ಟೀಕಿಸಲ್ಪಡುವಾಗ ನೀವು ಅದನ್ನು ಸ್ವೀಕರಿಸಲು ದ್ವೇಷಿಸುತ್ತೀರೊ?
ನೀವು ಕೊನೆಯ ಬಾರಿ ಟೀಕಿಸಲ್ಪಟ್ಟ ಸಮಯ ನಿಮಗೆ ಜ್ಞಾಪಕವಿದೆಯೆ? ಇದು ಆಗಾಗ ಎಲ್ಲರಿಗೆ ವಿವಿಧ ಕಾರಣಗಳಿಂದಾಗಿ ಸಂಭವಿಸುತ್ತದೆ.
ಪ್ರಾಯಶಃ ತನ್ನನ್ನು ಹೆಚ್ಚಿಸಿಕೊಳ್ಳುವ ಕಾರಣದಿಂದ ಒಬ್ಬನು ನಿಮ್ಮನ್ನು ಟೀಕಿಸಿರಬಹುದು. ಆದರೆ ಅನೇಕ ವೇಳೆ, ಇಂಥ ಟೀಕೆ ನಿಮ್ಮ ಹಿತಾಭಿಲಾಷಿಯಿಂದ ಬರುತ್ತದೆ. ನಿಮ್ಮ ಪತಿ ಅಡುಗೆಯಲ್ಲಿ ಏನೊ ತಪ್ಪು ಕಂಡುಹಿಡಿಯುತ್ತಾನೆ; ನಿಮ್ಮ ಪತ್ನಿ, ನಿಮ್ಮ ಟೈ ಉಡುಪಿಗೆ ಹೊಂದಿಕೊಂಡಿಲ್ಲ ಎನ್ನುತ್ತಾಳೆ; ಒಬ್ಬ ಮಿತ್ರನು ನಿಮ್ಮ ಆರೋಗ್ಯದ ಜಾಗ್ರತೆಯನ್ನು ನೀವು ವಹಿಸಿಲ್ಲವೆಂದು ನಿಮ್ಮನ್ನು ಟೀಕಿಸುತ್ತಾನೆ. ಅಥವಾ, ನಿಮ್ಮ ಟೀಕೆ ನಿಮ್ಮ ಧಣಿಯಿಂದ ಯಾ (ನೀವು ಚಿಕ್ಕಪ್ರಾಯದವರಾಗಿರುವಲ್ಲಿ) ನಿಮ್ಮ ಹೆತ್ತವರಿಂದ, ನೀವು ಹೇಳಿದ ಯಾ ಮಾಡಿದ ಯಾವುದನ್ನೊ ಸರಿಪಡಿಸುವ ಶಿಸ್ತುಪಾಲನೆಯದ್ದಾಗಿರಬಹುದು.
ಯಾವುದೇ ಆಗಿರಲಿ, ಆ ಟೀಕೆಯನ್ನು ನೀವು ಸ್ವಾಗತಿಸಿದಿರೊ? ಅಥವಾ, ನೀವು ಕೆರಳಿ ಬಿಟ್ಟು, ಅವನಿಗೆ, ನಿನ್ನ ಕೆಲಸ ನೀನು ನೋಡಿಕೊ ಎಂದು ಹೇಳಿದಿರೊ?
ಅನೇಕರಿಗೆ, ಟೀಕೆಯನ್ನು ಸ್ವೀಕರಿಸುವುದು ವೇದನಾಮಯ ಅನುಭವ. ಅವರು ಕೋಪಗೊಂಡು ಮುನಿಯುತ್ತಾರೆ. ಇತರರು ತಮ್ಮಲ್ಲಿ ಭರವಸೆ ಕಳೆದುಕೊಂಡು, ‘ನನ್ನಿಂದ ಸರಿಯಾದ ಯಾವುದನ್ನೂ ಮಾಡಲಾಗುವುದಿಲ್ಲ’ವೆಂದು ತೀರ್ಪು ಮಾಡಿ ಖಿನ್ನರಾಗುತ್ತಾರೆ.
ಟೀಕಿಸಲ್ಪಡುವುದನ್ನು ದ್ವೇಷಿಸುವವರಲ್ಲಿ ನೀವು ಒಬ್ಬರೋ? ಹಾಗಿರುವಲ್ಲಿ ನೀವು ವಿಚಿತ್ರ ವ್ಯಕ್ತಿಯಲ್ಲ; ಅನೇಕರಲ್ಲಿ ಈ ಮನೋಭಾವವಿದೆ. ಟೀಕೆಯನ್ನು ಕಡಮೆ ವೇದನೆಯಿಂದ ಮತ್ತು ವಿಪರೀತ ಪ್ರತಿಕ್ರಿಯೆ ಇಲ್ಲದೆ ಅಂಗೀಕರಿಸಲು ನೀವು ಕಲಿಯಬಹುದೊ? ಟೀಕೆಯನ್ನು ಮನಸ್ಸಿಗೆ ಹಿತಕರವಾಗಿ ಮಾಡುವ ಆರು ವಿಧಗಳನ್ನು ಈ ಲೇಖನ ಪರೀಕ್ಷಿಸುತ್ತದೆ. ಅವು, ನೀವು ಟೀಕೆಯ ಕೊಂಡಿಯನ್ನು ನಿವಾರಿಸಲು, ಇಲ್ಲವೆ, ಕಡಮೆ ಪಕ್ಷ, ಅದನ್ನು ಕಮ್ಮಿ ಮಾಡಲು ನಿಮಗೆ ಸಹಾಯ ಮಾಡಬಹುದು.
1. ಟೀಕೆಯನ್ನು ಸ್ವಾಗತಿಸಿ
ಕೆಲವರು ಟೀಕೆಯನ್ನು ಅಪೇಕ್ಷಿಸುತ್ತಾರೆ, ಮತ್ತು ಹುಡುಕುವುದೂ ಉಂಟೆಂದು ತಿಳಿಯುವುದು ನಿಮಗೆ ವಿಚಿತ್ರವೆಂದು ತೋರುತ್ತದೆಯೆ? ಬಿಟ್ಸ್ ಆ್ಯಂಡ್ ಪೀಸೆಸ್ ಎಂಬ ಪತ್ರಿಕೆ ಗಮನಿಸಿದ್ದು: “ಚತುರ ನಾಯಕರು . . . ತಾವು ಸ್ವಲ್ಪ ಪ್ರತಿಶತವಾದರೂ ತಪ್ಪಿಬೀಳುತ್ತೇವೆಂದು ತಿಳಿದಿದ್ದಾರೆ. ಈ ಕಾರಣದಿಂದ ಅವರು ವಿರೋಧ ವೀಕ್ಷಣವನ್ನು —ಮಾಡುವ ಮೊದಲೆ ಅವುಗಳನ್ನು ಕಡಮೆ ಮಾಡುವಂತೆ ಮತ್ತು ಹಿಂದಿನ ತಪ್ಪುಗಳನ್ನು ಸಾಧ್ಯವಾಗುವಷ್ಟು ಬೇಗನೆ ಸರಿ ಮಾಡುವಂತೆ ಅಪೇಕ್ಷಿಸುತ್ತಾರೆ.
ನಾವು ನೋಡಸಾಧ್ಯವಿಲ್ಲದ ನಮ್ಮ ತೋರಿಕೆಯ ವಿವಿಧ ಭಾಗಗಳನ್ನು—ಷರ್ಟಿನ ಮೇಲೆ ತಿರುಗಿದ ಕಾಲರ್, ಓರೆಯಾಗಿರುವ ಟಯಿ— ಇತರರಿಗೆ ನೋಡಸಾಧ್ಯವಿರುವಂತೆಯೆ, ನಮಗೆ ತಿಳಿಯದ ವ್ಯಕ್ತಿತ್ವಗಳನ್ನು ಅವರು ನೋಡಬಲ್ಲರು. ಅವರ ಅಭಿಪ್ರಾಯಗಳನ್ನು ನಮ್ಮನ್ನು ಬೆದರಿಸುವುವುಗಳಾಗಿ ಎಣಿಸದೆ ಸಹಾಯಕರವೆಂದೆಣಿಸಿರಿ. ಅವರ ಟೀಕೆಯನ್ನು ಕಲಿಯುವ ಸಂದರ್ಭವಾಗಿ ಸ್ವಾಗತಿಸಿರಿ. ಅದನ್ನು ಬಲಪಡಿಸುವ ಅನುಭವವಾಗಿ ಮಾಡಿರಿ.
2. ನಿಮ್ಮ ವಿಪರೀತ ವಿಮರ್ಶಕನನ್ನು ನಿಯಂತ್ರಿಸಿರಿ
ನೀವು ನಿಮ್ಮನ್ನು ವಿಪರೀತವಾಗಿ ಟೀಕಿಸಿಕೊಳ್ಳುವವರೊ? ನಿಮ್ಮ ತಪ್ಪುಗಳ ವಿಷಯ ಚಿಂತಾಕುಲರಾಗುತ್ತಿರೊ? ಅಥವಾ, ಯಾವನಾದರೂ ನಿಮ್ಮ ತಪ್ಪಿಗೆ ಗಮನ ಸೆಳೆಯುವಲ್ಲಿ, ಅದಕ್ಕೆ ಸಂಬಂಧಿಸದ ಅನೇಕ ಬಲಹೀನತೆಗಳನ್ನು ನೀವದಕ್ಕೆ ಮಾನಸಿಕವಾಗಿ ಕೂಡಿಸುತ್ತೀರೊ?
ಡಾ. ಹ್ಯಾರಲ್ಡ್ ಬ್ಲೂಮ್ಫೀಲ್ಡ್ ಹೇಳುವುದು: “ನಾವು ಆಗಲೆ ಆತ್ಮವಿಮರ್ಶೆಯಿಂದ ಪೀಡಿತರಾಗಿರುವಲ್ಲಿ, ಇತರರಿಂದ ಟೀಕೆ ಬರುವಾಗ ವಿಶೇಷವಾಗಿ ಪೀಡಿತರಾಗುವೆವು. ಯಾವನಾದರೂ ನಮ್ಮನ್ನು ಹೊಗಳಿದ ಮೇಲೆ ಒಂದೇ ಒಂದು ಸಣ್ಣ ಟೀಕೆಯನ್ನು ಮಾಡಿದರೂ ನಾವು ಸಾಮಾನ್ಯವಾಗಿ, ಉತ್ತಮ ವಿಷಯಗಳ ಬದಲಿಗೆ ಅದರ ಮೇಲೆ ಕೇಂದ್ರೀಕರಿಸುತ್ತೇವೆ.”
ನಿಮ್ಮನ್ನು ಮೌಲ್ಯಮಾಪನ ಮಾಡಿಕೊಳ್ಳುವಾಗ ನ್ಯಾಯಸಮ್ಮತವಾಗಿ ಮಾಡಿರಿ. ಯಾವುದು ನ್ಯಾಯಸಮ್ಮತವೆಂದು ನೀವು ಹೇಗೆ ನಿರ್ಧರಿಸಬಹುದು? ನಿಮ್ಮ ಆಪ್ತಮಿತ್ರನೊಬ್ಬನಿಗೆ ಟೀಕೆ ದೊರೆಯುತ್ತಾ ಇದೆ ಎಂದು ಭಾವಿಸೋಣ. ಅವನಿಂದ ನೀವು ಯಾವ ಪ್ರತಿಕ್ರಿಯೆಯನ್ನು ಬಯಸುತ್ತೀರಿ? ಸ್ವಾನುಕಂಪವನ್ನೊ? ಕೋಪದ ಕೆರಳನ್ನೊ? ಉತ್ತಮ ಸಲಹೆಯ ಕಡೆಗೆ ಹೆಮ್ಮೆಯ ನಿರಾಕರಣೆಯನ್ನೊ? ಅಲ್ಲ, ಅವನು ಕಡಮೆ ನೋವುಪಟ್ಟು ಟೀಕೆಯನ್ನು ಆಲಿಸಿ, ಅದನ್ನು ಪ್ರಾಮಾಣಿಕತೆಯಿಂದ ಮೌಲ್ಯಮಾಪನ ಮಾಡಿ, ತನ್ನ ವ್ಯಕ್ತಿಪರ ಅಭಿವೃದ್ಧಿಗಾಗಿ ಉಪಯೋಗಿಸುವನೆಂದು ನೀವು ಪ್ರಾಯಶಃ ನಿರೀಕ್ಷಿಸುವಿರಿ.
ಹಾಗಾದರೆ, ಅದೇ ರೀತಿ, ನೀವು ನಿಮ್ಮ ವಿಷಯದಲ್ಲಿ ಏಕೆ ವ್ಯವಹರಿಸಬಾರದು?
3. ವಿವರಣೆ ಕೇಳಿ
“ನಿಮ್ಮ ಮನೋಭಾವ ನನಗೆ ಇಷ್ಟವಿಲ್ಲ!” ಯಾವನಾದರೂ ನಿಮಗೆ ಹಾಗೆ ಹೇಳುವುದನ್ನು ಬಯಸುವಿರೊ? ಇಲ್ಲ, ಇಂಥ ಹೇಳಿಕೆಗಳು ಮನನೋಯಿಸುತ್ತವೆ, ಅಲ್ಲವೆ?
ಇಲ್ಲಿ, ನಿರ್ದಿಷ್ಟ ವಿಷಯಗಳಿಗಾಗಿ ಕೇಳುವುದು ನಿಮಗಿರುವ ಅತ್ಯುತ್ತಮ ಮಾರ್ಗ. ಕಾನರ್ಸ್ವೇಶನಲಿ ಸ್ಪೀಕಿಂಗ್ ಎಂಬ ತನ್ನ ಪುಸ್ತಕದಲ್ಲಿ ಆ್ಯಲನ್ ಗಾರ್ನರ್ ವಿವರಿಸುವುದು: “ಟೀಕೆಯನ್ನು ಅನೇಕ ವೇಳೆ ಅನಿಷ್ಕೃಷ್ಟವಾಗಿ ಕೊಡಲಾಗುತ್ತದೆ. . . ನಿರ್ದಿಷ್ಟ ವಿಷಯಗಳನ್ನು ಹೇಳುವಂತೆ ವಿನಂತಿಸುವಲ್ಲಿ ಆ ವ್ಯಕ್ತಿಯ ಆಕ್ಷೇಪಗಳೇನೆಂದು ಸರಿಯಾಗಿ ತಿಳಿಯುವಂತೆ ಸಾಧ್ಯವಾಗುತ್ತದೆ. . . . ವರದಿಗಾರನಂತೆ, ಯಾರು, ಏನು, ಯಾವಾಗ, ಎಲ್ಲಿ, ಏಕೆ ಮತ್ತು ಹೇಗೆ ಎಂಬುದನ್ನು ಕಂಡುಹಿಡಿಯಲು ನೀವು ಪ್ರಶ್ನೆಗಳನ್ನು ಹಾಕುವಿರಿ, ಅಷ್ಟೆ.”
ಉದಾಹರಣೆಗೆ, ಮೇಲಿನ ಆರೋಪಕ್ಕೆ, ನೀವು ಹೀಗೆ ಉತ್ತರಿಸಬಹುದು: ‘ಯಾವ ನಿರ್ದಿಷ್ಟ ಮನೋಭಾವದ ಕುರಿತು ನೀವು ಮಾತಾಡುತ್ತೀರಿ?’ ಅವನು ಇನ್ನೂ ನಿರ್ದಿಷ್ಟವಾಗಿ ಹೇಳದಿದ್ದರೆ, ‘ಅದು ಏಕೆ ರೇಗಿಸುತ್ತದೆ? ನಾನು ಹಾಗೆ ಮಾಡಿದುದರ ಒಂದು ದೃಷ್ಟಾಂತ ಕೊಡುವಿರಾ?’ ಎಂದು ಕೇಳಬಹುದು. ಪಂಥಾಹ್ವಾನವಲ್ಲ, ಮಾತುಕತೆ ನಡೆಸುವ ನಿಮ್ಮ ಅಪೇಕ್ಷೆಯಿಂದ ಪ್ರಚೋದಿಸಲ್ಪಟ್ಟ ಈ ಪ್ರಶ್ನೆಗಳು, ನಿಮ್ಮ ವಿಮರ್ಶಕನನ್ನೂ ನಿಮ್ಮನ್ನೂ ನಿರ್ದಿಷ್ಟ ವಿಷಯಗಳಿಗೆ ಬರುವಂತೆ ಸಹಾಯ ಮಾಡಿಯಾವು. ಟೀಕೆ ಸಮಂಜಸವೊ, ವಿಪರೀತ ಪ್ರತಿಕ್ರಿಯೆಯೊ ಎಂಬುದನ್ನು ಇದು ತೋರಿಸಬಹುದು. ಮತ್ತು ವಿಷಯದ ಕುರಿತು ಹೆಚ್ಚು ಯೋಚಿಸಲು ಇದು ಸಮಯವನ್ನು ಕೊಡುತ್ತದೆ.
4. ನಿಮ್ಮ ವಿಮರ್ಶಕನನ್ನು ಶಾಂತಪಡಿಸಿ
ನಿಮ್ಮನ್ನು ಟೀಕಿಸುವವನು ಶಾಂತಿಕೆಟ್ಟವನಾಗಿ ವರ್ತಿಸುವುದಾದರೆ? ಡಾ. ಡೇವಿಡ್ ಬರ್ನ್ಸ್ ಶಿಫಾರಸು ಮಾಡುವುದು: “ನಿಮ್ಮ ವಿಮರ್ಶಕನು ಸರಿಯಾಗಿರಲಿ, ತಪ್ಪಾಗಿರಲಿ, ಆರಂಭದಲ್ಲಿ ಅವನೊಂದಿಗೆ ಯಾ ಅವಳೊಂದಿಗೆ ಒಪ್ಪಿಕೊಳ್ಳುವ ಯಾವ ಮಾರ್ಗವನ್ನಾದರೂ ಕಂಡುಹಿಡಿಯಿರಿ.” ಇದು ನಿಮಗೆ ಲಾಭದಾಯಕವಾಗುವುದು ಹೇಗೆ? ಇದು ನಿಮ್ಮ ವಿಮರ್ಶಕನನ್ನು ನಿರಾಯುಧನನ್ನಾಗಿಯೂ ಶಾಂತನಾಗಿಯೂ ಮಾಡಿ, ಅವನು ಮಾತುಕತೆಗೆ ಮಾರ್ಗವನ್ನು ಹೆಚ್ಚು ತೆರೆಯುವಂತೆ ಮಾಡುತ್ತದೆ.
ಆದರೆ, ಇನ್ನೊಂದು ಕಡೆಯಲ್ಲಿ, ನೀವು ಒಡನೆ ಆತ್ಮರಕ್ಷಣೆಗೆ ಹೋಗುವಲ್ಲಿ—ಆರೋಪ ಅನ್ಯಾಯವಾಗಿರುವಲ್ಲಿ ಈ ಪ್ರವೃತ್ತಿ ಬರುತ್ತದೆ—ನೀವು ನಿಮ್ಮ ವಿಮರ್ಶಕನಿಗೆ ಇನ್ನೂ ಹೆಚ್ಚು ಸಿಡಿಮದ್ದನ್ನು ಒದಗಿಸುವ ಸಾಧ್ಯತೆ ಇದೆ. ಡಾ. ಬರ್ನ್ಸ್ ಹೇಳುವಂತೆ: “ನೀವು ನಿಮ್ಮ ವಿರೋಧಿಯ ಆಕ್ರಮಣದ ತೀವ್ರತೆ ಹೆಚ್ಚುವುದನ್ನು ಕಂಡುಹಿಡಿಯುವಿರಿ! ಆದುದರಿಂದ, ನಿಮ್ಮ ಅತ್ಯುತ್ತಮ ಹೆಜ್ಜೆಯು, ವಿವಾದಾತ್ಮಕ ಸಂಗತಿಗಳನ್ನು ಮಾತಾಡುವ ಮೊದಲು, ಯಾವುದಾದರೂ ಒಪ್ಪಿಗೆಯಿರುವ ವಿಷಯವನ್ನು ಎತ್ತುವುದೇ.
5. ಒಳವಿಷಯದ ಮೇಲೆ ಕೇಂದ್ರೀಕರಿಸಿ, ವಾಕ್ಶೈಲಿಯ ಮೇಲಲ್ಲ
ಒಬ್ಬ ತಾಯಿಗೆ, ನೆರೆಹೊರೆಯಲ್ಲಿ ತನ್ನ ಮಗನ ವರ್ತನೆಯ ವಿಷಯ ದೂರು ಬಂತು. ಈ ದೂರು ಕಠಿಣ ಭಾಷೆಯಲ್ಲಿ ಹಾಗೂ ಸ್ಪರ್ಧಾಮನೋಭಾವದಲ್ಲಿ ಕೊಡಲ್ಪಟ್ಟಿತು. ನೆರೆಯವನ ಈ ದೂರನ್ನು ತಾಯಿ, ಅದು ನ್ಯಾಯಸಮ್ಮತವಲ್ಲವೆಂದೂ ಯಥಾರ್ಥವಲ್ಲದ್ದೆಂದೂ ಹೇಳಿ ಮನಸ್ಸಿಗೆ ಹಚ್ಚಿಕೊಳ್ಳದಿರಬಹುದಿತ್ತು, ಮತ್ತು ಆಕೆಗೆ ಹೀಗೆ ಮಾಡುವ ಮನಸ್ಸೂ ಆಯಿತು.
ಇದಕ್ಕೆ ಬದಲಾಗಿ, ಈ ಟೀಕೆಯಲ್ಲಿ ಸ್ವಲ್ಪವಾದರೂ ಸತ್ಯವಿದೆಯೆಂದು ನಿರ್ಧರಿಸಿದ ಅವಳು ತನ್ನ ಮಗನಿಗೆ ಹೇಳಿದ್ದು: “ನಮಗೆ ಅದರಿಂದ ಪ್ರಯೋಜನವಾಗಬಹುದಾದರೂ, ನಮ್ಮ ತಪ್ಪುಗಳನ್ನು ಎತ್ತಿಹೇಳುವವರು ಸದಾ ನಮ್ಮ ಇಷ್ಟಮಿತ್ರರೇ ಆಗಿರುವುದಿಲ್ಲವಾದುದರಿಂದ ನಾವು ಈ ಸಂದರ್ಭವನ್ನು ನಮ್ಮನ್ನು ಉತ್ತಮಗೊಳಿಸಲಿಕ್ಕಾಗಿ ಉಪಯೋಗಿಸೋಣ.”
ಯಾರಾದರೂ ನಿಮ್ಮನ್ನು ಬಿರುಸಾಗಿ ಗದರಿಸಿದ್ದುಂಟೊ? ಪ್ರಾಯಶಃ ಆ ವ್ಯಕ್ತಿಗೆ ಸುಲಭಪ್ರತಿಕ್ರಿಯಾಶೂನ್ಯತೆಯ ಯಾ ಹೊಟ್ಟೆಕಿಚ್ಚಿನ ಸಮಸ್ಯೆ ಇರಬಹುದು. ನಿಮಗೆ ಯಾ ಇನ್ನೊಬ್ಬನಿಗೆ ಯೋಗ್ಯ ಸಮಯದಲ್ಲಿ ಈ ವಿಷಯದಲ್ಲಿ ಅವನಿಗೆ ಸಹಾಯ ಮಾಡುವ ಸಂದರ್ಭ ಬಂದೊದಗೀತು. ಆದರೆ, ಅವನು ಮೊಂಡಾಗಿ ಅದನ್ನು ಹೇಳಿದ ಕಾರಣಕ್ಕೆ ಅವನ ಅಭಿಪ್ರಾಯವನ್ನು ತಳ್ಳಿಬಿಡಬೇಡಿ. ಟೀಕೆಯ ಒಳವಿಷಯದ ಮೇಲೆ ಕೇಂದ್ರೀಕರಿಸಿರಿ. ಅದು ಸತ್ಯವೊ? ಸತ್ಯವಾಗಿರುವಲ್ಲಿ, ನಿಮ್ಮ ಬೆಳವಣಿಗೆಗೆ ದೊರೆಯುವ ಈ ಸಂದರ್ಭವನ್ನು ಅಲ್ಲಗಳೆಯಬೇಡಿರಿ.
6. ಬಿರುಸನ್ನು ಕಡಮೆ ಮಾಡಿ
ಇದು ನಿಮ್ಮನ್ನು ಆಶ್ಚರ್ಯಗೊಳಿಸಬಹುದು, ಆದರೆ ನಿಮಗೆ ಟೀಕೆ ದೊರೆಯುವ ಸಂಭವ ಪ್ರಮಾಣ ಮತ್ತು ಬಿರುಸಿನ ಮೇಲೆ ನಿಮಗೆ ಸ್ವಲ್ಪ ನಿಯಂತ್ರಣವಿದೆ. ಅಧಿಕಾರದಲ್ಲಿರುವ ವ್ಯಕ್ತಿಗಳಿಂದ ಸಿಗುವ ತಿದ್ದುಪಾಟಿನ ಟೀಕೆಯ ಸಂಬಂಧದಲ್ಲಿ ಈ ಮೂಲಸೂತ್ರ ವಿಶೇಷವಾಗಿ ಸತ್ಯ. ಇದು ಹೇಗೆ?
ಬಹು ಪೂರ್ವದಲ್ಲಿ ಕರಿ ಜೀರಿಗೆಯ ಸಸಿ ಪಲೆಸ್ತೀನಿನಲ್ಲಿ ಅತಿ ಜನಪ್ರಿಯವಾಗಿತ್ತು. ಆದರೆ ಇತರ ಸಸಿಗಳಿಗೆ ಅಸದೃಶವಾಗಿ, ಅದನ್ನು ಬಡಿಯುವ ಉಪಕರಣಗಳಾದ ಭಾರವುಳ್ಳ ಚಕ್ರ ಯಾ ಲಟಣ್ಟಿಗೆಯಿಂದ ತೆನೆಬಡಿಯುತ್ತಿರಲಿಲ್ಲ. ಬದಲಿಗೆ ಅದನ್ನು ಕೋಲು ಅಥವಾ ದೊಣ್ಣೆಯಿಂದ ಬಡಿಯಲಾಗುತ್ತಿತ್ತು. ಇಂಥ ವಿಶೇಷತೆಯ, ಮೃದು ವ್ಯವಹಾರವೇಕೆ? ಏಕೆಂದರೆ ಅದರ ಚಿಕ್ಕ, ಕೋಮಲ ಬೀಜಗಳಿಗೆ ಭಾರವುಳ್ಳ ತೆನೆಬಡಿತದ ಅಗತ್ಯವಿರಲಿಲ್ಲ; ಹಾಗೆ ಮಾಡುವಲ್ಲಿ ಅದರಿಂದ ಹಾನಿಯೂ ಆಗುತ್ತಿತ್ತು.
ಬೈಬಲಿನ ಯೆಶಾಯ ಪುಸ್ತಕವು, ಶಿಸ್ತಿನ ವಿವಿಧ ಹಂತಗಳನ್ನು ಚಿತ್ರಿಸಲು ಕರಿ ಜೀರಿಗೆಯ ಸಸಿಯನ್ನು ಉಪಯೋಗಿಸುತ್ತದೆ. ಒಬ್ಬನು ತಿದ್ದುಪಾಟಿನ ಲಘು ವಿಧಾನಗಳಿಗೆ ಪ್ರತಿವರ್ತನೆ ತೋರಿಸುವಲ್ಲಿ, ಅದೇ ವಿಷಯದಲ್ಲಿ ಅವನಿಗೆ ಹೆಚ್ಚು ಕಠಿಣ ತಿದ್ದುವಿಕೆಯ ಅಗತ್ಯವಿರುವುದಿಲ್ಲ.—ಯೆಶಾಯ 28:26, 27.
ಹೀಗೆ, ಟೀಕೆಯ ಲಘು ವಿಧಾನಗಳಿಗೆ ಒಡನೆ ಓಗೊಡುವುದರಿಂದ ನೀವು ಕಠಿಣ ತಿದ್ದುಪಾಟನ್ನು ತಪ್ಪಿಸಬಹುದು. ಉದಾಹರಣೆಗೆ, ನೀವು ಕೆಲಸಕ್ಕೆ ಆಗಾಗ ತಡವಾಗಿ ಬರುತ್ತೀರೆಂದು ನಿಮಗೆ ತಿಳಿದಿದೆಯೆ? ಆ ಅಭ್ಯಾಸವನ್ನು ಈಗಲೆ, ನಿಮ್ಮ ಧಣಿ ನಿಮ್ಮೊಂದಿಗೆ ಅದರ ವಿಷಯ ಮಾತಾಡುವ ಮೊದಲೆ, ತಿದ್ದಿರಿ. ನಿಮ್ಮ ಧಣಿ ಇದನ್ನು ಆಗಲೆ ನಿಮ್ಮ ಗಮನಕ್ಕೆ ತಂದಿದ್ದಾನೊ? ಒಡನೆ, ಅವನು ಹೆಚ್ಚು ತೀವ್ರ ಕ್ರಮವನ್ನು ಕೈಕೊಳ್ಳುವ ಮೊದಲೆ, ಅದಕ್ಕೆ ಕಾಲನಿಷ್ಠೆಯ ಪ್ರತಿಕ್ರಿಯೆ ತೋರಿಸಿರಿ.
ನೀವು ನಿಭಾಯಿಸಬಲ್ಲಿರಿ
ಟೀಕೆಯನ್ನು ಪಡೆಯುವಾಗ ನೋವಾಗಬಹುದು. ಜನರು ತಮ್ಮ ಕೆಲಸ ನೋಡಿಕೊಂಡು ನನ್ನನ್ನು ಒಂಟಿಗನಾಗಿ ಬಿಡುತ್ತಿದ್ದರೆ, ನನಗೆ ತೀರ್ಪು ಮಾಡದೆ ಇರುತ್ತಿದ್ದರೆ, ‘ಸಹಾಯಕರ ಸೂಚನೆ’ಗಳನ್ನು ಕೊಡುವುದನ್ನು ನಿಲ್ಲಿಸಿದರೆ ಒಳ್ಳೆಯದಿತ್ತೆಂದು ನೀವು ಎಣಿಸಬಹುದು.
ಆದರೆ ಅಂಥ ಎಣಿಕೆಯಾಗಲಿ ನಿರೋಧವಾಗಲಿ ಟೀಕೆಯನ್ನು ನಿಲ್ಲಿಸದು. ಟೀಕಿಸುವುದು ಈಗ ಮಾನವ ಪ್ರಕೃತಿಯ ಒಂದು ಭಾಗ. ಅದಲ್ಲದೆ ಕೋರದ ಸಲಹೆಯನ್ನು ಇತರರು ಕೊಡುವಾಗ ಉಪಯೋಗಿಸಬೇಕಾದ ನಯದ ಮೇಲೆ ನಿಮಗೆ ನಿಯಂತ್ರಣವಿಲ್ಲ.
ಆದುದರಿಂದ ಸಿಡಿಮಿಡಿಗೊಳ್ಳುವ ಬದಲಿಗೆ ನಿಮಗೆ ಯಾವುದನ್ನು ನಿಯಂತ್ರಿಸಸಾಧ್ಯವೊ ಅದರ ಪ್ರಯೋಜನ ಪಡೆಯಿರಿ: ನಿಮ್ಮ ಪ್ರತಿವರ್ತನೆ. ಟೀಕೆಯನ್ನು ನಿಭಾಯಿಸಲು ಮೇಲಿನ ಸೂಚನೆಗಳಲ್ಲಿ ಕೆಲವನ್ನು ಉಪಯೋಗಿಸಿ ಅದರ ಕೊಂಡಿಯನ್ನು ಮೆತ್ತಗೆ ಮಾಡಿರಿ. ನೀವು ಹಾಗೆ ಮಾಡಿದ್ದಕ್ಕೆ ನೀವು ಹರ್ಷಿತರಾಗುವಿರಿ.
ಟೀಕೆ ಮಾಡುವ ಶೈಲಿ
ಟೀಕೆ ಪಡೆಯುವ ವಿಷಯದಲ್ಲಿ ನೀವು ಸೂಕ್ಷ್ಮಸಂವೇದಿಯಾಗಿರುವಲ್ಲಿ, ಟೀಕೆ ಮಾಡುವುದೂ ನಿಮಗೆ ಕಷ್ಟವಾಗಿದ್ದೀತು. ಟೀಕೆ ಮಾಡುವಾಗ ಜ್ಞಾಪಕದಲ್ಲಿಡಬೇಕಾದ ಕೆಲವು ವಿಧಾನಗಳು ಇಲ್ಲಿವೆ:
ಕೆಲವೇ ಮಾತುಗಳನ್ನು ಉಪಯೋಗಿಸಿರಿ. ನೀವು ಯಾರನ್ನು ಟೀಕೆ ಮಾಡುತ್ತೀರೊ ಅಂಥವನನ್ನು ನೋಯಿಸಬಾರದೆಂಬುದರ ವಿಷಯದಲ್ಲಿ ಮಾರ್ಗತಪ್ಪಿರುವ ಪ್ರಯತ್ನಗಳು ಅನೇಕ ವೇಳೆ ಹೆಚ್ಚು ಮಾತಾಡುವಿಕೆಯಿಂದ ಬಂದು ಅದು ಅಸ್ಪಷ್ಟವಾಗಿದ ಸಂದೇಶವನ್ನು ಕಳುಹಿಸಬಹುದು.
ಒಬ್ಬನಲ್ಲಿ ನೀವು ನೋಡುವ ಪ್ರತಿಯೊಂದು ಚಿಕ್ಕ ತಪ್ಪನ್ನೂ ಹೆಕ್ಕಿ ಹೇಳುವುದರಿಂದ ದೂರವಿರ್ರಿ. ಇದು ಜನರನ್ನು ಕೆರಳಿಸುವುದರಿಂದ ಅವರು ಕ್ರಮೇಣ ನಿಮ್ಮ ವೀಕ್ಷಣವನ್ನು ಅಮುಖ್ಯವೆಂದು ಹೇಳಿ ತೊಲಗಿಸುವರು. ಅವರು ನಿಮ್ಮನ್ನು ಭೇಟಿಯಾಗುವುದರಿಂದಲೂ ತಪ್ಪಿಸಿಕೊಳ್ಳಬಹುದು. ಪ್ರತಿಯೊಬ್ಬನೂ ಅಪೂರ್ಣ ಮತ್ತು ತಪ್ಪುಳ್ಳವನು. ಅವರು ಒಮ್ಮೆಯೆ ಎಲ್ಲ ಸಂಗತಿಗಳನ್ನು ಸರಿಪಡಿಸುವುದು ಅಸಾಧ್ಯ. ನೀವು ನೋಡುವ ತಪ್ಪು ಗುರುತರದ್ದಲ್ಲದಿರುವಲ್ಲಿ, ಅದನ್ನು ಬಿಟ್ಟು ಬಿಡಿರಿ. ಬೈಬಲು ಗಮನಿಸುವಂತೆ: “ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.”—1 ಪೇತ್ರ 4:8. (g91 2/8)