ ಏನು? ಇಡಿಯ ವ್ಯವಸ್ಥೆ—ವಾಣಿಜ್ಯ, ಸಾಂಸ್ಕೃತಿಕ, ಮತ್ತು ರಾಜಕೀಯ—ಯು ಅಂತರ್ನಿವಿಷ್ಟ ಲುಪತ್ತೆ ಮತ್ತು ಹಾಳುಮಾಡುವ ಬಳಕೆದಾರಿಕೆಯ ತತ್ವವನ್ನು ಬೆಳೆಸುವಂತೆ ಸಜ್ಜುಗೊಳಿಸಲ್ಪಟ್ಟಿದೆ. ಈ ಸನ್ನಿವೇಶದಲ್ಲಿ, ಅಸ್ತಿವಾರದಿಂದಲೇ ಪೂರ್ತಿಯಾಗಿ ಪುನರ್ರಚಿಸದಿರುವಲ್ಲಿ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಮತ್ತು ಇದಕ್ಕೆ ಭಾರೀ ಪುನರ್ವಿದ್ಯೆ ಅಗತ್ಯ.
ಉಜ್ವಲವಾದ ಒಂದು ಭವಿಷ್ಯತ್ತು ಇದೆಯೆ?
ಈ ಪರಿಸ್ಥಿತಿಯನ್ನು ಒಬ್ಬ ಉಪಕಾರಿ ಒದಗಿಸಿರುವ, ಸಲಕರಣೆಗಳಿರುವ ಮತ್ತು ಪೂರ್ತಿಯಾಗಿ ಸಜ್ಜುಗೊಳಿಸಿರುವ ಮನೆಯಲ್ಲಿ ಜೀವಿಸುವ ಒಂದು ಕುಟುಂಬಕ್ಕೆ ಹೋಲಿಸಬಹುದು. ಅವರು ಪೂರ್ತಿ ಆರಾಮವಾಗಿರುವಂತೆ, ಮನೆಯ ಸಕಲ ಸೌಕರ್ಯಗಳನ್ನು ತಮಗೆ ತೃಪ್ತಿಯಾಗುವಂತೆ ಉಪಯೋಗಿಸುವ ಅನುಮತಿ ಅವರಿಗೆ ಕೊಡಲ್ಪಡುತ್ತದೆ. ಆದರೆ ಕುಟುಂಬವು ಪೀಠೋಪಕರಣಗಳನ್ನು ಹಾಳುಮಾಡಿ, ನೆಲವನ್ನು ಒಡೆದು, ಕಿಟಿಕಿಗಳನ್ನು ಮುರಿದು, ಕೊಳೆ ರವಾನಿಸುವ ನಳಿಕೆಗಳನ್ನು ಬಂದು ಮಾಡಿ, ವಿದ್ಯುಚ್ಫಕ್ತಿಯ ಮೇಲೆ ಮಿತಿಮೀರಿ ಒತ್ತಡ ಹಾಕಿ—ಚುಟುಕಾಗಿ ಹೇಳುವುದಾದರೆ, ಮನೆಯನ್ನು ಪೂರ್ತಿ ಹಾಳುಗೈಯುವ ಬೆದರಿಕೆ ಹಾಕುವುದಾದರೆ ಏನು ಸಂಭವಿಸೀತು? ಧಣಿಯು ಅನಾಸಕ್ತಿಯಿಂದ ನೋಡುತ್ತಾ ಏನೂ ಮಾಡದೆ ಇರುವನೊ? ಅದು ಅಸಂಭಾವ್ಯ. ಆ ನಾಶಕಾರಕ ಒಕ್ಕಲಿನವರನ್ನು ತನ್ನ ಆಸ್ತಿಯಿಂದ ತೊಲಗಿಸಿ, ಬಳಿಕ ಅದನ್ನು ಪೂರ್ವಸ್ಥಿತಿಗೆ ತರಲು ಅವನು ಕ್ರಮ ಕೈಕೊಳ್ಳುವುದು ನಿಸ್ಸಂಶಯ. ಇಂಥ ಕ್ರಮ ಅನ್ಯಾಯವೆಂದು ಯಾರೂ ಹೇಳರು.
ಹಾಗಾದರೆ, ಮಾನವ ಕುಟುಂಬದ ವಿಷಯದಲ್ಲೇನು? ನಾವು ಸೃಷ್ಟಿಕರ್ತನಾದ ಯೆಹೋವ ದೇವರಿಂದ ಒದಗಿಸಲ್ಪಟ್ಟಿರುವ, ಸುಸಲಕರಣೆಗಳಿರುವ, ಭರ್ಜರಿಯಾಗಿ ಸಜ್ಜಿತವಾದ ಮನೆಯಲ್ಲಿ ಜೀವಿಸುವ ಬಾಡಿಗೆದಾರರಂತಿಲ್ಲವೆ? ಅದು ನಿಜ, ಏಕೆಂದರೆ ಕೀರ್ತನೆಗಾರನು ಹೇಳಿದ್ದು: “ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು; ಲೋಕವೂ ಅದರ ನಿವಾಸಿಗಳೂ ಆತನವೇ.” (ಕೀರ್ತನೆ 24:1; 50:12) ದೇವರು ಜೀವನದ ಸಾಧ್ಯತೆಗೆ ಬೇಕಾಗಿರುವ ಬೆಳಕು, ಗಾಳಿ, ನೀರು, ಮತ್ತು ಆಹಾರವನ್ನು ಮಾತ್ರ ನಮಗೆ ಸರಬರಾಯಿ ಮಾಡದೆ, ಜೀವನವನ್ನು ಆನಂದದಾಯಕವಾಗಿ ಮಾಡುವಂತೆ, ಅವುಗಳನ್ನು ಅತಿ ಹೇರಳವಾಗಿ ಮತ್ತು ವಿವಿಧತೆಯಲ್ಲಿ ಒದಗಿಸಿದ್ದಾನೆ. ಆದರೂ, ಬಾಡಿಗೆದಾರರಂತಿರುವ ನಾವು ಹೇಗೆ ವರ್ತಿಸಿದ್ದೇವೆ? ದೌರ್ಭಾಗ್ಯಕರವಾಗಿ, ಅಷ್ಟೊಂದು ಉತ್ತಮವಾಗಿ ವರ್ತಿಸಿರುವುದಿಲ್ಲ. ನಾವು ಜೀವಿಸುತ್ತಿರುವ ಈ ಸುಂದರ ಬೀಡನ್ನು ನಾವು ಪದಶಃ ಹಾಳುಗೆಡವುತ್ತಿದ್ದೇವೆ. ಧಣಿಯಾದ ಯೆಹೋವ ದೇವರು ಏನು ಮಾಡುವನು?
“ಲೋಕನಾಶಕರನ್ನು ನಾಶಮಾಡುವಿ”—ದೇವರು ಇದನ್ನೇ ಮಾಡುವನು! (ಪ್ರಕಟನೆ 11:18) ಮತ್ತು ಅದನ್ನು ಅವನು ಹೇಗೆ ಮಾಡುವನು? ಬೈಬಲು ಉತ್ತರ ಕೊಡುವುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿ ಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
ದೇವರ ಅನಿಶ್ಚಿತ ಕಾಲ ಬಾಳುವ ರಾಜ್ಯದಾಳಿಕೆಯಲ್ಲಿ ನಾವೇನನ್ನು ಹಾರೈಸಬಲ್ಲೆವು? ಪ್ರವಾದಿ ಯೆಶಾಯನ ಮಾತುಗಳಲ್ಲಿ, ಬರಲಿರುವ ವಿಷಯಗಳ ಮುನ್ನೋಟ ನಮಗೆ ಕೊಡಲ್ಪಟ್ಟಿದೆ:
“ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು. ಅವರು ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನವಷ್ಟೆ; ಅವರ ಸಂತತಿಯವರು ಅವರೊಂದಿಗೆ ಬಹುದಿನವಿರುವರು.”—ಯೆಶಾಯ 65:21-23.
ಇದು ಮಾನವ ಸಂತತಿಗೆ ಎಂಥ ಉಜ್ವಲವಾದ ಭವಿಷ್ಯ! ದೇವರು ರಚಿಸುವ ಆ ನೂತನ ಜಗತ್ತಿನಲ್ಲಿ, ಮಾನವಕುಲವು ಇನ್ನೆಂದಿಗೂ ವಸತಿ, ಆಹಾರ, ನೀರು, ಆರೋಗ್ಯ, ಮತ್ತು ಅಲಕ್ಷ್ಯದ ಸಮಸ್ಯೆಗಳಿಂದ ಪೀಡಿಸಲ್ಪಡದು. ಕೊನೆಯಲ್ಲಿ, ದೇವರ ಮಾರ್ಗದರ್ಶನದಿಂದ ವಿಧೇಯ ಮಾನವಕುಲವು, ಮಿತಿಮೀರುವ ಜನಸಂಖ್ಯೆಯ ಯಾವ ಅಪಾಯವೂ ಇಲ್ಲದೆ, ಭೂಮಿಯನ್ನು ತುಂಬಿ ಅದನ್ನು ವಶಮಾಡಿಕೊಳ್ಳುವುದು.—ಆದಿಕಾಂಡ 1:28. (g91 11/8)
[ಪುಟ 13 ರಲ್ಲಿರುವ ಚೌಕ]
ಆಹಾರ ಅನೇಕ ವೇಳೆ ತುಟ್ಟಿಯಾಗಿರುವುದೇಕೆ?
ಆಹಾರದ ನಿಜ ಖರ್ಚು ಕೆಳಗಿಳಿಯುತಿದ್ತರ್ದೂ, ಆಹಾರದ ಬೆಲೆಗಳು ಏರುತ್ತಿವೆ. ಏಕೆ? ಒಂದು ಸರಳ ಕಾರಣವು ನಗರೀಕರಣ. ಜಗತ್ತಿನ ಸದಾ ಬೆಳೆಯುತ್ತಿರುವ ನಗರಗಳ ಜನಸಮೂಹನ್ನು ಉಣ್ಣಿಸಲು, ಆಹಾರವು ತುಂಬ ದೂರ ರವಾನಿಸಲ್ಪಡಬೇಕು. ಉದಾಹರಣೆಗೆ, ಅಮೆರಿಕದಲ್ಲಿ, “ಪ್ರತಿನಿಧಿರೂಪದ ಬಾಯಿತುತ್ತು ಹೊಲದಿಂದ ಊಟದ ಬಟಲ್ಟಿಗೆ 2,100 ಕಿಲೊಮೀಟರ್ ಪ್ರಯಾಣ ಬೆಳೆಸುತ್ತದೆ,” ಎಂದು ಒಂದು ವರ್ಲ್ಡ್ವಾಚ್ ಅಧ್ಯಯನ ಹೇಳುತ್ತದೆ. ಬಳಕೆದಾರನು ಆಹಾರಕ್ಕೆ ಮಾತ್ರವಲ್ಲ, ಸಂಸ್ಕರಿಸಿ, ಅಡಕಿಸಿ, ಮತ್ತು ರವಾನಿಸುವ ಗುಟ್ಟಿನ ಖರ್ಚನ್ನೂ ಕೊಡಬೇಕು.
[ಪುಟ 10ರಲ್ಲಿರುವಚಿತ್ರ]
(For fully formatted text, see publication)
ಭೂಮಿಯ ವಾತಾವರಣವು ಸೂರ್ಯನ ಕಾವನ್ನು ತಡೆದು ಹಿಡಿಯುತ್ತದೆ. ಆದರೆ ಉತ್ಪಾದಿಸಲ್ಪಟ್ಟಿರುವ ಕಾವು—ರಕ್ತವರ್ಣಾತೀತ ವಿಕಿರಣದಿಂದ ಒಯ್ಯಲ್ಪಡುತ್ತದೆ—ಸಸ್ಯಾಗಾರ ಅನಿಲಗಳ ಕಾರಣ ಸುಲಭವಾಗಿ ಹೊರಸೂಸದೆ ಹೋಗುವುದರಿಂದ ಭೂಮಿಯ ಮೇಲ್ಮೈಯ ಶಾಖವನ್ನು ಹೆಚ್ಚಿಸುತ್ತದೆ
ಸಸ್ಯಾಗಾರ ಅನಿಲಗಳು
ಹೊರ ಸೂಸುವ ವಿಕಿರಣ
ತಡೆಹಿಡಿಯಲ್ಪಟ್ಟಿರುವ ರಕ್ತವರ್ಣಾತೀತ ವಿಕಿರಣ
[ಪುಟ 12 ರಲ್ಲಿರುವ ಚಿತ್ರಗಳು]
ಒಂದು ಕಿಲೊಗ್ರಾಮ್ ಗೋಮಾಂಸವನ್ನು ಉತ್ಪಾದಿಸಲು ಐದು ಕಿಲೊಗ್ರಾಮ್ ಧಾನ್ಯ ಬೇಕಾಗುತ್ತದೆ. ಹೀಗೆ, ಲೋಕದ ಜನಸಂಖ್ಯೆಯ ಮಾಂಸಭಕ್ಷಕ ಭಾಗವು ಲೋಕದ ಧಾನ್ಯ ಉತ್ಪಾದನೆಯಲ್ಲಿ ಸರಿಸುಮಾರು ಅರ್ಧಾಂಶವನ್ನು ತಿನ್ನುತ್ತದೆ