ಒಂದು ಹೃದ್ರೋದನ
ಮೇ 8, 1996ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯು, ದತ್ತುಸ್ವೀಕಾರದ ಕುರಿತಾದ ಲೇಖನಗಳ ಸರಣಿಯನ್ನು ಪ್ರಕಟಿಸಿತ್ತು. ಲೋಕದಾದ್ಯಂತದಿಂದ ನಾವು ಪಡೆದುಕೊಂಡ ವಾಚಕರ ಪ್ರತಿಕ್ರಿಯೆಯನ್ನು ನೋಡಿ ನಾವು ಹರ್ಷಾಶ್ಚರ್ಯಪಟ್ಟಿದ್ದೇವೆ. ಈ ಕೆಳಗಿನ ಪತ್ರವು ವಿಶೇಷವಾಗಿ ಹೃದಯಸ್ಪರ್ಶಿಯಾಗಿತ್ತು.
“ನಮ್ಮ ಮಕ್ಕಳನ್ನು ಕೊಟ್ಟುಬಿಟ್ಟ ನಮ್ಮಲ್ಲಿ ಅನೇಕರು, ನಿಜವಾಗಿಯೂ ಅವರನ್ನು ಇಟ್ಟುಕೊಳ್ಳಲು ಇಷ್ಟಪಟ್ಟಿದ್ದೆವು ಎಂಬುದನ್ನು ತಿಳಿಯಪಡಿಸಲೇಬೇಕೆಂಬ ನಿರ್ಬಂಧದ ಅನಿಸಿಕೆ ನನಗಾಗುತ್ತದೆ. ನಾನೊಬ್ಬ ಅವಿವಾಹಿತ ಹದಿವಯಸ್ಕಳಾಗಿದ್ದು, ಇನ್ನೂ ಶಾಲೆಯಲ್ಲಿ ಓದುತ್ತಿದ್ದೆ. ನಾನು ಗರ್ಭಿಣಿಯಾಗಿದ್ದೇನೆಂದು ನನ್ನ ಹೆತ್ತವರಿಗೆ ತಿಳಿದುಬಂದ ಕೂಡಲೆ, ನಾನು ನನ್ನ ಸ್ವಂತ ಹಿತಚಿಂತನೆಗಿಂತಲೂ ಮಗುವಿನ ಹಿತಚಿಂತನೆಗೆ ಹೆಚ್ಚು ಪ್ರಮುಖತೆ ಕೊಡಬೇಕೆಂದೂ, ಮಗುವನ್ನು ದತ್ತುಸ್ವೀಕಾರಕ್ಕೆ ಕೊಟ್ಟುಬಿಡಬೇಕೆಂದೂ ಅವರು ನನಗೆ ತಿಳಿಸಿದರು. ‘ಒಂದು ಮಗುವಿಗೆ ತಂದೆತಾಯಿಯರಿಬ್ಬರ ಆವಶ್ಯಕತೆ ಇದೆ’ ಎಂದು ನನಗೆ ಹೇಳಲಾಯಿತು ಮತ್ತು ಅದನ್ನು ನಾನು ಒದಗಿಸಸಾಧ್ಯವಿರಲಿಲ್ಲ. ನಾನು ಮಗುವನ್ನು ಇಟ್ಟುಕೊಳ್ಳುವುದು ನನ್ನ ಹೆತ್ತವರಿಗೆ ಇಷ್ಟವಿರಲಿಲ್ಲ; ಒಂದು ವೇಳೆ ನನಗೆ ಮಗುವಾಗುವಲ್ಲಿ, ಅವರ ಮನೆಯಲ್ಲಿ ನನಗೆ ಸ್ಥಳವಿರುತ್ತಿರಲಿಲ್ಲ. ನಾನೇನು ಮಾಡಸಾಧ್ಯವಿತ್ತು? ‘ನಿನ್ನ ಸ್ವಾತಂತ್ರ್ಯವನ್ನು ಕಸಿದುಕೊಂಡದ್ದಕ್ಕಾಗಿ ನೀನು ನಿನ್ನ ಮಗುವಿನ ಮೇಲೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುವಿ’ ಎಂದು ಅವರು ವಾದಿಸಿದರು.
“ನನ್ನ ಗರ್ಭಾವಸ್ಥೆಯು ಕಂಡುಬರಲಾರಂಭಿಸಿದ ಕೂಡಲೆ, ನನ್ನನ್ನು ಶಾಲೆಯಿಂದ ಬಿಡಿಸಿ, ನನ್ನ ಸಂಬಂಧಿಕರೊಬ್ಬರೊಂದಿಗೆ ವಾಸಿಸಲಿಕ್ಕಾಗಿ ದೂರ ಕಳುಹಿಸಲಾಯಿತು. ನಾನು ಮನೆಯನ್ನು ಬಿಟ್ಟುಹೋದಾಗ, ನನ್ನ ಗರ್ಭಾವಸ್ಥೆಯು ಮುಗಿದುಹೋಗಿ, ನನ್ನ ಮಗುವು ಕೊಟ್ಟುಬಿಡಲ್ಪಡುವ ವರೆಗೆ ನಾನು ಪುನಃ ಮನೆಗೆ ಸ್ವಾಗತಿಸಲ್ಪಡುವುದಿಲ್ಲ ಎಂಬುದು ನನಗೆ ತಿಳಿದಿತ್ತು.
“ಅವಿವಾಹಿತ ತಾಯಂದಿರಿಗಾಗಿರುವ ಆಶ್ರಮಕ್ಕೆ ನನ್ನನ್ನು ಕಳುಹಿಸಲಾಯಿತು. ನನ್ನ ಮಗುವನ್ನು ದತ್ತುಸ್ವೀಕಾರಕ್ಕೆ ಕೊಡುವ ನನ್ನ ನಿರ್ಧಾರದ ವಿಷಯದಲ್ಲಿ ನಾನು ನಿಶ್ಚಿತಳಾಗಿದ್ದೇನೊ ಎಂದು ಸಾಮಾಜಿಕ ಕಾರ್ಯಕರ್ತೆಯು ನನ್ನನ್ನು ಕೇಳಿದಾಗ, ನನಗೆ ಬೇರೆ ಯಾವ ಆಯ್ಕೆಯೂ ಇರಲಿಲ್ಲ ಎಂಬುದನ್ನು ಅವಳು ಗ್ರಹಿಸಲಿಲ್ಲ ಎಂಬುದು ನನಗೆ ತಿಳಿದಿತ್ತು. ನಾನು ನನ್ನ ಮಗುವನ್ನು ಇಟ್ಟುಕೊಳ್ಳಲು ಬಯಸಿದ್ದೆ! ಅವನು ನಗುತ್ತಿರುವುದನ್ನೂ ಸಂತೋಷಭರಿತನಾಗಿರುವುದನ್ನೂ ನೋಡಲು ನಾನು ಯಾವಾಗಲೂ ಹಂಬಲಿಸಿದ್ದೇನೆ. ಅನೇಕ ಹೆತ್ತ ತಾಯಂದಿರಿಗೆ ನನ್ನ ಹಾಗೆಯೇ ಅನಿಸುತ್ತದೆ ಎಂಬುದನ್ನು ನಿಮ್ಮ ವಾಚಕರು ತಿಳಿದುಕೊಳ್ಳುವ ಅಗತ್ಯವಿದೆ.
“ನನಗೆ ಯಾವುದೇ ಕಾರ್ಯಸಾಧ್ಯ ಆಯ್ಕೆಯು ಕೊಡಲ್ಪಡಲಿಲ್ಲ. ಆದುದರಿಂದ ಮಗುವಿನ ‘ಹಿತಾರ್ಥ’ವೆಂದು ಯಾವುದು ಪರಿಗಣಿಸಲ್ಪಟ್ಟಿತ್ತೋ ಅದನ್ನೇ ನಾನು ಮಾಡಿದೆ. ಮತ್ತು ಅಂದಿನಿಂದ ನಾನು ಆಳವಾದ ಮಾನಸಿಕ ಆಘಾತದೊಂದಿಗೆ ಜೀವಿಸಿದ್ದೇನೆ. ನಾನೆಂದೂ ಅವನ ಕುರಿತಾಗಿ ಕಾಳಜಿ ವಹಿಸಲಿಲ್ಲ ಮತ್ತು ನನಗೆ ಅವನು ಬೇಕಿರಲಿಲ್ಲವೆಂದು ನನ್ನ ಮಗನು ಆಲೋಚಿಸಬಹುದೆಂದು ನಾನು ಚಿಂತಿಸುತ್ತೇನೆ.
“ಈಗ, ಒಬ್ಬ ಕ್ರೈಸ್ತಳೋಪಾದಿ ನಾನು, ನಮ್ಮ ಜೀವಿತಗಳಲ್ಲಿ ದೇವರ ವಾಕ್ಯವನ್ನು ಅನ್ವಯಿಸಿಕೊಳ್ಳದಿರುವುದರಿಂದ ನಾವು ನಮ್ಮ ಮೇಲೆ ತಂದುಕೊಳ್ಳುವ ಹೆಚ್ಚು ಕಷ್ಟಕರ ಸನ್ನಿವೇಶಗಳ ಕುರಿತಾದ ಬೈಬಲಿನ ಸಲಹೆಯನ್ನು ಯಾವಾಗಲೂ ಗಣ್ಯಮಾಡುತ್ತೇನೆ. ಅದು ಲೌಕಿಕ ತರ್ಕದಿಂದ ಉಂಟಾಗುವ ವೇದನಾಭರಿತವಾದ ಹಾಗೂ ದೂರವ್ಯಾಪ್ತಿಯುಳ್ಳ ಪರಿಣಾಮಗಳನ್ನು ತೋರಿಸುತ್ತದೆ. ಆದರೆ ದತ್ತುಸ್ವೀಕರಿಸಲ್ಪಟ್ಟ ಜನರು ದತ್ತುಕೊಡಲ್ಪಟ್ಟದ್ದರಿಂದ, ಅವರು ಬೇಕಾಗಿರಲಿಲ್ಲವೆಂಬುದನ್ನು ಇದು ಅರ್ಥೈಸುವುದಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳುವ ಅಗತ್ಯವಿದೆ. ದಯವಿಟ್ಟು ಇದನ್ನು ಅವರಿಗೆ ತಿಳಿಸಿರಿ!”