ಇನ್ನು ಮುಂದೆ ಇಲ್ಲದೆ ಹೋಗುವ ವೇದನೆ
ಬೈಬಲಿನ ವಾಗ್ದಾನದ ನೆರವೇರಿಕೆಯಲ್ಲಿ ನಿರ್ಮೂಲಗೊಳಿಸಲ್ಪಡಲಿರುವ ವೇದನೆಯು, ಪ್ರಥಮ ಮಾನವನ ಅಪರಿಪೂರ್ಣತೆಯ ಫಲಿತಾಂಶವಾಗಿ ಅನುಭವಿಸಲ್ಪಡುತ್ತಿರುವ ವೇದನೆಯಾಗಿರುತ್ತದೆ. ನಿರಂತರವಾದ ವೇದನೆ ಎಂದು ಯಾವುದನ್ನು ಕರೆಯಸಾಧ್ಯವಿದೆಯೋ ಅದನ್ನು ಈ ವೇದನೆಯು ಒಳಗೊಳ್ಳುತ್ತದೆ.
ರೋಗ ಅಥವಾ ಗಾಯದ ಎಚ್ಚರಿಕೆಯ ವ್ಯವಸ್ಥೆಯಾಗಿರುವ ಬದಲಾಗಿ, ನಿರಂತರವಾದ ವೇದನೆಯು ನಿಂತುಹೋಗದ ಒಂದು “ತಪ್ಪು ಎಚ್ಚರಿಕೆ”ಗೆ ಹೋಲಿಸಲ್ಪಟ್ಟಿದೆ. ರೋಗಿಗಳು ಪರಿಹಾರದ ಹುಡುಕಾಟದಲ್ಲಿ ವಾರ್ಷಿಕವಾಗಿ ಕೋಟಿಗಟ್ಟಲೆ ಡಾಲರುಗಳನ್ನು ವ್ಯಯಿಸುವಂತೆ ಮಾಡುವ ವೇದನೆಯು ಇದೇ ಆಗಿದೆ, ಮತ್ತು ಅದು ಲಕ್ಷಾಂತರ ಮಂದಿಯ ಜೀವಿತಗಳನ್ನು ಧ್ವಂಸಮಾಡುತ್ತದೆ.
ವೇದನೆ ಪರಿಣತರಾದ ಡಾ. ರಿಚರ್ಡ್ ಎ. ಸರ್ನ್ಟ್ಬಾಕ್ ಬರೆದದ್ದು: “ತೀಕ್ಷೈವಾದ ವೇದನೆಗೆ ಅಸದೃಶವಾಗಿ, ನಿರಂತರವಾದ ವೇದನೆಯು ಒಂದು ರೋಗ ಲಕ್ಷಣವಾಗಿಲ್ಲ; ನಿರಂತರವಾದ ವೇದನೆಯು ಒಂದು ಎಚ್ಚರಿಕೆಯ ಸಂಜ್ಞೆಯಾಗಿಲ್ಲ.” ಎಮರ್ಜೆನ್ಸಿ ಮೆಡಿಸಿನ್ ಒತ್ತಿಹೇಳಿದ್ದು: “ನಿರಂತರವಾದ ನೋವಿಗೆ ಕಿಂಚಿತ್ತೂ ಯಾವುದೇ ಉದ್ದೇಶವಿಲ್ಲ.”
ಹೀಗೆ, ಇತ್ತೀಚಿಗಿನ ವರ್ಷಗಳಲ್ಲಿ ಅನೇಕ ವೈದ್ಯರು ಅಂತಹ ವೇದನೆಯನ್ನು ವಸ್ತುತಃ ಒಂದು ನೈಜ ಕ್ಲೇಶವೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. “ಉತ್ಕಟವಾದ ವೇದನೆಯಲ್ಲಿ ವೇದನೆಯು ರೋಗದ ಅಥವಾ ಗಾಯದ ಒಂದು ರೋಗಲಕ್ಷಣವಾಗಿದೆ,” ಎಂದು ವೇದನೆಯ ಕುರಿತಾದ ಇಂದಿನ ಉತ್ಕೃಷ್ಟ ದರ್ಜೆಯ ಗ್ರಂಥವಾದ, ದ ಮ್ಯಾನೆಜ್ಮೆಂಟ್ ಆಫ್ ಪೆಯ್ನ್ನಲ್ಲಿ ಡಾ. ಜಾನ್ ಜೆ. ಬಾನಿಕ ವಿವರಿಸುತ್ತಾರೆ. “ನಿರಂತರವಾದ ವೇದನೆಯಲ್ಲಿ ವೇದನೆಯು ತಾನೇ ರೋಗವಾಗಿದೆ.”
ವೇದನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಗಳು
ವೇದನೆಯು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲ್ಪಟ್ಟಿರುವುದಿಲ್ಲ. “ವೇದನೆಯು ಏನಾಗಿದೆ ಎಂಬುದನ್ನು ಶೋಧಿಸಲು ಪ್ರಯತ್ನಿಸುವ ಶಾಶ್ವತವಾದ ಸೆಳೆತದಿಂದಾಗಿ ವಿಜ್ಞಾನಿಗಳು ತೀವ್ರತೆಯಿಂದ ಕೆಲಸಮಾಡುತ್ತಿದ್ದಾರೆ,” ಎಂದು ಅಮೆರಿಕನ್ ಹೆಲ್ತ್ (ಇಂಗ್ಲಿಷ್) ಪತ್ರಿಕೆಯು ಹೇಳಿತು. ಕೆಲವು ದಶಕಗಳ ಹಿಂದೆ, ವೇದನೆಯು ಚರ್ಮದಲ್ಲಿರುವ ವಿಶೇಷ ನರತುದಿಗಳಿಂದ ಅನುಭವಿಸಲ್ಪಟ್ಟು ನಿರ್ದಿಷ್ಟವಾದ ನರತಂತುಗಳ ಮೂಲಕ ಮಿದುಳಿಗೆ ಸಾಗಿಸಲ್ಪಡುವ ಸಂವೇದನೆಯ ಒಂದು ರೂಪ—ದೃಷ್ಟಿ ಶಕ್ತಿ, ಶ್ರವಣ ಶಕ್ತಿ, ಮತ್ತು ಸ್ಪರ್ಶದಂತೆ—ವಾಗಿದೆ ಎಂದು ಅವರು ಭಾವಿಸಿದರು. ಆದರೆ ವೇದನೆಯ ಕುರಿತಾದ ಈ ಸರಳವಾದ ಪರಿಕಲ್ಪನೆಯು ಅಸತ್ಯವೆಂದು ಕಂಡುಕೊಳ್ಳಲ್ಪಟ್ಟಿತು. ಹೇಗೆ?
ಹೊಸ ಒಳನೋಟಕ್ಕೆ ಮುನ್ನಡೆಸಿದ ಒಂದು ಅಂಶವು, ವೇದನೆಯ ಅರಿವಿರದ ಯುವತಿಯೊಬ್ಬಳ ಕುರಿತಾದ ಅಧ್ಯಯನವಾಗಿತ್ತು. ಇಸವಿ 1955ರಲ್ಲಿ ಅವಳ ಮರಣದ ಬಳಿಕ, ಅವಳ ಮಿದುಳು ಮತ್ತು ನರವ್ಯೂಹದ ಪರೀಕ್ಷೆಯು, ವೇದನೆಯ ಕಾರಣದ ಕುರಿತು ಸಂಪೂರ್ಣ ಹೊಸ ಭಾವನೆಗೆ ಮುನ್ನಡೆಸಿತು. ವೈದ್ಯರು “ನರ ತುದಿಗಳಿಗಾಗಿ ಹುಡುಕುತ್ತಿದ್ದರು,” ಎಂದು 1960 ಜುಲೈ 30ರ ದ ಸ್ಟಾರ್ ವೀಕ್ಲಿ ಮ್ಯಾಗಜಿನ್ ವಿವರಿಸಿತು. “[ಅವಳು] ಒಂದನ್ನೂ ಹೊಂದಿಲ್ಲವಾದರೆ, ಅದು ಹುಡುಗಿಯ ಜಡತೆಗೆ ಕಾರಣಕೊಡಬಹುದು. ಆದರೆ ನರ ತುದಿಗಳು ಇದ್ದವು ಮತ್ತು ಮೇಲು ನೋಟದಲ್ಲಿ ಅನ್ಯೂನವಾಗಿದ್ದವು.
“ತದನಂತರ, ನರ ತುದಿಗಳನ್ನು ಮಿದುಳಿನೊಂದಿಗೆ ಕೂಡಿಸುವ ನರ ತಂತುಗಳನ್ನು ವೈದ್ಯರು ಪರೀಕ್ಷಿಸಿದರು. ಖಂಡಿತವಾಗಿ, ಇಲ್ಲಿ ದೋಷವೊಂದನ್ನು ಕಂಡುಕೊಳ್ಳಬಹುದೆಂದು. ಆದರೆ ಹಾಗಾಗಲಿಲ್ಲ. ನೋಡಸಾಧ್ಯವಿರುವಷ್ಟರ ಮಟ್ಟಿಗೆ, ಗಾಯದಿಂದ ನಷ್ಟವಾದವುಗಳನ್ನು ಹೊರತು, ಎಲ್ಲಾ ತಂತುಗಳು ಅನ್ಯೂನವಾಗಿದ್ದವು.
“ಕೊನೆಯದಾಗಿ, ಹುಡುಗಿಯ ಮಿದುಳಿನ ಕುರಿತಾದ ಪರೀಕ್ಷೆಗಳು ಮಾಡಲ್ಪಟ್ಟವು ಮತ್ತು, ಪುನಃ ಒಮ್ಮೆ ಯಾವುದೇ ರೀತಿಯ ನ್ಯೂನತೆಯನ್ನು ಸ್ಥಾಪಿಸಸಾಧ್ಯವಾಗಲಿಲ್ಲ. ಅಸ್ತಿತ್ವದಲ್ಲಿರುವ ಎಲ್ಲಾ ಜ್ಞಾನ ಮತ್ತು ಕಲ್ಪನೆಗನುಸಾರ, ಈ ಹುಡುಗಿಯು ಸಹಜವಾಗಿ ವೇದನೆಯನ್ನು ಅನುಭವಿಸಿರಬೇಕಿತ್ತು, ಆದರೆ ಅವಳು ಕಚಕುಳಿಯನ್ನು ಸಹ ಅನುಭವಿಸಶಕ್ತಳಾಗಿರಲಿಲ್ಲ.” ಆದಾಗ್ಯೂ, ಚರ್ಮಕ್ಕೆ ಒತ್ತಡವು ಹಾಕಲ್ಪಟ್ಟಾಗ ಅವಳು ಒತ್ತಡಕ್ಕೆ ಶೀಘ್ರವೇದಿಯಾಗಿದ್ದಳು ಮತ್ತು ಗುಂಡುಸೂಜಿಯ ಚುಚ್ಚುವಿಕೆಯು ಅವಳಿಗೆ ನೋವನ್ನುಂಟುಮಾಡದಿದ್ದಾಗ್ಯೂ, ಗುಂಡುಸೂಜಿಯ ಮೇಲ್ತುದಿ ಮತ್ತು ಮೊನಚಾದ ಕೆಳತುದಿಯ ಸ್ಪರ್ಶವನ್ನು ಪ್ರತ್ಯೇಕವಾಗಿ ಅವಳಿಗೆ ಗುರುತಿಸಸಾಧ್ಯವಿತ್ತು.
ವೇದನೆಯನ್ನು ವಿವರಿಸಲು 1960ಗಳಲ್ಲಿ ಒಂದು ಜನಪ್ರಿಯವಾದ ಹೊಸ ಕಲ್ಪನೆಯ ಜೊತೆಬರಹಗಾರರಾದ ರಾನಲ್ಡ್ ಮೆಲ್ಜ್ಯಾಕ್, ಅದರ ಕ್ಲಿಷ್ಟತೆಯ ಕುರಿತು ಇನ್ನೊಂದು ಉದಾಹರಣೆಯನ್ನು ಒದಗಿಸುತ್ತಾರೆ. ಅವರು ವಿವರಿಸಿದ್ದು: “ತಮ್ಮ ಇಲ್ಲದೆ ಇದ್ದ [ಅದು ಅಂಗಚ್ಛೇದನೆ ಮಾಡಲ್ಪಟ್ಟಿತ್ತು] ಪಾದದ ಕಡೆಗೆ ನಿರ್ದೇಶಿಸುತ್ತಾ, ತಮ್ಮ ಕಾಲ್ಬೆರಳುಗಳ ಮೂಲಕ ಬಿಸಿ-ಕೆಂಪು ಕೆದಕು ಸಲಾಕಿಯು ಒಳತೂರಿಸಲ್ಪಡುತ್ತಿದೆಯೋ ಎಂಬಂತೆ ಅನಿಸುವ ಉರಿಯುವ ವೇದನೆಗಳನ್ನು ಶ್ರೀಮತಿ ಹಲ್ ವರ್ಣಿಸುತ್ತಿದ್ದರು.” ಮೆಕ್ಲೀನ್ಸ್ (ಇಂಗ್ಲಿಷ್) ಪತ್ರಿಕೆಗೆ 1989ರಲ್ಲಿ ಮೆಲ್ಜ್ಯಾಕ್ ಹೇಳಿದ್ದು: “ಅವರು ಯಾವುದನ್ನು ‘ಭ್ರಾಂತಿಯ’ (ಫ್ಯಾಂಟಮ್) ವೇದನೆಯೆಂದು ಕರೆಯುತ್ತಾರೋ ಅದರ ವಿವರಣೆಗಳಿಗೆ ಅವರು ಇನ್ನೂ ಎದುರುನೋಡು”ತ್ತಿದ್ದರು. ಅದರ ಜೊತೆಗೆ, ಸೂಚಕ (ರೆಫರ್ಡ್) ವೇದನೆಯೆಂದು ಕರೆಯಲ್ಪಡುವುದೂ ಇದೆ—ಅದರಲ್ಲಿ ವ್ಯಕ್ತಿಯೊಬ್ಬನಿಗೆ ದೇಹದ ಒಂದು ಭಾಗವು ತಪ್ಪಾಗಿ ಕಾರ್ಯನಡಿಸುತ್ತಿರಬಹುದು, ಆದರೆ ಬೇರೊಂದು ಭಾಗದಲ್ಲಿ ಅವನು ನೋವನ್ನು ಅನುಭವಿಸುತ್ತಾನೆ.
ಮನಸ್ಸು ಮತ್ತು ದೇಹ ಎರಡೂ ಸೇರಿವೆ
ವೇದನೆಯು “ಮನಸ್ಸು ಮತ್ತು ದೇಹದ ಅತ್ಯಂತ ಹೆಚ್ಚು ಸಂಕೀರ್ಣ ಪರಸ್ಪರ ಕ್ರಿಯೆ”ಯೋಪಾದಿ ಈಗ ಗುರುತಿಸಲ್ಪಡುತ್ತದೆ. ಇಸವಿ 1992ರ ತನ್ನ ಪೆಯ್ನ್ ಇನ್ ಅಮೆರಿಕ ಎಂಬ ಪುಸ್ತಕದಲ್ಲಿ, ಮೇರಿ ಎಸ್. ಶೆರಿಡನ್ ಹೇಳುವುದೇನಂದರೆ, “ವೇದನೆಯ ಅನುಭವವು ಎಷ್ಟೊಂದು ಭಾರಿ ಮನಶ್ಶಾಸ್ತ್ರಾನುಗುಣವಾದದ್ದಾಗಿದೆಯೆಂದರೆ ಮನಸ್ಸು ಕೆಲವೊಮ್ಮೆ ಅದರ ಅಸ್ತಿತ್ವವನ್ನು ನಿರಾಕರಿಸಬಲ್ಲದು ಮತ್ತು ಕೆಲವೊಮ್ಮೆ ತೀವ್ರವಾದ ಹಾನಿಯು ಹೋದಮೇಲೆ ದೀರ್ಘ ಸಮಯದ ಬಳಿಕ ಅದು ವೇದನೆಯನ್ನು ಸೃಷ್ಟಿಸಬಲ್ಲದು ಮತ್ತು ಪೋಷಿಸಬಲ್ಲದು.”
ಒಬ್ಬನು ವೇದನೆಗೆ ಹೇಗೆ ಪ್ರತಿಕ್ರಿಯಿಸುತ್ತಾನೆಂಬುದರಲ್ಲಿ, ಒಬ್ಬನ ಮನೋಭಾವ, ಚಿತ್ತೈಕಾಗ್ರತೆ, ವ್ಯಕ್ತಿತ್ವ ಮತ್ತು ಸಲಹೆಗೆ ಸುಲಭ ವೇದನೀಯತೆ, ಮತ್ತು ಇತರ ಅಂಶಗಳೆಲ್ಲವೂ ಪ್ರಾಮುಖ್ಯವಾಗಿವೆ. “ಭಯ ಮತ್ತು ಚಿಂತೆಯು ಅತಿಶಯವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ,” ಎಂದು ವೇದನಾ ತಜ್ಞ ಡಾ. ಬಾನಿಕ ಗಮನಿಸಿದರು. ಹೀಗೆ ಒಬ್ಬನು ವೇದನೆಯನ್ನು ಗ್ರಹಿಸಲು ಕಲಿಯಬಹುದು. ವೇದನೆಯ ಸಮಸ್ಯೆಗಳಲ್ಲಿ ವಿಶೇಷಾಭ್ಯಾಸ ಮಾಡುವ ಮನಶ್ಶಾಸ್ತ್ರದ ಪ್ರೊಫೆಸರರಾದ ಡಾ. ವಿಲ್ಬರ್ಟ್ ಫೋರ್ಡೈಸ್ ವಿವರಿಸುವುದು:
“ವೇದನೆಯು ವಾಸ್ತವಿಕವೊ ಅಲ್ಲವೊ ಎಂಬುದು ಪ್ರಶ್ನೆಯಲ್ಲ. ನಿಶ್ಚಯವಾಗಿ ಅದು ವಾಸ್ತವಿಕ. ಅದನ್ನು ಪ್ರಭಾವಿಸುವ ನಿರ್ಧಾರಕ ಅಂಶಗಳು ಯಾವುವು ಎಂಬುದೇ ಪ್ರಶ್ನೆಯಾಗಿದೆ. ಊಟಕ್ಕೆ ಸ್ವಲ್ಪ ಮುಂಚೆ ನಾನು ನಿಮ್ಮೊಂದಿಗೆ ಒಂದು ಹ್ಯಾಮ್ ಸ್ಯಾಂಡ್ವಿಚ್ನ ಕುರಿತು ಮಾತಾಡುವುದಾದರೆ, ನೀವು ಜೊಲ್ಲು ಸುರಿಸುತ್ತೀರಿ. ಅದು ತೀರ ವಾಸ್ತವಿಕ. ಆದರೆ ಒಗ್ಗಿಸುಏಕೆಯ ಕಾರಣದಿಂದ ಅದು ಸಂಭವಿಸುತ್ತದೆ. ಹ್ಯಾಮ್ ಸ್ಯಾಂಡ್ವಿಚ್ ಅಲ್ಲಿರುವುದಿಲ್ಲ. ಮಾನವರು ಒಗ್ಗಿಸುಏಕೆಗೆ ಬಹಳ ಸೂಕ್ಷಗ್ರಾಹಿಗಳಾಗಿದ್ದಾರೆ. ಅದು ಸಾಮಾಜಿಕ ನಡವಳಿಕೆ, ಜೊಲ್ಲು ಸುರಿಸುವಿಕೆ, ರಕ್ತದ ಒತ್ತಡ, ಆಹಾರವನ್ನು ಜೀರ್ಣಿಸುವ ವೇಗ, ವೇದನೆ, ಎಲ್ಲಾ ರೀತಿಯ ವಿಷಯಗಳನ್ನು ಪ್ರಭಾವಿಸುತ್ತದೆ.”
ನಿಮ್ಮ ಭಾವನೆಗಳು ಮತ್ತು ಮನೋಭಾವವು ನಿಮ್ಮ ವೇದನೆಯನ್ನು ತೀವ್ರಗೊಳಿಸಶಕವ್ತಾಗಿರುವಂತೆಯೇ, ಅವು ಅದನ್ನು ಹತ್ತಿಕ್ಕಬಲ್ಲವು ಅಥವಾ ತಗ್ಗಿಸಬಲ್ಲವು. ಒಂದು ಉದಾಹರಣೆಯನ್ನು ಪರಿಗಣಿಸಿ: ನರರೋಗ ಶಾಸ್ತ್ರಜ್ಞರೊಬ್ಬರು ಹೇಳಿದ್ದೇನಂದರೆ, ಯೌವನಸ್ಥರಾಗಿದ್ದಾಗ ಅವರು ಒಮ್ಮೆ ಹುಡುಗಿಯೊಬ್ಬಳೊಂದಿಗೆ ಎಷ್ಟು ಮೋಹಗೊಂಡಿದ್ದರೆಂದರೆ, ಅವಳೊಂದಿಗೆ ಒಂದು ಮಂಜುಗೆಡ್ಡೆಯ ಮೇಲೆ ಕುಳಿತಿದ್ದಾಗ ಅವರ ನಿತಂಬದಲ್ಲಿ ವಿಪರೀತ ಶೈತ್ಯ ಅಥವಾ ವೇದನೆಯ ಯಾವುದೇ ಅನುಭವವು ಅವರಿಗಾಗಲಿಲ್ಲ. “ನಾನು ಬಹುಮಟ್ಟಿಗೆ ಹಿಮವ್ರಣನಾಗಿದ್ದೆ,” ಎಂದು ಅವರು ವಿವರಿಸಿದರು. “ನಾವು ಸುಮಾರು 45 ನಿಮಿಷಗಳ ವರೆಗೆ ಅಲ್ಲಿ ಕುಳಿತಿದ್ದಿರಬೇಕು, ಮತ್ತು ಶೈತ್ಯದ ಯಾವುದೇ ಅನುಭವವು ನನಗಾಗಲಿಲ್ಲ.”
ಅಂತಹ ಉದಾಹರಣೆಗಳು ಅನೇಕ. ಪಂದ್ಯದಲ್ಲಿ ಗಂಭೀರವಾಗಿ ಒಳಗೊಂಡಿರುವ ಕಾಲ್ಚೆಂಡಾಟದ ಆಟಗಾರರು ಅಥವಾ ಕದನದ ಒತ್ತಡದ ಸನ್ನಿವೇಶದಲ್ಲಿರುವ ಸೈನಿಕರು ಬಹುಶಃ ಹೆಚ್ಚಾಗಿ ಹಾನಿಗೊಂಡಿದ್ದರೂ, ಆ ಸಮಯದಲ್ಲಿ ಕಡಿಮೆ ಅಥವಾ ಶೂನ್ಯ ವೇದನೆಯನ್ನು ಅನುಭವಿಸುತ್ತಾರೆ. “ಒಂದು ನಾಯಿಯು ಇಲಿಯೊಂದನ್ನು ಓಡಿಸುವಂತೆ” ತನ್ನನ್ನು ಓಡಿಸಿದ ಒಂದು ಸಿಂಹದಿಂದ ಆಕ್ರಮಿಸಲ್ಪಟ್ಟದ್ದರ ಕುರಿತು ಆಫ್ರಿಕದ ಪ್ರಸಿದ್ಧ ಪರಿಶೋಧಕನಾದ ಡೇವಿಡ್ ಲಿವಿಂಗ್ಸ್ಟನ್ ಹೇಳಿದನು. “ಆ ಆಘಾತವು . . . ವೇದನೆಯ ಅರಿವಿಲ್ಲದ ಒಂದು ರೀತಿಯ ಸ್ವಪ್ನಾವಸ್ಥೆಯನ್ನು ಉಂಟುಮಾಡಿತು.”
ಯೆಹೋವನೆಡೆಗೆ ಸಂಪೂರ್ಣ ಭರವಸೆ ಮತ್ತು ನಂಬಿಕೆಯೊಂದಿಗೆ ಶಾಂತಿಯಿಂದ ನಿರೀಕ್ಷಿಸಿದ ಯೆಹೋವ ದೇವರ ಸೇವಕರಿಗೆ ಸಹ ಸಕಾಲದಲ್ಲಿ ತಮ್ಮ ವೇದನೆಯು ನಿಗ್ರಹಿಸಲ್ಪಟ್ಟಿರುವುದರ ಕುರಿತ ಅನುಭವಗಳಿರುವುದು ಗಮನಾರ್ಹವಾದದ್ದಾಗಿದೆ. “ವಿಚಿತ್ರವಾಗಿ ಭಾಸವಾಗಬಹುದಾದರೂ, ಮೊದಲ ಕೆಲವು ಹೊಡೆತಗಳ ಬಳಿಕ ನನಗೆ ನಿಜವಾಗಿಯೂ ಅವುಗಳ ಅನುಭವವಾಗಲಿಲ್ಲ. ಬದಲಾಗಿ, ಬಹಳ ದೂರದಲ್ಲಿ ಡೋಲು ಬಾರಿಸುವಿಕೆಯಂತೆ, ನಾನು ಅದನ್ನು ಕೇವಲ ಕೇಳಸಾಧ್ಯವಿರುವಂತೆ ಅದಿತ್ತು,” ಎಂದು ಹೊಡೆಯಲ್ಪಟ್ಟ ಕ್ರೈಸ್ತನೊಬ್ಬನು ವರದಿಸಿದನು.—ಫೆಬ್ರವರಿ 22, 1994, ಅವೇಕ್!, ಪುಟ 21.
ವೇದನೆಯ ಸಂವೇದನೆಗಳು ನವೀಕರಿಸಲ್ಪಡುವ ವಿಧ
ವೇದನೆಯ ದಿಗ್ಭಮ್ರೆಗೊಳಿಸುವ ಕೆಲವು ಅಂಶಗಳನ್ನು ವಿವರಿಸುವ ಪ್ರಯತ್ನದಲ್ಲಿ, 1965ರಲ್ಲಿ ಮನಶ್ಶಾಸ್ತ್ರದ ಪ್ರೊಫೆಸರರಾದ ರಾನಲ್ಡ್ ಮೆಲ್ಜ್ಯಾಕ್, ಮತ್ತು ಅಂಗರಚನಾ ಶಾಸ್ತ್ರದ ಪ್ರೊಫೆಸರರಾದ ಪ್ಯಾಟ್ರಿಕ್ ವಾಲ್ ವ್ಯಾಪಕವಾಗಿ ಉದ್ಘೋಷಿಸಲ್ಪಟ್ಟ, ವೇದನೆಯ ಕುರಿತಾದ ದ್ವಾರ ನಿಯಂತ್ರಣ (ಗೇಟ್ ಕಂಟ್ರೋಲ್) ಕಲ್ಪನೆಯನ್ನು ಯೋಜಿಸಿದರು. ಡಾ. ಬಾನಿಕ್ ಅವರ ವೇದನೆಯ ಕುರಿತ ಪಠ್ಯಪುಸ್ತಕದ 1990ನೇ ಮುದ್ರಣದಲ್ಲಿ ಅವರು ಹೇಳಿದ್ದೇನಂದರೆ, “ವೇದನೆಯ ಸಂಶೋಧನೆ ಮತ್ತು ಚಿಕಿತ್ಸೆಯ ಕ್ಷೇತ್ರದ ಅತ್ಯಂತ ಹೆಚ್ಚು ಪ್ರಾಮುಖ್ಯ ವಿಕಸನಗಳಲ್ಲಿ” ಈ ಕಲ್ಪನೆಯು ಒಂದಾಗಿತ್ತು.
ಈ ಕಲ್ಪನೆಗನುಸಾರ, ಮಿದುಳುಬಳ್ಳಿಯಲ್ಲಿ ತಾತ್ವಿಕ ದ್ವಾರದ ತೆರೆಯುವಿಕೆ ಮತ್ತು ಮುಚ್ಚುವಿಕೆಯು, ಮಿದುಳಿಗೆ ವೇದನೆಯ ಸಂಜ್ಞೆಗಳ ಹಾದುಹೋಗುವಿಕೆಯನ್ನು ಅನುಮತಿಸುತ್ತದೆ ಅಥವಾ ತಡೆಯುತ್ತದೆ. ವೇದನೆಯನ್ನು ಹೊರತು ಇತರ ಸಂವೇದನೆಗಳು ದ್ವಾರವನ್ನು ಮುತ್ತುವುದಾದರೆ, ಆಗ ಮಿದುಳನ್ನು ತಲಪುವ ವೇದನೆಯ ಸಂಜ್ಞೆಗಳು ಕುಂದಿಸಲ್ಪಡಬಹುದು. ಹೀಗೆ, ಉದಾಹರಣೆಗೆ, ವೇದನೆಯ ಸಂಜ್ಞೆಗಳ ಹಾದುಹೋಗುವಿಕೆಯನ್ನು ಅಡಯಿಸ್ಡಲಿಕ್ಕಾಗಿ ವೇದನೆಯ ಹೊರತಾದ ಸಂಜ್ಞೆಗಳು ಮಿದುಳುಬಳ್ಳಿಗೆ ಕಳುಹಿಸಲ್ಪಟ್ಟದ್ದರ ಪರಿಣಾಮವಾಗಿ, ಸ್ವಲ್ಪವಾಗಿ ಸುಟ್ಟಂತ ಬೆರಳೊಂದನ್ನು ಉಜ್ಜುವ ಅಥವಾ ಅಲ್ಲಾಡಿಸುವ ಮೂಲಕ ವೇದನೆಯು ಕಡಿಮೆಯಾಗುತ್ತದೆ.
ಇಸವಿ 1975ರಲ್ಲಿ, ನಮ್ಮ ದೇಹಗಳು ತಮ್ಮ ಸ್ವಂತ ಮಾರ್ಫಿನ್ನಂತಹ—ಎಂಡಾರ್ಫಿನ್ ಎಂದು ಕರೆಯಲ್ಪಡುವ—ವಸ್ತುಗಳನ್ನು ಉತ್ಪತ್ತಿಮಾಡುತ್ತವೆ ಎಂಬ ಶೋಧವು, ವೇದನೆಯ ದಿಗ್ಭಮ್ರೆಗೊಳಿಸುವ ಅಂಶಗಳನ್ನು ತಿಳಿಯುವ ಅನ್ವೇಷಣೆಯಲ್ಲಿ ಇನ್ನೂ ಹೆಚ್ಚು ಸಹಾಯಮಾಡಿತು. ಉದಾಹರಣೆಗೆ, ಕೆಲವು ವ್ಯಕ್ತಿಗಳಿಗೆ ವೇದನೆಯ ಸ್ವಲ್ಪ ಅನುಭವವಿರುತ್ತದೆ ಅಥವಾ ಇರುವುದೇ ಇಲ್ಲ ಯಾಕಂದರೆ ಅವರು ಎಂಡಾರ್ಫಿನನ್ನು ಹೆಚ್ಚಾಗಿ ಉತ್ಪತ್ತಿಮಾಡುತ್ತಾರೆ. ಸೂಜಿ ಚಿಕಿತ್ಸೆ—ಇದು ಒಂದು ವೈದ್ಯಕೀಯ ಕಾರ್ಯವಿಧಾನವಾಗಿದ್ದು, ಕೂದಲಿನಷ್ಟು ಸಣ್ಣ ಸೂಜಿಗಳನ್ನು ದೇಹದೊಳಗೆ ಸೇರಿಸಲಾಗುತ್ತದೆ—ಯ ಮೂಲಕ ಯಾಕೆ ವೇದನೆಯು ಕಡಿಮೆಮಾಡಲ್ಪಡುತ್ತದೆ ಅಥವಾ ತೆಗೆದುಹಾಕಲ್ಪಡುತ್ತದೆ ಎಂಬುದರ ರಹಸ್ಯವನ್ನು ಸಹ ಎಂಡಾರ್ಫಿನ್ಗಳು ವಿವರಿಸಬಲ್ಲವು. ಪ್ರತ್ಯಕ್ಷ ಸಾಕ್ಷಿ ವರದಿಗಳಿಗೆ ಅನುಸಾರವಾಗಿ, ರೋಗಿಯು ಎಚ್ಚರವಾಗಿದ್ದು ಜಾಗರೂಕ ಸ್ಥಿತಿಯಲ್ಲಿರುವಾಗ, ಮತ್ತು ವೇದನಹಾರಿಯೋಪಾದಿ ಕೇವಲ ಸೂಜಿ ಚಿಕಿತ್ಸೆಯನ್ನು ಉಪಯೋಗಿಸುವ ಮೂಲಕ ವಿಶ್ರಾಂತಿ ಪಡೆಯುತ್ತಿದ್ದಾಗ, ತೆರೆದ ಹೃದಯ ಚಿಕಿತ್ಸೆಯು ನಡೆಸಲ್ಪಟ್ಟಿದೆ! ಯಾಕೆ ವೇದನೆಯ ಅನುಭವವಾಗಲಿಲ್ಲ?
ವೇದನೆಯನ್ನು ತಾತ್ಕಾಲಿಕವಾಗಿ ತೊಡೆದುಹಾಕುವ ಎಂಡಾರ್ಫಿನ್ಗಳ ಉತ್ಪಾದನೆಯನ್ನು ಆ ಸೂಜಿಗಳು ತೀವ್ರಗೊಳಿಸಬಹುದೆಂದು ಅನೇಕರು ನಂಬುತ್ತಾರೆ. ವೇದನೆಯ ಹೊರತಾದ ಸಂಜ್ಞೆಗಳನ್ನು ಕಳುಹಿಸುವ ನರ ತಂತುಗಳನ್ನು ಸೂಜಿಗಳು ಪ್ರಚೋದಿಸುವುದರಿಂದ ಸೂಜಿ ಚಿಕಿತ್ಸೆಯು ವೇದನೆಯನ್ನು ಅಡಗಿಸಿಬಿಡುವುದು ಇನ್ನೊಂದು ಸಂಭವನೀಯತೆ. ವೇದನೆಯ ಸಂಜ್ಞೆಗಳು, ಎಲ್ಲಿ ವೇದನೆಯು ಗ್ರಹಿಸಲ್ಪಡುತ್ತದೋ ಆ ಮಿದುಳನ್ನು ಮುಟ್ಟಲು ಕಿಕ್ಕಿರಿದು ಹೋಗುವುದರಿಂದ ತಡೆಯುತ್ತಾ, ಈ ಸಂಜ್ಞೆಗಳು ಮಿದುಳುಬಳ್ಳಿಯ ದ್ವಾರಗಳನ್ನು ಮುತ್ತುತ್ತವೆ.
ದ್ವಾರ ನಿಯಂತ್ರಣ ಕಲ್ಪನೆ, ಮತ್ತು ದೇಹವು ತನ್ನ ಸ್ವಂತ ವೇದನಹಾರಿಗಳನ್ನು ಉತ್ಪತ್ತಿಮಾಡುತ್ತದೆಂಬ ಸಂಗತಿಗಳು, ಒಬ್ಬನ ಮನೋಭಾವ, ಆಲೋಚನೆಗಳು, ಮತ್ತು ಭಾವನೆಗಳು ಅನುಭವಿಸಲ್ಪಟ್ಟ ವೇದನೆಯ ಪ್ರಮಾಣವನ್ನು ಯಾಕೆ ಪ್ರಭಾವಿಸುತ್ತವೆ ಎಂಬುದನ್ನು ಸಹ ವಿವರಿಸಬಹುದು. ಹೀಗೆ, ಸಿಂಹವೊಂದರ ಅನಿರೀಕ್ಷಿತ ಆಕ್ರಮಣದ ಆಘಾತವು ಲಿವಿಂಗ್ಸ್ಟನ್ನ ಎಂಡಾರ್ಫಿನ್ಗಳ ಉತ್ಪಾದನೆಯನ್ನು ತೀವ್ರಗೊಳಿಸಿರಬಹುದು, ಹಾಗೂ ಅವನ ಮಿದುಳುಬಳ್ಳಿಯನ್ನು ವೇದನೆಯ ಹೊರತಾದ ಸಂಜ್ಞೆಗಳಿಂದ ತುಂಬಿಸಿದಿರ್ದಬಹುದು. ಫಲಿತಾಂಶವಾಗಿ, ಅವನ ನೋವಿನ ಅನುಭವಗಳು ಕಡಿಮೆಗೊಂಡವು.
ಆದರೂ, ಈ ಮುಂಚೆ ಗಮನಿಸಿರುವಂತೆ, ಒಬ್ಬನ ಮನೋಭಾವ ಮತ್ತು ಭಾವನೆಗಳು ವಿರುದ್ಧವಾದ ಪರಿಣಾಮವನ್ನು ತರಬಲ್ಲವು. ಸಾಂಕೇತಿಕ ಆಧುನಿಕ ಜೀವಿತದ ಪ್ರತಿದಿನದ ವಿಪರೀತ ಒತ್ತಡವು, ಚಿಂತೆ, ಉದ್ವೇಗ, ಮತ್ತು ಸ್ನಾಯುವಿನ ಸಂಕೋಚನದ ಮೂಲಕ ವ್ಯಕ್ತಿಯೊಬ್ಬನ ವೇದನೆಯ ಸಂವೇದನೆಯನ್ನು ಅಧಿಕಗೊಳಿಸಬಹುದು.
ಆದರೂ, ಸಂತೋಷಕರವಾಗಿಯೇ, ವೇದನೆಯ ಅನುಭವಿಗಳಿಗೆ ಸತ್ಪ್ರತೀಕ್ಷೆಗೆ ಕಾರಣವಿದೆ. ಯಾಕಂದರೆ ಚಿಕಿತ್ಸೆಯ ಪ್ರಗತಿಗೊಂಡ ವಿಧಾನಗಳಿಂದ ಅನೇಕ ರೋಗಿಗಳು ಈಗ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಭೀಕರ ವೇದನೆಯ ಒಂದು ಉತ್ತಮ ತಿಳಿವಳಿಕೆಯ ಮೂಲಕ ಅಂತಹ ಅಭಿವೃದ್ಧಿಗಳು ಫಲಿಸಿವೆ. ಅಮೆರಿಕನ್ ಅಕ್ಯಾಡೆಮಿ ಆಫ್ ಪೆಯ್ನ್ ಮೆಡಿಸಿನ್ನ ಅಧ್ಯಕ್ಷರಾದ, ಡಾ. ಶ್ರೀಧರ್ ವಾಸುದೇವನ್ ವಿವರಿಸಿದ್ದು: “ಕೆಲವೊಮ್ಮೆ ವೇದನೆಯು ತನ್ನಲ್ಲೇ ಒಂದು ರೋಗವಾಗಿರಸಾಧ್ಯವಿದೆ ಎಂಬ ಕಲ್ಪನೆಯು, 1980ಗಳಲ್ಲಿ ಚಿಕಿತ್ಸೆಯ ಕ್ರಾಂತಿಯನ್ನೆಬ್ಬಿಸಿತು.”
ವೇದನೆಯ ಚಿಕಿತ್ಸೆಯು ಹೇಗೆ ಕ್ರಾಂತೀಕರಿಸಲ್ಪಟ್ಟಿದೆ? ಯಾವ ಚಿಕಿತ್ಸೆಗಳು ಪರಿಣಾಮಕಾರಿಯಾಗಿ ಪರಿಣಮಿಸುತ್ತಿವೆ?
[ಪುಟ 7 ರಲ್ಲಿರುವ ಚಿತ್ರ]
ಸೂಜಿ ಚಿಕಿತ್ಸೆಯು ವೇದನೆಯನ್ನು ಹೇಗೆ ಕಡಿಮೆಗೊಳಿಸುತ್ತದೆ ಅಥವಾ ತೆಗೆದುಹಾಕುತ್ತದೆ?
[ಕೃಪೆ]
H. Armstrong Roberts