ಪರಾರಿಗಳಾಗಿರುವ ಕೊಲೆಗಾರರು
ಮಾರ್ಗರೆಟ್ಳ ಮಗ ಟಿಟೊ ಮಲೇರಿಯಾ ರೋಗದಿಂದ ಸೋಂಕಿತನಾದಾಗ, ಚಿಕಿತ್ಸೆಯೊಂದಕ್ಕಾಗಿ ಅವಳು ಹತೋಟಿ ಮೀರಿ ಹುಡುಕಾಟ ನಡೆಸಿದಳು. ವಿಶೇಷವಾಗಿ ಪ್ರಶಂಸಿಸಲ್ಪಟ್ಟ ಮಲೇರಿಯಾ ನಿರೋಧಕ ಔಷಧವಾದ ಕ್ಲೋರೊಕಿನ್ವನ್ನು ಒಳಗೊಂಡು ಮೂರು ಔಷಧಿಗಳು ಕೊಡಲ್ಪಟ್ಟವು. ಆದರೂ, ಕೇವಲ ಒಂಬತ್ತು ತಿಂಗಳ ಪ್ರಾಯದಲ್ಲಿ ಟಿಟೊ ಮರಣಹೊಂದಿದನು.
ಮಾರ್ಗರೆಟ್ಳ ತಾಯ್ನಾಡಾದ ಕೆನ್ಯದಲ್ಲಿ, ಅಂತಹ ದುರಂತವು ಆಗಾಗ್ಗೆ ಸಂಭವಿಸುತ್ತದೆ. “ನ್ಯೂಸ್ವೀಕ್” ವರದಿಸುವುದು: “ಮಲೇರಿಯಾ ರೋಗಾಣುಗಳನ್ನು ಹೊಂದಿರುವ ಸೊಳ್ಳೆಗಳ ಪ್ರಧಾನ ಜಾತಿ ‘ಅನಾಫಿಲೀಸ್ ಗಾಂಬಿಯೆ,’ ಲೋಕದ ಈ ಭಾಗದಲ್ಲಿ ವೇಗವಾಗಿ ವೃದ್ಧಿಹೊಂದುತ್ತದೆ. ಮಕ್ಕಳು ವೃದ್ಧಿ ಹೊಂದುವುದಿಲ್ಲ. ಐದು ಪ್ರತಿಶತದಷ್ಟು ಮಕ್ಕಳು ಶಾಲಾ ವಯಸ್ಸನ್ನು ತಲಪುವದಕ್ಕೆ ಮೊದಲೇ ಸಾಯುತ್ತಾರೆ.”
ಕ್ಷಯ ರೋಗವು 1991ರಲ್ಲಿ, ಅಮೆರಿಕದ ನ್ಯೂ ಯಾರ್ಕ್ನಲ್ಲಿ 12 ಜನ ಕೈದಿಗಳನ್ನು ಮತ್ತು ಒಬ್ಬ ಕಾವಲುಗಾರನನ್ನು ಕೊಂದಿತು. “ಸೆರೆಮನೆಗಳಲ್ಲಿ ನಾವು ಅದನ್ನು ನಿಯಂತ್ರಿಸುತ್ತೇವೆ, ಆದರೆ ಸಮಾಜದಲ್ಲಿ ಅದು ಸ್ಥಾಪಿತವಾಗಿರುವಾಗ ನೀವು ಅದನ್ನು ಹೇಗೆ ನಿಯಂತ್ರಿಸುತ್ತೀರಿ? ಎಂಬುದೇ ವಾಸ್ತವವಾದ ಪ್ರಶ್ನೆಯಾಗಿದೆ,” ಎಂದು ಡಾ. ಡಿಫರ್ನಾಂಡೊ ಹೇಳುತ್ತಾರೆ.
ನೂರ ಎಪ್ಪತ್ತು ಕೋಟಿ—ಲೋಕದ ಜನಸಂಖ್ಯೆಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು—ಜನರು ಕ್ಷಯ ರೋಗದ ರೋಗಾಣುವಿನಿಂದ ಸೋಂಕಿತರಾದವರೂ ಮತ್ತು ಇತರರಿಗೆ ಅದನ್ನು ಹರಡುವವರೂ ಆಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ವರದಿಸುತ್ತದೆ. ಪ್ರತಿ ವರ್ಷ, ಇವರಲ್ಲಿ 80 ಲಕ್ಷ ಮಂದಿ ಸಕ್ರಿಯ ರೋಗವನ್ನು ವಿಕಸಿಸಿಕೊಳ್ಳುತ್ತಾರೆ, ಮತ್ತು 30 ಲಕ್ಷ ಮಂದಿ ಸಾಯುತ್ತಾರೆ.
ನ್ಯೂ ಯಾರ್ಕ್ನ ಆಸ್ಪತ್ರೆಯೊಂದರಲ್ಲಿ, ಪೂರ್ತಿ ಬೆಳವಣಿಗೆ ಹೊಂದುವ 11 ವಾರಗಳ ಮೊದಲೇ ಹೆಣ್ಣು ಶಿಶುವೊಂದು ಜನಿಸಿತು, ಆದರೆ ಇದು ಅವಳ ಸಮಸ್ಯೆಯ ಕೇವಲ ಒಂದು ಭಾಗವಾಗಿತ್ತು. ಅವಳ ಕೈಗಳ ಸುಲಿಯುತ್ತಿರುವ ಚರ್ಮ, ಅವಳ ಪಾದಗಳ ಮೇಲಿನ ಹುಣ್ಣುಗಳು, ವಿಕಸನಗೊಂಡ ಪಿತ್ತಜನಕಾಂಗ ಮತ್ತು ಗುಲ್ಮ, ಇವೆಲ್ಲವೂ ಅವಳು ತಾಯಿಯ ಗರ್ಭಾಶಯದಲ್ಲಿರುವಾಗಲೆ ಸಿಫಿಲಿಸ್ ರೋಗವನ್ನು ಅಂಟಿಸಿಕೊಂಡಿದ್ದಳೆಂಬ ಸ್ಪಷ್ಟ ಮಾಹಿತಿಯನ್ನು ಕೊಟ್ಟವು.
“ಕೆಲವು ಶಿಶುಗಳು ತಮ್ಮ ತಾಯಂದಿರ ಗರ್ಭಾಶಯಗಳಲ್ಲಿರುವಾಗಲೆ ರೋಗದಿಂದ ಎಷ್ಟು ತೀವ್ರವಾಗಿ ಹಾನಿಗೊಳಗಾಗಿರುತ್ತವೆಂದರೆ ಅವು ಹುಟ್ಟುವಾಗಲೆ ಸತ್ತಿರುತ್ತವೆ,” ಎಂದು “ದ ನ್ಯೂ ಯಾರ್ಕ್ ಟೈಮ್ಸ್” ವರದಿಸುತ್ತದೆ. “ಬೇರೆ ಕೆಲವು ಶಿಶುಗಳು ಹುಟ್ಟಿದ ಕೂಡಲೆ, ಕೆಲವು ಶಿಶುಗಳು ಹೆರಿಗೆಯ ಸಮಯದಲ್ಲಿ ತೀಕ್ಷೈವಾದ ಚರ್ಮ ವೈಲಕ್ಷಣ್ಯಗಳೊಂದಿಗೆ ಸಾಯುತ್ತವೆ.”
ಕೆಲವೊಂದು ದಶಕಗಳ ಹಿಂದೆ, ಮಲೇರಿಯಾ, ಕ್ಷಯ, ಮತ್ತು ಸಿಫಿಲಿಸ್—ಈ ಮೂರು ರೋಗಗಳು ನಿಯಂತ್ರಣದಲ್ಲಿವೆ ಮತ್ತು ನಿರ್ಮೂಲನಕ್ಕೆ ಸಮೀಪವಾಗಿವೆ ಎಂದು ಅಭಿಪ್ರಯಿಸಲ್ಪಟ್ಟಿದ್ದವು. ಅವುಗಳು ಪುನಃ ಒಂದು ವಿನಾಶಕಾರಿ ಹಿಮ್ಮರಳುವಿಕೆಯನ್ನು ಮಾಡುತ್ತಿವೆ ಏಕೆ? (g93 12/8)