ನೀವು ಗೊರಕೆ ಹೊಡೆಯುತ್ತೀರೊ?
ನೀವು ಗಟ್ಟಿಯಾಗಿ ಗೊರಕೆ ಹೊಡೆಯುವವರೊ? ಕೆಲವರು ಹಾಗಿರುತ್ತಾರಾದರೂ ಅದು ಅವರಿಗೆ ತಿಳಿದಿರುವುದೂ ಇಲ್ಲ. ಹೀಗೆ ತಾವು ನಿದ್ದೆಯಿಂದೇಳುವಾಗ ತಮಗೆ ಅಶಕ್ತಿಯ ಮತ್ತು ತತ್ತರಿಸುವ ಅನುಭವ ಏಕಾಗುತ್ತದೆಂಬ ಅರಿವು ಅವರಿಗಿರುವುದಿಲ್ಲ. ಅವರ ಅಸ್ವಸ್ಥತೆಗೆ ಶ್ವಾಸ ಬಂಧನವೆಂದು ಹೆಸರು. ಈ ರೋಗವಿರುವವನು ನಿದ್ದೆಹೋಗುವಾಗ, ಉಸಿರಾಡುವ ಮಾರ್ಗಗಳನ್ನು ತೆರೆದಿಡುವ ಗಂಟಲಿನ ಸ್ನಾಯುಗಳು ಆ ಮಾರ್ಗ ಮುಚ್ಚುವಷ್ಟರ ಮಟ್ಟಿಗೂ ಸಡಿಲವಾಗುತ್ತವೆ. ಒಬ್ಬ ವ್ಯಕ್ತಿ ಗಾಳಿಗಾಗಿ ಮೇಲುಸಿರು ಸೆಳೆದು ಸ್ವಲ್ಪ ಹೊತ್ತು ಎಚ್ಚರಗೊಳ್ಳುವ ಮೊದಲು ಒಂದು ನಿಮಿಷದಷ್ಟು ಸಮಯ ದಾಟಬಹುದು. ಹೆಚ್ಚಿನ ಶ್ವಾಸ ಬಂಧನ ರೋಗಿಗಳಿಗೆ ತಮ್ಮ ನಿದ್ದೆ ಭಂಗವಾಯಿತೆಂದು ತಿಳಿದಿರುವುದಿಲ್ಲ. ಇದರ ಒಂದೇ ಸುಳಿವು ಗೊರಕೆ ಹೊಡೆಯುವುದರಿಂದಾಗಿ ಅನೇಕ ವೇಳೆ ಎಚ್ಚರಗೊಳ್ಳುತ್ತಿರುವ ಅವನ ಕೋಣೆವಾಸಿಯಿಂದ ಬರಬಹುದು. ಶ್ವಾಸ ಬಂಧನ ಕಾರ್ ಮತ್ತು ಕೆಲಸದಲ್ಲಿ ಆಗುವ ಅಪಘಾತಗಳಿಗೆ ಸಹಾಯ ಮಾಡುತ್ತದೆಂದೂ, ಅದು ಲಕ್ವಗಳಲ್ಲಿ ಮತ್ತು ಹೃದಯಾಘಾತಗಳಲ್ಲಿ ಒಂದು ಕಾರಣವಾಗಿರಬಹುದೆಂದೂ ಪರಿಣತರ ನಂಬುಗೆ.
ಇದಕ್ಕೆ ಪರಿಹಾರವಿದೆಯೆ? ಕಂಪೀಟ್ಲ್ ಹೋಮ್ ಮೆಡಿಕಲ್ ಗೈಡ್ (ಕೊಲಂಬಿಯ ಯೂನಿವರ್ಸಿಟಿ ಕಾಲೆಜ್ ಆಫ್ ಫಿಸಿಷನ್ಸ್ ಆ್ಯಂಡ್ ಸರ್ಜನ್ಸ್) ಸಲಹೆ ನೀಡುವುದು: “ಪುರುಷರಿಗೆ ಇದು ಸ್ತ್ರೀಯರಿಗಿಂತ 20 ಪಾಲು ಹೆಚ್ಚು ತಟ್ಟುತ್ತದೆ. ಬಾಧೆ ಪಡುವವರಲ್ಲಿ ಅರ್ಧಾಂಶಕ್ಕೂ ಹೆಚ್ಚು ಜನ ಬೊಜ್ಜು ಮೈಯವರು. ಇದು ಗಾಳಿಯ ಸಾಮಾನ್ಯ ಹರಿವನ್ನು ಇನ್ನೂ ಹೆಚ್ಚು ತಡೆಯುತ್ತದೆ. ಆದುದರಿಂದ ದೇಹಭಾರವನ್ನು ಕಡಮೆ ಮಾಡುವುದು ಚಿಕಿತ್ಸೆಯ ಪ್ರಮುಖವಾದ ಒಂದು ಭಾಗವಾಗಿದೆ.” ವಿಪರೀತ ಕೇಸುಗಳಲ್ಲಿ, ಆ ಗಾಳಿಮಾರ್ಗದ ತಡೆಯನ್ನು ಕಡಮೆ ಮಾಡಲು ಒಂದು ಶಸ್ತ್ರ ಚಿಕಿತ್ಸೆ ಸೂಕ್ತವಾಗಿರಬಹುದೆಂದು ಇದೇ ಮೂಲವು ಸೂಚಿಸುತ್ತದೆ. (g94 9/8)