ಒತ್ತಡದೊಂದಿಗೆ ಸಹಕರಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಿರಿ
“ಅವರಿಗೆ ಮಾತನಾಡಲು ಬೇಕಿದ್ದಾಗ ಮನೆಯಲ್ಲಿ—ಶಾರೀರಿಕವಾಗಿ ಅಥವಾ ಭಾವನಾತ್ಮಕವಾಗಿ—ಯಾರೂ ಇಲ್ಲದ್ದನ್ನು ಅನೇಕ ಮಕ್ಕಳು ಕಂಡುಕೊಳ್ಳುತ್ತಾರೆ.”—ಡಿಪ್ರೆಷನ್—ಹ್ವಾಟ್ ಫ್ಯಾಮಿಲಿಸ್ ಷೂಡ್ಡ್ ನೋ.
ಕುಟುಂಬವನ್ನು ಭಾವನೆಗಳ ಒಂದು ಪ್ರಯೋಗಶಾಲೆ ಎಂದು ತಕ್ಕುದ್ದಾಗಿಯೆ ಕರೆಯಲಾಗಿದೆ. ಅದು ಮಗುವು ಅವನ ನಂಬಿಕೆಗಳನ್ನು ಪರೀಕ್ಷಿಸುವ, ಫಲಿತಾಂಶಗಳನ್ನು ಗಮನಿಸುವ, ಮತ್ತು ಜೀವನದ ಕುರಿತು ನಿರ್ದಿಷ್ಟ ತೀರ್ಮಾನಗಳಿಗೆ ತಲುಪುವ ಸಂಶೋಧನಾ ಕೇಂದ್ರವಾಗಿರುತ್ತದೆ. ಅವರ ಮಕ್ಕಳು ಒತ್ತಡಪೂರ್ಣ ಪರಿಸರದ ಬದಲಿಗೆ ಆರೋಗ್ಯಕರ ಪರಿಸರದಲ್ಲಿ ಅಂಥ ಪ್ರಮುಖ ಪ್ರಯೋಗಗಳನ್ನು ನಡೆಸುತ್ತಾರೆಂದು ಹೆತ್ತವರು ಹೇಗೆ ಖಚಿತಪಡಿಸಿಕೊಳ್ಳಬಲ್ಲರು?
ಆಲಿಸಿರಿ
ದ ಚೈಲ್ಡ್ ಇನ್ ಕ್ರೈಸಿಸ್ ಪುಸ್ತಕವು ಹೆತ್ತವರಿಗೆ ಪ್ರಚೋದಿಸುವುದು: “ನಿಮ್ಮ ಮಗುವಿನೊಂದಿಗೆ ಸಂತತವಾಗಿ ಸಂಭಾಷಣೆಯನ್ನಿಟ್ಟುಕೊಳ್ಳಿರಿ.” ಕುಟುಂಬದಲ್ಲಿ ಯಾವುದೇ ಗಾಯಗೊಳಿಸುವ ಘಟನೆ ನಡೆದಿರುವಾಗ, ಹೆತ್ತವರ ಮತ್ತು ಮಗುವಿನ ನಡುವೆ ಪ್ರಾಣರಕ್ಷೆಯ ಹಗ್ಗದಂತಿರುವ, ಸಂಭಾಷಣೆಯು ವಿಶೇಷವಾಗಿ ಅಗತ್ಯವು. ಮಗುವು ಮೌನದಿಂದಿರುವ ಕಾರಣ, ಅವನದನ್ನು ಸರಾಗವಾಗಿ ತೆಗೆದುಕೊಳ್ಳುತ್ತಾನೆ ಯಾ ಹೊಂದಿಕೊಳ್ಳುತ್ತಾನೆಂದು ಎಂದಿಗೂ ಭಾವಿಸಬೇಡಿರಿ. ಹೆತ್ತವರ ವಿಚ್ಛೇದಾನಂತರದ ಆರು ತಿಂಗಳುಗಳಲ್ಲಿ 15 ಕೆ.ಜಿ. ತೂಕವನ್ನು ಧರಿಸಿದ್ದ ಏಳು ವರುಷ ಪ್ರಾಯದ ಹುಡುಗಿಯಂತೆ, ಅವನು ಸರಳವಾಗಿ ಚಿಂತೆಯನ್ನು ತನ್ನೊಳಗೆ ತುಂಬುತ್ತಿರಬಹುದು ಮತ್ತು ಮೌನತೆಯಲ್ಲಿ ಕಷ್ಟಪಡುತ್ತಿರಬಹುದು.
“ಸಂವಾದ” ಎಂಬ ಪದವು ಎರಡು ಯಾ ಹೆಚ್ಚಿನ ಮಾತುಗಾರರು ಒಳಗೂಡಿರುವುದನ್ನು ತೋರಿಸುತ್ತದೆ. ಹೀಗೆ, ಹೆತ್ತವರು ಎಲ್ಲ ಮಾತಾಡುವಿಕೆಯನ್ನು ಮಾಡಬಾರದು. ರಿಕ್ ಮತ್ತು ಶ್ಯೂ ತಮ್ಮ ಆರು ವರುಷದ ಮಗ ಮನೆಯಲ್ಲಿ ಹತೋಟಿಗೆ ತರಲಾಗದ ಒರಟು ಸ್ವಭಾವವನ್ನು ಬೆಳೆಸಿದಾಗ ಸಲಹೆಯನ್ನು ಹುಡುಕಿದರು. ಇಡೀ ಕುಟುಂಬದೊಂದಿಗೆ ಭೇಟಿಯಾದ ಅನಂತರ, ಆ ಸಲಹೆಗಾರನು ಏನನ್ನೋ ಗಮನಿಸಿದನು. “ಉದ್ದವಾದ ಮತ್ತು ಅನೇಕ ಬಾರಿ ಅಧಿಕ ವಿವರಣೆಗಳೊಂದಿಗೆ, ಹೆತ್ತವರು ತತ್ವಾರ್ಥ ಮಾಡಿದರು,” ಎಂದು ಆತನಂದನು. “ಇನ್ನೂ ಮುಂದಕ್ಕೆ, ಆ ಹೆತ್ತವರು ಮಾತುಕತೆಯ ಏಕಸ್ವಾಧೀನತೆಯನ್ನು ಪಡೆಯುವ ಪ್ರವೃತ್ತಿಯವರಾದರು, ಮತ್ತು ಮಕ್ಕಳು ಅಸಹನೆಗೊಳ್ಳುತ್ತಿರುವುದನ್ನು ನಾನು ಕಂಡೆನು.” ಮಗುವು ತನ್ನನ್ನೇ ವ್ಯಕ್ತಪಡಿಸಿಕೊಳ್ಳುವಂತೆ ಬಿಡುವುದು ಪ್ರಯೋಜನಕಾರಿಯಾಗಿರುವುದು. (ಹೋಲಿಸಿ ಯೋಬ 32:20.) ಅವನ ಸಮಸ್ಯೆಗಳು ಬೆಳೆಯುತ್ತಿರುವಾಗ ಅವನು ಮಾತನಾಡಿ ಪರಿಹರಿಸದಿದ್ದಲ್ಲಿ, ಅವನದನ್ನು ಅನಂತರ ಸ್ವಭಾವದಲ್ಲಿ ತೋರಿಸಿಕೊಡಬಹುದು.—ಹೋಲಿಸಿ ಜ್ಞಾನೋಕ್ತಿ 18:1.
ಶಿಸ್ತು ಅಗತ್ಯವಿರುವಾಗ ಸಂವಾದ ಪ್ರಾಮುಖ್ಯ. ತಿದ್ದುಪಾಟಿನ ಕುರಿತು ಮಗುವು ಯಾವ ಭಾವನೆಯನ್ನು ತಾಳುತ್ತದೆ? ಅದು ಯಾಕೆ ಕೊಡಲ್ಪಡುತ್ತಿದೆ ಎಂದು ಅವನಿಗೆ ತಿಳಿಯುತ್ತದೋ? ಅವನು ಹೇಗೆ ಭಾವಿಸಬೇಕು ಎಂದು ಮಗುವಿಗೆ ಕೇವಲ ಹೇಳುವ ಬದಲಿಗೆ, ಆತನ ಹೃದಯದಲ್ಲಿ ಏನಿದೆ ಎಂದು ಕಂಡುಹಿಡಿಯಿರಿ. ಅವನು ಯೋಗ್ಯ ತೀರ್ಮಾನಕ್ಕೆ ಮಾರ್ಗದರ್ಶಿಸಲ್ಪಡುವಂತೆ ಅವನೊಂದಿಗೆ ವಿವೇಚಿಸಿರಿ. “ಜಾಗರೂಕತೆಯ ಪರಿಗಣನೆಗೆ ತಕ್ಕ ಸಲಹೆಯನ್ನೀಡಿರಿ, ಆದರೆ ಮೆಲುಕು ಹಾಕುವುದನ್ನು ನಿಮ್ಮ ಮಗುವು ಮಾಡಲಿ,” ಎಂದು ಇಲೆನ್ ಫೆನಲ್ಟ್ ಶಿಮ್ಬರ್ಗ್ ಬರೆಯುತ್ತಾರೆ.
ಭಾವನೆಗಳನ್ನು ಮಾನ್ಯಮಾಡಿರಿ
ಕೆಲವು ಹೆತ್ತವರು ಇಂಥ ಮಾತುಗಳೊಂದಿಗೆ ಸಂವಾದವನ್ನು ಕಠಿನದ್ದಾಗಿ ಮಾಡುತ್ತಾರೆ: “ನಿನ್ನ ಅಳುವಿಕೆಯನ್ನು ನಿಲ್ಲಿಸು.” “ನೀನು ಆ ರೀತಿ ಭಾವಿಸಬಾರದು.” “ಅದು ನೀನೆಣಿಸುವಷ್ಟು ಕೆಟ್ಟದ್ದಾಗಿರುವುದಿಲ್ಲ.” ಮಗುವಿನ ಭಾವನೆಗಳನ್ನು ಮಾನ್ಯಮಾಡುವುದು ಅತಿ ಉತ್ತಮದ್ದಾಗಿದೆ. “ಯಾವುದೋ ವಿಷಯ ನಿನಗೆ ದುಃಖವನ್ನುಂಟು ಮಾಡಿರುವುದನ್ನು ನಾನು ಕಾಣುತ್ತೇನೆ.” “ನೀನು ನಿಜಕ್ಕೂ ಕಲಕಲ್ಪಟ್ಟಂತೆ ಕಾಣುತ್ತಿ.” “ನೀನು ಆಶಾಭಂಗಪಟ್ಟಿರುವಿ ಎಂದು ನನಗೆ ಗೊತ್ತು.” ಇದು ಸಂವಾದವು ಮುಂದುವರಿಸುತ್ತದೆ.
ಹೌ ಟು ಟಾಕ್ ಸೊ ಕಿಡ್ಸ್ ವಿಲ್ ಲಿಸನ್ ಆ್ಯಂಡ್ ಲಿಸನ್ ಸೊ ಕಿಡ್ಸ್ ವಿಲ್ ಟಾಕ್ ಪುಸ್ತಕವು ಈ ಕುರಿತು ಸಮಂಜಸವಾದ ಅವಲೋಕನೆಯನ್ನು ಮಾಡುತ್ತದೆ: “ಮಗುವಿನ ಅಸಂತೋಷಿತ ಭಾವನೆಗಳನ್ನು ದೂರ ದೂಡಲು ನೀವು ಎಷ್ಟು ಪ್ರಯತ್ನಿಸುವಿರೋ, ಅಷ್ಟು ಹೆಚ್ಚು ನಕಾರಾತ್ಮಕ ಭಾವನೆಗಳನ್ನು ತೊರೆಯಲು ಅವನಿಗೆ ಅಸಾಧ್ಯವಾಗುವುದು. ನೀವು ಕೆಟ್ಟ ಭಾವನೆಗಳನ್ನು ಹೆಚ್ಚು ಹಾಯಾಗಿ ಸ್ವೀಕರಿಸಿಕೊಳ್ಳುವಲ್ಲಿ, ಅವುಗಳನ್ನು ತೊರೆದು ಬಿಡಲು ಮಕ್ಕಳಿಗೆ ಸುಲಭವಾಗುವುದು. ನಿಮಗೆ ಒಂದು ವೇಳೆ ಸಂತೋಷದ ಕುಟುಂಬ ಜೀವನವು ಬೇಕಾಗಿರುವಲ್ಲಿ, ಬಹಳಷ್ಟು ಅಸಂತೋಷದ ವ್ಯಕ್ತಪಡಿಸುವಿಕೆಯನ್ನು ಅನುಮತಿಸಲು ನೀವು ತಯಾರಾಗಿರುವುದು ಉತ್ತಮವೆಂದು ನೀವು ಹೇಳಬಲ್ಲೀರೆಂದು ನಾನು ಊಹಿಸುತ್ತೇನೆ.”—ಹೋಲಿಸಿ ಪ್ರಸಂಗಿ 7:3.
ಸಹಾನುಭೂತಿ ತೋರಿಸಿರಿ
“ಹೆಚ್ಚಿನ ವಯಸ್ಕರು ಮಗುವಿನ ಲೋಕವನ್ನು ಅವರ ಸ್ವಂತ ದೃಷ್ಟಿಕೋನದಿಂದ ನೋಡುತ್ತಾರೆ, ಅವರ ಸ್ವಂತ ಜೀವನವನ್ನು ಬಿಟ್ಟು ಇತರ ಯಾವುದೇ ಜೀವನವನ್ನು ಒತ್ತಡಭರಿತದ್ದಾಗಿ ಭಾವಿಸುವುದು ಅವರಿಗೆ ಕಷ್ಟಕರದ್ದಾಗಿದೆ,” ಎಂದು ಮೇರಿ ಸೂಜನ್ ಮಿಲ್ಲರ್ ಬರೆಯುತ್ತಾರೆ.
ಹೌದು, ಬೆಳೆಯುತ್ತಿರುವಾಗ ಅವರು ಸ್ವತಃ ಅನುಭವಿಸಿದ ನೋವುಗಳನ್ನು ಮತ್ತು ಚಿಂತೆಗಳನ್ನು ಹೆತ್ತವರು ಸುಲಭವಾಗಿ ಮರೆಯುತ್ತಾರೆ. ಆದುದರಿಂದ, ಅವರ ಮಕ್ಕಳು ಭಾವಿಸುವ ಒತ್ತಡವನ್ನು ಅವರು ಅನೇಕ ಬಾರಿ ಅಲ್ಪವಾದುದ್ದನ್ನಾಗಿ ಮಾಡುತ್ತಾರೆ. ಒಂದು ಮುದ್ದಿನ ಪ್ರಾಣಿಯನ್ನು ಕಳಕೊಳ್ಳುವುದನ್ನು, ಒಬ್ಬ ಸ್ನೇಹಿತನ ಮರಣವನ್ನು, ಹೊಸ ನೆರೆಹೊರೆಗೆ ಸ್ಥಳಾಂತರಿಸುವುದನ್ನು ಎದುರಿಸುವುದು ಹೇಗಿರುತ್ತಿತ್ತು ಎಂಬದನ್ನು ಹೆತ್ತವರು ಜ್ಞಾಪಿಸಿಕೊಳ್ಳಲೇ ಬೇಕು. ಅವರು ತಮ್ಮ ಬಾಲ್ಯಾವಸ್ಥೆಯ ಭೀತಿಗಳನ್ನು, ವಿಚಾರಹೀನತೆಗಳನ್ನೂ ಸೇರಿಸಿ, ಮನಸ್ಸಿಗೆ ತಂದುಕೊಳ್ಳಬೇಕು. ಜ್ಞಾಪಿಸಿಕೊಳ್ಳುವುದು ಸಹಾನುಭೂತಿಗೆ ಕೀಲಿಕೈಯಾಗಿರುತ್ತದೆ.
ಸರಿಯಾದ ಮಾದರಿಯನ್ನಿಡಿರಿ
ನಿಮ್ಮ ಮಗು ಒತ್ತಡವನ್ನು ನಿಭಾಯಿಸುವ ವಿಧವು ಹೆತ್ತವರಲೊಬ್ಬರಾಗಿರುವ ನೀವು ಅದನ್ನು ನಿಭಾಯಿಸುವುದರ ಮೇಲೆ ಮಹತ್ತಾದ ಪ್ರಮಾಣದಲ್ಲಿ ಆಧರಿಸಿರುತ್ತದೆ. ಹಿಂಸೆಗೆ ತೆರಳುವುದರ ಮೂಲಕ ನಿಮ್ಮ ಒತ್ತಡವನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತೀರೋ? ಹಾಗಿರುವಲ್ಲಿ ನಿಮ್ಮ ಮಗುವು ಅವನ ಚಿಂತೆಯನ್ನು ಅದೇ ವಿಧಾನದಲ್ಲಿ ನಿಭಾಯಿಸುವಾಗ ಆಶ್ಚರ್ಯಪಡಬೇಡಿರಿ. ಆಳವಾಗಿ ತೊಂದರೆಗೊಳಪಟ್ಟಾಗ ನೀವು ಮೌನವಾಗಿ ಕಷ್ಟಾನುಭವಿಸುತ್ತೀರೋ? ಹಾಗಿರುವಲ್ಲಿ ನಿಮ್ಮ ಮಗುವು ಮುಚ್ಚುಮರೆಯಿಲ್ಲದೆ, ಭರವಸಯೋಗ್ಯವಾಗಿರುವಂತೆ ನೀವು ಅಪೇಕ್ಷಿಸುವುದು ಹೇಗೆ? ನಿಮ್ಮ ಕುಟುಂಬದಲ್ಲಿ ಅವುಗಳನ್ನು ಒಪ್ಪಿಕೊಂಡು, ಬಗೆಹರಿಸುವ ಬದಲಿಗೆ ಅಲ್ಲಗಳೆಯುವಷ್ಟು ಒತ್ತಡಪೂರ್ಣ ಭಾವನೆಗಳು ಅಡಗಿವೆಯೋ? ಹಾಗಿರುವಲ್ಲಿ ಅದು ನಿಮ್ಮ ಮಗುವಿನ ಮೇಲೆ ಶಾರೀರಿಕ ಮತ್ತು ಭಾವನಾತ್ಮಕ ದುಷ್ಪರಿಣಾಮವನ್ನುಂಟು ಮಾಡಬಹುದಾದದರಿಂದ ಗಾಬರಿಗೊಳ್ಳಬೇಡಿರಿ, ಯಾಕಂದರೆ ಚಿಂತೆಯನ್ನು ಹುಗಿಯುವ ಯಾವುದೇ ಪ್ರಯತ್ನವು ಸಾಮಾನ್ಯವಾಗಿ ಅದರ ವ್ಯಕ್ತಪಡಿಸುವಿಕೆಯ ಕಠಿನತೆಯನ್ನು ಕೇವಲ ಹೆಚ್ಚಿಸುವುದು.
ಒತ್ತಡ ತುಂಬಿರುವ ಲೋಕದಲ್ಲಿ ಮಕ್ಕಳನ್ನು ಬೆಳೆಸುವುದು ಹೆತ್ತವರಿಗೆ ಒಂದು ವಿಶೇಷ ಪಂಥಾಹ್ವಾನಗಳನ್ನು ಮುಂತರುತ್ತದೆ. ಈ ಪಂಥಾಹ್ವಾನಗಳನ್ನು ಎದುರಿಸಲು ಬೈಬಲಿನ ಅಧ್ಯಯನವು ಅನೇಕರಿಗೆ ಸಹಾಯ ಮಾಡಿದೆ. ಇದನ್ನೇ ನಾವು ನಿರೀಕ್ಷಿಸಬೇಕು, ಯಾಕಂದರೆ ಬೈಬಲಿನ ಗ್ರಂಥಕರ್ತನು ಕುಟುಂಬ ಜೀವನದ ಮೂಲನು ಕೂಡ ಆಗಿದ್ದಾನೆ. “ದೇವರ ವಿವೇಕವು ಅದರ ಫಲಿತಾಂಶಗಳಿಂದ ಸರಿ ಎಂದು ರುಜುವಾಗುವುದು” ಎಂದು ಯೇಸು ಅಂದನು. (ಮತ್ತಾಯ 11:19, ದ ನ್ಯೂ ಇಂಗ್ಲಿಷ್ ಬೈಬಲ್) ಅವರು ಬೈಬಲ್ ಸೂತ್ರಗಳನ್ನು ಕಾರ್ಯರೂಪಕ್ಕೆ ಹಾಕುವುದರ ಮೂಲಕ, ಹೆತ್ತವರು ಶಾಸ್ತ್ರವಚನಗಳನ್ನು “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿವೆ” ಎಂದು ಕಂಡುಕೊಳ್ಳುವರು.—2 ತಿಮೊಥೆಯ 3:16. (g93 7/22)
[ಪುಟ 10 ರಲ್ಲಿರುವ ಚಿತ್ರ]
ಆಹ್ಲಾದಕರ ಸಂಸರ್ಗವು ಒತ್ತಡವನ್ನು ಉಪಶಮನ ಮಾಡುತ್ತದೆ
[ಪುಟ 11 ರಲ್ಲಿರುವ ಚಿತ್ರ]
ಹುಡುಗನು ಹಾಲನ್ನು ಚೆಲ್ಲುತ್ತಾನೆ, ಅವನ ಅಣ್ಣ ಅವನನ್ನು ಕೆಣಕುತ್ತಾನೆ, ಆದರೆ ತಂದೆಯು ತಿಳುವಳಿಕೆಯಿಂದ ಅವನನ್ನು ಸಂತೈಸುತ್ತಾನೆ