ನಮ್ಮ ಜಗತ್ತು ಹೇಗೆ ಮಾರ್ಪಟ್ಟಿದೆ?
ನಿಮ್ಮ ಜಗತ್ತು ಮಾರ್ಪಟ್ಟಿದೆಯೆ? ಪುರಾತನ ಕಾಲದ ಗ್ರೀಕ್ ತತ್ವಜ್ಞಾನಿ ಹೆರಕ್ಲೈಟಸ್ ಹೇಳಿದ್ದು: “ಮಾರ್ಪಾಟು ಒಂದಲ್ಲದೆ ಇನ್ನಾವುದೂ ಬಾಳಿಕೆ ಬರುವುದಿಲ್ಲ.” ನಮ್ಮೆಲ್ಲರ ಜೀವನದಲ್ಲಿ ಮಾರ್ಪಾಟು ಎಡೆಬಿಡದೆ ಬರುತ್ತದೆ.
ಕಳೆದ 10, 20, 30, ಯಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಕಡೆಗೆ ಹಿಂದಿರುಗಿ ನೋಡುವಾಗ, ನೀವು ಯಾವ ಬದಲಾವಣೆಗಳನ್ನು ನೋಡಿದ್ದೀರಿ? ಆಧುನೀಕರಣದ ರೂಪದಲ್ಲಿ ಮತ್ತು ಸಾಂಪ್ರದಾಯಿಕ ಮೌಲ್ಯಗಳ ತೊರೆಯುವಿಕೆಯ ರೂಪದಲ್ಲಿ ನೀವು ಕೆಲವು ಬದಲಾವಣೆಗಳನ್ನು ನೋಡಿರಬಹುದು. ಇವುಗಳಲ್ಲಿ ಕೆಲವು ಸಕಾರಾತ್ಮಕ, ಇನ್ನು ಕೆಲವು ನಕಾರಾತ್ಮಕವೆಂದು ನೀವು ನೋಡುತ್ತೀರೆಂಬುದು ನಿಸ್ಸಂದೇಹ.
ನೀವು 70ಕ್ಕೂ ಹೆಚ್ಚು ವಯಸ್ಸಿನವರಾಗಿರುವಲ್ಲಿ, ಯಾವ ಮಾರ್ಪಾಟನ್ನು ನೋಡಿರುವಿರಿ? ಟೀವೀ ಇಲ್ಲದಿದ್ದ ಸಮಯ, ವಿಮಾನಗಳು ಒಂದು ತಾಸಿಗೆ ನಿಧಾನವಾಗಿ 150 ಕಿಲೊಮೀಟರ್ಗಳಷ್ಟು ಹೋಗುತ್ತಿದ್ದ ಸಮಯ, ಅಂತಾರಾಷ್ಟ್ರೀಯ ಪ್ರಯಾಣ ದೊಡ್ಡ ಹಡಗುಗಳ ಮೂಲಕ ನಡೆಯುತ್ತಿದ್ದ ಸಮಯ, ಮಾದಕೌಷಧದ ಅಪಪ್ರಯೋಗ ಆಫೀಮುಕೋರರ ಅಡಗುದಾಣಕ್ಕೆ ಸೀಮಿತವಾಗಿದ್ದ ಸಮಯ, ಮೋಟರ್ ವಾಹನಗಳು ಅಲ್ಲಲ್ಲಿ ಕೆಲವೇ ಆಗಿದ್ದ ಸಮಯ ನಿಮಗೆ ನೆನಪಿದೆ. ಹೌದು, ನಿಮ್ಮ ಜಗತ್ತು ನಿಶ್ಚಯವಾಗಿಯೂ ಮಾರ್ಪಟ್ಟಿದೆ.
ಮಾರ್ಪಟ್ಟಿರುವ ಬಳಕೆದಾರರ ಸಮಾಜ
ಆದರೆ ಲೋಕವು ಕಮ್ಮಿ ಪ್ರಾಯದ ವ್ಯಕ್ತಿಗಳಿಗೂ ಮಾರ್ಪಟ್ಟಿದೆ. ಕೇವಲ 45 ವರ್ಷಗಳ ಹಿಂದೆ, ಜಾಗತಿಕ ಮಾರುಕಟ್ಟೆಯಲ್ಲಿ ಪಾಶ್ಚಾತ್ಯ ಉತ್ಪಾದನೆ ಮತ್ತು ತಿಳಿವು ಪ್ರಮುಖವಾಗಿತ್ತು. ಈಗ, ಶಾಂತಸಾಗರದ ಅಂಚಿನ ಪ್ರಾಚ್ಯ ದೇಶಗಳು ಮೋಟರ್ ವಾಹನ, ಕಂಪ್ಯೂಟರ್, ಕ್ಯಾಮರ, ಟೀವೀ ಮತ್ತು ಇತರ ಇಲೆಕ್ಟ್ರಾನಿಕ್ ಸಲಕರಣೆಗಳ ಉತ್ಪಾದನೆ ಮುಖಂಡರಾಗಿದ್ದಾರೆ.
ಎಚ್ಚರ!ಕ್ಕೆ ಒಬ್ಬ ಚೈನೀಸ್ ಪ್ರವಾಸಿ ಹೇಳಿದ ಮಾತುಗಳಿಂದ ಇದು ಚಿತ್ರಿತವಾಗುತ್ತದೆ: “ಕೇವಲ 30 ಯಾ 40 ವರ್ಷಗಳಿಗೆ ಮುನ್ನ, ಒಬ್ಬ ಸಾಮಾನ್ಯ ಚೈನೀಸ್ ವ್ಯಕ್ತಿಯ ಕನಸು ಒಂದು ಸೈಕಲ್ ಮತ್ತು ಒಂದು ಹೊಲಿಯುವ ಯಂತ್ರವನ್ನು ಪಡೆಯುವುದಾಗಿತ್ತು. ಅದು ಆಗಿನ ಸ್ಥಾನಮಾನದ ಸಂಕೇತವಾಗಿತ್ತು. ಆದರೆ ಈಗಿನ ಕನಸು, ಒಂದು ಕಲರ್ ಟೀವೀ, ಒಂದು ವಿಸಿಆರ್, ಒಂದು ಫ್ರಿಜ್, ಮತ್ತು ಒಂದು ಮೋಟರ್ ಸೈಕಲಿನ ಧಣಿಯಾಗುವುದೇ.” ಬಳಕೆದಾರರ ಸಮಾಜ, ಅದು ಚೈನದ್ದಾಗಿರಲಿ, ಇತರ ಕಡೆಗಳದ್ದಾಗಿರಲಿ, ತನ್ನ ಅಭಿರುಚಿ ಮತ್ತು ಕೇಳಿಕೆಗಳನ್ನು ಬದಲಾಯಿಸಿದೆ.
ದೃಷ್ಟಿಕೋನದಲ್ಲಿ ಈ ತೆರದ ಬದಲಾವಣೆ, ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿಯಾದಾಗ ಅನೇಕ ಜನಾಂಗಗಳಲ್ಲಿ ಸಂಭವಿಸಿದೆ. ಕ್ಯಾಟಲೋನ್ಯದ 40ರುಗಳ ಆರಂಭದ ವಯಸ್ಸಿನ ಪೇಡ್ರೊ ಹೇಳಿದ್ದು: “ಸ್ಪೆಯ್ನ್ನಲ್ಲಿ 30 ವರ್ಷಗಳ ಹಿಂದೆ, ಕಡಮೆ ಪಕ್ಷ ಒಂದು ಚಿಕ್ಕ 600 ಸಿಸಿ ಸೇಎಟ್ [ಫೀಎಟ್] ಕಾರಿನ ಧಣಿಯಾಗುವುದೇ ಹೆಬ್ಬಯಕೆಯಾಗಿತ್ತು. ಈಗ ಸ್ಪೆಯ್ನ್ನ ಜನರು ಜರ್ಮನ್ ಬಿಎಮ್ಡಬ್ಲ್ಯೂ ಕಾರಿಗೆ ಹಾತೊರೆಯುತ್ತಾರೆ.” ಅಮೆರಿಕದ ನಿವಾಸಿ ಜಗದೀಶ್ ಪಟೇಲ್, ತನ್ನ ದೇಶವಾದ ಭಾರತದಲ್ಲಿ ತಾನು ಮಾಡಿದ ಇತ್ತೀಚಿನ ಪ್ರವಾಸದ ಕುರಿತು ಹೇಳಿದ್ದು: “ನನಗೆ ಭಾರತದ ರಸ್ತೆಗಳಲ್ಲಿರುವ ಮೋಟರ್ ವಾಹನಗಳ ಸಂಖ್ಯೆ ನೋಡಿ ಆಶ್ಚರ್ಯವಾಯಿತು. ಹೆದ್ದಾರಿಗಳಲ್ಲಿ ಇನ್ನೂ ಅದೇ ಹಿಂದುಸ್ತಾನ್ ಗಾಡಿಗಳನ್ನು ನೋಡಬಹುದು, ಆದರೆ ಈಗ ಅವುಗಳೊಂದಿಗೆ, ವಿದೇಶಿ ಕಂಪೆನಿಗಳ ಲೈಸನ್ಸಿನಿಂದ ತಯಾರಿಸಿದ ಕಾರ್, ಸ್ಕೂಟರ್, ಮತ್ತು ಮೋಟರ್ಸೈಕಲ್ಗಳ ಆಧುನಿಕ ತಯಾರಿಕೆಗಳು ಸೇರಿವೆ.”
ವಿಜ್ಞಾನದಲ್ಲಿ ಬದಲಾವಣೆಗಳು
ಕೇವಲ 25 ವರ್ಷಗಳಿಗೆ ಹಿಂದೆ, ಅನೇಕರು ಚಂದ್ರನನ್ನು ಒಂದು ಆಸಕ್ತಿ ಕೆರಳಿಸುವ ಮರ್ಮವಾಗಿ ವೀಕ್ಷಿಸುತ್ತಿದ್ದರು. ಅಂದಿನಿಂದ ಮನುಷ್ಯನು ತನ್ನ ಹೆಜ್ಜೆಗುರುತುಗಳನ್ನೂ ವೈಜ್ಞಾನಿಕ ಸಲಕರಣೆಗಳನ್ನೂ ಆ ಪರಕೀಯ ಚಂದ್ರನಲ್ಲಿ ಬಿಟ್ಟು ಬಂದಿದ್ದು, ವಿಶ್ಲೇಷಣೆಗಾಗಿ ಅಲ್ಲಿಯ ಕಲ್ಲಿನ ನಮೂನೆಗಳನ್ನು ತಂದಿದ್ದಾನೆ. ಅಮೆರಿಕದ ಅಂತರಿಕ್ಷ ಯಾನ ಈಗ ಒಂದು ನಿಯತ ಕ್ರಮದ ಸಂಭವವಾಗಿದೆ, ಮತ್ತು ಅಮೆರಿಕದ ವಿಜ್ಞಾನಿಗಳು ಈಗ ಒಂದು ಕಾಯಂ ಅಂತರಿಕ್ಷ ನಿಲ್ದಾಣದ ಕುರಿತು ಮತ್ತು ಮಾರ್ಸ್ ಗ್ರಹಕ್ಕೆ ಹೋಗುವ ಕುರಿತು ಮಾತನಾಡುತ್ತಾರೆ.
ಏಯ್ಡ್ಸ್ನ ಕುರಿತು 15 ವರ್ಷಗಳ ಹಿಂದೆ ಯಾರು ಕೇಳಿದ್ದರು? ಈಗಲಾದರೋ, ಅದೊಂದು ಲೋಕವ್ಯಾಪಕ ಪೀಡೆಯಾಗಿದ್ದು, ಕೋಟಿಗಟ್ಟಲೆ ಜನರು ಅದರ ಭಯದಿಂದಿದ್ದಾರೆ.
ರಾಜಕೀಯ ಮಾರ್ಪಾಟುಗಳು
ಕೇವಲ ನಾಲ್ಕು ವರ್ಷಗಳ ಹಿಂದೆ, ಅಭೇದ್ಯವೆಂದೆಣಿಸಲಾಗಿದ್ದ ಒಂದು ಗೋಡೆ ಬರ್ಲಿನ್ ನಗರವನ್ನು ವಿಂಗಡಿಸಿತ್ತು; ಸಮತಾವಾದದ ಸೋವಿಯೆಟ್ ಒಕ್ಕೂಟ ಮತ್ತು ಶೀತಲ ಯುದ್ಧಗಳಿದ್ದವು. ಆದರೆ ಈಗ ಬರ್ಲಿನನ್ನು ಐಕ್ಯ ಜರ್ಮನಿಯ ರಾಜಧಾನಿಯಾಗಿ ಆಯ್ದುಕೊಳ್ಳಲಾಗಿದೆ, ಮತ್ತು ಮಾಜಿ ಸೋವಿಯೆಟ್ ಒಕ್ಕೂಟದ 15ರಲ್ಲಿ 11 ಗಣರಾಜ್ಯಗಳು ಈಗ ಸ್ವತಂತ್ರ ರಾಜ್ಯಗಳ ಒಕ್ಕೂಟವನ್ನು ರಚಿಸಿವೆ.
ಕೆಲವೇ ವರ್ಷಗಳ ಹಿಂದೆ, ಯೂಎನ್ ಸಂಘವು, ಪ್ರಧಾನವಾಗಿ ಬಂಡವಾಳಶಾಹಿ ಮತ್ತು ಸಮತಾವಾದದ ಶಕ್ತಿಗಳ ಮಧ್ಯೆ ನಡೆಯುತ್ತಿದ್ದ ಹೋರಾಟಕ್ಕೆ ಕೇವಲ ಒಂದು ರಂಗವಾಗಿತ್ತು; ತಟಸ್ಥವೆಂದು ಕರೆಯಲ್ಪಡುತ್ತಿದ್ದ ರಾಷ್ಟ್ರಗಳು ಬದ್ಧತೆಯಿಂದ ತಪ್ಪಿಸಿಕೊಳ್ಳುತ್ತಾ ಕೇವಲ ವೀಕ್ಷಕರಾಗಿ ನಟಿಸುತ್ತಿದ್ದುವು. ಈಗ ಪೂರ್ವ ಮತ್ತು ಪಶ್ಚಿಮದ ರಾಷ್ಟ್ರಗಳು ಶಾಂತಿ ಮತ್ತು ಭದ್ರತೆಯ ಕುರಿತು ಮಾತಾಡುತ್ತವೆ ಮತ್ತು ಯೂಎನ್ ಸಂಘ ಹೆಚ್ಚು ಶಕ್ತಿಯುತವೂ ಕಾರ್ಯಸಾಧಕವೂ ಆಗಿದೆ. ಅದು ಲೋಕಾದ್ಯಂತ ಬಿಕ್ಕಟ್ಟು ಇರುವ ಸ್ಥಳಗಳಿಗೆ ಮಿಲಿಟರಿ ದಳಗಳನ್ನು ಕಳುಹಿಸಬಲ್ಲದು. ಮೂರು ವರ್ಷಗಳ ಹಿಂದೆ, ಯುಗೊಸ್ಲಾವಿಯ ಮತ್ತು ಚೆಕೊಸ್ಲೊವಾಕಿಯ ಎಂಬ ಹೆಸರಿದ್ದ ದೇಶಗಳಿದ್ದವು. ಈಗ ಇವೆರಡೂ ಹೆಚ್ಚು ಚಿಕ್ಕದಾದ ಸ್ವತಂತ್ರ ರಾಜ್ಯಗಳಾಗಿ ಒಡೆದಿವೆ.
ಈ ಎಲ್ಲ ಮಾರ್ಪಾಟುಗಳಿದ್ದರೂ, ಜಗತ್ತು ನಿಜ ಶಾಂತಿ, ನ್ಯಾಯ, ಮತ್ತು ಆಹಾರ ಮತ್ತು ಸಂಪನ್ಮೂಲಗಳ ನ್ಯಾಯವಾದ ವಿತರಣೆಗಳ ಕಡೆಗೆ ಹೆಚ್ಚು ಅಭಿವೃದ್ಧಿಹೊಂದಿದೆಯೆ? ಲೋಕವು ಹೆಚ್ಚು ಸಭ್ಯತೆ ಹೊಂದಿದೆಯೆ? ಪಾತಕಿಗಳ ಭಯವಿಲ್ಲದೆ ನೀವು ದಾರಿ ನಡೆಯಬಲ್ಲಿರೆ? ಕುಲ, ಧರ್ಮ, ರಾಜಕೀಯ, ಜೀವನ ಶೈಲಿ, ಯಾ ಭಾಷೆಯ ಆಧಾರದ ಮೇಲೆ ನಾವು ಇತರರನ್ನು ಇನ್ನು ಮುಂದೆ ದ್ವೇಷಿಸದಷ್ಟು ಸುಶಿಕ್ಷಿಸಲ್ಪಟ್ಟಿದ್ದೇವೊ? ಈ ಮಾರ್ಪಾಟು ಸರ್ವಸಾಮಾನ್ಯವಾಗಿ ಮಾನವ ಕುಟುಂಬದ ಮತ್ತು ನಮ್ಮ ಮನೆಯಾದ ಭೂಮಿಯ ನಿಜ ಪ್ರಗತಿಗೆ ನಡೆಸಿದೆಯೆ? ನಾವೆತ್ತ ಸಾಗುತ್ತಿದ್ದೇವೆ? ಮುಂದಿನ ಲೇಖನಗಳು ಈ ಮತ್ತು ಇತರ ಪ್ರಶ್ನೆಗಳನ್ನು ಪರೀಕ್ಷಿಸಲಿರುವುವು. (g93 1/8)