ಮಕ್ಕಳು—ಆಸ್ತಿಗಳೊ ಅಥವಾ ಹೊರೆಗಳೊ?
ಕುಟುಂಬ ಯೋಜನೆಯ ವಿವಾದಾಂಶವು ಜನಸಂಖ್ಯಾ ಸ್ಫೋಟನೆ ಎಂದು ಅನೇಕ ಬಾರಿ ಕರೆಯಲ್ಪಡುವ ವಿಷಯಕ್ಕೆ ನಿಕಟವಾಗಿ ಜೋಡಿಸಲ್ಪಟ್ಟಿದೆ. ಮಾನವಕುಲದ ಇತಿಹಾಸದ ಅಧಿಕಾಂಶ ಸಮಯದಲ್ಲಿ, ಜನಸಂಖ್ಯಾ ಬೆಳವಣಿಗೆ ಸಂಬಂಧ ಸೂಚಕವಾಗಿ ನಿಧಾನವಾಗಿದ್ದು; ಮರಣ ಹೊಂದುವವರ ಸಂಖ್ಯೆ ಜನಿಸುವವರ ಸಂಖ್ಯೆಗೆ ಸಮಾನವಾಗಿತ್ತು. ಕಟ್ಟಕಡೆಗೆ, ಇಸವಿ 1830ರ ಸುಮಾರಿಗೆ, ಲೋಕದ ಜನಸಂಖ್ಯೆಯು 100 ಕೋಟಿ ಜನಕ್ಕೆ ಮುಟ್ಟಿತು.
ಆಮೇಲೆ ವೈದ್ಯಕೀಯ ಹಾಗೂ ವೈಜ್ಞಾನಿಕ ಅಭಿವೃದ್ಧಿಯು ಬಂದಾಗ ಅದು ರೋಗದಿಂದ, ವಿಶೇಷವಾಗಿ ಶೈಶವ ರೋಗಗಳಿಂದ ಆಗುವ ಮರಣಗಳನ್ನು ಕಡಿಮೆಗೊಳಿಸಿತು. ಇಸವಿ 1930ರೊಳಗಾಗಿ, ಲೋಕದ ಜನ ಸಂಖ್ಯೆಯು 200 ಕೋಟಿ ಜನರಿಗೆ ನಿಂತಿತ್ತು. ಇಸವಿ 1960ರೊಳಗೆ, ಇನ್ನೊಂದು 100 ಕೋಟಿ ಸೇರಿಸಲಾಯಿತು. ಇಸವಿ 1975ರೊಳಗೆ, ಇನ್ನೊಂದು 100 ಕೋಟಿ. ಇಸವಿ 1987ರೊಳಗಾಗಿ, ಲೋಕದ ಜನಸಂಖ್ಯೆಯು 500 ಕೋಟಿಯನ್ನು ತಲುಪಿತು.
ಇದನ್ನು ಬೇರೊಂದು ರೀತಿಯಲ್ಲಿ ನೋಡುವಾಗ, ಸದ್ಯಕ್ಕೆ ಗ್ರಹದ ಮೇಲೆ ಜನರ ಸಂಖ್ಯೆಯು ಪ್ರತಿ ನಿಮಿಷ ಸುಮಾರು 170 ಜನರಷ್ಟು ಹೆಚ್ಚಾಗುತ್ತಿದೆ. ಪ್ರತಿ ದಿನ, ಒಂದು ದೊಡ್ಡ ಗಾತ್ರದ ಪಟ್ಟಣಕ್ಕೆ ಸಾಕಾಗುವಷ್ಟು, ಸುಮಾರು 2,50,000 ಜನರನ್ನು ಅದು ಸೇರಿಸುತ್ತದೆ. ಇದರರ್ಥವು, ಪ್ರತಿ ವರ್ಷ 9 ಕೋಟಿ ಜನಕ್ಕಿಂತ ಹೆಚ್ಚಿನ ಜನಸಂಖ್ಯಾ ಹೆಚ್ಚಳವನ್ನು ಕೊಡುತ್ತದೆ, ಅದು ಮೂರು ಕೆನಡಗಳಿಗೆ ಅಥವಾ ಇನ್ನೊಂದು ಮೆಕ್ಸಿಕೊವಿಗೆ ಸಮಾನವಾಗಿದೆ. ಈ ಬೆಳವಣಿಗೆಯ 90 ಕ್ಕಿಂತ ಅಧಿಕ ಸೇಕಡವು, 75 ಸೇಕಡ ಲೋಕದ ಜನಸಂಖ್ಯೆಯು ಈಗಾಗಲೇ ಜೀವಿಸುತ್ತಿರುವ ವಿಕಾಸಶೀಲ ರಾಷ್ಟ್ರಗಳಲ್ಲಿ ನಡೆಯುತ್ತಾ ಇದೆ.
ವ್ಯಾಕುಲಿತ ಸರಕಾರಗಳು
ಆದರೆ ಸರಕಾರಗಳು ಕುಟುಂಬ ಯೋಜನೆಯ ಮೂಲಕ ಜನಸಂಖ್ಯಾ ಬೆಳವಣಿಗೆಯನ್ನು ಮಿತಗೊಳಿಸಲು ಯಾಕೆ ಆತುರರಾಗಿದ್ದಾರೆ? ಯುಎನ್ ಜನಸಂಖ್ಯಾ ನಿಧಿಗೆ ನೈಜೀರಿಯಾದ ರಾಷ್ಟ್ರೀಯ ಕಾರ್ಯಕ್ರಮ ಅಧಿಕಾರಿ, ಡಾ. ಬಾಬ್ಸ್ ಸೇಗೋ, ಈ ಪ್ರಶ್ನೆಯನ್ನು, ಒಂದು ಜಟಿಲವಾದ ಹಾಗೂ ವಿವಾದಾತ್ಮಕ ಪರಿಸ್ಥಿತಿಯನ್ನು ಅತಿ ಸರಳಗೊಳಿಸುವ ಪ್ರವೃತ್ತಿಯದ್ದೆಂದು ತಾನು ಎಚ್ಚರಿಸುವ, ಒಂದು ಸರಳವಾದ ದೃಷ್ಟಾಂತದ ಮೂಲಕ ಉತ್ತರಿಸುತ್ತಾರೆ. ಅವರು ವಿವರಿಸುವುದು:
‘ಒಬ್ಬ ರೈತನು ಹತ್ತು ಎಕರೆ ಜಮೀನನ್ನು ಆಸ್ತಿಯಾಗಿ ಪಡೆದಿದ್ದಾನೆಂದು ಭಾವಿಸಿರಿ. ಅವನಿಗೆ ಹತ್ತು ಮಕ್ಕಳಿರುವುದಾದರೆ, ಅವರಲ್ಲಿ ಜಮೀನನ್ನು ಸರಿಸಮಾನವಾಗಿ ಭಾಗ ಮಾಡಿದರೆ, ಪ್ರತಿಯೊಂದು ಮಗುವು ಒಂದು ಎಕರೆಯನ್ನು ಪಡೆಯುವುದು. ಆ ಮಕ್ಕಳಲ್ಲಿ ಪ್ರತಿಯೊಬ್ಬನಿಗೆ ಹತ್ತು ಮಕ್ಕಳಿರುವುದಾದರೆ ಮತ್ತು ಜಮೀನನ್ನು ಅದೇ ರೀತಿಯಲ್ಲಿ ಭಾಗಮಾಡಿದರೆ, ಅವರ ಮಕ್ಕಳಲ್ಲಿ ಪ್ರತಿಯೊಬ್ಬರು ಒಂದು ಎಕರೆಯಲ್ಲಿ ಕೇವಲ ದಶಾಂಶವನ್ನು ಮಾತ್ರ ಪಡೆಯುವರು. ಸ್ಪಷ್ಟವಾಗಿಗಿ, ಈ ಮಕ್ಕಳು, ಹತ್ತು ಎಕರೆ ಜಮೀನನ್ನು ಹೊಂದಿದ್ದ ತಮ್ಮ ಅಜ್ಜನ ಹಾಗೆ ಸಮೃದ್ಧರಾಗಿರಲು ಸಾಧ್ಯವಿಲ್ಲ.’
ಈ ದೃಷ್ಟಾಂತವು, ಹೆಚ್ಚುತ್ತಿರುವ ಜನರ ಸಂಖ್ಯೆ ಮತ್ತು ಮಿತವಾದ ಸಂಪನ್ಮೂಲಗಳನ್ನು ಹೊಂದಿರುವ ಸೀಮಿತ ಭೂಮಿಯ ನಡುವೆ ಇರುವ ಸಂಬಂಧವನ್ನು ಎತ್ತಿತೋರಿಸುತ್ತದೆ. ಜನಸಂಖ್ಯೆಯು ಬೆಳೆದ ಹಾಗೆ, ಅನೇಕ ವಿಕಾಸಶೀಲ ರಾಷ್ಟ್ರಗಳು ಸದ್ಯದ ಜನಸಂಖ್ಯಾ ಸಂಖ್ಯೆಗಳನ್ನು ನಿರ್ವಹಿಸಲು ಹೋರಾಡುತ್ತಿದ್ದಾರೆ. ಕೆಲವೊಂದು ಸಮಸ್ಯೆಗಳನ್ನು ಪರಿಗಣಿಸಿರಿ.
ಸಂಪನ್ಮೂಲಗಳು. ಜನರ ಸಂಖ್ಯೆಯು ಹೆಚ್ಚಾದ ಹಾಗೆ, ಕಾಡು, ಮೇಲ್ಮಣ್ಣು, ಪಯಿರಿನ ನೆಲ, ಹಾಗೂ ಶುದ್ಧ ನೀರಿನ ವಿಷಯದಲ್ಲಿ ಹೆಚ್ಚಾದ ಬೇಡಿಕೆಗಳು ಇವೆ. ಫಲಿತಾಂಶವೇನು? ಪೋಪುಲೈ ಪತ್ರಿಕೆಯು ಪ್ರಲಾಪಿಸುವುದು: “ವಿಕಾಸಶೀಲ ರಾಷ್ಟ್ರಗಳು . . . ತಮ್ಮ ಭವಿಷ್ಯದ ವಿಕಾಸವು ಆತುಕೊಂಡಿರುವ ರಾಷ್ಟ್ರೀಯ ಸಂಪನ್ಮೂಲಗಳನ್ನು, ಅನೇಕ ಬಾರಿ ಮಿತಿಮೀರಿ ಶೋಷಣೆಮಾಡುವಂತೆ ಒತ್ತಾಯಿಸಲ್ಪಡುತ್ತವೆ.”
ಮೂಲ ಚೌಕಟ್ಟು. ಜನಸಂಖ್ಯೆಯು ಬೆಳೆದ ಹಾಗೆ, ಸಾಕಷ್ಟು ವಸತಿಗಳನ್ನು, ಶಾಲೆಗಳನ್ನು, ನಿರ್ಮಲೀಕರಣದ ವ್ಯವಸ್ಥೆಗಳನ್ನು, ರಸ್ತೆಗಳನ್ನು, ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುವುದು ಹೆಚ್ಚಾಗಿ ಕಷ್ಟಕರವೆಂದು ಸರಕಾರಗಳು ಕಂಡುಕೊಳ್ಳುತ್ತವೆ. ಭಾರಿ ಸಾಲದ ಮತ್ತು ಕಡಿಮೆಯಾಗುತ್ತಿರುವ ಸಂಪನ್ಮೂಲಗಳು ಇಬ್ಬಗೆಯ ಹೊರೆಯಿಂದ ಹೊರಿಸಲ್ಪಟ್ಟಿರುವ ವಿಕಾಸಶೀಲ ರಾಷ್ಟ್ರಗಳು, ಇನ್ನೂ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಬಿಡಿರಿ, ಸದ್ಯದ ಜನಸಂಖ್ಯೆಗಳ ಆವಶ್ಯಕತೆಗಳನ್ನು ನಿಭಾಯಿಸುವುದರಲ್ಲಿಯೂ ಕಷ್ಟಕ್ಕೊಳಗಾಗಿವೆ.
ಉದ್ಯೋಗ. ಅನೇಕ ವಿಕಾಸಶೀಲ ರಾಷ್ಟ್ರಗಳಲ್ಲಿ, ಕೆಲಸಗಾರರ ತಂಡದಲ್ಲಿ 40 ಸೇಕಡವು ಈಗಾಗಲೇ ಕೆಲಸವಿಲ್ಲದೆ ಇದೆಯೆಂದು, ಯುಎನ್ ಜನಸಂಖ್ಯಾ ನಿಧಿಯ ಪ್ರಕಾಶನವಾದ ಪಾಪ್ಯುಲೇಶನ್ ಆ್ಯಂಡ್ ದಿ ಎನ್ವೈರನ್ಮೆಂಟ್: ದ ಚ್ಯಾಲೆಂಜೆಸ್ ಅಹೆಡ್ ವರದಿಸುತ್ತದೆ. ವಿಕಾಸಶೀಲ ಲೋಕದ ಉದ್ದಕ್ಕೂ, 50 ಕೋಟಿಗಿಂತ ಹೆಚ್ಚಿನ ಜನರು ಕೆಲಸವಿಲ್ಲದೆ ಯಾ ಸಾಕಷ್ಟು ಕೆಲಸವಿಲ್ಲದೆ ಇರುತ್ತಾರೆ, ಇದು ಉದ್ಯಮಶೀಲ ಲೋಕದ ಸಂಪೂರ್ಣ ಕೆಲಸಗಾರರ ತಂಡದ ಸಂಖ್ಯೆ ಬಹುಮಟ್ಟಿಗೆ ಸಮಾನವಾಗಿದೆ.
ಈ ಪ್ರಮಾಣಗಳು ಇನ್ನೂ ಕೀಳಾಗದಂತೆ ತಡೆಹಿಡಿಯಲು, ವಿಕಾಸಶೀಲ ರಾಷ್ಟ್ರಗಳು ಪ್ರತಿ ವರ್ಷ 3 ಕೋಟಿಗಿಂತ ಹೆಚ್ಚಿನ ಹೊಸ ಕೆಲಸಗಳನ್ನು ಸೃಷ್ಟಿಸಬೇಕು. ಈ ಕೆಲಸಗಳ ಆವಶ್ಯವಿರುವ ಜನರು ಇಂದು ಜೀವಂತವಾಗಿದ್ದಾರೆ—ಅವರು ಇಂದಿನ ಮಕ್ಕಳು. ಬೃಹದಾಕಾರದ ನಿರುದ್ಯೋಗವು ಆಂತರಿಕ ಕಲಹ, ಇನ್ನೂ ಕೆಡುವ ಬಡತನ, ಮತ್ತು ನೈಸರ್ಗಿಕ ಸಂಪನ್ಮೂಲಗಳ ಹೆಚ್ಚಾದ ನಾಶನಕ್ಕೆ ನಡಿಸಬಹುದೆಂದು ತಜ್ಞರು ಊಹಿಸುತ್ತಾರೆ.
ಅಧಿಕಾಧಿಕ ವಿಕಾಸಶೀಲ ರಾಷ್ಟ್ರಗಳು ಕುಟುಂಬ ಯೋಜನೆಯನ್ನು ಉತ್ತೇಜಿಸಲು ಯತ್ನಿಸುತ್ತಿರುವುದು ಆಶ್ಚರ್ಯಕರವೇನೂ ಅಲ್ಲ. ಮುಂದೆ ಏನು ಕಾದಿದೆ ಎಂಬ ವಿಷಯದಲ್ಲಿ ಹೇಳಿಕೆ ನೀಡುತ್ತಾ, ಬ್ರಿಟಿಷ್ ವೈದ್ಯಕೀಯ ಪತ್ರಿಕೆ ಲಾನ್ಸೆಟ್ನಲ್ಲಿ ಒಂದು ಸಂಪಾದಕೀಯ ವರದಿಸುವುದು: “[ಜನರ] ಸಂಖ್ಯೆಯಲ್ಲಿ ಹೆಚ್ಚಳದ ಒತ್ತಡವು, ಮುಖ್ಯವಾಗಿ ಲೋಕದ ಬಡ ರಾಷ್ಟ್ರಗಳಿಗೆ ಸೀಮಿತವಾಗಿದ್ದು, ಅವರು ಎದುರಿಸುವ ಕೆಲಸವನ್ನು ಬಹಳವಾಗಿ ಹೆಚ್ಚಿಸುತ್ತದೆ. . . . ಲಕ್ಷಾಂತರ ಜನರು ತಮ್ಮ ಜೀವಿತಗಳನ್ನು ಅನಕ್ಷರಸ್ಥರಾಗಿ, ನಿರುದ್ಯೋಗಿಗಳಾಗಿ, ಅಹಿತಕರ ಮನೆಗಳಲ್ಲಿ ಹಾಗೂ ಮೂಲಭೂತ ಆರೋಗ್ಯ, ಕಲ್ಯಾಣ ಮತ್ತು ನಿರ್ಮಲೀಕರಣದ ಸೇವೆಗಳಿಗೆ ಅವಕಾಶವಿಲ್ಲದೆ ಕಳೆಯುತ್ತಾರೆ, ಮತ್ತು ನಿಯಂತ್ರಿಸದ ಜನಸಂಖ್ಯಾ ಹೆಚ್ಚಳವು ಇದಕ್ಕೆ ಒಂದು ಮುಖ್ಯ ಕಾರಣವಾಗಿದೆ.”
ಚಿಂತಿಸುವ ಕುಟುಂಬಗಳು
ರಾಷ್ಟ್ರೀಯ ಮಟ್ಟದಲ್ಲಿ ಕುಟುಂಬ ಯೋಜನೆಯ ಕಾರ್ಯಕ್ರಮಗಳ ವಿಷಯದಲ್ಲಿ ಗುರಿಗಳನ್ನು ಇಡುವುದು ಮತ್ತು ಸ್ಥಾಪಿಸುವುದು ಒಂದು ವಿಷಯವಾಗಿದ್ದರೆ, ಸಾರ್ವಜನಿಕರನ್ನು ಮನವೊಪ್ಪಿಸುವುದು ಇನ್ನೊಂದಾಗಿದೆ. ಅನೇಕ ಸಮಾಜಗಳಲ್ಲಿ ದೊಡ್ಡ ಕುಟುಂಬಗಳ ಪರವಾಗಿ ಇರುವ ಸಾಂಪ್ರದಾಯಿಕ ನೋಟಗಳು ಇನ್ನೂ ಬಲವಾಗಿವೆ. ಉದಾಹರಣೆಗೆ, ಜನನ ವೇಗ ಪ್ರಮಾಣಗಳ ಕಡಿತದ ಬಗ್ಗೆ ತನ್ನ ಸರಕಾರದ ಪ್ರೋತ್ಸಾಹನಕ್ಕೆ ಒಬ್ಬ ನೈಜೀರಿಯನ್ ತಾಯಿ ಪ್ರತ್ಯುತ್ತರಿಸುತ್ತಾ ಹೀಗೆ ಹೇಳಿದಳು: “ನಾನು ನನ್ನ ತಂದೆಯ 26 ಜನ ಮಕ್ಕಳಲ್ಲಿ ಕೊನೆಯವಳು. ನನ್ನ ಎಲ್ಲಾ ಅಣ್ಣ ಅಕ್ಕಂದಿರಿಗೆ, ಗಂಡು ಮತ್ತು ಹೆಣ್ಣುಗಳನ್ನು ಒಳಗೂಡಿಸಿ, ಎಂಟರಿಂದ 12 ಮಕ್ಕಳಿದ್ದಾರೆ. ಹಾಗಾದರೆ, ಕೊಂಚವೆ ಮಕ್ಕಳನ್ನು ಪಡೆದಂತವಳು ನಾನಾಗುವೆನೆ?”
ಆದರೂ, ಒಬ್ಬ ಸಾಧಾರಣ ಸ್ತ್ರೀಯು ಆರು ಮಕ್ಕಳಿಗೆ ಜನ್ಮ ಕೊಡುವ ನೈಜೀರಿಯದಲ್ಲಿ ಕೂಡ, ಇಂತಹ ನೋಟವು ಮೊದಲಿದ್ದಷ್ಟು ಸಾಮಾನ್ಯವಾಗಿಲ್ಲ. ಬೆಲೆ ಏರಿಕೆಗಳನ್ನು ಎದುರಿಸುತ್ತಾ, ಲಕ್ಷಾಂತರ ಜನರು ತಮ್ಮ ಕುಟುಂಬಗಳನ್ನು ಉಣಿಸಲು ಮತ್ತು ಉಡಿಸಲು ಆರ್ಥಿಕ ಕಷ್ಟಕ್ಕೊಳಗಾಗಿದ್ದಾರೆ. ಅನೇಕರು ಅನುಭವದಿಂದ “ಓಮೋ ಬಾರೆ, ಓಶೀ ಬಾರೆ”, (ಹೇರಳವಾದ ಮಕ್ಕಳು, ಹೇರಳವಾದ ಬಡತನ) ಎಂಬ ಯೋರುಬಾ ಹೇಳಿಕೆಯ ಸತ್ಯವನ್ನು ಕಲಿತಿದ್ದಾರೆ.
ಅನೇಕ ದಂಪತಿಗಳು ಕುಟುಂಬ ಯೋಜನೆಯ ಪ್ರಯೋಜನಗಳನ್ನು ತಿಳಿದಿದ್ದರೂ, ಅದನ್ನು ಆಚರಿಸುವುದಿಲ್ಲ. ಫಲಿತಾಂಶವೇನು? ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿಯಿಂದ ಪ್ರಕಾಶಿಸಲಾದ, ದ ಸ್ಟೇಟ್ ಆಫ್ ದ ವರ್ಲ್ಡ್ಸ್ ಚಿಲ್ಡ್ರನ್ 1992, ಹೇಳುವುದೇನೆಂದರೆ, ಈ ವರ್ಷದಲ್ಲಿ, ವಿಕಾಸಶೀಲ ಲೋಕದಲ್ಲಿ ಹೆಚ್ಚುಕಡಿಮೆ 3ರಲ್ಲಿ 1 ಗರ್ಭಧಾರಣೆಯು ಯೋಜಿತವಲ್ಲದ್ದೂ ಬೇಡವಾದದ್ದೂ ಆಗಿರುವುದು.
ಕುಟುಂಬ ಯೋಜನೆಯು ಜೀವಗಳನ್ನು ರಕ್ಷಿಸುತ್ತದೆ
ಆರ್ಥಿಕ ತೊಂದರೆಗಳನ್ನು ಬಿಟ್ಟರೆ, ಕುಟುಂಬ ಯೋಜನೆಯನ್ನು ಪರಿಗಣಿಸುವ ಒಂದು ಪ್ರಾಮುಖ್ಯ ಕಾರಣವು ತಾಯಿ ಹಾಗೂ ಆಕೆಯ ಮಕ್ಕಳ ಆರೋಗ್ಯವೇ ಆಗಿದೆ. “ಗರ್ಭಧಾರಣೆಯು ಒಂದು ಜೂಜಾಟ ಮತ್ತು ಜನ್ಮ ಕೊಡುವುದು ಜೀವ ಮತ್ತು ಮರಣದ ಹೋರಾಟ”ವೆಂದು ಒಂದು ಪಶ್ಚಿಮ ಆಫ್ರಿಕನ್ ಗಾದೆಯು ಹೇಳುತ್ತದೆ. ವಿಕಾಸಶೀಲ ಲೋಕದಲ್ಲಿ ಪ್ರತಿ ವರ್ಷ, ಐದು ಲಕ್ಷ ಹೆಂಗಸರು ಗರ್ಭಧಾರಣೆ ಯಾ ಪ್ರಸವದ ಸಮಯದಲ್ಲಿ ಸಾಯುತ್ತಾರೆ, ಹತ್ತು ಲಕ್ಷ ಮಕ್ಕಳು ತಾಯಿಯನ್ನು ಕಳೆದುಕೊಳ್ಳುತ್ತಾರೆ, ಮತ್ತು ಇದರ ಜೊತೆಗೆ 50ರಿಂದ 70 ಲಕ್ಷ ಹೆಂಗಸರು ಪ್ರಸವಕ್ಕೆ ಸಂಬಂಧಿಸಿದ ಆರೋಗ್ಯ ಹಾನಿಗಳಿಂದ ಅಂಗವಿಕಲರೂ ದುರ್ಬಲರೂ ಆಗುತ್ತಾರೆ.
ವಿಕಾಸಶೀಲ ರಾಷ್ಟ್ರಗಳಲ್ಲಿ ಎಲ್ಲಾ ಹೆಂಗಸರು ಅದೇ ಗಂಡಾಂತರಕ್ಕೆ ಈಡಾಗುವುದಿಲ್ಲ. ಜೊತೆಯಲ್ಲಿರುವ ಚೌಕಟ್ಟು ತೋರಿಸುವ ಹಾಗೆ, ಬಹಳ ಮಕ್ಕಳನ್ನು ಬಹಳ ಬೇಗನೆ, ಮೇಲಿಂದ ಮೇಲೆ, ಯಾ ಬಹಳ ತಡವಾಗಿ ಪಡೆಯುವ ಹೆಂಗಸರು ಅತಿ ಹೆಚ್ಚು ಗಂಡಾಂತರದಲ್ಲಿ ಇದ್ದಾರೆ. ಕುಟುಂಬ ಯೋಜನೆಯು ಕಾಲಂಶದಿಂದ ಮೂರರಲ್ಲಿ ಒಂದು ಅಂಶದಷ್ಟು ಮರಣಗಳನ್ನೂ, ಲಕ್ಷಾಂತರ ದೌರ್ಬಲ್ಯಗಳನ್ನೂ ತಡೆಹಿಡಿಯಲು ಸಾಧ್ಯವೆಂದು ಯುಎನ್ ಮೂಲಗಳು ಅಂದಾಜು ಮಾಡುತ್ತವೆ.
ಆದರೆ ಲಕ್ಷಾಂತರ ಜೀವಗಳನ್ನು ರಕ್ಷಿಸುವುದು ಜನಸಂಖ್ಯಾ ಬೆಳವಣಿಗೆಯನ್ನು ಹೆಚ್ಚಿಸುವುದರಲ್ಲಿ ಸಹಾಯಕವಾಗುವುದಿಲ್ಲವೊ? ಆಶ್ಚರ್ಯಕರವಾಗಿ, ಅನೇಕ ತಜ್ಞರು ಇಲ್ಲವೆಂದು ಹೇಳುತ್ತಾರೆ. ಇಸವಿ 1991ರ ಹ್ಯೂಮನ್ ಡೆವಲಪ್ಮೆಂಟ್ ರಿಪೋರ್ಟ್ ವರದಿಸುವುದು, “ಅಧಿಕ ಮಕ್ಕಳು ಬದುಕಿ ಉಳಿದರೆ, ಜನಸಂಖ್ಯಾ ಸಮಸ್ಯೆಗಳು ಹೆಚ್ಚು ಕೆಟ್ಟದಾಗುವುದೆಂದು ಯೋಚಿಸಲಾಗಬಹುದು. ವಿಷಯವು ತೀರಾ ವ್ಯತಿರಿಕ್ತವಾಗಿದೆ. ಹೆತ್ತವರಿಗೆ ತಮ್ಮ ಮಕ್ಕಳು ಬದುಕಿ ಉಳಿಯುವರೆಂಬ ಹೆಚ್ಚಿನ ಭರವಸೆ ಇರುವಾಗ ಫಲಶಕ್ತಿಯು ಇಳಿಮುಖವಾಗುವ ಪ್ರವೃತ್ತಿ ಇದೆ.”
ಹಾಗಿದ್ದರೂ, ಲಕ್ಷಾಂತರ ಹೆಂಗಸರು, ವಿಶೇಷವಾಗಿ ಬಡ ಸಮಾಜಗಳಲ್ಲಿ, ಪದೇ ಪದೇ ಜನ್ಮಕೊಡುವದನ್ನು ಮುಂದುವರಿಸುತ್ತಿದ್ದಾರೆ. ಯಾಕೆ? ಯಾಕಂದರೆ ಅವರ ಸಮಾಜವು ಅವರಿಂದ ಅದನ್ನು ಅಪೇಕ್ಷಿಸುತ್ತದೆ, ಯಾಕಂದರೆ ಅಧಿಕ ಮಕ್ಕಳನ್ನು ಪಡೆಯುವುದು ಅವರಲ್ಲಿ ಕೆಲವರು ಬದುಕಿ ಉಳಿಯುವ ಸಂಭವನೀಯತೆಯನ್ನು ಹೆಚ್ಚಿಸುತ್ತದೆ, ಮತ್ತು ಯಾಕಂದರೆ ಅವರಿಗೆ ಕುಟುಂಬ ಯೋಜನೆಯ ಸೇವೆಗಳ ಬಗ್ಗೆ ಗೊತ್ತಿರಲಿಕ್ಕಿಲ್ಲ ಯಾ ಅದು ಅವರಿಗೆ ಲಭ್ಯವಾಗಿರಲಿಕ್ಕಿಲ್ಲ.
ಆದರೂ, ದೊಡ್ಡ ಕುಟುಂಬಗಳನ್ನು ಹೊಂದಿರುವಂತಹ ಹೆಂಗಸರು ಅನ್ಯ ಮಾರ್ಗವನ್ನು ಇಷ್ಟಪಡಲಿಕ್ಕಿಲ್ಲ. ಪ್ರತಿ ಮಗುವು ದೇವರಿಂದ ಬಂದ ಒಂದು ಆಶೀರ್ವಾದವೆಂದು ಅವರು ಪರಿಗಣಿಸುತ್ತಾರೆ.
[ಪುಟ 6 ರಲ್ಲಿರುವ ಚೌಕ]
ವಿಕಾಸಶೀಲ ಲೋಕದಲ್ಲಿ ಹೆಚ್ಚು ಅಪಾಯ ಸಂಭವವಿರುವ ಗರ್ಭಧಾರಣೆ
ಬಹಳ ಬೇಗನೆ: 15ರಿಂದ 19 ವರ್ಷ ವಯಸ್ಸಿನ ಹೆಂಗಸರೊಳಗೆ ಗರ್ಭಧಾರಣೆ ಮತ್ತು ಪ್ರಸವದ ಸಮಯದಲ್ಲಿ ಮರಣದ ಅಪಾಯ ಸಂಭವವು, 20ರಿಂದ 24 ವರ್ಷ ವಯಸ್ಸಿನ ಹೆಂಗಸರುಗಳಿಗಿಂತ ಮೂರು ಪಟ್ಟಷ್ಟು ಹೆಚ್ಚಾಗಿದೆ. ಹದಿವಯಸ್ಕ ಹೆಂಗಸರಿಗೆ ಹುಟ್ಟುವ ಶಿಶುಗಳು, ಜನ್ಮದಲ್ಲಿಯೇ ಸಾಯುವ, ಬಹಳ ಬೇಗನೆ ಜನಿಸುವ, ಯಾ ಬಹಳ ಕಡಿಮೆ ತೂಕವನ್ನು ಹೊಂದಿರುವ ಹೆಚ್ಚಿನ ಸಾಧ್ಯತೆ ಇದೆ.
ಬಹಳ ಒತ್ತೊತ್ತಾಗಿ: ಪ್ರಸವಗಳ ನಡುವಿನ ಕಾಲಾವಧಿಯು ಮಗುವಿನ ಬದುಕಿ ಉಳಿಯುವಿಕೆಯನ್ನು ಬಹಳವಾಗಿ ಪ್ರಭಾವಿಸುತ್ತದೆ. ತಾಯಿಯ ಹಿಂದಿನ ಮಗುವಿನ ಅನಂತರ, ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಜನಿಸಿದ ಮಗುವಿಗೆ, ಶೈಶವಾವಸ್ಥೆಯಲ್ಲಿ ಸಾಯುವ ಸಂಭವವು 66 ಸೇಕಡ ಹೆಚ್ಚು ಇದೆ. ಈ ಮಕ್ಕಳು ಬದುಕಿ ಉಳಿದರೆ, ಅವರ ಬೆಳವಣಿಗೆ ಕುಂಠಿತಗೊಳ್ಳುವ ಹೆಚ್ಚಿನ ಸಾಧ್ಯತೆಯಿದೆ ಮತ್ತು ಅವರ ಬುದ್ಧಿಶಕ್ತಿಯ ವಿಕಾಸವು ಕುಗ್ಗಿಸಲ್ಪಡುವ ಅಧಿಕ ಸಾಧ್ಯತೆಗಳು ಇವೆ. ಸೂಕ್ತವಾದ ಜನನ ಅಂತರದ ಮೂಲಕ 5 ಶಿಶು ಮರಣಗಳಲ್ಲಿ ಸುಮಾರು 1ನ್ನು ತಡೆಯುವುದು ಸಾಧ್ಯ. ಜನನಗಳ ನಡುವೆ ಮೂರು ಯಾ ಹೆಚ್ಚಿನ ವರ್ಷಗಳ ಅಂತರವು ಅತಿ ಕಡಿಮೆ ಗಂಡಾಂತರವುಳ್ಳದ್ದಾಗಿರುತ್ತದೆ.
ಅತಿ ಹೆಚ್ಚು ಮಕ್ಕಳು: ವಿಶೇಷವಾಗಿ, ಹಿಂದಿನ ಮಕ್ಕಳಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ಅವಧಿಯ ಅಂತರವು ಇರದಿದ್ದಾಗ, ನಾಲ್ಕು ಮಕ್ಕಳಿಗಿಂತ ಹೆಚ್ಚನ್ನು ಪಡೆಯುವುದು ಗರ್ಭಧಾರಣೆ ಹಾಗೂ ಪ್ರಸವದ ಆಪತ್ತನ್ನು ಹೆಚ್ಚಿಸುತ್ತದೆ. ನಾಲ್ಕು ಗರ್ಭಧಾರಣೆಗಳ ಅನಂತರ, ತಾಯಂದಿರು ರಕ್ತಹೀನತೆಯಿಂದ ಹೆಚ್ಚಾಗಿ ಕಷ್ಟಪಡುವ ಮತ್ತು ರಕ್ತಸ್ರಾವಕ್ಕೆ ಹೆಚ್ಚಾಗಿ ಒಲವುಳ್ಳವರಾಗುವ ಸಾಧ್ಯತೆ ಇದೆ, ಮತ್ತು ಅವರ ಮಕ್ಕಳು ದೌರ್ಬಲ್ಯವುಳ್ಳವರಾಗಿ ಹುಟ್ಟುವ ಅಧಿಕ ಗಂಡಾಂತರವು ಇರುತ್ತದೆ.
ಬಹಳ ತಡವಾಗಿ: 35ಕ್ಕಿಂತ ಹೆಚ್ಚಿನ ವಯಸ್ಸಿನ ಹೆಂಗಸರಲ್ಲಿ ಗರ್ಭಧಾರಣೆ ಮತ್ತು ಪ್ರಸವದ ಸಮಯದಲ್ಲಿ ಮರಣಹೊಂದುವ ಸಾಧ್ಯತೆಯು, 20ರಿಂದ 24 ವರ್ಷ ವಯಸ್ಸಿನ ಹೆಂಗಸರುಗಳಿಗಿಂತ ಐದು ಪಟ್ಟು ಹೆಚ್ಚಿದೆ. ವಯಸ್ಸಾದ ಹೆಂಗಸರಿಗೆ ಹುಟ್ಟುವ ಮಕ್ಕಳು ಕೂಡ ಹೆಚ್ಚಾಗಿ ಸಾಯುವ ಸಾಧ್ಯತೆ ಇದೆ.
Sources: World Health Organization, UN Children’s Fund, and the UN Population Fund.