ಮಿಲಿಟರಿ ಇತಿಹಾಸಗಾರನೋಪಾದಿ ನನ್ನ ಪುನರಾಲೋಚನೆಗಳು
ತಾರೀಖು, ಆಗಸ್ಟ್ 25, 1944. ಸ್ಥಳ: ಪ್ಯಾರಿಸ್, ಫ್ರಾನ್ಸ್. ನಮ್ಮ ಜೀಪ್ ವಾಹನ ವಿಶಾಲವಾದ ಶಾಮ್ಸ್ಎಲೀಜೆ ಮಾರ್ಗವಾಗಿ ಹೋಗುತ್ತಿದ್ದಾಗ, ಅವಿತುಕೊಂಡಿದ್ದ ನಾಜಿ ಸೈನಿಕರ ಗುಂಡುಗಳು ರಸ್ತೆಯಲ್ಲಿ ಅತ್ತಿತ್ತು ಹಾರಿಹೋಗುತ್ತಿದ್ದಾಗ, ಅನೇಕ ವೇಳೆ ನಾವು ಹೊರಗೆ ಬಂದು ದ್ವಾರಗಳಲ್ಲಿ ಅಡಗಿ ಕೂತುಕೊಳ್ಳಬೇಕಾಯಿತು.
ಆ ದಿನ, IIನೆಯ ಲೋಕಯುದ್ಧದ ಸಮಯದಲ್ಲಿ ಹಿಟ್ಲರನ ಸೈನ್ಯಗಳ ಕೈಯಿಂದ ಪ್ಯಾರಿಸಿನ ವಿಮೋಚನೆಯ ದಿನವಾಗಿತ್ತು. ಮತ್ತು ಆ ನಗರವನ್ನು ಪ್ರಥಮವಾಗಿ ಪ್ರವೇಶಿಸಿದ ಅಮೆರಿಕನರಲ್ಲಿ ನಾನು ಒಬ್ಬನಾಗಿದ್ದೆ. ಫ್ರೆಂಚ್ ಪುರುಷ ಮತ್ತು ಸ್ತ್ರೀಯರ ಉತ್ಸಾಹಪೂರಿತ ಗುಂಪುಗಳು ನಮ್ಮನ್ನು ವಿಮೋಚಕರನ್ನಾಗಿ ಸ್ವಾಗತಿಸಲು ರಸ್ತೆಗಳಿಗೆ ಹರಿದು ಬಂದವು. ನಾವು ಆ ರಾತ್ರಿಯನ್ನು ಒಂದು ಲಕ್ಸುರಿ ಹೋಟೆಲಿನಲ್ಲಿ, ಅದೇ ದಿನ ಬೆಳಗ್ಗೆ ಜರ್ಮನ್ ಉನ್ನತಾಧಿಕಾರಿಗಳು ಬಿಟ್ಟು ಹೋಗಿದ್ದ ಹೋಟೆಲಿನಲ್ಲಿ ಕಳೆದೆವು.
ಜನರಲ್ ಜಾರ್ಜ್ ಎಸ್. ಪ್ಯಾಟನ್ ಜೂನಿಯರ್ ಎಂಬವರು ಸೇನಾಪತಿಯಾಗಿದ್ದ ಯು.ಎಸ್. ತರ್ಡ್ ಆರ್ಮಿಯ ಚಲನವಲನಗಳನ್ನು ವರದಿಮಾಡುವ ಒಂದು ಕದನ ಐತಿಹಾಸಿಕ ತಂಡದ ಸದಸ್ಯನಾಗಿ ನಾನು ಯೂರೋಪಿನಲ್ಲಿದ್ದೆ.
ಯುದ್ಧವು ಎತ್ತಿದ ಪ್ರಶ್ನೆಗಳು
ಪ್ಯಾರಿಸನ್ನು ಪ್ರವೇಶಿಸುವ ಕೆಲವು ದಿನಗಳ ಮೊದಲು, ಜರ್ಮನ್ ರಕ್ಷಾಕವಚವಿದ್ದ ವಾಹನಗಳ ಸುಟ್ಟ ಒಡಲುಗಳನ್ನು ಇತ್ತೀಚೆಗೆ ತೊಲಗಿಸಿದ್ದ ಅಗಲಕಿರಿದಾದ ರಸ್ತೆಗಳಲ್ಲಿ ವಾಹನ ನಡೆಸಿಕೊಂಡು ಹೋದೆವು. ಅಮೆರಿಕದ ಸೈನ್ಯಗಳು ಇತ್ತೀಚೆಗೆ ವಶಪಡಿಸಿಕೊಂಡಿದ್ದ ಕಾಡಿನಲ್ಲಿದ್ದ ಒಂದು ಭದ್ರ ಸ್ಥಳದಲ್ಲಿ ನಾವು ತುಸು ನಿಂತೆವು. ಜರ್ಮನ್ ಸೈನಿಕರ ತಿರುಚಿ ಛಿದ್ರವಾಗಿದ್ದ ದೇಹಗಳು ಅಲ್ಲಲ್ಲಿ ಬಿದ್ದಿದ್ದವು. ಅವರ ಬಿಗಿಪಟ್ಟಿಯ ಬಕ್ಲ್ಗಳಲ್ಲಿ ಸಾಮಾನ್ಯವಾಗಿದ್ದ “ದೇವರು ನಮ್ಮೊಂದಿಗಿದ್ದಾನೆ” ಎಂಬ ಬರಹವಿತ್ತು. ಆದರೂ, ಹತ್ತಿರದ ಒಂದು ಕಲ್ಲಿನ ಗೋಡೆಯ ಮೇಲೆ ಒಬ್ಬ ಜರ್ಮನ್ ಸೈನಿಕನು, “ನಾಯಕನೇ [ಹಿಟ್ಲರ್], ನಮ್ಮೊಂದಿಗಿರು!” ಎಂದು ಬರೆದಿದ್ದನು.
ಆ ಎರಡು ಹೇಳಿಕೆಗಳು ನನ್ನ ಮನಸ್ಸಿನ ಮೇಲೆ ಅಳಿಸಲಾಗದಂತೆ ಅಚ್ಚೊತ್ತಿದವು. ಒಂದು ಪಕ್ಕದಲ್ಲಿ, ನಾಜಿ ಸರಕಾರವು ದೇವರು ಅವರೊಂದಿಗಿದ್ದಾನೆಂದು ಪ್ರತಿಪಾದಿಸಿದರೂ ಇನ್ನೊಂದು ಪಕ್ಕದಲ್ಲಿ, ಒಬ್ಬ ಸೈನಿಕನು ನಾಯಕನಾದ ಹಿಟ್ಲರನು ತನ್ನನ್ನು ರಕ್ಷಿಸುವಂತೆ ಬೇಡಿಕೊಂಡಿದ್ದನು. ಈ ವಿರೋಧಾಭಾಸ ಜರ್ಮನರಿಗೆ ವಿಶಿಷ್ಟವಾಗಿರಲಿಲ್ಲವೆಂದು ನಾನು ಗ್ರಹಿಸಿದೆ. ಈ ಭಯಂಕರ ಹೋರಾಟದಲ್ಲಿ ಎರಡು ಪಕ್ಕಗಳಲ್ಲಿಯೂ ಇದು ಪ್ರತಿನಿಧಿರೂಪದ್ದಾಗಿತ್ತು. ಆದುದರಿಂದ ಹೀಗೆ ಪ್ರಶ್ನೆಯನ್ನು ಕೇಳಿಕೊಂಡೆ: ‘ದೇವರು ಯುದ್ಧಗಳಲ್ಲಿ ಪಕ್ಷ ವಹಿಸುತ್ತಾನೊ? ದೇವರು ಯಾರ ಪಕ್ಷದಲ್ಲಿದ್ದಾನೆ?’
ಯುದ್ಧಗಳು ಮತ್ತು ಯುದ್ಧಗಳ ಅಶುಭ ಸೂಚನೆಗಳು
ಅಮೆರಿಕವು ಒಂದನೆಯ ಲೋಕ ಯುದ್ಧವನ್ನು ಪ್ರವೇಶಿಸಿದ ವರ್ಷವಾದ 1917ರಲ್ಲಿ ನಾನು ಮಾಂಟ್ಯಾನದ ಬಟ್ನಲ್ಲಿ ಹುಟ್ಟಿದೆ. ಒಂದು ಖಾಸಗಿ ಅಕಾಡೆಮಿಯಿಂದ 1936ರಲ್ಲಿ ಪದವಿ ಪಡೆದ ಮೇಲೆ, ನಾನು ಕ್ಯಾಲಿಫೋರ್ನಿಯದ ಸ್ಟಾನ್ಫರ್ಡ್ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸಿದೆ. ಆದರೂ, ಭೂಗೋಲಾದ್ಯಂತ ನಡೆಯುತ್ತಿದ್ದ ಚುರುಕುಗೊಳಿಸುವ ಘಟನೆಗಳಿಗೆ ಹೋಲಿಸುವಾಗ ಅಗತ್ಯವಿದ್ದ ಒಂದನೆಯ ವರ್ಷದ ಪಾಠಕ್ರಮವು ನನಗೆ ಬೇಸರ ಬರಿಸಿತು. ಜಪಾನು ಚೈನಕ್ಕೆ ಮುತ್ತಿಗೆ ಹಾಕಿತ್ತು. ಮುಸೊಲೀನಿ ಇಥಿಯೋಪ್ಯವನ್ನು ಗೆದಿದ್ದನ್ದು, ಮತ್ತು ಸ್ಪ್ಯಾನಿಷ್ ಆಂತರಿಕ ಯುದ್ಧ ಅತ್ಯುಗ್ರವಾಗಿ ನಡೆಯುತ್ತಿತ್ತು. ಆ ಯುದ್ಧದಲ್ಲಿ ನಾಜಿಗಳು, ಫ್ಯಾಸಿಸ್ಟರು ಮತ್ತು ಕಮ್ಯೂನಿಸ್ಟರು IIನೆಯ ಲೋಕ ಯುದ್ಧಕ್ಕೆ ಪೂರ್ವಾಭಿನಯವಾಗಿ ತಮ್ಮ ಆಯುಧಗಳನ್ನು ಮತ್ತು ಯುದ್ಧ ಕೌಶಲ್ಯಗಳನ್ನು ಪರೀಕ್ಷಿಸುತ್ತಿದ್ದರು. ಆಗ ಜನಾಂಗ ಸಂಘವು ನಿರ್ಬಲಾವಸ್ಥೆಯಲ್ಲಿ ಕುಳಿತಿತ್ತು.
ಎರಡು ಷಾಣ್ಮಾಸಿಕ ವ್ಯಾಸಂಗ ಕಾಲಗಳು ಕಳೆದ ಬಳಿಕ ನಾನು ಕಾಲೇಜನ್ನು ಬಿಟ್ಟು, ಅದರ ಬದಲಿಗೆ, ನನ್ನ ವಿದ್ಯಾಭ್ಯಾಸಕ್ಕಾಗಿ ಬದಿಗಿಟ್ಟಿದ್ದ ಹಣವನ್ನು ಯೂರೋಪ್ ಮತ್ತು ಆಫ್ರಿಕಕ್ಕೆ ಪ್ರಯಾಣಿಸಲು ತಂದೆಯ ಒಪ್ಪಿಗೆಯನ್ನು ಪಡೆದೆ. ನಾನು 1938ರ ಶರತ್ಕಾಲದಲ್ಲಿ ಜರ್ಮನ್ ಹಡಗಾದ ಡಾಯ್ಜ್ಲಾಂಟ್ನಲ್ಲಿ ಅಟ್ಲ್ಯಾಂಟಿಕ್ ಸಾಗರವನ್ನು ದಾಟಿದೆ. ಹಡಗಿನಲ್ಲಿ ಯುವ ಜರ್ಮನ್ ಅಧಿಕಾರಿಗಳೊಡನೆ ಹಿಟ್ಲರನ ಜರ್ಮನಿಯ ವಿರುದ್ಧ ಮತ್ತು ಬ್ರಿಟಿಷ್ ಮತ್ತು ಫ್ರೆಂಚ್ ಸಾಮ್ರಾಜ್ಯಗಳ ಸಂಬಂಧಸೂಚಕ ಬಲಗಳ ಕುರಿತು ದೀರ್ಘ ಚರ್ಚೆಗಳನ್ನು ನಡೆಸಿದೆ. ಪ್ಯಾರಿಸಿನಲ್ಲಿ, ಜನರು ಹಿಟ್ಲರನ ಅತಿ ಇತ್ತೀಚಿನ ಬೆದರಿಕೆಗಳು, ಬಡಾಯಿಗಳು ಮತ್ತು ವಾಗ್ದಾನಗಳ ಕುರಿತು ಮಾತಾಡಿದರು. ಆದರೂ ಜೀವನ ದಿನನಿತ್ಯದಂತೆ ಸಾಗುತ್ತಿತ್ತು. ಆಫ್ರಿಕದ ಟ್ಯಾನ್ಜಿಯರಿಗೆ ಭೇಟಿ ಕೊಟ್ಟಾಗ, ಜಿಬ್ರಾಲ್ಟರ್ ಜಲಸಂಧಿಯಾಚೆಗೆ, ಒಳಯುದ್ಧ ನಡೆಯುತ್ತಿದ್ದ ಸ್ಪೆಯ್ನ್ನ ಕದನದ ಸದ್ದು ಆಗಾಗ ನನಗೆ ಕೇಳಿ ಬರುತ್ತಿತ್ತು.
ನಾನು 1939ರಲ್ಲಿ ಅಮೆರಿಕಕ್ಕೆ ಹಿಂದಿರುಗಿದಾಗ ನನಗೆ ನಮ್ಮ ಕಾಲಗಳ ಕುರಿತು ಅಶುಭಸೂಚನೆಗಳು ಕಂಡುಬರುತ್ತಿತ್ತು. ಜಪಾನೀಯರು ಪರ್ಲ್ ಹಾರ್ಬರನ್ನು 1941ರ ಡಿಸೆಂಬರ್ನಲ್ಲಿ ಆಕ್ರಮಿಸಿ ಹೀಗೆ ಅಮೆರಿಕವನ್ನು IIನೆಯ ಲೋಕ ಯುದ್ಧದೊಳಗೆ ಬರಿಸಿದಾಗ, ನಾನು ಅಯೋಧನಾಗಿ ಆರ್ಮಿ ಟ್ರಾನ್ಸ್ಪೋರ್ಟ್ ಸರ್ವಿಸನ್ನು ಸೇರಿದೆ. ನಾನು 1942ರಲ್ಲಿ ಅಲಾಸ್ಕದಲ್ಲಿದ್ದಾಗ ನನಗೆ ಸೇನೆಕರೆ ಸಂಘದ ರಾಯಸ ದೊರೆಯಿತು.
ಬ್ರಿಟಿಷ್ ದ್ವೀಪಗಳಿಗೆ
ಮನೆಗೆ ಭೇಟಿ ಕೊಟ್ಟ ಬಳಿಕ, ನಾನು ಸೈನ್ಯಕ್ಕೆ ಸೇರಿಸಲ್ಪಟ್ಟು ಒಂದು ವರ್ಷ ಕಾಲ ಅಮೆರಿಕದಲ್ಲಿ ಇರಿಸಲ್ಪಟ್ಟೆ. ಆ ಬಳಿಕ ನನ್ನನ್ನು ಇಂಗ್ಲೆಂಡಿಗೆ ರವಾನಿಸಲಾಯಿತು. ನಮ್ಮ ಬೆಂಗಾವಲಿದ್ದ ಹಡಗುಗಳು ಅಮೆರಿಕದ ಪೂರ್ವ ತೀರವನ್ನು 1944ರ ವಸಂತಕಾಲದಲ್ಲಿ ಬಿಟ್ಟು ಹೋದವು. ನನಗೆ ಯುದ್ಧದ ಪ್ರಥಮ ರುಚಿಯು, ಒಂದು ಜಲಾಂತರ್ಗಾಮಿ ನಾವೆ ನಮ್ಮ ಪಕ್ಕದಲ್ಲಿದ್ದ ಹಡಗನ್ನು ಮುಳುಗಿಸಿದಾಗ ದೊರೆಯಿತು. ನಮ್ಮ ಹಡಗುಗಳ ತಂಡವು ಪ್ರತ್ಯೇಕಿಸಲ್ಪಟ್ಟು, ಅಲ್ಲಿಂದ ಲಿವರ್ಪೂಲ್ ತನಕ ಪ್ರತಿ ಹಡಗು ಇತರ ಹಡಗುಗಳ ಸಹಾಯವಿಲ್ಲದೆ ಹೋಗಬೇಕಾಯಿತು.
ಇಂಗ್ಲೆಂಡಿನ ಒಂದು ಸೇನಾ ಉಗ್ರಾಣದಲ್ಲಿ ನೇಮಕಕ್ಕಾಗಿ ಕಾಯುತ್ತಿದ್ದಾಗ, ಸೈನ್ಯವನ್ನು ಒಬ್ಬ ಸೇನಾ ಪಾದ್ರಿಯ ಭಾಷಣಕ್ಕಾಗಿ ಒಟ್ಟುಗೂಡಿಸಲಾಯಿತು. ಈ ಸೇನಾ ಪಾದ್ರಿಗಳು ಜನರನ್ನು ಅವರ ಸ್ವಂತ ಧರ್ಮ ಸಂಸ್ಥೆಗಳ, ಆದರೆ ವಿರೋಧ ಪಕ್ಷದಲ್ಲಿರುವ ಸದಸ್ಯರ ವಿರುದ್ಧ ಹೋರಾಡುವಂತೆ ಪ್ರೋತ್ಸಾಹಿಸಿದಾಗ, ಆದರೂ ಹೋರಾಟದಲ್ಲಿ ದೇವರು ತಮ್ಮನ್ನು ಬೆಂಬಲಿಸುತ್ತಾನೆಂದು ಸದಾ ವಾದಿಸಿದಾಗ ನಾನು ಚಿಂತಿತನಾದೆ. ಎರಡು ಪಕ್ಷಗಳಿಗೂ ದೇವರ ಬೆಂಬಲವು ಇರಸಾಧ್ಯವಿಲ್ಲವೆಂಬುದು ಸ್ಪಷ್ಟ.
ಇಸವಿ 1944ರ ವಸಂತಕಾಲದೊಳಗೆ, ಬ್ರಿಟಿಷ್ ದ್ವೀಪಗಳು ಅಮೆರಿಕನ್ ಮತ್ತು ಬ್ರಿಟಿಷ್ ಸೈನಿಕರಿಂದ ಮತ್ತು ಸಲಕರಣೆಗಳಿಂದ ಕಿಕ್ಕಿರಿದು ತುಂಬಿತ್ತು. ಸಿಸಿಲಿ ಮತ್ತು ಉತ್ತರ ಆಫ್ರಿಕದ ದಂಡಯಾತ್ರೆಗಳಲ್ಲಿ ತನ್ನ ದಿಟ್ಟ ಯುದ್ಧ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದ ಜನರಲ್ ಪ್ಯಾಟನ್ (ಕೆಳಗಡೆ), ಸೈನ್ಯಗಳಿಗೆ ತಾವು ಏಕೆ ಅಲ್ಲಿದ್ದೇವೆ—ವಿಜಯವು ಸಾಧಿಸಲ್ಪಡುವ ವರೆಗೆ ದೊರೆಯುವ ಪ್ರತಿಯೊಂದು ಆಯುಧದಿಂದ ಸಾಧ್ಯವಾಗುವಷ್ಟು ಶತ್ರುಗಳನ್ನು ಕೊಲಲ್ಲಿಕ್ಕಾಗಿ—ಎಂಬುದರ ಬಗ್ಗೆ ಯಾವ ಸಂಶಯವನ್ನು ಕೊಡದ ಹುರಿದುಂಬಿಸುವ ಭಾಷಣಗಳನ್ನು ಕೊಟ್ಟರು. ಪ್ಯಾಟನ್ರ ಸ್ವರೂಪ ಆಧುನಿಕ ಖಡ್ಗಮಲ್ಲನಂತೆ: ಎತ್ತರ, ಶಸ್ತ್ರ ಮತ್ತು ಶಿರಸ್ತ್ರಾಣ ಸಜ್ಜಿತ, ನಿರ್ಮಲವಾದ ಸಮವಸ್ತ್ರಧಾರಿ—ಅವರ ರಣ ಮೇಲಂಗಿ ನಕ್ಷತ್ರ ಮತ್ತು ಅಲಂಕಾರಗಳಿಂದ ಹೊಳೆಯುತ್ತಿತ್ತು. ಅವರು ಇತರರನ್ನು ಬಲವಾಗಿ ಪ್ರೋತ್ಸಾಹಿಸುವವರು ಕೂಡ. ಅವರು ಕ್ರೂರವಾದ ಒರಟು ನುಡಿಯವರೂ ಮತಶ್ರದ್ಧೆಯವರೂ—ಕದನಕ್ಕೆ ಮೊದಲು ಪ್ರಾರ್ಥಿಸುತ್ತಿದ್ದರು—ಆಗಿದ್ದರು.
ಅವರ ಜನವರಿ 1, 1944ರ “ಸೈನಿಕರ ಪ್ರಾರ್ಥನೆ”ಯಲ್ಲಿ, ಪ್ಯಾಟನ್ ಹೀಗೆ ಬೇಡಿಕೊಂಡಿದ್ದರು: “ನಮ್ಮ ಪಿತೃಗಳ ದೇವರೇ, ನೆಲದ ಮೇಲೆಯೂ ಸಮುದ್ರದ ಮೇಲೆಯೂ ನಮ್ಮನ್ನು ಯಾವಾಗಲೂ ನಡೆಸಿರುವಾತನೇ, ನಮ್ಮ ಹೋರಾಟಗಳಲ್ಲಿ ಅತಿ ದೊಡ್ಡದಾದ ಇದರಲ್ಲಿ ನಿನ್ನ ಸ್ಫೂರ್ತಿದಾಯಕ ಮಾರ್ಗದರ್ಶನವನ್ನು ದಯೆಯಿಟ್ಟು ಮುಂದುವರಿಸು. . . . ಕರ್ತನೇ, ನಮಗೆ ವಿಜಯವನ್ನು ದಯಪಾಲಿಸು.”
ಯೂರೋಪಿನ ಆಕ್ರಮಣ
ಜೂನ್ 6, 1944ರಲ್ಲಿ ಮಿತ್ರ ಪಕ್ಷದ ಆಕ್ರಮಣ ಸೈನ್ಯಗಳು ಜಗತ್ತು ನೋಡಿದ್ದ ಅತಿ ದೊಡ್ಡ ನೌಕಾಪಡೆಯೊಂದಿಗೆ ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿ ಜರ್ಮನರ ಗುಂಡಿನ ಭಾರಿ ಸುರಿಮಳೆಯ ಎದುರಿನಲ್ಲಿ ನಾರ್ಮಂಡಿ ಕರಾವಳಿಯಲ್ಲಿ ಇಳಿದವು. ಮೂವತ್ತು ದಿನಗಳ ಬಳಿಕ ನಮ್ಮ ತರ್ಡ್ ಆರ್ಮಿ ಅಲ್ಲಿ ಇಳಿದಾಗ ಕರಾವಳಿ ನೆಲೆಯು ಇನ್ನೂ ಅಗಲಕಿರಿದಾಗಿಯೇ ಇತ್ತು. ಜರ್ಮನ್ ವಿಮಾನಗಳು ಆ ಪ್ರದೇಶದ ಮೇಲೆ ಭಾರೀ ಬಾಂಬು ದಾಳಿ ಮಾಡಿದಾಗ ನಾವು ರಾತ್ರಿಯನ್ನು ಕಂದಕಗಳಲ್ಲಿ ಕಳೆದೆವು.
ಜುಲೈ 25ರಂದು ಮಿತ್ರ ಸೈನ್ಯಗಳು ಕರಾವಳಿ ನೆಲೆಯಿಂದ ಮುಂದುವರಿದವು, ಮತ್ತು ಒಂದು ವಾರದ ಬಳಿಕ ನಮ್ಮ ತರ್ಡ್ ಆರ್ಮಿಯು ಬ್ರಿಟನಿ ಪರ್ಯಾಯ ದ್ವೀಪಕ್ಕೆ ಮುನ್ನುಗ್ಗಿತು. ಆ ಬಳಿಕ ನಾವು ಹಿಮ್ಮೆಟ್ಟುತ್ತಿದ್ದ ಜರ್ಮನ್ ಸೈನ್ಯಗಳ ಮಧ್ಯೆ ಪೂರ್ವಕ್ಕೆ ಪ್ಯಾರಿಸಿನ ಬಳಿಯಿರುವ ಸೇನ್ ನದಿಗೆ ಮುನ್ನುಗ್ಗಿದೆವು. ಸಪ್ಟಂಬರದೊಳಗೆ, ಆಧುನಿಕ ಇತಿಹಾಸದಲ್ಲೇ ಅತಿ ಗಮನಾರ್ಹವಾದ ಮಿಲಿಟರಿ ದಂಡಯಾತ್ರೆಗಳಲ್ಲಿ ಒಂದರ ಬಳಿಕ ಇದರಲ್ಲಿ, ಪ್ಯಾಟನರ ಟ್ಯಾಂಕ್ಗಳು ಮತ್ತು ಸೈನ್ಯಗಳು ಪೂರ್ವ ಫ್ರಾನ್ಸಿನೊಳಗೆ ಹೊಕ್ಕಿದ್ದವು. ಆನಂದಭರಿತರಾದ ನಮಗೆ ಯುದ್ಧಾಂತ್ಯ ಸಮೀಪಿಸಿದಂತೆ ಅನಿಸಿತು.
ಆದರೂ, ಹೆಚ್ಚಿನ ಸರಬರಾಯಿ ಮತ್ತು ಸೈನ್ಯಗಳನ್ನು ಥಟ್ಟನೆ ಉತ್ತರ ಸಂಗ್ರಾಮ ಮುಖಕ್ಕೆ, ಬ್ರಿಟಿಷ್ ಫೀಲ್ಡ್ ಮಾರ್ಷಲ್ ಮಂಟ್ಗಮ್ರಿಯ ಸೈನ್ಯಗಳಿಗೆ ತಿರುಗಿಸಿದಾಗ ಇಂಥ ಸಾಧ್ಯತೆಯು ಕಣ್ಮರೆಯಾಯಿತು. ಅಲ್ಲಿ ಹಾಲೆಂಡ್ನ ಜರ್ಮನ್ ಸೈನ್ಯಗಳ ಮೇಲೆ ಒಂದು ಭಾರಿ ಹಲ್ಲೆಯನ್ನು ನಡೆಸಲಾಯಿತು. ಆದರೆ ಒಂದು ವಾಯುಗಾಮಿ ಮಿತ್ರ ಪಡೆ ಅರಿವಿಲ್ಲದೆ ಒಂದು ಬಲಾಢ್ಯ ಜರ್ಮನ್ ಕವಚಿತ ವಾಹನ ಪಡೆಯ ಮಧ್ಯೆ ಇಳಿದಾಗ ವಿಪತ್ತು ಸಂಭವಿಸಿ ವ್ಯಾಪಕವಾದ ಹಾನಿಗೊಳಗಾಯಿತು. ಉಳಿದ ಮಿತ್ರ ಸೈನ್ಯಗಳಿಗೆ ಮುಂದುವರಿಯುವುದು ಅಸಾಧ್ಯವಾದಾಗ ಆ ಆಕ್ರಮಣ ವಿಫಲಗೊಂಡಿತು.
ಉಬ್ಬಿನ ಕದನ
ಹಿಟ್ಲರ್ ಮತ್ತು ಅವನ ಸೇನಾಪತಿಗಳು ಪುನಃ ಸಂಘಟಿಸಿಕೊಳ್ಳಲಿಕ್ಕಾಗಿ ಈ ಸಂದರ್ಭದ ಪ್ರಯೋಜನವನ್ನು ಪಡೆದುಕೊಂಡರು. ಅವರು ಕಾದಿಟ್ಟ ಹೊಸ ಸೈನಿಕರನ್ನು ಕರೆದು ಅಮೆರಿಕದ ಸೈನ್ಯಗಳು ಅತಿ ವಿರಳವಾಗಿರುವ ಸ್ಥಳದ ಸಮೀಪದಲ್ಲಿ ಒಂದು ದೊಡ್ಡ ಕವಚಿತ ಟ್ಯಾಂಕ್ ಪಡೆಯನ್ನು ಗುಟ್ಟಾಗಿ ಒಟ್ಟು ಸೇರಿಸಿದರು. ಉಬ್ಬಿನ ಕದನವೆಂದು ಕರೆಯಲಾದ ಈ ನಾಜಿ ಆಕ್ರಮಣ ಡಿಸೆಂಬರ್ 16ರ ರಾತ್ರಿ ಭಾರೀ ಮೋಡಗಳ ಮರೆಯಲ್ಲಿ ಆರಂಭವಾಯಿತು. ಉತ್ತರ ಸಮುದ್ರದಷ್ಟೂ ದೂರದ ತನಕ ಜರ್ಮನ್ ಕವಚಿತ ವಾಹನ ಪಡೆಗಳನ್ನು ಇರುಕಿಸಿ, ಮಿತ್ರ ಪಕ್ಷದ ಸೈನ್ಯಗಳನ್ನು ಮಧ್ಯೆ ವಿಭಾಗಿಸಿ ಅವರ ಮುಖ್ಯ ಸರಬರಾಯಿ ರೇವನ್ನು ವಶಪಡಿಸಿ ಕೊಳ್ಳುವುದು ಇದರ ಉದ್ದೇಶವಾಗಿತ್ತು.
ಜರ್ಮನ್ ಕವಚಿತ ವಾಹನ ಪಡೆಗಳು ಬಿರುಕಿನಲ್ಲಿ ಧಾವಿಸಿ ಹೋಗಿ, ಸ್ವಲ್ಪದರಲ್ಲಿ ಬಾಸ್ಟೋನ್ನಲ್ಲಿ ಅಮೆರಿಕನ್ ಪಡೆಗಳನ್ನು ಮುತ್ತಿದವು. ಕ್ಷಿಪ್ರವಾಗಿ, ಜನರಲ್ ಪ್ಯಾಟನರ ಅಧೀನದಲ್ಲಿದ್ದ ತರ್ಡ್ ಆರ್ಮಿ ತನ್ನ ದಿಕ್ಕನ್ನು ಬದಲಾಯಿಸಿತು, ಮತ್ತು ದೀರ್ಘಕಾಲದ ನಡಗೆಯ ಬಳಿಕ, ನಾವು ಕೊನೆಗೆ ಕವಚಿತ ಟ್ಯಾಂಕ್ ಪಡೆಗಳ ವಿರುದ್ಧ ಬಲವಾದ ಆಕ್ರಮಣಗಳನ್ನು ಮಾಡಲು ಬಂದೆವು. ಆದರೂ, ಸುಮಾರು ಒಂದು ವಾರದ ತನಕ ಕವಿದಿದ್ದ ಭಾರಿ ಮೋಡ ಮತ್ತು ಮಳೆಯ ಕಾರಣ ವಿಮಾನ ಶಕ್ತಿಯನ್ನು ಉಪಯೋಗಿಸುವುದು ಅಸಾಧ್ಯವಾಯಿತು.
ಪ್ಯಾಟನರ ಪ್ರಾರ್ಥನೆ
ಡಿಸೆಂಬರ್ 22ರಲ್ಲಿ ನಡೆದ ಒಂದು ಸಂಗತಿ ನನ್ನ ಆತ್ಮಿಕ ಉಭಯಸಂಕಟದ ತಿರುಳನ್ನೇ ಸ್ಪರ್ಶಿಸಿತು. ಕೆಲವು ವಾರಗಳಿಗೆ ಮುನ್ನ, ರೈನ್ ನದಿಯ ಪಶ್ಚಿಮಕ್ಕೆ ಹರಡಿದ್ದ ಸಿಗ್ಫ್ರೀಡ್ ರಕ್ಷಣಾರ್ಥ ರೇಖೆಯಲ್ಲಿ ಆ ಬಳಿಕ ಉಪಯೋಗಿಸಲಾಗುವಂತೆ ಒಂದು ಕರಪತ್ರದ ರೂಪದ ಪ್ರಾರ್ಥನೆಯನ್ನು ತನ್ನ ಮಿಲಿಟರಿ ಪಾದ್ರಿಗಳ ಮುಖ್ಯಸ್ಥನು ತಯಾರಿಸುವಂತೆ ಜನರಲ್ ಪ್ಯಾಟನ್ ಏರ್ಪಡಿಸಿದ್ದರು. ಆದರೆ ಈಗ ಕೆಲವೇ ತಾಸುಗಳೊಳಗೆ, ತರ್ಡ್ ಆರ್ಮಿಯ ಪ್ರತಿಯೊಬ್ಬ ಸೈನಿಕನಿಗೆ ಒಂದರಂತೆ 3,50,000 ಪ್ರತಿಗಳನ್ನು ಅವರು ಹಂಚುವಂತೆ ಏರ್ಪಡಿಸಿದರು. “ಈ ಮಿತಿತಪ್ಪಿದ ಮಳೆಯನ್ನು” ತಂದೆಯು “ತಡೆದು ಯುದ್ಧಕ್ಕಾಗಿ ನಮಗೆ ಒಳ್ಳೆಯ ಹವಾಮಾನವನ್ನು ಒದಗಿಸಬೇಕೆಂದು” ವಿಜ್ಞಾಪಿಸಿ, ಹೀಗೆ ಅಮೆರಿಕದ ಸೈನ್ಯವು “ನಮ್ಮ ವೈರಿಗಳ ದಬ್ಬಾಳಿಕೆ ಮತ್ತು ದುಷ್ಟತ್ವವನ್ನು ಜಜ್ಜಿ ಜನರ ಮತ್ತು ರಾಷ್ಟ್ರಗಳ ಮಧ್ಯೆ ನಿನ್ನ ನ್ಯಾಯವನ್ನು ಸ್ಥಾಪಿಸುವಂತಾಗಲಿ” ಎಂದು ಅದು ಬೇಡಿಕೊಂಡಿತು.
ಗಮನಾರ್ಹವಾಗಿ, ಆ ರಾತ್ರಿ ಆಕಾಶವು ಮೋಡರಹಿತವಾಯಿತು ಮತ್ತು ಮುಂದಿನ ಐದು ದಿನಗಳಲ್ಲಿ ಮಬ್ಬಿಲ್ಲದೇ ಉಳಿಯಿತು. ಇದು ಮಿತ್ರ ಸೈನಿಕರೂ ಬಾಂಬರ್ ವಿಮಾನಗಳೂ ನಾಜಿ ಪಡೆಗಳ ಉದ್ದಕ್ಕೂ ದಾಳಿ ನಡೆಸಿ ಅವರ ಮೇಲೆ ಸೇಡಿನ ಹಾವಳಿ ಮತ್ತು ನಾಶವನ್ನು ತರುವಂತೆ ಅನುಮತಿಸಿತು. ಇದು ಹಿಟ್ಲರನ ಕೊನೆಯ ಮಿಂಚುದಾಳಿಗೆ ಅಂತ್ಯವನ್ನು ತಂದೊಡ್ಡಿತು ಮತ್ತು ಅವನ ಜರ್ಜರಿತ ಪಡೆಗಳು ಹಿಮ್ಮೆಟ್ಟಲು ಆರಂಭಿಸಿದವು.
ಪ್ಯಾಟನ್ ಆನಂದಪರವಶರಾದರು. “ನಾನು ಇನ್ನೊಂದು ಲಕ್ಷ ಪ್ರಾರ್ಥನೆಗಳು ಮುದ್ರಿಸಲ್ಪಡುವಂತೆ ಏರ್ಪಡಿಸಬೇಕೆಂದು ಯೋಚಿಸುತ್ತೇನೆ. ಕರ್ತನು ನಮ್ಮ ಪಕ್ಷದಲ್ಲಿದ್ದಾನೆ ಮತ್ತು ನಮ್ಮ ಆವಶ್ಯಕತೆಗಳನ್ನು ಆತನಿಗೆ ನಾವು ತಿಳಿಸುತ್ತಿರಬೇಕು,” ಎಂದರವರು. ಆದರೆ ನನ್ನೊಳಗಿನ ಪ್ರಶ್ನೆಯು, ‘ಪ್ರಾರ್ಥನೆ ಹಂಚಲ್ಪಟ್ಟಿರಲಿ, ಇಲ್ಲದಿರಲಿ, ಡಿಸೆಂಬರ್ 23ರಂದು ಆಕಾಶವು ಸ್ವಚ್ಛವಾಗುತ್ತಿರಲಿಲ್ಲವೆ?’ ಎಂದಾಗಿತ್ತು. ರಷ್ಯದ ಬಯಲುಗಳಿಂದ ಒಂದು ಶೀತಲ ವಾಯುರಾಶಿ ಬಂದು ಮೋಡಗಳನ್ನು ಚದರಿಸಿತ್ತು ಎಂದು ಸೈನ್ಯದ ಹವಾಮಾನ ವಿಭಾಗವು ವಿವರಿಸಿತು.
ಜರ್ಮನ್ ಶರಣಾಗತಿ ಮತ್ತು ಯುದ್ಧ ತರುವಾಯದ ಜರ್ಮನಿ
ವಸಂತಕಾಲದ ಮಿತ್ರ ರಾಷ್ಟ್ರಗಳ ಆಕ್ರಮಣಗಳು ಹಿಟ್ಲರನ ಸಾಮ್ರಾಜ್ಯವನ್ನು ಅದರ ಅಂತ್ಯಕ್ಕೆ ತಂದಿತು. ಮೇ 7, 1945ರಲ್ಲಿ ಶರಣಾಗತಿ ನಡೆಯಿತು. ಆ ದಿನ ನಾನು ರೈನ್ಲೆಂಡಿನ ಒಂದು ಹಳ್ಳಿಯಲ್ಲಿದ್ದೆ. ಅಲ್ಲಿ ನಾನು ನನ್ನ ಸುಂದರಿಯಾದ ಭಾವೀ ಪತ್ನಿಯಾದ ಲಿಲಿಯನ್ನು ಭೇಟಿಯಾದೆ. ಆಕೆ ಬೆಲ್ಚಿಯಮಿನಿಂದ ದೇಶಪಲ್ಟವಾಗಿದ್ದವಳು. ನವಂಬರ 1945ರಲ್ಲಿ ನನಗೆ ಸೈನ್ಯದಿಂದ ನಿವೃತ್ತಿ ದೊರೆಯಲಾಗಿ ನಾನು ಅಮೆರಿಕದ ಸೈನ್ಯದ ಆಕ್ರಮಣ ಐತಿಹಾಸಿಕ ವಿಭಾಗಕ್ಕೆ ಸೇರಿದೆ. ಡಿಸೆಂಬರ್ನಲ್ಲಿ ಜರ್ಮನಿಯಲ್ಲಿ ಫ್ರ್ಯಾಂಕ್ಫರ್ಟಿನ ಪೌರ ಸಭಾಧ್ಯಕ್ಷರು ಲಿಲಿಯ ಮತ್ತು ನನ್ನ ಮದುವೆ ಮಾಡಿಸಿದರು.
ಈ ಐತಿಹಾಸಿಕ ವಿಭಾಗದ ಧ್ಯೇಯವು ಸ್ವಾಧೀನಪಡಿಸಿಕೊಳ್ಳುವಿಕೆಯ ಇತಿಹಾಸವನ್ನು ಆವರಿಸುವುದಾಗಿತ್ತು. ಜರ್ಮನ್ ಪಕ್ಷದ ಯುದ್ಧ ಇತಿಹಾಸವನ್ನು ಬರೆಯಲು ಅದು ಸೆರೆ ಹಿಡಿಯಲಾಗಿದ್ದ ನೂರಾರು ಜರ್ಮನ್ ಸೇನಾಪತಿಗಳನ್ನು ಬಳಸಿತು. ನಾನು ಮುಖ್ಯಪತ್ರಾಗಾರ ಪಾಲಕನಾಗಿ ಜರ್ಮನಿಯಲ್ಲಿ ಐದು ವರ್ಷ ಕಾಲ ಉಳಿದೆ. ಆ ಬಳಿಕ, ಗ್ಯಾರಿ ಮತ್ತು ಲಿಜೆಟ್ ಎಂಬ ಇಬ್ಬರು ಮಕ್ಕಳೊಂದಿಗೆ ನಾವು ಅಮೆರಿಕಕ್ಕೆ ಹೋದೆವು.
ನನ್ನ ತಂದೆತಾಯಿಗಳನ್ನು ಭೇಟಿ ಮಾಡಿದ ಬಳಿಕ, ನಾನು ಮೊಂಟ್ಯಾನ ವಿಶ್ವವಿದ್ಯಾನಿಲಯಕ್ಕೆ ಸೇರಿದೆ. ಮಿಲಿಟರಿಯೊಂದಿಗೆ ನನ್ನ ವ್ಯವಹಾರ ಅಂತ್ಯಗೊಂಡಿತೆಂದು ನಾನು ಭಾವಿಸಿದೆ. ಆದರೆ, 1954ರ ಬೇಸಗೆಯಲ್ಲಿ ನನಗೆ ಮಾನವ ಶಾಸ್ತ್ರದಲ್ಲಿ ಪ್ರವೀಣ ಪದವಿ ದೊರೆಯಲಿದ್ದಾಗ, ನನ್ನ ಹಿಂದಿನ ಸಹೋದ್ಯೋಗಿಗಳಲ್ಲಿ ಇಬ್ಬರು, ಓಕಹ್ಲೋಮದ ಯು. ಎಸ್ ಆರ್ಮಿ ಆರ್ಟಿಲರಿ ಆ್ಯಂಡ್ ಮಿಸೈಲ್ ಸೆಂಟರ್ನಲ್ಲಿ ಮೇಲ್ವಿಚಾರಕ⁄ನಿರ್ವಾಹಕನ ಹುದ್ದೆ ಖಾಲಿ ಇದೆ ಎಂದು ತಿಳಿಸಿದರು. ನಾನು ಅರ್ಜಿ ಹಾಕಲಾಗಿ ನನ್ನನ್ನು ಆರಿಸಲಾಯಿತು ಮತ್ತು ನಾವು ಅಲ್ಲಿಗೆ ಸ್ಥಳ ಬದಲಾಯಿಸಿದೆವು.
ಮಿಲಿಟರಿ ವಸ್ತುಸಂಗ್ರಹ ಶಾಲೆಯ ಚಟುವಟಿಕೆಗಳು
ನಾನು ಪುನಃ ಮಿಲಿಟರಿ ಇತಿಹಾಸದಲ್ಲಿ ವ್ಯವಹರಿಸುವವನಾದೆ. ಸಂಶೋಧನೆ, ಮನುಷ್ಯ ನಿರ್ಮಿತ ವಸ್ತುಗಳ ಸಂಗ್ರಹಣೆ, ಪ್ರದರ್ಶನ ವಸ್ತುಗಳು, ಪ್ರಯಾಣಗಳು, ಭಾಷಣಗಳು, ಪ್ರಾಕ್ತನಶಾಸ್ತ್ರದ ಭೂಸಂಶೋಧನೆಗಳು ಮತ್ತು ಮಿಲಿಟರಿ ಮತ್ತು ಐತಿಹಾಸಿಕ ಉತ್ಸವಗಳು—ಇವುಗಳಲ್ಲಿ ನಾನು ತಲ್ಲೀನನಾದೆ. ಇಸವಿ 1973ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಅಧ್ಯಕ್ಷೀಯ ಪ್ರಾರಂಭೋತ್ಸವದ ಮೆರವಣಿಗೆಯಲ್ಲಿ ಒಂದು ವಿಧ್ಯುಕ್ತವಾದ ಅಶ್ವಾರೋಹಿ ತಂಡವನ್ನು ನಾನು ಸಂಘಟಿಸಿದೆ. ನಾನು ಧ್ವಜಗಳ ಒಂದು ಪ್ರದರ್ಶನಾಲಯವನ್ನೂ ಸ್ಥಾಪಿಸಿದೆ. ರಾಷ್ಟ್ರೀಯ ಧ್ವಜ ಮತ್ತು ಮಿಲಿಟರಿ ತಂಡಗಳ ಧ್ವಜಗಳ ಇತಿಹಾಸ ಮತ್ತು ಸಂಪ್ರದಾಯಗಳನ್ನು ಇದು ಚಿತ್ರಿಸಿತು. ಮುಂದಿನ ವರ್ಷಗಳಲ್ಲಿ ಒಂದೇ ಕಟ್ಟಡವಿದ್ದ ಆರ್ಟಿಲೆರಿ ವಸ್ತುಸಂಗ್ರಹಾಲಯವು ದೇಶದ ಅತಿ ದೊಡ್ಡ ಮಿಲಿಟರಿ ವಸ್ತುಸಂಗ್ರಹಾಲಯವಾಗಿ ಪರಿಣಮಿಸಿತು.
ಈ ಮಧ್ಯೆ ನಮ್ಮ ಮಕ್ಕಳು ಬೆಳೆಯುತ್ತಿದ್ದರು. ಹೈ ಸ್ಕೂಲಿನಲ್ಲಿ ಉತ್ತೀರ್ಣನಾದ ಬಳಿಕ ನಮ್ಮ ಮಗ ಗ್ಯಾರಿ, ಗೊತ್ತುಗುರಿಯಿಲ್ಲದವನೂ ಮಾರ್ಗದರ್ಶನವಿಲ್ಲದವನೂ ಆದ. ಅವನು ಮೆರೀನ್ ದಳವನ್ನು ಸೇರಿ ವಿಯೆಟ್ನಾಮ್ ಯುದ್ಧದಲ್ಲಿ ಭಾಗವಹಿಸಿದನು. ವಿದೇಶದಲ್ಲಿ ಎರಡು ವರ್ಷಕಾಲ ಕಳೆದ ಬಳಿಕ ಅವನು ಭದ್ರವಾಗಿ ಮನೆಗೆ ಸೇರಿದ್ದಕ್ಕೆ ನಾವು ಕೃತಜ್ಞರಾದೆವು. ಯುದ್ಧಗಳು ಶಾಂತಿಯನ್ನು ಉಳಿಸುವುದಿಲ್ಲವೆಂಬುದು ಸ್ಪಷ್ಟ. ಇದಕ್ಕೆ ಬದಲಾಗಿ, ತಮ್ಮ ಜನರನ್ನು ಆಹಾರದ ಕೊರತೆ ಮತ್ತು ರೋಗಗಳು ಬಾಧಿಸುತ್ತಿರುವಾಗ ಸಂಯುಕ್ತ ರಾಷ್ಟ್ರ ಸಂಘದ ಸದಸ್ಯ ರಾಷ್ಟ್ರಗಳೇ ಒಬ್ಬರೊಡನೊಬ್ಬರು ಹೋರಾಡುವ ಮುಂದುವರಿಯುತ್ತಿರುವ ಪ್ರದರ್ಶನವನ್ನು ನಾವು ನೋಡಿರುತ್ತೇವೆ.
ನಿವೃತ್ತಿ ಮತ್ತು ಆಶಾಭಂಗ
ಕೊನೆಗೆ, ಮಿಲಿಟರಿಯೊಂದಿಗೆ 33 ವರ್ಷಗಳ ಸಹವಾಸದ ಬಳಿಕ, ಕೆಲಸ ನಿವೃತ್ತಿಯ ಸಮಯ ಬಂದಿದೆಯೆಂದು ನಾನು ನಿರ್ಣಯಿಸಿದೆ. ಆಧಿಪತ್ಯ ನಡೆಸುತ್ತಿದ್ದ ಸೇನಾಪತಿ ಮತ್ತು ಸಿಬ್ಬಂದಿಗಳು ನನಗಾಗಿ ಒಂದು ವಿಶೇಷ ನಿವೃತ್ತಿ ಸಮಾರಂಭವನ್ನು ನಡೆಸಿದರು, ಮತ್ತು ಓಕಹ್ಲೋಮದ ರಾಜ್ಯಪಾಲರು ಜುಲೈ 20, 1979ನ್ನು ನನ್ನ ಹೆಸರಿನ ದಿನವಾಗಿ ಘೋಷಿಸಿದರು. ಮಿಲಿಟರಿ ಇತಿಹಾಸ ಮತ್ತು ವಸ್ತು ಸಂಗ್ರಹಾಲಯಗಳ ಸಂಬಂಧದಲ್ಲಿ ನನ್ನ ಕೊಡುಗೆಯನ್ನು ಪ್ರಶಂಸಿಸುವ ಪತ್ರಗಳು ಬಂದವು.
ನನ್ನ ಸಂತೋಷವು ತುಂಬಿ ಹೊರಸೂಸಬೇಕಾಗಿತ್ತು. ಆದರೂ, ನನ್ನ ಗತಕಾಲದ ಕುರಿತು ಪುನರಾಲೋಚಿಸಿದಾಗ ನನಗೆ ಸಂತೋಷವಾಗಲಿಲ್ಲ. ಯುದ್ಧದ ಭೀಕರ ನಿಜತ್ವಗಳನ್ನು ಬಯಲುಪಡಿಸುವ ಬದಲಾಗಿ ನನ್ನ ಜೀವನೋಪಾಯವು ಅದರ ಸಂಪ್ರದಾಯಗಳನ್ನು, ಸಮವಸ್ತ್ರಗಳು ಮತ್ತು ಪ್ರಶಸ್ತಿ ಪದಕಗಳು, ಆಯುಧಗಳು ಮತ್ತು ಯುದ್ಧತಂತ್ರಗಳು, ಸಂಸ್ಕಾರಗಳು ಮತ್ತು ಸಮಾರಂಭಗಳು, ವೈಭವ ಮತ್ತು ಆಡಂಬರಗಳನ್ನು ಒತ್ತಿಹೇಳುತ್ತಾ ಮಹಿಮೆ ಪಡಿಸಲಿಕ್ಕಾಗಿ ಮೀಸಲಾಗಿಡಲ್ಪಟ್ಟಿತ್ತು. ಆ ಬಳಿಕ ಅಮೆರಿಕದ 34ನೆಯ ಅಧ್ಯಕ್ಷರಾದ ಜನರಲ್ ಡ್ವೈಟ್ ಡಿ. ಐಸೆನ್ಹಾವರ್ ಸಹ, “ಯುದ್ಧದ ಸಾರವು ಬೆಂಕಿ, ಬರ ಮತ್ತು ವ್ಯಾಧಿಗಳೇ . . . ನಾನು ಯುದ್ಧವನ್ನು ದ್ವೇಷಿಸತೊಡಗಿದ್ದೇನೆ. ಯುದ್ಧವು ಯಾವುದನ್ನೂ ತೀರ್ಮಾನಿಸುವುದಿಲ್ಲ,” ಎಂದು ಹೇಳಿದರು.
ಸಕಾಲದಲ್ಲಿ, ಐಸೆನ್ಹಾವರರ ತಾಯಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದರೆಂದು ನನಗೆ ತಿಳಿದುಬಂತು. ಅವರ ನಂಬಿಕೆ, ನನ್ನ ಹೆಂಡತಿ ಸಾಕ್ಷಿಗಳಿಂದ ಬೈಬಲ್ ಅಧ್ಯಯನ ಪಡೆಯುತ್ತಿದ್ದುದರ ಮೂಲಕ ಆಗಲೆ ನನ್ನ ಮೇಲೆ ಪರಿಣಾಮ ಬೀರುತ್ತಿತ್ತು. ನನ್ನ ಹೆಂಡತಿ, ನನ್ನ ಕೆಲಸ ನಿವೃತ್ತಿಗೆ ಆರು ತಿಂಗಳುಗಳ ಮೊದಲು 1979ರಲ್ಲಿ ದೀಕ್ಷಾಸ್ನಾನ ಪಡೆದ ಸಾಕ್ಷಿಯಾದಳು. ಆಕೆ ಪರಿವರ್ತನೆ ಹೊಂದಿದವಳಾಗಿ ಕಂಡುಬಂದಳು. ತಾನು ಕಲಿತ ವಿಷಯಗಳಲ್ಲಿ ಪಾಲಿಗಳಾಗಲು ಆಕೆಗಿದ್ದ ಉತ್ಸಾಹ ಮತ್ತು ಅಪೇಕ್ಷೆ ಎಷ್ಟಾಗಿತ್ತೆಂದರೆ ನಮ್ಮ ಮಗನೂ ಅವನ ಹೆಂಡತಿ ಕ್ಯಾರನಳೂ ಬೈಬಲ್ ಅಧ್ಯಯನಕ್ಕೆ ತೊಡಗಿ, ಒಂದು ವರ್ಷದೊಳಗೆ ದೀಕ್ಷಾಸ್ನಾನಿತ ಸಾಕ್ಷಿಗಳಾದರು.
ಆದರೆ ನಾನು ಸಂದೇಹಿಸಿದೆ. ದೇವರು ಕಾರ್ಯತಃ ಮಾನವ ವಿಚಾರಗಳಲ್ಲಿ ಕೈಹಾಕಿ, ಈ ಲೋಕಕ್ಕೆ ಅಂತ್ಯ ತಂದು, ಹೊಸ, ಯುದ್ಧರಹಿತ ಜಗತ್ತನ್ನು ಒಳತರುವನೆಂಬುದು ಅಸಂಭವವೆಂದು ನನಗೆ ತೋರಿತು. ಆದರೂ, ಪ್ರಧಾನವಾಗಿ ಸಾಕ್ಷಿಗಳ ಧಾರ್ಮಿಕ ನಿಶಿತ್ಚಾಭಿಪ್ರಾಯಗಳಿಗೆ ದೃಢವಾದ ಆಧಾರವಿದೆಯೊ ಎಂದು ಕಂಡುಹಿಡಿಯುವ ಉದ್ದೇಶದಿಂದ ನಾನು ಸಹ ಅವರೊಂದಿಗೆ ಅಧ್ಯಯನವನ್ನು ಆರಂಭಿಸಿದೆ. ನನ್ನ ಹಿನ್ನೆಲೆ ಮತ್ತು ತರಬೇತು ಹೊಂದಿದ ಸಂಶೋಧನಾ ಸಾಮರ್ಥ್ಯಗಳಿಂದಾಗಿ, ಅವರ ನಂಬಿಕೆಗಳಲ್ಲಿ ತಪ್ಪುಗಳನ್ನೂ ವಿರೋಧೋಕ್ತಿಗಳನ್ನೂ ಕಂಡುಹಿಡಿಯುವುದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲವೆಂದು ನಾನು ಭಾವಿಸಿದೆ.
ಒಂದು ಹೊಸ ಜೀವನರೀತಿ
ನನ್ನ ಬೈಬಲ್ ಅಧ್ಯಯನ ಪ್ರಗತಿ ಹೊಂದಿದಂತೆ, ನನ್ನ ಅಭಿಪ್ರಾಯ ಎಷ್ಟು ತಪ್ಪಾಗಿತ್ತೆಂದು ನನಗೆ ಬೇಗನೆ ತಿಳಿದುಬಂತು. ಧಾರ್ಮಿಕ ಅಜ್ಞಾನದ ಪೊರೆಗಳು ನನ್ನ ಕಣ್ಣುಗಳಿಂದ ಬೀಳಲಾರಂಭಿಸಿದಾಗ ನನ್ನ ಸಂದೇಹ ವಾದವು ಕಾಣದೆ ಹೋಯಿತು. ನೀತಿಯ ಹೊಸ ಜಗತ್ತಿನ ಕುರಿತಾದ ದೇವರ ವಾಗ್ದಾನದಲ್ಲಿ ಭರವಸೆಯಿಡಲು ಸ್ವಸ್ಥವಾದ ಆಧಾರವು ನಿಶ್ಚಯವಾಗಿಯೂ ಇದೆ ಎಂದು ನನಗೆ ನೋಡಸಾಧ್ಯವಾಯಿತು. (2 ಪೇತ್ರ 3:13; ಪ್ರಕಟನೆ 21:3, 4) ಮತ್ತು ಈಗ ಮಿತಿಮೀರಿರುವ ದುಷ್ಟತೆಗಳೂ ಅನ್ಯಾಯಗಳೂ ಅಸ್ತಿತ್ವದಲ್ಲಿರುವುದು, ಸರ್ವಶಕ್ತನಾದ ದೇವರಲ್ಲ, ಸೈತಾನನು ಈ ವಿಷಯ ವ್ಯವಸ್ಥೆಯ ಪ್ರಭುವಾಗಿರುವ ಕಾರಣವೇ ಎಂದು ಕಲಿಯುವುದು ಎಷ್ಟು ದುಃಖಶಾಮಕವಾಗಿತ್ತು! (ಯೋಹಾನ 14:30; 2 ಕೊರಿಂಥ 4:4) ಹೀಗೆ, ರಾಷ್ಟ್ರಗಳ ಯುದ್ಧಗಳಲ್ಲಿ ದೇವರು ಎರಡು ಪಕ್ಷಗಳಲಿಯ್ಲೂ ಇಲ್ಲದಿದ್ದರೂ ಆತನು ಮಾನವರ ಕುರಿತು ನಿಶ್ಚಯವಾಗಿ ಚಿಂತಿಸುತ್ತಾನೆ.—ಯೋಹಾನ 3:16.
ನನಗೆ 1983ರಲ್ಲಿ ಮಾಂಟ್ಯಾನದ ಬಿಲಿಂಗ್ಸ್ನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಧಿವೇಶನವೊಂದರಲ್ಲಿ ದೀಕ್ಷಾಸ್ನಾನವಾಯಿತು. ನಾನು ಹೀಗೆ ಯೆಹೋವನಿಗೆ ಮಾಡಿದ ಸಮರ್ಪಣೆಯನ್ನು ಸೂಚಿಸಿದೆ. ನನ್ನ ಮಗ ಗ್ಯಾರಿ ಮತ್ತು ನಾನು ನಮ್ಮ ನಮ್ಮ ಸಭೆಗಳಲ್ಲಿ ಹಿರಿಯರಾಗಿ ಸೇವೆ ಸಲ್ಲಿಸುತ್ತೇವೆ. ಯೆಹೋವನು ತನ್ನ ವಾಕ್ಯ ಮತ್ತು ಸಾಕ್ಷಿಗಳ ಮಾಧ್ಯಮವಾಗಿ ನಮ್ಮ ಸಂತತಿಯನ್ನು ಗುರುತಿಸುವ ಕ್ರಾಂತಿಕಾರಕ ಸಂಭವಗಳನ್ನು ನಾವು ತಿಳಿಯುವಂತೆ ಬೈಬಲ್ ಸತ್ಯತೆಗಳ ಕಡೆಗೆ ನಮ್ಮ ಹೃದಯಗಳನ್ನು ತೆರೆದುದಕ್ಕಾಗಿ ಲಿಲಿ ಮತ್ತು ನಾನು ತೀರಾ ಕೃತಜ್ಞರು. (ಮತ್ತಾಯ 24:3-14; 1 ಯೋಹಾನ 2:17)—ಜಿಲೆಟ್ ಗ್ರಿಸ್ವಲ್ಡ್ ಹೇಳಿರುವಂತೆ.
[ಪುಟ 9 ರಲ್ಲಿರುವ ಚಿತ್ರ ಕೃಪೆ]
Parisians scatter as German snipers open fire, August 1944 (U.S. National Archives photo)
[ಪುಟ 10 ರಲ್ಲಿರುವ ಚಿತ್ರ ಕೃಪೆ]
U.S. National Archives photo
[ಪುಟ 11 ರಲ್ಲಿರುವ ಚಿತ್ರ]
ಜರ್ಮನ್ ಕವಚಿತ ವಾಹನಗಳ ಕೆಡವಲ್ಪಟ್ಟು ಸುಡಲ್ಪಟ್ಟ ಒಡಲುಗಳು, ಫ್ರಾನ್ಸ್, 1944
[ಕೃಪೆ]
U.S. Department of Defense
[ಪುಟ 12 ರಲ್ಲಿರುವ ಚಿತ್ರ]
ನನ್ನ ಪತ್ನಿ ಮತ್ತು ಮಗಳೊಡನೆ, 1947ರಲ್ಲಿ