ಬಾಳುವ ಶಾಂತಿಯನ್ನು ಯಾರು ತರಬಲ್ಲರು?
“ಅವರೋ ತಮ್ಮ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು: ರಾಷ್ಟ್ರವು ರಾಷ್ಟ್ರದ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಮುಂದೆ ಅವರು ಯುದ್ಧವನ್ನು ಕಲಿಯರು.”
ಮೇಲಿನ ಶಾಸ್ತ್ರವಚನವು ಬೈಬಲಿನ ಕಿಂಗ್ ಜೇಮ್ಸ್ ವರ್ಷನ್ನಲ್ಲಿ, ಯೆಶಾಯ 2ನೆಯ ಅಧ್ಯಾಯ, 4ನೆಯ ವಚನದಿಂದ ತೆಗೆಯಲ್ಪಟ್ಟಿದೆ. ವಿಶ್ವ ಸಂಸ್ಥೆಯ ವಿಕಾಸ ಕಾರ್ಯಕ್ರಮ (ಯುಎನ್ಡಿಪಿ)ದಿಂದ ಪ್ರಕಾಶಿಸಲ್ಪಟ್ಟ, ಮಾನವ ವಿಕಾಸ ವರದಿ 1994 (ಇಂಗ್ಲಿಷ್) ಈ ಮಾತುಗಳನ್ನು ಉದ್ಧರಿಸಿ, ಅನಂತರ ಕೂಡಿಸಿದ್ದು: “[1990ರಲ್ಲಿ] ಶೀತಲ ಯುದ್ಧದ ಅಂತ್ಯದೊಂದಿಗೆ, ಈ ಪ್ರವಾದನೆಗಾಗಿದ್ದ ಸಮಯವು ಬಂದಿತ್ತೆಂದು ತೋರಿತು. ಆದರೆ ಇಷ್ಟರ ವರೆಗೆ, ಇದೊಂದು ಎಟುಕದಿರುವ ನಿರೀಕ್ಷೆಯಾಗಿ ಪರಿಣಮಿಸಿದೆ.”
ಮಿಲಿಟರಿಯನ್ನು ಕಡಮೆ ಮಾಡುವುದು
ಶಾಂತಿಗಾಗಿರುವ ನಿರೀಕ್ಷೆಗಳನ್ನು ಬಲಹೀನಪಡಿಸುವ ಒಂದು ಅಂಶವು ಏನಾಗಿದೆಯೆಂದರೆ, ಅಂತಾರಾಷ್ಟ್ರೀಯ ರಾಜಕೀಯ ವಾತಾವರಣದಲ್ಲಿನ ಬದಲಾವಣೆಯು ಮಿಲಿಟರಿ ವೆಚ್ಚ ಮಾಡುವಿಕೆಯಲ್ಲಿ ಮಹತ್ತರವಾದ ಇಳಿತಗಳಿಂದ ಒಡಗೂಡಿರುವುದಿಲ್ಲ. ಕೆಲವು ಇಳಿತಗಳು ಮಾಡಲ್ಪಟ್ಟಿವೆ ನಿಜ. ಯುಎನ್ ಸಂಖ್ಯೆಗಳಿಗನುಸಾರ, ಭೌಗೋಲಿಕ ಮಿಲಿಟರಿ ವೆಚ್ಚ ಮಾಡುವಿಕೆಯು, 1987ರಲ್ಲಿ ಎಲ್ಲ ಕಾಲಕ್ಕೂ ಗರಿಷ್ಠವಾದ 99,500 ಕೋಟಿ ಡಾಲರುಗಳಿಂದ 1992ರಲ್ಲಿ 81,500 ಕೋಟಿ ಡಾಲರುಗಳಿಗೆ ಇಳಿಯಿತು. ಆದರೂ, 81,500 ಕೋಟಿ ಡಾಲರುಗಳು ಒಂದು ಅಪರಿಮಿತ ಸಂಖ್ಯೆಯಾಗಿದೆ. ಅದು ಸರಿಸುಮಾರಾಗಿ ಲೋಕದ ಜನಸಂಖ್ಯೆಯ ಅರ್ಧದಷ್ಟು ಜನರ ಸಂಯುಕ್ತ ವರಮಾನಕ್ಕೆ ಸಮವಾಗಿದೆ!
ನಿರಸ್ತ್ರೀಕರಣದ ವಿರುದ್ಧ ಕೆಲಸಮಾಡುವ ಮತ್ತೊಂದು ಅಂಶವು ಯಾವುದೆಂದರೆ, ಮಿಲಿಟರಿ ಶಕ್ತಿಯು ಭದ್ರತೆಯನ್ನು ತರುತ್ತದೆಂಬ ದೃಷ್ಟಿಕೋನವೇ ಆಗಿದೆ. ಹೀಗೆ, ಶೀತಲ ಯುದ್ಧವು ಮುಗಿದಿದೆಯಾದರೂ, ರಾಷ್ಟ್ರೀಯ ಭದ್ರತೆಗಾಗಿರುವ ವೆಚ್ಚಗಳು ಉನ್ನತ ಮಟ್ಟಗಳಲ್ಲಿ ಉಳಿಯಬೇಕೆಂದು ಔದ್ಯಮೀಕರಿಸಲ್ಪಟ್ಟ ರಾಷ್ಟ್ರಗಳಲ್ಲಿರುವ ಅನೇಕರು ವಾದಿಸುತ್ತಾರೆ. ಜೇಮ್ಸ್ ವುಲ್ಸಿ, ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿಯ ನಿರ್ದೇಶಕರಾಗಿದ್ದಾಗ, ಫೆಬ್ರವರಿ 1993ರಲ್ಲಿ ಕಾಂಗ್ರೆಸ್ಗೆ ಹೇಳಿದ್ದು: “ನಾವು ಒಂದು ದೊಡ್ಡ ಘಟಸರ್ಪ [ಯು.ಎಸ್.ಎಸ್.ಆರ್]ವನ್ನು ವಧಿಸಿದ್ದೇವೆ, ಆದರೆ ಈಗ ದಿಗ್ಭ್ರಮೆ ಹಿಡಿಸುವ ವಿವಿಧತೆಯ ವಿಷಭರಿತ ಹಾವುಗಳಿಂದ ತುಂಬಿರುವ ಒಂದು ಕಾಡಿನಲ್ಲಿ ನಾವು ಜೀವಿಸುತ್ತೇವೆ.”
ವಿಕಾಸಶೀಲ ದೇಶಗಳಲ್ಲಿ, ಉನ್ನತ ಮಿಲಿಟರಿ ವೆಚ್ಚ ಮಾಡುವಿಕೆಯು, ಸಂಭವನೀಯ ಘಟಸರ್ಪಗಳು ಮತ್ತು ವಿಷಭರಿತ ಹಾವುಗಳೋಪಾದಿ ಗ್ರಹಿಸಲ್ಪಡುವ ದೇಶಗಳಿಂದ ಬರುವ ಒಂದು ಆಕ್ರಮಣವನ್ನು ತಡೆಯೊಡ್ಡುವ ವಿಧಾನವಾಗಿಯೂ ಸಮರ್ಥಿಸಲ್ಪಟ್ಟಿದೆ. ಆದರೆ, ವಾಸ್ತವಿಕತೆಯಲ್ಲಿ, ಯುಎನ್ಡಿಪಿ ಗಮನಿಸಿದ್ದು, “ವಿಕಾಸಶೀಲ ದೇಶಗಳು ಕೆಲವೆ ಅಂತಾರಾಷ್ಟ್ರೀಯ ಯುದ್ಧಗಳನ್ನು ಹೋರಾಡಿವೆ, ಮತ್ತು ಹೆಚ್ಚಿನವು ತಮ್ಮ ಜನರನ್ನು ನಿಗ್ರಹಿಸಲು ತಮ್ಮ ಸಶಸ್ತ್ರ ಪಡೆಗಳನ್ನು ಬಳಸಿವೆ.” ವಾಸ್ತವದಲ್ಲಿ, ಯುಎನ್ಡಿಪಿ ವರದಿಯು ವಿವರಿಸಿದ್ದು: “ವಿಕಾಸಶೀಲ ದೇಶಗಳಲ್ಲಿ, ಸಾಮಾಜಿಕ ಅಲಕ್ಷ್ಯದಿಂದ (ನ್ಯೂನ ಪೋಷಣೆ ಮತ್ತು ತಡೆಯಬಹುದಾದ ರೋಗಗಳಿಂದ) ಸಾಯುವ ಸಾಧ್ಯತೆಗಳು, ಬಾಹ್ಯ ಆಕ್ರಮಣದಿಂದಾಗುವ ಯುದ್ಧವೊಂದರಲ್ಲಿ ಸಾಯುವ ಸಾಧ್ಯತೆಗಳಿಗಿಂತ 33 ಪಟ್ಟು ಹೆಚ್ಚಾಗಿವೆ. ಆದರೂ ಸರಾಸರಿಯಲ್ಲಿ, ಪ್ರತಿಯೊಬ್ಬ ವೈದ್ಯನಿಗೆ ಸುಮಾರು 20 ಸೈನಿಕರ ಪ್ರಮಾಣವಿದೆ. ಅಂತೂ, ಸೈನಿಕರು ವೈಯಕ್ತಿಕ ಭದ್ರತೆಯನ್ನು ವೃದ್ಧಿಸುವುದಕ್ಕಿಂತ ಅದನ್ನು ಕಡಿಮೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.”
ಶಸ್ತ್ರಗಳ ಅಂತಾರಾಷ್ಟ್ರೀಯ ವ್ಯಾಪಾರ
ಶೀತಲ ಯುದ್ಧದ ಸಮಯದಲ್ಲಿ, ಸಂಬಂಧಗಳನ್ನು ಸಂಯೋಜಿಸಲು, ಮಿಲಿಟರಿ ಕಾರ್ಯಕೇಂದ್ರಗಳನ್ನು ಗಳಿಸಲು ಮತ್ತು ಅಧಿಕಾರವನ್ನು ಕಾಪಾಡಿಕೊಳ್ಳುವ ಸಲುವಾಗಿ, ಎರಡು ಮಹಾಶಕ್ತಿಗಳು ಮಿತ್ರರಾಜ್ಯಗಳಿಗೆ ಆಯುಧಗಳ ಮಾರಾಟ ಮಾಡಿದವು. ಅನೇಕ ರಾಷ್ಟ್ರಗಳ ಸೇನೆಗಳು ಮಹತ್ತರವಾಗಿ ಬೆಳೆದವು. ಉದಾಹರಣೆಗೆ, ಸದ್ಯದಲ್ಲಿ, 33 ದೇಶಗಳಲ್ಲಿ ಪ್ರತಿಯೊಂದು 1,000ಕ್ಕಿಂತಲೂ ಹೆಚ್ಚಿನ ಯುದ್ಧದ ಟ್ಯಾಂಕುಗಳನ್ನು ಪಡೆದಿದೆ.
ಈಗ ಶೀತಲ ಯುದ್ಧವು ಮುಗಿದಿರುವ ಕಾರಣ, ಶಸ್ತ್ರಗಳ ಮಾರಾಟಕ್ಕಾಗಿರುವ ರಾಜಕೀಯ ಹಾಗೂ ಯುದ್ಧೋಪಾಯದ ಸಮರ್ಥನೆಯು ಕಡಮೆಯಾಗಿದೆ. ಆದರೂ, ಆರ್ಥಿಕ ಪ್ರೇರಕಗಳು ಬಲವಾಗಿ ಉಳಿದಿರುತ್ತವೆ. ಇದು ಲಾಭ ಗಳಿಸುವ ಅವಕಾಶವಾಗಿದೆ! ಆದುದರಿಂದ, ಆಯುಧಗಳಿಗಾಗಿರುವ ದೇಶೀಯ ಬೇಡಿಕೆಯು ಕಡಮೆಯಾದಂತೆ, ಕೆಲಸಗಳನ್ನು ಸುರಕ್ಷಿತವಾಗಿ ಮತ್ತು ಆರ್ಥಿಕ ಆಡಳಿತವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವ ವಿಧವು, ವಿದೇಶಕ್ಕೆ ಶಸ್ತ್ರಗಳನ್ನು ಮಾರುವುದಾಗಿದೆ ಎಂದು ಶಸ್ತ್ರ ತಯಾರಕರು ತಮ್ಮ ಸರಕಾರಗಳನ್ನು ಮನಗಾಣಿಸುತ್ತಾರೆ.
ವರ್ಲ್ಡ್ ವಾಚ್ ಪತ್ರಿಕೆಯು ಹೇಳಿಕೆಯನ್ನೀಯುವುದು: “ವಿರೋಧಾಭಾಸವಾಗಿ, ಮಹಾಶಕ್ತಿಗಳು ತಮ್ಮ ದೊಡ್ಡ ನ್ಯೂಕ್ಲಿಯರ್ ಕ್ಷಿಪಣಿಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿರುವಂತೆಯೆ, ಬಹುಮಟ್ಟಿಗೆ ಖರೀದಿಸುವ ಯಾವುದೇ ವ್ಯಕ್ತಿಗೆ, ತಮ್ಮ ಪರಮಾಣ್ವೇತರ ಬಾಂಬುಗಳು ಮತ್ತು ಬಂದೂಕುಗಳಲ್ಲಿ ಹೆಚ್ಚನ್ನು ಮಾರುವ ವಿಧಗಳನ್ನು ಅವಸರದಿಂದ ಹುಡುಕುತ್ತಿದ್ದಾರೆ.” ಸಂಖ್ಯೆಗಳು ಎಷ್ಟಾಗಿವೆ? ಸ್ಟಾಕ್ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಘಕ್ಕನುಸಾರ, ವರ್ಷಗಳು 1988ರಿಂದ 1992ರ ವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಲ್ಪಟ್ಟ ಪರಮಾಣ್ವೇತರ ಆಯುಧಗಳ ಮೌಲ್ಯವು 15,100 ಕೋಟಿ ಡಾಲರುಗಳಾಗಿತ್ತು. ಅಮೆರಿಕವು ರಫ್ತು ಮಾಡುವ ಅತ್ಯಂತ ದೊಡ್ಡ ದೇಶವಾಗಿತ್ತು, ಹಿಂದಿನ ಸೋವಿಯಟ್ ಒಕ್ಕೂಟದ ದೇಶಗಳು ಅದನ್ನು ಹಿಂಬಾಲಿಸಿ ಬಂದವು.
ನ್ಯೂಕ್ಲಿಯರ್ ಬೆದರಿಕೆಯು ಉಳಿಯುತ್ತದೆ
ನ್ಯೂಕ್ಲಿಯರ್ ಬೆದರಿಕೆಯ ಕುರಿತೇನು? ಅಮೆರಿಕ ಮತ್ತು ಸೋವಿಯಟ್ ಒಕ್ಕೂಟವು (ಅಥವಾ ಅದರ ಉತ್ತರಾಧಿಕಾರಿ ರಾಜ್ಯಗಳು) 1987ರಲ್ಲಿ ಇಂಟರ್ಮೀಡಿಯೇಟ್ ರೇಂಜ್ ನ್ಯೂಕ್ಲಿಯರ್ ಫೋರ್ಸಸ್ ಟ್ರೀಟಿ ಮತ್ತು ವರ್ಷಗಳು 1991 ಮತ್ತು 1993ರಲ್ಲಿ ಎರಡು ಸ್ಟ್ರ್ಯಾಟೆಜಿಕ್ ಆರ್ಮ್ಸ್ ರಿಡಕ್ಷನ್ ಟ್ರೀಟೀಸ್ಗೆ (ಎಸ್ಟಿಎಆರ್ಟಿ) ಸಹಿಹಾಕಿದವು.
ಎಸ್ಟಿಎಆರ್ಟಿ ಸಂಧಾನಗಳು ಒಂದಕ್ಕಿಂತ ಹೆಚ್ಚು ಸ್ಫೋಟಕಶಿರವುಳ್ಳ ಭೂಆಧಾರಿತ ಕ್ಷಿಪಣಿಗಳನ್ನು ನಿಷೇಧಿಸಿದವು ಮತ್ತು ಇಸವಿ 2003ರೊಳಗಾಗಿ, ಒಂದು ಸ್ಫೋಟಕಶಿರವನ್ನು ಹೊರಬಲ್ಲ ಎಲ್ಲ ಸಾಧನಗಳ ಬಹುಮಟ್ಟಿಗೆ ಮುಕ್ಕಾಲು ಭಾಗದ ನಿರ್ಮೂಲನಕ್ಕಾಗಿ ಆಜ್ಞೆ ನೀಡಿದವು. ಆದರೆ, IIIನೆಯ ನ್ಯೂಕ್ಲಿಯರ್ ಜಾಗತಿಕ ಯುದ್ಧದ ಬೆದರಿಕೆಯು ಮಂಕಾಗಿ ಹೋಗಿರುವಾಗ, ಭೂಮಿಯ ಮೇಲಿರುವ ಎಲ್ಲ ಜೀವವನ್ನು ಹಲವಾರು ಬಾರಿ ನಾಶಮಾಡಲು ಸಾಕಾಗುವಷ್ಟು ನ್ಯೂಕ್ಲಿಯರ್ ಆಯುಧಗಳ ಹೇರಳವಾದ ಸಂಗ್ರಹವು ಉಳಿದಿರುತ್ತದೆ.
ಈ ಆಯುಧಗಳನ್ನು ಪ್ರತ್ಯೇಕಿಸುವುದು, ನ್ಯೂಕ್ಲಿಯರ್ ಕಳ್ಳತನಕ್ಕಾಗಿರುವ ಅವಕಾಶಗಳನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ರಷ್ಯಾ ದೇಶವು, ಕುಳಿಗಳೆಂದು ಕರೆಯಲ್ಪಡುವ ಪ್ಲೂಟೊನಿಯಂನ ಮುಷ್ಟಿ ಗಾತ್ರದ ಗೋಳಗಳನ್ನು ಅವುಗಳಿಂದ ಮರಳಿಪಡೆಯುತ್ತಾ, ಒಂದು ವರ್ಷಕ್ಕೆ ಸುಮಾರು 2,000 ಸ್ಫೋಟಕಶಿರಗಳನ್ನು ಕಳಚಿ, ಸಂಗ್ರಹಿಸುತ್ತಿದೆ. ತಯಾರಿಸಲು ಹೇರಳವಾದ ವೆಚ್ಚ ಮತ್ತು ತಂತ್ರಜ್ಞಾನವನ್ನು ಅವಶ್ಯಪಡಿಸುವ ಒಂದು ಸ್ಫೋಟಕಶಿರ ಕುಳಿಯು, ಒಂದು ನ್ಯೂಕ್ಲಿಯರ್ ಬಾಂಬಿನ ಮುಖ್ಯ ಅಂಶವಾಗಿದೆ. ಕುಳಿಗಳು ಸಾಮಾನ್ಯವಾಗಿ ಅಣುವಿಕಿರಣ ಕ್ರಿಯೆಯನ್ನು ತಡೆಯುವ ಉಕ್ಕಿನ ಪದರದಲ್ಲಿ ಇಡಲ್ಪಟ್ಟಿರುವುದರಿಂದ, ಊಹಿಸಬಹುದಾದ ವಿಧದಲ್ಲಿ ಕಳ್ಳನೊಬ್ಬನು ಒಂದು ಕುಳಿಯನ್ನು ತನ್ನ ಜೇಬಿನಲ್ಲಿ ಕೊಂಡೊಯ್ಯಬಹುದು. ಸಿದ್ಧವಾದ ಕುಳಿಯೊಂದನ್ನು ಪಡೆದ ಒಬ್ಬ ಭಯೋತ್ಪಾದಕನು, ಅತಿ ಶಕ್ತಿಶಾಲಿಯಾದ ಒಂದು ಬಾಂಬನ್ನು ಪುನಃ ಸೃಷ್ಟಿಸಲು ಅದನ್ನು ಆಸ್ಫೋಟನ ಅಳವಡಿಕೆಯಿಂದ ಸುತ್ತುಗಟ್ಟಸಾಧ್ಯವಿದೆ.
ಮತ್ತೊಂದು ಚಿಂತೆಯು, ಹೆಚ್ಚೆಚ್ಚು ದೇಶಗಳಿಗೆ ನ್ಯೂಕ್ಲಿಯರ್ ಆಯುಧಗಳ ಹರಡಿಕೆಯ ಬೆದರಿಕೆಯಾಗಿದೆ. ಐದು ರಾಷ್ಟ್ರಗಳು ಅಂಗೀಕೃತ ನ್ಯೂಕ್ಲಿಯರ್ ಶಕ್ತಿಗಳಾಗಿವೆ—ಚೈನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್ಡಮ್ ಮತ್ತು ಅಮೆರಿಕ—ಮತ್ತು ಇತರ ಹಲವಾರು ದೇಶಗಳು ಸಹ ನ್ಯೂಕ್ಲಿಯರ್ ಆಯುಧಗಳನ್ನು ಕ್ಷಿಪ್ರವಾಗಿ ಸಜ್ಜುಗೊಳಿಸುವ ಸಾಮರ್ಥ್ಯವುಳ್ಳ ದೇಶಗಳೆಂದು ನೆನಸಲಾಗಿದೆ.
ಹೆಚ್ಚೆಚ್ಚು ರಾಷ್ಟ್ರಗಳು ನ್ಯೂಕ್ಲಿಯರ್ ಆಯುಧಗಳನ್ನು ಪಡೆದುಕೊಂಡಂತೆ, ಯಾರಾದರೊಬ್ಬರು ಅವುಗಳನ್ನು ಉಪಯೋಗಿಸುವ ಸಾಧ್ಯತೆಯು ಹೆಚ್ಚಾಗುತ್ತದೆ. ಈ ಭಯಾನಕ ಆಯುಧಗಳ ಬಳಕೆಯ ವಿಷಯದಲ್ಲಿ ಭಯಪಡಲು ಜನರಿಗೆ ಸಮಂಜಸವಾದ ಕಾರಣವಿದೆ. ದ ಟ್ರಾನ್ಸ್ಫಾರ್ಮೆಷನ್ ಆಫ್ ವಾರ್ ಎಂಬ ಪುಸ್ತಕವು ಅದನ್ನು ಹೇಳುವಂತೆ, “ನ್ಯೂಕ್ಲಿಯರ್ ಆಯುಧಗಳ ಶಕ್ತಿಯು ಎಷ್ಟು ಅಪಾರವಾಗಿದೆಯೆಂದರೆ, ಅವು ಪರಮಾಣ್ವೇತರ ಆಯುಧಗಳನ್ನು ಒಂದು ಕ್ಷುದ್ರ ವಿಷಯದೋಪಾದಿ ಕಾಣುವಂತೆ ಮಾಡುತ್ತವೆ.”
ನಿರಸ್ತ್ರೀಕರಣ ಮತ್ತು ಶಾಂತಿ
ಆದರೆ ರಾಷ್ಟ್ರಗಳು ತಮ್ಮ ಅತಿಸೂಕ್ಷ್ಮವಾದ ನಾಶನದ ಆಯುಧಗಳನ್ನು ತೊಲಗಿಸುವುದಾದರೆ, ಆಗೇನು? ಅದೊಂದು ಶಾಂತಿಭರಿತ ಲೋಕದ ಖಾತ್ರಿಯನ್ನು ಕೊಡುವುದೊ? ಖಂಡಿತವಾಗಿಯೂ ಇಲ್ಲ. ಮಿಲಿಟರಿ ಇತಿಹಾಸಕಾರ ಜಾನ್ ಕೀಗನ್ ಗಮನಿಸುವುದು: “1945, ಆಗಸ್ಟ್ 9ರಂದಿನಿಂದ ನ್ಯೂಕ್ಲಿಯರ್ ಆಯುಧಗಳು ಯಾರನ್ನೂ ಕೊಂದಿರುವುದಿಲ್ಲ. ಆ ದಿನಾಂಕದಂದಿನಿಂದ ಯುದ್ಧದಲ್ಲಿ ಸತ್ತಿರುವ 5,00,00,000 ಜನರು, ಹೆಚ್ಚಾಗಿ, ಅಗ್ಗವಾದ, ರಾಶಿಗಟ್ಟಲೆ ತಯಾರಿಸಿದ ಆಯುಧಗಳಿಂದ ಮತ್ತು ಅದೇ ಅವಧಿಯಲ್ಲಿ ಲೋಕವನ್ನು ಮುಳುಗಿಸಿರುವ ಟ್ರಾನ್ಸಿಸ್ಟರ್ ರೇಡಿಯೊಗಳು ಮತ್ತು ಒಣಬ್ಯಾಟರಿಗಿಂತ ಸ್ವಲ್ಪ ಹೆಚ್ಚು ಬೆಲೆಯುಳ್ಳ ಕಡಿಮೆ ಶಕ್ತಿಯ ಮದ್ದುಗುಂಡಿನ ಮೂಲಕ ಕೊಲ್ಲಲ್ಪಟ್ಟಿದ್ದಾರೆ.”
ಉನ್ನತ ತಂತ್ರಜ್ಞಾನದ ಬಳಕೆಯಿಲ್ಲದೆ ಉತ್ಪಾದಿಸಲ್ಪಟ್ಟ ಆಯುಧಗಳ ಬಳಕೆಯ ಇತ್ತೀಚಿನ ಉದಾರಹಣೆಯು, ರುಆಂಡದಲ್ಲಾದ ಕಗ್ಗೊಲೆಯಾಗಿದೆ. ಆ ದೇಶದ ಕುರಿತು ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ (1994) ಹೇಳುವುದು: “ಹೆಚ್ಚಿನ ಜನರು ರೋಮನ್ ಕ್ಯಾಥೊಲಿಕರಾಗಿದ್ದಾರೆ. . . . ರೋಮನ್ ಕ್ಯಾತೊಲಿಕ್ ಮತ್ತು ಇತರ ಕ್ರೈಸ್ತ ಚರ್ಚುಗಳು ಹೆಚ್ಚಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ನಡೆಸುತ್ತವೆ.” ಆದರೂ, ರುಆಂಡದಲ್ಲಿ, ಸುಮಾರು ಐದು ಲಕ್ಷ ಮಂದಿ ಮಚ್ಚುಕತ್ತಿಗಳಿಂದ ಸಜ್ಜಿತರಾಗಿದ್ದ ಜನರಿಂದ ಕೊಲ್ಲಲ್ಪಟ್ಟರು. ಸ್ಪಷ್ಟವಾಗಿಯೇ, ಲೋಕ ಶಾಂತಿಯನ್ನು ತರಲು, ಪರಮಾಣ್ವೇತರ ಹಾಗೂ ನ್ಯೂಕ್ಲಿಯರ್ ಆಯುಧಗಳ ಇಳಿತಕ್ಕಿಂತ ಯಾವುದೊ ಹೆಚ್ಚಿನ ವಿಷಯವು ಬೇಕಾಗಿದೆ. ಈ ಲೋಕದ ಧರ್ಮಗಳ ಮೂಲಕ ಒದಗಿಸಲ್ಪಟ್ಟ ಬೋಧನೆಗಳಿಗಿಂತ ಬೇರೆಯಾದ ಯಾವುದೊ ವಿಷಯವು ಬೇಕಾಗಿದೆ.
ಕುಲ ಸಂಬಂಧವಾದ ಪ್ರತಿಸ್ಪರ್ಧೆಗಳು ವೃದ್ಧಿಸುತ್ತವೆ
ನಿರಾಶ್ರಿತರಿಗಾಗಿರುವ ಯುಎನ್ನ ಮುಖ್ಯ ನಿಯೋಗಿಯಾದ ಸಾಡಾಕೊ ಒಗಾಟಾ, ಇತ್ತೀಚೆಗೆ ಹೇಳಿದ್ದು: “ಶೀತಲ ಯುದ್ಧವಾದ ಕೂಡಲೆ, ಎಲ್ಲ ಸಮಸ್ಯೆಗಳು ಬಗೆಹರಿಸಲ್ಪಡುವವೆಂದು ನಾವು ನೆನೆಸಿದೆವು. ಶೀತಲ ಯುದ್ಧಕ್ಕೆ ಮತ್ತೊಂದು ರೂಪವಿತ್ತೆಂಬುದನ್ನು ನಾವು ಗ್ರಹಿಸಲಿಲ್ಲ—ಅದೇನೆಂದರೆ ಮಹಾಶಕ್ತಿಗಳು ತಮ್ಮ ಪ್ರಭಾವದ ವೈಯಕ್ತಿಕ ವಲಯಗಳ ಮೇಲೆ ಶಾಸನವನ್ನು ಒದಗಿಸಿದವು ಇಲ್ಲವೆ ಶಾಸನವನ್ನು ಕಡ್ಡಾಯ ಪಡಿಸಿದವು. . . . ಆದುದರಿಂದ ಈಗ, ಶೀತಲ ಯುದ್ಧದ ತರುವಾಯ, ನಾವು ಅತಿ ಹೆಚ್ಚು ಸಾಂಪ್ರದಾಯಿಕ, ಗೂಢವಾದ, ಬಹುಶಃ Iನೆಯ ಜಾಗತಿಕ ಯುದ್ಧದ ಮೊದಲಿದ್ದ ರೀತಿಯ ಕುಲ ಸಂಬಂಧವಾದ ಘರ್ಷಣೆಗಳ ತಲೆದೋರುವಿಕೆಯನ್ನು ನೋಡುತ್ತಿದ್ದೇವೆ.”
ಪುಲೆಟ್ಸರ್ ಬಹುಮಾನವನ್ನು ಪಡೆದ, ಇತಿಹಾಸಕಾರ ಮತ್ತು ಬರಹಗಾರರಾದ ಆರ್ಥರ್ ಸ್ಕಲೆಸಿಂಗರ್, ತದ್ರೀತಿಯ ಒಂದು ವಿಷಯವನ್ನು ಹೇಳುತ್ತಾರೆ: “ದ್ವೇಷಗಳ ಒಂದು ಮೊತ್ತವು ಇನ್ನೊಂದರ ಸ್ಥಾನಭರ್ತಿ ಮಾಡುತ್ತದೆ. ಪೂರ್ವ ಯೂರೋಪ್ ಮತ್ತು ಹಿಂದಿನ ಸೋವಿಯಟ್ ಒಕ್ಕೂಟದಲ್ಲಿನ ಭಾವನಾತ್ಮಕ ದಮನದ ಬಲವಾದ ಹಿಡಿತದ ಎತ್ತುವಿಕೆಯು, ಇತಿಹಾಸದಲ್ಲಿ ಮತ್ತು ಸ್ಮರಣೆಯಲ್ಲಿ ಆಳವಾಗಿ ಬೇರೂರಿರುವ ಕುಲ ಸಂಬಂಧವಾದ, ರಾಷ್ಟ್ರೀಯ, ಧಾರ್ಮಿಕ ಮತ್ತು ಭಾಷಾ ಸಂಬಂಧವಾದ ಅದುಮಿಟ್ಟ ವೈರತ್ವಗಳನ್ನು ಬಿಡುಗಡೆಗೊಳಿಸುತ್ತದೆ. . . . 20ನೆಯ ಶತಮಾನವು ಭಾವನೆಗಳ ಯುದ್ಧವಾಗಿ ಪರಿಣಮಿಸಿದ್ದರೆ, 21ನೆಯ ಶತಮಾನವು ಕುಲ ಸಂಬಂಧವಾದ ಯುದ್ಧದ ಶತಮಾನದಂತೆ ಆರಂಭಿಸುತ್ತದೆ.”
1989 ಮತ್ತು 1992ರ ನಡುವೆ, ವಿಶ್ವ ಸಂಸ್ಥೆಯ ಎಣಿಕೆಗನುಸಾರ, 82 ಸಶಸ್ತ್ರ ಘರ್ಷಣೆಗಳು ನಡೆದವು, ಅವುಗಳಲ್ಲಿ ಹೆಚ್ಚಿನವು ವಿಕಾಸಶೀಲ ದೇಶಗಳೊಳಗೆ ನಡೆಸಲ್ಪಟ್ಟವು. 1993ರ ಅವಧಿಯಲ್ಲಿ, 42 ದೇಶಗಳಲ್ಲಿ ದೊಡ್ಡ ಘರ್ಷಣೆಗಳು ನಡೆದವು ಮತ್ತು ಇನ್ನೂ 37 ದೇಶಗಳು ರಾಜಕೀಯ ಹಿಂಸಾಚಾರವನ್ನು ಅನುಭವಿಸಿದವು. ಈ ನಡುವೆ, ವಿಶ್ವ ಸಂಸ್ಥೆಯು—ಅದರ ಆಯವ್ಯಯವು ಪರಿಮಿತಿಯ ವರೆಗೆ ಎಳೆಯಲ್ಪಟ್ಟು—ಕೇವಲ 17 ಕಾರ್ಯಾಚರಣೆಗಳಲ್ಲಿ ಶಾಂತಿಯನ್ನು ತರಲು ಬಹಳಷ್ಟು ಸಫಲತೆಯಿಲ್ಲದೆ ಹೆಣಗಾಡಿತು. ಒಂದು ಶಾಂತಿಭರಿತ ಲೋಕಕ್ಕಾಗಿ ಮಾನವಕುಲವು ಬೇರೆ ಎಲ್ಲಾದರೂ ನೋಡಬೇಕೆಂಬುದು ಸ್ಪಷ್ಟ.
ಅಸ್ಪಷ್ಟವಾಗಿ ಕಾಣುವ ಸಮಸ್ಯೆಗಳು
ಹೆಚ್ಚಾಗಿ, ಭವಿಷ್ಯತ್ತಿನ ಕಡೆಗೆ ಆಶಾವಾದದಿಂದ ನೋಡುವ ಬದಲಿಗೆ ಅನೇಕರು ಅಶುಭ ಸೂಚಿಸುತ್ತಾರೆ. ದಿ ಆ್ಯಟ್ಲ್ಯಾಂಟಿಕ್ ಮಂತ್ಲಿ ಎಂಬ ಪತ್ರಿಕೆಯ ಫೆಬ್ರವರಿ 1994ರ ಸಂಚಿಕೆಯ ಮುಖಪುಟವು, ಮುಂಬರುವ ದಶಕಗಳಿಗಾಗಿರುವ ಒಂದು ಮುನ್ಸೂಚನೆಯನ್ನು ಸಾರಾಂಶಿಸುತ್ತದೆ: “ಪರಿಸರೀಯ ಹಾಗೂ ಸಾಮಾಜಿಕ ವಿಪತ್ತಿನಿಂದ ಬರುವ ನಿರಾಶ್ರಿತರ ಭರತದಿಂದಾಗಿ ರಾಷ್ಟ್ರಗಳು ಕುಸಿದುಬೀಳುತ್ತವೆ. . . . ಯುದ್ಧಗಳು ವಿರಳವಾದ ಸಂಪನ್ಮೂಲಗಳಿಗಾಗಿ, ವಿಶೇಷವಾಗಿ ನೀರಿಗಾಗಿ ನಡೆಸಲ್ಪಡುತ್ತವೆ, ಮತ್ತು ರಾಜ್ಯರಹಿತ ಶಸ್ತ್ರಸಜ್ಜಿತ ಲೂಟಿ ಮಾಡುವವರ ಗುಂಪುಗಳು, ಗಣ್ಯರ ಖಾಸಗಿ ಭದ್ರತಾ ಪಡೆಗಳೊಂದಿಗೆ ಘರ್ಷಿಸಿದಂತೆ, ಸ್ವತಃ ಯುದ್ಧವು ಅಪರಾಧದೊಂದಿಗೆ ನಿರಂತರವಾಗುತ್ತದೆ.”
ಬಾಳುವ ಶಾಂತಿಯು ಅಪ್ರಾಪ್ಯವಾಗಿದೆ ಎಂಬುದನ್ನು ಇದು ಅರ್ಥೈಸುತ್ತದೊ? ಖಂಡಿತವಾಗಿಯೂ ಇಲ್ಲ! ನಾವು ಭವಿಷ್ಯತ್ತಿನ ಕಡೆಗೆ ಭರವಸೆಯಿಂದ ಏಕೆ ನೋಡಸಾಧ್ಯವಿದೆ ಎಂಬುದಕ್ಕೆ ಕಾರಣಗಳನ್ನು ಮುಂದಿನ ಲೇಖನವು ತೋರಿಸುತ್ತದೆ.
[ಪುಟ 6 ರಲ್ಲಿರುವ ಚೌಕ]
ಧರ್ಮ—ಶಾಂತಿಗಾಗಿರುವ ಒಂದು ಪ್ರೇರಣೆಯೊ?
ರಾಷ್ಟ್ರಗಳು ಯುದ್ಧಕ್ಕೆ ಹೋಗುವಾಗ, ಲೋಕದ ಧರ್ಮಗಳು ಶಾಂತಿ ಮತ್ತು ಸಹೋದರತ್ವದ ಬೋಧನೆಗಳನ್ನು ತೊರೆದುಬಿಡುತ್ತವೆ. Iನೆಯ ಜಾಗತಿಕ ಯುದ್ಧದ ಸಮಯದಲ್ಲಿದ್ದ ಸನ್ನಿವೇಶದ ಕುರಿತು, ಬ್ರಿಟಿಷ್ ದಳಪತಿ, ಫ್ರ್ಯಾಂಗ್ ಪಿ. ಕ್ರೋಜರ್ ಹೇಳಿದ್ದು: “ಕ್ರೈಸ್ತ ಚರ್ಚುಗಳು ನಮ್ಮಲ್ಲಿರುವ ಅತ್ಯುತ್ತಮ ರಕ್ತದಾಹ ನಿರ್ಮಾಣಿಕರು, ಮತ್ತು ನಾವು ಅವುಗಳ ಯಥೇಷ್ಟವಾದ ಉಪಯೋಗವನ್ನು ಮಾಡಿದ್ದೇವೆ.”
ಯುಗಗಳ ಉದ್ದಕ್ಕೂ ಯುದ್ಧದಲ್ಲಿ ಧರ್ಮದ ಪಾತ್ರವು ಒಂದೇ ಆಗಿದೆ. ಕ್ಯಾಥೊಲಿಕ್ ಇತಿಹಾಸಕಾರ ಈ. ಐ. ವಾಟ್ಕಿನ್ ಅಂಗೀಕರಿಸಿದ್ದು: “ಇದನ್ನು ಒಪ್ಪಿಕೊಳ್ಳುವುದು ಸಂಕಟಕರವಾಗಿದ್ದರೂ, ತಮ್ಮ ದೇಶದ ಸರಕಾರದ ಮೂಲಕ ನಡೆಸಲ್ಪಟ್ಟ ಎಲ್ಲ ಯುದ್ಧಗಳನ್ನು ಬಿಷಪರು ಸುಸಂಗತವಾಗಿ ಬೆಂಬಲಿಸಿದ್ದಾರೆಂಬ ಐತಿಹಾಸಿಕ ನಿಜತ್ವವನ್ನು, ನಾವು ಕೃತ್ರಿಮ ಜ್ಞಾನವೃದ್ಧಿ ಅಥವಾ ಅಪ್ರಾಮಾಣಿಕ ನಿಷ್ಠೆಯ ಸಲುವಾಗಿ ಅಲ್ಲಗಳೆಯಲು ಅಥವಾ ಕಡೆಗಣಿಸಲು ಸಾಧ್ಯವಿಲ್ಲ.” ಮತ್ತು ಕೆನಡದ ವ್ಯಾನ್ಕೂವರ್ನ ಸನ್ ಪತ್ರಿಕೆಯ ಒಂದು ಸಂಪಾದಕೀಯವು ಗಮನಿಸಿದ್ದು: “ಚರ್ಚು ಧ್ವಜವನ್ನು ಹಿಂಬಾಲಿಸುತ್ತದೆಂಬ ವಿಷಯವು ಬಹುಶಃ ಸಕಲ ಸುಸಂಘಟಿತ ಧರ್ಮದ ಬಲಹೀನತೆಯಾಗಿದೆ. . . . ದೇವರು ಪ್ರತಿಯೊಂದು ಪಕ್ಷದ ಕಡೆಗಿರುವ ವಾದವಿಲ್ಲದೆ, ಯಾವ ಯುದ್ಧವು ತಾನೇ ಎಂದಾದರೂ ನಡೆಸಲ್ಪಟ್ಟಿದೆ?”
ಸ್ಪಷ್ಟವಾಗಿಯೇ, ಶಾಂತಿಗಾಗಿ ಒಂದು ಪ್ರೇರಣೆಯಾಗಿರುವ ಬದಲಿಗೆ, ಲೋಕದ ಧರ್ಮಗಳು—ರುಆಂಡದಲ್ಲಿನ ಕಗ್ಗೊಲೆಯ ಮೂಲಕ ಬಹಳಷ್ಟು ಶಕ್ತಿಶಾಲಿಯಾಗಿ ದೃಷ್ಟಾಂತಿಸಲ್ಪಟ್ಟಂತೆ—ಯುದ್ಧಗಳನ್ನು ಮತ್ತು ಕೊಲ್ಲುವಿಕೆಯನ್ನು ಪ್ರವರ್ಧಿಸಿವೆ.
[ಪುಟ 7 ರಲ್ಲಿರುವ ಚೌಕ]
ಯುದ್ಧದ ನಿರರ್ಥಕತೆ
1936ರಲ್ಲಿ ಪ್ರಕಟವಾದ ಐ ಫೌಂಡ್ ನೊ ಪೀಸ್ ಎಂಬ ಪುಸ್ತಕದಲ್ಲಿ, ವಿದೇಶಿ ಸುದ್ದಿಗಾರ ವೆಬ್ ಮಿಲ್ಲರ್ ಬರೆದುದು: “ಆಶ್ಚರ್ಯಕರವಾಗಿ, [Iನೆಯ ಜಾಗತಿಕ ಯುದ್ಧ]ದ ಘೋರ ಭೀತಿಯು ಅದರ ಎಲ್ಲ ಅತಿಶಯವಾದ ಜುಗುಪ್ಸೆ ಮತ್ತು ನಿರರ್ಥಕತೆಯೊಂದಿಗೆ, ನಿಖರವಾಗಿ ಅದು ಪೂರ್ತಿಗೊಂಡಾದ ಬಳಿಕ ಎಂಟು ವರ್ಷಗಳ ತನಕ, ನನ್ನ ಮೇಲೆ ಬಲವಾದ ಪ್ರಭಾವವನ್ನು ಬೀರಲಿಲ್ಲ.” ಆ ಸಂದರ್ಭದಲ್ಲಿ ಅವನು, ಎಲ್ಲಿ 10,50,000 ಪುರುಷರು ಮಡಿದಿದ್ದರೆಂದು ಪ್ರತಿಪಾದಿಸಿದನೊ, ಆ ವರ್ಡನ್ನ ರಣಭೂಮಿಯನ್ನು ಪುನಃ ಸಂದರ್ಶಿಸಿದ್ದನು.
“ಯುದ್ಧದ ಸಮಯದಲ್ಲಿ ನಾನು ಇತರ ಕೋಟ್ಯಂತರ ಜನರೊಂದಿಗೆ ಮರುಳುಗೊಳಿಸಲ್ಪಟ್ಟಿದ್ದೆ,” ಎಂದು ಮಿಲ್ಲರ್ ಬರೆದನು. “ಜಾಗತಿಕ ಯುದ್ಧವು ಹೊಸ ಯುದ್ಧಗಳನ್ನು ಹುಟ್ಟಿಸುವುದರಲ್ಲಿ ಮಾತ್ರ ಯಶಸ್ಸು ಪಡೆದಿತ್ತು. ಎಂಬತ್ತೈದು ಲಕ್ಷ ಪುರುಷರು ವ್ಯರ್ಥವಾಗಿ ಮಡಿದಿದ್ದರು, ಕೋಟಿಗಟ್ಟಲೆ ಜನರು ನುಡಿಯಲಸಾಧ್ಯವಾದ ಭೀತಿಗಳನ್ನು ಅನುಭವಿಸಿದ್ದರು, ಮತ್ತು ಹತ್ತಾರು ಕೋಟಿ ಜನರು ದುಃಖ, ಹಾನಿ ಮತ್ತು ಅಸಂತೋಷಕ್ಕೆ ಈಡಾಗಿದ್ದರು. ಮತ್ತು ಇದೆಲ್ಲವು ಒಂದು ಭಾರಿ ಭ್ರಮೆಯಲ್ಲಿ ಸಂಭವಿಸಿತ್ತು.”
ಈ ಪುಸ್ತಕವು ಪ್ರಕಟಗೊಂಡ ಮೂರು ವರ್ಷಗಳ ತರುವಾಯ, IIನೆಯ ಜಾಗತಿಕ ಯುದ್ಧವು ಆರಂಭಿಸಿತು. ದ ವಾಷಿಂಗ್ಟನ್ ಪೋಸ್ಟ್ ಗಮನಿಸಿದ್ದು: “ನಮ್ಮ 20ನೆಯ ಶತಮಾನದ ಯುದ್ಧಗಳು ಏಕರೂಪವಾಗಿ ಯೋಧರು ಮತ್ತು ನಾಗರಿಕರ ವಿರುದ್ಧವಾಗಿ ‘ಸಂಪೂರ್ಣ ಯುದ್ಧಗಳು’ ಆಗಿವೆ. . . . ಗತಿಸಿಹೋಗಿರುವ ಶತಮಾನಗಳ ಅನಾಗರಿಕ ಯುದ್ಧಗಳು ಹೋಲಿಕೆಯಲ್ಲಿ ಓಣಿಯ ಜಗಳಗಳಾಗಿದ್ದವು.” ಒಬ್ಬ ಅಧಿಕಾರಿಯ ಅಂದಾಜಿಗನುಸಾರ, 1914ರಂದಿನಿಂದ ಯುದ್ಧಗಳಲ್ಲಿ ಮತ್ತು ನಾಗರಿಕ ದಂಗೆಗಳಲ್ಲಿ 19.7 ಕೋಟಿ ಜನರು ಮಡಿದಿದ್ದಾರೆ.
ಆದರೂ, ಮಾನವರ ಸಕಲ ಯುದ್ಧಗಳು ಮತ್ತು ದಂಗೆಗಳು ಶಾಂತಿಯನ್ನಾಗಲಿ ಸಂತೋಷವನ್ನಾಗಲಿ ತಂದಿಲ್ಲ. ದ ವಾಷಿಂಗ್ಟನ್ ಪೋಸ್ಟ್ ಹೇಳಿದಂತೆ: “ಅಶಾಂತರಾದ ಕೋಟಿಗಟ್ಟಲೆ ಜನರನ್ನು, ಈ ಶತಮಾನದಲ್ಲಿನ ಯಾವುದೇ ರಾಜಕೀಯ ಅಥವಾ ಆರ್ಥಿಕ ವ್ಯವಸ್ಥೆಯು ಇಷ್ಟರ ತನಕ, ಶಾಂತಗೊಳಿಸಿರುವುದಿಲ್ಲ ಅಥವಾ ತೃಪ್ತಿಪಡಿಸಿರುವುದಿಲ್ಲ.”
[ಪುಟ 8 ರಲ್ಲಿರುವ ಚಿತ್ರ]
ರುಆಂಡದಲ್ಲಿ ವಧಿಸಲ್ಪಟ್ಟ—ಅನೇಕರು ತಮ್ಮ ಸ್ವಂತ ಧರ್ಮದ ಸದಸ್ಯರಿಂದ—ನೂರಾರು ಸಾವಿರ ಜನರಲ್ಲಿ ಈ ತಾಯಿಯು ಒಬ್ಬಳು
[ಕೃಪೆ]
Albert Facelly/Sipa Press