ಏಷಿಯದ ಅತಿ ದೊಡ್ಡ ಪಶು ಜಾತ್ರೆಯಲ್ಲಿ ಒಂದು ದಿನ
ಎಚ್ಚರ!ದ ಭಾರತದ ಸುದ್ದಿಗಾರರಿಂದ
ಸುಂದರವಾಗಿ ಅಲಂಕರಿಸಿರುವ ಆನೆಗಳ ಮೇಲೆ ಸವಾರಿ ಮಾಡುವ ಮಹಾರಾಜರು ಅಥವಾ ಮಹಾ ಕೊಂಬುಗಳಿರುವ ಜೋಡೆತ್ತುಗಳನ್ನು ಹೊಡೆದುಕೊಂಡು ಹೋಗುವ ಬಡ ರೈತನು—ಇಂಥ ದೃಶ್ಯಗಳ ಛಾಯಾಚಿತ್ರವನ್ನು ಭಾರತದಲ್ಲಿ ಅನೇಕ ವೇಳೆ ತೆಗೆಯಲಾಗುತ್ತದೆ. ಆದರೆ ಇಂಥ ಮಹಾ ಶರೀರದ ಮತ್ತು ಬೆಲೆಬಾಳುವ ಪ್ರಾಣಿಗಳನ್ನು ಎಲ್ಲಿಂದ ಪಡೆಯಲಾಗುತ್ತದೆ?
ಇದನ್ನು ಕಂಡುಹಿಡಿಯಲು, ನಮ್ಮೊಂದಿಗೆ ಈಶಾನ್ಯ ಭಾರತದಲ್ಲಿರುವ ಬಿಹಾರ ರಾಜ್ಯದ ಸೋನ್ಪುರಕ್ಕೆ ಬನ್ನಿ. ಅಲ್ಲಿ ಪ್ರಾಯಶಃ ನೀವು ಹಿಂದೆಂದೂ ನೋಡಿರದಂತಹ ಒಂದು ಜಾತ್ರೆಗೆ ನಾವು ಭೇಟಿಕೊಡಬಲ್ಲೆವು. ಇದು ಏಷಿಯದ ಅತಿ ದೊಡ್ಡ ಪಶು ಜಾತ್ರೆಯೆಂದು ವದಂತಿ; ಒಂದು ವೇಳೆ ಜಗತ್ತಿನದ್ದು ಕೂಡ. ಇದು ಒಕ್ಟೋಬರ್ ಮತ್ತು ನೊವೆಂಬರ್ ತಿಂಗಳುಗಳಲ್ಲಿ ಸುಮಾರು ಎರಡು ವಾರ ನಡೆಯುತ್ತದೆ.
ಮನಮೋಹಕ ಸಂಭವ
ಎಂತಹ ಜನಸ್ತೋಮ! ಹೆಂಗುಸರು ಥಳಥಳಿಸುವ ಸೀರೆಗಳನ್ನುಟ್ಟು ತುಂಬ ಆಭರಣಗಳನ್ನು ಧರಿಸಿದ್ದಾರೆ. ಮದುವೆಯಾಗಿರುವ ಸ್ತ್ರೀಯರು ಬಯ್ತಲೆಯಲ್ಲಿ ಸಿಂಧೂರ ಹಚ್ಚಿರುವುದರಿಂದ ವಿಶೇಷವಾಗಿ ಎದ್ದು ಕಾಣುತ್ತಾರೆ. ಅವರಲ್ಲಿ ಹೆಚ್ಚಿನವರ ತೋಳುಗಳಲ್ಲಿ ಮಗುವಿದೆ; ಅವರು ಮುಂದೆ ಹೋಗುತ್ತಿರುವ ತಮ್ಮ ಗಂಡಂದಿರ ಬೆನ್ನು ಹಿಡಿಯಲು ಧಾವಿಸುವಾಗ ಇನ್ನು ಒಂದೆರಡು ಮಕ್ಕಳು ಅವರ ಸೀರೆಗಳನ್ನು ಹಿಡಿದು ನಡೆದಾಡುತ್ತಾರೆ.
ಇಂತಹ ಮಹಾ ಜನಸಂದಣಿಯಲ್ಲಿ, ಮಕ್ಕಳು ಕಾಣೆಯಾಗದೆ ಇರುವುದು ಹೇಗೆ ಎಂದು ನಾವು ಆಶ್ಚರ್ಯಪಡುತ್ತೇವೆ. ಅವರು ಕಾಣೆಯಾಗುವುದೇನೋ ವಾಸ್ತವ. ಒಂದೇ ಒಂದು ವಾರದಲ್ಲಿ, 50 ಮಕ್ಕಳು ಕಾಣೆಯಾದರೆಂದೂ ಅವರಲ್ಲಿ 17 ಮಂದಿ ಮಾತ್ರ ಪುನಃ ದೊರೆತರೆಂದೂ ನಮಗೆ ತಿಳಿದು ಬಂತು. ಅಂತಹ ಕಾಣೆಯಾದ ಮಕ್ಕಳಿಗೆ ಏನು ಸಂಭವಿಸುತ್ತದೆಂದು ಭಾವಿಸುವಾಗ ನಮಗೆ ನಡುಕ ಬರುತ್ತದೆ. ಏಕೆಂದರೆ ನೀತಿನಿಷ್ಠೆಗಳಿಲ್ಲದ ಕೆಲವರು ಇವರನ್ನು ಅಪಹರಿಸಿ, ಬೇಡಲಿಕ್ಕೊ, ದುರಾಚಾರಗಳಿಗೊ ಅವರನ್ನು ಬಲಾತ್ಕರಿಸುತ್ತಾರೆಂದು ನಾವು ಕೇಳಿದ್ದೇವೆ.
ರಸ್ತೆಯ ಪಕ್ಕದ ಅಂಗಡಿಗಳು ಸಂದಣಿಯನ್ನು ಹೆಚ್ಚಿಸುವುದಾದರೂ ಅವುಗಳು ನೋಡಲು ಆಸಕ್ತಿಕರ. ಒಂದು ಚಿಕ್ಕ ಅಂಗಡಿಯಲ್ಲಿ ಒಂದು ನಾಣ್ಯವನ್ನು ಕೊಟ್ಟಾಗ, ಒಂದು ಚಿಕ್ಕ ಹಕ್ಕಿ ಹೊರಬಂದು ಒಂದು ರಟ್ಟುಬಿಲ್ಲೆಯನ್ನು ಹೆಕ್ಕಿ ಕೊಡುತ್ತದೆ. ಆಗ ಅದರ ಯಜಮಾನನು ಅದರಿಂದ ನಿಮ್ಮ ಭವಿಷ್ಯವನ್ನು ವಿವರಿಸುತ್ತಾನೆ. ನಿಮಗೆ ಒಡನೆ ಗಡ್ಡ ಬೋಳಿಸುವ ಆವಶ್ಯಕತೆ ಇದೆಯೆ? ಆ ಕ್ಷೌರಿಕನ ಮುಂದೆ ಚಕ್ಕಳಬಕ್ಕಳು ಹಾಕಿ ಕುಳಿತುಕೊಳ್ಳಿರಿ. ಆಗ ಅವನ ಉದ್ದವಾದ ಮತ್ತು ಹರಿತವಾದ ಕ್ಷೌರಕತ್ತಿ ನಿಮ್ಮ ನೊರೆ ಬಳಿದಿರುವ ಮುಖದ ಮೇಲೆ ತತ್ತರಿಸದೆ ಜಾರಿಕೊಂಡು ಹೋಗುತ್ತದೆ. ಕೇವಲ ಮೂರೇ ನಿಮಿಷಗಳಲ್ಲಿ, ಪ್ರಾಯಶಃ ಯಾವ ಆಧುನಿಕ ಉಪಕರಣವೂ ಒದಗಿಸದಂತಹ ಸವರಿರುವ ಬೋಳಿಸಿದ ಗಲ್ಲ ನಿಮ್ಮದಾಗುತ್ತದೆ.
ಈ ಅಂಗಡಿಗಳು ವಿಭಿನ್ನ ವೈವಿಧ್ಯಗಳ ಅಲಂಕಾರಿಕ ಬಳೆಗಳನ್ನು ಮಾರುತ್ತವೆ. ತಮ್ಮ ಸೀರೆಗಳಿಗೆ ಹೊಂದಿಕೆಯಾಗಿರುವ ಬಣ್ಣದ ಬಳೆಗಳನ್ನು ಪ್ರತಿಯೊಂದು ಕೈಯಲ್ಲಿ ತೊಟ್ಟುಕೊಳ್ಳುವುದು ಭಾರತದ ಮಹಿಳೆಯರಿಗೆ ಬಹಳ ಇಷ್ಟ. ಅನುಭವಿಯಾದ ವ್ಯಾಪಾರಿ ಅವರಿಗೆ ಸರಿಯಾದ ಗಾತ್ರ ಮತ್ತು ಶೈಲಿಯ ಬಳೆ ದೊರಕುವ ವರೆಗೆ ಅನೇಕಾನೇಕ ಬಳೆಗಳನ್ನು ಅವರ ಕೈಗೆ ತುರುಕಿಸಿ ತೆಗೆಯುತ್ತಾನೆ. ಭಾರತದ ಪ್ರತಿನಿಧಿರೂಪದ ಒಬ್ಬ ಸ್ತ್ರೀ, ಒಂದೊಂದು ಕೈಯಲ್ಲಿ ಗಾಜಿನ, ಲೋಹದ, ಯಾ ಪ್ಲಾಸ್ಟಿಕ್ನ ಸುಮಾರು ಒಂದು ಡಜನ್ ಬಳೆಗಳನ್ನು ಧರಿಸಬಹುದು.
ಈ ಅಂಗಡಿಗಳು ಪ್ರಾಣಿಗಳು ಧರಿಸುವ ಥುಳುಕು ಆಭರಣಗಳನ್ನೂ ಮಾರುತ್ತವೆ. ಹೇಗೆಂದರೂ ಇದು ಪಶು ಜಾತ್ರೆಯಲವ್ಲೆ. ಇಲ್ಲಿ ಭಾರೀ ವ್ಯಾಪಾರ, ಏಕೆಂದರೆ ತಮ್ಮ ಪಶುಗಳನ್ನು ಅಲಂಕರಿಸುವುದು ಹಳ್ಳಿಗರಿಗೆ ಬಹಳ ಇಷ್ಟ. ಪ್ರಾಣಿಗಳ ಕತ್ತಿಗೆ ಮಣಿಗಳು ಹಾಗೂ ವಿವಿಧ ಗಾತ್ರಗಳ ವರ್ಣರಂಜಿತ ಗಂಟೆಗಳು ಈ ಅಲಂಕಾರಾಭರಣಗಳಲ್ಲಿ ಸೇರಿವೆ.
ಅಲ್ಲಿ ಯಾರದು ಕೂಗುವುದು? ಓ, ಒಬ್ಬ ಭಿಕ್ಷುಕ! ಮುದುಡಿಹೋಗಿದ್ದು, ಧೂಳಿನಿಂದ ತುಂಬಿಹೋಗಿರುವ ಅವನು ತನ್ನ ಭಿಕ್ಷಾಪಾತ್ರೆಯನ್ನು ದೂಡಿಕೊಂಡು ರಸ್ತೆಯಲ್ಲಿ ಹರಿದಾಡುತ್ತಾನೆ. ಜನಸಂದಣಿಯನ್ನು ನೋಡುವಾಗ, ಅವನು ತುಳಿತಕ್ಕೊಳಗಾಗದಿರುವುದು ಆಶ್ಚರ್ಯವೇ ಸರಿ! ಈ ಜಾತ್ರೆಯ ಸಮಯದಲ್ಲಿ ಜನರು ಭಿಕ್ಷುಕರಿಗೆ ಉದಾರಭಾವವನ್ನು ತೋರಿಸುತ್ತಾರೆ. ಇವನ ಪಾತ್ರೆ ಆಗಲೇ ಅರ್ಧ ತುಂಬಿ ಹೋಗಿದೆ. ದೇವಸ್ಥಾನದ ಹತ್ತಿರ ನೂರಾರು ತಿರುಕರು—ಕುಂಟರು, ಕುರುಡರು, ಕುಷ್ಠರೋಗಿಗಳು—ಭಿಕ್ಷೆ ಬೇಡುತ್ತಿದ್ದಾರೆ. ಇವರಲ್ಲಿ ಕೆಲವರು ತಮ್ಮ ಅದೃಷವ್ಟನ್ನು ಶಪಿಸುತ್ತಾರೆ, ಇನ್ನು ಕೆಲವರು ದೇವರುಗಳ ಹೆಸರುಗಳನ್ನು ಉಚ್ಚರಿಸುತ್ತಾರೆ, ಮತ್ತು ಕೆಲವರು ದಾನಿಗಳಿಗೆ ಆಶೀರ್ವಾದಗಳನ್ನು ಸುರಿಸುತ್ತಾರೆ.
ಅನೇಕ ವಿಧದ ಪ್ರಾಣಿಗಳು ಸಹ ಜಾತ್ರೆಯತ್ತ ಹೋಗುತ್ತಿವೆ. ಆನೆಗಳು ಬಣ್ಣ ಬಳಿಯಲ್ಪಟ್ಟು ಬೆಡಗಿನಿಂದ ಅಲಂಕರಿಸಲ್ಪಟ್ಟಿವೆ. ಪ್ರತಿಯೊಂದು ಆನೆಯ ಮೇಲೆ, ಅವುಗಳು ಮಂದೆ ಹೋಗುವಂತೆ ಯಾ ನಿಧಾನಿಸುವಂತೆ ಸಂಕ್ಷಿಪ್ತ ಆಜ್ಞೆಗಳನ್ನು ಕೊಡುತ್ತಾ, ಆಗಾಗ್ಗೆ ಆನೆಯ ಕಿವಿಯ ಹಿಂದುಗಡೆ ಕೋಲಿನಿಂದ ಮೆತ್ತಗೆ ತಿವಿಯುವ ಸವಾರನಿದ್ದಾನೆ. ತಲೆಗಳನ್ನು ಎತ್ತಿ ಹಿಡಿದಿರುವ ಎಮ್ಮೆಗಳು, ತಮ್ಮ ಹಿಂದೆ ವರ್ಧಿಸುತ್ತಿರುವ ವಾಹನಗಳ ಸಂಖ್ಯೆಯನ್ನು ಯಾವ ಗಣನೆಗೂ ತೆಗೆದುಕೊಳ್ಳದೆ, ಎಷ್ಟೋ ನಿಧಾನವಾಗಿ ಚಲಿಸುತ್ತಿವೆ.
ರಸ್ತೆಯಲ್ಲಿ ನಾವು ಅನೇಕ ದನಗಳನ್ನೂ ಕೆಲವು ಒಂಟೆಗಳನ್ನೂ ನೋಡುತ್ತೇವೆ. ಕಪಿಗಳು ಧಾರಾಳ, ಇವುಗಳಲ್ಲಿ ಹೆಚ್ಚಿನವು ಲಂಗೂರ್ ಜಾತಿಯದ್ದು. ಅವುಗಳಿಗೆ ಪೊದೆಹುಬ್ಬು ಮತ್ತು ಕುಚ್ಚುಗಡ್ಡವಿದೆ. ಅಲಂಕಾರಿಕ ನವಿಲು ಮತ್ತು ದೊಡ್ಡ ಗಿಳಿಯಿಂದ ಹಿಡಿದು ಸಣ್ಣ ಗಿಳಿ ಮತ್ತು ಪಾರಿವಾಳಗಳು ಸೇರಿರುವ ಗರಿಜೀವಿಗಳೂ ಅನೇಕಾನೇಕ. ಇವೆಲ್ಲ ದೂರದಿಂದಲೂ ಹತ್ತಿರದಿಂದಲೂ ಜಾತ್ರೆಗೆ ಬಂದಿವೆ.
ಕೆಲವು ವಿಶೇಷ ಆಕರ್ಷಣೆಗಳು
ಪಂಜಾಬಿನಿಂದ ಬಂದಿರುವ ಬಹುಮಾನಯೋಗ್ಯ ದನಗಳು ವಿಶೇಷ ಆಕರ್ಷಣೆಯ ಒಂದು ಭಾಗ. ಇವುಗಳಲ್ಲಿ ಕೆಲವು ದಿನಕ್ಕೆರಡಾವರ್ತಿ 25 ಲೀಟರ್ ಹಾಲು ಕೊಡುತ್ತವೆ. ಇವು ನಿಜವಾಗಿಯೂ ಸುಂದರವಾದ ಪಶುಗಳು! ಅನೇಕ ಜನರು ಅವುಗಳನ್ನು ಕೇವಲ ನೋಡಲಿಕ್ಕಾಗಿ ಬರುವಾಗ, ಇತರರು ಖರೀದಿಸುವ ಗಂಭೀರ ಉದ್ದೇಶದಿಂದ ಬರುತ್ತಾರೆ. ಒಂದು ದನ ಮಾರಾಟವಾದೊಡನೆ ಅದರ ಧಣಿ, ಸ್ಥಳೀಕ ದೇವತೆಯನ್ನು ಸಂಬೋಧಿಸುತ್ತಾ, “ಬೋಲೋ ಹರಿಹರ್ನಾಥ್ ಕೀ” ಎಂದು ಹೇಳುವಾಗ ನೆರೆದಿರುವ ಜನರು ಇದಕ್ಕೆ ಒಪ್ಪಿಗೆಯ ಪ್ರತಿಕ್ರಿಯೆ ತೋರಿಸುತ್ತಾ “ಜೈ” ಎಂದು ಹೇಳುತ್ತಾರೆ. ಭಾರತದಲ್ಲಿ ಒಂದು ದನಕ್ಕೆ ಸರಾಸರಿ 3,000ದಿಂದ 5,000 ರೂಪಾಯಿ ಬೆಲೆ ತಗಲಬಹುದಾದರೂ, ಈ ಪ್ರತ್ಯೇಕ ವಿದೇಶೀ ಜಾತಿಯ ದನ 20,000ದಿಂದ 40,000 ರೂಪಾಯಿಗಳಿಗೆ ಮಾರಾಟವಾಗುತ್ತದೆ.a
ಈ ವರ್ಷ ಸಂತೆಯಲ್ಲಿ ಮಾರಾಟಕ್ಕಾಗಿ ಕೇವಲ 15 ಒಂಟೆಗಳು ಮಾತ್ರ ಇವೆ. ಈ “ಮರುಭೂಮಿಯ ಜಹಜುಗಳು” ಪ್ರತಿಯೊಂದು, 5,000 ರೂಪಾಯಿಗಳಿಗೆ ಮಾರಾಟವಾಗುತ್ತವೆ. ಇವು ಅನೇಕ ತಾಸುಗಳು ಕೆಲಸ ಮಾಡುವುದು ಮಾತ್ರವಲ್ಲ, ಬಿಸಿ ಮತ್ತು ಶೀತ ಹವೆಯನ್ನು ಮತ್ತು ಬಾಯಾರಿಕೆ ಮತ್ತು ಹಸಿವೆಯನ್ನು ಅಡಚಣೆಯಿಲ್ಲದೆ ತಾಳಿಕೊಳ್ಳಬಲ್ಲವು. ಸಾಮಾನ್ಯವಾಗಿ ಹೋರಿಗಳು ಯಾ ಎತ್ತುಗಳು ಮಾಡುವ ಕೆಲಸಗಳಾದ ಗಾಡಿ, ನೇಗಿಲು ಮತ್ತು ಜಲಚಕ್ರಗಳ ಎಳೆಯುವಿಕೆಗೆ ಒಂಟೆಗಳನ್ನು ಉಪಯೋಗಿಸಸಾಧ್ಯವಿದೆ.
ಅತಿ ಜನಪ್ರಿಯ ಪ್ರಾಣಿಗಳು ಎತ್ತುಗಳು. ರೈತನ ಉತ್ಪಾದನೆಗಳನ್ನು ಮತ್ತು ಕುಟುಂಬವನ್ನು ಪಟ್ಟಣಕ್ಕೆ ಎಳೆದುಕೊಂಡು ಹೋಗುವ ಸದಾ ಭರವಸಾರ್ಹ ಎತ್ತಿನ ಬಂಡಿಯನ್ನು ನೋಡದೆ ಭಾರತದ ರಸ್ತೆಗಳಲ್ಲಿ ಪ್ರಯಾಣಿಸುವುದು ಹೆಚ್ಚು ಕಡಮೆ ಅಸಾಧ್ಯವೇ ಸರಿ. ಒಬ್ಬ ವ್ಯಾಪಾರಶೀಲ ಮಾರಾಟಗಾರನು “ಸೂಪರ್ಸ್ಟಾರ್ ಎತ್ತುಗಳು” ಎಂಬ ಗುರುತು ಹಲಗೆಯನ್ನು ಹಾಕಿದ್ದಾನೆ. ಮತ್ತು ಆ ಎತ್ತುಗಳು ಆದರ್ಶರೂಪದ್ದೇನೋ ನಿಜ! ಮತ್ತು ಯಾರಿಗಾದರೂ ಆ ವ್ಯಾಪಾರಿಯನ್ನು ವಂಚಿಸುವ ಯಾ ದೋಚುವ ವಿಚಾರವನ್ನು ಹೋಗಲಾಡಿಸುವುದಕ್ಕಾಗಿ, ಅವನು ಎರಡು ಅಲಂಕರಿಸಿರುವ ರೈಫಲ್ಗಳನ್ನು ಸಿದ್ಧಮಾಡಿ ಇಟ್ಟಿದ್ದಾನೆ. ಈ ಒಂದೊಂದು ಸೂಪರ್ಸ್ಟಾರ್ 35,000 ರೂಪಾಯಿಗಳಿಗೆ ಮಾರಾಟವಾಗುತ್ತದೆ.
ಮುಂದೆ, ಕೆನೆಯುವ ಕುದುರೆಗಳು ನಮ್ಮನ್ನು ಆಕರ್ಷಿಸುತ್ತವೆ. ಮತ್ತು ಅವೆಷ್ಟು ಸುಂದರ ಪ್ರಾಣಿಗಳು! ಇವುಗಳಲ್ಲಿ ಕೆಲವು ಪೊಲೀಸರಿಗೆ ಯಾ ಸೈನಿಕರಿಗೆ ಸವಾರಿಗಾಗಿರುವ ಕುದುರೆಗಳು, ಇನ್ನು ಕೆಲವು ಓಟಕ್ಕಾಗಿರುವ ಕುದುರೆಗಳು. ಸವಾರಿಗಾಗಿ ಮತ್ತು ಬಂಡಿ ಎಳೆಯುವುದಕ್ಕಾಗಿರುವ ಸಣ್ಣ ಜಾತಿಯ ಕುದುರೆಗಳೂ ಇಲ್ಲಿ ದೊರೆಯುತ್ತವೆ. ಒಂದು ಮಾರಾಟ ಸ್ಥಳದಲ್ಲಿ, ಬ್ರಾಸ್ ಬ್ಯಾಂಡ್ ವಾದ್ಯ ಮೇಳ ಬಾಜಿಸುತ್ತಿರುವಾಗ ಸಂತೋಷಗೊಂಡಿರುವ ಒಂದು ಕುದುರೆ ಸಂಗೀತಕ್ಕೆ ತಾಳಬದ್ಧವಾಗಿ ಕುಣಿಯುತ್ತದೆ.
ನಾವು ಗಟ್ಟಿಯಾಗಿ ಕೇಳಿಬರುವ ಕಹಳೆಯತ್ತ ಹೋಗುತ್ತೇವೆ. ಅಲ್ಲಿ ಒಂದು ಮಾವಿನ ತೋಪಿನ ಮಧ್ಯೆ ಒಟ್ಟು 250 ಆನೆಗಳು ನಿಂತಿವೆ. ಎಂತಹ ಘನ ಗಾಂಭೀರ್ಯದ ಪ್ರಾಣಿಗಳವು! ಅವು ಭಾರತದ ಮತ್ತು ನೇಪಾಲದ ಎಲ್ಲೆಡೆಗಳಿಂದಲೂ ಬಂದಿವೆ. ಆದರೆ ಅವು ಚಡಪಡಿಸುತ್ತಿರುವಂತೆ ಕಾಣುತ್ತವೆ. ಇದು ಜನಸಂದಣಿಯ ಕಾರಣ ಹಾಗೂ ತಮ್ಮ ಜಾತಿಯದ್ದೇ ಆದ ಅಷ್ಟೊಂದು ಇತರ ಆನೆಗಳ ಕಾರಣದಿಂದಾಗಿರಬಹುದು.
ಇಲ್ಲಿ ನಮಗೆ, 25 ವಯಸ್ಸಿನ, ಹುಚ್ಚಾಬಟ್ಟೆ ಕೂಗುತ್ತಿರುವ ಗಂಡು ಆನೆಯಾದ ಹರಿಹರ ಪ್ರಸಾದನ ಭೇಟಿಯಾಗುತ್ತದೆ. ಈ ಆನೆಯ ಧಣಿಯಾದ ಗಂಗಾಭಕ್ಷ್ ಸಿಂಗ್ ಈಗ ತಾನೆ ಅವನನ್ನು 70,000 ರೂಪಾಯಿಗಳಿಗೆ ಮಾರಿದ್ದಾನೆ. ಒಳ್ಳೆಯ ಆನೆಗಿರುವ ಈಗಿನ ಮಾರಾಟದ ದರವಾದ ರೂ. 1,30,000ದ ಲೆಕ್ಕದಲ್ಲಿ ನೋಡುವಾಗ, ಈ ಬೆಲೆ ಚಿಕ್ಕ ಬೆಲೆಯೇ ಸರಿ. ಆದರೆ ಹರಿಹರನನ್ನು ಹಿಡಿತದಲ್ಲಿಟ್ಟುಕೊಳ್ಳುವುದು ತುಸು ಕಷ್ಟ.
ಹರಿಹರನಿಗೆ ಜಾತ್ರೆಗೆ ಬರಲು 22 ದಿನ ನಡೆಯ ಬೇಕಾಯಿತು, ಮತ್ತು ಈಗ ಅವನ ಧಣಿಗೆ ಅವನನ್ನು ಬೀಳ್ಕೊಡಲು ದುಃಖವಾಗುತ್ತದೆ. ಆದರೆ ವ್ಯಾಪಾರವೆಂದರೆ ವ್ಯಾಪಾರ, ಮತ್ತು ಭಾವಾವೇಶದ ಸಂಬಂಧಗಳನ್ನು ಕಡಿಯಲೇ ಬೇಕು. ಹರಿಹರನಿಗೆ ತನ್ನ ಹಿಂದಿನ ಮಾವುತನನ್ನು ಬಿಟ್ಟುಹೋಗಲು ದುಃಖವಾಗುತ್ತದೋ ಏನೋ ಎಂದು ನಾವು ಯೋಚಿಸಿದೆವು. ಹೊಸ ಮಾವುತನು ಹರಿಹರನನ್ನು ನಡೆಸಲು ಪ್ರಯತ್ನಿಸಿದಾಗ ಅವನು ತನ್ನ ಹಗ್ಗವನ್ನು ಕಡಿದು ಹಾಕಿದರ್ದಿಂದ ಈಗ ಅವನನ್ನು ಸರಪಣಿಯಿಂದ ಕಟ್ಟಲಾಗಿದೆ.
ಹರಿಹರನನ್ನು ಶಾಂತಪಡಿಸಿ ನಯವಾಗಿ ವರ್ಗಾಯಿಸುವ ಕಾರಣದಿಂದ, ಅವನ ಹಿಂದಿನ ಮಾವುತನು ಅವನ ಹೊಸ ಮನೆಗೆ ಅವನೊಂದಿಗೆ ಪ್ರಯಾಣಿಸುವನು. ಅಲ್ಲಿ ಇಬ್ಬರು ಮಾವುತರೂ, ಹೊಸ ಮಾವುತನು ಹರಿಹರನಿಗೂ ಅವನ ಮನೋವೃತ್ತಿಗೂ ಹೊಂದಿಕೊಳ್ಳುವ ತನಕ, ಕೂಡಿ ಕೆಲಸ ಮಾಡುವರು. ಹರಿಹರನ ಹೊಸ ಧಣಿ ಅವನನ್ನು ಹೆಚ್ಚುಕಾಲ ಇಟ್ಟುಕೊಳ್ಳಲು ಉದ್ದೇಶಿಸುವುದಿಲ್ಲವೆಂದು ನಮಗೆ ತಿಳಿದು ಬರುತ್ತದೆ. ಆದುದರಿಂದ ಮುಂದಿನ ವರ್ಷ ಅವನು ಪುನಃ ಸೋನ್ಪುರಕ್ಕೆ ತರಲ್ಪಟ್ಟು ಮಾರಲ್ಪಡಬಹುದು.
ಆಗ ಹರಿಹರನನ್ನು ರಾಜಸ್ತಾನದ ಜನರು, ಅವನು ಯಾವುದೋ ದೂರ ಸ್ಥಳದಲ್ಲಿ ಒಂದು ದೇವಸ್ಥಾನದ ಆನೆಯಾಗುವಂತೆ ಖರೀದಿಸಬಹುದು. ಆಗ ಅವನು ಪೂರ್ಣವಾಗಿ ಅಲಂಕರಿಸಲ್ಪಟ್ಟು ದೇವಸ್ಥಾನದ ರಥವನ್ನು ಎಳೆಯುವಂತೆ ಉಪಯೋಗಿಸಲ್ಪಡಬಹುದು. ಅಥವಾ ಬಂಗಾಳ ಕೊಲಿಯ್ಲಲ್ಲಿ ಬಹು ದೂರದಲ್ಲಿರುವ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ಮೂಲೆಯಲ್ಲಿರುವ ಕಾಡುಗಳಲ್ಲಿ ತೊಲೆಗಳನ್ನು ಎಳೆಯುವ ಕೆಲಸಕ್ಕೆ ಅವನು ಹೋಗಿ ಸೇರಬಹುದು.
ದೀರ್ಘ ಇತಿಹಾಸದ ಒಂದು ಜಾತ್ರೆ
ಸೋನ್ಪುರದಲ್ಲಿ ಈ ಪಶು ಜಾತ್ರೆ ಯಾವಾಗ ಮತ್ತು ಹೇಗೆ ಆರಂಭವಾಯಿತೆಂದು ಯಾರಿಗೂ ನಿಶ್ಚಯವಾಗಿ ತಿಳಿದಿರುವುದಿಲ್ಲವಾದರೂ, ಮೊಗಲ್ ಸಮ್ರಾಜ ಆಲಮ್ಗೀರ (1658-1707) ನ ಆಳಿಕೆಯಲ್ಲಿ ಇದು ಪ್ರಖ್ಯಾತಿಗೆ ಬಂತೆಂದು ಕಾಣುತ್ತದೆ. ಸ್ಥಳೀಕ ಜಮೀನುದಾರ ರಾಜೇಶ್ವರ ಪ್ರಸಾದ ಸಿಂಗ್ ಎಂಬವರು, 1887ರಿಂದ ತನ್ನ ಕುಟುಂಬ, ಕುದುರೆ ಮಾರ್ಕೆಟಿಗೆ ಸ್ಥಳವನ್ನು ಬಾಡಿಗೆಗೆ ಕೊಡುತ್ತಾ ಇದೆ ಎಂದು ಹೇಳುತ್ತಾರೆ. ಬ್ರಿಟಿಷ್ ಪ್ರಭುತ್ವದ ನೀಲಿ ಸಸ್ಯ ಕೃಷಿಕರು 19ನೆಯ ಶತಮಾನದಿಂದೀಚೆಗೆ, ಈ ಜಾತ್ರೆಯ ಸಮಯದಲ್ಲಿ ಪೋಲೋ ಆಟ, ಕುದುರೆ ಓಟ, ಮತ್ತು ಡಾನ್ಸ್ ಕುಣಿತಗಳಿಗಾಗಿ ಕೂಡಿ ಬರುತ್ತಿದ್ದರು.
ದೊಡ್ಡ ಪರಿವಾರಗಳೊಂದಿಗೆ ಈ ಜಾತ್ರೆಗೆ ಬಂದು ವಿಶೇಷ ಡೇರೆಗಳಲ್ಲಿ ವಾಸ ಮಾಡಿದ ಮಹಾರಾಜರುಗಳು ಆದಿ ದಿನಗಳಲ್ಲಿ ಈ ಜಾತ್ರೆಗೆ ಕಳೆ ಕೊಟ್ಟರು. ಆದರೂ, ಪ್ರಾಣಿಗಳಿಗೆ ಗಿರಾಕಿ ಇರುವಷ್ಟು ಕಾಲ, ಸೋನ್ಪುರ ಜಾತ್ರೆ ನಡೆಯುತ್ತಾ ಮುಂದುವರಿಯುವುದು. ಈ ತೀರ ವಿಭಿನ್ನವಾದ, ಸಕಲ ವಿಧದ ಪ್ರಾಣಿಗಳೇ ಪ್ರಮುಖ ಆಕರ್ಷಣೆಯಾಗಿರುವ ಜಾತ್ರೆಯಲ್ಲಿ ತುಸು ಸಮಯವನ್ನು ಕಳೆಯಲು ನಾವು ಸಂತೋಷ ಪಟ್ಟೆವು. (g92 10/22)
[ಅಧ್ಯಯನ ಪ್ರಶ್ನೆಗಳು]
a ಒಂದು ಸಾವಿರ ರೂಪಾಯಿ ಸುಮಾರು 60 ಅಮೆರಿಕನ್ ಡಾಲರಿಗೆ ಸಮಾನ.
[ಪುಟ 13 ರಲ್ಲಿರುವ ಚಿತ್ರ]
ಪ್ರೇಕ್ಷಕರಿಗೆ ಅಲಂಕರಿಸಲ್ಪಟ್ಟ ಕುದುರೆ ಪ್ರದರ್ಶಿಸಲ್ಪಡುತ್ತಿದೆ
[ಪುಟ 14 ರಲ್ಲಿರುವ ಚಿತ್ರ]
ಮಾರಲ್ಪಟ್ಟ ಬಳಿಕ ಹರಿಹರ ಪ್ರಸಾದ