ಪುನರವತಾರವು ಜೀವಿತದ ರಹಸ್ಯಗಳಿಗೆ ಕೀಲಿ ಕೈಯಾಗಿದೆಯೊ?
ಈ ಹಿಂದೆ ನೀವು ಜೀವಿಸಿದ್ದೀರೊ?
ನೀವು ಮರಣಹೊಂದಿದ ಬಳಿಕ ಜೀವದ ಯಾವುದೊ ಒಂದು ರೂಪದಲ್ಲಿ ನೀವು ಪುನಃ ಜೀವಿಸುವಿರೊ?
ಈ ಪ್ರಶ್ನೆಗಳು ಪುನರವತಾರದ ಸಿದ್ಧಾಂತವನ್ನು ನಿಮ್ಮ ಮನಸ್ಸಿಗೆ ತರಬಹುದು.
ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕವು “ಪುನರವತಾರ”ವನ್ನು ಈ ರೀತಿಯಲ್ಲಿ ವಿಶದೀಕರಿಸುತ್ತದೆ: “ಆತ್ಮದ ಒಂದು ಅಥವಾ ಹೆಚ್ಚು ಅನುಕ್ರಮದ ಅಸ್ತಿತ್ವಗಳ—ಬಹುಶಃ ಮನುಷ್ಯ, ಪ್ರಾಣಿ, ಅಥವಾ ಕೆಲವೊಂದು ಸಂದರ್ಭಗಳಲ್ಲಿ ಸಸ್ಯಗಳಾಗಿ—ಪುನರ್ಜನ್ಮದಲ್ಲಿ ಒಂದು ನಂಬಿಕೆ.”
ಪೌರ್ವಾತ್ಯ ಧರ್ಮಗಳಲ್ಲಿ, ವಿಶಿಷ್ಟವಾಗಿ ಬೌದ್ಧ ಧರ್ಮ, ಹಿಂದೂ ಧರ್ಮ, ಜೈನ ಮತ, ಮತ್ತು ಸಿಕ್ ಮತಗಳಂತಹ ಭಾರತದಲ್ಲಿ ಉದ್ಭವಿಸಿದ ಧರ್ಮಗಳಲ್ಲಿ ಪುನರವತಾರವು ಒಂದು ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಉದಾಹರಣೆಗೆ, ಭಾರತದ ಹಿಂದೂಗಳ ನಡುವೆ, ಜೀವಿತವು ಮರಣ ಮತ್ತು ಪುನರ್ಜನ್ಮಗಳ ಸಂತತವಾದ ಒಂದು ಚಕ್ರವಾಗಿ ಪರಿಗಣಿಸಲ್ಪಡುತ್ತದೆ.
ಆದರೂ, ಹೆಚ್ಚು ಇತ್ತೀಚೆಗಿನ ಸಮಯಗಳಲ್ಲಿ, ಹೆಚ್ಚಿನ ಸಂಖ್ಯೆಯ ಯುವಜನರನ್ನು ಒಳಗೊಂಡು ಪಶ್ಚಿಮಾರ್ಧ ಗೋಳದಲ್ಲಿ ಜೀವಿಸುತ್ತಿರುವ ಅನೇಕರನ್ನು ಪುನರವತಾರದ ಕಲ್ಪನೆಯು ಆಕರ್ಷಿಸಿದೆ. ಕೆನಡದ ಸಂಡೇ ಸ್ಟಾರ್ನಲ್ಲಿ ಬರೆಯುವ ಒಬ್ಬ ಅಂಕಣಕಾರನಿಗನುಸಾರವಾಗಿ, ಈ ಅತ್ಯಾಸಕ್ತಿಗೆ ಕಾರಣವು “ನಮ್ಮ ಪಾಶ್ಚಿಮಾತ್ಯ ಸಮಾಜದ ಮೇಲೆ ಪೌರ್ವಾತ್ಯ ಧಾರ್ಮಿಕ ಕಲ್ಪನೆಗಳ, 1960ಗಳಲ್ಲಿ ಪ್ರಾರಂಭವಾದ ಸಂಘಟ್ಟನೆಯ ಫಲಿತಾಂಶವಾಗಿದೆ.”
ಕೆಲವು ಪ್ರಸಿದ್ಧ ವ್ಯಕ್ತಿಗಳು ತಮ್ಮನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿಕೊಂಡಿರುವುದು ಮತ್ತು ತಾವು ಒಂದು ಅಥವಾ ಹೆಚ್ಚು ಹಿಂದಣ ಜೀವಿತಗಳನ್ನು ಜೀವಿಸಿದ್ದೇವೆಂದು ಅವರು ಗಂಭೀರವಾಗಿ ಪ್ರತಿಪಾದಿಸಿರುವುದು ಪುನರವತಾರದಲ್ಲಿ ಆಸಕ್ತಿಗೆ ಇನ್ನೊಂದು ಕಾರಣವಾಗಿದೆ. ಹಾಗೂ, ವೈದ್ಯರುಗಳು ಮತ್ತು ಅಧ್ಯಾಪಕರಂತಹ ಅನೇಕ ವೃತ್ತಿಪರ ಜನರಿಗಿರುವಂತೆ, ರೇಡಿಯೊ, ಟಿವಿ, ಪತ್ರಿಕೆಗಳು, ಮತ್ತು ಇತರ ವಾರ್ತಾ ಮಾಧ್ಯಮಗಳು ಪುನರವತಾರದಲ್ಲಿ ಅಭಿರುಚಿಯನ್ನು ತೋರಿಸಿವೆ.
ಇದೆಲ್ಲವೂ ಅಧಿಕ ಕುತೂಹಲವನ್ನು ಪ್ರಚೋದಿಸಿದೆ. ಹೀಗೆ, ಕೆಲವು ಅಭಿಪ್ರಾಯ ದಾಖಲೆಗಳಿಗನುಸಾರ, ಕೆನಡ ಮತ್ತು ಅಮೆರಿಕದಲ್ಲಿ ಸುಮಾರು ನಾಲ್ಕನೇ ಒಂದು ಭಾಗ ಜನರು ಪುನರವತಾರದ ಕುರಿತು ಸ್ವಲ್ಪ ಸಮ್ಮತಿಯನ್ನು ತೋರ್ಪಡಿಸಿದ್ದಾರೆ.
ಪೂರ್ವ ಜೀವಿತದ ಅನುಭವಗಳ ಪ್ರತಿಪಾದನೆಗಳು
ಕಾಲ ಪ್ರವಾಹದ ಹಿಂದೆ ತಾನು ಅನೇಕ “ಪ್ರಯಾಣಗಳನ್ನು” ಮಾಡಿದ್ದೇನೆಂದು, ನಟಿ ಶರ್ಲಿ ಮಕ್ಲೇನ್ ಲೇಡೀಸ್ ಹೋಮ್ ಜರ್ನಲ್ (ಇಂಗ್ಲಿಷ್)ನಲ್ಲಿ ಫಿಲಿಸ್ ಬೆಟ್ಯಾಲ್ನ ಪತ್ರಿಕಾ ಸಂದರ್ಶನದಲ್ಲಿ ಪ್ರತಿಪಾದಿಸಿದಳು. “ನನ್ನ ಪೂರ್ವ ಜೀವಿತಗಳಲ್ಲಿ ಅನೇಕವನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ—ಕೆಲವೊಮ್ಮೆ ನಾನು ಗಂಡಾಗಿದ್ದೆ, ಬೇರೆ ಸಮಯಗಳಲ್ಲಿ ಹೆಣ್ಣಾಗಿದ್ದೆ,” ಎಂದು ಅವಳು ಹೇಳಿದಳು.
ತಮ್ಮ ವಿದ್ಯಾರ್ಥಿಗಳು ಮತ್ತು ಇತರರ ನಡುವೆ ತಾವು ನಡೆಸಿದ ಪ್ರಯೋಗಗಳನ್ನು, ಡಾ. ರೇಮಂಡ್ ಮೂಡಿ ಕಮಿಂಗ್ ಬ್ಯಾಕ್ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ. ಅವರನ್ನು ವಶೀಕರಣದ ಸುಪ್ತ ಸ್ಥಿತಿಯ ಮೂಲಕ ಅವರ ಜನನದ ಮುಂಚಿನ ಸಮಯಕ್ಕೆ ಹಿಂದೆ ಕರೆದೊಯ್ದರು ಮತ್ತು ತಮ್ಮ ಪೂರ್ವ ಜೀವಿತಗಳ ಸ್ಮರಣೆಗಳು ತಮಗೆ ಬಂದವೆಂದು ಅವರು ಪ್ರತಿಪಾದಿಸಿದರೆಂದು ಅವರು ಹೇಳುತ್ತಾರೆ. ಎಸ್ಕಿಮೊ ಜನಸಮುದಾಯದಲ್ಲಿ ಎಸ್ಕಿಮೊನಂತೆ ತಾನು ಜೀವಿಸಿದ್ದೆನೆಂದು ಒಬ್ಬ ವ್ಯಕ್ತಿಯು ಹೇಳಿದನು. ಸಾವಿರಾರು ವರ್ಷಗಳ ಹಿಂದೆ ‘ಶಿಲಾ ಯುಗ’ದ ಸಮಯದಲ್ಲಿ ತಾನು ಜೀವಿಸಿದ್ದೆನೆಂದು ಇನ್ನೊಬ್ಬನು ಉದ್ಘೋಷಿಸಿದನು.
ತಾವು ಒಂಬತ್ತು ಪೂರ್ವ ಜೀವಿತಗಳನ್ನು ಜೀವಿಸಿದ್ದರೆಂದು ಡಾ. ಮೂಡಿ ಸ್ವತಃ ಪ್ರತಿಪಾದಿಸಿದರು. ಒಂದು ರೀತಿಯ “ಚರಿತ್ರಪೂರ್ವಕಾಲದ ಮಾನವ ರೂಪಾಂತರ”ದೋಪಾದಿ ಮರದ ತುತ್ತತುದಿಗಳಲ್ಲಿ ಒಂದು ಜೀವಿತದಿಂದ, ರೋಮನ್ ಚಕ್ರಾಧಿಪತ್ಯದ ದಿನಗಳಲ್ಲಿ ಒಂದು ಜೀವಿತಕ್ಕೆ ಇದು ಬದಲಾಯಿತು, ಆಗ ತಾವು ಅಖಾಡದಲ್ಲಿ ಸಿಂಹವೊಂದರಿಂದ ಆಕ್ರಮಿಸಲ್ಪಟ್ಟು, ಕೊಲ್ಲಲ್ಪಟ್ಟರೆಂದು ಅವರು ಹೇಳಿದರು.
ಅನ್ವೇಷಣಶೀಲ ಜನರನ್ನು ತಮ್ಮ ಜನನಕ್ಕೆ ಮುಂಚಿನ ಅನಿಶ್ಚಿತ ಕಾಲವೊಂದಕ್ಕೆ ಹಿಂದೆ ಕೊಂಡೊಯ್ಯಲಿಕ್ಕಾಗಿ ವಶೀಕರಣ ಸ್ಥಿತಿಯ ಉಪಯೋಗವು ಇತರರಿಗೆ ಪ್ರಯೋಜನಕರವಾದದ್ದಾಗಿ ಸಹ ವಿವರಿಸಲ್ಪಟ್ಟಿದೆ. ಭಾವನಾತ್ಮಕ ಅವ್ಯವಸ್ಥೆಗಳಿಗೆ ಚಿಕಿತ್ಸೆ ನಡೆಸುವುದರಲ್ಲಿ ಇದನ್ನು ವೈದ್ಯರುಗಳು ಉಪಯೋಗಿಸಿದ್ದಾರೆ. ಪೂರ್ವ ಜೀವಿತವೊಂದರಲ್ಲಿ ಯಾವುದೋ ಘಟನೆಗೆ ಸಮಸ್ಯೆಯನ್ನು ಹತ್ತೆಹಚ್ಚುವ ಮೂಲಕ, ರಹಸ್ಯವಾದ ಭೀತಿಗಳು ಉಪಶಮನಗೊಳಿಸಲ್ಪಟ್ಟಿವೆಯೆಂದು ಪ್ರತಿಪಾದಿಸಲಾಗಿದೆ. ಈ ಕಲ್ಪನೆಯು ಎಷ್ಟು ಸಮಂಜಸವಾಗಿದೆ?
ಮರಣ ಸಾಮೀಪ್ಯ ಅನುಭವಗಳನ್ನು ವಿವರಿಸುವುದು
ಕೆಲವು ಜನರಿಂದ ವಿವರಿಸಲ್ಪಟ್ಟ ಮರಣ ಸಾಮೀಪ್ಯ ಅನುಭವಗಳು, ಪುನರವತಾರದ ಕಲ್ಪನೆಯನ್ನು ಜನಪ್ರಿಯಗೊಳಿಸಲು ಉಪಯುಕ್ತವಾಗಿವೆ. ಲೈಫ್ ಆಫ್ಟರ್ ಲೈಫ್ (ಇಂಗ್ಲಿಷ್) ಪುಸ್ತಕದಲ್ಲಿ, ಸುಮಾರು 50 ಜನರ ಮರಣ ಸಾಮೀಪ್ಯ ಅನುಭವಗಳ ಕುರಿತು ತಮ್ಮ ಕಂಡುಹಿಡಿತಗಳನ್ನು ಡಾ. ಮೂಡಿ ವರದಿಮಾಡುತ್ತಾರೆ.
ಅವರ ಅನುಭವಗಳು ವಿಭಿನ್ನವಾಗಿರುವುದಾದರೂ, ಅವು ಒಂದು ಮಾದರಿಯನ್ನು ರೂಪಿಸುತ್ತವೆ ಎಂದು ಮೂಡಿ ಅಭಿಪ್ರಯಿಸುತ್ತಾರೆ. ದೀರ್ಘವಾದ, ಒಂದು ಕತ್ತಲೆಯ ಸುರಂಗ ಮಾರ್ಗದ ಮೂಲಕ ಪ್ರಯಾಣಿಸುವ ಅನಿಸಿಕೆಯು ಈ ಜನರಿಗಾಯಿತು. ತಮ್ಮ ದೇಹಗಳಿಂದ ಅವರು ಬೇರ್ಪಡಿಸಲ್ಪಟ್ಟು, ಸ್ವತಂತ್ರವಾಗಿ ತೇಲುತ್ತಿರುವಂತೆ ಅವರಿಗನಿಸಿತು. ಸುರಂಗದ ಮೂಲಕ ತೀರ ಹೆಚ್ಚು ಪ್ರಕಾಶಮಾನವಾದ ಒಂದು ಬೆಳಕಿನ ಕಡೆಗೆ ಅವರು ವೇಗವಾಗಿ ಚಲಿಸುತ್ತಿರುವುದನ್ನು ಅವರು ಗ್ರಹಿಸಿದರು, ಮತ್ತು ಸುರಂಗದ ಕೊನೆಯಲ್ಲಿ, ದೀರ್ಘ ಕಾಲದ ಹಿಂದೆ ಸತ್ತಂತಹ ಕುಟುಂಬ ಸದಸ್ಯರನ್ನು ಅವರು ಕಂಡರು. ಕೊನೆಯದಾಗಿ, ಅವರು ತಮ್ಮ ಸ್ವಂತ ಶರೀರಗಳಲ್ಲಿ ಎದ್ದರು. ಆದರೂ, ಎಲ್ಲರೂ ಈ ಹಂತಗಳಲ್ಲಿ ಪ್ರತಿಯೊಂದನ್ನೂ ಅನುಭವಿಸಲಿಲ್ಲ.
ಅಂತಹ ಅನುಭವಗಳು ಅವುಗಳನ್ನು ಪಡೆದುಕೊಂಡಿರುವವರ ಮೇಲೆ ಸಕಾರಾತ್ಮಕವಾದ ಪರಿಣಾಮವನ್ನು ಬೀರಿವೆಯೆಂದು ಪ್ರತಿಪಾದಿಸಲ್ಪಡುತ್ತದೆ. ಹಾಗಿರುವಲ್ಲಿ, ಅವರು ಮರಣದ ಕುರಿತಾದ ತಮ್ಮ ಭಯವನ್ನು ತೊರೆಯುವಂತೆ ಅದು ಅವರಿಗೆ ಸಹಾಯಮಾಡಬೇಕಿತ್ತು ಮತ್ತು ಜೀವಿತಕ್ಕೆ ಅರ್ಥವಿದೆಯೆಂಬ ಭರವಸೆಯನ್ನು ಅವರಿಗೆ ಕೊಡಬೇಕಿತ್ತು. ಆದರೆ ವಿಷಯವು ಯಾವಾಗಲೂ ಹಾಗಿರುವುದಿಲ್ಲ. ಅನೇಕರು ಮರಣಕ್ಕೆ ಹೆದರುವುದನ್ನು ಮುಂದುವರಿಸುತ್ತಾರೆ ಮತ್ತು ಜೀವಿತಕ್ಕೆ ನೈಜ ಅರ್ಥವಿರುವುದರಲ್ಲಿ ಭರವಸೆಯನ್ನು ಕಳೆದುಕೊಳ್ಳುತ್ತಾರೆ.
ಅಂತಹ ಅನುಭವಗಳಲ್ಲಿ ಮಾನವ ಆತ್ಮವು ಜೀವಿತದ ವಿವಿಧ ರೂಪಗಳಲ್ಲಿ ಪುನರ್ಜನ್ಮವನ್ನು ಪಡೆದಿದೆ ಎಂಬ ಕಲ್ಪನೆಗೆ ಆಧಾರವನ್ನು ತಾವು ಕಂಡುಕೊಳ್ಳುತ್ತೇವೆಂದು, ಪುನರವತಾರದಲ್ಲಿ ನಂಬಿಕೆಯಿಡುವವರು ಹೇಳುತ್ತಾರೆ. ಆದರೆ ಈ ಸಿದ್ಧಾಂತಕ್ಕೆ ಯಾವುದೇ ವಿಶ್ವಾಸಾರ್ಹತೆಯನ್ನು ನೀಡಸಾಧ್ಯವಿದೆಯೊ? ಪುನರವತಾರವು ಜೀವಿತದ ರಹಸ್ಯಗಳಿಗೆ ನಿಜವಾಗಿಯೂ ಕೀಲಿ ಕೈಯನ್ನು ಒದಗಿಸುತ್ತದೊ? ಈ ಹಿಂದೆ ನೀವು ಜೀವಿಸಿದ್ದೀರೊ? ನೀವು ಪುನಃ ಜೀವಿಸುವಿರೊ? ಮರಣದಲ್ಲಿ ದೇಹವನ್ನು ತ್ಯಜಿಸುವ ಒಂದು ಆತ್ಮವನ್ನು ಮಾನವರು ಹೊಂದಿದ್ದಾರೊ? ಎಂಬಂತಹ ಪ್ರಶ್ನೆಗಳಿಗೆ ನಾವು ಯಾವುದೇ ಉತ್ತರವನ್ನು ಕಂಡುಕೊಳ್ಳಬಲ್ಲೆವೊ? ಹಿಂಬಾಲಿಸುವ ಲೇಖನಗಳಲ್ಲಿ ಈ ಪ್ರಶ್ನೆಗಳು ಚರ್ಚಿಸಲ್ಪಡುವುವು. (g94 6/8)
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಪೌರ್ವಾತ್ಯ ಧರ್ಮಗಳಿಗೆ ಪುನರವತಾರವು ಮೂಲಭೂತವಾಗಿದೆ
[ಪುಟ 4 ರಲ್ಲಿರುವ ಚಿತ್ರ]
ಹಿಂದೂ ಮತದ ಜೀವನ ಚಕ್ರ