ನನ್ನ ತಂದೆ “ಪರಮಾಣು ಬಾಂಬೆಸೆಯಲ್ಪಟ್ಟವರಾಗಿ ಸೆರೆಮನೆಯಿಂದ ಹೊರಬಂದರು”
ಆಗಸ್ಟ್ 6, 1945ರಂದು ಬೆಳಗ್ಗೆ 8:15ಕ್ಕೆ ಜಪಾನಿನ ಹಿರೊಶೀಮದಲ್ಲಿ ಒಂದು ಪರಮಾಣು ಬಾಂಬು ಸ್ಫೋಟಗೊಂಡು, ನಗರವನ್ನು ಧ್ವಂಸಮಾಡಿ ಅದರ ಜನಸಂಖ್ಯೆಯಲ್ಲಿ ಹತ್ತಾರು ಸಾವಿರ ಮಂದಿಯನ್ನು ನಾಶಮಾಡಿತು. ನನ್ನ ತಂದೆ ಚಕ್ರವರ್ತಿಯನ್ನು ಆರಾಧಿಸಲು ಮತ್ತು ಜಪಾನಿನ ಯುದ್ಧಮನಸ್ಕತೆಯನ್ನು ಬೆಂಬಲಿಸಲು ನಿರಾಕರಿಸಿದ್ದ ಕಾರಣ ಆ ಸಮಯದಲ್ಲಿ ಹಿರೊಶೀಮ ಸೆರೆಮನೆಯಲ್ಲಿ ನಿವಾಸಿಯಾಗಿದ್ದರು.
ತಂದೆಯವರು ಅನೇಕ ವೇಳೆ ಆ ಸ್ಮರಣೀಯ ದಿನದಲ್ಲಿ ನಡೆದದ್ದನ್ನು ವಿವರಿಸುತ್ತಿದ್ದರು. “ಬೆಳಕು ನನ್ನ ಕೋಣೆಯ ಒಳತಾರಸಿಯ ಮೇಲೆ ಮಿಂಚಿತು. ಬಳಿಕ ಎಲ್ಲ ಪರ್ವತಗಳು ಒಂದೇ ಸಮಯದಲ್ಲಿ ಕುಸಿದು ಬಿದ್ದವೋ ಎಂಬಂತೆ ಒಂದು ಭಯಂಕರವಾದ ಗಟ್ಟಿ ಶಬ್ದ ನನಗೆ ಕೇಳಿಬಂತು. ಅದೇ ಕ್ಷಣದಲ್ಲಿ ಕೋಣೆಯೊಳಗೆ ದಟ್ಟವಾದ ಕತ್ತಲೆ ಕವಿಯಿತು. ಯಾವುದು ಕಪ್ಪಾದ ಅನಿಲದಂತೆ ತೋರಿಬಂತೋ ಅದರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ನಾನು ನನ್ನ ತಲೆಯನ್ನು ಹಾಸಿಗೆಯಡಿಗೆ ತಳ್ಳಿದೆ,” ಎಂದರವರು.
“ಏಳೆಂಟು ನಿಮಿಷಗಳ ಬಳಿಕ, ಹಾಸಿಗೆಯಡಿಯಿಂದ ನನ್ನ ತಲೆಯನ್ನೆತ್ತಲಾಗಿ, ಆ ‘ಅನಿಲವು’ ಚೆದರಿಹೋದದ್ದಾಗಿ ಕಂಡುಕೊಂಡೆ. ಪುನಃ ಬೆಳಕು ಬಂದಿತ್ತು. ಅಂತಸ್ತು ಹಲಗೆಯಿಂದ ವಸ್ತುಗಳು ಮತ್ತು ದೊಡ್ಡ ಮೊತ್ತದಲ್ಲಿ ದೂಳು ಬಿದ್ದು ತೀರ ಅಸ್ತವ್ಯಸ್ತತೆ ಉಂಟಾಗಿತ್ತು. ಸೆರೆಮನೆಯ ಸುತ್ತಲಿದ್ದ ಎತ್ತರವಾದ ಗೋಡೆಯಿಂದಾಗಿ ಹೊರಗಿನಿಂದ ಬೆಂಕಿ ಒಳಬಂದಿರಲಿಲ್ಲ.
“ನಾನು ಹಿಂದಿನ ಕಿಟಿಕಿಯಿಂದ ಹೊರಕ್ಕೆ ನೋಡಿದಾಗ ಸಿಡಿಲು ಬಡಿದವನಂತಾದೆ! ಜೆಯ್ಲಿನ ಕಾರ್ಖಾನೆಗಳು ಮತ್ತು ಮರದ ಕಟ್ಟಡಗಳೆಲ್ಲ ನಜ್ಜುಗುಜ್ಜಾಗಿ ನೆಲಸಮವಾಗಿದ್ದವು. ಬಳಿಕ ನಾನು ಎದುರಿನ ಚಿಕ್ಕ ಕಿಟಿಕಿಯಿಂದ ಹೊರಕ್ಕೆ ನೋಡಿದೆ. ಎದುರುಬದಿಯ ಕಟ್ಟಡದ ಕೋಣೆಗಳು ಚೂರುಚೂರಾಗಿದ್ದವು. ಬದುಕಿ ಉಳಿದಿದ್ದ ಕೈದಿಗಳು ಸಹಾಯಕ್ಕಾಗಿ ಕೂಗಾಡುತ್ತಿದ್ದರು. ಭಯ ಮತ್ತು ಅತಿ ಭೀತಿ, ವಿಪತ್ಕರ ಗಾಬರಿ ಮತ್ತು ವಿಪರೀತ ದಿಗಿಲಿನ ದೃಶ್ಯ ಅದಾಗಿತ್ತು.”
ನಾನು ಹುಡುಗನಾಗಿದ್ದಾಗ, ತಂದೆಯವರು ತಾನು ‘ಪರಮಾಣು ಬಾಂಬೆಸೆಯಲ್ಪಟ್ಟವರಾಗಿ ಹೊರಬಂದ’ ಕುರಿತು ಹೇಳುವುದನ್ನು ಕೇಳುವಾಗ ರೋಮಾಂಚಗೊಳ್ಳುತ್ತಿದ್ದೆ. ಅವರು ಈ ಕಥೆಯನ್ನು, ತಾನು ಅನ್ಯಾಯವಾಗಿ ಸೆರೆಮನೆಯಲ್ಲಿ ಹಾಕಲ್ಪಟ್ಟಿದ್ದುದರಿಂದ ಅಪರಾಧ ಪ್ರಜ್ಞೆಯಿಲ್ಲದೆ ಹೇಳಿದರು. ತಂದೆಯ ವಿರುದ್ಧ ಹಾಕಲ್ಪಟ್ಟ ಅಪವಾದಗಳು ಮತ್ತು ಅವರ ಬಂಧನ ಕಾಲದಲ್ಲಿ ಅವರನ್ನು ನೋಡಿಕೊಳ್ಳಲಾದ ವಿಧಗಳ ವಿಷಯದಲ್ಲಿ ಹೇಳುವ ಮೊದಲು, ಜಪಾನಿನಲ್ಲಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯನ್ನು ಆಗ ಏನೆಂದು ಕರೆಯಲಾಗುತ್ತಿತ್ತೋ ಆ ಟೋಡೈಷಾದೊಂದಿಗೆ ನನ್ನ ಹೆತ್ತವರು ಹೇಗೆ ಜೊತೆಗೊಂಡರು ಎಂಬುದನ್ನು ವಿವರಿಸುವಂತೆ ಬಿಡಿರಿ.
ಒಂದು ಉದ್ದೇಶಕ್ಕಾಗಿ ಹುಡುಕುವುದು
ತಂದೆಯವರು ಉತ್ಸಾಹಪೂರಿತ ಪುಸ್ತಕಪ್ರೇಮಿಯಾಗಿದ್ದರು ಮತ್ತು ಎಳೆಯ ಪ್ರಾಯದಲ್ಲಿಯೇ ಶಿಕ್ಷಣದ ಮೂಲಕ ತನ್ನ ಜೀವನವನ್ನು ಉತ್ತಮಗೊಳಿಸಪ್ರಯತ್ನಿಸಿದರು. ಪ್ರಾಥಮಿಕ ಶಾಲೆಯ ಐದನೆಯ ತರಗತಿಯಲ್ಲಿರುವಾಗಲೇ ಅವರು ಈಶಾನ್ಯ ಜಪಾನಿನ ಈಶಿನೋಮೋರಿ ಪಟ್ಟಣದ ತನ್ನ ಮನೆಯನ್ನು ಗುಟ್ಟಾಗಿ ಬಿಟ್ಟುಹೋದರು. ಒಂದು ದಿಕ್ಕಿನ ಪಯಣಕ್ಕೆ ಮಾತ್ರ ಸಾಕಾಗುವಷ್ಟು ಹಣವಿದ್ದವರಾಗಿ ಅವರು ಟೋಕಿಯೊ ನಗರಕ್ಕೆ ಟ್ರೇನ್ ಹತ್ತಿದರು. ಅಲ್ಲಿ ಅವರು ಜಪಾನಿನ ಎರಡು ಬಾರಿ ಪ್ರಧಾನ ಮಂತ್ರಿಯಾಗಿದ್ದ ಶೀಗೆನೋಬು ಓಕುಮಾ ಅವರ ಮನೆಯಾಳಾಗಲು ನಿರ್ಧರಿಸಿದ್ದರು. ಆದರೆ ಈ ಅಯೋಗ್ಯವಾದ ಉಡುಪುಟ್ಟಿದ್ದ ಹಳ್ಳಿಯ ಹುಡುಗನು ಶ್ರೀ ಓಕುಮಾ ಅವರ ಮನೆಗೆ ಹೋದಾಗ ಅವನಿಗೆ ಕೆಲಸ ನಿರಾಕರಿಸಲ್ಪಟ್ಟಿತು. ಆ ಬಳಿಕ ತಂದೆಗೆ ಒಂದು ಹಾಲಿನಂಗಡಿಯಲ್ಲಿ ವಾಸ-ಕೆಲಸ ದೊರೆಯಿತು.
ಇನ್ನೂ ಹದಿಹರೆಯದಲ್ಲಿದ್ದಾಗಲೇ ನನ್ನ ತಂದೆ ರಾಜಕಾರಣಿಗಳು ಮತ್ತು ವಿದ್ವಾಂಸರಿಂದ ಕೊಡಲ್ಪಡುವ ಭಾಷಣಗಳಿಗೆ ಹಾಜರಾಗತೊಡಗಿದರು. ಒಂದು ಭಾಷಣದಲ್ಲಿ ಬೈಬಲನ್ನು ಒಂದು ಪ್ರಾಮುಖ್ಯ ಗ್ರಂಥವೆಂದು ಹೇಳಲಾಗಿತ್ತು. ಆದುದರಿಂದ ತಂದೆಯವರು ಪ್ರಕರಣಾಂತರ ಸೂಚನೆ ಮತ್ತು ಬೈಬಲ್ ಭೂಪಟಗಳಿಂದ ಪೂರ್ಣಗೊಂಡಿದ್ದ ಒಂದು ಬೈಬಲನ್ನು ಪಡೆದುಕೊಂಡರು. ತಾನು ಓದಿದರ್ದಿಂದ ಅವರು ಆಳವಾಗಿ ಪ್ರಭಾವಿತರಾಗಿ ಸರ್ವ ಮಾನವಕುಲಕ್ಕೆ ಪ್ರಯೋಜನಕರವಾಗುವ ಕೆಲಸವನ್ನು ಮಾಡುವಂತೆ ಪ್ರಚೋದಿಸಲ್ಪಟ್ಟರು.
ಕೊನೆಗೆ ತಂದೆ ಮನೆಗೆ ಹಿಂದಿರುಗಿ ಬಂದು, 1931ರ ಎಪ್ರಿಲ್ನಲ್ಲಿ, ತಾನು 24 ವಯಸ್ಸಿನವರಾಗಿದ್ದಾಗ 17 ವಯಸ್ಸಿನ ಹಾಗೀನೊಳನ್ನು ಮದುವೆಯಾದರು. ತಂದೆಗೆ ಮದುವೆಯಾದ ಸ್ವಲ್ಪದರಲ್ಲಿ, ಒಬ್ಬ ಮಾವ ಅವರಿಗೆ ಟೋಡೈಷಾದಿಂದ ಪ್ರಕಾಶಿತವಾದ ಸಾಹಿತ್ಯವನ್ನು ಕಳುಹಿಸಿದರು. ತಾನು ಓದಿದರ್ದಿಂದ ಪ್ರಭಾವಿತರಾಗಿ, ತಂದೆ ಟೋಕಿಯೋವಿನ ಟೋಡೈಷಾಕ್ಕೆ ಬರೆದರು. ಜೂನ್ 1931ರಲ್ಲಿ ಮಾಟ್ಸೂಎ ಈಷೀ ಎಂಬ ಸೆಂಡೈ ಪಟ್ಟಣದ ಪೂರ್ಣ ಸಮಯದ ಶುಶ್ರೂಷಕಳು ಇಶಿನೋಮೋರಿಯಲ್ಲಿ ತಂದೆಯನ್ನು ಭೇಟಿ ಮಾಡಿದಳು.a ತಂದೆ ಅವಳಿಂದ ದ ಹಾರ್ಪ್ ಆಫ್ ಗಾಡ್, ಕ್ರಿಯೇಶನ್, ಮತ್ತು ಗವರ್ನ್ಮೆಂಟ್ ಎಂಬ ಪುಸ್ತಕಗಳ ಕಟ್ಟನ್ನು ಪಡೆದರು.
ಜೀವನದಲ್ಲಿ ಒಂದು ಉದ್ದೇಶವನ್ನು ಹುಡುಕುವುದು
ಹೆಚ್ಚುಕಡಮೆ ಕೂಡಲೆ ತಂದೆಯವರು, ಮನುಷ್ಯನು ಅಮರವಾದ ಆತ್ಮವುಳ್ಳವನಾಗಿರುವುದು, ದುಷ್ಟರು ಸದಾ ನರಕಾಗ್ನಿಯಲ್ಲಿ ಸುಡುತ್ತಿರುವುದು, ಸೃಷ್ಟಿಕರ್ತನು ಒಬ್ಬ ತ್ರಯೈಕ್ಯನಾಗಿರುವುದೇ ಮೊದಲಾದ ವಿವಿಧ ಚರ್ಚ್ ಬೋಧನೆಗಳು ಸುಳ್ಳೆಂದು ಗ್ರಹಿಸಿದರು. (ಪ್ರಸಂಗಿ 9:5-10; ಯೆಹೆಜ್ಕೇಲ 18.4; ಯೋಹಾನ 14:28) ಈ ಜಗತ್ತು ಅಂತ್ಯಗೊಳ್ಳುವುದೆಂದೂ ಅವರು ತಿಳಿದುಕೊಂಡರು. (1 ಯೋಹಾನ 2:17) ಈಗ ಏನು ಮಾಡಬೇಕೆಂದು ತಿಳಿಯಬಯಸಿದ ತಂದೆಯವರು, 1931ರ ಆಗಸ್ಟ್ನಲ್ಲಿ ಅವರನ್ನು ಭೇಟಿ ಮಾಡಿದ್ದ, ಟೋಡೈಷಾದ ನಿಯಮಿತ ಪ್ರತಿನಿಧಿಯನ್ನು ಸಂಪರ್ಕಿಸಿದರು, ಮತ್ತು ಅವರ ಚರ್ಚೆಗಳ ಫಲವಾಗಿ ತಂದೆ ದೀಕ್ಷಾಸ್ನಾನ ಹೊಂದಿ ಯೆಹೋವನ ಪೂರ್ಣ ಸಮಯದ ಶುಶ್ರೂಷಕನಾಗಲು ನಿರ್ಣಯಿಸಿದರು.
ಲಂಬಿತ ಚರ್ಚೆಗಳಾದ ಮೇಲೆ ಬೈಬಲಿನಿಂದ ತಾನು ಕಲಿತದ್ದು ಸತ್ಯವೆಂದು ತಾಯಿಗೂ ಮನದಟ್ಟಾಯಿತು. ಅವರು ತಮ್ಮ ಜೀವವನ್ನು ಯೆಹೋವನಿಗೆ ಸಮರ್ಪಿಸಿಕೊಂಡು ಅಕ್ಟೋಬರ 1931ರಲ್ಲಿ ದೀಕ್ಷಾಸ್ನಾನ ಪಡೆದರು. ನನ್ನ ತಂದೆ ತನ್ನ ಆಸ್ತಿಯನ್ನು ಹರಾಜಿಗೆ ಹಾಕಿದಾಗ ಅವರ ಸಂಬಂಧಿಗಳು ತಂದೆ ಹುಚ್ಚರಾಗಿದ್ದಾರೆಂದು ನೆನಸಿದರು.
ಪೂರ್ಣ ಸಮಯದ ಶುಶ್ರೂಷಕರಾಗಿ ಜೀವನ
ಹರಾಜಿನಿಂದ ಸಿಕ್ಕಿದ ಹಣವನ್ನೆಲ್ಲ ತಂದೆಯವರು ಅವರ ತಾಯಿಗೆ ಕೊಟ್ಟರು, ಮತ್ತು ಅವರು ಮತ್ತು ತಾಯಿ ನವಂಬರ 1931ರಲ್ಲಿ ಟೋಕಿಯೋಗೆ ಹೋದರು. ಇತರರಿಗೆ ರಾಜ್ಯದ ಸುವಾರ್ತೆಯ ಕುರಿತು ಹೇಗೆ ಮಾತಾಡಬೇಕೆಂಬ ಯಾವ ವಿಷಯ ಪರಿಚಯವನ್ನೂ ಅವರು ಪಡೆದಿದ್ದಿಲ್ಲವಾದರೂ, ಅಲ್ಲಿಗೆ ತಲಪಿದ ಮರುದಿನ ಅವರು ಸಾರಲಾರಂಭಿಸಿದರು.—ಮತ್ತಾಯ 24:14.
ಅವರ ಜೀವನ ಸುಲಭವಾಗಿರಲಿಲ್ಲ. ಆಗ ಕೇವಲ 17 ವಯಸ್ಸಿನವರಾಗಿದ್ದ ನನ್ನ ತಾಯಿಗಂತೂ ಅದು ವಿಶೇಷವಾಗಿ ಕಷ್ಟಕರವಾಗಿತ್ತು. ಜೊತೆ ಸಾಕ್ಷಿಗಳಾರೂ ಇರಲಿಲ್ಲ, ಕೂಟಗಳಿಲ್ಲ, ಮತ್ತು ಸಭೆಯೂ ಇಲ್ಲ. ಬೈಬಲ್ ಸಾಹಿತ್ಯವನ್ನು ಬೆಳಗ್ಗೆ 9ರಿಂದ ಸಂಜೆ 4ರ ತನಕ ವಿತರಣೆ ಮಾಡುವ ದೈನಂದಿನ ಕಾರ್ಯತಖ್ತೆಯಷ್ಟೇ ಇತ್ತು.
ಅವರ ಸಾರುವ ನೇಮಕವನ್ನು 1933ರಲ್ಲಿ ಟೋಕಿಯೋದಿಂದ ಕೋಬಿಗೆ ಬದಲಾಯಿಸಲಾಯಿತು. ನಾನು ಅಲ್ಲಿ ಫೆಬ್ರವರಿ 9, 1934ರಲ್ಲಿ ಜನಿಸಿದೆ. ನನ್ನ ಜನನಕ್ಕೆ ಒಂದು ತಿಂಗಳಿರುವ ವರೆಗೂ ನನ್ನ ತಾಯಿ ಶುಶ್ರೂಷೆಯಲ್ಲಿ ಹುರುಪಿನಿಂದ ಕೆಲಸಮಾಡಿದರು. ಆ ಬಳಿಕ ನನ್ನ ಹೆತ್ತವರು ಯಾಮಾಗೂಚಿ, ಊಬೆ, ಕೂರೆ ಎಂಬ ನಗರಗಳಿಗೆ ಮತ್ತು ಕೊನೆಗೆ ಹಿರೊಶೀಮಕ್ಕೆ, ಪ್ರತಿಯೊಂದು ಸ್ಥಳದಲ್ಲಿ ಸುಮಾರು ಒಂದು ವರ್ಷ ಸಾರುತ್ತಾ ಹೋದರು.
ನನ್ನ ಹೆತ್ತವರು ದಸ್ತಗಿರಿ ಮಾಡಲ್ಪಡುತ್ತಾರೆ
ಜಪಾನೀಯರ ಯುದ್ಧಮನಸ್ಕತೆ ಏರಿದಂತೆ, ವಾಚ್ಟವರ್ ಸೊಸೈಟಿಯ ಪ್ರಕಾಶನಗಳು ನಿಷೇಧಿಸಲ್ಪಟ್ಟು, ಸಾಕ್ಷಿಗಳು ಸ್ಪೆಷಲ್ ಸೀಕ್ರೆಟ್ ಸರ್ವಿಸ್ ಪೋಲೀಸರಿಂದ ಕಟ್ಟುನಿಟ್ಟಾದ ಕಣ್ಗಾವಲಿಗೊಳಗಾದರು. ಬಳಿಕ ಜೂನ್ 21, 1939ರಲ್ಲಿ ಪೂರ್ಣ ಸಮಯದ ಶುಶ್ರೂಷಕರು ಜಪಾನಿನ ಎಲ್ಲ ಭಾಗಗಳಿಂದ ಹಿಡಿಯಲ್ಪಟ್ಟರು. ದಸ್ತಗಿರಿ ಮಾಡಲ್ಪಟ್ಟವರಲ್ಲಿ ತಂದೆ ಮತ್ತು ತಾಯಿ ಸಹ ಇದ್ದರು. ನನ್ನನ್ನು ಈಶಿನೋಮೋರಿಯಲ್ಲಿ ವಾಸಿಸುತ್ತಿದ್ದ ನನ್ನ ಅಜಿಯ್ಜ ವಶಕ್ಕೆ ಕೊಡಲಾಯಿತು. ಎಂಟು ತಿಂಗಳ ಸೆರೆವಾಸದ ಬಳಿಕ ತಾಯಿಗೆ ಪರೀಕ್ಷಾರ್ಥ ಬಂಧವಿಮೋಚನೆಯಾಯಿತು, ಮತ್ತು ಕೊನೆಗೆ, 1942ರಲ್ಲಿ, ಸೆಂಡೈಯಲ್ಲಿ ನಾನು ಅವರ ಜೊತೆಯಲ್ಲಿರಲು ಶಕ್ತನಾದೆ.
ಈ ಮಧ್ಯೆ, ತಂದೆ ಮತ್ತು ಇತರ ಸಾಕ್ಷಿಗಳು ಹಿರೊಶೀಮ ಪೊಲೀಸ್ ಸೇಶ್ಟನ್ನಿನಲ್ಲಿ ಗುಪ್ತ ಪೊಲೀಸರಿಂದ ತನಿಖೆಗೊಳಗಾದರು. ಅವರು ಚಕ್ರವರ್ತಿಯನ್ನು ಆರಾಧಿಸಲು ಅಥವಾ ಜಪಾನಿನ ಯುದ್ಧಮನಸ್ಕತೆಯನ್ನು ಬೆಂಬಲಿಸಲು ನಿರಾಕರಿಸಿದ್ದರಿಂದ ಈ ಸಾಕ್ಷಿಗಳನ್ನು ಕಠಿನವಾಗಿ ಹೊಡೆಯಲಾಯಿತು. ಆ ವಿಚಾರಕನಿಗೆ ತಂದೆಯು ಯೆಹೋವನನ್ನು ಆರಾಧಿಸುವುದರಿಂದ ಕದಲಿಸಲಾಗಲಿಲ್ಲ.
ಎರಡು ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸದ ಬಳಿಕ ತಂದೆಯನ್ನು ವಿಚಾರಣೆಗೊಳಪಡಿಸಲಾಯಿತು. ಒಂದು ವಿಚಾರಣೆಯಲ್ಲಿ ನ್ಯಾಯಾಧೀಶರು ಕೇಳಿದ್ದು: “ಮೀಊರ, ಮಹಾ ಪ್ರಭು ಚಕ್ರವರ್ತಿಗಳ ಕುರಿತು ನೀನು ಏನೆಣಿಸುತ್ತೀ?”
“ಮಹಾ ಪ್ರಭುಗಳಾದ ಚಕ್ರವರ್ತಿಗಳು ಸಹ ಆದಾಮನ ವಂಶಜರು, ಮರ್ತ್ಯರು, ಅಪೂರ್ಣ ಮಾನವರು,” ಎಂದು ತಂದೆ ಉತ್ತರಿಸಿದರು. ಈ ಹೇಳಿಕೆ ಕೋರ್ಟ್ ಲಘು ಲಿಪಿಕಾರನನ್ನು ಎಷ್ಟು ಬೆರಗುಗೊಳಿಸಿತೆಂದರೆ ಅವನು ಅದನ್ನು ದಾಖಲೆಮಾಡಲು ತಪ್ಪಿದನು. ಏಕೆಂದರೆ, ಆ ಸಮಯದಲ್ಲಿ ಹೆಚ್ಚಿನ ಜಪಾನೀಯರು ಚಕ್ರವರ್ತಿಯನ್ನು ದೇವರೆಂದು ನಂಬುತ್ತಿದ್ದರು. ತಂದೆಗೆ ಐದು ವರ್ಷ ಸೆರೆವಾಸದ ಸಜೆ ಸಿಕ್ಕಿತು, ಮತ್ತು ಅವರ ನಂಬಿಕೆಯನ್ನು ತೊರೆಯದಿರುವಲ್ಲಿ, ಅವರು ಅವರ ಉಳಿದ ಜೀವಮಾನವೆಲ್ಲ ಸೆರೆಮನೆಯಲ್ಲಿರುವರೆಂದು ನ್ಯಾಯಾಧೀಶರು ಹೇಳಿದರು.
ಇದಾಗಿ ಸ್ವಲ್ಪದರಲ್ಲಿ, ದಶಂಬರ 1941ರಲ್ಲಿ ಹವಾಯೀಯ ಪರ್ಲ್ ಹಾರ್ಬರ್ನಲ್ಲಿ ಜಪಾನು ಅಮೆರಿಕದ ಮೇಲೆ ದಾಳಿ ಮಾಡಿತು. ಸೆರೆಮನೆಯಲ್ಲಿ ಆಹಾರ ಕಡಮೆಯಾಯಿತು ಮತ್ತು ಚಳಿಗಾಲದ ತಿಂಗಳುಗಳಲ್ಲಿ, ಬಟ್ಟೆಯ ಕೊರತೆಯ ಕಾರಣ ತಂದೆ ಅನೇಕ ಶೀತಲ, ನಿದ್ರೆಯಿಲ್ಲದ ರಾತ್ರಿಗಳನ್ನು ಅನುಭವಿಸಿದರು. ಎಲ್ಲ ಆತ್ಮಿಕ ಸಹವಾಸದಿಂದ ಪ್ರತ್ಯೇಕಿಸಲ್ಪಟ್ಟಿದ್ದರೂ, ಜೆಯ್ಲಿನ ಗ್ರಂಥಾಲಯದಲ್ಲಿದ್ದ ಬೈಬಲು ಅವರಿಗೆ ಸಿಕ್ಕುತಿತ್ತು ಮತ್ತು ಅದನ್ನು ಪದೇ ಪದೇ ಓದುತ್ತಿದ್ದುದರಿಂದ, ಅವರು ತಮ್ಮ ಆತ್ಮಿಕ ಬಲವನ್ನು ಕಾಪಾಡಿಕೊಂಡರು.
ಬಾಂಬು ಬಿದ್ದಾಗ
ಆಗಸ್ಟ್ 6, 1945ರ ಹೊತ್ತಾರೆ, ಒಬ್ಬ ಕೈದಿ ತಂದೆಯೊಡನೆ ಪುಸ್ತಕಗಳನ್ನು ವಿನಿಮಯಿಸಲು ಬಯಸಿದನು. ಇದು ನಿಷಿದ್ಧವಾಗಿತ್ತು, ಆದರೆ ಆ ಕೈದಿ ತನ್ನ ಪುಸ್ತಕವನ್ನು ಆಗಲೇ ಹಜಾರದಾಚೆಗೆ ತಂದೆಯ ಕೋಣೆಯೊಳಗೆ ಹಾಕಿದ್ದುದರಿಂದ ತಂದೆ ತನ್ನ ಪುಸ್ತಕವನ್ನು ಆ ಕೈದಿಯ ಕೋಣೆಯೊಳಗೆ ಹಾಕಿದರು. ಹೀಗೆ ಆ ಬೆಳಗ್ಗೆ ತನ್ನ ವಾಡಿಕೆಯಾಗಿ ಬದಲಾಗಿರದ ಕಾರ್ಯತಖ್ತೆಯನ್ನು ಅನುಸರಿಸುವ ಬದಲಾಗಿ, ಬಾಂಬು ಬಿದ್ದಾಗ ತಂದೆ ಓದುತ್ತಾ ಇದ್ದರು. ಸಾಧಾರಣವಾಗಿ, ಬೆಳಗ್ಗಿನ ಆ ಸಮಯದಲ್ಲಿ ತಂದೆ ಪಾಯಿಖಾನೆಯನ್ನು ಉಪಯೋಗಿಸುತ್ತಿದ್ದರು. ಆ ಸ್ಫೋಟನಾನಂತರ, ಆ ಪಾಯಿಖಾನೆಯ ಸ್ಥಳವು ಮೇಲಿಂದ ಮುರಿದು ಬಿದ್ದಿರುವ ವಸ್ತುಗಳಿಂದಾಗಿ ನಾಶವಾಗಿತ್ತು.
ತಂದೆಯನ್ನು ಆ ಬಳಿಕ ಹತ್ತಿರದ ಈವಾಕೂನಿ ಸೆರೆಮನೆಗೆ ಕೊಂಡೊಯ್ಯಲಾಯಿತು. ಇದಾಗಿ ಸ್ವಲ್ಪದರಲ್ಲಿ ಜಪಾನು ಮಿತ್ರಪಕ್ಷದ ಸೈನ್ಯಗಳಿಗೆ ಶರಣಾಗತವಾದಾಗ, ಆ ಯುದ್ಧಾನಂತರದ ಅವ್ಯವಸ್ಥೆಯ ಸ್ಥಿತಿಯ ಮಧ್ಯೆ ತಂದೆಗೆ ಸೆರೆಮನೆಯಿಂದ ಬಿಡುಗಡೆಯಾಯಿತು. ಅವರು ದಶಂಬರ 1945ರಲ್ಲಿ ಈಶಿನೋಮೋರಿಯ ಮನೆಗೆ ಹಿಂದಿರುಗಿದರು. ಅವರ ಆರೋಗ್ಯ ಹಾಳಾಗಿತ್ತು. ಅವರು 38 ವರ್ಷ ವಯಸ್ಸಿನವರಾಗಿದ್ದರೂ ಮುದುಕನಂತೆ ಕಾಣುತ್ತಿದ್ದರು. ಮೊದಮೊದಲು ಅದು ನನ್ನ ತಂದೆಯೆಂದು ನನಗೆ ನಂಬಲಾಗಲಿಲ್ಲ.
ಅವರ ನಂಬಿಕೆ ಇನ್ನೂ ಬಲವಾಗಿತ್ತು
ಜಪಾನು ಅವ್ಯವಸ್ಥೆಯ ಸ್ಥಿತಿಯಲ್ಲಿತ್ತು ಮತ್ತು ನಂಬಿಗಸ್ತರಾಗಿದ್ದ ಕೊಂಚ ಸಾಕ್ಷಿಗಳು ಎಲ್ಲಿಗೆ ಚದರಿಸಲ್ಪಟ್ಟಿದ್ದರೆಂದು ನಮಗೆ ತಿಳಿದಿರಲಿಲ್ಲ. ಇಲ್ಲವೆ ಯೆಹೋವನ ಸಾಕ್ಷಿಗಳ ಸಾಹಿತ್ಯಗಳು ನಮಗೆ ದೊರಕಿದ್ದೂ ಇಲ್ಲ. ಆದರೂ, ತಂದೆಯವರು ನನಗೆ ನೇರವಾಗಿ ಬೈಬಲಿನಿಂದ ಯೆಹೋವನ ರಾಜ್ಯ, ನೂತನ ಲೋಕ, ಮತ್ತು ಸಮೀಪಿಸುತ್ತಿರುವ ಅರ್ಮಗೆದೋನ್ ಯುದ್ಧ—ಇವುಗಳ ಸತ್ಯವನ್ನು ಕಲಿಸಿದರು.—ಕೀರ್ತನೆ 37:9-11, 29; ಯೆಶಾಯ 9:6, 7; 11:6-9; 65:17, 21-24; ದಾನಿಯೇಲ 2:44; ಮತ್ತಾಯ 6:9, 10.
ತರುವಾಯ, ಹೈಸ್ಕೂಲಿನಲ್ಲಿ ನನಗೆ ವಿಕಾಸ ವಾದ ಕಲಿಸಲ್ಪಟ್ಟಾಗ ಮತ್ತು ನಾನು ದೇವರ ಇರುವಿಕೆಯನ್ನು ಸಂಶಯಿಸತೊಡಗಿದಾಗ, ನನ್ನ ತಂದೆ ದೇವರ ಇರುವಿಕೆಯ ಕುರಿತು ನನಗೆ ಮನಗಾಣಿಸಲು ಪ್ರಯತ್ನಿಸಿದರು. ನಾನು ನಂಬಲು ಶಂಕಿಸಿದಾಗ, ಅವರು ಕೊನೆಗೆ ಹೇಳಿದ್ದು: “ಲೋಕದ ಹೆಚ್ಚಿನ ಜನರು ಯುದ್ಧವನ್ನು ಬೆಂಬಲಿಸಿ ರಕ್ತ ಸುರಿತದ ಅಪರಾಧಿಗಳಾದರು. ನಾನಾದರೋ, ಬೈಬಲಿನ ಸತ್ಯಕ್ಕೆ ಅಂಟಿಕೊಂಡು, ಯುದ್ಧಮನಸ್ಕತೆಯನ್ನಾಗಲಿ, ಚಕ್ರವರ್ತಿಯ ಆರಾಧನೆಯನ್ನಾಗಲಿ, ಯುದ್ಧವನ್ನಾಗಲಿ ಬೆಂಬಲಿಸಲೇ ಇಲ್ಲ. ಆದಕಾರಣ ನೀನು ನಡೆಯಬೇಕಾದ ನಿಜ ಜೀವಮಾರ್ಗವು ಯಾವುದೆಂದು ನೀನೇ ಜಾಗ್ರತೆಯಿಂದ ಚಿಂತಿಸಿ ನೋಡು.”
ನನ್ನ ತಂದೆ ಕಲಿಸಿ ಜೀವಿಸಿದ ವಿಧವನ್ನು ಬಲ್ಲವನಾಗಿದ್ದ ನಾನು, ಅದನ್ನು ನಾನು ಶಾಲೆಯಲ್ಲಿ ಕಲಿಯುತ್ತಿದ್ದುದಕ್ಕೆ ಹೋಲಿಸಿದಾಗ, ವಿಕಾಸ ವಾದವು ಸ್ವಸ್ಥ ಯೋಚನಾ ವಿಧವಾಗಿಲ್ಲವೆಂದು ನನಗೆ ನೋಡಸಾಧ್ಯವಾಯಿತು. ಯಾವ ವಿಕಾಸವಾದಿಯೂ ತನ್ನ ನಂಬಿಕೆಗಾಗಿ ಜೀವವನ್ನು ಅಪಾಯಕ್ಕೆ ಒಡ್ಡದಿದ್ದರೂ, ನನ್ನ ತಂದೆ ತನ್ನದ್ದಕ್ಕಾಗಿ ಸಾಯಲು ಸಿದ್ಧರಾಗಿದ್ದರು.
ಮಾರ್ಚ್ 1951ರ ಒಂದು ದಿನ, ಯುದ್ಧವು ನಿಂತು ಐದಕ್ಕೂ ಹೆಚ್ಚು ವರ್ಷಗಳ ಬಳಿಕ, ತಂದೆಯವರು ಆಸಾಹಿ ವಾರ್ತಾಪತ್ರವನ್ನು ಓದುತ್ತಿದ್ದರು. ಥಟ್ಟನೆ ಅವರು, “ಹೇ, ಅವರು ಬಂದರು, ಅವರು ಬಂದರು!” ಎಂದು ಕೂಗಿದರು. ಅವರು ಆ ವಾರ್ತಾಪತ್ರವನ್ನು ನನಗೆ ತೋರಿಸಿದರು. ಆಗ ತಾನೇ ಒಸಾಕಕ್ಕೆ ಬಂದಿದ್ದ ಐದು ಯೆಹೋವನ ಸಾಕ್ಷಿಗಳ ಮಿಷನೆರಿಗಳ ಕುರಿತ ಲೇಖನ ಅದಾಗಿತ್ತು. ಸಂತೋಷದಿಂದ ಹಾರುತ್ತಾ, ತಂದೆ ವಾರ್ತಾಪತ್ರವನ್ನು ಸಂಪರ್ಕಿಸಿ, ಯೆಹೋವನ ಸಾಕ್ಷಿಗಳು ಟೋಕಿಯೋದಲ್ಲಿ ಒಂದು ಬ್ರಾಂಚ್ ಆಫೀಸನ್ನು ಸ್ಥಾಪಿಸಿದ್ದಾರೆಂದು ತಿಳಿದರು. ಅವರು ವಿಳಾಸವನ್ನು ಪಡೆದು ಬ್ರಾಂಚ್ಗೆ ಭೇಟಿ ನೀಡಿ, ಹೀಗೆ ಯೆಹೋವನ ಸಾಕ್ಷಿಗಳೊಂದಿಗೆ ಸಂಪರ್ಕವನ್ನು ಪುನಃಸ್ಥಾಪಿಸಿದರು.
ಅಂತ್ಯದ ತನಕ ನಂಬಿಗಸ್ತರು
ನಮ್ಮ ಕುಟುಂಬವು 1952ರಲ್ಲಿ ಸೆಂಡೈಗೆ ಹೊರಟುಹೋಯಿತು. ಅದೇ ವರ್ಷ, ವಾಚ್ಟವರ್ ಸೊಸೈಟಿಯ ಮಿಷನೆರಿಗಳಾದ ಡಾನಲ್ಡ್ ಮತ್ತು ಮೇಬಲ್ ಹ್ಯಾಸ್ಲೆಟ್ ಅಲ್ಲಿಗೆ ಹೋಗಿ ಕಾವಲಿನಬುರುಜು ಪತ್ರಿಕೆಯ ಅಭ್ಯಾಸ ನಡೆಸಲಿಕ್ಕಾಗಿ ಒಂದು ಮನೆಯನ್ನು ಬಾಡಿಗೆಗೆ ಪಡೆದುಕೊಂಡರು. ಆ ಪ್ರಥಮ ಕೂಟಕ್ಕೆ ಕೇವಲ ನಾಲ್ಕು ಮಂದಿ—ಹ್ಯಾಸ್ಲೆಟ್ ದಂಪತಿಗಳು, ನನ್ನ ತಂದೆ ಮತ್ತು ನಾನು—ಹಾಜರಾದೆವು. ತರುವಾಯ ಷೀನೀಚಿ ಮತ್ತು ಮಾಸಾಕೊ ಟೋಹಾರ, ಆ್ಯಡಲೈನ್ ನಾಕೋ ಮತ್ತು ಲಿಲ್ಯನ್ ಸ್ಯಾಮ್ಸನ್—ಇವರು ಸೆಂಡೈಯಲ್ಲಿ ಮಿಷನೆರಿಗಳಾಗಿ ಹ್ಯಾಸ್ಲೆಟ್ ದಂಪತಿಗಳನ್ನು ಸೇರಿಕೊಂಡರು.
ಈ ಮಿಷನೆರಿಗಳ ಒಡನಾಟದಿಂದ, ನಮ್ಮ ಕುಟುಂಬವು ದೇವರ ವಾಕ್ಯದ ಮತ್ತು ಸಂಘಟನೆಯ ಜ್ಞಾನದಲ್ಲಿ ಪ್ರಗತಿಹೊಂದಿತು. ಯುದ್ಧಸಮಯದಲ್ಲಿ ನಂಬಿಕೆಯು ಕದಲಿಸಲ್ಪಟ್ಟಿದ್ದ ನನ್ನ ತಾಯಿ, ಕೂಟಗಳಿಗೆ ಹೋಗುವುದರಲ್ಲಿ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವುದರಲ್ಲಿ ಬೇಗನೆ ನಮ್ಮನ್ನು ಸೇರಿಕೊಂಡರು. ನಾನು ಯೆಹೋವ ದೇವರನ್ನು ಸೇವಿಸಲಿಕ್ಕಾಗಿ ನನ್ನ ಜೀವವನ್ನು ಸಮರ್ಪಿಸಿಕೊಳ್ಳುವಂತೆ ಪ್ರಚೋದಿತನಾಗಿ ಎಪ್ರಿಲ್ 18, 1953ರಲ್ಲಿ ದೀಕ್ಷಾಸ್ನಾನ ಹೊಂದಿದೆ.
ಯುದ್ಧದ ಬೆನ್ನಿಗೆ ತಂದೆಯವರು ಒಂದು ವಿಮಾ ಕಂಪನಿಯ ಮಾರಾಟಗಾರರಾಗಿ ಕೆಲಸ ಮಾಡಿದರು. ಅವರ ಬಂದಿವಾಸದ ಹಿಂತೊಡಕುಗಳ—ಮೂತ್ರಪಿಂಡದ ರೋಗ ಮತ್ತು ವಿಪರೀತ ರಕ್ತದೊತ್ತಡ—ಹೊರತೂ, ಅವರಿಗೆ ಪಯನೀಯರರಾಗಿ ಪೂರ್ಣ ಸಮಯದ ಶುಶ್ರೂಷೆಯನ್ನು ಪುನಃ ಸೇರಿಕೊಳ್ಳುವ ಬಲವಾದ ಬಯಕೆಯಿತ್ತು. ಅವರು ಹೆಚ್ಚುಕಡಮೆ ನನ್ನ ದೀಕ್ಷಾಸ್ನಾನದ ಸಮಯದಲ್ಲಿ ಅದನ್ನು ಸೇರಿಕೊಂಡರು. ನ್ಯೂನಾರೋಗ್ಯವು ಅವರು ಹೆಚ್ಚು ಕಾಲ ಪಯನೀಯರರಾಗಿ ಮುಂದುವರಿಯುವುದನ್ನು ತಡೆಯಿತಾದರೂ ಶುಶ್ರೂಷೆಗಾಗಿ ಅವರಿಗಿದ್ದ ಹುರುಪು, ನಾನು ಹಾಜರಾಗುತ್ತಿದ್ದ ವಿಶ್ವವಿದ್ಯಾಲಯವನ್ನು ಬಿಟ್ಟು ಪೂರ್ಣ ಸಮಯದ ಶುಶ್ರೂಷೆಯನ್ನು ನನ್ನ ಜೀವನಪಥವಾಗಿ ತೆಗೆದುಕೊಳ್ಳುವಂತೆ ನನ್ನನ್ನು ಪ್ರೇರೇಪಿಸಿತು.
ನಗೋಯದ ಉತ್ತಮ ತೆರದ ಒಬ್ಬ ಯುವಕ ಈಸಾಮು ಸೂಗಿಊರ, ನನ್ನ ಪಯನೀಯರ್ ಜೊತೆಗಾರನಾಗಿ ನೇಮಿಸಲ್ಪಟ್ಟನು. ಮೇ 1, 1955ರಲ್ಲಿ ನಾವು ಕಿಊಷು ದ್ವೀಪದ ಬೆಪೂ ಪಟ್ಟಣದಲ್ಲಿ ವಿಶೇಷ ಪಯನೀಯರರಾಗಿ ನಮ್ಮ ಶುಶ್ರೂಷೆಯನ್ನು ಆರಂಭಿಸಿದೆವು. ಆಗ ಇಡೀ ದ್ವೀಪದಲ್ಲಿ ಕೇವಲ ಕೆಲವೇ ಸಾಕ್ಷಿಗಳಿದ್ದರು. ಈಗ, 39ಕ್ಕೂ ಹೆಚ್ಚು ವರ್ಷಗಳು ಕಳೆದ ಮೇಲೆ, ಆ ದ್ವೀಪದಲ್ಲಿ 18,000ಕ್ಕೂ ಹೆಚ್ಚು ಸಾಕ್ಷಿಗಳಿರುವ 15 ಆತ್ಮಿಕವಾಗಿ ವರ್ಧಿಸುತ್ತಿರುವ ಸರ್ಕಿಟ್ಗಳಿವೆ. ಮತ್ತು ಇಡೀ ಜಪಾನಿನಲ್ಲಿ ಈಗ ಸುಮಾರು 2,00,000 ಸಾಕ್ಷಿಗಳಿದ್ದಾರೆ.
ವರ್ಷ 1956ರ ವಸಂತಕಾಲದಲ್ಲಿ, ಈಸಾಮು ಮತ್ತು ನಾನು ಅಮೆರಿಕದ ವಾಚ್ ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ಗೆ ಆಮಂತ್ರಣಗಳನ್ನು ಪಡೆದೆವು. ನಾವು ತೀರ ಹರ್ಷಗೊಂಡೆವು. ಆದರೆ ಪ್ರಯಾಣಕ್ಕೆ ಸಿದ್ಧತೆಯಾಗಿ ದೈಹಿಕ ಪರೀಕ್ಷೆಯನ್ನು ಪಡೆದಾಗ, ನನಗೆ ಕ್ಷಯರೋಗವಿದೆಯೆಂದು ಡಾಕ್ಟರರು ಕಂಡುಹಿಡಿದರು. ತೀರ ನಿರಾಶನಾದ ನಾನು ಸೆಂಡೈಯ ನನ್ನ ಮನೆಗೆ ಹಿಂದಿರುಗಿದೆ.
ಅಷ್ಟರಲ್ಲಿ ತಂದೆಯ ದೇಹಾರೋಗ್ಯ ಕೆಟ್ಟಿತ್ತು, ಮತ್ತು ಅವರು ಮನೆಯಲ್ಲಿ ಹಾಸಿಗೆಯಲ್ಲಿ ವಿಶ್ರಮಿಸುತ್ತಿದ್ದರು. ನಮ್ಮ ಬಾಡಿಗೆಯ ಮನೆಯಲ್ಲಿ ಒಂಬತ್ತು ಚದರ ಮೀಟರ್ಗಳ ಒಂದೇ ಟಟಾಮಿ ಕೋಣೆಯಿತ್ತು. ನನ್ನ ತಂದೆಯೂ ನಾನೂ ಪಕ್ಕ ಪಕ್ಕದಲ್ಲಿ ಮಲಗಿದೆವು. ತಂದೆಗೆ ಕೆಲಸ ಮಾಡಲಾಗದರ್ದಿಂದ, ನಮ್ಮ ಆರ್ಥಿಕ ಆವಶ್ಯಕತೆಗಳನ್ನು ಪೂರೈಸುವುದು ತಾಯಿಗೆ ಕಷ್ಟಕರವಾಗಿತ್ತು.
ಜನವರಿ, 1957ರಲ್ಲಿ, ಆಗ ವಾಚ್ ಟವರ್ ಸೊಸೈಟಿಯ ಉಪಾಧ್ಯಕ್ಷರಾಗಿದ್ದ ಫ್ರೆಡ್ರಿಕ್ ಡಬ್ಲ್ಯೂ. ಫ್ರಾನ್ಟ್ಸ್ ಜಪಾನಿಗೆ ಭೇಟಿಕೊಟ್ಟರು, ಮತ್ತು ಒಂದು ವಿಶೇಷ ಅಧಿವೇಶನವು ಕ್ಯೋಟೋದಲ್ಲಿ ಜರಗುವಂತೆ ಏರ್ಪಡಿಸಲಾಯಿತು. ನನ್ನ ತಾಯಿ ಅಲ್ಲಿ ಉಪಸ್ಥಿತರಾಗುವಂತೆ ತಂದೆ ಪ್ರೋತ್ಸಾಹಿಸಿದರು. ನಮ್ಮ ಕಾಯಿಲೆಯ ಸ್ಥಿತಿಯಲ್ಲಿ ನಮ್ಮನ್ನು ಬಿಟ್ಟುಹೋಗಲು ತಾಯಿ ಹಿಂಜರಿದರೂ ತಂದೆಗೆ ವಿಧೇಯರಾಗಿ ತಾಯಿ ಅಧಿವೇಶನಕ್ಕೆ ಹೋದರು.
ತರುವಾಯ ಸ್ವಲ್ಪದರಲ್ಲಿ ತಂದೆಯ ಸ್ಥಿತಿ ದಿನೇದಿನೇ ಕೆಡಲಾರಂಭಿಸಿತು. ನಾವು ಒಬ್ಬರ ಪಕ್ಕದಲ್ಲಿ ಒಬ್ಬರು ಮಲಗಿರಲಾಗಿ, ನಾನು ಚಿಂತಿಸಲಾರಂಭಿಸುತ್ತಾ, ನಾವು ನಮ್ಮನ್ನು ಹೇಗೆ ಸಂರಕ್ಷಣೆ ಮಾಡಿಕೊಳ್ಳುವೆವೆಂದು ನಾನು ಅವರನ್ನು ಕೇಳಿದೆ. ಅದಕ್ಕೆ ಅವರು ಉತ್ತರ ಕೊಟ್ಟದ್ದು: “ನಾವು ನಮ್ಮ ಜೀವವನ್ನೂ ಅಪಾಯಕ್ಕೊಳಪಡಿಸುತ್ತಾ ಯೆಹೋವನನ್ನು ಸೇವಿಸಿದ್ದೇವೆ. ಆತನು ಸರ್ವಶಕ್ತನು. ನೀನು ಚಿಂತಿಸುವುದೇಕೆ? ನಮಗೆ ಅಗತ್ಯವಿರುವುದನ್ನು ಯೆಹೋವನು ತಪ್ಪದೆ ಒದಗಿಸುವನು.” ಬಳಿಕ ಅವರು ಬಹಳ ಮೃದುವಾದ ರೀತಿಯಲ್ಲಿ ನನಗೆ ಬುದ್ಧಿಹೇಳಿದ್ದು: “ನಿನ್ನಲ್ಲಿ ಹೆಚ್ಚು ಬಲವಾದ ನಂಬಿಗೆಯನ್ನು ಬೆಳೆಸು.”
ಮಾರ್ಚ್ 24, 1957ರಲ್ಲಿ ತಂದೆಯವರು ನೆಮ್ಮದಿಯಿಂದ ತಮ್ಮ ಕೊನೆಯುಸಿರನ್ನು ಎಳೆದರು. ಅವರ ಶವಸಂಸ್ಕಾರ ಮುಗಿದ ಬಳಿಕ, ಅವರು ಕೆಲಸ ಮಾಡಿದ ವಿಮಾ ಕಂಪನಿಯಲ್ಲಿ ವಿಷಯಗಳನ್ನು ತೀರಿಸಲು ನಾನು ಭೇಟಿಕೊಟ್ಟೆ. ನಾನು ಹಿಂದೆ ಬರುತ್ತಿದ್ದಾಗ, ಆ ಬ್ರಾಂಚ್ ಮ್ಯಾನೆಜರ್ ಒಂದು ಕಾಗದದ ಚೀಲವನ್ನು ನನಗೆ ಕೊಟ್ಟು, “ಇದು ನಿನ್ನ ತಂದೆಯದ್ದು,” ಎಂದರು.
ಮನೆಗೆ ಹಿಂದಿರುಗಿ ಬಂದಾಗ ಅದರೊಳಗೆ ದೊಡ್ಡ ಮೊತ್ತದ ಹಣವಿದೆಯೆಂದು ಕಂಡುಹಿಡಿದೆ. ತರುವಾಯ ನಾನು ಆ ಮ್ಯಾನೆಜರರನ್ನು ಅದರ ಕುರಿತು ಕೇಳಲಾಗಿ, ಆ ಹಣವು ತಂದೆಗೆ ಗೊತ್ತಿಲ್ಲದ ಹಾಗೆ ಅವರ ಸಂಬಳದಿಂದ ಪ್ರತಿ ತಿಂಗಳು ಕಳೆದು ತೆಗೆದಿದ್ದ ವಿಮೆಯ ಕಂತು ಎಂದು ಅವರು ವಿವರಿಸಿದರು. ಹೀಗೆ, “ನಮಗೆ ಅಗತ್ಯವಿರುವುದನ್ನು ಯೆಹೋವನು ತಪ್ಪದೆ ಒದಗಿಸುವನು,” ಎಂಬ ತಂದೆಯ ಮಾತುಗಳು ನಿಜವಾದವು. ಯೆಹೋವನ ಸಂರಕ್ಷಣಾ ಪರಾಮರಿಕೆಯಲ್ಲಿ ಇದು ನನ್ನ ನಂಬಿಕೆಯನ್ನು ಹೆಚ್ಚು ಬಲಗೊಳಿಸಿತು.
ಎಡೆಬಿಡದ ಸೇವೆಯ ದಶಕಗಳು
ಆ ಹಣ ಒದಗಿಸಿದ ಐಹಿಕ ಸಹಾಯವು ನಾನು ಮನೆಯಲ್ಲಿ ಆರೋಗ್ಯ ಪಡೆಯುವುದರ ಮೇಲೆ ಮನಸ್ಸಿಡುವಂತೆ ಸಹಾಯ ಮಾಡಿತು. ಒಂದು ವರ್ಷದ ಬಳಿಕ, ನಾನೂ ನನ್ನ ತಾಯಿಯೂ ವಿಶೇಷ ಪಯನೀಯರರಾಗಿ ನೇಮಕಗೊಂಡೆವು. ಆ ಬಳಿಕ ನಾನು ಜಪಾನಿನಲ್ಲಿ ಸಂಚಾರ ಮೇಲ್ವಿಚಾರಕನಾಗಿ ಸೇವೆ ಮಾಡಿದೆ, ಮತ್ತು ತರುವಾಯ 1961ರಲ್ಲಿ, ನ್ಯೂ ಯಾರ್ಕಿನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಪ್ರಧಾನ ಕಾರ್ಯಾಲಯದಲ್ಲಿ ನನಗೆ ಹತ್ತು ತಿಂಗಳುಗಳ ಗಿಲ್ಯಾದ್ ಶಾಲೆಯ ಪಾಠಕ್ರಮಕ್ಕೆ ಹಾಜರಾಗುವ ಸುಯೋಗ ದೊರಕಿತು.
ನಾನು ಜಪಾನಿಗೆ ಹಿಂದಿರುಗಿದಾಗ, ಪುನಃ ಸಂಚಾರ ಮೇಲ್ವಿಚಾರಕನಾಗಿ ಸಭೆಗಳಲ್ಲಿ ಸೇವೆ ಮಾಡುವುದನ್ನು ಆರಂಭಿಸಿದೆ. ಬಳಿಕ 1963ರಲ್ಲಿ, ಟೋಕಿಯೋದಲ್ಲಿ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಯಾಸುಕೊ ಹಾಬಾ ಎಂಬವಳನ್ನು ಮದುವೆಯಾದೆ. ಅವಳು 1965ರ ತನಕ—ಯಾವಾಗ ನಮ್ಮನ್ನು ಟೋಕಿಯೊ ಬ್ರಾಂಚ್ ಆಫೀಸಿನಲ್ಲಿ ಸೇವೆ ಮಾಡಲು ಆಮಂತ್ರಿಸಲಾಯಿತೋ ಅಷ್ಟರ ತನಕ—ಸಂಚಾರ ಕೆಲಸದಲ್ಲಿ ನನ್ನೊಂದಿಗೆ ಜೊತೆಗೊಂಡಳು. ಅಂದಿನಿಂದ ನಾವು ಜೊತೆಯಾಗಿ, ಮೊದಲು ಟೋಕಿಯೋದ ಬ್ರಾಂಚ್ನಲ್ಲಿ, ಬಳಿಕ ನೂಮಾಜೂವಿನಲ್ಲಿ ಮತ್ತು ಈಗ ಎಬೀನಾದಲ್ಲಿ ಸೇವೆ ಮಾಡಿದ್ದೇವೆ.
ತಾಯಿಯವರು 1965ರ ವರೆಗೆ ಸ್ಪೆಷಲ್ ಪಯನೀಯರ್ ಶುಶ್ರೂಷಕರಾಗಿ ಉಳಿದರು. ಅಂದಿನಿಂದ ಅವರು ಅನೇಕರು ಬೈಬಲ್ ಸತ್ಯವನ್ನು ಅಂಗೀಕರಿಸುವಂತೆ ಸಹಾಯ ಮಾಡುತ್ತಾ ಕ್ರಿಯಾಶೀಲರಾಗಿ ಉಳಿದಿದ್ದಾರೆ. ಅವರಿಗೆ ಈಗ 79 ವರ್ಷ ವಯಸ್ಸಾಗಿದೆಯಾದರೂ ಅವರು ತುಲನಾತ್ಮಕವಾಗಿ ಆರೋಗ್ಯವುಳ್ಳವರಾಗಿದ್ದಾರೆ. ಅವರು ಹತ್ತಿರದಲ್ಲೇ ಜೀವಿಸುತ್ತಿದ್ದು ಎಬೀನಾ ಬ್ರಾಂಚ್ ಆಫೀಸಿನ ಸಮೀಪವಿರುವ ನಾವಿರುವ ಸಭೆಗೇ ಹಾಜರಾಗುವುದು ನಮಗೆ ಸಂತೋಷದ ವಿಷಯ.
ನನ್ನ ತಂದೆಯವರು ಹಿರೊಶೀಮದ ಪರಮಾಣು ಬಾಂಬಿನ ಸ್ಫೋಟನವನ್ನು ಪಾರಾದುದಕ್ಕೆ ನಾವು ನಿಜವಾಗಿಯೂ ಯೆಹೋವನಿಗೆ ಆಭಾರಿ. ಅವರು ತಮ್ಮ ನಂಬಿಕೆಯನ್ನು ಕಾಪಾಡಿಕೊಂಡರು, ಮತ್ತು ಅವರನ್ನು ನೂತನ ಲೋಕದಲ್ಲಿ ಪುನಃ ಸ್ವಾಗತಿಸಿ, ಅವರಿಗೆ ಯಾವುದನ್ನು ನೋಡಲು ಅತಿಯಾದ ಮನಸ್ಸಿತ್ತೋ, ಆ ಅರ್ಮಗೆದೋನಿಂದ ನಾವು ಹೇಗೆ ವಿಮೋಚಿಸಲ್ಪಟ್ಟೆವೆಂದು ಅವರಿಗೆ ತಿಳಿಸುವುದು ನನಗಿರುವ ಬಯಕೆ. (ಪ್ರಕಟನೆ 16:14, 16; 21:3, 4)—ಟ್ಸುಟೋಮು ಮೀಊರ ಹೇಳಿರುವಂತೆ. (g94 10⁄8)
[ಅಧ್ಯಯನ ಪ್ರಶ್ನೆಗಳು]
a ಮಾಟ್ಸೂಎ ಈಷೀಯ ಜೀವನ ಕಥೆಗಾಗಿ ಮೇ 1, 1988ರ ದ ವಾಚ್ಟವರ್, ಪುಟ 21-5 ಓದಿ.
[ಪುಟ 12 ರಲ್ಲಿರುವ ಚಿತ್ರ]
ಕಟ್ಸುವೊ ಮತ್ತು ಹಗೀನೊ ಮೀಊರ ಅವರ ಮಗ ಟ್ಸುಟೋಮುವೊಂದಿಗೆ
[ಪುಟ 16 ರಲ್ಲಿರುವ ಚಿತ್ರ]
ಟ್ಸುಟೋಮು ಮೀಊರ ಜಪಾನ್ ಬ್ರಾಂಚ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವುದು
[ಪುಟ 14 ರಲ್ಲಿರುವ ಚಿತ್ರ ಕೃಪೆ]
Hiroshima Peace and Culture Foundation from material returned by the United States Armed Forces Institute of Pathology