ಮೊಲೆಯೂಡಿಸುವಿಕೆಯ ಮೂಲಪಾಠಗಳು
ಎಚ್ಚರ!ದ ನೈಜೀರಿಯ ಸುದ್ದಿಗಾರರಿಂದ
ನೀವು ಅನೇಕ ತಾಯಂದಿರಂತೆ ನಿಮ್ಮ ಮಗುವಿಗೆ ಮೊಲೆಯೂಡಿಸಲು ನಿರ್ಣಯಿಸಿರುವಲ್ಲಿ ಮಾನವಸಂತತಿಯ ಸೃಷ್ಟಿಕರ್ತನು ಪ್ರೀತಿಯಿಂದ ಮಾಡಿರುವ ಒಂದು ಒದಗಿಸುವಿಕೆಯನ್ನು ಬಳಸಲು ಆರಿಸಿಕೊಂಡಿದ್ದೀರಿ. ನಿಮ್ಮ ಸ್ವಂತ ಶರೀರ ಉತ್ಪಾದಿಸುವ ಹಾಲು ನಿಮ್ಮ ಶಿಶುವಿನ ನಿಷ್ಕೃಷ್ಟ ಪೋಷಣಾವಶ್ಯಕತೆಗಳನ್ನು ಪೂರೈಸಿ ಆರೋಗ್ಯಕರವಾದ ಬೆಳವಣಿಗೆ ಮತ್ತು ವಿಕಸನವನ್ನು ಪ್ರವರ್ತಿಸುತ್ತದೆ. ಇದು ನಿಮ್ಮ ಮಗುವನ್ನು ಸಾಮಾನ್ಯ ರೋಗಗಳ ವಿರುದ್ಧವೂ ರಕ್ಷಿಸಲು ಸಹಾಯ ಮಾಡಬಲ್ಲದು. ಸಕಾರಣದಿಂದಲೇ, ಡಬ್ಲ್ಯೂಏಚ್‌ಓ (ಲೋಕಾರೋಗ್ಯ ಸಂಸ್ಥೆ) ಹೇಳುವುದು: “[ಮೊಲೆ ಹಾಲು] ಒಂದು ಮಗುವಿಗಿರುವ ಅತ್ಯುತ್ತಮ ಆಹಾರ. ದನದ ಹಾಲು, ಹಾಲಿನ ಪುಡಿ ದ್ರಾವಣಗಳು, ಮತ್ತು ದ್ರವೀಕರಿಸಿದ ಧಾನ್ಯಾಹಾರಗಳು—ಇವೆಲ್ಲ ಬದಲಿಗಳು ಕನಿಷ್ಠ ರೀತಿಯದ್ದಾಗಿವೆ.”
ಮೊಲೆಯೂಡಿಸುವಿಕೆ ನಿಮಗೂ ಪ್ರಯೋಜನಗಳನ್ನು ತರುತ್ತದೆ. ತೊಳೆಯಲು ಅಥವಾ ಕ್ರಿಮಿ ಶುದ್ಧಮಾಡಲು ಸೀಸೆಗಳಾಗಲಿ, ನಿಮ್ಮ ಕೂಸಿಗೆ ಆಹಾರ ತಯಾರಿಸಲಿಕ್ಕಾಗಿ ಮಧ್ಯ ರಾತ್ರಿಯಲ್ಲಿ ಎದ್ದು ಅಡುಗೆ ಮನೆಗೆ ಹೋಗಬೇಕೆಂದಾಗಲಿ ಇರುವುದಿಲ್ಲ. ಮೊಲೆಯೂಡಿಸುವಿಕೆಯು ನಿಮಗೆ ಶಾರೀರಿಕವಾಗಿಯೂ ಸಹಾಯಮಾಡುವುದು, ಹೇಗಂದರೆ ನೀವು ಗರ್ಭಿಣಿಯಾಗಿದ್ದ ಸಮಯ ನೀವು ಸಂಪಾದಿಸಿರುವ ತೂಕವನ್ನು ಕಳೆದುಕೊಳ್ಳುವಂತೆ ಅದು ಸಹಾಯ ಮಾಡುವುದು ಮಾತ್ರವಲ್ಲ, ನಿಮ್ಮ ಗರ್ಭಕೋಶ ಅದರ ಸಹಜ ಗಾತ್ರಕ್ಕೆ ಹಿಂದಿರುಗುವಂತೆ ಸಹ ಸಹಾಯಮಾಡುವುದು. ಮತ್ತು ತಮ್ಮ ಮಕ್ಕಳಿಗೆ ಮೊಲೆಯೂಡಿಸುವ ಸ್ತ್ರೀಯರು ಸ್ತನ್ಯ ಕ್ಯಾನ್ಸರನ್ನು ವಿಕಸಿಸುವುದು ಕಡಮೆ ಸಂಭಾವ್ಯವೆಂದು ಅಧ್ಯಯನಗಳು ಸೂಚಿಸುತ್ತವೆ.
“ಕಾರ್ಯತಃ ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿಗೆ ಮೊಲೆಯೂಡಿಸಬಲ್ಲಳು,” ಎಂದು ಸಂಯುಕ್ತ ರಾಷ್ಟ್ರ ಮಕ್ಕಳ ನಿಧಿ ಆಶ್ವಾಸನೆ ನೀಡುತ್ತದೆ. ಆದುದರಿಂದ ನೀವೂ ಮೊಲೆಯೂಡಿಸುವ ಸಂಭವವಿದೆ. ಆದರೆ ಮೊಲೆಯೂಡಿಸುವಿಕೆ ನೀವು ನಿರೀಕ್ಷಿಸಿರುವಷ್ಟು—ವಿಶೇಷವಾಗಿ, ಪ್ರಥಮ ಬಾರಿ ನೀವು ಪ್ರಯತ್ನಿಸುತ್ತಿರುವಲ್ಲಿ—ಸುಲಭವಲ್ಲವೆಂದು ನೀವು ಕಂಡುಹಿಡಿಯಬಹುದು. ಏಕೆಂದರೆ ಮೊಲೆಯೂಡಿಸುವಿಕೆ ಸ್ವಾಭಾವಿಕವಾದರೂ ಸಹಜ ಪ್ರವೃತ್ತಿಯದ್ದಾಗಿಲ್ಲದಿರುವುದೇ. ಆ ಕೌಶಲವನ್ನು ನೀವು ಕಲಿಯಬೇಕು. ನಿಮಗೆ ನಿಮ್ಮ ಮಗುವಿಗೆ ಒಂದು ಅನುಕೂಲವೂ ಆನಂದದಾಯಕವೂ ಆದ ನಿಯತಕ್ರಮವನ್ನು ಸ್ಥಾಪಿಸಲಿಕ್ಕೆ ಅನೇಕ ದಿನಗಳು ಅಥವಾ ಕೆಲವು ವಾರಗಳಾದರೂ ಬೇಕಾದೀತೆಂದು ನೀವು ಕಂಡುಕೊಳ್ಳಬಹುದು.
ಮಗು ಬರುವ ಮುನ್ನ
ನೀವು ಈ ಮೊದಲು ಸಾಫಲ್ಯದಿಂದ ಒಂದು ಮಗುವಿಗೆ ಮೊಲೆಯೂಡಿಸದೆ ಇದ್ದಿರುವಲ್ಲಿ, ಹಾಗೆ ಮಾಡಿರುವ ತಾಯಂದಿರೊಂದಿಗೆ ಮಾತಾಡಿ. ಅವರು ಸಮಸ್ಯೆಗಳನ್ನು ತಪ್ಪಿಸುವಂತೆ ಅಥವಾ ಅವನ್ನು ಜಯಿಸುವಂತೆ ಸಹಾಯ ಮಾಡಬಲ್ಲರು. ನಿಮ್ಮ ಮಗುವಿಗೆ ಕಾರ್ಯಸಾಧಕವಾಗಿ ಮೊಲೆಯೂಡಿಸುವ ನಿಮ್ಮ ಸಾಮರ್ಥ್ಯದಲ್ಲಿ ನಿಮ್ಮ ಭರವಸೆಯನ್ನು ಹೆಚ್ಚಿಸಲು ಸಹ ಅವರು ಸಹಾಯಮಾಡಬಲ್ಲರು.
ಗರ್ಭಿಣಿಯಾಗಿರುವಾಗ ಮತ್ತು ಆ ಬಳಿಕ, ನಿಮಗೆ ಸಾಕಷ್ಟು ವಿಶ್ರಮ ದೊರೆಯುವುದು ಪ್ರಾಮುಖ್ಯ. ಇದಲ್ಲದೆ, ನೀವು ಸಾಕಷ್ಟು ಆಹಾರವನ್ನು ತಿನ್ನುವ ವಿಷಯ ಖಾತ್ರಿ ಮಾಡಿಕೊಳ್ಳಿ. ಮೊಲೆಯೂಡಿಸುವಿಕೆ (ಇಂಗ್ಲಿಷ್) ಎಂಬ ಡಬ್ಲ್ಯೂಏಚ್‌ಓ ಪ್ರಕಾಶನ ಹೇಳುವುದು: “ಗರ್ಭಧಾರಣೆಗೆ ಮುಂಚೆ ಅಥವಾ ಆ ಸಮಯದಲ್ಲಿ ನ್ಯೂನ ಪೋಷಣೆ ಗರ್ಭದ ಮಗುವಿನ ನ್ಯೂನ ಬೆಳವಣಿಗೆಗೆ ಕಾರಣವಾಗಬಲ್ಲದು. ಆ ಬಳಿಕ ಸಾಕಷ್ಟು ಹಾಲನ್ನು ಉತ್ಪಾದಿಸುವ ಕಾರಣದಿಂದ ಸಾಕಷ್ಟು ಕೊಬ್ಬನ್ನು ಶೇಖರಿಸಿಡಲು ತಾಯಿ ಅಸಮರ್ಥಳು ಎಂದೂ ಇದರ ಅರ್ಥವಾಗಬಲ್ಲದು. ಆದಕಾರಣ ಗರ್ಭಧಾರಣೆ ಹಾಗೂ ಮೊಲೆಯೂಡಿಸುವಿಕೆಯ ಸಮಯದಲ್ಲೆಲ್ಲ ತಾಯಿಗೆ ವಿವಿಧ ಆಹಾರಗಳ ಮೇಲೆ ಆಧಾರಿಸಿದ ಸಮತೂಕದ ಆಹಾರವು ಅಗತ್ಯ.”
ಸ್ತನಗಳ ಆರೈಕೆ ಸಹ ಪ್ರಾಮುಖ್ಯ. ಗರ್ಭಧಾರಣೆಯ ಅಂತಿಮ ಮಾಸಗಳಲ್ಲಿ ಸ್ನಾನ ಮಾಡುವಾಗ ನಿಮ್ಮ ಸ್ತನಗಳನ್ನು ತೊಳೆಯಿರಿ, ಆದರೆ ಸಾಬೂನು ಹಚ್ಚಬೇಡಿ. ವರ್ಣವಲಯ (ಮೊಲೆತೊಟ್ಟಿನ ಸುತ್ತಲಿರುವ ಕಂದು ವಲಯ)ದ ಗ್ರಂಥಿಗಳು ತೊಟ್ಟುಗಳನ್ನು ಒದೆಯ್ದಾಗಿಟ್ಟು ರೋಗತಟ್ಟದಂತೆ ಕಾಯುವ ಒಂದು ಬ್ಯಾಕ್ಟೀರಿಯನಿರೋಧಕ ಎಣ್ಣೆಯನ್ನು ಸ್ರವಿಸುತ್ತವೆ. ಸಾಬೂನು ಮೊಲೆತೊಟ್ಟುಗಳನ್ನು ಒಣಗುವಂತೆ ಮಾಡಿ ಆ ಎಣ್ಣೆಯನ್ನು ತೆಗೆದುಬಿಡಬಹುದು ಯಾ ತಟಸ್ಥೀಕರಿಸಬಹುದು. ನಿಮ್ಮ ಮೊಲೆಗಳು ಒಣಗಿರುವಲ್ಲಿ ಅಥವಾ ತುರಿಸುವಲ್ಲಿ, ನೀವು ಒಂದು ಉಪಶಮನಕಾರಕ ಕ್ರೀಮ್ ಅಥವಾ ಲೋಶನನ್ನು ಹಚ್ಚಲು ಬಯಸಬಹುದು. ಆದರೆ ಅದನ್ನು ತೊಟ್ಟುಗಳಿಗೆ ಅಥವಾ ವರ್ಣವಲಯಕ್ಕೆ ಹಚ್ಚುವುದರಿಂದ ದೂರವಿರಿ.
ಒಂದು ಕಾಲದಲ್ಲಿ ವೈದ್ಯರು, ಗರ್ಭಧಾರಣೆಯ ಸಮಯದಲ್ಲಿ ತಾಯಂದಿರು ತಮ್ಮ ಮೊಲೆತೊಟ್ಟುಗಳನ್ನು ರಭಸವಾಗಿ ತಿಕ್ಕಿ “ಗಡುಸಾಗಿಸು”ವಂತೆ ಶಿಫಾರಸ್ಸು ಮಾಡುತ್ತಿದ್ದರು. ಇದು ಮೊಲೆಯೂಡಿಸುವ ಸಮಯದಲ್ಲಿ ತೊಟ್ಟಿನ ನೋವನ್ನು ಹೋಗಲಾಡಿಸುತ್ತದೆಂದು ಭಾವಿಸಲಾಗುತ್ತಿದ್ದಾದರೂ, ಇದು ಅತಿ ಸಹಾಯಕಾರಿಯಲ್ಲವೆಂದು ಅಧ್ಯಯನಗಳು ತೋರಿಸುತ್ತವೆ. ನೋಯುವಿಕೆ ಸಾಮಾನ್ಯವಾಗಿ ಬರುವುದು ಮೊಲೆಯೂಡಿಸುವ ಮಗುವನ್ನು ಸ್ತನದ ಬಳಿ ತಪ್ಪಾದ ಶರೀರ ಭಂಗಿಯಲ್ಲಿ ಹಿಡಿದುಕೊಳ್ಳುವ ಮೂಲಕವೇ.
ಸಫಲವಾದ ಮೊಲೆಯೂಡಿಸುವಿಕೆಯಲ್ಲಿ ಸ್ತನದ ಗಾತ್ರ ಮತ್ತು ಆಕಾರಗಳು ಕಾರಣಭೂತವಾದ ಅಂಶಗಳಾಗಿಲ್ಲ, ಆದರೆ ಹಿಂದೆ ಹೋಗಿರುವ ಅಥವಾ ಚಪ್ಪಟೆಯಾದ ತೊಟ್ಟನ್ನು ಒಂದು ಮಗುವು ಹಿಡಿಯಲಾರದು. ತೊಟ್ಟುಗಳು ಹೊರಕ್ಕೆ ಚಾಚಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ನಿಮ್ಮ ಹೆಬ್ಬೆರಳು ಮತ್ತು ತೋರು ಬೆರಳಿನಿಂದ ಪ್ರತಿಯೊಂದು ತೊಟ್ಟಿನ ಹಿಂದೆ ಮೃದುವಾಗಿ ಒತ್ತುವುದರ ಮೂಲಕ ನೀವು ನಿಮ್ಮನ್ನು ಪರೀಕ್ಷಿಸಿಕೊಳ್ಳಬಲ್ಲಿರಿ. ಅವು ಹೊರಕ್ಕೆ ಚಾಚಿರದಿದ್ದಲ್ಲಿ, ನಿಮ್ಮ ವೈದ್ಯರೊಂದಿಗೆ ಮಾತಾಡಿರಿ. ಗರ್ಭಿಣಿಯಾಗಿರುವಾಗ ಅಥವಾ ಮೊಲೆಯೂಡಿಸುವಿಕೆಯ ನಡುವಣ ಸಮಯಗಳಲ್ಲಿ ಧರಿಸಲ್ಪಡುವ ಒಂದು ಸರಳ ಸಾಧನವಾದ, ಸ್ತನ ಚಿಪ್ಪುನ್ನು ಅವರು ಶಿಫಾರಸ್ಸು ಮಾಡಬಹುದು. ಚಿಪ್ಪುಗಳು ಅನೇಕವೇಳೆ ಚಪ್ಪಟೆಯಾದ ಅಥವಾ ಹಿಂದೆ ಹೋಗಿರುವ ತೊಟ್ಟುಗಳ ಆಕಾರವನ್ನು ಪ್ರಗತಿಗೊಳಿಸುತ್ತದೆ.
ಆರಂಭದ ದಿನಗಳು
ಮಗುವನ್ನು ಹಡೆದ ಬಳಿಕ ಒಂದು ತಾಸಿನೊಳಗೆ ನಿಮ್ಮ ಮಗುವಿಗೆ ಮೊಲೆಯೂಡಿಸಲು ಆರಂಭಿಸುವುದು ನಿಮಗೆ ಒಳಿತಾಗಿದೆ. ಮಗುವನ್ನು ಹಡೆಯುವ ಎಲ್ಲಾ ಕೆಲಸದ ಬಳಿಕ ಕೂಡಲೆ ತಾಯಿ ಮತ್ತು ಮಗು ಇಬ್ಬರೂ ವೈಯಕ್ತಿಕ ಸಂಪರ್ಕವನ್ನು ಹೊಂದಲಿಕ್ಕಾಗಿ ತೀರ ಬಳಲಿರಸಾಧ್ಯವಿದೆಯೆಂದು ಕೆಲವರು ಅಭಿಪ್ರಯಿಸಬಹುದು. ಆದರೆ ತಾಯಿಯು ಸಾಮಾನ್ಯವಾಗಿ ಈ ಸಂದರ್ಭಕ್ಕಾಗಿ ಗೆಲವಾಗುತ್ತಾಳೆ, ಮತ್ತು ಗರ್ಭಾಶಯದ ಹೊರಗಿನ ಜೀವಿತಕ್ಕೆ ಸರಿಹೊಂದಿಸಿಕೊಳ್ಳಲಿಕ್ಕಾಗಿ ಕೆಲವು ನಿಮಿಷಗಳನ್ನು ತೆಗೆದುಕೊಂಡ ಬಳಿಕ ಮಗುವು, ಸ್ತನದ ಹಿತವನ್ನು ಅತ್ಯಾಸಕಿಯ್ತಿಂದ ಹುಡುಕುತ್ತದೆ.
ಹೊಸ ತಾಯಂದಿರು ತಮ್ಮ ನವಜನಿತ ಶಿಶುಗಳಿಗೆ ಕಲಾಸ್ಟ್ರಮ್ ಎಂದು ಕರೆಯಲ್ಪಡುವ ಹಳದಿ ಬಣ್ಣದ ಯಾ ತಿಳಿಯಾದ ವಸ್ತುವನ್ನು ಮೊಲೆಯೂಡಿಸುವಿಕೆಯ ಮೂಲಕ ಒದಗಿಸಬಲ್ಲರು. ಈ “ದ್ರವ ಚಿನ್ನ”ವು ಮಗುವಿಗೆ ವಿಪರೀತ ಪ್ರಯೋಜನಕರವಾಗಿದೆ. ಹಾನಿಕರವಾದ ಬ್ಯಾಕ್ಟೀರಿಯವನ್ನು ಓಡಿಸುವ ಘಟಕಗಳನ್ನು ಇದು ಒಳಗೊಂಡಿದೆ. ಹಾಗೂ ಜೀವಿತದ ಮೊದಲ ಕೆಲವು ದಿನಗಳಲ್ಲಿ ಅದನ್ನು ಆದರ್ಶ ಆಹಾರವನ್ನಾಗಿ ಮಾಡುತ್ತಾ, ಇದರಲ್ಲಿ ಸಸಾರಜನಕವು ಹೇರಳವಾಗಿದೆ ಮತ್ತು ಸಕ್ಕರೆ ಹಾಗೂ ಕೊಬ್ಬಿನ ಪ್ರಮಾಣವು ಕಡಿಮೆಯಿದೆ. ಯಾವುದೇ ವೈದ್ಯಕೀಯ ಸಮಸ್ಯೆ ಇದ್ದ ಹೊರತು ಮಗುವಿಗೆ ಇತರ ಯಾವುದೇ ಆಹಾರ ಅಥವಾ ಪಾನೀಯದ ಅಗತ್ಯವಿಲ್ಲ. ಸೀಸೆಯೊಂದರಿಂದ ಹಾಲನ್ನು ಚೀಪಲು ಅದಕ್ಕೆ ಕಡಮೆ ಪ್ರಯತ್ನದ ಅಗತ್ಯವಿರುವುದರಿಂದ, ಹೆಚ್ಚಿಗೆಯ ಸೀಸೆಯ ಹಾಲುಣಿತವು ಮಗುವೊಂದನ್ನು ಮೊಲೆಯುಣ್ಣುವುದರಿಂದ ನಿರಾಶೆಗೊಳಿಸಬಲ್ಲದು.
ಸಾಮಾನ್ಯವಾಗಿ ತಾಯಂದಿರು ಮಗುವನ್ನು ಹಡೆದ ಎರಡರಿಂದ ಐದು ದಿನಗಳ ಬಳಿಕ ಕಲಾಸ್ಟ್ರಮ್‌ರಹಿತ ಹಾಲನ್ನು ಉತ್ಪಾದಿಸಲಾರಂಭಿಸುತ್ತಾರೆ. ಈ ಸಮಯದಲ್ಲಿ ಸ್ತನಗಳಿಗೆ ರಕ್ತದ ಅಧಿಕಗೊಂಡ ಹರಿವಿನಿಂದಾಗಿ ನಿಮ್ಮ ಸ್ತನಗಳು ಉಬ್ಬಿಕೊಳ್ಳಬಹುದು ಮತ್ತು ಅವುಗಳನ್ನು ಕೋಮಲವಾದವುಗಳನ್ನಾಗಿ ಮಾಡಬಹುದು. ಇದು ಸಹಜವಾಗಿದೆ. ಮೊಲೆಯೂಡಿಸುವಿಕೆಯು ಸಾಮಾನ್ಯವಾಗಿ ಮುಜುಗರವನ್ನು ಉಪಶಮನ ಮಾಡುವುದು. ಆದರೂ, ಕೆಲವೊಮ್ಮೆ ಉಬ್ಬಿದ ಸ್ತನಗಳು ತೊಟ್ಟುಗಳನ್ನು ಚಪ್ಪಟೆಯಾಗುವಂತೆ ಮಾಡುವುವು. ಇದು ಮಗುವಿಗೆ ಚೀಪಲು ಕಷ್ಟವಾಗಿ ಮಾಡುವುದರಿಂದ, ನೀವು ಸ್ವಲ್ಪ ಹಾಲನ್ನು ಕೈಯಿಂದ ಹೊರಕ್ಕೆ ತೆಗೆಯಬೇಕಾಗಬಹುದು. ಪ್ರತಿಯೊಂದು ಸ್ತನವನ್ನು ಒತ್ತಲಿಕ್ಕಾಗಿ ಎರಡೂ ಕೈಗಳನ್ನು ಉಪಯೋಗಿಸಿ, ಸ್ತನಗಳ ತಳಭಾಗದಿಂದ ಆರಂಭಿಸಿ, ತೊಟ್ಟುಗಳ ಕಡೆಗೆ ಮುಂದುವರಿಯುವ ಮೂಲಕ ನೀವು ಇದನ್ನು ಮಾಡಬಲ್ಲಿರಿ.
ನಿಮ್ಮ ಮಗುವು ಸ್ತನದಿಂದ ಎಷ್ಟು ಹಾಲನ್ನು ತೆಗೆದುಕೊಳ್ಳುತ್ತದೆಂಬುದನ್ನು ನೀವು ಅಳೆಯಲು ಸಾಧ್ಯವಿಲ್ಲ, ಆದರೆ ಚಿಂತಿಸದಿರಿ—ಮಗುವು ಅವಳಿಯಾಗಿರುವುದಾದರೂ, ಮಗುವು ಅಗತ್ಯಪಡಿಸುವುದೆಲ್ಲವನ್ನು ಒದಗಿಸುವಂತೆ ನಿಮ್ಮ ದೇಹವು ಸಜ್ಜುಗೊಳಿಸಲ್ಪಡುತ್ತದೆ! ಮೊಲೆಯೂಡಿಸಿದಷ್ಟೂ ಹೆಚ್ಚಾಗಿ ಹಾಲನ್ನು ನೀವು ಉತ್ಪಾದಿಸುವಿರಿ. ಹಾಲಿನ ಪುಡಿ ದ್ರಾವಣಗಳು ಅಥವಾ ದನದ ಹಾಲುಗಳಂತಹ ಸೀಸೆಹಾಲು ಹುಯ್ದ ಪಾನೀಯಗಳೊಂದಿಗೆ ಎದೆಹಾಲನ್ನು ನೀವು ಯಾಕೆ ಹೆಚ್ಚಿಗೆ ಸೇರಿಸಬಾರದು ಎಂಬುದಕ್ಕೆ ಇದು ಒಂದು ಕಾರಣವಾಗಿದೆ. ನೀವು ಹಾಗೆ ಮಾಡುವುದಾದರೆ, ನಿಮ್ಮ ಮಗುವು ನಿಮ್ಮಿಂದ ಕಡಿಮೆ ಹಾಲನ್ನು ತೆಗೆದುಕೊಳ್ಳುವುದು. ಅದಕ್ಕೆ ಪ್ರತಿಯಾಗಿ, ನೀವು ಕಡಿಮೆ ಹಾಲನ್ನು ಉತ್ಪಾದಿಸುವಿರೆಂದು ಇದು ಅರ್ಥೈಸುತ್ತದೆ.
“ಜನಿಸಿದ ಸಮಯದಲ್ಲಿ, ಪೂರ್ಣಾವಧಿಯ ಸಹಜ ಸ್ಥಿತಿಯ ಶಿಶುಗಳು ನೆನಸಿರುವಷ್ಟು ಪ್ರಾಯಶಃ ಅಸಹಾಯಕರಾಗಿಲ್ಲ ಮತ್ತು ಇತರ ಜನರು ಅದನ್ನು ಮಾಡುವಂತೆ ಅವುಗಳನ್ನು ಬಿಡುವುದಾದರೆ, ಅವುಗಳಿಗೆ ಮತ್ತು ಅವುಗಳ ತಾಯಂದಿರ ದೇಹಗಳಿಗೆ ಒಪ್ಪುವಂತೆ, ಅವು ತಮ್ಮ ಸ್ವಂತ ಊಟಗಳನ್ನು ಏರ್ಪಡಿಸಬಲ್ಲವು” ಎಂದು ದ ಪಾಲಿಟಿಕ್ಸ್ ಆಫ್ ಬ್ರೆಸ್ಟ್‌ಫೀಡಿಂಗ್‌ನಲ್ಲಿ ಗ್ಯಾಬ್ರೀಎಲ್ ಪಾಮರ್ ಬರೆಯುತ್ತಾರೆ. ಮಾರ್ಗದರ್ಶಿಸುವ ಮೂಲ ತತ್ವವು ಸರಬರಾಯಿ ಮತ್ತು ಗಿರಾಕಿಯಾಗಿದೆ—ನಿಮ್ಮ ಮಗುವು ಆಹಾರಕ್ಕಾಗಿ ತಗಾದೆ ಮಾಡುವಾಗ (ಸಾಮಾನ್ಯವಾಗಿ ಅಳುವ ಮೂಲಕ), ಒದಗಿಸಿರಿ. ಆರಂಭದಲ್ಲಿ, ಬೇಡಿಕೆಗಳು ಪ್ರತಿ ಎರಡು ಅಥವಾ ಮೂರು ತಾಸುಗಳಿಗೊಮ್ಮೆ ಬರುವುವು. ಪ್ರತಿ ಸಾರಿ ಅವನು ಮೊಲೆಯೂಡುವಾಗ, ನಿಮ್ಮ ಮಗುವು ಎರಡೂ ಸ್ತನಗಳಲ್ಲಿ ಮೊಲೆಯೂಡುವಂತೆ ನೀವು ಆಸ್ಪದ ಕೊಡಬೇಕು. ಒಂದು ಉಣಿಸುವಿಕೆಯನ್ನು ಪೂರ್ಣಗೊಳಿಸಲು ಅಧಿಕಾಂಶ ಶಿಶುಗಳು 20ರಿಂದ 40 ನಿಮಿಷಗಳನ್ನು ತೆಗೆದುಕೊಳ್ಳುತ್ತವೆ, ಆದರೂ ಕೆಲವು ಶಿಶುಗಳು ತಮ್ಮ ಬಿಡುವಿನ ಸಮಯದಲ್ಲಿ ವಿರಾಮದೊಂದಿಗೆ ಹಾಲುಣ್ಣಲು ಬಯಸುತ್ತವೆ. ಅಂತಹ ಮಂದಮತಿಗಳು ತಮ್ಮ ಊಟವನ್ನು ಮುಗಿಸಲು 60 ನಿಮಿಷಗಳನ್ನು ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ, 24 ತಾಸುಗಳಲ್ಲಿ ಅವನಿಗೆ ಕಡಿಮೆಪಕ್ಷ ಎಂಟು ಬಾರಿ ಮೊಲೆಯೂಡಿಸಲ್ಪಡುವುದಾದರೆ, ಅವನಿಗೆ ಮೊಲೆಯೂಡಿಸುತ್ತಿರುವಾಗ ಅವನು ಚೀಪುವ ಶಬ್ದವನ್ನು ನೀವು ಕೇಳಬಲ್ಲಿರಾದರೆ, ಮತ್ತು ಐದನೆಯ ದಿನದ ಬಳಿಕ ದಿನವೊಂದಕ್ಕೆ ಎಂಟು ಅಥವಾ ಹೆಚ್ಚು ಡೈಅಪರ್‌ಗಳನ್ನು ಒದ್ದೆ ಮಾಡಿರುವುದಾದರೆ, ನಿಮ್ಮ ಮಗುವು ತಿನ್ನಲು ಸಾಕಷ್ಟು ಆಹಾರವನ್ನು ಪಡೆಯುತ್ತಿದೆ.
ಸ್ತನದ ಬಳಿ ನಿಮ್ಮ ಮಗುವನ್ನು ಸರಿಯಾಗಿ ಹಿಡಿದುಕೊಳ್ಳುವ ವಿಧವನ್ನು ತಿಳಿದುಕೊಳ್ಳುವುದೇ, ಮೊಲೆಯೂಡಿಸುವಿಕೆಯಲ್ಲಿ ಪೂರ್ಣಾನುಭವವನ್ನು ಪಡೆಯಲು ನಿಮಗೆ ಅಗತ್ಯವಾಗಿರುವ ಅತ್ಯಂತ ಪ್ರಾಮುಖ್ಯವಾದ ಕೌಶಲವಾಗಿದೆ. ತಪ್ಪಾದ ಶರೀರ ಭಂಗಿಯಲ್ಲಿ ಹಿಡಿದುಕೊಳ್ಳುವುದು ನಿಮ್ಮ ಮಗುವು ಸಾಕಷ್ಟು ಹಾಲನ್ನು ಪಡೆದುಕೊಳ್ಳದಿರುವುದರಲ್ಲಿ ಫಲಿಸಬಲ್ಲದು. ಕೆಲವು ಶಿಶುಗಳು ಮೊಲೆಯೂಡಲೂ ನಿರಾಕರಿಸುತ್ತವೆ.
ತಪ್ಪಾದ ಶರೀರ ಭಂಗಿಯು ಇನ್ನೊಂದು ಸಾಮಾನ್ಯ ಸಮಸ್ಯೆಯಲ್ಲಿ ಫಲಿಸಬಲ್ಲದು: ಒಡಕಾದ ಅಥವಾ ಹುಣ್ಣಾದ ತೊಟ್ಟುಗಳು. ಬ್ರೆಸ್ಟ್ ಫೀಡಿಂಗ್ ಸೋರ್ಸ್ ಬುಕ್ ಹೇಳುವುದು: “ಹುಣ್ಣಾದ ತೊಟ್ಟುಗಳು ಅನೇಕ ಸಂಗತಿಗಳಿಂದ ಉಂಟಾಗುತ್ತವೆ, ಆದರೆ ಮಗುವು ಎಷ್ಟು ಚೆನ್ನಾಗಿ ‘ಸ್ತನಕ್ಕೆ ತನ್ನನ್ನು ಭದ್ರವಾಗಿ ಅಂಟಿಸಿಕೊಳ್ಳುತ್ತದೆ’ ಎಂಬುದು ಪ್ರಮುಖವಾದದ್ದಾಗಿದೆ, ಮತ್ತು ಅದು ಪರ್ಯಾಯವಾಗಿ ಸ್ತನಕ್ಕೆ ಸಂಬಂಧಿಸಿ ಅವನ ತಲೆಯು ಯಾವ ಶರೀರ ಭಂಗಿಯಲ್ಲಿದೆ ಎಂಬುದರ ಕುರಿತು ಪರಿಗಣನೀಯ ಮಟ್ಟವೊಂದನ್ನು ಆಧಾರಿಸಿರುತ್ತದೆ. ಸರಿಯಾದ ಶರೀರ ಭಂಗಿಗಾಗಿ, ಅವನು ತೊಟ್ಟನ್ನು ಒಂದು ಪಕ್ಕಕ್ಕೆ ಎಳೆಯದಿರಲಿಕ್ಕಾಗಿ ಅವನು ತೊಟ್ಟಿಗೆ ನೇರವಾಗಿರಬೇಕು ಮತ್ತು, ಅವನ ತಲೆಯನ್ನು ತಟಸ್ಥವಾಗಿಡುವುದರೊಂದಿಗೆ (ಮೇಲೆ, ಕೆಳಗೆ ಅಥವಾ ಪಕ್ಕಕ್ಕೆ ನೋಡದಂತೆ), ನಿಮ್ಮ ಮಗುವು ಸ್ತನಕ್ಕೆ ಸಮೀಪವಾಗಿರಬೇಕು.”
ಆದರ್ಶಪ್ರಾಯವಾಗಿ, ಸ್ತನದ ಮೇಲೆ—ತೊಟ್ಟಿನ ಕಡಿಮೆಪಕ್ಷ ಮೂರು ಸೆಂಟಿಮೀಟರ್ ಹಿಂದಕ್ಕೆ—ಶಿಶುವಿನ ತುಟಿಗಳು ಭದ್ರವಾದ ಅಂಟಿಕೆಯನ್ನು ರೂಪಿಸಬೇಕು. ನಿಮ್ಮ ಮಗುವಿನ ಇಡೀ ಶರೀರವು ನಿಮ್ಮ ಕಡೆಗೆ ತಿರುಗಿರುವುದಾದರೆ, ಅವನು ದೀರ್ಘವಾಗಿ ಚೀಪುವುದಾದರೆ, ಅವನು ವಿಶ್ರಾಂತಿ ಹೊಂದಿದವನೂ ಸಂತೋಷಿತನೂ ಆಗಿರುವಲ್ಲಿ ಮತ್ತು ತೊಟ್ಟಿನ ನೋವನ್ನು ನೀವು ಅನುಭವಿಸದಿರುವಲ್ಲಿ, ಶರೀರ ಭಂಗಿಯು ಸರಿಯಾಗಿದೆಯೆಂದು ನೀವು ತಿಳಿಯುವಿರಿ.
ಮೊಲೆ ಬಿಡಿಸುವ ಸಮಯ
ಮೊದಲ ಕೆಲವು ವಾರಗಳ ಬಳಿಕ, ನೀವು ಮತ್ತು ನಿಮ್ಮ ಮಗು, ಇಬ್ಬರೂ ಒಬ್ಬರಿಗೊಬ್ಬರು ಪರಿಚಿತರಾಗುತ್ತೀರಿ ಮತ್ತು ಬಹುಶಃ ತೃಪ್ತಿದಾಯಕವಾದ ಮತ್ತು ಆನಂದದಾಯಕವಾದ ನಿಯತಕ್ರಮವು ನಿಮಗಿರುತ್ತದೆ. ಅನಂತರದ ನಾಲ್ಕರಿಂದ ಆರು ತಿಂಗಳುಗಳ ವರೆಗೆ ನಿಮ್ಮ ಮಗುವಿಗೆ ಮೊಲೆ ಹಾಲಿನ ಹೊರತು ಬೇರಾವ ಪಾನೀಯ ಅಥವಾ ಆಹಾರದ ಅಗತ್ಯವಿರುವುದಿಲ್ಲ. ಆ ಸಮಯದ ಬಳಿಕ ನೀವು ಮೃದುಗೊಳಿಸಿದ ತರಕಾರಿಗಳು, ಧಾನ್ಯಾಹಾರಗಳು, ಅಥವಾ ಹಣ್ಣುಗಳಂತಹ ಇತರ ಆಹಾರಗಳನ್ನು ಕ್ರಮೇಣವಾಗಿ ಕೊಡಲು ಆರಂಭಿಸಬೇಕು. ಆದಾಗ್ಯೂ, ನಿಮ್ಮ ಮಗುವಿಗೆ ಒಂಬತ್ತು ಅಥವಾ ಹತ್ತು ತಿಂಗಳಾಗುವ ವರೆಗೆ, ಅವನ ಮುಖ್ಯ ಪೋಷಣೆಯು ಇನ್ನೂ ನಿಮ್ಮ ಹಾಲಿನಿಂದ ಬರುವುದು; ಆದುದರಿಂದ ಗಟ್ಟಿ ಆಹಾರವನ್ನು ಕೊಡುವುದಕ್ಕೆ ಮುಂಚೆ ನಿಮ್ಮ ಮಗುವಿಗೆ ಮೊಲೆಯೂಡಿಸುವುದು ಸದಾ ಒಳ್ಳೆಯದಾಗಿದೆ.
ಮೊಲೆಯೂಡಿಸುವುದನ್ನು ಎಷ್ಟು ಕಾಲದ ವರೆಗೆ ನೀವು ಮುಂದುವರಿಸಬೇಕು? ಸಾಧ್ಯವಿರುವ ವರೆಗೂ ಎಂದು ಡಬ್ಲ್ಯೂಏಚ್‌ಓ ಶಿಫಾರಸ್ಸು ಮಾಡುತ್ತದೆ. ಅನೇಕ ತಾಯಂದಿರು ಕ್ಯಾಲೆಂಡರಿನ ಮೇಲಲ್ಲ, ತಮ್ಮ ಮಕ್ಕಳ ಮೇಲೆ ದೃಷ್ಟಿಯಿಡುತ್ತಾ, ಎರಡನೆಯ ವರ್ಷದಲ್ಲೂ ಚೆನ್ನಾಗಿ ಮೊಲೆಯೂಡಿಸುವುದನ್ನು ಮುಂದುವರಿಸುತ್ತಾರೆ. ಮದರಿಂಗ್ ಯೂವರ್ ನರ್ಸಿಂಗ್ ಟಾಡ್‌ಲರ್ ಎಂಬ ಪುಸ್ತಕವು ಹೇಳುವುದು: “ನಮ್ಮ ಮಕ್ಕಳಿಗೆ ಸತತವಾದ ಮೊಲೆಯೂಡಿಸುವಿಕೆಗಾಗಿ ಇರುವ ಅಗತ್ಯವನ್ನು ಕಾಣುವುದು ಕಷ್ಟವಾಗಿಲ್ಲ—ಮೊಲೆಯೂಡಿಸುವಿಕೆಯಲ್ಲಿ ಅವರ ಆನಂದ ಮತ್ತು ಅದು ನಿರಾಕರಿಸಲ್ಪಡುವಾಗ ಅವರ ಸಂಕಟ. ಮಗುವನ್ನು ಸಂತೋಷಪಡಿಸುವುದೇ ಮೊಲೆಯೂಡಿಸುವುದನ್ನು ಮುಂದುವರಿಸುವುದರ ಒಂದು ಸರಳವಾದ, ಆದರೆ ತೀವ್ರವಾಗಿ ಒತ್ತಾಯಿಸುವ ಕಾರಣವಾಗಿದೆ.”
ಪ್ರೀತಿಸುವ ಸೃಷ್ಟಿಕರ್ತನೊಬ್ಬನ ಕುರಿತಾದ ಸಾಕ್ಷ್ಯ
ಕುಟುಂಬದ ಇತರ ಸದಸ್ಯರು ಮಲಗಿರುವಾಗ, ಬಹುಶಃ ರಾತ್ರಿ ತಡವಾಗಿ ನೀವು ನಿಮ್ಮ ಮಗುವಿಗೆ ಮೊಲೆಯೂಡಿಸುವಾಗ, ಈ ಏರ್ಪಾಡಿನ ಸೃಷ್ಟಿಕರ್ತನ ಕುರಿತು ಪರ್ಯಾಲೋಚಿಸಿರಿ. ಅದನ್ನು ಸಾಧ್ಯಮಾಡುವ ಸಂಕೀರ್ಣವಾದ ಭೌತಿಕ ಪ್ರಕ್ರಿಯೆಯನ್ನು ನೀವು ಗ್ರಹಿಸದಿರುವುದಾದರೂ, ಮೊಲೆಯೂಡಿಸುವಿಕೆಯ ಅದ್ಭುತ ಕಾರ್ಯವು ನಮ್ಮ ಸೃಷ್ಟಿಕರ್ತನ ಜ್ಞಾನ ಮತ್ತು ಪ್ರೀತಿಯನ್ನು ನೋಡುವಂತೆ ನಿಮಗೆ ಸಹಾಯ ಮಾಡುವುದು.
ಅದರ ಕುರಿತು ಯೋಚಿಸಿರಿ—ಮಕ್ಕಳಿಗೆ ತಾಯಿಯ ಹಾಲಿಗಿಂತಲೂ ಹೆಚ್ಚು ಉತ್ತಮವಾದ ಆಹಾರವು ಬೇರೊಂದಿಲ್ಲ. ಜೀವಿತದ ಆರಂಭದ ತಿಂಗಳುಗಳಲ್ಲಿ ಆಹಾರ ಮತ್ತು ಪಾನೀಯಕ್ಕಾಗಿರುವ ಮಗುವಿನ ಆವಶ್ಯಕತೆಗಳನ್ನು ಅದು ಸಂಪೂರ್ಣವಾಗಿ ಪೂರೈಸುತ್ತದೆ. ಅದೇ ಸಮಯದಲ್ಲಿ, ಇದು ರೋಗದ ವಿರುದ್ಧ ಸಂರಕ್ಷಿಸುವ ಒಂದು ಅದ್ಭುತವಾದ ಔಷಧವಾಗಿದೆ. ಅದು ಸುರಕ್ಷಿತವೂ, ಆರೋಗ್ಯಕ್ಕೆ ಕ್ಷೇಮವಾದದ್ದೂ, ತಯಾರಿಕೆಯ ಅಗತ್ಯವಿಲ್ಲದ್ದೂ, ಮತ್ತು ವೆಚ್ಚವಿಲ್ಲದ್ದೂ ಆಗಿದೆ. ಅದು ಸಾರ್ವತ್ರಿಕವಾಗಿ ದೊರಕುತ್ತದೆ, ಮತ್ತು ಶಿಶುವು ದೊಡ್ಡದಾಗಿ ಬೆಳೆದಂತೆ ಅದರ ಉತ್ಪಾದನೆಯು ಹೆಚ್ಚಾಗುತ್ತದೆ.
ಮತ್ತು ಮೊಲೆಯೂಡಿಸುವಿಕೆಯು ತಾಯಿ ಮತ್ತು ಮಗು ಇಬ್ಬರಿಗೂ ಸಂತೋಷಕರವಾದ ಒಂದು ಅನುಭವವಾಗಿದೆ ಎಂಬ ವಾಸ್ತವಿಕತೆಯ ಕುರಿತು ಆಲೋಚಿಸಿರಿ. ಆಹಾರವನ್ನು ಕೊಡುವುದು, ಬಾಯಿಯ ಮತ್ತು ಚರ್ಮಕ್ಕೆ ಚರ್ಮ ಸಂಪರ್ಕ, ಮತ್ತು ಮೊಲೆಯೂಡಿಸುವಿಕೆಯ ಶಾರೀರಿಕ ಅನುರಾಗ—ಇವೆಲ್ಲವೂ ತಾಯಿ ಮತ್ತು ಮಗುವಿನ ನಡುವೆ ಪ್ರೀತಿ ಮತ್ತು ಆತ್ಮೀಯತೆಯ ಬಲವಾದ ಬಂಧವನ್ನು ಪ್ರವರ್ಧಿಸಲು ಸಹಾಯ ಮಾಡುತ್ತವೆ.
ಆಶ್ಚರ್ಯಕರವಾದ ಈ ಏರ್ಪಾಡಿನ ಸೃಷ್ಟಿಕರ್ತನನ್ನು ಬಹಳವಾಗಿ ಸ್ತುತಿಸಬೇಕಾಗಿದೆ ನಿಜ. “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು [ಯೆಹೋವನನ್ನು] ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆ” ಎಂದು ಬರೆದ ಕೀರ್ತನೆಗಾರ ದಾವೀದನ ಮಾತುಗಳನ್ನು ನೀವು ಪ್ರತಿಧ್ವನಿಸುವಿರೆಂಬುದರಲ್ಲಿ ಸಂದೇಹವಿಲ್ಲ.—ಕೀರ್ತನೆ 139:14. (g94 8/22)
[ಪುಟ 12 ರಲ್ಲಿರುವ ಚೌಕ]
ಗಂಡಂದಿರೇ, ಬೆಂಬಲಿಸುವವರಾಗಿರಿ
• ಮೊಲೆಯೂಡಿಸುವಿಕೆಯನ್ನು ನೀವು ಅನುಮತಿಸುತ್ತೀರೆಂಬುದು ನಿಮ್ಮ ಹೆಂಡತಿಗೆ ತಿಳಿದಿರಲಿ. ಅವಳಿಗೆ ಪುನಃ ಭರವಸೆ ಕೊಡಿರಿ ಮತ್ತು ಕೋಮಲವಾಗಿ ಬೆಂಬಲಿಸಿರಿ.
• ಗರ್ಭಿಣಿಯಾಗಿರುವಾಗ ಮತ್ತು ಮಗುವು ಮೊಲೆಯೂಡುತ್ತಿರುವಾಗ ಸಮತೂಕವಾದ ಆಹಾರವನ್ನು ತಿನ್ನಲು ನಿಮ್ಮ ಹೆಂಡತಿಗೆ ಸಹಾಯ ಮಾಡಿರಿ.
• ಅವಳು ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಾಳೆಂಬುದನ್ನು ಖಚಿತಪಡಿಸಿಕೊಳ್ಳಿರಿ. ನಿತ್ರಾಣಳಾದ ಸ್ತ್ರೀಯೊಬ್ಬಳಿಗೆ ಸಾಕಷ್ಟು ಹಾಲನ್ನು ಉತ್ಪಾದಿಸುವುದರಲ್ಲಿ ತೊಂದರೆ ಇರಬಹುದು. ಬೇರೆ ಮಕ್ಕಳ ಪೋಷಣೆ ಮಾಡುವ ಮೂಲಕ ಅಥವಾ ಮನೆಯ ಕೆಲಸಗಳಲ್ಲಿ ಪಾಲ್ಗೊಳ್ಳುವ ಮೂಲಕ ಅವಳ ಹೊರೆಗಳನ್ನು ಕಡಿಮೆಗೊಳಿಸಲು ನೀವು ಸಹಾಯ ಮಾಡಬಲ್ಲಿರೊ?
• ನಿಮ್ಮ ಹೆಂಡತಿಯು ವಿಶ್ರಾಂತಿ ತೆಗೆದುಕೊಂಡು, ಸಂತೋಷದಿಂದಿರುವುದಾದರೆ, ಅವಳ ಹಾಲು ಹೆಚ್ಚು ಉತ್ತಮವಾಗಿ ಸ್ರವಿಸುವುದು. ನಿಮ್ಮಿಂದ ಸಾಧ್ಯವಿರುವಷ್ಟು ಮಟ್ಟಿಗೆ ಅವಳನ್ನು ಸಂತೋಷಪಡಿಸಿರಿ. ಅವಳ ಸಮಸ್ಯೆಗಳಿಗೆ ಕಿವಿಗೊಡಿರಿ, ಮತ್ತು ಅವುಗಳನ್ನು ಪರಿಹರಿಸಲು ಸಹಾಯ ಮಾಡಿರಿ.
[ಪುಟ 13 ರಲ್ಲಿರುವ ಚೌಕ]
ಸೀಸೆಗೆ ಪ್ರತಿಯಾಗಿ ಸ್ತನ
“ಎದೆಹಾಲು ಹೆಚ್ಚು ಪುಷ್ಟಿಕರವಾದದ್ದೂ, ಆರೋಗ್ಯಕ್ಕೆ ಹೆಚ್ಚು ಕ್ಷೇಮವಾದದ್ದೂ, ಸಾಮಾನ್ಯವಾದ ಅಸ್ವಸ್ಥತೆಗಳ ವಿರುದ್ಧ ಶಿಶುಗಳಿಗೆ ರೋಗರಕ್ಷೆಯನ್ನೀಯುವಂಥಾದ್ದೂ ಆಗಿದೆ, ಮತ್ತು ತಾಯಂದಿರ ಸ್ತನದ ಹಾಗೂ ಅಂಡಾಶಯದ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆಗೊಳಿಸುತ್ತದೆ. ಹಾಲಿನ ಮಿಶ್ರಣವು ದುಬಾರಿಯಾಗಿರುವುದಲ್ಲದೆ, ಅದು ಅನೇಕವೇಳೆ ಅಶುದ್ಧ ನೀರಿನೊಂದಿಗೆ ಅತಿಯಾಗಿ ಸಾರಗುಂದಿಸಲ್ಪಡುತ್ತದೆ ಮತ್ತು ಕ್ರಿಮಿಶುದ್ಧಿ ಮಾಡಲ್ಪಡದ ಹಾಲೂಡುವ ಸೀಸೆಯ ಮೂಲಕ ಮಕ್ಕಳಿಗೆ ಕುಡಿಸಲ್ಪಡುತ್ತದೆ. ಬಡ ಸಮುದಾಯಗಳಲ್ಲಿ, ವ್ಯತ್ಯಾಸವು ಎಷ್ಟು ಆವಶ್ಯಕವಾಗಿದೆಯೆಂದರೆ, ಆರಂಭದ ನಾಲ್ಕರಿಂದ ಆರು ತಿಂಗಳುಗಳ ವರೆಗೆ ಲೋಕದ ತಾಯಂದಿರು ಸಂಪೂರ್ಣವಾಗಿ ಮೊಲೆಯೂಡಿಸುವಿಕೆಗೆ ಹಿಂದಿರುಗಿ ಹೋಗುವಲ್ಲಿ, ಅಂದಾಜು ಮಾಡಲ್ಪಟ್ಟ ಹತ್ತು ಲಕ್ಷ ಎಳೆಯ ಜೀವಗಳು ರಕ್ಷಿಸಲ್ಪಡಸಾಧ್ಯವಿದೆ.”—ದ ಸ್ಟೇಟ್ ಆಫ್ ದ ವರ್ಲ್ಡ್ಸ್ ಚಿಲ್ಡ್ರನ್ 1993, ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಒಂದು ಪ್ರಕಾಶನ.