ವಿವಾಹ ವಿಚ್ಛೇದ ಪೂರ್ವದ ದೇಶಗಳು ಪಾಶ್ಚಾತ್ಯ ವಿಚಾರಗಳಿಂದ ಪ್ರಭಾವಿತವಾಗುವಲ್ಲಿ
ಜಪಾನ್ನ ಎಚ್ಚರ! ಸುದ್ದಿಗಾರರಿಂದ
“ನನ್ನ ಕೆಲಸದಿಂದ ನಾನೂ ನಿವೃತ್ತಿ ಹೊಂದುತ್ತೇನೆ.” ಜಪಾನಿನ ಒಂದು ಪ್ರಧಾನ ವ್ಯಾಪಾರ ಸಂಘದಿಂದ ನಿವೃತ್ತಿ ಹೊಂದುತ್ತಿರುವ ಒರ್ವ ಕಾರ್ಯನಿರ್ವಾಹಕನಿಗೆ, ಆ ಮಾತುಗಳು ಆಶ್ಚರ್ಯವನ್ನುಂಟುಮಾಡಿದವು. ಅವನ ಸಂಗಾತಿ ಮತ್ತು ಗೃಹಿಣಿಯಾಗಿರುವುದರಿಂದ ನಿವೃತ್ತಿ ಹೊಂದಲು ಅವನ ಹೆಂಡತಿ ಬಯಸಿದಳು. ಅವರ ದೇಶವು ವಿವಾಹ ವಿಚ್ಛೇದದ ಪ್ರಮಾಣದಲ್ಲಿ ಹೆಚ್ಚಳವನ್ನು ಅನುಭವಿಸುತ್ತಿದೆ. ಆಶ್ಚರ್ಯಕರವಾಗಿ, ಅದು ಮಧ್ಯ ವಯಸ್ಸಿನವರನ್ನು ಮತ್ತು ವೃದ್ಧರನ್ನು ಆವರಿಸುತ್ತದೆ. ತಮ್ಮ 50 ಮತ್ತು 60ರ ವಯೋಮಿತಿಯಲ್ಲಿ ಇರುವವರೊಳಗೆ, 20 ವರ್ಷಗಳಲ್ಲಿ ವಿವಾಹ ವಿಚ್ಛೇದಗಳ ಸಂಖ್ಯೆಯು ತ್ರಿಗುಣವಾಗಿದೆ. ಸಂತೋಷಕರವಾದ ಒಂದು ಜೀವಿತವನ್ನು ಕಂಡುಕೊಳ್ಳುವಲ್ಲಿ, ತಮ್ಮ ವಿವಾಹವನ್ನು ತೊರೆಯುವುದೇ ಅವರ ಕೊನೆಯ ಅವಕಾಶವಾಗಿದೆ ಎಂದು ತೋರುತ್ತದೆ.
ವಯಸ್ಸಿನ ಮಾನದಂಡದ ಇನ್ನೊಂದು ಕಡೆಯಲ್ಲಿ, ಅವರ ಮಧುಚಂದ್ರಗಳಲ್ಲಿ ಪರಸ್ಪರವಾಗಿ ಮೋಹವಿಮೋಚನೆಯಾದ ಎಳೆಯ ದಂಪತಿಗಳು, ಒಂದು ನಾರೀಟ ರೀಕಾನ್ನನ್ನು (ನಾರೀಟಾ ವಿಚ್ಛೇದ) ಹೊಂದಲು ನಿರ್ಣಯಿಸುತ್ತಾರೆ. ನಾರೀಟ, ಟೋಕಿಯೋದ ಅಂತಾರಾಷ್ಟ್ರೀಯ ವಿಮಾನನಿಲ್ದಾಣವಾಗಿದೆ, ಮತ್ತು ಅಭಿವ್ಯಕ್ತಿಯು, ನಾರೀಟಗೆ ಅವರು ಹಿಂದಿರುಗಿದಾಗ ಪರಸ್ಪರವಾಗಿ ಹಾಗೂ ಅವರ ವಿವಾಹಕ್ಕೆ ಶುಭವಿದಾಯ ಹೇಳುವ ನವವಿವಾಹಿತ ದಂಪತಿಗಳಿಗೆ ಸೂಚಿಸುತ್ತದೆ. ವಾಸ್ತವವಾಗಿ, ಜಪಾನ್ನಲ್ಲಿ 4 ಯಾ 5 ದಂಪತಿಗಳಲ್ಲಿ ಒಬ್ಬರು ವಿವಾಹ ವಿಚ್ಛೇದವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಅವರು ವಿವಾಹ ವಿಚ್ಛೇದವನ್ನು ಸಂತೋಷಕರ ಜೀವಿತಕ್ಕೊಂದು ದ್ವಾರದೋಪಾದಿಯಲ್ಲಿ ವೀಕ್ಷಿಸುತ್ತಾರೆ.
ಚೀನಾದ ಹಳೆಯ ಮೌಲ್ಯಗಳು ಇನ್ನೂ ಪ್ರಬಲವಾಗಿರುವ ಹಾಂಗ್ ಕಾಂಗ್ನಲ್ಲಿಯೂ ಕೂಡ, 1981 ಮತ್ತು 1987ರ ಮಧ್ಯೆ ಆರು ವರ್ಷಗಳಲ್ಲಿ ವಿವಾಹ ವಿಚ್ಛೇದದ ಪ್ರಮಾಣವು ದ್ವಿಗುಣಕ್ಕಿಂತ ಅಧಿಕವಾಯಿತು. ಸಿಂಗಾಪುರದಲ್ಲಿ, ಮುಸ್ಲಿಮರು ಮತ್ತು ಮುಸ್ಲಿಮೇತರರೊಳಗೆ ವಿವಾಹ ವಿಚ್ಛೇದವು, 1980 ಮತ್ತು 1988ರ ನಡುವೆ ಬಹುತರ 70 ಪ್ರತಿಶತದಷ್ಟು ಏರಿತು.
ಸರ್ವಸಮ್ಮತವಾಗಿರುವಂತೆ, ಪೂರ್ವದಲ್ಲಿ ದೀರ್ಘಾವಧಿಯ ವರೆಗೆ ಸ್ತ್ರೀಯರ ದೃಷ್ಟಿಕೋನಗಳನ್ನು ಅಂಕೆಯಲ್ಲಿಡಲಾಗಿತ್ತು. ಉದಾಹರಣೆಗಾಗಿ, ಜಪಾನ್ನ ಬಹಳ ಹಿಂದಿನ ದಿನಗಳಲ್ಲಿ, ಬರವಣಿಗೆಯ ಕೇವಲ “ಮೂರೂವರೆ ಸಾಲುಗಳಿಂದ” ಗಂಡನೊಬ್ಬನು ತನ್ನ ಹೆಂಡತಿಯನ್ನು ವಿವಾಹ ವಿಚ್ಛೇದ ಮಾಡಬಹುದಿತ್ತು. ಅವನು ಮಾಡಬೇಕಾದದ್ದು ಇಷ್ಟೇ—ವಿವಾಹ ವಿಚ್ಛೇದವನ್ನು ದೃಢೀಕರಿಸುವ ಒಂದು ಹೇಳಿಕೆಯನ್ನು ಮೂರೂವರೆ ಸಾಲುಗಳಲ್ಲಿ ಬರೆದು, ಕಾಗದದ ತುಂಡನ್ನು ತನ್ನ ಹೆಂಡತಿಗೆ ಕೊಡಬೇಕಿತ್ತು. ತದ್ವಿರುದ್ಧವಾಗಿ, ಪೀಡಿಸುವ ಗಂಡಂದಿರಿಂದ ಓಡಿಹೋಗುತ್ತಿರುವ ಸ್ತ್ರೀಯರಿಗೆ ಆಶ್ರಯ ನೀಡುತ್ತಿದ್ದ ದೇವಾಲಯದಲ್ಲಿ ಮರೆಹೋಗುವ ಮೂಲಕವೇ ಹೊರತು, ಒಂದು ವಿವಾಹ ವಿಚ್ಛೇದವನ್ನು ಪಡೆಯುವ ಸರಳ ಮಾರ್ಗ ಅವನ ಹೆಂಡತಿಗೆ ಇರಲಿಲ್ಲ. ತಮ್ಮನ್ನು ಬೆಂಬಲಿಸಲು ಯಾವುದೇ ಉಪಾಯಗಳಿಲ್ಲದೆ, ಪ್ರೀತಿಯಿಲ್ಲದ ವಿವಾಹಗಳನ್ನು ಮತ್ತು ಅವರ ಗಂಡಂದಿರ ನಿಷಿದ್ಧ ಲೈಂಗಿಕ ಸಂಬಂಧಗಳನ್ನು ಕೂಡ ಹೆಂಡತಿಯರು ತಾಳಿಕೊಳ್ಳಬೇಕಿತ್ತು.
ಇಂದು, ಅವರ ಉದ್ಯೋಗದಲ್ಲಿ ತಲ್ಲೀನರಾಗುವ ಅನೇಕ ಗಂಡಂದಿರು, ತಮ್ಮ ಕುಟುಂಬವನ್ನು ವಾಸ್ತವವಾಗಿ ತೊರೆದುಬಿಡುತ್ತಾರೆ. ಅವರ ಕಂಪನಿಗಾಗಿ ಜೀವಿಸುವುದರಲ್ಲಿ ಯಾವ ತಪ್ಪನ್ನೂ ಅವರು ಕಾಣುವುದಿಲ್ಲ. ಕೆಲಸಕ್ಕೆ ಇಂಥ ನಿಷ್ಠೆಯೊಂದಿಗೆ ಅವನು ತನ್ನ ಹೆಂಡತಿಯ ಸಂಸರ್ಗದ ಅಗತ್ಯವನ್ನು ಅಲಕ್ಷಿಸುತ್ತಾನೆ, ಮತ್ತು ಅವನಿಗಾಗಿ ಅಡಿಗೆಮಾಡುವ, ಶುಚಿಮಾಡುವ, ಮತ್ತು ಬಟ್ಟೆಗೆಳನ್ನು ಒಗೆಯುವ ಸಂಬಳ ತೆಗೆದುಕೊಳ್ಳದ ಆಳಿನಂತೆ ಅವಳನ್ನು ಪರಿಗಣಿಸುತ್ತಾನೆ.
ಹಾಗಿದ್ದರೂ, ವಿವಾಹ ಮತ್ತು ದಾಂಪತ್ಯ ಜೀವನವನ್ನು ಪ್ರಾಚ್ಯ ಸ್ತ್ರೀಯರು ವೀಕ್ಷಿಸುವ ರೀತಿಯನ್ನು ಪಾಶ್ಚಾತ್ಯ ವಿಚಾರಗಳ ಒಳಹರಿವು ಬದಲಾಯಿಸುತ್ತಿದೆ. “ಸ್ತ್ರೀಯರ ‘ವಿಮೋಚನೆಯು,’” “ಏಷಿಯಾದಲ್ಲಿ ವಿವಾಹ ವಿಚ್ಛೇದ ಪ್ರಮಾಣದ ಅಭಿವೃದ್ಧಿಗೆ ನಡೆಸುವಲ್ಲಿ, ಧ್ವನಿತವಾಗಿ ಪ್ರಧಾನವಾದ ಏಕೈಕ ಅಂಶವಾಗಿದೆ,” ಎಂಬುದಾಗಿ ಏಷಿಯ ವೀಕ್ ಗಮನಿಸುತ್ತದೆ. ಸಿಂಗಾಪುರಿನ ಕೌನ್ಸ್ಲಿಂಗ್ ಆ್ಯಂಡ್ ಕೇರ್ ಸೆಂಟರ್ನ ನಿರ್ದೇಶಕರಾದ ಆ್ಯನನ್ತಿ ಯಾವೂ, ಹೇಳಿದ್ದು: “ಸ್ತ್ರೀಯರು ತಮ್ಮ ಹಕ್ಕುಗಳ ಬಗೆಗೆ ಹೆಚ್ಚು ಸಮರ್ಥನೀಯ ಮತ್ತು ತಮ್ಮ ಯೋಗ್ಯತೆಯ ಬಗೆಗೆ ಹೆಚ್ಚು ಅರಿವುಳ್ಳವರಾಗಿದ್ದಾರೆ. ಅವರೊಂದು ಹೀನ ಸ್ಥಿತಿಯನ್ನು ಮೌನವಾಗಿ ತಾಳಿಕೊಳ್ಳಲು ಇನ್ನು ಮುಂದೆ ಸಿದ್ಧರಾಗಿರರು. ಇಂದಿನ ಸ್ತ್ರೀಯರಿಗೆ ಹೆಚ್ಚಿನ ಆಯ್ಕೆಗಳಿವೆ ಮತ್ತು ಅಲಕ್ಷ್ಯ ಹಾಗೂ ದುರುಪಯೋಗದ ಕಡಿಮೆ ಸೈರಣೆ ಇದೆ. ವಿಶೇಷವಾಗಿ ವಿವಾಹ ವಿಚ್ಛೇದಕ್ಕೆ ಸಂಬಂಧಿಸಿದ ಅಪಮಾನವು ಲಘಕರಿಸಲ್ಪಟ್ಟಿದ್ದರಿಂದ ಮತ್ತು 25 ವರ್ಷಗಳ ಹಿಂದೆ ಇದ್ದ ಅಪಮಾನವು ಈಗ ಇಲ್ಲದೆ ಇರುವುದರಿಂದ, ದಾಂಪತ್ಯದ ಆನಂದವನ್ನು ಕಂಡುಕೊಳ್ಳದೆ ಇರುವವರಿಗೆ ವಿವಾಹ ವಿಚ್ಛೇದವು ನಿಜವಾದ ಆಯ್ಕೆಯಾಗಿದೆ.”
ಕಳೆದ 25 ವರ್ಷಗಳಲ್ಲಿ, ಪಾಶ್ಚಾತ್ಯ ದೇಶಗಳು ಕೂಡ ಅಗಾಧವಾದ ಬದಲಾವಣೆಯನ್ನು ಅನುಭವಿಸಿವೆ. ಈ ಬದಲಾವಣೆಯನ್ನು ಸ್ಯಾಮ್ವೆಲ್ ಎಚ್. ಪ್ರೆಸ್ಟನ್, “ಕಳೆದ 20 ವರ್ಷಗಳಲ್ಲಿ ಅಮೆರಿಕನ್ ಕುಟುಂಬವನ್ನು ಬಹಳವಾಗಿ ಛಿದ್ರಗೊಳಿಸಿದ ಭೂಕಂಪವೆಂದು,” ಕರೆಯುತ್ತಾರೆ. ಇಸವಿ 1985ರಲ್ಲಿ, ವಿವಾಹ ವಿಚ್ಛೇದದಿಂದ ಹೆಚ್ಚಾಗಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ಎಲ್ಲಾ ಮನೆಗಳಲ್ಲಿ, ಬಹುತರ ಒಂದು ಕಾಲುಭಾಗವು ಒಂಟಿ ಹೆತ್ತವರ ಮನೆಗಳಾಗಿದ್ದವು. ಇಸವಿ 1984ರಲ್ಲಿ ಜನಿಸಿದ 60 ಪ್ರತಿಶತ ಮಕ್ಕಳು, 18ರ ಪ್ರಾಯವನ್ನು ತಲಪುವ ಮುಂಚೆ ಒಂಟಿ ಹೆತ್ತವರ ಮನೆಗಳಲ್ಲಿ ಜೀವಿಸುತ್ತಿರಬಹುದೆಂದು ಊಹಿಸಲಾಗಿದೆ.
ಮದುವೆಯ ನ್ಯಾಯಬದ್ಧ ಸಂಘಟನೆಯು ದುರ್ಬಲವಾಗುವುದರೊಂದಿಗೆ, ವಿವಾಹ ವಿಚ್ಛೇದವು ನಿಜವಾಗಿಯೂ ಸಂತೋಷಕರ ಜೀವಿತಕ್ಕೊಂದು ದ್ವಾರವಾಗಿದೆಯೋ? ಉತ್ತರಿಸಲಿಕ್ಕಾಗಿ, ಅವರ ಕೌಟುಂಬಿಕ ಸಮಸ್ಯೆಗಳಿಗೆ ವಿವಾಹ ವಿಚ್ಛೇದವು ವಿಶ್ವೌಷಧವೆಂದು ಜನರು ವೀಕ್ಷಿಸುವಂತೆ ಯಾವುದು ನಡೆಸಿತ್ತೆಂದು ನಾವು ಮೊದಲು ಪರೀಕ್ಷಿಸೋಣ.
[ಪುಟ 5 ರಲ್ಲಿರುವ ಚೌಕ]
“ಲಿವ್ಹ್ ಇನ್ ಡಿವೂರ್ಸ್”ನ ಒಂದು ಫಲ
ನಿಜವಾದ ವಿವಾಹ ವಿಚ್ಛೇದಗಳ ಸಂಖ್ಯೆಯ ಕೆಳಗೆ, “ಸ್ತಬ್ಧ” ವಿವಾಹ ವಿಚ್ಛೇದಗಳು ಅಡಗಿಕೊಂಡಿವೆ. ಅನೇಕ ಸ್ತ್ರೀಯರು ತಮ್ಮ ಗಂಡಂದಿರ ಮೇಲೆ ಆರ್ಥಿಕವಾಗಿ ಇನ್ನೂ ಅವಲಂಬಿತರಾಗಿರುವ ಮತ್ತು ಶಾಶ್ವತವಾಗಿರುವ ಪುರುಷ ಪ್ರಧಾನತೆಯ ಸಂಪ್ರದಾಯಕ್ಕೆ ಅಧೀನರಾಗಿರುವ ಜಪಾನ್ನಲ್ಲಿ, “ಲಿವ್ಹ್ ಇನ್ ಡಿವೋರ್ಸ್” ಎಂಬುದಾಗಿ ಹೆಸರಿಸಲ್ಪಟ್ಟ ಒಂದು ಪರಿಸ್ಥಿತಿಯಲ್ಲಿ ದಂಪತಿಗಳು ಅದೇ ಮನೆಯಲ್ಲಿ ಮನಸ್ಸಿಲ್ಲದೆ ಜೀವಿಸಬಹುದು. ಇಂಥ ಒಂದು ಸನ್ನಿವೇಶದಲ್ಲಿ, ಹೆಂಡತಿಯರು ತಮ್ಮ ಎಲ್ಲಾ ಶಕ್ತಿಯನ್ನು ಮಗುವಿನ ಪಾಲನೆಯಲ್ಲಿ ವ್ಯಯಿಸುತ್ತಾರೆ. ಮಕ್ಕಳಿಗೆ ತದನಂತರ ಸ್ವತಂತ್ರವಾಗಿರಲು ಕಷ್ಟಕರವಾಗುವಂತೆ ಮಾಡುತ್ತಾ, ಈ ತಾಯಂದಿರು ಅನೇಕ ಬಾರಿ ಅಧಿಕ ಸಂರಕ್ಷಣೆಯನ್ನು ನೀಡುವವರಾಗಿರುತ್ತಾರೆ.
ಆದಕಾರಣ, ಇಂಥ ತಾಯಂದಿರ ಗಂಡು ಮಕ್ಕಳು ಬೆಳೆದು ಮದುವೆ ಮಾಡಿಕೊಂಡಾಗ, ಅವರಲ್ಲಿ ಅನೇಕರು “ಪ್ರೀತಿಯ ಶಾರೀರಿಕ ಸಂಪರ್ಕವನ್ನು ಬಯಸದ ಮನೋಭಾವದಿಂದ” ಕಷ್ಟಾನುಭವಿಸುತ್ತಾರೆ. ದಾಂಪತ್ಯ ಜೀವನದ ಹಲವಾರು ವರ್ಷಗಳ ಅನಂತರವೂ ಕೂಡ, ಇವರು ತಮ್ಮ ಹೆಂಡತಿಯರನ್ನು ಪ್ರೀತಿಪೂರ್ಣವಾಗಿ ಸ್ಪರ್ಶಿಸುವುದೇ ಇಲ್ಲ. “ನಾನು ಮಮ್ಮಿಯನ್ನು ಪ್ರೀತಿಸುತ್ತೇನೆ” ಎಂಬುದಾಗಿ ಹೆಸರಿಸಲ್ಪಟ್ಟ ಸಮಸ್ಯೆಯಿಂದ ಅವರು ಕಷ್ಟಾನುಭವಿಸುತ್ತಾರೆ ಮತ್ತು ಅನೇಕ ಬಾರಿ ಅವರ ತಾಯಂದಿರು ಅವರಿಗೆ ಹೇಳಿದ್ದರಿಂದ ಮದುವೆ ಮಾಡಿಕೊಂಡರು. ಆಸಾಹೀ ಇವನಿಂಗ್ ನ್ಯೂಸ್ನ ಅನುಸಾರ, ಸಮಸ್ಯೆಯು ಒಂದು ದಶಕದಿಂದ ಬೆಳೆಯುತ್ತಾ ಇದೆ ಮತ್ತು ಅವರ ನಾಚಿಕೆಯ ಕಾರಣದಿಂದಾಗಿ ಸಲಹೆಯನ್ನು ಪಡೆಯಲು ಹೆದರುವ ಸಾವಿರಾರು ಪುರುಷರಿದ್ದಾರೆ, ಎಂದು ವಿವಾಹ ಸಲಹೆಯನ್ನು ನೀಡುವುದರಲ್ಲಿ ಪರಿಣಿತರಾದ ಡಾ. ಯಾಸಾಶೀ ನಾರಬಾಯಾಶೀ ಹೇಳುತ್ತಾರೆ.