ಅವನು ಬಿಟ್ಟುಕೊಡಲಿಲ್ಲ
ಅಕ್ಟೋಬರ್ 5, 1995ರಂದು, ಮ್ಯಾತ್ ಟಪೀಯೊ ಮಿದುಳಿನಲ್ಲಿನ ಗಡ್ಡೆಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾದನು. ಅದು ಮಾರಕವಾದ ಗಡ್ಡೆಯಾಗಿತ್ತು. ಅವನು ಮುಂದಿನ ಎರಡೂವರೆ ವರ್ಷಗಳಲ್ಲಿ ಒಳಗಾಗಲಿದ್ದ ಅನೇಕ ಶಸ್ತ್ರಚಿಕಿತ್ಸೆಗಳಲ್ಲೇ ಅದು ಮೊದಲನೆಯದ್ದಾಗಿತ್ತು. ರಾಸಾಯನಿಕ (ಕಿಮೋತೆರಪಿ) ಚಿಕಿತ್ಸೆ ಮತ್ತು ವಿಕಿರಣ (ರೇಡಿಯೇಷನ್) ಚಿಕಿತ್ಸೆಗಳು ತರುವಾಯ ನೀಡಲಾದವು.
ಮ್ಯಾತ್ ಅಮೆರಿಕದ ಮಿಷಿಗನ್‌ನಲ್ಲಿ ವಾಸಿಸಿದನು. ಅಲ್ಲಿ ಅವನು ಶಾಲೆಗೆ ಹೋದನು ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾದನು. ತನ್ನ ನಂಬಿಕೆಗಳ ಕುರಿತು ಶಿಕ್ಷಕರೊಂದಿಗೆ ಮತ್ತು ಸಹಪಾಠಿಗಳೊಂದಿಗೆ ಮಾತಾಡುವ, ಅಲ್ಲದೆ ಶುಶ್ರೂಷೆಯಲ್ಲಿ ಇತರರನ್ನು ಭೇಟಿಯಾಗುವ ಕೆಲಸದಲ್ಲಿ ಭಾಗವಹಿಸುವ ಅವಕಾಶಗಳ ಸದುಪಯೋಗವನ್ನು ಮಾಡಿಕೊಂಡನು. ಅವನು ತನ್ನ ಜೀವಿತದ ಕೊನೆಯ ಎರಡೂವರೆ ವರ್ಷಗಳಲ್ಲಿನ 18 ತಿಂಗಳುಗಳನ್ನು ಆಸ್ಪತ್ರೆಯಲ್ಲೇ ಕಳೆದನು. ಆಗಿಂದಾಗ್ಗೆ ಅವನು ಅಲ್ಲಿಯೇ ಉಳಿಯುತ್ತಿದ್ದಾಗ, ಭೇಟಿಯಾಗುತ್ತಿದ್ದ ಅನೇಕರಿಗೆ ನೂರಾರು ಬೈಬಲ್ ಸಾಹಿತ್ಯಗಳ ಪ್ರತಿಗಳನ್ನು ನೀಡಿದನು.
ಮ್ಯಾತ್ ಇನ್ನು ಬದುಕಿ ಉಳಿಯಲಾರನೆಂದು ಅನೇಕ ಬಾರಿ ಅನಿಸಿದರೂ, ಪ್ರತಿ ಬಾರಿ ಅವನು ಚೇತರಿಸಿಕೊಳ್ಳುತ್ತಿದ್ದನು. ಒಮ್ಮೆ ಆಸ್ಪತ್ರೆಗೆ ಹೋಗುವಾಗ, ಅವನು ಮೂರ್ಛೆಹೋಗಿ, ಉಸಿರಾಡುವುದನ್ನು ನಿಲ್ಲಿಸಿಬಿಟ್ಟನು. ಆಗ ಪುನಃ ಚಿಕಿತ್ಸೆಯನ್ನು ನೀಡಿ, ಅವನನ್ನು ಪುನಶ್ಚೇತನಗೊಳಿಸಲಾಯಿತು. ಅವನಿಗೆ ಪ್ರಜ್ಞೆಬಂದಾಗ, ಅವನು ಅಳುತ್ತಾ ಕೂಗಿ ಹೇಳಿದ್ದು: “ನಾನು ಹೋರಾಡುತ್ತಾ ಇರುವೆ, ಎಂದೂ ಬಿಟ್ಟುಕೊಡಲಾರೆ!” ಮ್ಯಾತ್‌ಗೆ ದೇವರಲ್ಲಿ ನಂಬಿಕೆಯಿದ್ದ ಕಾರಣ, ಅವನು ಅಷ್ಟು ಸಮಯ ಜೀವಿಸಿದನೆಂದು ಜನರು ಹೇಳಿದರು.
ಯೆಹೋವ ದೇವರಿಗೆ ತನ್ನನ್ನು ಸಮರ್ಪಿಸಿಕೊಂಡಿದ್ದರ ಸಂಕೇತವಾಗಿ ಜನವರಿ 13, 1996ರಂದು ಮ್ಯಾತ್ ದೀಕ್ಷಾಸ್ನಾನ ಪಡೆದುಕೊಂಡಾಗ, ಅವನ ನೆಚ್ಚಿನ ಅಪೇಕ್ಷೆಯು ಈಡೇರಿತು. ಅವನಿಗೆ ಸೋಂಕು ತಗಲುವ ಅಪಾಯವಿದ್ದ ಕಾರಣ, ದೀಕ್ಷಾಸ್ನಾನವು ಒಂದು ಖಾಸಗಿ ಕೊಳದಲ್ಲಿ ನಡೆಯಿತು. ಕೆಲವು ದಿನಗಳ ತರುವಾಯ, ಹೆಚ್ಚಿನ ಶಸ್ತ್ರಚಿಕಿತ್ಸೆಗಾಗಿ ಅವನನ್ನು ಪುನಃ ಆಸ್ಪತ್ರೆಗೆ ಸೇರಿಸಲಾಯಿತು. ಆಗಸ್ಟ್ 1997ರಲ್ಲಿ, ಮ್ಯಾತ್ ವಾರಗಟ್ಟಲೆ ಸತತವಾಗಿ ವಾಂತಿ ಮಾಡಿಕೊಂಡನಾದರೂ, ಹೆಚ್ಚಿನ ಶಸ್ತ್ರಚಿಕಿತ್ಸೆಯ ತರುವಾಯ ಸುಧಾರಿಸಿಕೊಂಡನು.
ಇಷ್ಟೆಲ್ಲ ಸಂಭವಿಸಿದರೂ, ಮ್ಯಾತ್ ತನ್ನ ಹಾಸ್ಯಪ್ರಜ್ಞೆಯನ್ನು ಕಳೆದುಕೊಳ್ಳದೆ, ವೈದ್ಯರೊಂದಿಗೆ ಮತ್ತು ದಾದಿಯರೊಂದಿಗೆ ತಮಾಷೆ ಮಾಡುತ್ತಿದ್ದನು. ಇಂತಹ ಬೆರಗುಗೊಳಿಸುವಂತಹ ಹಾಸ್ಯಪ್ರಜ್ಞೆ ಅವನಿಗೆ ಇರುವುದೇಕೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಒಬ್ಬ ವೈದ್ಯನು ಅವನಿಗೆ ಹೇಳಿದ್ದು: “ಮ್ಯಾತ್, ನಿನ್ನ ಪರಿಸ್ಥಿತಿಯಲ್ಲಿ ನಾನು ಇದ್ದಿದ್ದರೆ, ನನ್ನ ಮಂಚದ ಸುತ್ತಲೂ ತೆರೆ ಎಳೆದು, ಹೊದಿಕೆಯಿಂದ ತಲೆಯನ್ನು ಮುಚ್ಚಿಕೊಂಡು, ಎಲ್ಲರಿಗೂ ಇಲ್ಲಿಂದ ಹೊರಟುಹೋಗುವಂತೆ ಹೇಳಿಬಿಡುತ್ತಿದ್ದೆ.”
ಫೆಬ್ರವರಿ 1998ರಲ್ಲಿ, ಮ್ಯಾತ್ ಕೊನೆಯ ಬಾರಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದನು. ಅವನು ಜೀವಂತನಾಗಿರಲು ಮತ್ತು ಮನೆಗೆ ಹಿಂದಿರುಗಲು ಎಷ್ಟೊಂದು ರೋಮಾಂಚನಗೊಂಡನೆಂದರೆ, ಮನೆಯೊಳಗೆ ಕಾಲಿಟ್ಟಕೂಡಲೇ ಅವನು ಹೇಳಿದ್ದು: “ನಾನು ಬಹಳಷ್ಟು ಆನಂದಿತನಾಗಿದ್ದೇನೆ! ನಾವು ಪ್ರಾರ್ಥನೆ ಮಾಡೋಣ.” ತರುವಾಯ ಯೆಹೋವನಿಗೆ ಪ್ರಾರ್ಥಸಿ, ತನ್ನ ಸಂತೋಷವನ್ನು ವ್ಯಕ್ತಪಡಿಸಿದನು. ಎರಡು ತಿಂಗಳುಗಳ ತರುವಾಯ, ಏಪ್ರಿಲ್ 19ರಂದು, ಅವನು ಕ್ಯಾನ್ಸರಿನಿಂದ ಮೃತಪಟ್ಟನು.
ಈ ಮೊದಲು, ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹದ ಕೂಟವೊಂದರಲ್ಲಿ, ಮ್ಯಾತ್‌ನೊಂದಿಗೆ ರೆಕಾರ್ಡ್ ಮಾಡಲ್ಪಟ್ಟಿದ್ದ ಒಂದು ಇಂಟರ್‌ವ್ಯೂ ಅನ್ನು ನುಡಿಸಲಾಯಿತು. ಅವನನ್ನು ಹೀಗೆ ಕೇಳಲಾಯಿತು: “ಆರೋಗ್ಯವಂತರಾಗಿರುವ ನಮಗೆ, ಶುಶ್ರೂಷೆ ಹಾಗೂ ಕ್ರೈಸ್ತ ಕೂಟಗಳ ಕುರಿತು ನೀನು ಏನನ್ನು ಹೇಳಲು ಬಯಸುವೆ?”
ಮ್ಯಾತ್ ಉತ್ತರಿಸಿದ್ದು: “ನಿಮಗೆ ಸಾಧ್ಯವಾದುದ್ದನ್ನು ಈಗಲೇ ಮಾಡಿರಿ. . . . ಮುಂದೆ ಏನಾಗುವುದೆಂದು ನಿಮಗೆ ಎಂದೂ ಗೊತ್ತಾಗಲಾರದು. . . . ಆದರೆ ಏನೇ ಆಗಲಿ, ಯೆಹೋವನ ಕುರಿತು ಸಾಕ್ಷಿನೀಡುವುದನ್ನು ಮಾತ್ರ ಎಂದಿಗೂ ನಿಲ್ಲಿಸಬೇಡಿರಿ.”