ಪುನರವತಾರದ ಸೋಜಿಗವು ವಿವರಿಸಲ್ಪಡುತ್ತದೆ
ಭೂಮಿಯ ಮೇಲೆ ಮಹತ್ತರ ಸಂಖ್ಯೆಯ ಜನರು ತಾವು ಹಿಂದೆ ಜೀವಿಸಿದ್ದನ್ನು ಜ್ಞಾಪಕಕ್ಕೆ ತರದಿರುವುದು, ಪುನರವತಾರದ ವಾದಕ್ಕೆ ಆಕ್ಷೇಪಣೆಗಳಲ್ಲಿ ಒಂದಾಗಿದೆ. ಇಷ್ಟೇ ಅಲ್ಲದೆ, ಪೂರ್ವ ಜೀವಿತಗಳನ್ನು ತಾವು ಜೀವಿಸಿದ್ದಿರಬಹುದೆಂಬುದನ್ನು ಸಹ ಅವರು ನೆನಸುವುದಿಲ್ಲ.
ಪ್ರಥಮ ಬಾರಿಗೆ ನಾವು ಭೇಟಿಯಾಗುವ ಒಬ್ಬ ವ್ಯಕ್ತಿಯನ್ನು ಗುರುತಿಸುವ ಕುರಿತು ವಿಚಿತ್ರ ಭಾವನೆಯು ಕೆಲವೊಮ್ಮೆ ನಮಗಿರುತ್ತದೆಂಬುದು ನಿಜ. ಮೊದಲ ಬಾರಿ ನಾವಲ್ಲಿಗೆ ಹೋಗಿದ್ದೇವೆಂಬುದು ನಮಗೆ ತಿಳಿದಿದ್ದರೂ, ಒಂದು ಮನೆ, ಊರು, ಅಥವಾ ಪ್ರಕೃತಿ ದೃಶ್ಯದ ಕ್ಷೇತ್ರವು ನಮಗೆ ಪರಿಚಿತವಿರುವಂತೆ ಭಾಸವಾಗಬಹುದು. ಆದರೂ, ಪುನರವತಾರದ ಕಲ್ಪನೆಯನ್ನು ಅವಲಂಬಿಸದೆ ಈ ವಿಷಯಗಳನ್ನು ವಿವರಿಸಸಾಧ್ಯವಿದೆ.
ಉದಾಹರಣೆಗೆ, ವಿಸ್ತಾರವಾಗಿ ಬೇರ್ಪಡಿಸಲ್ಪಟ್ಟ ಕ್ಷೇತ್ರಗಳಲ್ಲಿ ನಿರ್ದಿಷ್ಟವಾದ ಸ್ಥಳಗಳು ಕೊಂಚಮಟ್ಟಿಗೆ ಒಂದೇ ರೀತಿಯಲ್ಲಿರಬಹುದು, ಹಾಗಿರುವಾಗ ಹೊಸ ಸ್ಥಳವೊಂದನ್ನು ನಾವು ಸಂದರ್ಶಿಸುವಾಗ, ನಾವು ಈ ಮುಂಚೆ ಅಲ್ಲಿಗೆ ಹೋಗದಿರುವುದಾದರೂ, ನಾವು ಹಿಂದೆ ಅಲ್ಲಿಗೆ ಹೋಗಿದ್ದೇವೆಂದು ನಮಗನಿಸಬಹುದು. ಲೋಕದ ಕೆಲವು ಭಾಗಗಳಲ್ಲಿರುವ ಅನೇಕ ಮನೆಗಳು, ಆಫೀಸುಗಳು, ಅಂಗಡಿಗಳು, ಪಟ್ಟಣಗಳು, ಮತ್ತು ಪ್ರಕೃತಿ ದೃಶ್ಯದ ಕ್ಷೇತ್ರಗಳು, ಬೇರೆ ಸ್ಥಳಗಳಲ್ಲಿರುವ ತಮ್ಮ ಪ್ರತಿರೂಪಗಳಿಗೆ ಸದೃಶವಾಗಿರುತ್ತವೆ. ನಾವು ಹಿಂದೆ ನೋಡಿರುವುದಕ್ಕೆ ಅವು ಸದೃಶವಾಗಿ ಕಾಣುವುದರಿಂದ, ಹಿಂದಣ ಜೀವಿತವೊಂದರಲ್ಲಿ ನಾವು ಆ ಸ್ಥಳಗಳಲ್ಲಿದ್ದೆವು ಎಂಬುದಕ್ಕೆ ಇದು ರುಜುವಾತಾಗಿಲ್ಲ. ನಮಗೆ ಪರಿಚಿತವಾಗಿರುವ ಸ್ಥಳಗಳೊಂದಿಗೆ ಅವು ಹೋಲುತ್ತವೆ ಅಷ್ಟೆ.
ಜನರ ಕುರಿತು ಸಹ ಇದು ಸತ್ಯವಾಗಿದೆ. ತದ್ರೂಪವೆಂದು ಕರೆಯಲ್ಪಟ್ಟಿರುವುದನ್ನು ಪಡೆಯುವ ಮೂಲಕ ಸಹ ತೋರಿಕೆಯಲ್ಲಿ ಕೆಲವರು ಇತರರಿಗೆ ತೀರ ಸದೃಶರಾಗಿದ್ದಾರೆ. ಇನ್ನೂ ಜೀವಿಸುತ್ತಿರುವವರೊಬ್ಬರ ಅಥವಾ ಮರಣಪಟ್ಟಿರುವವರೊಬ್ಬರ ಕುರಿತು ಸಹ ನಮಗೆ ಜ್ಞಾಪಕ ಹುಟ್ಟಿಸುವಂತಹ ವಿಲಕ್ಷಣತೆಗಳು ವ್ಯಕ್ತಿಯೊಬ್ಬನಲ್ಲಿರಬಹುದು. ಆದರೆ ಯಾವುದೋ ಪೂರ್ವ ಅಸ್ತಿತ್ವದಲ್ಲಲ್ಲ, ಈ ಪ್ರಸ್ತುತ ಜೀವಿತದಲ್ಲಿ ಆ ಜನರನ್ನು ನಾವು ತಿಳಿದಿದ್ದೇವೆ. ಮುಖಲಕ್ಷಣಗಳು ಅಥವಾ ವ್ಯಕ್ತಿತ್ವದಲ್ಲಿ ಸದೃಶವಾಗಿರುವುದು, ಈ ಜನರು ನಮಗೆ ಹಿಂದಿನ ಜೀವಿತದಲ್ಲಿ ಪರಿಚಿತರಾಗಿದ್ದರು ಎಂದು ಅರ್ಥೈಸುವುದಿಲ್ಲ. ನಾವೆಲ್ಲರೂ ಕೆಲವೊಮ್ಮೆ ಒಬ್ಬ ವ್ಯಕ್ತಿಯನ್ನು ಬೇರೊಬ್ಬನೆಂದು ತಪ್ಪಾಗಿ ಗ್ರಹಿಸಿರುವುದು ಸಂಭವನೀಯ. ಯಾವುದೊ ಪೂರ್ವ ಜೀವಿತದಲ್ಲಲ್ಲ, ಆದರೆ ನೀವು ಜೀವಿಸಿರುವ ಕಾಲದಲ್ಲಿಯೇ ಈ ಇಬ್ಬರೂ ವ್ಯಕ್ತಿಗಳು ಜೀವಂತರಾಗಿದ್ದಾರೆ. ಇದಕ್ಕೆ ಪುನರವತಾರದೊಂದಿಗೆ ಯಾವ ಸಂಬಂಧವೂ ಇಲ್ಲ.
ವಶೀಕರಣ ಸುಪ್ತ ಸ್ಥಿತಿಯ ಪ್ರಭಾವ
ಪುನರವತಾರದ ಕಲ್ಪನೆಯನ್ನು ಅವಲಂಬಿಸದೆ, ವಶೀಕರಣ ಸುಪ್ತ ಸ್ಥಿತಿಯ ಪ್ರಭಾವದ ಕೆಳಗಿನ ಅನುಭವಗಳನ್ನು ವಿವರಿಸಸಾಧ್ಯವಿದೆ. ನಾವು ಊಹಿಸುವುದಕ್ಕಿಂತಲೂ ಅತ್ಯಂತ ಹೆಚ್ಚು ಗ್ರಾಹಕವಾದ ಸಮಾಚಾರದ ಭಂಡಾರವನ್ನು ನಮ್ಮ ಉಪಪ್ರಜ್ಞೆಯ ಮನಸ್ಸು ನಿಯೋಜಿಸುತ್ತದೆ. ಪುಸ್ತಕಗಳು, ಪತ್ರಿಕೆಗಳು, ಟಿವಿ, ರೇಡಿಯೊ ಮೂಲಕ, ಮತ್ತು ಇತರ ಅನುಭವಗಳು ಹಾಗೂ ಅವಲೋಕನಗಳ ಮೂಲಕ ಸಮಾಚಾರವು ಈ ಉಗ್ರಾಣವನ್ನು ತಲಪುತ್ತದೆ.
ನಮಗೆ ನೇರವಾದ ಅಥವಾ ತತ್ಕ್ಷಣದ ಉಪಯೋಗವು ಅದರಿಂದಾಗಿ ಇಲ್ಲದ ಕಾರಣ, ಅಧಿಕಾಂಶ ಈ ಸಮಾಚಾರವು ನಮ್ಮ ಉಪಪ್ರಜ್ಞೆಯ ಮನಸ್ಸಿನ ಬಚ್ಚಿಡಲ್ಪಟ್ಟ ಯಾವುದೋ ಒಂದು ಮೂಲೆಯಲ್ಲಿ ಶೇಖರವಾಗಿರುತ್ತದೆ. ನಮ್ಮ ಉಪಪ್ರಜ್ಞೆಯ ಮನಸ್ಸು ಸ್ಪಲ್ಪಮಟ್ಟಿಗೆ ಗ್ರಂಥಾಲಯದ ಪುಸ್ತಕಗಳಂತಿದ್ದು, ಪ್ರಸ್ತುತ ಅದಕ್ಕೆ ಕಡಿಮೆ ಬೇಡಿಕೆಯಿದೆ ಮತ್ತು ಆದುದರಿಂದಲೆ ಅವು ವಿವಿಕ್ತ ಕಪಾಟೊಂದರ ಮೇಲೆ ಎತ್ತಿಡಲ್ಪಟ್ಟಿವೆ.
ಆದರೂ, ವಶೀಕರಣ ಸುಪ್ತ ಸ್ಥಿತಿಯ ಕೆಳಗೆ, ಮರೆಯಲ್ಪಟ್ಟ ನೆನಪುಗಳು ಮೇಲೆ ಬರುವಂತೆ ವ್ಯಕ್ತಿಯ ಪ್ರಜ್ಞೆಯು ಬದಲಾಯಿಸಲ್ಪಡುತ್ತದೆ. ಕೆಲವು ಜನರು ಇವುಗಳನ್ನು ಪೂರ್ವ ಜೀವಿತದ ಒಂದು ಅಸ್ತಿತ್ವದೋಪಾದಿ ಅರ್ಥವಿವರಣೆ ಮಾಡುತ್ತಾರೆ, ಆದರೆ ನಾವು ತಾತ್ಕಾಲಿಕವಾಗಿ ಮರೆತುಹೋದಂತಹ ಪ್ರಸ್ತುತ ಜೀವನದ ಅನುಭವಗಳಿಗಿಂತ ಅವು ಹೆಚ್ಚಿನವುಗಳಾಗಿರುವುದಿಲ್ಲ.
ಆದರೂ, ಸ್ವಾಭಾವಿಕವಾದ ರೀತಿಯಲ್ಲಿ ವಿವರಿಸಲು ಹೆಚ್ಚು ಕಷ್ಟವಾಗಿರಬಹುದಾದ ಕೆಲವು ಸಂಗತಿಗಳಿವೆ. ಒಂದು ಉದಾಹರಣೆಯು ಏನೆಂದರೆ ವಶೀಕರಣ ಸುಪ್ತ ಸ್ಥಿತಿಯ ಪ್ರಭಾವದ ಕೆಳಗೆ ಒಬ್ಬ ವ್ಯಕ್ತಿಯು ಬೇರೊಂದು “ಭಾಷೆ”ಯನ್ನು ಮಾತಾಡಲು ಆರಂಭಿಸುತ್ತಾನೆ. ಕೆಲವೊಮ್ಮೆ ಭಾಷೆಯು ಗ್ರಹಿಸಬಹುದಾದದ್ದಾಗಿರುತ್ತದೆ, ಆದರೆ ಅನೇಕ ವೇಳೆ ಅದು ಹಾಗಿರುವುದಿಲ್ಲ. ಆ ವ್ಯಕ್ತಿಯು ತನ್ನ ಪೂರ್ವ ಜೀವಿತದಲ್ಲಿ ಮಾತಾಡಿದ ಭಾಷೆಯು ಇದಾಗಿದೆಯೆಂದು ಪುನರವತಾರದಲ್ಲಿ ನಂಬಿಕೆಯಿಡುವ ಜನರು ಹೇಳಬಹುದು.
ಆದರೂ, ಜನರು ರಹಸ್ಯಾರ್ಥವುಳ್ಳ ಅಥವಾ ಧಾರ್ಮಿಕ ಭಾವಾವೇಶದ ಒಂದು ಸ್ಥಿತಿಯಲ್ಲಿರುವಾಗಲೂ ಅನ್ಯಭಾಷೆಗಳೆಂದು ಹೇಳಲ್ಪಡುವ ಭಾಷೆಗಳಲ್ಲಿ ಮಾತಾಡುವುದು ಸಂಭವಿಸುತ್ತದೆ. ಒಂದು ಪೂರ್ವ ಜೀವಿತದೊಂದಿಗೆ ಅದು ಸಂಬಂಧವನ್ನು ಹೊಂದಿಲ್ಲ, ಆದರೆ ಪ್ರಸ್ತುತ ಜೀವಿತದಲ್ಲಿ ಯಾವುದೊ ಅದೃಶ್ಯ ಶಕ್ತಿಯ ಮೂಲಕ ತಾವು ಪ್ರಭಾವಿಸಲ್ಪಡುತ್ತಿದ್ದೇವೆಂದು, ಅಂತಹ ಅನುಭವಗಳನ್ನು ಪಡೆದಿರುವವರು ಮನಗಾಣುತ್ತಾರೆ.
ಈ ಶಕ್ತಿಯು ಯಾವುದಾಗಿದೆ ಎಂಬುದರ ಕುರಿತು ಅಭಿಪ್ರಾಯಗಳು ಭಿನ್ನ ಭಿನ್ನವಾಗಿವೆ. ಫೌಂಟೆನ್ ಟ್ರಸ್ಟ್ ಮತ್ತು ದ ಚರ್ಚ್ ಆಫ್ ಇಂಗ್ಲೆಂಡ್ ಎವ್ಯಾಂಜೆಲಿಕಲ್ ಕೌನ್ಸಿಲ್ನ ಮೂಲಕ ಮಾಡಲ್ಪಟ್ಟ ಕೂಡುಘೋಷಣೆಯೊಂದರಲ್ಲಿ, ಅನ್ಯಭಾಷೆಗಳಲ್ಲಿ ಮಾತಾಡುವುದರ ಕುರಿತು ಹೀಗೆ ವ್ಯಕ್ತಪಡಿಸಲ್ಪಟ್ಟಿತ್ತು: “ಮಾಂತ್ರಿಕ/ಪೈಶಾಚಿಕ ಪ್ರಭಾವದ ಕೆಳಗೆ ತದ್ರೀತಿಯ ಸಂಗತಿಯು ಸಂಭವಿಸಬಲ್ಲದೆಂದು ಸಹ ನಾವು ಅರಿವುಳ್ಳವರಾಗಿದ್ದೇವೆ.” ಹೀಗೆ ನಾವು ಪೂರ್ವ ಜೀವಿತವೊಂದನ್ನು ಜೀವಿಸಿದ್ದೇವೆಂಬುದಕ್ಕೆ ಅಂತಹ ಸಂಗತಿಯು ರುಜುವಾತಾಗಿವೆಯೆಂದು ಭಾವಿಸುವುದು, ಸುಳ್ಳು ತೀರ್ಮಾನವೊಂದಕ್ಕೆ ಧುಮುಕಿದಂತಾಗುವುದು.
ಮರಣ ದ್ವಾರಾನುಭವಗಳು
ಹಾಗಾದರೆ, ತಾವು ಅನುಭವಿಸಿದ್ದೇವೆಂದು ಜನರು ಹೇಳುವ ಮರಣ ದ್ವಾರಾನುಭವಗಳ ಕುರಿತೇನು? ಶರೀರವು ಮರಣಪಟ್ಟ ಬಳಿಕ ಜೀವಿಸುವ ಒಂದು ಆತ್ಮವು ವ್ಯಕ್ತಿಯೊಬ್ಬನಿಗಿದೆಯೆಂದು ಕೆಲವರ ಮೂಲಕ ಇವುಗಳು ಅರ್ಥವಿವರಣೆ ಮಾಡಲ್ಪಟ್ಟಿವೆ. ಆದರೆ ಅಂತಹ ಅನುಭವಗಳು ಅನೇಕ ನೈಜ ವಿಧಾನಗಳಲ್ಲಿ ಇನ್ನೂ ಹೆಚ್ಚು ಉತ್ತಮವಾಗಿ ವಿವರಿಸಲ್ಪಡುತ್ತವೆ.
ಸೀಆನ್ಸ್ ಎ ವೀ ಎಂಬ ಫ್ರೆಂಚ್ ವೈಜ್ಞಾನಿಕ ಪತ್ರಿಕೆಯ ಮಾರ್ಚ್ 1991ರ ಸಂಚಿಕೆಯಲ್ಲಿ, ಮರಣ ದ್ವಾರಾನುಭವಗಳ ಬೇರೆ ಬೇರೆ ಹಂತಗಳು, ಬಹುಕಾಲದಿಂದ ತಿಳಿದಿದ್ದಂತೆ “ಮನೋವಿಕಲ್ಪದ ಒಂದು ಸಾರ್ವತ್ರಿಕ ಮೂಲರೂಪ” ಎಂದು ಕರೆಯಲ್ಪಟ್ಟಿವೆ. ತದ್ರೀತಿಯ ಅನುಭವಗಳು ಮರಣ ದ್ವಾರದ ಸನ್ನಿವೇಶಗಳಲ್ಲಿರುವವರಿಗೆ ಮಾತ್ರ ಸೀಮಿತಗೊಳಿಸಲ್ಪಟ್ಟಿರುವುದಿಲ್ಲ. “ಆಯಾಸ, ಜ್ವರ, ಅಪಸ್ಮಾರದ ಆಘಾತ, ಅಮಲೌಷಧ ದುರುಪಯೋಗ”ದ ಸಂಬಂಧವಾಗಿ ಸಹ ಅವು ಸಂಭವಿಸಬಲ್ಲವು.
ಸ್ಥಾನಿಕ ಅರಿವಳಿಕೆ ಕೆಳಗಿದ್ದ ಮೂರ್ಛೆ ರೋಗಿಗಳ ಮೇಲೆ ಚಿಕಿತ್ಸೆ ನಡೆಸಿದ ನರಶಸ್ತ್ರಚಿಕಿತ್ಸಾ ಪರಿಶೋಧಕರಾದ ವೈಲ್ಡರ್ ಪೆನ್ಫಿಲ್ಡ್ರು, ಆಸಕ್ತಿಭರಿತವಾದ ಆವಿಷ್ಕಾರವನ್ನು ಮಾಡಿದರು. ವಿದ್ಯುತ್ ವಾಹಕದಿಂದ ಮಿದುಳಿನ ವಿವಿಧ ಭಾಗಗಳನ್ನು ಪ್ರಚೋದಿಸುವ ಮೂಲಕ, ರೋಗಿಯು ತನ್ನ ಸ್ವಂತ ಶರೀರದಿಂದ ಹೊರಗಿರುವ, ಒಂದು ಸುರಂಗದ ಮೂಲಕ ಪ್ರಯಾಣಿಸುವ ಮತ್ತು ಸತ್ತ ಸಂಬಂಧಿಕರನ್ನು ಸಂಧಿಸುವ ಅನುಭವ ಅವನಿಗೆ ಉಂಟಾಗುವಂತೆ ಅವರು ಮಾಡಬಹುದಿತ್ತೆಂದು ಅವರು ಕಂಡುಕೊಂಡರು.
ಈ ವಿಷಯದ ಕುರಿತು ಮರಣ ದ್ವಾರಾನುಭವಗಳನ್ನು ಪಡೆದ ಮಕ್ಕಳು ತಮ್ಮ ಸತ್ತ ಸಂಬಂಧಿಕರನ್ನಲ್ಲ, ಆದರೆ ಶಾಲಾಸ್ನೇಹಿತರು ಮತ್ತು ಅಧ್ಯಾಪಕರನ್ನು—ಇನ್ನೂ ಜೀವಂತರಾಗಿರುವವರು—ಸಂಧಿಸಿದರೆಂಬುದು ಆಸಕ್ತಿಕರವಾದ ವಿವರಣೆಯಾಗಿದೆ. ಅಂತಹ ಅನುಭವಗಳು ನಿರ್ದಿಷ್ಟವಾದ ಒಂದು ಸಾಂಸ್ಕೃತಿಕ ಸಂಬಂಧವನ್ನು ಹೊಂದಿವೆ ಎಂಬುದನ್ನು ಇದು ಸೂಚಿಸುತ್ತದೆ. ಅನುಭವಿಸಿರುವಂತಹದ್ದಕ್ಕೆ ಮರಣದ ತರುವಾಯದ ಯಾವುದೋ ವಿಷಯದೊಂದಿಗಲ್ಲ, ಪ್ರಸ್ತುತ ಜೀವಿತದೊಂದಿಗೆ ಸಂಬಂಧವಿದೆ.
ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಪತ್ರಿಕೆಯಲ್ಲಿ ಡಾ. ರಿಚರ್ಡ್ ಬ್ಲಾಕರ್ ಬರೆಯುವುದು: “ಸಾಯುತ್ತಿರುವುದು, ಅಥವಾ ಅಪಾಯಕ್ಕೀಡಾದ ಶಾರೀರಿಕ ಸನ್ನಿವೇಶವನ್ನು ಅನುಭವಿಸುವುದು ಒಂದು ಪ್ರಕ್ರಿಯೆಯಾಗಿದೆ; ಮರಣವು ಒಂದು ಸ್ಥಿತಿಯಾಗಿದೆ.” ಉದಾಹರಣೆಗೆ, ಪ್ರಥಮ ಬಾರಿಗೆ ಅಮೆರಿಕದಿಂದ ಯೂರೋಪಿಗೆ ವಿಮಾನಯಾನ ಮಾಡುತ್ತಿರುವ ಒಬ್ಬ ವ್ಯಕ್ತಿಯ ಕುರಿತು ಬ್ಲಾಕರ್ ಮಾತಾಡುತ್ತಾರೆ. “ಯೂರೋಪಿನಲ್ಲಿ [ಇರುವಂತಹದ್ದೇ] ವಿಮಾನಯಾನವು ಇದಾಗಿರುವುದಿಲ್ಲ,” ಅವರು ಬರೆಯುತ್ತಾರೆ. ಪ್ರವಾಸಿಗನು ಯೂರೋಪಿಗೆ ಹೊರಡುತ್ತಾನೆ, ಆದರೆ ಅವನ ವಿಮಾನವು ತಿರುಗಿ, ಆರಂಭವಾದ ಕೆಲವು ನಿಮಿಷಗಳ ಬಳಿಕ ಹಿಂದಿರುಗುವುದಾದರೆ, ಅವನು ಜನರಿಗೆ ಯೂರೋಪಿನ ಕುರಿತು ಹೆಚ್ಚನ್ನು ಹೇಳಲಾರನು, ಹಾಗೆಯೇ ಪ್ರಜ್ಞಾಹೀನ ಸ್ಥಿತಿಯಿಂದ ಎಚ್ಚರಗೊಳ್ಳುತ್ತಿರುವ ಯಾವನಾದರೂ ಮರಣದ ಕುರಿತು ಯಾರಿಗಾದರೂ ಹೇಳುವುದು ಅಸಾಧ್ಯ.
ಮರಣದ ದ್ವಾರಕ್ಕೆ ಹೋದವರು, ಇನ್ನೊಂದು ಮಾತಿನಲ್ಲಿ, ನಿಜವಾಗಿಯೂ ಸತ್ತಿಲ್ಲ. ಅವರಿನ್ನೂ ಜೀವಂತರಾಗಿರುವಾಗಲೇ ಏನನ್ನೋ ಅವರು ಅನುಭವಿಸಿದ್ದಾರೆ. ಮತ್ತು ತನ್ನ ಮರಣದ ಕೆಲವು ಕ್ಷಣಗಳ ಮೊದಲು ಸಹ ವ್ಯಕ್ತಿಯೊಬ್ಬನು ಇನ್ನೂ ಜೀವಂತನಾಗಿರುತ್ತಾನೆ. ಅವರು ಮರಣವನ್ನು ಸಮೀಪಿಸಿದ್ದಾರೆ ಆದರೆ ಇನ್ನೂ ಮರಣಪಟ್ಟಿಲ್ಲ.
ಯಾರ ಹೃದಯವು ಅಲ್ಪಾವಧಿಯ ವರೆಗೆ ಸಗ್ಥಿತಗೊಂಡ ಮೇಲೆ ಪುನಶ್ಚೈತನ್ಯಗೊಳಿಸಲ್ಪಟ್ಟಿತೋ ಅಂತಹವರು ಸಹ, ಅವರನ್ನು “ಸತ್ತವರು” ಎಂದು ಎಣಿಸಸಾಧ್ಯವಿದ್ದ ಆ ಕ್ಷಣಗಳಲ್ಲಿ ನಡೆದ ಯಾವುದನ್ನೂ ನಿಜವಾಗಿಯೂ ಜ್ಞಾಪಿಸಿಕೊಳ್ಳಸಾಧ್ಯವಿಲ್ಲ. ಅವರು ಏನನ್ನಾದರೂ ಜ್ಞಾಪಿಸಿಕೊಳ್ಳುವುದಾದರೆ, ಆ ಅಲ್ಪ ವಿಚ್ಛಿನ್ನಾವಧಿಯನ್ನು ಸಮೀಪಿಸುವಾಗ ಸಂಭವಿಸಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆಯೇ ಹೊರತು ಅದು ಸಂಭವಿಸಿದಾಗ ನಡೆದದ್ದನ್ನಲ್ಲ.
ನಕಾರಾತ್ಮಕವಾದ ಅನುಭವಗಳು ಸಹ ಸಂಭವಿಸುತ್ತವೆಯೆಂದು ತಿಳಿದಿರುವುದಾದರೂ, ಪ್ರಕಾಶಿಸಲ್ಪಟ್ಟ ಮರಣ ದ್ವಾರಾನುಭವಗಳು ಬಹುಮಟ್ಟಿಗೆ ಯಾವಾಗಲೂ ಸಕಾರಾತ್ಮಕವಾಗಿ ವರ್ಣಿಸಲ್ಪಟ್ಟಿವೆ. ಫ್ರೆಂಚ್ ಮನೋವಿಶ್ಲೇಷಣ ಶಾಸ್ತ್ರಜ್ಞೆ ಕಾತರಿನ್ ಲಮೆರ್ ಇದನ್ನು ಈ ರೀತಿಯಲ್ಲಿ ವಿವರಿಸುತ್ತಾರೆ: “IANDS [ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ನೀಯರ್ ಡೆತ್ ಸಡ್ಟೀಸ್] ಮೂಲಕ ವಿಧಿಸಲ್ಪಟ್ಟ ನಮೂನೆಗೆ ತಕ್ಕಂತಹ [ಮರಣ ದ್ವಾರಾನುಭವ]ವನ್ನು ಅನುಭವಿಸದಿರುವವರಿಗೆ ತಮ್ಮ ಅನುಭವವನ್ನು ಹೇಳುವುದರಲ್ಲಿ ಆಸಕ್ತಿಯಿರುವುದಿಲ್ಲ.”
ನೆನಪು ಇಲ್ಲ
ನಾವು ಇಂದು ಜೀವಿಸುತ್ತಿರುವುದಕ್ಕಿಂತಲೂ ಬೇರೊಂದು ಜೀವಿತದ—ಒಂದು ಪೂರ್ವ ಜೀವಿತವಾಗಲಿ ಮರಣಕ್ಕೆ ಹೊರತಾದ ಒಂದು ಜೀವಿತವಾಗಲಿ—ಅನುಭವವು ನಮಗಿಲ್ಲವೆಂಬುದು ಸತ್ಯಾಂಶವಾಗಿದೆ. ಆದುದರಿಂದ, ವಾಸ್ತವವಾಗಿ ನಾವು ಜೀವಿಸಿದ್ದ ಜೀವಿತದ ಹೊರತು ಬೇರಾವುದರ ನ್ಯಾಯಸಮ್ಮತವಾದ ಸ್ಮರಣೆಗಳು ನಮಗಿರುವುದಿಲ್ಲ.
ನಮ್ಮ ಸನ್ನಿವೇಶವನ್ನು ಉತ್ತಮಗೊಳಿಸಲು ಒಂದು ಹೊಸ ಅವಕಾಶವನ್ನು ಪಡೆದುಕೊಳ್ಳುವುದೇ ಪುನಃ ಜನಿಸುವುದರ ನಿಜವಾದ ಅರ್ಥವಾಗಿದೆಯೆಂದು ಪುನರವತಾರವನ್ನು ನಂಬುವವರು ಹೇಳುತ್ತಾರೆ. ನಿಜವಾಗಿಯೂ ನಾವು ಪೂರ್ವ ಜೀವಿತಗಳನ್ನು ಜೀವಿಸಿರುವುದಾದರೆ, ಆದರೂ ಅವುಗಳನ್ನು ಮರೆತಿರುವುದಾದರೆ, ನೆನಪಿನ ಅಂತಹ ಒಂದು ನಷ್ಟವು ಭಾರಿ ಶಾರೀರಿಕ ದೌರ್ಬಲ್ಯವನ್ನು ನಿಯೋಜಿಸುತ್ತದೆ. ನಾವು ಪ್ರಯೋಜನ ಗಳಿಸಸಾಧ್ಯವಾಗುವುದು ನಮ್ಮ ತಪ್ಪುಗಳನ್ನು ಜ್ಞಾಪಿಸಿಕೊಳ್ಳುವ ಮೂಲಕವೇ.
ಅಲ್ಲದೆ, ಪುನರವತಾರ ಚಿಕಿತ್ಸೆಯೆಂದು ಕರೆಯಲ್ಪಡುವುದನ್ನು ಸಮರ್ಥಿಸುವವರು, ನೀವು ವಶೀಕರಣ ಸುಪ್ತ ಸ್ಥಿತಿಯ ಮೂಲಕ ನಿಮ್ಮ ಪೂರ್ವದ ಜೀವಿತಗಳನ್ನು ನೀವು ಸ್ಮರಿಸಸಾಧ್ಯವಾದರೆ, ಪ್ರಸ್ತುತ ಸಮಸ್ಯೆಗಳನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಬಲ್ಲಿರಿ ಎಂದು ಅಭಿಪ್ರಯಿಸುತ್ತಾರೆ. ಯಾವುದನ್ನೊ ಉತ್ತಮಗೊಳಿಸಲು ನಾವು ಪುನಃ ಜನಿಸಿದ್ದೇವೆ, ಎಂದು ಪುನರವತಾರದ ತತ್ವವು ಹೇಳುತ್ತದೆ. ಆದರೂ ಅದೇನಾಗಿದೆಯೆಂಬುದನ್ನು ನಾವು ಮರೆತಿದ್ದೇವೆ.
ಪ್ರಸ್ತುತ ಜೀವಿತದಲ್ಲಿ ನೆನಪಿನ ನಷ್ಟವು ಒಂದು ಶಾರೀರಿಕ ದೌರ್ಬಲ್ಯವಾಗಿ ಪರಿಗಣಿಸಲ್ಪಡುತ್ತದೆ. ಈ ವಿಷಯದಲ್ಲಿಯೂ ಇದು ತದ್ರೀತಿಯದ್ದಾಗಿರಲೇಬೇಕು. ಕೇವಲ ಒಳ್ಳೇ ಜನರು ಮಾತ್ರ ಮಾನವರಾಗಿ ಪುನರ್ಜನ್ಮ ಹೊಂದುವುದರಿಂದ, ಅಂತಹ ಮರೆಯುವಿಕೆಯು ಗಣ್ಯವಾದುದಲ್ಲ ಎಂದು ಆಕ್ಷೇಪಣೆ ಎತ್ತುವುದು, ಇಂದೆಂದಿಗಿಂತಲೂ ಹೆಚ್ಚಾಗಿ ಲೋಕರಂಗವನ್ನು ದುಷ್ಟತನವು ಪ್ರಭುತ್ವ ನಡೆಸುತ್ತಿರುವ ಈ ಆಧುನಿಕ ಸಮಯಗಳಲ್ಲಿ ಒಂದು ತರ್ಕಬದ್ಧವಾದ ಸಮರ್ಥನೆಯಾಗಿಲ್ಲ. ಒಳ್ಳೇ ಜನರು ಮಾತ್ರ ಮಾನವರಾಗಿ ಪುನರ್ಜನ್ಮ ಪಡೆಯುವುದಾದರೆ, ದುಷ್ಟ ಜನರೆಲ್ಲರೂ ಎಲ್ಲಿಂದ ಬಂದರು? ದುಷ್ಟ ಜನರು ತೀರ ಕಡಿಮೆಯಾಗಿರಬಾರದಿತ್ತೊ? ಸತ್ಯವೇನಂದರೆ: ಯಾವನೂ—ಅವನು ಒಳ್ಳೆಯವನಾಗಲಿ, ಕೆಟ್ಟವನಾಗಲಿ—ಮನುಷ್ಯನಾಗಿಯೋ ಇನ್ನಾವುದಾಗಿಯೋ, ಇನ್ನೊಂದು ಜೀವಿತವನ್ನು ಆರಂಭಿಸಲಿಕ್ಕಾಗಿ ಎಂದಿಗೂ ಪುನರವತರಿಸುವುದಿಲ್ಲ.
ಹಾಗಿದ್ದರೂ, ‘ಪುನರವತಾರವು ಬೈಬಲಿನ ಒಂದು ಬೋಧನೆಯಾಗಿರುವುದಿಲ್ಲವೊ?’ ಎಂದು ನೀವು ಕೇಳಬಹುದು. ಮುಂದಿನ ಲೇಖನದಲ್ಲಿ ಈ ಪ್ರಶ್ನೆಯನ್ನು ನಾವು ಪರಿಗಣಿಸೋಣ. (g94 6/8)
[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಮ್ಮ ಉಪಪ್ರಜ್ಞೆಯ ಮನಸ್ಸು ಎತ್ತಿಡಲ್ಪಟ್ಟಿರುವುದಾದರೂ ತದನಂತರ ಜ್ಞಾಪಕಕ್ಕೆ ತರಬಹುದಾದ ಸಮಾಚಾರದ ಒಂದು ಗ್ರಂಥಾಲಯದಂತಿದೆ
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಮರಣವು ಒಂದು ಸ್ಥಿತಿಯಾಗಿದೆ,” ಒಂದು ಪ್ರಕ್ರಿಯೆಯಲ್ಲ.—ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ನಲ್ಲಿ ಡಾ. ರಿಚರ್ಡ್ ಬ್ಲಾಕರ್