“ಮನುಷ್ಯನ ಅತಿ ಪ್ರಯೋಜನಕಾರಿಯಾದ ಮರ”
ಕೆನ್ಯದ ಎಚ್ಚರ! ಸುದ್ದಿಗಾರರಿಂದ
ಅನೇಕ ಜನರಿಗೆ ಆರಾಮ ಮತ್ತು ವಿಶ್ರಾಂತಿಯ ಸಂಕೇತವಾಗಿರುವ ತೆಂಗಿನ ಮರವು ಸೋಮಾರಿಯಾಗಿ ಕಾಣುವ ಮರವಾಗಿದೆ. ಆದರೆ ಕೆನ್ಯದ ಕರಾವಳಿ ತೀರದಲ್ಲಿರುವ ಮೊಂಬಾಸ ದ್ವೀಪದ ಮೇಲೆ ಜೀವಿಸುವ ಜನರಿಗೆ, ಅದು ಇದಕ್ಕಿಂತ ಹೆಚ್ಚಾಗಿದೆ. ಕೆಲವರು ಈ ಸೌಮ್ಯವಾದ ದೈತ್ಯನನ್ನು ಸೂಚಿಸಿ “ಜೀವದ ವೃಕ್ಷ” ಎನ್ನುತ್ತಾರೆ. ಈ ಸಮುದ್ರತೀರ ನಿವಾಸಿಗಳಿಗೆ, ಕೇವಲ ಸೌಂದರ್ಯವನ್ನು ಒದಗಿಸುವುದು ಮಾತ್ರವಲ್ಲ ಮಾನವ ಜೀವಿತದ ಮೂಲಭೂತ ಆವಶ್ಯಕತೆಗಳಲ್ಲಿ ಬಹಳಷ್ಟನ್ನು ಸರಬರಾಯಿ ಮಾಡುವ ಅದ್ಭುತಕರ ಸಾಮರ್ಥ್ಯ ಕೂಡ ತೆಂಗಿನ ಮರಕ್ಕೆ ಇದೆ.
ತೆಂಗಿನ ಮರಕ್ಕೆ ಬಹಳಷ್ಟು ವ್ಯಾವಹಾರಿಕ ಉಪಯೋಗಗಳು ಇವೆ. ಆದುದರಿಂದ ತೆಂಗಿನ ಮರವನ್ನು “ಸಮೃದ್ಧಿಯ ಮರ,” “ಮಾನವಕುಲದ ಬಾಗಿಲ ಮೆಟ್ಟಲಿನ ಮೇಲೆ ಇರುವ ಹಾಲಿನ ಸೀಸೆ,” ಮತ್ತು “ಮನುಷ್ಯನ ಅತಿ ಪ್ರಯೋಜನಕಾರಿಯಾದ ಮರ” ಎಂದು ಕರೆಯುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ತೆಂಗಿನ ಮರ—ಏಕ ವಿಷಯ ಪ್ರಬಂಧ (ದ ಕೋಕೊನಟ್ ಪಾಮ್—ಎ ಮೊನೋಗ್ರಾಫ್) ಗಮನಿಸುವುದು: “ಅದು ಬಹುಶಃ ಬೇರೆ ಯಾವುದೇ ಮರಕ್ಕಿಂತಲೂ ಹೆಚ್ಚಾಗಿ ಮಾನವಕುಲಕ್ಕೆ ಉಪಯೋಗದ ಉತ್ಪಾದನೆಗಳನ್ನು ಒದಗಿಸುತ್ತದೆ.”
ತೆಂಗಿನಕಾಯಿಗಳಿಂದ ಮಾಡಿದ್ದು
ಕೆನ್ಯ ಕರಾವಳಿಯ ಜನರು ತೆಂಗಿನ ಗರಿಯನ್ನು ಬಹಳಷ್ಟು ಕುಶಲ ರೀತಿಗಳಲ್ಲಿ ಬಳಸಿದ್ದಾರೆ. ಉದಾಹರಣೆಗೆ, ಒಬ್ಬ ಸ್ಥಳೀಯ ಗೃಹಿಣಿ, ಕಡೀಯನ್ನು ಪರಿಗಣಿಸಿರಿ. ಅವಳು ಈ ಉಷ್ಣವಲಯದ ಪರಿಸರದಲ್ಲಿ ಬಾಲ್ಯಾವಸ್ಥೆಯಿಂದಲೂ ಜೀವಿಸಿದ್ದಾಳೆ. “ನಿಮ್ಮ ಮನೆಯಲ್ಲಿ ತೆಂಗಿನಕಾಯಿಯು ಯಾವಾಗಲೂ ಪ್ರಾಮುಖ್ಯವಾದ ಪಾತ್ರವನ್ನು ವಹಿಸಿದೆಯೆ?” ಎಂದು ನಾವು ಕೇಳುತ್ತೇವೆ.
ಕಡೀ ಉತ್ತರಿಸುವುದು: “ನಾನು ಎಳೆಯ ಹುಡುಗಿಯಾಗಿದ್ದಾಗ, ನಮ್ಮ ಅಡುಗೆಯ ಮನೆಯಲ್ಲಿ ತೆಂಗಿನಕಾಯಿಗಳನ್ನು ಉಪಯೋಗಿಸುವುದನ್ನು ನಾನು ಸ್ಪಷ್ಟವಾಗಿಗಿ ಜ್ಞಾಪಿಸಿಕೊಳ್ಳಬಲ್ಲೆ. ಕರಟವು ಬಹಳ ಕಠಿನವಾಗಿದ್ದು, ಬಹಳ ಕಾಲ ಬಾಳಿಕೆ ಬರುವುದರಿಂದ, ಅದು ಬಟ್ಟಲುಗಳು, ಚಮಚೆಗಳು, ಮತ್ತು ಸೌಟುಗಳಂತೆ ಚೆನ್ನಾಗಿ ಕಾರ್ಯಮಾಡಿದವು. ದೊಡ್ಡ ಕರಟಗಳನ್ನು ಸೂಪ್ ಪಾತ್ರೆಗಳು ಮತ್ತು ಗೋರು ಚಮಚೆಗಳಿಗಾಗಿ ಉಪಯೋಗಿಸಲಾಯಿತು. ಮನೆಯ ಉಪಯೋಗಕ್ಕಾಗಿ ಈ ವಸ್ತುಗಳನ್ನು ಹೇಗೆ ವಿನ್ಯಾಸಿಸಿ ಮಾಡಬೇಕು ಎಂಬುದನ್ನು ಕಲಿಯುವುದು ಶಾಲೆಯಲ್ಲಿ ನಮ್ಮ ಶಿಕ್ಷಣದ ಒಂದು ಭಾಗವಾಗಿತ್ತು.”
ಕಡಲ ತೀರದಲ್ಲಿ ಬೆಳೆಸಲ್ಪಟ್ಟ ಕಡೀಯ ಗಂಡನಾದ ಬಾಗಾನಿಗೆ ಕೂಡ, ಅಡುಗೆಯ ಮನೆಯ ಹೊರಗಿರುವ ತೆಂಗಿನ ಮರದ ಉಪಯೋಗದ ಕುರಿತು ಹೆಚ್ಚನ್ನು ಹೇಳಲಿಕ್ಕಿದೆ. “ಬೆಳೆಯುತ್ತಿರುವ ಒಬ್ಬ ಹುಡುಗನೋಪಾದಿ,” ಬಾಗಾ ಜ್ಞಾಪಿಸಿಕೊಳ್ಳುತ್ತಾನೆ, “ನಾನು ಈ ಮರವನ್ನು ಜೀವಿತದ ಕಡೆಗಣಿಸಲಾಗದ ಒಂದು ಭಾಗವಾಗಿ ನೋಡಿದೆ.”
ಉದಾಹರಣೆಗೆ, ಕಠಿನವೂ ಗಡುಸಾಗಿಯೂ ಇರುವ ತಾಳೆಯ ಕಟ್ಟಿಗೆಯ ಕುರಿತು ಅವನು ಹೇಳುವುದು: “ನಾವು ಅದನ್ನು ಹೆಂಚುಗಳಿಗೆ, ಆಧಾರಗಳಿಗೆ, ಆಸರೆ ದಿಮ್ಮಿಗಳಿಗೆ, ಕಂಬಗಳಿಗೆ, ಮತ್ತು ಹಲವಾರು ಇತರ ಕಟ್ಟಡ ಘಟಕಗಳಿಗೆ ಉಪಯೋಗಿಸುತ್ತೇವೆ.”
ತೆಂಗಿನ ಗರಿಗಳ ಕುರಿತೇನು? “ಅನೇಕ ಹಳ್ಳಿಗಳಲ್ಲಿ, ಈ ಎಲೆಗಳನ್ನು ಕೈಯಿಂದ ಹೆಣೆಯುವ ಮೂಲಕ ಮತ್ತು ಅವುಗಳನ್ನು ಚಾವಣಿ ಸಾಮಾಗ್ರಿಯ ದೊಡ್ಡ ಮರಹೆಂಚು ತುಂಡುಗಳಂತೆ ಮಾಡುವ ಮೂಲಕ ಒಂದು ಜೀವನೋಪಾಯವನ್ನು ಗಳಿಸುವ ಸ್ತ್ರೀಯರು ಇದ್ದಾರೆ,” ಎಂದು ಬಾಗಾ ವಿವರಿಸುತ್ತಾನೆ. ಒಂದು ಮನೆಯು ಉಷ್ಣವಲಯದ ಉರಿಯುವ ಸೂರ್ಯನಿಗೆ ಸಂಪೂರ್ಣವಾಗಿ ಮರೆಮಾಡದೆ ಇಡಲ್ಪಟ್ಟಾಗ್ಯೂ, ಮನೆಯ ಒಳಗೆ ವಾಸಮಾಡುವವರು ತಣ್ಣಗಾಗಿಯೂ ಹಾಯಾಗಿಯೂ ಇರುವರು. ತೆಂಗಿನ ಗರಿಯ ಚಾವಣಿಯು ಅವರನ್ನು ಸೂರ್ಯನಿಂದ ರಕ್ಷಿಸುತ್ತದೆ ಮಾತ್ರವಲ್ಲ, ಮನೆಯನ್ನು ತಣ್ಣಗಿಡಲು ಗಾಳಿಯು ಪ್ರವೇಶಿಸುವಂತೆ ಬಿಡುತ್ತದೆ. ಇದಕ್ಕಿಂತ ಹೆಚ್ಚು ಪರಿಣಾಮಕಾರಿಯಾದ ಚಾವಣಿಯನ್ನು ಕಲ್ಪಿಸುವುದು ಕಷ್ಟಕರವಾಗಿದೆ. ಹೆಣೆದ ತೆಂಗಿನ ಗರಿಗಳು ಗೋಡೆಗಳಂತೆ, ಬೇಲಿಗಳಂತೆ, ಮತ್ತು ಬಾಗಿಲುಗಳಂತೆ ಚೆನ್ನಾಗಿ ಕೆಲಸಮಾಡುತ್ತವೆ.
“ತೆಂಗಿನಕಾಯಿಯ ಸಿಪ್ಪೆಯನ್ನು ನಾವು ಮರೆಯದಿರೋಣ,” ಎಂದು ಬಾಗಾ ಹೆಮ್ಮೆಯ ನಗೆಯೊಂದಿಗೆ ಕೂಡಿಸುತ್ತಾನೆ. “ನೆಲಕ್ಕೆ ಭದ್ರಪಡಿಸಿದ ಒಂದು ಚೂಪಾದ ಕಟ್ಟಿಗೆಯ ಯಾ ಕಬ್ಬಿಣದ ಹೆಮ್ಮೊಳೆಯ ಮೇಲೆ ತೆಂಗಿನಕಾಯಿಯನ್ನು ಏರಿಸುವ ಮೂಲಕ ಇವುಗಳನ್ನು ಪಡೆಯಬಹುದು. ನಾವು ತೆಂಗಿನಕಾಯಿಯನ್ನು ಎರಡೂ ಕೈಗಳಿಂದ ಎತ್ತಿಕೊಂಡು, ಹೆಮ್ಮೊಳೆಯ ಮೇಲಿಟ್ಟು ಕೆಳಕ್ಕೆ ಅದನ್ನು ಒತ್ತಿ, ನಿಜವಾದ ಕಾಯಿಯಿಂದ ಸಿಪ್ಪೆ ಸಡಿಲಗೊಳ್ಳುವಂತೆ ಅದನ್ನು ತಿರುಗಿಸುತ್ತೇವೆ.” ನೆಲ ಚಾಪೆಗಳನ್ನು, ಕಂಬಳಿಗಳನ್ನು, ಜಮಖಾನೆಗಳನ್ನು, ಬ್ರಷ್ಗಳನ್ನು, ಪೊರಕೆಗಳನ್ನು, ಮತ್ತು ಹಾಸಿಗೆಗಳನ್ನು ತುಂಬುವುದಕ್ಕೂ ಕೂಡ ಉಪಯೋಗಿಸಸಾಧ್ಯವಿರುವ ಸುಂದರವಾದ ಬಂಗಾರದಂಥ ನಾರನ್ನು ಸಿಪ್ಪೆ ಕೊಡುತ್ತದೆ.
“ದ್ರಾಕ್ಷಾರಸಕ್ಕಿಂತ ಹೆಚ್ಚು ಮಧುರವಾದದ್ದು”
ತೆಂಗಿನಕಾಯಿಯು ಆಹಾರಕ್ರಮದ ಒಂದು ಪ್ರಾಮುಖ್ಯವಾದ ಭಾಗವೂ ಕೂಡ ಆಗಿದೆ ಮತ್ತು ಅದನ್ನು ಬಹುಮಟ್ಟಿಗೆ ಬೆಳವಣಿಗೆಯ ಅದರ ಎಲ್ಲಾ ಹಂತಗಳ ಉದ್ದಕ್ಕೂ ಬಳಸಲಾಗುತ್ತದೆ. ಎಳೆಯ ತೆಂಗಿನಕಾಯಿಯಲ್ಲಿ (ಸ್ಥಳಿಕ ಭಾಷೆಯಾದ ಕೀಸ್ವಾಹೀಲಿಯಲ್ಲಿ ಡಾಫೂ) ಎಂಬುದಾಗಿ ಕರೆಯಲ್ಪಡುವ, ಬಹಳ ಮನೋಹರವಾದ ಸ್ವಾದವಿರುವ ಶುದ್ಧ, ಆರೋಗ್ಯಕರ, ಮತ್ತು ಪುಷ್ಟಿಕರವಾದ ಪಾನೀಯವಿರುತ್ತದೆ. ಕಾಯಿಯ ಮೇಲ್ಭಾಗದಲ್ಲಿ ಒಂದು ರಂಧ್ರ ಮಾಡುವ ಮೂಲಕ ಅದರ ನೈಜವಾದ ಪಾತ್ರೆಯಲ್ಲಿ ಪಾನೀಯವನ್ನು ಕೊಡಸಾಧ್ಯವಿದೆ—ಉಷ್ಣವಲಯದ ದಾಹಕ್ಕೆ ಸರಿಯಾದ ಪಾನೀಯ! ಈ ಪಾನೀಯದ ಕುರಿತು ಹೆಸರುವಾಸಿ ಪರಿಶೋಧಕ ಮಾರ್ಕೊ ಪೊಲೊ ವರದಿಗನುಸಾರವಾಗಿ ಹೇಳಿದ್ದು: “ದ್ರವವು ನೀರಿನಂತೆ ತಿಳಿಯಾಗಿದ್ದು, ತಣ್ಣಗೂ ಉತ್ತಮ ರುಚಿಯುಳ್ಳದ್ದೂ, ಮತ್ತು ದ್ರಾಕ್ಷಾರಸಕ್ಕಿಂತ ಯಾ ಯಾವುದೇ ಬೇರೆ ರೀತಿಯ ಪಾನೀಯಕ್ಕಿಂತ ಹೆಚ್ಚು ಮಧುರವೂ ಆಗಿದೆ.”
ಮೊದಲ ಬಾರಿಗೆ ಈ ಸ್ಥಳೀಯ ಪಾನೀಯವನ್ನು ಹೀರುವಾಗ, ಪ್ರವಾಸಿಗರು ಅನೇಕ ವೇಳೆ ತದ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಮತ್ತು ದ್ರವವು ಮುಗಿದಾಗ, ಮೆತುಪಾಕದಂತಿರುವ ಪದಾರ್ಥವನ್ನು ಗೋರಲು ಕರಟದ ಒಂದು ಮುರಿದ ಭಾಗವನ್ನು ಉಪಯೋಗಿಸಸಾಧ್ಯವಿದೆ. ಇದು ಮೆತುವಾಗಿಯೂ, ಸಿಹಿಯಾಗಿಯೂ, ಮತ್ತು ವಿಶ್ರಾಂತಿದಾಯಕವೂ ಆಗಿರುತ್ತದೆ. ಎಳೆಯ ತೆಂಗಿನಕಾಯಿಯ ಮಾಧುರ್ಯವು ಭೇಟಿಕಾರರಿಗೆ ಒಂದು ನವೀನತೆಯಾಗಿದ್ದರೂ, ತೀರದ ನಿವಾಸಿಗಳಿಗೆ ಪಾನೀಯವು ಪ್ರತಿದಿನದ ಪಾನೀಯವಾಗಿದ್ದು, ಕುಡಿಯುವ ನೀರಿನ ಕೊರತೆಯಿರುವಾಗ, ಅದನ್ನು ಬಹಳವಾಗಿ ಗಣ್ಯಮಾಡಲಾಗುತ್ತದೆ.
ತೆಂಗಿನಕಾಯಿ ಅಡುಗೆ
ಬಲಿತ ತೆಂಗಿನಕಾಯಿಯ ಅತಿ ಬೆಲೆಯುಳ್ಳ ಭಾಗವು ಅದರ ಸ್ವತ ಯಾ ಹಣ್ಣಾಗಿದೆ. ಅದು ಕರಟದಿಂದ ಹೊರ ಬಂದಂತೆ ಅದನ್ನು ತಿನ್ನಬಹುದು, ವಿಭಿನ್ನ ಭಕ್ಷ್ಯಗಳಲ್ಲಿ ಅದನ್ನು ತುರಿದು ಹಾಕಬಹುದು, ಯಾ ಅದರ ಅಮೂಲ್ಯ ಹಾಲನ್ನು ತೆಗೆಯಲು ಅದನ್ನು ಹಿಂಡಬಹುದು.
ಕಡೀ ಜ್ಞಾಪಿಸಿಕೊಳ್ಳುತ್ತಾಳೆ: “ಎಳೆಯ ಹುಡುಗಿಯೋಪಾದಿ, ಅಡಿಗೆ ಮಾಡುವುದಕ್ಕಾಗಿ ತೆಂಗಿನ ಹಾಲು ಯಾವಾಗಲೂ ಲಭ್ಯವಾಗಿರುವುದನ್ನು ನಾನು ಖಚಿತ ಮಾಡಿಕೊಳ್ಳಬೇಕಿತ್ತು.” ಸಾಂಪ್ರದಾಯಿಕವಾಗಿ, ತೆಂಗಿನ ಹಾಲನ್ನು ಮೀನು, ಕೋಳಿ, ಹುರುಳಿ, ಅಕ್ಕಿ, ಆಲೂಗಡ್ಡೆ, ಮರಗೆಣಸು, ಮತ್ತು ರೊಟ್ಟಿಯ ರುಚಿಯನ್ನು ಹೆಚ್ಚಿಸಲು ಕೂಡಿಸಲಾಗುತ್ತದೆ. ತರಕಾರಿ ಪಲ್ಯದ ರುಚಿಯನ್ನು ಕೂಡ ಅದು ಹೆಚ್ಚಿಸುತ್ತದೆ. ಆದರೆ ಕಡೀ ಹಾಲನ್ನು ಹೇಗೆ ಪಡೆದಳೆಂಬುದನ್ನು ತಿಳಿಯಲು ನಾವು ಕುತೂಹಲವುಳ್ಳವರಾಗಿದ್ದೇವೆ.
“ನಾವು ಬೂಜಿಯನ್ನು ಉಪಯೋಗಿಸುತ್ತೇವೆ,” ಎಂಬುದಾಗಿ ಕಾಡಿ ವಿವರಿಸುತ್ತಾಳೆ. ಕಿಸ್ವಾಹಿಲಿ ಭಾಷೆಯಲ್ಲಿ ಬೂಜಿ ಆಡು ಮಾತಿನ ಅಭಿವ್ಯಕ್ತಿಯಾಗಿದ್ದು, ನೆಲದಿಂದ ಸುಮಾರು 15 ಸೆಂಟಿಮೀಟರುಗಳ ಎತ್ತರಕ್ಕೆ ನಿಲ್ಲುವ ಒಂದು ಸಣ್ಣ ಮರದ ಪೀಠವನ್ನು ಸೂಚಿಸುತ್ತದೆ. ಕೈಯಿಂದ ತೆಂಗಿನಕಾಯಿಯ ತುರಿಯುವಿಕೆಗಾಗಿ ವಿಶೇಷವಾಗಿ ರಚಿಸಲ್ಪಟ್ಟ, ಚಾಚುವ ಚೂಪಾದ ದಂತುರ ಮೊನೆ ಅದಕ್ಕಿದೆ. “ಮಕ್ಕಳಾದ ನಮಗೆ ಬೂಜಿಯ ಮೇಲೆ ಕುಳಿತುಕೊಳ್ಳುವುದು ವಿನೋದವಾಗಿತ್ತು. ನಾವು ಅರೆ ತೆಂಗಿನಕಾಯಿಯೊಂದನ್ನು ತೆಗೆದುಕೊಂಡು, ಕರಟವು ಎಲ್ಲಾ ತೆಂಗಿನ ಸತ್ವರಹಿತವಾಗುವ ತನಕ ಒಳಭಾಗವನ್ನು ದಂತುರ ಕತ್ತಿಯ ಸಹಾಯದಿಂದ ಕೆರೆದು ತೆಗೆಯುತ್ತಿದ್ದೆವು. ತುರಿಯಲ್ಪಟ್ಟ ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ತಾಳೆಯ ಗರಿಗಳಿಂದ ಮಾಡಲಾದ ಉದ್ದವಾದ ಕೊಳವೆಯಂತಹ ಜಲ್ಲಡಿಯೊಳಗೆ ಹಾಕುವುದು ಮುಂದಿನ ಹೆಜ್ಜೆಯಾಗಿತ್ತು. ಆಮೇಲೆ ನಾವು ಆ ಮಧುರವಾದ ತೆಂಗಿನ ಹಾಲನ್ನು ಹಿಂಡಿ ತೆಗೆಯುತ್ತಿದ್ದೆವು.”
ತೆಂಗಿನಕಾಯಿಯು ನಿಜವಾಗಿಯೂ ಒಂದು ಹಣ್ಣಾಗಿದೆ, ಮತ್ತು ಉಷ್ಣವಲಯದ ಬೇರೆ ಹಣ್ಣುಗಳಿಗೆ ಬಹಳ ಅನುರೂಪವಾಗಿದೆ. ಹೊಸದಾಗಿ ತುಂಡು ಮಾಡಲ್ಪಟ್ಟ ಪಪಾಯಾ, ಅನಾನಾಸ್, ಮಾವಿನ ಹಣ್ಣು, ಬಾಳೆ ಹಣ್ಣು, ಕಿತ್ತಳೆ, ಮತ್ತು ಪ್ಯಾಷನ್ ಹಣ್ಣುಗಳ ಮೇಲೆ ಹೊಸದಾಗಿ ತುರಿಯಲ್ಪಟ್ಟ ತೆಂಗಿನಕಾಯಿ ಅಥವಾ ಸಾಂದ್ರೀಕರಿಸಿದ ತೆಂಗಿನಕಾಯಿಯ ಹಾಲನ್ನು ಹಾಕಿದ ಒಂದು ಹಣ್ಣಿನ ಭಕ್ಷ್ಯವನ್ನು ಕೇವಲ ಧ್ಯಾನಿಸುವ ಮೂಲಕ, ನಮ್ಮ ಸ್ವಾದ ಕಣಗಳು ನೀರೂರಲು ತೊಡಗುತ್ತವೆ.
ಒಂದು ಹಳೆಯ ನಾಣ್ಣುಡಿಯು ಹೇಳುವುದು: “ಒಂದು ತೆಂಗಿನ ಮರವನ್ನು ನೆಡುವವನು . . . ಆಹಾರ ಮತ್ತು ಪಾನೀಯವನ್ನು, ತನಗಾಗಿ ಒಂದು ನೆಲೆಯನ್ನು ಮತ್ತು ತನ್ನ ಮಕ್ಕಳಿಗಾಗಿ ಒಂದು ಪಿತ್ರಾರ್ಜಿತ ಸ್ವತ್ತನ್ನು ನೆಡುತ್ತಾನೆ.” ಹೀಗೆ, ಸೋಮಾರಿಯಾಗಿ ಕಾಣುವ ತೆಂಗಿನ ಮರವು ನಿಜವಾಗಿಯೂ ಸೋಮಾರಿಯಾಗಿಲ್ಲ. ಅದು ನಿಜವಾಗಿಯೂ ಮನುಷ್ಯನ ಅತಿ ಪ್ರಯೋಜನಕಾರಿಯಾದ ಮರವಾಗಿದೆಯೊ ಇಲ್ಲವೊ ಎಂಬ ವಿಷಯದ ಮೇಲೆ ವಾದ ಮಾಡಬಹುದಾದರೂ, ಅದು ಖಂಡಿತವಾಗಿ ಈ ಆಫ್ರಿಕನ್ ದೇಶದಲ್ಲಿ ಸಮೃದ್ಧಿಯ ಕೊಂಬಾಗಿದೆ! (g93 10/22)