ನೀವು ಬೆನ್ನು ನೋವಿನಿಂದ ಕಷ್ಟಾನುಭವಿಸುತ್ತಿದ್ದೀರೊ?
“ನೋವು ಭಯಂಕರವಾಗಿತ್ತು. ಯಾರೋ ಬೆಂಕಿಕಡ್ಡಿಯಿಂದ ನನ್ನ ಬೆನ್ನಿಗೆ ಬೆಂಕಿ ಇಟ್ಟಂತಿತ್ತು! ನನ್ನ ಚಿಕ್ಕ ಸೋದರಳಿಯನನ್ನು ಒಡೆದಿದ್ದ ಗಾಜಿನಿಂದ ದೂರವಿಡಲು ಬಗ್ಗದ್ದಷ್ಟೇ ನನಗೆ ಜ್ಞಾಪಕ. ಒಡನೆ ನನ್ನ ಇಡೀ ಬೆನ್ನಿಗೆ ಬೆಂಕಿ ಹೊತ್ತಿಕೊಂಡಿತೋ ಎಂಬಂತಿತ್ತು. ಅನೇಕ ದಿನಗಳ ತನಕ ನಾನು ಅದೇ ಭಂಗಿಯಲ್ಲಿದ್ದು ನೆಟ್ಟಗೆ ನಿಲ್ಲಲಾರದವಳಾದೆ. ಅಂತಹ ನೋವನ್ನು ನಾನು ಹಿಂದೆಂದೂ ಅನುಭವಿಸಿದ್ದಿಲ್ಲ,” ಎನ್ನುತ್ತಾಳೆ, 32 ವಯಸ್ಸಿನ ಇಬ್ಬರು ಮಕ್ಕಳ ತಾಯಿ ಕ್ಯಾರನ್.
ಅಮೆರಿಕದಲ್ಲಿ ಬೆನ್ನು ನೋವಿನಿಂದ ಬಾಧೆಪಡುತ್ತಿರುವ ಜನರ ಸಂಖ್ಯೆ ತಲೆನೋವಿನಿಂದ ಬಾಧೆಪಡುತ್ತಿರುವವರ ಸಂಖ್ಯೆಗೆ ದ್ವಿತೀಯ ಸ್ಥಾನದಲ್ಲಿದೆ. ನಲವತ್ತೈದಕ್ಕಿಂತ ಕಡಮೆ ವಯಸ್ಸಿನ ಜನರಲ್ಲಿ ದೀರ್ಘಾವಧಿಯ ದೌರ್ಬಲ್ಯದ ಕಾರಣದಲ್ಲಿ ಇದು ಮೊದಲನೆಯದ್ದೂ, ನಲವತ್ತೈದಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಮೂರನೆಯದ್ದೂ ಆಗಿದೆ. ನೋವಿಗೀಡಾಗಿರುವವರು ಒಂದು ವರ್ಷಕ್ಕೆ 2,400 ಕೋಟಿ ಡಾಲರುಗಳನ್ನು ಉಪಶಮನವನ್ನು ಹುಡುಕುತ್ತಾ ಖರ್ಚು ಮಾಡುತ್ತಾರೆ—ಏಯ್ಡ್ಸ್ ಚಿಕಿತ್ಸೆಗೆ 1991ರಲ್ಲಿ ಖರ್ಚು ಮಾಡಿದುದಕ್ಕಿಂತ ನಾಲ್ಕು ಪಾಲು ಜಾಸ್ತಿ.
ಬೆನ್ನಿನ ಸಮಸ್ಯೆಗಳ ಒಬ್ಬ ವೈಜ್ಞಾನಿಕ ಸಂಶೋಧಕ, ಡಾ. ಆಲ್ಫ್ ಎಲ್. ನಾಕೆಮ್ಸನ್ ಅವರಿಗನುಸಾರ, ಕಳೆದ ದಶಕದಲ್ಲಿ ಲೋಕಾದ್ಯಂತ 200 ಕೋಟಿ ರೋಗಿಗಳು ಕೆಳ ಬೆನ್ನು ನೋವಿನಿಂದ ಬಾಧಿತರಾಗಿದ್ದಾರೆ. “ನಮ್ಮ ಸಕ್ರಿಯ ಜೀವಮಾನದಲ್ಲಿ ಯಾವಾಗಲಾದರೂ ನಮ್ಮಲ್ಲಿ 80 ಪ್ರತಿಶತ ಜನರು ಸ್ವಲ್ಪ ಮಟ್ಟಿಗಾದರೂ ಬೆನ್ನು ನೋವನ್ನು ಅನುಭವಿಸುವೆವು,” ಎಂದರು ಅವರು.
ನೋವಿನ ಚಕ್ರ
ಬೆನ್ನು ನೋವು ಭೇದ ಕಲ್ಪಿಸುವುದಿಲ್ಲ. ಕೂಲಿಗಾರರು ಮತ್ತು ಕಾರಕೂನರು—ಇವರಿಬ್ಬರಿಗೂ ಬೆನ್ನು ಹಾನಿಗೆ ಒಳಗಾಗುವ ಪ್ರವೃತ್ತಿಯಿದೆ. ಪುರುಷರು ಮತ್ತು ಸ್ತ್ರೀಯರು, ಎಳೆಯರು ಮತ್ತು ವೃದ್ಧರು, ಈ ವೇದನೆಗೆ ತುತ್ತಾಗಬಲ್ಲರು. ವೇದನೆ ಪುನರಾವರ್ತಕವೂ ಸತತವೂ ಆಗಿರುವಾಗ, ಇದು ಉದ್ಯೋಗ, ಸಂಪಾದನೆ, ಕುಟುಂಬ, ಮತ್ತು ಕುಟುಂಬದಲ್ಲಿ ಒಬ್ಬನ ಪಾತ್ರವನ್ನು ಬಾಧಿಸಿ, ಭಾವಾತ್ಮಕ ಕಷ್ಟಾನುಭವವನ್ನೂ ಉತ್ಪಾದಿಸಬಲ್ಲದು. ಹೇಗೆ?
ವೇದನೆಯ ವಿರುದ್ಧ ಹೋರಾಟ (ಇಂಗ್ಲಿಷ್) ಎಂಬ ಪುಸ್ತಕವು, ಜನರು ನೋವಿನ ಚಕ್ರದಲ್ಲಿ ತಮ್ಮನ್ನು ಕಂಡುಕೊಳ್ಳುತ್ತಾರೆಂದು ಹೇಳುತ್ತದೆ. ಶಾರೀರಿಕ ನೋವು ವ್ಯಾಕುಲತೆ ಮತ್ತು ಖಿನ್ನತೆಯನ್ನು ಹುಟ್ಟಿಸುತ್ತದೆ, ಮತ್ತು ಇದು ಸರದಿಯಾಗಿ, ಇನ್ನೂ ಹೆಚ್ಚು ತೀಕ್ಷೈವಾದ ಮತ್ತು ಪಟ್ಟು ಹಿಡಿದು ಬರುವ ನೋವಿಗೆ ನಡೆಸಬಲ್ಲದು. ದೃಷ್ಟಾಂತಕ್ಕೆ, ಒಬ್ಬ ಯುವ ಜನ್ಮದಾತೃ ಯಾ ಸಂಸಾರ ನಿರ್ವಾಹಕನಿಗೆ, ಬೆನ್ನಿನ ಸಮಸ್ಯೆಯಿಂದ ಬರಸಾಧ್ಯವಿರುವ ದೌರ್ಬಲ್ಯದ ಕಾರಣ, ತನ್ನ ಕೆಲಸದಿಂದ, ಕುಟುಂಬದಿಂದ ಮತ್ತು ಸ್ನೇಹಿತರಿಂದ ಬರುವ ಒತ್ತಡವನ್ನು ನಿಭಾಯಿಸಬೇಕಾಗಬಹುದು.
“ಅತಿ ದೊಡ್ಡ ಸಮಸ್ಯೆಯು ನನ್ನ ಕುಟುಂಬ ಮತ್ತು ಸ್ನೇಹಿತರಿಂದ ಗ್ರಹಣ ಶಕ್ತಿ ಮತ್ತು ಅನುಭೂತಿಯ ಕೊರತೆಯೆಂದು ನಾನು ತಿಳಿಯುತ್ತೇನೆ. ಜನರು ನೋವನ್ನು ಕಡಮೆಯೆಂದು ತಿಳಿಯುವ ಪ್ರವೃತ್ತಿಯಿಂದಿರುತ್ತಾರೆ, ನೀವು ನಿಜವಾಗಿಯಾ ಎಷ್ಟು ಕಷ್ಟಾನುಭವಿಸುತ್ತೀರಿ ಎಂದು ತಿಳಿಯದಿರುತ್ತಾರೆ,” ಎನ್ನುತ್ತಾಳೆ, ಬೆನ್ನು ನೋವಿನ ಅನೇಕ ಆಘಾತಗಳಲ್ಲಿ ಮೊದಲನೆಯದನ್ನು 1986ರಲ್ಲಿ ಅನುಭವಿಸಿದ ಸೆಕ್ರಿಟರಿ, ಪ್ಯಾಟ್, 35. “ನೋವು ಯಾವಾಗ ಮತ್ತು ಎಲ್ಲಿ ಹೊತ್ತಿಕೊಳ್ಳುತ್ತದೆಂದು ನಿಮಗೆ ತಿಳಿಯದಿರುವುದರಿಂದ, ನೀವು ಹೆಚ್ಚು ಯೋಜನೆಗಳನ್ನು ಮಾಡುವ ಪ್ರವೃತ್ತಿಯಲ್ಲಿರುವುದಿಲ್ಲ. ಕೇವಲ ನಿಮಗೆ ನೋಯುತ್ತಿರುವುದರಿಂದ ನೀವು ಆಮಂತ್ರಣಗಳನ್ನು ಅಂಗೀಕರಿಸದೆ, ಒಬ್ಬಳ ಹೊಸದಾಗಿ ಹುಟ್ಟಿದ ಮಗುವನ್ನು ಎತ್ತಿಕೊಳ್ಳದೆ, ಮುಗುಳುನಗೆ ಬೀರದೆ, ಹೀಗೆ ತೀರ ಅಸಹವಾಸಶೀಲರೆಂದು ತೋರಿಬರಬಲ್ಲಿರಿ. ಆ ನೋವು, ನೀವು ಬಿಡುವಲ್ಲಿ, ನಿಮ್ಮನ್ನು ಹಿಡಿತದಲ್ಲಿಟ್ಟುಕೊಳ್ಳಬಲ್ಲದು.”
ಬೆನ್ನು ನೋಯುವ ಕಾರಣ
ಬೆನ್ನು ನೋವು ಅನಿವಾರ್ಯವೊ? ಅದನ್ನು ಕಡಮೆ ಮಾಡಲು ಅಥವಾ ತಡೆಯಲು ನೀವೇನು ಮಾಡಬಲ್ಲಿರಿ? ನಿಮ್ಮ ಬೆನ್ನಿಗೆ ವೈದ್ಯಕೀಯ ಸಹಾಯವನ್ನು ನೀವು ಯಾವಾಗ ಪಡೆಯತಕ್ಕದ್ದು? ಸತತವಾಗಿರುವ ಬೆನ್ನು ನೋವು, ಅನೇಕ ಆಂತರಿಕ ರೋಗಗಳನ್ನು ಸೂಚಿಸಬಲ್ಲದಾದರೂ, ಈ ಚರ್ಚೆಯು ಬೆನ್ನು ನೋವಿನ ಮೂಲಗಳ—ಹೊರಚಾಚಿರುವ ಮೃದ್ವಸ್ಥಿ ತಟ್ಟೆಗಳು ಮತ್ತು ಸ್ನಾಯುಗಳ ಸೆಡೆತ—ಮೇಲೆ ಕೇಂದ್ರೀಕರಿಸುವುದು.
ಎಳೆಯರ ಮತ್ತು ಮಧ್ಯ ವಯಸ್ಸಿನವರ ಮಧ್ಯೆ, ಹೊರಚಾಚಿದ ಮೃದ್ವಸ್ಥಿ ತಟ್ಟೆಗಳು ಬೆನ್ನು ರೋಗದ ಒಂದು ಪ್ರಧಾನ ಕಾರಣವಾಗಿವೆ. ಇಂತಹ ಮೃದ್ವಸ್ಥಿ ತಟ್ಟೆಗಳನ್ನು ಅನೇಕ ವೇಳೆ, “ಜಾರಿದ ಮೃದ್ವಸ್ಥಿ ತಟ್ಟೆಗಳು” (ಸ್ಲಿಪ್ಡ್ ಡಿಸ್ಕ್ಸ್) ಎಂದು ತಪ್ಪು ಹೆಸರಿನಿಂದ ಸೂಚಿಸಲಾಗುತ್ತದೆ. ಏಕೆಂದರೆ ಅವನ್ನು ಸ್ಥಾನದಿಂದ ಹೊರಗೆ ಅಥವಾ ಒಳಗೆ ಜಾರಿಸುವುದು ಅಸಾಧ್ಯ.
ಒಬ್ಬ ವ್ಯಕ್ತಿ 20 ವರ್ಷ ವಯಸ್ಸನ್ನು ಮುಟ್ಟುವುದರೊಳಗೆ, ಈ ತಟ್ಟೆಗಳ ಸ್ಪಂಜಿನಂತಹ ಒಳಭಾಗವು ಅದರ ಸ್ಥಿತಿಸ್ಥಾಪಕ ಗುಣ ಮತ್ತು ತೇವವನ್ನು ಕಳೆದುಕೊಂಡು ಆ ತಟ್ಟೆಗಳು ಮುದುರಿಕೊಳ್ಳುವಂತೆ ಮಾಡುತ್ತದೆ. ಆದರೆ ಇದರಿಂದ ಸಾಧಾರಣವಾಗಿ ನೋವು ಫಲಿಸುವುದಿಲ್ಲ. ಆದರೂ ಕೆಲವರಿಗೆ, ಈ ಸ್ಪಂಜಿನಂತಹ ಒಳಭಾಗದ ಒಂದು ಅಂಶವು ತಂತು ರಚನೆಯ ಅಂಗಾಂಶದ ಹೊರ ವರ್ತುಲದಿಂದ ಹೊರಚಾಚುವಾಗ ಅಥವಾ ಉಬ್ಬಿಕೊಳ್ಳುವಾಗ ತೀಕ್ಷೈವಾದ ಬೇನೆ ಸಂಭವಿಸುತ್ತದೆ.
ಈ ತಟ್ಟೆಗಳ ಕುರಿತು ಫಾರ್ಟ್ಯೂನ್ ಪತ್ರಿಕೆ ಹೇಳುವುದು: “ಅವು ಒಂದು ನಿರ್ದಿಷ್ಟ ಬಿಂದುವನ್ನು ದಾಟಿ ಕೆಡುವುದಾದರೆ, ಅತ್ಯಲ್ಪ ಒತ್ತಡವು ಸಹ—ಒಂದು ಸೀನಿನಷ್ಟು ಇಲ್ಲವೆ ಒಂದು ಸ್ಟೀರಿಯೊವನ್ನು ಎತ್ತಿ ಇನ್ನೊಂದೆಡೆಯಲ್ಲಿ ಇಡಲು ಬಗ್ಗುವಷ್ಟು ಅತ್ಯಲ್ಪ—ಅವುಗಳನ್ನು ಮುರಿಯುವ ಕಡೆಕಡ್ಡಿಯಾಗಬಲ್ಲದು.”
ಮೃದ್ವಸ್ಥಿ ತಟ್ಟೆಗಳು ಪ್ರಥಮ 24 ಸಂಧ್ಯಸ್ಥಿಗಳ ಅಥವಾ ಕಶೇರುಕಗಳ ಎಲುಬುಗಳ ಮಧ್ಯೆ ಧಕ್ಕೆ ಲೀನಕಗಳಾಗಿ ವರ್ತಿಸುತ್ತವೆ. ಈ ಎಲುಬುಗಳು ಒಂದರ ಮೇಲೊಂದು ಹೇರಲ್ಪಟ್ಟು ಒಂದು ಲಂಬವಾಗಿರುವ ಸುರಂಗವನ್ನು, ಯಾವುದರೊಳಗೆ ಬೆನ್ನು ಹುರಿ ಇಡಲ್ಪಟ್ಟಿದೆಯೋ ಆ ಬೆನ್ನು ಹುರಿ ನಾಲೆಯನ್ನು ರೂಪಿಸುತ್ತವೆ. ಸಂಧ್ಯಸ್ಥಿಯ ಪ್ರತಿ ಜೊತೆಯ ಮಧ್ಯೆ ಒಂದು ಚಿಕ್ಕ ಕಂಡಿಯಿದೆ. ಇದರ ಮೂಲಕ ನರ ಬುಡ ಎಂದು ಕರೆಯಲ್ಪಡುವ ನರಗಳ ಒಂದು ಕಂತೆ, ಎರಡೂ ಪಕ್ಕಗಳಲ್ಲಿ ಒಂದೊಂದು ಕಂತೆಯಾಗಿ ನಾಲೆಯನ್ನು ಬಿಡುತ್ತದೆ. ಒಂದು ತಟ್ಟೆ ಹೊರಚಾಚಿ ಒಂದು ನಿರ್ದಿಷ್ಟ ನರಕ್ಕೆದುರಾಗಿ ಒತ್ತಬಹುದು. ಈ ಒತ್ತಡವು, ಸಂವೇದನೆಗಳನ್ನು ದೇಹದ ಇತರ ಭಾಗಗಳಿಗೆ ಮತ್ತು ಇತರ ಭಾಗಗಳಿಂದ ಹೋಗಿ ಬರುವ ನರ ಸಂಕೇತಗಳನ್ನು ತಡೆಯಬಲ್ಲದು.
ಕಟಿನರದ ಬುಡಗಳ ಮೇಲೆ ಒತ್ತಡ ಹಾಕಲ್ಪಡುವುದಾದರೆ ಕಟಿವಾಯು (ಸೈಆ್ಯಟಿಕ) ಎಂದು ಕರೆಯಲ್ಪಡುವ ಬಹಳ ವೇದನೆಯ ಸ್ಥಿತಿಯು ಸಂಭವಿಸಬಲ್ಲದು. ಕಶೇರುಕದ ಕೆಳಭಾಗದಿಂದ ಹೊರಬರುವ ಅನೇಕ ನರಬುಡಗಳು ಕಟಿನರವನ್ನು ರೂಪಿಸುತ್ತವೆ. ಪ್ರತಿಯೊಂದು ಪಕ್ಕದಲ್ಲಿ ಒಂದೊಂದು ನರಬುಡ ತೊಡೆಯ ಹಿಂಬದಿಯಿಂದ ಮೊಣಕಾಲಿನ ವರೆಗೂ ಕೆಳಗಿಳಿದು ಹೋಗಿ, ಅನಂತರ ಇತರ ನರಗಳಾಗಿ ಶಾಖೆಯೊಡೆಯುತ್ತವೆ. ಕಟಿವಾಯು ಬೇನೆಯು ಸಾಮಾನ್ಯವಾಗಿ ಬೆನ್ನಿನ ಕೆಳಭಾಗದಲ್ಲಿ ಆರಂಭಗೊಂಡು, ಟೊಂಕ ಮತ್ತು ಪಿರ್ರೆಯನ್ನು ಚುಚ್ಚಿ, ತೊಡೆಯ ಹಿಂಭಾಗಕ್ಕೆ ಕೆಳಗಿಳಿದು, ಕೆಲವು ಬಾರಿ, ಮೀನಖಂಡ ಮತ್ತು ಪಾದದ ತನಕವೂ ಹೋಗುತ್ತದೆ. ಈ ಕಾರಣದಿಂದ, ಒಬ್ಬನು ಪಾದ ಪಾತ—ಕಾಲಿನ ಸ್ನಾಯುಗಳು ಕಾಲ್ಬೆರಳುಗಳನ್ನು ಎತ್ತಲಾಗದ ಕಾರಣ ಪಾದವು ಎಳೆಯುವ ಸ್ಥಿತಿ—ವನ್ನು ಅನುಭವಿಸಬಹುದು. ಇದರಿಂದ ಬಾಧೆಪಡುವವನು ಚುಚ್ಚು ನೋವು, ಜೋವು ಹಿಡಿತ, ಮತ್ತು ರೋಗ ತಟ್ಟಿರುವ ಕಾಲಿನಲ್ಲಿ ಮಾಂಸಲ ಬಲಹೀನತೆಯನ್ನೂ ಅನುಭವಿಸಬಹುದು.
ಮೃದ್ವಸ್ಥಿ ತಟ್ಟೆಯು ಕಾಡ ಎಕೀನ್ವ ಎಂಬ, ಮೂತ್ರಕೋಶ ಮತ್ತು ಕರುಳುಗಳಿಗೆ ಸಹಾಯ ಮಾಡುವ, ಸೊಂಟದ ತುಸು ಕೆಳಗಿರುವ ನರಗಳ ಗುಂಪಿನಲ್ಲಿರುವ ನರ ಬುಡಗಳನ್ನು ಒತ್ತುವುದಾದರೆ, ಒಬ್ಬನಿಗೆ ಮೂತ್ರ ಮತ್ತು ಮಲ ವಿಸರ್ಜನೆಯಲ್ಲಿ ಸಮಸ್ಯೆಯುಂಟಾಗಬಹುದು. ಇಂತಹ ಯಾವುದೇ ರೋಗಸೂಚನೆಯಿರುವ ವ್ಯಕ್ತಿಗಳು, ಇವು ಗುರುತರವಾದ ನರರೋಗ ಸಮಸ್ಯೆಗಳ ಸೂಚನೆಯಾಗಿರಬಹುದಾದುದರಿಂದ, ಕೂಡಲೆ ಒಬ್ಬ ಡಾಕ್ಟರನ್ನು ವಿಚಾರಿಸಬೇಕು.
ಸಂಕುಚಿತವಾಗಿದ್ದು ಆರಾಮವಾಗಿರುವಾಗ, ಬೆನ್ನಿನಲ್ಲಿರುವ ಈ ಸ್ನಾಯುಗಳು ಸಹಾಯಕ ಪಾತ್ರಗಳಲ್ಲಿ ಅಸ್ಥಿರಜ್ಜುಗಳನ್ನು ಕೂಡಿಕೊಳ್ಳುತ್ತವೆ. ಕಶೇರುಕವು ಕುಸಿಯದಂತೆ ಮತ್ತು ಅದು ಬಗ್ಗಿ ತಿರುಚುವಂತೆ ಶಕ್ತಿ ಕೊಡುತ್ತವೆ. ಆದರೆ ಒತ್ತರ ಬರುವಾಗ, ರೂಪಗೆಟ್ಟ ಸ್ನಾಯು ಸೆಡೆತಕ್ಕೊಳಗಾಗಿ, ಎಷ್ಟು ಬಿಗಿದುಕೊಳ್ಳುತ್ತದೆಂದರೆ ಅದೊಂದು ಗಟ್ಟಿಯಾದ ಮುದ್ದೆಯಾಗುತ್ತದೆ. ಯಾವ ಎಚ್ಚರಿಕೆಯನ್ನೂ ಕೊಡದೆ ಮತ್ತು ಒಬ್ಬ ವ್ಯಕ್ತಿಯನ್ನು ತಾತ್ಕಾಲಿಕವಾಗಿ ಚಲಿಸದಂತೆ ಮಾಡುವ ಬೆನ್ನಿನ ಸೆಡೆತಗಳ ಘಟನೆಗಳು ಯಾತನಾಮಯವಾಗಿರಬಲ್ಲವು. ಒಬ್ಬ ನೋವಿಗೊಳಗಾದವನು ಈ ನೋವನ್ನು, “ನಿಮ್ಮ ಬೆನ್ನಲ್ಲಿ ಹೊರಚಿಮ್ಮುವ ಭೂಕಂಪಗಳ ಶ್ರೇಣಿ” ಎಂದು ವರ್ಣಿಸುತ್ತಾನೆ.
ಈ ಸ್ನಾಯು ಸೆಡೆತಗಳು ಸಂಭವಿಸುವುದು ಒಬ್ಬ ವ್ಯಕ್ತಿ ತನ್ನ ದುರ್ಬಲಗೊಂಡಿರುವ ಸ್ನಾಯುಗಳಿಗೆ ಇನ್ನೂ ಹೆಚ್ಚು ಹಾನಿ ಮಾಡುವುದರಿಂದ ತಡೆಯಲಿಕ್ಕಾಗಿಯೆ ಎಂದು ವೈದ್ಯರು ಒಪ್ಪುತ್ತಾರೆ. ಒಂದು ಟೈಮ್-ಲೈಫ್ ಪುಸ್ತಕವಾದ ಆರೋಗ್ಯಕರವಾದ ಬೆನ್ನು (ಇಂಗ್ಲಿಷ್), ಗಮನಿಸುವುದು: “ಬೆನ್ನನ್ನು ಚಲಿಸಲಾಗದಂತೆ ಮಾಡುವುದರಿಂದ, ಸೆಡೆತವು ನೀವು ಅತ್ಯುತ್ತಮ ಮಾರ್ಗವನ್ನು ತೆಗೆದುಕೊಳ್ಳುವಂತೆ ಮತ್ತು ಮಲಗಿಕೊಳ್ಳುವಂತೆ ಬಲವಂತ ಮಾಡುತ್ತದೆ. ಈ ಭಂಗಿ ನಿಮ್ಮ ಬೆನ್ನ ಮೇಲೆ ಅತಿ ಕಡಮೆ ಮೊತ್ತದ ಒತ್ತಡವನ್ನು ಹಾಕುವುದು ಮಾತ್ರವಲ್ಲ, ಊದಿಕೊಂಡಿರುವ ಅಂಗಾಂಶ ತನ್ನನ್ನು ದುರಸ್ತು ಮಾಡಿಕೊಳ್ಳುವಂತೆಯೂ ಅನುಮತಿಸುತ್ತದೆ.”
ಅನೇಕ ವೇಳೆ ಸೆಡೆತಗಳನ್ನು ವಿಯೋಜಿಸುವ ಬೆನ್ನು ನೋವನ್ನು ತಡೆಯಲು, ಹೊಟ್ಟೆ ಮತ್ತು ತೊಡೆಗಳು ಸತ್ವವುಳ್ಳವುಗಳೂ ಸ್ಥಿರವಾದವುಗಳೂ ಆಗಿರಬೇಕು. ಉದಾಹರಣೆಗೆ, ಸಡಿಲವಾಗಿರುವ ಹೊಟ್ಟೆಯ ಸ್ನಾಯುಗಳು, ಅವು ಸರಿಯಾದ ಆಧಾರವನ್ನು ಕೊಡದೆ ಇರುವುದರಿಂದ ಮತ್ತು ದೇಹದ ಭಾರದ ಸೆಳೆತವನ್ನು ತಡೆಯಲು ಕಡಮೆ ಶಕವ್ತಾಗಿರುವುದರಿಂದ ಬೆನ್ನಿನ ಉಳುಕನ್ನು ಉಂಟುಮಾಡಬಹುದು. ಹೊಟ್ಟೆಯ ಸ್ನಾಯುಗಳು ಉತ್ತಮ ಸ್ಥಿತಿಯಲ್ಲಿರುವುದಾದರೆ, ಅವು ಒಂದು “ಸ್ನಾಯು ನಡುಪಟ್ಟಿ”ಯನ್ನು ಉಂಟುಮಾಡುತ್ತವೆ. ಇದು ಕೆಳಬೆನ್ನು ದೊಗರು ಬೆನ್ನಿನ ಭಂಗಿಗೆ ಬಗ್ಗುವುದನ್ನು ತಡೆಯುತ್ತದೆ. ಕೆಳಬೆನ್ನಿನ ವಿಪರೀತ ಬಾಗಿರುವಿಕೆಯಾದ ದೊಗರು ಬೆನ್ನು ಕೆಳಬೆನ್ನಿನ ಸಂಧ್ಯಸ್ಥಿಯನ್ನು ಸಾಲು ತಪ್ಪಿಸುತ್ತದೆ.
ನೋವನ್ನು ಶಮನ ಮಾಡಲು ನೀವು ಮಾಡಬಲ್ಲ ಸಂಗತಿ
ನ್ಯೂನ ಭಂಗಿ, ಬೊಜ್ಜು, ದುರ್ಬಲವಾದ ಸ್ನಾಯುಗಳು, ಮತ್ತು ಒತ್ತಡ, ಇವು ಕೆಳಬೆನ್ನಿನ ನೋವಿನ ಸಂಭವನೀಯತೆಗೆ ಸಹಾಯ ಮಾಡುವ ನಾಲ್ಕು ಸಂಗತಿಗಳು. ಅಯೋಗ್ಯವಾಗಿ ಮಾಡಲ್ಪಡುವ, ಕುಳಿತುಕೊಳ್ಳುವುದು, ನಿಲ್ಲುವುದು, ಅಥವಾ ಎತ್ತುವುದೇ ಮೊದಲಾದ ಸಾಮಾನ್ಯ ಚಟುವಟಿಕೆಗಳು ವ್ಯಾಧಿಗೆ ಗುರಿ ಮಾಡುವ ಇತರ ಸಂಗತಿಗಳು.
ಉತ್ತಮ ಭಂಗಿ ಮತ್ತು ಬಲವಾದ ಹೊಟ್ಟೆ ಮತ್ತು ಬೆನ್ನಿನ ಸ್ನಾಯುಗಳ ಮಧ್ಯೆ ಒಂದು ಪರಸ್ಪರ ಸಂಬಂಧವಿದೆ. ಸರಿಯಾದ ಭಂಗಿಯು ಸ್ನಾಯುಗಳು ಯೋಗ್ಯವಾಗಿ ಕೆಲಸ ಮಾಡುವಂತೆ ಬಿಡುತ್ತದೆ ಮತ್ತು ಉತ್ತಮ ಸ್ನಾಯು ಸತ್ವವು ಸರಿಯಾದ ಭಂಗಿಗೆ ಪ್ರಾಮುಖ್ಯ. ಕಶೇರುಕದ ಸ್ವಾಭಾವಿಕ S-ತಿರುವನ್ನು ಅನುಸರಿಸುವ ಸಾಲು ನೆಲೆ ಉತ್ತಮ ಭಂಗಿಗೆ ಅವಶ್ಯ. ಉತ್ತಮ ಭಂಗಿಯೆಂದರೆ ಬಗ್ಗದ ನೆಟ್ಟಗಿರುವ ಕಶೇರುಕವೆಂದರ್ಥವಲ್ಲ.
ಈ ಅಯೋಗ್ಯ ಭಂಗಿಯು ತಿದ್ದಲ್ಪಟ್ಟರೆ ಭಂಗಿಯ ಮೂಲದ ನೋವನ್ನು ನಿವಾರಿಸುವುದು ಸಾಧ್ಯವೆಂದು ರಾಬಿನ್ ಮೆಕೆನ್ಸಿ, ನಿಮ್ಮ ಸ್ವಂತ ಬೆನ್ನಿಗೆ ಚಿಕಿತ್ಸೆ ಮಾಡಿರಿ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಸೂಚಿಸುತ್ತಾ ಮುಂದುವರಿಸುವುದು: “ಆದರೆ ಸಮಯ ದಾಟಿದಂತೆ, ತಿದದ್ದೆ ಇರುವಲ್ಲಿ, ಬಳಕೆಯ ನ್ಯೂನ ಭಂಗಿಯು ಕೀಲುಗಳ ರಚನೆಯಲ್ಲಿ ಬದಲಾವಣೆಗಳನ್ನು ತರುವುದರಿಂದ, ವಿಪರೀತ ಸವೆತ ಉಂಟಾಗುತ್ತದೆ ಮತ್ತು ಸಮಯಕ್ಕೆ ಮುಂಚಿನ ಮುದಿಯಾಗುವಿಕೆ ಇದರ ಒಂದು ಪರಿಣಾಮ.”
ಅತಿರೇಕ ತೂಕವು ಸಹ—ವಿಶೇಷವಾಗಿ ಹೊಟ್ಟೆಯಲ್ಲಿ—ಬೆನ್ನನ್ನು ಆಧಾರಿಸುವ ಸ್ನಾಯುಗಳ ಮೇಲೆ ಗುರುತ್ವಾಕರ್ಷಕ ಎಳೆತವನ್ನು ಉಂಟುಮಾಡುವುದರಿಂದ, ಬೆನ್ನಿಗೆ ಒತ್ತಡ ಹಾಕಬಲ್ಲದು. ಒಂದು ಕ್ರಮದ ವ್ಯಾಯಾಮ ಕಾರ್ಯಕ್ರಮವು ಒಂದು ತಕ್ಕದಾದ, ಆರೋಗ್ಯಕರ ಬೆನ್ನಿಗೆ ಕೀಲಿ ಕೈಯಾಗಿದೆ. ನೋವಿನ ಅನುಭವ ಆ ಬಳಿಕ ಇಲ್ಲದೆ ಹೋಗಿರುವುದಾದರೂ, ವ್ಯಾಯಾಮವು ಅವಶ್ಯ ಏಕೆಂದರೆ ಹೋಗಿರುವ ಬೆನ್ನು ನೋವಿಗೆ ಅನಿರೀಕ್ಷಿತವಾಗಿ ಮೇಲೆದ್ದು ಬರುವ ಪ್ರವೃತ್ತಿಯಿದೆ. ಒಂದು ಕಾರ್ಯಕ್ರಮವನ್ನು ಆರಂಭಿಸುವ ಮೊದಲು ಒಂದು ಪೂರ್ತಿ ವೈದ್ಯಕೀಯ ಮೌಲ್ಯಮಾಪನವನ್ನು ಶಿಫಾರಸ್ಸು ಮಾಡಲಾಗುತ್ತದೆ. ಒಬ್ಬ ವೈದ್ಯರು ಒಬ್ಬನ ಬೆನ್ನಿನ ಸಮಸ್ಯೆಗಾಗಿ ಯೋಗ್ಯ ವ್ಯಾಯಾಮವನ್ನು ಸೂಚಿಸಬಹುದು, ಇಲ್ಲವೆ ಅವನು ರೋಗಿಯನ್ನು ದೇಹ ಚಿಕಿತ್ಸಕ (ಫಿಸಿಕಲ್ ತೆರಪಿಸ್ಟ್)ನ ಬಳಿಗೆ ಕಳುಹಿಸಬಹುದು.
ಅನೇಕ ಸಂಶೋಧಕರು, ಒತ್ತಡವು ಒಬ್ಬನನ್ನು ಬೆನ್ನು ನೋವಿಗೆ ಗುರಿಮಾಡಬಲ್ಲದೆಂದು ನಂಬುತ್ತಾರೆ. ಒತ್ತಡವು ಕೆಲವರಲ್ಲಿ ಸೆಡೆತಗಳನ್ನು ಉಂಟುಮಾಡಬಹುದು, ಏಕೆಂದರೆ ಉಪಶಮನವಿಲ್ಲದ ಒತ್ತಡವು ಸ್ನಾಯುಗಳನ್ನು ಬಿಗಿಯಾಗಿಸುವುದರಿಂದ ಬೆನ್ನು ನೋವು ಉಂಟಾಗುತ್ತದೆ. ಒತ್ತಡದ ಮೂಲಗಳ ನಿರ್ವಹಣೆ ಯಾ ನಿವಾರಣೆಯು ಬೆನ್ನು ನೋವಿನ ಅಪಾಯವನ್ನು ಕಡಮೆ ಮಾಡಲು ಸಹಾಯ ಮಾಡಬಲ್ಲದು.
ಕೆಲಸ ಮಾಡುವಾಗ ಅಥವಾ ದೂರ ಪ್ರಯಾಣಿಸುವಾಗ ಹೆಚ್ಚು ಸಮಯ ಕುಳಿತುಕೊಳ್ಳುವವರು ಬೆನ್ನಿನ ಉಳುಕನ್ನು ಅನುಭವಿಸಬಹುದು. ಒಂದು ಸ್ವೀಡಿಷ್ ಅಧ್ಯಯನಕ್ಕನುಸಾರ, ಕುಳಿತುಕೊಳ್ಳುವಾಗ ಕೆಳಬೆನ್ನಿನ ಮೇಲೆ ಎಷ್ಟೋ ಹೆಚ್ಚು ಭಾರವು ಹಾಕಲ್ಪಡುತ್ತದೆ. ಅಸಂತೋಷಕರ ವಿಷಯವೇನಂದರೆ, ಸಾಕಷ್ಟು ಬೆಂಬಲವಿಲ್ಲದ ಆಫೀಸ್ ಕುರ್ಚಿಗಳಿಂದ ಈ ಅಪಾಯ ಹೆಚ್ಚುತ್ತದೆ. ಈ ಕುಳಿತುಕೊಳ್ಳುವಿಕೆಯನ್ನು ನಿಯತ ಅವಕಾಶಗಳಲ್ಲಿ ಕೆಲವು ನಿಮಿಷಗಳಿಗಾಗಿ ನಿಂತು ಮತ್ತು ನಡೆದಾಡಿ ಅಡಯಿಸ್ಡುವುದು ಸಹಾಯಕರವಾಗಿರಬಹುದು.
ಭಾರವಾದ ಅಥವಾ ಹಗುರವಾದ ವಸ್ತುಗಳನ್ನು ಸಹ ಎತ್ತುವಾಗ ಜನರು ತಮ್ಮ ಬೆನ್ನಿನ ಸ್ನಾಯುಗಳನ್ನು ಉಪಯೋಗಿಸುವುದರ ವಿರುದ್ಧ ಎಚ್ಚರಿಕೆಯಿಂದಿರಬೇಕು.
ಎಸೆಂಬ್ಲಿ ಲೈನ್ ಕೆಲಸಗಾರರು, ನರ್ಸ್ಗಳು, ಎಲೆಕಿಷ್ಟ್ರನರು, ಮನೆ ನೋಡಿಕೊಳ್ಳುವವರು ಮತ್ತು ರೈತರು—ಇವರೆಲ್ಲ ತಮ್ಮ ಕೆಲಸಗಳನ್ನು ಮಾಡುವಾಗ ಹೆಚ್ಚು ಕಾಲಾವಧಿಗಳಲ್ಲಿ ಮುಂದೆ ಬಾಗುವ ಅಗತ್ಯವಿರುತ್ತದೆ. ಬೆನ್ನು ಹಾನಿಯ ಅಪಾಯವನ್ನು ಕಡಮೆ ಮಾಡಲು ಅವರು ನಿಯತಕಾಲಿಕವಾಗಿ ವಿಶ್ರಮಿಸಿಕೊಳ್ಳಬೇಕು ಅಥವಾ ತಮ್ಮ ಭಂಗಿಯನ್ನು ಬದಲಾಯಿಸಬೇಕು ಎಂದು ದೇಹ ಚಿಕಿತ್ಸಕರು ಶಿಫಾರಸ್ಸು ಮಾಡುತ್ತಾರೆ. ಲಂಬಿಸಿದ ಸಮಯ ನಿಲ್ಲುವವರಿಗೆ, ಅವರು ಒಂದು ಸ್ಟೂಲನ್ನು ಅಥವಾ ಒಂದು ಕಾಲುಮಣೆಯನ್ನು ಬಳಸುವಂತೆ ಮತ್ತು ಕೆಳಬೆನ್ನನ್ನು ನೆಟ್ಟಗಿಡುವ ಕಾರಣದಿಂದ ಒಂದು ಪಾದವನ್ನು ತುಸು ಎತ್ತರದಲ್ಲಿಡುವಂತೆ ಬುದ್ಧಿ ಹೇಳಲಾಗುತ್ತದೆ.
ಚಿಕಿತ್ಸೆಗಾಗಿ ಅನ್ವೇಷಣೆ
ಸ್ನಾಯು ಮೂಲದಿಂದಾಗಿ ಬೆನ್ನು ನೋವನ್ನು ಅನುಭವಿಸುವವರಲ್ಲಿ ಅಧಿಕಾಂಶಕ್ಕೆ, ವೈದ್ಯರು ಸಾಂಪ್ರದಾಯಿಕ ಚಿಕಿತ್ಸೆ—ಹಾಸಿಗೆಯಲ್ಲಿ ವಿಶ್ರಾಂತಿ, ಶಾಖದ ಉಪಯೋಗ, ನೀವುವ ಚಿಕಿತ್ಸೆ, ವ್ಯಾಯಾಮ ಮತ್ತು ಆರಂಭದಲ್ಲಿ, ಊತಹಾರಿ ಬೇನೆ ಶಾಮಕ ಔಷಧಿಗಳು—ಯನ್ನು ಶಿಫಾರಸ್ಸು ಮಾಡುತ್ತಾರೆ. ಇವುಗಳಲ್ಲಿ ಕೊನೆಯದರ್ದ ಸಂಬಂಧದಲ್ಲಿ, ಯೂನಿವರ್ಸಿಟಿ ಆಫ್ ಮಯಾಮಿ ಸ್ಕೂಲ್ ಆಫ್ ಮೆಡಿಸಿನ್ನ ಡಾ. ಮಾರ್ಕ್ ಬ್ರೌನ್ ಒಂದು ಎಚ್ಚರಿಕೆಯನ್ನು ಕೊಡುತ್ತಾರೆ. ಅಮೆರಿಕದಲ್ಲಿ, ವೇದನಹಾರಿ ಔಷಧಗಳ ಲಂಬಿಸಿದ ಉಪಯೋಗವು ಅಂದರೆ, ಔಷಧಗಳಿಂದ ಬರುವ ಅಡ್ಡತೊಡಕುಗಳು, ಬೆನ್ನು ನೋವು ಬಾಧೆಯ ಒಂದು ಪ್ರಧಾನ ಕಾರಣವೆಂದು ಅವರು ಗಮನಿಸುತ್ತಾರೆ. ಒಂದು ಔಷಧಕ್ಕೆ ಸಹಿಷ್ಣುತೆಯನ್ನು ಬೆಳೆಸುವುದರ ವಿರುದ್ಧ ಜನರು ಎಚ್ಚರಿಕೆ ವಹಿಸುವುದು ಅಗತ್ಯ. ಇದರಿಂದಾಗಿ ಹೆಚ್ಚಿನ ಪರಿಮಾಣದಲ್ಲಿ ಔಷಧವನ್ನು ಸೇವಿಸಸಾಧ್ಯವಿದ್ದು ಅದು ದುಶ್ಚಟವಾಗಿ ಪರಿಣಮಿಸಬಲ್ಲದು.
ಕೆಲವು ರೋಗಿಗಳಿಗೆ ದೇಹ ಚಿಕಿತ್ಸೆ ಮತ್ತು ಕಶೇರು ಮರ್ದನ ಚಿಕಿತ್ಸಾ ಸ್ಥಳಗಳಿಗೆ ಭೇಟಿ ಕೊಡುವುದು ಸಹ ಸಹಾಯ ಮತ್ತು ಉಪಶಮನವನ್ನು ತಂದೀತು. ಅಮೆರಿಕದಲ್ಲಿ ಬೆನ್ನು ನೋವಿನ ಎಲ್ಲ ರೋಗಿಗಳ ಭೇಟಿಗಳಲ್ಲಿ ಕಶೇರು ಮರ್ದನ ಚಿಕಿತ್ಸೆಯನ್ನು ತೆಗೆದುಕೊಳ್ಳುವವರು ಮೂರರಲ್ಲಿ ಎರಡು ಅಂಶ, ಎಂದು ಹೆಲ್ಫ್ತ್ಯಾಕ್ಟ್ಸ್ ಪತ್ರಿಕೆ ಗಮನಿಸುತ್ತದೆ.
ಹೊರಚಾಚಿರುವ ತಟ್ಟೆಗಳ ಸಂಬಂಧದ ಸಮಸ್ಯೆಗಳನ್ನು ಸರಿಪಡಿಸಲು ಅಥವಾ ಬೇನೆಯನ್ನು ಶಮನಮಾಡಲು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದೀತು. ಆದರೂ, ಹೆಚ್ಚು ಸಲ, ಬೆನ್ನು ನೋವಿನಿಂದ ಬಾಧೆಪಡುವವರಲ್ಲಿ ಅಧಿಕಾಂಶಕ್ಕೆ, ವೈದ್ಯರು ಮೊದಲನೆಯದಾಗಿ ಸಾಂಪ್ರದಾಯಿಕ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುತ್ತಾರೆ. ಶಸ್ತ್ರ ಚಿಕಿತ್ಸೆ ಅಗತ್ಯವೆಂದು ಹೇಳಲ್ಪಡುವ ಜನರು ಎರಡನೆಯ ಅಥವಾ ಮೂರನೆಯ ಅಭಿಪ್ರಾಯಗಳನ್ನು ಪಡೆಯುವುದು ಒಳ್ಳೆಯದು.
ಬಾಧೆ ಪಡುವ ಲಕ್ಷಗಟ್ಟಲೆ ಜನರಿಗೆ ಸತತವಾದ ಆದರೂ ತಾಳಸಾಧ್ಯವಿರುವ ಬೆನ್ನು ನೋವು ಜೀವನದ ಒಂದು ಭಾಗವಾಗಿದೆ. ಅನೇಕರು ವೇದನೆ ಅನಿವಾರ್ಯವೆಂದು ತಿಳಿದು ಅದು ದೈನಂದಿನ ಚಟುವಟಿಕೆಗಳನ್ನು ತಡೆಯದಂತೆ ಪ್ರಯತ್ನಿಸುತ್ತಾರೆ. ನೋವನ್ನು ಬರಿಸುವ ಕಾರಣಗಳ ಪ್ರಜ್ಞೆ ಅವರಿಗಿದ್ದು, ಅದನ್ನು ತಡೆಯಲು ಅಥವಾ ಪ್ರತೀಕರಿಸಲು ಕ್ರಮಗಳನ್ನು ಕೈಕೊಳ್ಳುತ್ತಾರೆ. ಅವರು ಕ್ರಮವಾಗಿ ವ್ಯಾಯಾಮ ಮಾಡಿ, ಯೋಗ್ಯ ತೂಕವನ್ನು ಕಾಪಾಡಿಕೊಂಡು, ತಮ್ಮ ಭಂಗಿಯನ್ನು ಉತ್ತಮಗೊಳಿಸಿ, ತಮ್ಮ ಜೀವನಗಳಲ್ಲಿ ಒತ್ತಡವನ್ನು ಕಡಮೆ ಮಾಡುತ್ತಾರೆ. ಹೊರಚಾಚಿರುವ ತಟ್ಟೆ ಮತ್ತು ಸ್ನಾಯು ಸೆಡೆತಗಳ ಮರಳಿ ಬರುವ ಬೇನೆಯ ಎದುರಿನಲ್ಲಿಯೂ, ಈ ಮೊದಲು ಹೇಳಲಾಗಿರುವ ಕ್ಯಾರನ್, ಹರ್ಷಚಿತ್ತದಿಂದ ಒಂದು ಕಾರ್ಯಮಗ್ನ ಸಮಯತಖ್ತೆಯನ್ನು ಇಟ್ಟುಕೊಂಡು, ಯೆಹೋವನ ಸಾಕ್ಷಿಗಳ ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಅಧಿಕ ಸಮಯವನ್ನು ಕಳೆಯುತ್ತಿದ್ದಾಳೆ. ಕ್ಯಾರನಳಂತೆಯೇ ಅನೇಕ ನೋವಿಗೊಳಗಾದವರು ಒಂದು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಂಡು ತಮ್ಮ ಬೆನ್ನು ನೋವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕಾರ್ಯ ನಡೆಸುತ್ತಿದ್ದಾರೆ. (g94 6/8)
[ಪುಟ 24 ರಲ್ಲಿರುವ ಚೌಕ]
ಬೆನ್ನು ನೋವನ್ನು ತಪ್ಪಿಸಲು ಕೆಲವು ಸಹಾಯಗಳು
☞ ಯಾವುದನ್ನಾದರೂ ಹೆಕ್ಕುವಾಗ ಥಟ್ಟನೆ, ಸೆಳವಿನಿಂದ ಮಾಡುವ ಚಲನೆಯನ್ನು ತಪ್ಪಿಸಿರಿ. ಸೊಂಟವನ್ನು ಬಗ್ಗಿಸುವ ಬದಲಿಗೆ ಮೊಣಕಾಲನ್ನು ಬಗ್ಗಿಸಿರಿ.
☞ ಭಾರವಾದ ವಸ್ತುಗಳನ್ನು ಎತ್ತುವಾಗ ಸಹಾಯವನ್ನು ಕೇಳಿರಿ.
☞ ಅನೇಕ ಕಟ್ಟುಗಳನ್ನು ಹೊತ್ತುಕೊಂಡು ಹೋಗುವಾಗ ಭಾರವು ಪ್ರತಿಯೊಂದು ಪಕ್ಕದಲ್ಲಿ ಸಮತೂಕದಲ್ಲಿರಲಿ. ಭಾರವಾದ ಒಂದೇ ವಸ್ತುವನ್ನು ಒಯ್ಯುವಾಗ, ಎರಡೂ ತೋಳುಗಳನ್ನು ಮುಂದೆ, ದೇಹಕ್ಕೆ ತಾಗಿ ಇಟ್ಟು ಒಯ್ಯಿರಿ. ಪಕ್ಕದಲ್ಲಿಟ್ಟು ಒಯ್ಯುವುದಾದರೆ, ಪಕ್ಕಗಳನ್ನು ಪರಸ್ಪರ ವಿನಿಮಯಿಸಿರಿ.
☞ ಪ್ರಯಾಣದಲ್ಲಿ ಮಡಿಚಬಲ್ಲ ವಸ್ತು ವಾಹಕವನ್ನು ಮತ್ತು⁄ಅಥವಾ ಹೆಗಲ ಪಟ್ಟಿಯಿರುವ ಹಗುರ ಪೆಟ್ಟಿಗೆಗಳನ್ನು ಬಳಸಿರಿ.
☞ ಕಾರಿನ ಹಿಂಪೆಟ್ಟಿಗೆಯಿಂದ ಸಾಮಾನುಗಳನ್ನು ಎತ್ತುವಾಗ, ಎತ್ತುವ ಮೊದಲು ವಸ್ತುಗಳನ್ನು ದೇಹಕ್ಕೆ ಒತ್ತಾಗಿ ಇಡಿರಿ.
☞ ವ್ಯಾಕ್ಯೂಮ್ ಕ್ಲೀನ್ ಮಾಡುವಾಗ ಉದ್ದ ಹಿಡಿಯ ವ್ಯಾಕ್ಯೂಮ್ ಕೀನ್ಲರನ್ನು ಉಪಯೋಗಿಸಿ. ಅಡಿಯಲ್ಲಿರುವ ವಸ್ತುಗಳನ್ನು ವ್ಯಾಕ್ಯೂಮ್ ಮಾಡುವಾಗ ಸೊಂಟದಿಂದ ಬಗ್ಗುವ ಬದಲಾಗಿ, ಮೆತ್ತೆ ಕಾಪನ್ನು (ನೀ ಪ್ಯಾಡ್) ಉಪಯೋಗಿಸಿ ಒಂದು ಮೊಣಕಾಲನ್ನು ಊರಿರಿ. ಸೊಂಟದಿಂದ ಬಗ್ಗುವುದು ಅನಿವಾರ್ಯವಾಗಿರುವಲ್ಲಿ, ಸಾಧ್ಯವಿರುವಲ್ಲಿ, ಒಂದು ಕೈಯನ್ನು ಯಾವುದರ ಮೇಲಾದರೂ ಊರಿ ನಿಮ್ಮನ್ನು ಆಧಾರಿಸಿಕೊಳ್ಳಿ.
☞ ಆಫೀಸ್ ಕೆಲಸ ಮಾಡುತ್ತಿರುವಾಗ, ಮೇಜಿನ ಬಳಿ ಕುಳಿತುಕೊಳ್ಳುವುದನ್ನೂ ಸೊಂಟದಷ್ಟು ಎತ್ತರದ ಕೆಲಸ ಕ್ಷೇತ್ರದ ಬಳಿ ನಿಂತುಕೊಳ್ಳುವುದನ್ನೂ ವಿನಿಮಯಿಸಿ.
☞ ತೋಟಗಾರಿಕೆ ಮಾಡುವಾಗ ಮೊಣಕಾಲೂರಿರಿ, ಮತ್ತು ಕೆಲಸವನ್ನು ತುಸು ಕಾಲ ಮಾಡುವಂತೆ ವಿಭಾಗಿಸಿರಿ. ನಿಲ್ಲುವಾಗ ಸೊಂಟದಿಂದ ಬಗ್ಗಬೇಡಿ.
☞ ಬೆನ್ನು ವ್ಯಾಯಾಮವನ್ನು, ಅದು ದಿನಕ್ಕೆ ಕೇವಲ 10ರಿಂದ 15 ನಿಮಿಷಗಳೇ ಆಗಿರಲಿ, ಕ್ರಮವಾಗಿ ಮಾಡಿರಿ. ನೀವು ವಯಸ್ಸಾಗಿರುವವರಾದರೆ, ಮಿತವಾದ ರೀತಿಯ ವ್ಯಾಯಾಮಗಳನ್ನು ಮಾಡಿರಿ.
☞ ಹಾಸಿಗೆಗಳನ್ನು ತಯಾರಿಸುವಾಗ, ಹಾಸಿಗೆಯ ಮೇಲೆ ಒಂದು ಮೊಣಕಾಲನ್ನೂರಿರಿ, ಮತ್ತು ಹಾಸಿಗೆಯ ಆಚೆ ಬದಿಗೆ ಚಾಚುವಾಗ ಒಂದು ಕೈಯನ್ನೂರಿ ಕೈಚಾಚಿರಿ. ದುಪ್ಪಟಿಯನ್ನು ನೆಟ್ಟಗೆ ಮಾಡುವಾಗ ಅಥವಾ ಹಾಸಿಗೆಯಡಿಗೆ ತುರುಕುವಾಗ ಹಾಸಿಗೆಯ ಎರಡೂ ಬದಿಗಳಲ್ಲಿ ನೆಲದ ಮೇಲೆ ಮೊಣಕಾಲೂರಿರಿ.
☞ ಹೆಚ್ಚು ದೂರ ವಾಹನ ನಡೆಸುವಾಗ, ಕಾರು ನಿಲ್ಲಿಸಿ ವಿಶ್ರಮಿಸಿರಿ. ಕಾರಿನ ಆಸನದ ಬೆನ್ನು ಅಹಿತವಾಗಿರುವಲ್ಲಿ, ಆಸನವು ನಿಮ್ಮ ಸೊಂಟದ ಹಿಂಭಾಗಕ್ಕೆ ಸರಿಯಾಗಿ ಹೊಂದದಿರುವ ಸ್ಥಳದಲ್ಲಿ ಒಂದು ದಿಂಬನ್ನು ಉಪಯೋಗಿಸಿ.
☞ ಗಟ್ಟಿ ನೆಲದ ಮೇಲೆ ಓಡುವ ವ್ಯಾಯಾಮ ಮಾಡಬೇಡಿ. ಯೋಗ್ಯವಾದ ವ್ಯಾಯಾಮ ಪಾದರಕ್ಷೆಗಳನ್ನು ಧರಿಸಿರಿ.
☞ ಆರಾಮ ಕುರ್ಚಿ ಯಾ ಸೋಫಾದ ಮೇಲೆ ಕುಳಿತುಕೊಳ್ಳುವಾಗ ಒಂದು ದಿಂಬು ಅಥವಾ ಬೇರೆ ಬೆನ್ನಾಧಾರವನ್ನು ಉಪಯೋಗಿಸಿ. ಮೆಲ್ಲನೆ, ಮೇಲೆತ್ತಲು ನಿಮ್ಮ ಕಾಲುಗಳನ್ನು ಉಪಯೋಗಿಸುತ್ತಾ, ಏಳಿರಿ.
☞ ಕೆಲಸದಲ್ಲಿ ಕುಳಿತು ಅನೇಕ ತಾಸುಗಳನ್ನು ಕಳೆಯುವುದಾದರೆ, ಯೋಗ್ಯಾಕಾರದ ಬೆಂಬಲವಿರುವ ಕುರ್ಚಿಯನ್ನು ಪಡೆಯಿರಿ. ಕೆಲವು ಬಾರಿ ಎದ್ದು ಅತ್ತಿತ್ತು ಚಲಿಸಿರಿ.
☞ ಫೈಲ್ ಕ್ಯಾಬಿನೆಟ್ ಸೆಳೆಖಾನೆಗಳ ಮೇಲೆ ಹೆಚ್ಚು ಹೊತ್ತು ಬಾಗಿಕೊಂಡಿರಬೇಡಿ. ಸಾಧ್ಯವಿರುವಾಗ ಕುರ್ಚಿಯ ಮೇಲೆ ಕುಳಿತುಕೊಳ್ಳಿ.
☞ ದಿನದಲ್ಲಿ ನೀವು ಎತ್ತರ ಹಿಮ್ಮಡಿಯ ಪಾದರಕ್ಷೆಗಳನ್ನು ಬಳಸಬೇಕಾಗಿರುವಲ್ಲಿ, ಅವುಗಳೊಂದಿಗೆ ಪರಸ್ಪರ ವಿನಿಮಯಿಸಲು ಸಾಧ್ಯವಿರುವಲ್ಲಿ ಹೆಚ್ಚು ಹಿತಕರವಾದ ಒಂದು ಜೊತೆಯನ್ನು ತನ್ನಿರಿ. (g94 6/8)