ವಿವಾಹ—ಅನೇಕರು ಅದನ್ನು ತೊರೆದುಬಿಡುವ ಕಾರಣ
ಪ್ರಾಚ್ಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳು ಒತ್ತಾಗಿ ಅಸ್ತಿತ್ವದಲ್ಲಿರುವ ಹಾಂಗ್ ಕಾಂಗ್ನಲ್ಲಿ, ವಿವಾಹ ವಿಚ್ಛೇದವನ್ನು ಕೇಂದ್ರೀಕರಿಸುತ್ತಾ, ಏಷಿಯ ಮ್ಯಾಗ್ಜೀನ್ ಗಮನಿಸಿದ್ದು: “ಸಂಸರ್ಗದ ಕೊರತೆ, ಅವಿಶ್ವಾಸ, ಲೈಂಗಿಕ ತೊಂದರೆಗಳು ಮತ್ತು ಅಸಮಂಜಸತೆ, ಚೀನಾದ ಹಾಗೂ ಪಾಶ್ಚಾತ್ಯ ದಂಪತಿಗಳು—ಇಬ್ಬರಲ್ಲಿಯೂ ಸಾಮಾನ್ಯವಾಗಿ ದಾಂಪತ್ಯ ಘರ್ಷಣೆಯನ್ನು ಉಂಟುಮಾಡುವ ಅಂಶಗಳಾಗಿವೆ.” ಲೋಕದ ಬೇರೆ ಕಡೆಗಳಲ್ಲಿಯೂ ಸನ್ನಿವೇಶವು ಅದೇ ಆಗಿದೆ.
ಉದ್ಯೋಗ ಮೊದಲು ಎಂಬ ಮನೋವೃತ್ತಿ ಇರುವ ಪುರುಷರು ಹಾಗೂ ಸ್ತ್ರೀಯರು, ತಮ್ಮ ಕೆಲಸಕ್ಕಾಗಿ ತಮ್ಮ ಕುಟುಂಬಗಳನ್ನು ತ್ಯಾಗಮಾಡಲು ಸಿದ್ಧರಾಗಿರುತ್ತಾರೆ. ಹೀಗೆ, ಇದು ಪ್ರತಿಬಂಧಿತ ಕೌಟುಂಬಿಕ ಸಂಸರ್ಗದಲ್ಲಿ ಫಲಿಸುತ್ತದೆ. ಕೆಲಸದ ಒಂದು ದಿನದ ಅನಂತರ ದಣಿದಿದ್ದು, ವಾರ್ತಾಪತ್ರಿಕೆಯನ್ನು ಓದುವುದರಲ್ಲಿ ಗಂಡನು ತನ್ನನ್ನು ಲೀನವಾಗಿರಿಸಿಕೊಳ್ಳುತ್ತಾನೆ. ಜುನಿಚೀ ಮತ್ತು ಅವನ ಹೆಂಡತಿ ಮೂರು ಉಪಹಾರಗೃಹಗಳನ್ನು ನಡೆಸಿದರು ಮತ್ತು ವಿಭಿನ್ನ ಸ್ಥಳಗಳಲ್ಲಿ ಬೆಳಗ್ಗೆ ಎಂಟರಿಂದ ರಾತ್ರಿ ಹತ್ತರ ವರೆಗೆ ಕೆಲಸ ಮಾಡಿದರು. “ವಾಸ್ತವಿಕವಾಗಿ ಗಂಡ ಮತ್ತು ಹೆಂಡತಿಯರಂತೆ ನಮ್ಮ ನಡುವೆ ಸಂಸರ್ಗವೇ ಇರಲಿಲ್ಲ,” ಎಂದು ಜುನಿಚೀ ಒಪ್ಪಿಕೊಳ್ಳುತ್ತಾನೆ. ಸಂಸರ್ಗದ ಈ ಕೊರತೆಯು ಗಂಭೀರ ದಾಂಪತ್ಯ ಸಮಸ್ಯೆಗಳಿಗೆ ನಡೆಸಿತು.
ವಿವಾಹಬಾಹಿರ ಲೈಂಗಿಕತೆಯ ಬಗೆಗೆ ಜನರ ನೋಟವೇ ವಿವಾಹ ಬಂಧಗಳ ಮುರಿಯುವಿಕೆಗೆ ನಡೆಸುವ ಇನ್ನೊಂದು ಅಂಶವಾಗಿದೆ. ವಿವಾಹದ ಹೊರಗಿನ ಲೈಂಗಿಕತೆಯು ಇಂದು ಎಷ್ಟು ಮಿತಿಮೀರಿದೆ ಎಂದರೆ, ಜಪಾನ್ನಲ್ಲಿ ನಡೆಸಲಾದ ಒಂದು ಸಮೀಕ್ಷೆಗೆ ಪ್ರತಿಕ್ರಿಯಿಸಿದ 20 ಪ್ರತಿಶತ ಗಂಡಸರು ಮತ್ತು 8 ಪ್ರತಿಶತ ಹೆಂಗಸರು, ಕಳೆದ ವರ್ಷದೊಳಗೆ ಅವರ ಒಮ್ಮದುವೆಯ ಸಂಬಂಧಗಳ ಹೊರಗೆ ಅವರಿಗೆ ಲೈಂಗಿಕ ಸಂಪರ್ಕಗಳು ಇದ್ದವೆಂದು ಒಪ್ಪಿಕೊಂಡರು. ಜಪಾನ್ನಲ್ಲಿ ತನ್ನ ಗಂಡನಲ್ಲದೆ ಬೇರೆ ಪುರುಷರೊಂದಿಗೆ ಸಂಬಂಧಗಳನ್ನು ಹೊಂದಿದ್ದ ವೃತ್ತಿ ಸ್ತ್ರೀಯು ಅಸಾಮಾನ್ಯಳಲ್ಲ. “ನನ್ನ ಗಂಡನು ಕಂಡು ಹಿಡಿದರೆ, ನಾನು ಅವನನ್ನು ವಿವಾಹ ವಿಚ್ಛೇದ ಮಾಡಿಬಿಡುವೆ,” ಎಂಬುದಾಗಿ ಯೋಚಿಸುತ್ತಾ, ಅವಳು ಒಬ್ಬ ಮನುಷ್ಯನಿಂದ ಇನ್ನೊಬ್ಬನ ಕಡೆಗೆ ಚಲಿಸಿದಳು. ಆಧುನಿಕ ಸಮಾಜವು ಈ ವ್ಯವಹಾರಗಳನ್ನು ಕಂಡೂ ಕಾಣದಂತಿದೆ.
ಇದೇ ಆಧುನಿಕ ಸಮಾಜವು ನಾನು ಪ್ರಥಮ ಎಂಬ ಮನೋಭಾವವನ್ನು ಉತ್ತೇಜಿಸುವುದರಿಂದಾಗಿ ಗಂಡ ಮತ್ತು ಹೆಂಡತಿಯು ಸ್ವಾರ್ಥಮಗ್ನರಾಗುತ್ತಾರೆ, ಇದು ವಿವಾಹ ವಿಚ್ಛೇದಕ್ಕೆ ಇನ್ನೊಂದು ಕಾರಣವಾಗಿರುವ ಅಸಮಂಜಸತೆಗೆ ನಡೆಸುತ್ತದೆ. “ದಂಪತಿಗಳೋಪಾದಿ ನಾವು ಯಾವ ಸಮಯದಲ್ಲಾದರೂ ಬೇರೆಯಾಗಬಹುದಿತ್ತು,” ಎನ್ನುತ್ತಾರೆ ಕೀಯೋಕೊ. “ನಾವು ವಿವಾಹವಾದ ಕೂಡಲೇ, ನಾನೊಂದು ಯಾಂತ್ರಿಕ ವ್ಯಕ್ತಿಯಾಗಿರಬೇಕೆಂದು ಮತ್ತು ನನಗೆ ತಿಳಿಸಲಾದಂತೆಯೇ ಮಾಡಬೇಕೆಂದು ನನ್ನ ಗಂಡ ನನಗೆ ಹೇಳಿದನು. ಅವನೊಂದಿಗೆ ಎಲ್ಲಾ ವಿಷಯಗಳು ಒಳ್ಳೆಯದಾಗಿ ಇರುವಾಗ, ಪರಿಸ್ಥಿತಿಯು ತೀರ ಕೆಟ್ಟದಾಗಿರಲಿಲ್ಲ, ಆದರೆ ವಿಷಯಗಳು ಕಷ್ಟಕರವಾದಾಗ, ಅವನು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಮತ್ತು ಎಲ್ಲದ್ದಕ್ಕೂ ಇತರರನ್ನು ದೂಷಿಸುತ್ತಿದ್ದನು. ನಾನೂ ಇದಕ್ಕೆ ಹೊಣೆಯಾಗಿದ್ದೆ, ಯಾಕಂದರೆ ನಾನು ಅಧಿಕಾರದ ವಿರುದ್ಧ ದಂಗೆ ಎದ್ದೆ. ಅವನು ಅನ್ಯಾಯವಾಗಿ ನಡಕೊಂಡಾಗ ನನ್ನ ಗಂಡನಿಗೆ ವಿಧೇಯತೆಯನ್ನು ತೋರಿಸಲು ನನಗೆ ಬಹಳ ಕಷ್ಟವಾಗುತ್ತಿತ್ತು.”
ಹಿಂಸೆ ಮತ್ತು ಕುಡಿಕತನ, ಆರ್ಥಿಕ ಸಮಸ್ಯೆಗಳು, ವಿವಾಹ ಸಂಬಂಧಿಗಳೊಂದಿಗೆ ತೊಂದರೆಗಳು, ಮತ್ತು ಮಾನಸಿಕ ದುರುಪಯೋಗವು ವಿವಾಹ ವಿಚ್ಛೇದಕ್ಕಾಗಿರುವ ಬೇರೆ ಕಾರಣಗಳಾಗಿವೆ.
ವಿವಾಹ ವಿಚ್ಛೇದಕ್ಕೆ ಕಾರಣವೇನು?
ವಿವಾಹ ವಿಚ್ಛೇದಕ್ಕೆ ಕಾರಣಗಳು ಎಷ್ಟೇ ಭಿನ್ನವಾಗಿದ್ದರೂ, ಅದರ ಲೋಕವ್ಯಾಪಕ ಅಭಿವೃದ್ಧಿಯ ಹಿಂದೆ ಅದಕ್ಕಿಂತ ಹೆಚ್ಚಿನದ್ದೆನೋ ಇದೆ. ಅದರ ದೋಷಗಳಿಗಾಗಿ, ಪೂರ್ವವು ಪಾಶ್ಚಾತ್ಯ ಸಮಾಜದ ಪ್ರಭಾವವನ್ನು ದೂಷಿಸಿದರೂ, ಪಾಶ್ಚಾತ್ಯದಲ್ಲಿ ವಿವಾಹ ವಿಚ್ಛೇದದ ಸ್ವೀಕರಣೆಯು ಇತ್ತೀಚೆಗಿನ ಸಂಗತಿಯಾಗಿದೆ. ವಾಸ್ತವದಲ್ಲಿ, ಕಳೆದ ಕೆಲವು ದಶಕಗಳಲ್ಲಿಯೇ ವಿವಾಹ ವಿಚ್ಛೇದಗಳು ಅಮೆರಿಕದಲ್ಲಿ ಮೂರುಪಟ್ಟು ಮತ್ತು ಬ್ರಿಟನ್ನಲ್ಲಿ ನಾಲ್ಕುಪಟ್ಟು ಹೆಚ್ಚಾದವು. ದ ಅರ್ಬನ್ ಇನ್ಸ್ಟಿಟ್ಯೂಟ್ನ (ಅಮೆರಿಕದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ತನಿಖೆ ನಡೆಸುವ ಒಂದು ಸಂಶೋಧನಾ ಸಂಸ್ಥೆ) ಆ್ಯಂಡ್ರೂ ಜೆ. ಚರ್ಲಿನ್, ವಿವಾಹ ವಿಚ್ಛೇದದಲ್ಲಿ ಅಭಿವೃದ್ಧಿಗಾಗಿರುವ ಕಾರಣಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಇರುವುದನ್ನು ಒಪ್ಪಿಕೊಂಡರೂ, “ಸ್ತ್ರೀಯರ ಹೆಚ್ಚಾಗುತ್ತಿರುವ ಆರ್ಥಿಕ ಸ್ವಾತಂತ್ರ್ಯವನ್ನು” ಮತ್ತು “ಸಾಮಾನ್ಯವಾಗಿ ಸಮಾಜದ ಮನೋಭಾವನೆಯಲ್ಲಿ ಬದಲಾವಣೆಗಳನ್ನು” ಈ ಪ್ರವೃತ್ತಿಯನ್ನುಂಟುಮಾಡುವ ಅಂಶಗಳೊಳಗೆ ಇರುವುದಾಗಿ ಪಟ್ಟಿಮಾಡಿದರು.
ಅಮೆರಿಕ ಅಷ್ಟೇ ಅಲ್ಲದೆ ಇತರ ಉದ್ಯೋಗಶೀಲ ದೇಶಗಳಲ್ಲಿ ಇರುವ ಸ್ತ್ರೀಯರಿಗೆ, ವಿವಾಹವಾಗಿ ತಮ್ಮ ಮನೆಗಳ ಹೊರಗೆ ಕೆಲಸಮಾಡುವುದು ಇನ್ನು ಮುಂದೆ ಅಸಾಮಾನ್ಯವಾಗಿರುವುದಿಲ್ಲ. ಹಾಗಿದ್ದರೂ, ಮನೆಯ ಕೆಲಸಗಳಲ್ಲಿ ಗಂಡನ ಪಾಲು ಹೆಚ್ಚಾಗುವುದರಲ್ಲಿ ತೀರ ನಿಧಾನವಾಗಿದೆ. “ಉದ್ಯೋಗದಲ್ಲಿರುವ ಪ್ರತಿಯೊಬ್ಬ ಸ್ತ್ರೀಗೆ ಅತ್ಯಂತವಾಗಿ ಬೇಕಾದದ್ದು—ಹೆಂಡತಿಯ ಕೆಲಸವನ್ನು ಮಾಡುವವಳೊಬ್ಬಳು,” ಎಂಬುದಾಗಿ ಕೆಲವು ಸ್ತ್ರೀಯರು ಗೊಣಗುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ!
ಅಮೆರಿಕದಲ್ಲಿ, ಸ್ತ್ರೀಯರು ಬಟ್ಟೆ ಒಗೆಯುವುದು, ಶುಚಿಮಾಡುವುದು, ಊಟಗಳನ್ನು ತಯಾರಿಸುವುದು, ಮಕ್ಕಳನ್ನು ಪರಾಮರಿಸುವುದು, ಹೀಗೆ ಬಹಳ ಕಷ್ಟಪಟ್ಟು ಕೆಲಸಮಾಡುವಾಗ, “ಅನೇಕ ಪುರುಷರು ‘ಕೆಲಸವಿಲ್ಲದೆ ತಿರುಗಾಡುವುದರಲ್ಲಿ’ ವ್ಯಯಿಸಿದ ಸಮಯದಲ್ಲಿ ಆನಂದಿಸುತ್ತಾರೆಂದು,” ದ ಚೇನ್ಜಿಂಗ್ ಅಮೆರಿಕನ್ ಫ್ಯಾಮಿಲಿ ಆ್ಯಂಡ್ ಪಬ್ಲಿಕ್ ಪಾಲಿಸಿ ಎಂಬ ಪುಸ್ತಕವು ಹೇಳುತ್ತದೆ. ಇದು ಲೋಕದ ಸುತ್ತಲೂ ನಡೆಯುತ್ತದೆ ಎಂದು ಮಾನವ ಶಾಸ್ತ್ರಜ್ಞರು ಹೇಳುತ್ತಾರೆ. ಜಪಾನ್ನಲ್ಲಿ, ಕೆಲಸದ ಅನಂತರ ಸಾಮಾಜಿಕ ಗುಂಪುಗಳಲ್ಲಿ ಸಕ್ರಿಯರಾಗಿ ಭಾಗವಹಿಸುವುದಕ್ಕಾಗಿ ಗಂಡಸರು ಹೊರಗೆ ಹೋಗುವುದು ಅಸಾಮಾನ್ಯವಲ್ಲ. ಮನೆಯಲ್ಲಿ ಮಧುರವಾದ ಮಾನವ ಸಂಬಂಧಗಳನ್ನು ಕಡೆಗಣಿಸಿದರೂ, ತಮ್ಮ ಕೆಲಸದ ಸ್ಥಳದಲ್ಲಿ ಮಧುರವಾದ ಮಾನವ ಸಂಬಂಧಗಳಿಗಾಗಿ ಅದೊಂದು ಆವಶ್ಯಕತೆ ಎಂದು ಅವರು ವಾದಿಸುತ್ತಾರೆ. ಪುರುಷರ ತರ್ಕಕ್ಕನುಸಾರ, ಅವರು ಸಂಸಾರದ ನಿರ್ವಾಹಕರಾಗಿರುವುದರಿಂದ, ಸ್ತ್ರೀಯರು ಮತ್ತು ಮಕ್ಕಳು ಆಪಾದಿಸಬಾರದು. ಹೆಚ್ಚಿನ ಸ್ತ್ರೀಯರು ಕೆಲಸಮಾಡುವುದರೊಂದಿಗೆ, ಇಂಥ ಆಲೋಚನೆಯು ಕೇವಲ ನೆಪಗಳನ್ನು ಮಾಡುವುದಾಗಿ ತೋರಿಸಲಾಗಿದೆ.
ದಾಂಪತ್ಯದ ಅಪಜಯಕ್ಕೆ ನೆರವು ನೀಡುವ ಇನ್ನೊಂದು ಶ್ರೇಷ್ಠ ಅಂಶವು, “ಸಾಮಾನ್ಯವಾಗಿ ಸಮಾಜದ ಮನೋಭಾವನೆಯಲ್ಲಿ ಬದಲಾವಣೆಗಳು” ಆಗಿದೆ ಯಾ, ಜರ್ನಲ್ ಆಫ್ ಮ್ಯಾರೇಜ್ ಆ್ಯಂಡ್ ದ ಫ್ಯಾಮಿಲಿ ಅದನ್ನು ಹೇಳುವಂತೆ, “ಶಾಶ್ವತವಾದ ದಾಂಪತ್ಯದ ಆದರ್ಶದಲ್ಲಿ ಇಳಿತ”ವಾಗಿದೆ. ಇಸವಿ 1990ರುಗಳ ವಧೂವರರಿಗೆ, “ಮರಣವು ನಮ್ಮನ್ನು ಅಗಲಿಸುವ ತನಕ” ಎಂಬ ಸಾಂಪ್ರದಾಯಿಕ ವಿವಾಹದ ಪ್ರತಿಜ್ಞೆಯು, ಇನ್ನು ಮುಂದೆ ಆ ಅರ್ಥವನ್ನು ಕೊಡುವುದಿಲ್ಲ. ಉತ್ತಮವಾದ ಸಂಗಾತಿಗಾಗಿ ಶೋಧನೆಯನ್ನು ಅವರು ಮುಂದುವರಿಸುತ್ತಾರೆ. ನವವಿವಾಹಿತ ದಂಪತಿಗಳು ತಮ್ಮ ಬಂಧವನ್ನು ಆ ರೀತಿಯಲ್ಲಿ ವೀಕ್ಷಿಸುವುದಾದರೆ, ಅದು ಎಷ್ಟು ಬಲವಾಗಿರುವುದು?
ಈ ಸಾಮಾಜಿಕ ಬದಲಾವಣೆಗಳು ಬೈಬಲಿನ ವಿದ್ಯಾರ್ಥಿಗಳಿಗೆ ಆಶ್ಚರ್ಯವನ್ನು ಉಂಟುಮಾಡುವುದೇ ಇಲ್ಲ. ಇಸವಿ 1914ರಿಂದ “ನಿಭಾಯಿಸಲು ಕಠಿನ”ವಾಗಿರುವ “ಕಡೇ ದಿವಸಗಳಲ್ಲಿ” ನಾವು ಜೀವಿಸುತ್ತಾ ಇದ್ದೇವೆಂದು ಈ ಪ್ರೇರಿತ ಪುಸ್ತಕವು ಪ್ರಕಟಿಸುತ್ತದೆ. ಮನುಷ್ಯರು “ಸ್ವಾರ್ಥಚಿಂತಕರೂ . . . ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ” ಆಗಿದ್ದಾರೆ. (2 ತಿಮೊಥೆಯ 3:1-3) ಆದುದರಿಂದ ತಮ್ಮ ಸಂಗಾತಿಗಳಿಗಿಂತ ತಮ್ಮನ್ನೇ ಪ್ರೀತಿಸಿಕೊಳ್ಳುವ ಜನರಿಗೆ, ತಮ್ಮ ಸಂಗಾತಿಗೆ ದ್ರೋಹಬಗೆಯುವವರಿಗೆ, ಮತ್ತು ತಮ್ಮ ವಿವಾಹದಲ್ಲಿ ಯಾವುದೇ ಒಪ್ಪಂದಕ್ಕೆ ಬರದೆ ಇರುವವರಿಗೆ, ತಮ್ಮ ದಾಂಪತ್ಯ ಸಮಸ್ಯೆಗಳಿಗೆ ವಿವಾಹ ವಿಚ್ಛೇದವು ಏಕಮಾತ್ರ ಮಾರ್ಗವಾಗುತ್ತದೆ.
ಸಂತೋಷಕರ ಜೀವಿತಕ್ಕೊಂದು ದ್ವಾರವೋ?
ಅನೇಕ ಸಂದರ್ಭಗಳಲ್ಲಿ, ವಿವಾಹ ವಿಚ್ಛೇದವು, ಸಂತೋಷಕ್ಕೆ ನಡೆಸುವ ಒಂದು ದ್ವಾರವಾಗಿ ತನ್ನನ್ನು ರುಜುಪಡಿಸಿ ಕೊಂಡಿಲ್ಲ.a ಆರ್ವತ್ತು ವಿವಾಹ ವಿಚ್ಛೇದಿತ ದಂಪತಿಗಳ 15 ವರ್ಷದ ಒಂದು ಸಮೀಕ್ಷೆಯ ಅನಂತರ, “ವಿವಾಹ ವಿಚ್ಛೇದವು ಮೋಸಗೊಳಿಸುವಂಥದ್ದಾಗಿದೆ,” ಎಂದು ಮಾನಸಿಕ ಆರೋಗ್ಯದ ಸಂಶೋಧಕಿ ಜೂಡಿತ್ ವಾಲರ್ಸ್ಟೀನ್ ಹೇಳುತ್ತಾರೆ. “ನ್ಯಾಯಬದ್ಧವಾಗಿ ಅದು ಒಂದು ಘಟನೆಯಾಗಿದೆ, ಆದರೆ ಮನೋವೈಜ್ಞಾನಿಕವಾಗಿ ಅದೊಂದು ಸರಪಣಿಯಾಗಿದೆ—ಕೆಲವೊಮ್ಮೆ ಎಂದೂ ಕೊನೆಗೊಳ್ಳದ ಘಟನೆಗಳ—ಸಮಯದ ಕಾಲಾವಧಿಯಲ್ಲಿ ಸಂಭವಿಸುವ ಪುನಃಸ್ಥಾಪನೆಗಳು ಮತ್ತು ಮೂಲಸ್ವರೂಪದಲ್ಲಿ ವ್ಯತ್ಯಾಸ ಹೊಂದುತ್ತಿರುವ ಸಂಬಂಧಗಳ ಸರಪಣಿಯಾಗಿದೆ.” ಸ್ತ್ರೀಯರಲ್ಲಿ ಕಾಲುಭಾಗ ಮತ್ತು ಪುರುಷರಲ್ಲಿ ಐದರಲ್ಲಿ ಒಂದು ಭಾಗವು, ವಿವಾಹ ವಿಚ್ಛೇದದ ತರುವಾಯ ಒಂದು ದಶಕವಾದರೂ, ಅವರ ಜೀವಿತಗಳು ಸಾಮಾನ್ಯ ಸ್ಥಿತಿಗೆ ಹಿಂದಿರುಗಿರಲಿಲ್ಲವೆಂದು ಅವರ ಅಧ್ಯಯನಗಳು ತೋರಿಸುತ್ತವೆ.
ವಿಶೇಷವಾಗಿ ಗಾಯವಾಗುವಂಥವರು ವಿವಾಹ ವಿಚ್ಛೇದದ ಮಕ್ಕಳು. ಒಳಗೊಂಡಿದ್ದ ಎಲ್ಲಾ ಮಕ್ಕಳಲ್ಲಿ ವಾಸ್ತವವಾಗಿ, ವಿವಾಹ ವಿಚ್ಛೇದವು “ಶಕ್ತಿಯುತ ಹಾಗೂ ಸಂಪೂರ್ಣವಾಗಿ ನಿರೀಕ್ಷಿಸದೆ ಇದ್ದ ಪರಿಣಾಮಗಳನ್ನು” ಬೀರಿತು ಎಂದು ವಾಲರ್ಸ್ಟೀನ್ ಅದೇ ಸಂಶೋಧನೆಯಿಂದ ಕಂಡುಕೊಂಡರು. ಹೆತ್ತವರ ವಿವಾಹ ವಿಚ್ಛೇದದ ಕುರಿತು ಯಾವುದೇ ನಕಾರಾತ್ಮಕ ಭಾವನೆಗಳನ್ನು ಅಲ್ಲಗಳೆದ ಕೆಲವು ಮಕ್ಕಳು, ಮುಂದೆ ಜೀವನದಲ್ಲಿ ಅವರೊಂದು ವಿವಾಹ ಸಂಗಾತಿಯನ್ನು ಹುಡುಕುವಾಗ ಅಂಥ ಭಾವನೆಗಳು ಇದ್ದಕ್ಕಿದ್ದ ಹಾಗೆ ಮೇಲೆ ಬರುವುದನ್ನು ಕಾಣಬಹುದು.
ಕೆಲವರು ಸಂತೋಷವನ್ನು ಕಂಡುಕೊಳ್ಳುವುದರಿಂದ, ವಿವಾಹ ವಿಚ್ಛೇದದ ಎಲ್ಲಾ ಬಲಿಗಳು ಸಂತೋಷವನ್ನು ಕಾಣುವುದೇ ಇಲ್ಲ ಎಂಬುದನ್ನು ಇದು ಸೂಚಿಸುವುದಿಲ್ಲ. ಇಂಥವರಿಗೆ, ಸಾಮಾನ್ಯವಾಗಿ ಹಳೆಯ ವ್ಯಕ್ತಿತ್ವದ ಬೂದಿಯಿಂದ ಪುನಃ ರೂಪಿಸಲಾದ ಒಂದು ವ್ಯಕ್ತಿತ್ವವು ಮೇಲೇಳುತ್ತದೆ. ಉದಾಹರಣೆಗೆ, ವಿವಾಹ ವಿಚ್ಛೇದದ ಆಘಾತ ಮತ್ತು ಅದರೊಂದಿಗೆ ಜೊತೆಗೂಡಿ ಬರುವ ದುಃಖ ಹಾಗೂ ಸಯ್ವೋಗ್ಯತೆಯ ಕುರಿತು ಇರುವ ಸಂದೇಹಗಳು ಒಮ್ಮೆ ಪೂರ್ತಿಯಾದ ಮೇಲೆ, ನಿರ್ದೋಷಿಯಾದ ಸಂಗಾತಿಯು ಸ್ವಪರೀಕ್ಷೆಯಿಂದ, ಪ್ರಬಲವಾದ, ಹೆಚ್ಚು ಸಜೀವ, ಸಂಪೂರ್ಣವಾದ ಒಂದು ವ್ಯಕ್ತಿಯಾಗಿ ಹೊರಬರಬಹುದು.
ಅವಳ ಗಂಡನು ಇನ್ನೊಬ್ಬ ಸ್ತ್ರೀಗಾಗಿ ತನ್ನನ್ನು ತ್ಯಜಿಸಿದ ಒಬ್ಬಾಕೆ ಹೆಂಡತಿಯು ವಿವರಿಸುವುದೇನಂದರೆ, ನೋವು ಮತ್ತು ಕೋಪವು ಕಡಿಮೆಯಾಗಲು ಆರಂಭಿಸಿದ ಅನಂತರ, “ಅಂತರಂಗದಲ್ಲಿ ನೀವು ಭಿನ್ನರಾಗಿದ್ದೀರೆಂದು ಕಾಣುವಿರಿ. ನಿಮ್ಮ ಅನಿಸಿಕೆಗಳು ಬದಲಾಯಿಸಿವೆ. ನೀವು ಹಿಂದೆ ಆಗಿದ್ದ ವ್ಯಕ್ತಿಯಂತೆ ಇರಲು ನಿಮಗೆ ಎಂದೂ ಸಾಧ್ಯವಿಲ್ಲ.” ಅವಳು ಸಲಹೆ ನೀಡುವುದು: “ನಿಮ್ಮನ್ನು ಒಬ್ಬ ವ್ಯಕ್ತಿಯಂತೆ ಪುನಃ ತಿಳಿದುಕೊಳ್ಳಲು ಸಮಯವನ್ನು ತೆಗೆದುಕೊಳ್ಳಿರಿ. ವಿವಾಹದಲ್ಲಿ ಸಾಮಾನ್ಯವಾಗಿ ಸಂಗಾತಿಗಳು, ಇನ್ನೊಬ್ಬ ವ್ಯಕ್ತಿಯ ಅಭಿಪ್ರಾಯಕ್ಕೆ ಮಾನ್ಯತೆ ತೋರಿಸುವಲ್ಲಿ ತಮ್ಮ ಬಯಕೆಗಳನ್ನು ಮತ್ತು ಆಶೆಗಳನ್ನು ದಮನಮಾಡುತ್ತಾರೆ, ಆದರೆ ಒಂದು ವಿವಾಹ ವಿಚ್ಛೇದದ ಅನಂತರ, ಈಗ ನಿಮ್ಮ ಇಷ್ಟವಾದವುಗಳು ಮತ್ತು ಇಷ್ಟವಿಲ್ಲದವುಗಳು ಯಾವುವು ಎಂದು ಕಂಡು ಹಿಡಿಯಲಿಕ್ಕಾಗಿ ಸಮಯವನ್ನು ತೆಗೆದುಕೊಳ್ಳತಕ್ಕದ್ದು. ನಿಮ್ಮ ಅನಿಸಿಕೆಗಳನ್ನು ನೀವು ಹೂಳಿಡುವುದಾದರೆ, ಅವುಗಳನ್ನು ನೀವು ಜೀವಂತವಾಗಿ ಹೂಳಿಡುತ್ತಿರಿ. ಒಂದು ದಿನ ಅವು ಹಿಂದಿರುಗಿ ಬರುವುವು, ಮತ್ತು ನೀವು ಅವುಗಳನ್ನು ಎದುರಿಸಬೇಕಾಗುವುದು. ಆದುದರಿಂದ ನೀವು ಈಗಲೇ ನಿಮ್ಮ ಅನಿಸಿಕೆಗಳನ್ನು ಎದುರಿಸಿ, ಅವುಗಳ ಮೂಲಕ ಕೆಲಸಮಾಡಬಹುದು.”
ವಿವಾಹ ವಿಚ್ಛೇದವು ಒಡ್ಡುವ ಸಮಸ್ಯೆಗಳ ಕುರಿತು ಹೆಚ್ಚಾಗುತ್ತಿರುವ ಅರಿವಿನಿಂದಾಗಿ, ಅದೊಂದು ಆಯ್ಕೆಯೋಪಾದಿಯಲ್ಲಿ ಕಡಿಮೆ ಆಕರ್ಷಕವಾಗುತ್ತಿದೆ. ಸಲಹೆಗಾರರ ಬೆಳೆಯುತ್ತಿರುವ ಅಲ್ಪಸಂಖ್ಯೆಯು, ಸಂಕಟಕ್ಕೊಳಗಾದ ದಂಪತಿಗಳಿಗೆ, “ಒಟ್ಟಿಗೆ ಇರ್ರಿ,” ಎಂಬುದಾಗಿ ಪ್ರೋತ್ಸಾಹಿಸುತ್ತಿದೆ ಎಂದು ಟೈಮ್ ಪತ್ರಿಕೆಯು ವರದಿಸುತ್ತದೆ. ಟಫ್ಟ್ಸ ವಿಶ್ವವಿದ್ಯಾನಿಲಯದ ಡೇವಿಡ್ ಎಲ್ಕಿಂಡ್ ಬರೆದದ್ದು: “ವಿವಾಹ ವಿಚ್ಛೇದವನ್ನು ಅನುಭವಿಸುವ ಸಂಗತಿಯು, ಹಿಮದಲ್ಲಿ ಜಾರಾಟವಾಡುವ ಒಂದು ಸಂಚಾರದಲ್ಲಿ ನಿಮ್ಮ ಕಾಲನ್ನು ಮುರಿದುಕೊಳ್ಳುವ ಹಾಗೆಯೇ ಇದೆ: ಕೇವಲ ಅನೇಕ ಜನರು ತಮ್ಮ ಕಾಲನ್ನು ಮುರಿದುಕೊಳ್ಳುವ ಕಾರಣದಿಂದಾಗಿ, ನಿಮ್ಮ ಮುರಿದ ಕಾಲು ಕಡಿಮೆ ನೋವನ್ನುಂಟುಮಾಡುವುದಿಲ್ಲ.”
ದಾಂಪತ್ಯ ಸಮಸ್ಯೆಗಳಿಗೆ ವಿವಾಹ ವಿಚ್ಛೇದವು ಒಂದು ಸರಳವಾದ ಪರಿಹಾರವಲ್ಲ. ಹಾಗಾದರೆ, ದಾಂಪತ್ಯ ಭಿನ್ನತೆಗಳನ್ನು ಬಗೆಹರಿಸಲು ಇರುವ ಒಂದು ಉತ್ತಮವಾದ ಮಾರ್ಗ ಯಾವುದು?
[ಅಧ್ಯಯನ ಪ್ರಶ್ನೆಗಳು]
a ನ್ಯಾಯಬದ್ಧವಾದ ಒಂದು ವಿವಾಹ ವಿಚ್ಛೇದವು ಅಥವಾ ನ್ಯಾಯಬದ್ಧವಾದ ಒಂದು ಅಗಲಿಕೆಯು, ಅತಿಯಾದ ದುರುಪಯೋಗದಿಂದ ಯಾ ಉದ್ದೇಶಪೂರ್ವಕವಾಗಿ ಬೆಂಬಲಿಸದೆ ಇರುವುದರಿಂದ ಒಂದಿಷ್ಟು ರಕ್ಷಣೆಯನ್ನು ಒದಗಿಸಬಹುದು.
[ಪುಟ 7 ರಲ್ಲಿರುವ ಚಿತ್ರ]
ಇಂದು ದಂಪತಿಗಳು ಅನೇಕ ವೇಳೆ ಪರಸ್ಪರವಾಗಿ ಸಂಸರ್ಗಮಾಡಲು ಶಕ್ಯರಾಗಿಲ್ಲ