ಬಾರ್ಸಲೋನ ಒಲಿಂಪಿಕ್ಸ್ ಕೀರ್ತಿಗೆ ಎಷ್ಟು ಬೆಲೆ?
ಎಚ್ಚರ!ದ ಸ್ಪೆಯ್ನ್ನ ಸುದ್ದಿಗಾರರಿಂದ
ಜುಲೈ, 25, 1992ರಲ್ಲಿ, ಒಬ್ಬಂಟಿಗ ಬಿಲ್ಲುಗಾರನು ರಂಗದ ಬೆಳಕಿನ ಪ್ರಕಾಶದಿಂದ ಆವರಿಸಲ್ಪಟ್ಟವನಾಗಿ, ತನ್ನ ಬಿಲ್ಲನ್ನು ಎಳೆದನು. ಅವನ ಬೆಂಕಿ ಮೊನೆಯ ಬಾಣವು ನೇರವಾಗಿಯೂ ನಿಖರವಾಗಿಯೂ ರಾತ್ರಿಯ ಬಾನಕ್ಕೇರಿತು. ಅದು ಕೆಳಗೆ ಬರುತ್ತಿರಲಾಗಿ, ವಿಸ್ತಾರವಾದ ಕ್ರೀಡಾಂಗಣದ ಮೇಲೆ ಎತ್ತರದಲ್ಲಿ ಕುಳಿತಿದ್ದ ಒಂದು ಬೃಹದಾಕಾರದ ಪಂಜಿಗೆ ತಾಗಿಕೊಂಡು ಹೋಯಿತು. ಆಗ ಒಲಿಂಪಿಕ್ ಜ್ಯೋತಿ ಹೊತ್ತಿಕೊಂಡಿತು. ಬಾರ್ಸಲೋನ ಒಲಿಂಪಿಕ್ಸ್ ಆರಂಭವಾಗಿತ್ತು.
ಹನ್ನೊಂದು ಸಾವಿರ ಕ್ರೀಡಾಳುಗಳು 172 ದೇಶಗಳಿಂದ, 1691 ಒಲಿಂಪಿಕ್ ಪ್ರಶಸ್ತಿ ಪದಕಗಳಿಗಾಗಿ ಸ್ಪರ್ಧಿಸಲು ಅಲ್ಲಿಗೆ ಬಂದಿದ್ದರು. ಒಲಿಂಪಿಕ್ ಧ್ಯೇಯ ಮಂತ್ರಕ್ಕನುಸಾರ, ಭಾಗಿಗಳು ಹಿಂದೆಂದಿಗಿಂತಲೂ “ಹೆಚ್ಚು ವೇಗವಾಗಿ, ಹೆಚ್ಚು ಎತ್ತರವಾಗಿ, ಹೆಚ್ಚು ಬಲವಾಗಿ,” ಸ್ಪರ್ಧಿಸಲು ಪ್ರಯತ್ನಿಸಿ, ಕೆಲವರು ಸಾಫಲ್ಯ ಹೊಂದಿದರು. ಅಂದಾಜಿನ 350,00,00,000 ಟೆಲಿವಿಷನ್ ಪ್ರೇಕ್ಷಕರು ಅವರ ವಿಜಯ ಮತ್ತು ನಿರಾಶೆಗಳಲ್ಲಿ ಪಾಲಿಗರಾದರು.
ಕ್ರೀಡಾಳುಗಳಿಗೆ ದೊರೆಯುವ ಸಾರ್ವಜನಿಕ ಗಮನಾನುಭವ ಕ್ಷಣಿಕವಾದರೂ, ಒಲಿಂಪಿಕ್ ವಿಜಯ ಕೀರ್ತಿ ಮತ್ತು ಐಶ್ವರ್ಯದ ವಾಗ್ದಾನವನ್ನು ಹಿಡಿದಿರುತ್ತದೆ. ಬಾರ್ಸಲೋನ ಒಲಿಂಪಿಕ್ಸ್ ಇದಕ್ಕಿಂತ ಭಿನ್ನವಾಗಿರಲಿಲ್ಲ. ಕೆಲವು ಪ್ರಸಿದ್ಧ ಸ್ಪರ್ಧಿಗಳು ಕ್ರೀಡಾಬಟ್ಟೆ, ಓಟದ ಪಾದರಕ್ಷೆಗಳು, ತಂಪು ಕನ್ನಡಕಗಳು, ಮತ್ತು ಇಲೆಕ್ಟ್ರಾನಿಕ್ ಉಪಕರಣಗಳನ್ನು ಸಹ ಅನುಮೋದಿಸಿ ಲಕ್ಷಗಟ್ಟಲೆ ಡಾಲರುಗಳನ್ನು ಆಗಲೆ ಸಂಪಾದಿಸುತ್ತಿದ್ದರು.
ಸಮರ್ಪಣೆ—ಒಲಿಂಪಿಕ್ ಕೀರ್ತಿಗೆ ಕೀಲಿ ಕೈ
ಅನೇಕ ಕ್ರೀಡಾಳುಗಳು—ವಿಶೇಷವಾಗಿ ಜಿಮ್ನ್ಯಾಸ್ಟ್ ಅಂಗಸಾಧಕರು ಮತ್ತು ಡೈವರ್ ಮುಳುಕರು—ತಮ್ಮ ಆಟಗಳನ್ನು ಸುಲಭವಾಗಿ ತೋರಿಬರುವಂತೆ ಮಾಡಿದರೂ, ಇಂಥ ಸೂಕ್ಷ್ಮ ಕೌಶಲಗಳ ಹಿಂದೆ ಅನೇಕ ವರ್ಷಗಳ ಪ್ರಯಾಸಕರವಾದ ತರಬೇತು ಅಡಗಿತ್ತು. ಇವರಲ್ಲಿ ಕೆಲವರು ಐದು ವರ್ಷ ಪ್ರಾಯದಿಂದ ತರಬೇತು ಹೊಂದುತ್ತಿದ್ದರು. ಮತ್ತು ಕ್ರೀಡಾಳು ಜಯಹೊಂದಬೆಕಾದರೆ ಕ್ರೀಡೆಗಳು ಇತರ ಸಕಲ ವಿಷಯಗಳಿಗಿಂತಲೂ ಪೂರ್ತಿ ಅಗ್ರಸ್ಥಾನವನ್ನು ಪಡೆದಿರಬೇಕು.
ಬ್ಯಾಕ್ಸ್ಟ್ರೋಕ್ ಈಜನ್ನು ಜಯಿಸಿದ ಸ್ಪ್ಯಾನಿಷ್ ಈಜುಗಾರ ಮಾರ್ಟಿನ್ ಲೋಪೆಸ್ ಸೂಬೆರ—ಪ್ರಾಯಶಃ ತುಸು ಅತಿಶಯೋಕ್ತಿಯಾಗಿ ಹೇಳಿದ್ದು: “ನಾನು ನನ್ನ ಅಸ್ತಿತ್ವದಲ್ಲಿ ಮೂರನೆಯ ಒಂದಂಶವನ್ನು ನೀರಿನಲ್ಲಿ ಕಳೆದಿದ್ದೇನೆ.” ಅವನ ತರಬೇತು ಕಾಲಪಟ್ಟಿ ಬೆಳಗ್ಗೆ ಐದರಿಂದ ಆರಂಭವಾಗುತ್ತದೆ, ಮತ್ತು ತಾನು ಕೇವಲ ಒಂದು ವರ್ಷಕ್ಕೆ ತುಸು ಹೆಚ್ಚಿನ ಅವಧಿಯಲ್ಲಿ 8,000 ಕಿಲೊಮೀಟರುಗಳಷ್ಟು ದೂರ ಈಜಿದ್ದೇನೆಂದು ಅವನು ಅಂದಾಜಿಸುತ್ತಾನೆ.
ತರಬೇತೆಂದರೆ ಕೇವಲ ನಿರಾಕರಣೆ ಮಾತ್ರವಲ್ಲ, ಕಷ್ಟಾನುಭವವೂ ಆಗಿದೆ. ಸೋಲ್ ಮತ್ತು ಬಾರ್ಸಲೋನದಲ್ಲಿ ಹೆಪ್ಟಾತ್ಲನ್ ಸುವರ್ಣ ಪದಕ ವಿಜೇತೆ ಜ್ಯಾಕಿ ಜಾಯ್ನರ್-ಕರ್ಸಿ ವಿವರಿಸುವುದು: “ಸ್ಪರ್ಧೆಯು ಮೋಹಕ. ತರಬೇತು ಮೋಹಕವಲ್ಲ . . . . ಯಾವ ಕ್ರೀಡಾಳುವನ್ನು ಬೇಕಾದರೂ ಕೇಳಿ: ನಮಗೆಲ್ಲ ಸದಾ ನೋಯುತ್ತಿರುತ್ತದೆ. ನನ್ನ ಶರೀರದೊಡನೆ ಏಳು ರೀತಿಯ ಕೆಲಸಗಳನ್ನು ಮಾಡಲು ನಾನು ಕೇಳುತ್ತೇನೆ. ಹಾಗಿರುವಾಗ ನೋಯಬಾರದೆಂದು ನಿರೀಕ್ಷಿಸುವುದು ತೀರಾ ಜಾಸ್ತಿ ಕೇಳಿದಂತೆಯೇ ಸರಿ.” ಜಿಮ್ನ್ಯಾಸ್ಟ್ ಸಾಧಕರು ಸಹನೆಯಲ್ಲಿ ಕುಶಲರಾಗಿರಬೇಕು. ಅವರು ತಮ್ಮ ದಿನಕ್ಕೆರಡರಂತೆ ಇರುವ ತರಬೇತಿನ ಕಾರ್ಯಕ್ರಮವನ್ನು ಅವರ ಮಣಿಕಟ್ಟು ಯಾ ಕಾಲಿನ ಹರಡು ನೋಯುತ್ತಿರಲಿ, ಎಳೆದ ಸ್ನಾಯು ಮತ್ತು ಅಸ್ತಿರಜ್ಜುಗಳಿರಲಿ, ಸೂಕ್ಷ್ಮ ಮೂಳೆ ಮುರಿತಗಳಿರಲಿ, ಇಟ್ಟುಕೊಳ್ಳಬೇಕು. ಆದರೆ ಅಂತಿಮ ವಿಶೇಷ್ಲಣೆಯಲ್ಲಿ ಈ ರೀತಿಯ ಸಮರ್ಪಣೆ ವಿಜೇತರನ್ನು ಮತ್ತು ಆಡಂಬರವನ್ನು ಉತ್ಪಾದಿಸುತ್ತದೆ.
ಒಲಿಂಪಿಕ್ ಹೊನ್ನು ಮತ್ತು ಹೊಳಪು
ಒಲಿಂಪಿಕ್ ದೃಶ್ಯ ಬಲು ಪರಿಣಾಮಕಾರಿಯಾಗಿರಬಲ್ಲದೆಂಬುದರಲ್ಲಿ ಸಂದೇಹವಿಲ್ಲ. ಅದು ಜನಸ್ತೋಮಕ್ಕೆ ರೋಮಾಂಚಕ ಕ್ಷಣಗಳನ್ನು ಒದಗಿಸಿಕೊಡುವುದು ಮಾತ್ರವಲ್ಲ, ಗಮನಾರ್ಹ ಕ್ರೀಡಾಸಾಧನೆಗಳ ಪ್ರದರ್ಶನ ಸ್ಥಳವೂ ಆಗಿದೆ. ಬಾರ್ಸಲೋನ ಇದಕ್ಕೆ ಅಪವಾದವಾಗಿರಲಿಲ್ಲ.
ಬೆಲೊರಸ್ಸಿಯದ ಗಾರುಡಿ ಸಾಧಕ ವಿಟಾಲಿ ಶೆರ್ಬೊ, ಪುರುಷರ ಗಾರುಡಿ ಸಾಧನೆಯಲ್ಲಿ, ದಾಖಲೆಯನ್ನು ಮೀರಿಸಿದ, ಎಂಟರಲ್ಲಿ ಆರು ಸ್ವರ್ಣ ಪದಕಗಳನ್ನು ಗೆದ್ದನು. ಚೈನೀಸ್ ಗಾರುಡಿ ಸಾಧಕ ಶಾವೊಸಾವಾಂಗ್ ಲೀ ಅಂಗಣ ಸಾಧನೆಯಲ್ಲಿ ನಂಬಲಾಗದ ಮುಮ್ಮಡಿ ಅಂತರ ಪಲಿಯ್ಟನ್ನು ಮಾಡಿ ತೋರಿಸಿದ. ಕಾರ್ಲ್ ಲೂವಿಸ್ ಕ್ರಮಾನುಗತವಾಗಿ ಮೂರನೆಯ ಬಾರಿ ಲಾಂಗ್ ಜಂಪ್ ಸ್ಪರ್ಧೆಯನ್ನು ಗೆದ್ದು ಒಲಿಂಪಿಕ್ ಇತಿಹಾಸವನ್ನೇ ಮಾಡಿದ. ಇನ್ನೊಂದು ಕಡೆಯಲ್ಲಿ, ಮಹಿಳೆಯರ ದೂರ ಓಟದಲ್ಲಿ ಜಪಾನಿನ ಬೆಳ್ಳಿ ಪದಕ ವಿಜೇತೆ ಯುಕೊ ಅರಿಮೋರಿ ತಾನು ತೋರಿಸಿದ ಸೌಜನ್ಯಕ್ಕಾಗಿ ಜಯಘೋಷವನ್ನು ಗಳಿಸಿದಳು. ಆಕೆ ತೀರಾ ದಣಿದಿದ್ದರೂ, ಜನಸ್ತೋಮಕ್ಕೂ ಆ ಬಳಿಕ ಗೆದ್ದ ಮಹಿಳೆಗೂ ಜಪಾನೀ ಶೈಲಿಯಲ್ಲಿ ಬಗ್ಗಿ ಕ್ರೀಡಾಂಗಣವನ್ನು ಸುತ್ತಿದಳು.
ಒಲಿಂಪಿಕ್ಸ್ನಿಂದ ಬರುವ ವ್ಯಾಪಾರ ಸಾಧ್ಯತೆಗಳನ್ನು ಬಹುರಾಷ್ಟ್ರಗಳ ಕಂಪೆನಿಗಳು ಅಲಕ್ಷ್ಯ ಮಾಡಿರಲಿಲ್ಲ. ಈ ಕಂಪೆನಿಗಳು ತಾವೇ ಈ ಆಟಗಳನ್ನು ದೊಡ್ಡ ಮೊತ್ತದ ಹಣವನ್ನು ಕೊಟ್ಟು ಅನುಮೋದಿಸಿ ಅವುಗಳ ಕೀರ್ತಿಯಲ್ಲಿ ಹಾಯಾಗಿರುತ್ತವೆ.
ಕೀರ್ತಿಗೆ ಔಷಧ ಶಾಸ್ತ್ರೀಯ ಮಾರ್ಗ
ದಯಾರಹಿತ ತರಬೇತು ಮತ್ತು ಸ್ವಾಭಾವಿಕ ಸಾಮರ್ಥ್ಯ—ಪ್ರಾಮುಖ್ಯವೇನೋ ಸರಿ—ಇವು ಮಾತ್ರ ಒಲಿಂಪಿಕ್ ಸಾಫಲ್ಯದ ಕೀಲಿಕೈಗಳಲ್ಲ. ಕ್ರೀಡಾಳುಗಳಲ್ಲಿ ಅನೇಕರು ತಮಗೆ ಸ್ಪರ್ಧಾತ್ಮಕ ಪ್ರಯೋಜನವನ್ನು ಕೊಟ್ಟುಕೊಳ್ಳಲು ಮಾದಕ ಔಷಧಗಳ ಮೇಲೆ ಹೊಂದಿಕೊಳ್ಳುತ್ತಾರೆ. ಸ್ನಾಯುಗಳನ್ನು ಬೆಳೆಸಲು ಆ್ಯನಬಾಲಿಕ್ ಸೀರ್ಟಾಯ್ಡ್ ಯಾ ಮಾನವ ಬೆಳೆವಣಿಗೆಯ ಚೋದಕ ಸ್ರಾವ (ವಿಶೇಷವಾಗಿ ವೆಯ್ಟ್ ಲಿಫ್ಟಿಂಗ್ ಮತ್ತು ಕ್ಷೇತ್ರದಾಟಗಳಲ್ಲಿ ಜನಪ್ರಿಯ), ಹೃದಯದ ತುಡಿತವನ್ನು ನಿಧಾನಿಸಲಿಕ್ಕಾಗಿ (ಧನುರ್ವಿದ್ಯೆ ಮತ್ತು ಬಂದೂಕು ಹೊಡೆತದ ಫಲಿತಾಂಶವನ್ನು ಉತ್ತಮಗೊಳಿಸಲು) ಬೇಟ ಬ್ಲಾಕರ್ಸ್ ಔಷದ; ಅಥವಾ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಉದ್ರೇಕಿಸಲು (ಸೈಕಲ್ ಓಟ ಮತ್ತು ದೀರ್ಘ ದೂರದ ಓಟಕ್ಕೆ ಉಪಯುಕ್ತ) ಇರಿತ್ರಪಾಯಿಟಿನ್ ಔಷಧಗಳು ಅವರಿಂದ ಸೇವಿಸಲ್ಪಡಬಹುದು.
ಇದರ ಅಪಾಯಗಳು ಕ್ರೀಡಾಳುಗಳಿಗೆ ಗೊತ್ತಿದ್ದರೂ, ನಿಷೇಧಿತ ಔಷಧಗಳನ್ನು ಉಪಯೋಗಿಸುವ ಒತ್ತಡ ಭಾರಿ. ಇಪ್ಪತ್ತು ವಿಭಿನ್ನ ಔಷಧಗಳನ್ನು ಸೇವಿಸಿದುದರ ಪರಿಣಾಮವಾಗಿ 1987ರಲ್ಲಿ ಸತ್ತ ಬಿರ್ಜಿಟ್ ಡ್ರೆಸೆಲ್ ಎಂಬಾಕೆಯ ತಂಡದಲ್ಲಿದ್ದ ಜರ್ಮನ್ ಕ್ರೀಡಾಳು ಗಾಬಿ ಬುಸ್ಮೆನ್ ವಿವರಿಸುವುದು: “ಕೆಲವು ವಿಶೇಷ ಆಟಗಳಲ್ಲಿ, ಇಂತಹ ಔಷದಗಳಿಲ್ಲದಿದ್ದರೆ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವುದು ಕಷ್ಟ.”
ಈ ಕ್ರೀಡಾಳುಗಳ ಶಿಕ್ಷಕರು ಸಾಮಾನ್ಯವಾಗಿ ಈ ಮಾದಕ ವಸ್ತುವಿನ ಉಪಯೋಗದಲ್ಲಿ ಸಹಭಾಗಿಗಳು; ಅವರು ಅದನ್ನು ಶಿಫಾರಸು ಮಾಡಲೂ ಬಹುದು. ಮಾಜಿ ಪೂರ್ವ ಜರ್ಮನಿಯ ಶಿಕ್ಷಕ ವಿನ್ಫ್ರೀಟ್ ಹೈನಿಕ ಒಪ್ಪುವುದು: “ಒಲಿಂಪಿಕ್ಸ್ಗೆ ಹೋಗುವ ಮನಸ್ಸು ನಿಮಗಿರುವಲ್ಲಿ, ಇದನ್ನು [ಔಷಧ ತೆಗೆದುಕೊಳ್ಳುವುದನ್ನು] ನೀವು ಮಾಡಲೇ ಬೇಕು, ಎಂದು ನಾನು ಅವರಿಗೆ ಹೇಳಿದೆ.” ಸ್ಪರ್ಧಿಗಳಲ್ಲಿ ಅನೇಕರು ವಿಜಯವನ್ನು ಪ್ರಾಮಾಣಿಕತೆಗಿಂತ—ತಮ್ಮ ಆರೋಗ್ಯಕ್ಕಿಂತಲೂ ಬೆಲೆಯುಳ್ಳದ್ದಾಗಿ ಎಣಿಸುತ್ತಾರೆಂಬುದು ವ್ಯಕ್ತ. ಶ್ರೇಷ್ಠ ರೀತಿಯ ಕ್ರೀಡಾಳುಗಳ ಮಧ್ಯೆ ಮಾಡಿದ ಇತ್ತೀಚಿನ ಒಂದು ಸಮೀಕ್ಷೆಯು ತಿಳಿಸಿದ್ದೇನಂದರೆ, ಅವರಲ್ಲಿ 52 ಪ್ರತಿಶತ ತಮ್ಮನ್ನು ವಿಜಯಿಗಳಾಗಿ ಮಾಡುವ ಒಂದು ಕಾಲ್ಪನಿಕ ಅದ್ಭುತೌಷಧವನ್ನು, ಅದು ಅವರನ್ನು ಐದು ಕೀರ್ತಿಭರಿತ ವರ್ಷಗಳಲ್ಲಿ ಮೇಲಿನ ಸ್ಥಾನದಲ್ಲಿ ನಿಂತ ಬಳಿಕ ಕೊಂದರೂ ಉಪಯೋಗಿಸುವರೆಂದು ತೋರಿಸಿತು.
ಬ್ರಿಟಿಷ್ ಓಟಗಾರ ಜೇಸನ್ ಲಿವಿಂಗ್ಸ್ಟನ್ನನ್ನು, ಅವನು ಆ್ಯನಬಾಲಿಕ್ ಸ್ಟೀರಾಯ್ಡನ್ನು ತೆಗೆದುಕೊಂಡಿದ್ದಾನೆಂದು ಪರೀಕ್ಷೆಯಲ್ಲಿ ಖಚಿತವಾದ ಬಳಿಕ ಬಾರ್ಸಲೋನದಿಂದ ಅಪಮಾನದಿಂದ ಹಿಂದೆ ಕಳುಹಿಸಲಾಯಿತು. ನಾನ್ನೂರು ಮೀಟರ್ ಓಟದಲ್ಲಿ ವಿಶ್ವ ದಾಖಲೆಯಿದ್ದ ಅಮೆರಿಕದ ಹ್ಯಾರಿ ರೆನಾಲ್ಡ್ಸ್ ಒಲಿಂಪಿಕ್ಸ್ನಲ್ಲಿ ಓಡಲೇ ಇಲ್ಲ. ಮಾದಕೌಷಧ ಪರೀಕ್ಷೆಯಲ್ಲಿ 1990ರಲ್ಲಿ ನಪಾಸಾದ ಇವನನ್ನು ಎರಡು ವರ್ಷಕಾಲ ಸ್ಪರ್ಧೆಗಳಿಂದ ತೆಗೆದು ಹಾಕಲಾಗಿತ್ತು. ಇದು ಅವನಿಗೆ ಒಲಿಂಪಿಕ್ ಪದಕದ ಸಾಧ್ಯತೆಯನ್ನು ಮಾತ್ರವಲ್ಲ, ಅನುಮೋದಕ ಸಂದರ್ಭಗಳನ್ನು ಕಳೆದುಕೊಂಡದರ್ದಿಂದ ಹತ್ತಾರು ಲಕ್ಷ ಡಾಲರುಗಳ ನಷ್ಟವನ್ನೂ ಉಂಟುಮಾಡಿತು.
ಆದರೆ ಅಧಿಕಾಂಶ ಔಷಧ ಸೇವಿಸುವವರು ಹಿಡಿಯಲ್ಪಡುವುದಿಲ್ಲ. ಬಾರ್ಸಲೋನ ಆಟದ ಸಮಯದಲ್ಲಿ ನಡೆದ ಸುಮಾರು 2,000 ಔಷಧ ಪತ್ತೆ ಹಚ್ಚುವ ಪರೀಕ್ಷೆಗಳಿದ್ದರೂ, ಅಪ್ರಾಮಾಣಿಕ ಕ್ರೀಡಾಳುಗಳು, ಮೂತ್ರ ಪರೀಕ್ಷೆಯಲ್ಲಿ ತೋರಿಬರದಿರುವ ಔಷಧಗಳಿಗೆ ಬದಲಾಯಿಸಿ ಪತ್ತೆ ಮಾಡಲ್ಪಡುವುದರಿಂದ ತಪ್ಪಿಸಿಕೊಳ್ಳಸಾಧ್ಯವಿತ್ತು. “ವಿಜಯ ಮತ್ತು ಹಣಕ್ಕಾಗಿರುವ ಲೋಭವು ಅಪ್ರಾಮಾಣಿಕತೆಯಿಂದ ನೈತಿಕತೆಯನ್ನು ಪ್ರತ್ಯೇಕಿಸಲು ಕಷ್ಟವಾಗುವ ಮೊಬ್ಬಾದ ಜಗತ್ತನ್ನು ತೋರಿಸಿತು,” ಎಂದು ಎಲ್ ಪಾಈಸ್ ಎಂಬ ಸ್ಪ್ಯಾನಿಷ್ ವಾರ್ತಾಪತ್ರ ಹೇಳಿತು.
ಅನೇಕ ಪದಕ ವಿಜೇತರು ಔಷಧಗಳ ಕಾರಣದಿಂದಲ್ಲ, ಅನೇಕ ವರ್ಷಕಾಲ ತಾವು ಮಾಡಿದ್ದ ಆತ್ಮತ್ಯಾಗದ ಕಾರಣ ಸಾಫಲ್ಯ ಪಡೆದಿದ್ದರೆಂಬುದು ನಿಶ್ಚಯ. ಈ ತ್ಯಾಗಗಳು ಪ್ರಯೋಜನಕರವೊ?
ಬಾಳಿಕೆ ಬರುವ ಕೀರ್ತಿ
ಮಹಿಳೆಯರ 100 ಮೀಟರ್ ಓಟವನ್ನು ಅನಿರೀಕ್ಷಿತವಾಗಿ ಜಯಿಸಿದ ಗೇಲ್ ಡೆವರ್ಸ್, ಆಕೆಯ ವಿಜಯದ ಬಳಿಕ ಅತ್ಯಾನಂದಪಟಳ್ಟು. “ಕನಸು ನಿಜವಾಗುತ್ತದೆಂದು ಯಾರಾದರೂ ನಂಬುವವಳಿದ್ದರೆ ಅದು ನಾನೇ,” ಎಂದಳವಳು. ಎರಡು ವರ್ಷಗಳಿಗಿಂತಲೂ ಕಡಮೆ ಹಿಂದೆ, ಅವಳಿಗೆ ನಡೆಯಲಿಕ್ಕೂ ಆಗುತ್ತಿರಲಿಲ್ಲ. ಗ್ರೇವ್ಸ್ ರೋಗ ಚಿಕಿತ್ಸೆಯಲ್ಲಿ ಜಟಿಲತೆಯ ಕಾರಣ ಆಕೆಯ ಎರಡು ಪಾದಗಳನ್ನೂ ಕತ್ತರಿಸುವ ಮಾತುಕತೆ ನಡೆಯುತ್ತಿತ್ತು. ಸ್ಪರ್ಧಾತ್ಮಕ ಈಜಿನ ನಿವೃತ್ತಿಯನ್ನು ಬಿಟ್ಟು ಒಂದೇ ಒಂದು ವರ್ಷದ ಹಿಂದೆ ಪುನಃ ಈಜತೊಡಗಿದ್ದು 100 ಮೀಟರಿನ ಬಟರ್ಫ್ಲೈ ಸ್ಪರ್ಧೆಯಲ್ಲಿ ಸುವರ್ಣ ಪಡೆದಿದ್ದ ಪಾಬ್ಲೊ ಮೊರಾಲಿಸ್ ಇದಕ್ಕೆ ಸಮ್ಮತಿಸುತ್ತಾ ಹೇಳಿದ್ದು: “ಕೊನೆಗೆ ನನ್ನ ಸಮಯ, ಕನಸು ನೆನಸಾಗುವ ಸಮಯ ಬಂದಿತು.”
ಬಹುತೇಕ ಕ್ರೀಡಾಳುಗಳು ಎಂದಿಗೂ ಚ್ಯಾಂಪಿಯನ್ಗಳಾಗಲಾರರು. “ಒಲಿಂಪಿಕ್ ಆಟದಲ್ಲಿ ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದೇ ಮುಖ್ಯ,” ಎಂದು ಕೆಲವರು ಅಭಿಪ್ರಯಿಸುವುದು ನಿಜ. ಆದರೆ ಚ್ಯಾಂಪಿಯನರಾಗಬೇಕೆಂದು ಬಯಸಿ ಬಂದಿದ್ದ ಇತರ ಕ್ರೀಡಾಳುಗಳು ತಮ್ಮ ಕನಸುಗಳು ಚೂರುಪಾರಾದವರಾಗಿ ಮನೆಗೆ ಹಿಂದೆರಳಿದರು. ಇಬ್ರಾಗಿಮ್ ಸಾಮಡಫ್ ಎಂಬ ವೆಯ್ಟ್ ಲಿಫ್ಟರ್ನಿಗೆ ಸುವರ್ಣ ಪದಕವನ್ನು ಪಡೆಯುವ ಬಯಕೆಯಿತ್ತು—ಆದರೆ ಅವನ ಸ್ಪರ್ಧೆಯಲ್ಲಿ ಅವನಿಗೆ ಕೇವಲ ಮೂರನೆಯ ಸ್ಥಾನ ಸಿಕ್ಕಿತು. “ಸುವರ್ಣ ಪದಕದ ಮೂಲಕ ನಾನು ನನ್ನ ಜೀವನಕ್ಕೆ ಮಾರ್ಗದರ್ಶನ ಕೊಡಬಹುದಿತ್ತು; ಒಂದು ಜೀವನೋಪಾಯಕ್ಕಾಗಿ ಕಲಿಯಬಹುದಿತ್ತು, ಕುಟುಂಬಕ್ಕೆ ಸಹಾಯ ಮಾಡಬಹುದಾಗಿತ್ತು. ಈಗ ಏನು ಮಾಡುವುದೆಂದು ನನಗೆ ತಿಳಿಯದು,” ಎಂದು ಅವನು ನಿಟ್ಟುಸಿರು ಬಿಟ್ಟನು. ಮತ್ತು ವಿಜೇತರು ಸಹ, ಅವರ ಕ್ರೀಡಾಸಾಧನೆ ಕಡಮೆಯಾಗುವಾಗ ನೋವಿನ ಸಮಯವನ್ನು ಎದುರಿಸುತ್ತಾರೆ.
ಮಾಜಿ ಸೋವಿಯೆಟ್ ಟೆನಿಸ್ ಆಟಗಾರ್ತಿ ಆ್ಯನ ಡಿಮಿಟ್ರೀವ ಹೇಳಿದ್ದು: “[ಸೋವಿಯೆಟ್] ಕ್ರೀಡಾ ಸಂಘ ಜನರ ಚಿಂತೆಯನ್ನು ಮಾಡಲಿಲ್ಲ. ‘ನೀವು ಹೋಗಿ ಬಿಡಿ, ನಾವು ನಿಮ್ಮಂತಹ ಇನ್ನು ಹತ್ತು ಜನರನ್ನು ಕಂಡುಹಿಡಿಯುತ್ತೇವೆ,’ ಎಂದು ಅವರು ನೆನಸಿದರು.” ತದ್ರೀತಿ, ಟೋಕಿಯೋದಲ್ಲಿ 1964ರಲ್ಲಿ ಎರಡು ಚಿನ್ನದ ಪದಕ ಪಡೆದ ಹೆನ್ರಿ ಕಾರ್ ಒಪ್ಪಿಕೊಂಡದ್ದು: “ಒಬ್ಬನು ಸರ್ವೋತ್ತಮನಾದರೂ ಅದೂ ವಂಚನೆಯೆ. ಏಕೆ? ಏಕೆಂದರೆ ಅದು ಬಾಳಿಕೆ ಬರುವುದಿಲ್ಲ, ನಿಜವಾಗಿಯೂ ತೃಪ್ತಿಪಡಿಸುವುದಿಲ್ಲ. ತಾರೆಗಳು ಬೇಗನೆ ಹೋಗಿ ಅವರ ಸ್ಥಾನವು ಭರ್ತಿಯಾಗುತ್ತದೆ, ಮತ್ತು ಸಾಮಾನ್ಯವಾಗಿ ಅವರು ಮರೆಯಲ್ಪಡುತ್ತಾರೆ.”
ಕ್ಷಣಿಕವಾದ ಒಲಿಂಪಿಕ್ ಕೀರ್ತಿಯನ್ನು, ದೇವರನ್ನು ಸೇವಿಸುವವರಿಗೆ ಆತನು ವಾಗ್ದಾನಿಸುವ ನಿತ್ಯಜೀವಕ್ಕೆ ಹೋಲಿಕೆ ಮಾಡಸಾಧ್ಯವಿಲ್ಲ. ಈ ಬಹುಮಾನವು ಕ್ರೀಡಾತರಬೇತಿನ ಬದಲಿಗೆ ಆತ್ಮಿಕ ತರಬೇತನ್ನು ಕೇಳಿಕೊಳ್ಳುತ್ತದೆ. ಪೌಲನು ತಿಮೊಥೆಯನಿಗೆ ಬರೆದುದು: “ದೇಹಸಾಧನೆಯು [ಗಾರುಡಿ ಸಾಧಕನಂತೆ ತರಬೇತು] ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಿದೆ. ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು.”—1 ತಿಮೊಥೆಯ 4:8.
ಒಲಿಂಪಿಕ್ ಆಟಗಳು ದೇಹಸಾಧನೆಯ ಪ್ರಯೋಜನಗಳನ್ನು—ಹೆಚ್ಚೆಂದರೆ ತಾತ್ಕಾಲಿಕ—ಸಮರ್ಥಿಸುತ್ತದೆ. ಕ್ರೀಡಾಳುಗಳು ಸಮರ್ಪಣೆ ಮತ್ತು ಆತ್ಮತ್ಯಾಗದ ಮೂಲಕ ಏನು ಮಾಡಬಲ್ಲರೆಂದು ಅದು ಜಗತ್ತಿಗೆ ತೋರಿಸುತ್ತದೆ. ಈ ಗುಣಗಳು ಕ್ರೈಸ್ತ ಓಟವನ್ನು ಜಯಿಸಲು ಸಹ ಬೇಕಾಗಿವೆ. ಈ ಓಟವು, ಯಾವ ಒಲಿಂಪಿಕ್ ಸ್ಪರ್ಧೆಗೂ ಅಸದೃಶವಾಗಿ, ಓಟವನ್ನು ಮುಗಿಸುವ ಸರ್ವರಿಗೆ ಬಾಳಿಕೆ ಬರುವ ಪ್ರಯೋಜನಗಳನ್ನು ತರುವುದು. ಆದುದರಿಂದ ಕ್ರೈಸ್ತರು, ‘ತರಬೇತನ್ನು ಮುಗಿಸಿ’ ಮತ್ತು ‘ಸಹನೆಯಿಂದ ಓಟವನ್ನು ಓಡುವುದರ ಮೂಲಕ’ ಕ್ರೀಡಾಳುಗಳನ್ನಲ್ಲ, ಯೇಸು ಕ್ರಿಸ್ತನನ್ನು ಅನುಕರಿಸುವುದು ಒಳ್ಳೆಯದು.—1 ಪೇತ್ರ 5:10; ಇಬ್ರಿಯ 12:1.
[ಪುಟ 23 ರಲ್ಲಿರುವ ಚಿತ್ರಗಳು]
ಮುಳುಕರು ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವುದು. ಹಿನ್ನೆಲೆಯಲ್ಲಿ ಬಾರ್ಸಲೋನ
[ಕೃಪೆ]
Photos: Sipa Sport
[ಪುಟ 24 ರಲ್ಲಿರುವ ಚಿತ್ರ]
ಪ್ಯಾರಲಲ್ ಬಾರ್ಗಳಲ್ಲಿ ಸ್ಪರ್ಧಿಸುವುದು
[ಕೃಪೆ]
Photo: Sipa Sport
[ಪುಟ 25 ರಲ್ಲಿರುವ ಚಿತ್ರ]
ನೂರು ಮೀಟರುಗಳ ಫೈನಲ್, ಬಲಬದಿಯ ಕೊನೆಯಲ್ಲಿರುವ ಓಟಗಾರ್ತಿ ಸ್ವರ್ಣ ವಿಜೇತೆಯಾದಳು
[ಕೃಪೆ]
Photo: Sipa Sport