ನಮ್ಮ ಮಾರ್ಪಡುತ್ತಿರುವ ಜಗತ್ತು ಅದು ಎತ್ತ ಸಾಗುತ್ತಿದೆ?
ಕೆಲವು ಬದಲಾವಣೆಗಳು ಕೋಟಿಗಟ್ಟಲೆ ಜನರ, ಹೌದು, ಲೋಕದ ಎಲ್ಲ ಜನಸಂಖ್ಯೆಯ ಮೇಲೆ ಮತ್ತು ಮುಂದಿನ ಸಂತತಿಗಳ ಮೇಲೆಯೂ ಆಳವಾದ ಹಾಗೂ ಬಾಳಿಕೆ ಬರುವ ಪರಿಣಾಮವನ್ನು ಬೀರುತ್ತಾ ಇವೆ. ಹಿಂಸಾತ್ಮಕ ಪಾತಕಗಳು, ಮಾದಕ ಪದಾರ್ಥಗಳ ದುರುಪಯೋಗ, ಏಯ್ಡ್ಸ್ನ ಹರಡಿಕೆ, ನೀರು ಮತ್ತು ಗಾಳಿಯ ಮಾಲಿನ್ಯ, ಮತ್ತು ಕಾಡುಕಡಿತ, ಇವು ನಮ್ಮ ಮೇಲೆ ಪರಿಣಾಮ ಬೀರುತ್ತಿರುವ ವಿಕಸನಗಳಲ್ಲಿ ಕೇವಲ ಕೆಲವೇ ಆಗಿವೆ. ಶೀತಲ ಯುದ್ಧ ಮತ್ತು ಸ್ವತಂತ್ರ ಆರ್ಥಿಕ ಆಡಳಿತವಿರುವ ಪಾಶ್ಚಾತ್ಯ ಶೈಲಿಯ ಪ್ರಜಾಪ್ರಭುತ್ವದ ಹರಡಿಕೆಗಳು ಸಹ ಜೀವನಗಳನ್ನು ಮಾರ್ಪಡಿಸಿ ಭವಿಷ್ಯತ್ತನ್ನು ಪ್ರಭಾವಿಸುತ್ತಿವೆ. ಇವುಗಳಲ್ಲಿ ಕೆಲವು ಸಂಗತಿಗಳನ್ನು ನಾವು ಪರೀಕ್ಷಿಸೋಣ.
ಪಾತಕ ನಮ್ಮ ಜೀವನಗಳನ್ನು ಬದಲಾಯಿಸಿರುವ ವಿಧ
ನಿಮ್ಮ ನೆರೆಹೊರೆಯಲ್ಲಿ ರಸ್ತೆಗಳು ಹೇಗಿವೆ? ರಾತ್ರಿ ವೇಳೆಯಲ್ಲಿ ನೀವೊಬ್ಬರೇ ಹೊರಗೆ ತಿರುಗಾಡುವಾಗ ಅದು ನಿಮಗೆ ಸುರಕ್ಷಿತವೆನಿಸುತ್ತದೆಯೆ? ಕೇವಲ 30 ಯಾ 40 ವರ್ಷಗಳ ಹಿಂದೆ ತಮ್ಮ ಮನೆಗಳಿಗೆ ಬೀಗ ಹಾಕದೆ ಬಿಟ್ಟು ಹೋಗುವ ಸಾಧ್ಯತೆ ಜನರಿಗಿತ್ತು. ಆದರೆ ಕಾಲ ಬದಲಾಗಿದೆ. ಈಗ ಕೆಲವು ಬಾಗಲುಗಳಿಗೆ ಎರಡೋ ಮೂರೋ ಬೀಗಗಳಿವೆ, ಮತ್ತು ಕಿಟಿಕಿಗಳಿಗೆ ಕಂಬಿಗಳಿವೆ.
ಇಂದು ಜನರು ತಮ್ಮ ಅತ್ಯುತ್ತಮ ಉಡುಪು ಮತ್ತು ಆಭರಣಗಳನ್ನು ಧರಿಸಿ ರಸ್ತೆ ನಡೆಯಲು ಹೆದರುತ್ತಾರೆ. ನಗರ ನಿವಾಸಿಗಳಲ್ಲಿ ಕೆಲವರನ್ನು ಒಂದು ಚರ್ಮದ ಮೇಲಂಗಿಗಾಗಿ ಯಾ ಒಂದು ಮಿಂಕ್ ತುಪ್ಪುಳು ಚರ್ಮದ ಮೇಲಂಗಿಗಾಗಿ ಕೊಂದದ್ದುಂಟು. ಇತರರು ಮಾದಕ ಪದಾರ್ಥ ಕೊಂಡು ಮಾರುವ ತಂಡಗಳ ಮಧ್ಯೆ ನಡೆಯುವ ಬಂದೂಕು ಹೊಡೆತಗಳ ಮಧ್ಯೆ ಸಿಕ್ಕಿ ಬಿದ್ದು ಸತ್ತಿದ್ದಾರೆ. ನಿರಪರಾಧಿ ಪ್ರೇಕ್ಷಕರು, ಅನೇಕ ಮಕ್ಕಳ ಸಹಿತ, ಅಧಿಕಾಂಶ ಪ್ರತಿದಿನ ಗಾಯಗೊಳ್ಳುತ್ತಿದ್ದಾರೆ ಯಾ ಸಾಯುತ್ತಿದ್ದಾರೆ. ಪರೋಪಜೀವಿ ಕಳ್ಳರು ಕದಿಯದಂತೆ ತಡೆಯ ಪ್ರಯತ್ನಿಸಲು ಚಾತುರ್ಯದಿಂದ ಕಲ್ಪಿಸಿದ ಉಪಕರಣಗಳ ವಿನಹ ಕಾರುಗಳನ್ನು ರಸ್ತೆಯಲ್ಲಿ ಭದ್ರವಾಗಿ ಬಿಟ್ಟುಹೋಗುವ ಸಾಧ್ಯತೆಯಿಲ್ಲ. ಈ ವಿಕೃತ ಲೋಕ ಹವಾಮಾನದಲ್ಲಿ, ಜನರು ಬದಲಾವಣೆ ಹೊಂದಿದ್ದಾರೆ. ಪ್ರಾಮಾಣಿಕತೆ ಮತ್ತು ಸಮಗ್ರತೆ, ಅಧಿಕಾಂಶ ಮರೆತು ಹೋಗಿರುವ ಮೌಲ್ಯಗಳು. ಭರವಸಾರ್ಹತೆ ಮಾಯವಾಗಿದೆ.
ಪಾತಕ ಮತ್ತು ಹಿಂಸಾಚಾರ ಲೋಕವ್ಯಾಪಕವಾದ ಒಂದು ವಿಚಿತ್ರ ಘಟನೆ. ಇದನ್ನು ವಿವಿಧ ಮೂಲಗಳ ವಾರ್ತಾ ಶೀರ್ಷಿಕೆಗಳು ಒತ್ತಿ ಹೇಳುತ್ತವೆ: “ಪೊಲೀಸರು ಮತ್ತು ಕಳ್ಳರು, ಪಾತಕಿಗಳ ತಂಡಗಳು, ಸೂಳೆಗಾರಿಕೆ ಮತ್ತು ಅಮಲೌಷಧ ಸೇರಿರುವ ದುಷ್ಪ್ರವೃತ್ತಿ, ಇವೆಲ್ಲವೂ ತನ್ನಲ್ಲಿದೆಯೆಂದು ಮಾಸ್ಕೊ ಕಂಡುಹಿಡಿಯುತ್ತದೆ”; “ಪ್ರಾಗ್ನ ದೈನಂದಿನ ಜೀವಿತಕ್ಕೆ ರಸ್ತೆ ಪಾತಕದ ಬಡಿತ”; “ಜಪಾನ್ ವ್ಯವಸ್ಥಿತ ಪಾತಕ ತಂಡವನ್ನು ಎದುರಿಸುವಾಗ ಆ ತಂಡ ಮರುಹೋರಾಡುತ್ತದೆ”; “ಅಷ್ಟಪಾದಿಯ ಬಿಗಿಹಿಡಿತ—ಇಟೆಲಿಯ ಉಚ್ಚ ಮಾಫೀಯ-ಹೋರಾಟಗಾರನು ಸಿಡಿಯಲ್ಪಡುತ್ತಾನೆ.” ಪಾತಕ ಸಾರ್ವತ್ರಿಕ ಸಮಸ್ಯೆಯಾಗಿದೆ.
ಇಂದು ಪಾತಕವು ಹೆಚ್ಚು ಹಿಂಸಾತ್ಮಕವೂ ಆಗಿದೆ. ಜೀವಕ್ಕೆ ಬೆಲೆ ಕಡಮೆ. ಬ್ರೆಸೀಲ್ನ ರೀಯೊ ಡೆ ಷೆನಿರೊದಲ್ಲಿ, ನಗರದ ಅಂಚಿನಲ್ಲಿರುವ ಹೊಲಸು ಕೇರಿಯ ಒಂದು ಕ್ಷೇತ್ರವನ್ನು “ಯೂಎನ್ ಸಂಘವು ಲೋಕದ ಅತ್ಯಂತ ಹಿಂಸಾತ್ಮಕ ಸ್ಥಳವೆಂದು ಗುರುತಿಸಿದೆ. ಅಲ್ಲಿ ಪ್ರತಿ ವರ್ಷ 2,500ಕ್ಕೂ ಹೆಚ್ಚು ಜನರು ಕೊಲ್ಲಲ್ಪಡುತ್ತಾರೆ.” (ವರ್ಲ್ಡ್ ಪ್ರೆಸ್ ರಿವ್ಯೂ) ಕೊಲಂಬಿಯದಲ್ಲಿ ಅಮಲೌಷಧ ಧಣಿಗಳು ತಮ್ಮ ತರುಣ ಸೀಕಾರ್ಯೊ ಯಾ ಸಂಬಳಕ್ಕಿಟ್ಟ ಕೊಲೆಗಾರರನ್ನು ಮೋಟರ್ಸೈಕಲ್ಗಳ ಮೇಲೆ ಕಳುಹಿಸಿ, ಅವರು ತಮ್ಮ ಪ್ರತಿಸ್ಪರ್ಧಿಗಳಿಗೆ ಮತ್ತು ಸಾಲಗಾರರಿಗೆ ಪ್ರತ್ಯೇಕ ರೀತಿಯ ಕ್ಷಿಪ್ರ ಮರಣ ದಂಡನೆಯನ್ನು ಕೊಡುವಂತೆ ಮಾಡುತ್ತಾರೆ. ಮತ್ತು ಅನೇಕ ವೇಳೆ, ಕೊಲಂಬಿಯದಲ್ಲಿಯಾಗಲಿ, ಇತರ ಕಡೆಗಳಲ್ಲಾಗಲಿ, ನೀವು ಆ ಪಾತಕಕ್ಕೆ ಸಾಕ್ಷಿಯಾಗಿರುವಲ್ಲಿ, ನಿಮಗೆ ಅಯ್ಯೋ. ನೀವು ಮುಂದಿನ ಬಲಿಪಶುವಾಗಬಹುದು.
ಇನ್ನೊಂದು ದೊಡ್ಡ ಮಾರ್ಪಾಟು ಯಾವುದೆಂದರೆ ಹೆಚ್ಚೆಚ್ಚು ಮಂದಿ ಪಾತಕಿಗಳು ಮಾರಕವಾದ ಸ್ವಯಂಚಾಲಿತ ಶಸ್ತ್ರಗಳನ್ನು ಹಿಡಿದುಕೊಂಡಿರುತ್ತಾರೆ, ಮತ್ತು ಹೆಚ್ಚೆಚ್ಚು ಮಂದಿ ಸಾರ್ವಜನಿಕರು ಆತ್ಮರಕ್ಷಣೆಗಾಗಿ ಬಂದೂಕುಗಳನ್ನು ಹಿಡಿದುಕೊಂಡಿರುತ್ತಾರೆ. ಈ ಶಸ್ತ್ರಧಾರಣೆಯ ಏರಿಕೆ ಸ್ವಯಂಚಾಲಕವಾಗಿ ಮರಣ ಮತ್ತು ಗಾಯ—ಪಾತಕಗಳಿಂದಾಗಲಿ, ಅಪಘಾತಗಳಿಂದಾಗಲಿ—ಗಳಲ್ಲಿಯೂ ಏರಿಕೆಯೆಂದು ಅರ್ಥ. ಕಿಸೆಯಲ್ಲಿರುವ ಯಾ ಮನೆಯಲ್ಲಿರುವ ಒಂದು ಬಂದೂಕು ಯಾವನನ್ನೂ ಸಂಭಾವ್ಯ ಕೊಲೆಗಾರನಾಗಿ ಮಾಡಬಲ್ಲದೆಂಬುದು ಈಗ ಸಾರ್ವತ್ರಿಕ ಸ್ವತಸ್ಸಿದ್ಧ ಸತ್ಯವಾಗಿದೆ.
ಪಾತಕ ಮತ್ತು ಮಾದಕ ಪದಾರ್ಥಗಳು
ಐವತ್ತು ವರ್ಷಗಳ ಹಿಂದೆ, ಮಾದಕ ಪದಾರ್ಥಗಳು ಜಾಗತಿಕ ಸಮಸ್ಯೆಯೆಂಬುದನ್ನು ಸ್ವಪ್ನದಲ್ಲಿಯೂ ಯಾರು ಕಂಡಿದ್ದರು? ಆದರೆ ಈಗ ಅದು ಪಾತಕ ಮತ್ತು ಹಿಂಸಾಚಾರಕ್ಕೆ ಮುಖ್ಯ ಕಾರಣಗಳಲ್ಲಿ ಒಂದು. ಟೆರರಿಸ್ಮ್, ಡ್ರಗ್ಸ್ ಆ್ಯಂಡ್ ಕ್ರೈಮ್ ಇನ್ ಯೂರೋಪ್ ಆಫ್ಟರ್ 1992 ಎಂಬ ಪುಸ್ತಕದಲ್ಲಿ ರಿಚರ್ಡ್ ಕಟ್ಲರ್ಬಕ್, ಹೇಳಿದ್ದು: “ಕ್ರಮೇಣ, ನಿದ್ರಾಜನಕ ಪದಾರ್ಥ ವ್ಯಾಪಾರದ ಬೆಳವಣಿಗೆ, ಮಾನವ ನಾಗರಿಕತೆಗಿರುವ ಸಕಲ ಅಪಾಯಗಳಲ್ಲಿ ಅತ್ಯಂತ ದೊಡ್ಡ ಅಪಾಯವಾಗಬಲ್ಲದು. . . . ಇದರ ಲಾಭ ಮಾದಕೌಷಧದ ಧಣಿಗಳಿಗೆ ಭಾರಿ ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ಕೊಡುವುದು [ಕೊಲಂಬಿಯ ಒಂದು ಸ್ಪಷ್ಟ ಉದಾಹರಣೆ] ಮಾತ್ರವಲ್ಲ, ಲೋಕಾದ್ಯಂತ ಭಯಂಕರ ಮೊತ್ತದಲ್ಲಿ ಪಾತಕಕ್ಕೂ ಹಣಸಹಾಯ ಮಾಡಬಲ್ಲದು.” ಅವರು ಮತ್ತೂ ಹೇಳಿದ್ದು: “ಭಯವಾದ ಮತ್ತು ಪಾತಕ ಹಿಂಸಾಚಾರದ ಅತ್ಯಂತ ಮಹಾ ಉತ್ಪಾದಕರಲ್ಲಿ ಒಂದು, ಕೊಲಂಬಿಯದ ಕೋಕ ಹೊಲಗಳ ಮತ್ತು ಯೂರೋಪ್ ಮತ್ತು ಅಮೆರಿಕಗಳ ನಡುವೆ ನಡೆಯುವ ಕೊಕೇಯ್ನ್ ವ್ಯಾಪಾರವೇ.”
ಚಾಲ್ತಿಯಲ್ಲಿರುವ ಪಾತಕದ ಅಲೆ ಮತ್ತು ಲೋಕದ ಹೆಚ್ಚುತ್ತಿರುವ ಸೆರೆಮನೆಯ ಜನಸಂಖ್ಯೆಯು ಪಾತಕ ಪ್ರವೃತ್ತಿಯ ಮತ್ತು ಮಾರ್ಪಡಲು ಅಲ್ಪವೇ ಮನಸ್ಸಿರುವ ಕೋಟಿಗಟ್ಟಲೆ ಜನರಿದ್ದಾರೆಂದು ತೋರಿಸುತ್ತದೆ. ಪಾತಕವು ಲಾಭಕರವೆಂಬುದನ್ನು ಅತಿ ಹೆಚ್ಚು ಜನರು ನೋಡಿದ್ದಾರೆ. ಇದರ ಪರಿಣಾಮವಾಗಿ, ಜಗತ್ತು ಹೆಚ್ಚು ಕೆಟ್ಟದ್ದಾಗಿ ಮಾರ್ಪಟ್ಟಿದೆ. ಅದು ಹೆಚ್ಚು ಅಪಾಯಕಾರಕವಾಗಿ ಪರಿಣಮಿಸಿದೆ.
ಏಯ್ಡ್ಸ್—ಬದಲಾವಣೆಗೆ ಉತ್ಪ್ರೇರಕವೊ?
ಪ್ರಧಾನವಾಗಿ ಸಲಿಂಗೀಕಾಮದ ಜನಸಂಖ್ಯೆಯನ್ನು ಬಾಧಿಸುತ್ತದೆಂದು ಮೊದಲು ಕಂಡುಬಂದ ಈ ರೋಗ, ಈಗ ಪ್ರತಿಯೊಂದು ಕುಲ ಮತ್ತು ಜೀವನ ಶೈಲಿಯನ್ನು ಬಾಧಿಸುವ ಪೀಡೆಯಾಗಿ ಪರಿಣಮಿಸಿದೆ. ಏಯ್ಡ್ಸ್ಗೆ ಈಗ ಇಷ್ಟರೆಂಬವರು ಇಲ್ಲ. ಆಫ್ರಿಕದ ಕೆಲವು ದೇಶಗಳಲ್ಲಿ ಇದು, ಅನ್ಯಲಿಂಗೀ ಜನಸಂಖ್ಯೆಯ ಬಹು ಮಂದಿಯನ್ನು ಕೊಲ್ಲುತ್ತದೆ. ಇದರ ಪರಿಣಾಮವಾಗಿ, ಕೆಲವರಿಗೆ ಸ್ವೇಚ್ಛಾ ಲೈಂಗಿಕ ಸಂಪರ್ಕ ಫಕ್ಕನೆ ಶೈಲಿ ತಪ್ಪಿದ ಸಂಗತಿಯಾಗಿದೆ. ಇದು ನೈತಿಕತೆಯ ಯಾವ ಕಾರಣದಿಂದಲೂ ಅಲ್ಲ, ಸೋಂಕಿನ ಭಯದ ಕಾರಣವೇ. “ಸುರಕ್ಷಿತ ಸಂಭೋಗ” ಎಂಬುದು ಈಗ ಒಂದು ಧ್ಯೇಯಮಂತ್ರ, ಮತ್ತು ಶಿಶ್ನ ಕವಚವು ಇದನ್ನು ತಡೆಯಲು ಇರುವ ಮುಖ್ಯ ಶಿಫಾರಸು ಆಗಿದೆ. ಇಂದ್ರಿಯನಿಗ್ರಹವು ರಕ್ಷಣೋಪಾಯಗಳಲ್ಲಿ ತೀರಾ ಕಡಮೆ ಅಚ್ಚು ಮೆಚ್ಚಿನದ್ದು. ಆದರೆ ಈ ಏಯ್ಡ್ಸ್ ಸನಿಹ ಭವಿಷ್ಯತ್ತಿನಲ್ಲಿ ಮಾನವ ಕುಟುಂಬವನ್ನು ಹೇಗೆ ಬಾಧಿಸುವುದು?
ಟೈಮ್ ಪತ್ರಿಕೆ ಇತ್ತೀಚೆಗೆ ವರದಿ ಮಾಡಿದ್ದು: “ಇಸವಿ 2000ದೊಳಗೆ ಏಯ್ಡ್ಸ್ ಈ ಶತಮಾನದ ಅತ್ಯಂತ ದೊಡ್ಡ ಸಾಂಕ್ರಾಮಿಕ ರೋಗವಾಗಿ, 1918ರ ಇನ್ಫ್ಲುಯೆನ್ಸವನ್ನು ಮೀರಿಸುವ ರೋಗವಾಗಿ ಪರಿಣಮಿಸಬಲ್ಲದು. ಆ ವಿಪತ್ತು 2 ಕೋಟಿ ಜನರನ್ನು ಯಾ ಲೋಕದ ಜನಸಂಖ್ಯೆಯಲ್ಲಿ 1% ವನ್ನು—Iನೆಯ ಲೋಕಯುದ್ಧದಲ್ಲಿ ಸತ್ತ ಸೈನಿಕ ಸಂಖ್ಯೆಯ ಇಮ್ಮಡಿಗೂ ಹೆಚ್ಚು—ಕೊಂದಿತು.” ಒಬ್ಬ ನಿಪುಣರು ಹೇಳಿದಂತೆ, “ಈ ಸಾಂಕ್ರಾಮಿಕ ರೋಗ ಐತಿಹಾಸಿಕ ಪ್ರಮಾಣದ್ದು.”
ಏಯ್ಡ್ಸ್ ಸಂಶೋಧನೆಗೆ ಕೋಟಿಗಟ್ಟಲೆ ಡಾಲರುಗಳನ್ನು, ಮತಿತ್ತರ ಹಣವನ್ನು ಹೊಯ್ದಿರುವುದಾದರೂ, ಪರಿಹಾರ ಕಾಣಿಸುವುದಿಲ್ಲ. ನೆದರ್ಲೆಂಡ್ಸ್ನ ಆ್ಯಮ್ಸ್ಟರ್ಡ್ಯಾಮ್ನಲ್ಲಿ ನಡೆದ ಇತ್ತೀಚಿನ ಒಂದು ಪರಿಷತ್ತು, 11,000 ವಿಜ್ಞಾನಿಗಳನ್ನೂ, ಇತರ ಪರಿಣತರನ್ನೂ ಅವರು ಈ ಸಮಸ್ಯೆಯನ್ನು ಅಧ್ಯಯನ ಮಾಡುವಂತೆ ಒಟ್ಟು ಸೇರಿಸಿತು. “ಅಲ್ಲಿಯ ಮನೋವೃತ್ತಿಯು ಹತಾಶೆ, ವೈಫಲ್ಯ, ಮತ್ತು ಹೆಚ್ಚುತ್ತಿರುವ ದುರಂತವನ್ನು ಪ್ರತಿಬಿಂಬಿಸುವ ನಿರುತ್ಸಾಹಕರ ಮನೋವೃತ್ತಿಯಾಗಿತ್ತು. . . . ಅನ್ವೇಷಣೆ ಆರಂಭವಾದಂದಿನಿಂದ ಏಯ್ಡ್ಸನ್ನು ಗೆಲ್ಲುವ ವಿಷಯದಲ್ಲಿ ಮಾನವಕುಲವು ಹೆಚ್ಚು ಹತ್ತಿರ ಬಂದಿರದೆ ಇರಬಹುದು. ಯಾವ ಲಸಿಕೆಯೂ ಇಲ್ಲ, ರೋಗಪರಿಹಾರವೂ ಇಲ್ಲ, ನಿರ್ವಿವಾದದ ಕಾರ್ಯಸಾಧಕವಾದ ಚಿಕಿತ್ಸೆ ಸಹ ಇಲ್ಲ.” (ಟೈಮ್) ಈಗ ಎಚ್ಐವಿ ಪಾಸಿಟಿವ್ ಆಗಿದ್ದವರಿಗೆ ಆಗಲೇ ಏಯ್ಡ್ಸ್ ಕಾಯಿಲೆ ತಗಲುವ ಸಂಭವವಿದ್ದು, ಅವರ ಪ್ರತೀಕ್ಷೆಯು ಮೊಬ್ಬಾಗಿದೆ. ಇಲಿಯ್ಲೂ ಆಗಿರುವ ಮಾರ್ಪಾಟು ಹೆಚ್ಚು ಕೆಟ್ಟದ್ದಕ್ಕೆಯೇ.
ಲೋಕ ರಾಜಕೀಯದಲ್ಲಿ ಮಾರ್ಪಾಟು
ಕಳೆದ ನಾಲ್ಕು ವರ್ಷಗಳ ರಾಜಕೀಯ ಹವಾಮಾನ ಅನೇಕ ನಾಯಕರುಗಳಿಗೆ—ಪ್ರಾಯಶಃ ಅಮೆರಿಕದ ನಾಯಕರುಗಳಿಗೆ ಎಲ್ಲರಿಗಿಂತ ಹೆಚ್ಚು—ಅನಿರೀಕ್ಷಿತವಾಗಿ ಕಂಡುಬಂದಿದೆ. ಅಮೆರಿಕವು ಫಕ್ಕನೆ ರಾಜಕೀಯ ರಂಗದಲ್ಲಿ ತನಗೆ ಯಾವ ಯೋಗ್ಯ ಪ್ರತಿಸ್ಪರ್ಧಿಯೂ ಇಲ್ಲವೆಂದು ಕಂಡುಕೊಂಡಿದೆ. ಇದನ್ನು ಅತಿ ಪ್ರಚೋದಕವಾದ, ಸೋಲಿಸಲಾಗದ ಬಾಸ್ಕೆಟ್ಬಾಲ್ ತಂಡ ಫಕ್ಕನೆ ತನ್ನ ಎದುರಾಗಿ ಇನ್ನು ಮುಂದೆ ಯಾರೂ ಆಡಲು ಮನಸ್ಸು ಮಾಡದೆ ಇರುವುದಕ್ಕೆ ಸರಿಹೋಲಿಸಲಾಗಿದೆ. ಈ ಉಭಯ ಸಂಕಟವನ್ನು, ಫಾರೀನ್ ಪಾಲಿಸಿ ಪತ್ರಿಕೆಯ ಸಂಪಾದಕ, ಚಾರ್ಲ್ಸ್ ವಿಲ್ಯಮ್ ಮೇನ್ಸ್, 1990ರ ಒಂದು ಲೇಖನದಲ್ಲಿ ಸಾರಾಂಶವಾಗಿ ತಿಳಿಸಿದರು: “ಇಂದು ಅಮೆರಿಕದ ವಿದೇಶ ನೀತಿಯ ಕೆಲಸ, ವಿಪತ್ಕಾರಕವಾದ ಒಂದು ಯುದ್ಧದಿಂದ ದೇಶವನ್ನು ಉದ್ಧರಿಸುವುದಲ್ಲ; ಅದು ಅಮೆರಿಕ ಮತ್ತು ಹಿಂದಿನ ಸೋವಿಯೆಟ್ ಯೂನಿಯನ್, ಇವುಗಳ ಮಧ್ಯೆ ಥಟ್ಟನೆ ಎದ್ದು ಬಂದಿರುವ ಶಾಂತಿಯನ್ನು ಸಂಘಟಿಸುವುದೇ ಆಗಿದೆ.”
ಸಾಂಪ್ರದಾಯಿಕ ಆಯುಧಗಳ ಯುದ್ಧವು—ಲೋಕದ ಶಸ್ತ್ರ ವ್ಯಾಪಾರಿಗಳಿಗೆ ಸಂತೋಷವನ್ನುಂಟು ಮಾಡುತ್ತಾ—ಸಮೃದ್ಧಿಯಾಗುತ್ತಿರುವಾಗ, ನ್ಯೂಕ್ಲಿಯರ್ ತಿಳಿವಿನ ಸಂಖ್ಯಾಭಿವೃದ್ಧಿ ಹೊಸ ಬೆದರಿಕೆಗಳನ್ನು ನೀಡುತ್ತದೆ. ಶಾಂತಿಗಾಗಿ ಮೊರೆಯಿಡುತ್ತಿರುವ ಲೋಕದಲ್ಲಿ, ಅನೇಕ ರಾಜಕೀಯ ನಾಯಕರುಗಳು ತಮ್ಮ ಸೈನ್ಯಗಳನ್ನೂ ಶಸ್ತ್ರಾಸ್ತ್ರಗಳನ್ನೂ ಬಲಪಡಿಸುತ್ತಿದ್ದಾರೆ. ಮತ್ತು ಅಧಿಕಾಂಶ ದಿವಾಳಿಯಾಗಿರುವ ಸಂಯುಕ್ತ ರಾಷ್ಟ್ರ ಸಂಘವನ್ನು, ಅದು ಲೋಕದ ಅಸ್ಥಿಗತ ಹುಣ್ಣುಗಳಿಗೆ ಮುಲಾಮು ಪಟ್ಟಿಯ ತೇಪೆ ಹಚ್ಚಲು ಪ್ರಯತ್ನಿಸುವುದರಲ್ಲಿ ಕಾರ್ಯನಿರತವಾಗಿರುವಂತೆ ಮಾಡಲಾಗುತ್ತಿದೆ.
ರಾಷ್ಟ್ರೀಯತೆಯ ಬದಲಾಗದ ಕೇಡು
ಸಮತಾವಾದವು ಶಿಥಿಲಗೊಳ್ಳ ತೊಡಗಿದಾಗ, ಅಮೆರಿಕದ ಮಾಜಿ ಅಧ್ಯಕ್ಷ ಬುಷ್, “ಒಂದು ಹೊಸ ಲೋಕ ವ್ಯವಸ್ಥೆ”ಯ ಕಲ್ಪನೆಯನ್ನು ಜನಪ್ರಿಯ ಮಾಡಿದರು. ಆದರೂ, ಅನೇಕ ರಾಜಕೀಯ ನಾಯಕರು ಕಂಡುಹಿಡಿದಿರುವಂತೆ, ಜಾಣ್ಮೆಯ ಧ್ಯೇಯಮಂತ್ರಗಳನ್ನು ಕಂಡುಹಿಡಿಯುವುದು ಸುಲಭ; ಸಕಾರಾತ್ಮಕ ಮಾರ್ಪಾಟುಗಳನ್ನು ಸಾಧಿಸುವುದು ಎಷ್ಟೋ ಹೆಚ್ಚು ಕಷ್ಟ. ಆಫ್ಟರ್ ದ ಫಾಲ್—ಪರ್ಸ್ಯೂಟ್ ಆಫ್ ಡೆಮಾಕ್ರಸಿ ಇನ್ ಸೆಂಟ್ರಲ್ ಯೂರೋಪ್ ಎಂಬ ಪುಸ್ತಕದಲ್ಲಿ, ಜಫ್ರಿ ಗೋಲ್ಡ್ಫಾರ್ಬ್ ನುಡಿಯುವುದು: “‘ಒಂದು ಹೊಸ ಲೋಕ ವ್ಯವಸ್ಥೆ’ಯ ಕುರಿತ ಎಲ್ಲೆರಹಿತವಾದ ನಿರೀಕ್ಷೆಯನ್ನು ಶೀಘ್ರವೇ ಅನುಸರಿಸಿ, ಅತಿ ಹಳೆಯದಾದ ಸಮಸ್ಯೆಗಳು ನಮ್ಮಲ್ಲಿ ಇನ್ನೂ ಇವೆ, ಕೆಲವು ಬಾರಿ ವಿಪರೀತವಾಗಿ, ಎಂಬ ಗ್ರಹಿಕೆ ಬಂತು. ಸ್ವಾತಂತ್ರ್ಯದ ಸಂತುಷ್ಟಿಯನ್ನು . . . ಅನೇಕ ವೇಳೆ ರಾಜಕೀಯ ಬಿಕ್ಕಟ್ಟು, ರಾಷ್ಟ್ರೀಯ ಹೋರಾಟ, ಧಾರ್ಮಿಕ ಸಂಪ್ರದಾಯ ವಾದ, ಮತ್ತು ಆರ್ಥಿಕ ಕುಸಿತ—ಇವುಗಳ ಹತಾಶೆ ಮಬ್ಬುಗವಿಸಿದೆ.” ಹಿಂದಿನ ಯುಗೊಸ್ಲಾವಿಯದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ, ರಾಜಕೀಯ, ಧರ್ಮ, ಮತ್ತು ರಾಷ್ಟ್ರೀಯತೆಯ ವಿಭಾಜಕ ಪ್ರಭಾವಕ್ಕೆ ಸ್ಪಷ್ಟವಾಗಿದ ಉದಾಹರಣೆ ಆಗಿದೆ.
ಗೋಲ್ಡ್ಫಾರ್ಬ್ ಮುಂದುವರಿಸುವುದು: “ವಿದೇಶಿಯರ ಮೇಲಣ ದ್ವೇಷ ಮತ್ತು ವೈಯಕ್ತಿಕ ಅಭದ್ರತೆ, ಮಧ್ಯ ಯೂರೋಪಿಯನ್ ಜೀವನದ ನಿಜತ್ವಗಳಾಗಿವೆ. ಪ್ರಜಾಪ್ರಭುತ್ವ ಸ್ವಯಂಚಾಲಿತವಾಗಿ ಆರ್ಥಿಕ, ರಾಜಕೀಯ, ಮತ್ತು ಸಾಂಸ್ಕೃತಿಕವಾಗಿ ವಾಗ್ದಾನಿತ ಫಲಿತಾಂಶವನ್ನು ಉತ್ಪಾದಿಸುವುದಿಲ್ಲ, ಮತ್ತು ಒಂದು ಸ್ವತಂತ್ರ ಆರ್ಥಿಕ ಆಡಳಿತವು ಸಂಪತ್ತನ್ನು ವಾಗ್ದಾನಿಸುವುದು ಮಾತ್ರವಲ್ಲ, ಅದರಲ್ಲಿ ಹೇಗೆ ಕೆಲಸ ನಡೆಸುವುದು ಎಂದು ತಿಳಿಯದಿದ್ದವರಿಗೆ ಅದು ಅಗಮ್ಯವಾದ ಸಮಸ್ಯೆಗಳನ್ನೂ ಸೃಷ್ಟಿಸುತ್ತದೆ.”
ಆದರೆ ಇವು ಮಧ್ಯ ಯೂರೋಪಿನ ಮತ್ತು ಹಿಂದಿನ ಸೋವಿಯೆಟ್ ಒಕ್ಕೂಟದ ಗಣರಾಜ್ಯಗಳ ಸಮಸ್ಯೆಯಾಗಿ ಮಾತ್ರ ಇರುವುದಿಲ್ಲ; ವಿದೇಶಿಯರ ದ್ವೇಷ ಮತ್ತು ಆರ್ಥಿಕ ಅಭದ್ರತೆ ಲೋಕವ್ಯಾಪಕವಾಗಿವೆ. ಇದಕ್ಕೆ ಮಾನವ ಕುಟುಂಬವು ಕಷ್ಟಾನುಭವ ಮತ್ತು ಮರಣದಲ್ಲಿ ಬೆಲೆಯನ್ನು ತೆರುತ್ತದೆ. ಮತ್ತು ದ್ವೇಷ ಮತ್ತು ಹಿಂಸಾಚಾರವನ್ನು ಹುಟ್ಟಿಸುವ ಈ ಆಳವಾಗಿ ಬೇರೂರಿರುವ ಮನೋಭಾವಗಳಲ್ಲಿ ಬದಲಾವಣೆಗೆ ಸಮೀಪ ಭವಿಷ್ಯತ್ತು ಯಾವ ನಿರೀಕ್ಷೆಯನ್ನೂ ಎತ್ತಿ ಹಿಡಿಯುವುದಿಲ್ಲ. ಅದೇಕೆ? ಏಕೆಂದರೆ ಬಹುತೇಕ ಜನರು ಪಡೆಯುವ ಶಿಕ್ಷಣ—ಹೆತ್ತವರಿಂದಾಗಲಿ, ರಾಷ್ಟ್ರೀಯಾಭಿಮುಖವಾಗಿರುವ ಶಾಲಾ ಪದ್ಧತಿಗಳಿಂದಾಗಲಿ—ರಾಷ್ಟ್ರೀಯತೆ, ಕುಲ ಮತ್ತು ವಂಶೀಯ ಮೂಲ, ಯಾ ಭಾಷೆಯ ಮೇಲಾಧಾರಿತವಾದ ದ್ವೇಷ, ಅಸಹಿಷ್ಣುತೆ, ಮತ್ತು ಶ್ರೇಷ್ಠತೆಯ ಭಾವನೆಗಳನ್ನು ಅಚ್ಚೊತ್ತಿಸುತ್ತದೆ.
ವಾರ ಪತ್ರಿಕೆಯಾದ ಏಷಿಯವೀಕ್ ಯಾವುದನ್ನು “ಕೊನೆಯ ವಿಕಾರ ತತ್ವ”ವೆಂದು ಕರೆಯಿತೋ ಆ ರಾಷ್ಟ್ರೀಯತೆಯು ದ್ವೇಷ ಮತ್ತು ರಕ್ತಪಾತವನ್ನು ಪ್ರಚೋದಿಸುವ ಮಾರ್ಪಡದ ಸಂಗತಿಗಳಲ್ಲಿ ಒಂದಾಗಿದೆ. ಆ ಪತ್ರಿಕೆ ಹೇಳಿದ್ದು: “ಸರ್ಬ್ [ಸರ್ಬಿಯದವನು] ಆಗಿರುವೆನೆಂಬ ಅಭಿಮಾನ ಕ್ರೊಆ್ಯಟ್ [ಕ್ರೊಏಷಿಯದವನು] ಆಗಿರುವವನನ್ನು ದ್ವೇಷಿಸಬೇಕು ಎಂಬ ಅರ್ಥ ತರುವಲ್ಲಿ, ಆರ್ಮೇನಿಯದವನಿಗೆ ಸಿಗುವ ಸ್ವಾತಂತ್ರ್ಯ ಟರ್ಕಿಯವನ ಮೇಲೆ ಸೇಡು ತೀರಿಸಬೇಕೆಂದು ಅರ್ಥ ಕೊಡುವುದಾದರೆ, ಸೂಲು ಭಾಷೆಯವನಿಗೆ ದೊರೆಯುವ ಸ್ವಾತಂತ್ರ್ಯದ ಅರ್ಥ ಕೋಸ ಭಾಷೆಯವನನ್ನು ಅಧೀನತೆಗೆ ತರಬೇಕೆಂದು ಅರ್ಥ ಕೊಡುವುದಾದರೆ, ಮತ್ತು ರೊಮೇನಿಯದವನ ಪ್ರಜಾಪ್ರಭುತ್ವ, ಹಂಗೆರಿಯವನನ್ನು ಹೊರಗೆ ಹಾಕಬೇಕೆಂಬ ಅರ್ಥದಲ್ಲಿರುವುದಾದರೆ, ರಾಷ್ಟ್ರೀಯತೆ ಆಗಲೆ ತನ್ನ ಅತಿ ವಿಕಾರ ರೂಪವನ್ನು ತೋರಿಸಿದೆ.”
ಆಲರ್ಟ್ ಐನ್ಸ್ಟೈನ್ ಒಮ್ಮೆ ಹೇಳಿದ ಮಾತು ನಮ್ಮ ಜ್ಞಾಪಕಕ್ಕೆ ತರಲ್ಪಡುತ್ತದೆ: “ರಾಷ್ಟ್ರೀಯತೆ ಶೈಶವದ ಒಂದು ರೋಗ.” ಅದು ಮಾನವಕುಲದ ದಡಾರ ರೋಗ. ಒಮ್ಮೆ ಇಲ್ಲವೆ ಇನ್ನೊಮ್ಮೆ, ಸರಿಸುಮಾರಾಗಿ ಪ್ರತಿಯೊಬ್ಬನಿಗೂ ಇದು ತಟ್ಟುತ್ತದೆ, ಮತ್ತು ಇದು ಹರಡುತ್ತಾ ಮುಂದುವರಿಯುತ್ತದೆ. ಹಿಂದೆ 1946ರಲ್ಲಿ, ಬ್ರಿಟಿಷ್ ಇತಿಹಾಸಗಾರ ಆರ್ನಲ್ಡ್ ಟಯಿನ್ಬಿ ಬರೆದುದು: “ದೇಶಾಭಿಮಾನ . . . ಪಾಶ್ಚಾತ್ಯ ಲೋಕದ ಧರ್ಮವಾದ ಕ್ರೈಸ್ತತ್ವವನ್ನು ಅಧಿಕಾಂಶ ಸ್ಥಾನಚ್ಯುತಿ ಮಾಡಿದೆ.”
ಈಗಿನ ಪರಿಸರದಲ್ಲಿ ಮಾನವನ ವರ್ತನೆ ಮಾರ್ಪಡುವ ಯಾವ ನಿರೀಕ್ಷೆಯಾದರೂ ಇದೆಯೆ? ಇದನ್ನು ಶಿಕ್ಷಣದ ತೀವ್ರಗಾಮಿ ಬದಲಾವಣೆಯಿಂದ ಸಾಧಿಸಸಾಧ್ಯವಿದೆಯೆಂದು ಕೆಲವರು ಹೇಳುತ್ತಾರೆ. ಅರ್ಥಶಾಸ್ತ್ರಜ್ಞ ಜಾನ್ ಕೆ. ಗಾಲ್ಬ್ರೇತ್ ಬರೆದುದು: “ಜನರ ಲಕ್ಷಣಗಳು ಪ್ರಗತಿಯ ಪ್ರಮಾಣವನ್ನು ನಿರ್ಧರಿಸುತ್ತವೆ. ಆದುದರಿಂದ . . . ಪ್ರಗತಿ ಹೊಂದದ ಜನರಲ್ಲಿ ಪ್ರಗತಿಯಾಗ ಸಾಧ್ಯವಿಲ್ಲ; ಮತ್ತು ಜನರು ಸ್ವತಂತ್ರರಾಗಿ, ಶಿಕ್ಷಣವನ್ನು ಪಡೆಯುವಲ್ಲಿ ಪ್ರಗತಿ ನಿಶ್ಚಯ. . . . ಅನಕ್ಷರತೆಯ ಮೇಲೆ ವಿಜಯ ಪ್ರಥಮವಾಗಿ ಬರುತ್ತದೆ.” ಜಗತ್ತಿನ ಶಿಕ್ಷಣ ಪದ್ಧತಿಗಳು ದ್ವೇಷ ಮತ್ತು ಅನುಮಾನದ ಬದಲಿಗೆ ಎಂದಾದರೂ ಪ್ರೇಮ ಮತ್ತು ಸಹಿಷ್ಣುತೆಯನ್ನು ಕಲಿಸುವುವು ಎಂಬುದಕ್ಕೆ ಯಾವ ನಿರೀಕ್ಷೆ ಇದೆ? ಆಳವಾಗಿ ಬೇರೂರಿರುವ ಕುಲ ಮತ್ತು ವಂಶೀಯ ಹಗೆತನಗಳು, ನಾವೆಲ್ಲರೂ ಒಂದೇ ಮಾನವ ಕುಟುಂಬಕ್ಕೆ ಸೇರಿದವರೆಂಬ ಮಾನ್ಯತೆಯ ಮೂಲಕ, ಭರವಸೆ ಮತ್ತು ಗ್ರಹಿಕೆಯಿಂದ ಯಾವಾಗ ಸ್ಥಾನಭರ್ತಿಯಾಗುವುವು?
ಸಕಾರಾತ್ಮಕ ಮಾರ್ಪಾಟು ಬೇಕೆಂಬುದು ಸ್ಪಷ್ಟ. ಸಾಂಡ್ರ ಪೋಸ್ಟೆಲ್ ಎಂಬವರು ಸ್ಟೇಟ್ ಆಫ್ ದ ವರ್ಲ್ಡ್ 1992ನಲ್ಲಿ ಬರೆಯುವುದು: “ನಾವೊಂದು ಹೆಚ್ಚು ಉತ್ತಮವಾದ ಲೋಕದ ವಾಸ್ತವಿಕ ನಿರೀಕ್ಷೆಗಳನ್ನು ಹಿಡಿದುಕೊಂಡಿರಬೇಕಾದರೆ, ಈ ದಶಕದ ಬಾಕಿ ವರ್ಷಗಳು ಹೆಚ್ಚು ಆಳ ಮತ್ತು ವ್ಯಾಪಕವಾದ ರೂಪಾಂತರಗಳಿಗೆ ಎಡೆ ಕೊಡತಕ್ಕದ್ದು.” ಮತ್ತು ನಾವೆತ್ತ ಸಾಗುತ್ತಿದ್ದೇವೆ? ರಿಚರ್ಡ್ ಕಟ್ಲರ್ಬಕ್ ಹೇಳಿದ್ದು: “ಆದರೂ ಜಗತ್ತು ಅಸ್ಥಿರವೂ ಅಪಾಯಕರವೂ ಆಗಿ ಉಳಿದದೆ. ರಾಷ್ಟ್ರೀಯ ಮತ್ತು ಧಾರ್ಮಿಕ ಉತ್ಸಾಹಕ ಮುಂದುವರಿಯುವುದು. . . . ಸಾವಿರದ ಒಂಬೈನೂರ ತೊಂಭತ್ತರುಗಳು ಈ ಶತಮಾನದ ಒಂದೇ ಅತಿ ಅಪಾಯಕಾರಿಯಾದ ಇಲ್ಲವೆ ಅತಿ ಪ್ರಗತಿಪರವಾದ ದಶಕವಾಗಿರಬಲ್ಲದು.”—ಟೆರರಿಸ್ಮ್, ಡ್ರಗ್ಸ್ ಆ್ಯಂಡ್ ಕ್ರೈಮ್ ಇನ್ ಯೂರೋಪ್ ಆಫ್ಟರ್ 1992.
ನಮ್ಮ ಮಾರ್ಪಡುತ್ತಿರುವ ಪರಿಸರ
ಕಳೆದ ಕೆಲವು ದಶಕಗಳಿಂದ ಮಾನವಕುಲಕ್ಕೆ, ಮಾನವ ಚಟುವಟಿಕೆಗಳು ಪರಿಸರದ ಮೇಲೆ ಅಪಾಯಕಾರಕ ಪರಿಣಾಮವನ್ನು ಬೀರುತ್ತಿವೆ ಎಂಬ ಪ್ರಜ್ಞೆ ಬಂದಿದೆ. ಭಾರಿ ಕಾಡುಕಡಿತವು ಅಗಣಿತ ಮೃಗ ಮತ್ತು ಸಸ್ಯಜಾತಿಗಳನ್ನು ಸಾಯಿಸುತ್ತಿದೆ. ಮತ್ತು ಕಾಡುಗಳು ಈ ಗ್ರಹದ ಶ್ವಾಸಕೋಶ ವ್ಯವಸ್ಥೆಯ ಭಾಗವಾಗಿರುವುದರಿಂದ, ಕಾಡು ನಾಶವು ಕಾರ್ಬನ್ ಡೈಆಕ್ಸೈಡನ್ನು ಜೀವಪೋಷಕ ಆಮ್ಲಜನಕವಾಗಿ ಪರಿವರ್ತಿಸಲು ಭೂಮಿಗಿರುವ ಸಾಮರ್ಥ್ಯವನ್ನೂ ಕಡಮೆ ಮಾಡುತ್ತಿದೆ. ಇದರ ಇನ್ನೊಂದು ಪರಿಣಾಮವು, ಮೇಲ್ಮಣ್ಣನ್ನು ಬಲಹೀನಗೊಳಿಸಿ, ಕ್ರಮೇಣ ಮರುಭೂಮೀಕರಣಕ್ಕೆ ನಡೆಸುವುದೇ.
ಈ ವಿವಾದಾಂಶದ ಮೇಲೆ ಕೆಲವು ಎಚ್ಚರಿಕೆಯ ಧ್ವನಿಗಳು ಎತ್ತಲ್ಪಟ್ಟಿವೆ, ಮತ್ತು ಇವುಗಳಲ್ಲಿ ಒಂದು, ಅಮೆರಿಕದ ರಾಜಕೀಯಸ್ಥ ಆ್ಯಲ್ ಗೋರ್ ಅವರದ್ದು. ಅರ್ತ್ ಇನ್ ದ ಬ್ಯಾಲೆನ್ಸ್—ಈಕಾಲೊಜಿ ಆ್ಯಂಡ್ ದ ಹ್ಯೂಮನ್ ಸ್ಪಿರಿಟ್ ಎಂಬ ಅವರ ಪುಸ್ತಕದಲ್ಲಿ, ಅವರು ಬರೆಯುವುದು: “ಪ್ರಸ್ತುತದ ಕಾಡು ಕಡಿಯುವ ಪ್ರಮಾಣದಲ್ಲಿ, ಮುಂದಿನ ಶತಮಾನದ ಒಂದು ಸಮಯದಲ್ಲಿ ಕಾರ್ಯತಃ ಎಲ್ಲ ಉಷ್ಣವಲಯದ ಮಳೆಗಾಡು ಇಲ್ಲದೆ ಹೋಗುವುದು. ನಾವು ಈ ನಾಶಕ್ಕೆ ಅನುಮತಿಸುವಲ್ಲಿ, ಲೋಕ ಈ ಗ್ರಹದ ತಳಿಶಾಸ್ತ್ರೀಯ ಮಾಹಿತಿಯ ಅತ್ಯಂತ ಸಂಪದ್ಭರಿತ ಉಗ್ರಾಣವನ್ನು ಕಳೆದು ಕೊಳ್ಳುವುದು ಮಾತ್ರವಲ್ಲ, ಅದರೊಂದಿಗೆ ನಮ್ಮನ್ನು ಬಾಧಿಸುವ ಅನೇಕ ರೋಗಗಳಿಗಿರುವ ಚಿಕಿತ್ಸಾ ಸಾಧ್ಯತೆಗಳನ್ನೂ ಕಳೆದುಕೊಳ್ಳುವುದು. ಈಗ ಸಾಮಾನ್ಯ ಬಳಕೆಯಲ್ಲಿರುವ ನೂರಾರು ಪ್ರಮುಖ ಔಷಧಗಳು, ಉಷ್ಣವಲಯದ ಕಾಡುಗಳ ಸಸ್ಯ ಮತ್ತು ಪ್ರಾಣಿಗಳಿಂದ ಬಂದಿವೆಯೆಂಬುದು ನಿಶ್ಚಯ.”
ಮನುಷ್ಯನು ಪರಿಸರದ ಮೇಲೆ ಬೀರುವ ಪರಿಣಾಮವು ಪಾರಾಗುವಿಕೆಗಿರುವ ಸನ್ನಿಹಿತ ಅಪಾಯವನ್ನು ಪ್ರತಿನಿಧೀಕರಿಸುತ್ತದೆಂದು ಗೋರ್ ಅವರ ನಂಬಿಕೆ. ಅವರು ಹೇಳುವುದು: “ನಾವು ಪ್ರತಿಯೊಂದು ಸಂಭಾವ್ಯ ಪರಿಸರೀಯ ಸ್ಥಾನದೊಳಗೆ ವಿಸ್ತರಿಸಲು ಮುಂದುವರಿಯುವಾಗ, ನಮ್ಮ ಸ್ವಂತ ನಾಗರಿಕತೆಯ ಭಿದುರತೆ ಹೆಚ್ಚು ಸ್ಪಷ್ಟವಾಗಿಗುತ್ತದೆ. . . . ಒಂದೇ ಒಂದು ಸಂತತಿಯ ಅವಧಿಯಲ್ಲಿ ನಾವು, ಇತಿಹಾಸದ ಯಾವ ಜ್ವಾಲಾಮುಖಿಯೂ ಮಾಡಿರುವುದಕ್ಕಿಂತ ಹೆಚ್ಚು ನಾಟಕೀಯವಾಗಿ, ಭೌಗೋಲಿಕ ವಾತಾವರಣದ ರೂಪವನ್ನು ಮಾರ್ಪಡಿಸುವ ಅಪಾಯದಲ್ಲಿದ್ದೇವೆ, ಮತ್ತು ಪರಿಣಾಮಗಳು ಮುಂದಿನ ಶತಮಾನಗಳಲ್ಲಿ ಪಟ್ಟು ಹಿಡಿದು ಬರಬಹುದು.”
ನಮ್ಮ ವಾತಾವರಣ ಅಪಾಯಕ್ಕೊಳಗಾಗಿರುವುದು ಮಾತ್ರವಲ್ಲ, ಗೋರ್ ಮತ್ತು ಇತರರಿಗನುಸಾರ, ನಮ್ಮ ಜೀವಾಧಾರ ನೀರಿನ ಸರಬರಾಯಿಯೂ ಅಪಾಯಕ್ಕೊಳಗಾಗಿದೆ. ವಿಶೇಷವಾಗಿ ವಿಕಾಸಶೀಲ ದೇಶಗಳಲ್ಲಿ ಇದು ಸತ್ಯ. “ಅಲ್ಲಿ ಜಲ ಮಾಲಿನ್ಯದ ಪರಿಣಾಮವು ವಾಂತಿಭೇದಿ, ವಿಷಮ ಜ್ವರ, ಆಮಶಂಕೆ, ಮತ್ತು ಅತಿಭೇದಿಗಳ ಉನ್ನತ ಪ್ರಮಾಣದ ರೂಪದಲ್ಲಿ ಅತ್ಯುಗ್ರವಾಗಿ ಮತ್ತು ವಿಷಾದಕರವಾಗಿ ಅನುಭವಿಸಲ್ಪಡುತ್ತದೆ.” ಆ ಬಳಿಕ ಗೋರ್ ಅವರು, “170 ಕೋಟಿಗಿಂತಲೂ ಹೆಚ್ಚು ಜನರಿಗೆ ಕುಡಿಯುವ ಸುರಕ್ಷಿತ ನೀರಿನ ಸಾಕಷ್ಟು ಸರಬರಾಯಿ ಇಲ್ಲ. 300 ಕೋಟಿಗೂ ಹೆಚ್ಚು ಜನರಿಗೆ ನಿರ್ಮಲೀಕರಣ [ಶೌಚಾಲಯ ಮತ್ತು ಚರಂಡಿಯ ಸೌಕರ್ಯ]ಗಳಿಲ್ಲದ ಕಾರಣ ಅವರ ನೀರು ಮಲಿನಗೊಳ್ಳುವ ಅಪಾಯವಿದೆ. ದೃಷ್ಟಾಂತಕ್ಕೆ, ಭಾರತದಲ್ಲಿ, ಒಂದು ನೂರ ಹದಿನಾಲ್ಕು ಪಟ್ಟಣ, ನಗರಗಳು, ಮಾನವ ಮಲ ಮತ್ತು ಇತರ ಶುದ್ಧ ಮಾಡದಿರುವ ರೊಚ್ಚನ್ನು ನೇರವಾಗಿ ಗಂಗಾ ನದಿಗೆ ಎಸೆಯುತ್ತವೆ” ಎಂಬ ನಿಜತ್ವವನ್ನು ಎತ್ತಿ ಹೇಳಿದರು. ಮತ್ತು ಆ ನದಿ ಕೋಟಿಗಟ್ಟಲೆ ಜನರಿಗೆ ದ್ರವ ಜೀವವಾಹಿನಿಯಾಗಿದೆ!
ವರ್ಲ್ಡ್ ಬ್ಯಾಂಕಿನ ಉಪಾಧ್ಯಕ್ಷ, ಗೌತಮ್ ಎಸ್. ಕಾಜಿ, ಬ್ಯಾಂಗ್ಕಾಕಿನ ಒಂದು ಸಭೆಗೆ ಈ ಎಚ್ಚರಿಕೆ ಕೊಟ್ಟರು: “ಪೂರ್ವ ಏಷಿಯದ ನೀರಿನ ಸರಬರಾಯಿ ಮುಂದಿನ ಶತಮಾನದ ಬಿಕ್ಕಟ್ಟಿನ ವಿವಾದಾಂಶವಾಗಬಹುದು. . . . ಆರೋಗ್ಯ ಮತ್ತು ಉತ್ಪಾದನೆಗೆ ಸುರಕ್ಷಿತವಾದ ಕುಡಿಯುವ ನೀರಿನ ಸುಪರಿಚಿತ ಪ್ರಯೋಜನಗಳ ಎದುರಿನಲ್ಲಿಯೂ ಪೂರ್ವ ಏಷಿಯದ ಸರಕಾರಗಳು ಈಗ ಈ ಕುಡಿಯಬಹುದಾದ ನೀರನ್ನು ಒದಗಿಸಲು ತಪ್ಪುವ ಸಾರ್ವಜನಿಕ ವ್ಯವಸ್ಥೆಗಳನ್ನು ಎದುರಿಸುತ್ತವೆ. . . . ಇದು ಪರಿಸರೀಯವಾಗಿ ಸ್ವಸ್ಥ ವಿಕಸನದ ಮರೆತು ಹೋಗಿರುವ ವಿವಾದಾಂಶವಾಗಿದೆ.” ಜಗತ್ತಿನಲ್ಲೆಲ್ಲ, ಜೀವಕ್ಕೆ ಬೇಕಾಗುವ ಮೂಲ ಘಟಕಾಂಶಗಳಲ್ಲಿ ಒಂದಾದ ಶುದ್ಧ ನೀರನ್ನು ಅಸಡ್ಡೆ ಮಾಡಲಾಗುತ್ತಿದ್ದು, ದುಂದು ಮಾಡಲಾಗುತ್ತದೆ.
ಇವೆಲ್ಲ ನಮ್ಮ ಮಾರ್ಪಡುತ್ತಿರುವ ಲೋಕದ, ಅನೇಕ ಕ್ಷೇತ್ರಗಳಲ್ಲಿ ಅಪಾಯಕರವಾದ ರೊಚ್ಚುಗುಂಡಿಯಾಗಿ ರೂಪಾಂತರಗೊಳ್ಳುತ್ತಿರುವ ಮತ್ತು ಮಾನವನ ಭಾವೀ ಅಸ್ತಿತ್ವವನ್ನು ಅಪಾಯಕ್ಕೊಳಪಡಿಸುತ್ತಿರುವ ಜಗತ್ತಿನ ಆಕಾರಗಳಾಗಿವೆ. ದೊಡ್ಡ ಪ್ರಶ್ನೆಯು, ಸರಕಾರಗಳು ಮತ್ತು ದೊಡ್ಡ ವ್ಯಾಪಾರ ಸಂಸ್ಥೆಗಳಿಗೆ, ಭೂಮಿಯ ಸಂಪನ್ಮೂಲಗಳ ಭಾರಿ ಕಮ್ಮಿಯಾಗುವಿಕೆಯನ್ನು ತಡೆಯಲು ಬೇಕಾದ ಸಂಕಲ್ಪ ಮತ್ತು ಪ್ರಚೋದನೆ ಇರುವುದೋ ಎಂಬುದೇ.
ಧರ್ಮವು ಲೋಕವನ್ನು ಮಾರ್ಪಡಿಸುತ್ತಿದೆಯೆ?
ಧರ್ಮದ ಕ್ಷೇತ್ರದಲ್ಲಿ, ನಾವು ಪ್ರಾಯಶಃ ಮಾನವ ಸಂತತಿಯ ಅತ್ಯಂತ ಮಹಾ ವೈಫಲ್ಯವನ್ನು ನೋಡುತ್ತೇವೆ. ಒಂದು ಮರವು ಅದರ ಫಲದಿಂದ ಅಳೆಯಲ್ಪಡುವುದಾದರೆ, ಧರ್ಮವು ಹಗೆತನ, ಅಸಹನೆ, ಮತ್ತು ತನ್ನ ವರ್ಗದೊಳಗೆ ನಡೆಯುತ್ತಿರುವ ಯುದ್ಧಕ್ಕೆ ಉತ್ತರ ಕೊಡಲೇ ಬೇಕು. ಅಧಿಕಾಂಶ ಜನರಿಗೆ ಧರ್ಮವು ಚೆಲುವಿನಂತೆ—ಚರ್ಮದಷ್ಟೇ ಆಳವೆಂದು ತೋರುತ್ತದೆ. ಅದು ಜಾತೀಯತೆ, ರಾಷ್ಟ್ರೀಯತೆ, ಮತ್ತು ಆರ್ಥಿಕ ಅಭದ್ರತೆಯ ಒತ್ತಡದೆದುರಲ್ಲಿ ಫಕ್ಕನೆ ಕಳಚಿ ಹೋಗುವ ತೆಳುಹೊದಿಕೆಯಾಗಿದೆ.
ಕ್ರೈಸ್ತತ್ವವು ‘ನಿನ್ನ ನೆರೆಯವನನ್ನು ಮತ್ತು ನಿನ್ನ ವೈರಿಯನ್ನು ಪ್ರೀತಿಸುವ’ ಧರ್ಮವಾಗಿರುವಾಗ, ಹಿಂದಣ ಯುಗೊಸ್ಲಾವಿಯದ ಕ್ಯಾಥೊಲಿಕರಿಗೂ ಆರ್ತೊಡಾಕ್ಸ್ ಕ್ರೈಸ್ತರಿಗೂ ಏನಾಗಿದೆ? ಅವರು ಮಾಡುತ್ತಿರುವ ಕೊಲೆ ಮತ್ತು ಹಗೆತನದಿಂದ ಅವರ ಪಾದ್ರಿಗಳು ಅವರನ್ನು ವಿಮುಕ್ತರಾಗಿ ಮಾಡುವರೊ? ಶತಮಾನಗಳ “ಕ್ರೈಸ್ತ” ಬೋಧನೆ ಉತ್ತರ ಐರ್ಲೆಂಡಿನಲ್ಲಿ ಕೇವಲ ಹಗೆತನ ಮತ್ತು ಕೊಲೆಗಳನ್ನು ಉತ್ಪಾದಿಸಿತೊ? ಮತ್ತು ಕ್ರೈಸ್ತೇತರ ಧರ್ಮಗಳ ಕುರಿತೇನು? ಅವರು ಇದಕ್ಕಿಂತ ಉತ್ತಮವಾದ ಫಲವನ್ನು ಫಲಿಸಿದ್ದಾರೆಯೆ? ಹಿಂದೂ, ಬೌದ್ಧ, ಸಿಕ್, ಇಸ್ಲಾಮ್ ಮತ್ತು ಷಿಂಟೊ ಧರ್ಮಗಳು ಪರಸ್ಪರ ಸಹನೆಯ ಶಾಂತಿಭರಿತ ದಾಖಲೆಯನ್ನು ತೋರಿಸಬಲವ್ಲೆ?
ಮಾನವಕುಲವನ್ನು ಸಭ್ಯರನ್ನಾಗಿ ಮಾಡುವ ಸಕಾರಾತ್ಮಕ ಪ್ರಭಾವವನ್ನು ಬೀರುವ ಬದಲಿಗೆ, ಧರ್ಮವು ವಿವೇಕಶೂನ್ಯ ದೇಶಾಭಿಮಾನದ ಉರಿಗೆ ಗಾಳಿ ಹಾಕುವುದರಲ್ಲಿ ಮತ್ತು ಎರಡು ಲೋಕ ಯುದ್ಧಗಳಲ್ಲಿ ಮತ್ತು ಇತರ ಅನೇಕ ಹೋರಾಟಗಳಲ್ಲಿ ಸೈನ್ಯಗಳನ್ನು ಹರಸುವುದರಲ್ಲಿ ತನ್ನ ಸ್ವಂತ ಮತಾಂಧತೆಯ ಪಾತ್ರವನ್ನು ವಹಿಸಿದೆ. ಅದು ಬದಲಾವಣೆಗಾಗಿರುವ ಪ್ರಗತಿಪರ ಶಕ್ತಿಯಾಗಿರಲಿಲ್ಲ.
ಆದುದರಿಂದ, ನಾವು ಸಮೀಪ ಭವಿಷ್ಯದಲ್ಲಿ ಧರ್ಮದಿಂದ ಏನು ನಿರೀಕ್ಷಿಸಬಲ್ಲೆವು? ವಾಸ್ತವವಾಗಿ, ನಮ್ಮ ಪ್ರಸ್ತುತದ ಲೋಕ ವ್ಯವಸ್ಥೆಗೆ ಭವಿಷ್ಯತ್ತಿನಲ್ಲಿ ಏನಿದೆ—ಯಾವ ಬದಲಾವಣೆಗಳಿವೆ—ಎಂದು ನಾವು ಹಾರೈಸಬಲ್ಲೆವು? ಒಂದು ವಿಶಿಷ್ಟ ದೃಷ್ಟಿಕೋನದಿಂದ, ನಮ್ಮ ಮೂರನೆಯ ಲೇಖನ ಈ ಪ್ರಶ್ನೆಗಳನ್ನು ಚರ್ಚಿಸುವುದು. (g93 1/8)
[ಪುಟ 7 ರಲ್ಲಿರುವ ಚಿತ್ರ]
ಹಿಂಸಾತ್ಮಕ ಪಾತಕದಲ್ಲಿ ಉನ್ನತಿಯು ಮಾರ್ಪಾಟಿಗೆ ಇನ್ನೊಂದು ಸೂಚನೆ
[ಪುಟ 8 ರಲ್ಲಿರುವ ಚಿತ್ರಗಳು]
ರಾಷ್ಟ್ರೀಯತೆ ಮತ್ತು ಧಾರ್ಮಿಕ ಹಗೆತನ ರಕ್ತಪಾತವನ್ನು ಉತ್ಪಾದಿಸುತ್ತಾ ಹೋಗುತ್ತದೆ
[ಕೃಪೆ]
Jana Schneider/Sipa
Malcom Linton/Sipa
[ಪುಟ 9 ರಲ್ಲಿರುವ ಚಿತ್ರಗಳು]
ಮಾನವನ ಪರಿಸರದ ಅಪಪ್ರಯೋಗವು ಜೈವಿಕಮಂಡಲದ ಸೂಕ್ಷ್ಮ ಸಮತೆಯನ್ನು ಮಾರ್ಪಡಿಸುತ್ತಿದೆ
[ಕೃಪೆ]
Laif/Sipa
Sipa
[ಪುಟ 10 ರಲ್ಲಿರುವ ಚಿತ್ರ]
ಹಿಟ್ಲರನನ್ನು ಪೋಪರ ರಾಯಭಾರಿ 1933ರಲ್ಲಿ ವಂದಿಸುವುದು. ಐತಿಹಾಸಿಕವಾಗಿ, ಧರ್ಮವು ರಾಜಕೀಯ ಮತ್ತು ರಾಷ್ಟ್ರೀಯತೆಯಲ್ಲಿ ಸಿಕ್ಕಿಕೊಂಡಿತ್ತು
[ಕೃಪೆ]
Bundesarchiv Koblenz