ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 9/8 ಪು. 19-25
  • ಜೀವನವು ಹಾಯಾಗಿಲ್ಲದಿರುವಾಗ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನವು ಹಾಯಾಗಿಲ್ಲದಿರುವಾಗ
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಾನು ಒಂಬತ್ತರ ಪ್ರಾಯದವಳಿದ್ದಾಗ
  • ಅಸ್ವಸತ್ಥೆಯಿಂದ ನಿರ್ಬಂಧಿಸಲ್ಪಟ್ಟೆ
  • ಒಂದು ಹಿನ್ನಡೆ
  • ಕೊನೆಯದಾಗಿ, ಪುನಃ ಶಾಲೆಗೆ
  • ಧರ್ಮದ ಕುರಿತು ಕುತೂಹಲ
  • ಮತ್ತೊಂದು ಹಿನ್ನಡೆ
  • ಶಾಲೆಯು ಸುಲಭವಾಗಿರಲಿಲ್ಲ
  • ರಕ್ತದ ಮೇಲಿನ ನಿಲುವು ಸುಲಭವಲ್ಲ
  • ಪದವಿಪ್ರಾಪ್ತಿ, ಬಳಿಕ ದೀಕ್ಷಾಸ್ನಾನ
  • ರಕ್ತದ ವಿವಾದಾಂಶವನ್ನು ಪುನಃ ಎದುರಿಸುವುದು
  • ಪುನಃ ಇನ್ನೊಂದು ಹಿನ್ನಡೆ
  • ಜೀವಿತವು ಇನ್ನೂ ಸುಲಭವಲ್ಲ
  • ಮಾಟಗಾರರಾಗಲಿ ದೇವರುಗಳಾಗಲಿ ಅಲ್ಲ
    ಎಚ್ಚರ!—1994
  • ಕರುಳ ಕುಡಿಯನ್ನು ಕ್ಯಾನ್ಸರ್‌ ಕಾಡಿದಾಗ. . .
    ಎಚ್ಚರ!—2012
  • ನಮ್ಮ ನಂಬಿಕೆಯು ಶೋಧಿಸಲ್ಪಟ್ಟಾಗ ನಾವು ಒಂಟಿಗರಾಗಿರಲಿಲ್ಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಅವನು ಬಿಟ್ಟುಕೊಡಲಿಲ್ಲ
    ಎಚ್ಚರ!—1998
ಇನ್ನಷ್ಟು
ಎಚ್ಚರ!—1994
g94 9/8 ಪು. 19-25

ಜೀವನವು ಹಾಯಾಗಿಲ್ಲದಿರುವಾಗ

ನಾನು ತೀರ ಎಳೆಯವಳಿದ್ದಾಗಲೇ ಜೀವಿತದ ಕಟು ಸತ್ಯತೆಗಳನ್ನು ಎದುರಿಸುವಂತೆ ಒತ್ತಾಯಿಸಲ್ಪಟ್ಟಿದ್ದೆ. ಲೋಕದಲ್ಲಿ ಜೀವಿತವು ಇಂದು ನಿಜವಾಗಿಯೂ ಅನ್ಯಾಯದ್ದಾಗಿದೆಯೆಂದು ನೀವು ನನ್ನೊಂದಿಗೆ ಒಪ್ಪಬಹುದು. ಕಟ್ಟಕಡೆಗೆ ಇದು ನಮ್ಮೆಲ್ಲರಿಗೂ ಸಂಭವಿಸುತ್ತದೆ. ನಾವೆಲ್ಲರೂ ಅಸ್ವಸ್ಥರಾಗುತ್ತೇವೆ. ಕೆಲವರು ಯಾವುದೇ ಪ್ರಮುಖ ಅಸ್ವಸತ್ಥೆಯಿಲ್ಲದೆ ವೃದ್ಧರಾಗಬಹುದು ನಿಜ, ಆದರೆ ಬಳಿಕ ನಾವೆಲ್ಲರೂ ಮರಣವನ್ನು ಎದುರಿಸುತ್ತೇವೆ.

ನಾನು ಯೋಚಿಸಬೇಕಾಗಿರುವುದಕ್ಕಿಂತಲೂ ಅಧಿಕವಾಗಿ ಸಾಯುವ ಕುರಿತು ನಾನು ಆಲೋಚಿಸುತ್ತೇನೆ. ಆದರೆ ಏಕೆ ಮತ್ತು ಒಂದು ವಿಧದಲ್ಲಿ, ನನಗೆ ಏನು ಸಂಭವಿಸಿತೊ ಅದರಿಂದ ಏಕೆ ಪ್ರಯೋಜನ ಹೊಂದಿದ್ದೇನೆ ಎಂಬುದನ್ನೂ ನಾನು ವಿವರಿಸುವೆ.

ನಾನು ಒಂಬತ್ತರ ಪ್ರಾಯದವಳಿದ್ದಾಗ

ನಾನು ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ, 1968ರ ಸಪ್ಟಂಬರದಲ್ಲಿ—ಐವರು ಮಕ್ಕಳಲ್ಲಿ ಕೊನೆಯವಳಾಗಿ—ಜನಿಸಿದೆ. ತಂದೆ ಅಂಗವಿಕಲರಾಗಿದ್ದರು, ಮತ್ತು ನಮ್ಮ ಸಂರಕ್ಷಣೆ ಮಾಡಲಿಕ್ಕಾಗಿ ತಾಯಿ ಕ್ಯಾಷಿಯರಾಗಿ ಕೆಲಸಮಾಡುತ್ತಿದ್ದರು. ನಾನು ಒಂಬತ್ತರ ಪ್ರಾಯದವಳಾದಾಗ, ನನ್ನ ಹೊಟ್ಟೆಯು ಒಂದು ಭಾಗದಲ್ಲಿ ಉಬ್ಬಿರುವುದನ್ನು ತಾಯಿ ಗಮನಿಸಿದರು. ಸ್ಥಳೀಯ ವೈದ್ಯಕೀಯ ಕೇಂದ್ರಕ್ಕೆ ಅವರು ನನ್ನನ್ನು ಕರೆದೊಯ್ದರು. ವೈದ್ಯರು ಒಂದು ದೊಡ್ಡ ಮುದ್ದೆಯಿದೆ ಎಂದು ಅಭಿಪ್ರಯಿಸಿದರು, ಮತ್ತು ಕೆಲವು ದಿನಗಳ ಬಳಿಕ, ನಾನು ಕಿಂಗ್ಸ್‌ ಕೌಂಟಿ ಆಸ್ಪತ್ರೆಗೆ ಸೇರಿಸಲ್ಪಟ್ಟೆ.

ತಾಯಿ ಹೋದ ಬಳಿಕ, ನಾನು ಭಯಗೊಂಡದ್ದರಿಂದ ಅತ್ತೆ. ಮಾರನೆಯ ದಿನ ತೆಳು ನೀಲಿ ಬಣ್ಣದ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ಪುರುಷರು ನನ್ನನ್ನು ಶಸ್ತ್ರಚಿಕಿತ್ಸೆಯ ಕೊಠಡಿಗೆ ಗಾಲಿಮಂಚದಲ್ಲಿ ತಳ್ಳಿಕೊಂಡುಹೋದರು. ಚಿಕಿತ್ಸಾ ಕೊಠಡಿಯಲ್ಲಿ ಜಾಗೃತಳಾಗುವ ಮೊದಲು ನಾನು ಕಂಡಂತಹ ಕೊನೆಯ ವಿಷಯವು, ನನ್ನ ತಲೆಯ ಮೇಲೆ ಕಣ್ಣು ಕುಕ್ಕುವಂತೆ ಏನೋ ಇಡಲಾದದ್ದು ಎಂದು ನಾನು ಜ್ಞಾಪಿಸಿಕೊಳ್ಳುತ್ತೇನೆ. ಯಾವುದನ್ನು ವಿಲ್‌ಮ್ಸ್‌ ಗೆಡ್ಡೆ (ಕ್ಯಾನ್ಸರ್‌ನ ಒಂದು ವಿಧ) ಎಂದು ಕರೆಯಲಾಗುತ್ತದೋ ಅದನ್ನು, ನನ್ನ ಮೂತ್ರಜನಕಾಂಗಗಳಲ್ಲಿ ಒಂದನ್ನು, ಮತ್ತು ನನ್ನ ಪಿತ್ತಜನಕಾಂಗದ ಒಂದು ಭಾಗವನ್ನು ವೈದ್ಯರು ಯಶಸ್ವಿಯಾಗಿ ತೆಗೆದುಹಾಕಿದರು.

ನಾನು ಇಂಟೆನ್ಸಿವ್‌ ಕೇರ್‌ ಯೂನಿಟ್‌ನಲ್ಲಿ ಐದು ವಾರಗಳನ್ನು ಕಳೆದೆ. ಪ್ರತಿ ದಿನ, ವೈದ್ಯರು ಗಾಯದ ಬ್ಯಾಂಡೇಜನ್ನು ಬದಲಾಯಿಸಿದರು. ಅವರು ಅಂಟುಪಟ್ಟಿಯನ್ನು ಎಳೆದು ತೆಗೆಯುವಾಗ ನಾನು ಕಿರಿಚುತ್ತಿದ್ದೆ. ನನ್ನ ನೋವನ್ನು ಕಡಿಮೆಗೊಳಿಸಲಿಕ್ಕಾಗಿ, ಯಾರಾದರೊಬ್ಬರು ಒಳಗೆ ಬರುವಂತೆ ಮತ್ತು ನನ್ನ ಗಮನವನ್ನು ಸೆಳೆಯಲು ಪ್ರಯತ್ನಿಸುವಂತೆ ವೈದ್ಯರು ಮಾಡುತ್ತಿದ್ದರು. ಆ ವ್ಯಕ್ತಿಯು ಕಪ್ಪೆಗಳ ಕುರಿತು ನನ್ನೊಂದಿಗೆ ಬಹಳವಾಗಿ ಮಾತಾಡಿದ್ದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ.

ಇಂಟೆನ್ಸಿವ್‌ ಕೇರ್‌ನಿಂದ ಹೊರಕ್ಕೆ ಬಂದ ಬಳಿಕ, ನಾನು ಆಸ್ಪತ್ರೆಯಲ್ಲಿ ಇನ್ನೂ ನಾಲ್ಕು ವಾರಗಳನ್ನು ಕಳೆದೆ. ಆ ಸಮಯದಲ್ಲಿ, ವಿಕಿರಣ ಚಿಕಿತ್ಸೆಗಳು ಆರಂಭಗೊಂಡವು. ಶಸ್ತ್ರಚಿಕಿತ್ಸೆಯಿಂದ ಇನ್ನೂ ನೋಯುತ್ತಿದ್ದ ನನ್ನ ಹೊಟ್ಟೆಯ ಮೇಲೆ ನಾನು ಮಲಗಬೇಕಿದ್ದರಿಂದ—ವಿಕಿರಣದಿಂದಾಗಿ ಅಲ್ಲ—ಇವು ವೇದನಾಭರಿತವಾಗಿದ್ದವು. ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿ ದಿನ ವಿಕಿರಣ ಚಿಕಿತ್ಸೆಗಳು ಕೊಡಲ್ಪಡುತ್ತಿದ್ದವು.

ನವಂಬರ 1977ರ ಕೊನೆಗೆ ನಾನು ಆಸ್ಪತ್ರೆಯಿಂದ ಬಿಡುಗಡೆಮಾಡಲ್ಪಟ್ಟಾಗ, ಹೊರರೋಗಿಯೋಪಾದಿ ವಿಕಿರಣ ಚಿಕಿತ್ಸೆ ಪಡೆಯುವುದನ್ನು ನಾನು ಮುಂದುವರಿಸಿದೆ. ಈ ಚಿಕಿತ್ಸೆಗಳು ಮುಕ್ತಾಯಗೊಂಡಾಗ, ರಾಸಾಯನಿಕ (ಕೆಮತೆರಪಿ) ಚಿಕಿತ್ಸೆಯನ್ನು ಪಡೆಯಲಾರಂಭಿಸಿದೆ. ಪ್ರತಿ ದಿನ ಸೋಮವಾರದಿಂದ ಶುಕ್ರವಾರದ ವರೆಗೆ ನಾನು ಬೆಳಗ್ಗೆ ಬೇಗನೆ ಏಳಬೇಕಿತ್ತು ಮತ್ತು ಪ್ರಬಲವಾದ ಔಷಧಗಳನ್ನು ಒಳಹೊಗಿಸಲಿಕ್ಕಾಗಿ ಆಸ್ಪತ್ರೆಗೆ ಹೋಗಬೇಕಿತ್ತು. ವೈದ್ಯರು ಸೂಜಿಯೊಂದನ್ನು ಅಭಿಧಮನಿ (ರಕ್ತನಾಳ)ಯೊಳಗೆ ಸೇರಿಸಿ, ನೇರವಾಗಿ ಅದರೊಳಕ್ಕೆ ಔಷಧವನ್ನು ಸುರಿಸುತ್ತಿದ್ದರು. ಸೂಜಿಗಳಿಗೆ ನಾನು ಹೆದರುತ್ತಿದ್ದೆ ಮತ್ತು ಅಳುತ್ತಿದ್ದೆ, ಆದರೆ ಆರೋಗ್ಯ ಉತ್ತಮಗೊಳ್ಳಲಿಕ್ಕಾಗಿ ನಾನದನ್ನು ಅನುಭವಿಸಬೇಕೆಂದು ತಾಯಿ ನನಗೆ ಹೇಳಿದರು.

ರಾಸಾಯನಿಕ ಚಿಕಿತ್ಸೆಗಳು ಭೀಕರ ಅಡ್ಡತೊಡಕುಗಳನ್ನು ಹೊಂದಿವೆ. ಅವು ನನಗೆ ಪಿತ್ತೋದ್ರೇಕವನ್ನುಂಟುಮಾಡಿದವು, ಮತ್ತು ನಾನು ಅನೇಕವೇಳೆ ವಾಂತಿಮಾಡಿದೆ. ನನ್ನ ರಕ್ತಾಂಕವು ತಗ್ಗಿತು, ಮತ್ತು ನನ್ನ ಕೂದಲನ್ನೆಲ್ಲಾ ನಾನು ಕಳೆದುಕೊಂಡೆ.

ಅಸ್ವಸತ್ಥೆಯಿಂದ ನಿರ್ಬಂಧಿಸಲ್ಪಟ್ಟೆ

ತರುವಾಯದ ವಸಂತಕಾಲದಲ್ಲಿ, ಈಸ್ಟರ್‌ ಆದಿತ್ಯವಾರದಂದು, ನಾವು ಚರ್ಚಿಗಾಗಿ ಸಿದ್ಧರಾಗುತ್ತಿರುವಾಗ, ಕಡಿಮೆ ರಕ್ತಾಂಕದ ಕಾರಣದಿಂದ ನನ್ನ ಮೂಗಿನಿಂದ ರಕ್ತ ಸೋರಲಾರಂಭಿಸಿತು. ನನ್ನ ಹೆತ್ತವರು ಎಲ್ಲವನ್ನೂ ಪ್ರಯತ್ನಿಸಿದರು, ಆದರೆ ರಕ್ತವು ಹೊರಬರುತ್ತಾ ಇತ್ತು. ನನ್ನ ಮೂಗನ್ನು ಜಾಲರಿ ಬಟ್ಟೆಯಿಂದ ಮುಚ್ಚುವ ಮೂಲಕ ವೈದ್ಯರು ರಕ್ತಸ್ರಾವವನ್ನು ನಿಲ್ಲಿಸಿದರು, ಆದರೆ ಬಳಿಕ ರಕ್ತವು ನನ್ನ ಬಾಯಿಂದ ಬರಲಾರಂಭಿಸಿತು. ರಕ್ತದ ನಷ್ಟದಿಂದ ನಾನು ತೀರ ಬಲಹೀನಳಾದೆ ಮತ್ತು ಆಸ್ಪತ್ರೆಗೆ ಸೇರಿಸಲ್ಪಟ್ಟೆ. ನನ್ನಿಂದ ಸೋಂಕನ್ನು ಹೊಂದದಿರಲಿಕ್ಕಾಗಿ, ನನ್ನನ್ನು ಭೇಟಿ ಮಾಡುವವರು ಕೈಚೀಲಗಳು, ಒಂದು ಮುಖದ ಮುಸುಕು, ಮತ್ತು ಅವರ ವಸ್ತ್ರದ ಮೇಲೆ ಒಂದು ಮೇಲುಡುಪನ್ನು ಧರಿಸಬೇಕಿತ್ತು. ಒಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಹೊಂದುವಂತೆ, ನನ್ನ ರಕ್ತಾಂಕವು ಸಾಕಷ್ಟು ಮೇಲೇರಿತ್ತು.

ಆ ಕೂಡಲೆ ರಾಸಾಯನಿಕ ಚಿಕಿತ್ಸೆಯು ಪುನಃ ಆರಂಭಿಸಲ್ಪಟ್ಟಿತು. ನಾನು ಶಾಲೆಗೆ ಹಾಜರಾಗಲು ಸಾಧ್ಯವಿರಲಿಲ್ಲ, ಮತ್ತು ನಾನು ನಿಜವಾಗಿ ಅದನ್ನು ಕಳೆದುಕೊಂಡೆ. ನನ್ನ ಗೆಳತಿಯರನ್ನು ಮತ್ತು ಅವರೊಂದಿಗೆ ಹೊರಗೆ ಆಡುವುದನ್ನೂ ನಾನು ಕಳೆದುಕೊಂಡೆ. ರಾಸಾಯನಿಕ ಚಿಕಿತ್ಸೆ ಪಡೆಯುತ್ತಿರುವಾಗ ಅಥವಾ ಅದು ನಿಲ್ಲಿಸಲ್ಪಟ್ಟ ಬಳಿಕ ಅತಿಬೇಗನೆ ನಾನು ಶಾಲೆಗೆ ಹಾಜರಾಗಬಾರದೆಂದು ನನ್ನ ವೈದ್ಯರು ಅಭಿಪ್ರಯಿಸಿದ ಕಾರಣ, ಗೃಹ ಶಾಲಾ ಶಿಕ್ಷಣವನ್ನು ನಾನು ಪಡೆದುಕೊಂಡೆ.

ನಾನು ಸಾಮಾನ್ಯವಾಗಿ ಹೋಗುತ್ತಿದ್ದಂತೆ, ಆ ಬೇಸಗೆಯಲ್ಲಿ ಜಾರ್ಜಿಯದಲ್ಲಿರುವ ನನ್ನ ಅಜ್ಜಅಜ್ಜಿಯರನ್ನು ಭೇಟಿ ಮಾಡಲು ಬಯಸಿದ್ದೆ, ಆದರೆ ಹೋಗಲು ನಾನು ಅನುಮತಿಸಲ್ಪಡಲಿಲ್ಲ. ಆದರೂ, ಆಸ್ಪತ್ರೆಯು ಕ್ಯಾನ್ಸರ್‌ ರೋಗಿಗಳಿಗೆ, ನ್ಯೂ ಜೆರ್ಸಿಯಲ್ಲಿರುವ ವಿಹಾರ ಉದ್ಯಾನವನಕ್ಕೆ ಹೋಗಲಿಕ್ಕಾಗಿ ಏರ್ಪಾಡನ್ನು ಮಾಡಿತು. ತದನಂತರ ನಾನು ಆಯಾಸಗೊಂಡಿದ್ದೆ, ಆದರೆ ನಾನು ಸ್ವತಃ ಆನಂದಿಸಿದ್ದೆ.

ಇಸವಿ 1978ರ ಅಂತ್ಯಭಾಗದಲ್ಲಿ ರಾಸಾಯನಿಕ ಚಿಕಿತ್ಸೆಯನ್ನು ನಾನು ಮುಗಿಸಿದೆ, ಆದರೆ ಗೃಹ ಶಿಕ್ಷಣ ಪಡೆದುಕೊಳ್ಳುವುದನ್ನು ಮುಂದುವರಿಸಿದೆ—ಒಟ್ಟಿಗೆ ಮೂರಕ್ಕಿಂತಲೂ ಹೆಚ್ಚು ವರ್ಷಗಳು. ಜನವರಿ 1981ರಲ್ಲಿ ನಾನು ಶಾಲೆಗೆ ಹಿಂದಿರುಗಿದಾಗ, ಅಷ್ಟೊಂದು ದೀರ್ಘ ಸಮಯದ ವರೆಗೆ ಗೃಹ ಶಿಕ್ಷಣ ಹೊಂದಿದ ಬಳಿಕ ಶಾಲೆಗೆ ಹೊಂದಿಕೊಳ್ಳುವುದು ಸುಲಭವಾಗಿರಲಿಲ್ಲ. ಕೆಲವೊಮ್ಮೆ ನನ್ನ ತರಗತಿಯನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾ ನಾನು ದಾರಿತಪ್ಪುತ್ತಿದ್ದೆ. ಆದರೂ, ನಾನು ವಾಸ್ತವವಾಗಿ ಶಾಲೆಯನ್ನು ಇಷ್ಟಪಡುತ್ತಿದ್ದೆ. ನಾನು ವಿಶೇಷವಾಗಿ ಸಂಗೀತ, ಟೈಪಿಂಗ್‌, ಮತ್ತು ಅಂಗಸಾಧನೆಯ ಕ್ಲಾಸನ್ನು ಇಷ್ಟಪಡುತ್ತಿದ್ದೆ. ಕೆಲವು ಮಕ್ಕಳು ಸ್ನೇಹಪರರಾಗಿದ್ದರು, ಆದರೆ ಇತರರು ನನಗೆ ಅಪಹಾಸ್ಯ ಮಾಡುತ್ತಿದ್ದರು.

ಒಂದು ಹಿನ್ನಡೆ

“ನೀನು ಗರ್ಭಿಣಿಯಾಗಿದ್ದೀಯೊ?” ಎಂದು ಮಕ್ಕಳು ನನಗೆ ಕೇಳಲಾರಂಭಿಸಿದರು. ಯಾಕಂದರೆ ನನ್ನ ಹೊಟ್ಟೆಯು ಉಬ್ಬಿಕೊಂಡಿತ್ತು. ಚಿಂತಿಸಬೇಡ ಎಂದು ವೈದ್ಯರು ನನಗೆ ಹೇಳಿದರು ಮತ್ತು ನನ್ನ ಪಿತ್ತಜನಕಾಂಗವು ಪುನಃ ಬೆಳೆಯುತ್ತಿದ್ದದ್ದೇ ಅದಕ್ಕೆ ಕಾರಣವಾಗಿತ್ತು. ಆದಾಗ್ಯೂ, ಮಾರ್ಚ್‌ನಲ್ಲಿ ನನಗೆ ವೈದ್ಯಕೀಯ ಪರೀಕ್ಷೆ ಮಾಡಲ್ಪಟ್ಟಾಗ, ವೈದ್ಯರು ನನ್ನನ್ನು ಆಸ್ಪತ್ರೆಯಲ್ಲಿ ಇರಿಸಿದರು. ನಾನು ಅಳಲಾರಂಭಿಸಿದೆ—ನಾನು ಕೇವಲ ಎರಡೂವರೆ ತಿಂಗಳು ಮಾತ್ರ ಶಾಲೆಗೆ ಹಾಜರಾಗಲು ಶಕ್ತಳಾಗಿದ್ದೆ.

ಅಂಗಾಂಶಛೇದನೆಯು ಮಾಡಲ್ಪಟ್ಟಿತು, ಅದರಲ್ಲಿ ನನ್ನ ಪಿತ್ತಜನಕಾಂಗದಲ್ಲಿದ್ದ ಒಂದು ಗೆಡ್ಡೆಯಿಂದ ಅಂಗಾಂಶವನ್ನು ತೆಗೆಯಲಾಯಿತು. ಈ ಕಾರ್ಯವಿಧಾನದ ಬಳಿಕ ಏಳುವಾಗ, ನಾನು ನೋಡಿದ ಮೊದಲ ವ್ಯಕ್ತಿ ತಾಯಿಯಾಗಿದ್ದರು. ಅವರು ಅಳುತ್ತಿದ್ದರು. ನನಗೆ ಪುನಃ ಕ್ಯಾನ್ಸರ್‌ ಇದೆಯೆಂದೂ ಮತ್ತು ಹೊರಗೆ ತೆಗೆಯಲು ಗೆಡ್ಡೆಯು ಬಹಳ ದೊಡ್ಡದಿದೆಯೆಂದು ಹಾಗು ಅದನ್ನು ಸಂಕುಚಿಸಲಿಕ್ಕಾಗಿ ರಾಸಾಯನಿಕ ಚಿಕಿತ್ಸೆಯನ್ನು ಪಡೆಯಬೇಕೆಂದು ಅವರು ನನಗೆ ಹೇಳಿದರು. ಆಗ ನಾನು ಇನ್ನೂ 12 ವರ್ಷದವಳಿದ್ದೆ.

ರಾಸಾಯನಿಕ ಚಿಕಿತ್ಸೆಯು ಆಸ್ಪತ್ರೆಯಲ್ಲಿ ನಿರ್ವಹಿಸಲ್ಪಡುತಿತ್ತು, ಅಂದರೆ ಪ್ರತಿ ಕೆಲವು ವಾರಗಳಲ್ಲಿ ಒಮ್ಮೆ ಎರಡು ಅಥವಾ ಮೂರು ದಿನಗಳು ನಾನು ಅಲ್ಲಿಗೆ ಹೋಗುತ್ತಿದ್ದೆ. ಯಥಾಪ್ರಕಾರ, ನಾನು ಪಿತ್ತೋದ್ರೇಕ ಮತ್ತು ವಾಂತಿಯಿಂದ ಕಷ್ಟಾನುಭವಿಸಿದೆ. ಆಹಾರವು ಸಪ್ಪೆಯಾಗಿ ರುಚಿಸತೊಡಗಿತು, ಮತ್ತು ನನ್ನ ಕೂದಲನ್ನೆಲ್ಲಾ ನಾನು ಕಳೆದುಕೊಂಡೆ. ರಾಸಾಯನಿಕ ಚಿಕಿತ್ಸೆಗಳು 1981ರ ಆದ್ಯಂತವಾಗಿ ಮುಂದುವರಿದವು. ಈ ಮಧ್ಯೆ, ಎಪ್ರಿಲ್‌ನಲ್ಲಿ ನಾನು ಪುನಃ ಗೃಹ ಶಾಲಾ ಶಿಕ್ಷಣವನ್ನು ಆರಂಭಿಸಿದೆ.

ಇಸವಿ 1982ರ ಆರಂಭದಲ್ಲಿ, ಶಸ್ತ್ರಚಿಕಿತ್ಸೆಗಾಗಿ ನಾನು ಆಸ್ಪತ್ರೆಗೆ ಸೇರಿಸಲ್ಪಟ್ಟಾಗ, ನಾನು ಎಷ್ಟು ಬಲಹೀನಳಾಗಿದ್ದೆನೆಂದರೆ, ತೂಕದ ತಕ್ಕಡಿಯ ಮೇಲೆ ಹತ್ತಲು ಮತ್ತು ಇಳಿಯಲು ದಾದಿಯರು ನನಗೆ ಸಹಾಯ ಮಾಡಬೇಕಿತ್ತು. ರಾಸಾಯನಿಕ ಚಿಕಿತ್ಸೆಯು ಗೆಡ್ಡೆಯನ್ನು ಕುಗ್ಗಿಸಿತ್ತು, ಆದುದರಿಂದ ಶಸ್ತ್ರಚಿಕಿತ್ಸಕರು ನನ್ನ ಪಿತ್ತಜನಕಾಂಗದ ಇನ್ನೊಂದು ಭಾಗದೊಂದಿಗೆ ಅದನ್ನು ತೆಗೆದುಹಾಕಲು ಶಕ್ತರಾದರು. ಪುನಃ ನಾನು ಸುಮಾರು ಎರಡು ತಿಂಗಳು ಆಸ್ಪತ್ರೆಯಲ್ಲಿದ್ದೆ. ಇಸವಿ 1982ರ ಮಧ್ಯದಲ್ಲಿ, ನನಗೆ ರಾಸಾಯನಿಕ ಚಿಕಿತ್ಸೆಯು ಪುನಃ ಆರಂಭಿಸಲ್ಪಟ್ಟಿತು, ಅದು 1983ರ ಆರಂಭದ ವರೆಗೆ ಮುಂದುವರಿಯಿತು.

ಈ ಸಮಯದಲ್ಲಿ ನಾನು ಶಾಲೆಗೆ ಹೋಗಲು ಸಾಧ್ಯವಾಗದಕಾರಣ ದುಃಖಗೊಂಡಿದ್ದೆ. ಆದರೆ ತದನಂತರ ನನ್ನ ಕೂದಲು ಪುನಃ ಬೆಳೆಯಿತು, ಮತ್ತು ನಾನು ಪುನಃ ಗುಣಹೊಂದಲಾರಂಭಿಸಿದೆ. ಬದುಕಿರುವುದಕ್ಕಾಗಿ ನಾನು ಸಂತೋಷಗೊಂಡಿದ್ದೆ.

ಕೊನೆಯದಾಗಿ, ಪುನಃ ಶಾಲೆಗೆ

ಇಸವಿ 1981ರಲ್ಲಿ ಸ್ವಲ್ಪಕಾಲದ ವರೆಗೆ ನಾನಿದ್ದ ಕ್ಲಾಸ್‌ನೊಂದಿಗೆ ಪ್ರೌಢಶಾಲೆಯಿಂದ ಪದವಿ ಪಡೆಯುವಂತೆ ನನಗಾಗಿ ನನ್ನ ಗೃಹ ಶಿಕ್ಷಕರು ಏರ್ಪಡಿಸಿದರು. ಇದರ ಕುರಿತು ನಾನು ಬಹಳ ಉದ್ರೇಕಗೊಂಡಿದ್ದೆ; ನನ್ನ ಸ್ನೇಹಿತರನ್ನು ನೋಡುವುದು ಮತ್ತು ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಹಿತಕರವಾಗಿತ್ತು. ಜೂನ್‌ 1984ರಲ್ಲಿ ಪದವಿ ವಿತರಣೆ ಮಾಡುವ ದಿನ ಬಂದಾಗ, ನಾನು ನನ್ನ ಸ್ನೇಹಿತರ ಮತ್ತು ಶಿಕ್ಷಕರ ಛಾಯಾಚಿತ್ರಗಳನ್ನು ತೆಗೆದುಕೊಂಡೆ, ಮತ್ತು ಈ ವಿಶೇಷ ಘಟನೆಯನ್ನು ದಾಖಲು ಮಾಡಲಿಕ್ಕಾಗಿ ನನ್ನ ಕುಟುಂಬವು ನನ್ನ ಛಾಯಾಚಿತ್ರಗಳನ್ನು ತೆಗೆದುಕೊಂಡಿತ್ತು.

ಆ ಬೇಸಗೆಯಲ್ಲಿ ಜಾರ್ಜಿಯದಲ್ಲಿರುವ ನನ್ನ ಅಜ್ಜಅಜ್ಜಿಯರನ್ನು ಭೇಟಿ ಮಾಡಲಿಕ್ಕಾಗಿ ನಾನು ಹೋದೆ ಮತ್ತು ಬೇಸಗೆಯ ಬಹುಭಾಗ ಅಲ್ಲಿ ಉಳಿದೆ. ಆಗಸ್ಟ್‌ ತಿಂಗಳ ಕೊನೆಗೆ ನಾನು ಹಿಂದಿರುಗಿದಾಗ, ಶಾಲೆಗೆ ಸಿದ್ಧವಾಗಲು ಸಮಯವು ಅದಾಗಿತ್ತು. ಹೌದು, ನಾನು ಕೊನೆಯದಾಗಿ ಶಾಲೆಗೆ ಪುನಃ ಹೋಗುತ್ತಿದ್ದೆ. ನಾನು ಎಷ್ಟು ಉದ್ರೇಕಗೊಂಡಿದ್ದೆ!

ಧರ್ಮದ ಕುರಿತು ಕುತೂಹಲ

ಡಾನ್‌ ಮತ್ತು ಕ್ರೇಗ್‌ ಇತರ ವಿದ್ಯಾರ್ಥಿಗಳಿಂದ ಬೇರೆಯಾಗಿದ್ದರು, ಮತ್ತು ನಾನು ಅವರೆಡೆಗೆ ಆಕರ್ಷಿತಳಾದೆ. ಆದರೆ ನಾನು ಅವರಿಗೆ ಕ್ರಿಸ್ಮಸ್‌ ಉಡುಗೊರೆಗಳನ್ನು ಕೊಟ್ಟಾಗ, ತಾವು ರಜೆಯನ್ನು ಆಚರಿಸಲಿಲ್ಲವೆಂದು ಅವರು ಹೇಳಿದರು. “ನೀವು ಯೆಹೂದ್ಯರೊ?” ಎಂದು ನಾನು ಕೇಳಿದೆ. ಅವರು ಯೆಹೋವನ ಸಾಕ್ಷಿಗಳೆಂದು ಮತ್ತು ಕ್ರಿಸ್ಮಸ್‌ ನಿಜವಾಗಿ ಕ್ರಿಸ್ತೀಯವಾಗಿರಲಿಲ್ಲವೆಂದು ಕ್ರೇಗ್‌ ವಿವರಿಸಿದನು. ಆ ವಿಷಯದ ಕುರಿತು ಓದಲಿಕ್ಕಾಗಿ ಕೆಲವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಅವನು ನನಗೆ ಕೊಟ್ಟನು.

ಅಷ್ಟೊಂದು ವಿಭಿನ್ನವಾಗಿ ಕಂಡ ಅವರ ಧರ್ಮದ ಕುರಿತು ನಾನು ಕುತೂಹಲಗೊಂಡೆ. ನಾವು ಚರ್ಚಿಗೆ ಹೋದಾಗಲೆಲ್ಲಾ, ಅದೇ ವಿಷಯವನ್ನು ಪುನಃ ಪುನಃ ಕೇಳುತ್ತಿದ್ದೆವು: ‘ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡಿರಿ, ದೀಕ್ಷಾಸ್ನಾನ ಪಡೆದುಕೊಳ್ಳಿರಿ, ಮತ್ತು ನೀವು ಪರಲೋಕಕ್ಕೆ ಹೋಗುವಿರಿ.’ ಆದರೆ ಅದು ತೀರ ಸುಲಭವಾಗಿ ತೋರಿತು. ವಿಷಯಗಳು ತೀರ ಸುಲಭವಾಗಿರುವಾಗ, ನೀವು ಒಂದೋ ಅಸಾಧಾರಣ ಪ್ರತಿಭೆಯುಳ್ಳವರಾಗಿರುತ್ತೀರಿ ಇಲ್ಲವೆ ಏನೋ ತಪ್ಪಿದೆ ಎಂಬುದನ್ನು ನಾನು ನಂಬತೊಡಗಿದೆ. ನಾನು ಅಸಾಧಾರಣ ಪ್ರತಿಭಾಶಾಲಿಯಲ್ಲವೆಂದು ನನಗೆ ಗೊತ್ತಿತ್ತು, ಆದುದರಿಂದ ಚರ್ಚು ಬೋಧಿಸುತ್ತಿರುವ ವಿಷಯದಲ್ಲಿ ಏನೋ ತಪ್ಪು ಇರಲೇಬೇಕೆಂದು ತೀರ್ಮಾನಿಸಿದೆ.

ಕಟ್ಟಕಡೆಗೆ, ನಮ್ಮ ಊಟದ ಬಿಡುವಿನ ವೇಳೆಯಲ್ಲಿ ಕ್ರೇಗ್‌ ನನ್ನೊಂದಿಗೆ ಬೈಬಲನ್ನು ಅಭ್ಯಸಿಸಲಾರಂಭಿಸಿದನು. ಒಂದು ದಿನ ಅವನು ನನ್ನನ್ನು ಯೆಹೋವನ ಸಾಕ್ಷಿಗಳ ಸಮ್ಮೇಳನಕ್ಕೆ ಆಮಂತ್ರಿಸಿದನು, ಮತ್ತು ನಾನು ಹೋದೆ. ನಾನು ಕ್ರೇಗ್‌ನನ್ನು ಕಂಡುಕೊಂಡೆ ಮತ್ತು ಅವನ ಹಾಗೂ ಅವನ ಕುಟುಂಬದೊಂದಿಗೆ ಕುಳಿತುಕೊಂಡೆ. ನಾನು ಏನನ್ನು ಕಂಡೆನೊ—ಬೇರೆ ಬೇರೆ ಜಾತಿಗಳ ಜನರು ಒಟ್ಟಿಗೆ ಐಕ್ಯದಿಂದ ಆರಾಧಿಸುತ್ತಿರುವುದು—ಅದರಿಂದ ಪ್ರಭಾವಿತಳಾಗಿದ್ದೆ ಮತ್ತು ನಾನು ಏನನ್ನು ಕೇಳಿದೆನೊ ಅದರಿಂದ ಸಹ ಪ್ರೇರಿತಳಾಗಿದ್ದೆ.

ಕ್ರೇಗ್‌ಗೆ ಮತ್ತು ನನಗೆ ಹೊಸ ಕ್ಲಾಸ್‌ಗಳಿಗೆ ನೇಮಕವು ದೊರೆತಾಗ, ನಮಗಿಬ್ಬರಿಗೂ ಒಂದೇ ವೇಳೆಯಲ್ಲಿ ಊಟದ ಬಿಡುವು ಇರದ ಕಾರಣ ನಾವು ಇನ್ನು ಮುಂದೆ ಒಟ್ಟಿಗೆ ಬೈಬಲನ್ನು ಅಭ್ಯಸಿಸಲು ಸಾಧ್ಯವಿರಲಿಲ್ಲ. ಕ್ರೇಗ್‌ನ ತಾಯಿ ನನ್ನೊಂದಿಗೆ ಅಭ್ಯಸಿಸಬಹುದೋ ಎಂದು ನೋಡಲಿಕ್ಕಾಗಿ ನನ್ನ ತಾಯಿಯನ್ನು ಕೇಳಿದರು, ಆದರೆ ತಾಯಿ ಬೇಡವೆಂದು ಹೇಳಿದರು. ತದನಂತರ, ಕ್ರೈಸ್ತ ಕೂಟಗಳಿಗೆ ಹೋಗಲಿಕ್ಕಾಗಿ ಅವರು ನನಗೆ ಅನುಮತಿಯನ್ನಿತ್ತರು. ಆದುದರಿಂದ ಫೋನ್‌ ಪುಸ್ತಕದಲ್ಲಿ ಪಟ್ಟಿಮಾಡಲ್ಪಟ್ಟಿದ್ದ ಒಂದು ರಾಜ್ಯ ಸಭಾಗೃಹಕ್ಕೆ ಫೋನ್‌ ಮಾಡಿದೆ ಮತ್ತು ಆದಿತ್ಯವಾರದಂದು ಕೂಟವು ಬೆಳಗ್ಗೆ 9:00ಕ್ಕೆ ಪ್ರಾರಂಭವಾಗುತ್ತದೆಂದು ತಿಳಿದುಕೊಂಡೆ. ನನಗೆ ದಾರಿ ತಿಳಿದದೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ನಾನು ಮುಂಚಿನ ದಿನ ರಾಜ್ಯ ಸಭಾಗೃಹದ ವರೆಗೆ ಸುಮಾರು 30 ಬ್ಲಾಕುಗಳಷ್ಟು ನಡೆದಿದ್ದೆ.

ಮರುದಿನ ಬೆಳಗ್ಗೆ ನಾನು ಬಂದಾಗ, ನಾನು ಇನ್ನೊಂದು ರಾಜ್ಯ ಸಭಾಗೃಹದಿಂದ ಭೇಟಿ ಮಾಡುತ್ತಿದ್ದೀನೊ ಎಂದು ಒಬ್ಬ ಮನುಷ್ಯನು ಕೇಳಿದನು. ಇದು ನನ್ನ ಪ್ರಥಮ ಭೇಟಿಯೆಂದೂ ಆದರೆ ಸ್ವಲ್ಪ ಸಮಯದ ವರೆಗೆ ನಾನು ಅಭ್ಯಸಿಸಿರುವೆನೆಂದೂ ನಾನು ಅವನಿಗೆ ಹೇಳಿದೆ. ಅವನ ಮತ್ತು ಅವನ ಹೆಂಡತಿಯೊಂದಿಗೆ ಕುಳಿತುಕೊಳ್ಳುವಂತೆ ಅವನು ನನ್ನನ್ನು ಸ್ನೇಹಭಾವದಿಂದ ಆಮಂತ್ರಿಸಿದನು. ಕೂಟಗಳು ಚರ್ಚಿಗಿಂತ ತೀರ ವಿಭಿನ್ನವಾಗಿದ್ದವು. ಪ್ರಶ್ನೋತ್ತರ ಕಾರ್ಯಕ್ರಮಾವಧಿಯಲ್ಲಿ ಹೇಳಿಕೆ ನೀಡಲು ಅನೇಕರು ಅತ್ಯಾಸಕ್ತಿಯುಳ್ಳವರಾಗಿರುವುದನ್ನು ನೋಡಿ ನಾನು ಆಶ್ಚರ್ಯಗೊಂಡೆ. ಎಳೆಯ ಮಕ್ಕಳು ಸಹ ಹೇಳಿಕೆಗಳನ್ನು ನೀಡಿದರು. ನಾನು ನನ್ನ ಕೈಯನ್ನು ಮೇಲೆತ್ತಿದೆ ಮತ್ತು ಒಂದು ಪ್ರಶ್ನೆಗೆ ಉತ್ತರವನ್ನೂ ನೀಡಿದೆ. ಅಂದಿನಿಂದ, ನಾನು ಕೂಟಗಳಿಗೆ ಹಾಜರಾಗುವುದನ್ನು ಮುಂದುವರಿಸಿದೆ ಮತ್ತು ಬೈಬಲ್‌ ಸತ್ಯತೆಗಳ ತಿಳಿವಳಿಕೆಯಲ್ಲಿ ಪ್ರಗತಿಯನ್ನು ಮಾಡಲಾರಂಭಿಸಿದೆ.

ಮತ್ತೊಂದು ಹಿನ್ನಡೆ

ಇಸವಿ 1986ರ ದಶಂಬರದಲ್ಲಿ, ನನ್ನ ಪ್ರೌಢ ಶಾಲೆಯ ಅಂತಿಮ ವರ್ಷದಲ್ಲಿ, ನಾನು ನಿಯತಕ್ರಮದ ವೈದ್ಯಕೀಯ ಪರೀಕೆಗ್ಷಾಗಿ ಹೋದೆ. ನನ್ನ ಬಲ ಶ್ವಾಸಕೋಶದಲ್ಲಿ ವೈದ್ಯರು ಏನನ್ನು ನೋಡಿದರೊ ಅದು ಅವರನ್ನು ಶಂಕಾಸ್ಪದರನ್ನಾಗಿ ಮಾಡಿತು, ಆದುದರಿಂದ ಇನ್ನೂ ಹೆಚ್ಚಿನ ಎಕ್ಸ್‌ರೇಗಾಗಿ ನನ್ನನ್ನು ಪುನಃ ಕರೆಯಲಾಯಿತು. ಖಂಡಿತವಾಗಿ ಏನೋ ದೋಷವಿದೆ ಎಂದು ಇವು ಹೊರಪಡಿಸಿದ್ದನ್ನು ನಾನು ತಿಳಿದಾಗ, ನಾನು ಅಳಲಾರಂಭಿಸಿದೆ.

ಅಂಗಾಂಶಛೇದನೆಯು ಮಾಡಲ್ಪಟ್ಟಿತು; ನನ್ನ ಶ್ವಾಸಕೋಶದಿಂದ ಗೆಡ್ಡೆಯ ಒಂದು ತುಂಡನ್ನು ತೆಗೆಯಲು ವೈದ್ಯರು ಒಂದು ಸೂಜಿಯನ್ನು ಉಪಯೋಗಿಸಿದರು. ಅದು ಕ್ಯಾನ್ಸರಿನಂತಹ ಬೆಳವಣಿಗೆಯಾಗಿ ಪರಿಣಮಿಸಿತು. ವಾಸ್ತವವಾಗಿ, ನನ್ನ ಹೃದಯದ ಅಪಧಮನಿಗಳ ಬಳಿಯಿದ್ದ ಒಂದು ದೊಡ್ಡ ಗೆಡ್ಡೆಯನ್ನು ಒಳಗೊಂಡು ಮೂರು ಗೆಡ್ಡೆಗಳಿದ್ದವು. ವೈದ್ಯರೊಂದಿಗೆ ಒಂದು ಚರ್ಚೆಯನ್ನು ನಡೆಸಿದ ಬಳಿಕ, ಶಸ್ತ್ರಚಿಕಿತ್ಸೆಗೆ ಮುನ್ನ ಗೆಡ್ಡೆಗಳನ್ನು ಸಂಕುಚಿಸಲಿಕ್ಕಾಗಿ, ನಾನು ಎರಡು ಪ್ರಾಯೋಗಿಕ ರಾಸಾಯನಿಕ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕೆಂದು ನಾವು ನಿರ್ಧರಿಸಿದೆವು. ಅಡ್ಡತೊಡಕುಗಳು ಸಾಮಾನ್ಯವಾದದ್ದಾಗಿರುವುವು—ಕೂದಲಿನ ಸಂಪೂರ್ಣ ನಷ್ಟ, ಪಿತ್ತೋದ್ರೇಕ, ವಾಂತಿಮಾಡುವಿಕೆ, ಮತ್ತು ಕಡಿಮೆ ರಕ್ತಾಂಕ.

ಆರಂಭದಲ್ಲಿ ನಾನು ನಿರುತ್ಸಾಹಗೊಂಡಿದ್ದೆ, ಆದರೆ ಬಳಿಕ ನಾನು ಯೆಹೋವನಿಗೆ ಬಹಳವಾಗಿ ಪ್ರಾರ್ಥಿಸಲಾರಂಭಿಸಿದೆ, ಮತ್ತು ಇದು ನನ್ನನ್ನು ಬಲಪಡಿಸಿತು. ಪದವಿ ಪಡೆಯಲು ಆರು ತಿಂಗಳುಗಳಿಗಿಂತಲೂ ಕಡಿಮೆ ಸಮಯವಿತ್ತು. ನನ್ನ ಶಿಕ್ಷಕರು ವಿವೇಚನೆಯುಳ್ಳವರೂ ದಯಾಪರರೂ ಆಗಿದ್ದರು; ನನ್ನ ವೈದ್ಯರಿಂದ ವಿವರಣೆಯ ಒಂದು ಪತ್ರವನ್ನು ಒದಗಿಸುವಂತೆ ಅವರು ನನ್ನನ್ನು ಕೇಳಿಕೊಂಡರು ಮತ್ತು ನನ್ನ ಶಾಲಾಕೆಲಸದೊಂದಿಗೆ ಸಮವಾಗಿ ಮುಂದುವರಿಯಲು ನಾನು ಪ್ರಯತ್ನಿಸಿದೆ.

ಶಾಲೆಯು ಸುಲಭವಾಗಿರಲಿಲ್ಲ

ನಾನು ಅಷ್ಟೊಂದು ಅಸ್ವಸ್ಥಳಾಗಿದ್ದಾಗ, ತರಗತಿ ಅಧ್ಯಯನವನ್ನು ಮಾಡುವ ಪಂಥಾಹ್ವಾನವು ನನಗಿದ್ದದ್ದು ಮಾತ್ರವಲ್ಲದೆ, ನನ್ನ ಕೂದಲು ಉದುರಲಾರಂಭಿಸಿತ್ತು. ನಾನು ಒಂದು ಕೂದಲ ಟೋಪಿ (ವಿಗ್‌) ಕೊಂಡುಕೊಂಡಾಗ, ನನ್ನ ಕೂದಲು ಅಸಾಧಾರಣವಾಗಿ ಕಾಣುತ್ತದೆಂದು ಸಹಪಾಠಿಗಳು ಹೇಳಿದರು—ಅದು ಒಂದು ಕೂದಲ ಟೋಪಿ ಆಗಿತ್ತೆಂದು ಅವರು ಗ್ರಹಿಸಲಿಲ್ಲ. ಆದಾಗ್ಯೂ, ಒಬ್ಬ ಹುಡುಗನು ಗ್ರಹಿಸಿದನು. ಪ್ರತಿ ಬಾರಿ ನಾನು ತರಗತಿಯೊಳಗೆ ಹೋದಾಗ, ಕಪ್ಪು-ಹಲಗೆಯ ಮೇಲೆ “ವಿಗ್‌” ಎಂಬ ಶಬ್ದವನ್ನು ಅವನು ಬರೆಯುತ್ತಿದ್ದನು, ಮತ್ತು ಅವನು ಹಾಗೂ ಅವನ ಸ್ನೇಹಿತರು ನಗುತ್ತಿದ್ದರು ಮತ್ತು ಹಾಸ್ಯ ಮಾಡುತ್ತಿದ್ದರು. ಅವರ ಹಾಸ್ಯಮಾಡುವಿಕೆಯೆಲ್ಲವೂ ನನ್ನನ್ನು ನಿರುತ್ಸಾಹಗೊಳ್ಳುವಂತೆ ಮಾಡಿತು.

ಬಳಿಕ, ಒಂದು ದಿನ ಕಿಕ್ಕಿರಿದ ಹೊರದಾರಿಯಲ್ಲಿ, ಹಿಂದಿನಿಂದ ಯಾರೋ ಒಬ್ಬರು ನನ್ನ ತಲೆಯ ಮೇಲಿನಿಂದ ಕೂದಲ ಟೋಪಿಯನ್ನು ಸೆಳೆದುಕೊಂಡರು. ನಾನು ಕೂಡಲೆ ಹಿಂದಕ್ಕೆ ತಿರುಗಿದೆ ಮತ್ತು ಅದನ್ನು ಮೇಲೆತ್ತಿಕೊಂಡೆ. ಆದರೆ ನನ್ನ ಬೋಳು ತಲೆಯನ್ನು ಡಜನ್‌ಗಟ್ಟಲೆ ಮಕ್ಕಳು ನೋಡಿದರು, ಮತ್ತು ನನಗೆ ಬಹಳ ಮನೋವೇದನೆಯಾಯಿತು. ನಾನು ಒಂದು ಮೆಟ್ಟಲಸಾಲಿನ ಬಳಿ ಹೋಗಿ ಅತ್ತೆ. ಮರುದಿನ, ಏನು ಸಂಭವಿಸಿತ್ತೊ ಅದರ ಕುರಿತು ಅವರು ಪಶ್ಚಾತ್ತಾಪ ಪಟ್ಟರೆಂಬುದನ್ನು ಕೆಲವು ವಿದ್ಯಾರ್ಥಿಗಳ ಮುಖಗಳಿಂದ ನಾನು ಕಾಣಬಹುದಿತ್ತು. ನನ್ನ ಕೂದಲ ಟೋಪಿಯನ್ನು ಕಿತ್ತುಹಾಕಲಿಕ್ಕಾಗಿ ಹುಡುಗಿಯೊಬ್ಬಳು ಒಬ್ಬ ಹುಡುಗನಿಗೆ ಹಣ ಕೊಟ್ಟಿದ್ದಳೆಂದು ಸಹಪಾಠಿಗಳು ಹೇಳಿದರು.

ರಕ್ತದ ಮೇಲಿನ ನಿಲುವು ಸುಲಭವಲ್ಲ

ರಾಸಾಯನಿಕ ಚಿಕಿತ್ಸೆಯಿಂದಾಗಿ, ನನ್ನ ರಕ್ತಾಂಕವು ತೀರ ಕೆಳಕ್ಕೆ ಇಳಿಯಿತು. ವಿಷಯಗಳನ್ನು ಇನ್ನೂ ಹೆಚ್ಚು ಕೆಟ್ಟದ್ದಾಗಿ ಮಾಡುವಂತೆ, ನನ್ನ ಮೂಗಿನಿಂದ ರಕ್ತ ಬರುತ್ತಿತ್ತು—ಕೆಲವೊಮ್ಮೆ ದಿನವೊಂದಕ್ಕೆ ಎರಡು ಅಥವಾ ಮೂರು ಬಾರಿ. ನನಗೆ ದೀಕ್ಷಾಸ್ನಾನವಾಗಿರಲಿಲ್ಲ, ಆದರೆ ನಾನೊಂದು ದೃಢ ನಿಲುವನ್ನು ತೆಗೆದುಕೊಂಡೆ ಮತ್ತು ನಾನು ರಕ್ತವನ್ನು ಸ್ವೀಕರಿಸುವುದಿಲ್ಲವೆಂದು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಂತೆ ಹೇಳಿದೆ. (ಅ. ಕೃತ್ಯಗಳು 15:28, 29) ನಾನು ಸಾಯುವಂತೆ ಅವಳು ಬಯಸುವುದಿಲ್ಲವೆಂದು, ನನ್ನ ಚಿಕ್ಕ ಸೋದರ ಮಕ್ಕಳಲ್ಲಿ ಒಬ್ಬಳು ನನಗೆ ಹೇಳುವಂತೆ ನನ್ನ ಹಿರಿಯ ಅಕ್ಕ ಉತ್ತೇಜಿಸಿದಳು. ನಾನು ರಕ್ತವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾ, ನನ್ನ ತಂದೆ ಕ್ಷೋಭೆಗೊಂಡಿದ್ದರು, ಮತ್ತು ನಾನೊಂದು ರಕ್ತಪೂರಣವನ್ನು ತೆಗೆದುಕೊಂಡರೆ ದೇವರು ನನ್ನನ್ನು ಕ್ಷಮಿಸುವನೆಂದು ತಾಯಿ ನನಗೆ ಹೇಳುತ್ತಾ ಇದ್ದರು.

ಅದೇ ಸಮಯದಲ್ಲಿ, ಅಂತಹ ಕಡಿಮೆ ರಕ್ತಾಂಕದೊಂದಿಗೆ ನನಗೆ ಹೃದಯಾಘಾತ ಅಥವಾ ಮಸ್ತಿಷ್ಕರಕ್ತಾಘಾತವು ಸಂಭವಿಸುವುದೆಂದು ವೈದ್ಯರು ನನಗೆ ಎಚ್ಚರಿಕೆ ನೀಡಿದರು. ದೃಢವಾಗಿ ನಿಲ್ಲಲು ನಾನು ದೃಢನಿಶ್ಚಯ ಮಾಡಿದ್ದರಿಂದ, ನಾನು ಸತ್ತರೆ, ಅವರು ಜವಾಬ್ದಾರರಾಗಿರುವುದಿಲ್ಲವೆಂದು ಹೇಳುವ ಮೂಲಕ, ಒಂದು ಬಿಡುಗಡೆಯ ಪತ್ರಕ್ಕೆ ನಾನು ಸಹಿ ಹಾಕುವಂತೆ ಮಾಡಿದರು. ಬೇಗನೆ, ನಾನು ಮನೆಗೆ ಹಿಂದಿರುಗುವಂತೆ ಮತ್ತು ಶಾಲೆಗೆ ಪುನಃ ಹೋಗುವಂತೆ ಸಾಕಷ್ಟು ಗುಣಹೊಂದಿದೆ. ಆದಾಗ್ಯೂ, ನನ್ನ ಕಡಿಮೆ ರಕ್ತಾಂಕದ ಕಾರಣದಿಂದ, ಈಗ ನಾನು ರಾಸಾಯನಿಕ ಚಿಕಿತ್ಸೆಗೆ ಬದಲಾಗಿ ವಿಕಿರಣ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕೆಂದು ವೈದ್ಯರು ನಿರ್ಧರಿಸಿದರು. ಎಪ್ರಿಲ್‌ನ ಅಂತ್ಯದಿಂದ 1987ರ ಜೂನ್‌ನ ಆರಂಭದ ತನಕ, ಪ್ರತಿ ದಿನ ಶಾಲೆಯ ಬಳಿಕ ಈ ಚಿಕಿತ್ಸೆಗಳನ್ನು ನಾನು ಪಡೆದುಕೊಂಡೆ.

ಪದವಿಪ್ರಾಪ್ತಿ, ಬಳಿಕ ದೀಕ್ಷಾಸ್ನಾನ

ಪದವಿಪ್ರಾಪ್ತಿಯು ಒಂದು ವಿಶೇಷ ಸಂದರ್ಭವಾಗಿತ್ತು. ಒಂದು ಉಡುಪನ್ನು ಕೊಂಡುಕೊಳ್ಳಲಿಕ್ಕಾಗಿ ನನ್ನ ಅಕ್ಕ ನನಗೆ ಸಹಾಯ ಮಾಡಿದ್ದಳು, ಮತ್ತು ನಾನು ಒಂದು ಹೊಸ ಕೂದಲ ಟೋಪಿಯನ್ನು ಕೊಂಡುಕೊಂಡಿದ್ದೆ. ತಾಯಿ ಮತ್ತು ನನ್ನ ಇಬ್ಬರು ಅಕ್ಕಂದಿರು ಅಲಿದ್ದರು, ಮತ್ತು ತದನಂತರ ಒಟ್ಟಿಗೆ ನಾವೆಲ್ಲರು ಸ್ಮರಣಯೋಗ್ಯ ಊಟಕ್ಕಾಗಿ ಹೊರಗೆ ಹೋದೆವು.

ಆ ಸಮಯದಲ್ಲಿ, ನಾನು ರಾಸಾಯನಿಕ ಚಿಕಿತ್ಸೆಯನ್ನಾಗಲಿ ವಿಕಿರಣ ಚಿಕಿತ್ಸೆಯನ್ನಾಗಲಿ ಪಡೆದುಕೊಳ್ಳುತ್ತಿರಲಿಲ್ಲ. ಆದರೆ ಕೆಲವು ವಾರಗಳ ಬಳಿಕ, ವೈದ್ಯರು ನನಗೆ ಕರೆನೀಡಿದರು ಮತ್ತು ಇನ್ನೊಂದು ರಾಸಾಯನಿಕ ಚಿಕಿತ್ಸಾವಧಿಗಾಗಿ ಆಸ್ಪತ್ರೆಗೆ ಬರುವಂತೆ ಹೇಳಿದರು. ನನಗೆ ಹೋಗಲು ಇಷ್ಟವಿರಲಿಲ್ಲ ಯಾಕಂದರೆ, ಒಂದು ವಾರದಲ್ಲಿ ನ್ಯೂ ಯಾರ್ಕ್‌ ಸಿಟಿಯ ಯಾಂಕಿ ಸ್ಟೇಡಿಯಮ್‌ನಲ್ಲಿ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನವನ್ನು ನಾನು ಹಾಜರಾಗಲಿಕ್ಕಿದ್ದೆ. ಆದಾಗ್ಯೂ, ಮುಂದಾಗಿಯೇ ಹೋಗುವಂತೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವಂತೆ ತಾಯಿ ನನಗೆ ಹೇಳಿದರು. ಆದುದರಿಂದ ನಾನು ಹೋದೆ.

ಅಧಿವೇಶನದ ಸಮಯದಲ್ಲಿ ನಾನು ಬಹಳ ಭಾವೋದ್ರೇಕಗೊಂಡಿದ್ದೆ, ಯಾಕಂದರೆ 1987, ಜುಲೈ 25ರ ಶನಿವಾರದಂದು ನಾನು ದೀಕ್ಷಾಸ್ನಾನ ಪಡೆದುಕೊಳ್ಳಲಿಕ್ಕಿದ್ದೆ. ದೀಕ್ಷಾಸ್ನಾನದ ಸ್ಥಳವಾದ ಆರ್ಚರ್ಡ್‌ ಬೀಚ್‌ಗೆ ನಾವು ಪೋಲಿಸರ ಬೆಂಗಾವಲನ್ನು ಹೊಂದಿದ್ದೆವು. ದೀಕ್ಷಾಸ್ನಾನ ಪಡೆದುಕೊಂಡ ಬಳಿಕ, ಆ ದಿನದ ಉಳಿದ ಕಾರ್ಯಕ್ರಮಕ್ಕಾಗಿ ನಾನು ಸ್ಟೇಡಿಯಮ್‌ಗೆ ಹಿಂದಿರುಗಿದೆ. ಆ ಸಂಜೆ ನಾನು ತೀರ ದಣಿದಿದ್ದೆ, ಆದರೆ ಆದಿತ್ಯವಾರ ಬೆಳಗ್ಗೆ ನಾನು ಸಿದ್ದಳಾದೆ ಮತ್ತು ಅಧಿವೇಶನದ ಕೊನೆಯ ದಿನವನ್ನು ಹಾಜರಾದೆ.

ರಕ್ತದ ವಿವಾದಾಂಶವನ್ನು ಪುನಃ ಎದುರಿಸುವುದು

ಮಾರನೆಯ ಅಪರಾಹ್ಣ ನಾನು, [39 ಡಿಗ್ರಿ ಸೆಲ್ಸಿಯಸ್‌] ಜ್ವರ, ಮೂತ್ರ ಜನಕಾಂಗದ ದೋಷ, ಮತ್ತು ವಿಪರೀತ ಕಡಿಮೆ ರಕ್ತಾಂಕದಿಂದಾಗಿ ಆಸ್ಪತ್ರೆಗೆ ಸೇರಿಸಲ್ಪಟ್ಟೆ. ನಾನು ರಕ್ತಪೂರಣಕ್ಕಾಗಿ ಸಮ್ಮತಿ ಪತ್ರಕ್ಕೆ ಸಹಿ ಮಾಡದಿದ್ದಲ್ಲಿ, ಕೋರ್ಟ್‌ ಆರ್ಡರನ್ನು ತರುತ್ತೇನೆ ಮತ್ತು ನನ್ನ ಮೇಲೆ ರಕ್ತವನ್ನು ಬಲಾತ್ಕರಿಸುತ್ತೇನೆಂದು ವೈದ್ಯರು ಬೆದರಿಕೆಯನ್ನೊಡ್ಡಿದರು. ನಾನು ಬಹಳ ಗಾಬರಿಗೊಂಡಿದ್ದೆ. ನನ್ನ ಕುಟುಂಬವು ನನ್ನನ್ನು ಒತ್ತಾಯಿಸುತ್ತಿತ್ತು; ತನ್ನ ಸ್ವಲ್ಪ ರಕ್ತವನ್ನು ಕೊಡಲೂ ನನ್ನ ಅಕ್ಕ ಒಪ್ಪಿದಳು, ಆದರೆ ನಾನು ಅವಳಿಗೆ ಬೇಡ ಎಂದು ಹೇಳಿದೆ.

ದೃಢವಾಗಿ ನಿಲ್ಲಲಿಕ್ಕಾಗಿ ನನಗೆ ಸಹಾಯ ಮಾಡುವಂತೆ ನಾನು ಯೆಹೋವನಿಗೆ ಬಹಳವಾಗಿ ಪ್ರಾರ್ಥಿಸಿದೆ. ಕೃತಜ್ಞತಾ ಸೂಚಕವಾಗಿಯೆ, ನನ್ನ ರಕ್ತಾಂಕವು ಏರಲಾರಂಭಿಸಿತು, ಮತ್ತು ರಕ್ತವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವುದು ನಿಂತುಹೋಯಿತು. ನಾನು ರಾಸಾಯನಿಕ ಚಿಕಿತ್ಸೆಯನ್ನು ಮುಂದುವರಿಸಬೇಕಾಗಿದ್ದಾಗ್ಯೂ, ಸೂಕ್ತವಾದ ಅಭಿಧಮನಿಗಳು ನನ್ನಲ್ಲಿ ಉಳಿದಿರಲಿಲ್ಲ. ಆದುದರಿಂದ ಒಬ್ಬ ಶಸ್ತ್ರಚಿಕಿತ್ಸಕರು, ಔಷಧದ್ರವ್ಯವನ್ನು ಕೊಡಸಾಧ್ಯವಾಗುವಂತೆ ಮಾಡುವ ಒಂದು ಸಾಧನವನ್ನು ಒಳಸೇರಿಸಲಿಕ್ಕಾಗಿ ನನ್ನ ಕತ್ತಿನ ಮೂಳೆಯ ಕೆಳಗೆ ಒಂದು ಸಣ್ಣ ರಂಧ್ರವನ್ನು ಮಾಡಿದರು.

ನನ್ನ ಶ್ವಾಸಕೋಶದಲ್ಲಿರುವ ಗೆಡ್ಡೆಗಳ ತೆಗೆದುಹಾಕುವಿಕೆಯ ಕುರಿತು ಚರ್ಚಿಸುತ್ತಿರುವಾಗ, ಅನಿರೀಕ್ಷಿತ ಸಂದರ್ಭದ ಹೊರತು ತಾನು ರಕ್ತವನ್ನು ಉಪಯೋಗಿಸುವುದಿಲ್ಲವೆಂದು ಶಸ್ತ್ರಚಿಕಿತ್ಸಕರು ಹೇಳಿದರು. ಸಮ್ಮತಿಯನ್ನು ನೀಡುವಂತೆ ತಾಯಿ ನನಗೆ ಹೇಳುತ್ತಿದ್ದರು, ಆದುದರಿಂದ ನಾನು ಸಮ್ಮತಿಸಿದೆ. ಆದರೆ ತದನಂತರ ಕಾರ್ಯತಃ ರಕ್ತವನ್ನು ಸ್ವೀಕರಿಸಲು ಸಮ್ಮತಿಸುವುದು ಅದಾಗಿದ್ದುದರಿಂದ ನನಗೆ ಮನಸ್ಸಿಗೆ ನೋವಾಯಿತು. ಆ ಕೂಡಲೆ ನಾನು ರಕ್ತವನ್ನು ಉಪಯೋಗಿಸದಂತೆ ಭರವಸೆ ಕೊಡಬಹುದಾದ ಒಬ್ಬ ಶಸ್ತ್ರಚಿಕಿತ್ಸಕನಿಗಾಗಿ ಹುಡುಕಲಾರಂಭಿಸಿದೆ. ಹುಡುಕಾಟವು ಆಶಾರಹಿತವಾದಂತೆ ತೋರಿತು, ಆದರೆ ಕೊನೆಯದಾಗಿ ನಾನು ಒಬ್ಬನನ್ನು ಕಂಡುಕೊಂಡೆ, ಮತ್ತು ಜನವರಿ 1988ಕ್ಕೆ ಶಸ್ತ್ರಚಿಕಿತ್ಸೆಯು ನಿಗದಿಸಲ್ಪಟ್ಟಿತು.

ನಾನು ಬದುಕುವೆನೆಂಬ ಯಾವ ಆಶ್ವಾಸನೆಯನ್ನೂ ವೈದ್ಯರು ಕೊಡಲಿಲ್ಲ. ವಾಸ್ತವವಾಗಿ, ಶಸ್ತ್ರಚಿಕಿತ್ಸೆಗೆ ಮುಂಚಿನ ರಾತ್ರಿ, ಅವರು ನನ್ನ ಕೊಠಡಿಗೆ ಬಂದು ಹೇಳಿದ್ದು: “ಕಾರ್ಯವಿಧಾನವನ್ನು ಮಾಡಲು ನಾನು ಪ್ರಯತ್ನಿಸುವೆ.” ನಾನು ಭಯಗೊಂಡಿದ್ದೆ; ನಾನು ಕೇವಲ 19 ವರ್ಷದವಳಾಗಿದ್ದೆ ಮತ್ತು ಸಾಯಲು ಇಷ್ಟವಿರಲಿಲ್ಲ. ಆದಾಗ್ಯೂ, ಆ ಮೂರು ಗೆಡ್ಡೆಗಳು ಯಶಸ್ವಿಯಾಗಿ ತೆಗೆದುಹಾಕಲ್ಪಟ್ಟವು, ನನ್ನ ಶ್ವಾಸಕೋಶದ ಮೂರನೇ ಎರಡು ಭಾಗ ಸಹ ತೆಗೆದುಹಾಕಲ್ಪಟ್ಟಿತು. ಕೇವಲ ಒಂದು ವಾರದ ವರೆಗೆ ಮಾತ್ರ ನಾನು ಆಸ್ಪತ್ರೆಯಲ್ಲಿದ್ದೆ ಎಂಬುದು ಸುಸ್ಪಷ್ಟ. ಮನೆಯಲ್ಲಿ ಸುಮಾರು ಎರಡೂವರೆ ತಿಂಗಳುಗಳ ವರೆಗೆ ಗುಣಹೊಂದಿದ ಬಳಿಕ, ಎಂದಿನ ಅಡ್ಡತೊಡಕುಗಳೊಂದಿಗೆ, ನಾನು ಪುನಃ ರಾಸಾಯನಿಕ ಚಿಕಿತ್ಸೆಯನ್ನು ಆರಂಭಿಸಿದೆ.

ಇದೇ ಸಮಯದಲ್ಲಿ ನನ್ನ ತಂದೆ ಸಹ ಕ್ಯಾನ್ಸರ್‌ನಿಂದಾಗಿ ಅಸ್ವಸ್ಥರಾದರು, ಮತ್ತು ಕೆಲವು ತಿಂಗಳುಗಳ ಬಳಿಕ ಒಂದು ರಾತ್ರಿ ಮಲಗುವ ಕೋಣೆಯಲ್ಲಿ ಅವರು ಸತ್ತಿರುವುದನ್ನು ತಾಯಿ ಕಂಡುಕೊಂಡರು. ಅವರ ಮರಣದ ಬಳಿಕ, ನಾನು ವೃತ್ತಿ ಶಿಕ್ಷಣಶಾಲೆಗೆ ಹೋಗಲಾರಂಭಿಸಿದೆ, ಅಲ್ಲಿ ಕಾರ್ಯದರ್ಶಿಯ ಕೆಲಸದ ತರಬೇತಿಯನ್ನು ತೆಗೆದುಕೊಂಡೆ. ಶಾರೀರಿಕವಾಗಿ, ವಿದ್ವತ್ಪೂರ್ಣವಾಗಿ, ಮತ್ತು ಆತ್ಮಿಕವಾಗಿ—ಆಕ್ಸಿಲಿಯರಿ ಪಯನೀಯರ (ಪೂರ್ಣ ಸಮಯದ ತಾತ್ಕಾಲಿಕ ಶುಶ್ರೂಷಕಳು)ಳಾಗಿ ಭಾಗವಹಿಸುವ ಮೂಲಕ ಸಹ—ಒಳ್ಳೆಯ ಸ್ಥಿತಿಯಲ್ಲಿದ್ದೆ.

ಪುನಃ ಇನ್ನೊಂದು ಹಿನ್ನಡೆ

ಇಸವಿ 1990ರ ಎಪ್ರಿಲ್‌ನಲ್ಲಿ, ಜಾರ್ಜಿಯದ ಅಗಸ್ಟದಲ್ಲಿ ನನ್ನ ಅತ್ಯಂತ ಹಿರಿಯ ಅಣ್ಣನ ವಿವಾಹದ ಸತ್ಕಾರದೂಟಕ್ಕೆ ನಾನು ಹಾಜರಾದೆ. ಅಲ್ಲಿರುವಾಗ ನನ್ನ ಅಣ್ಣ ಹೇಳಿದ್ದು: “ನಿನ್ನ ಕಾಲು ನಿಜವಾಗಿಯೂ ದೊಡ್ಡದಾಗಿದೆ.”

“ಅದು ಏನಾಗಿದೆಯೆಂದು ನೀನು ಅಭಿಪ್ರಯಿಸುತ್ತಿ?” ಎಂದು ನಾನು ಕೇಳಿದೆ.

“ನನಗೆ ಗೊತ್ತಿಲ್ಲ” ಎಂದು ಅವನು ಉತ್ತರಿಸಿದನು.

“ಅದು ಬಹುಶಃ ಒಂದು ಗೆಡ್ಡೆಯಾಗಿದೆ” ಎಂದು ನಾನು ಹೇಳಿದೆ.

ನ್ಯೂ ಯಾರ್ಕ್‌ ಸಿಟಿಗೆ ಹಿಂದಿರುಗಿದ ಬಳಿಕ, ನಾನು ವೈದ್ಯರ ಬಳಿಗೆ ಹೋದೆ. ನನ್ನ ಎಡಭಾಗದ ಕಣಕಾಲಿನ ಹಿಂಭಾಗದಲ್ಲಿ ಇನ್ನೊಂದು ವಿಲ್ಮ್‌ಸ್‌ ಗೆಡ್ಡೆಯನ್ನು, ಸ್ಥಾನಿಕ ಅರಿವಳಿಕೆಯ ಕೆಳಗೆ ನಿರ್ವಹಿಸಲ್ಪಟ್ಟ ಒಂದು ಅಂಗಾಶಛೇದನೆಯು ಹೊರಗೆಡಹಿತು. ಮೂಳೆಗೆ ಹಾನಿಯಾಗಿಲ್ಲವೆಂದು ಪರೀಕ್ಷೆಗಳು ತೋರಿಸಿದವು, ಆದರೆ ಹೊರಗೆ ತೆಗೆಯಲು ಗೆಡ್ಡೆಯು ಬಹಳ ದೊಡ್ಡದ್ದಾಗಿತ್ತು. ಆದುದರಿಂದ ಸಾಮಾನ್ಯವಾದ ರಾಸಾಯನಿಕ ಚಿಕಿತ್ಸೆಯು ಹಿಂಬಾಲಿಸಿತು.

ಸ್ವಲ್ಪ ಕಾಲದ ಬಳಿಕ ವಾಂತಿಯನ್ನು ನಾನು ನಿಲ್ಲಿಸದಾದೆ. ಕರುಳಿನ ತಡೆಗಟ್ಟುವಿಕೆ ನನಗಿತ್ತು. ತುರ್ತಿನ ಶಸ್ತ್ರಚಿಕಿತ್ಸೆಯು ಅದನ್ನು ಪರಿಹರಿಸಿತು. ಆದರೂ, ನನ್ನ ಕರುಳು ತಿರುಚಿಕೊಂಡಿತು, ಮತ್ತು ಇನ್ನೊಂದು ಶಸ್ತ್ರಚಿಕಿತ್ಸೆಯು ಅಗತ್ಯವಾಗಿತ್ತು. ನನ್ನ ಹಿಮೋಗ್ಲೋಬಿನ್‌ ಎಣಿಕೆಯು ನಾಲ್ಕರ ಸಮೀಪಕ್ಕೆ ಇಳಿಯಿತು, ಮತ್ತು ವೈದ್ಯರು ಹೀಗೆ ಹೇಳುತ್ತಾ ಇದ್ದರು: “ನೀನು ರಕ್ತವನ್ನು ತೆಗೆದುಕೊಳ್ಳಲೇ ಬೇಕು. ನೀನು ಸಾಯಲಿರುವಿ. ನೀನು ಬಹುಶಃ ರಾತ್ರಿಯುದ್ದಕ್ಕೂ ಬದುಕಿ ಉಳಿಯಲಾರಿ.” ಶ್ಮಶಾನಗಳು ಮತ್ತು ಸಾಯುವುದರ ಕುರಿತು ನನಗೆ ಘೋರ ಸ್ವಪ್ನಗಳು ಬಿದ್ದವು.

ಅಕ್ಟೋಬರದಷ್ಟಕ್ಕೆ ಗೆಡ್ಡೆಯನ್ನು ತೆಗೆದುಹಾಕಲು ಸಾಧ್ಯವಾಗುವಷ್ಟು ನಾನು ಗುಣಹೊಂದಿದೆ. ನನ್ನ ಕಣಕಾಲಿನ ಹಿಂಭಾಗದ ಸುಮಾರು 70 ಪ್ರತಿಶತದಷ್ಟು ಭಾಗವನ್ನೂ ಅವರು ತೆಗೆದುಹಾಕಿದರು. ನಾನು ಪುನಃ ನಡೆಯುವೆನೊ ಇಲ್ಲವೊ ಎಂಬುದು ಸಂದೇಹಾಸ್ಪದವಾಗಿತ್ತು. ಆದರೆ ನ್ಯೂ ಯಾರ್ಕ್‌ ಸಿಟಿಯಲ್ಲಿ ಪ್ರಯಾಣಿಸಲಿಕ್ಕಾಗಿ ನಾನು ನಡೆಯಬೇಕಾದ ಅಗತ್ಯವಿತ್ತು, ಆದುದರಿಂದ ಚಿಕಿತ್ಸೆ ಮತ್ತು ದೃಢ ನಿರ್ಧಾರದಿಂದ ನಾನು ನಡೆಯಲಾರಂಭಿಸಿದೆ—ಮೊದಲಾಗಿ ಒಂದು ನಡೆ ಸಾಧನ (ವಾಕರ್‌)ದ ಮೂಲಕ, ಬಳಿಕ ಊರುಗೋಲು, ತದನಂತರ ಒಂದು ಕೈಕೋಲು, ಮತ್ತು ಕೊನೆಯದಾಗಿ ಒಂದು ಕಾಲುಕಟ್ಟಿ (ಲೆಗ್‌ ಬ್ರೇಸ್‌)ನ ಮೂಲಕ, ಇದು ಮನೆ-ಮನೆಯ ಶುಶ್ರೂಷೆಯಲ್ಲಿ ನನ್ನ ಬೈಬಲನ್ನು ಉಪಯೋಗಿಸುವಂತೆ ನನ್ನ ಕೈಗಳಿಗೆ ಸ್ವಾತಂತ್ರ್ಯವನ್ನು ಕೊಟ್ಟಿತು. ರಾಸಾಯನಿಕ ಚಿಕಿತ್ಸೆಯ ಸಮಯದಲ್ಲಿ, ನಾನು 27 ಕಿಲೊಗ್ರಾಮ್‌ಗಳಿಗೆ ಇಳಿದಿದ್ದೆ; ನಾನು 155 ಸೆಂಟಿಮೀಟರ್‌ ಎತ್ತರವಿದ್ದೇನೆ ಮತ್ತು ಸಹಜವಾಗಿ ಸುಮಾರು 54 ಕಿಲೊಗ್ರಾಮ್‌ಗಳಷ್ಟು ತೂಕವಿದ್ದೇನೆ. ನಾನು ತೂಕವನ್ನು ಗಳಿಸಿದಂತೆ ಮತ್ತು ನನ್ನ ಕಾಲು ಬೆಳೆದಂತೆ, ವೈದ್ಯರು ಕಾಲುಕಟ್ಟನ್ನು ದೊಡ್ಡದು ಮಾಡುತ್ತಾ ಇದ್ದರು. ಕೊನೆಯದಾಗಿ, ನಾನು ನನ್ನ ಸಹಜ ತೂಕವನ್ನು ಸಮೀಪಿಸಿದಂತೆ, ಅವರು ಹೊಸದೊಂದನ್ನು ಮಾಡಿದರು.

ಜೀವಿತವು ಇನ್ನೂ ಸುಲಭವಲ್ಲ

ಇಸವಿ 1992ರ ಬೇಸಗೆಯಷ್ಟಕ್ಕೆ, ನಾನು ನನ್ನ ಸ್ವಾಭಾವಿಕ ಸ್ಥಿತಿಯಲ್ಲಿರುವಂತೆ ಕಾಣಿಸುತ್ತಿದ್ದೆ ಮತ್ತು ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲೂ ಎದುರುನೋಡುತ್ತಿದುದು ಸಂಭವನೀಯ. ನವಂಬರದಲ್ಲಿ, ನಾನು ತುಂಬಾ ಸಂತೋಷವನ್ನು ಅನುಭವಿಸುವಂತೆ ಮಾಡಿದ ಒಂದು ಪತ್ರವನ್ನು ಪಡೆದುಕೊಂಡೆ. ನನ್ನ ಜೀವಿತದ ಅನುಭವಗಳು ಇತರರಿಗೆ ಉತ್ತೇಜನವಾಗಿರಸಾಧ್ಯವಿದೆ ಎಂದು ಅದು ಹೇಳಿತ್ತು, ಮತ್ತು ಎಚ್ಚರ!ದಲ್ಲಿ ಪ್ರಕಾಶಿಸಲಿಕ್ಕಾಗಿ ಅವುಗಳನ್ನು ವಿವರಿಸುವಂತೆ ನಾನು ಆಮಂತ್ರಿಸಲ್ಪಟ್ಟಿದ್ದೆ. ಮುಂದಿನ ವಾರದಲ್ಲಿ ನನ್ನ ಸಂಭ್ರಮವು ಹತಾಶೆಯಾಗಿ ಪರಿಣಮಿಸಿತು.

ನನ್ನ ಒಂದು ಒಳ್ಳೆಯ ಶ್ವಾಸಕೋಶದಲ್ಲಿ ಗೆಡ್ಡೆಗಳಿರುವುದನ್ನು, ನಿಯತಕ್ರಮದ ಎದೆಗೂಡಿನ ಎಕ್ಸ್‌ರೇ ಹೊರಪಡಿಸಿತು. ನಾನು ಅತ್ತೆ, ಮತ್ತು ಬಳಿಕ ಇನ್ನೂ ಹೆಚ್ಚಾಗಿ ಅತ್ತೆ. ಒಂದು ಮೂತ್ರಜನಕಾಂಗ, ನನ್ನ ಪಿತ್ತಜನಕಾಂಗದ ಒಂದು ಭಾಗ, ನನ್ನ ಎಡ ಶ್ವಾಸಕೋಶದ ಬಹುಭಾಗ, ಕಾಲಿನ ಒಂದು ಭಾಗದ ನಷ್ಟವನ್ನು ನಾನು ನಿಭಾಯಿಸಿದ್ದೆ, ಆದರೆ ಎರಡೂ ಶ್ವಾಸಕೋಶಗಳನ್ನು ಕಳೆದುಕೊಳ್ಳುವುದರಿಂದ ಯಾರೂ ಬದುಕಸಾಧ್ಯವಿಲ್ಲ. ಪುನಃ ನನ್ನ ಕುಟುಂಬ ಮತ್ತು ಸ್ನೇಹಿತರು ಭಾವನಾತ್ಮಕವಾಗಿ ನನ್ನನ್ನು ಬೆಂಬಲಿಸಿದರು, ಮತ್ತು ರೋಗದ ವಿರುದ್ಧ ಪುನಃ ಒಮ್ಮೆ ಹೋರಾಡಲು ನಾನು ದೃಢನಿಶ್ಚಯ ಮಾಡಿದೆ.

ಗೆಡ್ಡೆಗಳ ಬೆಳವಣಿಗೆಯನ್ನು ಸಂಕುಚಿಸಲಿಕ್ಕಾಗಿ ರಾಸಾಯನಿಕ ಚಿಕಿತ್ಸೆಯು ಪ್ರಾರಂಭಿಸಲ್ಪಟ್ಟಿತು. ಅವುಗಳನ್ನು ತೆಗೆದುಹಾಕಬಹುದು ಮತ್ತು ಶ್ವಾಸಕೋಶವನ್ನು ರಕ್ಷಿಸಬಹುದೆಂದು ಒಬ್ಬ ವೈದ್ಯರು ಅಭಿಪ್ರಯಿಸಿದರು. ಇಸವಿ 1993ರ ಮಾರ್ಚ್‌ನಲ್ಲಿ, ನಾನು ಶಸ್ತ್ರಚಿಕಿತ್ಸೆಯ ಕೊಠಡಿಗೆ ಹೋದೆ. ಅವರು ಕೇವಲ ಅದನ್ನು ನೋಡಿದರು ಮತ್ತು ನನಗೆ ಹೊಲಿಗೆ ಹಾಕಿದರು ಎಂದು ತದನಂತರ ನನಗೆ ತಿಳಿಯಿತು. ಶ್ವಾಸಕೋಶವನ್ನು ಹೊರಕ್ಕೆ ತೆಗೆಯದೆ ಗೆಡ್ಡೆಗಳನ್ನು ತೆಗೆದುಹಾಕಲು ಅವರಿಗೆ ಸಾಧ್ಯವಿರಲಿಲ್ಲ. ಅಂದಿನಿಂದ ಗೆಡ್ಡೆಗಳನ್ನು ಕೊಲ್ಲುವ ಪ್ರಯತ್ನದಲ್ಲಿ ನನಗೆ ಬಲವಾದ ರಾಸಾಯನಿಕ ಚಿಕಿತ್ಸೆಯು ಕೊಡಲ್ಪಡುತ್ತಾ ಇದೆ.

ಸಾಯುವುದು ನನ್ನ ಅಲೋಚನೆಗಳನ್ನು ಏಕೆ ಅತಿಕ್ರಮಿಸುತ್ತದೆಂಬುದನ್ನು ನೀವು ನೋಡುತ್ತೀರೊ? ನನ್ನ ಜೀವಿತವು ಸುಲಭವಾಗಿರುತ್ತಿದ್ದಲ್ಲಿ, ನಾವು ಏಕೆ ಸಾಯುತ್ತೇವೆ ಮತ್ತು ಭವಿಷ್ಯತ್ತಿಗಾಗಿ ಯಾವ ನಿರೀಕ್ಷೆಯಿದೆ ಎಂಬುದರ ಕುರಿತು ನಾನು ಅಷ್ಟು ಆಳವಾಗಿ ಆಶ್ಚರ್ಯಪಡುತ್ತಿದ್ದೆನೊ? ನನಗೆ ಖಾತ್ರಿಯಿಲ್ಲ. ಆದರೂ, ನಾವು ಈಗ ಬದುಕುತ್ತೇವೊ ಅಥವಾ ಸಾಯುತ್ತೇವೊ ಎಂಬುದು ಪ್ರಾಮುಖ್ಯವಲ್ಲ, ಆದರೆ ನಮಗೆ ನಿತ್ಯ ಜೀವವನ್ನು ಕೊಡಬಲ್ಲಾತನಾದ ಯೆಹೋವ ದೇವರ ಆಶೀರ್ವಾದವನ್ನು ಪಡೆಯುತ್ತೇವೊ ಇಲ್ಲವೊ ಎಂಬುದು ನಿಜವಾಗಿಯೂ ಪ್ರಾಮುಖ್ಯವಾದದ್ದಾಗಿದೆ ಎಂದು ನನಗೆ ಖಾತ್ರಿಯಿದೆ. ಆತನ ನೂತನ ಲೋಕದಲ್ಲಿ ಜೀವಿತದ ನಿರೀಕ್ಷೆಯ ಮೇಲೆ ಲಕ್ಷ್ಯವಿಡುತ್ತಾ, ನನ್ನ ಹೊರೆಗಳನ್ನು ಆತನ ಮೇಲೆ ಹಾಕುತ್ತಾ, ಮತ್ತು ನನ್ನ ನಿರೀಕ್ಷೆಯನ್ನು ಹಂಚಿಕೊಳ್ಳುವ ಸ್ನೇಹಿತರೊಂದಿಗೆ ನಿಕಟವಾಗಿರುವುದು ನನ್ನನ್ನು ದೃಢಪಡಿಸಿಕೊಳ್ಳುವಂತೆ ಸಹಾಯ ಮಾಡಿವೆ.—ಕೀರ್ತನೆ 55:22; ಪ್ರಕಟನೆ 21:3, 4.

ಇತರ ಯುವ ಜನರು ಆರೋಗ್ಯದಿಂದಿರುವುದಕ್ಕಾಗಿ ನಾನು ಸಂತೋಷಿಸುತ್ತೇನೆ. ನಾನು ಏನನ್ನು ವಿವರಿಸಿದ್ದೀನೋ ಅದು ಅವರಲ್ಲಿ ಅನೇಕರು ಅದನ್ನು, ವ್ಯರ್ಥವಾದ ಬೆನ್ನಟ್ಟುವಿಕೆಗಳಲ್ಲಿ ಅಲ್ಲ, ಆದರೆ ಯೆಹೋವನ ಸೇವೆಯಲ್ಲಿ ವಿವೇಕದಿಂದ ಉಪಯೋಗಿಸುವಂತೆ ಪ್ರಚೋದಿಸಬಹುದೆಂದು ನಾನು ಭರವಸಿಸುತ್ತೇನೆ. ದೇವರ ನೂತನ ಲೋಕದಲ್ಲಿ ಸ್ವಸ್ಥ ಆರೋಗ್ಯವನ್ನು ಸದಾಕಾಲ ಆನಂದಿಸುವುದು ಎಷ್ಟು ಮಹತ್ವದ್ದಾಗಿರುವುದು! ಅದರಲ್ಲಿ ವೈದ್ಯರ, ಆಸ್ಪತ್ರೆಗಳ, ಸೂಜಿಗಳ, ಟ್ಯೂಬ್‌ಗಳ ಆವಶ್ಯಕತೆಯಿರುವುದಿಲ್ಲ—ಇಲ್ಲ, ಈ ಅಸ್ವಸ್ಥದ ಮತ್ತು ಸಾಯುವ ಹಳೆಯ ಲೋಕದ ಕುರಿತು ನಮಗೆ ನೆನಪು ಹುಟ್ಟಿಸುವ ಯಾವುದೂ ಅಲ್ಲಿರದು.—ಕ್ಯಾಥಿ ರಾಬರ್‌ಸನ್‌ ಹೇಳಿದಂತೆ. (g94 8/22)

[ಪುಟ 21 ರಲ್ಲಿರುವ ಚಿತ್ರ]

ನಾನು ಪ್ರೌಢಶಾಲೆಯಿಂದ ಪದವಿ ಪಡೆದುಕೊಂಡಾಗ

[ಪುಟ 23 ರಲ್ಲಿರುವ ಚಿತ್ರ]

ನ್ಯೂ ಯಾರ್ಕ್‌ನ ಸರ್ಕಿಟ್‌ ಸಮ್ಮೇಳನವೊಂದರಲ್ಲಿ ಆಹಾರ ಇಲಾಖೆಯಲ್ಲಿ ಸಹಾಯ ಮಾಡುತ್ತಿರುವುದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ