ಯುವ ಜನರು ಪ್ರಶ್ನಿಸುವುದು . . .
ನಾನು ಮಾಡುವ ಯಾವುದೂ ಯಾವತ್ತೂ ತಕ್ಕಷ್ಟು ತೃಪ್ತಿಕರವಲ್ಲವೇಕೆ?
“ನಾನು ಅಪ್ಪನಿಗಾಗಿ ಕೆಲಸ ಮಾಡತೊಡಗಿದಾಗ, ನನ್ನ ತಂದೆಯನ್ನು ಮೆಚ್ಚಿಸುವುದು ತುಂಬಾ ಕಷ್ಟವೆಂದು ಕಂಡುಕೊಂಡೆ. ನಾನು ಕೇವಲ 15 ವರ್ಷ ವಯಸ್ಸಿನವನಾಗಿದ್ದೆ, ಮತ್ತು ಕೆಲಸ ಬಹು ಜಟಿಲವಾಗಿತ್ತು; ನಾನು ತಪ್ಪು ಮಾಡಿದಾಗ ಅವರು ಟೀಕಿಸತೊಡಗಿದರು.”—ರ್ಯಾಂಡಿ.
“ನನ್ನ ಅಮ್ಮ, ನಾನು ತಪ್ಪಿ ಬೀಳುವ ಸಂಗತಿಗಳಿಗಾಗಿ ಸದಾ ನೋಡುತ್ತಾ, ಪೊಲೀಸ್ ಪತ್ತೇದಾರಿಣಿಯಂತೆ ಕಂಡುಬರುತ್ತಿದ್ದಳು. ನನ್ನ ಕೆಲಸಗಳನ್ನು ಮುಗಿಸಲು ಇನ್ನೂ ಸಮಯವಿರುವಾಗಲೆ, ಅವರು ತಪ್ಪುಗಳನ್ನು ಹುಡುಕುತ್ತಾ ನನ್ನ ಕೆಲಸವನ್ನು ಪರೀಕ್ಷಿಸುತ್ತಿದ್ದರು.”—ಕ್ರೇಗ್.
“ನನ್ನ ಹೆತ್ತವರು ನನಗೆ ಸದಾ ಯಾವ ವಿಷಯದಲ್ಲಾದರೂ ಪ್ರಸಂಗ ಕೊಡುತ್ತಿದ್ದರು. ನನ್ನ ಜೀವನವನ್ನು ಸಂಘಟಿಸುವುದು ನನಗೆ ಸಾಧ್ಯವಿರುವಂತೆ ಕಾಣುವುದಿಲ್ಲ ಎಂದು ಅವರು ಹೇಳಿದರು. ಶಾಲೆ, ಮನೆ, ಸಭೆ—ಇವ್ಯಾವುವೂ ನನಗೆ ಪ್ರಸಂಗದಿಂದ ಉಪಶಮನ ಕೊಡುತ್ತಿರಲಿಲ್ಲ.”—ಜೇಮ್ಸ್.
ಕೆಲವು ಬಾರಿ ನೀವು ಮಾಡುವ ಯಾವುದೂ ಯಾವತ್ತೂ ಹೆತ್ತವರನ್ನು ಮೆಚ್ಚಿಸಲು ಸಾಕಷ್ಟು ತೃಪ್ತಿಕರವಾಗಿರುವುದಿಲ್ಲ ಎಂದು ನಿಮಗನಿಸುತ್ತದೆಯೆ? ನಿಮ್ಮ ಪ್ರತಿಯೊಂದು ಚಲನೆ ಒಂದು ಸೂಕ್ಷ್ಮದರ್ಶಕದ ಕೆಳಗಿದೆ, ನಿಮ್ಮನ್ನು ಸದಾ ಪರೀಕ್ಷಿಸಲಾಗುತ್ತದೆ, ಸದಾ ವಿಮರ್ಶಿಸಲಾಗುತ್ತದೆ, ಮತ್ತು ಆ ಪರೀಕ್ಷೆಯಲ್ಲಿ ನೀವು ಎಂದೂ ಉತ್ತೀರ್ಣರಾಗುವುದೇ ಇಲ್ಲ ಎಂದು ನಿಮಗೆ ಅನಿಸುತ್ತದೆಯೆ? ಹಾಗಿರುವಲ್ಲಿ, ನೀವು ಹೆತ್ತವರ ಅಸಮ್ಮತಿಯಲ್ಲಿ ಅಪವಾದಕ್ಕೊಳಗಾಗಿ ಜೀವಿಸುತ್ತಿದ್ದೀರಿ ಎಂದು ನಿಮಗೆ ಭಾಸವಾಗಬಹುದು.
ನಿಮ್ಮ ಪರಿಸ್ಥಿತಿ ಅದ್ವಿತೀಯವೇನೂ ಅಲ್ಲ. ಡಾ. ಜಾಯ್ಸ್ ಎಲ್. ವೆಡ್ರಲ್ ಅವಲೋಕಿಸುವುದು: “ಬಹುತೇಕ ಹದಿಪ್ರಾಯದವರಿಗನುಸಾರ, ಹೆತ್ತವರು ಬಿಡದೆ ತಪ್ಪು ಹುಡುಕುತ್ತಾರೆ. . . . ಅವರು ನಿಮ್ಮ ಕೋಣೆಯನ್ನು ಶುಚಿಯಾಗಿಡುವುದರಿಂದ ಹಿಡಿದು ಕಚಡವನ್ನು ಹೊರಗೆ ತೆಗೆದುಕೊಂಡು ಹೋಗುವ ವರೆಗೆ, ಸ್ನಾನದ ಕೋಣೆಯನ್ನು ಬಳಸುವ ವಿಧದಿಂದ ಹಿಡಿದು ನೀವು ಉಡುಪು ಧರಿಸುವ ವಿಧದ ವರೆಗೆ, ನಿಮ್ಮ ಸ್ನೇಹಿತರುಗಳ ಆಯ್ಕೆಯಿಂದ ಹಿಡಿದು ಶಾಲೆಯಲ್ಲಿ ನಿಮ್ಮ ಅಂಕಗಳು ಮತ್ತು ಮನೆಗೆಲಸದ ವರೆಗೆ ಸಕಲ ವಿಷಯಗಳಲ್ಲಿ ಹಾಡಿದ್ದನ್ನೇ ಹಾಡುತ್ತಾರೆ.” ಇದು ನಿಮ್ಮನ್ನು ಉದ್ರೇಕಿಸುವುದು ಗ್ರಾಹ್ಯ ವಿಷಯವಾದರೂ, ಇದೊಂದು ಕೆಟ್ಟ ವಿಷಯವಾಗುವ ಅವಶ್ಯವಿಲ್ಲ. ಹೆತ್ತವರು ತಮ್ಮ ಮಕ್ಕಳಿಗೆ ಶಿಸ್ತು ಮತ್ತು ತಿದ್ದುಪಾಟನ್ನು ಕೊಡುವುದು ಸ್ವಾಭಾವಿಕ; ಅವರಿಗೆ ಪ್ರೀತಿಯನ್ನು ತೋರಿಸುವ ಅವರ ಒಂದು ವಿಧವಿದು. ಬೈಬಲ್ ಹೇಳುವಂತೆ, ಒಬ್ಬ ತಂದೆ “ತನ್ನ ಮುದ್ದುಮಗನನ್ನು” ಗದರಿಸುವನು.—ಜ್ಞಾನೋಕ್ತಿ 3:12.
ಈಗ, ನೀವು ನಿಮ್ಮ ಹೆತ್ತವರಿಂದ ಯಾವ ತಿದ್ದುಪಾಟನ್ನೂ ಪಡೆಯದಿರುವಲ್ಲಿ, ಅವರು ನಿಮ್ಮ ವಿಷಯದಲ್ಲಿ ಚಿಂತಿತರೊ ಇಲ್ಲವೊ ಎಂದು ನೀವು ಯೋಚಿಸುವುದಿಲ್ಲವೆ? (ಜ್ಞಾನೋಕ್ತಿ 13:24; ಇಬ್ರಿಯ 12:8 ಹೋಲಿಸಿ.) ಹಾಗಾದರೆ, ನಿಮ್ಮನ್ನು ತಿದ್ದುವಷ್ಟು ಚಿಂತಿಸುವ ಹೆತ್ತವರಿರುವುದಕ್ಕೆ ನೀವು ಕೃತಜ್ಞರಾಗಬಲ್ಲಿರಿ! ಎಷ್ಟೆಂದರೂ ನೀವು ಎಳೆಯರು ಮತ್ತು ಸಂಬಂಧಸೂಚಕವಾಗಿ ಅನನುಭವಿಗಳು. ಆದುದರಿಂದ ತಿದ್ದುಪಾಟು ಕೆಲವು ವೇಳೆ ಸಮಂಜಸವಾಗಿರಬಹುದು. ನಿಮಗೆ ಮಾರ್ಗದರ್ಶನವಿಲ್ಲದಿರುವಲ್ಲಿ, ನೀವು “ಯೌವನದ ಇಚ್ಫೆ”ಗಳಿಂದ ಸುಲಭವಾಗಿ ಸೋಲಿಸಲ್ಪಡಬಲ್ಲಿರಿ.—2 ತಿಮೊಥೆಯ 2:22.
ಆ ಇಚ್ಫೆಗಳು ಯುವಜನರಿಗೆ ತರಬಹುದಾದ ಸಮಸ್ಯೆಗಳನ್ನು ಪರಿಗಣಿಸಿರಿ. ಕೇಟ್ಲನ್ ಬಾರ್ಬೊ ಎಂಬ ಲೇಖಕನು ಹೇಳುವುದು: “ಇದು ಹದಿಹರೆಯದವರಿಗೆ ಅಪಾಯಕರವಾದ ಲೋಕ: ಪ್ರತಿ ತಾಸಿನಲ್ಲಿ ಒಬ್ಬ ತರುಣನು ಮದ್ಯಪಾನದ ಕಾರಣದಿಂದಾಗುವ ವಾಹನ ಅವಘಡದಿಂದ ಸಾಯುತ್ತಾನೆ; ಪ್ರತಿ ವರ್ಷ, ಹನ್ನೆರಡು ಸಾವಿರವೆಂದು ಅಂದಾಜಾಗಿರುವ ಹದಿಹರೆಯದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ; ಒಂದು ವರ್ಷಕ್ಕೆ ಹತ್ತು ಲಕ್ಷ ಹುಡುಗಿಯರು ಗರ್ಭವತಿಯರಾಗುತ್ತಾರೆ; ಮೂವತ್ತು ಲಕ್ಷ ಹದಿಹರೆಯದವರು ಇಂದು ಮದ್ಯಪಾನ ರೋಗಿಗಳು; ರತಿ ರವಾನಿತ ರೋಗಗಳು ವ್ಯಾಪಕವಾಗಿವೆ.” (ಹೌ ಟು ರೆಯ್ಸ್ ಪೇರೆಂಟ್ಸ್) ಹೀಗಿರುವುದರಿಂದ ನಿಮ್ಮ ಹೆತ್ತವರು ನಿಮಗೆ ತಿದ್ದುಪಾಟಿನ ಒಂದೇ ಸವನೆ ಹೋಗುತ್ತಿರುವ ಸರಬರಾಯಿಯನ್ನೇ ಕೊಡಲು ನಿಶ್ಚಯಮಾಡಿರುವುದು ಆಶ್ಚರ್ಯವಲ್ಲ! ಬೈಬಲು ಹೇಳುವಂತೆ, “ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಂಡಿತ್ಯವನ್ನು ಹೊಂದುವನು, . . . ಮೂರ್ಖರಾದರೋ ಜ್ಞಾನವನ್ನೂ ಶಿಕ್ಷೆಯನ್ನೂ ಅಸಡ್ಡೆ ಮಾಡುವರು.”—ಜ್ಞಾನೋಕ್ತಿ 1:5, 7; ಹೋಲಿಸಿ ಜ್ಞಾನೋಕ್ತಿ 10:17.
ಇದು ನೋಯಿಸಲು ಕಾರಣ
ಆದರೂ, “ಯಾವ ಶಿಕ್ಷೆಯೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ.” (ಇಬ್ರಿಯ 12:11) ವಿಶೇಷವಾಗಿ ನೀವು ಚಿಕ್ಕವರಾಗಿರುವಾಗ ಹೀಗಾಗುತ್ತದೆ. ಎಷ್ಟೆಂದರೂ, ನಿಮ್ಮ ವ್ಯಕ್ತಿತ್ವ ಇನ್ನೂ ಪೂರ್ತಿ ವಿಕಾಸಗೊಂಡಿಲ್ಲ; ನೀವು ಇನ್ನೂ ಬೆಳೆಯುತ್ತಿದ್ದು, ನೀವು ಯಾರೆಂದು ಕಂಡುಹಿಡಿಯುತ್ತಿದ್ದೀರಿ. ಹೀಗಿರುವಾಗ ಟೀಕೆ, ಜಾಗ್ರತೆಯಿಂದ ಯೋಚಿಸಿ ದಯಾಭಾವದಿಂದ ಮಾಡಲ್ಪಟ್ಟರೂ, ತೀವ್ರ ಅಸಮಾಧಾನವನ್ನು ಹುಟ್ಟಿಸಬಹುದು. ಹೌ ಟು ಸರ್ವೈವ್ ಯೂಅರ್ ಆ್ಯಡೊಲೆಸೆಂಟ್ಸ್ ಆ್ಯಡೊಲೆಸೆನ್ಸ್ ಎಂಬ ಪುಸ್ತಕ, ಹದಿಪ್ರಾಯದವರಿಗೆ, “ಟೀಕೆಯ ಸಂಬಂಧದಲ್ಲಿ ವಿಪರೀತ ಸುಲಭ ಸಂವೇದನೆಯಿದೆ” ಎಂದು ತೀರ್ಮಾನಿಸುತ್ತದೆ. ಒಬ್ಬ ಯುವ ವ್ಯಕ್ತಿ ಹೇಳುವಂತೆ, “ಟೀಕೆ ನನ್ನನ್ನು ನೋಯಿಸುತ್ತದೆ.”
ಆದರೆ ಅದು ನಿಮ್ಮ ಹೆತ್ತವರಿಂದ ಬರುವಾಗಲಂತೂ, ನೋವು ವಿಶೇಷವಾಗಿ ಆಳವಾಗಿರಬಲ್ಲದು. ಹೆಲ್ಪಿಂಗ್ ಯೂಅರ್ ಟೀನೇಜರ್ ಡೀಲ್ ವಿದ್ ಸೆಸ್ಟ್ರ್ ಎಂಬ ಪುಸ್ತಕದಲ್ಲಿ, ಡಾ. ಬೆಟಿ ಯಂಗ್ಸ್ ನಮಗೆ ಜ್ಞಾಪಕ ಹುಟ್ಟಿಸುವುದೇನಂದರೆ, “ಇತರರ ಸಮ್ಮತಿ ಯಾ ಅಸಮ್ಮತಿಯ” ಮೂಲಕ ಒಬ್ಬ ಯುವಕನು “ತನ್ನ ಆತ್ಮಮೌಲ್ಯ ಮತ್ತು ಮಾನವ ಜೀವಿಯಾಗಿರುವುದರ ಬೆಲೆಯನ್ನು ವಿಕಸಿಸಿಕೊಳ್ಳುತ್ತಾನೆ.” ಆದರೆ ಹೆತ್ತವರೇ ಈ ಆತ್ಮಕಲ್ಪನೆಯನ್ನು ಯುವಕನು ರೂಪಿಸಿಕೊಳ್ಳಲು ಸಹಾಯ ಮಾಡುವುದರಲ್ಲಿ ಅತಿ ದೊಡ್ಡ ಅಂಶವಾಗಿದ್ದಾರೆ. ಹೀಗೆ, ಹೆತ್ತವರಲ್ಲಿ ಒಬ್ಬರು ನಿಮ್ಮನ್ನು ತಿದ್ದುವಲ್ಲಿ ಯಾ ನೀವು ಯಾವುದನ್ನು ಮಾಡುತ್ತೀರೋ ಅದರ ವಿಧದ ಕುರಿತು ಗೊಣಗುವಲ್ಲಿ, ಅದು ಧ್ವಂಸಕಾರಕ, ವೇದನಾಮಯವಾಗಬಲ್ಲದು.
ಹೀಗಿದ್ದರೂ, ನೀವು ಮಾಡುವ ಯಾವುದೂ ಯಾವತ್ತೂ ತೃಪ್ತಿಕರವಲ್ಲವೆಂದು ನೀವು ತೀರ್ಮಾನಿಸಬೇಕೊ? ಅಥವಾ, ನಿಮ್ಮ ಹೆತ್ತವರು ನಿಮ್ಮ ಕೆಲವು ತಪ್ಪುಗಳನ್ನು ತೋರಿಸಿಕೊಟ್ಟಿರುವುದರಿಂದ ನೀವು ಪೂರ್ತಿ ವಿಫಲರೆಂದು ಹೇಳಬೇಕೊ? ನಿಜವಾಗಿಯೂ, ಸಕಲ ಮಾನವರು ಪರಿಪೂರ್ಣತೆಯಿಂದ ತೀರಾ ಕೆಳಮಟ್ಟದಲ್ಲಿದ್ದಾರೆ. (ರೋಮಾಪುರ 3:23) ಮತ್ತು ತಪ್ಪು ಮಾಡುವುದು ಕಲಿಯುವ ಕಾರ್ಯವಿಧಾನದ ಒಂದು ಭಾಗವಾಗಿದೆ. (ಯೋಬ 6:24 ಹೋಲಿಸಿ.) ನೀವು ಯಾವುದನ್ನಾದರೂ ಸರಿಯಾಗಿ ಮಾಡುವಲ್ಲಿ ಅವರು ಏನೂ ಹೇಳದೆ ಇರುವುದೂ, ತಪ್ಪು ಮಾಡುವಲ್ಲಿ ಒದರುವುದೂ ಸಮಸ್ಯೆಯಾಗಿದೆ! ಇದರಿಂದ ನೋವಾಗುವುದು ಸತ್ಯವಾದರೂ ನೀವು ಪೂರ್ತಿ ವಿಫಲರೆಂದು ಇದರ ಅರ್ಥವಾಗುವುದಿಲ್ಲ. ನ್ಯಾಯೋಚಿತ ಟೀಕೆಯನ್ನು, ತಿರಸ್ಕಾರ ಮಾಡದೆಯೂ ಅದರಿಂದ ಪರವಶರಾಗದಂತೆಯೂ ನೋಡಿಕೊಂಡು, ಶಾಂತಭಾವದಿಂದ ವಿಪರೀತವಾಗಿ ಚಿಂತಿಸದೆ ಅಂಗೀಕರಿಸಲು ಕಲಿಯಿರಿ.—ಇಬ್ರಿಯ 12:5 ಹೋಲಿಸಿ.
ನ್ಯಾಯಸಮ್ಮತವಲ್ಲದ ಟೀಕೆ
ಟೀಕೆ ನ್ಯಾಯಸಮ್ಮತವಲ್ಲದಿರುವಲ್ಲಿ? ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ನ್ಯಾಯವಲ್ಲದಷ್ಟು ಉನ್ನತ ಮಟ್ಟಗಳನ್ನಿಡುತ್ತಾರೆ. ಅವರು ಚಿಕ್ಕ ಚಿಕ್ಕ ವಿಷಯಗಳ ಕುರಿತು ತಮ್ಮ ಮಕ್ಕಳನ್ನು ಸದಾ ಕಾಡುತ್ತಿರಬಹುದು. ಮತ್ತು ಗೊಣಗಲು ನ್ಯಾಯಸಮ್ಮತವಾದ ಕಾರಣಗಳಿರುವಲ್ಲಿ, ಟೀಕೆಯನ್ನು ಬಿರುಸಾಗಿ, ಹೀನಾಯವಾಗಿ ಅವರು ಕೊಡಬಹುದು. ಹೆತ್ತವರ ಈ ರೀತಿಯ “ಅವಮರ್ಯಾದೆಯ ಮಾತುಗಳು, ಪ್ರಸಂಗ, ಕೆಣಕು ನುಡಿ, ಅವಮಾನ ಮಾಡುವುದು, ದೂರು ಹೊರಿಸುವುದು, ಮತ್ತು ಬೆದರಿಕೆ ಕೊಡುವುದು, . . . ಮಗುವಿನ ಆತ್ಮ ವಿಶ್ವಾಸ ಮತ್ತು ಬೆಲೆಯನ್ನು ಕೊರೆಯುತ್ತದೆ” ಎಂದೂ ಡಾ. ಬೆಟಿ ಯಂಗ್ಸ್ ಹೇಳುತ್ತಾರೆ.
ನೀತಿವಂತನಾದ ಯೋಬನು ಅನ್ಯಾಯವಾಗಿ ಟೀಕೆಯ ಸುರಿಮಳೆಯಿಂದ ಆಕ್ರಮಿಸಲ್ಪಟ್ಟಾಗ, “ಎಷ್ಟರ ವರೆಗೆ ನನ್ನ ಆತ್ಮವನ್ನು ನೋಯಿಸಿ ಮಾತುಗಳಿಂದ ನನ್ನನ್ನು ಜಜ್ಜುತ್ತಿರುವಿರಿ?” ಎಂದು ಕೂಗಿದನು. (ಯೋಬ 19:2) ತದ್ರೀತಿ, ಹೆತ್ತವರಿಂದ ಎಡೆಬಿಡದೆ ಕೆಳಗೆ ತಳ್ಳಲ್ಪಡುವ ಯಾ ಅನೈಜವಾದ ಉನ್ನತ ಮಟ್ಟದಿಂದ ಅಳೆಯಲ್ಪಡುವ ಯುವಕನು ರೇಗಿಸಲ್ಪಟ್ಟು, “ಮನಗುಂದಿಸ”ಲ್ಪಡಬಹುದು. (ಕೊಲೊಸ್ಸೆ 3:21) ಕೋಪಿಂಗ್ ವಿದ್ ಟೀನೇಜ್ ಡಿಪ್ರೆಷನ್ ಎಂಬ ಕ್ಯಾತೀನ್ಲ್ ಮೆಕಾಯ್ ಅವರ ಪುಸ್ತಕ, “ಹೆತ್ತವರ ಉನ್ನತ ನಿರೀಕ್ಷಣೆಗಳಿಗೆ ಅನುಸಾರವಾಗಿ ಬದುಕುವ ಅಸಾಮರ್ಥ್ಯವು ಆತ್ಮಾಭಿಮಾನದ ಗಮನಾರ್ಹ ನಷ್ಟವನ್ನು ತಂದೊಡ್ಡಿ ತರುಣರಲ್ಲಿ ಪ್ರತಿಕ್ರಿಯಾತ್ಮಕ ಖಿನ್ನತೆಯನ್ನು ಹುಟ್ಟಿಸಬಲ್ಲದು” ಎಂದೂ ವಾದಿಸುತ್ತದೆ.
ಇಂತಹ ಅನಾರೋಗ್ಯಕರ ಟೀಕೆ ಅನೇಕ ವೇಳೆ ಒಂದು ವಿಷಮ ಚಕ್ರವನ್ನು ಉಂಟುಮಾಡುತ್ತದೆ: ನಿಮ್ಮ ಹೆತ್ತವರು ನಿಮ್ಮಲ್ಲಿ ತಪ್ಪು ಕಂಡುಹಿಡಿಯುತ್ತಾರೆ. ಇದಕ್ಕೆ ನೀವು ನಿಮ್ಮೊಳಗೆ ಮನಸ್ಸು ಕೆಡಿಸಿಕೊಳ್ಳುತ್ತಾ ಪ್ರತಿಕ್ರಿಯೆ ತೋರಿಸುತ್ತೀರಿ. ನಿಮ್ಮ ಮನಸ್ಸು ನೊಂದಿರುವುದರಿಂದ, ನಿಮ್ಮ ಹೆತ್ತವರು ನೀವು ಏನಾದರೂ ಮಾಡುವಂತೆ ಕೇಳಿಕೊಳ್ಳುವಲ್ಲಿ, ಅದನ್ನು ಹೀನ ರೀತಿಯಲ್ಲಿ ಮಾಡುತ್ತೀರಿ. ಪರಿಣಾಮ? ಇನ್ನೂ ಹೆಚ್ಚು ಟೀಕೆ!
ಟೀಕೆಯ ಹಿಂದುಗಡೆ
ಈ ವಿನಾಶಕರವಾದ ಚಕ್ರವನ್ನು ನೀವು ಹೇಗೆ ನಿಲ್ಲಿಸಬಲ್ಲಿರಿ? ಪ್ರಥಮವಾಗಿ, ಹೆತ್ತವರಿಗೆ ಹಾಗೇಕೆ ಅನಿಸುತ್ತದೆಂದು ತಿಳಿಯಲು ಪ್ರಯತ್ನಿಸಿರಿ. ಅವರ ಕಾಡುವಿಕೆ ಯಾ ಎಡೆಬಿಡದ ಟೀಕೆ ಹಗೆ ಸಾಧನೆಯ ಕಾರಣವೊ? ಹಾಗೆ ಆಗಿರಲಿಕ್ಕಿಲ್ಲ. ಡಾ. ಜಾಯ್ಸ್ ಎಲ್. ವೆಡ್ರಲ್ ಕೇಳುವುದು: “ಅವರು ಕಾಡುವುದೇಕೆ? ಯಾರೂ ಕೇಳದಿರುವುದರಿಂದ ಯಾ ಕೇಳುತ್ತಿದ್ದೇವೆಂದು ತೋರಿಸಿಕೊಡದಿರುವುದರಿಂದಲೇ ಅವರು ಕಾಡುತ್ತಾರೆ. ತಮ್ಮನ್ನು ಅಸಡ್ಡೆ ಮಾಡಲಾಗುತ್ತದೆಂದು ಅವರಿಗೆ ಎಷ್ಟು ಹೆಚ್ಚು ಅನಿಸುತ್ತದೆಯೋ ಅಷ್ಟು ಹೆಚ್ಚು ಅವರು ಕಾಡುತ್ತಾರೆ.” ಹಾಗಾದರೆ, ನೀವು ಹೆತ್ತವರ ದೂರುಗಳಿಗೆ ಪ್ರತಿವರ್ತಿಸುತ್ತಿದ್ದೀರಿ ಎಂಬುದಕ್ಕೆ ನಿಜವಾಗಿಯೂ ರುಜುವಾತನ್ನು ಕೊಡುತ್ತೀರೊ? ಯಾ ಅವರ ಮಾತುಗಳಿಗೆ ಗಮನ ಕೊಡಲು ನೀವು ನಿರಾಕರಿಸುತ್ತೀರೊ? ಹೀಗಿರುವಲ್ಲಿ, ಅವರ ತಪ್ಪು ಕಂಡುಹಿಡಿಯುವಿಕೆ, ಮರಳಿ ಮರಳಿ ಬರುವುದನ್ನು ಮತ್ತು ಹೆಚ್ಚು ಉಗ್ರವಾಗುವುದನ್ನು ನೋಡಲು ಆಶ್ಚರ್ಯ ಪಡಬೇಡಿ! ಆದರೆ ನೀವು ಜ್ಞಾನೋಕ್ತಿ 19:20ರ ಮಾತುಗಳನ್ನು ಅನ್ವಯಿಸಿಕೊಳ್ಳುವಲ್ಲಿ ಅದು ನಿಂತೀತೆ? ಆ ವಚನ ಓದುವುದು: “ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ.”
ಕೆಲವು ಬಾರಿ ಹೆತ್ತವರಲ್ಲಿ ಒಬ್ಬರು ವಿಪರೀತ ಟೀಕೆ ಮಾಡುತ್ತಾರೆ. ನೀವು ಮಾಡಿದ ನಿರ್ದಿಷ್ಟ ತಪ್ಪಿನ ಕಾರಣದಿಂದಲ್ಲ, ಅವರ ಮನಸ್ಸಿನ ಕೆಟ್ಟ ಸ್ಥಿತಿಯ ಕಾರಣವೆ. ನಿಮ್ಮ ಅಮ್ಮನಿಗೆ ಆ ದಿನ ಕಷ್ಟ ಕೆಲಸದ ದಿನವಾಗಿತ್ತೊ? ಹಾಗಿರುವಲ್ಲಿ, ನಿಮ್ಮ ಕೋಣೆ ಅಶುಚಿಯಾಗಿರುವುದನ್ನು ಕಂಡು ಅದನ್ನು ನಿಮ್ಮ ಮೇಲೆ ತೆಗೆಯುವ ಪ್ರವೃತ್ತಿ ಅವರಿಗಿರಬಹುದು. ನಿಮ್ಮ ಅಪ್ಪ, ಕುಟುಂಬದ ಹಣಕಾಸಿನ ಕಮ್ಮಿಯ ಕಾರಣ ಕೋಪವುಳ್ಳವರೂ ಹತಾಶರೂ ಆಗಿದ್ದಾರೊ? ಆಗ ಅವರು ಉದ್ದೇಶಪೂರ್ವಕವಲ್ಲದೆ, ಯೋಚನೆ ಮಾಡದೆ, “ಕತ್ತಿ ತಿವಿದ ಹಾಗೆ ದುಡುಕಿ” ಮಾತಾಡಬಹುದು. (ಜ್ಞಾನೋಕ್ತಿ 12:18) ಇದು ಅನ್ಯಾಯವೆಂದು ಒಪ್ಪಿಕೊಳ್ಳೋಣ. ಆದರೆ, “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು.” (ಯಾಕೋಬ 3:2) ಆದುದರಿಂದ ಅಪ್ಪ ಯಾ ಅಮ್ಮ ಬಿಗುಪಾಗಿದ್ದಾರೆ ಯಾ ಕೆರಳಿದ್ದಾರೆ ಎಂದು ತೋರಿಬರುವಲ್ಲಿ, ಜಾಗ್ರತೆಯಿಂದ ವರ್ತಿಸುತ್ತಾ ಟೀಕೆಯನ್ನು ಎಬ್ಬಿಸುವುದನ್ನು ತಪ್ಪಿಸುವುದೇ ಬುದ್ಧಿವಂತಿಕೆಯಾಗಿದೆ.
ಅಪೂರ್ಣ ಮಾನವರಾಗಿರುವ ಹೆತ್ತವರು ಸಹ ತಾವು ಅಯೋಗ್ಯರೆಂಬ ಅನಿಸಿಕೆಯಿಂದ ಬಾಧಿತರಾಗಬಲ್ಲರು. ನಿಮ್ಮ ವೈಫಲ್ಯವು ಅವರೇ ವಿಫಲಗೊಂಡವರು ಎಂಬ ಅನಿಸಿಕೆಯನ್ನು ಅವರಿಗೆ ಕೊಡಬಲ್ಲದು! ಡಾ. ವೆಡ್ರಲ್ ವಿವರಿಸುವುದು: “ನೀವು ಮನೆಗೆ [ಶಾಲೆಯಿಂದ] ಒಂದು ಕೆಟ್ಟ ವರದಿಯನ್ನು ತರಬಹುದು, ಆಗ ನಿಮ್ಮ ತಂದೆ, ‘ಏನು, ನೀನು ಮೂರ್ಖನೊ? ನನಗೆ ಪೆದನ್ದಾಗಿರುವ ಮಗನಿದ್ದಾನೆ,’ ಎಂದು ಹೇಳಬಹುದು. ನಿಮ್ಮ ತಂದೆ ನೀವು ಪೆದ್ದರು ಆಗಿದ್ದೀರಿ ಎಂದು ನಂಬುವುದಿಲ್ಲವೆಂಬುದು ನಿಜ. ಅವರು ನಿಜವಾಗಿಯೂ ಹೇಳುವುದೇನಂದರೆ, ‘ನೀನು ಕಲಿಯುವಂತೆ ಪ್ರಚೋದಿಸುವುದರಲ್ಲಿ ನಾನು ನನ್ನ ಕೆಲಸವನ್ನು ಮಾಡುತ್ತಿಲ್ಲ ಎಂಬುದಕ್ಕೆ ವಿಷಾದಿಸುತ್ತೇನೆ.’”
ಇಂಥ ಭಯಗಳು, ಹೆತ್ತವರು ಅನೈಜ ರೀತಿಯ ಉನ್ನತ ಮಟ್ಟವನ್ನು ಇಡುವಂತೆಯೂ ಮಾಡಬಲ್ಲದು. ಜೇಸನ್ ಎಂಬ ಯುವಕ ಪ್ರಲಾಪಿಸಿದ್ದು: “ನಾನು ಮಾಡಿದ ಯಾವುದೂ ಯಾವತ್ತೂ ಸಾಕಾಗಿದ್ದುದಿಲ್ಲ. ನಾನು ಒಣ ಎಲೆಗಳನ್ನು ಬಾಚಿ ಕೂಡಿಸುವಲ್ಲಿ, ಆ ಕೆಲಸ ಮಾಡುವಾಗ ಗ್ಯಾರೇಜನ್ನೂ ಏಕೆ ಶುಚಿ ಮಾಡಲಿಲ್ಲ ಎಂದು ತಿಳಿಯಲು ಅಪ್ಪ ಬಯಸುತ್ತಾರೆ. ನಾನು ಶಾಲೆಯಲ್ಲಿ ‘ಎ ಮೈನಸ್’ ಶ್ರೇಣಿ ಪಡೆಯುವಲ್ಲಿ, ನನ್ನ ತಂದೆತಾಯಿ ನನಗೆ ‘ಎ’ ಏಕೆ ಸಿಕ್ಕಲಿಲ್ಲವೆಂದು ತಿಳಿಯಬಯಸಿ, ನಾನು ವಿಫಲ ಎಂದು ಹೇಳುತ್ತಾರೆ.” ಆದರೆ ಒಬ್ಬ ಶಾಲಾ ಸಲಹೆಗಾರನು ಜೇಸನನ ಹೆತ್ತವರೊಡನೆ ಮಾತನಾಡಿ ಇದನ್ನು ಕಂಡುಹಿಡಿದನು: “ತಮ್ಮ ಮಗನಿಗಾಗಿ ಅವರಿಟ್ಟಿದ್ದ ಉನ್ನತ ಹಾರೈಕೆಗಳು, ಅವರ ಸ್ವಂತ ಅಯೋಗ್ಯ ಅನಿಸಿಕೆಗಳನ್ನೂ ಅವರ ಸ್ವಂತ ಜೀವನೋಪಾಯದ ಆಯ್ಕೆಗಳಲ್ಲಿ ಮತ್ತು ಹಣಕಾಸಿನ ಸ್ಥಾನಮಾನಗಳಲ್ಲಿ ಅವರ ನಿರಾಶೆಯನ್ನೂ ಪ್ರತಿಬಿಂಬಿಸಿದುವು.”—ಕೋಪಿಂಗ್ ವಿದ್ ಟೀನೇಜ್ ಡಿಪ್ರೆಷನ್.
ನಿಮ್ಮ ಮನೆಯ ಸ್ಥಿತಿಗತಿ ಯಾವುದೇ ಇರಲಿ, ನಿಮ್ಮ ಸ್ವಂತ ಹೆತ್ತವರು ಕೆಲವು ಬಾರಿ ಟೀಕಿಸುವ ಪ್ರವೃತ್ತಿಯವರು ಏಕೆ ಆಗಿರುತ್ತಾರೆಂದು ಪ್ರಾಯಶಃ ನೀವು ಹೆಚ್ಚು ಗಣ್ಯ ಮಾಡಬಲ್ಲಿರಿ. ಆದರೆ ಇಂತಹ ಹೆತ್ತವರ ತಪ್ಪು ಕಂಡುಹಿಡಿಯುವಿಕೆಯನ್ನು ನಿಭಾಯಿಸುವ ಕೆಲವು ಮಾರ್ಗಗಳಾವುವು? ಅವರ ಟೀಕೆಯಿಂದ ಪ್ರಯೋಜನ ಪಡೆಯುವ ಮಾರ್ಗಗಳಿವೆಯೆ? ಈ ಪ್ರಶ್ನೆಗಳನ್ನು ಮುಂದಿನ ಒಂದು ಸಂಚಿಕೆಯ ಲೇಖನದಲ್ಲಿ ಚರ್ಚಿಸಲಾಗುವುದು. (g92 11/22)
[ಪುಟ 11 ರಲ್ಲಿರುವ ಚಿತ್ರ]
ಒಬ್ಬ ಹೆತ್ತವರು ನೀವು ಯಾವುದನ್ನಾದರೂ ಮಾಡುವ ವಿಧದ ಕುರಿತು ಗೊಣಗುವಾಗ ಅದು ಧ್ವಂಸಕಾರಕವಾಗಿರಬಲ್ಲದು