ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 8/8 ಪು. 14-16
  • ಅದು ಯಾವಾಗಲೂ ನನ್ನ ತಪ್ಪೇ ಏಕೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅದು ಯಾವಾಗಲೂ ನನ್ನ ತಪ್ಪೇ ಏಕೆ?
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೆತ್ತವರು ದೂಷಿಸುವ ಕಾರಣ
  • ತೊಂದರೆಗೊಳಗಾದ ಕುಟುಂಬಗಳು
  • ಅನ್ಯಾಯವಾದ ದೂಷಣೆಗೊಳಗಾಗುವಿಕೆಯನ್ನು ನಿರ್ವಹಿಸುವುದು
  • ಎಲ್ಲ ಸಮಯದಲ್ಲಿ ದೂಷಣೆಗೊಳಗಾಗುವುದನ್ನು ನಾನು ಹೇಗೆ ನಿಲ್ಲಿಸಬಲ್ಲೆ?
    ಎಚ್ಚರ!—1997
  • ಹೆತ್ತವರೇ, ನಿಮ್ಮ ಮಕ್ಕಳಿಗೆ ಪ್ರೀತಿಯಿಂದ ತರಬೇತಿಕೊಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ನಾನು ಮಾಡುವ ಯಾವುದೂ ಯಾವತ್ತೂ ತಕ್ಕಷ್ಟು ತೃಪ್ತಿಕರವಲ್ಲವೇಕೆ?
    ಎಚ್ಚರ!—1993
  • ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ
    ಕುಟುಂಬ ಸಂತೋಷದ ರಹಸ್ಯ
ಇನ್ನಷ್ಟು
ಎಚ್ಚರ!—1997
g97 8/8 ಪು. 14-16

ಯುವ ಜನರು ಪ್ರಶ್ನಿಸುವುದುರು . . .

ಅದು ಯಾವಾಗಲೂ ನನ್ನ ತಪ್ಪೇ ಏಕೆ?

“ನನ್ನ ಅಪ್ಪನಿಗೆ ಅಲರ್ಜಿಗಳಿವೆ ಮತ್ತು ಅವರು ಧೂಮಪಾನ ಮಾಡುವ ಜನರೊಂದಿಗೆ ಕೆಲಸಮಾಡಬೇಕಾಗಿರುತ್ತದೆ. ಅವರು ಮನೆಗೆ ಬಂದಾಗ, ಕೆಲವೊಮ್ಮೆ ಮಾನಸಿಕವಾಗಿ ತುಂಬ ಕ್ಷೋಭೆಗೊಳಪಟ್ಟಿರುತ್ತಾರೆ. ಅವರು ವಸ್ತುಗಳನ್ನು ಕಳೆದುಕೊಂಡು, ಅದಕ್ಕಾಗಿ ನನ್ನನ್ನು ದೂಷಿಸುತ್ತಾರೆ. ಅದನ್ನು ಅವರು ಕಳೆದುಹಾಕಿದರೆಂದು ನಾನು ಹೇಳುವಾಗ, ಅವರು ರೋಷಾವೇಷಗೊಂಡು, ನಾನು ಅವರ ತಪ್ಪು ತೋರಿಸಬಾರದಿತ್ತೆಂದು ಹೇಳುತ್ತಾರೆ.”—ಒಬ್ಬ ಹದಿವಯಸ್ಕ ಹುಡುಗಿ.

ನೀವು ಕುಟುಂಬದ ಪಾಪಪಶುವಾಗಿದ್ದೀರೆಂದು ಕೆಲವೊಮ್ಮೆ ನಿಮಗೆ ಅನಿಸುತ್ತದೋ? ಏನೇ ತಪ್ಪು ಆಗಲಿ, ನೀವು ದೂಷಣೆಗೊಳಗಾಗುತ್ತೀರೆಂದು ತೋರುತ್ತದೋ? 14 ವರ್ಷ ಪ್ರಾಯದ ಜೊಯ್‌ಗೆ ಹಾಗೇ ತೋರುತ್ತದೆ. ಅವಳು ಏಕಹೆತ್ತವರ ಮನೆವಾರ್ತೆಯೊಂದರಲ್ಲಿ ವಾಸಿಸುತ್ತಾಳೆ ಮತ್ತು ಅನೇಕ ವೇಳೆ ತನ್ನ ತಮ್ಮತಂಗಿಯರನ್ನು ನೋಡಿಕೊಳ್ಳುತ್ತಾಳೆ. “ಅವರು ಜಗಳವಾಡಲು ಪ್ರಾರಂಭಿಸುವಾಗ ನಾನು ಕೆಳಮಹಡಿಯಲ್ಲಿರುತ್ತೇನೆ” ಎಂದು ಜೊಯ್‌ ದೂರುತ್ತಾಳೆ. “ಅವರು ಎಷ್ಟೊಂದು ವಿಚಾರಹೀನರೂ ಅಪ್ರೌಢರೂ ಆಗಿ ನಡೆದುಕೊಳ್ಳುತ್ತಾರೆಂದರೆ, ಅಪ್ಪ ಮನೆಗೆ ಬಂದಾಗ, ನಾನು ಜಗಳವನ್ನು ನಿಲ್ಲಿಸಲು ಅಲ್ಲಿರಲಿಲ್ಲವೆಂಬ ಕಾರಣಕ್ಕೆ ಅವರು ನನ್ನ ಮೇಲೆ ಚೀರಾಡುತ್ತಾರೆ.”

ನಿಮ್ಮ ಹೆತ್ತವರು ನಿಮ್ಮನ್ನು ಹಾಳಾದವರು, ಸೋಮಾರಿ, ಅಥವಾ ಬೇಜವಾಬ್ದಾರರು ಎಂದು ಕರೆಯುವುದಾದರೆ ಇಲ್ಲವೇ ಸರಿಪಡಿಸಲಶಕ್ತವಾದುದು ಎಂದು ತೋರುವಂತೆ ಮಾಡುವ ನಿಮ್ಮ ದೋಷಗಳನ್ನು ಎತ್ತಿತೋರಿಸಲು ಇತರ ಲೇಬಲ್‌ಗಳನ್ನು ಉಪಯೋಗಿಸುವುದಾದರೆ, ಕೆಲವೊಮ್ಮೆ ಅವರು ನೀವು ವಿಫಲರಾಗಬೇಕೆಂದೇ ನಿರೀಕ್ಷಿಸುತ್ತಾರೆ ಎಂದೂ ತೋರಬಹುದು. ರಾಮೊನನ ಕುಟುಂಬವು—ಅವನಿಗೆ ತೀವ್ರ ಅಸಮಾಧಾನವನ್ನು ಉಂಟುಮಾಡಿದ ಒಂದು ಅಡ್ಡಹೆಸರನ್ನು—ಮರೆಗುಳಿ ಎಂಬ ಬಿರುದನ್ನು ಕೊಟ್ಟಿತು. ನಿಮ್ಮ ಕುಂದುಗಳನ್ನು ಎತ್ತಿತೋರಿಸುವ ಒಂದು ಅಡ್ಡಹೆಸರು ಅಥವಾ ಲೇಬಲ್‌—ಅದು ವಾತ್ಸಲ್ಯದಿಂದ ಹೇಳಲ್ಪಟ್ಟರೂ—ನಿಮಗೆ ತದ್ರೀತಿಯಲ್ಲಿ ಅಸಮಾಧಾನವನ್ನು ಉಂಟುಮಾಡಬಹುದು. ಅಭಿವೃದ್ಧಿಯನ್ನು ಮಾಡುವಂತೆ ನಿಮ್ಮನ್ನು ಪ್ರಚೋದಿಸುವ ಬದಲು, ಆ ನಕಾರಾತ್ಮಕ ಲೇಬಲ್‌ ನೀವು ಯಾವಾಗಲೂ ದೂಷಣೆಗೆ ಒಳಗಾಗುತ್ತೀರಿ ಎಂಬ ಅನಿಸಿಕೆಯನ್ನು ಪುಷ್ಟಿಗೊಳಿಸಬಹುದಷ್ಟೇ.

ದೂಷಣೆಯು, ಸ್ವಪಕ್ಷಪಾತದ ಕಾರಣದಿಂದ ಉಂಟಾದುದೆಂದು ತೋರುವಾಗ ವಿಶೇಷವಾಗಿ ವೇದನಾಭರಿತವಾಗಿರಸಾಧ್ಯವಿದೆ. “ನಾನು ಒಡಹುಟ್ಟಿದವರಲ್ಲಿ ಮಧ್ಯದವನು ಮತ್ತು ನನ್ನನ್ನು ಯಾವಾಗಲೂ ತೀರ ಕೆಟ್ಟದಾಗಿ ಉಪಚರಿಸಲಾಗುತ್ತದೆ” ಎಂದು ಫ್ರ್ಯಾಂಕೀ ಎಂಬ ಹೆಸರಿನ ಒಬ್ಬ ಹದಿವಯಸ್ಕನು ಹೇಳುತ್ತಾನೆ. ನಿಮ್ಮ ಒಡಹುಟ್ಟಿದವರು ಯಾವಾಗಲೂ ಮುಗ್ಧರು, ಆದರೆ ತೊಂದರೆಯ ಪ್ರಥಮ ಚಿಹ್ನೆಯಲ್ಲಿಯೇ ನೀವು ದೋಷಿಗಳಾಗಿ ಪ್ರಕಟಿಸಲ್ಪಡುತ್ತೀರೆಂದು ತೋರಬಹುದು.

ಹೆತ್ತವರು ದೂಷಿಸುವ ಕಾರಣ

ತಮ್ಮ ಮಕ್ಕಳು ತಪ್ಪುಮಾಡುವಾಗ ಹೆತ್ತವರು ಸರಿಪಡಿಸುವುದು ಸಹಜವೇ ಖಂಡಿತ. ಅಷ್ಟೇಕೆ, ದೇವಭಯವುಳ್ಳ ಹೆತ್ತವರು ತಮ್ಮ ಮಕ್ಕಳನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” (NW) ಬೆಳೆಸುವ ವಿಧಗಳಲ್ಲಿ ಒಂದು, ಆರೋಗ್ಯಕರವಾದ, ಸಕಾರಾತ್ಮಕ ತಿದ್ದುಪಾಟಾಗಿದೆ. (ಎಫೆಸ 6:4) ಕೆಲವೊಮ್ಮೆಯಾದರೋ, ಅತ್ಯುತ್ತಮ ಹೆತ್ತವರೂ ವಿಪರೀತವಾಗಿ ಪ್ರತಿಕ್ರಿಯಿಸಸಾಧ್ಯವಿದೆ ಅಥವಾ ತಪ್ಪಾದ ತೀರ್ಮಾನಗಳಿಗೆ ಧುಮುಕಿಬಿಡಲೂ ಸಾಧ್ಯವಿದೆ. ಯೇಸು ಎಳೆಯವನಾಗಿದ್ದಾಗ ಸಂಭವಿಸಿದ ಘಟನೆಯೊಂದನ್ನು ಜ್ಞಾಪಿಸಿಕೊಳ್ಳಿರಿ. ಈ ಸಂದರ್ಭದಲ್ಲಿ ಯೇಸು ಕಾಣೆಯಾಗಿದ್ದನು. ಅವನು ಬೈಬಲ್‌ ಚರ್ಚೆಗಳನ್ನು ಮಾಡುತ್ತಾ ದೇವರ ಆಲಯದಲ್ಲಿದ್ದನೆಂದು ಅನಂತರ ತಿಳಿದುಬರುತ್ತದೆ. ಅವನ ಹೆತ್ತವರು ಅವನನ್ನು ಕಂಡುಕೊಂಡರಾದರೂ, ಅವನ ತಾಯಿಯು ಪ್ರಶ್ನಿಸಿದ್ದು: “ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟೋ ತಳಮಳಗೊಂಡು ನಿನ್ನನ್ನು ಹುಡುಕಿ ಬಂದೆವಲ್ಲಾ.”—ಲೂಕ 2:48.

ಯೇಸು ಪರಿಪೂರ್ಣನಾಗಿದ್ದ ಕಾರಣ, ಅವನು ತಪ್ಪಿತಸ್ಥ ವರ್ತನೆಯಲ್ಲಿ ಒಳಗೂಡಿರುವನೆಂದು ಹೆದರಲು ಯಾವ ಕಾರಣವು ಇರಲಿಲ್ಲ. ಆದರೆ ಎಲ್ಲ ಪ್ರೀತಿಪರ ಹೆತ್ತವರಂತೆ, ಅವನ ತಾಯಿಯು ತನ್ನ ಮಗುವಿಗೆ ತಾನು ಜವಾಬ್ದಾರಳೆಂದು ಭಾವಿಸಿದಳು ಮತ್ತು ಪ್ರಾಯಶಃ ಅವನ ಹಿತಾಸಕ್ತಿಗಳು ಬೆದರಿಕೆಗೆ ಒಡ್ಡಲ್ಪಟ್ಟಿದ್ದವೆಂದು ಹೆದರುತ್ತಾ, ತೀವ್ರವಾಗಿ ಪ್ರತಿಕ್ರಿಯಿಸಿದಳು. ತದ್ರೀತಿಯಲ್ಲಿ, ನಿಮ್ಮ ಹೆತ್ತವರು ಕೆಲವೊಮ್ಮೆ ವಿಪರೀತವಾಗಿ ಪ್ರತಿಕ್ರಿಯಿಸಬಹುದು, ಉಪದ್ರವ ಕೊಡುವ ಅಥವಾ ಕ್ರೂರಿಗಳಾಗಿರಲು ಪ್ರಯತ್ನಿಸುತ್ತಿರುವ ಕಾರಣಕ್ಕಾಗಿ ಅಲ್ಲ, ಬದಲಾಗಿ, ಅವರು ನಿಮ್ಮ ಬಗ್ಗೆ ನಿಜವಾಗಿಯೂ ಕಾಳಜಿವಹಿಸುವುದರಿಂದಲೇ.

ನಾವು “ನಿಭಾಯಿಸಲು ಕಷ್ಟಕರವಾದ ಸಮಯ”ಗಳಲ್ಲಿ (NW) ಜೀವಿಸುತ್ತಿದ್ದೇವೆಂಬುದನ್ನೂ ಗ್ರಹಿಸಿರಿ. (2 ತಿಮೊಥೆಯ 3:1) ಕೆಲಸಮಾಡುತ್ತಾ, ನಿಮ್ಮ ಮನೆಯನ್ನು ನೋಡಿಕೊಳ್ಳುತ್ತಿರುವುದರಿಂದ, ನಿಮ್ಮ ಹೆತ್ತವರು ಪರಿಗಣನಾರ್ಹವಾದ ಒತ್ತಡದ ಕೆಳಗಿರುತ್ತಾರೆ ಮತ್ತು ಇದು ಅವರು ನಿಮ್ಮನ್ನು ಉಪಚರಿಸುವ ರೀತಿಯನ್ನು ಪ್ರಭಾವಿಸಸಾಧ್ಯವಿದೆ. (ಪ್ರಸಂಗಿ 7:7ನ್ನು ಹೋಲಿಸಿರಿ.) ಒಬ್ಬ ಮಾನಸಿಕ-ಆರೋಗ್ಯ ಕಾರ್ಯಕರ್ತೆ ಗಮನಿಸಿದ್ದು: “ಕೆಲವು ಕುಟುಂಬಗಳಲ್ಲಿ, ಸಂದಿಗ್ಧ ಪರಿಸ್ಥಿತಿಯಿರುವಾಗ, ಹೆತ್ತವರು ಕೋಪಗೊಂಡು, ಸಾಮಾನ್ಯವಾಗಿ ನಿಷ್ಪಕ್ಷಪಾತಿ ಜನರಾಗಿರುವಾಗಲೂ ಮುಂದಾಲೋಚನೆಯಿಲ್ಲದ ನಿರ್ಣಯಗಳನ್ನು ಮಾಡಬಲ್ಲರು.”

ವಿಷಯಗಳನ್ನು ಚರ್ಚಿಸಲಿಕ್ಕಾಗಿ ತಮಗೆ ಒಬ್ಬ ಸಂಗಾತಿಯಿಲ್ಲವೆಂಬ ಕಾರಣಕ್ಕಾಗಿಯೇ ಏಕಹೆತ್ತವರು ತಮ್ಮ ಆಶಾಭಂಗಗಳನ್ನು ತಮ್ಮ ಮಕ್ಕಳ ಮೇಲೆ ಕಾರಲು ವಿಶೇಷವಾಗಿ ಒಲವುಳ್ಳವರಾಗಿರಬಹುದು. ಹೆತ್ತವರೊಬ್ಬರ ವೈಯಕ್ತಿಕ ಆಶಾಭಂಗಗಳ ಬಿರುಸನ್ನು ಪಡೆದುಕೊಳ್ಳುವುದು ವಿನೋದಕರವಲ್ಲ ಎಂಬುದು ಒಪ್ಪತಕ್ಕ ವಿಷಯವೇ. 17 ವರ್ಷ ಪ್ರಾಯದ ಲೂಸೀ ಹೇಳುವುದು: “ನಾನೇನಾದರೂ ತಪ್ಪುಮಾಡಿದರೆ, ನನಗೆ ಶಿಕ್ಷೆಕೊಡಲಿ ಪರವಾಗಿಲ್ಲ. ಆದರೆ ನನ್ನ ತಾಯಿ ಕೆಟ್ಟ ಮೂಡ್‌ನಲ್ಲಿ ಇದ್ದಾರೆಂಬ ಕಾರಣಕ್ಕಾಗಿ ನಾನು ಶಿಕ್ಷಿಸಲ್ಪಡುವಾಗ ಅದು ನಿಜವಾಗಿಯೂ ಅನ್ಯಾಯ.”

ಸ್ವಪಕ್ಷಪಾತ ಮತ್ತೊಂದು ಅಂಶವಾಗಿದೆ. ಒಬ್ಬ ಹೆತ್ತವನು ಸಾಮಾನ್ಯವಾಗಿ ತನ್ನ ಮಕ್ಕಳೆಲ್ಲರನ್ನೂ ಪ್ರೀತಿಸುವುದಾದರೂ, ಅವನು ಒಬ್ಬ ಮಗುವಿನ ಕಡೆಗೆ ವಿಶೇಷವಾಗಿ ಆಕರ್ಷಿತನಾಗಿರುವುದು ಅವನಿಗೆ ಅಸಾಮಾನ್ಯವಾದ ವಿಷಯವಾಗಿರುವುದಿಲ್ಲ.a (ಆದಿಕಾಂಡ 37:3ನ್ನು ಹೋಲಿಸಿರಿ.) ನೀವು ಕಡಿಮೆ ಪ್ರೀತಿಸಲ್ಪಡುತ್ತಿರುವ ಮಗುವಾಗಿದ್ದೀರಿ ಎಂಬ ಅನಿಸಿಕೆಯೇ ವೇದನಾಮಯವಾಗಿರುತ್ತದೆ. ಆದರೆ ನಿಮ್ಮ ಅಗತ್ಯಗಳು ಕಡೆಗಣಿಸಲ್ಪಡುತ್ತಿವೆ ಅಥವಾ ನಿಮ್ಮ ಒಡಹುಟ್ಟಿದವರು ಮಾಡಿರುವ ವಿಷಯಗಳಿಗಾಗಿ ಅನೇಕ ವೇಳೆ ನೀವು ದೂಷಿಸಲ್ಪಡುತ್ತೀರೆಂದು ತೋರುವುದಾದರೆ, ತೀವ್ರ ಅಸಮಾಧಾನವು ಉಂಟಾಗುವುದು ಖಂಡಿತ. “ನನಗೆ ಡ್ಯಾರನ್‌ ಎಂಬ ತಮ್ಮನಿದ್ದಾನೆ” ಎಂದು ಯುವ ರಾಕ್ಸನ್‌ ಹೇಳುತ್ತಾಳೆ. “ಅವನು ಅಮ್ಮನ ಪುಟ್ಟ ದೇವದೂತ. . . . ಅವರು ನನ್ನನ್ನು ಯಾವಾಗಲೂ ದೂಷಿಸುತ್ತಾರೆ, ಡ್ಯಾರನ್‌ ಅನ್ನು ಎಂದೂ ದೂಷಿಸುವುದಿಲ್ಲ.”

ತೊಂದರೆಗೊಳಗಾದ ಕುಟುಂಬಗಳು

ಸುಸ್ಥಿತಿಯುಳ್ಳ ಕುಟುಂಬಗಳಲ್ಲಿ ಸಾಂದರ್ಭಿಕವಾಗಿ ಅನುಚಿತವಾದ ದೂಷಣೆಗೊಳಗಾಗುವ ಸಂದರ್ಭ ಒದಗಿಬರಬಹುದು. ಆದರೆ ತೊಂದರೆಗೊಳಗಾಗಿರುವ ಕುಟುಂಬಗಳಲ್ಲಿ ಹೆತ್ತವರು ದೂಷಿಸುವುದು, ಅವಮಾನಮಾಡುವುದು, ತಲೆತಗ್ಗಿಸುವಂತೆ ಮಾಡುವುದು ಮುಂದುವರಿಯುತ್ತಾ ಹೋಗುವ ಒಂದು ವಿಷಯವಾಗಿರಬಹುದು. ಕೆಲವೊಮ್ಮೆ ದೂಷಿಸುವಿಕೆಯು ‘ದ್ವೇಷಭರಿತ ಕಟುಭಾವ ಮತ್ತು ಕೋಪ ಮತ್ತು ಕ್ರೋಧ ಮತ್ತು ಅರಚುವಿಕೆ ಮತ್ತು ನಿಂದಾತ್ಮಕ ಮಾತಿ’ನಿಂದಲೂ ಜೊತೆಗೂಡಿರುತ್ತದೆ.—ಎಫೆಸ 4:31, NW.

ಹೆತ್ತವರ ಅಂಥ ಕೋಪದ ಕೆರಳುವಿಕೆಗಳಿಗಾಗಿ ಒಬ್ಬ ಯುವ ವ್ಯಕ್ತಿಯನ್ನು ದೂಷಿಸಸಾಧ್ಯವೋ? ಒಬ್ಬ ಅವಿಧೇಯ ಪುತ್ರ ಅಥವಾ ಪುತ್ರಿಯು ಹೆತ್ತವನೊಬ್ಬನಿಗೆ “ಕಿರಿಕಿರಿ”ಯಾಗಿರಸಾಧ್ಯವಿದೆ ಎಂಬುದು ಸತ್ಯ. (ಜ್ಞಾನೋಕ್ತಿ 17:25) ಆದರೂ, ಬೈಬಲು ಹೆತ್ತವರಿಗೆ ಹೇಳುವುದು: ‘ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದಿರಿ [ಅಕ್ಷರಾರ್ಥಕವಾಗಿ, “ಕ್ರೋಧಕ್ಕೆ ಕೆರಳಿಸದಿರಿ”].’ (ಎಫೆಸ 6:4) ಎಲ್ಲ ಕ್ರೈಸ್ತರಂತೆ, ಒಬ್ಬ ಹೆತ್ತವನು “ಕೇಡನ್ನು ಸಹಿಸಿಕೊಳ್ಳುವವ”ನಾಗಿದ್ದು, ಆತ್ಮಸಂಯಮವನ್ನು ಅಭ್ಯಾಸಿಸತಕ್ಕದ್ದು. (2 ತಿಮೊಥೆಯ 2:24) ಆದುದರಿಂದ, ಒಬ್ಬ ಹೆತ್ತವನು ಆತ್ಮಸಂಯಮವನ್ನು ಕಳೆದುಕೊಳ್ಳುವಾಗ ಅವನು ಅದನ್ನು ತನ್ನ ಮಗುವಿನ ಕುಂದುಕೊರತೆಗಳ ಮೇಲೆ ದೂಷಿಸಸಾಧ್ಯವಿಲ್ಲ.

ಮೌಖಿಕ ಆಕ್ರಮಣಗಳು, ಒಬ್ಬ ಹೆತ್ತವನು ಭಾವನಾತ್ಮಕ ಬೇಗುದಿ, ಖಿನ್ನತೆ ಅಥವಾ ಕಡಿಮೆ ಸ್ವಗೌರವವನ್ನು ಅನುಭವಿಸುತ್ತಿದ್ದಾನೆಂಬುದಕ್ಕೆ ಪುರಾವೆಯಾಗಿರಬಹುದು. ಅದು ದಾಂಪತ್ಯ ಬೇಗುದಿ ಅಥವಾ ಮದ್ಯವ್ಯಸನದಂಥ ಸಮಸ್ಯೆಗಳನ್ನೂ ಸೂಚಿಸಸಾಧ್ಯವಿದೆ. ಒಂದು ಮೂಲಕ್ಕನುಸಾರ, ವ್ಯಸನಿ ಹೆತ್ತವರ ಮಕ್ಕಳು ಅನೇಕ ವೇಳೆ ಪಾಪಪಶುಗಳಾಗುತ್ತಾರೆ. “ಅವರು ಮಾಡುವ ಯಾವ ವಿಷಯವೂ ಸರಿಯಾಗಿರುವುದಿಲ್ಲ. ಅವರನ್ನು ‘ಮೂರ್ಖರು,’ ‘ಕೆಟ್ಟವರು,’ ‘ಸ್ವಾರ್ಥಿ,’ ಇನ್ನೂ ಮುಂತಾದ ಮಾತುಗಳಿಂದ ಕರೆಯಬಹುದು. ಕುಟುಂಬದ ಸದಸ್ಯರು ಅನಂತರ ಆ ಮಗುವಿನ (ಅಥವಾ ಮಕ್ಕಳ) ಮೇಲೆ ಗುರುತಿಸಲ್ಪಟ್ಟ ‘ಸಮಸ್ಯೆ’ಯೋಪಾದಿ ಗಮನವನ್ನು ಕೇಂದ್ರೀಕರಿಸಿ, ತಮ್ಮ ಸ್ವಂತ ಅಹಿತಕರ ಭಾವನೆಗಳು ಹಾಗೂ ಸಮಸ್ಯೆಗಳಿಂದ ವಿಕರ್ಷಿತರಾಗುತ್ತಾರೆ.”

ಅನ್ಯಾಯವಾದ ದೂಷಣೆಗೊಳಗಾಗುವಿಕೆಯನ್ನು ನಿರ್ವಹಿಸುವುದು

ಡಾ. ಕ್ಯಾಥ್ಲೀನ್‌ ಮ್ಯಾಕಾಯ್‌ ಗಮನಿಸುವುದು: “ಲೇಬಲ್‌ಗಳನ್ನು ನೀಡುವುದು, ಹೀನೈಸುವುದು ಮತ್ತು [ಒಬ್ಬ] ಮಗುವಿನ ವ್ಯಕ್ತಿತ್ವವನ್ನು ಟೀಕಿಸುವುದು . . . ಒಬ್ಬ ಹದಿವಯಸ್ಕನ ಕಡಿಮೆ ಸ್ವಪ್ರತಿಷ್ಠೆ, ಖಿನ್ನತೆ ಹಾಗೂ ಸಂವಾದಿಸದೇ ಇರುವ ವಿಷಯಕ್ಕೆ ಒಂದು ಕಾರಣವಾಗಿರಸಾಧ್ಯವಿದೆ.” ಅಥವಾ ಅದನ್ನು ಬೈಬಲು ತಾನೇ ಹೇಳುವಂತೆ, ಒರಟಾದ ವರ್ತಿಸುವಿಕೆಯು ಮಕ್ಕಳನ್ನು ‘ಕೆಣಕ’ಸಾಧ್ಯವಿದೆ ಮತ್ತು ಅವರ “ಮನಗುಂದಿಸ”ಸಾಧ್ಯವಿದೆ. (ಕೊಲೊಸ್ಸೆ 3:21) ನೀವು ನಿಮ್ಮನ್ನು ಒಬ್ಬ ಅಯೋಗ್ಯ ವೈಫಲ್ಯದೋಪಾದಿ ಭಾವಿಸಲಾರಂಭಿಸಬಹುದು. ನಿಮ್ಮ ಹೆತ್ತವರ ಕಡೆಗೂ ನೀವು ನಕಾರಾತ್ಮಕ ಭಾವನೆಗಳನ್ನು ವಿಕಸಿಸಿಕೊಳ್ಳಬಹುದು. ನೀವು ಅವರನ್ನು ಪ್ರಸನ್ನಗೊಳಿಸಲಿಕ್ಕೆ ಸಾಧ್ಯವೇ ಇಲ್ಲ, ಮತ್ತು ಪ್ರಯತ್ನಿಸುವುದರಲ್ಲಿ ಯಾವ ಅರ್ಥವೂ ಇಲ್ಲವೆಂಬ ತೀರ್ಮಾನಕ್ಕೆ ನೀವು ಬರಬಹುದು. ನೀವು ಯಾವುದೇ ಶಿಸ್ತನ್ನು—ಕಾರ್ಯಸಾಧಕ ಟೀಕೆಯನ್ನೂ—ತಿರಸ್ಕರಿಸುವಂತೆ ಮಾಡುತ್ತಾ, ಕೋಪ ಮತ್ತು ತೀವ್ರ ಅಸಮಾಧಾನವು ನೆಲೆಗೊಳ್ಳಸಾಧ್ಯವಿದೆ.—ಜ್ಞಾನೋಕ್ತಿ 5:12ನ್ನು ಹೋಲಿಸಿರಿ.

ನೀವು ಹೇಗೆ ನಿಭಾಯಿಸಬಲ್ಲಿರಿ? ಹೆಚ್ಚಿನ ವಿಷಯವು ನಿಮ್ಮ ನಿರ್ದಿಷ್ಟ ಪರಿಸ್ಥಿತಿಯ ಮೇಲೆ ಅವಲಂಬಿಸುವುದು. ಅದನ್ನು ಯೋಚಿಸಿ, ವಾಸ್ತವವಾಗಿ ತೂಗಿನೋಡಬಾರದೇಕೆ? ಉದಾಹರಣೆಗೆ, ತಪ್ಪಿಗೆ ಯಾವಾಗಲೂ ನೀವು ಕಾರಣರಾಗಿರುವುದು ನಿಜವಾಗಿಯೂ ಸತ್ಯವಾಗಿದೆಯೋ? ಅಥವಾ ಕೇವಲ ನಿಮ್ಮ ಹೆತ್ತವರು ಕೆಲವೊಮ್ಮೆ ಸ್ವಲ್ಪ ವಿಪರೀತ ಟೀಕಾತ್ಮಕರಾಗಿದ್ದು, ತಪ್ಪು ವಿಷಯವನ್ನು ಹೇಳುತ್ತಿರಸಾಧ್ಯವೋ? “ನಾವೆಲ್ಲರೂ ತಪ್ಪುವದುಂಟು” ಎಂದು ಬೈಬಲ್‌ ಹೇಳುತ್ತದೆ ಮತ್ತು ಅದು ಹೆತ್ತವರನ್ನೂ ಒಳಗೊಳ್ಳುತ್ತದೆ. (ಯಾಕೋಬ 3:2) ಆದುದರಿಂದ, ಸಾಂದರ್ಭಿಕವಾಗಿ ನಿಮ್ಮ ಹೆತ್ತವರು ಸ್ವಲ್ಪ ವಿಪರೀತವಾಗಿ ಪ್ರತಿಕ್ರಿಯಿಸುವುದಾದರೂ, ನೀವು ಕೂಡ ವಿಪರೀತವಾಗಿ ಪ್ರತಿಕ್ರಿಯಿಸಬೇಕೆಂದಿದೆಯೋ? ಕೊಲೊಸ್ಸೆ 3:13ರಲ್ಲಿರುವ ಬೈಬಲಿನ ಸಲಹೆಯು ಸರಿಯಾಗಿ ಅನ್ವಯವಾಗಬಹುದು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [“ಯೆಹೋವನು,” NW] ನಿಮ್ಮನ್ನು ಕ್ಷಮಿಸಿದಂತೆ ನೀವೂ ಕ್ಷಮಿಸಿರಿ.”

ನಿಮ್ಮ ಹೆತ್ತವರಿಗೆ ಅನುಭೂತಿಯನ್ನು ತೋರಿಸುವುದು ಇದನ್ನು ಮಾಡುವಂತೆ ನಿಮಗೆ ಸಹಾಯಮಾಡಬಲ್ಲದು. ಜ್ಞಾನೋಕ್ತಿ 19:11 ಹೇಳುವುದು: “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; ಪರರ ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.” ನಿಮ್ಮ ಅಪ್ಪ ಕೆಲಸದಿಂದ ಮನೆಗೆ ಹಿಂದಿರುಗಿ ಬರುವಾಗ ಅಸಾಧಾರಣವಾಗಿ ಮುಂಗೋಪಿಯಾಗಿ ತೋರುವುದಾದರೆ, ಹಾಗೂ ನೀವು ಮಾಡಿರದ ಯಾವುದೋ ವಿಷಯಕ್ಕೆ ನಿಮ್ಮನ್ನು ದೂಷಿಸುವುದಾದರೆ, ಅದನ್ನು ದೊಡ್ಡ ರಂಪವಾಗಿ ಮಾಡಬೇಕೆಂದಿದೆಯೋ? ಅವರು ಪ್ರಾಯಶಃ ಒತ್ತಡದ ಉದ್ವೇಗದಲ್ಲಿದ್ದಾರೆ ಮತ್ತು ಆಯಾಸಗೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದೇ, ನಿಮಗೆ ‘ಅವರ ದೋಷವನ್ನು ಲಕ್ಷಿಸ’ದಂತೆ ಸಹಾಯಮಾಡಬಹುದು.

ಆದರೂ, ಅನ್ಯಾಯವಾಗಿ ದೂಷಿಸಲ್ಪಡುವುದು ಕೇವಲ ಸಾಂದರ್ಭಿಕ ಕಿರಿಕಿರಿಯಲ್ಲ ಬದಲಾಗಿ ನಿರಂತರವೂ ನಿರ್ದಯವೂ ಆದ ವಿಷಯವಾಗಿರುವುದಾದರೆ ಆಗೇನು? ಮುಂದಿನ ಒಂದು ಲೇಖನವು ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಲಿಕ್ಕಾಗಿ ಇರುವ ಮಾರ್ಗಗಳ ಕುರಿತಾಗಿ ಚರ್ಚಿಸುವುದು.

[ಪಾದಟಿಪ್ಪಣಿ]

a 1987, ಜುಲೈ 22ರ (ಇಂಗ್ಲಿಷ್‌) ನಮ್ಮ ಸಂಚಿಕೆಯಲ್ಲಿರುವ “ಯುವ ಜನರು ಪ್ರಶ್ನಿಸುವುದು . . . ನನ್ನ ಸಹೋದರ ಸಹೋದರಿಯರೊಂದಿಗೆ ಹೊಂದಿಕೊಂಡು ಹೋಗುವುದು ಏಕೆ ಇಷ್ಟೊಂದು ಕಷ್ಟಕರ?” ಎಂಬ ಲೇಖನವನ್ನು ನೋಡಿರಿ.

[ಪುಟ 26 ರಲ್ಲಿರುವ ಚಿತ್ರ]

ಒಬ್ಬ ಹೆತ್ತವನು ಅಗತ್ಯವಿರುವಾಗ ಸರಿಪಡಿಸುವ ಸಲಹೆಯನ್ನು ನೀಡುವುದು ಅನ್ಯಾಯವಾಗಿರುವುದಿಲ್ಲ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ