ನೀವು ಪುನರ್ಜನ್ಮವನ್ನು ನಂಬುತ್ತೀರೊ?
“ನೀನು ಇಲ್ಲಿ ಭಾರತದಲ್ಲಿ ಬೆಳೆಯುತ್ತಿದ್ದಾಗ, ನೀನು ಪ್ರೀತಿಸುತ್ತಿದ್ದ ಆ ನೆರೆಮನೆಯ ಹುಡುಗಿ ನಿನಗೆ ನೆನಪಿದೆಯೊ?” ಅಮೆರಿಕದಲ್ಲಿ ವಿಶ್ವವಿದ್ಯಾನಿಲಯದ ಒಬ್ಬ ವಿದ್ಯಾರ್ಥಿಯಾಗಿದ್ದ ತನ್ನ ಮಗನಿಗೆ ಮುಕುಂದ್ಭಾಯ್ ಹೀಗೆ ಬರೆದರು. “ಕೆಲವೇ ವಾರಗಳಲ್ಲಿ ಅವಳ ಮದುವೆಯಾಗಲಿದೆ. ನಿನಗೆ ಈ ವಿಷಯ ತಿಳಿಯತಕ್ಕದ್ದೆಂದು ನಾನು ನೆನಸಿದೆ.”
ಆ ತಂದೆಯು ತನ್ನ ಮಗನೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡದ್ದೇಕೆ? ಎಷ್ಟೆಂದರೂ, ವರ್ಷಗಳ ಹಿಂದೆ ಮುಕುಂದ್ಭಾಯ್ ಆ ಹದಿವಯಸ್ಕ ಪ್ರಣಯವನ್ನು ತ್ವರಿತವಾಗಿ ಕೊನೆಗಾಣಿಸಿದ್ದನು. ಅದಲ್ಲದೆ, ಆ ಮಗನು ಆರು ವರ್ಷಗಳಿಂದ ಅಮೆರಿಕದಲ್ಲಿ ಉಚ್ಚ ಶಿಕ್ಷಣವನ್ನು ಬೆನ್ನಟ್ಟುತ್ತಿದ್ದನು. ಆ ಸಮಯದಲ್ಲಿ ಅವನು ಆ ಹುಡುಗಿಯೊಂದಿಗೆ ಸಂಪರ್ಕವನ್ನಿಟ್ಟಿರಲಿಲ್ಲ, ಮತ್ತು ಮುಕುಂದ್ಭಾಯ್ಗೆ ಇದು ತಿಳಿದಿತ್ತು.
ಹಾಗಾದರೆ ಈ ಚಿಂತೆಯೇಕೆ? ಏಕೆಂದರೆ, ಮುಕುಂದ್ಭಾಯ್ ಪುನರ್ಜನ್ಮವನ್ನು ಅಥವಾ ಮರುಹುಟ್ಟುವಿಕೆಯನ್ನು ನಂಬುತ್ತಿದ್ದನು.a ಈ ಇಬ್ಬರ ನಡುವಿನ ಆ ಬಾಲ್ಯಾವಸ್ಥೆಯ ಆಕರ್ಷಣೆಯು, ಅವರು ಹಿಂದಿನ ಜೀವಿತಗಳಲ್ಲಿ ವಿವಾಹಿತರಾಗಿದ್ದ ಕಾರಣದಿಂದ ಆಗಿದ್ದಲ್ಲಿ, ಈಗ ಅವರು ವಿವಾಹಯೋಗ್ಯ ವಯಸ್ಸಿನವರಾಗಿರುವುದರಿಂದ ಅವರನ್ನು ದೂರವಿಡುವುದು ಕ್ರೂರವಾಗಿರುವುದು. ಆ ಹುಡುಗಿಯು, ಈ ಜೀವಿತದಲ್ಲಿ ಇನ್ನೊಬ್ಬ ವ್ಯಕ್ತಿಯ ಹೆಂಡತಿಯಾಗುವ ಮುಂಚೆ, ತನ್ನ ಮಗನಿಗೆ ಈ ಸನ್ನಿವೇಶದ ಅರಿವು ಇರಬೇಕೆಂದು ಮುಕುಂದ್ಭಾಯ್ ಬಯಸಿದನು ಅಷ್ಟೇ.
ಇನ್ನೊಂದು ವಿದ್ಯಮಾನವನ್ನು ಪರಿಗಣಿಸಿರಿ. ಭಾರತದ ಮುಂಬೈಯಲ್ಲಿ, ನಾಲ್ಕು ವರ್ಷ ಪ್ರಾಯದ ಹುಡುಗಿಯೊಬ್ಬಳು ಒಂದು ಆಸ್ಪತ್ರೆಯಲ್ಲಿ ಹಲವಾರು ಸಲ ಯಾತನಾಮಯ ಸಮಯಗಳನ್ನು ಕಳೆದಿದ್ದಳು. ಅವಳ ಹೃದಯದಲ್ಲಿನ ಒಂದು ದೋಷಪೂರ್ಣ ಕವಾಟವು ಅವಳ ಸಮಸ್ಯೆಯಾಗಿತ್ತು. ಅವಳ ಧನವಂತ ಹೆತ್ತವರಿಗೆ ಅವಳು ನರಳುವುದನ್ನು ನೋಡುವುದು ಅಸಾಧ್ಯವಾಗಿತ್ತು. ಆದರೆ ಅವರು ತರ್ಕಿಸಿದ್ದು: “ನಾವಿದನ್ನು ಸ್ವೀಕರಿಸಲೇಬೇಕು. ಅವಳು ಇದನ್ನು ಅನುಭವಿಸಲು, ತನ್ನ ಹಿಂದಿನ ಜೀವಿತದಲ್ಲಿ ಏನನ್ನೊ ಮಾಡಿರಬೇಕು.”
ಹಿಂದೂಮತ, ಬೌದ್ಧಮತ, ಜೈನಮತ, ಸಿಖ್ಮತ ಮತ್ತು ಭಾರತದಲ್ಲಿ ಆರಂಭಗೊಂಡಿರುವ ಇತರ ಧರ್ಮಗಳಲ್ಲಿರುವ ಕೋಟಿಗಟ್ಟಲೆ ಜನರ ಜೀವಿತಗಳಲ್ಲಿ, ಪುನರ್ಜನ್ಮದಲ್ಲಿನ ನಂಬಿಕೆಯು ಒಂದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಜೀವಿತದಲ್ಲಿನ ಅನುಭವಗಳು—ಪ್ರೀತಿ ಮಾಡುವುದರಿಂದ ಹಿಡಿದು ತೀವ್ರವಾದ ಕಷ್ಟಾನುಭವದ ವರೆಗೆ—ಹಿಂದಿನ ಜೀವಿತದಲ್ಲಿ ಅಥವಾ ಜೀವಿತಗಳಲ್ಲಿ ಮಾಡಲ್ಪಟ್ಟ ಕೃತ್ಯಗಳ ಫಲಿತಾಂಶಗಳಾಗಿ ಪರಿಗಣಿಸಲ್ಪಡುತ್ತವೆ.
ಪಾಶ್ಚಾತ್ಯ ದೇಶಗಳಲ್ಲಿಯೂ ಅನೇಕರು ಪುನರ್ಜನ್ಮದ ಸಿದ್ಧಾಂತದಿಂದ ಮೋಹಿತರಾಗಿದ್ದಾರೆ. ಅಮೆರಿಕನ್ ನಟಿ ಶರ್ಲಿ ಮಕ್ಲೇನ್, ತಾನು ಅದರಲ್ಲಿ ನಂಬುತ್ತೇನೆಂದು ಹೇಳಿಕೊಳ್ಳುತ್ತಾಳೆ. ಕೆನಡದಲ್ಲಿ, ಬ್ರಿಟಿಷ್ ಕೊಲಂಬಿಯದ ವ್ಯಾಂಕೂವರ್ನ ಬರಹಗಾರ್ತಿಯಾದ ಲಾರೆಲ್ ಫೆಲನ್, ತನಗೆ 50 ಗತ ಜೀವಿತಗಳ ಸ್ಮರಣೆಗಳಿವೆಯೆಂದು ವಾದಿಸುತ್ತಾಳೆ. ಸಿಎನ್ಎನ್/ಯುಎಸ್ಎ ಟುಡೇಗಾಗಿ ನಡೆಸಲ್ಪಟ್ಟ 1994ರಲ್ಲಿನ ಒಂದು ಗ್ಯಾಲಪ್ ಮತಸಂಖ್ಯೆಯಲ್ಲಿ, 1,016 ವಯಸ್ಕರಲ್ಲಿ 270ಕ್ಕಿಂತಲೂ ಹೆಚ್ಚು ಮಂದಿ, ಪುನರ್ಜನ್ಮವನ್ನು ನಂಬುವುದಾಗಿ ಹೇಳಿಕೊಂಡರು. ಪುನರ್ಜನ್ಮದಲ್ಲಿನ ನಂಬಿಕೆಯು, ಹೊಸ ಯುಗ ಚಳವಳಿಯ ಭಾಗವೂ ಆಗಿದೆ. ಆದರೆ ಈ ನಂಬಿಕೆಯನ್ನು ಯಾವ ರುಜುವಾತು ಬೆಂಬಲಿಸುತ್ತದೆ?
“ಹಿಂದಿನ ಜೀವಿತದ ಸ್ಮರಣೆಗಳು!” ಎಂದು ಪುನರ್ಜನ್ಮದ ವಿಶ್ವಾಸಿಗಳು ಹೇಳುತ್ತಾರೆ. ಫಲಸ್ವರೂಪವಾಗಿ, ಬ್ಯಾಂಗ್ಕಾಕ್ನ ಮೂರು ವರ್ಷ ಪ್ರಾಯದ ರತ್ನಾ, “ತನ್ನ 60ರ ವಯಸ್ಸಿನಲ್ಲಿ ಸತ್ತ ಒಬ್ಬ ಧಾರ್ಮಿಕ ಪ್ರವೃತ್ತಿಯ ಹೆಂಗಸಿನೋಪಾದಿ ತನ್ನ ಗತ ಜೀವನದ ಸ್ಮರಣೆಗಳನ್ನು” ಹೊಂದಲಾರಂಭಿಸಿದಾಗ, ಹೆಚ್ಚಿನ ಪ್ರೇಕ್ಷಕರು ಅವಳನ್ನು, ಪುನರ್ಜನ್ಮದ ಒಂದು ಸಮಂಜಸ ರುಜುವಾತಾಗಿ ಸ್ವೀಕರಿಸಿದರು.
ಹಾಗಿದ್ದರೂ, ಸಂದೇಹವಾದವು ವೃದ್ಧಿಯಾಗುತ್ತಾ ಇದೆ. ಮತ್ತು ಹಿಂದಿನ ಜೀವಿತಗಳಿಗೆ ಅಧ್ಯಾರೋಪಿಸಲ್ಪಟ್ಟಿರುವ ಸ್ಮರಣೆಗಳಿಗೆ ಇತರ ವಿವರಣೆಗಳನ್ನು ಕೊಡಲು ಸಾಧ್ಯವಿದೆ.b ಹಿಂದೂಮತ: ಆತ್ಮದ ವಿಮೋಚನೆಗಾಗಿರುವ ಅದರ ಅರ್ಥ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ, ಹಿಂದೂ ತತ್ತ್ವಜ್ಞಾನಿ ನಿಖಿಲಾನಂದರು ಹೇಳುವುದೇನೆಂದರೆ, ‘ಮರಣಾನಂತರದ ಅನುಭವಗಳನ್ನು ತರ್ಕಬದ್ಧವಾಗಿ ರುಜುಪಡಿಸಲು ಸಾಧ್ಯವಿಲ್ಲ.’ ಆದರೂ “ಪುನರ್ಜನ್ಮದ ಬೋಧನೆಯು, ಅಸಂಭವವಾಗಿರುವುದಕ್ಕಿಂತಲೂ ಹೆಚ್ಚು ಸಂಭವನೀಯವಾಗಿದೆ” ಎಂದು ಅವರು ಪ್ರತಿಪಾದಿಸುತ್ತಾರೆ.
ಆದರೆ ಬೈಬಲ್ ಈ ಬೋಧನೆಯನ್ನು ಬೆಂಬಲಿಸುತ್ತದೊ? ಮತ್ತು ಸತ್ತವರಿಗಾಗಿ ದೇವರ ಪ್ರೇರಿತ ವಾಕ್ಯವು ಯಾವ ನಿರೀಕ್ಷೆಯನ್ನು ನೀಡುತ್ತದೆ?
[ಅಧ್ಯಯನ ಪ್ರಶ್ನೆಗಳು]
a “ಪುನರ್ಜನ್ಮವು, ಒಂದು ಅಥವಾ ಹೆಚ್ಚು ಅನುಕ್ರಮಣಿಕ ಅಸ್ತಿತ್ವಗಳಲ್ಲಿ ಪ್ರಾಣದ ಮರುಹುಟ್ಟುವಿಕೆಯಾಗಿದೆ. ಅದು ಮಾನವನಾಗಿರಬಹುದು, ಪ್ರಾಣಿಯಾಗಿರಬಹುದು, ಅಥವಾ ಕೆಲವು ವಿದ್ಯಮಾನಗಳಲ್ಲಿ, ಸಸ್ಯವಾಗಿರಬಹುದು” ಎಂದು ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕಾ ಹೇಳುತ್ತದೆ. ಈ ಸಂಗತಿಯನ್ನು ವರ್ಣಿಸಲು, “ಮರುಹುಟ್ಟುವಿಕೆ” ಎಂಬ ಪದವೂ ಉಪಯೋಗಿಸಲ್ಪಡುತ್ತದೆ. ಆದರೆ “ಪುನರ್ಜನ್ಮ” ಎಂಬ ಶಬ್ದವು ಸಾಮಾನ್ಯವಾಗಿ ಸ್ವೀಕೃತವಾಗಿದೆ. ಭಾರತೀಯ ಭಾಷೆಗಳ ಅನೇಕ ಶಬ್ದಕೋಶಗಳು, ಈ ಶಬ್ದಗಳನ್ನು ಪರ್ಯಾಯವಾಗಿ ಉಪಯೋಗಿಸುತ್ತವೆ.
b ಜೂನ್ 8, 1994ರ ಅವೇಕ್! ಸಂಚಿಕೆಯ 5-7ನೆಯ ಪುಟಗಳನ್ನು ನೋಡಿರಿ.
[ಪುಟ 4 ರಲ್ಲಿರುವ ಚಿತ್ರ]
ಹಿಂದಿನ ಜೀವಿತದಲ್ಲಿ ನಡೆಸಲ್ಪಟ್ಟ ಪಾಪಗಳಿಗಾಗಿ ಅವಳನ್ನು ಶಿಕ್ಷಿಸಲಾಗುತ್ತಿದೆಯೊ?