ಮಾನವನ ಯುದ್ಧಗಳಲ್ಲಿ ಧರ್ಮದ ಪಾತ್ರ
“ಅಲ್ಪ ಮಟ್ಟಿಗೆಯಾದರೂ ಧರ್ಮವಿಲ್ಲದೆ ಇದ್ದ ಯಾವುದೇ ಜನತೆ ಇದ್ದದ್ದಿಲ್ಲ,” ಎನ್ನುತ್ತದೆ ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ (1970ರ ಮುದ್ರಣ). ಆದರೂ ಇತಿಹಾಸಗಾರರಾದ ವಿಲ್ ಮತ್ತು ಅರೀಎಲ್ ಡ್ಯೂರೆಂಟ್ ಬರೆದುದು: “ಯುದ್ಧವು ಇತಿಹಾಸದ ನಿತ್ಯತೆಗಳಲ್ಲಿ ಒಂದಾಗಿದೆ.” ಹಾಗಾದರೆ, ಈ ಎರಡು ನಿತ್ಯತೆಗಳಾದ ಯುದ್ಧ ಮತ್ತು ಧರ್ಮ, ಹೇಗೋ ಸಂಬಂಧವುಳ್ಳವುಗಳಾಗಿವೆಯೆ?
ಇತಿಹಾಸದಾದ್ಯಂತ, ಯುದ್ಧ ಮತ್ತು ಧರ್ಮ, ಅಗಲಿಸಲಾಗದ ವಸ್ತುಗಳಾಗಿದ್ದವೆಂಬುದು ನಿಶ್ಚಯ. ಇತಿಹಾಸದ ಪ್ರಪ್ರಥಮ ಲೋಕಶಕ್ತಿಗಳಲ್ಲಿ ಒಂದಾದ ಈಜಿಪ್ಟಿನ ವಿಷಯದಲ್ಲಿ ಏನ್ಷೆಂಟ್ ಈಜಿಪ್ಟ್ ಎಂಬ ಪುಸ್ತಕದಲ್ಲಿ ಲೈನೆಲ್ ಕ್ಯಾಸನ್ ವಿವರಿಸಿದ್ದು: “ಪ್ರತಿಯೊಂದು ಮಿಲಿಟರಿ ವಿಜಯಕ್ಕೂ ದೇವತೆಗಳಿಗೆ ಕಾಣಿಕೆಗಳು ಕೊಡಲ್ಪಟ್ಟವು; ಮತ್ತು ಇನ್ನೂ ಹೆಚ್ಚಿನ ಸಂಪತ್ತಿನ ಆಶೆಯಿಂದ ಪುರೋಹಿತರೂ ಫರೋಹರಂತೆ ಅಭಿಲಾಷೆಯಲ್ಲಿ ಬೆಳೆದರು.”
ತದ್ರೀತಿ, ಪಾದ್ರಿ ಡಬ್ಲ್ಯೂ. ಬಿ. ರೈಟ್, ಇನ್ನೊಂದು ಆದಿ ಲೋಕಶಕ್ತಿಯಾಗಿದ್ದ ಅಸ್ಸಿರಿಯದ ಕುರಿತು ಹೇಳಿದ್ದು: “ಹೋರಾಟವು ಆ ಜನಾಂಗದ ವ್ಯಾಪಾರವಾಗಿತ್ತು, ಮತ್ತು ಪುರೋಹಿತರು ಎಡೆಬಿಡದ ಯುದ್ಧ ಪ್ರಚೋದಕರಾಗಿದ್ದರು. ಗೆದ್ದಾಗ ಸಿಕ್ಕಿದ ಕೊಳ್ಳೆಗಳಿಂದ ಅವರನ್ನು ಅಧಿಕಾಂಶ ಪೋಷಿಸಲಾಗುತ್ತಿತ್ತು.”
ಜೆರಲ್ಡ್ ಸೈಮನ್ಸ್ ಯಾವುದನ್ನು “ಅಸಂಸ್ಕೃತ ಯೂರೋಪ್” ಎಂಬುದಾಗಿ ಕರೆದರೊ ಅದರ ಬಗೆಗೆ ಅವರು ಬರೆದುದು: “ಅವರ ಸಮಾಜವು ಒಂದು ಸರಳ ಸಮಾಜವಾಗಿದ್ದು ಸ್ಪಷ್ಟವಾಗಿಗಿ ಒಂದೇ ಚಟುವಟಿಕೆಗೆ, ಯುದ್ಧದ ಹೋರಾಟಕ್ಕೆ ಸಂಘಟಿತವಾಗಿತ್ತು.” ಮತ್ತು ಧರ್ಮ ಇದರಲ್ಲಿ ಸೇರಿಕೊಂಡಿತ್ತು. “ಅನೇಕ ಐತಿಹ್ಯಗಳು ದೆವ್ವಗಳು ವಸತಿ ಮಾಡಿಕೊಂಡಿದ್ದ ಖಡ್ಗಗಳ, ಯಾ ದೇವತೆಗಳ ಪ್ರತಿನಿಧಿಗಳಾಗಿ ವರ್ತಿಸುವ ಖಡ್ಗಗಳ ವಿಷಯ ಹೇಳುತ್ತವೆ,” ಎಂದು ಸೈಮನ್ಸ್ ಗಮನಿಸುತ್ತಾರೆ.
ಆದರೂ, ತೀರಾ ನಾಗರಿಕತೆಯದ್ದೆಂದು ಪರಿಗಣಿಸಲಾಗುತ್ತಿದ್ದ ರೋಮನ್ ಸಾಮ್ರಾಜ್ಯದಲ್ಲಿಯೂ ಪರಿಸ್ಥಿತಿಯು ಇದಕ್ಕೆ ಸದೃಶವಾಗಿತ್ತು. ಇಂಪೀರಿಯಲ್ ರೋಮ್ ಎಂಬ ಪುಸ್ತಕದಲ್ಲಿ ಮೋಸೆಸ್ ಹಡಾಸ್ ವಿವರಿಸುವುದು: “ರೋಮನರು ಯುದ್ಧ ಮನೋಭಾವವುಳ್ಳವರಾಗಿ ಬೆಳೆದರು.” ರೋಮನ್ ಸೈನಿಕರು ಯುದ್ಧಕ್ಕೆ ತಮ್ಮ ದೇವತೆಗಳ ಸಂಕೇತ ಚಿತ್ರಗಳಿರುವ ಪತಾಕೆಗಳನ್ನು ಹೊತ್ತುಕೊಂಡು ಹೋದರು. ಒಂದು ವಿಶ್ವಕೋಶ ಗಮನಿಸಿದ್ದು: “ತನ್ನ ಸೈನಿಕರಿಗೆ ಯಾವುದು ಪ್ರಾಯಶಃ ಭೂಮಿಯ ಸೊತ್ತುಗಳಲ್ಲಿಯೇ ಅತಿ ಪವಿತ್ರವಾಗಿತ್ತೋ ಅಂತಹ ಪತಾಕೆಯನ್ನು ಪುನಃ ಸ್ವಾಧೀನ ಮಾಡಿಕೊಳ್ಳುವಂತೆ ಉದ್ರೇಕಿಸಿ ಅವರ ಮುನ್ನಡೆಗೆ ಆಸಕ್ತಿಯನ್ನು ಹುಟ್ಟಿಸುವಂತೆ ಮಾಡಲು, ಒಬ್ಬ ಸೇನಾಪತಿ ಒಂದು ಪತಾಕೆಯನ್ನು ವೈರಿಗಳ ಮಧ್ಯೆ ಬಿಸಾಡುವಂತೆ ಆಜ್ಞಾಪಿಸುವುದು ಅಸಾಮಾನ್ಯವಾಗಿರಲಿಲ್ಲ.”
ಯುದ್ಧ ಮತ್ತು ಹೊರ ತೋರಿಕೆಯ ಕ್ರೈಸ್ತರು
ಲೋಕ ರಂಗದಲ್ಲಿ ಕ್ರೈಸ್ತ ಪ್ರಪಂಚದ ಎದ್ದು ಬರುವಿಕೆಯು ವಿಷಯಗಳನ್ನು ಬದಲಾಯಿಸಲಿಲ್ಲ. ವಾಸ್ತವದಲ್ಲಿ, ಆ್ಯನ್ ಫ್ರೀಮ್ಯಾಂಟ್ಲ್, ಏಜ್ ಆಫ್ ಫೆಯ್ತ್ ಎಂಬ ಪುಸ್ತಕದಲ್ಲಿ ಬರೆದುದು: “ಮನುಷ್ಯರು ಹೋರಾಡಿದ ಸಕಲ ಯುದ್ಧಗಳಲ್ಲಿ, ನಂಬಿಕೆಯ ಪರವಾಗಿ ಮಾಡಿದ ಯುದ್ಧಗಳಷ್ಟು ಆಸಕ್ತಿಯಿಂದ ಇನ್ನಾವುವೂ ಹೋರಾಡಲ್ಪಟ್ಟದ್ದಿಲ್ಲ. ಮತ್ತು ಈ ‘ಪವಿತ್ರ ಯುದ್ಧಗಳಲ್ಲಿ’ ಯಾವ ಯುದ್ಧವೂ ಮಧ್ಯ ಯುಗಗಳ ಕ್ರೈಸ್ತ ಧರ್ಮಯುದ್ಧಗಳಷ್ಟು ರಕ್ತಮಯವೂ ವಿಸ್ತಾರವೂ ಆಗಿದ್ದದ್ದಿಲ್ಲ.”
ವಿಸ್ಮಯಕರವಾಗಿ, ಇಂದೂ ಇದರಲ್ಲಿ ಕೊಂಚವೇ ಬದಲಾವಣೆಯಿದೆ. “ಧಾರ್ಮಿಕ ಧ್ವಜಗಳಡಿಯಲ್ಲಿ ಹೋರಾಟ ಮತ್ತು ಸಾವು, ಹಿಂಸಾತ್ಮಕ ಪಟ್ಟು ಹಿಡಿಯುವಿಕೆಯಿಂದ ಮುಂದುವರಿಯುತ್ತಿದೆ,” ಎಂದು ಟೈಮ್ ಪತ್ರಿಕೆ ವರದಿಸಿತು. “ಅಲ್ಸರ್ಟ್ನಲ್ಲಿ ಪ್ರಾಟೆಸ್ಟಂಟರು ಮತ್ತು ರೋಮನ್ ಕ್ಯಾತೊಲಿಕರು ವ್ಯರ್ಥತೆಯ ನಿರಂತರ ಚಲನೆಯ ರೀತಿಯಲ್ಲಿ ಪರಸ್ಪರ ಕೊಲ್ಲುವಿಕೆಯಲ್ಲಿ ಭಾಗವಹಿಸುತ್ತಾರೆ. ಅರಬರು ಮತ್ತು ಇಸ್ರೇಲಿಗಳು, ತಮ್ಮ ಪ್ರಾದೇಶಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವ್ಯಾಜ್ಯಗಳ ಮೇರೆಗಳಲ್ಲಿ ಉದ್ವೇಗದಿಂದ ನಿಂತಿದ್ದಾರೆ.” ಇದಲ್ಲದೆ, ಹಿಂದಿನ ಯುಗೊಸ್ಲಾವಿಯ ಗಣರಾಜ್ಯ ಹಾಗೂ ಏಷಿಯನ್ ದೇಶಗಳಲ್ಲಿ ಕುಲಸಂಬಂಧವಾದ ಮತ್ತು ಧಾರ್ಮಿಕ ವ್ಯತ್ಯಾಸಗಳು ಭಯಂಕರ ಕಗ್ಗೊಲೆಗಳಿಗೆ ಕಾರಣವಾಗಿವೆ.
ನಂಬಲು ಕಷ್ಟಕರವಾಗುವ ವಿಷಯವೇನಂದರೆ, ಅನೇಕ ವೇಳೆ ಕ್ರೈಸ್ತರೆನಿಸಿಕೊಳ್ಳುವವರು ತಮ್ಮ ಸ್ವಂತ ನಂಬಿಕೆಯ ಸದಸ್ಯರ ವಿರುದ್ಧ ಯುದ್ಧಕ್ಕೆ ಹೋಗುವುದೇ. ಹೀಗೆ ಕ್ಯಾತೊಲಿಕರು ರಣರಂಗಗಳಲ್ಲಿ ಕ್ಯಾತೊಲಿಕರನ್ನು ಕೊಲ್ಲುತ್ತಾರೆ. ಕ್ಯಾತೊಲಿಕ್ ಇತಿಹಾಸಗಾರ ಇ.ಐ. ವಾಟ್ಕನ್ ಒಪ್ಪಿಕೊಂಡದ್ದು: “ಇದನ್ನು ಒಪ್ಪಿಕೊಳ್ಳುವುದು ವೇದನಾಮಯವಾಗಿದ್ದರೂ, ಸುಳ್ಳು ಆತ್ಮೋನ್ನತಿ ಯಾ ಅಪ್ರಾಮಾಣಿಕ ನಿಷ್ಠೆಯ ಹಿತದಿಂದ, ಬಿಷಪರುಗಳು ತಮ್ಮ ದೇಶದ ಸರಕಾರಗಳು ಹೂಡಿದ ಎಲ್ಲ ಯುದ್ಧಗಳನ್ನು ಹೊಂದಿಕೆಯುಳ್ಳವರಾಗಿ ಬೆಂಬಲಿಸಿದ್ದಾರೆಂಬ ಐತಿಹಾಸಿಕ ನಿಜತ್ವವನ್ನು ಅಲ್ಲಗಳೆಯಲು ಯಾ ಅಸಡ್ಡೆ ಮಾಡಲು ಸಾಧ್ಯವಿರುವುದಿಲ್ಲ. ಒಂದು ರಾಷ್ಟ್ರೀಯ ಪುರೋಹಿತ ಪ್ರಭುತ್ವವು ಯಾವುದೇ ಯುದ್ಧವನ್ನು ಅನ್ಯಾಯವೆಂದು ಖಂಡಿಸಿರುವ ಒಂದೇ ಒಂದು ಸಂಭವವಾಗಲಿ ಕಾರ್ಯತಃ ನನಗೆ ಗೊತ್ತಿರುವುದಿಲ್ಲ . . . ಅಧಿಕೃತ ವಿಚಾರ ಸರಣಿ ಏನೇ ಇರಲಿ, ಕಾರ್ಯರೂಪದಲ್ಲಿ, ‘ನನ್ನ ದೇಶವು ಸದಾ ಸರಿ’ ಎಂಬುದು ಕ್ಯಾತೊಲಿಕ್ ಬಿಷಪರುಗಳು ಯುದ್ಧಕಾಲದಲ್ಲಿ ಅನುಸರಿಸಿರುವ ಸೂತ್ರವಾಗಿದೆ.”
ಆದರೂ, ಇದು ಕೇವಲ ಕ್ಯಾತೊಲಿಕರ ಸೂತ್ರವಾಗಿರುವುದಿಲ್ಲ. ಕೆನಡದ ವ್ಯಾಂಕೂವರಿನ ಸನ್ ವಾರ್ತಾಪತ್ರಿಕೆಯಲ್ಲಿ ಒಂದು ಸಂಪಾದಕೀಯವು ಗಮನಿಸಿದ್ದು: “ಪ್ರಾಟೆಸ್ಟಂಟ್ ಧರ್ಮವು ರಾಷ್ಟ್ರೀಯತಾ ವಿಭಾಜಕತೆಯ ಈ ಶಕ್ತಿಗಳಿಂದ ತಾನು ನಿಶ್ಚಯವಾಗಿ ತಪ್ಪಿಸಿಕೊಂಡಿದ್ದೇನೆಂದು ವಾದಿಸಲು ಸಾಧ್ಯವಿಲ್ಲ. ಚರ್ಚು ಧ್ವಜವನ್ನು ಹಿಂಬಾಲಿಸುತ್ತದೆಂಬುದು ಪ್ರಾಯಶಃ ಸಕಲ ಸಂಘಟಿತ ಧರ್ಮದ ಬಲಹೀನತೆಯಾಗಿದೆ . . . ದೇವರು ಪ್ರತಿಯೊಂದು ಪಕ್ಷದಲ್ಲಿ ಇದ್ದಾನೆಂದು ಹೇಳಿಕೊಳ್ಳದೆ ಯಾವುದೇ ಯುದ್ಧವನ್ನು ಎಂದಾದರೂ ಹೋರಾಡಿದ್ದುಂಟೊ?”
ಯಾವುದೂ ಇಲ್ಲವೆಂಬುದು ವ್ಯಕ್ತ! ಪ್ರಾಟೆಸ್ಟಂಟ್ ಪಾದ್ರಿ, ಹ್ಯಾರಿ ಎಮರ್ಸನ್ ಫಾಸಿಕ್ಡ್ ಒಪ್ಪಿಕೊಂಡದ್ದು: “ನಮ್ಮ ಚರ್ಚ್ಗಳಲ್ಲಿಯೂ ನಾವು ರಣಧ್ವಜಗಳನ್ನು ಇಟ್ಟಿದ್ದೇವೆ . . . ನಮ್ಮ ಬಾಯಿಯ ಒಂದು ಅಂಚಿನಿಂದ ನಾವು ಶಾಂತಿಯ ಪ್ರಭುವನ್ನು ಸ್ತುತಿಸಿ, ಇನ್ನೊಂದರಿಂದ ಯುದ್ಧವನ್ನು ಘನತೆಗೇರಿಸಿದ್ದೇವೆ.” ಮತ್ತು ಅಂಕಣಕಾರ ಮೈಕ್ ರಾಯ್ಕೊ ಹೇಳಿದ್ದೇನಂದರೆ, “ಕ್ರೈಸ್ತರು ಇತರ ಕ್ರೈಸ್ತರ ಮೇಲೆ ಯುದ್ಧ ಹೂಡುವ ವಿಷಯದಲ್ಲಿ ವಿಪರೀತ ಸೂಕ್ಷ್ಮತೆಯನ್ನು ತೋರಿಸಿರುವುದಿಲ್ಲ.” ಅವರು ವಿವರಿಸಿದ್ದು: “ಅವರು ತೋರಿಸಿರುತ್ತಿದ್ದರೆ, ಯೂರೋಪಿನಲ್ಲಿ ನಡೆದಿದ್ದ ಜೋರಾದ ಅಧಿಕಾಂಶ ಯುದ್ಧಗಳು ನಡೆಯುತ್ತಿರಲಿಲ್ಲ.” ಇವುಗಳಲ್ಲಿ ಹೆಸರಾಗಿದ್ದ ಯುದ್ಧವು ಜರ್ಮನಿಯಲ್ಲಿ ಪ್ರಾಟೆಸ್ಟಂಟ್ ಮತ್ತು ಕ್ಯಾತೊಲಿಕರ ಮಧ್ಯೆ ನಡೆದಿದ್ದ ಮೂವತ್ತು ವರ್ಷಗಳ ಯುದ್ಧ.
ನಿಶ್ಚಯವಾಗಿಯೂ, ನಿಜತ್ವಗಳು ಎಷ್ಟೋ ಸುವ್ಯಕ್ತ. ಧರ್ಮವು ಯುದ್ಧಗಳ ಬೆಂಬಲಿಗಳೂ, ಕೆಲವು ಸಲ, ಯುದ್ಧಗಳ ಪ್ರವರ್ತಕಳೂ ಆಗಿದ್ದಾಳೆ. ಆದುದರಿಂದ, ಅನೇಕರು ಈ ಪ್ರಶ್ನೆಗಳನ್ನು ಪರ್ಯಾಲೋಚಿಸಿದ್ದಾರೆ: ಯುದ್ಧಕಾಲದಲ್ಲಿ ದೇವರು ನಿಜವಾಗಿಯೂ ಒಂದಕ್ಕಿಂತ ಇನ್ನೊಂದು ಜನಾಂಗಕ್ಕೆ ಹೆಚ್ಚು ಅನುಗ್ರಹವನ್ನು ತೋರಿಸುತ್ತಾನೆಯೆ? ರಾಷ್ಟ್ರಗಳು ಹೋರಾಡುವಾಗ ಆತನು ಪಕ್ಷ ವಹಿಸುತ್ತಾನೆಯೆ? ಯುದ್ಧವು ಇಲ್ಲದೆ ಹೋಗುವ ಒಂದು ಸಮಯ ಎಂದಾದರೂ ಬರುವುದೆ?
[ಪುಟ 3 ರಲ್ಲಿರುವ ಸಂಕ್ಷಿಪ್ತ ವಿವರಣೆ]
ರೋಮನ್ ಸೈನಿಕರು ತಮ್ಮ ದೇವತೆಗಳ ಸಂಕೇತ ಚಿಹ್ನೆಗಳಿದ್ದ ಧ್ವಜವನ್ನು ಶತ್ರುಗಳ ಮಧ್ಯೆ ಬಿಸಾಡಿದರು