ಒಂದು ಹೊಸ ಲೋಕ ಅದು ಎಂದಾದರೂ ಬರುವುದೊ?
ಎಪ್ರಿಲ್ 13, 1991ರಂದು, ಅಮೆರಿಕದ ಆಗಿನ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್, ಅಲಬಾಮಾದ ಮಾಂಟ್ಗಾಮ್ರಿಯಲ್ಲಿ, “ಹೊಸ ಲೋಕ ವ್ಯವಸ್ಥೆಯ ಸಾಧ್ಯತೆ” ಎಂಬ ಶೀರ್ಷಿಕೆಯ ಒಂದು ಭಾಷಣವನ್ನು ಕೊಟ್ಟರು. ಸಮಾಪ್ತಿಯಲ್ಲಿ, ಅವರು ಹೇಳಿದ್ದು: “ನಮಗೆ ಎದುರಾಗಿರುವ ಹೊಸ ಲೋಕವು . . . , ಆವಿಷ್ಕಾರದ ಒಂದು ಅದ್ಭುತ ಲೋಕವಾಗಿದೆ.”
ಎರಡು ತಿಂಗಳುಗಳ ಬಳಿಕ, ಪೂರ್ವ ಯೂರೋಪಿನಲ್ಲಿ ಸಮತಾವಾದದ ಆಳಿಕೆಯ ಪತನದೊಂದಿಗೆ, “ಶಾಂತಿ, ನ್ಯಾಯ, ಮತ್ತು ಪ್ರಜಾಪ್ರಭುತ್ವದ ಮೇಲೆ ಆಧಾರಿತವಾದ ಒಂದು ಹೊಸ ಲೋಕವು ಹತ್ತಿರವಿರುವಂತೆ ತೋರಿತು” ಎಂಬುದಾಗಿ ದ ಬುಲೆಟಿನ್ ಆಫ್ ದಿ ಅಟಾಮಿಕ್ ಸೈಎನ್ಟಿಸ್ಟ್ಸ್ ಹೇಳಿತು.
ಒಂದು ಹೊಸ ಲೋಕದ ಕುರಿತಾದ ಇಂಥ ಮಾತು 1993ರಲ್ಲಿಯೂ ಮುಂದುವರಿದಿದೆ. ಅಣು ಶಸ್ತ್ರಾಸ್ತ್ರಗಳಲ್ಲಿ ಕಡಮೆಯಾಗುವಿಕೆಗೆ ವಾಗ್ದಾನಿಸಿದ ಒಂದು ಒಪ್ಪಂದದ ಕುರಿತು ಜನವರಿಯಲ್ಲಿ ದ ನ್ಯೂ ಯಾರ್ಕ್ ಟೈಮ್ಸ್ ವರದಿಸಿತು. ವಾರ್ತಾಪತ್ರಿಕೆಯು ಹೇಳಿದ್ದು: “ಅದು ಅಧ್ಯಕ್ಷ ಬುಷ್ರ ಸಂದರ್ಭೋಚಿತ ಮಾತುಗಳಲ್ಲಿ, ಅಮೆರಿಕ ಮತ್ತು ರಷ್ಯಾ ದೇಶಗಳನ್ನು ‘ನಿರೀಕ್ಷೆಯ ಒಂದು ಹೊಸ ಲೋಕದ ಹೊಸ್ತಿಲ ಮೇಲೆ’ ಇಡುತ್ತದೆ.”
ಎರಡು ವಾರಗಳಾನಂತರ, ಅಮೆರಿಕದ ಹೊಸ ಅಧ್ಯಕ್ಷರಾದ ಬಿಲ್ ಕ್ಲಿನ್ಟನ್, ಅವರ ಉಪಕ್ರಮ ಭಾಷಣದಲ್ಲಿ ಘೋಷಿಸಿದ್ದು: “ಇಂದು, ಹಳೆಯ ವ್ಯವಸ್ಥೆಯ ಗತಿಸಿಹೋದಂತೆ, ಹೊಸ ಲೋಕವು ಹೆಚ್ಚು ಸ್ವತಂತ್ರವಾಗಿದೆಯಾದರೂ ಕಡಿಮೆ ಸ್ಥಿರತೆಯದ್ದಾಗಿದೆ.” “ಈ ಹೊಸ ಲೋಕವು ಈಗಾಗಲೇ ದಶಲಕ್ಷಂತರ ಅಮೆರಿಕನರ ಜೀವಿತಗಳನ್ನು ಸಮೃದ್ಧಗೊಳಿಸಿದೆ” ಎಂದು ಕೂಡ ಅವರು ನಿರೂಪಿಸಿದರು.
ಆದುದರಿಂದ ಒಂದು ಹೊಸ ಲೋಕ—ಒಂದು ಭಿನ್ನವಾದ ಹಾಗೂ ಉತ್ತಮವಾದ ಲೋಕದ ಕುರಿತು ಬಹಳಷ್ಟು ಮಾತುಕತೆ ನಡೆದಿದೆ. ಒಂದು ಎಣಿಕೆಗನುಸಾರ, ಸಂಬಂಧಸೂಚಕವಾಗಿ ಅಲ್ಪಾವಧಿಯಲ್ಲಿ, ಜಾರ್ಜ್ ಬುಷ್ ಬಹಿರಂಗ ಹೇಳಿಕೆಗಳಲ್ಲಿ 42 ಬಾರಿ ಒಂದು “ಹೊಸ ಲೋಕ ವ್ಯವಸ್ಥೆ”ಯ ಕುರಿತು ಮಾತಾಡಿದರು.
ಆದರೆ ಇಂಥ ಮಾತು ಅಪೂರ್ವವಾಗಿದೆಯೆ? ಅದು ಈ ಹಿಂದೆ ಕೇಳಲ್ಪಟ್ಟಿದೆಯೋ?
ನಿಜವಾಗಿಯೂ ಹೊಸದೇನೂ ಇಲ್ಲ
ಲೋಕ ಯುದ್ಧ Iರ ತರುವಾಯ, ಮೇ 1919ರಲ್ಲಿ, ಅಮೆರಿಕದಲ್ಲಿನ ಚರ್ಚಸ್ ಆಫ್ ಕ್ರೈಸ್ಟ್ನ ಫೆಡರಲ್ ಕೌನ್ಸಿಲ್, ಒಹೈಒದ ಕೀವ್ಲ್ಲ್ಯಾಂಡ್ನಲ್ಲಿ ಒಂದು ಕೂಟವನ್ನು ನಡೆಸಿತು. ಅಲ್ಲಿ ‘ಒಂದು ಹೊಸ ಹಾಗೂ ಒಂದು ಉತ್ತಮವಾದ ಲೋಕದ ಸಾಧ್ಯತೆಯ ಕುರಿತು’ ಪ್ರಕಟನೆ ನೀಡಲಾಯಿತು. ಒಬ್ಬ ಭಾಷಣಕಾರನು ಪ್ರತಿಪಾದಿಸಿದ್ದು: “ಪೈಪೋಟಿಯ ತತ್ವವು ಸಹವಾಸ ಮತ್ತು ಸಹಭಾಗಿತ್ವದ ತತ್ವಕ್ಕೆ ಶರಣಾಗತವಾಗುವ ಒಂದು ಹೊಸ ಲೋಕ ಅದಾಗಲಿರುವುದು. ಐಕ್ಯದ ತತ್ವವು ವಿಭಜನೆಯ ತತ್ವವನ್ನು ಸ್ಥಾನಪಲ್ಲಟ ಮಾಡುವ ಒಂದು ಹೊಸ ಲೋಕ ಅದಾಗಲಿರುವುದು. . . . ಸಹೋದರತ್ವ ಮತ್ತು ಗೆಳೆತನವು ದುಷ್ಟತನದ ವಿರುದ್ಧ ಯುದ್ಧವನ್ನು ಹೊರತು ಪಡಿಸಿ ಎಲ್ಲಾ ವೈರತ್ವವನ್ನು ಸ್ಥಾನಚ್ಯುತಿ ಮಾಡುವ ಒಂದು ಹೊಸ ಲೋಕ ಅದಾಗಲಿರುವುದು.”
ಚರ್ಚುಗಳು ಈ ಹೊಸ ಲೋಕವು ಹೇಗೆ ಬರುವುದೆಂದು ನಂಬಿದವು? ಬೈಬಲಿನಲ್ಲಿ ವಾಗ್ದಾನಿಸಲಾದ ದೇವರ ರಾಜ್ಯ ಸರಕಾರದ ಮೂಲಕವೊ? ಅಲ್ಲ. ಇಂಥ ಒಂದು ಹೊಸ ಲೋಕವನ್ನು ತರಲು ಅವರು ಒಂದು ರಾಜಕೀಯ ಸಂಸ್ಥೆಯ ಕಡೆಗೆ ಎದುರುನೋಡಿದರು. “ಜನಾಂಗ ಸಂಘ ಎಂಬುದಾಗಿ ನಾವು ಇಂದು ಮಾತಾಡುವ ವಿಷಯವು, ಲೋಕದಲ್ಲಿನ ನಮ್ಮ ಎಲ್ಲಾ ಕ್ರೈಸ್ತ ನಂಬಿಕೆ ಮತ್ತು ಪ್ರಯತ್ನದ ಕಡೆಗಣಿಸಲಾಗದ ಹಾಗೂ ತೊರೆಯಲಾಗದ ಪರಿಣಾಮವಾಗಿದೆ” ಎಂದು ಒಬ್ಬ ಚರ್ಚ್ ನಾಯಕನು ಹೇಳಿದನು. ಆ ಅವಧಿಯ ಚರ್ಚ್ ನಾಯಕರುಗಳು ಜನಾಂಗ ಸಂಘವನ್ನು “ಭೂಮಿಯ ಮೇಲೆ ದೇವರ ರಾಜ್ಯದ ರಾಜಕೀಯ ಅಭಿವ್ಯಕ್ತಿ” ಎಂಬುದಾಗಿ ಕೂಡ ಪ್ರವರ್ತಿಸಿದರು.
ಇನ್ನೊಂದು ಕಡೆಯಲ್ಲಿ, ಜರ್ಮನಿಯ ಒಬ್ಬ ಶಕ್ತಿಶಾಲಿ ನಾಯಕ, ಅಡಾಲ್ಫ್ ಹಿಟ್ಲರ್, ಜನಾಂಗ ಸಂಘವನ್ನು ವಿರೋಧಿಸಿದನು ಮತ್ತು 1930ಗಳಲ್ಲಿ, ನಾಜಿ ಪ್ರಭುತ್ವವನ್ನು ಸ್ಥಾಪಿಸಿದನು. ನಾಜಿ ಪ್ರಭುತ್ವವು ಒಂದು ಸಾವಿರ ವರ್ಷಗಳ ವರೆಗೆ ಉಳಿದು, ದೇವರ ರಾಜ್ಯವು ಮಾತ್ರ ಮಾಡಬಲ್ಲದೆಂದು ಬೈಬಲ್ ಹೇಳುವ ಸಂಗತಿಯನ್ನು ಸಾಧಿಸುವುದೆಂದು ಅವನು ವಾದಿಸಿದನು. “ನಾನು ಯುವ ಜನರೊಂದಿಗೆ ಆರಂಭಿಸುತ್ತಿದ್ದೇನೆ,” ಎಂದು ಹಿಟ್ಲರನು ಹೇಳಿದನು. “ಅವರೊಂದಿಗೆ ನಾನು ಒಂದು ಹೊಸ ಲೋಕವನ್ನು ಉಂಟುಮಾಡಬಲ್ಲೆನು.”
ನಾಜಿ ಬಲವನ್ನು ಪ್ರದರ್ಶಿಸಲಿಕ್ಕಾಗಿ ನ್ಯೂರೆಮ್ಬರ್ಗ್ನಲ್ಲಿ ಒಂದು ಬ್ರಹತ್ ಪ್ರಮಾಣದ ಕ್ರೀಡಾ ರಂಗವನ್ನು ಹಿಟ್ಲರನು ಕಟ್ಟಿಸಿದನು. ಗಮನಾರ್ಹವಾಗಿ, ಸುಮಾರು 1,000 ಅಡಿ ಉದ್ದವಾಗಿದ್ದ ವೇದಿಕೆಯ ಮೇಲೆ 144 ಬೃಹದಾಕಾರದ ಕಂಭಗಳನ್ನು ನಿಲ್ಲಿಸಲಾಯಿತು. ಏಕೆ 144 ಕಂಭಗಳು? “ಕುರಿಯಾದ” ಯೇಸು ಕ್ರಿಸ್ತನೊಂದಿಗೆ ಆಳುವ 1,44,000 ಜನರ, ಮತ್ತು ಅವರ ಆಳಿಕೆಯು ಒಂದು ಸಾವಿರ ವರ್ಷಗಳ ಕಾಲಕ್ಕಾಗಿ ಇರುವುದರ ಕುರಿತು ಬೈಬಲ್ ಮಾತಾಡುತ್ತದೆ. (ಪ್ರಕಟನೆ 14:1; 20:4, 6) ಸ್ಪಷ್ಟವಾಗಿಗಿ, ನ್ಯೂರೆಮ್ಬರ್ಗ್ ಕ್ರೀಡಾ ರಂಗದಲ್ಲಿ 144 ಕಂಭಗಳ ನಿಲ್ಲಿಸುವಿಕೆಯು ಸಂಖ್ಯಾತ್ಮಕ ಆಕಸ್ಮಿಕ ಘಟನೆಯಾಗಿರಲಿಲ್ಲ, ಏಕೆಂದರೆ ನಾಜಿ ಅಧಿಕಾರಿಗಳಿಂದ ಬೈಬಲ್ ಭಾಷೆಯ ಮತ್ತು ಸಂಕೇತದ ಉಪಯೋಗವು ಉತ್ತಮವಾಗಿ ದಾಖಲು ಮಾಡಲ್ಪಟ್ಟಿದೆ.
ದೇವರ ರಾಜ್ಯದ ಮೂಲಕ ಮಾತ್ರ ಸಾಧಿಸಲ್ಪಡುವುದೆಂದು ಬೈಬಲ್ ಹೇಳಿದ ವಿಷಯಗಳನ್ನು ನೆರವೇರಿಸಲು ಮಾಡಲಾದ ಮನುಷ್ಯರ ಪ್ರಯತ್ನಗಳ ಫಲಿತಾಂಶ ಏನಾಗಿತ್ತು?
ಮಾನವನ ಪ್ರಯತ್ನಗಳ ಸೋಲು
ಜನಾಂಗ ಸಂಘವು ಶಾಂತಿಯ ಒಂದು ಹೊಸ ಲೋಕವನ್ನು ತರುವಲ್ಲಿ ತಪ್ಪಿಹೋಯಿತೆಂದು ಇತಿಹಾಸವು ಸ್ಪಷ್ಟವಾಗಿಗಿ ರುಜುಪಡಿಸುತ್ತದೆ. IIನೆಯ ಲೋಕ ಯುದ್ಧದಲ್ಲಿ ರಾಷ್ಟ್ರಗಳು ಮುಳುಗಿಹೋದಾಗ ಆ ಸಂಸ್ಥೆಯು ಕುಸಿದು ಬಿತ್ತು. ಮುಂದೆ, ಕೇವಲ 12 ವರ್ಷಗಳಾನಂತರ, ಜರ್ಮನಿಯ ನಾಜಿ ಪ್ರಭುತ್ವವು ಸಂಪೂರ್ಣವಾಗಿ ಹಾಳಾಯಿತು. ಅದು ಸಂಪೂರ್ಣ ಅಪಜಯವಾಗಿದ್ದು, ಮಾನವ ಕುಟುಂಬಕ್ಕೆ ಒಂದು ಅಪಕೀರ್ತಿಯಾಗಿತ್ತು.
ಇತಿಹಾಸದ ಉದ್ದಕ್ಕೂ ಶಾಂತಿಭರಿತ ಹೊಸ ಲೋಕವನ್ನು ಸೃಷ್ಟಿಸುವಲ್ಲಿ ಮಾನವ ಪ್ರಯತ್ನಗಳು ತಪ್ಪದೆ ವಿಫಲವಾಗಿವೆ. “ಎಂದಾದರೂ ಅಸ್ತಿತ್ವದಲ್ಲಿದ್ದ ಪ್ರತಿಯೊಂದು ನಾಗರಿಕತೆಯು ಅಂತಿಮವಾಗಿ ಕುಸಿದು ಬಿದಿದ್ದೆ,” ಎಂಬುದಾಗಿ ಅಮೆರಿಕದ ಹಿಂದಿನ ವಿದೇಶ ಮಂತ್ರಿ, ಹೆನ್ರಿ ಕಿಸಿಂಜರ್ ಗಮನಿಸಿದರು. “ಇತಿಹಾಸವು ವಿಫಲಗೊಂಡ ಪ್ರಯತ್ನಗಳ, ಕೈಗೂಡದ ಹೆಗ್ಗುರಿಗಳ ಕಥೆಯಾಗಿದೆ.”
ಹಾಗಾದರೆ, ಲೋಕ ನಾಯಕರು ಇತ್ತೀಚೆಗೆ ಬಹಿರಂಗವಾಗಿ ಸ್ತುತಿಸುತ್ತಿರುವ ಹೊಸ ಲೋಕ ವ್ಯವಸ್ಥೆಯ ಕುರಿತೇನು? ಕುಲ ಸಂಬಂಧ ಹಿಂಸೆಯ ಸ್ಫೋಟನೆಗಳು ಇಂಥ ಒಂದು ಹೊಸ ಲೋಕದ ವಿಚಾರವನ್ನೇ ಹಾಸ್ಯಾಸ್ಪದವಾಗಿ ಮಾಡಿವೆ. ಉದಾಹರಣೆಗೆ, ಕಳೆದ ಮಾರ್ಚ್ 6ರಂದು, ಪತ್ರಿಕೋದ್ಯೋಗಿಯಾದ ವಿಲಿಯಂ ಫಾಫ್ ಹೀಗೆ ಹಾಸ್ಯಮಾಡಿದರು: “ಹೊಸ ಲೋಕ ವ್ಯವಸ್ಥೆಯ ಬಂದು ತಲಪಿದೆ. ಆಕ್ರಮಣ, ಅತಿಕ್ರಮಣ ಮತ್ತು ಕುಲ ಸಂಬಂಧವಾದ ಶುದ್ಧೀಕರಣವನ್ನು ಸ್ವೀಕರಣೀಯವಾದ ಅಂತಾರಾಷ್ಟ್ರೀಯ ನಡವಳಿಕೆಯಂತೆ ಪವಿತ್ರೀಕರಿಸುತ್ತಾ, ಅದು ಸರಿಯಾಗಿ ಕಾರ್ಯಮಾಡುತ್ತಾ ಇದೆ ಮತ್ತು ನಿಜವಾಗಿಯೂ ಹೊಸದಾಗಿದೆ.”
ಸಮತಾವಾದದ ಪತನದಂದಿನಿಂದ ಸಂಭವಿಸಿದ ಭಯಂಕರ ಕಲಹ ಮತ್ತು ಘೋರ ಕೃತ್ಯಗಳು ಗಾಬರಿಪಡಿಸುವಂಥದ್ದಾಗಿವೆ. ಜನವರಿಯಲ್ಲಿ ಹುದ್ದೆಯನ್ನು ತ್ಯಜಿಸುವ ಸ್ಪಲ್ಪ ಮುಂಚೆ, ಜಾರ್ಜ್ ಬುಷ್ ಕೂಡಾ ಅಂಗೀಕರಿಸಿದ್ದು: “ಸಕಾಲದಲ್ಲಿ ಹೊಸ ಲೋಕವು ಹಳೆಯ ಲೋಕದಂತೆ ಉಪದ್ರವಕಾರಿಯಾಗಿರಬಲ್ಲದು.”
ನಿರೀಕ್ಷೆಗೆ ಕಾರಣ?
ಸನ್ನಿವೇಶವು ಆಶಾ ರಹಿತವಾಗಿದೆ ಎಂಬ ಅರ್ಥವನ್ನು ಇದು ಕೊಡುತ್ತದೊ? ಹೊಸ ಲೋಕವು ಕೇವಲ ಒಂದು ಹಾರೈಕೆಯ ಸ್ವಪ್ನವಾಗಿದೆಯೆ? ಸ್ಪಷ್ಟವಾಗಿಗಿ, ಹೊಸ ಲೋಕವೊಂದನ್ನು ಸೃಷ್ಟಿಸಲು ಮಾನವರು ಅಸಮರ್ಥರಾಗಿದ್ದಾರೆ. ಆದರೆ ಹಾಗೆ ಮಾಡುವ ಸೃಷ್ಟಿಕರ್ತನ ವಾಗ್ದಾನದ ಕುರಿತೇನು? “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ,” ಎಂದು ಬೈಬಲ್ ಹೇಳುತ್ತದೆ.—2 ಪೇತ್ರ 3:13.
ದೇವರು ವಾಗ್ದಾನಿಸುವ ನೂತನಾಕಾಶವು ಭೂಮಿಯ ಮೇಲೆ ಹೊಸ ಆಳಿಕ್ವೆಯಾಗಿದೆ. ಈ ಹೊಸ ಆಳಿಕ್ವೆಯು, ಪ್ರಾರ್ಥಿಸುವಂತೆ ಯೇಸು ಜನರಿಗೆ ಕಲಿಸಿಕೊಟ್ಟ ದೇವರ ರಾಜ್ಯ, ಅವನ ಸ್ವರ್ಗೀಯ ಸರಕಾರವಾಗಿದೆ. (ಮತ್ತಾಯ 6:9, 10) ಆ ಸ್ವರ್ಗೀಯ ಸರಕಾರವು ಆಗ ಯೇಸು ಕ್ರಿಸ್ತನು ಮತ್ತು 1,44,000 ಜೊತೆ ಅರಸರಿಂದ ಕೂಡಿರುವುದು, ಮತ್ತು ನೂತನಭೂಮಂಡಲವು ಜನರ ಹೊಸ ಸಮಾಜವಾಗಿರುವುದು. ಹೌದು, ನಿಷ್ಠೆಯಿಂದ ದೇವರ ಆಳಿಕ್ವೆಯನ್ನು ಬೆಂಬಲಿಸುತ್ತಾ ಮಹಿಮಾಭರಿತ ಹೊಸ ಲೋಕದಲ್ಲಿ ಅವರು ಜೀವಿಸುವರು.
ದೇವರ ರಾಜ್ಯ ಸರಕಾರವು ವಾಗ್ದಾನಿಸಲ್ಪಟ್ಟ ಹೊಸ ಲೋಕದ ಮೇಲೆ ಆಳುವುದು. ಆದುದರಿಂದ ಈ ಹೊಸ ಲೋಕವು ಮಾನವನಿಂದ ಉಂಟಾಗುವಂತಹದ್ದಲ್ಲ. “ದೇವರ ರಾಜ್ಯವು, ಮನುಷ್ಯರಿಂದ ಯಾ ಅವರು ಸ್ಥಾಪಿಸಿದ ಒಂದು ಪ್ರಭುತ್ವದ ಮೂಲಕ ಕೈಗೊಂಡ ಕಾರ್ಯವನ್ನು ಎಂದೂ ಅರ್ಥೈಸುವುದಿಲ್ಲ,” ಎಂದು ಒಂದು ಬೈಬಲ್ ಎನ್ಸೈಕ್ಲೊಪೀಡಿಯ ವಿವರಿಸುತ್ತದೆ. “ರಾಜ್ಯವು ದೈವಿಕ ಕ್ರಿಯೆಯಾಗಿದ್ದು, ಮಾನವ ಸಾಧನೆ ಯಾ ಸಮರ್ಪಿತ ಕ್ರೈಸ್ತರ ಸಾಧನೆಯೂ ಕೂಡ ಆಗಿರುವುದಿಲ್ಲ.”—ದ ಜಾಂಡರ್ವನ್ ಪಿಕ್ಟೋರಿಯಲ್ ಎನ್ಸೈಕ್ಲೊಪೀಡಿಯ ಆಫ್ ದ ಬೈಬಲ್.
ದೇವರ ರಾಜ್ಯದ ಕೆಳಗೆ ಹೊಸ ಲೋಕ ಬರುವುದು ಖಂಡಿತ. ಅದರ ಬರುವಿಕೆಯ ವಾಗ್ದಾನದ ಮೇಲೆ ನೀವು ಆತುಕೊಳ್ಳಬಲ್ಲಿರಿ ಏಕೆಂದರೆ ಆ ವಾಗ್ದಾನವು “ಸುಳ್ಳಾಡದ ದೇವರ” ಮೂಲಕ ಮಾಡಲ್ಪಟ್ಟಿದೆ. (ತೀತ 1:2) ದೇವರ ಹೊಸ ಲೋಕವು ಯಾವ ರೀತಿಯ ಲೋಕವಾಗಿರುವುದೆಂದು ದಯವಿಟ್ಟು ಪರಿಗಣಿಸಿರಿ. (g93 10/22)
[ಪುಟ 3 ರಲ್ಲಿರುವ ಚಿತ್ರ ಕೃಪೆ]
NASA photo