ಯುದ್ಧ ವೀರನಾಗಿದ್ದ ನಾನು ಕ್ರಿಸ್ತನ ಸೈನಿಕನಾಗಿ ಬದಲಾದೆ
ಲ್ವೀಲಾಲ್ಯೊಅವರುಹೇಳಿದಂತೆ
ಇಸವಿ 1944ರ ಆಗಸ್ಟ್ 16ರಂದು, Iiನೆಯ ಲೋಕ ಯುದ್ಧದ ಸಮಯದಲ್ಲಿ, ಫ್ರಾನ್ಸಿನ ದಕ್ಷಿಣ ತೀರಗಳ ಮೇಲೆ ತಳವೂರಿದ್ದ ಸಜಾತೀಯ ಸೇನೆಯಲ್ಲಿ ನಾನಿದ್ದೆ. ಮೆಡಿಟರೇನಿಯನ್ ತೀರದಲ್ಲಿ ಸುಮಾರು ಒಂದು ವಾರದ ವರೆಗೆ ಹೋರಾಡಿದ ಬಳಿಕ, ನನ್ನ ಫಿರಂಗಿ ಟ್ಯಾಂಕ್ ವಾಹನ ದಳವು, ಮಾರ್ಸೇಲ್ಸ್ನ ರೇವುಪಟ್ಟಣವನ್ನು ಪ್ರವೇಶಿಸಿ, ನಾಟ್ರೆಡಾಮ್ಡಲಗಾರ್ಡ್ ಬಾಸಿಲಿಕದ ಉದ್ದಕ್ಕೂ ಹೋರಾಟ ನಡೆಸುತ್ತಾ ಹೋಯಿತು. ಅಲ್ಲಿರುವ ಜರ್ಮನ್ ರಕ್ಷಣಾ ಸಾಧನಗಳನ್ನು ವಶಪಡಿಸಿಕೊಳ್ಳುವುದು ನಮ್ಮ ನಿಯೋಗವಾಗಿತ್ತು.
ಕದನವು ಬಹಳ ತೀವ್ರವಾಗಿತ್ತು. ನನ್ನ ಗುಂಪಿನಲ್ಲಿದ್ದ ಒಂದು ಟ್ಯಾಂಕ್ಗೆ ಹೊಡೆತ ಬಿದ್ದು, ಅದರಲ್ಲಿದ್ದ ನನ್ನ ಮೂವರು ಸಂಗಡಿಗರು ಕೊಲ್ಲಲ್ಪಟ್ಟರು. ತದನಂತರ ನೆಲದಡಿ ಇಡಲ್ಪಟ್ಟಿರುವ ಸಿಡಿಮದ್ದು ಸಿಡಿದು, ನನ್ನ ಟ್ಯಾಂಕ್ನ ಮೆಟಲ್ ಬೆಲ್ಟ್ಗಳಲ್ಲಿ ಒಂದನ್ನು ಮುರಿದುಹಾಕಿ, ಅದನ್ನು ಕೆಲಸಕ್ಕೆ ಬಾರದ ಹಾಗೆ ಮಾಡಿಬಿಟ್ಟಿತು. ನಾವು ಗೆಲ್ಲಬೇಕಾಗಿದ್ದಂತಹ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ನಿರ್ಧಾರದಿಂದ, ಮುಂದಿನ ಕೆಲವು ತಾಸುಗಳ ವರೆಗೆ ನಾವು ಹೋರಾಡಿದೆವು.
ಕದನದ ಮಧ್ಯೆ ಶಾಂತ ವಾತಾವರಣವು ಇದ್ದಾಗ, ಆ ಸಂದರ್ಭದ ಸದುಪಯೋಗ ಮಾಡಲಿಕ್ಕಾಗಿ, ಒಂದು ಕೈಯಲ್ಲಿ ಮಷೀನ್ ಗನ್ ಅನ್ನು ಮತ್ತು ಇನ್ನೊಂದು ಕೈಯಲ್ಲಿ ಫ್ರೆಂಚ್ ಧ್ವಜವನ್ನು ಹಿಡಿದುಕೊಂಡು, ಒಬ್ಬ ಫ್ರೀ ಫ್ರೆಂಚ್ ದಳದ ಹೋರಾಟಗಾರನೊಂದಿಗೆ ನಾನು ಕಾಲ್ನಡಿಗೆಯಲ್ಲಿಯೇ ಮುಂದುವರಿದೆ. ನಾನು ತುಂಬ ಬಳಲಿದ್ದೆ ಮತ್ತು ಗನ್ಪೌಡರ್ನಿಂದ ಕಪ್ಪಾಗಿದ್ದೆ, ಆದರೂ ಬಾಸಿಲಿಕದ ಪ್ರವೇಶದ್ವಾರದ ಬಳಿಗೆ ಹೋಗಿ ಅಲ್ಲಿ ಫ್ರೆಂಚ್ ಧ್ವಜವನ್ನು ನೆಟ್ಟೆ.
ಬಿಡುಗಡೆ
ತದನಂತರದ ವಾರಗಳಲ್ಲಿ, ಜರ್ಮನ್ ಸೈನ್ಯಗಳನ್ನು ಹಿಮ್ಮೆಟ್ಟುವ ಪ್ರಯತ್ನದಲ್ಲಿ ನಾವು ಉತ್ತರದ ಕಡೆಗೆ ಮುನ್ನುಗ್ಗಿದೆವು. ಅವಿತುಕೊಂಡು ಮರೆಯಿಂದ ಗುಂಡುಹಾರಿಸುವವರು ಹಾಗೂ ತಲೆತಾಕುವಷ್ಟು ಎತ್ತರದಲ್ಲಿ ರಸ್ತೆಯುದ್ದಕ್ಕೂ ಕಟ್ಟಲ್ಪಟ್ಟಿರುವ ಕೇಬಲ್ಗಳು, ನಮ್ಮ ಟ್ಯಾಂಕ್ಗಳ ದ್ವಾರಗಳನ್ನು ನಾವು ಭದ್ರವಾಗಿ ಮುಚ್ಚಿಕೊಂಡು ಮುಂದುವರಿಯುವಂತೆ ಮಾಡಿದವು.
ಅಕ್ಟೋಬರ್ ತಿಂಗಳಿನಲ್ಲಿ, ನಮ್ಮ ಸೇನಾದಳವು, ಈಶಾನ್ಯ ಫ್ರಾನ್ಸ್ನಲ್ಲಿ ವೋಸ್ಗಸ್ ಮೌಂಟನ್ಸ್ನಲ್ಲಿರುವ ರಾಮೊನ್ಶಾನ್ ಎಂಬ ಚಿಕ್ಕ ಪಟ್ಟಣವನ್ನು ತಲಪಿತು. ಜನರು ಆ ಪಟ್ಟಣವನ್ನು ಬಿಟ್ಟುಹೋಗಿರುವಂತೆ ತೋರಿತು. ನನ್ನ ಟ್ಯಾಂಕ್ನ ಮೇಲಿದ್ದ ತಿರುಗು ಬುರುಜಿನಲ್ಲಿ ನಿಂತುಕೊಂಡು ನಾನು ಸುತ್ತುಮುತ್ತಲಿನ ಪರಿಸ್ಥಿತಿಯನ್ನು ಪರೀಕ್ಷಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ಕಿಟಕಿಯೊಂದರಿಂದ ಹಾರಿಸಲ್ಪಟ್ಟ ಒಂದು ರಾಕೆಟ್ ಟ್ಯಾಂಕ್ನ ಮೇಲೆ ಬಿದ್ದು, ಅದು ಸಿಡಿದಾಗ ನಮ್ಮ ಸೈನಿಕರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರು. ಇನ್ನೊಬ್ಬ ಸೈನಿಕನಿಗೂ ನನಗೂ ತುಂಬ ದೊಡ್ಡ ಗಾಯಗಳಾದವು, ಮತ್ತು ಟ್ಯಾಂಕ್ ಮುಂದೆ ಚಲಿಸದಂತಾಯಿತು. ಸುಮಾರು 17 ಸಿಡಿಗುಂಡುಗಳು ನನ್ನ ಕಾಲಿಗೆ ತಗುಲಿದ್ದರೂ, ನಮ್ಮ ಟ್ಯಾಂಕನ್ನು ನಾನು ನಿಯಂತ್ರಣಕ್ಕೆ ತೆಗೆದುಕೊಂಡೆ, ಹಾಗೂ ಇನ್ನೊಂದು ಟ್ಯಾಂಕ್ ನಮ್ಮ ಟ್ಯಾಂಕನ್ನು ಎಳೆದುಕೊಂಡುಹೋಯಿತು.
ಈ ಘಟನಾವಳಿಗಾಗಿ ನನಗೆ, ತುರ್ತು ಪತ್ರದ ಮೂಲಕ ಅಧಿಕೃತ ಶ್ಲಾಘನೆಯು ದೊರಕಿತು. ಕೆಲವು ದಿವಸಗಳ ಬಳಿಕ, ಫ್ರೆಂಚ್ ಫಸ್ಟ್ ಆರ್ಮಿಯ ಕಮಾಂಡರನಾದ ಜನರಲ್ ಡ ಲಟ್ರ ಡ ಟಸೇನ್ಯನು, ಮಾರ್ಸೇಲ್ಸ್ನಲ್ಲಿ ನಾನು ಸಾಧಿಸಿದ್ದ ಕೆಲಸಕ್ಕಾಗಿ ನನಗೆ ಬಿರುದುಪದಕಗಳನ್ನು ಕೊಟ್ಟಾಗ, “ಬೇಗನೆ ನಾವಿಬ್ಬರೂ ಪುನಃ ಪರಸ್ಪರ ಭೇಟಿಯಾಗುವೆವು” ಎಂದು ಹೇಳಿದನು.
ಸ್ವಲ್ಪ ಸಮಯಾನಂತರ ನನ್ನನ್ನು ಜನರಲ್ನ ಖಾಸಗಿ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಸಕಾಲದಲ್ಲಿ ನಾನು ಅವನೊಂದಿಗೆ ಬರ್ಲಿನ್ಗೆ ಹೋದೆ; ಅಲ್ಲಿ 1945ರ ಮೇ 8ರಂದು, ಜರ್ಮನ್ ಶರಣಾಗತವಾಗುವ ಸಮಯದಲ್ಲಿ ಅವನು ಫ್ರಾನ್ಸ್ನ ಪ್ರತಿನಿಧಿಯಾಗಿದ್ದನು. ಮುಂದಿನ ನಾಲ್ಕು ವರ್ಷಗಳ ವರೆಗೆ ನಾನು ಅವನ ಆಜ್ಞಾವರ್ತಿಯಾಗಿ ಸೇವೆಮಾಡಿದೆ.
ಆದರೂ, IIನೆಯ ಲೋಕ ಯುದ್ಧದ ಪ್ರಮುಖ ಘಟನೆಗಳಲ್ಲಿ ನಾನು ಹೇಗೆ ಇಷ್ಟರ ಮಟ್ಟಿಗೆ ಒಳಗೊಂಡಿದ್ದೆ?
ಧರ್ಮ ಹಾಗೂ ಯುದ್ಧದಲ್ಲಿ ತರಬೇತಿ ಪಡೆದುಕೊಂಡದ್ದು
ನಾನು ಒಬ್ಬ ಧರ್ಮನಿಷ್ಠ ರೋಮನ್ ಕ್ಯಾತೊಲಿಕನಾಗಿ ಬೆಳೆದೆ; ನನ್ನ ದೇವರ ಹಾಗೂ ದೇಶದ ಸೇವೆಮಾಡುವ ಬಯಕೆ ನನಗಿತ್ತು. 1939ರ ಆಗಸ್ಟ್ 29ರಂದು, ಫ್ರಾನ್ಸ್ IIನೆಯ ಲೋಕ ಯುದ್ಧವನ್ನು ಪ್ರವೇಶಿಸುವ ಕೆಲವೇ ದಿನಗಳಿಗೆ ಮುಂಚೆ, ಮೋಟರೀಕೃತ ದಂಡಿಗೆ ಸೇರಲು ನಾನು ಸಹಿ ಹಾಕಿದ್ದೆ. ಆಗ ನಾನು ಕೇವಲ 18 ವರ್ಷ ಪ್ರಾಯದವನಾಗಿದ್ದೆ. ಪ್ಯಾರಿಸ್ನಲ್ಲಿರುವ ಏಕೋಲ್ ಮೀಲೀಟರ್ನಲ್ಲಿ ಐದು ತಿಂಗಳುಗಳ ವರೆಗೆ ತರಬೇತಿಯನ್ನು ಪಡೆದ ಬಳಿಕ, ಫ್ರಾನ್ಸ್ನ ಪೂರ್ವ ರಣರಂಗಕ್ಕೆ ನಾನು ಅನಧಿಕೃತ ಅಧಿಕಾರಿಯಾಗಿ ಕಳುಹಿಸಲ್ಪಟ್ಟೆ.
ಈ ಸಮಯಾವಧಿಯನ್ನು ಕಾಲ್ಪನಿಕ ಯುದ್ಧವೆಂದು ಕರೆಯಲಾಗಿತ್ತು. ಹೀಗೆ ಕರೆಯಲು ಕಾರಣವೇನೆಂದರೆ, ಅಷ್ಟರ ತನಕ ಬೇರೆ ರಣರಂಗಗಳಲ್ಲಿ ಕಾದಾಡುತ್ತಿದ್ದ ಜರ್ಮನ್ ಸೈನ್ಯಗಳಿಗಾಗಿ ಕಾಯುವುದಷ್ಟೇ ನಮ್ಮ ಕೆಲಸವಾಗಿತ್ತು. ತದನಂತರ, ಜರ್ಮನರು ಆಕ್ರಮಣಮಾಡಿದಾಗ, ಜೂನ್ 1940ರಲ್ಲಿ ಅವರು ನನ್ನನ್ನು ಸೆರೆಹಿಡಿದರು. ಎರಡು ತಿಂಗಳುಗಳ ಬಳಿಕ ನಾನು ಅಲ್ಲಿಂದ ತಪ್ಪಿಸಿಕೊಂಡೆ, ಮತ್ತು ಕಾಲಕ್ರಮೇಣ ಉತ್ತರ ಆಫ್ರಿಕದಲ್ಲಿದ್ದ ಫ್ರೆಂಚ್ ಪಡೆಗಳನ್ನು ಸೇರಲು ಶಕ್ತನಾದೆ.
ಜನರಲ್ ಇರ್ವಿನ್ ರೋಮಲ್—ಡೆಸರ್ಟ್ ಫಾಕ್ಸ್ ಎಂಬುದು ಅವನ ಅಡ್ಡಹೆಸರು—ನ ನಾಯಕತ್ವದ ಕೆಳಗೆ, ಟೂನಿಸಿಯದಲ್ಲಿ ಜರ್ಮನ್ ಸೇನೆಗಳ ವಿರುದ್ಧವಾದ ದಂಡಯಾತ್ರೆಯಲ್ಲಿ, ನನ್ನ ದೇಹದ 70 ಪ್ರತಿಶತ ಭಾಗವು ಸುಟ್ಟುಹೋಗಿದ್ದು, ಒಂಬತ್ತು ದಿನಗಳ ತನಕ ನಾನು ಕೋಮ ಸ್ಥಿತಿಯಲ್ಲಿದ್ದೆ. ವಾಯವ್ಯ ಆ್ಯಲ್ಜೀರಿಯದ ಸೀಡೀಬೆಲ್ಅಬಿಸ್ನಲ್ಲಿರುವ ಆಸ್ಪತ್ರೆಯೊಂದರಲ್ಲಿ ನಾನು ಮೂರು ತಿಂಗಳು ಇದ್ದೆ; ಫ್ರೆಂಚ್ ವಿದೇಶೀ ಸೈನ್ಯದಳದ ಮುಖ್ಯಕಾರ್ಯಾಲಯವೂ ಅಲ್ಲಿಯೇ ಇತ್ತು. ಉತ್ತರ ಆಫ್ರಿಕದಲ್ಲಿದ್ದಾಗ, ಕ್ರ್ವಾ ಡ ಜರ್ ಎಂಬ ಮಿಲಿಟರಿ ಪದಕ ಸಹ ನನಗೆ ದೊರಕಿತು.
ನಮ್ಮ “ಕ್ರೈಸ್ತ” ಕರ್ತವ್ಯವನ್ನು ಪೂರೈಸುವಂತೆ ಕ್ಯಾತೊಲಿಕ್ ಪಾದ್ರಿಗಳು ನಮ್ಮನ್ನು ಪ್ರೋತ್ಸಾಹಿಸಿದರು. ಅವರ ಬುದ್ಧಿವಾದಗಳಿಗೆ ಹೊಂದಿಕೆಯಲ್ಲಿ, ಫ್ರಾನ್ಸ್ಗಾಗಿ ನನ್ನ ಜೀವಿತವನ್ನೇ ಬಲಿಕೊಡಲು ನಾನು ಸಿದ್ಧನಿದ್ದೆ. ಸಾಧ್ಯವಾದಾಗಲೆಲ್ಲ, ಯುದ್ಧಕ್ಕೆ ಹೋಗುವ ಮೊದಲು ನಾನು ಕಮ್ಯೂನಿಯನ್ ಸ್ವೀಕರಿಸುತ್ತಿದ್ದೆ. ಮತ್ತು ಹೋರಾಟವು ಪ್ರಬಲವಾಗಿರುವಾಗ, ನಾನು ದೇವರಿಗೂ ಕನ್ಯೆ ಮರಿಯಳಿಗೂ ಪ್ರಾರ್ಥಿಸಿದೆ.
ಶತ್ರು ಸೈನಿಕರನ್ನೂ ನಾನು ಗೌರವಿಸಿದೆ; ಅವರಲ್ಲಿ ಅನೇಕರು ಧರ್ಮನಿಷ್ಠ ರೋಮನ್ ಕ್ಯಾತೊಲಿಕರಾಗಿದ್ದರು. ಗಾಟ್ ಮಿಟ್ ಉನ್ಸ್ (ದೇವರು ನಮ್ಮೊಂದಿಗಿದ್ದಾನೆ) ಎಂದು ಬರೆಯಲ್ಪಟ್ಟಿದ್ದಂತಹ ಬಕಲ್ ಇರುವ ಬೆಲ್ಟನ್ನು ಕೆಲವರು ಧರಿಸಿದ್ದರು. ಒಂದೇ ಧರ್ಮಕ್ಕೆ ಸೇರಿದವರಾಗಿದ್ದು, ವಿರುದ್ಧ ಪಕ್ಷದಲ್ಲಿ ಹೋರಾಡುತ್ತಿದ್ದ ಸೈನಿಕರ ಪ್ರಾರ್ಥನೆಗಳಿಗೆ ದೇವರು ಉತ್ತರಿಸುತ್ತಾನೆ ಎಂದು ಆಲೋಚಿಸುವುದು ವಿಚಿತ್ರವಾಗಿ ಕಾಣುವುದಿಲ್ಲವೆ?
ಯುದ್ಧಾನಂತರದ ಬದಲಾವಣೆಗಳು
ಯುದ್ಧಾನಂತರ, 1947ರ ಏಪ್ರಿಲ್ 10ರಂದು, ನಾನು ರ್ಯಾನ್ಳನ್ನು ವಿವಾಹವಾದೆ; ಅವಳು, ಜನರಲ್ ಡ ಲಟ್ರ ಡ ಟಸೇನ್ಯನ ಸ್ವದೇಶವಾದ ವೆಂಡೀಯಲ್ಲಿರುವ ಮೂಯರೋನ್ ಆನ್ ಪರೇ ಎಂಬ ಸ್ಥಳದ ಹುಡುಗಿಯಾಗಿದ್ದಳು. ವಿವಾಹದ ಸಮಯದಲ್ಲಿ ಆ ಜನರಲ್ ನನಗೆ ಸಾಕ್ಷಿಯಾಗಿ ನಿಂತನು. ಅವನ ಮರಣಾನಂತರ, 1952ರ ಜನವರಿ ತಿಂಗಳಿನಲ್ಲಿ, ಅವನ ರಾಜ್ಯಮಟ್ಟದ ಶವಸಂಸ್ಕಾರದ ಸಮಯದಲ್ಲಿ ನಾನು ಅವನ ಧ್ವಜವನ್ನು ಹೊತ್ತುಕೊಂಡಿದ್ದೆ.
ತದನಂತರ, 1952ರ ಒಂದು ಭಾನುವಾರದಂದು, ನಮ್ಮ ಚಿಕ್ಕ ಮಗಳೊಂದಿಗೆ ನನ್ನ ಹೆಂಡತಿ ಹಾಗೂ ನಾನು ಚರ್ಚಿಗೆ ಹೋಗಲು ಸಿದ್ಧರಾಗುತ್ತಿದ್ದಾಗ, ಇಬ್ಬರು ಯೆಹೋವನ ಸಾಕ್ಷಿಗಳು ನಮ್ಮ ಮನೆಯ ಕರೆಗಂಟೆಯನ್ನು ಬಾರಿಸಿದರು. ಅವರು ಬೈಬಲಿನ ಕುರಿತು ಹೇಳಿದ ವಿಚಾರವು ನಮ್ಮ ಕುತೂಹಲವನ್ನು ಕೆರಳಿಸಿತು. ನನ್ನ ಹೆಂಡತಿ ಹಾಗೂ ನಾನು ತುಂಬ ಧಾರ್ಮಿಕ ಮನೋಭಾವದವರಾಗಿದ್ದರೂ, ನಮಗೆ ಬೈಬಲಿನ ಜ್ಞಾನವು ಸ್ವಲ್ಪವೂ ಇರಲಿಲ್ಲ. ಏಕೆಂದರೆ ನಾವು ಬೈಬಲನ್ನು ಓದುವುದನ್ನು ಚರ್ಚು ನಿರುತ್ತೇಜಿಸುತ್ತಿತ್ತು. ಲಿಯೋಪೋಲ್ ಸಾಂಟ ಎಂಬ ಸಾಕ್ಷಿಯು ನಮ್ಮೊಂದಿಗೆ ಬೈಬಲಭ್ಯಾಸ ಮಾಡಲು ಒಪ್ಪಿಕೊಂಡರು; ಆಗ ಅವರು, ಫ್ರಾನ್ಸ್ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನ ಮೇಲ್ವಿಚಾರಕರಾಗಿದ್ದರು. ಕಟ್ಟಕಡೆಗೆ ನಾನು, ನಮ್ಮ ಬೈಬಲ್ ಅಭ್ಯಾಸದಿಂದ, ಬಾಲ್ಯಾವಸ್ಥೆಯಿಂದ ನನಗೆ ಉತ್ತರ ಸಿಕ್ಕಿರದ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಶಕ್ತನಾದೆ.
ಉದಾಹರಣೆಗಾಗಿ, ಕರ್ತನ ಪ್ರಾರ್ಥನೆಯ ವಿಷಯದಲ್ಲಿ ನಾನು ಯಾವಾಗಲೂ ಕುತೂಹಲಿಯಾಗಿದ್ದೆ. ನಾನೊಬ್ಬ ಕ್ಯಾತೊಲಿಕನಾಗಿದ್ದರಿಂದ, ಒಳ್ಳೆಯ ಜನರು ಸತ್ತಾಗ, ಅವರು ಸ್ವರ್ಗಕ್ಕೆ ಹೋಗುತ್ತಾರೆಂದು ನಾನು ನಂಬಿದ್ದೆ. ಆದುದರಿಂದ, “ನಿನ್ನ ಚಿತ್ತವು . . . ಭೂಲೋಕದಲ್ಲಿಯೂ ನೆರವೇರಲಿ” ಎಂದು ನಾವು ದೇವರಿಗೆ ಏಕೆ ಪ್ರಾರ್ಥಿಸುತ್ತೇವೆ ಎಂಬುದು ನನಗೆ ಅರ್ಥವಾಗಿರಲಿಲ್ಲ. (ಮತ್ತಾಯ 6:9, 10, ಓರೆಅಕ್ಷರಗಳು ನಮ್ಮವು.) ಇದರ ಬಗ್ಗೆ ನಾನು ಯಾರೊಂದಿಗೆ ಮಾತಾಡಿದೆನೋ ಆ ಪಾದ್ರಿಗಳು ನನ್ನ ಪ್ರಶ್ನೆಯನ್ನು ತಳ್ಳಿಹಾಕುತ್ತಿದ್ದರು ಅಥವಾ ಪ್ರತಿಯೊಬ್ಬರೂ ರೋಮನ್ ಕ್ಯಾತೊಲಿಕರಾಗಿ ಪರಿವರ್ತಿತರಾಗುವಾಗ ಈ ಪ್ರಾರ್ಥನೆಗೆ ಉತ್ತರ ದೊರಕುತ್ತದೆ ಎಂದು ಹೇಳುತ್ತಿದ್ದರು. ಆದರೆ ಈ ಉತ್ತರಗಳಿಂದ ನನಗೆ ಸಮಾಧಾನವಾಗಲಿಲ್ಲ.
ಇದಲ್ಲದೆ ತ್ರಯೈಕ್ಯದ ಕುರಿತಾದ ನನ್ನ ಪ್ರಶ್ನೆಗಳಿಗೂ ಪಾದ್ರಿಗಳು ಸಮಾಧಾನಕರ ಉತ್ತರಗಳನ್ನು ಕೊಡಲಿಲ್ಲ. ಚರ್ಚಿನ ಕ್ರೈಸ್ತಮತ ಸೂತ್ರದ ನುಡಿಗಳಿಗನುಸಾರ, ಕ್ಯಾತೊಲಿಕ್ ಬೋಧನೆಯು ಹೇಳುವುದೇನೆಂದರೆ, ‘ಪಿತನು ದೇವರು, ಪುತ್ರನು ದೇವರು ಮತ್ತು ಪರಿಶುದ್ಧಾತ್ಮನು ದೇವರು; ಆದರೂ ಮೂವರು ದೇವರುಗಳಿಲ್ಲದೆ ಒಬ್ಬನೇ ದೇವರಿದ್ದಾನೆ.’ ಆದುದರಿಂದ, ಯೇಸು ದೇವರ ಮಗನಾಗಿದ್ದಾನೆ, ಅವನು ಸರ್ವಶಕ್ತ ದೇವರಲ್ಲ ಎಂಬುದನ್ನು ಬೈಬಲಿನಿಂದಲೇ ಸ್ಪಷ್ಟವಾಗಿ ತಿಳಿದುಕೊಂಡದ್ದು, ನನಗೂ ನನ್ನ ಹೆಂಡತಿಗೂ ಸಂತೋಷದ ಮೂಲವಾಗಿತ್ತು.—ಮಾರ್ಕ 12:30, 32; ಲೂಕ 22:42; ಯೋಹಾನ 14:28; ಅ. ಕೃತ್ಯಗಳು 2:32; 1 ಕೊರಿಂಥ 11:3.
ಮೊತ್ತಮೊದಲ ಬಾರಿಗೆ ನಮ್ಮ ಕಣ್ಣುಗಳು ತೆರೆಯಲ್ಪಟ್ಟಿವೆ ಮತ್ತು ನಾವು ಅಮೂಲ್ಯವಾದ ಒಂದು ಮುತ್ತನ್ನು ಕಂಡುಕೊಂಡಿದ್ದೇವೆ, ಅದಕ್ಕಾಗಿ ಮಾಡುವ ಯಾವುದೇ ತ್ಯಾಗಕ್ಕೆ ಅದು ಅರ್ಹವಾಗಿದೆ ಎಂಬ ಭಾವನೆ ನಮ್ಮಿಬ್ಬರಲ್ಲೂ ಉಂಟಾಗಿತ್ತು. (ಮತ್ತಾಯ 13:46) ಈ ನಿಧಿಯನ್ನು ನಮ್ಮದಾಗಿ ಮಾಡಿಕೊಳ್ಳಲು ನಾವು ಒಂದು ಆಯ್ಕೆಯನ್ನು ಮಾಡಬೇಕಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡೆವು. ಬೇಗನೆ ನಾವು ಅಪೊಸ್ತಲ ಪೌಲನಂತಹ ದೃಷ್ಟಿಕೋನವನ್ನು ಬೆಳೆಸಿಕೊಂಡೆವು; ಅವನು ಹೇಳಿದ್ದೇನೆಂದರೆ, “ಕ್ರಿಸ್ತ ಯೇಸುವನ್ನರಿಯುವದೇ, ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ.” ಹೀಗೆ ನಾವು ದೇವರನ್ನು ಸೇವಿಸಲಿಕ್ಕಾಗಿ ನಮ್ಮ ಜೀವಿತಗಳಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಂಡೆವು.—ಫಿಲಿಪ್ಪಿ 3:8.
ನಿಲುವನ್ನು ತೆಗೆದುಕೊಂಡದ್ದು
ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದ ಕೆಲವಾರು ತಿಂಗಳುಗಳ ಬಳಿಕ, 1953ರ ಏಪ್ರಿಲ್ ತಿಂಗಳಿನಲ್ಲಿ, ಇಂಡೊಚೈನಾದಲ್ಲಿ ಹೋರಾಟ ನಡೆಸಲಿಕ್ಕಾಗಿ ಕಳುಹಿಸಲ್ಪಡಲಿಕ್ಕಿದ್ದ ಫ್ರೆಂಚ್ ದಂಡಯಾತ್ರೆ ಸೈನ್ಯದಲ್ಲಿ ಸೇರುವಂತೆ ನನಗೆ ಆಜ್ಞೆ ಬಂತು. ಆ ಸಮಯದಲ್ಲಿ ನಾನು, ಪ್ಯಾರಿಸ್ನಲ್ಲಿರುವ ಸೆನೆಟ್ನ ಕಮಾಂಡಿಂಗ್ ಆಫೀಸರ್ಗೆ ಸಹಾಯಕನಾಗಿ ಸೇವೆಸಲ್ಲಿಸುತ್ತಿದ್ದೆ. ಅಷ್ಟರಲ್ಲಾಗಲೇ ನಾನು ತಾಟಸ್ಥ್ಯದ ಕುರಿತಾದ ಬೈಬಲ್ ಮೂಲತತ್ವವನ್ನು ಅರ್ಥಮಾಡಿಕೊಂಡಿದ್ದರಿಂದ, ನಾನೀಗ ಒಂದು ನಿರ್ಣಯವನ್ನು ಮಾಡಬೇಕೆಂಬುದು ನನಗೆ ಗೊತ್ತಾಯಿತು. (ಯೋಹಾನ 17:16) ನಾನು ಇನ್ನೆಂದಿಗೂ ಯುದ್ಧದಲ್ಲಿ ಭಾಗವಹಿಸಲು ಬಯಸುವುದಿಲ್ಲ ಎಂಬುದನ್ನು ತಿಳಿಯಪಡಿಸುತ್ತಾ, ಇಂಡೊಚೈನಾದಲ್ಲಿನ ಕದನಕ್ಕೆ ನಾನು ಬರುವುದಿಲ್ಲ ಎಂದು ನನ್ನ ಮೇಲ್ವಿಚಾರಕರಿಗೆ ಸುದ್ದಿ ಮುಟ್ಟಿಸಿದೆ.—ಯೆಶಾಯ 2:4.
“ನಿನ್ನ ಹೆಸರಿಗೆ ಕಳಂಕ ಬರುತ್ತದೆ ಮತ್ತು ಎಲ್ಲ ಸದವಕಾಶಗಳು ಕೈತಪ್ಪಿಹೋಗುತ್ತವೆ ಎಂಬುದು ನಿನಗೆ ಗೊತ್ತೊ?” ಎಂದು ನನ್ನ ಮೇಲ್ವಿಚಾರಕರು ಕೇಳಿದರು. ಸಾಂಕೇತಿಕವಾಗಿ ಹೇಳುವುದಾದರೆ, ಅಂದಿನಿಂದ ಅವರು ನನ್ನನ್ನು ಉಪೇಕ್ಷಿಸಿದರು. ಆದರೆ ಇದು ಒಳಿತೇ ಆಗಿತ್ತು, ಏಕೆಂದರೆ ತದನಂತರ ನನ್ನನ್ನು ಎಂದೂ ಮಿಲಿಟರಿ ಕಾರ್ಯಗಳಿಗಾಗಿ ಕರೆಯಲಾಗುತ್ತಿರಲಿಲ್ಲ. ನನ್ನ ಕುಟುಂಬದವರು ಹಾಗೂ ಸ್ನೇಹಿತರಲ್ಲಿ ಅನೇಕರು ಯಾವುದನ್ನು ಸಮಾಜದಲ್ಲಿ ಒಂದು ಉನ್ನತ ಪದವಿಯೆಂದು ಪರಿಗಣಿಸಿದ್ದರೋ ಅದನ್ನು ನಾನು ಹೇಗೆ ಬಿಟ್ಟುಕೊಟ್ಟೆ ಎಂಬುದು ಅವರಲ್ಲಿ ಯಾರಿಗೂ ಅರ್ಥವಾಗಲಿಲ್ಲ.
ನನ್ನ ಮಿಲಿಟರಿ ಕಾರ್ಯಗಳ ದಾಖಲೆಯ ಫಲಿತಾಂಶವಾಗಿ, ಅಧಿಕಾರಿಗಳು ನನ್ನನ್ನು ತುಂಬ ಅಭಿಮಾನದಿಂದ ಕಾಣುತ್ತಿದ್ದರು. ನನ್ನ ನಂಬಿಕೆಗಳು ಏನೇ ಇರಲಿ, ಅವರು ನನ್ನನ್ನು ಗೌರವಿಸುತ್ತಿದ್ದರು. ಎರಡು ವರ್ಷಗಳ ಬಳಿಕ, ನನಗೆ ತುಂಬ ದಿನಗಳ ವರೆಗೆ ಹೆಲ್ತ್ ಲೀವ್ ಸಿಕ್ಕಿತು, ಮತ್ತು ನಾನು ಯಾವುದೇ ಕೆಲಸವನ್ನು ಮುಂದುವರಿಸುವ ಅಗತ್ಯವಿರಲಿಲ್ಲ. ಈ ಮಧ್ಯೆ, ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯಲ್ಲಿನ ಕೂಟಗಳಿಗೆ ನಾನೂ ನನ್ನ ಹೆಂಡತಿಯೂ ಹಾಜರಾದೆವು ಮತ್ತು ಹೊಸದಾಗಿ ಕಲಿತುಕೊಂಡ ವಿಷಯಗಳನ್ನು ಇತರರಿಗೂ ತಿಳಿಯಪಡಿಸಿದೆವು.
ಕೊನೆಗೂ ಕ್ರಿಸ್ತನ ಸೈನಿಕನಾದೆ!
ಕಟ್ಟಕಡೆಗೆ, 1955ರ ಆರಂಭದಲ್ಲಿ ನಾನು ಮಿಲಿಟರಿ ಹಂಗುಗಳಿಂದ ಮುಕ್ತನಾದೆ. ಹದಿನೈದು ದಿನಗಳ ಬಳಿಕ, ಮಾರ್ಚ್ 12ರಂದು, ವರ್ಸೇಲಸ್ನಲ್ಲಿ ನಡೆದ ಒಂದು ಸಮ್ಮೇಳನದಲ್ಲಿ, ನನ್ನ ಹೆಂಡತಿ ಹಾಗೂ ನಾನು ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವ ದೇವರಿಗೆ ನಮ್ಮ ಸಮರ್ಪಣೆಯನ್ನು ವ್ಯಕ್ತಪಡಿಸಿದೆವು. ಈಗ ನನ್ನ ವೃತ್ತಿಪರ ಸನ್ನಿವೇಶವು ಬದಲಾಗಿದ್ದರಿಂದ, ನನ್ನ ಕುಟುಂಬದ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ನಾನು ಒಂದು ಉದ್ಯೋಗವನ್ನು ಕಂಡುಕೊಳ್ಳಬೇಕಿತ್ತು. ಮುಂದಿನ ನಾಲ್ಕು ವರ್ಷಗಳ ವರೆಗೆ ನಾನು, ಪ್ಯಾರಿಸ್ನಲ್ಲಿರುವ ಆಲ್ (ಮುಖ್ಯ ಮಾರುಕಟ್ಟೆ)ನಲ್ಲಿ ಕೂಲಿಯಾಳಾಗಿ ಕೆಲಸಮಾಡಿದೆ. ಅಂತಹ ಹೊಂದಾಣಿಕೆಯನ್ನು ಮಾಡುವುದು ಸುಲಭವಾಗಿರಲಿಲ್ಲ, ಆದರೂ ಯೆಹೋವನು ನನ್ನ ಪ್ರಯತ್ನಗಳನ್ನು ಆಶೀರ್ವದಿಸಿದನು.
ಗತ ವರ್ಷಗಳಲ್ಲಿ, ನಾನೂ ನನ್ನ ಹೆಂಡತಿಯೂ, ಬೈಬಲ್ ಸಂದೇಶವನ್ನು ಅಂಗೀಕರಿಸುವಂತೆ ಅನೇಕ ಜನರಿಗೆ ಸಹಾಯ ಮಾಡಲು ಶಕ್ತರಾಗಿದ್ದೇವೆ. ಬೇರೆ ಬೇರೆ ಮಿಲಿಟರಿ ಹಾಗೂ ಸಿವಿಲ್ ಅಧಿಕಾರಿಗಳಿಗೆ, ತಾಟಸ್ಥ್ಯದ ಕುರಿತಾದ ಕ್ರೈಸ್ತ ದೃಷ್ಟಿಕೋನವನ್ನು ವಿವರಿಸುವಂತಹ ಅವಕಾಶ ಸಹ ನನಗೆ ಸಿಕ್ಕಿತ್ತು. ಒಬ್ಬ ಸೈನಿಕನೋಪಾದಿ ನನ್ನ ಹಿಂದಿನ ಜೀವನಮಾರ್ಗವು, ಯೆಹೋವನ ಸಾಕ್ಷಿಗಳ ಬಗ್ಗೆ ಅನೇಕರಿಗಿರುವ ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಹೊಡೆದೋಡಿಸಲು ಸಹಾಯಕರವಾಗಿ ಪರಿಣಮಿಸಿದೆ. ಕ್ರಿಸ್ತನ ಆರಂಭದ ಹಿಂಬಾಲಕರು ಸಹ ಇದೇ ರೀತಿಯ ನಿಲುವನ್ನು ತೆಗೆದುಕೊಂಡಿದ್ದರೆಂಬುದನ್ನು ತೋರಿಸುತ್ತಾ, ರಾಷ್ಟ್ರಗಳ ಯುದ್ಧಗಳ ಸಂಬಂಧದಲ್ಲಿನ ತಾಟಸ್ಥ್ಯದ ಕುರಿತಾದ ನಮ್ಮ ಕ್ರೈಸ್ತ ನಿಲುವನ್ನು ವಿವರಿಸುವಂತಹ ಸಂದರ್ಭಗಳು ಸಹ ನನಗೆ ದೊರೆತಿವೆ. ಉದಾಹರಣೆಗಾಗಿ, ದಿ ಅರ್ಲಿ ಚರ್ಚ್ ಆ್ಯಂಡ್ ದ ವರ್ಲ್ಡ್ ಎಂಬ ತಮ್ಮ ಪುಸ್ತಕದಲ್ಲಿ, ಪ್ರೊಫೆಸರ್ ಸಿ. ಜೆ. ಕಾಡೂ ಬರೆದುದು: “ಮಾರ್ಕಸ್ ಆರೆಲಿಯಸ್ನ ಆಳಿಕೆಯ ವರೆಗಾದರೂ, [ಸಾ.ಶ. 161-180] ಯಾವ ಕ್ರೈಸ್ತನೂ ತನ್ನ ದೀಕ್ಷಾಸ್ನಾನದ ತರುವಾಯ ಸೈನಿಕನಾಗುತ್ತಿರಲಿಲ್ಲ.”
ನಾನು ಅನುಭವಿಸಿದ ಅತ್ಯಂತ ಕಷ್ಟಕರ ಪರೀಕ್ಷೆಗಳಲ್ಲಿ ಒಂದು, 1977ರಲ್ಲಾದ ನನ್ನ ಹೆಂಡತಿಯ ಮರಣವಾಗಿತ್ತು. ಸುಮಾರು ಒಂದು ವರ್ಷದ ವರೆಗೆ ಅಸ್ವಸ್ಥತೆಯಿಂದ ನರಳಿದ ಬಳಿಕ ಅವಳು ಮೃತಪಟ್ಟಳು. ಅವಳು ತನ್ನ ನಂಬಿಕೆಯನ್ನು ಮರಣದ ವರೆಗೂ ಧೈರ್ಯದಿಂದ ವ್ಯಕ್ತಪಡಿಸಿದಳು. ಪುನರುತ್ಥಾನದ ಅದ್ಭುತಕರ ನಿರೀಕ್ಷೆಯು ನನಗೆ ಸಾಂತ್ವನ ನೀಡಿತು. (ಯೋಹಾನ 5:28, 29) ನನ್ನ ದುಃಖಭರಿತ ಸ್ಥಿತಿಯನ್ನು ದೂರಮಾಡುವ ಇನ್ನೊಂದು ಸಹಾಯವು, ಒಬ್ಬ ಕ್ರಮದ ಪಯನೀಯರ್—ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರನ್ನು ಹೀಗೆ ಕರೆಯಲಾಗುತ್ತದೆ—ಆಗುವುದಾಗಿತ್ತು. 1982ರಲ್ಲಿ ಐಹಿಕ ಕೆಲಸದಿಂದ ನಿವೃತ್ತನಾದ ಬಳಿಕ ನಾನು ಇದನ್ನು ಆರಂಭಿಸಿದೆ. ತದನಂತರ, 1988ರಲ್ಲಿ, ಪಯನೀಯರರನ್ನು ತರಬೇತುಗೊಳಿಸುವ ಶಾಲೆಯಲ್ಲಿ ಶಿಕ್ಷಕನೋಪಾದಿ ಸೇವೆಮಾಡಲು ನಾನೆಷ್ಟು ಸಂತೋಷಗೊಂಡಿದ್ದೆ!
ನನ್ನ ಹೆಂಡತಿಯು ಮೃತಪಟ್ಟ ಸಮಯದಿಂದ, ನಾನು ಆಗಿಂದಾಗ್ಗೆ ಖಿನ್ನತೆಯನ್ನು ಅನುಭವಿಸಿದ್ದೇನೆ. ಆದರೆ, ನನ್ನ ಆಪ್ತ ಸ್ನೇಹಿತರು, ಆತ್ಮಿಕವಾಗಿ ಪ್ರೌಢರಾದ ಸ್ನೇಹಿತರು, ಪುನಃ ಚೇತರಿಸಿಕೊಳ್ಳುವಂತೆ ನನಗೆ ಸಹಾಯ ಮಾಡಿದ್ದಾರೆ. ಅಂತಹ ಪರೀಕ್ಷೆಗಳ ಕೆಳಗಿರುವಾಗ, ತನ್ನ ಮೇಲೆ ಭರವಸೆಯಿಡುವವರೆಲ್ಲರ ಆರೈಕೆ ಮಾಡುವಾತನಾದ ಯೆಹೋವನ ಬಲ ಹಾಗೂ ಪ್ರೀತಿದಯೆಯನ್ನು ನಾನು ಯಾವಾಗಲೂ ಅನುಭವಿಸಿದ್ದೇನೆ. (ಕೀರ್ತನೆ 18:2) ನಾವು ಅನುಭವಿಸುವ ಪರೀಕ್ಷೆಗಳು, ನಮ್ಮ ಆತ್ಮಿಕ ಯುದ್ಧದಲ್ಲಿ ನಾವು ಮುಂದುವರಿಯುತ್ತಾ ಇರಲಿಕ್ಕಾಗಿ ನಮ್ಮನ್ನು ತರಬೇತುಗೊಳಿಸುತ್ತವೆ ಎಂಬುದು ನನ್ನ ಅನಿಸಿಕೆ. (1 ಪೇತ್ರ 1:6, 7) ನಾನೊಬ್ಬ ಸಭಾ ಹಿರಿಯನಾಗಿದ್ದು, ಈಗ ಖಿನ್ನತೆಗೆ ಒಳಗಾಗಿರುವ ಇತರರಿಗೆ ಸಹಾಯ ಮಾಡಲು ಶಕ್ತನಾಗಿದ್ದೇನೆ.—1 ಥೆಸಲೊನೀಕ 5:14.
ನಾನು ಚಿಕ್ಕ ಹುಡುಗನಾಗಿದ್ದಾಗ, ಒಬ್ಬ ಸೈನಿಕನಾಗುವ ಕನಸು ಕಂಡಿದ್ದೆ, ಮತ್ತು ಒಂದರ್ಥದಲ್ಲಿ ಇಷ್ಟರ ವರೆಗೂ ನಾನು ಒಬ್ಬ ಸೈನಿಕನಾಗಿ ಉಳಿದಿದ್ದೇನೆ. ನಾನು ಒಂದು ಸೈನ್ಯವನ್ನು ಬಿಟ್ಟು, ಇನ್ನೊಂದು ಸೈನ್ಯಕ್ಕೆ ಸೇರಿದ್ದೇನೆ, ಅಂದರೆ, “ಕ್ರಿಸ್ತ ಯೇಸುವಿನ . . . ಸೈನಿಕ”ನಾಗಿದ್ದೇನೆ. (2 ತಿಮೊಥೆಯ 2:3) ಇಂದು, ನನ್ನ ಅರೋಗ್ಯ ಅಷ್ಟೇನೂ ಒಳ್ಳೇದಿಲ್ಲ. ಆದರೂ, ಕಟ್ಟಕಡೆಗೆ ನಮ್ಮ ದೇವರ ಘನಮಾನಮಹಿಮೆಗೆ, ಅಂದರೆ ವಿಜಯಕ್ಕೆ ನಡಿಸುವ “ದಿವ್ಯ ಯುದ್ಧ”ದಲ್ಲಿ, ಕ್ರಿಸ್ತನ ಸೈನಿಕನೋಪಾದಿ ನಾನು ಹೋರಾಟವನ್ನು ಮುಂದುವರಿಸಲು ನನ್ನಿಂದಾದಷ್ಟು ಮಟ್ಟಿಗೆ ಶ್ರಮಿಸುತ್ತಿದ್ದೇನೆ.—1 ತಿಮೊಥೆಯ 1:18.
ಈ ಲೇಖನವು ಪ್ರಕಾಶನಕ್ಕಾಗಿ ಸಿದ್ಧಗೊಳಿಸಲ್ಪಡುತ್ತಿರುವಾಗ, 1998ರ ಮಾರ್ಚ್ 1ರಂದು ಲ್ವೀ ಲಾಲ್ಯೊ ಮೃತಪಟ್ಟರು.
[ಪುಟ 24 ರಲ್ಲಿರುವ ಚಿತ್ರ]
ನಮ್ಮ ವಿವಾಹ—ಜನರಲ್ ಡ ಲಟ್ರ ಡ ಟಸೇನ್ಯನು ಅದಕ್ಕೆ ಬಂದಿದ್ದನು
[ಪುಟ 26 ರಲ್ಲಿರುವ ಚಿತ್ರ]
1976ರಲ್ಲಿ, ಲ್ವೀ ಲಾಲ್ಯೊ ಮತ್ತು ಅವರ ಹೆಂಡತಿ ರ್ಯಾನ್