ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 8/8 ಪು. 24-28
  • ಲಲಿತವಾದ ರೆಕ್ಕೆಗಳಿರುವ ಮೃತ್ಯು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಲಲಿತವಾದ ರೆಕ್ಕೆಗಳಿರುವ ಮೃತ್ಯು
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವೈರಿಗಾಗಿ ಸೈರಣೆಯ ಶೋಧನೆ
  • ಮಲೇರಿಯದ ಧ್ವಂಸ ಫಲಗಳು
  • ಜಯವನ್ನು ಸಂಪಾದಿಸಲು ಹೋರಾಟ
  • ಹೊಸ ಆಯುಧಗಳು
  • ಶುಭ ಪ್ರತೀಕ್ಷೆಯ ಪ್ರತಿದಾಳಿ
  • ಮಲೇರಿಯ ಮರುಹೋರಾಡುತ್ತದೆ
  • ಮಲೇರಿಯಾ—ಇದರ ಬಗ್ಗೆ ನಿಮಗೆ ತಿಳಿದಿದೆಯಾ?
    ಎಚ್ಚರ!—2015
  • ಮಲೇರಿಯದ ವಿರುದ್ಧ ಹೋರಾಟದಲ್ಲಿ ಪುನಃ ಪ್ರಾಥಮಿಕತೆಗೆ
    ಎಚ್ಚರ!—1997
  • ಮಲೇರಿಯ ವಿರುದ್ಧ ಹೊಸ ಅಸ್ತ್ರ
    ಎಚ್ಚರ!—1994
  • “ಪರಿಹಾರಸಾಧ್ಯ” ರೋಗಗಳ ಹಿಮ್ಮರಳಿಕೆ ಏಕೆ?
    ಎಚ್ಚರ!—1994
ಇನ್ನಷ್ಟು
ಎಚ್ಚರ!—1993
g93 8/8 ಪು. 24-28

ಲಲಿತವಾದ ರೆಕ್ಕೆಗಳಿರುವ ಮೃತ್ಯು

ಅದು ತಲೆಬರಹಗಳನ್ನು ಫಕ್ಕನೆ ಹಿಡಿಯುವ ಒಂದು ಯುದ್ಧವಲ್ಲ; ಆದರೂ ಲೆಕ್ಕವಿಲ್ಲದ ಲಕ್ಷಾಂತರ ಮಾನವ ಜೀವಗಳನ್ನು ಅದು ಆಹುತಿ ತೆಗೆದುಕೊಂಡಿದೆ. ಅದು ಬಾಂಬ್‌ಗಳು ಮತ್ತು ಗುಂಡುಗಳಿಂದ ಹೋರಾಡುವ ಒಂದು ಯುದ್ಧವಲ್ಲ; ಆದರೂ ದುರವಸ್ಥೆ ಮತ್ತು ಜೀವ ನಷ್ಟದ ಪರಿಭಾಷೆಯಲ್ಲಿ, ಅವುಗಳನ್ನು ಉಪಯೋಗಿಸುವ ಯುದ್ಧಗಳೊಂದಿಗೆ ಸ್ಪರ್ಧಿಸುತ್ತದೆ ಯಾ ಅವುಗಳನ್ನು ಮೀರಿಸುತ್ತದೆ. ಈ ಯುದ್ಧದಲ್ಲಿ, ಮೃತ್ಯು, ವೈರಿಯ ಬಾಂಬರ್‌ ವಿಮಾನಗಳ ಉದರದಿಂದ ಬರುವದಿಲ್ಲ, ಬದಲಿಗೆ ಒಂದು ಹೆಣ್ಣು ಸೊಳ್ಳೆಯ ನಾಜೂಕು ರಚನೆಯ ರೆಕ್ಕೆಗಳ ಮೇಲೆ ಬರುತ್ತದೆ.

ನೈಜೀರಿಯದಲ್ಲಿನ ಎಚ್ಚರ! ಸುದ್ದಿಗಾರರಿಂದ

ರಾತ್ರಿಯಾಗಿದೆ; ಮನೆವಾರ್ತೆಯವರು ಮಲಗಿದ್ದಾರೆ. ಪ್ರತಿ ಸೆಕೆಂಡಿಗೆ ತನ್ನ ರೆಕ್ಕೆಗಳನ್ನು 200 ಮತ್ತು 500ರ ನಡುವೆ ಸ್ಪಂದಿಸುತ್ತಾ, ಹೆಣ್ಣು ಸೊಳ್ಳೆಯೊಂದು ಮಲಗುವ ಕೋಣೆಯೊಳಗೆ ಸುಳಿಯುತ್ತದೆ. ಅದು ಮಾನವ ರಕ್ತಕ್ಕಾಗಿ ಹಂಬಲಿಸುತ್ತದೆ. ಮೆಲ್ಲನೆ, ಅದು ಹುಡುಗನೊಬ್ಬನ ಕೈಯ ಮೇಲೆ ನೆಲಸುತ್ತದೆ. ಅದರ ತೂಕವು ಕೇವಲ 3⁄1000 ಗ್ರ್ಯಾಮ್‌ ಆಗಿರುವದರಿಂದ, ಹುಡುಗನು ಕದಲುವದಿಲ್ಲ. ಅದು ತನ್ನ ಬಾಯಿಯ ಮುಳ್ಳುಗಳುಳ್ಳ ಅಂಚಿನಲ್ಲಿ ಒಂದು ಗರಗಸ ಹಲ್ಲಿನಂತಿರುವ ಸೂಜಿಯನ್ನು ಹೊರಗೆ ತೆಗೆದು ಅದರಿಂದ ಒಂದು ಲೋಮನಾಳದ ಮೇಲೆ ಹುಡುಗನ ಚರ್ಮವನ್ನು ಚುಚ್ಚುತ್ತದೆ. ಅದರ ತಲೆಯಲ್ಲಿನ ಎರಡು ಪಂಪುಗಳು ಅವನ ರಕ್ತವನ್ನು ಹೀರುತ್ತವೆ. ಅದೇ ಸಮಯದಲ್ಲಿ, ಮಲೇರಿಯದ ಪರೋಪಜೀವಿಗಳು ಸೊಳ್ಳೆಯ ಲಾಲಾಗ್ರಂಥಿಗಳಿಂದ ಹುಡುಗನ ರಕ್ತದಹರಿಯೊಳಗೆ ಸಾಗುತ್ತವೆ. ಶಸ್ತ್ರ ಚಿಕಿತ್ಸೆಯು ಕ್ಷಿಪ್ರವಾಗಿ ಮುಗಿಯುತ್ತದೆ; ಅವನಿಗೆ ಏನೂ ಅನಿಸುವದಿಲ್ಲ. ತನ್ನ ದೇಹದ ತೂಕಕ್ಕಿಂತ ಮೂರು ಪಟ್ಟು ಹೆಚ್ಚು ರಕ್ತದಿಂದ ಊದಿದ ಸೊಳ್ಳೆಯು ಹಾರಿಹೋಗುತ್ತದೆ. ಸ್ವಲ್ಪ ದಿನಗಳ ಅನಂತರವೆ, ಹುಡುಗನು ಮರಣ ಹೊಂದುವಷ್ಟರ ಮಟ್ಟಿಗೆ ರೋಗಗ್ರಸ್ತನಾಗುತ್ತಾನೆ. ಅವನಿಗೆ ಮಲೇರಿಯ ರೋಗವಿದೆ.

ಇದು ನೂರಾರು ಬಾರಿ ಪುನರಾವೃತ್ತಿಸಲ್ಪಟ್ಟ ಒಂದು ದೃಶ್ಯವಾಗಿದೆ. ಪರಿಣಾಮವು ಒಂದು ಬೃಹದಾಕಾರದ ಪ್ರಮಾಣದಲ್ಲಿ ದುರವಸ್ಥೆ ಮತ್ತು ಮರಣವಾಗಿದೆ. ಸಂದೇಹವಿಲ್ಲದೆ, ಮಲೇರಿಯ ಮಾನವ ವರ್ಗದ ಒಂದು ಕ್ರೂರವಾದ ಮತ್ತು ನಿಷ್ಕರುಣೆಯ ವೈರಿಯಾಗಿದೆ.

ವೈರಿಗಾಗಿ ಸೈರಣೆಯ ಶೋಧನೆ

ಮಲೇರಿಯ ವಿರುದ್ಧದ ಯುದ್ಧದಲ್ಲಿ ಮೂಲಭೂತ ಕಂಡುಹಿಡಿತಗಳಲ್ಲಿ ಒಂದು, ಯೂರೋಪಿನ ದೊಡ್ಡ ವಿಜ್ಞಾನಿಗಳಿಂದ ಅಲ್ಲ, ಭಾರತದಲ್ಲಿ ನೆಲಸಿದ್ದ ಒಬ್ಬ ಬ್ರಿಟಿಷ್‌ ಸೈನ್ಯದ ಸರ್ಜನ್‌ನಿಂದ ಮಾಡಲ್ಪಟ್ಟಿತು. ಎರಡು ಸಾವಿರ ವರ್ಷಗಳ ಹಿಂದಿನ ಆಲೋಚನೆಗೆ ಹೊಂದಾಣಿಕೆಯಲ್ಲಿ, 19ನೆಯ ಶತಮಾನದ ವಿಜ್ಞಾನಿಗಳು ಮತ್ತು ವೈದ್ಯರು, ರೋಗವನ್ನು ಜನರು ಹೊಲಸು ಕೊಳಚೆ ಗಾಳಿಯನ್ನು ಸೇವಿಸುವ ಮೂಲಕ ಪಡೆಯುತ್ತಾರೆಂದು ಊಹಿಸಿದರು.a ಅದಕ್ಕೆ ಭಿನ್ನವಾಗಿ, ರೋಗವು ವ್ಯಕ್ತಿಯಿಂದ ವ್ಯಕ್ತಿಗೆ ಸೊಳ್ಳೆಗಳ ಮೂಲಕ ಹರಡುತ್ತದೆ ಎಂದು ಡಾ. ರಾನಲ್ಡ್‌ ರಾಸ್‌ ನಂಬಿದರು. ಮಲೇರಿಯ ಮಾನವನ ರಕ್ತದ ಹರಿವಿನಲ್ಲಿ ಪರೋಪಜೀವಿಗಳನ್ನು ಒಳಗೊಂಡಿದೆ ಎಂದು ತಿಳಿದು ಬಂದಾಗಲೂ ಕೂಡ, ಸಂಶೋಧಕರು ಜವುಗು ಪ್ರದೇಶದ ಗಾಳಿ ಮತ್ತು ನೀರಿನಲ್ಲಿ ಸುಳಿವಿಗಾಗಿ ಶೋಧಿಸುವುದನ್ನು ಮುಂದುವರಿಸಿದರು. ಈ ನಡುವೆ, ರಾಸ್‌ ಅವರು ಸೊಳ್ಳೆಗಳ ಹೊಟ್ಟೆಯನ್ನು ಪರೀಕ್ಷಿಸಿದರು.

ಅವರು ಕೆಲಸ ಮಾಡಬೇಕಿದ್ದ ಆದಿ ಕಾಲದ ಪ್ರಯೋಗದ ಸಲಕರಣೆಗಳನ್ನು ಪರಿಗಣಿಸುವಾಗ, ಸೊಳ್ಳೆಗಳ ಹೊಟ್ಟೆಗಳೊಳಗೆ ನೋಡುವುದು ಸುಲಭವಾದ ಕೆಲಸವಾಗಿರಲಿಲ್ಲ. ರಾಸ್‌ಗನುಸಾರ, ಅವರು ಕೆಲಸ ಮಾಡುವಾಗ, “ಅವುಗಳ ಮಿತ್ರರ ಮರಣಕ್ಕಾಗಿ,” ತಾವೇ ಹಗೆ ತೀರಿಸಿಕೊಳ್ಳಲು ನಿಶ್ಚಯಿಸಿಕೊಂಡ, ಸೊಳ್ಳೆಗಳ ಮತ್ತು ನುಸಿಹುಳುಗಳ ಮೇಘವು ಅವರ ಸುತ್ತಲೂ ಗುಂಪುಗೂಡಿದವು.

ಕೊನೆಗೆ, 1897, ಆಗಸ್ಟ್‌ 16ರಂದು, ಅನಾಫಿಲೀಸ್‌ ಸೊಳ್ಳೆಯ ಹೊಟ್ಟೆಯಲ್ಲಿ, ಒಂದೇ ರಾತ್ರಿಯಲ್ಲಿ ಗಾತ್ರದಲ್ಲಿ ಬೆಳೆದಿದ್ದ ಗೋಳಾಕಾರದ ಜೀವಿಗಳನ್ನು ರಾಸ್‌ ಕಂಡುಹಿಡಿದರು. ಮಲೇರಿಯ ಪರೋಪಜೀವಿಗಳು!

ಪರಮಾನಂದದಿಂದ ತುಂಬಿದವರಾಗಿ, “ಅಸಂಖ್ಯಾತ ಮನುಷ್ಯರನ್ನು” ರಕ್ಷಿಸಬಹುದಾದ ರಹಸ್ಯವನ್ನು ತಾವು ಬಹಿರಂಗಪಡಿಸಿದರೆಂದು ತಮ್ಮ ಟಿಪ್ಪಣಿ ಪುಸ್ತಕದಲ್ಲಿ ರಾಸ್‌ ಬರೆದರು. ಬೈಬಲ್‌ ಪುಸ್ತಕವಾದ ಕೊರಿಂಥದಿಂದ ಒಂದು ವಚನವನ್ನು ಕೂಡ ಅವರು ಬರೆದರು: “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?”—1 ಕೊರಿಂಥ 15:55 ಹೋಲಿಸಿ.

ಮಲೇರಿಯದ ಧ್ವಂಸ ಫಲಗಳು

ಮಲೇರಿಯ ವಿರುದ್ಧದ ಯುದ್ಧದಲ್ಲಿ, ರಾಸ್‌ರ ಕಂಡುಹಿಡಿತವು, ರೋಗ ಮತ್ತು ಅದನ್ನು ಹರಡಿಸುವ ಕೀಟಗಳ ವಿರುದ್ಧ ಮಾನವ ವರ್ಗದ ಮೊದಲ ಪ್ರಮುಖ ಆಕ್ರಮಣಕ್ಕೆ ದಾರಿಯನ್ನು ತೆರೆಯಲು ಸಹಾಯ ಮಾಡಿದ ಮೈಲಗಲ್ಲಾಗಿತ್ತು.

ಇತಿಹಾಸದ ಅಧಿಕಾಂಶದಲ್ಲೆಲ್ಲ, ಮಲೇರಿಯದಿಂದ ಮಾನವ ಕುಲಕ್ಕೆ ಭಾರೀ ಮತ್ತು ಲಂಬಿಸಿದ ನಷ್ಟವಾಗಿದೆ. ಕ್ರಿಸ್ತನು ಭೂಮಿಯ ಮೇಲೆ ನಡೆಯುವ 1,500 ವರ್ಷಗಳ ಮುಂಚೆಯೇ, ಮಲೇರಿಯದ ಕಗ್ಗೊಲೆಗೆ ಐಗುಪ್ತದ ರಹಸ್ಯಲಿಪಿಗಳು ಮತ್ತು ಜಂಬು ಕಾಗದಗಳು ಸಾಕ್ಷ್ಯಕೊಡುತ್ತವೆ. ಪ್ರಾಚೀನ ಗ್ರೀಸ್‌ ದೇಶದ ಸುಂದರವಾದ ತಗ್ಗು ಪ್ರದೇಶಗಳ ನಗರಗಳನ್ನು ಅದು ಧ್ವಂಸ ಮಾಡಿತು ಮತ್ತು ಮಹಾ ಅಲೆಗ್ಸಾಂಡರ್‌ನನ್ನು ಅವನ ಯೌವನ ಪ್ರಾಯದಲ್ಲೇ ಕೊಂದಿತು. ಅದು ರೋಮನ್‌ ಪಟ್ಟಣಗಳ ಭಾರಿ ನಾಶನವನ್ನು ತಂದಿತು ಮತ್ತು ಶ್ರೀಮಂತರು ಮಲೆ ನಾಡುಗಳಿಗೆ ಹೋಗುವಂತೆ ಮಾಡಿತು. ಧಾರ್ಮಿಕ ಯುದ್ಧಗಳು, ಅಮೆರಿಕನ್‌ ಆಂತರಿಕ ಯುದ್ಧ, ಮತ್ತು ಎರಡು ಲೋಕ ಯುದ್ಧಗಳಲ್ಲಿ ಅದು ಅನೇಕ ಪ್ರಮುಖ ಕಾಳಗಗಳು ಕೊಂದದ್ದಕ್ಕಿಂತ ಹೆಚ್ಚು ಪುರುಷರನ್ನು ವಧಿಸಿತು.

ಆಫ್ರಿಕದಲ್ಲಿ, ಪಶ್ಚಿಮ ಆಫ್ರಿಕ “ಬಿಳಿಯನ ಸಮಾಧಿ” ಎಂಬ ವಿಶೇಷಣವನ್ನು ಸಂಪಾದಿಸಿಕೊಳ್ಳಲು ಮಲೇರಿಯ ಸಹಾಯ ಮಾಡಿತು. ವಾಸ್ತವವಾಗಿ, ಆಫ್ರಿಕವನ್ನು ನೆಲಸುನಾಡನ್ನಾಗಿ ಸ್ಥಾಪಿಸಲು ಯೂರೋಪಿಯನ್‌ ಹೋರಾಟವನ್ನು ಈ ರೋಗವು ಎಷ್ಟು ತಡೆಗಟ್ಟಿತ್ತು ಎಂದರೆ, ಪಶ್ಚಿಮ ಆಫ್ರಿಕದ ಒಂದು ವಿಶ್ವವಿದ್ಯಾನಿಲಯವು ಸೊಳ್ಳೆಯನ್ನು ರಾಷ್ಟ್ರೀಯ ಹೀರೊ ಎಂಬುದಾಗಿ ಘೋಷಿಸಿತು! ಮಧ್ಯ ಅಮೆರಿಕದಲ್ಲಿ, ಪ್ಯಾನಮಾ ಕಾಲುವೆಯನ್ನು ಕಟ್ಟಲು ಫ್ರೆಂಚ್‌ ಪ್ರಯತ್ನಗಳನ್ನು ಸೋಲಿಸುವಲ್ಲಿ ಮಲೇರಿಯವು ಸಹಾಯ ಮಾಡಿತು. ದಕ್ಷಿಣ ಅಮೆರಿಕದಲ್ಲಿ, ಮಾಮರೆ ಮಡೀರ ರೈಲು ಮಾರ್ಗವನ್ನು ಬ್ರೆಜೀಲ್‌ನಲ್ಲಿ ಕಟ್ಟುವುದರೊಂದಿಗೆ, ಹಾಕಿದ ಪ್ರತಿ ಅಡ್ಡ ಕಂಬಿಗೆ ಮಲೇರಿಯವು ಒಂದು ಮಾನವ ಜೀವವನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ಜಯವನ್ನು ಸಂಪಾದಿಸಲು ಹೋರಾಟ

ಸೊಳ್ಳೆಗಳ ವಿರುದ್ಧ ಆದರೆ ಜ್ಞಾತವಾಗಿ ಮಲೇರಿಯದ ವಿರುದ್ಧವಲ್ಲ—ರಕ್ಷಣೆಯು ಸಾವಿರಾರು ವರ್ಷಗಳ ಕಾಲ ವ್ಯಾಪಿಸಿದೆ. ಸಾ.ಶ.ಪೂ. 16ನೆಯ ಶತಮಾನದಲ್ಲಿ, ಐಗುಪ್ತ ದೇಶದವರು ಬಾಲಾನೈಟಸ್‌ ವಿಲ್‌ಸೊನಿಯಾನಾ ಎಂಬ ಮರದ ಎಣ್ಣೆಯನ್ನು ಸೊಳ್ಳೆ ನಿವಾರಕದಂತೆ ಉಪಯೋಗಿಸಿದರು. ಒಂದು ಸಾವಿರ ವರ್ಷಗಳ ಅನಂತರ, ಐಗುಪ್ತ್ಯದ ಮೀನುಗಾರರು ಕೀಟಗಳನ್ನು ದೂರವಾಗಿಡಲು ರಾತ್ರಿಯಲ್ಲಿ ತಮ್ಮ ಹಾಸಿಗೆಯ ಸುತ್ತಲೂ ತಮ್ಮ ಬಲೆಯನ್ನು ಸುತ್ತಿಕೊಳ್ಳುತ್ತಿದ್ದರೆಂದು ಹಿರಾಡಟಸ್‌ ಬರೆದನು. ಹದಿನೇಳು ಶತಮಾನಗಳ ಅನಂತರ, ಭಾರತದ ಶ್ರೀಮಂತ ನಿವಾಸಿಗಳು ರಾತ್ರಿಯಲ್ಲಿ ಮುಚ್ಚಲು ಸಾಧ್ಯವಿರುವ ರಕ್ಷಣಾ ಪರದೆಗಳಿರುವ ಹಾಸಿಗೆಯ ಮೇಲೆ ಮಲಗುತ್ತಿದ್ದರು ಎಂದು ಮಾರ್ಕೊ ಪೋಲೊ ವರದಿಸಿದನು.

ಬೇರೆ ಕಡೆಯಲ್ಲಿ, ನಿಜವಾದ ಮೌಲ್ಯವಿರುವ ನೈಸರ್ಗಿಕ ಔಷಧಗಳನ್ನು ಮನುಷ್ಯರು ಕಂಡುಹಿಡಿದರು. ಎರಡು ಸಾವಿರಕ್ಕಿಂತಲೂ ಹೆಚ್ಚಿನ ವರ್ಷಗಳ ಕಾಲ, ಕಿನ್‌ಗಾವೊಸು ಎಂದು ಕರೆಯಲ್ಪಡುವ ಒಂದು ಗಿಡದ ಮೂಲಕ ಚೀನಾದಲ್ಲಿ ಮಲೇರಿಯ ರೋಗಕ್ಕೆ ಸಫಲವಾಗಿ ಚಿಕಿತ್ಸೆ ನಡೆಸಲಾಗಿದೆ, ಇತ್ತೀಚಿನ ವರ್ಷಗಳಲ್ಲಿ ಮತ್ತೆ ಇದು ಕಂಡುಹಿಡಿಯಲಾದ ಒಂದು ಸಸ್ಯ ಔಷಧಿಯಾಗಿದೆ. ದಕ್ಷಿಣ ಅಮೆರಿಕದಲ್ಲಿ, ಪೆರುವಿಯನ್‌ ಇಂಡಿಯನರು ಸಿಂಕೋನ ಮರದ ತೊಗಟೆಯನ್ನು ಉಪಯೋಗಿಸಿದರು. ಹದಿನೇಳನೆಯ ಶತಮಾನದಲ್ಲಿ, ಸಿಂಕೋನ ಯೂರೋಪಿಗೆ ಬಂದಿತು, ಮತ್ತು 1820ರಲ್ಲಿ ಪ್ಯಾರಿಸ್‌ ನಗರದ ಎರಡು ಔಷಧ ತಯಾರಕರು ಅದರಿಂದ ಕಿನ್ವೈನ್‌ ಎಂದು ಕರೆಯಲ್ಪಡುವ ಸಸ್ಯಕ್ಷಾರವನ್ನು ತೆಗೆದರು.

ಹೊಸ ಆಯುಧಗಳು

ಮಲೇರಿಯವನ್ನು ತಡೆಯುವುದರಲ್ಲಿ ಮತ್ತು ಚಿಕಿತ್ಸೆ ಮಾಡುವುದರಲ್ಲಿ ಕಿನ್ವೈನ್‌ನ ಮೌಲ್ಯವು ನಿಧಾನವಾಗಿ ಗಣ್ಯಮಾಡಲ್ಪಟ್ಟರೂ, ಒಮ್ಮೆ ಗಣ್ಯಮಾಡಲ್ಪಟ್ಟ ಮೇಲೆ, ಒಂದು ನೂರು ವರ್ಷಗಳಿಗೆ ಅದು ಆಯ್ಕೆಯ ಔಷಧವಾಯಿತು. ಆಮೇಲೆ, ಎರಡನೆಯ ಲೋಕ ಯುದ್ಧದ ಆದಿ ಭಾಗದಲ್ಲಿ, ಜಪಾನಿನ ಸೈನಿಕರು ದೂರ ಪೂರ್ವ ದೇಶಗಳಲ್ಲಿ ಪ್ರಾಮುಖ್ಯವಾದ ಸಿಂಕೋನದ ತೋಪುಗಳನ್ನು ಸೆರೆಹಿಡಿದರು. ಅಮೆರಿಕದಲ್ಲಿ ಕಿನ್ವೈನ್‌ನ ತೀವ್ರವಾದ ನ್ಯೂನತೆಯ ಫಲಿತಾಂಶವು ಮಲೇರಿಯಾ ವಿರುದ್ಧ ಒಂದು ಕೃತಕ ತಯಾರಿಕೆಯನ್ನು ವಿಕಾಸಿಸಲು ಆಳವಾದ ಸಂಶೋಧನೆಯನ್ನು ಉತ್ತೇಜಿಸಿತು. ಫಲಿತಾಂಶವು ಕೋರ್ಲೂಕೀನ್ವ್‌, ಸುರಕ್ಷಿತ, ಬಹಳ ಪರಿಣಾಮಕಾರಿ, ಮತ್ತು ಉತ್ಪಾದಿಸಲು ಕಡಿಮೆ ವೆಚ್ಚವುಳ್ಳ ಒಂದು ಔಷಧ.

ಕೋರ್ಲೂಕೀನ್ವ್‌ ಬೇಗನೆ ಮಲೇರಿಯದ ವಿರುದ್ಧ ಒಂದು ಶ್ರೇಷ್ಠ ಆಯುಧವಾಯಿತು. ಸೊಳ್ಳೆಗಳ ಶಕ್ತಿಶಾಲಿ ಕೊಲೆಗಾರ, ಕೀಟನಾಶಕ ಡಿಡಿಟಿಯನ್ನು ಕೂಡ 1940ಗಳಲ್ಲಿ ಪರಿಚಯಪಡಿಸಲಾಯಿತು. ಡಿಡಿಟಿ ಭಯಹಿಡಿಸುವ ರಾಸಾಯನಿಕ ಪದವಾದ ಡೈಕ್ಲೋರೊಡೈಫೆನಲ್‌ಟ್ರೈಕ್ಲೋರೊಎಥೇನ್‌ಅನ್ನು ಸೂಚಿಸುವದಾದರೂ, ಇಂಗ್ಲಿಷ್‌ ಭಾಷೆಯನ್ನು ಮಾತಾಡುವ ಅನೇಕರು ಅಕ್ಷರಗಳನ್ನು “ಡ್ರಾಪ್‌ ಡೆಡ್‌ ಟ್ವೈಸ್‌” ಎಂಬ ಪದಗಳ ಮೂಲಕ ನೆನಪಿನಲ್ಲಿಡುತಾರ್ತೆ. ಚಿಮುಕಿಸುವಾಗ ಡಿಡಿಟಿ ಸೊಳ್ಳೆಗಳನ್ನು ಕೊಲ್ಲುತ್ತದೆ ಮಾತ್ರವಲ್ಲ ಆದರೆ ಅನಂತರ ಚಿಮುಕಿಸಲ್ಪಟ್ಟ ಗೋಡೆಗಳ ಮೇಲೆ ಅದರ ಶೇಷ ಇರುವಿಕೆ, ಕೀಟಗಳನ್ನೂ ಕೊಲ್ಲುತ್ತದೆ.b

ಶುಭ ಪ್ರತೀಕ್ಷೆಯ ಪ್ರತಿದಾಳಿ

ಎರಡನೆಯ ಲೋಕ ಯುದ್ಧವನ್ನು ಹಿಂಬಾಲಿಸಿ, ಡಿಡಿಟಿ ಮತ್ತು ಕೋರ್ಲೂಕೀನ್ವ್‌ನೊಂದಿಗೆ ಸನ್ನದ್ಧರಾದ ವಿಜ್ಞಾನಿಗಳು ಮಲೇರಿಯ ಮತ್ತು ಸೊಳ್ಳೆಗಳ ವಿರುದ್ಧ ಒಂದು ಭೌಗೋಲಿಕ ಪ್ರತಿದಾಳಿಯನ್ನು ಸಂಘಟಿಸಿದರು. ಯುದ್ಧವು ಎರಡು ಕಡೆಗಳಿಂದ—ಮಾನವ ದೇಹದಲ್ಲಿರುವ ಪರೋಪಜೀವಿಗಳನ್ನು ಕೊಲ್ಲಲು ಔಷಧಗಳನ್ನು ಉಪಯೋಗಿಸುವುದು ಮತ್ತು ಕೀಟನಾಶಕಗಳನ್ನು ಅಧಿಕ ಪ್ರಮಾಣದಲ್ಲಿ ಚಿಮುಕಿಸಿ ಸೊಳ್ಳೆಗಳನ್ನು ಅಳಿಸಿಬಿಡುವುದು—ಹೋರಾಡಲ್ಪಡಲಿಕ್ಕಿತ್ತು.

ಗುರಿಯು ಸಂಪೂರ್ಣ ವಿಜಯವಾಗಿತ್ತು. ಮಲೇರಿಯವನ್ನು ಅಸ್ತಿತ್ವದಿಂದ ತೆಗೆದುಹಾಕಬೇಕಿತ್ತು. ನಿರ್ಮೂಲನ ಕಾರ್ಯಕ್ರಮವನ್ನು ಅದರ ಪ್ರಧಾನ ಆದ್ಯತೆಯನ್ನಾಗಿ ಮಾಡಿದ, ಹೊಸದಾಗಿ ರೂಪಗೊಂಡ ಲೋಕ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಆಕ್ರಮಣದ ಮುಂದಾಳತ್ವವನ್ನು ವಹಿಸಿತು. ದೃಢ ಸಂಕಲ್ಪವು ಹಣದ ಮೂಲಕ ಬೆಂಬಲಿಸಲ್ಪಟ್ಟಿತು. ಭೌಗೋಲಿಕ ಆಂದೋಲನದಲ್ಲಿ, 1957 ಮತ್ತು 1967ರ ನಡುವೆ ರಾಷ್ಟ್ರಗಳು 140 ಕೋಟಿ ಡಾಲರುಗಳನ್ನು ಖರ್ಚುಮಾಡಿದವು. ಆದಿ ಫಲಿತಾಂಶಗಳು ಪ್ರೇಕ್ಷಣೀಯವಾಗಿದ್ದವು. ರೋಗವನ್ನು ಯೂರೋಪ್‌, ಉತ್ತರ ಅಮೆರಿಕ, ಸೋವಿಯಟ್‌ ಯೂನಿಯನ್‌, ಆಸ್ಟ್ರೇಲಿಯ, ಮತ್ತು ದಕ್ಷಿಣ ಅಮೆರಿಕದ ಕೆಲವೊಂದು ದೇಶಗಳಲ್ಲಿ ಜಯಿಸಲಾಗಿತ್ತು. ಪ್ರೊಫೆಸರ್‌ ಬ್ರೂಜ್‌ಶ್ವಾಟ್ಟ್‌ ಎಂಬ, ಒಬ್ಬ ಅನುಭವಿ ಮಲೇರಿಯ ಹೋರಾಟಗಾರ ಜ್ಞಾಪಿಸಿಕೊಂಡದ್ದು: “ಆ ಶಾಂತಿಭರಿತ ಕಾಲದಲ್ಲಿ ಲೋಕದ ಎಲ್ಲೆಡೆಯೂ ನಿರ್ಮೂಲನೆಯ ಸಂಕಲ್ಪವು ಎಬ್ಬಿಸಿದಂತಹ ಪ್ರಚಂಡ ಉತ್ಸಾಹವನ್ನು ಇಂದು ವರ್ಣಿಸಲು ಕಷ್ಟಕರವಾಗಬಹುದು.” ಮಲೇರಿಯ ತತ್ತರಿಸುತ್ತಿತ್ತು! “ನಮ್ಮ ಪರಿಮಿತಿಯಲ್ಲಿಯೇ ಮಲೇರಿಯ ರೋಗದ ನಿರ್ಮೂಲನೆ ಒಂದು ನಿಜತ್ವವಾಗಿದೆ,” ಎಂದು ಡಬ್ಲ್ಯೂಎಚ್‌ಒ ಹೆಮ್ಮೆಪಟ್ಟಿತು.

ಮಲೇರಿಯ ಮರುಹೋರಾಡುತ್ತದೆ

ಆದರೆ ಜಯವು ಶಾಶ್ವತವಾಗಿರಲಿಲ್ಲ. ರಾಸಾಯನಿಕ ಆಕ್ರಮಣವನ್ನು ಪಾರಾದ ಸೊಳ್ಳೆಗಳ ಸಂತತಿಗಳು ಕೀಟನಾಶಕಗಳಿಗೆ ನಿರೋಧತ್ವವನ್ನು ಪ್ರದರ್ಶಿಸಿದವು. ಡಿಡಿಟಿಯು ಅವುಗಳನ್ನು ಮುಂಚೆ ಸುಲಭವಾಗಿ ಕೊಂದಂತೆ ಈಗ ಕೊಲಲ್ಲಿಲ್ಲ. ಅದೇ ರೀತಿಯಲ್ಲಿ, ಮಾನವರಲ್ಲಿದ್ದ ಮಲೇರಿಯ ಪರೋಪಜೀವಿಗಳು ಕೋರ್ಲೂಕೀನ್ವ್‌ಗೆ ನಿರೋಧಕಗಳಾದವು. ಜಯವು ನಿಶ್ಚಯವೆಂದು ತೋರಿದ ಕೆಲವು ಪ್ರದೇಶಗಳಲ್ಲಿ ಇವು ಮತ್ತು ಇನ್ನಿತರ ಸಮಸ್ಯೆಗಳು ಭಯಂಕರ ವಿರುದ್ಧಾರ್ಥಾಗಳಾಗಿ ಫಲಿಸಿದವು. ಉದಾಹರಣೆಗೆ, ಶ್ರೀ ಲಂಕದಲ್ಲಿ, 1963ರಲ್ಲಿ ಮಲೇರಿಯವು ಸಂಪೂರ್ಣವಾಗಿ ನಿರ್ಮೂಲಮಾಡಲಾಗಿದೆ ಎಂಬುದಾಗಿ ಯೋಚಿಸಲಾಗಿತ್ತು, ಆದರೆ ಕೇವಲ ಐದು ವರ್ಷಗಳಾನಂತರ ಲಕ್ಷ ಗಟ್ಟಲೆ ಜನರನ್ನು ಸೋಂಕುವ ಒಂದು ಸಾಂಕ್ರಾಮಿಕ ರೋಗವನ್ನು ಅನುಭವಿಸಿತು.

ಮಲೇರಿಯ ರೋಗವು ಜಯಿಸಲಾಗದಂತಹ ಒಂದು ವೈರಿಯೆಂದು 1969ರೊಳಗಾಗಿ ವ್ಯಾಪಕವಾಗಿ ಸ್ವೀಕರಿಸಲಾಗಿತ್ತು. “ನಿರ್ಮೂಲನ” ಎಂಬ ಪದದ ಬದಲಾಗಿ “ನಿಯಂತ್ರಣ” ಎಂಬ ಪದವು ರೂಢಿಯಲ್ಲಿ ಬಂತು. “ನಿಯಂತ್ರಣ” ಎಂಬ ಪದದ ಅರ್ಥವೇನು? ಡಾ. ಬ್ರೈಯನ್‌ ಡೋಬರ್‌ಸ್ಟೀನ್‌, ಡಬ್ಲ್ಯೂಎಚ್‌ಒ ಮಲೇರಿಯ ಘಟಕದ ಮುಖ್ಯಸ್ಥ ವಿವರಿಸುವುದು: “ಮರಣಗಳನ್ನು ಮತ್ತು ಸಂಕಟವನ್ನು ನ್ಯಾಯವಾದ ಮಿತಿಯಲ್ಲಿ ಇಡುವುದೇ ನಾವು ಈಗ ಮಾಡಬಹುದಾದ ವಿಷಯವಾಗಿದೆ.”

ಇನ್ನೊಬ್ಬ ಡಬ್ಲ್ಯೂಎಚ್‌ಒವಿನ ಅಧಿಕಾರಿಯು ಪ್ರಲಾಪಿಸುವುದು: “1950ಗಳಲ್ಲಿ ಮಾಡಲಾದ ಮಲೇರಿಯ ನಿರ್ಮೂಲನ ಪ್ರಯತ್ನಗಳ ಮತ್ತು ಕೀಟಗಳ ವಿರುದ್ಧ ಡಿಡಿಟಿಯ ಉಪಯೋಗದ ಅನಂತರ, ಅಂತರ ರಾಷ್ಟ್ರೀಯ ಸಮುದಾಯವು ಸೌಮ್ಯವಾಗಿದೆ. ಬಡತನ, ಮೂಲಚೌಕಟ್ಟಿನ ಕೊರತೆ, ಔಷಧಗಳಿಗೆ ಮತ್ತು ಕೀಟನಾಶಕಗಳಿಗೆ ಪ್ರತಿರೋಧವು ರೋಗದ ಪಟ್ಟು ಹಿಡಿದು ಇರುವಿಕೆಗೆ ನಡೆಸಿದೆ. ವಾಸ್ತವದಲ್ಲಿ, ನಾವೇ ರೋಗದಿಂದ ಜಯಿಸಲ್ಪಟ್ಟಿದ್ದೇವೆ.”

ಮತ್ತೆ ಇನ್ನೊಂದು ಅಂಶವೇನೆಂದರೆ ಔಷಧ ಕಂಪನಿಗಳು ತಮ್ಮ ಸಂಶೋಧನೆಯಿಂದ ಹಿಮ್ಮೆಟ್ಟಿವೆ. ಒಬ್ಬ ಮಲೇರಿಯ ವಿಜ್ಞಾನಿ ಹೇಳಿದ್ದು: “ಸಮಸ್ಯೆಯು ಏನಂದರೆ ಅದು ಹೆಚ್ಚಿನ ಬಂಡವಾಳವನ್ನು ಅಪೇಕ್ಷಿಸುತ್ತದೆ, ಆದರೆ ಲಾಭವೇನೂ ಇಲ್ಲ ಮತ್ತು ಉತ್ತೇಜನವು ಶೂನ್ಯವಾಗಿದೆ.” ಹೌದು, ಅನೇಕ ಯುದ್ಧಗಳು ಜಯಿಸಲಾಗಿವೆಯಾದರೂ, ಮಲೇರಿಯ ವಿರುದ್ಧದ ಯುದ್ಧ ಇನ್ನೂ ಕೊನೆಗೊಂಡಿಲ್ಲ. ಹಾಗಿದ್ದರೂ, ಬೈಬಲು “ಯಾವ ನಿವಾಸಿಯೂ ನಾನು ಅಸ್ವಸ್ಥನು ಎಂದು ಹೇಳನು,” ಎಂಬುದಾಗಿ ಹತ್ತಿರದಲ್ಲಿರುವ ಒಂದು ಸಮಯಕ್ಕೆ ಸೂಚಿಸುತ್ತದೆ. (ಯೆಶಾಯ 33:24, NW) ಅಲ್ಲಿಯ ವರೆಗೆ, ಲಲಿತವಾದ ರೆಕ್ಕೆಗಳ ಮೇಲೆ ರೋಗವೂ ಮರಣವೂ ಇನ್ನೂ ಬರುವುವು. (g93 5/8)

[ಅಧ್ಯಯನ ಪ್ರಶ್ನೆಗಳು]

a “ಮಲೇರಿಯ” ಪದವು ಇಟ್ಯಾಲಿಯನ್‌ ಮಾಲಾ (ಕೆಟ್ಟ) ಆರಿಯಾ (ಗಾಳಿ)ಯಿಂದ ಬರುತ್ತದೆ.

b ಡಿಡಿಟಿ ಪರಿಸರಕ್ಕೆ ಹಾನಿಕಾರಕವೆಂದು ಕಂಡುಬಂತು ಮತ್ತು ಅದನ್ನು 45 ರಾಷ್ಟ್ರಗಳಲ್ಲಿ ನಿಷೇಧಿಸಲಾಗಿದೆ ಯಾ ತೀವ್ರವಾಗಿ ನಿರ್ಬಂಧಿಸಲಾಗಿದೆ.

[ಪುಟ 36 ರಲ್ಲಿರುವ ಚೌಕ]

ಮನುಷ್ಯನ ಪ್ರತಿಯಾಗಿ ಸೊಳ್ಳೆ

ಹೆಚ್ಚಾಗಿ ಉಷ್ಣವಲಯಗಳಲ್ಲಿ, ಒಂದು ನೂರಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಇರುವ ಹೆಚ್ಚು ಕಡಿಮೆ ಮಾನವ ಕುಲದ ಅರ್ಧದಷ್ಟು ಜನರನ್ನು ಅದು ನೇರವಾಗಿ ಬೆದರಿಸುತ್ತದೆ. ವಿಶೇಷವಾಗಿ ಆಫ್ರಿಕವು ಅದರ ಒಂದು ಪ್ರಬಲವಾದ ದುರ್ಗವಾಗಿದೆ.

ಸೊಳ್ಳೆಗಳು ಉಷ್ಣವಲಯ ಪ್ರದೇಶಗಳಿಂದ ವಿಮಾನದ ಮೂಲಕ ಸ್ಥಳ ಬದಲಾಯಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಬಳಿ ಜೀವಿಸುತ್ತಿರುವ ಜನರಿಗೆ ಸೋಂಕು ಹಿಡಿಸಿವೆಯೆಂದು ತಿಳಿದುಬಂದಿದೆ.

ಬಾಧಿತ ಅನಾಹುತಗಳು. ಪ್ರತಿ ವರ್ಷ 20 ಲಕ್ಷದಷ್ಟು ಜನರನ್ನು ಕೊಲ್ಲುತ್ತಾ, ಅದು 27 ಕೋಟಿ ಜನರಿಗೆ ಸೋಂಕುತ್ತದೆ. ವಿಶೇಷವಾಗಿ ಗರ್ಭವತಿ ಹೆಂಗಸರು ಮತ್ತು ಮಕ್ಕಳ ಕಡೆಗೆ ನಿಷ್ಕರುಣಿಯಾಗಿದ್ದು, ಪ್ರತಿ ನಿಮಿಷ ಸರಾಸರಿಯಾಗಿ ಎರಡು ಎಳೆಯರನ್ನು ವಧಿಸುತ್ತದೆ.

ಉಷ್ಣವಲಯಕ್ಕೆ ಭೇಟಿಮಾಡುವವರನ್ನು ಅದು ಆಕ್ರಮಿಸುತ್ತದೆ. ಪ್ರತಿ ವರ್ಷ ಯೂರೋಪಿನಲ್ಲಿ ಸುಮಾರು 10,000 ಮತ್ತು ಉತ್ತರ ಅಮೆರಿಕದಲ್ಲಿ 1,000ಕ್ಕಿಂತಲೂ ಅಧಿಕ “ಆಮದು ಮಾಡಿದ” ಮಲೇರಿಯ ಪ್ರಕರಣಗಳು ವರದಿಸಲ್ಪಡುತ್ತವೆ.

ಯುದ್ಧ ತಂತ್ರಗಳು. ಹೆಣ್ಣು ಅನಾಫಿಲೀಸ್‌ ಸೊಳ್ಳೆಯು ಮಾನವರಿಗೆ ಹೆಚ್ಚಾಗಿ ರಾತ್ರಿಯಲ್ಲಿ ಸೋಂಕು ಹಿಡಿಸುತ್ತದೆ. ಮಲೇರಿಯ ರಕ್ತ ಸಂಯೋಜನೆಯ ಮೂಲಕವೂ ವಿರಳವಾಗಿ ಕಲುಷಿತ ಸೂಜಿಗಳ ಮೂಲಕವೂ ಕೂಡ ಹರಡುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಮಾತ್ರ ಮಾನವ ವರ್ಗಕ್ಕೆ ಮರು ಹೋರಾಡಲು ಜ್ಞಾನವೂ ಸಾಧನವೂ ದೊರೆತಿದೆ. ಈ ವಿಪತ್ತನ್ನು ಜಯಿಸಲು ಯತ್ನಿಸುತ್ತಿರುವ 105 ದೇಶಗಳ ಸಂಯುಕ್ತ ಪ್ರಯತ್ನಗಳ ಎದುರಿನಲ್ಲಿಯೂ, ಮಾನವ ವರ್ಗವು ಈ ಹೋರಾಟದಲ್ಲಿ ಸೋಲುತ್ತಿದೆ.

[ಪುಟ 26 ರಲ್ಲಿರುವ ಚೌಕ/ಚಿತ್ರಗಳು]

ಸೊಳ್ಳೆ ಕಡಿತಗಳ ವಿರುದ್ಧ ಎಚ್ಚರ ವಹಿಸಿರಿ

ಒಂದು ಸೊಳ್ಳೆ ಪರದೆ ಆವರಿಸಿರುವ ಹಾಸಿಗೆಯಲ್ಲಿ ಮಲಗಿರಿ. ಕೀಟನಾಶಕಗಳಿಂದ ತುಂಬಿದ ಪರದೆಗಳು ಉತ್ತಮವಾದವುಗಳು.

ಲಭ್ಯವಿರುವಲ್ಲಿ ಏರ್‌ ಕಂಡಿಷನರನ್ನು ರಾತ್ರಿಯಲ್ಲಿ ಉಪಯೋಗಿಸಿರಿ, ಯಾ ಜಲ್ಲಡಿಯುಳ್ಳ ಕಿಟಕಿಗಳು ಮತ್ತು ಬಾಗಿಲುಗಳು ಇರುವ ಕೋಣೆಗಳಲ್ಲಿ ಮಲಗಿರಿ. ಜಲ್ಲಡಿಗಳು ಇಲ್ಲದಿದ್ದರೆ, ಬಾಗಿಲುಗಳನ್ನು ಮತ್ತು ಕಿಟಕಿಗಳನ್ನು ಮುಚ್ಚಿಡಿ.

ಸೂರ್ಯಾಸ್ತದ ಅನಂತರ, ಉದ್ದವಾದ ತೋಳುಗಳಿರುವ ಬಟ್ಟೆಗೆಳನ್ನು ಮತ್ತು ಉದ್ದವಾದ ಷರಾಯಿಗಳನ್ನು ಧರಿಸಿಕೊಳ್ಳುವುದು ಸೂಕ್ತವು. ಗಾಢ ಬಣ್ಣಗಳು ಸೊಳ್ಳೆಗಳನ್ನು ಆಕರ್ಷಿಸುತ್ತವೆ.

ಬಟ್ಟೆಗೆಳಿಂದ ರಕ್ಷಿಸಲಾಗದೆ ಇರುವ ದೇಹದ ಭಾಗಗಳಿಗೆ ಕೀಟ ನಿವಾರಕವನ್ನು ಹಚ್ಚಿರಿ. ಡೈಎತೆಲ್‌ಟೋಲೂಎಮೈಡ್‌ ಯಾ ಡೈಮೆತೆಲ್‌ ಥಲೇಟನ್ನು ಹೊಂದಿರುವ ನಿವಾರಕವನ್ನು ಆಯ್ಕೆ ಮಾಡಿರಿ.

ಸೊಳ್ಳೆ ವಿರುದ್ಧ ಸ್ಪ್ರೇಗಳನ್ನು, ಕೀಟನಾಶಕ ವಿತರಕಗಳನ್ನು, ಯಾ ಸೊಳ್ಳೆ ನಿವಾರಕ ಕಾಯಿಲ್‌ಗಳನ್ನು ಉಪಯೋಗಿಸಿರಿ.

ಮೂಲ: ಲೋಕ ಆರೋಗ್ಯ ಸಂಸ್ಥೆ

[ಕೃಪೆ]

H. Armstrong Roberts

[ಪುಟ 27 ರಲ್ಲಿರುವ ಚೌಕ]

“‘ಮಾಟದ ಗುಂಡು’ ಇರುವುದಿಲ್ಲ”

ಸಂಪೂರ್ಣ ವಿಜಯದ ಪ್ರತೀಕ್ಷೆಯು ಲೇಶವಾಗಿ ತೋರಿದರೂ, ಮಲೇರಿಯದ ವಿರುದ್ಧ ಸಂಗ್ರಾಮವು ಮುಂದುವರಿಯುತ್ತಿದೆ. ಮಲೇರಿಯದ ಮೇಲೆ ಅಕ್ಟೋಬರ 1991ರಲ್ಲಿ ಕಾಂಗೊವಿನ ಬ್ರಾಚವೀಲ್‌ನಲ್ಲಿ ಒಂದು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ, ಡಬ್ಲ್ಯೂಎಚ್‌ಓ (ಲೋಕಾರೋಗ್ಯ ಸಂಸ್ಥೆ)ಯ ಪ್ರತಿನಿಧಿಗಳು “ಚಾಲ್ತಿಯಲ್ಲಿರುವ ಅದೃಷ್ಟವಾದದಿಂದ” ನಿರ್ಗಮನಕ್ಕೆ ಕರೆನೀಡಿದರು ಮತ್ತು ಮಲೇರಿಯವನ್ನು ನಿಯಂತ್ರಿಸಲು ಒಂದು ನವೀನ ಭೌಗೋಲಿಕ ಸನ್ನದ್ಧತೆಯನ್ನು ಶಿಫಾರಸು ಮಾಡಿದರು. ಇಂಥ ಪ್ರಯತ್ನಗಳು ಎಷ್ಟು ಸಫಲವಾಗಿರುವವು?

“ಮಲೇರಿಯಾಕ್ಕೆ ‘ಮಾಟದ ಗುಂಡು’ ಇರುವುದಿಲ್ಲ,” ಎಂದು ಇತ್ತೀಚಿಗೆ ಡಬ್ಲ್ಯೂಎಚ್‌ಓನ ಕಾರ್ಯನಿರ್ವಾಹಕ ಹೀರೋಶಿ ನಾಕಾಜೀಮಾ ವರದಿಸಿದರು. “ಆದುದರಿಂದ ನಾವು ಅದರ ಮೇಲೆ ಅನೇಕ ಕಡೆಗಳಿಂದ ಹೋರಾಡಬೇಕು.” ಇತ್ತೀಚಿಗೆ ಬಹಳಷ್ಟು ಪ್ರಸಿದ್ಧವಾಗಿರುವ ಮೂರು ಸಂಗ್ರಾಮಮುಖಗಳು ಇಲ್ಲಿವೆ:

ಚುಚ್ಚು ಮದ್ದು. ಮಲೇರಿಯದ ವಿರುದ್ಧ ಒಂದು ಚುಚ್ಚು ಮದ್ದಿನ ಅನ್ವೇಷಣೆಯಲ್ಲಿ ವಿಜ್ಞಾನಿಗಳು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಮತ್ತು ಶೋಧನೆಯಲ್ಲಿ “ಸಫಲತೆಗಳ” ಕುರಿತು ಮಾಧ್ಯಮಗಳು ಒಮ್ಮೊಮ್ಮೆ ವರದಿಸುತ್ತವೆ. ಸೂಕ್ತವಲ್ಲದ ಆಶಾವಾದವನ್ನು ನಾಶಮಾಡುತ್ತಾ, “ಹತ್ತಿರದ ಭವಿಷ್ಯದಲ್ಲಿ ಮಲೇರಿಯದ ವಿರುದ್ಧ ಒಂದು ಚುಚ್ಚು ಮದ್ದಿನ ಪ್ರಾಪತ್ತೆಯ ಭ್ರಾಂತಿ”ಯ ವಿರುದ್ಧ ಡಬ್ಲ್ಯೂಎಚ್‌ಓ ಎಚ್ಚರಿಸುತ್ತದೆ.

ಒಂದು ಚುಚ್ಚು ಮದ್ದನ್ನು ವಿಕಾಸಿಸುವ ಸಮಸ್ಯೆಗಳಲ್ಲೊಂದು ಏನಂದರೆ, ಮನುಷ್ಯನಲ್ಲಿರುವ ಮಲೇರಿಯ ಪರೋಪಜೀವಿಯು ಅದನ್ನು ನಾಶಗೊಳಿಸಲು ಮಾನವನ ರಕ್ಷಿತ ವ್ಯವಸ್ಥೆಯ ಮಾಡುವ ಪ್ರಯತ್ನಗಳಿಂದ ತಪ್ಪಿಸಿಕೊಳ್ಳುವುದರಲ್ಲಿ ಗಮನಾರ್ಹವಾಗಿ ಸಫಲವಾಗಿದೆ. ಪುನರಾವೃತ್ತಿಗೊಂಡ ಆಕ್ರಮಣಗಳ ಅನೇಕ ವರ್ಷಗಳ ಅನಂತರವೂ ಕೂಡ, ರೋಗಕ್ಕೆ ಜನರು ಒಂದು ಮಿತವಾದ ರಕ್ಷಣೆಯನ್ನು ಬೆಳೆಸುತ್ತಾರೆ. ಅಟ್‌ಲಾಂಟಾದಲ್ಲಿ ಯು. ಎಸ್‌. ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ನಲ್ಲಿ ಕೆಲಸ ಮಾಡುವ ಒಬ್ಬ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞನಾದ, ಡಾ. ಹ್ಯಾನ್ಸ್‌ ಲೋಬೆಲ್‌, ಗಮನಿಸುವುದು: “ಕೇವಲ ಕೆಲವೊಂದು ಆಕ್ರಮಣಗಳ ಅನಂತರ ನೀವು ರಕ್ಷಣೆಯನ್ನು ಬೆಳೆಸಿಕೊಳ್ಳಸಾಧ್ಯವಿಲ್ಲ. ಆದುದರಿಂದ [ಒಂದು ಚುಚ್ಚು ಮದ್ದನ್ನು ವಿಕಾಸಿಸುವ ಪ್ರಯತ್ನದಲ್ಲಿ] ನೀವು ಪ್ರಕೃತಿಯನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದ್ದೀರಿ.”

ಔಷಧಗಳು. ಅಸ್ತಿತ್ವದಲ್ಲಿರುವ ಔಷಧಗಳಿಗೆ ಮಲೇರಿಯ ಪರೋಪಜೀವಿಯ ಬೆಳೆಯುತ್ತಿರುವ ಪ್ರತಿರೋಧದೊಂದಿಗೆ, ಚೀನಾದ ಕಿನ್‌ಗಾವೊಸುc ಸಸ್ಯ ಹೀರಿಕೆಯಿಂದ ಬರುವ ಆರ್‌ಟೀಥರ್‌ ಎಂಬುದಾಗಿ ಕರೆಯಲಾಗುವ ಒಂದು ಹೊಸ ಔಷಧಿಯನ್ನು ಡಬ್ಲ್ಯೂಎಚ್‌ಓ ಉತ್ತೇಜಿಸುತ್ತಿದೆ. ಲೋಕ ಸಮುದಾಯಕ್ಕೆ ಹತ್ತು ವರ್ಷಗಳೊಳಗೆ ಲಭ್ಯವಾಗಬಹುದಾದ ಕಿನ್‌ಗಾವೊಸು, ನೈಸರ್ಗಿಕ ಔಷಧಗಳ ಸಂಪೂರ್ಣವಾದ ಹೊಸದೊಂದು ವರ್ಗದ ಮೂಲವಾಗಬಹುದು ಎಂದು ಡಬ್ಲ್ಯೂಎಚ್‌ಓ ನಿರೀಕ್ಷಿಸುತ್ತದೆ.

ಸೊಳ್ಳೆಯ ಪರದೆಗಳು. ಸೊಳ್ಳೆಗಳ ವಿರುದ್ಧ ಈ ಎರಡು ಸಾವಿರ ವರ್ಷ ಹಳೆಯದಾದ ಸಂರಕ್ಷಣೆಯು ಇನ್ನೂ ಪರಿಣಾಮಕಾರಿಯಾಗಿದೆ. ಮಲೇರಿಯದ ಸೊಳ್ಳೆಗಳು ಸಾಮಾನ್ಯವಾಗಿ ರಾತ್ರಿಯಲ್ಲಿ ಆಕ್ರಮಿಸುತ್ತವೆ, ಮತ್ತು ಪರದೆಯೊಂದು ಅವುಗಳನ್ನು ದೂರದಲ್ಲಿ ಇಡುತ್ತದೆ. ಪರ್‌ಮೆಥ್‌ರಿನ್‌ನಂತಹ ಕೀಟನಾಶಕದಲ್ಲಿ ಅದ್ದಲ್ಪಟ್ಟ ಪರದೆಗಳು ಅತಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಆಫ್ರಿಕದಲ್ಲಿ ನಡೆಸಲಾದ ಅಧ್ಯಯನಗಳು ತೋರಿಸುವದೇನೆಂದರೆ, ಅದ್ದಲ್ಪಟ್ಟ ಪರದೆಗಳನ್ನು ಪರಿಚಯ ಪಡಿಸಿದ ಹಳ್ಳಿಗಳಲ್ಲಿ ಮಲೇರಿಯದಿಂದಾಗುವ ಮರಣಗಳು 60 ಪ್ರತಿಶತದಷ್ಟು ಇಳಿಮುಖವಾದುವು.

[ಅಧ್ಯಯನ ಪ್ರಶ್ನೆಗಳು]

c ಕಿನ್‌ಗಾವೊಸು ಆರ್‌ಟಿಮಿಜೀಯಾ ಅ್ಯನ್ನುವ, ಎಂಬ ಮಾಚಿಪತ್ರೆ ಗಿಡದ ಹೀರಿಕೆಯಾಗಿದೆ.

[ಪುಟ 28 ರಲ್ಲಿರುವ ಚೌಕ/ಚಿತ್ರಗಳು]

ಉಷ್ಣವಲಯಕ್ಕೆ ಪ್ರಯಾಣವೊ?

ಮಲೇರಿಯ ರೋಗವು ಒಂದು ಅಪಾಯವಾಗಿರುವ ಪ್ರದೇಶಕ್ಕೆ ನೀವು ಪ್ರಯಾಣಿಸಲು ಯೋಜಿಸುವದಾದರೆ, ಈ ಮುಂದಿನ ವಿಷಯಗಳನ್ನು ನೀವು ಮಾಡಬೇಕು:

1. ನಿಮ್ಮ ವೈದ್ಯರನ್ನು ಯಾ ಚುಚ್ಚು ಮದ್ದು ಹಾಕುವ ಕೇಂದ್ರವನ್ನು ಸಲಹೆಗಾಗಿ ಭೇಟಿಮಾಡಿರಿ.

2. ನಿಮಗೆ ಕೊಡಲಾದ ಆಜ್ಞೆಗಳನ್ನು ಕೊಟ್ಟಂತೆಯೇ ಅನುಸರಿಸಿರಿ, ಮತ್ತು ಮಲೇರಿಯದ ವಿರುದ್ಧ ಮದ್ದನ್ನು ತೆಗೆದುಕೊಳ್ಳುತ್ತಾ ಇರುವುದಾದರೆ, ಮಲೇರಿಯ ತುಂಬಿದ ಪ್ರದೇಶವನ್ನು ಬಿಟ್ಟ ಅನಂತರವೂ ನಾಲ್ಕು ವಾರಗಳ ಕಾಲ ಹಾಗೆ ಮಾಡುವುದನ್ನು ಮುಂದುವರಿಸಿರಿ.

3. ಸೊಳ್ಳೆಯ ಕಚ್ಚುವಿಕೆಯ ವಿರುದ್ಧ ನಿಮ್ಮನ್ನು ಕಾಪಾಡಿಕೊಳ್ಳಿ.

4. ಮಲೇರಿಯಾದ ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ: ಜ್ವರ, ತಲೆನೋವುಗಳು, ಸ್ನಾಯುವಿನ ವೇದನೆ, ವಾಂತಿ, ಮತ್ತು⁄ಯಾ ಅತಿಭೇದಿ. ಮಲೇರಿಯ ತುಂಬಿರುವ ಪ್ರದೇಶದಿಂದ ನಿಮ್ಮ ನಿರ್ಗಮನದ ಅನಂತರ ಒಂದು ವರ್ಷವಾಗಿದ್ದರೂ, ಮಲೇರಿಯದ ವಿರುದ್ಧ ಮದ್ದನ್ನು ಉಪಯೋಗಿಸಲಾಗಿದ್ದರೂ ಕೂಡ, ಮಲೇರಿಯ ಕಾಣಿಸಿಕೊಳ್ಳಬಹುದೆಂದು ನೆನಪಿನಲ್ಲಿ ಇಡಿ.

5. ನಿಮಗೆ ರೋಗಲಕ್ಷಣಗಳು ಇರುವದಾದರೆ, ಒಬ್ಬ ವೈದ್ಯನನ್ನು ಭೇಟಿಯಾಗಿರಿ. ಮಲೇರಿಯ ಕ್ಷಿಪ್ರವಾಗಿ ಹೆಚ್ಚು ಕೆಡಬಹುದು ಮತ್ತು ಮೊದಲ ರೋಗಲಕ್ಷಣಗಳು ಕಾಣಿಸಿಕೊಂಡ ಅನಂತರ 48 ಗಂಟೆಗಳ ಒಳಗೆ ಮರಣವನ್ನು ಉಂಟುಮಾಡಬಹುದು.

ಮೂಲ: ಲೋಕ ಆರೋಗ್ಯ ಸಂಸ್ಥೆ

[ಪುಟ 28 ರಲ್ಲಿರುವ ಚಿತ್ರ ಕೃಪೆ]

H. Armstrong Roberts

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ